ಮಾನವ ಹುಟ್ಟಿನಿಂದಲೇ ಪ್ರಕೃತಿಯ ಒಂದಂಶವಾಗಿ ಬೆಳೆದು ಬಂದವನು. ಪ್ರಕೃತಿಯ ವೈವಿಧ್ಯ ವೈಚಿತ್ರ ವಿರಾಡ್ ಸ್ವರೂಪವನ್ನು ನಿರಂತರವಾಗಿ ಅನುಭವಿಸುತ್ತ ಬಂದ ಮಾನವನಲ್ಲಿ ಅದರ ಬಗ್ಗೆ ಸಹಜವಾಗಿ ಪ್ರೀತಿ ಗೌರವ ಭಯ ಆರಾಧನಾಭಾವಗಳು ಹುಟ್ಟಿಕೊಂಡವು. ಮಾತ್ರವಲ್ಲ ಅದು ಅವನ ಪಾಲಿಗೆ ವಿಸ್ಮಯಲೋಕವೆನಿಸಿತು. ಸಾಂಸ್ಕೃತಿಕ ಆಲೋಚನೆಗಳ ಕೇಂದ್ರವಾಯಿತು. ನಡೆದಾಡುವ ವಿಶ್ವಕೋಶವಾಗಿ ಕಾಣಿಸಿತು. ಪರಿಣಾಮವಾಗಿ ಅವನ ಬುದ್ಧಿ ಮತ್ತು ಗ್ರಹಿಕೆಗೆ ನಿಲುಕದ್ದು ವಾಸ್ತವತೆಯಾದರೆ ಅದನ್ನು ಮೀರಿದ್ದು ಒಗಟಾಗಿ ಅನೇಕಾನೇಕ ಊಹೆ ಕಲ್ಪನೆ ನಂಬಿಕೆ ಆಚರಣೆಗಳಿಗೆ ವಸ್ತುವಾದುವು. ಹೀಗಾಗಿ ಪ್ರಕೃತಿಯ ನಡುವಣ ಪಂಚಭೂತಗಳ ಅಸ್ತಿತ್ವ ಅದರ ಬಗೆಗಿನ ನಂಬಿಕೆಗಳು ಮನುಷ್ಯನೊಂದಿಗೆ ಇತಿಹಾಸದುದ್ದಕ್ಕೂ ಬೆಸೆದುಕೊಂಡೇ ಬಂದವು. ಇದರಲ್ಲಿ ಆಕಾಶವು ನಿಸರ್ಗದ ಪಂಚಭೂತಗಳನ್ನು ಗರ್ಭೀಕರಿಸಿಕೊಂಡ ಒಂದು ಮುಖ್ಯ ಅಂಗ ಇಲ್ಲಿ ಮನುಷ್ಯನ ಬುದ್ಧಿ ಆಲೋಚನೆಗಳಿಗೆ ಸವಾಲು ಎನಿಸುವ, ವಿಸ್ಮಯ ಎನಿಸುವ ಪ್ರಕೃತಿಯ ಅಂಗೋಪಾಂಗಗಳಾದ ಸೂರ್ಯ ಚಂದ್ರ ಗ್ರಹ ನಕ್ಷತ್ರ ಮೋಡ ಮಳೆ ಗುಡುಗು ಮಿಂಚುಗಳ ಸಂಚಾರವಿದೆ. ಇವು ಶಿಷ್ಟರ ಅಥವಾ ವಿಜ್ಞಾನಿಗಳ ನಿರಂತರ ಅಧ್ಯಯನಕ್ಕೆ ಕಾರಣವಾದಂತೆ ಜನಪದರ ನೂರಾರು ನಂಬಿಕೆ ಕಲ್ಪನೆ, ಅಭಿವ್ಯಕ್ತಿಯ ಮೂಲಗಳು ಆದವು.

ವಿಜ್ಞಾನಿಗಳ ಪ್ರಕಾರ ಆಕಾಶ ಏನೆಲ್ಲ ಆಗಿದ್ದರೂ ಜನಪದರ ಪ್ರಕಾರ ಅದು ಭೂಮಿಯ, ಮೇಲಿನ ಲೋಕ, ಬ್ರಹ್ಮ ಸೃಷ್ಟಿ, ದೇವತೆಗಳು ವಾಸಿಸುವ ಸ್ಥಳ, ಸ್ವರ್ಗಲೋಕ, ಕೈಲಾಸ, ವೈಕುಂಠಗಳು ಇರುವುದು ಇಲ್ಲೆ. ಅಮರಜೀವಿಗಳಾದ ದೇವರುಗಳು ಭೂಜೀವಿಗಳ ಚಲನವಲನಗಳನ್ನು ವೀಕ್ಷಿಸಿ ಶಿಕ್ಷಿಸುತ್ತಾರೆ. ಪುಣ್ಯ ಸಂಚಯಿಗಳನ್ನು ರಕ್ಷಿಸುತ್ತಾರೆ. ನಮ್ಮೆಲ್ಲ ಬದುಕಿಗೆ ಸೂತ್ರಧಾರಿಗಳು ಅವರು ಎಂಬ ನಂಬಿಕೆ ಅವರದು. ಆದ್ದರಿಂದಲೇ ಅದನ್ನು ನಾವು ಮುಟ್ಟಲಾರೆವು, ಪುಣ್ಯವಂತರು ಮಾತ್ರ ಸತ್ತ ತರುವಾಯ ಅಲ್ಲಿ ನೆಲೆಸಬಲ್ಲರು. ಹಾಗಾಗಿ ಆಕಾಶ ಜನಪದರಿಗೆ ತಂದೆಯಾದರೆ ಭೂಮಿ ತಾಯಿ ಎಂಬ ಭಾವನೆ. ಭೂಮಿಯು ಸಹನತ್ವ, ತಾಯ್ತನದ ಸಂಕೇತ, ಉತ್ಪತ್ತಿಯ ಸಂಕೇತ, ಗರ್ಭದ ಸಂಕೇತ. ಉತ್ಪತ್ತಿಗೆ ಕಾರಣವಾಗುವ ಆಕಾಶ ಅರ್ಥಾತ್ ಮಳೆ ಪುರುಷ ವೀರ್ಯದ ಸಂಕೇತ. ಸದಾ ಎತ್ತರದಲ್ಲಿರುವ ಆಕಾಶ ತಂದೆ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪಿತೃಗಿರುವ ಸ್ಥಾನ ಮಹತ್ವವನ್ನು ಸೂಚಿಸಿದರೆ, ಭೂಮಿ ಮಾತೃಗಿರುವ ಸ್ಥಾನ ಮತ್ತು ಅಗತ್ಯವಾಗಿರಲೇಬೇಕಾದ ಗುಣಶೀಲ ಸ್ವಭಾವಗಳನ್ನು ಸೂಚಿಸುವಂತಹದ್ದಾಗಿದೆ. ಕೆಲವು ಬುಡಕಟ್ಟು ಜನಾಂಗಗಳಲ್ಲಿ ಆಕಾಶ ಮತ್ತು ಭೂಮಿ ಪರಸ್ಪರ ಅವಿನಾ ಬಂಧುತ್ವವುಳ್ಳವು ಆಗಿದ್ದವು. ತರುವಾಯ ಯಾವುದೋ ಹಂತದಲ್ಲಿ ಅವು ಬೇರ್ಪಟ್ಟವು ಎಂಬ ನಂಬಿಕೆಯಿದೆ. ಇದನ್ನು ಒಪ್ಪುವಂತೆ ನಮ್ಮಲ್ಲಿಯೂ ಆ ಬಗೆಯ ಜನಪದ ಆಶಯಗಳು ಸಿಗುತ್ತವೆ, ಕಥೆಗಳು ಸಿಗುತ್ತವೆ.

ಜೈನರ ಪ್ರಕಾರ ಆಕಾಶ ನಿತ್ಯವಾದುದು, ವ್ಯಾಪಕವಾದುದು. ಅನಂತವಾದುದು. ಆದ್ದರಿಂದಲೇ ಇಡೀ ಬ್ರಹ್ಮಾಂಡವನ್ನೇ ಅವರು ಆಕಾಶದಡಿಯಲ್ಲಿ ಸೂತ್ರೀಕರಿಸುತ್ತಾರೆ. ಆಕಾಶವನ್ನು ಲೋಕಾಕಾಶ ಅಲೋಕಾಕಾಶವೆಂದು ವಿಂಗಡಿಸಿದರೂ. ಬದುಕನೆಲ್ಲ ಕ್ರಿಯೆ-ಪ್ರತಿಕ್ರಿಯೆ-ಪ್ರಕ್ರಿಯೆಗಳಿಗೆ ಕಾರಣವಾಗುವ ಕ್ಷೇತ್ರವೇ ಲೋಕಾಕಾಶ. ಇಲ್ಲಿಯೇ ಸಿದ್ಧಲೋಕ ಊರ್ಧ್ವಲೋಕದಲ್ಲಿ ದೇವತೆಗಳಾಗಿ ತರುವಾಯ ಮುಕ್ತಗೊಂಡು ಪುಣ್ಯ ಚೇತನಗಳಾಗಿ ಸಿದ್ಧಲೋಕವನ್ನು ತಲುಪುತ್ತವೆ ಎಂಬುದರ ನಂಬಿಕೆಯಲ್ಲಿ ಆಕಾಶಕ್ಕೆ ಅವರು ಕೊಟ್ಟಿರುವ ಪ್ರಾಮುಖ್ಯತೆಯ ಅರಿವಾಗುತ್ತದೆ. ಹಾಗೆ ನೋಡಿದರೆ ಆಕಾಶ ಎಲ್ಲ ದೃಷ್ಟಿಯಲ್ಲೂ ಮನುಷ್ಯ ಇರುವಿಕೆಗೆ ಕಾರಣವಾಗುತ್ತದೆ ಎಂಬುದೇ ಜನಪದರ ನಂಬಿಕೆ. ಇದಕ್ಕೆ ಅವರ ಕಲ್ಪನೆಯಲ್ಲಿ ಬರುವ ದೇವಾನ್‌ದೇವತೆಗಳ ಪುರಾಣಕಥೆಗಳೇ ಸಾಕ್ಷಿ ನುಡಿಯುತ್ತವೆ.

ಇನ್ನು ಆಕಾಶಕಾಯಗಳಲ್ಲಿ ಪ್ರಮುಖ ಪಾತ್ರ ವಹಿಸುವವನು ಸೂರ್ಯ ಸಂಶೋಧನೆ ಮತ್ತು ಕುತೂಹಲಕರ ಅಧ್ಯಯನಗಳ ಕಾರಣವಾಗಿ ಆಕಾಶದಲ್ಲಿಯ ಸೂರ್ಯನ ಸುತ್ತ ಭೂಮಿಯನ್ನೇ ಒಳಗೊಂಡಂತೆ ಎಲ್ಲ ಗ್ರಹಗಳು ನಿರಂತರ ಪರಿಭ್ರಮಣೆಯಲ್ಲಿವೆ ಎಂಬುದು ಸ್ಪಷ್ಟವಾಗಿದೆ. ಇದಕ್ಕೂ ಮೊದಲೇ ನಮ್ಮ ಜನಪದರು ಸೂರ್ಯನನ್ನು ಪ್ರಕೃತಿಯ ಅತ್ಯಂತ ಪ್ರಮುಖ ಅಂಗವೆಂದೇ ಪರಿಗಣಿಸಿದ್ದರು. ಇದಕ್ಕೆ ಕಾರಣವೂ ಕೂಡ ಸ್ಪಷ್ಟ. ಭೂಮಿಯ ಎಲ್ಲಾ ಜೀವಿಗಳ ಚಟುವಟಿಕೆಯ ಮೂಲ ಕೇಂದ್ರವಾಗಿ ಸೂರ್ಯ. ಗಿಡಮರಗಳಿಂದ ಹಿಡಿದು ಮನುಷ್ಯ ಬದುಕಿನ ಮೂಲಶಕ್ತಿಯಾಗಿದ್ದಾನೆ. ಆದ್ದರಿಂದಲೇ ನಮ್ಮವರ ಪಾಲಿಗೆ ಸೂರ್ಯ ತೇಜಸ್ಸು ಮತ್ತು ಶಕ್ತಿಯ ಸಂಕೇತ. ಇದು ಪ್ರಾಚೀನಕಾಲದಿಂದಲೂ ಮನುಷ್ಯ ಸಮೂಹದ ನಡುವೆ ಇದ್ದುಕೊಂಡು ಬಂದಿರುವ ನಂಬಿಕೆ. ಆದ್ದರಿಂದಲೇ ಜಗತ್ತಿನಲ್ಲಿ ಇಬ್ಬರು ಮಾತ್ರ ಸೂರ್ಯಮಂಡಲವನ್ನು ಸಾವಿನ ನಂತರ ಮುಟ್ಟಬಲ್ಲರು. ಅವರೇ ಜಿತೇಂದ್ರಿಯನಾದ ಯೋಗಿ, ಇನ್ನೊಬ್ಬ ಶೌಚಗುಣ ಸಂಪನ್ನನಾಗಿ ರಣರಂಗದಲ್ಲಿ ಹೋರಾಡಿ ಮಡಿದ ವೀರ. ಇವರು ಸಾವಿನ ನಂತರ ಸೂರ್ಯಮಂಡಲವನ್ನು ಭೇದಿಸುತ್ತಾರೆಂಬ ಕಾರಣಕ್ಕಾಗಿ ಭಾರತೀಯ ಬದುಕಿನ ಪರಂಪರೆಯಲ್ಲಿ ಒಂದು ಕಡೆಗೆ ಆಧ್ಯಾತ್ಮ, ಯೋಗಸಾಧನೆ ಮುಖ್ಯವೆನಿಸಿದರೆ ಇನ್ನೊಂದು ಕಡೆ ಪರಾಕ್ರಮ ಸತ್ಯ, ತ್ಯಾಗ ಇವು ಮುಖ್ಯವಾದುವು. ಯೋಗವೀರನಷ್ಟೇ ಯುದ್ಧವೀರನೂ ಮುಖ್ಯನಾದ. ಇದು ಕಾರಣದಿಂದಲೇ ನಮ್ಮ ರಾಜವಂಶದವರು ತಮ್ಮ ವಂಶದ ಮೂಲವನ್ನು ಸೂರ್ಯನ ತೇಜಸ್ಸಿನಿಂದಲೇ ಗುರುತಿಸಿಕೊಳ್ಳುತ್ತಾರೆ. ರಾಮಾಯಣ, ಮಹಾಭಾರತ ಕಥೆಗಳಿಂದಲೇ ಈ ಪ್ರಕ್ರಿಯೆ ಆರಂಭವಾಗುತ್ತದೆ. ಸೂರ್ಯ ಚಂದ್ರರಿಬ್ಬರು ಅನೇಕ ಕ್ಷತ್ರಿಯ ಮೂಲ ಪುರುಷರಾಗುವುದೇ ತಮ್ಮ ಪ್ರಖರತೆ ಮತ್ತು ಸೌಮ್ಯತೆಯಿಂದ. ಅಷ್ಟೇಕೆ ಪ್ರಕೃತಿಯ ನಡುವೆಯೆ ಬದುಕುವ ಅನೇಕ ಆದಿವಾಸಿ ಜನಾಂಗಗಳು ಆಕಾಶಕಾಯದ ವಸ್ತುಗಳನ್ನೇ ತಮ್ಮ ಆರಾಧನೆಗೆ ಆಯ್ಕೆ ಮಾಡಿಕೊಂಡಿರುವುದನ್ನು ಕಾಣಬಹುದು. ಹಾಗೆ ನೋಡಿದರೆ ಸೂರ್ಯನ ಆರಾಧನೆ ಅತ್ಯಂತ ಹಳೆಯದು.

ಜನಪದರಿಗೆ ಶಿಷ್ಟರಿಗೆ ಮೂಲದೇವತೆಯೇ ಸೂರ್ಯ. ಋಗ್ವೇದದಲ್ಲಿ ಸೂರ್ಯನನ್ನು ಆದಿತ್ಯ ಎಂದು ಕರೆಯಲಾಗಿದೆ. ಇವನು ಆದಿ ಅಂತ್ಯವಿಲ್ಲದವನು, ಅಜ್ಞಾನವೆಂಬ ಕತ್ತಲನ್ನು ನಿವಾರಿಸುವವನು, ಬೆಳಕಿನ, ಜ್ಞಾನದ ಸಂಕೇತವಾಗಿರುವವನು ಆಗಿದ್ದಾನೆ. ಆದ್ದರಿಂದಲೇ ನಮ್ಮೆಲ್ಲ ದೇವತೆಗಳ ಬಳಿಯೂ ಸೂರ್ಯಪ್ರಭೆಯ ಅಂಶವಿದೆ. ಹೀಗಾಗಿ ಸೂರ್ಯನ ಸ್ವರೂಪದ ಬಗ್ಗೆಯೇ ಚಿತ್ರ ವಿಚಿತ್ರ ಪರಿಕಲ್ಪನೆಗಳಿವೆ. ನಮ್ಮ ಪರಂಪರೆಯಲ್ಲಿರುವ ಸೂರ್ಯನಿಗೆ ಛಾಯಾ ಸಂಜ್ಞಾ ಎಂಬ ಮಡದಿಯರು ಇದ್ದು, ಕತ್ತಲು-ಬೆಳಕು, ಅಜ್ಞಾನ-ಜ್ಞಾನ, ನೋವು-ನಲಿವು, ಸುಖ-ದುಃಖಗಳನ್ನು ಪ್ರತಿನಿಧಿಸುತ್ತಾರೆ. ಅವನಿಗಿರುವ ರಥಕ್ಕೆ ಒಂದು ವರ್ಷವನ್ನು ಸಂಕೇತಿಸುವ ಒಂದೇ ಚಕ್ರವಿದೆ, ಮಾಸಗಳನ್ನು ಪ್ರತಿನಿಧಿಸುವ ಹನ್ನೆರಡು ಅರೆಕಾಲುಗಳಿವೆ. ಋತುಗಳ ಪ್ರತೀಕವಾಗಿ ಆರುಪಟ್ಟಿಗಳಿವೆ. ಈ ರಥವನ್ನು ಎಳೆಯುವ ಏಳು ಕುದುರೆಗಳು ಛಂದಶ್ಯಾಸ್ತ್ರದ ಪ್ರಮುಖ ಧಾತುಗಳಾಗಿವೆ. ಪವಿತ್ರತೆಯ ದ್ಯೋತಕವಾಗಿವೆ. ಇನ್ನು ಸಾರಥಿ ಅರುಣನೋ ಹೆಳವನಾಗಿದ್ದಾನೆ. ಇವನ ಹೆಳವತನದಲ್ಲಿ ದಿನದ ಚಲನೆಯ ಜೀವನಗತಿಯ ಸಾವಧಾನತೆಯನ್ನು ಗ್ರಹಿಸಬಹುದು. ಸೂರ್ಯ ಮುಳುಗುವಾಗ ಮತ್ತು ಏಳುವಾಗುವಿನ ಕೆಂಪಣ್ಣಕ್ಕೆ ಜನಪದರಲ್ಲಿ ಕಂಡು ಬರುವ ನಂಬಿಕೆಯಾದರೋ, ಅದು ರಾಕ್ಷಸರೊಡನೆ ಸೆಣಸಾಡುವುದರ ಪ್ರತಿಫಲವಂತೆ. ಆ ರಾಕ್ಷಸರು ದಿನಾ ಸತ್ತು. ಮತ್ತೆ ದೇಹಧಾರಿಗಳಾಗಿ ಸೂರ್ಯನೊಡನೆ ಹೋರಾಟಕ್ಕಿಳಿಯುತ್ತಾರಂತೆ. ಇಂಥ ಕಥೆಯ ಹುಟ್ಟಿಗೆ ಕಾರಣವೇನೋ ತಿಳಿಯುವುದಿಲ್ಲವಾದರೂ ವೈದಿಕ ಪರಂಪರೆಯಲ್ಲಿರುವ ಸಂಧ್ಯಾ ವಂದನೆಯ ಪ್ರಾಮುಖ್ಯತೆಯನ್ನು ಹೇಳುವ ನಂಬಿಕೆಯಂತೂ ನಮ್ಮ ಸಮಾಜ ವ್ಯವಸ್ಥೆಯ ಹಿಡಿತ ಎಲ್ಲಿತ್ತು ಎಂಬುದನ್ನು ಧ್ವನಿಸುವಂತಿದೆ. ಅವರ ಪ್ರಕಾರ ಸೂರ್ಯ ರಾಕ್ಷಸರೊಡನೆ ಹೋರಾಡಿ ರಕ್ತಸಿಕ್ತನಾಗುವನೆಂದು, ಆ ವೇಳೆಗೆ ಇವರು ಪಠಿಸುವ ಗಾಯತ್ರಿ ಮಂತ್ರ, ಚಿಮುಕಿಸುವ ಪವಿತ್ರ ಜಲದಿಂದ ಆ ರಾಕ್ಷಸರು ಸುಟ್ಟು ಬೂದಿಯಾಗುತ್ತಾರೆಂದು ಮತ್ತೆ ಜೀವಂತವಾಗಿ ಮರುದಿನದ ಹೋರಾಟಕ್ಕೆ ಸಿದ್ಧರಾಗುತ್ತಾರಂತೆ. ಆದ್ದರಿಂದಲೇ ಸಂಧ್ಯಾವಂದನೆ ಅವರಲ್ಲಿ ಕಡ್ಡಾಯ. ಬಹುಶಃ ಈ ಬಗೆಯ ವ್ಯವಸ್ಥಿತ ಸಂಚುಗಳೂ ನಮ್ಮ ಜನಪದರ ಬದುಕಿನಿಂದ ಬದುಕಿಗೆ ಹಾಯ್ದು ನಂಬಿಕೆಗಳ ಸರಮಾಲೆಗಳೇ ಮೂಡಿಬಂದಿರಲೂ ಸಾಕು. ಹಾಗೆಯೇ ನೆಚ್ಚಿಕೆಯ ಫಲವಾಗಿಯೂ ಅನುಭವಗಳು ಸಿದ್ಧಗೊಂಡು ಸೂರ್ಯ ಸಂಬಂಧಿ ನಂಬಿಕೆಗಾಗಿ ಮಾರ್ಪಟ್ಟಿರಲೂ ಸಾಕು. ಏಕೆಂದರೆ ಪ್ರಕೃತಿಯ ಒಡನಾಟದಿಂದಲೇ ಬದುಕಲು ಕಲಿತ ನಮ್ಮ ಜನಪದರು ತಮ್ಮ ನಂಬಿಕೆಯಲ್ಲೂ ಅದನ್ನು ಉಳಿಸಿಕೊಂಡು ಬಂದವರಾಗಿದ್ದಾರೆ ಹುಳುಹುಪ್ಪಡಿಗಳನ್ನು ನಿಯಂತ್ರಿಸುವ ಕ್ರಿಮಿನಾಶಕ ದ್ರವ್ಯವಾಗಿ ಬಳಸುವ ಸಗಣಿನೀರು, ಮನೆಯವರು ಜೀವಂತಿಕೆಯ ಸೂಚಕವಾಗಿ ಬಿಡಿಸುವ ರಂಗೋಲೆ, ಜನಪದರ ನಂಬಿಕೆಯಲ್ಲಿ ಸೂರ್ಯದೇವರನ್ನು ಸ್ವಾಗತಿಸುವಂಥದ್ದಾಗಿದೆ. ಹೊತ್ತು ಮುಳುಗುವ ಮುನ್ನ ಕಸಗುಡಿಸಬೇಕು, ಹೊತ್ತು ಮುಳುಗಿದ ಮೇಲೆ ಕಸವನ್ನು ಆಚೆಗೆ ಹಾಕಬಾರದೆಂಬ ನಂಬಿಕೆಯಲ್ಲಿ ಅವರ ವ್ಯವಹಾರಿಕೆಯ ಜಾಣ್ಮೆಯಿದೆ. ಮೊದಲಿನದು ಮನೆಯ ಸ್ವಚ್ಛತೆಗೆ ಸಹಕಾರಿಯಾದರೆ, ಎರಡನೆಯದು ಕತ್ತಲಲ್ಲಿ ತಿಳಿಯದೆ ಪದಾರ್ಥಗಳು ಕಸದೊಂದಿಗೆ ಆಚೆಗೆ ಹೋಗುವ ಸಾಧ್ಯತೆಯನ್ನು ತಿಳಿಸುತ್ತದೆ. ಹಾಗೆಯೇ ರಾತ್ರಿ ಹಿತ್ತಲ ಬಾಗಿಲು ಮುಚ್ಚಬೇಕು, ಮುಂಬಾಗಿಲು ತೆರೆದು ದೀಪ ಹಚ್ಚಬೇಕೆಂಬ ಇಲ್ಲದಿದ್ದರೆ ಲಕ್ಷ್ಮಿ ಹೊರಹೋಗುವಳೆಂಬ ನಂಬಿಕೆಯ ಹಿಂದೆ ಕಳ್ಳಕಾಕರನ್ನು ಬಗ್ಗೆ ಎಚ್ಚರಿಕೆಯ ನೋಟವಿದೆ. ರಾತ್ರಿ ವೇಳೆ ಗಿಡ ಬಳ್ಳಿಗಳನ್ನು ಕೀಳಬಾರದು ಎಂಬಲ್ಲಿ ಹಾವು ಇತ್ಯಾದಿಗಳ ಭಯವಿರುವಂತೆ ಆಮ್ಲಜನಕವನ್ನು ಬಿಡುತ್ತಿರುವ ಮರಗಳನ್ನು ನೋಯಿಸುವುದು ಸರಿಯಲ್ಲ ಎಂಬ ಜೀವನ ಮೌಲ್ಯವಡಗಿದೆ. ಸೂರ್ಯ ಚಳಿಗಾಲದಲ್ಲಿ ಹೆದರಿ ಬೇಗ ಮುಳುಗುತ್ತಾನೆಂಬ ನಂಬಿಕೆಯಲ್ಲಿ ವಿಜ್ಞಾನ ಸತ್ಯವಿದೆ. ಬೀದಿ ಮಕ್ಕಳು ಬೆಳದಾವು, ಮೂಳೆ ಕಾಯಿಲೆ ಮಕ್ಕಳನ್ನು ಬಿಸಿಲಿನಲ್ಲಿ ಮಲಗಿಸಬೇಕು, ಸೂರ್ಯಸ್ನಾನ, ಸೂರ್ಯನಮಸ್ಕಾರ ಇತ್ಯಾದಿ ನಂಬಿಕೆಗಳ ಹಿಂದೆ ಸೂರ್ಯನ ಬೆಳಕಿಗೆ ಇರುವ ಪೋಷಕಾಂಶ ಶಕ್ತಿಯ ಅರಿವಿರುವುದನ್ನು ಗ್ರಹಿಸಬಹುದು. ಈ ಎಲ್ಲಾ ಕಾರಣಗಳಿಂದ ಸೂರ್ಯ ಜನಪದರ ಬದುಕಿನೊಂದಿಗೆ ಬೆಸೆದುಕೊಂಡನೆಂದು ತೋರುತ್ತದೆ.

