ಕಳೆದ ಶತಮಾನದ ಕೊನೆಯಲ್ಲಿ ಮತ್ತು ಈ ಶತಮಾನದ ಪ್ರಾರಂಭದಲ್ಲಿ – 1895ರಿಂದ 1905ವರೆಗಿನ ಸುಮಾರು ಒಂದು ದಶಕದಲ್ಲಿ ಕೆಲವು ಮಹತ್ವಪೂರಿತ ಸಂಶೋಧನೆಗಳು ನಡೆದುವು. ಅವುಗಳ ಫಲವಾಗಿ ಭೌತವಿಜ್ಞಾನದಲ್ಲಿ ಒಂದು ದೊಡ್ಡ ಕ್ರಾಂತಿಯುಂಟಾಯಿತು. ವಸ್ತು, ಶಕ್ತಿ, ಆಕಾಶ, ಕಾಲ ಮುಂತಾದವುಗಳನ್ನು ಕುರಿತು ಅದುವರೆಗೆ ಜನ ಯಾವ ಭಾವನೆಗಳನ್ನಿಟ್ಟುಕೊಂಡಿದ್ದರೋ ಅವುಗಳನ್ನೆಲ್ಲ ಗಣನೀಯವಾಗಿ ಮಾರ್ಪಡಿಸಿಕೊಳ್ಳಬೇಕಾಯಿತು. ಆ ಸಂಶೋಧನೆಗಳ ಸರಣಿಯಲ್ಲಿ ಮೊದಲನೆಯದು ಮತ್ತು ಆಗ ಉಂಟಾದ ಕ್ರಾಂತಿಗೆ ನಾಂದಿ ಎನ್ನಬಹುದಾದುದು ಎಂದರೆ, 1895ರಲ್ಲಿ ಜರ್ಮನ್ ವಿಜ್ಞಾನಿ ವಿಲ್‌ಹೆಲ್ಮ್ ಕಾನ್ರಾಡ್ ರಾಂಟ್‌ಜನ್ ಎಂಬಾತ ಎಕ್ಸ್ ಕಿರಣಗಳನ್ನು ಕಂಡುಹಿಡಿದದ್ದು. ಸಹಜವಾಗಿಯೇ 1901ರಲ್ಲಿ ನೊಬೆಲ್ ಬಹುಮಾನಗಳನ್ನು ಪ್ರಾರಂಭಿಸಿದಾಗ ಮೊತ್ತ ಮೊದಲ ಭೌತವಿಜ್ಞಾನದ ಬಹುಮಾನಕ್ಕೆ ಆಯ್ಕೆಯಾದುದು ಎಕ್ಸ್ ಕಿರಣಗಳ ಆವಿಷ್ಕಾರ. ಆದಾಗ್ಯೂ ಆ ಆವಿಷ್ಕಾರವಾದುದು ಕೇವಲ ಆಕಸ್ಮಿಕವಾಗಿ ಎಂದರೆ ಅದು ಉತ್ಪ್ರೇಕ್ಷೆ ಏನಲ್ಲ. ಹಲಕೆಲವು ಸನ್ನಿವೇಶಗಳು ಆಕಸ್ಮಾತ್ ಒಟ್ಟಿಗೆ ಸೇರದೆ ಹೋಗಿದ್ದರೆ ಎಕ್ಸ್ ಕಿರಣಗಳು ನಮಗೆ ಗೊತ್ತಾಗಲು ಇನ್ನೆಷ್ಟು ವರ್ಷ ಕಾಯಬೇಕಾಗುತ್ತಿತ್ತೋ ಅನ್ನಿಸುತ್ತದೆ. ಅದೇಕೆಂದು ನೋಡೋಣ.

