ತಾಮ್ರ, ಕಬ್ಬಿಣ, ಸೀಸ, ಚಿನ್ನ ಮುಂತಾದ ಲೋಹಗಳನ್ನೂ ಕ್ಲೋರೀನ್, ಗಂಧಕ, ಕಾರ್ಬನ್, ಆಕ್ಸಿಜನ್ ಮುಂತಾದ ಅಲೋಹಗಳನ್ನೂ ರಸಾಯನ ವಿಜ್ಞಾನದ ಭಾಷೆಯಲ್ಲಿ `ಧಾತು‘ಗಳೆಂದು ಕರೆಯುತ್ತೇವೆ. ಯಾವ ಪದಾರ್ಥವನ್ನು ವಿಭಜಿಸಿ ಎರಡೋ ಮೂರೋ ಬೇರೆಬೇರೆ ಪದಾರ್ಥಗಳನ್ನು ಪಡೆಯಲು ಸಾಧ್ಯವಿಲ್ಲವೋ ಅಂಥ ಪದಾರ್ಥಕ್ಕೆ ಧಾತು ಎಂದು ಹೆಸರು. ಧಾತುಗಳು ಒಂದರೊಡನೊಂದು ಸೇರಿಕೊಂಡು ಸಂಯುಕ್ತಗಳಾಗುತ್ತವೆ. ಅಂಥ ಸಂಯುಕ್ತ ಪದಾರ್ಥವನ್ನು ವಿಭಜಿಸಬಹುದು. ವಿಭಜಿಸಿ, ಬೇರೆ ಬೇರೆ ಗುಣಲಕ್ಷಣಗಳಿರುವ ಎರಡು ಅಥವಾ ಹೆಚ್ಚು ಪದಾರ್ಥಗಳನ್ನು ಪಡೆಯಬಹುದು. ನೀರು ಅಂಥ  ಸಂಯುಕ್ತ. ಅದನ್ನು ವಿಭಜಿಸಿದರೆ ಹೈಡ್ರೊಜನ್ ಮತ್ತು ಆಕ್ಸಿಜನ್ ಎಂಬೆರಡು ಧಾತುಗಳು ದೊರೆಯುತ್ತವೆ. ಅಡುಗೆ ಉಪ್ಪನ್ನು ವಿಭಜಿಸಿದರೆ ಸೋಡಿಯಮ್ ಎಂಬ ಲೋಹವೂ ಕ್ಲೋರೀನ್ ಎಂಬ ಅಲೋಹ ಧಾತುವೂ ಸಿಕ್ಕುತ್ತವೆ. ಗ್ಲೂಕೋಸ್ ಎಂಬ ಸಕ್ಕರೆ ಒಂದು ಸಂಯುಕ್ತ. ಅದನ್ನು ವಿಭಜಿಸಿದರೆ ಕಾರ್ಬನ್, ಹೈಡ್ರೊಜನ್, ಆಕ್ಸಿಜನ್ ಎಂಬ ಮೂರು ಬೇರೆ ಬೇರೆ ಧಾತುಗಳು ಸಿಕ್ಕುತ್ತವೆ.

ರಾಸಾಯನಿಕ ಸಂಯುಕ್ತಗಳಲ್ಲಿ ಎರಡು ಬಗೆ ಎಂದು ವಿಜ್ಞಾನಿಗಳು ಕಳೆದ ಶತಮಾನದ ಪ್ರಾರಂಭದ ವೇಳೆಗೆ ಗುರುತಿಸಿದ್ದರು. ಕಬ್ಬಿನ ರಸದಿಂದ ತಯಾರಿಸುವ ಸಕ್ಕರೆ, ಹಣ್ಣುಹಂಪಲುಗಳಲ್ಲಿಯೂ ಜೇನು ತುಪ್ಪದಲ್ಲಿಯೂ ಕಂಡುಬರುವ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಎಂಬ ಸಕ್ಕರೆಗಳು, ಮಾದಕ ಪಾನೀಯಗಳಲ್ಲಿರುವ ಆಲ್ಕಹಾಲ್, ನಿಂಬೆ ರಸದಲ್ಲಿರುವ ಸಿಟ್ರಿಕ್ ಆಮ್ಲ, ಮಾನವ ಮೂತ್ರದಲ್ಲಿರುವ ಯೂರಿಯ, ಸಿಂಖೋನ ಮರದ ತೊಗಟೆಯಲ್ಲಿರುವ ಮಲೇರಿಯಾಹಾರಿ ಕ್ವಿನೀನ್ – ಇವೆಲ್ಲ ಒಂದು ಬಗೆ. ಪ್ರಾಣಿ ಅಥವಾ ಸಸ್ಯಮೂಲದಿಂದ ಬಂದ ರಾಸಾಯನಿಕ ಸಂಯುಕ್ತಗಳು ಇವು. ಇವುಗಳಲ್ಲಿ ಕಂಡುಬರುವ ಧಾತುಗಳು ಕೆಲವೇ ಕೆಲವು: ಕಾರ್ಬನ್, ಹೈಡ್ರೊಜನ್, ಆಕ್ಸಿಜನ್, ನೈಟ್ರೊಜನ್ ಮತ್ತು ಆಗೊಮ್ಮೆ ಈಗೊಮ್ಮೆ ಗಂಧಕ ಅಥವಾ ರಂಜಕ. ಇತರ ಧಾತುಗಳು ತುಂಬ ವಿರಳ. ಆದರೆ ಇವುಗಳ ಅಣುಗಳಲ್ಲಿ ಸಾಮಾನ್ಯವಾಗಿ ಪರಮಾಣುಗಳ ಸಂಖ್ಯೆ ಹೆಚ್ಚು. ಉದಾಹರಣೆಗೆ, ಕಬ್ಬಿನ ಸಕ್ಕರೆಯ ಅಣುವಿನಲ್ಲಿ 45 ಪರಮಾಣುಗಳಿವೆ. ಅದರ  ಅಣುಸೂತ್ರ C12H22O11. ಸಿಟ್ರಿಕ್ ಆಮ್ಲದ ಅಣುವಿನಲ್ಲಿ 21 ಪರಮಾಣುಗಳಿವೆ (C6H8O7). ಕ್ವಿನೀನ್ ಅಣುವಿನಲ್ಲಿ 48 ಪರಮಾಣುಗಳಿವೆ (C20H24N2O2). ಇವೆಲ್ಲ ಕಾರ್ಬನ್ ಸಂಯುಕ್ತಗಳಾದುದರಿಂದ ಇವುಗಳನ್ನು ಹೆಚ್ಚಿನ ಉಷ್ಣತೆಗೆ ಕಾಯಿಸಿದಾಗ, ಆಕ್ಸಿಜನ್‌ಗೆ ಕೊರತೆ ಇದ್ದರೆ, ಸೀದುಹೋಗಿ ಇದ್ದಿಲಾಗುತ್ತವೆ; ಆಕ್ಸಿಜನ್ ಹೇರಳವಾಗಿದ್ದರೆ ಅವು ಸುಟ್ಟು, ನೀರಾವಿ, ಕಾರ್ಬನ್ ಡೈ ಆಕ್ಸೈಡ್ ಮುಂತಾದ ಅನಿಲೋತ್ಪನ್ನಗಳನ್ನು ಕೊಡುತ್ತವೆ. ಬೂದಿ ಉಳಿಯುವುದು ತುಂಬ ವಿರಳ. ಸಂಯುಕ್ತದಲ್ಲಿ ಲೋಹಗಳೇನಾದರೂ ಇದ್ದರೆ ಮಾತ್ರ ಭಸ್ಮ ಉಳಿಯುತ್ತದೆ.

ರಾಸಾಯನಿಕ ಸಂಯುಕ್ತಗಳ ಇನ್ನೊಂದು ಬಗೆ ಖನಿಜಮೂಲದಿಂದ ಬಂದವು. ಎಲ್ಲ ಲೋಹಗಳ ಅದಿರುಗಳೂ ಖನಿಜಗಳಷ್ಟೆ. ಅನೇಕ ಅಲೋಹಗಳೂ ಖನಿಜಗಳಲ್ಲಿ ಕಂಡುಬರುತ್ತವೆ. ಆದುದರಿಂದ ಇಂದು ನಮಗೆ ತಿಳಿದಿರುವ ನೂರಕ್ಕೂ ಹೆಚ್ಚು ಧಾತುಗಳೆಲ್ಲವೂ ಈ ಎರಡನೆಯ ಬಗೆಯ ಸಂಯುಕ್ತಗಳಲ್ಲಿ ಕಾಣಸಿಕ್ಕುತ್ತವೆ. ಆದರೆ ಈ ಬಗೆಯ ಸಂಯುಕ್ತಗಳ ಅಣುಗಳು ಸಾಮಾನ್ಯವಾಗಿ ಸರಳವಾದವು. ನಾಲ್ಕಾರು ಪರಮಾಣುಗಳಿಂದಾದ ಅಣುಗಳೇ ಹೆಚ್ಚು. ಹತ್ತು ಹದಿನೈದು ಪರಮಾಣುಗಳಿರುವ ಅಣುಗಳು ವಿರಳ. ಈ ಗುಂಪಿಗೆ ಸೇರಿದ ಕೆಲವು ಸುಪರಿಚಿತ ಸಂಯುಕ್ತಗಳನ್ನು ಉದಾಹರಣೆಯಾಗಿ ತೆಗೆದುಕೊಂಡಾಗ ಈ ವಿಷಯ ಸ್ಪಷ್ಟವಾಗುವುದು. ನೀರು, H2O; ಅಡುಗೆ ಉಪ್ಪು NaCl; ಪೆಟ್ಲುಪ್ಪು KNO3; ಅಮೋನಿಯ  NH3; ಮರಳಿನಲ್ಲಿರುವ ಸಿಲಿಕ SiO2; ಅಡುಗೆ ಸೋಡ NaHCO3 ಇತ್ಯಾದಿ. ಇವುಗಳನ್ನು ಕಾಯಿಸಿದಾಗ ಮೊದಲ ಗುಂಪಿನ ಸಂಯುಕ್ತಗಳಂತೆ ಸೀದು ಹೋಗುವುದಿಲ್ಲ; ಸುಟ್ಟು ನೀರಾವಿ ಮತ್ತು ಕಾರ್ಬನ್ ಡೈ ಆಕ್ಸೈಡ್‌ಗಳನ್ನು ಕೊಡುವುದಿಲ್ಲ.

