ಒಂದು ನಿರ್ದಿಷ್ಟ ’ವಿಷಯ’ ಅಥವಾ ವಸ್ತುವನ್ನು ಕೇಂದ್ರವನ್ನಾಗಿರಿಸಿಕೊಂಡು ಅದಕ್ಕೆ ಸಂಬಂಧಿಸಿದ ಜಾನಪದದ ಎಲ್ಲಾ ಸಾಮಗ್ರಿಗಳನ್ನು ಕಲೆಹಾಕಿ ಅಧ್ಯಯನ ಮಾಡುವುದನ್ನು ’ವಿಷಯ ನಿಷ್ಠ ಜಾನಪದ’ (Thematic Folklore) ಎಂದು ಕರೆಯಲಾಗಿದೆ. POULO DE CARVALHO – NETO ತನ್ನ ಗ್ರಂಥ “History of Tberoamerican Folklore-Mestizon Cultures (೧೯೬೯)ದಲ್ಲಿ Thematic Folklore” ಬಗೆಗಿನ ಪರಿಕಲ್ಪನೆಯನ್ನು ಈ ರೀತಿ ಕೊಟ್ಟಿದ್ದಾರೆ. ಒಂದು ’ವಿಷಯ’ ಅಥವಾ ’ವಸ್ತು’ (Theme)ವಿಗೆ ಸಂಬಂಧಿಸಿದ ಕಾವ್ಯರೂಪದ ಜಾನಪದ, ಕಥನಾತ್ಮಕ ಜಾನಪದ, ಭಾಷಿಕ ಜಾನಪದ. ಮಾಂತ್ರಿಕ ಜಾನಪದ, ಸಾಮಾಜಿಕ ಜಾನಪದ ಮತ್ತು ವಸ್ತು ಸಾಮಗ್ರಿ ರೂಪದ ಜಾನಪದ, ಇವುಗಳನ್ನು ಕಲೆಹಾಕಿ ಅಧ್ಯಯನ ಮಾಡುವುದು ವಿಷಯ ನಿಷ್ಠ ಜಾನಪದ’ದ ವ್ಯಾಪ್ತಿಯಲ್ಲಿ ಬರುತ್ತದೆ.

ವಸ್ತು-ಸಾಮಗ್ರಿ ರೂಪದ ಜಾನಪದ
ಸಾಮಾಜಿಕ ಜಾನಪದ
ಮಾಂತ್ರಿಕ ಜಾನಪದ
ಭಾಷಿಕ ಜಾನಪದ
ಕಥನಾತ್ಮಕ ಜಾನಪದ
ಕಾವ್ಯ ರೂಪದ ಜಾನಪದ
ವಿಷಯ

ಉದಾ: ತೆಂಗು

ಇಂತಹ ಅಧ್ಯಯನಗಳು ಸಾಮಾನ್ಯವಾಗಿ ’ಜಾನಪದದಲ್ಲಿ…’ ಇಂತಹದ್ದು ಎಂಬ ಹೆಸರನ್ನು ಪಡೆಯುತ್ತದೆ. ಉದಾಹರಣೆಗೆ ಜಾನಪದದಲ್ಲಿ ಕೋಳಿ, ಜಾನಪದದಲ್ಲಿ ಕಾಗೆ, ಜಾನಪದದಲ್ಲಿ ನಾಯಿ, ಜಾನಪದದಲ್ಲಿ ಹೆಣ್ಣು, ಜಾನಪದದಲ್ಲಿ ಬೆಕ್ಕು, ಜಾನಪದದಲ್ಲಿ ಕಬ್ಬಿಣ, ಇತ್ಯಾದಿ, ಇಲ್ಲಿ ವಿಷಯವು (Theme) ಒಂದು ಪ್ರಾಣಿ, ಪಕ್ಷಿ, ವಸ್ತು, ವೃತ್ತಿ, ಜಾತಿ, ಧರ್ಮ, ಪರಿಕಲ್ಪನೆ, ನಿಸರ್ಗದ ಭಾಗ, ಇಂತಹ ಯಾವುದಾದರೂ ಆಗಬಹುದು. ಆಕಾಶ ಜಾನಪದವನ್ನು ಕುರಿತು ಕರ್ನಾಟಕ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠವು ಬೆಳಗಾಂನಲ್ಲಿ ನಡೆಸುತ್ತಿರುವ ಈ ಜಾನಪದ ಗೋಷ್ಠಿಗಳು* ’ವಿಷಯನಿಷ್ಠ ಜಾನಪದದ’ದ ಬಹಳ ಸಮರ್ಪಕವಾದ ನಿದರ್ಶನಗಳಾಗಿವೆ. ಆಕಾಶ ಜಾನಪದದ ವ್ಯಾಪ್ತಿಯ ಒಳಗಡೆ ಆಕಾಶ, ಸೂರ‍್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ಗಾಳಿ, ಮೋಡ-ಮಳೆ ಇಂತಹ ವಿಷಯಗಳಿಗೆ ಸಂಬಂಧಿಸಿದ ಜಾನಪದದ ಅಧ್ಯಯನವು ಕನ್ನಡ ಜಾನಪದ ಕ್ಷೇತ್ರದಲ್ಲೆ ಬಹಳ ಮುಖ್ಯವಾದ ಕೆಲಸವಾಗಿದೆ. ನಿಸರ್ಗದ ಒಂದು ಭಾಗವಾದ ಆಕಾಶ, ಆಕಾಶದ ಅಂಗಗಳಂತೆ ಕಾಣಿಸುವ ಸೂರ‍್ಯ, ಚಂದ್ರ, ಗ್ರಹಗಳು, ನಕ್ಷತ್ರಗಳು, ವಾಯು, ಮೋಡ, ಮಿಂಚು, ಮಳೆ, ಇವುಗಳನ್ನು ಕುರಿತು ಜನಪದರು ತಮ್ಮ ಬದುಕಿನ ಬೇರೆ ಬೇರೆ ಅಭಿವ್ಯಕ್ತಿಮಾಧ್ಯಮಗಳಲ್ಲಿ ತಮ್ಮ ಕಲ್ಪನೆಗಳನ್ನು ಪರಿಕಲ್ಪನೆಗಳನ್ನು ಹರಿಯಬಿಟ್ಟಿದ್ದಾರೆ. ಜನಪದ ಹಾಡುಗಳಲ್ಲಿ, ಕಥನ ರೂಪದ ಪುರಾಣ, ಐತಿಹ್ಯ, ಜನಪದ ಕತೆಗಳಲ್ಲಿ, ಗಾದೆ ಒಗಟುಗಳಲ್ಲ, ನಂಬಿಕೆಗಳಲ್ಲಿ, ಮಾಂತ್ರಿಕ ಆಚರಣೆಗಳಲ್ಲಿ, ಧಾರ್ಮಿಕ ಆರಾಧನೆಗಳಲ್ಲಿ, ಸಾಮಾಜಿಕ ಬದುಕಿನ ವಿವಿಧ ರಂಗಗಳಲ್ಲಿ ತಾವು ಬಳಸುವ ವಿಭಿನ್ನ ಬಗೆಯ ವಸ್ತು ಸಾಮಗ್ರಿಗಳಲ್ಲಿ, ಆಕಾಶ ಕಾಯಗಳು, ಆಕಾಶ ಸಂಬಂಧಿ ಉತ್ಪನ್ನಗಳು ಕಾಣಿಸಿಕೊಳ್ಳುತ್ತವೆ.

ಜನಪದ ವ್ಯಕ್ತಿಯು ತನ್ನ ಕಲ್ಪನೆಯ ದಿಗಂತಗಳನ್ನು ವಿಸ್ತರಿಸಿ ಸುತ್ತುಮುತ್ತಲಿನ ಬದುಕನ್ನು ಪರಿಭಾವಿಸುತ್ತಾನೆ. ವಿಭಿನ್ನ ರೂಪಗಳಲ್ಲಿ ತನ್ನ ಆಲೋಚನೆಯನ್ನು ಹರಿಯ ಬಿಡುತ್ತಾನೆ. ತನ್ನ ಬದುಕಿನ ಕ್ರಿಯಾತ್ಮಕ ಅಂಶಗಳಲ್ಲಿ ಅವುಗಳನ್ನು ಬಳಸಿಕೊಂಡು ತೃಪ್ತಿಪಡುತ್ತಾನೆ.

