ಒಬ್ಬರಿಂದೊಬ್ಬರಿಗೆ ಹರಡುವ ರೋಗಗಳನ್ನು ‘ಅಂಟುರೋಗಗಳು’ ಅಥವಾ ‘ಸೋಂಕು ರೋಗಗಳು’ ಎನ್ನುವರಷ್ಟೆ. ಆ ಬಗೆಯ ರೋಗಗಳಿಗೆ ಕಾರಣ, ಬರಿಗಣ್ಣಿಗೆ ಕಾಣಿಸದಷ್ಟು ಚಿಕ್ಕವಾದ ಸೂಕ್ಷ್ಮಜೀವಿಗಳು ಎಂಬುದು ಈಗ ಶಾಲೆಯ ಮಕ್ಕಳಿಗೆ ಸಹ ಗೊತ್ತು. ಅನ್ನ ನೀರುಗಳ ಮೂಲಕವೋ ಗಾಳಿಯ ಮೂಲಕವೋ ಬೇರಾವ ಮಾರ್ಗವಾಗಿಯೋ ಆ ಸೂಕ್ಷ್ಮಜೀವಿಗಳು ರೋಗಿಯ ದೇಹದಿಂದ ಇತರರ ದೇಹಕ್ಕೆ ರವಾನೆಯಾಗುವುದೇ ರೋಗದ ಹರಡುವಿಕೆಗೆ ಕಾರಣ ಎಂಬುದು ಅವರಿಗೆ ಗೊತ್ತು. ನೂರು ನೂರಿಪ್ಪತ್ತು ವರ್ಷಗಳ ಕೆಳಗೆ ಫ್ರೆಂಚ್ ವಿಜ್ಞಾನಿ, ಲೂಯಿ ಪಾಸ್ತರ್ ಈ ವಿಷಯವನ್ನು ಸಮರ್ಪಕವಾದ ಸಾಕ್ಷ್ಯಾಧಾರಗಳ ಸಮೇತ ಒಂದು ಸಿದ್ಧಾಂತವಾಗಿ ಮಂಡಿಸಿದ.

ಪಾಸ್ತರ್‌ಗೆ ಈ ಬಗ್ಗೆ ಮೊತ್ತಮೊದಲ ಸುಳಿವು ದೊರೆತದ್ದು ರೇಷ್ಮೆ ಹುಳುಗಳಿಗೆ ಬರುವ ಪೆಬ್ರಿನ್ ರೋಗದ ಸಂಬಂಧದಲ್ಲಿ. ಮನುಷ್ಯರಿಗೂ ಪಶುಪಕ್ಷಿಗಳಿಗೂ ಇರುವ ಹಲವಾರು ಅಂಟುರೋಗಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ಒಂದೊಂದು ಸಂದರ್ಭದಲ್ಲಿಯೂ ಆ ರೋಗ ಬರಿಸುವ ಸೂಕ್ಷ್ಮಜೀವಿಯನ್ನು ಗುರುತಿಸಿ, ಅದನ್ನು ಪ್ರತ್ಯೇಕಿಸಿ, ಕೃಷಿ ಮಾಡಿ, ಆ ಸೂಕ್ಷ್ಮಜೀವಿಯ ಸೋಂಕಿನಿಂದ ಆರೋಗ್ಯವಂತ ಜೀವಿಗೆ ರೋಗ ತಗಲಿಸಿ ತೋರಿಸುವವರೆಗೂ ತನ್ನ ಸಿದ್ಧಾಂತವನ್ನು ಜಗತ್ತಿಗೆ ಸಾರಲು ಪಾಸ್ತರ್ ಸಿದ್ಧನಾಗಿರಲಿಲ್ಲ. ಆದುದರಿಂದ ಆತ ಹಲವಾರು ಅಂಟುರೋಗಗಳ ಸವಿವರ ಅಧ್ಯಯನವನ್ನು ಕೈಗೊಂಡ.