ಹದಿನೆಂಟು ಹತ್ತೊಂಬತ್ತನೆಯ ಶತಮಾನಗಳಲ್ಲಿ ಜೀವಿಸಿದ್ದ ಹೆಸರಾಂತ ರಸಾಯನ ವಿಜ್ಞಾನಿ ಜೇಕಬ್ ಬರ್ಜೀಲಿಯಸ್ ಈ ಎರಡು ಬಗೆಯ ಸಂಯುಕ್ತಗಳಿಗೂ ಬೇರೆಬೇರೆ ಹೆಸರು ಕೊಟ್ಟ. ಮೊದಲ ಗುಂಪಿನ ಸಂಯುಕ್ತಗಳು ಜೀವಿಗಳಿಂದ (ಆರ್ಗ್ಯಾನಿಸಮ್) ಬಂದವಾದ್ದರಿಂದ ಅವುಗಳನ್ನು ಆರ್ಗ್ಯಾನಿಕ್ ಕಾಂಪೌಂಡ್ಸ್ – ಜೈವಿಕ ಸಂಯುಕ್ತಗಳು – ಎಂದು ಕರೆದ. ಖನಿಜಮೂಲದಿಂದ ಬಂದ ಇನ್ನೊಂದು ವರ್ಗದ ಸಂಯುಕ್ತಗಳನ್ನು ಇನ್‌ಆರ್ಗ್ಯಾನಿಕ್ ಕಾಂಪೌಂಡ್ಸ್ – ಅಜೈವಿಕ ಸಂಯುಕ್ತಗಳು – ಎಂದು ಕರೆದ. ಈ ಎರಡು ವರ್ಗದ ಸಂಯುಕ್ತಗಳೂ ಭಿನ್ನ ಸ್ವಭಾವದವು ಎಂಬುದು ಸುಸ್ಪಷ್ಟ. ಅವುಗಳ ಗುಣಲಕ್ಷಣಗಳಲ್ಲಿ ಗಮನಾರ್ಹ ವ್ಯತ್ಯಾಸವಿದೆ ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಆದುದರಿಂದ ಎರಡು ವರ್ಗಗಳಿಗೂ ಇರುವ ವ್ಯತ್ಯಾಸವನ್ನು ಸೂಚಿಸುವ ಹೆಸರುಗಳನ್ನು ಅವಕ್ಕೆ ಕೊಡುವುದರಲ್ಲಿಯೂ ತಪ್ಪೇನಿಲ್ಲ. ಆದರೆ ಅವುಗಳಿಗಿರುವ ವ್ಯತ್ಯಾಸಕ್ಕೆ ಕಾರಣವೇನು ಎಂಬ ಬಗ್ಗೆ ಒಂದು ಸಿದ್ಧಾಂತವನ್ನು ಮಂಡಿಸಿ ಅವೆರಡಕ್ಕೂ ಇರುವ ವ್ಯತ್ಯಾಸ ಮೂಲಭೂತವಾದುದು ಎಂದು ಸಾರುವ ವಾದ ಹುಟ್ಟಿಕೊಂಡಿತು. ವಿವಾದಾಸ್ಪದವಾದ ಈ ವಾದವನ್ನು ಎತ್ತಿ ಹಿಡಿದವರಲ್ಲಿ ಬರ್ಜೀಲಿಯಸ್ ಪ್ರಮುಖ.

ಧಾತುಗಳು ಸಂಯೋಗಗೊಂಡು ಸಂಯುಕ್ತವಾಗುವಾಗ ಧಾತುಗಳ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ಅಣುಗಳನ್ನು ರೂಪಿಸುವುವು ತಾನೆ? ಧಾತುಗಳ ಪರಮಾಣುಗಳನ್ನು ಹಾಗೆ ಬಂಧಿಸುವ ಬಲ ಎಂಥದು? ಅದರ ಬಗ್ಗೆ ಆಗ ಏನೊಂದೂ ತಿಳಿದಿರಲಿಲ್ಲ. ಜೈವಿಕ ಸಂಯುಕ್ತಗಳಲ್ಲಿ ಪರಮಾಣುಗಳನ್ನು ಪರಸ್ಪರ ಬಂಧಿಸುವ ಬಲವೇ ಬೇರೆ ಸ್ವರೂಪದ್ದು, ಅಜೈವಿಕ ಸಂಯುಕ್ತಗಳಲ್ಲಿ ಪಾತ್ರವಹಿಸುವ ಬಲವೇ ಬೇರೆ  ಸ್ವರೂಪದ್ದು ಎಂದು ಆ ಸಿದ್ಧಾಂತ ಘೋಷಿಸಿತು. ಜೈವಿಕ ಸಂಯುಕ್ತಗಳಲ್ಲಿ ಪಾತ್ರವಹಿಸುವ ಬಲವನ್ನು ಜೈವಿಕ ಬಲ (ವೈಟಲ್ ಫೋರ್ಸ್) ಎಂದು ಕರೆದರು. ಈ ಬಗೆಯ ಬಲವನ್ನು ಜೀವಿಗಳು ಮಾತ್ರ ನೀಡಬಲ್ಲವು. ಆದುದರಿಂದ ಜೀವಿಯೊಂದರ ನೆರವು ಪಡೆಯದೆ ಪ್ರಯೋಗ ಶಾಲೆಯಲ್ಲಿ ಯಾವ ಜೈವಿಕ ಸಂಯುಕ್ತವನ್ನೂ ತಯಾರಿಸುವುದು ಸಾಧ್ಯವಿಲ್ಲ ಎಂಬುದು ಆ ಸಿದ್ಧಾಂತದ ತೀರ್ಮಾನ. ಅದುವರೆಗೆ ಗ್ಲೂಕೋಸ್, ಆಲ್ಕಹಾಲ್, ಸಿಟ್ರಿಕ್ ಆಮ್ಲ ಮುಂತಾದ ಯಾವ ಜೈವಿಕ ಸಂಯುಕ್ತವನ್ನೂ ಪ್ರಯೋಗಶಾಲೆಯಲ್ಲಿ ತಯಾರಿಸಲು ಸಾಧ್ಯವಾಗಿರಲಿಲ್ಲವಾದ್ದರಿಂದಲೂ ಜೀವಿಗಳ ದೇಹದಿಂದ ಮಾತ್ರ ಅವುಗಳನ್ನು ಪಡೆಯಬಹುದಾಗಿದ್ದುದರಿಂದಲೂ ಜೈವಿಕ ಬಲ ಸಿದ್ಧಾಂತವನ್ನು ಅನೇಕರು ಬೆಂಬಲಿಸಿದರು.

ಜೈವಿಕ ಸಂಯುಕ್ತ ಎಂದು ಪರಿಗಣಿಸಲಾಗಿದ್ದ ಯೂರಿಯವನ್ನು ಮೊತ್ತಮೊದಲಬಾರಿಗೆ ಪ್ರಯೋಗಶಾಲೆಯಲ್ಲಿ ತಯಾರಿಸಿ, ಆ ಮೂಲಕ ಜೈವಿಕಬಲ ಸಿದ್ಧಾಂತವನ್ನು ಪೀಠದಿಂದ ಕೆಳಕ್ಕಿಳಿಸಿದವನು ಜರ್ಮನಿಯ ಯುವ ವಿಜ್ಞಾನಿ, ಫ್ರೀಡ್ರಿಖ್ ವೋಲರ್. 1828ರಲ್ಲಿ ಆತ ಕೇವಲ ಅಜೈವಿಕ ಪದಾರ್ಥಗಳನ್ನೇ ಉಪಯೋಗಿಸಿಕೊಂಡು ಯೂರಿಯವನ್ನು ಪಡೆದುದು ಆಕಸ್ಮಿಕವಾಗಿ. ಅದರಿಂದಾಗಿ ಜೈವಿಕ ಸಂಯುಕ್ತಗಳಲ್ಲಿ ಪಾಲ್ಗೊಳ್ಳುವ ಪರಮಾಣುಬಂಧಕ ಬಲಗಳಿಗೂ ಅಜೈವಿಕ ಸಂಯುಕ್ತಗಳಲ್ಲಿ ಪಾಲ್ಗೊಳ್ಳುವ ಬಲಗಳಿಗೂ ಮೂಲಭೂತ ವ್ಯತ್ಯಾಸವೇನೂ ಇಲ್ಲ ಎಂಬುದು ರುಜುವಾತಾಯಿತು. ಜೈವಿಕ ಸಂಯುಕ್ತಗಳಿಗೂ ಅಜೈವಿಕ ಸಂಯುಕ್ತಗಳಿಗೂ ಇರುವ ವ್ಯತ್ಯಾಸವನ್ನು ವಿವರಿಸಲು ಕಾಲ್ಪನಿಕ `ಜೈವಿಕ ಬಲ‘ವನ್ನು ತರಬೇಕಾದುದಿಲ್ಲ. ಆ ವ್ಯತ್ಯಾಸವನ್ನು ಬೇರೊಂದು ರೀತಿಯಲ್ಲಿ ವಿವರಿಸುವುದು ಯುಕ್ತ ಎಂಬುದು ಸಿದ್ಧವಾಯಿತು.

ವೋಲರನ ಇತಿಹಾಸ ಪ್ರಸಿದ್ಧವಾದ ಈ ಸರಳ ಆವಿಷ್ಕಾರ ಹೇಗಾಯಿತೆಂಬುದನ್ನೂ ಅದರ ಮಹತ್ವವನ್ನು ವೋಲರ್ ಗುರುತಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನೂ ತಿಳಿದುಕೊಳ್ಳೋಣ. ವೋಲರ್ ಹುಟ್ಟಿದುದು 1800ರಲ್ಲಿ, ಜರ್ಮನಿಯ ಎಷರ್‌ಷೈಮ್ ಎಂಬಲ್ಲಿ. ಅಂದಿನ ಬಹುಪಾಲು ಪ್ರತಿಭಾವಂತ ಹುಡುಗರಂತೆ ಅವನೂ ವೈದ್ಯಕೀಯ ಶಿಕ್ಷಣ ಪಡೆಯಲು ಮಾರ್ಬುರ್ಗ್ ವಿಶ್ವವಿದ್ಯಾನಿಲಯದಲ್ಲಿ ನೋಂದಾಯಿಸಿಕೊಂಡ. ಆದರೆ ಅವನ ಪ್ರೀತಿಯ ವಿಷಯ ರಸಾಯನ ವಿಜ್ಞಾನ. ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಕೊಂಡೇ ರಸಾಯನ ವಿಜ್ಞಾನದಲ್ಲಿ ಸಂಶೋಧನೆ ನಡೆಸತೊಡಗಿದ. ಅವನ ಅಧ್ಯಾಪಕರಿಗೆ ಅದು ಸರಿಬೀಳಲಿಲ್ಲ. ಆಗ ವೋಲರ್ ಮಾರ್ಬುರ್ಗ್ ವಿಶ್ವವಿದ್ಯಾನಿಲಯವನ್ನು ಬಿಟ್ಟು ಹೈಡಲ್‌ಬರ್ಗ್ ವಿಶ್ವವಿದ್ಯಾನಿಲಯಕ್ಕೆ ಹೋದ. ಅಲ್ಲಿ ಪ್ರಾಧ್ಯಾಪಕನಾಗಿದ್ದ ಗೂಮೆಲಿನ್, ವೋಲರ್‌ನಂತೆಯೇ ರಸಾಯನ ವಿಜ್ಞಾನದಲ್ಲಿ ಆಸಕ್ತನಾಗಿದ್ದುದರಿಂದ ಶಿಷ್ಯನಿಗೆ ಆ ವಿಷಯದಲ್ಲಿ ಉತ್ತೇಜನ ನೀಡಿದ. ಅಷ್ಟೇ ಅಲ್ಲ, 1823ರಲ್ಲಿ ವೋಲರ್ ವೈದ್ಯಕೀಯ ಪದವೀಧರನಾದ ಮೇಲೆ ಅವನನ್ನು ಹುರಿದುಂಬಿಸಿ ಸ್ವೀಡನ್ನಿಗೆ ಕಳುಹಿಸಿದ. ಆ ಕಾಲಕ್ಕೆ ರಸಾಯನ ವಿಜ್ಞಾನಿಗಳಲ್ಲಿ ಅಗ್ರಗಣ್ಯ ಎನ್ನಿಸಿಕೊಂಡಿದ್ದ ಬರ್ಜೀಲಿಯಸ್‌ನ ನೇತೃತ್ವದಲ್ಲಿ ಸಂಶೋಧನೆ ನಡೆಸುವುದು ಯುಕ್ತವೆಂದು ಬುದ್ದಿವಾದ ಹೇಳಿ ಬರ್ಜೀಲಿಯಸ್‌ಗೆ ಪರಿಚಯ ಮಾಡಿಕೊಟ್ಟ. ಸ್ವೀಡನ್ನಿನ ಲ್ಲಿರುವಾಗ ವೋಲರ್‌ಗೆ ಜೈವಿಕ ಬಲ ಸಿದ್ಧಾಂತದ ಪರಿಚಯವಾಯಿತು. ಬರ್ಜೀಲಿಯಸ್‌ನಂತೆಯೇ ತನ್ನ ಗುರು ಗೊಮೆಲಿನ್ ಸಹ ಜೈವಿಕ ಬಲ ಸಿದ್ಧಾಂತವನ್ನು ಬೆಂಬಲಿಸುತ್ತಿದ್ದ ವಿಷಯ ಅವನಿಗೆ ಗೊತ್ತಾಯಿತು. ಆದರೆ ಪ್ರಸಿದ್ಧ ಫ್ರೆಂಚ್ ರಸಾಯನ ವಿಜ್ಞಾನಿ ಷೆವ್ರೂಲ್ ಆ ಸಿದ್ಧಾಂತವನ್ನು ವಿರೋಧಿಸುತ್ತಿದ್ದನೆಂಬುದೂ ಗೊತ್ತಾಯಿತು. ರಸಾಯನ ವಿಜ್ಞಾನದ ದಿಗ್ಗಜಗಳಲ್ಲಿ ಕೆಲವರ ಬೆಂಬಲವನ್ನೂ ಕೆಲವರ ವಿರೋಧವನ್ನೂ ಗಳಿಸಿಕೊಂಡಿದ್ದ ಆ ಸಿದ್ಧಾಂತ ಸಹಜವಾಗಿಯೇ ವೋಲರ್‌ನ ಮನಸ್ಸನ್ನು ಕೊರೆಯಲಾರಂಭಿಸಿತು.

