ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಂಜು ಕವಿದು ಗೋಚರತೆ (ವಿಸಿಬಿಲಿಟಿ) ಕಡಿಮೆಯಾದ ಫಲವಾಗಿ ಹಲವಾರು ವಿಮಾನಗಳ ಹಾರಾಟ ತಡವಾಯಿತು ಅನ್ನೋದು ಕಳೆದ ಡಿಸೆಂಬರ್ನಲ್ಲಿ ನಮ್ಮ ಎಲ್ಲ ಕಠೀವಿಕಿ ಚಾನೆಲ್ಲುಗಳಲ್ಲೂ ಬಿಸಿ, ಬಿಸಿ ಸುದ್ದಿಯಾಗಿಬಿಟ್ಟಿದ್ದು ನೆನಪಿದೆಯಲ್ಲ!? ಹಲವಾರು ದಿನಗಳು ಇದೇ ಸುದ್ದಿಯನ್ನು ದಿನದ ಇಪ್ಪತ್ತನಾಲ್ಕೂ ಗಂಟೆ ಈ ಚಾನೆಲ್ಲುಗಳು ಬಿತ್ತರಿಸಿದ್ದಲ್ಲದೆ, ಅದಕ್ಕೆ ಕಾರಣ, ಪರಿಹಾರಗಳನ್ನು ಹುಡುಕಲು ರಾತ್ರೆ ವಿಶೇಷ ವಿಚಾರಮಂಚವನ್ನೂ ಬಿತ್ತರಿಸಿದುವು.  ನಿಜ. ಛಳಿಗಾಲದಲ್ಲಿ ಮಂಜು ಮುಸುಕಿ ಗೋಚರತೆ ಕಡಿಮೆಯಾಗುವುದು ವಿಶೇಷವೇನಲ್ಲ. ಆದರೆ ಸಾಧಾರಣವಾಗಿಯೇ ಭೂಮಿಯ ವಾತಾವರಣದಲ್ಲಿ ಗೋಚರತೆ ಕಡಿಮೆಯಾಗುತ್ತಿದೆ ಎಂದರೆ ನಂಬಲಾದೀತೇ? ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಹೀಗೊಂದು ಸುದ್ದಿಯನ್ನು ಸುಪ್ರಸಿದ್ಧ ವಿಜ್ಞಾನ ಪತ್ರಿಕೆ ಸೈನ್ಸ್ ಕಳೆದ ಶುಕ್ರವಾರದ ಸಂಚಿಕೆಯಲ್ಲಿ ಪ್ರಕಟಿಸಿದೆ. ಅಮೆರಿಕೆಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದ ಭೂಗೋಳ ತಜ್ಞ ಕೈಚುನ್ ವಾಂಗ್ ಮತ್ತು ಸಂಗಡಿಗರು ನಮ್ಮ ಆಕಾಶ ಮಬ್ಬಾಗುತ್ತಿದೆ ಎಂದು ವರದಿ ಮಾಡಿದ್ದಾರೆ. ವಾತಾವರಣದಲ್ಲಿ ನಾವು ಕೂಡಿಸುತ್ತಿರುವ ಹೊಗೆ, ಧೂಳು, ರಾಸಾಯನಿಕಗಳು ಹಾಗೂ ನೀರಿನಂಶದಿಂದಾಗಿ ಗೋಚರತೆ ಕಡಿಮೆಯಾಗುತ್ತಿದೆಯಂತೆ. ಅರ್ಥಾತ್, ದೂರದ ನೋಟಗಳು ಅಸ್ಪಷ್ಟವಾಗುತ್ತಲಿವೆ.

ಗೋಚರತೆಯ ಬಗ್ಗೆ ಸ್ಪಷ್ಟ ಕಲ್ಪನೆ ಬರಬೇಕಾದರೆ ಆಷಾಢದಲ್ಲಿ, ರಾತ್ರಿಯೆಲ್ಲ ಜಗಮಗಿಸುವ ದೀಪಗಳಿರುವ ನಗರದಿಂದ ದೂರ, ಬಲು ದೂರವಿರುವ ಪ್ರದೇಶಕ್ಕೆ ಹೋಗಿ ಆಕಾಶ ನೋಡಬೇಕು. ಅಲ್ಲಿ ಆಗಸದಲ್ಲಿ ಮಿರುಗುವ ನಕ್ಷತ್ರಗಳನ್ನು ನೋಡಿದಾಗ ನಗರಗಳಲ್ಲಿನ ಆಕಾಶ ಎಷ್ಟು ಮಬ್ಬಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ನಗರಗಳಲ್ಲಿ ರಾತ್ರಿಯ ಆಕಾಶ ಮಬ್ಬಾಗುವುದಕ್ಕೆ ಸುತ್ತಲಿನ ದೀಪಗಳ ಪ್ರಖರತೆಯೇ ಕಾರಣ ಎನ್ನುವುದು ನಿಜವೇ. ಆದರೆ ಬೆಳಗಿನ ಹೊತ್ತೂ ನಗರಗಳು ಮಬ್ಬಾಗುತ್ತಿವೆಯೇ? ತೀವ್ರ ಛಳಿ ಕಾಣಿಸುವ ದೆಹಲಿಯಂತಹ ಪ್ರದೇಶಗಳಲ್ಲಿ ಛಳಿಗಾಲದಲ್ಲಿ ಮಂಜು ದಟ್ಟವಾಗಿ ಮುಸುಕುವುದು ಸಾಮಾನ್ಯ. ಅದರಿಂದಾಗಿ ಗೋಚರತೆ ಕಡಿಮೆಯಾಗುವುದೂ ಸಾಮಾನ್ಯವೇ. ಆದರೆ ಗೋಚರತೆ ಕಡಿಮೆಯಾಗುವುದಕ್ಕೆ ವಾತಾವರಣದಲ್ಲಿರುವ ತೇವಾಂಶವಷ್ಟೆ ಕಾರಣವಲ್ಲ. ಅದರ ಜೊತೆಗೆ ಧೂಳು, ಹೊಗೆಯ ಕಣಗಳು ಹಾಗೂ ರಾಸಾಯನಿಕಗಳೂ ಕೂಡಿಕೊಳ್ಳುತ್ತವೆ. ಇವೆಲ್ಲವನ್ನೂ ಒಟ್ಟಾಗಿ ಏರೋಸಾಲ್ ಎಂದು ಹೆಸರಿಸುತ್ತಾರೆ. ಇತ್ತೀಚೆಗೆ ಭೂಮಿಯ ವಾತಾವರಣದಲ್ಲಿ ಇಂತಹ  ಏರೋಸಾಲ್ ಮಲಿನಕಗಳ ಪ್ರಮಾಣ ಹೆಚ್ಚಾಗುತ್ತಿದೆಯಷ್ಟೆ.  ಆಕಾಶ ಮಬ್ಬಾಗುವುದರಲ್ಲಿ ಈ ಮಲಿನಕಗಳ ಪ್ರಭಾವವೂ ಇರಬಹುದಲ್ಲವೇ? ಹಾಗಿದ್ದ ಮೇಲೆ ಈ ಮಲಿನಕಗಳ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಗೋಚರತೆಯೂ ಸಾಮಾನ್ಯವಾಗಿ ಕಡಿಮೆಯಾಗುತ್ತಿರಬೇಕಲ್ಲವೇ? ಇದು ಪ್ರಶ್ನೆ.

ಈ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸುಲಭವೋ, ಉತ್ತರಗಳನ್ನು ಹೇಳುವುದು ಅಷ್ಟೇ ಕಷ್ಟ. ಏಕೆಂದರೆ, ಭೂಮಿಯ ಮೇಲಿನ ವಿವಿಧ ಸ್ಥಳಗಳಲ್ಲಿನ ಗೋಚರತೆ ಒಂದೇ ಸಮನಾಗಿಯಂತೂ ಇಲ್ಲ. ತೇವಾಂಶದ ಪ್ರಮಾಣವೂ ವ್ಯತ್ಯಾಸವಾಗುತ್ತದೆ. ಮಲಿನಕಗಳ ಪ್ರಮಾಣವೂ ಅಷ್ಟೆ. ಅಷ್ಟಿದ್ದರೂ ವಾಂಗ್ ಮತ್ತು ಸಂಗಡಿಗರು ಅಂತಹುದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.  ಕಳೆದ ಮೂರೂವರೆ ದಶಕಗಳಲ್ಲಿ ಪ್ರಪಂಚದ ವಿವಿಧೆಡೆ ದಾಖಲಾದ ಹವಾಮಾನ ಸೂಚ್ಯಂಕಗಳನ್ನು ಒಟ್ಟಾಗಿಸಿ, ಆಕಾಶದ ಮಬ್ಬು ಎಷ್ಟಿತ್ತು, ಎಷ್ಟಾಗಿದೆ ಎಂದು ಅಳೆಯುವ ಯತ್ನ ನಡೆಸಿದ್ದಾರೆ. ಫಲವಾಗಿ, ಕಳೆದ ಮೂವತ್ತು ವರ್ಷಗಳಲ್ಲಿ ಪ್ರಪಂಚದ ಎಲ್ಲೆಡೆಯೂ ಗೋಚರತೆ ಕಡಿಮೆಯಾಗಿದೆ ಎಂದು ತೀರ್ಮಾನಿಸಿದ್ದಾರೆ.

ನಿಂತ ಸ್ಥಳದಿಂದ ನಾವು ಎಷ್ಟು ದೂರದಲ್ಲಿನ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು ಎನ್ನುವುದೇ ಗೋಚರತೆಯ ಅಳತೆ. ಹೆಚ್ಚೆಚ್ಚು ದೂರದಲ್ಲಿರುವ ವಸ್ತು ಗೋಚರಿಸಿದಷ್ಟೂ ಗೋಚರತೆ ಹೆಚ್ಚು ಎನ್ನಬಹುದು. ವಾಯುವಿನಲ್ಲಿರುವ ಏರೋಸಾಲ್ನ ಸಾಂದ್ರತೆ ಹೆಚ್ಚಾದಷ್ಟೂ, ಗೋಚರತೆ ಕಡಿಮೆಯಾಗುತ್ತದೆ. ಅರ್ಥಾತ್, ಏರೋಸಾಲ್ನ ಸಾಂದ್ರತೆಯನ್ನು ಅಳೆದರೆ ಗೋಚರತೆಯನ್ನೂ ತೀರ್ಮಾನಿಸಬಹುದು. ವಾಂಗ್ ತಂಡ ಮಾಡಿದ್ದಿಷ್ಟೆ. 1973ರಿಂದ 2007ನೇ ಇಸವಿಯವರೆಗೆ ಪ್ರಪಂಚದ 3250 ತಾಣಗಳಲ್ಲಿ ಸಂಗ್ರಹಿಸಿದ ಏರೋಸಾಲ್ ಪ್ರಮಾಣದ ಮಾಹಿತಿಯನ್ನು ಒಟ್ಟಾಗಿಸಿ ವಿಶ್ಲೇಷಿಸಿದರು. ಏರೋಸಾಲ್ಗಳ ಪ್ರಮಾಣ ಹೆಚ್ಚಾದಷ್ಟೂ ನೆಲ ತಲುಪುವ ಬಿಸಿಲಿನ ಪ್ರಮಾಣವೂ ಕಡಿಮೆಯಾಗುತ್ತದೆ. ಅರ್ಥಾತ್, ಏರೋಸಾಲ್ಗಳೇ ಈ ಶಕ್ತಿಯನ್ನು ಹೀರಿಕೊಂಡು ಬಿಸಿಯಾಗುತ್ತವೆ. ಹಾಗೆಯೇ ನೆಲದಿಂದ ಪ್ರತಿಫಲಿಸಿ ಆಗಸಕ್ಕೆ ಮರಳುವ ಉಷ್ಣತೆಯ ಪ್ರಮಾಣವೂ ಕಡಿಮೆಯಾಗುತ್ತದೆ.  ಒಟ್ಟಾರೆ ಪರಿಣಾಮವಾಗಿ ಗಾಳಿ ಬಿಸಿಯೇರುತ್ತದೆ. ಇದನ್ನೇ ಹಸಿರುಮನೆ ಪರಿಣಾಮ ಎನ್ನುತ್ತಾರೆ.  ಕಳೆದ ನೂರು ವರ್ಷಗಳಲ್ಲಿ ಈ ವಿದ್ಯಮಾನದಿಂದಾಗಿ ವಾತಾವರಣದ ಉಷ್ಣತೆ ಸುಮಾರು 2 ಡಿಗ್ರಿ ಸೆಲ್ಶಿಯಸ್ನಷ್ಟು ಹೆಚ್ಚಿದೆ ಎಂದು ಲೆಕ್ಕ ಹಾಕಲಾಗಿದೆ. ಏರೋಸಾಲ್ಗಳ ಪ್ರಮಾಣ ಹೆಚ್ಚುತ್ತಲೇ ಇದ್ದರೆ ವಾತಾವರಣ ಇನ್ನೂ ಬಿಸಿಯೇರಿ ಎಲ್ಲೆಡೆ ಹವಾಮಾನ ಏರುಪೇರಾಗಬಹುದು ಎನ್ನುವ ಕಾಳಜಿ ಎಲ್ಲೆಡೆ ಇದೆ.

