ಈಗ ನಾವು ಬಳಸುವ ವೈಜ್ಞಾನಿಕ ಚಿಕಿತ್ಸಕ ಪದ್ಧತಿಯನ್ನು ಆಲೋಪತಿ ಅಥವಾ ಇಂಗ್ಲೀಷ್ ಔಷಧಿ ಪದ್ಧತಿ ಎಂದು ಕರೆಯುತ್ತೇವೆ. ಇದೆಲ್ಲ ಇತ್ತೀಚೆಗೆ ಅಂದರೆ 19ನೇ ಶತಮಾನದಿಂದ ಈಚೆಗೆ ನಡೆದ ವೈಜ್ಞಾನಿಕ ಸಂಶೋಧನೆಗಳಿಂದ ಬೆಳೆದು ಬಂದದ್ದು. ಆದರೆ ಇದಕ್ಕೂ ಮೊದಲು ಜಗತ್ತಿನ ಪ್ರತಿಯೊಂದು ದೇಶವೂ, ಜನಾಂಗವೂ ತನ್ನದೇ ಆದ ಚಿಕಿತ್ಸಕ ಪದ್ಧತಿಯನ್ನು ಕಂಡುಹಿಡಿದು ಬೆಳೆಸಿತು. ಭಾರತದಲ್ಲಿ ಆಯುರ್ವೇದದ ಜೊತೆಗೇ ಗ್ರೀಕೋ-ಅರೇಬಿಕ್ ಪದ್ಧತಿಯಾದ ಹಿಂದೂ ಯುನಾನಿ ಮುಂತಾದ ಔಷಧಿಗಳು ಕೂಡಾ ಬಳಕೆಗೆ ಬಂದವು. ಇವುಗಳನ್ನು ನಾವು ಸಾಮಾನ್ಯವಾಗಿ ಪರ್ಯಾಯ ಚಿಕಿತ್ಸಕ ಪದ್ಧತಿಗಳು ಎಂದು ಹೇಳುತ್ತೇವೆ. ಇಂತಹುದೇ ಒಂದು ಪದ್ಧತಿ ಚೈನಾದಲ್ಲಿ ಕೂಡಾ ಸಾವಿರಾರು ವರ್ಷಗಳ ಹಿಂದೆ ಕಂಡುಹಿಡಿಯಲ್ಪಟ್ಟಿದ್ದು, ಈಗಲೂ ಬಳಕೆಯಲ್ಲಿದೆ. ಅದೇ ಆಕ್ಯುಪಂಕ್ಚರ್.

ಸೂಜಿ ಚಿಕಿತ್ಸೆ

ಆಕ್ಯುಪಂಕ್ಚರ್ ಪದ್ಧತಿಯಲ್ಲಿ ಯಾವುದೇ ಔಷಧಿಯನ್ನು ನೀಡಲಾಗುವುದಿಲ್ಲ. ಬದಲಾಗಿ ದೇಹದ ಕೆಲವು ನಿರ್ದಿಷ್ಟ ಬಿಂದುಗಳ ಮೇಲೆ ತೆಳುವಾದ ಸೂಜಿಯನ್ನು ಚುಚ್ಚುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಸೂಜಿ ಚುಚ್ಚುವುದರಿಂದ ಹೇಗೆ ರೋಗ ಪರಿಹಾರ ಆಗುತ್ತದೆ ಎನ್ನುವ ಪ್ರಶ್ನೆ ಸಹಜ. ಈ ಚಿಕಿತ್ಸೆ ಒಂದು ವಿಶಿಷ್ಟ ಅರಿವಿನ ಆಧಾರದ ಮೇಲೆ ಬೆಳೆಸಿಕೊಂಡು ಬಂದಿರುವಂತಹುದಾಗಿದೆ. ಅದರ ಪ್ರಕಾರ, ಜಗತ್ತಿನ ಎಲ್ಲ ಜೀವಿಗಳಲ್ಲಿ ಅತ್ಯಂತ ಸೂಕ್ಷ್ಮವಾದ ಶಕ್ತಿಯು ಪ್ರವಹಿಸುತ್ತಿರುತ್ತದೆ. ಇದನ್ನು ಭಾರತೀಯರು ‘ಪ್ರಾಣ’ ವಾಯು ಎಂದು ಕರೆದರೆ, ಚೀನಿಗಳು ಅದನ್ನು ‘ಖೀ’ ಎಂದು ಕರೆಯುತ್ತಾರೆ. (ಇದು ಕಲ್ಲುಗಳಂತಹ ನಿರ್ಜೀವ ವಸ್ತುಗಳಲ್ಲಿಯೂ ಪ್ರವಹಿಸುತ್ತದೆ ಎನ್ನುತ್ತಾರೆ. ಆದ್ದರಿಂದಲೇ ಕೆಲವು ಶಿಲೆಗಳನ್ನು ಆಭರಣವಾಗಿ, ರೋಗ ಪರಿಹಾರಕ್ಕಾಗಿ ಧರಿಸುತ್ತಾರೆ.) ಇದು ಸಾಮಾನ್ಯವಾಗಿ ಉಸಿರಿನ ಮತ್ತು ಆಹಾರದ ಮೂಲಕ ಜೀವಿಯ ಒಳಗೆ ಹೋಗುತ್ತದೆ ಮತ್ತು ಜೀವಿಯನ್ನು ಎಲ್ಲ ರೋಗ-ರುಜಿನಗಳಿಂದ ಕಾಪಾಡುತ್ತದೆ. ಎಲ್ಲಿಯವರೆಗೆ ಈ ಪ್ರಾಣ ಶಕ್ತಿಯು ದೇಹದ ಎಲ್ಲಾ ಅಂಗಗಳಲ್ಲೂ ಸಮರ್ಪಕವಾಗಿ ಹರಿಯುತ್ತಿರುತ್ತದೆ, ಅಲ್ಲಿಯವರೆಗೆ ಜೀವಿ ಸಂಪೂರ್ಣ ಆರೋಗ್ಯವಾಗಿರುತ್ತಾನೆ. ಆದರೆ ಯಾವುದಾದರೂ ಒಂದು ಅಂಗಕ್ಕೆ ಅದು ಹರಿಯುವುದು ನಿಂತುಹೋದಾಗ ಆ ಅಂಗದಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಹೀಗೆ ನಿಂತುಹೋಗುವ ಪ್ರಾಣಶಕ್ತಿಯನ್ನು ಪುನಃ ಪ್ರವಹಿಸುವಂತೆ ಮಾಡುವುದಕ್ಕೆ ಆಕ್ಯುಪಂಕ್ಚರ್ ಸೂಜಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಸೂಜಿ ಚಿಕಿತ್ಸೆ ಅಕ್ಯುಪಂಕ್ಚರ್ ಬಿಂದುಗಳನ್ನು ಉದ್ದೀಪಿಸುವ ಮೂಲಕ ದೇಹ ಸ್ವತಃ ಗುಣಪಡಿಸಿಕೊಳ್ಳುವಂತೆ ಮಾಡಲಾಗುತ್ತದೆ.