ಡಾ. ಎಂ. ಚಿದಾನಂದಮೂರ್ತಿಯವರ ’ಪಗರಣ’ ಸಂಕಲನದಲ್ಲಿ ಅಂತರ ಶಿಸ್ತ್ರೀಯ ಅಧ್ಯಯನ : ’ಕಬ್ಬಿಣ’ದ ಒಂದು ನಿದರ್ಶನ’ ಎಂಬ ಸಂಪ್ರಬಂಧವು ಕನ್ನಡ ಜಾನಪದ ಕ್ಷೇತ್ರದಲ್ಲಿ ವಿಷಯ ನಿಷ್ಠ ಜಾನಪದದ ಅಧ್ಯಯನದ ಅಪೂರ್ವ ದರ್ಶನ. ಇಲ್ಲಿ ಡಾ. ಚಿದಾನಂದಮೂರ್ತಿಯವರು ಕಬ್ಬಿಣದ ಬಗೆಗಿನ ನಂಬಿಕೆಗಳು ಸಾಂಸ್ಕೃತಿಕ ಮಾನವ ಶಾಸ್ತ್ರ, ಭಾಷಾ ವಿಜ್ಞಾನ, ಇವು ’ಕಬ್ಬಿಣ’ದ ಬಗ್ಗೆ ಹೇಳುವ ಎಲ್ಲಾ ಮಾಹಿತಿಗಳನ್ನು ಕಲೆಹಾಕಿ, ಕಬ್ಬಿಣವೆಂಬ ಲೋಹದ ಬಗ್ಗೆ ಕೆಲವು ಅಮೂಲ್ಯವಾದ ಸಂಗತಿಗಳನ್ನು ತಿಳಿಸುತ್ತಾರೆ. ’ಕಬ್ಬಿಣದ ಬಗೆಗಿನ ವಿಭಿನ್ನ ನಂಬಿಕೆಗಳ ಹಿಂದೆ ಮನುಷ್ಯನ ಸಮಷ್ಟಿ ಮನಸ್ಸು ಕೆಲಸ ಮಾಡಿದ ಬಗೆಯನ್ನು ಗುರುತಿಸಲಾಗಿದೆ. ಈ ಅರ್ಥದಲ್ಲಿ ’ಜಾನಪದ ಶಾಸ್ತ್ರದಲ್ಲಿ ಅಂತರ ಶಿಸ್ತೀಯ ಅಧ್ಯಯನ’ ಎಂಬುದನ್ನೇ ವಿಷಯನಿಷ್ಠ ಜಾನಪದ (Thematic Folklore) ದ ಅಧ್ಯಯನ ಎಂದು ಗ್ರಹಿಸಬಹುದು.

‘ವಿಶಿಷ್ಟ ಜಾನಪದ’ (ಕನ್ನಡ ವಿಭಾಗ, ಬಿ.ಆರ್. ಪ್ರಾಜೆಕ್ಟ, ಶಿವಮೊಗ್ಗ, ಮೈಸೂರು ವಿಶ್ವವಿದ್ಯಾನಿಲಯ ಇವರು ನಡೆಸಿದ ವಿಚಾರ ಸಂಕಿರಣಗಳ ಪ್ರಬಂಧ) ಗ್ರಂಥದಲ್ಲಿನ ಪ್ರಬಂಧಗಳು ಬಹುಮಟ್ಟಿಗೆ ’ವಿಷಯನಿಷ್ಠ ಜಾನಪದ’ದ ವ್ಯಾಪ್ತಿಯಲ್ಲಿ ಬರುತ್ತವೆ. ವೃತ್ತಿ ಜಾನಪದರಲ್ಲಿ ಬೇಟೆ ಜಾನಪದ, ಕೃಷಿ ಜಾನಪದ, ಪಾಂಚಾಲ ಜಾನಪದ, ಧಾರ್ಮಿಕ ಜಾನಪದದಲ್ಲಿ ಮುಸ್ಲಿಂ ಜಾನಪದ, ಕೃಷಿ ಜಾನಪದ, ಪಾಂಚಾಲ ಜಾನಪದ, ಧಾರ್ಮಿಕ ಜಾನಪದದಲ್ಲಿ ಮುಸ್ಲಿಂ, ಜಾನಪದ, ಕ್ರೈಸ್ತ ಜಾನಪದ ಜೈನ ಜಾನಪದ ಇಂತಹ ಸಂಪ್ರಬಂಧಗಳು ಒಂದು ವೃತ್ತಿ ಅಥವಾ ಒಂದು ಧರ್ಮವನ್ನು ಕೇಂದ್ರವನ್ನಾಗಿರಿಸಿಕೊಂಡು ಅದಕ್ಕೆ ಸಂಬಂಧಿಸಿದ ವಿಭಿನ್ನ ಜಾನಪದ ಪ್ರಕಾರಗಳು ಸಾಮಗ್ರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ಮಾಡುತ್ತವೆ.

ಕನ್ನಡ ಜಾನಪದ ಕ್ಷೇತ್ರದಲ್ಲಿ ’ವಿಷಯನಿಷ್ಠ ಜಾನಪದ’ದ ದೃಷ್ಟಿಯಿಂದ ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ. ಜನಪದರ ಬದುಕಿನ ಅವಿಭಾಜ್ಯ ಅಂಗಗಳಾಗಿ ಅನೇಕ ತಲೆಮಾರುಗಳಿಂದ ಕ್ರಿಯಾತ್ಮಕವಾಗಿ ಮುಂದುವರಿದುಕೊಂಡು ಬಂದಿರುವ, ಪ್ರಾಣಿಗಳು (ದನ, ಎತ್ತು, ಎಮ್ಮೆ, ಕೋಣ, ನಾಯಿ, ಬೆಕ್ಕು, ಹಂದಿ, ಆಡು, ಕುರಿ ಇಲಿ ಹುಲಿ, ಇತ್ಯಾದಿ) ಪಕ್ಷಿಗಳಾದ (ಕೋಳಿ, ಕಾಗೆ, ಕೊಕ್ಕರೆ, ಮತ್ತು ಇತರ ಅನೇಕ ವನ್ಯ ಪಕ್ಷಿಗಳು), ಜಂತುಗಳು (ನಾಗರಹಾವು, ಇತರ ಹಾವುಗಳು ಮುಂತಾದವು) ಮೀನುಗಳು, ಸಸ್ಯಗಳು (ಮಾವು, ಹಲಸು, ತೆಂಗು, ಅಡಿಕೆ, ತಾಳೆ, ಈಚಲ, ಇತ್ಯಾದಿ). ನಿಸರ್ಗದ ಅಂಶಗಳಾದ ನೀರು (ಬಾವಿ, ಕೆರೆ, ಹೊಳೆ, ಸರೋವರ, ಸಮುದ್ರ, ಇತ್ಯಾದಿ), ಬೆಂಕಿ, ಗಾಳಿ ಇತ್ಯಾದಿ, ದೈನಂದಿನ ಬಳಕೆಯ ನೂರಾರು ವಸ್ತುಗಳು (ವೃತ್ತಿ ಸಂಬಂಧ, ಗೃಹೋಪಯೋಗಿ ಆರಾಧನೆಗೆ ಸಂಬಂಧಿಸಿದ ಇತ್ಯಾದಿ), ದೇಹದ ಅಂಗಳು (ತಲೆ, ಕಣ್ಣು, ಕಿವಿ, ಮೂಗು, ಬಾಯಿ, ಕೈ, ಕಾಲು, ಲೈಂಗಿಕ ಅಂಗಗಳು ಇತ್ಯಾದಿ) – ಈ ಪಟ್ಟಿಯನ್ನು  ಹೀಗೆ ಬೆಳೆಸುತ್ತಾ ಹೋಗಬಹುದು.