ವಾಂಗ್ರವರ ವಿಶ್ಲೇಷಣೆ ಈ ಕಾಳಜಿಗೆ ಕುಮ್ಮಕ್ಕು ನೀಡುತ್ತಿದೆ. ಇವರ ವರದಿಯ ಪ್ರಕಾರ 1979ರಿಂದ ಗೋಚರತೆ ಕಡಿಮೆಯಾಗುತ್ತಲೇ ಇದೆ. ಆದರೆ ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಗೋಚರತೆ ಒಂದೇ ಸಮನಾಗಿ ಕಡಿಮೆಯಾಗುತ್ತಿಲ್ಲ. ಉದಾಹರಣೆಗೆ, ಏಷ್ಯಾ, ಅದರಲ್ಲೂ ಚೀನಾ ಮತ್ತು ಭಾರತಗಳ ಮೇಲೆ ಮತ್ತು ಆಸ್ಟ್ರೇಲಿಯಾದಲ್ಲಿ ಗೋಚರತೆ ಅವಿರತವಾಗಿ ಕಡಿಮೆಯಾಗುತ್ತಿದೆ. ಆದರೆ 1979ರಿಂದ 1985ರ ಅವಧಿಯಲ್ಲಿ ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾದಲ್ಲಿ ಇದು ಹೆಚ್ಚಾಗಿತ್ತು. ಅಲ್ಲಿಯೂ 1985ರಿಂದ ಇದು ಕಡಿಮೆಯಾಗುತ್ತಿದೆ. 1985ರಿಂದೀಚೆಗೆ ಈ ಎಲ್ಲ ಪ್ರದೇಶಗಳಲ್ಲೂ ಕೈಗಾರಿಕೆಗಳು ಹೆಚ್ಚುತ್ತಿರುವುದಕ್ಕೂ, ಗೋಚರತೆ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎನ್ನುತ್ತಾರೆ ವಾಂಗ್.  ಅದೇ ಯುರೋಪಿನಲ್ಲಿ ಇದರ ಗತಿ ವಿರುದ್ಧವಾಗಿದೆ. ಇಲ್ಲಿ 1990ರಿಂದೀಚೆಗೆ ಗೋಚರತೆ ಹೆಚ್ಚುತ್ತಿದೆಯಂತೆ.

ಸೂರ್ಯನಿಂದ ಭೂಮಿಗೆ ಇಳಿವ ಶಕ್ತಿಯ ಪ್ರಮಾಣದ ಅಳತೆಗಳೂ ತಮ್ಮ ತೀರ್ಮಾನಕ್ಕೆ ಪೂರಕವಾಗಿವೆ ಎನ್ನುತ್ತಾರೆ ವಾಂಗ್.  ಭಾರತ ಮತ್ತು ಚೀನಾದಲ್ಲಿ ನೆಲ ತಲುಪುವ ಸೂರ್ಯನ ಶಕ್ತಿ ಇಳಿಮುಖವಾಗಿದೆ. ಆದರೆ ಯುರೋಪಿನಲ್ಲಿ ಅದು ಏರುಗತಿಯಲ್ಲಿದೆ. ಹಸಿರುಮನೆ ಪರಿಣಾಮದ ಬಗ್ಗೆ ಉಪಗ್ರಹಗಳಿಂದ ಪಡೆದ ಏರೋಸಾಲ್ ಪ್ರಮಾಣದ ಮಾಹಿತಿಯಿಂದ, ಏರೋಸಾಲ್ ಪ್ರಮಾಣ ಹೆಚ್ಚಿದ ಬಗ್ಗೆ ತಿಳಿಯಬಹುದಾಗಿತ್ತಾದರೂ, ವಿವಿಧ ಪ್ರದೇಶಗಳಲ್ಲಿ ಯಾವ್ಯಾವ ಸಮಯದಲ್ಲಿ ಅವು ಹೇಗೆ ಬದಲಾಗಿದ್ದುವು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಈಗ ಆಕಾಶ ಎಷ್ಟು ಮಬ್ಬಾಗುತ್ತಿದೆ ಎನ್ನುವ ಅಂಶವನ್ನು ಗಮನಿಸಿದರೆ ಏರೋಸಾಲ್ಗಳ ಕಾಲಾನುಗತಿ ಸ್ಪಷ್ಟವಾಗಿ ತಿಳಿಯುತ್ತದೆ ಎನ್ನುತ್ತಾರೆ ವಾಂಗ್.

 

Kaicun Wang  et al; Clear Sky Visibility Has Decreased Over Land Globally from 1973 to 2007,  Science, 323, Pp 1468-1470, 2009