ಷಾನ್‌ಬೈನ್ ಕಳೆದ ಶತಮಾನದ ಮೊದಲ ದಶಕಗಳಲ್ಲಿ ಜೀವಿಸಿದ್ದ ಒಬ್ಬ ರಸಾಯನ ವಿಜ್ಞಾನಿ. ಅವನು ಹುಟ್ಟಿದ್ದು 1799ರಲ್ಲಿ, ಜರ್ಮನಿಯ ಮೆತ್ಸಿಂಗನ್ ಎಂಬಲ್ಲಿ. ಅವನ ವಿದ್ಯಾಭ್ಯಾಸವೂ ಜರ್ಮನಿಯಲ್ಲೇ, ಟ್ಯೂಬಿಂಗೆನ್ ಮತ್ತು ಎರ್ಲಾಂಗೆನ್ ನಗರಗಳಲ್ಲಿ. ಅನಂತರ ಆತ ಸ್ವಿಟ್ಸರ್ಲೆಂಡ್‌ನ ಬ್ಯಾಸೆಲ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ ವೃತ್ತಿಯನ್ನು ಕೈಗೊಂಡ. ಅಲ್ಲಿಯೇ ಪ್ರಾಧ್ಯಾಪಕನಾದ. ಪರಿಷ್ಕೃತವಾದ ಸುಸಜ್ಜಿತ ಪ್ರಯೋಗಗಳು ಇನ್ನೂ ರೂಢಿಗೆ ಬಂದಿರದಿದ್ದ ಕಾಲ ಅದು. ವಿಜ್ಞಾನಿಗಳು ಅನೇಕ ವೇಳೆ ಅವಶ್ಯ ಸಾಮಗ್ರಿಗಳನ್ನು ಹೊಂದಿಸಿಕೊಂಡು ಮನೆಯಲ್ಲಿಯೇ ತಮ್ಮ ಪ್ರಯೋಗಗಳನ್ನು ನಡೆಸುತ್ತಿದ್ದರು. ಷಾನ್‌ಬೈನ್ ಕೂಡ ಹಾಗೆ ತನ್ನ ಮನೆಯ ಅಡಿಗೆ ಕೊಠಡಿಯಲ್ಲಿಯೇ ರಾಸಾಯನಿಕ ಪ್ರಯೋಗಗಳನ್ನು ಮಾಡುತ್ತಿದ್ದ. ಪದಾರ್ಥಗಳನ್ನು ಕಾಯಿಸಲು ಅಲ್ಲಿದ್ದ ಇದ್ದಿಲು ಒಲೆಯನ್ನೇ ಉಪಯೋಗಿಸಿಕೊಳ್ಳುತ್ತಿದ್ದ. ಅವನ ಈ ಚಾಳಿ ಅವನ ಪತ್ನಿಗೆ ಸರಿಬೀಳುತ್ತಿರಲಿಲ್ಲ. ಆದುದರಿಂದ ಆಕೆ ಎಲ್ಲಿಗಾದರೂ ಎರಡುಮೂರು ಗಂಟೆಕಾಲ ಹೋಗಬೇಕಾದಾಗ, ಅಂಥ ಸಂದರ್ಭಕ್ಕಾಗಿ ಕಾದಿರುತ್ತಿದ್ದ ಷಾನ್‌ಖೈನ್, ಆಕೆ ಮನೆಯಲ್ಲಿಲ್ಲದಿರುವಾಗ ಅಡಿಗೆ ಮನೆಯನ್ನು ಉಪಯೋಗಿಸಿಕೊಳ್ಳುತ್ತಿದ್ದ. 1848ರಲ್ಲಿ ಹಾಗೆ ಯಾವುದೋ ಪ್ರಯೋಗವನ್ನು ಕೈಗೊಂಡು ಸಲೂೇರಿಕ್ ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣವನ್ನು ಕಾಯಿಸುತ್ತಿದ್ದನಂತೆ. ಅಕಸ್ಮಾತ್ ಅದು ನೆಲದ ಮೇಲೆ ಚೆಲ್ಲಿಹೋಯಿತು. ಗಾಬರಿಗೊಂಡ ಷಾನ್‌ಬೈನ್ ಅದನ್ನು ಕೂಡಲೇ ಒರೆಸಲು ಬಟ್ಟೆಗಾಗಿ ಹುಡುಕಾಡಿದ. ಆತನ ಪತ್ನಿ ಅಡಿಗೆ ಕೆಲಸದಲ್ಲಿ ತೊಡಗಿರುವಾಗ ಉಪಯೋಗಿಸುತ್ತಿದ್ದ ಏಪ್ರನ್ ಅಲ್ಲಿತ್ತು. ಅದನ್ನೇ ತೆಗೆದುಕೊಂಡು ನೆಲದ ಮೇಲೆ ಚೆಲ್ಲಿದ್ದ ಆಮ್ಲವನ್ನು ಒರೆಸಿದ. ಅನಂತರ ಆ ಏಪ್ರನ್ನನ್ನು ನೀರಿನಲ್ಲಿ ಜಾಲಾಡಿ, ಕಸಗಿ, ಹೆಂಡತಿ ಹಿಂದಿರುಗುವುದಕ್ಕೆ ಮುಂಚೆ ಒಣಗಿಸಿಬಿಡುವುದಕ್ಕಾಗಿ ಅದನ್ನು ಇದ್ದಿಲು ಒಲೆಯ ಮೇಲ್ಗಡೆ ಹರವಿದ. ಕೆಂಡದ ಝಳ ಬಡಿಯುತ್ತಿದ್ದುದರಿಂದ ಅದು ಬೇಗ ಒಣಗಿತು. ಆದರೆ ಅದು ಪೂರ್ತಿ ಒಣಗಿದುದೇ ತಡ, ಸ್ಫೋಟಿಸಿ ಪೂರಾ ಸುಟ್ಟುಹೋಯಿತು.

ಹೆಂಡತಿ ಮನೆಗೆ ಹಿಂದಿರುಗಿದ ಮೇಲೆ ಏನು ನಡೆಯಿತೋ ಗೊತ್ತಿಲ್ಲ. ಆದರೆ ಆ ಆಕಸ್ಮಿಕದಿಂದ ಷಾನ್‌ಬೈನ್‌ಗೂ ರಸಾಯನ ವಿಜ್ಞಾನಕ್ಕೂ ಲಾಭವಾದುದು ಗೊತ್ತು. ಆಕಸ್ಮಿಕಕ್ಕೆ ಏನು ಕಾರಣ, ಏಪ್ರನ್ ಸಿಡಿದು ದಹಿಸಿಹೋದುದೇಕೆ – ಎಂಬ ಪ್ರಶ್ನೆಗಳು ಷಾನ್‌ಬೈನನ ತಲೆ ತಿನ್ನತೊಡಗಿದುವು. ಆ ಪ್ರಶ್ನೆಗಳಿಗೆ ಉತ್ತರ ನೀಡುವ ಯತ್ನದಲ್ಲಿ ಆತ ಕೆಲವು ಪ್ರಯೋಗಗಳನ್ನು ಮಾಡಿದ. ಅವುಗಳ ಆಧಾರದ ಮೇಲೆ ಖಚಿತ ತೀರ್ಮಾನಕ್ಕೆ ಬಂದ. ಏಪ್ರನ್ ಹತ್ತಿಯ ಬಟ್ಟೆಯದಾದ್ದರಿಂದ ಅದರ ಬಹುಭಾಗ ಸೆಲ್ಯುಲೋಸ್ ಆಗಿತ್ತು. ಸಲೂೇರಿಕ್ ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣ ಅದರ ಮೇಲೆ ವರ್ತಿಸಿ ಸೆಲ್ಯೂಲೋಸನ್ನು ಸೆಲ್ಯೂಲೋಸ್ ನೈಟ್ರೇಟ್ ಆಗಿ ಪರಿವರ್ತಿಸಿತು. ಆ ಸೆಲ್ಯೂಲೋಸ್ ನೈಟ್ರೇಟು (ಇದನ್ನು ನೈಟ್ರೊ ಸೆಲ್ಯುಲೋಸ್ ಎಂದೂ ಕರೆಯುತ್ತಾರೆ) ಬಹು ಸುಲಭವಾಗಿ ಹೊತ್ತಿಕೊಂಡು ಸ್ಫೋಟಿಸಿಬಿಡುತ್ತದೆ. ಬೂದಿಯನ್ನಾಗಲೀ ಹೊಗೆಯನ್ನಾಗಲೀ ಉತ್ಪತ್ತಿಮಾಡದೆ ಸಂಪೂರ್ಣವಾಗಿ ದಹಿಸಿಬಿಡುತ್ತದೆ. ಇಷ್ಟು ವಿಷಯ ಆ ಘಟನೆಯ ಪರಿಣಾಮವಾಗಿ ಹೊರಬಿತ್ತು.