ಪ್ರಾಣ ಶಕ್ತಿ ದೇಹದಲ್ಲಿ ಪ್ರವಹಿಸುವುದು ಯಾಕೆ ನಿಂತು ಹೋಗುತ್ತದೆ ಎಂದರೆ ಅದಕ್ಕೆ ಅನೇಕ ಕಾರಣಗಳಿವೆ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಅನೇಕ ವಿಷಪದಾರ್ಥಗಳು, ಮತ್ತು ಹಾನಿಕಾರಕ ರಾಸಾಯನಿಕಗಳು ಈ ಶಕ್ತಿಯ ಸರಳ ಹರಿವಿಗೆ ಅಡೆತಡೆ ಉಂಟುಮಾಡುತ್ತವೆ. ನಮಗೆಲ್ಲ ಗೊತ್ತಿರುವಂತೆ ದೇಹದಲ್ಲಿ ವಿಷಪದಾರ್ಥಗಳು ಉತ್ಪತ್ತಿಯಾಗುವುದಕ್ಕೆ ನಮ್ಮ ಋಣಾತ್ಮಕ ಭಾವನೆಗಳಾದ ಭಯ, ಆತಂಕ ಮತ್ತು ಒತ್ತಡಗಳು ಕಾರಣವಾಗಿರುತ್ತವೆ. ಇವಲ್ಲದೇ ಅನೇಕ ಮನೋದೈಹಿಕ ಸಮಸ್ಯೆಗಳೂ ಕಾರಣವಾಗುತ್ತವೆ. ಮತ್ತೆ ಈ ‘ಖೀ’ ಶಕ್ತಿಯ ಹರಿವು ದೇಹದಲ್ಲಿ ಆಗುವಂತೆ ಮಾಡುವುದಕ್ಕೆ ಅನೇಕ ಹಂತಗಳನ್ನು ಅನುಸರಿಸುತ್ತಾರೆ. ದೇಹದಲ್ಲಿನ ಕೆಲವು ನಿರ್ದಿಷ್ಟ ಬಿಂದುಗಳಲ್ಲಿ ಸೂಜಿಗಳಿಂದ ಚುಚ್ಚುತ್ತಾರೆ. ಆಗ ಅಲ್ಲಿ ಶೇಖರಗೊಂಡ ತಡೆಗಳು ಒಡೆದು ಮತ್ತೆ ಶಕ್ತಿಯ ಪ್ರವಾಹ ಆರಂಭವಾಗುತ್ತದೆ.