ಈ ರೀತಿಯ ’ವಿಷಯನಿಷ್ಠ ಜಾನಪದ’ದ ಅಧ್ಯಯನವು ಒಂದು ವಿಷಯ (Theme) ದ ಸ್ವರೂಪ, ನಿರ್ವಹಣೆ, ಮಾನವ ಬದುಕಿನೊಡನೆ ಇರುವ ಸಂಬಂಧ ಮತ್ತು ಸಾಧ್ಯತೆಗಳು – ಇವುಗಳನ್ನು ಅನ್ವೇಷಿಸಲು ತುಂಬಾ ಸಹಕಾರಿ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ವಿಷಯ (Theme) ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಸಾಧ್ಯವಿದ್ದರೆ ಮುಂದಿನ ಬದುಕಿಗೂ ಅನ್ವಯಿಸಿಕೊಳ್ಳಲು ’ವಿಷಯ ನಿಷ್ಠ ಜಾನಪದ’ದ ಅಧ್ಯಯನ ಮಾರ್ಗದರ್ಶಕವಾಗಬಲ್ಲದು.

ಆಕಾಶ

ಆಕಾಶವು ಭೂಮಿಯ ಮೇಲೆ ಕವುಚಿ ಇಟ್ಟಂತೆ ಕಾಣುವ ನೀಲ ವರ್ಣದ ಅರ್ಧ ಗೋಳ. ಆಕಾಶದ ಸ್ವರೂಪವನ್ನು ವಿಜ್ಞಾನದ ವಿವರಣೆಯ ಪ್ರಕಾರ ಈ ರೀತಿ ಕೊಡಬಹುದು.

ವಸ್ತುವಿನ ದೂರವನ್ನು ಕಣ್ಣುಮಿತಿಯಲ್ಲಿ ಗ್ರಹಿಸುತ್ತವೆ. ಆದುದರಿಂದಲೇ ಅತೀ ದೂರದಲ್ಲಿರುವ ಸೂರ‍್ಯ, ಚಂದ್ರ, ನಕ್ಷತ್ರಗಳು, ಆಕಾಶದ ಮೈಗೆ ಅಂಟಿಕೊಂಡಂತೆ ಕಾಣಿಸುತ್ತವೆ. ಸೂರ‍್ಯಕಿರಣ ಮತ್ತು ವಾಯು ಕಣಗಳ ಭೌತಿಕ ಪ್ರಕ್ರಿಯೆಯಿಂದಾಗಿ ಕಣಗಳು ನೀಲ ವರ್ಣವನ್ನು ಹೀರಿಕೊಳ್ಳುವುದರಿಂದ ಆಕಾಶಕ್ಕೆ ನೀಲ ವರ್ಣ ಇದ್ದ ಹಾಗೆ ಕಾಣಿಸುತ್ತದೆ. ಆಕಾಶ ಎಂಬ ವಸ್ತು ಅಥವಾ ಪದಾರ್ಥ ಇರದಿದ್ದರೂ, ಭೂಮಿ ಮತ್ತು ವಾಯು ಮಂಡಲಗಳ ಅಸ್ತಿತ್ವದಿಂದಲೂ, ಬೆಳಕು ಮತ್ತು ನಮ್ಮ ಕಣ್ಣುಗಳ ರಚನೆಯಿಂದಲೂ, ಅದು ನೀಲ ಬಣ್ಣದ ಅರ್ಧಗೋಳದ ಹಾಗೆ ಕಾಣಿಸುತ್ತದೆ. ಆಕಾಶ ಮತ್ತು ಭೂಮಿಯ ಒಂದೆಡೆ ಸಂಧಿಸಿದಂತೆ ಭಾಸವಾಗುತ್ತದೆ. ಇದರ ಕೇಂದ್ರ ವೀಕ್ಷಕ ಈ ವೃತ್ತದಿಂದ ಕೆಳಗೆ ಅವನಿಗೆ ಏನೂ ಕಾಣಿಸುವುದಿಲ್ಲ. ವೃತ್ತದ ಹೆಸರು ಕ್ಷಿತಿಜ ಅಥವಾ ದಿಗಂತ, ವೀಕ್ಷಕನಿಗೆ ಅನುಸಾರವಾಗಿ ಕ್ಷಿತಿಜವು ವ್ಯತ್ಯಾಸವಾಗುತ್ತದೆ. ಪ್ರತಿಯೊಂದು ಆಕಾಶ ಕಾಯವು ಕ್ಷಿತಿಜದ ಪೂರ್ವ ವಲಯದಲ್ಲಿ ಮೂಡಿ ಮೇಲೇರಿ, ಪಶ್ಚಿಮ, ವಲಯದಲ್ಲಿ ಮುಳುಗಿದಂತೆ ನಮಗೆ ಭಾಸವಾಗುತ್ತದೆ.

ಆಕಾಶ : ಋಗ್ವೇದ ಸೂತ್ರಗಳಲ್ಲಿ:

ಪುರುಷ ಸೂಕ್ತ: ಪುರುಷ ನಾಭಿಯಿಂದ ವಾಯು ಮಂಡಲ ಉಂಟಾಯಿತು. ಅವನ ಶಿರಸ್ಸಿನಿಂದ ಆಕಾಶ ಎದ್ದಿತು, ಅವನ ಕಾಲುಗಳಿಂದ ಭೂಮಿಯೂ, ಕಿವಿಗಳಿಂದ ದಿಕ್ಕುಗಳೂ, ಹೀಗೆ ಲೋಕಗಳು ರೂಪಗೊಂಡವು.

ದ್ಯಾವ್ಯಾಪೃಥಿವೀ:

ಆಕಾಶ ಮತ್ತು ಭೂಮಿ, ಇವರಿಬ್ಬರನ್ನು ಸ್ತೋತ್ರ ಮಾಡುವುದು ವಾಡಿಕೆ. ಇವರನ್ನು ತಂದೆ-ತಾಯಿಗಳೆಂದು ಸಂಬೋಧಿಸುವ ಕ್ರಮ ಇದೆ. ದೇವತೆಗಳು ಇವರ ಮಕ್ಕಳು. ಅವರು ಆಹಾರ ಮತ್ತು ಐಶ್ವರ್ಯದ ಪ್ರಧಾತರು:

ಈ ಇಬ್ಬರೂ -ದ್ಯಾವಾ ಪೃಥಿವಿಗಳು – ಋತುವನ್ನು ಅನುಸರಿಸುವವರು. ಎಲ್ಲರಿಗೂ ಉಪಕಾರಿಗಳು. ಧರ್ಮಪಾಲಕರು, ಒಳ್ಳೆಯ ಸೃಷ್ಟಿಗೆ ಕಾರಣರಾದ ಭೂಮಿ-ಆಕಾಶಗಳ ಮಧ್ಯದಲ್ಲಿ ನಿಯಮಾನುಸಾರವಾಗಿ ಸೂರ್ಯನು ಸಂಚರಿಸುತ್ತಾನೆ.

ತುಂಬಾ ವಿಸ್ತಾರವಾದವರೂ, ಮಹತ್ತರ ಉಳ್ಳವರೂ, ಅಸಮಾನರೂ ಆದ ತಂದೆ-ತಾಯಿಗಳು ಎಲ್ಲ ಜೀವಿಗಳನ್ನೂ ರಕ್ಷಿಸುತ್ತಾರೆ. ಹೆಮ್ಮೆ ಪಡುವ ಸುಂದರ ಸ್ತ್ರೀಯಂತೆ ಬೆಳಗುವ ಈ ಎರಡು ಲೋಕಗಳಿಗೂ ತಂದೆಯು (ವಿಶ್ವಕರ್ಮನು) ಸೌಂದರ್ಯದ ಉಡುಪನ್ನು ತೊಡಿಸಿರುತ್ತಾನೆ.

ಹೀಗೆ ಸ್ತೋತ್ರ ಮಾಡಲ್ಪಟ್ಟ ಮಹಿಮನರೇ, ಓದ್ಯಾವಾಪೃಥಿವಿಗಳೇ ನಮಗೆ ಮಹತ್ತಾದ ಯಶಸ್ಸನ್ನು ಅಪಾರವಾದ ರಾಜ್ಯವನ್ನು ಕೊಡಿರಿ. ಜನರ ಮೇಲೆ ಅಧಿಪತ್ಯವನ್ನು ಸರ್ವದಾ ವಿಸ್ತರಿಸುವಂತೆ ನಮಗೆ ಸ್ತೋತ್ರಾರ್ಹವಾದ ಶಕ್ತಿಯನ್ನು ಕೊಡಿರಿ.

ಈ ದ್ಯೌ : (ಆಕಾಶ) ದೇವತೆಯನ್ನು ಭೂಮಿಯೊಡನೆ ದ್ವಂದ್ವದೇವತೆಯಾಗಿ ಹೊಗಳಲಾಗಿದೆ. ಆರು ಸೂಕ್ತಗಳಲ್ಲಿ ದ್ಯೌ: ಮತ್ತು ಭೂಮಿಯ ದ್ವಂದ್ವವನ್ನು ಪ್ರಪಂಚದ ತಂದೆ  ತಾಯಿಗಳೆಂದು ವರ್ಣಿಸಲಾಗಿದೆ. ರಾತ್ರಿಯ ನಕ್ಷತ್ರಗಳಿಂದ ಶೋಭಾ ಯಮಾನವಾದ ಆಕಾಶವನ್ನು ಮುತ್ತಿನ ಮಾಲೆಗಳಿಂದ ಶೋಭಿಸುವ ಕುದುರೆಯಂತೆ ಎಂದು ವರ್ಣಿಸಲಾಗಿದೆ. ಇನ್ನೊಬ್ಬ ಋಷಿಯು, ಆಕಾಶದಲ್ಲಿ ತೋರುವ ಮಿಂಚಿನ ಮಾಲೆಯನ್ನು ’ಆಕಾಶದ ಅಗಳಿ’ ಎಂದು ಹೇಳಿದ್ದಾನೆ. ಮತ್ತೊಬ್ಬನು, ಮೋಡಗಳಿಂದ ಮುಚ್ಚಲ್ಪಟ್ಟ ಆಕಾಶವನ್ನು ನಗುವ ರೀತಿಯಲ್ಲಿ ಕಾಣುತ್ತದೆ ಎಂದಿದ್ದಾರೆ. (ಮಿಂಚು ಸೇರಿದ್ದಾಗ).

ಆಕಾಶ :ತತ್ವ ಶಾಸ್ತ್ರದಲ್ಲಿ:

ಆಕಾಶ ಮತ್ತು ಇತರ ನಾಲ್ಕು ದ್ರವ್ಯಗಳು (ಪೃಥ್ವಿ: ಆಪ್; ತೇಜಸ್ ; ವಾಯು) ಸೇರಿ ಭೂತಗಳು ಎನಿಸಿಕೊಂಡಿವೆ. ಇವುಗಳಲ್ಲಿ ಕೊನೆಯ ನಾಲ್ಕು ಮೂಲ ಮತ್ತು ಆನುಷಂಗಿಕ ಎಂಬ ಎರಡು ರೂಪಗಳಲ್ಲಿ ಇರುತ್ತದೆ. ಆಕಾಶವು ಮಾತ್ರ ಒಂದೇ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ; ಅನಂತ ರಹಿತವಾದದ್ದು, ಆದ್ದರಿಂದ ಅಉದ ಇತರ ಭೂತಗಳ ಸಾಕ್ಷ್ಯಾತಿಸೂಕ್ಷ್ಮವಾದ ಪರಮಾಣುಗಳು ಮಾಡುವಂತೆ ಯಾವುದನ್ನು ಉತ್ಪತ್ತಿ ಮಾಡುವುದಿಲ್ಲ.

ಆಕಾಶ ಕಾಯಗಳು ವ್ಯಾಪಿಸಿರುವ ಮತ್ತು ಅವುಗಳನ್ನು ಒಳಗೊಂಡ ಸಮಗ್ರ ಪ್ರದೇಶದ ಹೆಸರು ವಿಶ್ವ (Universe). ಈ ವಿಶ್ವದಿಂದ ಸಕಲ ಕಾಯಗಳನ್ನೂ ತೆಗೆದರೆ ದೊರೆಯುವ ಪ್ರದೇಶವನ್ನು ವಿಶಾಲಾರ್ಥದಲ್ಲಿ ’ಆಕಾಶ’ (Space) ಅಂತರಿಕ್ಷ ಎಂದೂ ಕರೆಯುತ್ತಾರೆ. ಆದ್ದರಿಂದ ಆಕಾಶವೆಂದರೆ ಶೂನ್ಯ ಪ್ರದೇಶ (ಬಯಲು) ಎಂದು ಅರ್ಥವಾಗುತ್ತದೆ.

ಆಕಾಶ: ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ:

ಪಾಶ್ಚಾತ್ಯ ತತ್ವಶಾಸ್ತ್ರದಲ್ಲಿ ಭೌತವಸ್ತುವಿಗೆ ಆಶ್ರಯವಾದದ್ದೆ ’ಆಕಾಶ’ ಅಥವಾ ’ಅವಕಾಶ’ (Space) . ಪ್ಲೇಟೋ ಆಕಾಶವನ್ನು ’ಒಂದು ಸಂಪುಟ’ (Receptacle)  ಎನ್ನುತ್ತಾನೆ. ಅದು ಅಮೂರ್ತವಾದದ್ದು, ಖಾಲಿಯಾದದ್ದು, ಅದನ್ನು ಶೂನ್ಯ ಎನ್ನುತ್ತಾರೆ. ಅರಿಸ್ಟಾಟಲನ ಪ್ರಕಾರ ಆಕಾಶವು ನಿರಾಆರವಾದ ಶೂನ್ಯವಲ್ಲ. ಅದು ಅನಂತವೂ ಅಲ್ಲ. ಅದು ಮಿತಿಯುಳ್ಳದ್ದು, ಭೌತವಸ್ತುವನ್ನು ಬಿಟ್ಟು ಆಕಾಶವಿಲ್ಲ. ಆಕಾಶವನ್ನು ಬಿಟ್ಟು ಭೌತ ವಸ್ತುವಿಲ್ಲ (ಶ್ರೀಧರಾಚಾರ‍್ಯನ ’ಜಾತಕ ತಿಲಕ’ದಲ್ಲಿ).

ಸೂರ‍್ಯ ಸಿದ್ಧಾಂತ

ಬ್ರಹ್ಮನಿಗೆ ಸೃಷ್ಟಿಸುವ ಇಚ್ಛೆಯಾದ ಕೂಡಲೇ ಆತನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ತೇಜೋರೂಪಿಯಾದ ಸೂರ್ಯನೂ ಹುಟ್ಟಿದರು. ಸೂರ್ಯನು ತೇಜೋ ರೂಪಿ, ಚಂದ್ರನು ಜಲರೂಪಿ, ಅನಂತರ ಮನಸ್ಸಿನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿದಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿ, ಈ ಕ್ರಮದಲ್ಲಿ ಪಂಚಭೂತ ಸೃಷ್ಟಿಯಾದ ಮೇಲೆ ಇವುಗಳಿಂದ ಕುಜ, ಬುಧ, ಗುರು, ಶುಕ್ರ, ಶನಿ, ಈ ಐದು ಗ್ರಹಗಳ ಸೃಷ್ಟಿ ಆಗಿದೆ.

ಪದ್ಮ ಪುರಾಣ: ಅಷ್ಟ ಮೂರ್ತಿಗಳಾದ ಭವ, ಶರ್ವ, ಈಶಾನ, ಶಿವ, ಪಶು ಪತಿ, ಭೀಮ, ಉಗ್ರ ಮಹಾದೇವರ ಸ್ವರೂಪಗಳಾಗಿ ಸೂರ್ಯ, ನೀರು, ಭೂಮಿ, ಬೆಂಕಿ, ಗಾಳಿ, ಆಕಾಶ, ದೀಕ್ಷಿತ, ಚಂದ್ರ ಈ ಎಂಟೂ ಇವೆ.