ಹತ್ತಿ, ಹೆಚ್ಚುಕಡಿಮೆ ಶುದ್ಧ ಸೆಲ್ಯುಲೋಸ್. ಸಲೂೇರಿಕ್ ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣ ಅದನ್ನು ಸೆಲ್ಯುಲೋಸ್ ನೈಟ್ರೇಟ್ ಆಗಿ ಪರಿವರ್ತಿಸುತ್ತದೆ. ರಾಸಾಯನಿಕ ಪರಿವರ್ತನೆಯ ಅನಂತರವೂ ಅದು ನೋಡುವುದಕ್ಕೆ ಹತ್ತಿಯಂತೆಯೇ ಇರುತ್ತದೆ; ಆದರೆ ಸ್ಪೋಟಿಸಬಲ್ಲುದು. ಆದ್ದರಿಂದ ಅದಕ್ಕೆ ಕೋವಿ ಹತ್ತಿ (gun cotton) ಎಂಬ ಹೆಸರು ಬಂದಿದೆ. ಯುದ್ಧಕಾರ್ಯದಲ್ಲಿ ಕೋವಿ ಹತ್ತಿಗೆ ಒಳ್ಳೆಯ ಭವಿಷ್ಯವಿದೆ ಎಂಬುದನ್ನು ಷಾನ್‌ಬೈನ್ ಕಂಡುಕೊಂಡ. ಅದುವರೆಗೆ ಐದಾರು ಶತಮಾನಗಳ ಕಾಲ ಫಿರಂಗಿ, ಕೋವಿ ಮುಂತಾದವುಗಳಿಂದ ಗುಂಡು ಹಾರಿಸಲು ಕೋವಿ ಮದ್ದನ್ನು (gun powder) ಉಪಯೋಗಿಸುತ್ತಿದ್ದರು. ಕೋವಿ ಮದ್ದು ಎಂಬುದು ಗಂಧಕ, ಇದ್ದಿಲುಪುಡಿ ಮತ್ತು ಪೆಟ್ಲುಪ್ಪುಗಳ ಮಿಶ್ರಣ. ಅದನ್ನು ಸಿಡಿಮದ್ದಾಗಿ ಉಪಯೋಗಿಸಿದಾಗ ತುಂಬ ಹೊಗೆ ಬರುತ್ತಿದ್ದುದರಿಂದ ಸಿಪಾಯಿಗಳ ಕೈ, ಮೈ, ಮುಖಗಳೆಲ್ಲ ಮಸಿಯಿಂದ ಕಪ್ಪಾಗುತ್ತಿತ್ತು; ಕೋವಿ ನಳಿಕೆ ಮಸಿಗಟ್ಟುತ್ತಿತ್ತು; ಯುದ್ಧಭೂಮಿ ಹೊಗೆಯಿಂದ ತುಂಬಿಹೋಗುತ್ತಿತ್ತು. ಕೋವಿ ಹತ್ತಿ ಬಳಸುವುದರಿಂದ ಈ ತೊಂದರೆಗಳೆಲ್ಲ ನಿವಾರಣೆಯಾಗುವುವೆಂದೂ ಈಗ ಕೋವಿ ಹತ್ತಿ ಸಿಕ್ಕಿರುವುದರಿಂದ ನಮಗೆ ಧೂಮರಹಿತ ಮದ್ದು ಸಿಕ್ಕಂತಾಯಿತೆಂದೂ ಷಾನ್‌ಬೈನ್ ಪ್ರಚಾರ ಮಾಡಿದ. ಪರಿಣಾಮವಾಗಿ ಕೋವಿ ಹತ್ತಿ ತಯಾರಿಸುವ ಅನೇಕ ಕಾರ್ಖಾನೆಗಳು ಹುಟ್ಟಿಕೊಂಡುವು. ಆದರೆ ಅವು ಬಹುಕಾಲ ನಡೆಯಲಿಲ್ಲ. ಏಕೆಂದರೆ ಕೋವಿಹತ್ತಿ ತುಂಬ ಅಪಾಯಕಾರಿ. ಎಷ್ಟೋ ವೇಳೆ ಅದು ಕಾರ್ಖಾನೆ ಬಿಟ್ಟು ಹೊರಬರುವುದರೊಳಗೇ ಸ್ಪೋಟನೆಯುಂಟಾಗಿ ತುಂಬ ಸಾವುನೋವುಗಳಿಗೆ ದಾರಿಯಾಯಿತು.

ಷಾನ್‌ಬೈನ್ ಕೋವಿ ಹತ್ತಿಯನ್ನು ತಯಾರಿಸಿದ ಎರಡೇ ವರ್ಷಗಳಲ್ಲಿ ಇಟಲಿಯ ಸೊಬ್ರೇರೋ ಇನ್ನೊಂದು ಆಕರ್ಷಕ ಸ್ಪೋಟಕವನ್ನು ತಯಾರಿಸಿದ. ಸಲ್ಫೋರಿಕ್ ಮತ್ತು ನೈಟ್ರಿಕ್ ಆಮ್ಲಗಳ ಮಿಶ್ರಣ ಇತರ ಯಾವುದಾದರೂ ಪದಾರ್ಥಗಳ ಮೇಲೆ ವರ್ತಿಸಿ ಇಂಥ ಸ್ಪೋಟಕ ದ್ರವ್ಯಗಳನ್ನು ಉತ್ಪತ್ತಿ ಮಾಡಬಹುದೇ ಎಂಬ ಯೋಚನೆಯೇ ಬಹುಶಃ ಸೊಬ್ರೇರೋನ ಪ್ರಯೋಗಗಳಿಗೆ ಪ್ರಚೋದನೆ ನೀಡಿತೆಂದು ಕಾಣುತ್ತದೆ. ಆ ಆಮ್ಲಮಿಶ್ರಣವನ್ನು ಗ್ಲಿಸರೀನ್ ಮೇಲೆ ಪ್ರಯೋಗಿಸಿ ಗ್ಲಿಸರೀನ್ ನೈಟ್ರೇಟ್ ಎಂಬ ದ್ರವ ಸ್ಫೋಟಕವನ್ನು ಆತ ತಯಾರಿಸಿದ. ಅದನ್ನು ನೈಟ್ರೊಗ್ಲಿಸರೀನ್ ಎಂದೂ ಕರೆಯುತ್ತಾರೆ.