ಹಾಗೆ ಆತ ಅಧ್ಯಯನಕ್ಕೆ ಆರಿಸಿಕೊಂಡ ರೋಗಗಳಲ್ಲಿ ಕೋಳಿ ಕಾಲರ ಎಂಬುದೊಂದು. ಅದರ ಹೆಸರೇ ಸೂಚಿಸುವಂತೆ ಅದು ಕೋಳಿಗೆ ತಗಲುವ ಒಂದು ಬಗೆಯ ರೋಗ. ಆ ರೋಗ ಬಂದ ಕೋಳಿಯ ರೆಕ್ಕೆಗಳು ಜೋತುಬೀಳುತ್ತವೆ. ಹಕ್ಕಿ ತುಂಬ ಪ್ರಯಾಸದಿಂದ ನಡೆಯತೊಡಗುತ್ತದೆ. ಕೆಲಕಾಲದ ಮೇಲೆ ನಡಿಗೆಯೇ ಅಸಾಧ್ಯವಾಗಿ ಹೋಗಿ ಅದು ಕುಸಿದು ಬೀಳುತ್ತದೆ. ರೆಪ್ಪೆಗಳ ಮೇಲಿನ ಹತೋಟಿ ಉಡುಗಿಹೋಗುವುದರಿಂದ ಕೋಳಿ ಕಣ್ಣು ಮುಚ್ಚುತ್ತದೆ. ಸ್ವಲ್ಪ ಕಾಲದ ಮೇಲೆ ಹಕ್ಕಿ ಸತ್ತುಹೋಗುತ್ತದೆ. ಆಗ ಗರಿಗಳು ಕೆದರಿಕೊಳ್ಳುವುದರಿಂದ ಕೋಳಿ ಉಂಡೆಯಂತಾಗುತ್ತದೆ.

ಕೋಳಿಕಾಲರದಿಂದ ನರಳುವ ಕೋಳಿಯ ರಕ್ತವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದ ಪಾಸ್ತರ್, ಅದರಲ್ಲಿ ಒಂದು ಬಗೆಯ ಸೂಕ್ಷ್ಮಜೀವಿಯನ್ನು ಗುರುತಿಸಿದ. ಅದು ಬ್ಯಾಸಿಲಸ್ ಗುಂಪಿನದು; ಅಂದರೆ ಸರಳಿನಾಕಾರದ ಸೂಕ್ಷ್ಮಜೀವಿ. ಕಡ್ಡಿಯ ತುಂಡಿನಂತಿರುವ ಆ ಬ್ಯಾಸಿಲಸ್‌ನ ಮಧ್ಯಭಾಗ ಅಮುಕಿದಂತೆ ಕಾಣುವುದನ್ನು ಪಾಸ್ತರ್ ಗಮನಿಸಿದ. ಕೋಳಿಯ ದೇಹದ ಹೊರಗಡೆ ಆ ಬ್ಯಾಸಿಲಸ್ಸನ್ನು ಕೃಷಿಮಾಡಲು ಪ್ರಯತ್ನಿಸಿದ ಕೆಲವರು ವಿಫಲರಾದರು. ಅದನ್ನು ಕೃಷಿಮಾಡಲು ತಕ್ಕ ಮಾಧ್ಯಮ ಅವರಿಗೆ ಸಿಕ್ಕಲಿಲ್ಲ. ಕೋಳಿ ಮಾಂಸವನ್ನು ಕುದಿಸಿ ತಯಾರಿಸಿದ ಎಸರು ಅದರ ಕೃಷಿಗೆ ಯೋಗ್ಯ ಮಾಧ್ಯಮವಾಗಬಲ್ಲದೆಂದು ಪಾಸ್ತರ್ ಕಂಡುಕೊಂಡ.