ಜಾತಕ ತಿಲಕ: ಆಕಾಶದಲ್ಲಿ ಎರಡು ತಾರಾಗ್ರಹಗಳು ದಕ್ಷಿಣೋತ್ತರ ಒಂದೇ ರೇಖೆಯಲ್ಲಿದ್ದು, ಅಂತರ ಕಡಿಮೆಯಾಗಿದ್ದಾಗ ಆ ಗ್ರಹಗಳಿಗೆ ಪರಸ್ಪರ ಯುದ್ಧವಾಗುತ್ತದೆ. ಸಾಮಾನ್ಯವಾಗಿ ಇದರಲ್ಲಿ ಉತ್ತರದಲ್ಲಿ ಕಾಂತಿಯಿಂದ ಕೂಡಿರುವುದು ಜಯ ಪಡೆದ ಗ್ರಹ. ಕಾಂತಿ ಕಡಿಮೆಯಾಗಿ ದಕ್ಷಿಣದಲ್ಲಿರುವುದು ಸೋತ ಗ್ರಹ.

ಜ್ಯೋತಿಃ ಶಾಸ್ತ್ರದಲ್ಲಿಬರುವ ಶಬ್ದಗಳಿಗೆ ಅರ್ಥ:

ಆಕಾಶ-ಸೊನ್ನೆ, ಅಂತರಿಕ್ಷ-ಸೊನ್ನೆ, ಖ-ಸೊನ್ನೆ, ಗಗನ-ಸೊನ್ನೆ.

ಆಕಾಶ : ಜೈನ ಧರ್ಮದಲ್ಲಿ:

ಆಕಾಶವು ಜೀವನ, ಪುದ್ಗಲ, ಧರ್ಮ, ಕಾಲ ಈ ದ್ರವ್ಯಗಳಿಗೆ ಸ್ಥಾನವಾಗಿದೆ. ದ್ರವ್ಯಗಳಿಗೆ ಅವಕಾಶ ಒದಗಿಸಿ ಕೊಡುವುದೇ ಆಕಾಶದ ಕಾರ್ಯವಾಗಿದೆ. ಇದು ಅಮೂರ್ತವಾಗಿದೆ. ಆದ್ದರಿಂದ ಧರ್ಮಾದಿ ದ್ರವ್ಯಗಳು ಏಕತ್ರವಾಗಿ ನಿಲ್ಲಲಿಕ್ಕೆ ಯಾವ ತರದ ವಿರೋಧವೂ ಇರುವುದಿಲ್ಲ. ಆಕಾಶವು ನಿತ್ಯ, ವ್ಯಾಪಕ ಹಾಗೂ ಅನಂತವಾಗಿದೆ. ಇದರಲ್ಲಿ ಲೋಕಾಕಾಶ, ಅಲೋಕಾಕಾಶ ಎಂದು ಎರಡು ಪ್ರಕಾರಗಳು. ಲೋಕಾಕಾಶದಲ್ಲಿಯೇ ಉಳಿದ ಐದು ದ್ರವ್ಯಗಳು ಇರುತ್ತವೆ. ಲೋಕಾಕಾಶವನ್ನು ಬಿಟ್ಟು ಹೊರಗೆ ಜೀವವು ಹೋಗಲಾರದು ಯಾಕೆಂದರೆ ಅಲ್ಲಿ ಧರ್ಮ, ಅಧರ್ಮ ದ್ರವ್ಯಗಳು ಇರುವುದಿಲ್ಲ. ಅವು ಗತಿ ಹಾಗೂ ಸ್ಥಿತಿಗಳಿಗೆ ಸಹಾಯಕವಾಗಿದೆ. ಆಕಾಶವು ಸ್ವತಃ ಗತಿ ಮತ್ತು ಸ್ಥಿತಿಗಳಿಗೆ ಮಾಧ್ಯಮವಾಗಲಾರದು. ಒಂದು ವೇಳೆ ಹಾಗಾಗಿದ್ದರೆ

೧) ಅಲೋಕಾಕಾಶವು ಇರುತ್ತಿರಲಿಲ್ಲ.

೨) ಸಿದ್ಧರಿಗೆ ಮುಕ್ತಿ=ಸ್ಥಿತಿ ಇರುತ್ತಿರಲಿಲ್ಲ.

೩) ಜಗತ್ತು ಸೀಮಾರಹಿತವಾಗುತ್ತಿತ್ತು.

೪) ಅದಕ್ಕೆ ಸ್ಥಿರತೆ ಇರುತ್ತಿರಲಿಲ್ಲ.

ಆಕಾರ : ಬೌದ್ಧ ದರ್ಶನದಲ್ಲಿ:

ಇದು ನಿರ್ವಿಶೇಷ, ಅನಂತ, ನಿತ್ಯ, ಸರ್ವ, ವ್ಯಾಪಕವಾದ ಸತ್ತಾತ್ಮಕವಾದ ಪದಾರ್ಥವಾಗಿರುತ್ತದೆ. ಇದಕ್ಕೆ ರೂಪವಿರುವುದಿಲ್ಲ. ಇದು ಭೌತಿಕ ವಸ್ತುವಿಲ್ಲ. ಆದರೆ, ಸ್ವತಂತ್ರ ಸತ್ತಾತ್ಮಕವಾದ ಪದಾರ್ಥವಾಗಿರುತ್ತದೆ. ಆವರಣಭಾವವೇ ಆಕಾಶದ ಅಂಗವಾಗಿರುತ್ತದೆ, ಸ್ವರೂಪವಲ್ಲ.

ಆಕಾಶ : ಶಬ್ದರೂಪಗಳು : ಸಂಸ್ಕೃತದಲ್ಲ ಆಕಾಶಕ್ಕೆ ಪರ್ಯಾಯ ಪದಗಳು:

ನಭಃ ಮರುದ್ವರ್ತ್ಮ, ವಿಯತ್, ವಿಹಾಯ, ತಾರಾಪಥ, ಪುಷ್ಕರಂ, ಅಂತರಿಕ್ಷಂ, ವ್ಯೋಮ, ಅಂಬರಂ, ವಿಷ್ಣು ಪದಂ, ಖಂ, ದ್ಯಾ:, ವಿಹಾಯಸ: ಗಗನಂ, ದ್ಯು: ಅಭ್ರ, ಅನಂತ, ಸುರವರ್ತ್ಮ, (ನಾಕ), ಮೇಷಾಧ್ವ.

ಆಕಾಶ ಪದದ ನಿಷ್ಪತ್ತಿ : (೧) ಅ-ಕಾಶ:- ಎಲ್ಲಾ ದಿಕ್ಕಿನಿಂದಲೂ ಪ್ರಕಾಶಿಸುವಂತಹುದು. (೨) ಅವಕಾಶ-ಆಕಾಶ (?)

ಆಕಾಶ ಪದದ ಅರ್ಥ: ಗಗನ, ಬಾನು, ಸ್ಥಳ, ಇಂಬು, ಬೆಳಕು, ನಿರ್ಮಲತ್ವ, ತೂತು, ಶೂನ್ಯ (ಸೊನ್ನೆ)

ಆಕಾಶ ಪದವುಳ್ಳ ಸಂಯುಕ್ತ ಶಬ್ದಗಳು:

ಆಕಾಶ ಗಂಗೆ, ಆಕಾಶ ಗರುಡ ಬಳ್ಳಿ, ಆಕಾಶಗಾಮಿ, ಆಕಾಶಗೂಡು, ಆಕಾಶದೀಪ ಆಕಾಶಬಾಣ (ರಾಕೆಟ್), ಆಕಾಶಲಿಂಗ (ಶಿವ), ಆಕಾಶ ಬಿಲ್ಲು (ಕಾಮನಬಿಲ್ಲು), ಆಕಾಶ ವಾಣಿ.