ಇತಿಹಾಸ

ಆಕ್ಯುಪಂಕ್ಚರ್ ಚಿಕಿತ್ಸಕ ಪದ್ಧತಿಯ ಇತಿಹಾಸ ಸ್ಪಷ್ಟವಿಲ್ಲ. ಆದರೆ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಇದರ ಬಳಕೆಯಿದ್ದುದರ ಕುರಿತು ಚೀನಾದಲ್ಲಿ ದಾಖಲೆಗಳು ದೊರೆತಿವೆ. ಕೆಲವು ದೀರ್ಘಕಾಲದ ಹಾಗೂ ಚಿಕಿತ್ಸೆಯಿಲ್ಲದ ರೋಗಗಳಿಂದ ಬಳಲುತ್ತಿದ್ದ ಸೈನಿಕರು ಯುದ್ಧದಲ್ಲಿ ಬಾಣಗಳಿಂದ ಗಾಯಗೊಂಡ ನಂತರದಲ್ಲಿ ತಮ್ಮ ದೇಹದಲ್ಲಿ ರೋಗದ ಲಕ್ಷಣಗಳು ಮಾಯವಾದುದನ್ನು ಕಂಡುಕೊಂಡರಂತೆ ಎಂಬ ದಂತಕತೆ ಕೂಡಾ ಇದೆ. ಎರಡನೇ ಶತಮಾನದ ನಂತರ ಇದು ಜಪಾನ್, ಥೈವಾನ್ ಮುಂತಾದ ದೇಶಗಳಿಗೆ ಸಾಗಿತು. ಹತ್ತನೇ ಶತಮಾನದ ಹೊತ್ತಿಗೆ ಆಕ್ಯುಪಂಕ್ಚರ್ ಕುರಿತು ಅನೇಕ ಪುಸ್ತಕಗಳು ಬರೆಯಲ್ಪಟ್ಟವು. ಆದರೆ ಆನಂತರದಲ್ಲಿ ಅದು ಅಷ್ಟೇನೂ ಗೌರವಯುತವಾದ ಚಿಕಿತ್ಸಾ ಪದ್ಧತಿಯಾಗಿ ಉಳಿಯಲಿಲ್ಲ. ಹದಿನಾರನೇ ಶತಮಾನದ ಹೊತ್ತಿಗೆ ಚೀನಾಗೆ ಬಂದ ಪೋರ್ಚುಗೀಸರು ಈ ಪದ್ಧತಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕೊಂಡೊಯ್ದರು. ಆದರೆ ಆ ಸಮಯದಲ್ಲಿ ಇದು ಚೀನಾದಲ್ಲಿಯೇ ಕೆಳವರ್ಗದವರ ಮತ್ತು ಅಶಿಕ್ಷಿತರ ಚಿಕಿತ್ಸಾ ಪದ್ಧತಿಯಾಗಿ ಉಳಿದಿತ್ತು. ಇದರ ಪರಿಣತರು ಕಡಿಮೆಯಾಗಿದ್ದು ಮತ್ತು ಇದು ಕೆಳವರ್ಗದವರ ಚಿಕಿತ್ಸೆಯಾಗಿದ್ದು ಈ ಚಿಕಿತ್ಸಾ ಪದ್ದತಿಯ ಹಿನ್ನೆಡೆಗೆ ಕಾರಣವಾಯಿತು. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಅದು ಪೂರ್ಣವಾಗಿ ಹಿನ್ನೆಡೆ ಅನುಭವಿಸಿದ್ದು, 1822 ರಲ್ಲಿ ಚೀನಾದ ಸಾಮ್ರಾಟ ಅದನ್ನು ಇಂಪೀರಿಯಲ್ ಅಕಾಡೆಮಿ ಆಫ್ ಮೆಡಿಸಿನ್ನಲ್ಲಿ ಕಲಿಸುವುದನ್ನು ಮತ್ತು ಚಿಕಿತ್ಸೆ ನೀಡುವುದನ್ನು ನಿಷೇಧಿಸಿದ. ಯೂರೋಪಿನಲ್ಲಿ ಇದು ಹಲವರ ಮೆಚ್ಚಿಗೆಗೂ, ಇನ್ನು ಹಲವರ ತಿರಸ್ಕಾರಕ್ಕೂ  ಒಳಗಾಯಿತಾದರೂ ಇದರ ಕುರಿತಾದ ಹೆಚ್ಚಿನ ಅಧ್ಯಯವಾಗಲೀ, ಪ್ರಯೋಗಗಳಾಗಲೀ ನಡೆಯಲಿಲ್ಲ.

ಇನ್ನು ಆಧುನಿಕ ಯುಗದಲ್ಲಿ ಚೀನಾದಲ್ಲಿ ನಡೆದ ಕ್ರಾಂತಿಗಳು ಮತ್ತು ಕಮ್ಯೂನಿಸಂನ ಬೆಳವಣಿಗೆಯ ನಂತರದಲ್ಲಿ ಚೀನಾದ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳು ಅವಹೇಳನಕ್ಕೆ ಒಳಗಾದವು. ಏಕೆಂದರೆ ಕಮ್ಯೂನಿಸ್ಟರ ‘ಪ್ರಗತಿಪರ’ ಮತ್ತು ‘ವೈಜ್ಞಾನಿಕ’ ಸಿದ್ಧಾಂತಗಳಿಗೆ ಇವುಗಳು ಮೂಢ, ಹಿಂದುಳಿದ ಹಾಗೂ ತರ್ಕಸಮ್ಮತವಲ್ಲದ್ದಾಗಿ ಕಂಡುಬಂದವು. ಆದರೆ ಕೊನೆಗೆ ಕಮ್ಯೂನಿಸ್ಟ್ ಪಕ್ಷದ ಅಧ್ಯಕ್ಷ ಮಾವೋತ್ಸೆ ತುಂಗ್ ಇದಕ್ಕೆ ವಿರುದ್ಧವಾಗಿ, “ಚೀನಾದ ಸಾಂಪ್ರದಾಯಿಕ ಚಿಕಿತ್ಸೆ ಮತ್ತು ಔಷಧ ಪದ್ಧತಿಗಳು ಮಹತ್ತರ ಆಸ್ತಿಯಾಗಿದ್ದು, ಅವುಗಳನ್ನು ಸಂಶೋಧಿಸುವ ಮತ್ತು ಉನ್ನತ ಮಟ್ಟಕ್ಕೆ ಏರಿಸುವ ಪ್ರಯತ್ನ ಮಾಡಬೇಕಿದೆ” ಎಂದು ಹೇಳಿದ.