ಕೋಳಿ ಎಸರನ್ನು ಗಾಜಿನ ತಟ್ಟೆಯಲ್ಲಿ ತೆಗೆದುಕೊಂಡು ರೋಗಗ್ರಸ್ತ ಕೋಳಿಯ ರಕ್ತದ ಒಂದು ಹನಿಯನ್ನು ಅದರಲ್ಲಿ ಉದುರಿಸಿದರೆ ರಕ್ತದಲ್ಲಿನ ಸೂಕ್ಷ್ಮ ಜೀವಿಗಳು ಎಸರಿನಿಂದ ಪೋಷಣೆ ಪಡೆಯುತ್ತವೆ; ಅವುಗಳ ಸಂಖ್ಯೆ ವೃದ್ದಿಯಾಗುತ್ತದೆ. ಸೂಕ್ಷ್ಮಜೀವಿಗಳ ಸಂದಣಿಯುಳ್ಳ ಆ ದ್ರವವನ್ನು ಕೃಷಿಕೆ ಎನ್ನುತ್ತಾರೆ. ಕೃಷಿಕೆಯ ಒಂದು ತೊಟ್ಟನ್ನು ಬೇರೊಂದು ತಟ್ಟೆಯಲ್ಲಿಯ ಕೋಳಿ ಎಸರಿನಲ್ಲಿ ಹಾಕಿದರೆ ಅದರಲ್ಲಿ ಪುನಃ ಸೂಕ್ಷ್ಮಜೀವಿಗಳ ಸಂಖ್ಯೆ ವೃದ್ದಿಯಾಗುತ್ತದೆ. ಹೀಗೆ ಎಷ್ಟು ಬೇಕೋ ಅಷ್ಟು ಕೃಷಿಕೆಗಳನ್ನು ತಯಾರಿಸಿಕೊಳ್ಳಬಹುದು. ಅವುಗಳಲ್ಲಿ ಯಾವುದೇ ಕೃಷಿಕೆಯಿಂದ ತೆಗೆದುಕೊಂಡ ಒಂದು ಹನಿಯನ್ನು ಆರೋಗ್ಯವಂತ ಕೋಳಿಗೆ ಚುಚ್ಚಿದರೆ, ಆ ಕೋಳಿಗೆ ಕೋಳಿ ಕಾಲರ ಬಂದು ಅದು ಸತ್ತುಹೋಗುತ್ತದೆ. ಆದರೆ ಕೃಷಿಕೆಯಲ್ಲಿನ ಸೂಕ್ಷ್ಮ ಜೀವಿಗಳು ಸತ್ವಯುತವಾಗಿ ಮತ್ತು ಜೀವಂತವಾಗಿ ಉಳಿಯಬೇಕಾದರೆ ಕೃಷಿಕೆಯನ್ನು ಹಾಗೆಯೇ ಬಹುದಿನ ಬಿಡಬಾರದು. ಆ ತಾಜಾ ಕೃಷಿಕೆಯ ಒಂದು ಹನಿಯನ್ನು ಬೇರೊಂದು ತಟ್ಟೆಯಲ್ಲಿ ತೆಗೆದುಕೊಂಡ ತಾಜಾ ಕೋಳಿ ಎಸರಿಗೆ ಹಾಕಿ ಕೃಷಿ ಮಾಡಬೇಕು. ಹೀಗೆ ತಾಜಾ ಕೃಷಿಕೆಗಳ ತಯಾರಿಕೆ ಮುಂದುವರಿಯುತ್ತಿರಬೇಕು. ಇದನ್ನೂ ಪಾಸ್ತರ್ ಅನುಭವದಿಂದ ಕಂಡುಕೊಂಡ.

1879ರಲ್ಲಿ ಪಾಸ್ತರ್ ಈ ಪ್ರಯೋಗಗಳಲ್ಲಿ ನಿರತನಾಗಿದ್ದ. ಆ ವರ್ಷದ ಬೇಸಗೆ ಬಂದಿತು. ಬೇಸಗೆಯಲ್ಲಿ ಸ್ವಂತ ಊರು, ಆರ್ಬ್ವಾಕ್ಕೆ ಹೋಗಿ ಅಲ್ಲಿ ಕೆಲವು ವಾರಗಳ ಕಾಲ ತಂಗುತ್ತಿದ್ದುದು ಅವನ ರೂಢಿ. ಅದೇ ರೀತಿ ಆ ಸಲವೂ ಆರ್ಬ್ವಾಕ್ಕೆ ಹೊರಟ. ಹೊರಡುವ ಮುನ್ನ ತನ್ನ ಇಬ್ಬರು ಸಂಶೋಧನ ಸಹಾಯಕರನ್ನು ಕರೆದು ಅವರಿಗೊಂದು ಕೆಲಸ ಹೇಳಿದ. ಕೋಳಿ ಕಾಲರ ಬ್ಯಾಸಿಲಸ್‌ನ ನಾಲ್ಕಾರು ಕೃಷಿಕೆಗಳು ಪ್ರಯೋಗಶಾಲೆಯಲ್ಲಿದ್ದುವು. ಪ್ರತಿನಿತ್ಯ ತಾಜಾ ಕೃಷಿಯ ಒಂದು ಹನಿಯನ್ನು, ಬೇರೊಂದು ತಟ್ಟೆಯಲ್ಲಿ ತೆಗೆದುಕೊಂಡ ತಾಜಾ ಕೋಳಿ ಎಸರಿನಲ್ಲಿ ಹಾಕಿ ಕೃಷಿ ಮಾಡಬೇಕು, ಮರುದಿನ ಆ ಕೃಷಿಕೆಯ ಒಂದುಹನಿಯನ್ನು ಇನ್ನೊಂದು ತಟ್ಟೆಯಲ್ಲಿ ತೆಗೆದುಕೊಂಡ ತಾಜಾ ಕೋಳಿ ಎಸರಿಗೆ ಹಾಕಬೇಕು. ಹೀಗೆ ಮಾಡುವುದನ್ನು ತಾನು ಹಿಂದಿರುಗುವವರೆಗೂ ಮುಂದುವರಿಸಬೇಕು ಎಂದು ಆದೇಶವಿತ್ತ. ಬೇಸಗೆ ರಜೆಯಿಂದ ಹಿಂದಿರುಗಿದಾಗ ತನ್ನ ಪ್ರಯೋಗಗಳಿಗೆ ತಾಜಾ ಕೃಷಿಕೆ ಲಭ್ಯವಿರಬೇಕು ಎಂಬ ಉದ್ದೇಶದಿಂದ ತನ್ನ ಸಹಾಯಕರಿಗೆ ಈ ಕೆಲಸ ಒಪ್ಪಿಸಿದ್ದ.

ಶ್ರದ್ಧಾಳುಗಳಾದ ಈ ಸಹಾಯಕರು ತಮ್ಮ ಗುರುವಿನ ಕೋರಿಕೆಯಂತೆ ಕೆಲಸ ಮಾಡತೊಡಗಿದರು. ಆದರೆ ಅನಿರೀಕ್ಷಿತ ಆಕಸ್ಮಿಕಗಳ ಬಗ್ಗೆ ಮಾಡುವುದೇನಿದೆ? ಅನಿವಾರ್ಯವಾದ ವೈಯಕ್ತಿಕ ಕಾರಣಗಳಿಗಾಗಿ ಅವರಿಬ್ಬರೂ ಒಂದು ದಿನ ಊರುಬಿಟ್ಟು ಹೋಗಬೇಕಾಯಿತು. ಒಂದೇ ದಿನ ಎಂದುಕೊಂಡು ಹೋದವರು ನಾಲ್ಕೈದು ದಿನ ಅಲ್ಲಿಯೇ ಉಳಿಯಬೇಕಾಯಿತು. ಊರಿಗೆ ಹಿಂದಿರುಗಿ ಪ್ರಯೋಗ ಶಾಲೆಗೆ ಬಂದಾಗ ಹಳಸಲಾಗಲು ಬಿಟ್ಟಿದ್ದ ಕೃಷಿಕೆಗಳ ಬಗ್ಗೆ ಯೋಚಿಸತೊಡಗಿದರು. ಸೂಕ್ಷ್ಮಜೀವಿಗಳು ಅಕಸ್ಮಾತ್ ಸತ್ವಯುತವಾಗಿ ಉಳಿದಿರಬಹುದೇ ಪರೀಕ್ಷಿಸಿ ನೋಡೋಣ ಎಂದುಕೊಂಡು ಆ ಕೃಷಿಕೆಗಳಿಂದ ಒಂದು ಹನಿ ತೆಗೆದುಕೊಂಡು ಅದನ್ನು ಆರೋಗ್ಯವಂತ ಕೋಳಿಯೊಂದಕ್ಕೆ ಚುಚ್ಚಿದರು. ಆ ಕೋಳಿಯಲ್ಲಿ ರೋಗಲಕ್ಷಣಗಳು ಸ್ವಲ್ಪ ಮಾತ್ರ ಕಾಣಿಸಿಕೊಂಡುವು. ಅತ್ಯಲ್ಪ ಕಾಲದಲ್ಲಿ ಕೋಳಿ ಸುಧಾರಿಸಿಕೊಂಡು ಬಿಟ್ಟಿತು; ಲವಲವಿಕೆಯಿಂದ ಓಡಾಡತೊಡಗಿತು. ಅದು ಅನಿರೀಕ್ಷಿತವೇನಾಗಿರಲಿಲ್ಲ. ಸೂಕ್ಷ್ಮಜೀವಿಗಳು ಜೀವಂತ ಉಳಿದಿದ್ದುವಾದ ಪೂರಾ ಸತ್ವಗುಂದಿರುವುದರಿಂದ ಕೆಲಸಕ್ಕೆ ಬರುವುದಿಲ್ಲವೆಂದು ತೀರ್ಮಾನಿಸಿ, ಬೇರೆ ರೋಗಗ್ರಸ್ತ ಕೋಳಿಯೊಂದನ್ನು ಹುಡುಕಿ ತಂದು ಅದರ ರಕ್ತವನ್ನುಪಯೋಗಿಸಿಕೊಂಡು ಹೊಸದಾಗಿ ಬ್ಯಾಸಿಲಸ್ ಕೃಷಿ ಮಾಡಿದರು. ಹಾಗೆ ತಯಾರಿಸಿದ ಕೃಷಿಕೆಯನ್ನು ಪರೀಕ್ಷಿಸುವುದಕ್ಕಾಗಿ, ಯಾವ ಕೋಳಿಗೆ ಸತ್ವಗುಂದಿದ ಕೃಷಿಕೆಯನ್ನು ಚುಚ್ಚಿದ್ದರೋ ಅದೇ ಕೋಳಿಗೆ ಹೊಸದಾಗಿ ತಯಾರಿಸಿದ ಕೃಷಿಕೆಯ ಒಂದು ಹನಿ ಚುಚ್ಚಿದರು. ಆ ಕೋಳಿಯಲ್ಲಿ ರೋಗಲಕ್ಷಣಗಳು ಸ್ವಲ್ಪವೂ ಕಾಣಬರದಿದ್ದುದನ್ನು ಗಮನಿಸಿ ಅವರು ದಿಗ್ಬ್ರಮೆಗೊಂಡರು. ಹಾಗಾದರೆ ತಾವು ತಯಾರಿಸಿದ ಕೃಷಿಕೆಯಲ್ಲಿ ದೋಷವೇನಾದರೂ ಇದೆಯೇ ಎಂದು ಯೋಚಿಸಿ ಅದನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದರು. ಕೋಳಿ ಕಾಲರ ಬ್ಯಾಸಿಲಸ್‌ಗಳು ಕಿಕ್ಕಿರಿದಿದ್ದುವು. ಅಷ್ಟೇ ಅಲ್ಲ, ಆ ಕೃಷಿಕೆಯ ಒಂದು ತೊಟ್ಟನ್ನು ಬೇರೊಂದು ಕೋಳಿಗೆ ಚುಚ್ಚಿ ನೋಡಿದಾಗ ಆ ಕೋಳಿಗೆ ರೋಗ ಬಂದು ಅದು