ಪುರಾಣ ಕಾವ್ಯಗಳಲ್ಲಿ ಸಿಗುವ ಅಶರೀರವಾಣಿಯನ್ನು ಆಕಾಶವಾಣಿ ಎನ್ನುತ್ತಿದ್ದರು. ಅದು ಆಕಾಶದ ಕಡೆಯಿಂದ ಅಂದರೆ ಮೇಲಿನಿಂದ ಕೇಳಿಸುತ್ತಿತ್ತು ಎನ್ನುವ ಕಾರಣದಿಂದ ರೇಡಿಯೋವಿಗೆ ಕನ್ನಡದಲ್ಲಿ ’ಆಕಾಶವಾಣಿ’ ಎಂಬ ಹೆಸರು ಬಳಕೆಯಾಗಿದೆ. ಪ್ರಾಚೀನ ಪದಗಳು ಆಧುನಿಕ ಸಂದರ್ಭಗಳಲ್ಲಿ ಹೊಸ ಅರ್ಥಗಲ್ಲಿ ಬಳಕೆಯಾಗುವುದಕ್ಕೆ ಇದು ನಿದರ್ಶನ.

ದ್ರಾವಿಡ ಭಾಷೆಗಳಲ್ಲಿ :
ಕನ್ನಡ : ಬಾನ್‌-ಬಾನ
ತಮಿಳು : ವಾನ್-ವಾನಂ
ತೆಲುಗು: ವಾನ
ತುಳು : ಬಾನೊ

ಕನ್ನಡದಲ್ಲಿ ಆಕಾಶದ ತದ್ಭವವಾಗಿ ಆಗಸ ಎಂಬ ರೂಪವಿದೆ. ಎಲರ್ವಟ್ಟೆ, ಅಲೆರ್ವಟ್ಟೆ, ಸಗ್ಗಿಗವಟ್ಟೆ ಎನ್ನುವ ಪದಗಳು ಬಾನ್ ಎನ್ನುವ ಅರ್ಥದಲ್ಲಿ ದೊರೆಯುತ್ತವೆ.

ಜಗತ್ತಿನ ಜಾನಪದದಲ್ಲಿ ಆಕಾಶ ಮತ್ತು ಆಕಾಶವಾಸಿಗಳಲ್ಲಿನ ಕುರಿತು ನಂಬಿಕೆಗಳು:

ನಾರ್ತ ಅಮೇರಿಕನ್ ಜನಾಂಗದ ಪುರಾಣಗಳಲ್ಲಿ : ಮೊತ್ತ ಮೊದಲು ಎಲ್ಲ ಜನರೂ ಆಕಾಶದಲ್ಲಿ ವಾಸಿಸುತ್ತಿದ್ದರು. ಅವರಲ್ಲಿ ಒಬ್ಬಳು ತರುಣಿ ಒಂದು ತೂತಿನ ಮೂಲಕ ಕೆಳಗೆ ಬಿದ್ದಳು. ಆ ಕೆಗಳಿನ ಜಾಗವು ಭೂಮಿಯಾಯಿತು.

ಒಬ್ಬಳು ಅಮರಳಾದ ತರುಣಿಯು ಒಂದು ನಕ್ಷತ್ರವನ್ನು ಮದುವೆಯಾಗಿ ಆಕಾಶದಲ್ಲಿ ಜೀವಿಸುತ್ತಾಳೆ. ಒಂದು ದಿನ ಅವಳು ಆಕಾಶದ ಒಂದು ತೂತು ಅಥವಾ ಕಿಂಡಿಯಿಂದ ಇಣುಕುತ್ತಾಳೆ. ಆಗ ಭೂಮಿಯು ಅವಳಿಗೆ ಗೋಚರಿಸುತ್ತದೆ. ಇದರಿಂದಾಗಿ ಮುಂದೆ ಆಕೆ ಅನೇಕ ತೊಂದರೆಗಳಿಗೆ ಸಿಲುಕುತ್ತಾಳೆ. ಇನ್ನೊಂದು ನಂಬಿಕೆಯ ಪ್ರಕಾರ ಜಗತ್ತಿನ ಪ್ರಳಯದ ಸಂದರ್ಭದಲ್ಲಿ ಹಕ್ಕಿಗಳು ಆಕಾಶಕ್ಕೆ ಜೋತುಬೀಳುತ್ತವೆ. ಆದ್ದರಿಂದ ಅವುಗಳ ಬಾಲದ ಗರಿಗಳು ಬಣ್ಣವನ್ನು ತಾಳಿದುವು.

‘ಜುನಿ’ ಜನಾಂಗದ ಒಂದು ನಂಬಿಕೆಯ ಪ್ರಕಾರ ಆಕಾಶವು ಭೂಮಿಯ ಮೇಲೆ ಬೋರಲಾಗಿ ಇಟ್ಟ ಬೋಗುಣಿಯಂತೆ ಇರುವ ಘನ ರೂಪದ ಒಂದು ಕಲ್ಲಿನ ಹೊದಿಕೆ. ಅನೇಕ ಜನಾಂಗಗಳಲ್ಲಿ ಆಕಾಶವು ಸತ್ತವರು ನೆಲೆಸುವ ಸ್ಥಳ ಎಂಬ ನಂಬಿಕೆಯಿದೆ. ಭಾರತೀಯ ಪರಂಪರೆಯಲ್ಲಿ ಸ್ವರ್ಗ ನರಕಗಲ ಕಲ್ಪನೆಯಂತೆ ಸ್ವರ್ಗವು ಭೂಮಿಯ ಮೇಲಿನ ಲೋಕ. ನರಕವು ಭೂಮಿಯ ಕೆಳಗಿನ ಲೋಕ (ಪಾತಾಳ ಲೋಕ). ’ಆಕಾಶ’ ಮತ್ತು ’ಸ್ವರ್ಗ’ ಇವು ಸಮಾನಾರ್ಥಕವಾಗಿ ಪ್ರಯೋಗವಾಗುತ್ತವೆ. ಎರಡೂ ಅನೂಹ್ಯ ಲೋಕಗಳು. ದಕ್ಷಿಣ ಕ್ಯಾಲಿಫೋರ್ನಿಯಾ ಮತ್ತು ಜುನಿ, ಷೀಮಾ, ಮೊಹವೆ, ಯಾಮ ಜನಾಂಗಗಳ ಪುರಾಣಗಳ ಪ್ರಕಾರ-ಆಕಾಶವು ತಂದೆಯೆಂಬ ಪರಿಕಲ್ಪನೆ ಇದೆ.

ಮೂಲದಲ್ಲಿ ಮಾನವ ಜನಾಂಗದ ತಾಯಿಯಾದ ಭೂಮಿ ಮತ್ತು ತಂದೆಯಾದ ಆಕಾಶ ಒಟ್ಟು ಸೇರಿದ್ದುವು. ಆ ಬಳಿಕ, ಆಕಾಶವನ್ನು ಮೇಲಕ್ಕೆ ತಳ್ಳಿ, ಭೂಮಿಯಲ್ಲಿ ಮಾನವ ಜನಾಂಗಕ್ಕೆ ಇರಲು ಅವಕಾಶ ಕಲ್ಪಿಸಲಾಯಿತು.