ಷಾನ್‌ಬೈನ್‌ನ ನೈಟ್ರೊಸೆಲ್ಯೂಲೋಸ್ ಮತ್ತು ಸೊಬ್ರೇರೋನ ನೈಟ್ರೊಗ್ಲಿಸರೀನ್ ಎರಡನ್ನೂ ಉಪಯೋಗಿಸಿಕೊಂಡು ಕಾರ್ಯಸಾಧ್ಯವಾದ, ನಿಜವಾದ ಧೂಮರಹಿತ ಮದ್ದನ್ನು ತಯಾರಿಸಲು ಅಲ್ಲಿಂದ ನಾಲ್ಕೈದು ದಶಕಗಳೇ ಬೇಕಾಯಿತು. 1891ರಲ್ಲಿ ಸರ್ ಫ್ರೆಡರಿಕ್ ಅಬೆಲ್ ಮತ್ತು ಸರ್ ಜೇಮ್ಸ್ ಡೀವಾರ್ ಎಂಬಿಬ್ಬರು ಬ್ರಿಟಿಷ್ ವಿಜ್ಞಾನಿಗಳು ಆ ಎರಡು ಸಿಡಿಮದ್ದುಗಳ ಜೊತೆಗೆ ಸ್ವಲ್ಪ ಪೆಟ್ರೋಲಿಯಮ್ ಜೆಲ್ಲಿ (ವ್ಯಾಸಲಿನ್) ಸೇರಿಸಿ ಅಂಟಂಟಾಗಿರುವ ನಾರಿನಂಥ ಒಂದು ಮಿಶ್ರಣವನ್ನು ತಯಾರಿಸಿದರು. ಅದನ್ನು ಒಣಗಿಸಿ ಹುರಿಮಾಡಬಹುದಾದುದರಿಂದ ಅದಕ್ಕೆ ಕಾರ್ಡೈಟ್ ಎಂದು ನಾಮಕರಣ ಮಾಡಲಾಯಿತು. ಕಾರ್ಡ್ (cord) ಎಂದರೆ ಹುರಿ. ಹುರಿಯನ್ನು ಕತ್ತರಿಸಿ ಇಷ್ಟವಾದಷ್ಟು ಉದ್ದದ ತುಂಡುಗಳನ್ನು ಮಾಡಿಟ್ಟುಕೊಳ್ಳಬಹುದು. ಇದು ಬಹುಮಟ್ಟಿಗೆ ಸುರಕ್ಷಿತವಾದ ಪದಾರ್ಥ ಮತ್ತು ನಿಜಕ್ಕೂ ಧೂಮರಹಿತ ಮದ್ದು. ಈಗಲೂ ಅದರ ಉಪಯುಕ್ತತೆ ಮಾಸಿಲ್ಲ.

ಷಾನ್‌ಬೈನ್ ಹಾಗೂ ಸೊಬ್ರೇರೊ ನೀಡಿದ ಸ್ಫೋಟಕ ದ್ರವ್ಯಗಳನ್ನು ಹೀಗೆ ಒಂದು ಕಡೆ ಯುದ್ಧೋದ್ದೇಶಗಳಿಗಾಗಿ ಪಳಗಿಸಿಕೊಳ್ಳುವ ಪ್ರಯತ್ನಗಳು ನಡೆದಿದ್ದಾಗ ಇನ್ನೊಂದು ಕಡೆ ರಚನಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳುವ ಪ್ರಯತ್ನಗಳೂ ನಡೆದಿದ್ದುವು. ಸ್ವೀಡನ್ನಿನ ಅಲ್ರೆೇಡ್ ನೊಬೆಲ್ 1850ರಲ್ಲಿ ಕೇವಲ ಹದಿನೇಳರ ಯುವಕ. ಯಶಸ್ವೀ ಉಪಜ್ಞಕನಾಗಿದ್ದ ಆತನ ತಂದೆ, ಮಗನನ್ನೂ ಅದೇ ಜಾಡಿನಲ್ಲಿ ಬಿಡುವ ಉದ್ದೇಶದಿಂದ ಹದಿವಯಸ್ಸಿನ ಮಗನನ್ನು ದೂರದ ಅಮೆರಿಕಕ್ಕೆ ಕಳಿಸಿದ. ಹಲವಾರು ಉಪಜ್ಞೆಗಳಿಂದ ಖ್ಯಾತನಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ ತನ್ನ ದೇಶೀಯನಾದ ಎರಿಕ್‌ಸನ್ ಜೊತೆಗೆ ಮಗ ಕೆಲಕಾಲ ಕೆಲಸ ಮಾಡಲೆಂದು ಅಲ್ಲಿಗೆ ಕಳಿಸಿದ. ನಾಲ್ಕು ವರ್ಷಗಳ ತರುವಾಯ ನೊಬೆಲ್ ಹಿಂದಿರುಗಿದಾಗ ಆತನ ತಂದೆ ರಷ್ಯಾದಲ್ಲಿ ಯುದ್ಧೋದ್ದೇಶಗಳಿಗಾಗಿ ಸ್ಫೋಟಕ ದ್ರವ್ಯಗಳನ್ನು ತಯಾರಿಸುವ ಯೋಜನೆಯಲ್ಲಿದ್ದ. ಅಮೆರಿಕದಲ್ಲಿ ಪರ್ವತಗಳನ್ನು ಭೇದಿಸಿ ರಸ್ತೆಗಳನ್ನು ಮಾಡುವುದು, ನದಿ ನೀರನ್ನು ವ್ಯವಸಾಯಕ್ಕೊದಗಿಸಲು ಕಾಲುವೆಗಳನ್ನು ತೋಡುವುದು ಮುಂತಾದ ರಚನಾತ್ಮಕ ಕಾರ್ಯಗಳು ಬಿರುಸಿನಿಂದ ನಡೆಯುತ್ತಿದ್ದುದನ್ನು ನೋಡಿ ಬಂದಿದ್ದ ಯುವಕ ನೊಬೆಲ್, ಸ್ಫೋಟಕ ದ್ರವ್ಯಗಳನ್ನು ಅಂಥ ವಿಧಾಯಕ ಕಾರ್ಯಗಳಿಗೆ ಬಳಸುವ ಕನಸನ್ನು ಕಾಣತೊಡಗಿದ. ಆಕಸ್ಮಿಕ ಘಟನೆಯೊಂದರ ಪರಿಣಾಮವಾಗಿ ತನ್ನ ಕನಸನ್ನು ನನಸಾಗಿಸಿಕೊಂಡ.

1859ರಲ್ಲಿ ನೊಬೆಲ್ ಸ್ವದೇಶಕ್ಕೆ ಮರಳಿ ನೈಟ್ರೊಗ್ಲಿಸರೀನ್ ತಯಾರಿಸುವ ಒಂದು ಕಾರ್ಖಾನೆಯನ್ನು ತೆರೆದ. ಆ ಉದ್ಯಮದಲ್ಲಿ ಹೆಚ್ಚಿನ ಯಶಸ್ಸು ಗಳಿಸಲು ಎರಡು ಕೊರತೆಗಳು ಆವನನ್ನು ಕಾಡುತ್ತಿದ್ದುವು. ನೈಟ್ರೊಗ್ಲಿಸರೀನ್ ದ್ರವವಾದುದರಿಂದ ಅದನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸುವುದು ಪ್ರಯಾಸಕರ. ಯಾವುದೇ ಕಾರಣದಿಂದ ಅದು ಮಾರ್ಗ ಮಧ್ಯೆ ಸ್ಪೋಟಿಸದಂತೆ ಎಚ್ಚರಿಕೆ ವಹಿಸಬೇಕಿತ್ತು. ಸ್ಪೋಟನೆಗಳ ವರದಿಗಳು ಆಗಾಗ ಬರುತ್ತಲೇ ಇದ್ದುವು. 