ಸತ್ತುಹೋಯಿತು. ಹಳಸಲು ಕೃಷಿಕೆಯನ್ನು ಚುಚ್ಚಿಸಿಕೊಂಡಿದ್ದ ಕೋಳಿಗೆ ಮಾತ್ರ ಏನೂ ಆಗಲಿಲ್ಲ. ಈ ಫಲಿತಾಂಶಗಳಿಂದ ತಬ್ಬಿಬ್ಬಾದ ಸಂಶೋಧನಾ ಸಹಾಯಕರು ಪಾಸ್ತರ್ ಹಿಂದಿರುಗುವ ವರೆಗೆ ಕಾದಿದ್ದು, ಅನಂತರ ಅವನಿಗೆ ನಡೆದುದೆಲ್ಲವನ್ನೂ ವಿವರಿಸಿದರು. ಪಾಸ್ತರ್ ಎಲ್ಲವನ್ನೂ ಸಾವಧಾನವಾಗಿ ಕೇಳಿದ. ಅವನ ಹುಬ್ಬು ಗಂಟುಕಟ್ಟಿಕೊಂಡುವು. ತೊಡೆಯ ಮೇಲೆ ಮೊಣಕೈ ಊರಿಕೊಂಡು ಕೈಮೇಲೆ ಗದ್ದವನ್ನಿರಿಸಿ ಐದು ನಿಮಿಷ ಅವಾಕ್ಕಾಗಿ ಕುಳಿತ. ಅನಂತರ ಅವನ ಮುಖ ಅರಳಿತು. ಕಣ್ಣು ಹೊಳೆದುವು. “ಓ ಈಗ ಗೊತ್ತಾಯಿತು” ಎಂದು ನಗುಮುಖದಿಂದ ಎದ್ದುನಿಂತ.

ಹಳೆಯದಾಗಿ ಸತ್ವ ಕಳೆದುಕೊಂಡಿದ್ದ ರೋಗಕಾರಕ ಸೂಕ್ಷ್ಮಜೀವಿಗಳು ಕೋಳಿ ಕಾಲರ ವಿರುದ್ಧ ರಕ್ಷಣೆ ಒದಗಿಸಬಲ್ಲುವು ಎಂದು ಅವನು ತೀರ್ಮಾನಿಸಿದ್ದ. ಆದ್ದರಿಂದಲೇ ಅದನ್ನು ಚುಚ್ಚಿಸಿಕೊಂಡಿದ್ದ ಕೋಳಿ ಅನಂತರ, ಪ್ರಬಲ ರೋಗಕಾರಕ ಸೂಕ್ಷ್ಮಜೀವಿಗಳ ದಾಳಿಯನ್ನು ಜಯಪ್ರದವಾಗಿ ಎದುರಿಸಿ ಹಾಯಾಗಿತ್ತು ಎಂದು ವಾದಿಸಿದ. ತನ್ನ ವಾದ ಸರಣಿ ಸರಿಯೇ ಎಂದು ಪರೀಕ್ಷಿಸಲು ತನ್ನ ಸಹಾಯಕರು ನಡೆಸಿದ್ದ ಪ್ರಯೋಗಗಳ ಇಡೀ ಸರಣಿಯನ್ನು ಪುನಃ ಪುನಃ ಮಾಡಿ ನೋಡಿದ. ಪ್ರತಿಯೊಂದು ಸಲವೂ ನಿರೀಕ್ಷಿಸಿದ ಫಲಿತಾಂಶವೇ ದೊರೆಯಿತು. ಗಾಜಿನ ತಟ್ಟೆಯಲ್ಲಿ ತಯಾರಿಸಿದ ಸೂಕ್ಷ್ಮಜೀವಿಗಳ ತಾಜಾ ಕೃಷಿಕೆಯನ್ನು ಒಂದು ಪ್ರನಾಳದೊಳಕ್ಕೆ ಸುರಿದು ಪ್ರನಾಳದ ಬಾಯಿಯನ್ನು ಮೊಹರು ಮಾಡಿಟ್ಟಾಗ ಸೂಕ್ಷ್ಮಜೀವಿಗಳು ಎಷ್ಟು ದಿನವಾದರೂ ಸತ್ವ ಕಳೆದುಕೊಳ್ಳಲಿಲ್ಲ. ಮೊಹರು ಮಾಡದೆ ಬಾಯಿಗೆ ಹತ್ತಿ ಸಿಕ್ಕಿಸಿ ಇಟ್ಟಾಗ ಮಾತ್ರ ಒಂದೆರಡು ದಿನಗಳಲ್ಲಿಯೇ ಅವು ಸತ್ವ ಕಳೆದುಕೊಂಡುವು. ಗಾಳಿಯೇ ಸತ್ವಗುಂದಿಸುವ ಕಾರಕ ಎಂದು ತೀರ್ಮಾನಿಸಿದ. ಸತ್ವಗುಂದಿದ ಕೃಷಿಕೆಯನ್ನು ಕೋಳಿಯೊಂದಕ್ಕೆ ಚುಚ್ಚಿದರೆ ಅದು ಕೋಳಿಕಾಲರದಿಂದ ವಿನಾಯಿತಿ ಪಡೆಯುತ್ತದೆ. ಇಂದು ನಾವು ವ್ಯಾಕ್ಸೀನ್ ಎಂದು ಕರೆಯುವುದು ಬೇರೇನೂ ಅಲ್ಲ, ಹೀಗೆ ಸತ್ವಗುಂದಿಸಿದ ರೋಗಕಾರಕ ಸೂಕ್ಷ್ಮಜೀವಿಗಳ ಕೃಷಿಕೆಯನ್ನೇ. ಇಂದಿನ ರೋಗರಕ್ಷಾಶಾಸ್ತ್ರ ಅಥವಾ ವಿನಾಯಿತಿ ಶಾಸ್ತ್ರ ಜನ್ಮ ತಳೆದದ್ದು ಹೀಗೆ, ಒಂದು ಆಕಸ್ಮಿಕ ಘಟನೆಯ ಪರಿಣಾಮವಾಗಿ.

ಈ ವಿಧಾನವನ್ನು ಎಲ್ಲ ರೋಗಗಳಿಗೂ ಅನ್ವಯಿಸಬಹುದು. ಆದರೆ ರೋಗರಕ್ಷೆ ನೀಡಬಲ್ಲ ವ್ಯಾಕ್ಸೀನ್ ತಯಾರಿಸಲು ಎಲ್ಲ ಸಂದರ್ಭಗಳಲ್ಲೂ ಒಂದೇ ವಿಧಾನ ಸಾಧ್ಯವಿಲ್ಲ. ರೋಗಕಾರಕ ಸೂಕ್ಷ್ಮಜೀವಿಗಳು ಒಂದೊಂದೂ ಒಂದೊಂದು ರೀತಿ ವರ್ತಿಸುವುದರಿಂದ ಯಾವುದೇ ಸೂಕ್ಷ್ಮಜೀವಿಯನ್ನು ಸತ್ವಗುಂದಿಸಲು ಯಾವ ವಿಧಾನ ಕಾರ್ಯಸಾಧ್ಯ ಎಂಬುದನ್ನು ಸಂಶೋಧನೆ ಮಾಡಿಯೇ ತಿಳಿದುಕೊಳ್ಳಬೇಕು. ಹಾಗಿರುವುದರಿಂದಲೇ ರೋಗರಕ್ಷಾಶಾಸ್ತ್ರ ಒಂದು ವಿಶೇಷ ವಿಜ್ಞಾನಶಾಖೆಯಾಗಿ ಬೆಳೆದಿರುವುದು. ಕೋಳಿ ಕಾಲರ ಒಂದೇ ಅಲ್ಲದೆ ದನ ಕುರಿಗಳಿಗೆ ತಗಲುವ ನೆರಡಿ ರೋಗಕ್ಕೂ ಹುಚ್ಚು ನಾಯಿ ಕಡಿತದಿಂದ ಬರುವ ರೇಬಿಸ್‌ಗೂ ಪಾಸ್ತರನೇ ವ್ಯಾಕ್ಸೀನ್ ತಯಾರಿಸಿದ. ಈಗ ಅದೇ ರೋಗಗಳಿಗೆ ಇನ್ನೂ ಉತ್ಕೃಷ್ಟವಾದ ವ್ಯಾಕ್ಸೀನ್ ಬಂದಿವೆ. ಇನ್ನಿತರ ಹಲವಾರು ರೋಗಗಳಿಗೆ ವ್ಯಾಕ್ಸೀನ್‌ಗಳನ್ನು ತಯಾರಿಸಲಾಗಿದೆ. ಮತ್ತೆ ಕೆಲವಕ್ಕೆ ಇನ್ನೂ ತಯಾರಿಸಬೇಕಾಗಿದೆ.