ಸ್ವೀಡನ್ನಿನಿಂದ ಹಿಂದಿರುಗಿದ ತರುವಾಯ ವೋಲರ್ ಬರ್ಲಿನ್‌ನಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡ. ಜೊತೆಗೇ ತನಗೆ ಪ್ರಿಯವಾಗಿದ್ದ ಅಜೈವಿಕ ರಸಾಯನ ವಿಜ್ಞಾನದಲ್ಲಿ ಸಂಶೋಧನೆ ಪ್ರಾರಂಭಿಸಿದ. ಅಲ್ಯೂಮಿನಿಯಮ್ ಮತ್ತು ಬೆರಿಲಿಯಮ್ ಲೋಹಗಳನ್ನು ಮೊತ್ತಮೊದಲ ಬಾರಿಗೆ ಧಾತು ರೂಪದಲ್ಲಿ ಪ್ರತ್ಯೇಕಿಸಿದುದು ಅವನ ಎರಡು ಗಮನಾರ್ಹ ಸಾಧನೆಗಳು. ಅನಂತರ ಲೋಹದ ಸಯನೈಡ್‌ಗಳ ವಿಷಯದಲ್ಲಿ ಅವನು ಆಸಕ್ತನಾದ. ಪೊಟ್ಯಾಸಿಯಮ್ ಮತ್ತು ಸೋಡಿಯಮ್ ಸಯನೈಡ್‌ಗಳ ಸೂತ್ರಗಳು, ಕ್ರಮವಾಗಿ KCN ಮತ್ತು NaCN. ಪೊಟ್ಯಾಸಿಯಮ್ ಸಯನೈಡನ್ನು ಸೀಸದ ಆಕ್ಸೈಡ್‌ನೊಂದಿಗೆ ಕಾಯಿಸಿದರೆ ಅದು ಆಕ್ಸಿಜನ್ ಪರಮಾಣುವನ್ನು ಪಡೆದುಕೊಂಡು ಪೊಟ್ಯಾಸಿಯಮ್ ಸಯನೇಟ್ KCNO ಆಗುತ್ತದೆ. ಅದನ್ನು ಯಾವುದಾದರೊಂದು ಅಮೋನಿಯಮ್ ಲವಣದೊಂದಿಗೆ ಕಾಯಿಸಿ ಅಮೋನಿಯಮ್ ಸಯನೇಟ್ ತಯಾರಿಸುವ ಯೋಚನೆ ವೋಲರ್‌ಗೆ ಬಂದಿತು.

ಪೊಟ್ಯಾಸಿಯಮ್ ಸಯನೇಟ್ + ಅಮೋನಿಯಮ್ ಸಲ್ಫೇಟ್ –> ಪೊಟ್ಯಾಸಿಯಮ್ ಸಲ್ಫೇಟ್ + ಅಮೋನಿಯಮ್ ಸಯನೇಟ್ ರಾಸಾಯನಿಕ ಸೂತ್ರಗಳ ಪ್ರಕಾರ ನಿರೂಪಿಸುವುದಾದರೆ

2KCNO + (NH4)2SO4 –> K2SO4 + 2NH4CNO

ವೋಲರ್ ಈ ಪ್ರಯತ್ನವನ್ನು ಪ್ರಯೋಗ ಶಾಲೆಯಲ್ಲಿ ಮಾಡಿ ನೋಡಿದಾಗ ಅವನಿಗೆ ಒಂದು ಆಶ್ಚರ್ಯ ಕಾದಿತ್ತು. ಕ್ರಿಯೆಯ ಫಲವಾಗಿ ದೊರೆತ ಹರಳುಗಳು ಯೂರಿಯ ಹರಳುಗಳಂತೆಯೇ ಇದ್ದುದನ್ನು ಅವನು ಗಮನಿಸಿದ. ಜೈವಿಕ ಬಲ ಸಿದ್ಧಾಂತವನ್ನು ಕುರಿತ ವಿವಾದ ಅವನ ಮನಸ್ಸನ್ನಾವರಿಸಿದ್ದುದರಿಂದಲೂ ಜೈವಿಕ ಸಂಯುಕ್ತಗಳ ಹರಳುಗಳ ನಿಕಟ ಪರಿಚಯ ಅವನಿಗೆ ಇದ್ದುದರಿಂದಲೂ ಆ ಹರಳುಗಳು ಯೂರಿಯದವೆಂದು ಗುರುತಿಸುವುದು ಅವನಿಗೆ ಸಾಧ್ಯವಾಯಿತು.

ಸಾಧ್ಯವಿರುವ ಎಲ್ಲ ರಾಸಾಯನಿಕ ಪರೀಕ್ಷೆಗಳನ್ನೂ ಮಾಡಿದ. ಎಲ್ಲವೂ ಆ ತೀರ್ಮಾನವನ್ನೇ ಸಮರ್ಥಿಸಿದುವು. ಯೂರಿಯ ಅಲ್ಲಿ ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ಬೇಕಾಯಿತು.