ಹತ್ತೊಂಬತ್ತನೆಯ ಶತಮಾನದಲ್ಲಿ ಫ್ಯಾರಡೇ ವಿದ್ಯುತ್ತನ್ನು ಕುರಿತ ಸಂಶೋಧನೆಗಳಲ್ಲಿ ನಿರತನಾಗಿದ್ದ. ಘನ, ದ್ರವ, ಅನಿಲ ಎನ್ನದೆ ಸಿಕ್ಕಸಿಕ್ಕ ಎಲ್ಲ ಪದಾರ್ಥಗಳ ಮೂಲಕವೂ ವಿದ್ಯುತ್ತನ್ನು ಹಾಯಿಸಲು ಪ್ರಯತ್ನಿಸುತ್ತಿದ್ದ. ಘನ ಮತ್ತು ದ್ರವಗಳಲ್ಲಿ ಕೆಲವು ವಾಹಕಗಳು, ಇನ್ನು ಕೆಲವು ಅವಾಹಕಗಳು ಎಂಬುದು ಗೊತ್ತಾಯಿತು. ಅನಿಲಗಳು ಮಾತ್ರ ಎಲ್ಲವೂ ಅವಾಹಕಗಳಾಗಿ ಕಂಡುಬಂದುವು. ಆದರೆ ಅನಿಲದ ಒತ್ತಡ ತೀರ ಕಡಿಮೆ – ನಿರ್ವಾತ ಎನ್ನುವಷ್ಟು ಕಡಿಮೆ ಇದ್ದು, ಹೆಚ್ಚು ವೋಲ್ಟೇಜಿನ ವಿದ್ಯುತ್ತನ್ನು ಪ್ರಯೋಗಿಸಿದಲ್ಲಿ ಯಾವ ಅನಿಲವೇ ಆಗಲಿ, ಅದು ವಾಹಕವಾಗಿ ಕೆಲಸಮಾಡುತ್ತದೆ. ಫ್ಯಾರಡೇ ಕಾಲದಲ್ಲಿ ಅಂಥ ಉಚ್ಚ ನಿರ್ವಾತವನ್ನು ಉಂಟುಮಾಡಲು ತಕ್ಕ ಏರ್ಪಾಟುಗಳಿರಲಿಲ್ಲವಾದುದರಿಂದ ಅನಿಲಗಳ ಮೂಲಕ ವಿದ್ಯುತ್ತನ್ನು ಹರಿಸುವುದು ಆತನಿಗೆ ಸಾಧ್ಯವಾಗಲಿಲ್ಲ. ಆ ಶತಮಾನದ ಕೊನೆಯ ವೇಳೆಗೆ ಬ್ರಿಟಿಷ್ ವಿಜ್ಞಾನಿ, ಸರ್ ವಿಲಿಯಮ್ ಕ್ರುಕ್ಸ್‌ಗೆ ಅದು ಸಾಧ್ಯವಾಯಿತು. ಏಕೆಂದರೆ ಆ ವೇಳೆಗೆ ಒಳ್ಳೆಯ ನಿರ್ವಾತ ಪಂಪುಗಳು ಬಳಕೆಗೆ ಬಂದಿದ್ದುವು. ಅಲ್ಲದೆ ಅದೃಷ್ಟವಶಾತ್ ಕ್ರುಕ್ಸ್‌ನ ಸಂಶೋಧನ ಸಹಾಯಕನೊಬ್ಬ ಗಾಜು ಊದುವುದರಲ್ಲಿ ನಿಪುಣನಾಗಿದ್ದುದರಿಂದ ಆತ ಅದಕ್ಕೊಂದು ಒಳ್ಳೆಯ ಉಪಕರಣವನ್ನು ತಯಾರಿಸಿಕೊಟ್ಟ. ತಕ್ಕಮಟ್ಟಿಗೆ ಹೆಚ್ಚು ವ್ಯಾಸವಿರುವ ಗಾಜಿನ ಕೊಳವೆಯೊಂದನ್ನು ತೆಗೆದುಕೊಂಡು ಅದರ ಎರಡು ತುದಿಯಲ್ಲೂ ಒಂದೊಂದು ಇಲೆಕ್ಟ್ರೋಡನ್ನು ಒಳಕ್ಕೆ ತೂರಿಸಿ ಎರಡು ತುದಿಗಳನ್ನೂ ಗಾಜಿನಿಂದ ಮೊಹರು ಮಾಡಿದ. ನಿರ್ವಾತ ಪಂಪಿನ ಸಹಾಯದಿಂದ ಕೊಳವೆಯೊಳಗಿನ ಒತ್ತಡವನ್ನು ತೀರ ಕೆಳಕ್ಕಿಳಿಸಿದ (ಚಿತ್ರ 7). ಅನಂತರ ಎರಡು ಇಲೆಕ್ಟ್ರೋಡುಗಳ ಮಧ್ಯೆ ಹೆಚ್ಚಿನ ವೋಲ್ಟೇಜ್ ಪ್ರಯೋಗಿಸಿದಾಗ ಕೊಳವೆಯ ಮೂಲಕ ವಿದ್ಯುತ್ತು ಹರಿಯತೊಡಗಿತು. ಅದರೊಂದಿಗೆ ಸ್ವಾರಸ್ಯಕರವಾದ ಒಂದು ವಿದ್ಯಮಾನ ಕಂಡುಬಂದಿತು. ಕೊಳವೆಯಲ್ಲಿ ಆನೋಡ್ (ಧನ ಇಲೆಕ್ಟ್ರೋಡ್) ಇದ್ದ ಭಾಗ ಮಿನುಗತೊಡಗಿತು. ಕ್ಯಾಥೋಡ್‌ನಿಂದ ಒಂದು ಬಗೆಯ ಕಿರಣಗಳು ಹೊರಡುತ್ತಿವೆ ಎಂದೂ ಅವು ಕೊಳವೆಯ ಇನ್ನೊಂದು ತುದಿಯನ್ನು ಬೆಳಗುತ್ತಿವೆ ಎಂದೂ ತೀರ್ಮಾನಿಸುವುದು ಅನಿವಾರ್ಯವಾಯಿತು.

ಕ್ಯಾಥೋಡ್ ಕಿರಣಗಳ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕಾಗಿ ಕ್ರುಕ್ಸ್ ಆ ಕೊಳವೆಯಲ್ಲಿ ತಕ್ಕ ಮಾರ್ಪಾಟುಗಳನ್ನು ಮಾಡಿಕೊಂಡು ಕೆಲವು ಪ್ರಯೋಗಗಳನ್ನು ಮಾಡಿದ. ಕಿರಣಗಳ ಹಾದಿಯಲ್ಲಿ ಏನಾದರೊಂದು ವಸ್ತುವನ್ನಿರಿಸಿದಾಗ ಅದರ ನೆರಳು ಮೂಡಿತು (ಚಿತ್ರ 8). ಕ್ಯಾಥೋಡ್ ಕಿರಣಗಳು ಸರಳ ರೇಖೆಯಲ್ಲಿ ಸಾಗುತ್ತವೆಂಬುದು ಇದರಿಂದ ಗೊತ್ತಾಯಿತು. ಕಿರಣಗಳ ಮಾರ್ಗದಲ್ಲಿ ಒಂದು ಪುಟ್ಟ ತಿರುಗುಗಾಲಿಯನ್ನಿಟ್ಟಾಗ (ಚಿತ್ರ 9), ಅದು ಗಿರ್ರನೆ ತಿರುಗತೊಡಗಿತು. ಕ್ಯಾಥೋಡ್ ಕಿರಣಗಳು ವಾಸ್ತವವಾಗಿ ಬೆಳಕಿನ ಕಿರಣಗಳಂಥವಲ್ಲ, ವೇಗವಾಗಿ ಚಲಿಸುವ ಕಣಗಳ ಪ್ರವಾಹ ಎಂಬುದು ಪತ್ತೆಯಾಯಿತು. ಕ್ಯಾಥೋಡ್ ಕೊಳವೆಯ ಬಳಿ ಒಂದು ಆಯಸ್ಕಾಂತವನ್ನು ತಂದಾಗ ಕಣ ಪ್ರವಾಹದ ಪಥ ಬಾಗುವುದು ಕಂಡುಬಂದಿತು (ಚಿತ್ರ 10). ಕಣಗಳಿಗೆ ವಿದ್ಯುದಾವೇಶವಿರುವುದು ಅದರಿಂದ ಗೊತ್ತಾಯಿತು. ಕಣಗಳ ಪ್ರವಾಹ ಬಾಗಿದ ದಿಕ್ಕನ್ನು ನೋಡಿ ಕ್ಯಾಥೋಡ್ ಕಣಗಳ ಮೇಲಿರುವುದು ಋಣವಿದ್ಯುದಾವೇಶ ಎಂದು ತೀರ್ಮಾನಿಸಲಾಯಿತು.