ವ್ಯಾಕ್ಸೀನ್‌ಗಳು ಹೇಗೆ ಕೆಲಸ ಮಾಡುವುವೆಂಬ ಬಗ್ಗೆಯೂ ಈಗ ತಿಳಿವಳಿಕೆ ಅಗಾಧವಾಗಿ ಬೆಳೆದಿದೆ. ಯಾವ ಅನ್ಯ ಕಾಯ ನಮ್ಮ ರಕ್ತವನ್ನು ಹೊಕ್ಕರೂ ಅದನ್ನು ನಾಶಮಾಡುವ ಪ್ರಯತ್ನದಲ್ಲಿ ನಮ್ಮ ದೇಹವು ಪ್ರತಿಕಾಯಗಳೆಂಬ ಪ್ರೊಟೀನ್‌ಗಳನ್ನು ಉತ್ಪಾದಿಸಿ ರಕ್ತಪ್ರವಾಹಕ್ಕೆ ಸೇರಿಸುತ್ತದೆ.   ವ್ಯಾಕ್ಸೀನ್‌ಗಳು ಸತ್ವ ಕಳೆದುಕೊಂಡ ರೋಗಕಾರಕಗಳಾದ್ದರಿಂದ ಆ ರೋಗದ ವಿರುದ್ದ ಕೆಲಸ ಮಾಡಬಲ್ಲ ಪ್ರತಿಕಾಯಗಳ ಉತ್ಪಾದನೆಯನ್ನು ಅವು ಉತ್ತೇಜಿಸಿ, ತಾವೇ ಅದಕ್ಕೆ ಬಲಿಯಾಗುತ್ತವೆ. ಹಾಗೆ ಉತ್ಪತ್ತಿಯಾದ ಪ್ರತಿಕಾಯಗಳು ಕೆಲಕಾಲ ರಕ್ತಪ್ರವಾಹದಲ್ಲಿ ಉಳಿಯುವುದರಿಂದ ಪ್ರಬಲ ರೋಗಕಾರಕದ ದಾಳಿಯನ್ನು ಎದುರಿಸಬಲ್ಲ ವ್ಯವಸ್ಥೆ ಅಲ್ಲಿ ಸಿದ್ಧವಾಗಿರುತ್ತದೆ. ಆ ಪ್ರತಿಕಾಯಗಳ ಸಾಮರ್ಥ್ಯವನ್ನು ಮೀರಿಸುವಂಥ ಪ್ರಬಲವಾದ ಅನ್ಯಕಾಯವಾದರೆ ಮಾತ್ರ ಅದರ ಕೈ ಮೇಲಾಗಿ ನಮ್ಮ ದೇಹಕ್ಕೆ ಘಾಸಿಯಾಗುತ್ತದೆ. ಬಹುಪಾಲು ಸಂದರ್ಭಗಳಲ್ಲಿ ಅಂಥ ಪರಿಸ್ಥಿತಿ ಉದ್ಭವಿಸುವುದಿಲ್ಲವಾದುದರಿಂದ, ವಿನಾಯಿತಿ ದೊರೆಯುತ್ತದೆ. ನಮ್ಮ ದೇಹದಲ್ಲಿರುವ ಈ ನೈಸರ್ಗಿಕ ರಕ್ಷಾ ವ್ಯವಸ್ಥೆಯನ್ನು ಈಗ ವಿಸ್ತಾರವಾಗಿ ಅಧ್ಯಯನ ಮಾಡಲಾಗಿದೆ.