ಸ್ಮಿತ ಥಾಮ್ಸನ್ ಅವರ ಗ್ರಂಥದಲ್ಲಿ ಆಕಾಶಕ್ಕೆ ಸಂಬಂಧಿಸಿದ ಆಶಯಗಳ ಪಟ್ಟಿಯಿದೆ. ಭಾರತೀಯ ಮತ್ತು ಕನ್ನಡ ಜಾನಪದಕ್ಕೆ ಸಂಬಂಧಿಸಿದ ಆಶಯಗಳು:

೧ ಆಕಾಶ ತಂದೆ ಮತ್ತು ಭೂಮಿ ತಾಯಿ : ಎ ೬೨೫

೨ ಮಕ್ಕಳು ಆಕಾಶಕ್ಕೆ ತಪ್ಪಿಸಿಕೊಂಡು ಗುಡುಗು ಆಗುತ್ತಾರೆ  : ಎ ೧೧೪೨.೩

೩ ಆಕಾಶವು ಸತ್ತದರ ರಾಜ್ಯ : ಇ ೪೮೧.೮

೪ ಭೂಮಿ ಮತ್ತು ಆಕಾಶದ ಮದುವೆ : ಟಿ ೧೨೬.೩

೫ ಆಕಾಶದಿಂದ ಸ್ವತಂತ್ರವಾಗಿ ನೇತಾಡುವುದು : ಎ ೬೫೨.೨

೬ ಮರವು ಆಕಾಶದವರೆಗೆ ವ್ಯಾಪಿಸಿರುವುದು : ಎಫ್. ೫೪.೧

೭ ಆಮೆಯು ಯಾಕೆ ಆಕಾಶದ ಕಡೆಗೆ ನೋಡುತ್ತದೆ?: ಎ ೨೩೫೧.೫

೮ ಆಕಾಶ ಲೋಕದ ಹೆಣ್ಣು ಭೂಮಿಯ ಲೋಕದ ಗಂಡನ್ನು ಮದುವೆಯಾಗುವುದು : ಟಿ ೧೧೧.೨

೯ ಆಕಾಶದಿಂದ ಭೂಮಿಗೆ ಬಿದ್ದ ಹೆಣ್ಣು ಎ ೨೧.೧

೧೦ ಅಂತರಿಕ್ಷದಲ್ಲಿ ಮನೆ : ಎಚ್. ೧೦೭೭

೧೧ ಆಕಾಶದಲ್ಲಿ ಎಷ್ಟು ನಕ್ಷತ್ರಗಳಿವೆ ಎಂಬ ಪ್ರಶ್ನೆ : ಎಚ್ ೭೦೫.೩

೧೨ ಆಕಾಶದಿಂದ ಬಂದ ಕುಳ್ಳರು : ಎಫ್. ೨೦೫

೧೩ ಮಾಂತ್ರಿಕ ಹಾಡಿನಿಂದ ಮರವು ಆಕಾಶಕ್ಕೆ ಏರುವುದು : ಡಿ ೧೫೭೬.೧

೧೪ ಆಕಾಶದಲ್ಲಿರುವ ಪಾತ್ರೆಯಿಂದ ಮಳೆ ಬರುವುದು : ಎ ೧೧೩೧.೪

ಕನ್ನಡ ಜನಪದದಲ್ಲಿ ಆಕಾಶ : . ಜನಪದ ಹಾಡುಗಳಲ್ಲಿ:

ಆಕಾಶ ಚಪ್ಪರ ಮಾಮೇರು ಮಂಟಪ
ಲೋಕಲೋಕಾದಿಂದ ನಿಬ್ಬಾಣ್ಣ ಬರಲಿ
ಬೇಕಾದ ಕನ್ಯಕ ಕಲ್ಪವೃಕ್ಷದ ಕಂಬ
ಭೂಕಾಂತೆಯರು ಸಾಸ್ವಿಯ ತಳಿರೇ
ಕಲ್ಯಾಣ ಗಿರಿಜಾ ಕಲ್ಯಾಣ || ಕಲ್ಯಾಣ ||

[1]

ಭೂಮಿ ದೇವಿ ನಿನ್ನ ಮಗಳೆಲ್ಲಿ ಹೋದಳು
ನೀನರಿಯದ ಸ್ಥಳವಿಲ್ಲ
ಹೋಗಬಹುದೇ ಜಗಜಗದಾ ಅಗ್ನೀಲಿ
ಹೋಗಬಹುದೇ ಗಗನವನು
ಹೋಗಬಹುದೇ ಗಗನದಗಲದುರಿಯ ನಂ
ಮೃಗ ಬೈಲಿಗಾಯ್ತಲ್ಲೋತಮ್ಮ ||೧೦|| (ರಾಮಾಯಣದ ಕಥೆಗಳು)[2]

ಆಕಾಶ ನೆಂಬೋದು ಇಲ್ಲಿಗೆ ಕಾಣೋದಿಲ್ಲ
ನರರಿಲ್ಲ, ನರರ ಸುಳುವಿಲ್ಲದ ಲೋಕಕ್ಕೆ
ಮಗಳೆ ಸಿರಿಗೌರಿ ಮನಸಾದಾ ||೧೫||
ಆಕಾಶವೆಂಬೋದು ಇಲ್ಲಿಗು ಕಾಣುತೀತೆ
ನರರುಂಟು ನರರ ಸುಳಿವುಂಟು-ಹಡೆದಮ್ಮ
ಹ್ಯಂಗಿದ್ದರು ನನ್ನ ಕೊಡಬೇಕು ||೧೬||[3] (ಶಿವಕಥೆಗಳು ಪಾರ್ವತಿ ತಪಸ್ಸು ಮಾಡಿದ್ದು)

ಆಡುವ ಗೌರಿಯ ಆಕಾಶಕ್ಕೆ ಕಳುವ್ಯಾಳು
ಓಡಿ ಬಂದಾಳು ಅರಮನೆಗೆ –ಚನ್ನವ್ವ
ತಾಯಿಯ ನೋಡಿ ಮರುಗ್ಯಾಳು ||೪೭೦||[4] (ಶಿವಶರಣಿ ಚನ್ನಮ್ಮ)

ಅಂಬಾರದಡವ್ಯಾಗ ರಂಬೆ ಒಬ್ಬಳೈದಾಳೆ
ಭಾಮ್ಯಾಳ ನೋಡಿ ಬರಬೇಕು-ಹಂಗಂದೆ
ಮಣ್ಣ ಬಸವಣ್ಣ ನುಡಿದಾನು ||೪೭೭||[5] (ಶಿವಶರಣೆ ಚೆನ್ನವ್ವ)

ರಂಭೇನ ಚನ್ನವ್ವ ಕೈಯಾಗೆ ದಂಡೇ ಹಿಡಿದು
ಬೀಸಿ ಗಗನಕ್ಕೆ ಒಗೆದಾಳು-ದಂಡೇಯ
ರಂಭೇ ಕುರುಹೆಂದು ನುಡಿದಾಳು ||೮೩೭||[6] (ಶಿವರಣೆ ಚೆನ್ನವ್ವ)

ಹತ್ತಿಹತ್ತಿತು ಈ ಕೋಟೆ ಚಕ್ರದಿಮ್ಮನ ಕೋಟೆ
ಹತ್ತಿತ್ತು ಈ ಕೋಟೆ ಗಗನಾಕೆ : ತಮ್ಮಾಜಮ್ಮನ
ಒಪ್ಪದ ಮಗನ ಬಸಿರಾಲಿ:
ಏರಿ ಏರೀತು ಈ ಕೋಟೆ ದಾರಿದಿಮ್ಮನ ಕೋಟೆ
ಏರಿತು ಈ ಕೋಟೆ ಗಗನಾಕೆ ತಿಮ್ಮ ಜಮ್ಮನ
ಮೋಹದ ಮಗನ ಬಸಿರಾಲೆ  : (ಏರಿತು ಕೋಟೆ ಗಗನಾಕೆ: ೨)[7]

(ಚಿತ್ರಕಲ್ಲು ಮದಕರಿ -ಜಾನಪದ ಗೀತೆಗಳು : ಸಂ. : ಕ. ರಾ. ಕೃ-ಪು.೬)

ಆಕಾಶವೇನೆಂದು ಹತ್ತಿ ನೋಡಿದಿರಿಲ್ಲಾ
ಭೂಮಿತಾಯಲ್ಲಿ ಗುಡುಗುಟ್ಟು ತಾಳೇ ಕೋಲೆ….
(ಪಂಥದಲಿ ಗೆದ್ದಲ್ಲೋ ಪ್ರೌಢರಣಧೀರ – ೨೫)

ಚಿತ್ರಕಲ್ಲು ಮದಕರಿ -ಜಾನಪದ ಗೀತೆಗಳು : ಸಂ. : ಕ. ರಾ. ಕೃ-ಪು.೭೯)[8]

ಆಕಾಶರಾಯನ ಅಳಿಯನೆಂಬುವನಿನವೆ
ಆಕಾಶರಾಯನ ಮಗಳು ಪದ್ಮಾವತೀ ಕೊಡ್ದವನೆ
ಬಕಳೇನು ಕಳುಹಿಸಿ-ಅಮ್ಮಾನ
ಪದ್ಮವತೀ ಗೆದ್ದವನೆ (ಏಳು ಶ್ರೀನಿವಾಸ-೮)

(ಗೃಹಿಣೀ ಗೀತೆಗಳು (ಸಂ.:೨) ಸಂ: ಮಲೆಘುಟ ಕೃಷ್ಣಮೂರ್ತಿ: ಪು. ೧೧೧.)[9]

ಆಕಾಶರಾಯನು ಅನೇಕ ಸಂಭ್ರಮದಿಂದ
ಮಗಳು ಅಳಿಯನ ನೋಡಿ ಹರುಷ ಪಟ್ಟು
ವರನ ಪೂಜೇ ಮಾಡಿ ಮನೆಗೆ ಕರೆದು ತಮದರು
ಪಾದಗಳ ತೊಳೆದು ಆಕಾಶರಾಯ : (ಶ್ರೀನಿವಾಸ ಕಲ್ಯಾಣ – ೨೧೩)[10]

(ಗೃಹಿಣೀ ಗೀತೆಗಳು (ಸಂ.:೨) ಸಂ: ಮಲೆಘುಟ್ಮ ಕೃಷ್ಣಮೂರ್ತಿ: (ಪು. ೬೦೬.)

ಆಕಾಸದಲ್ಲಿ ಸೋರಿಕೆದಂಗಿರುವೋಳೆ
ಕೆಣಕಿದರಕ್ಕಿ ಉದುರೋಳೆ
ಕೆಣಕಿದರಕ್ಕಿ ಉದರೋ ಹೊಂಬಾಳೆಯ
ನಿಸ್ತ್ರೆ ತಂದಿಡಿದಿರೆ ಕಳಸಾಕೆ : ೧೨: (ಗಂಗೆಯ ಬಳಿಕಳಸ ಪೂಜಿಸುವಾಗ)[11]

(ಸೋಬಾನೆ ಚಿಕ್ಕಮ್ಮನ ಪದಗಳು : ಸಂ: ಎಚ್.ಎಲ್. ನಾಗೇಗೌಡ-ಪು-೪)

ಆಕಾಸದ ಮ್ಯಾಲೆ ಕ್ಯಾಸಕ್ಕಿ ತೊಳಸೋಳೆ
ಈ ಸುರನ ಮಡದಿ ಗಿರಿಜಮ್ಮ
ಈ ಸುರನ ಮಡದಿ ಗಿರಿಜಮ್ಮ ಕಾಲಲ್ಲಿ
ಕ್ಯಾಸಕ್ಕಿಯಂತೆ ಕಿರಿಪಿಲ್ಲ್ಯೋ: ೪೮: (೨ ಶಾಸ್ತ್ರದ ಬತ್ತ ಕುಟ್ಟುವಾಗ)[12]

ಅಂಬಾರದಲ್ಲಿ ಹಾರ್ಯೋಡೊ ರಂಗೀನ ಮಯ್ಯವನೆ
ಮೈಯೆಲ್ಲ ಕೆಂಪು ಮಕ ಬಳದು : ಗರುಡಾಳಗೆ
ದೊರೆಗಳು ಕೈಯೆತ್ತಿ ಮುಗುದಾರೆ : ೧೧೩: (ಧರ್ಮಾರದ ಪದಗಳು) [13]

ಮೇಲಿನ ಕನ್ನಡ ಜನಪದ ಹಾಡುಗಳನ್ನು ಗಮನಿಸಿದಾಗ ಆಕಾಶವನ್ನು ಕುರಿತು ಜನಪದದ ಪರಿಕಲ್ಪನೆಗಳ ಪರಿಚಯವಾಗುತ್ತದೆ. ಮದುವೆಗೆ ಆಕಾಶವೇ ಚಪ್ಪರ ಎನ್ನುವಲ್ಲಿ ಚಪ್ಪರದ ವೈಶಾಲ್ಯವನ್ನು ಆಕಾಶದ ಔನ್ನತ್ಯವನ್ನು ಸೂಮೀಕರಿಸಲಾಗಿದೆ. ಆಕಾಶವು ಬಹಳ ದೂರದ ಸ್ಥಳ, ಅಲ್ಲಿಗೆ ಹೆಣ್ಣು ಕೊಡಲು ಹಿಂಜರಿಯುವ ಕಲ್ಪನೆ ’ಗೌರಮ್ಮನ ಮದುವೆ’ ಹಾಡಿನಲ್ಲಿ ಸಿಗುತ್ತದೆ. ಆಕಾಶದಲ್ಲಿ ಅರಮನೆಯ ಕಲ್ಪನೆಯು ’ಶಿವಶರಣೆ ಚೆನ್ನವ್ವ’ ಎಂಬ ಹಾಡಿನಲ್ಲಿದೆ. ’ಏಳು ಶ್ರೀನಿವಾಸ’ ಕವನದಲ್ಲಿ ಆಕಾಶ ರಾಯನ ಮಗಳು ಪದ್ಮಾವತಿ ಶ್ರೀನಿವಾಸನನ್ನು ಮದುವೆಯಾಗುವ ಪೌರಾಣಿಕ ಕತೆಯಿದೆ. ಗಂಗೆ ಮತ್ತು ಗಿರಿಜ, ಆಕಾಶದ ಮೇಲೆ ಈಶ್ವರನ ಜೊತೆಗೆ ವಾಸಿಸುವವರು ಎಂಬ ವಿವರಣೆ ಮೇಲಿನ ಹಾಡುಗಳಲ್ಲಿದೆ.*      ಜನೆವರಿ ೩೦ ಮತ್ತು ೩೧, ೧೯೮೫. ೧೨ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ವಿಚಾರಗೋಷ್ಠಿಗಳು, ಬೆಳಗಾಂ.

[1]      ಗೀತೆಗಳು (ಸಂಪುಟ-೧ ಸಂ. ಮತಿಘಟ್ಟ ಕೃಷ್ಣಮೂರ್ತಿ ಪು. ೩೯೪.

[2]      ”                      ”                                              ಪು. ೬೬೪.

[3]      ”                      ”                                              ಪುಟ. ೭೪೩.

[4]       ”                      ”                              ”              ಪುಟ ೯೨೯.

[5]       ”                      ”                              ”              ಪುಟ ೯೫೪.

[6]

[7]      ಚಿತ್ರಕಲ್ಲು ಮದಕರಿ – ಜಾನಪದ ಗೀತೆಗಳು – ಸಂ. ಕ. ರಾ.ಕೃ. ಪು. ೬.

[8]      ”                      ”                              ”              ಪುಟ ೭೯.)

[9]      ಗೃಹಣೀ ಗೀತೆಗಳು (ಸಂಪುಟ ೩) -ಸಂ. ಮತಿಘಟ್ಟ ಕೃಷ್ಣಮೂರ್ತಿ ಪು. ೧೧೧

[10]     ”                      ”                              ”              ಪು. ೬೦೬.

[11]     ಸೋಬಾನೆ ಚಿಕ್ಕಮ್ಮನ ಪದಗಳು – ಸಂ. ಎಚ್.ನಾಗೇಗೌಡ, ಪು. ೪.

[12]     ”                      ”                              ”              ಪು.೯

[13]     ಸೋಬಾನೆ ಚಿಕ್ಕಮ್ಮನ ಪದಗಳು – ಸಂ. ಎಚ್.ಎಲ್. ನಾಗೇಗೌಡ ಪು.೧೧೨.