1864ರಲ್ಲಿ ನೊಬೆಲ್‌ನ ಕಾರ್ಖಾನೆಯಲ್ಲಿಯೇ ಒಂದು ಭಾರೀ ಸ್ಪೋಟನೆ ಉಂಟಾಗಿ ಆತನ ಸಹೋದರ ಪ್ರಾಣ ತೆತ್ತ. ಕಾರ್ಖಾನೆಯನ್ನು ದುರಸ್ತಿಪಡಿಸಿ ಪುನಃ ಉತ್ಪಾದನೆ ಪ್ರಾರಂಭಿಸಲು ಸ್ವೀಡಿಷ್ ಸರ್ಕಾರ ಪರವಾನಗಿ ಕೊಡಲು ನಿರಾಕರಿಸಿತು. ನೊಬೆಲ್ ಮಾತ್ರ ನೈಟ್ರೊಗ್ಲಿಸರೀನನ್ನು ಪಳಗಿಸುವ ಯತ್ನವನ್ನು ಕೈಬಿಡಲಿಲ್ಲ. ಒಂದು ಸರೋವರದ ಮಧ್ಯೆ ಹರಿಗೋಲಿನ ಮೇಲೆ ಪ್ರಯೋಗಗಳನ್ನು ನಡೆಸುತ್ತಿದ್ದ. 1866ರಲ್ಲಿ ಒಮ್ಮೆ, ಸೋರುತ್ತಿದ್ದ ಒಂದು ನೈಟ್ರೊಗ್ಲಿಸರೀನ್ ಪೀಪಾಯಿ ಅವನ ಕಣ್ಣಿಗೆ ಬಿತ್ತು. ಅದರಿಂದ ಸೋರಿದ ದ್ರವ ಎಲ್ಲಿಯೋ ಹಂಚಿಹೋಗಿರಲಿಲ್ಲ. ಪೀಪಾಯಿಯ ಬುಡದಲ್ಲಿ ಹರಡಿದ್ದ ಒಂದು ಬಗೆಯ ಮಣ್ಣು ಅದನ್ನು ಹೀರಿಕೊಂಡಿತ್ತು. ಅದು ಒಂದು ವಿಶಿಷ್ಟ ಬಗೆಯ ಮಣ್ಣು, ಡಯಾಟಮ್ ವರ್ಗಕ್ಕೆ ಸೇರಿದ ಪ್ರಾಚೀನ ಶೈವಲದ ಅವಶೇಷ. ಪ್ರಧಾನವಾಗಿ ಸಿಲಿಕದಿಂದಾದ ಆ ಮಣ್ಣನ್ನು ಭೂವಿಜ್ಞಾನಿಗಳು ಕೀಸಲ್‌ಗೂರ್ ಎಂದು ಕರೆಯುತ್ತಾರೆ. ನೈಟ್ರೊಗ್ಲಿಸರೀನನ್ನು ಹೀರಿಕೊಂಡಿರುವ ಕೀಸಲ್‌ಗೂರ್ ಸಹ ಸ್ಫೋಟಗೊಳ್ಳಬಲ್ಲುದು. ಆದರೆ ಸ್ವತಂತ್ರವಾಗಿ ಅಲ್ಲ; ಅಲ್ಪ ಪ್ರಮಾಣದಲ್ಲಿ ಬೇರೊಂದು ಪ್ರೇರಕ ಸ್ಫೋಟಕವನ್ನು ಒದಗಿಸಿದರೆ ಅದರ ಸ್ಫೋಟನೆಯಿಂದ ಪ್ರೇರಣೆ ಪಡೆದು ಸ್ಫೋಟಿಸುತ್ತದೆ. ನೊಬೆಲ್ ಅದನ್ನು ಗುರುತಿಸಿದ. ಕೂಡಲೇ ತನ್ನ ಸಮಸ್ಯೆಗೆ ಪರಿಹಾರ ದೊರಕಿತೆಂದು ನಿಟ್ಟುಸಿರುಬಿಟ್ಟ. ನೈಟ್ರೊಗ್ಲಿಸರೀನನ್ನು ಹೀರಿಕೊಂಡ ಕೀಸಲ್‌ಗೂರ್‌ಗೆ ಡೈನಾಮೈಟ್ ಎಂಬ ಹೆಸರು ಕೊಟ್ಟ. ಅದಕ್ಕೆ ನಿರ್ದಿಷ್ಟ ಪ್ರಮಾಣದ ನೈಟ್ರೊಸೆಲ್ಯುಲೋಸ್ ಬೆರಸಿ ಜಿಲೆಟಿನ್‌ನಂಥ ಒಂದು ಪದಾರ್ಥವನ್ನು ತಯಾರಿಸಿ ಅದಕ್ಕೆ ಸಿಡಿಯುವ ಜಿಲೆಟಿನ್ ಎಂಬ ಹೆಸರು ಕೊಟ್ಟ. ಇಂದಿಗೂ ಬಂಡೆಗಳನ್ನು ಒಡೆಯಲು ಈ ಎರಡು ಸ್ಫೋಟಕಗಳನ್ನು ಬಳಸುತ್ತಾರೆ.