ವೋಲರ್ ನಿರೀಕ್ಷಿಸಿದ್ದ ಅಮೋನಿಯಮ್ ಸಯನೇಟ್ ಎಂಬುದು ಸಯನಿಕ್ ಆಮ್ಲದ (HCNO) ಅಮೋನಿಯಮ್ ಲವಣ ತಾನೆ? ಅಂದರೆ, ಸಯನಿಕ್ ಆಮ್ಲದಲ್ಲಿನ ಹೈಡ್ರೊಜನ್ ಪರಮಾಣುವಿನ ಸ್ಥಾನದಲ್ಲಿ ಅಮೋನಿಯಮ್ (NH4) ಪರಮಾಣುಗುಚ್ಛವನ್ನು ಆದೇಶಿಸಿದರೆ ಬರುವ ಲವಣ. ಅದರ ಸೂತ್ರ ಸಹಜವಾಗಿಯೇ NH4CNO. ಯೂರಿಯ ಅಣುವಿನಲ್ಲಾದರೋ ಎರಡು (NH2) ಪರಮಾಣುಗುಚ್ಛಗಳು CO ಗುಚ್ಛಕ್ಕೆ ಬಂಧಿಸಿಕೊಂಡಿವೆ. ಆದ್ದರಿಂದ ಅದರ ಸೂತ್ರ (NH2)2CO. ಎರಡರ ಸೂತ್ರಗಳಲ್ಲಿಯೂ ವಿವಿಧ ಧಾತುಗಳ ಪರಮಾಣುಗಳ ಸಂಖ್ಯೆ ಒಂದೇ ಆಗಿರುವುದನ್ನು ಅವನು ಗಮನಿಸಿದ: ನಾಲ್ಕು ಹೈಡ್ರೊಜನ್, ಎರಡು ನೈಟ್ರೊಜನ್, ಒಂದು ಕಾರ್ಬನ್ ಮತ್ತು ಒಂದು ಆಕ್ಸಿಜನ್. ಪೊಟ್ಯಾಸಿಯಮ್ ಸಯನೇಟ್ ಮತ್ತು ಅಮೋನಿಯಮ್ ಸಲ್ಫೇಟುಗಳ ಮಿಶ್ರಣವನ್ನು ಕಾಯಿಸಿದಾಗ ವೋಲರ್ ನಿರೀಕ್ಷಿಸಿದಂತೆ ವಾಸ್ತವವಾಗಿ ಅಮೋನಿಯಮ್ ಸಯನೇಟ್ NH4CNO ರೂಪುಗೊಂಡಿತೆಂದೂ ಅನಂತರ ಅದರಲ್ಲಿರುವ ಪರಮಾಣುಗಳೇ ಬೇರೆ ರೀತಿಯಲ್ಲಿ ಜೋಡಿಸಿಕೊಂಡುದರಿಂದ ಯೂರಿಯ ಉತ್ಪತ್ತಿಯಾಯಿತೆಂದೂ ತೀರ್ಮಾನಿಸುವುದು ಅನಿವಾರ್ಯವಾಯಿತು.

ಈ ಆವಿಷ್ಕಾರ ಇನ್ನೊಂದು ರೀತಿಯಲ್ಲಿ ತುಂಬ ಮಹತ್ವ ಉಳ್ಳದ್ದು. ಅಂದಿನವರೆಗೆ, ಪ್ರತಿಯೊಂದು ರಾಸಾಯನಿಕ ಸಂಯುಕ್ತಕ್ಕೂ ಒಂದು ಸೂತ್ರವನ್ನು ಬರೆಯಬಹುದು, ಆ ಸೂತ್ರವನ್ನು ನೋಡಿ ಅದು ಯಾವ ಸಂಯುಕ್ತದ್ದೆಂದು ಹೇಳಬಹುದು ಎಂಬ ಭಾವನೆ ಇತ್ತು. ಮೊತ್ತಮೊದಲ ಬಾರಿಗೆ ಎರಡು ಬೇರೆ ಬೇರೆ ಸಂಯುಕ್ತಗಳಿಗೆ ಒಂದೇ ಸೂತ್ರವಿರುವುದು ಬೆಳಕಿಗೆ ಬಂದಿತು. N2H4CO ಎಂಬ ಸೂತ್ರ ಅಮೋನಿಯಮ್ ಸಯನೇಟ್‌ದೂ ಹೌದು, ಯೂರಿಯದ್ದೂ ಹೌದು. ಹೀಗೆ ಒಂದೇ ಸೂತ್ರವಿರುವ ಎರಡು ಅಥವಾ ಹೆಚ್ಚು ಸಂಯುಕ್ತಗಳಿರುವ ವಿದ್ಯಮಾನಕ್ಕೆ ಈಗ ಸಮಾಂಗತೆ (ಐಸೊಮೆರಿಸಂ) ಎನ್ನುತ್ತಾರೆ. ಆ ಸಂಯುಕ್ತಗಳನ್ನು ಸಮಾಂಗಿಗಳು (ಐಸೊಮರ್) ಎನ್ನುತ್ತಾರೆ. ಅದೇ ಪರಮಾಣುಗಳು ಬೇರೆಬೇರೆ ರೀತಿಯಲ್ಲಿ ಜೋಡಿಸಿಕೊಂಡಿರುವುದರಿಂದ ಬೇರೆ ಬೇರೆ ಸಂಯುಕ್ತಗಳು ರೂಪುಗೊಂಡಿವೆ. ಜೋಡಣೆಯ ವ್ಯತ್ಯಾಸವನ್ನು ತೋರಿಸಲು ಅಮೋನಿಯಮ್ ಸಯನೇಟ್‌ಗೆ NH4CNO ಹಾಗೂ ಯೂರಿಯಕ್ಕೆ (NH2)2CO ಎಂಬ ಸೂತ್ರಗಳನ್ನು ಬಳಸುತ್ತಾರೆ. ಅಣುಗಳ ರಚನೆಯನ್ನು ಸೂಚಿಸುವುದರಿಂದ ಇವು ರಚನಾ ಸೂತ್ರಗಳು. ಇಂದು ಅಗಾಧವಾಗಿ ಬೆಳೆದಿರುವ ಜೈವಿಕ ರಸಾಯನ ವಿಜ್ಞಾನದಲ್ಲಿ ಸಮಾಂಗತೆ ಸರ್ವಸಾಮಾನ್ಯ.