1950 ರ ದಶಕದಲ್ಲಿ ಮಾವೋನ ನಾಯಕತ್ವದ ಅಡಿಯಲ್ಲಿ ಆ ಕಾಲದ ಚೀನಾದ ಜನ ಸಮುದಾಯದ ಚಿಕಿತ್ಸೆಯ ಅಗತ್ಯಗಳಿಗೆ ತಕ್ಕಂತೆ ಆಕ್ಯುಪಂಕ್ಚರ್ ಅನ್ನು ಪುನರುಜ್ಜೀವನಗೊಳಿಸಲಾಯಿತು.

1972 ರಲ್ಲಿ ಅಮೇರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಚೀನಾಗೆ ಭೇಟಿ ನೀಡಿದಾಗ ಅಮೇರಿಕಾದಲ್ಲಿ ಆ‍ಯ್‌ಕ್ಯುಪಂಕ್ಚರ್ ಬಗ್ಗೆ ಆಸಕ್ತಿ ಬಂದಿತು. ಈ ನಿಯೋಗದ ಜೊತೆ ಇದ್ದ ಜೇಮ್ಸ್ ರೆಸ್ಟನ್ ಎಂಬ ವರದಿಗಾರ ಆಕ್ಯುಪಂಕ್ಚರ್ ಚಿಕಿತ್ಸೆ ಪಡೆದುಕೊಂಡು ಅದರ ಬಗ್ಗೆ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಬರೆದಾಗ ಅದಕ್ಕೆ ದೊಡ್ಡ ಪ್ರಚಾರ ದೊರೆಯಿತು. ಮೊದಲು ಆಕ್ಯುಪಂಕ್ಚರ್ ಅನ್ನು ಅನಾಸ್ಥೆಟಿಕ್ ಆಗಿ (ಅಂದರೆ ದೇಹದಲ್ಲಿ ಯಾವುದೇ ಸ್ಪರ್ಶ-ಸ್ಪಂದನವನ್ನು ತಡೆಯುವ) ಬಳಸಲಾಗುತ್ತಿತ್ತು. ಆದರೆ ವೈಜ್ಞಾನಿಕ ವೈದ್ಯ ಪದ್ಧತಿ ಬೆಳೆದ ಮೇಲೆ ಇದು ಹಿನ್ನಡೆ ಅನುಭವಿಸಿತು.