ಇದೆಲ್ಲದರಿಂದ ನೊಬೆಲ್ ಅಪಾರ ಹಣ ಗಳಿಸಿದ. ಆದರೆ ಕೊನೆಯವರೆಗೂ ಬ್ರಹ್ಮಚಾರಿಯಾಗಿಯೇ ಉಳಿದ ನೊಬೆಲ್ ತನ್ನ ಕೊನೆಯ ದಿನಗಳನ್ನು ಒಬ್ಬಂಟಿಗನಾಗಿ ಕಳೆದ. ಸ್ಫೋಟಕಗಳನ್ನು ಕುರಿತು ಆತ ಕೈಗೊಂಡ ಎಲ್ಲ ಸಂಶೋಧನೆಗೂ ಪ್ರೇರಣೆ ದೊರೆತದ್ದು ಸ್ಫೋಟಕಗಳ ರಚನಾತ್ಮಕ ಉಪಯೋಗಗಳೇ ಆಗಿದ್ದುವಾದರೂ ಲೋಕದ ಕಣ್ಣಿಗೆ ಅದು ಹಾಗೆ ಕಾಣಿಸಲಿಲ್ಲ. ಯುದ್ಧ ಸಾಮಗ್ರಿಗಳ ನಿರ್ಮಾಪಕನೆಂದೇ ಆತ ಕುಪ್ರಸಿದ್ಧನಾದ. ಆ ಕೊರಗು ಅವನ ಕೊನೆಯ ದಿನಗಳಲ್ಲಿ ಆತನನ್ನು ಹಣ್ಣು ಮಾಡಿತು. 1896ರಲ್ಲಿ ಸಾಯುವಾಗ 92 ಲಕ್ಷ ಡಾಲರ್ ಬಿಟ್ಟುಹೋದ. ಭೌತಶಾಸ್ತ್ರ, ರಸಾಯನಶಾಸ್ತ್ರ, ಶರೀರ ವಿಜ್ಞಾನ ಮತ್ತು ವೈದ್ಯ ವಿಜ್ಞಾನ – ಈ ಮೂರು ಕ್ಷೇತ್ರಗಳಲ್ಲಿ ಜನೋಪಯೋಗೀ ಸಂಶೋಧನೆ ನಡೆಸಿದ ವಿಜ್ಞಾನಿಗಳಿಗೆ ಮೂರು ಬಹುಮಾನಗಳನ್ನೂ ವಿಶ್ವಶಾಂತಿಗೆ ವಿಶೇಷವಾಗಿ ದುಡಿದವರಿಗೆ ಮತ್ತು ಅಮೂಲ್ಯವಾದ ಸಾಹಿತ್ಯ ಕೃತಿಗಳನ್ನು ರಚಿಸಿದವರಿಗೆ ಒಂದೊಂದು ಬಹುಮಾನವನ್ನೂ ಕೊಡಲು ಆ ಹಣದ ಬಡ್ಡಿಯನ್ನು ಉಪಯೋಗಿಸಬೇಕೆಂದು ವಿಲ್ ಬರೆದಿಟ್ಟ. ನ್ಯಾಯವಾದಿಯ ನೆರವು ತೆಗೆದುಕೊಳ್ಳದೆ ತಾನೇ ವಿಲ್ ಬರೆದಿದ್ದುದರಿಂದ ಆತನ ಬರವಣಿಗೆ ಕೆಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿತು. ಸಮಸ್ಯೆಗಳನ್ನು ಬಗೆಹರಿಸಿ ಬಹುಮಾನ ಕೊಡಲು ಪ್ರಾರಂಭಿಸಿದುದು 1901 ರಿಂದ. ಈಗ ನೊಬೆಲ್ ಬಹುಮಾನಗಳು ಜಗತ್ತಿನ ಅತ್ಯಂತ ಪ್ರತಿಷ್ಠಿತ ಬಹುಮಾನಗಳಾಗಿವೆ.