ಜೈವಿಕ ಸಂಯುಕ್ತಗಳ ಅಣುಗಳಲ್ಲಿ ಜೈವಿಕ ಬಲ ಎಂಬುದು ಇಲ್ಲ ಎನ್ನುವುದಾದರೆ ಎರಡು ವರ್ಗದ ಸಂಯುಕ್ತಗಳಲ್ಲಿ ಸ್ಪಷ್ಟ ವ್ಯತ್ಯಾಸಗಳು ಕಾಣಬರುವುದೇಕೆ? ಕಾರ್ಬನ್ ಪರಮಾಣುವಿಗಿರುವ ಒಂದು ವಿಚಿತ್ರ  ಗುಣ ಅದಕ್ಕೆ ಕಾರಣ. ಜೈವಿಕ ಸಂಯುಕ್ತಗಳೆಲ್ಲ ಕಾರ್ಬನ್ ಸಂಯುಕ್ತಗಳು. ಕಾರ್ಬನ್ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡು ಉದ್ದುದ್ದನಾದ ಸರಪಳಿಗಳನ್ನು ರೂಪಿಸಬಲ್ಲವು. ಸರಪಳಿಯ ಎರಡು ತುದಿಗಳಲ್ಲಿರುವ ಕಾರ್ಬನ್ ಪರಮಾಣುಗಳೂ ಪರಸ್ಪರ ಬಂಧಿಸಿಕೊಂಡು ಚಕ್ರೀಯ ರಚನೆಗಳನ್ನುಂಟುಮಾಡಬಲ್ಲವು. ಇದು ಬೇರೆ ಬೇರೆ ರೀತಿಯಲ್ಲಿ ಆಗಬಹುದಾದ್ದರಿಂದ ಲಕ್ಷಾಂತರ ಕಾರ್ಬನ್ ಸಂಯುಕ್ತಗಳು ಸಾಧ್ಯ. ಅವುಗಳಲ್ಲಿ ಸಮಾಂಗತೆ ಸರ್ವಸಾಮಾನ್ಯ. ಒಂದೇ ಸೂತ್ರವಿರುವ ಹತ್ತಾರು ಸಂಯುಕ್ತಗಳು ಸಾಧ್ಯ. ಹೀಗಿರುವುದರಿಂದ “ಆರ್ಗ್ಯಾನಿಕ್ ಕೆಮಿಸ್ಟ್ರಿ‘’ ಎಂಬ ಶಬ್ದ ಹಾಗೆಯೇ ಉಳಿದಿರುವುದಾದರೂ ಆ ಶಬ್ದಕ್ಕೆ ಈಗಿನವರು ನೀಡುವ ವ್ಯಾಖ್ಯೆಯೇ ಬೇರೆ. `ಜೈವಿಕ ಮೂಲದ ಸಂಯುಕ್ತಗಳನ್ನು ಕುರಿತ ಶಾಸ್ತ್ರ‘ ಎಂದು ಈಗ ಹೇಳುವುದಿಲ್ಲ. ಹೆಚ್ಚು ಕಡಿಮೆ ಅಜೈವಿಕ ಸಂಯುಕ್ತಗಳಂತೆಯೇ ವರ್ತಿಸುವ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಕಾರ್ಬೊನೇಟುಗಳು ಮುಂತಾದ ಹತ್ತಾರು ಸರಳ ಸಂಯುಕ್ತಗಳನ್ನುಳಿದು ಇತರ ಎಲ್ಲ ಕಾರ್ಬನ್ ಸಂಯುಕ್ತಗಳೂ ಆ ಶಾಸ್ತ್ರದ ವ್ಯಾಪ್ತಿಯಲ್ಲಿ ಬರುವುದರಿಂದ ಕಾರ್ಬನ್ ಸಂಯುಕ್ತಗಳನ್ನು ಕುರಿತ ಶಾಸ್ತ್ರವೇ `ಆರ್ಗ್ಯಾನಿಕ್ ಕೆಮಿಸ್ಟ್ರಿ‘ ಎಂದು ವ್ಯಾಖ್ಯೆ ನೀಡುವುದು ಇಂದಿನ ರೂಢಿ. ಆದುದರಿಂದ ಕನ್ನಡದಲ್ಲಿ ಬಳಸಲು ಅದಕ್ಕೊಂದು ಶಬ್ದವನ್ನು ಆರಿಸುವುದಾದರೆ, ಕಾರ್ಬನಿಕ ರಸಾಯನ ವಿಜ್ಞಾನ ಎಂದು ಕರೆಯಲು ಅಡ್ಡಿ ಇಲ್ಲ. `ಇನ್‌ಆರ್ಗ್ಯಾನಿಕ್ ಕೆಮಿಸ್ಟ್ರಿ‘ಯನ್ನು `ಅಕಾರ್ಬನಿಕ ರಸಾಯನ ವಿಜ್ಞಾನ‘ ಎನ್ನಬಹುದು.