ಆಕಾಶಕ್ಕೆ ಏನಿದೆ ಚಿಂತೆ?
ಇರುಳಲ್ಲಿ ಥಳ ಥಳ ಹೊಳೆವ ನಕ್ಷತ್ರಗಳಿವೆ
ಹಗಲು ಝಗಝಗಿಸುವ ಸೂರ್ಯನಿದ್ದಾನೆ.
ಆಗಾಗ ಬೆಳುದಿಂಗಳಿನ ತಂಪಿದೆ
ಮೋಡಗಳ ಮಾಟವಿದೆ
ಮಿಂಚಿದೆ ಗುಡುಗಿದೆ.

ಈ ನೆಲಕ್ಕೆ ಸದಾ ಚಿಂತೆ :
ಮೇಲಿಂದಿಳಿವ ನೀರುಗಳನ್ನು
ಮಡಿಲಲ್ಲಿ ಹಿಡಿದು ಅಂತರಾಳಗಳಲ್ಲಿ
ಕೂಡಿಸಿಡಬೇಕು
ಹಸುರಿಗೆ ಹಾಲೂಡಿಸಬೇಕು
ಜೋಗುಳ ಹಾಡಿ ತೆನೆಗಳ ತೊಟ್ಟಿಲನ್ನು
ತೂಗಬೇಕು
ಒಣಗಿ ಉದುರಿದ್ದನ್ನು
ಅಡಗಿಸಿಡಬೇಕು
ನಿಟ್ಟುಸಿರು ಆಕ್ರಂದನಗಳನ್ನು
ಆಲಿಸಿ ಸಂತೈಸಬೇಕು
ಕಣ್ಣೀರೊರೆಸಿ ನಗೆಯ
ಚಿಗುರಿಸಬೇಕು
ಮತ್ತೆ ಈ ಎಲ್ಲವನ್ನೂ ಹೊತ್ತು
ಸದ್ದಿರದೆ ಸುತ್ತಬೇಕು.