ಸೂರ್ಯನಷ್ಟೇ ಚಂದ್ರನೂ ಜನಪದರಿಗೆ ಮುಖ್ಯ. ಆದ್ದರಿಂದಲೇ ಅಷ್ಟಾದಶ ವರ್ಣನೆಗಳಲ್ಲಿ ಇವರಿಬ್ಬರೂ ಬರುತ್ತಾರೆ. ವೀರರ ಸಾವು. ರಾಜ ಮಹಾರಾಜರ ದಾನ-ಧರ್ಮಗಳನ್ನು ಸಾರುವ ಶಾಸನಗಳಲ್ಲಿಯೂ ಕೂಡ ಅಗ್ರಭಾಗಗಳಲ್ಲಿಯೇ ಸೂರ್ಯಚಂದ್ರರಿಗೆ ಸ್ಥಾನವಿದೆ. ಭೂಮಿಯಿಂದ ಅನತಿದೂರದಲ್ಲಿರುವ ಸೂರ್ಯ-ಚಂದ್ರರಿದ್ದರೂ ಅವರಿಗೂ ಭೂಮಿಯ ಸಕಲ ಚರಾಚರ ವಸ್ತು ಸಂಗತಿಗಳೊಡನೆ ಸಂಪರ್ಕ ಕಲ್ಪಿಸಲಾಗಿದೆ. ಅದರಲ್ಲೂ ಹೆಣ್ಣು ಗಂಡಿನ ಸಂಬಂಧದಲ್ಲೇ ನಿರೂಪಿಸಲಾಗಿದೆ. ಪ್ರಕೃತಿಯಲ್ಲಿ ಗಂಡು-ಹೆಣ್ಣಿನ ಸಂಬಂಧ ಅನಿವಾರ್ಯ. ಅವರಿಬ್ಬರ ಸಂಬಂಧದಿಂದಲೇ ಜಗತ್ತು ಬೆಳೆಯುವುದು. ಈ ಅರ್ಥದಲ್ಲಿಯೇ ಸೂರ್ಯ ದಿವಸ್ಪತಿ ಚಂದ್ರ ಕುಮುದಪತಿ. ಗಂಡು-ಹೆಣ್ಣು ಜೀವಸೃಷ್ಟಿಗೆ ಮೂಲವಾದಂತೆ ಸೂರ್ಯ-ಚಂದ್ರರು ಪ್ರಕೃತಿಯ ಮುಂದುವರಿಕೆಗೆ ಅದರ ಜೀವಸೆಲೆಯ ನಿರಂತರತೆಗೆ ಕಾರಣರಾಗಿದ್ದಾರೆ.