ಇದೆಲ್ಲದರಿಂದ ಕ್ಯಾಥೋಡ್ ಕಣಗಳು ಅನೇಕ ಭೌತವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿದುವು. ಅವರೆಲ್ಲರೂ ಕ್ರುಕ್ಸ್ ಕೊಳವೆಗಳನ್ನು ತಯಾರಿಸಿಕೊಂಡು ಕ್ರುಕ್ಸ್ ಮಾಡಿದ ಪ್ರಯೋಗಗಳನ್ನು ತಾವೂ ಮಾಡತೊಡಗಿದರು; ಕ್ಯಾಥೋಡ್ ಕಣಗಳಿಗೆ ಸಂಬಂಧಿಸಿದಂತೆ ಇನ್ನೇನಾದರೂ ಸ್ವಾರಸ್ಯಕರವಾದ ವಿದ್ಯಮಾನಗಳು ಕಂಡುಬರುವುವೇನೋ ಎಂದು ಪರೀಕ್ಷಿಸತೊಡಗಿದರು. ಜರ್ಮನಿಯ ವುರ್ತ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕನಾಗಿದ್ದ ರಾಂಟ್‌ಜನ್ ಅವರಲ್ಲಿ ಒಬ್ಬ. ಕ್ಯಾಥೋಡ್ ಕಣಗಳ ತಾಡನೆಯಿಂದ ಕ್ರುಕ್ಸ್ ಕೊಳವೆಯ ಆನೋಡ್ ತುದಿ ಮಿನುಗುವುದೆಂದು ಆಗಲೇ ಹೇಳಿದೆಯಷ್ಟೆ. ಆ ಮಿನುಗು ರಾಂಟ್‌ಜನ್‌ನ ಆಸಕ್ತಿಯನ್ನು ಕೆರಳಿಸಿತ್ತು. ಅದರ ಕೂಲಂಕಷ ಅಧ್ಯಯನ ನಡೆಸಲು ಆತ ಅಪೇಕ್ಷಿಸಿದ.

ಅದಕ್ಕಾಗಿ 1895ರ ನವೆಂಬರ್ 5ರಂದು ಒಂದು ಪ್ರಯೋಗಕ್ಕೆ ಏರ್ಪಾಟುಮಾಡಿಕೊಂಡ. ಕೊಳವೆಯ ತುದಿಯಲ್ಲಿ ಕಾಣಿಸಿಕೊಳ್ಳುವ ಮಿನುಗು ಮಸಕಾಗಿದ್ದುದರಿಂದ ಅದು ಚೆನ್ನಾಗಿ ಕಾಣಿಸಲೆಂದು ಆ ದಿನ ಸಂಜೆಯಾದ ಮೇಲೆ, ಕತ್ತಲು ಕೋಣೆಯಲ್ಲಿ ಪ್ರಯೋಗ ಮಾಡಲು ಏರ್ಪಡಿಸಿಕೊಂಡಿದ್ದ. ಅಲ್ಲದೆ ಕ್ರುಕ್ಸ್ ಕೊಳವೆಗೆ ಕಪ್ಪು ರಟ್ಟಿನ ಹೊದಿಕೆ ಹೊದಿಸಿದ್ದ. ಆ ದಿನ ಅದೃಷ್ಟ ಖುಲಾಯಿಸಿದ್ದರಿಂದ ಆ ಬಗೆಯ ಏರ್ಪಾಟುಗಳನ್ನು ಮಾಡಿಕೊಂಡಿದ್ದ ಎನ್ನಬೇಕಾಗಿದೆ. ಏಕೆಂದರೆ ಕ್ರುಕ್ಸ್ ಕೊಳವೆಯ ಮೂಲಕ ವಿದ್ಯುತ್ತನ್ನು ಹರಿಸಲು ಸ್ವಿಚ್ ಒತ್ತಿದ ಕೂಡಲೇ ಆ ಕೊಳವೆಯಿಂದ ಮಾತ್ರವಲ್ಲದೆ ಕೋಣೆಯಲ್ಲಿ ಬೇರೆಲ್ಲಿಂದಲೋ ಬೆಳಕು ಬರುತ್ತಿರುವಂತೆ ಅವನಿಗೆ ಭಾಸವಾಯಿತು. ತಲೆ ಎತ್ತಿ ನೋಡಿದಾಗ ಅದು ಎಲ್ಲಿಂದ ಬರುತ್ತಿದೆ ಎಂಬುದು ಗೊತ್ತಾಯಿತು. ಮೇಲ್ಗಡೆ ಬಡುವಿನ ಮೇಲಿದ್ದ ಒಂದು ಕಾಗದದ ಹಾಳೆ ಮಿನುಗುತ್ತ ಬೆಳಕು ಹರಡುತ್ತಿದ್ದುದು ಕಂಡು ಬಂದಿತು. ಸ್ವಿಚ್ ತೆಗೆದ; ಕೂಡಲೇ ಆ ಹಾಳೆ ಮಿನುಗುವುದು ನಿಂತಿತು. ಮತ್ತೆ ಸ್ವಿಚ್ ಒತ್ತಿದಾಗ ಕಾಗದ ಪುನಃ ಮಿನುಗತೊಡಗಿತು. ದೀಪವನ್ನು ಹೊತ್ತಿಸಿ ಆ ಕಾಗದದ ಹಾಳೆಯನ್ನು ಕೈಯಲ್ಲಿ ತೆಗೆದುಕೊಂಡು ಪರೀಕ್ಷಿಸಿದ. ಬೇರಿಯಮ್ ಪ್ಲ್ಯಾಟಿನೊಸಯನೈಡ್ ಲೇಪಿಸಿದ್ದ ಹಾಳೆ ಅದು. ಬೆಳಕಿಗೆ ಒಡ್ಡಿದಾಗ ಪ್ರತಿದೀಪ್ತಿ ನೀಡಬಲ್ಲ ರಾಸಾಯನಿಕಗಳಲ್ಲಿ ಬೇರಿಯಮ್ ಪ್ಲ್ಯಾಟಿನೊಸಯನೈಡ್ ಒಂದು. ಪ್ರತಿದೀಪ್ತಿಗೆ ಸಂಬಂಧಿಸಿದ ಕೆಲವು ಪ್ರಯೋಗಗಳನ್ನು ನಡೆಸಲಿಕ್ಕಾಗಿ ಹಾಳೆಗೆ ಆ ರಾಸಾಯನಿಕವನ್ನು ಲೇಪಿಸಿದ್ದರು. ಅಕಸ್ಮಾತ್ ಅದು ಆ ದಿನ ಬಡುವಿನ ಮೇಲಿತ್ತು.

ಕಾಗದದ ಆ ಹಾಳೆಯ ಮೇಲೆ ಬೆಳಕಿನ ಕಿರಣಗಳೇನೂ ಬೀಳುತ್ತಿರಲಿಲ್ಲ. ಆದರೂ ಅದು ಪ್ರತಿದೀಪ್ತಿ ನೀಡಿತು. ಏಕೆ? ಕ್ಯಾಥೋಡ್ ಕಿರಣಗಳು ಅದಕ್ಕೆ ಕಾರಣವಲ್ಲ ಎಂಬುದಂತೂ ನಿಜ. ಏಕೆಂದರೆ ಕ್ರುಕ್ಸ್ ಕೊಳವೆಯ ಗಾಜು ಮತ್ತು ಅದರ ಮೇಲಿನ ಕಪ್ಪು ರಟ್ಟು – ಎರಡೂ ಕ್ಯಾಥೋಡ್ ಕಿರಣಗಳನ್ನು ತಡೆದುಬಿಡುತ್ತಿದ್ದುವು. ಆದುದರಿಂದ ಕಾಗದದ ಪ್ರತಿದೀಪ್ತಿಗೆ ಕಾರಣ, ಕ್ರುಕ್ಸ್ ಕೊಳವೆಯಿಂದ ಬರುತ್ತಿರುವ ಮತ್ತು ಕಣ್ಣಿಗೆ ಗೋಚರವಾಗದಿರುವ ಯಾವುದೋ ಒಂದು ಬಗೆಯ ಕಿರಣಗಳು ಎಂದು ತೀರ್ಮಾನಿಸುವುದು ಅನಿವಾರ್ಯವಾಯಿತು. ಏಕೆಂದರೆ ಕ್ರುಕ್ಸ್ ಕೊಳವೆಯ ಸ್ವಿಚ್ ಒತ್ತಿ ಅದರೊಳಗೆ ಕ್ಯಾಥೋಡ್ ಕಿರಣಗಳನ್ನು ಉತ್ಪತ್ತಿಮಾಡಿದಾಗ ಮಾತ್ರ ಕಾಗದ ಮಿನುಗುತ್ತಿತ್ತು; ಸ್ವಿಚ್ ತೆಗೆದರೆ ಮಿನುಗು ನಿಂತುಹೋಗುತ್ತಿತ್ತು. ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡಾಗ ಕ್ಯಾಥೋಡ್ ಕಣಗಳ ತಾಡನೆಗೆ ಗುರಿಯಾದ ಯಾವುದೋ ವಸ್ತು – ಬಹುಶಃ ಕ್ಯಾಥೋಡ್‌ನ ಎದುರಿಗೇ ಇರುವ ಆನೋಡ್ ಈ ಅದೃಶ್ಯ ಕಿರಣಗಳನ್ನು ಸೂಸುತ್ತದೆ ಎಂಬುದೂ ಈ ಕಿರಣಗಳು ಗಾಜನ್ನೂ ಕಪ್ಪು ರಟ್ಟನ್ನೂ ತೂರಿಕೊಂಡು ಬಂದು ಕಾಗದದ ಮೇಲೆ ಎರಗುತ್ತವೆ ಎಂಬುದೂ ಸಿದ್ಧವಾಯಿತು.