ಋಷಿಗಳು ಪರ್ಯಾಯ ಔಷಧಿಯ ಜನಕರು

ಇಂಗ್ಲೀಷ್ ಔಷಧಿಯು ವೈಜ್ಞಾನಿಕ ಪ್ರಯೋಗಗಳ ಮೂಲಕ ಕಂಡುಹಿಡಿದುದಾದರೆ ಈ ಪರ್ಯಾಯ ಔಷಧ ಪದ್ಧತಿಗಳು ಋಷಿಗಳಿಂದ ಕಂಡುಹಿಡಿಯಲ್ಪಟ್ಟವು. ಪ್ರಾಚೀನ ಕಾಲದಲ್ಲಿ ಜನರು ಅನೇಕ ರೀತಿಯ ರೋಗಗಳಿಗೆ ಒಳಗಾಗುತ್ತಿದ್ದಾಗ, ಈ ಋಷಿಗಳು ದೀರ್ಘಕಾಲದ ತಪಸ್ಸಿನಲ್ಲಿ ಲೀನರಾಗಿ, ಈ ರೋಗಗಳಿಗೆ ಮತ್ತು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರಂತೆ. ಇಂತಹ ಸಂಗತಿಗಳನ್ನು ಮೌಢ್ಯವೆಂದು ಸುಲಭದಲ್ಲಿ ತಳ್ಳಿಹಾಕಲು ಬರುವುದಿಲ್ಲ, ಏಕೆಂದರೆ ವಿಜ್ಞಾನ ಇತ್ತೀಚೆಗೆ ಗುರುತಿಸಿರುವ ನಮ್ಮ ದೇಹದೊಳಗಿನ ನರವ್ಯೂಹದ ಕುರಿತು, ಬೇರೆ ಬೇರೆ ಅಂಗಗಳು ಮತ್ತು ಅವುಗಳ ಚಟುವಟಿಕೆಗಳ ಕುರಿತು ಪ್ರಾಚೀನ ಜನರಿಗೆ ಗೊತ್ತಿತ್ತು. ಆ ಜ್ಞಾನವೇ ಅವರಿಗೆ ಈ ಚಿಕಿತ್ಸೆಯನ್ನು ಕೈಗೊಳ್ಳಲು ಸಹಕಾರಿಯಾಯಿತು.

ಆಕ್ಯುಪಂಕ್ಚರ್ ಚಿಕಿತ್ಸೆಯ ತತ್ವದ ಪ್ರಕಾರ ‘ಖೀ’ ಶಕ್ತಿ ದೇಹದಲ್ಲಿ ಅನೇಕ ಕಾರ್ಯಗಳನ್ನು ನಡೆಸುತ್ತದೆ. ದೇಹದಲ್ಲಿ ರಕ್ತ ಮುಂತಾದ ದ್ರವಗಳು ಸಮರ್ಪಕವಾಗಿ ಹರಿಯುವಂತೆ ಮಾಡುವುದು, ದೇಹಕ್ಕೆ ಅನ್ಯವಾದ ರೋಗತರುವ ಅಂಶಗಳಿಂದ ರಕ್ಷಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತದೆ. ಈ ದೇಹದಲ್ಲಿ ಈ ಕಾರ್ಯಗಳು ಸಮರ್ಪಕವಾಗಿ ಸಾಗಲು, ಈ ಶಕ್ತಿ ದೇಹದ ಅಂಗಾಂಶ, ಸ್ನಾಯು, ಮೂಳೆಗಳಿಗೆ ನಿರಂತರವಾಗಿ ದೊರಕುತ್ತಿರಬೇಕಾಗುತ್ತದೆ. ಮತ್ತು ಈ ಶಕ್ತಿ ಒಂದು ನಿರ್ದಿಷ್ಟ ಮೆರಿಡಿಯನ್ ಜಾಲದ ಮೂಲಕ ಸಾಗುತ್ತಿರುತ್ತದೆ. ಈ ಮೆರಿಡಿಯನ್‌ಗಳು ದೇಹದ ಅಂಗಗಳಿಗೆ ಸಂಪರ್ಕ ಹೊಂದಿರುತ್ತವೆ. ಆಕ್ಯುಪಂಕ್ಚರ್ ಬಿಂದುಗಳು ಈ ಮೆರಿಡಿಯನ್‌ಗಳ ಮೇಲೆ ನಿರ್ದಿಷ್ಟ ಸ್ಥಳಗಳಲ್ಲಿ ಇರುತ್ತವೆ. ಮತ್ತು ಕೆಲವು ಈ ಮೆರಿಡಿಯನ್‌ಗಳ ಹೊರಗೂ ಇರುತ್ತವೆ. ಆದರೆ ವಿಜ್ಞಾನದ ಯಾವುದೇ ಸಂಶೋಧನೆಗಳು ಈವರೆಗೆ ದೇಹದಲ್ಲಿ ‘ಖೀ’ ಅಥವಾ ಮೆರಿಡಿಯನ್‌ಗಳ ಅಸ್ತಿತ್ವವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.