ಸೂರ್ಯನ ಮೇಲಿರುವಂತೆ ಚಂದ್ರನ ಮೇಲೂ ಅನೇಕ ಕಥೆಗಳಿವೆ. ಚಂದ್ರ ತನ್ನ ಗುರುವಾದ ಬೃಹಸ್ಪತಿಯ ಮಡದಿ ತಾರೆಯನ್ನು ಅಪಹರಿಸಿ, ಬುಧನೆಂಬ ಮಗನನ್ನು ಪಡೆದನೆಂಬ ಪುರಾಣ ಕಥೆಯಿದೆ. ಇಲ್ಲಿ ಪ್ರಕಾಯ ಮತ್ತು ಪ್ರೇಮ ಸಂಬಂಧಗಳು ಸ್ಥಿತ್ಯಂತರ ಹಾಗೆಯೇ ನಿಯಮೇತರ ಸಂಬಂಧಗಳ ಸ್ವಚ್ಛಂದತೆ ಮತ್ತು ಸಹಜತೆಯ ಮನೋಭಾವವಿದೆ. ಈ ಚಂದ್ರ, ದೇವತೆಗಳು ಕ್ಷೀರ ಸಮುದ್ರವನ್ನು ಮಥನ ಮಾಡಿದಾಗ ಹುಟ್ಟಿದನೆಂಬ ಉಲ್ಲೇಖದಲ್ಲಿ ಅವನ ಸ್ಥಾನ ಮಹತ್ವವಿರುವಂತೆ, ಶಿವನು ಅವನನ್ನು ಧರಿಸಿದ್ದರಲ್ಲಿ ಅವನ ಸಾತ್ವಿಕತೆಯನ್ನು ಗುರುತಿಸಬಹುದಾಗಿದೆ. ಇಷ್ಟಾದರೂ ಸೂರ್ಯನ ಬಗ್ಗೆ (ವೇದಗಳಲ್ಲಿ) ದೊರಕುವಷ್ಟು ಮಾಹಿತಿಗಳು ಚಂದ್ರನ ಬಗ್ಗೆ ಸಿಗುವುದಿಲ್ಲ. ಇದಕ್ಕೆ ಕಾರಣ ಜಗತ್ತಿನ ವಸ್ತುಗಳ ಮೇಲೆ ಸೂರ್ಯ ಪ್ರಭಾವ ಬೀರುವಷ್ಟು, ಅನಿವಾರ್ಯವಾದಷ್ಟು ಚಂದ್ರ ಮುಖ್ಯನಾಗುವುದಿಲ್ಲ. ಆದ್ದರಿಂದಲೇ ಚಂದ್ರನನ್ನು ಜನಪದರು ಸೌಂದರ್ಯದ ಸಂಕೇತವಾಗಿಯೇ ಕಂಡಿದ್ದಾರೆ. ಸಾಂಸ್ಕೃತಿಕ ಪರಂಪರೆಯಲ್ಲೂ ಚಂದ್ರನನ್ನು ಹೆಣ್ಣಿನ ವರ್ಣನೆಗೆ ಸಮೀಕರಿಸಲಾಗಿದೆ. ಇದಕ್ಕೆ ಕಾರಣ ಚಂದ್ರನ ಶೀತಲ ಬೆಳಕು ಮತ್ತು ಹೆಣ್ಣು ಮನಸ್ಸಿನ ಕೋಮಲತೆಗಳಿರುವ ಸಾದೃಶ್ಯವಿರಬೇಕು. ಮನುಷ್ಯ ಸಮೂಹ ಅಥವಾ ಜನಪದ ಸಮೂಹ ತನ್ನ ಅನುಭವ ಆಲೋಚನೆಯ ನೆಲೆಗಟ್ಟಿನಲ್ಲೇ ಜಗತ್ತಿನ ಸಂಗತಿಗಳನ್ನು ನೋಡುವುದರಿಂದ ಚಂದ್ರನ ಬಗೆಗಿನ ನಂಬಿಕೆಗಳೂ ಕೂಡ ಆ ನೆಲೆಯಲ್ಲಿಯೇ ಕೆಲಸ ಮಾಡಿವೆ ಎಂದು ತೋರುತ್ತದೆ. ಏಕೆಂದರೆ ಚಂದ್ರನನ್ನು ಪೂಜಿಸುವವರು ಮಕ್ಕಳು ಮತ್ತು ಹೆಂಗಸರೇ ಆಗಿರುವುದು ಕುತೂಹಲದ ಸಂಗತಿಯೇ. ಚಂದ್ರ ಹೆಚ್ಚು ಮುದ ತರುವಂಥವನು, ಸಮಸ್ತ ಜನಪದ ಕಥೆಗಳು ಅರಳುವುದೂ ಚಂದ್ರನ ಬೆಳಕಿನಲ್ಲೇ, ಬೆಳದಿಂಗಳಲ್ಲೇ ಎಂಬುದನ್ನು ನಾವು ಅಲ್ಲಗಳೆವಂತಿಲ್ಲ. ಆದ್ದರಿಂದಲೇ ಚಂದ್ರನಲ್ಲಿರುವ ಕಪ್ಪು ಕಲೆಗಳು ಜನಪದರಿಗೆ ದೃಷ್ಟಿಯ ಬೊಟ್ಟಾಗಿಯೋ, ಜಿಂಕೆಯ ಚಂಚಲತೆಯಾಗಿಯೋ, ಮೊಲದ ಮೃದುತ್ವವಾಗಿಯೋ ಕಂಡದ್ದು ಅತ್ಯಂತ ಸಹಜವೇ ಆಗಿದೆ. ಚಂದ್ರನ ಬಗೆಗಿರುವ ನಂಬಿಕೆಗಳು ಬಹುಮಟ್ಟಿಗೆ ಅನೂಹ್ಯ ಲೋಕದ ಬಗ್ಗೆ ಜನಪದರಲ್ಲಿರುವ ಚಿತ್ರವಿಚಿತ್ರ ಧೋರಣೆಗಳಿಗೆ ಸಾಕ್ಷಿಯಾಗಿರುವುದೇ ಅಧಿಕ. ಅಮಾವಾಸ್ಯೆಯ ಕತ್ತಲಲ್ಲಿ ದೆವ್ವ ಭೂತಗಳ ಸಂಚಾರವಿರುತ್ತದೆ ಎಂಬ ನಂಬಿಕೆಯಂತೆಯೇ ಬೆಳ್ದಿಂಗಳಲ್ಲಿ ಮೋಹಿನಿಯು ಒಡಾಡುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಪಿತೃ ಪಕ್ಷ ಹಬ್ಬ ಅಮಾವಾಸ್ಯೆಯಲ್ಲೇ ನಡೆಯುವುದು ಮಾಟ ಮಂತ್ರಗಳಿಗೆ ಬಳಕೆಯಾಗುವುದು ಅಮಾವಾಸ್ಯೆಯ ಕತ್ತಲೆಯೇ ಭೀಮನ ಅಮಾವಾಸ್ಯೆಯಲ್ಲಿ ಸ್ತ್ರೀಯರು ಗಂಡನ ಆಯಸ್ಸಿಗಾಗಿ ಒಳ್ಳೆಯ ಪತಿಗಾಗಿ ಪೂಜಿಸುವ ಪದ್ಧತಿಯ ಹಿಂದೆ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮನೋಧರ್ಮವಿದೆ. ತುಂಬು ಅಮಾವಾಸ್ಯೆಯಲ್ಲಿ ಜನಿಸಿದ ಮಕ್ಕಳು ಸಮಾಜದ ಗಣ್ಯ ವ್ಯಕ್ತಿ, ಇಲ್ಲವೆ ಮಹಾಕಳ್ಳರಾಗುವರೆಂಬ ನಂಬಿಕೆ ಇಂದಿಗೂ ಜನಜನಿತವಾಗಿದೆ. ಹಾಗೆಯೇ ಎಳ್ಳಮವಾಸ್ಯೆಯ ಪರಶುರಾಮನ ಹಬ್ಬಾಗಲಿ, ಕಾರ್ತೀಕ ಅಮಾವಾಸ್ಯೆಯ ಪಂಚಲಿಂಗದರ್ಶನ, ಬಲೀಂದ್ರ ಪೂಜೆಯಾಗಲಿ ಎಲ್ಲವು ಈ ಬಗೆಯೇ ನಂಬಿಕೆಯ ಮೇಲೆ ನಿಂತಿರುವಂಥವಾಗಿವೆ. ಹಾಗೆಯೇ ಆಷಾಢ ಮಾಸದಲ್ಲಿ ಅತ್ತೆ ಅಳಿಯಂದಿರು ಒಂದೇ ಬಾಗಿಲಲ್ಲಿ ಒಡಾಡಬಾರದೆಂಬ ಪರಿಣಾಮವಾಗಿ ಘಟಿಸಬಹುದಾದ ಅನಾಹುತದ ಬಗೆಗೆ ಇರುವ ಮುನ್ನೆಚ್ಚರಿಕೆಯ ಕ್ರಮವನ್ನು ಕಾಣುತ್ತೇವೆ. ಗೌರಿ-ಗಣೇಶ ಹಬ್ಬದಲ್ಲಿ ಚೌತಿ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಪುರಾಣ ನಂಬಿಕೆ ಇಂದಿಗೂ ಬಹುಪಾಲು ಜನಾಂಗಗಳಲ್ಲಿ ಪ್ರಚಲಿತವಿದ್ದರೆ, ಯುಗಾದಿಯಲ್ಲಿ ಚಂದ್ರನ ಇರುವಿಕೆಯಿಂದ ಆ ವರ್ಷದ ಮಳೆ ಬೆಳೆಯ ಸಮೃದ್ಧಿಯನ್ನು ಗುರುತಿಸುವ ಪದ್ಧತಿಯು ಇಂದಿಗೂ ಜೀವಂತವಾಗಿದೆ. ಮುಸ್ಲಿಂ ಜನಾಂಗದಲ್ಲಂತೂ ಮೂರು ಧರ್ಮ ಸಂಕೇತಗಳಲ್ಲಿ (ಹಸಿರು. ನಕ್ಷತ್ರ) ಚಂದ್ರನೂ ಒಬ್ಬನಾಗಿದ್ದಾನೆ. ಅವನ ದರ್ಶನವಿಲ್ಲದೆ ಯಾವ ಹಬ್ಬ ನಡೆಯುವಂತೆಯೇ ಇಲ್ಲ.

ಒಟ್ಟಿನಲ್ಲಿ ಸೂರ್ಯ ಚಂದ್ರರು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವ ಪಡೆದವರಾಗಿದ್ದಾರೆ. ಇವರನ್ನು ರಾಹುಕೇತುಗಳೆಂಬ ರಕ್ಕಸರು ಆಗಾಗ ನುಂಗುವುದರಿಂದ ಗ್ರಹಣ ಘಟಿಸುತ್ತದೆ ಎಂಬ ಜನಪದರ ನಂಬಿಕೆಯ ಹಿಂದೆ ದೊಡ್ಡ ಪುರಾಣಪ್ರಪಂಚವೇ ಇದೆ. ಬ್ರಾಹ್ಮಣ ವೇಷ ತೊಟ್ಟು ಅಮೃತ ಕುಡಿಯಲೆತ್ನಿಸಿದ ರಕ್ಕಸನ ಕತ್ತನ್ನು, ವಿಷ್ಣು ಕತ್ತರಿಸಿದ್ದರಿಂದ ಆ ವೇಳೆಗಾಗಲೇ ಅವನು ಅಮೃತ ಕುಡಿದು ಅಮರತ್ವ ಪಡೆದಿದ್ದರಿಂದ ಕತ್ತರಿಸಿದ ರುಂಡ ಮುಂಡಗಳು ರಾಹು ಕೇತುಗಳಾದುವೆಂದು, ರಕ್ಕಸನ ಗುಟ್ಟನ್ನು ಬಯಲುಗೊಳಿಸಿದ ಸ್ವರ್ಗದ ದ್ವಾರಪಾಲಕರಾದ ಸೂರ್ಯಚಂದ್ರರನ್ನು ದ್ವೇಷಾರ್ಥವಾಗಿ ಆ ರಾಹು ಕೇತುಗಳು ನುಂಗುತ್ತವೆಯಾದ್ದರಿಂದ ಸೂರ್ಯ ಚಂದ್ರಗ್ರಹಣಗಳು ಆಗುತ್ತವೆ ಎಂಬ ಪರಂಪರೆಯ ಕಥೆ ಅವೈಜ್ಞಾನಿಕವಾಗಿದ್ದರೂ, ಗ್ರಹಣಗಳ ಮೇಲೆ ಜನಪದರಿಗಿದ್ದ ಬಹುಮಟ್ಟಿನ ನಂಬಿಕೆಗಳು ನಿಷಿದ್ಧ ರೀತಿಯವೇ ಆಗಿರುವುದಂತು ಸತ್ಯ. ಗ್ರಹಣ ಮತ್ತು ಭೂಕಂಪಗಳು ಅಮಂಗಲಕರ, ವಿನಾಶಸೂಚಕ ಎಂಬ ಪರಿಭಾವನೆ ಜನಜನಿತವಾಗಿರುವುದನ್ನು ಎಲ್ಲಡೆ ಕಾಣಬಹುದು. ಗ್ರಹಣವನ್ನು ಜನಪದರು ಗಂಭೀರವಾಗಿ ಪರಿಗಣಿಸಿದ್ದರ ಫಲಗಳಿವು. ಸೂರ್ಯನೆದುರು ಅವನ ಮಗ ಶನಿ ನಿಲ್ಲುವುದರಿಂದ ಸೂರ್ಯಗ್ರಹಣವಾಗುತ್ತದೆ ಎಂಬ ಕಲ್ಪನೆಯಲ್ಲಿಯೂ ತಂದೆ ಮಕ್ಕಳ ಮನಸ್ತಾಪದ ಚಿತ್ರವಿರುವಂತೆ, ಶನಿಯ ಪ್ರಾಬಲ್ಯವನ್ನು ಶನಿಯ ಸ್ವಭಾವವನ್ನು ಇದು ಚಿತ್ರಿಸುತ್ತದೆ. ಗ್ರಹಣ ಹಿಂದೆಯೇ ಹೇಳಿದಂತೆ ಭಯವನ್ನುಂಟು ಮಾಡಿರುವುದೇ ಹೆಚ್ಚು. ಆದ್ದರಿಂದಲೇ ಈ ಕಾಲದಲ್ಲಿ ಜನಪದರ ಜೀವನದಲ್ಲಿ ದೈವ ಸಂಬಂಧ ಆಚರಣೆಗಳು ಅಧಿಕವಾಗಿ ಕಾಣಿಸಿಕೊಳ್ಳುತ್ತವೆ. ಹರಕೆ ಹೊರುವುದು, ಸಿಡಿಯಾಡಿಸುವುದು, ಪವಿತ್ರ ಜಲಗಳಲ್ಲಿ ಸ್ನಾನ ಮಾಡುವುದು, ಮುಡುಪು ಕಟ್ಟುವುದು ಇತ್ಯಾದಿ ಆಚರಣೆಗಳು ಸಾಮಾನ್ಯವಾಗಿರುತ್ತದೆ. ಬಸಿರು ಹೆಂಗಸು ಗ್ರಹಣಕಾಲದಲ್ಲಿ ಹೊರಕ್ಕೆ ಬಂದರೆ ಗರ್ಭಪಾತವಾಗುತ್ತದೆ. ಇಲ್ಲವೆ ಮಗು ಸಾಯುತ್ತದೆ ಅಥವಾ ಅಂಗವಿಕಲನಾಗಿ ಹುಟ್ಟುತ್ತದೆ, ಗ್ರಹಣ ಕಾಲದಲ್ಲಿ ಊಟ ಮಾಡುವಂತಿಲ್ಲ, ಗ್ರಹಣ ಬಿಟ್ಟ ಮೇಲೆ ಸೂತಕ ತೆಗೆದು, ಮಡಿಯುಟ್ಟು ಅಡಿಗೆ ಮಾಡಿ ಊಟಮಾಡಬೇಕು, ವಸ್ತುಗಳನ್ನು ಬೋರಲಾಗಿಡಬೇಕು, ಬರಿಗಣ್ಣಿಂದ ಗ್ರಹಣವನ್ನು ನೋಡಿದರೆ ಅಂಧರಾಗುವರು. ಗ್ರಹಣದ ದಿನ ಸತ್ತ ನಕ್ಷತ್ರ ವಾರ ತಿಥಿಗಳಿಗನುಗುಣವಾಗಿ ಮನೆಯನ್ನು ತೊರೆಯಬೇಕು, ಗ್ರಹಣಕಾಲದಲ್ಲಿ ಸತ್ತ ಜೀವಿ ಪಾಪಕರ್ಮಿಯಾಗಿರುತ್ತಾನೆ, ನರಕಕ್ಕೆ ಹೋಗುತ್ತಾನೆ, ಗ್ರಹಣಕಾಲದಲ್ಲಿ ದವಸ ಧಾನ್ಯಗಳ ಮಡಕೆಗಳಿಗೆ ದರ್ಭೆ ಅಥವಾ ತುಳಸಿ ಎಲೆಯನ್ನು ಹಾಕಿಡಬೇಕು. ಇತ್ಯಾದಿ ನಂಬಿಕೆಗಳಿಗೆಲ್ಲಕ್ಕು ವೈಜ್ಞಾನಿಕ ಸತ್ಯವನ್ನು ಹುಡುಕುವುದು ಸಾಧ್ಯವಿಲ್ಲವಾದರೂ, ಇಂಥ ನಂಬಿಕೆಗಳು ಜನರ ಜೀವನ ಕ್ರಮವನ್ನು ನಿಯಂತ್ರಿಸುತ್ತಿದ್ದುದಂತು ಸುಳ್ಳಲ್ಲ.

ಮನುಷ್ಯ ಜೀವನದ ಮೇಲೆ ಸೂರ್ಯನಷ್ಟೇ ಪ್ರಬಲ ಪ್ರಭಾವವನ್ನು ಬೀರುವುದು ಮಳೆ. ಸಕಲ ಜೀವಿಗಳ ಜೀವಪೋಷಕವಾದ ಮಳೆಯ ಬಗ್ಗೆಯೂ ಕಲ್ಪನಾತ್ಮಕ ಕಥೆಗಳನ್ನು ನಂಬಿಕೆಗಳನ್ನು ಜನಪದರು ಕಟ್ಟಿದ್ದಾರೆ. ಎಲ್ಲಿ ಮಳೆ ಮತ್ತು ನೀರಿನ ವಸತಿ ಹೆಚ್ಚಿರುತ್ತದೋ ಅಲ್ಲೆಲ್ಲ ಸಂಸ್ಕೃತಿ ಅರಳಿರುವುದನ್ನು ಅಲ್ಲಿ ಬದುಕು ಸರ್ವ ಮುಖಗಳಲ್ಲಿಯೂ ಶ್ರೀಮಂತವಾಗಿರುವುದನ್ನು ಕಾಣಬಹುದು. ಜಗತ್ತಿನಾದ್ಯಂತ ಮಳೆಯನ್ನು ಕುರಿತಂತೆ ಬಗೆಬಗೆಯಲ್ಲಿ ಚಾಲ್ತಿಯಲ್ಲಿರುವ ಆರಾಧನೆಗಳು ಮಳೆಯ ಮಹತ್ವವನ್ನು ಸೂಚಿಸುತ್ತವೆ. ಭಾರತೀಯ ಪರಂಪರೆಯಲ್ಲಿ ಮಳೆಯ ಅಧಿಪತಿ ದೇವೇಂದ್ರ ಗುಡುಗು ಸಿಡಿಲು ಮಿಂಚುಗಳು ಅವನ ಆಯುಧಗಳು. ಭಾರತದಂಥ ದೇಶದಲ್ಲಿ ಕೃಷಿಯೇ ಜೀವನಕ್ಕೆ ಮುಖ್ಯ ಆಧಾರವಾದ್ದರಿಂದ ಮಳೆಯ ಬಗ್ಗೆ ಅತ್ಯಂತ ಪೂಜನೀಯ ಭಾವನೆಗಳನ್ನು ಕಾಳಜಿಗಳನ್ನು ಮೊದಲಿನಿಂದಲೂ ಜನಪದರು ವಹಿಸಿರುವುದು ಕಂಡು ಬರುತ್ತದೆ. ಆದ್ದರಿಂದ ಮಳೆ, ಮಳೆರಾಯ ನೆನಿಸಿದ್ದಾನೆ. ಪ್ರಾಕೃತಿಕ ವಿದ್ಯಾಮಾನಮಾತ್ರವಾಗಿರದೆ, ಬಂಧುವಾಗಿದ್ದಾನೆ; ರಕ್ಷಕನಾಗಿದ್ದಾನೆ. ಮಳೆ ಹನಿಗಳು ನೀರಿನ ಹನಿಗಳಾಗದೆ ಮುತ್ತುಗಳೆನಿಸುತ್ತವೆ; ಹಾಗೆ ನೋಡಿಕೊಂಡರೆ, ಯುಗಾದಿಯ ನಂತರ ಬರುವ ಹಬ್ಬಗಳು ಮುಖ್ಯವಾಗಿ ನೆಲ ಮತ್ತು ಜಲದ ಪೂಜೆಯೇ ಆಗಿವೆ. ರೈತರಿಗೆ ದೇವರಿಗಿಂತಲೂ ನೆಲ ಮತ್ತು ಜಲ ಅತಿಮುಖ್ಯವಾದುದು. ರೈತ ನೇಗಿಲು ಕಟ್ಟಿ ಊಳುತ್ತ ಮಣ್ಣನ್ನು ಹದಗೊಳಿಸುತ್ತ ಬರುವಲ್ಲಿ ಸಂಪೂರ್ಣವಾಗಿ ಮಳೆ ಬಿದ್ದು, ಭೂಮಿಯ ಮೇಲೆ ಪೈರು ನೆಡುವ ಕಾಲಕ್ಕೆ ಗೌರಿ ಮತ್ತು ಗಣೇಶನ ಹೆಸರಿನಲ್ಲಿ ನೆಲ ಮತ್ತು ಜಲದ ಪೂಜೆ ಬರುತ್ತದೆ. ಹೊಳೆಕೆರೆಯ ಪೂಜೆ ಗೌರಿ ಹಬ್ಬದಲ್ಲಿ ಕಡ್ಡಾಯವಿರುವ ಸಂಪ್ರದಾಯ ನಮ್ಮಲ್ಲಿದೆ. ಪ್ರಕೃತಿಯ ಫಲಗಳಿಂದಲೇ ಅರ್ಚಿಸಿ, ಕೆರೆಗೆ ಬಿಡುವ ಪದ್ಧತಿಯೇ ಪೂರ್ವದಲ್ಲಿ ಅನೇಕ ರೂಪಾಂತರಗಳನ್ನು ಪಡೆದುಕೊಂಡಿರುವ ಸಾಧ್ಯತೆಯಿದೆ. ಮಳೆಗಾಲದ ಆರಂಭವನ್ನು ರೈತರು ಈಶಾನ್ಯ ದಿಕ್ಕಿನಿಂದ ನಿರೀಕ್ಷಿಸುತ್ತಾರೆ. ಈಶಾನ್ಯ ದಿಕ್ಕಿನಲ್ಲಿ ಮಿಂಚಿದರೆ ಸ್ವಲ್ಪವಾದರೂ ಮೋಡವಿದ್ದರೆ ಮಳೆ ಬರುವುದು ಖಚಿತ ಎಂದು ರೈತರ ನಂಬಿಕೆ. ಆದ್ದರಿಂದಲೇ ಅದನ್ನು ದೇವಮೂಲೆಯೆಂದು ಕರೆಯುತ್ತಾರೆ. ರೈತರು ತಮ್ಮ ಕೆಲಸವನ್ನು ಆರಂಭಿಸುವುದೇ ಅಲ್ಲಿಂದ. ಮೋಡವಾಗಿದೆ ಎಂಬುದನ್ನು ಇತರ ಸೂಚನೆಗಳಿಂದ ಕಂಡುಕೊಳ್ಳುತ್ತಾರೆ. ಬಿಸಿಲು ಹೆಚ್ಚಾಗಿದ್ದರೂ ಮಳೆಯ ಸೂಚನೆಯನ್ನು ಗುರುತಿಸುತ್ತಾರೆ. ರಾತ್ರಿ ಇಬ್ಬನ್ನಿ ಬಿದ್ದರೆ ಮಳೆಯಾಗುತ್ತದೆಂದು ತಿಳಿಯುತ್ತಾರೆ. ಮೋಡದ ಪ್ರಮಾಣವನ್ನು ಅನುಸರಿಸಿ ಬದಲಾಗುವ ಆಕಾಶದ ಬಣ್ಣವನ್ನು ಗಮನಿಸಿ ಮಳೆಯ ಆಗಮನವನ್ನು ಗ್ರಹಿಸುತ್ತಾರೆ. ಚಂದ್ರನ ಸುತ್ತ ಮಂಡಲ ಬಂದರೆ, ಮಳೆಗೆ ಮುನ್ನ ಗುಡುಗು ಬಂದರೆ, ಕಾಮನ ಬಿಲ್ಲು ಕಾಣಿಸಿಕೊಂಡರೆ ಮಳೆ ಬರುವುದಿಲ್ಲ ಎಂಬುದು ಖಾತ್ರಿ ರೈತರಿಗೆ. ಒಟ್ಟಿನಲ್ಲಿ ರೈತರು ಮಳೆಯ ವಿಷಯಕವಾಗಿ ನಂಬುವ ಭಾವನೆಗಳು, ತಳೆಯುವ ಧೋರಣೆಗಳು ಬಹುಮಟ್ಟಿಗೆ ವಾಸ್ತವ ಅನುಭವಗಳೇ ಆಗಿರುವುದರಿಂದ, ವೈಜ್ಞಾನಿಕವಾಗಿಯೂ ಸರಿಯಾಗಿರುವುದೇ ಹೆಚ್ಚು. ಜೀವನಾಧಾರವಾದ ಇಂಥ ಮಳೆಗಳ ಬಗ್ಗೆ ಸ್ವಾರಸ್ಯಕಾರಕ ಆಚರಣೆ ನಂಬಿಕೆಗಳಿವೆ. ಆದರೆ ಜನಪದರ ಇಂಥ ನಿಲುವಿನಲ್ಲಿ ಆಚರಣೆ ಮತ್ತು ನಂಬಿಕೆಗಳ ನಂಟು ಅತ್ಯಂತ ತೆಳುವಾಗಿರುತ್ತವೆ. ಮಳೆಗಾಗಿ ಮಳೆಯ ಮೂಲವಾದ ಮೋಡಗಳನ್ನು ಕರೆತರಲು ಗುಡ್ಡದ ಮೇಲೆ ನಿಂತು ಕಂಬಳಿ ಬೀಸುವ, ಊರಿನವರೆಲ್ಲ ತಮಟೆ, ಕಹಳೆ ಊದುವ, ಮಳೆರಾಯನ ಸಂಕೇತವಾಗಿ ಕಪ್ಪೆ, ಕತ್ತೆ, ಹಾವುಗಳನ್ನು ಪೂಜಿಸುವ, ಕಪ್ಪೆಯನ್ನು ಬುಟ್ಟಿಯಲ್ಲಿ ಹೊತ್ತು, ನೀರು ಸುರಿದು ಮನೆ ಮನೆಗೂ ಮೆರವಣಿಗೆಯಲ್ಲಿ ತೆರಳುವ, ಮಣ್ಣಲ್ಲಿ ಮಳೆರಾಯನ ಮೂರ್ತಿ ಮಾಡಿ ತಲೆ ಮೇಲೆ ಹೊತ್ತು ನಗ್ನ ಬಾಲಕರು ಹಾಡುತ್ತ ಸಾಗುವ ಮುಂತಾದ ಆಚರಣೆಗಳು ಇವೆ.

ಕೆಲವಡೆ ರಾತ್ರಿಯಿಡೀ ರೈತರು ಬೆಟ್ಟದ ಮೇಲಿನ ದೇವತೆಗೆ ಪೂಜೆ ಸಲ್ಲಿಸಿ ಬೆಳಗಾದಾಗ ಊರು ಸೇರುತ್ತಾರೆ. ಇಲ್ಲಿ ಬೆಟ್ಟ ಮತ್ತು ಮಳೆಗಿರುವ ಸಂಬಂಧ ಸ್ಪಷ್ಟವಿದೆ. ಬೆಟ್ಟಗುಡ್ಡಗಳು ಚಲಿಸುವ ಮೋಡವನ್ನು ತಡಗಟ್ಟುವುದರಿಂದ ಮಳೆ ಬರುತ್ತದೆ ಎಂಬುದು ನಿರ್ವಿವಾದ ಸಂಗತಿಯೇ ಆಗಿದೆ. ಈ ನಂಬಿಕೆ ಪ್ರಪಂಚದೆಲ್ಲಡೆ ಕಂಡು ಬರುವುದು ಕುತೂಹಲಕರ ಮಳೆ ಬಾರದೆ ಇರುವ ಸಂದರ್ಭದಲ್ಲಂತು ಅವರ ನಂಬಿಕೆಗಳು ವಿಚಿತ್ರ ರೂಪದ ಆಚರಣೆಗಳಾಗಿ ಮಾರ್ಪಟ್ಟಿರುವುದನ್ನು ಕಾಣುತ್ತೇವೆ. ಕಪ್ಪೆ ವಟಗುಟ್ಟುವಿಕೆ ಮಳೆಯ ಆಗಮನವನ್ನು ಸೂಚಿಸುವುದರಿಂದ ಮಳೆರಾಯನ ಸಂಕೇತವೆಂದು ಅದನ್ನು ಜನಪದರು ಗ್ರಹಿಸಿ, ಮಳೆ ಬಾರದಿದ್ದಾಗ ಅದನ್ನು ಜೀವಂತವಾಗಿ ಕೊಲ್ಲುವ, ಬಿಸಿನೀರಿನಲ್ಲಿ ಬೇಯಿಸುವ, ಮಣ್ಣ ಮಳೆರಾಯನನ್ನು ಮಾಡಿ ಬಿಸಿಲಲ್ಲಿ ಒಣಹಾಕುವ, ದೇವರ ವಿಗ್ರಹವನ್ನು ರಾತ್ರಿಯಿಡಿ ನೀರಲ್ಲಿ ಮುಳುಗಿಸುವ, ಹನುಮಂತರಾಯನಿಗೆ ಕಾರ ಬಳಿವ ಮುಂತಾದ ಆಚರಣೆಗಳ ಮೂಲಕ ಮಳೆ ಬರಿಸುವ ಸನ್ನಾಹ ಮಾಡುತ್ತಾರೆ. ಇಂಥ ಹಿಂಸಾತ್ಮಕ ಕ್ರಿಯೆಯಿಂದ ರೊಚ್ಚಿಗೆದ್ದು ಮಳೆರಾಯ ಮಳೆ ಸುರಿಸಲಿ ಎಂಬುದುವರ ನಂಬಿಕೆ. ಏಕೆಂದರೆ ಜನಪದರ ದೃಷ್ಟಿಗೆ ಮಳೆರಾಯ ಸುಖದುಃಖಗಳಿಗೆ ಸ್ಪಂದಿಸಬಲ್ಲ ಜೀವಂತ ವ್ಯಕ್ತಿ. ಒಲಿದರೆ ಮಳೆ ಸುರಿಸಬಲ್ಲ ಮುನಿದರೆ ಜೀವಂತಿಕೆಯನ್ನು ಕಸಿಯಬಲ್ಲ. ಆದ್ದರಿಂದಲೇ ಮಳೆಯ ಬಗೆಗಿನ ನಂಬಿಕೆಗಳು ಪ್ರಾದೇಶಿಕವಾಗಿ ಅಂಥ ಭಿನ್ನತೆಯನ್ನು ಹೊಂದುವುದು ಕಡಿಮೆ. ಏಕೆಂದರೆ ಮಳೆಯ ನಕ್ಷತ್ರಗಳು ಮತ್ತು ಅವುಗಳ ಗುಣ ಸ್ವರೂಪಗಳು ಸಾಂಪ್ರದಾಯಿಕವಾಗಿ ಒಂದೇ ಲೆಕ್ಕಾಚಾರದಿಂದ ಬೆಳೆದು ಬಂದಂಥವುಗಳಾಗಿವೆ. “ಅತ್ತದ ಮಳೆ ಹುಯ್ದರೆ ಹೆತ್ತ ತಾಯಿ ಹಿಟ್ಟು ಕೊಡುವುದಿಲ್ಲ” ಎಂಬುದಾಗಲಿ, “ಭರಣಿ ಹುಯ್ದರೆ ಧರಣಿಗೆ ಭಾಗ್ಯ” ಎಂಬುದಾಗಲಿ, ‘ಈಚಲು ಹುಳು ಭೂಮೀಲಿ ಬಿದ್ದರೆ ಮಳೆ’ ಎಂಬುದಾಗಲಿ “ಆರಿದ್ರೆ ಇಲ್ಲಿದ್ರೆ ದರಿದ್ರ ಖಂಡಿತ” ಮಗೆ ಮಳೆ ಹುಯ್ದರೆ ಮಗೆ ಗಾತ್ರ ತೆನೆ” ಎಂಬ ಅನುಭವನದ ಮಾತುಗಳಾಗಲಿ ಅಲ್ಪಸ್ವಲ್ಪ ಬದಲಾವಣೆಯಾದರೂ ಮೂಲ ಸ್ವರೂಪದ ಉದ್ದೇಶಿತ ಕೇಂದ್ರ ಒಂದೇ ಆಗಿರುವುದನ್ನು ಗಮನಿಸಬಹುದು. ಮುನಿದ ಮಳೆರಾಯನ ಬಗ್ಗೆ ಸಿಟ್ಟೇಳುವ ಜನಪದರು ಅದರ ಅತಂತ್ರ ಬುದ್ಧಿಯನ್ನು ಹಳಿಯುತ್ತಾರೆ. ಸೂಳೆಯ ಮನೆಗೆ ಹೋಗಿ ಲೋಕವನ್ನು ಮರೆತಿದ್ದಾನೆಂದು ನಂಬಿ ಹಂಗಿಸುತ್ತಾನೆ. ಹಾಗೆಯೇ ಮಳೆ ಹುಯ್ದಾಗ ಸಂತೋಷ ಪಡುತ್ತಾರೆ. ಸಂಭ್ರಮಿಸುತ್ತಾರೆ. “ಹಾಸ್ಯಾಸಿ ಮಳೆ ಬಂದು ಬೀಸ್ಬೀಸಿ ಕೆರೆತುಂಬಿ ಬಾಸಿಂಗದಂಥ ತೆನೆ ಬಂತು” ಎಂಬ ಚಿತ್ರದಲ್ಲಿ ಸಾಂಸಾರಿಕ ಪವಿತ್ರ ಬಂಧನ-ಬಂಧುತ್ವಕ್ಕೆ ಹೆಣ್ಣಿಗೆಯಾಗುವ ಬಾಸಿಂಗದ ಪಾವಿತ್ರ್ಯಕ್ಕೆ ಮಳೆಯೇ ಕಾರಣವೆಂಬ ಜನಪದರ ನಂಬಿಕೆಯಲ್ಲಿ ಮಳೆಯ ಬಗ್ಗೆ ಇರುವ ಪೂಜ್ಯತೆಯನ್ನು ಮತ್ತು ಅನಿವಾರ್ಯತೆ ಸ್ಪಷ್ಟವಾಗುತ್ತದೆ.

ಇನ್ನು ಮಳೆಯ ಸಂಬಂಧವಾಗಿ ಕಾಣಿಸಿಕೊಳ್ಳುವ ಗುಡುಗು ಸಿಡಿಲು ಮಿಂಚು ಕಾಮನಬಿಲ್ಲು ಇತ್ಯಾದಿ ಬಗ್ಗೆಯೂ ಜನಪದರಲ್ಲಿ ವರ್ಣರಂಜಿತ ನಂಬಿಕೆಗಳಿವೆ. ಬುಡಕಟ್ಟು ಜನಾಂಗದವರು ಮಳೆ ಮತ್ತು ಗುಡುಗಿಗು ಸಂಬಂಧ ಕಲ್ಪಿಸಿದರೆ, ಚಂಡಮಾರುತ ಮತ್ತು ಗುಡುಗಿಗು ಸ್ಪರ್ಧೆ ನಡೆದು ಮಳೆ ಮತ್ತು ಗಾಳಿಯೇ ನಿಂತ ಬಗ್ಗೆ ಪುರಾಣಗಳಲ್ಲಿ ಉಲ್ಲೇಖವಿದೆ. ಪೆರುವಿಯನ್ನರ ಪಾಲಿಗೆ ಗುಡುಗು ಆಕಾಶ ದೇವತೆಯಾದರೆ ಆಫ್ರಿಕ್‌ನ್ನರ ದೃಷ್ಟಿಯಲ್ಲಿ ಸಿಡಿಲು ಹಕ್ಕಿಯ ರೆಕ್ಕೆಯ ಬಡಿತವಾಗಿದೆ. ನಮ್ಮಲ್ಲಿ ಗುಡುಗು ಅರ್ಜುನ ಬಿಟ್ಟ ಬಾಣದ ಸದ್ದು; ದೇವರು ಹೋಗುವಾಗ ನೀರು ಗಾಡಿ ಮಾಡಿದ ಶಬ್ದ; ದೇವರು ಮೋಡದ ಮೇಲೆ ತನ್ನ ರಥ ನಡೆಸುವಾಗ ಆದ ಶಬ್ದ; ಸೂರ್ಯ ಚಂದ್ರರ ರಥದ ಗಾಲಿಯ ಸದ್ದೆಂದು; ನಮ್ಮ ಜನಪದರ ಭಾವನೆ. ಕೆಲವಡೆ ಗುಡುಗು ಬಂದರೆ ಮಳೆ ಬರುತ್ತದೆ ಎಂಬ ನಂಬಿಕೆಯಿದ್ದರೆ, ಕೆಲವಡೆ ಬರುವ ಮಳೆಯನ್ನು ಗಾಳಿಯಂತೆ ಹೊತ್ತೊಯ್ಯುತ್ತದೆ ಎಂಬ ನಂಬಿಕೆಯಿದೆ. ಆದರೆ ಒಂದಂತು ನಿಜ, ಗುಡುಗಿನಿಂದ ಕಾವಿನ ಮೊಟ್ಟೆಗಳು ಕೆಡುತ್ತವೆ, ಮರಿಯಾಗುವುದಿಲ್ಲ ಎಂಬುದು ಅನುಭವವೇದ್ಯ.

ಹಾಗೆಯೇ ಸಿಡಿಲು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಕೋಪದ ದೇವರು ಕೊಡುವ ಶಿಕ್ಷಾರೂಪವಾಗಿದೆ. ಸಿಡಿಲು ಶಾಪ ಮತ್ತು ವರದ ಪ್ರತೀಕವೂ ಹೌದು. ಏಕೆಂದರೆ ಸಿಡಿಲು ಬಡಿಯುವುದರಿಂದ ವ್ಯಕ್ತಿ ಸಾಯುವುದು ಶಾಪವಾದರೆ, ಆಜೀವಕ್ಕೆ ಸ್ವರ್ಗದ ಭಾಗ್ಯ ಲಭಿಸುವುದು ವರ. ಸಿಡಿಲು ಬಡಿದು ಉಳಿದರೆ ಅಂಥವರು ಧನಿಕರಾಗುತ್ತರೆಂಬ ನಂಬಿಕೆ ಪ್ರಬಲವಾಗಿ ರೂಢಿಯಲ್ಲಿದೆ. ಆದ್ದರಿಂದ ಸಿಡಿಲು ಬಡಿದ ಜಾಗವನ್ನು ಪವಿತ್ರವೆಂದು ಪರಿಗಣಿಸುವುದೂ ಉಂಟು. ಸಿಡಿಲು ಚೊಚ್ಚಲು ಮಕ್ಕಳಿಗೆ ಹೊಡೆಯುವುದು, ಆದ್ದರಿಂದ ಅವರನ್ನು ಹೊರಗೆ ಕಳುಹಿಸಬಾರದು, ಮಳೆ ಬರುವಾಗ ಬಯಲ ಒಂಟಿ ಮರದಡಿ ನಿಲ್ಲಬಾರದು. ಮನೆ ಮುಂತೆ ಹಿತ್ತಾಳೆ ಅಥವಾ ಕಬ್ಬಿಣದ ಚೂರನ್ನು ಹಾಕಿದರೆ ಸಿಡಿಲು ಬಡಿಯದು ಎಂಬ ನಂಬಿಕೆಗಳ ಹಿಂದೆ ವೈಜ್ಞಾನಿಕ ಸತ್ಯವಿದೆ, ಅನುಭವ ಸತ್ಯವಿದೆ. ಏಕೆಂದರೆ ಸಿಡಿಲು ವಿದ್ಯುಚ್ಛಕ್ತಿಯ ಪ್ರವಾಹ. ವಿದ್ಯುತ್ ಹರಿವ ಯಾವುದೇ ವಸ್ತುವನ್ನು ಅದು ವೇಗವಾಗಿ ಬಡಿಯುತ್ತದೆ. ಆದ್ದರಿಂದ ಕರೆಂಟನ್ನು ಎಳೆದುಕೊಳ್ಳುವ ಲೋಕದ ವಸ್ತುಗಳನ್ನು ಸಿಡಿಲನ್ನು ತಡೆವ ಸಾಧನವಾಗಿ ಜನಪದರು ಬಳಸುತ್ತಿದ್ದರು. ಸಿಡಿಲಂತೆ ಮಿಂಚನ್ನು ದೈವತ್ವದ ಸಂಕೇತವಾಗಿಯೇ ಜನಪದರು ಗ್ರಹಸಿದ್ದಾರೆ. ದೇವರ ಅಗ್ನಿ ಆಯುಧವಾಗಿ ಸಿಡಿಲು ಮಿಂಚುಗಳು ಕೆಲಸ ಮಾಡುತ್ತವೆಂಬ ನಂಬಿಕೆ ಅವರದು. ಏಕೆಂದರೆ ಆಕಾಶದಲ್ಲಿ ಮಿಂಚು ಮಿಂಚಿದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮಳೆಯಾಗುತ್ತದೆ ಎಂಬ ನಂಬಿಕೆ ಕೆಲವೆಡೆ ಇದ್ದರೆ, ಕೆಲವೆಡೆ ಮಿಂಚನ್ನು ಸೃಷ್ಟಿಸುವವು ಮಾಟಗಾತಿಯರು, ದುಷ್ಟ ಪಿಶಾಚಿಗಳು, ನಮ್ಮ ಪರಂಪರೆಯಲ್ಲಿ ಅರ್ಜುನನ ಜಾಟಿಯೇಟಾಗಿಯೂ ಮಿಂಚನ್ನು ಪರಿಭಾವಿಸುವ ಪ್ರತೀತಿಯೂ ಇರುವುದನ್ನು ನೋಡಬಹುದು. ತೀಕ್ಷ್ಣತೆಯ, ವೇಗದ ಸಾದೃಶ್ಯವಾಗಿ ಮಿಂಚನ್ನು ಸಮೋಕರಿಸುವ ಜನಪದರ ಜಾಣ್ಮೆಯನ್ನು ಗಮನಿಸಬೇಕು.

ಆಕಾಶಲೋಕದಲ್ಲಿ ಮನಮೋಹಕವಾದುದು ಕಾಮನ ಬಿಲ್ಲು. ಇದನ್ನು ಇಂದ್ರಚಾಪ, ಸುರಚಾಪ ಎಂದು ಕರೆಯುವುದೂ ಉಂಟು. ಕೆಲವು ಸಂಸ್ಕೃತಿಯಲ್ಲಿ ಅತಿಮಾನುಷ ವಸ್ತುವಿದು. ಕಾಮನಬಿಲ್ಲು ಭುವಿಬಾನನ್ನು ಬೆಸೆವ ಸೇತುವೆ, ಇಂದ್ರನ ಉಯ್ಯಾಲೆ, ಮನ್ಮಥನ ಬಾಣ ಎಂಬೆಲ್ಲ ಪುರಾಣ ನಂಬಿಕೆಗಳಿವೆ. ಇವೆಲ್ಲವು ಭೋಗವನ್ನು ಪ್ರತಿನಿಧಿಸುವಂಥವೇ ಆಗಿದೆ. ಸಪ್ತವರ್ಣವನ್ನುಳ್ಳ ಕಾಮನಬಿಲ್ಲು ಕೊನೆಗೆ ಬಿಳಿಯ ವರ್ಣದಲ್ಲಿ ಏಕತೆಯನ್ನು ಸೃಷ್ಟಿಸುತ್ತದೆ. ಕಾಮನಬಿಲ್ಲು ಅತ್ಯಾಕರ್ಷಕವಾಗಿರುತ್ತದೆ. ಶೃಂಗಾರವು ಅಷ್ಟೇ ಮನುಷ್ಯರ ಬದುಕಿನಲ್ಲಿ ರಂಗು ರಂಗಿನ ಬಣ್ಣಗಳನ್ನೇ ಹೆಣೆದು ಕೊನೆಗೆ ಪ್ರೇಮ ಸಾಕ್ಷಾತ್ಕಾರದಲ್ಲಿ ಮಿಲನದಲ್ಲಿ ಏಕತೆಯನ್ನು ಸಾಧಿಸುತ್ತದೆ. ಆದರೆ ಈ ಏಕತೆಯನ್ನು ಸಾಧಿಸಲು ಆಕಾಶದಷ್ಟೇ ಹೆಣಗಬೇಕಾಗುತ್ತವೆ ಎಂಬ ಜನಪದರ ತಿಳಿವಳಿಕೆ ಮೇಲಿನ ನಂಬಿಕೆ ಕಲ್ಪನೆಗಳಿಗೆ ಹಾದಿ ಮಾಡಿಕೊಟ್ಟಿರಬೇಕು. ಕಾಮನ ಬಿಲ್ಲು ಮೂಡುವ ದಿಕ್ಕನ್ನು ನೋಡಿ ಪ್ರಯಾಣದ ಪ್ರತಿಕೂಲ ಅನುಕೂಲತೆಗಳನ್ನು ಮಳೆಯ ಮುನ್ಸೂಚನೆಯನ್ನು ಜನಪದರು ತಿಳಿದುಕೊಳ್ಳುತ್ತಿದ್ದರೆಂದು ಅವರ ನಂಬಿಕೆಗಳಿಂದ ಗೊತ್ತಾಗುವುದು. ಪಾಶ್ಚಾತ್ಯರಲ್ಲಿ ಕಾಮನಬಿಲ್ಲು ಅದೃಷ್ಟ ಇಲ್ಲವೆ ಅನಿಷ್ಟದ ಸಂಕೇತವಾಗಿರುವುದೇ ಹೆಚ್ಚು. ಇದನ್ನು ನೋಡಿದರೆ ಭಾರತೀಯ ಪರಂಪರೆಯ ಜನಪದರಲ್ಲಿ ಇರುವ ಔದಾರ್ಯ ಕೋಮಲ ನಿಲವನ್ನದು ಸೂಚಿಸುವಂತಿದೆ.

ಕೊನೆಯದಾಗಿ ಗ್ರಹ ಮತ್ತು ನಕ್ಷತ್ರಗಳ ಬಗ್ಗೆ ಹೇಳುವುದಾದರೆ ಜನಪದರ ಪಾಲಿಗೆ ಅವರೆಡೂ ಬೇರೆಯಲ್ಲ, ಚುಕ್ಕೆಗಳೇ, ಪರ್ಯಾಯವಾಗಿಯೇ ಅವರೆಡನ್ನು ಬಳಸುತ್ತಿದ್ದುದು ಕಂಡುಬರುತ್ತದೆ. ಗ್ರಹಗಳಲ್ಲಿ ಸೂರ್ಯ ಚಂದ್ರ ಶುಕ್ರ ಗ್ರಹಗಳು ಜನರಿಗೆ ಪರಿಚಿತವಾದುವು. ಸೂರ್ಯ ಚಂದ್ರರು ದೈವಸಮಾನವಾಗಿದ್ದರೆ ಶುಕ್ರ ಬೆಳ್ಳಿಚುಕ್ಕೆಯಾಗಿ, ಕಪಿಲೆಚುಕ್ಕೆಯಾಗಿ ಬೆಳಗಾಗುವುದರ ಸೂಚಕವಾಗಿ ಪರಿಚಿತನು. ಉಳಿದ ಗ್ರಹಗಳು ಚಲನಾಗತಿಯಲ್ಲಿ ಅಲ್ಪಮಟ್ಟಿಗೆ ಮಂಗಳಕರವೂ ಬಹುಮಟ್ಟಿಗೆ ಅಮಂಗಳಕಾರಕವಾಗಿಯೇ ಜನಪದರು ಕಂಡುಕೊಂಡಿದ್ದಾರೆ. ಆದರೆ ನಕ್ಷತ್ರಗಳು ಹಾಗಲ್ಲ. ಪುರಾಣ ಕಥೆಗಳ ಆಧಾರದಂತೆ ಇವೆಲ್ಲ ದಕ್ಷನ ಮಕ್ಕಳು, ಚಂದ್ರನ ಮಡದಿಯರು. ತಮ್ಮ ಸ್ವಭಾವ ಗುಣಗಳಿಗೆ ಅನುಗುಣವಾಗಿ ಹುಟ್ಟಿದ ಜೀವಿಯ ಹಣೆಬರಹವನ್ನು ನಿರ್ದೇಶಿಸುವಂಥವರಾಗಿದ್ದಾರೆ. ಉದಾ: ಮೂಲಾ ನಕ್ಷತ್ರ. ನಕ್ಷತ್ರಗಳನ್ನು ಹೆಣ್ಣಾಗಿ ಕಂಡಿರುವ ಜನಪದರ ಈ ಸ್ತ್ರೀಪರ ಧೋರಣೆಯಲ್ಲಿ ಪ್ರಕೃತಿತತ್ವದ ಚೈತನ್ಯ ಸಿದ್ಧಾಂತವಡಗಿದೆ. ಈ ನಕ್ಷತ್ರಗಳು ಇಷ್ಟೆ ಅಲ್ಲ. ಆಕಾಶದಲ್ಲಿ ಮಿನುಗುವ ಎಲ್ಲಾ ಚುಕ್ಕೆಗಳು ನಕ್ಷತರಗಳೇ ಜನಪದರಿಗೆ. ಇವೆಲ್ಲ ಪುಣ್ಯ ಚೇತನಗಳು. ಜೀವನ್ಮುಕ್ತ ಆತ್ಮಗಳು. ಹಿರಿಯರ ಈ ಆತ್ಮಗಳು ಮೇಲೆ ಮಿನುಗುತ್ತ ತಮ್ಮ ಪೀಳಿಗೆಯನ್ನು ಹರಿಸುತ್ತಿರುತ್ತವೆ ಎಂಬ ನಂಬಿಕೆ ಭಾರತೀಯ ಪರಂಪರೆಯಲ್ಲಿಯದು. ಆದ್ದರಿಂದಲೇ ಇವುಗಳ ಬಗ್ಗೆ ವಿಶೇಷ ಪೂಜ್ಯತೆ. ಆರುಂಧತಿ ನಕ್ಷತ್ರವನ್ನು, ವಧುವರರಿಗೆ ತೋರಿಸುವ ನಂಬಿಕೆಯ ಹಿಂದೆ ದಾಂಪತ್ಯ ಬದುಕಿನ ಸಾಮರಸ್ಯ ಮತ್ತು ಪಾವಿತ್ರ್ಯತೆಯನ್ನು ಗುರುತಿಸಬಹುದು. ಧ್ರುವ ನಕ್ಷತ್ರ ಸ್ಥಿರತೆಯ ಸಂಕೇತವಾಗಿ ರಾತ್ರಿಯ ದಿಕ್ಕನ್ನು ಸೂಚಿಸುವುದರೊಂದಿಗೆ ಬದುಕಿನಲ್ಲಿ ಏರಬಹುದಾದ ಔನ್ನತ್ಯಕ್ಕೆ ಸಾಕ್ಷಿಯಾಗಿದೆ. ನಕ್ಷತ್ರಗಳನ್ನು ಮುಂಡಿಟ್ಟುಕೊಂಡೇ ಜ್ಯೋತಿಷಷ್ಯಶಾಸ್ತ್ರವೇ ನಮ್ಮಲ್ಲಿರುವುದನ್ನು ಕನಸಿನಲ್ಲಿ ನಕ್ಷತ್ರಗಳ ನೋಟವನ್ನು ವಿವರಿಸುವ ಸ್ವಪ್ನ ಫಲಶಾಸ್ತ್ರಗಳಿರುವುದನ್ನು ಗಮನಿಸಿದರೆ ಸಾಕು, ಜನಪದರು ನಕ್ಷತ್ರಗಳ ಬಗ್ಗೆ ಎಂಥೆಂಥ ನಂಬಿಕೆಗಳನ್ನು ಹೊಂದಿದ್ದರೆಂದು ನಮಗೆ ಅರ್ಥವಾಗುತ್ತದೆ. ಉದಾಹರಣೆಗೆ: ನಕ್ಷತ್ರಗಳು ಮಿನುಗಿದಂತೆ ಕನಸು ಕಂಡರೆ ಸುಖಪ್ರಾಪ್ತಿ, ಉದುರಿದಂತೆ ಕಂಡರೆ ಸರ್ವನಾಶ, ಉಲ್ಕಾಪಾತವಾದಂತೆ ಕಂಡರೆ ದೇಶಕ್ಕೆ ಮಹಾಹಾನಿ, ಮನೆಯ ಮೇಲೆ ನಕ್ಷತ್ರ ಬಿದ್ದಂತೆ ಕಂಡಂತೆ ರೋಗ ಪ್ರಾಪ್ತಿ, ಗೃಹನಾಶ ಇತ್ಯಾದಿ ನಂಬಿಕೆಗಳಿವೆ. ಹೀಗೆಯೇ ನಕ್ಷತ್ರದ ಆಧಾರದ ಮೇಲೆ ಭವಿಷ್ಯ ಹೇಳುವಿಕೆಯನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಇವನ್ನು ಜನಪದರು ಎಷ್ಟರ ಮಟ್ಟಿಗೆ ನಂಬುತ್ತಾರೆಂದರೆ ಜೀವ-ಜೀವನ ಭಯ ಹುಟ್ಟುವಷ್ಟು, ಬದುಕ ಭರವಸೆಯನ್ನು ತಾಳುವಷ್ಟು.

ಅದೇನೇ ಇರಲಿ, ಆಕಾಶ ಸಂಬಂಧಿ ನಂಬಿಕೆಗಳು ಎಷ್ಟೇ ಅವೈಜ್ಞಾನಿಕವೇ ಆಗಿರಲಿ, ಮನುಷ್ಯನಲ್ಲಿ ಕುತೂಹಲವನ್ನು ಹುಟ್ಟಿಸುತ್ತ ಸೃಷ್ಟಿ ರಹಸ್ಯವನ್ನು ಭೇದಿಸುತ್ತಾ ಹೊರಟಷ್ಟು ನಿಗೂಢತೆಯನ್ನು ಉಳಿಸಿಕೊಂಡು ಮನುಷ್ಯನ ಆಸಕ್ತಿಯನ್ನು ಹೆಚ್ಚಿಸುತ್ತಿರುವುದಂತು ಇಂದಿಗೂ ಸತ್ಯ. ಹಾಗೆ ನೋಡುತ್ತಾ ಹೋದರೆ ಆಕಾಶ ಸಂಬಂಧಿ ನಂಬಿಕೆಗಳೆಲ್ಲ ಊಹೆಯ ಕಲ್ಪನೆಯ ತಳಹದಿಯ ಮೇಲೆ ನಿಂತಿರುವವೇ ಹೆಚ್ಚೆಂದು ಕ್ವಚಿತ್ತಾಗಿ ಅನುಭವದ ನೆಲಗಟ್ಟಿನ ಮೇಲೆ ನಿಂತಿರುವಂಥವೆಂದು ತಿಳಿಯಲಡ್ಡಿಯಿಲ್ಲ.

ಗ್ರಂಥ ಋಣ

೧. ಪ್ರೊ. ಹಂಪನಾಗರಾಜಯ್ಯ : ಆಕಾಶ ಜಾನಪದ, ಕಸಾಪ ಬೆಂಗಳೂರು, ೧೯೮೫.

೨. ಪ್ರೊ. ಎಂ.ಎಂ. ಕಲಬುರ್ಗಿ (ಸಂ) : ‘ಆಕಾಶ ಜಾನಪದ’ ಜಾ. ಸಾ. ದ ಭಾಗ, ೧೨, ಧಾರವಾಡ, ೧೯೯೪.

೩. ವೇ. ಬಸವಯ್ಯ ಶಾಸ್ತ್ರೀ : ‘ಸ್ತ್ರೀ ದೈವದರ್ಪಣ’ ಗದಗ, ೧೯೮೫.

೪. ಡಾ. ದೇ. ಜವರೇಗೌಡ : ಜಾನಪದ ಅಧ್ಯಯನ, ಮೈಸೂರು, ೧೯೭೬.

೫. ಮುಗಳವಳ್ಳಿ ಕೇಶವಧರಣಿ : ‘ಪಂಚಾಂಗ ಹತ್ತಿ ಉರಿದಾವ’ ಹಾಸನ, ೧೯೮೮.

೬. ಅಂಬಳಿಕೆ ಹಿರಿಯಣ್ಣ : ‘ಜಾನಪದ ಪರಿಶೋಧನ’ ಮೈಸೂರು, ೧೯೮೫.

೭. ಪ್ರೊ. ಪಾಟೀಲ ತಿರುಮಲರಾಯರು : ‘ಆಕಾಶದೊಳಗಿನ ಅದ್ಭುತ ಚಮತ್ಕಾರಗಳು’ ಧಾರವಾಡ, ೧೯೩೧.

೮. ಚಂದ್ರಶೇಖರ ಕಂಬಾರ :ಳ (ಸಂ) ‘ಕನ್ನಡ ಜಾನಪದ ವಿಶ್ವಕೋಶ’ ಭಾಗ-೧ ಮತ್ತು ೨ ಕಸಾಪ, ಬೆಂಗಳೂರು, ೧೯೮೫.
೯. ಡಾ. ಆರ್ವಿಯಸ್ ಸುಂದರಂ : ‘ಮೋಡ-ಮಿಂಚು-ಗುಡುಗು-ಸಿಡಿಲು’, ಮೈಸೂರು, ೧೯೯೫.