ಆಕಾಶಜಾನಪದ ಕಥೆಗಳಲ್ಲಿ:

ಕನ್ನಡ ಜನಪದ ಕತೆಗಳಲ್ಲಿ ನಾಯಕನು ’ದೇವರಾಯನ ಪಟ್ಟಣಕ್ಕೆ’ ಹೋಗುವ ವಿಚಾರ ಬರುತ್ತದೆ. ಅಂದರೆ ಆಕಾಶದಲ್ಲಿ ದೇವರಾಯ ಪಟ್ಟಣವಿದೆ ಎನ್ನುವ ಕಲ್ಪನೆಯಲ್ಲಿ ಕಾಣಿಸುತ್ತದೆ. ಕನ್ನಡ ಐತಿಹ್ಯವೊಂದರ ಪ್ರಕಾರ ಆಕಾಶವು ಹಿಂದೆ ತೀರಾ ತಗ್ಗಿನಲ್ಲಿ ಇತ್ತಂತೆ. ಅಜ್ಜಿಯೊಬ್ಬಳು ಒನಕೆಯಲ್ಲಿ ಧಾನ್ಯ ಕುಟ್ಟುವಾಗ ಒನಕೆಯ ಮೇಲಿನ ಭಾಗವು ತಾಗಿ ಆಕಾಶವು ಹರಿದು ಹೋಯಿತಂತೆ. ಆ ಮೇಲ ಆಕಾಶವು ಮೇಲಕ್ಕೆ ಹೋಯಿತು ಎನ್ನುವ ಐತಿಹ್ಯವಿದೆ.

ಆಕಾಶ : ಕನ್ನಡ ಗಾದೆಗಳಲ್ಲಿ : ಗ್ರಂಥಸ್ಥ ಗಾದೆಗಳು:

[1]

೧ ಗಗನ ಮನ್ ಅನುಲೇಪನಂ ಗೈದೊಡೆ ಅಲ್ಲಿ ಮಸಿಪತುಗುಮೇ? (ರಾಮಚಂದ್ರ ಚರಿತ ಪುರಾಣ ೧.೧೭೯)

೨ ಆಕಾಶವನಡರುವರಗೆ ಅಟ್ಟಗೋಲ ಹಂಗೇಕೋ? ಸಮುದ್ರವನು ದಾಂಟುವಂಗೆ ಹರಗೋಲ ಹಂಗೇಕೋ? (ಪ್ರಭುದೇವರು೦ಅಲ್ಲಮ ವಚನಗಳು)

೩ ಗಗನ ಭಾಗಕ್ಕೆ ಸಮಾನಂ (ಕುಮುದೇಂದು ರಾಮಾಯಣಂ-ಪೀಠಿಕಾ ಸಂಧಿ)

೪ ಗಗನ ಭಾಗಕ್ಕೆ ನೆಗೆದು ಪೋಪಟ್ಟೆಗಳೊಳಗೆ (ಬಸವ ಪುರಾಣ-ಭೀಮ ಕವಿ)

೫ ಗಗನಕ್ಕಲಗನುಗಿದೆಡೆ ಗಗನವಳುಕುವುದೆ? (ಕುಮಾರ ವ್ಯಾಸ)

೬ ಆಕಾಶವು ರಜಧೂಮಗಳಿಂದ ಮಲಿನ ವಹುದೇ? (ಸ್ವತಂತ್ರ ಸಿದ್ಧಲಿಂಗೇಶ್ವೃ ವಚನ-ಸ್ವತಂತ್ರ ಸಿದ್ಧಲಿಂಗೇಶ್ವರ)

೭ ಅಮಲಗಗನವ ಕೆಸರೊಳಿಟ್ಟವನ ಮೆಯಿ ಕೆಸರಹುದೆ ಆಗಸದ ಅಮಳ ಕೆಡುವುದೆ? (ಮಲ್ಲಿಕಾರ್ಜುನ-ಶಂಕರದಾಸಿಮಯ್ಯ ಪುರಾಣ)

೮ ಭಾನ ಎಡೆಯೊಳು ಇಹ ಶಾಖೆಯ ಅಗ್ರದೊಳು ಇಹ ಫಲಂ, ತಾನು ಕೈಸೇರುವುದೆ ಖರ್ವ ಮಾನಸಗೆಂತು? (ವೆಂಕಮಾತ್ಯ-ಶ್ರೀಮದ್ರಾಮಾಯಣಂ)

ಜಾನಪದ ಗಾದೆಗಳು:

೧ ಆಕಾಶಕ್ಕಿಂತ ಎತ್ತರವಿಲ್ಲ-ಭೂಮಿಗಿಂತ ಅಗಲವಿಲ್ಲ.