ಚೀನಾದ ವಿವಿಧ ಸಾಂಪ್ರದಾಯಿಕ ಔಷಧಿ ಪದ್ಧತಿಗಳಲ್ಲಿಯೂ ರೋಗವನ್ನು ಈ ‘ಖೀ’ ಶಕ್ತಿಯ ಹರಿಯುವಿಕೆಯಲ್ಲಿ ಉಂಟಾದ ಅಸಮತೋಲನ ಎಂದೇ ಗ್ರಹಿಸಲಾಗುತ್ತದೆ. ಈ ಅಸಮತೋಲನ ಯಾವ ರೀತಿಯದು ಎಂಬುದನ್ನು ಮೊದಲು ಕಂಡುಕೊಳ್ಳಲಾಗುತ್ತದೆ. ಆಕ್ಯುಪಂಕ್ಚರ್ ತಜ್ಞರು ರೋಗವನ್ನು ಗುರುತಿಸಲು ರೋಗಿಯ ನಾಲಿಗೆಯ ಬಣ್ಣ ಮತ್ತು ಆಕಾರ ನೋಡುತ್ತಾರೆ, ಬೇರೆ ಬೇರೆ ನಾಡಿ ಮಿಡಿತದ ಬಿಂದುಗಳನ್ನು ಹೋಲಿಸಿ ನೋಡುತ್ತಾರೆ, ಉಸಿರಿನ ಮತ್ತು ದೇಹದ ವಾಸನೆ, ಉಸಿರಾಟದ ರೀತಿ ಅಥವಾ ಧ್ವನಿಯ ಶಬ್ದವನ್ನು ಪರಿಶೀಲಿಸುತ್ತಾರೆ. ಅಲ್ಲದೇ ಚಳಿ ಮತ್ತು ಜ್ವರ, ಬೆವರುವಿಕೆ, ಹಸಿವು, ಬಾಯಾರಿಕೆ ಮತ್ತು ರುಚಿ, ಮಲ-ಮೂತ್ರ ವಿಸರ್ಜನೆ, ನೋವು, ನಿದ್ದೆ ಮುಂತಾದ ವಿವರಗಳನ್ನು ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಆನಂತರ ಸೂಜಿಯನ್ನು ನಿರ್ದಿಷ್ಟ ಅಂಗಗಳಿಗೆ ಚುಚ್ಚುತ್ತಾರೆ.

ಆಧುನಿಕ ದಿನಗಳ ಚಿಕಿತ್ಸೆಯಲ್ಲಿ ಸ್ಟೇನ್‌ಲೆಸ್ ಸ್ಟೀಲ್‍ನಿಂದ ಮಾಡಲ್ಪಟ್ಟ ಸೂಜಿಗಳನ್ನು ಬಳಸುತ್ತಾರೆ. ಅವುಗಳು ಸುಮಾರು 13 ರಿಂದ 130 ಮಿಲಿ ಮೀಟರ್‌ಗಳಷ್ಟು ಉದ್ದವಿರುತ್ತವೆ ಮತ್ತು 0.16 ಮಿ.ಮಿ.ಯಿಂದ 0.46 ಮಿ.ಮಿ.ನಷ್ಟು ವ್ಯಾಸವನ್ನು ಹೊಂದಿರುತ್ತವೆ. ಸಣ್ಣವುಗಳನ್ನು ಮುಖದಲ್ಲಿ, ಕಣ್ಣುಗಳ ಬಳಿಯಲ್ಲಿ ಬಳಸಿದರೆ, ಉದ್ದದ ಸೂಜಿಗಳನ್ನು ಹೆಚ್ಚು ಮಾಂಸಖಂಡಗಳಿರುವಲ್ಲಿ ಬಳಸಲಾಗುತ್ತದೆ. ಅವುಗಳನ್ನು ನಮ್ಮ ಇಂಜೆಕ್ಶನ್ ಸೂಜಿಯನ್ನು ಬಳಸುವಂತೆ ