ಆಕಾಶದಗಲ ಕ್ಷೌರದ ಕತ್ತಿ :
ಬಸ್ಸುಗಳಲ್ಲಿ ಕಾರುಗಳಲ್ಲಿ
ವಿವಿಧ ವಾಹನಗಳಲ್ಲಿ ಮೇಲಕೆ ಹತ್ತಿ
ಹೋಗುತ್ತಲಿವೆ ಭಕ್ತರ ಮಂಡೆ
ಗೋವಿಂದಾ, ಗೋವಿಂದಾ ಎಂದು ದನಿ ಎತ್ತಿ.

ದುಡು ದುಡು ಏರಿ, ಬುಡು ಬುಡು ಕೆಳಕ್ಕೆ
ಬಂದಂತೆ ಮುಖವೇ ಬದಲು !
ನೋಡಿದರೆ ಗುರುತೇ ಸಿಗದು.
ಎಲ್ಲ ಬೋಳು ತಲೆ – ಹೆಣ್ಣು, ಗಂಡು,
ಕೂಸು, ಕುನ್ನಿ, ಎಲ್ಲ ಥಳಥಳ ಹೊಳೆವ
ಬೋಳು ತಲೆ, ಇಳಿಯುತ್ತಾವೆ ಒಂದೇ ಸಮನೆ
ಬಸ್ಸುಗಳಲ್ಲಿ, ಕಾರುಗಳಲ್ಲಿ ಮತ್ತೆ
ಕಾಲ್ನಡಿಗೆಯಲ್ಲಿ.

ಇಳಿದು ಊರೂರು ಕೇರಿಗಳ ಸೇರಿದರೂ
ಬಿಡದೆ ಬೆಂಬತ್ತುವುದು ಕ್ಷೌರದ ಕತ್ತಿ ;
ಸದಾ ಕರ್ಮನಿರತ, ಹಳ್ಳಿಯಿಂದ
ದಿಳ್ಳಿಯವರೆಗೆ, ಹಗಲೂ ರಾತ್ರಿ
ನಡೆಸುತ್ತ ತನ್ನ ಕಾಯಕ.
ಬೆಂಬಲಕ್ಕಿದೆ ಅಭಯ ಹಸ್ತ
ಮಣಿದವರ ಹಣೆಗೆ ನಾಮವಿಕ್ಕುತ್ತ.