ರಾಂಟ್‌ಜನ್ ಮತ್ತೆ ಸ್ವಿಚ್ ಒತ್ತಿದ; ಕೋಣೆಯ ಬಾಗಿಲು ಮುಚ್ಚಿಕೊಂಡು ಹೊರಕ್ಕೆ ಬಂದು ಬಾಗಿಲ ಬಳಿ ಆ ಕಾಗದದ ಹಾಳೆಯನ್ನು ಹಿಡಿದ. ಆಗಲೂ ಕಾಗದ ಮಿನುಗಿತು. ಕಿರಣಗಳು ಬಾಗಿಲನ್ನೂ ತೂರಿಕೊಂಡು ಬರುತ್ತಿವೆ ಎಂದಾಯಿತು. ಹಾಳೆಗೆ ತನ್ನ ಕೈಯನ್ನು ಅಡ್ಡ ಹಿಡಿದು ನೋಡಿದ. ಕಾಗದ ಇನ್ನೂ ಮಿನುಗುತ್ತಿತ್ತಾದರೂ ಕೈಯೊಳಗಿನ ಮೂಳೆಗಳ ನೆರಳು ಕಾಗದದ ಮೇಲೆ ಮೂಡಿತ್ತು (ಚಿತ್ರ 11). ಕಿರಣಗಳು ಕೈಯಲ್ಲಿನ ಮಾಂಸಖಂಡಗಳನ್ನೂ ರಕ್ತವನ್ನೂ ತೂರಿಕೊಂಡು ಹೋಗಬಲ್ಲುವಾದರೂ ಮೂಳೆಗಳನ್ನು ತೂರಿಕೊಂಡು ಹೋಗಲಾರವು ಎಂದು ತಿಳಿದುಬಂದಿತು. ಅದುವರೆಗೆ ಅಪರಿಚಿತವಾಗಿದ್ದ ಈ ಕಿರಣಗಳನ್ನು ರಾಂಟ್‌ಜನ್ ಎಕ್ಸ್ ಕಿರಣಗಳೆಂದು ಕರೆದ – ಬೀಜಗಣಿತದಲ್ಲಿ ಬೆಲೆ ಗೊತ್ತಿಲ್ಲದಿರುವ ಪರಿಮಾಣವನ್ನು ಎಕ್ಸ್ (x) ಎಂದು ಕರೆಯುವಂತೆ.

ಈಗ ಎಕ್ಸ್ ಕಿರಣಗಳನ್ನು ಉತ್ಪತ್ತಿಮಾಡಲು ಬಳಸುತ್ತಿರುವ `ಎಕ್ಸ್ ರೇ ನಳಿಗೆಗಳು‘ ತತ್ವಶಃ ಕ್ರೂಕ್ಸ್ ಕೊಳವೆಗಳೇ. ಕ್ಯಾಥೋಡ್ ಕಣಗಳು ಆನೋಡ್ ಕಡೆಗೆ ಸಾಗುವಾಗ ಅವುಗಳಿಗೆ ಅಡ್ಡ ಬರುವಂತೆ ಓರೆಯಾಗಿ ಒಂದು ಲಕ್ಷ್ಯವನ್ನು ಒಡ್ಡುತ್ತಾರೆ. ಸಾಮಾನ್ಯವಾಗಿ ಒಂದು ಲೋಹದ ತಗಡನ್ನಿಡುತ್ತಾರೆ. ಪ್ರತಿಕ್ಯಾಥೋಡ್ (ಆಂಟಿಕ್ಯಾಥೋಡ್) ಎಂದು ಕರೆಯುವ ಈ ತಗಡು ಕ್ಯಾಥೋಡ್ ಕಿರಣಗಳ ತಾಡನೆಗೆ ಗುರಿಯಾಗಿ ಎಕ್ಸ್ ಕಿರಣಗಳನ್ನು ಸೂಸುತ್ತದೆ.

ಇಂದು ಎಕ್ಸ್ ಕಿರಣಗಳು ವೈದ್ಯಕೀಯದಲ್ಲಿ ತುಂಬ ಉಪಯುಕ್ತವಾಗಿರುವ ವಿಷಯ ಎಲ್ಲರಿಗೂ ಗೊತ್ತು. ಸೇಟಿಕಗಳ ರಚನೆಯನ್ನರಿಯಲು ವಿಜ್ಞಾನಿಗಳು ಅದನ್ನು ಬಳಸುತ್ತಾರೆ. ಅದೆಲ್ಲ ಸರಿಯೇ. ಆದರೆ ಭೌತವಿಜ್ಞಾನದ ಮುಂದಿನ ಬೆಳವಣಿಗೆಗೆ ಅದು ದಾರಿಮಾಡಿಕೊಟ್ಟಿತೆಂಬುದನ್ನೂ ಇಲ್ಲಿ ಒತ್ತಿಹೇಳಬೇಕು.