೨ ಆಕಾಶ ಹರಿದು ಬೀಳುವಾಗ್ಯೆ- ಅಂಗೈ ಒಡ್ಡಿದರೆ ನಿಂತೀತೇ?

೩ ಆನೆ ಮೇಲೆ ಹೋಗೋನ್ನ ಸುಣ್ಣ ಕೇಳಿದ್ರೆ-ಆಕಾಶಕ್ಕೆ ಕೈ ತೋರಿಸ್ದ.

೪ ಆಕಾಶಕ್ಕೆ ಏಣಿ ಹಾಕಿದ ಹಾಗೆ.

೫ ಆಕಾಶ ನೋಡಲು ನೂಕು ನುಗ್ಗಲು ಯಾಕೆ?

೬. ಆಕಾಶಕ್ಕೆ ಹೊಂದಿಕೆಯಿಲ್ಲ-ಲಂಚಕ್ಕೆ ನಾಚಿಕೆಯಿಲ್ಲ.

೭ ಆಕಾಶದ ಮಳೆ-ಭೂಮಿ ತಾಯಿ ಬೆಳೆ.

೮. ಆಕಾಶಕ್ಕೆ ಬೋದಿಗೆ ಬೇಕೆ (ಬೋದಿಗೆ-ಆಧಾರ (Support)-ತುಳು)

ಮೇಲಿನ ಗಾದೆಗಳಲ್ಲಿ ಒಂದು, ನಾಲ್ಕು, ಐದು, ಆರು ಇವು ಆಕಾಶದ ವಿಶಾಲತೆಯನ್ನು ಅನಂತತೆಯನ್ನು ಹೇಳುತ್ತವೆ. ಆಕಾಶವು ಆಧಾರರಹಿತರೂಪ ಎನ್ನುವ ಕಲ್ಪನೆಯು ಗಾದೆ ಎಂಟರಲ್ಲಿದೆ. ವಿಶಾಲವಾದ ಆಕಾಶವು ವಿಸ್ತಾರವಾದ ಬಟ್ಟೆಯ ಹಾಗೆ ಎನ್ನುವ ಕಲ್ಪನೆಯು ಗಾದೆ ಎರಡರಲ್ಲಿದೆ. ಗಾದೆ ಏಳರ ಪ್ರಕಾರ ಆಕಾಶ ಗಂಡು, ಭೂಮಿ ತಾಯಿ ಹೆಣ್ಣು ಎನ್ನುವ ಧ್ವನಿಯಿದೆ. ಆಕಾಶದಿಂದ ಬೀಳುವ ಮಳೆ ಬೆಳೆ ಉಂಟಾಗಲು ಕಾರಣ ಎನ್ನುವ ವಿಚಾರ ಈ ಗಾದೆಯಲ್ಲಿ ದೊರೆಯುತ್ತದೆ. ಮೂರನೆಯ ಗಾದೆಯು ಅನಂತ ಪಾದ ಆಕಾಶ ಶೂನ್ಯದ ಸಮಾನ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಏನನ್ನಾದರೂ ಕೇಳಿದಾಗ, ಕೇಳಿದ ವಸ್ತುವನ್ನು ಕೊಡದೆ ಆಕಾಶಕ್ಕೆ ಕೈತೋರಿಸಿದರೆ ಏನೂ ಇಲ್ಲ, ಅಂದರೆ ಶೂನ್ಯ ಎನ್ನುವ ಅರ್ಥ ಜನಪದ ಸಂಜ್ಞೆಗಳಲ್ಲಿ (Folk gesture) ಪ್ರಚಲಿತವಾಗಿವೆ.

ಆಕಾಶದ ಬಗೆಗಿನ ಒಗಟುಗಳು:

೧ ಅಮ್ಮನ ಹಾಸಿಗೆ ಸುತ್ತಕಾಗೋದಿಲ್ಲ ಅಪ್ಪನ ದುಡ್ಡು ಎಣಿಸಕಾಗೋದಿಲ್ಲ (ಆಕಾಶ ಮತ್ತು ನಕ್ಷತ್ರ)

೨ ಅಮ್ಮ ಸೀರೆ ಮಡಿಸಲು ಆಗುವುದಿಲ್ಲ (ಆಕಾಶ)
ಅಪ್ಪನ ದುಡ್ಡು ಎಣಿಸಲು ಆಗುವುದಿಲ್ಲ (ನಕ್ಷತ್ರ)

೩ ಚಾಪೆ ಸುತ್ತಕಾಗಲ್ಲ -ಅಡಿಕೆ ಎಣಿಸಕಾಗಲ್ಲ (ಆಕಾಶ ಮತ್ತು ನಕ್ಷತ್ರಗಳು)

೪ ಕೆರೆಯೆಲ್ಲ ಕುರಿ ಹೆಜ್ಜೆ (ಆಕಾಶದಲ್ಲಿ ನಕ್ಷತ್ರಗಳು)

೫ ನೀಲಿ ಕೆರೇಲಿ ಬಿಳಿಮೀನು (ಆಕಾಶದಲ್ಲಿ ನಕ್ಷತ್ರ)

೬ ಸೀತೆಕೊಳ್ದಲ್ಲಿ ಸೀರಿಮುತ್ತ ಎಣಿಸಲಾರೆ-ಎಣಿಸಿದವರಿಗೆ ಐದು ಸೇರು ತುಪ್ಪ ಐವತ್ರೋಟ್ಟಿ – (ಆಕಾಶದಲ್ಲಿ ನಕ್ಷತ್ರ)

೭ ಅಡಿಕೆ ಅರಿಸುವವರಿಲ-ತಟ್ಟೆ ಮಗುಚುವವರಿಲ್ಲ (ಆಕಾಶ ಮತ್ತು ನಕ್ಷತ್ರ)

೮ ಹಗಲು ಹಾಳುದೋಟ, ರಾತ್ರಿ ಹೂದೋಟ- ಹೂವ ನೋಡುವವರುಂಟು ಮುಡಿಯುವರಿಲ್ಲ (ಆಕಾಶ-ನಕ್ಷತ್ರ)

೯ ಕಟ್ಟೆ ಇಲ್ಲ ಕೆರೇಲಿ, ತಟ್ಟೆ ತರ‍್ಕೊಂಡೋಯ್ತದೆ (ಆಕಾಶ, ಚಂದ್ರ)

೧೦ ನೀಲಿ ಸಮುದ್ರದಲ್ಲಿ ಬೆಳ್ಳಿ ತಟ್ಟೆ ತೇಲುತ್ತೆ ನೀರು ಮೊಗೆಮೊಗೆದು ಹೊಯ್ಯುತ್ತೆ. (ಆಕಾಶದಲ್ಲಿ ಚಂದ್ರ ಬೆಳದಿಂಗಳು)

೧೧ ತುದಿ ಕಾಣುತ್ತದೆ, ಬುಡ ಕಾಣಿವುದಿಲ್ಲ (ಆಕಾಶ) (ತುಳು)

ಮೇಲಿನ ಒಗಟುಗಳಲ್ಲಿ ಒಂದು, ಎರಡು, ಮೂರು ಇವು ಆಕಾಶದ ಅನಂತತೆಯನ್ನೂ, ವ್ಯಾಪಕತೆಯನ್ನೂ, ‘ಅಮ್ಮನ ಹಾಸಿಗೆ’ ಅಮ್ಮನ ಸೀರೆ’ ’ಚಾಪೆಗಳು’ ಸಂಕೇತಗಳ ಮೂಲಕ ವರ್ಣಿಸುತ್ತದ. ಅಮ್ಮನ ಬಗೆಗೆ ಮಗುವಿಗಿರುವ ಅದ್ಭುತ ಕಲ್ಪನೆ ಆಕೆ ಬಳಸುವ ಸೀರೆ, ಹಾಸಿಗೆಗಳನ್ನು ಆಕಾಶದ ಬಗ್ಗೆ ಹೋಲಿಸುವಂತೆ ಮಾಡಿದೆ. ನಾಲ್ಕು, ಐದು, ಆರು, ಒಂಭತ್ತು, ಈ ಒಗಟುಗಳು ಆಕಾಶವನ್ನು ಕರೆಯ ಸಂಕೇತದ ಮೂಲಕ ಚಿತ್ರಿಸಿದೆ. ಐದನೆಯ ಒಗಟು ನೀಲಿ ವರ್ಣದ- ಆಕಾಶವನ್ನು ’ನಿಲಿ ಕೆರೆ’ ಎಂದು ಹೇಳಿದರೆ ಒಂಬತ್ತನೆಯ ಒಗಟು ಅಪರಿಮಿತ ವ್ಯಾಪ್ತಿಯುಳ್ಳ ಆಕಾಶವನ್ನು ಕಟ್ಟೆಯಿಲ್ಲದ ಕೆರೆಯೆಂದು ವಿಸ್ಮಯದಿಂದ ನಿರೂಪಿಸಿದೆ. ಇಲ್ಲೆಲ್ಲಾ ಭೂಮವಾದ ಆಕಾಶವನ್ನು ಕೆರೆಯೆನ್ನುವಾರ ಜನಪದರು ತಮ್ಮ ಅನುಭವ ಪ್ರಪಂಚದಲ್ಲಿ ಕಂಡ ವಿಶಾಲವಾದ ಜಲಾಶಯವೆಂದು ಭಾವಿಸಬಹುದು. ಹತ್ತನೆಯ ಒಗಟು ಆಕಾಶವನ್ನು ನೀಲಿ ಸಮುದ್ರ ಎಂದು ಹೇಳುವಾಗ ಮೇಲಿನ ಒಗಟುಗಳಿಗಿಂತ ಹೆಚ್ಚಿನ ಅರ್ಥ ಸಮೀಕರಣ ದೊರೆಯುತ್ತದೆ. ಹನ್ನೊಂದನೆಯ ಒಗಟು (ತುಳು) ಆಕಾಶದ ಅನಂತತೆಯನ್ನು ಇನ್ನೊಂದು ಬಗೆಯನ್ನು ತಿಳಿಸುತ್ತದೆ.

ಆಕಾಶದ ಬಗೆಗಿನ ಜನಪದ ನಂಬಿಕೆಗಳು : (ಈ ಎಲ್ಲಾ ನಂಬಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಾಗಿರುವವುಗಳು):

೧ ತೆಂಗಿನ ಸಸಿಯ ಬೇರುಗಳನ್ನು ಎತ್ತಿ ಆಕಾಶಕ್ಕೆ ತೋರಿಸಬಾರದು. ತೋರಿಸಿ ನೆಟ್ಟರೆ ಅದು ಸಾಯುತ್ತದೆ.

೨ ಮದ್ದಿನ ಗಿಡಗಳ ಬೇರುಗಳ ಆಕಾಶಕ್ಕೆ ಕಂಡರೆ ಗಿಡ ಸತ್ತು ಹೋಗುತ್ತದೆ.

೩ ಹಾಲು, ಮಜ್ಜಿಗೆ, ಮೊಸರು, ಇವನ್ನು ಆಕಾಶಕ್ಕೆ ತೋರಿಸಬಾರದು. (ಇವು ಆಕಾಶಕ್ಕೆ ಕಾಣಬಾರದು)

೪ ಮೊಟ್ಟೆ (ತತ್ತಿ)ಯನ್ನು ಆಕಾಶಕ್ಕೆ ತೋರಿಸಬಾರದು. ತೋರಿಸಿ ತಂದಿಟ್ಟರೆ ಅದು ’ಕಲ್ಕೆತ್ತಿ’ (ಕಲ್ಲುತತ್ತಿ-ಹಾಳು ಮೊಟ್ಟೆ) ಆಗುತ್ತದೆ.

೫ ತೆಂಗಿನ ಕಾಯಿಯನ್ನು ಹೋಳು ಮಾಡಿ, ಆಕಾಶಕ್ಕೆ ತೋರಿಸಬಾರದು. (ಅಂಗಾತವಾಗಿ)

೬ ಮದುವೆಯ ಧಾರೆ ಆಗುವಾಗ ಆಕಾಶ ಕಾಣಬಾರದು. (ಚಪ್ಪರ ಅಗತ್ಯ-ಆಕಾಶಕ್ಕೆ ಅಡ್ಡವಾಗಿ)

೭ ಆಕಾಶಕ್ಕೆ ಮುಖ ಮಾಡಿ ಮಲಗಬಾರದು. ಏನಾದರೂ ಅಡ್ಡ ಇರಬೇಕು.

೮ ಕೈಯಲ್ಲಿ ಮೆಟ್ಟು, ಪೊರಕೆ ಹಿಡಿದು ಆಕಾಶಕ್ಕೆ ತೋರಿಸಿದರೆ ಜಗಳ ಏರ್ಪಡುತ್ತದೆ.

೯ ಆಕಾಶದ ಕಡೆ ನೋಡಿ (ಮೇಲೆ ನೋಡಿ) ನಡೆಯುವವರನ್ನು ನಂಬಬಾರದು.

೧೦ ಆಕಾಸ ಕೆಂಪಾಗಿ ಕಂಡರೆ ಕಡಲಲ್ಲಿ ಮೀನುಗಳು ಸಾಯುತ್ತವೆ.

೧೧ ಆಕಾಶ ನೋಡಿ ಗಂಡು ಮಗು ಹುಟ್ಟಬೇಕು; ಭೂಮಿ ನೋಡಿ ಹೆಣ್ಣು ಮಗು ಹುಟ್ಟಬೇಕು.

೧೨ ನಾಯಿ ಬಾನಿಗೆ ಮುಖ ಮಾಡಿ ಅತ್ತರೆ ಮಳೆ ಬರುತ್ತದೆ.

ಮೇಲಿನ ಜನಪದ ನಂಬಿಕೆಗಳಲ್ಲಿ ಒಂದು, ಎರಡು, ಮೂರು, ನಾಲ್ಕು, ಐದು, ಇವು ಪ್ರಧಾನವಾಗಿ ಒಂದೇ ಆಶಯವನ್ನು ಒಳಗೊಂಡವುಗಳು. ತೆಂಗಿನ ಸಸಿ ಅಥವಾ ಮದ್ದಿನ ಗಿಡದ ಬೇರು ಆಕಾಶಕ್ಕೆ ತೋರಿಸಿದರೆ ಅವು ಸಾಯುತ್ತವೆ. ಹಾಲು, ಮಜ್ಜಿಗೆ, ಮೊಸರು, ಮೊಟ್ಟೆ, ತೆಂಗಿನ ಕಾಯಿ ಇಂತಹ ಆಹಾರ ವಸ್ತುಗಳು ಆಕಾಶಕ್ಕೆ ತೋರಿಸಿದರೆ ಅವು ಕೆಡುತ್ತವೆ. ಈ ಎಲ್ಲಾ ನಂಬಿಕೆಗಳಲ್ಲಿ ಕೆಲಸ ಮಾಡುತ್ತಿರುವ ಆಶಯವೆಂದರೆ, ಆಕಾಶಕ್ಕೆ ಅಥವಾ ಭೂಮಿಯ ಮೇಲ್ಗಡೆಯಲ್ಲಿರುವ ಬಾಹ್ಯವಾತಾವರಣಕ್ಕೆ ಸಜೀವ ವಸ್ತುಗಳನ್ನು ನಾಶ ಪಡಿಸುವ ಅಥವಾ ಆಹಾರ ವಸ್ತುಗಳನ್ನು ಕೆಡಿಸುವ ಗುಣವಿದೆ ಎಂಬುದು.

ಪಂಪ ಭಾರತದಲ್ಲಿ ಬರುವ ’ಒತ್ತಿ ತರುಂಬಿನಿಂದ ಭೂಜ ಸಮಾಜದ ಬೇರ್ಗಳಂನಭಕ್ಕೆತ್ತದೆ’ ಎನ್ನುವ ಮಾತಿನಲ್ಲಿ ಇದೇ ಆಶಯದ ಜನಪದ ನಂಬಿಕೆಯು ವ್ಯಕ್ತವಾಗಿದೆ. ಜನಪದರು ಆಕಾಶವೆಂದು ಭಾವಿಸುವ ನಮ್ಮ ಸುತ್ತಲಿನ ವಾತಾವರಣವು ಸುಲಭವಾಗಿ ಬ್ಯಾಕ್ಟೀರಿಯಾಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟು, ಆಹಾರ ಪದಾರ್ಥಗಳನ್ನು ಕೆಡಿಸುವುದಕ್ಕೆ, ಸಸ್ಯದ ಬೇರುಗಳು ತಮ್ಮ ಸತ್ವವನ್ನು ಕಳೆದುಕೊಳ್ಳುವುದಕ್ಕೆ ಕಾರಣವಾಗಬಹುದು. ತಮ್ಮ ಅನುಭವದಿಂದ ಈ ರೀತಿ ಆಹಾರಿಕ ಪದಾರ್ಥಗಳು (ಹಾಲು, ಮೊಸರು, ಮಜ್ಜಿಗೆ, ತೆಂಗಿನಕಾಯಿ ಹೋಳು, ಮೊಟ್ಟೆ) ಕೆಟ್ಟದ್ದನ್ನು ಗಮನಿಸಿದ ಜನಪದರು ಆಕಾಶವೇ ಇಂತಹ ಸ್ಥಿತಿಗೆ ಕಾರಣ ಎನ್ನುವ ಭಾವನೆಯನ್ನು ತಾಳಿರಬೇಕು. ಆಕಾಶದ ಅನಂತತೆ, ಅನೂಹ್ಯತೆ ಮತ್ತು ಆ ಕಾರಣವಾಗಿ ಅಗೋಚರವಾದ ಶಕ್ತಿಗಳ ಬಗೆಗಿನ ಭಯ ಇವು ಆಕಾಶದ ಬಗೆಗಿನ ಇಂತಹ ನಂಬಿಕೆಗಳ ಹುಟ್ಟಿಗೆ ಕಾರಣವಾಗಿರಬೇಕು. ಮದುವೆಯ ಧಾರೆ ಆಗುವಾಗ ಆಕಾಶ ಕಾಣಬಾರದು (೬) ಆಕಾಶಕ್ಕೆ ಮುಖ ಮಾಡಿ ಮಲಗಬಾರದು (೭) ಈ ನಂಬಿಕೆಗಳಿಗೂ ಮೇಲೆ ತಿಳಿಸಿದ ಆಶಯವೇ ಪ್ರೇರಣೆಯನ್ನು ಒದಗಿಸಿರಬೇಕು. ಹನ್ನೊಂದನೆಯ ನಂಬಿಕೆ-ಆಕಾಶ ನೋಡಿ ಗಂಡು ಹುಟ್ಟುವುದು, ಭೂಮಿ ನೋಡಿ ಹೆಣ್ಣು ಹುಟ್ಟುವುದು, ಇದು ಆಕಾಶ ಗಂಡು, ಮತ್ತು ಭೂಮಿ ಹೆಣ್ಣು ಎನ್ನುವ ಜನಪದ ಕಲ್ಪನೆಗೆ ಅನುಗುಣವಾಗಿದೆ. ಹತ್ತನೆಯ ನಂಬಿಕೆ-ಆಕಾಶ ಕೆಂಪಾಗಿ ಕಡಲಲ್ಲಿ ಮೀನುಗಳು ಸಾಯುತ್ತವೆ-ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಸೂರ್ಯಾಸ್ತದ ಬಳಿಕ ರಂಗೇರುವ ದೃಶ್ಯ ಮತ್ತು ಮೀನುಗಳು ದೊರೆಯುವ ಸಂದರ್ಭಗಳ ನಡುವೆ ತಾಳೆ ಹಾಕಲಾಗಿದೆ. ಮೀನು ಹಿಡಿಯಲು ಅನುಕೂಲವಾದ ವಾತಾವರಣವನ್ನು ಗಮನಿಸಿಕೊಂಡು ಇಂತಹ ನಂಬಿಕೆ ಹುಟ್ಟಿಕೊಂಡಿರಬಹುದು.

ಜನಪದರು ಅನಂತವಾದ ಆಕಾವನ್ನು ಪರಿಭಾವಿಸಿದ ರೀತಿಯ ಬೇರೆ ಬೇರೆ ಅಭಿವ್ಯಕ್ತಿಗಳು ಆಕಾಶ ಜಾನಪದದಲ್ಲಿ ದೊರೆಯುತ್ತವೆ. ಆಕಾಶದ ಸುತ್ತಲು ಹಬ್ಬಿದ ಜನಪದರ ಕಾಲ್ಪನಿಕ ಸಾಮರ್ಥ್ಯ, ಬದುಕನ್ನು ನಿಯಂತ್ರಿಸುತ್ತಿದ್ದ ನಂಬಿಕೆಗಳು, ಮನವನ್ನು ಅರಳಿಸುತ್ತಿದ್ದ ಪರಿಕಲ್ಪನೆಗಳು, ಇವುಗಳ ಸುವಷ್ಟಿಯೇ ಆಕಾಶ ಜಾನಪದ. ಅನಂತವಾದ ನಿಸರ್ಗವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಸುವ ಜನಪದರ ಸಾಮರ್ಥ್ಯ ಇಲ್ಲಿ ಗೋಚರಿಸುತ್ತದೆ.

 


[1]      ಕಲ್ಲಿನ ಗಾದೆಗಳನ್ನು – ಎಚ್.ಎಸ್. ಅಜ್ಜಪ್ಪನಲರ ಗ್ರಂಥಸ್ಥ ಗಾದೆಗಳು ಸಂಪುಟದಿಂದ ಆಯ್ದು ಕೊಳ್ಳಲಾಗಿದೆ.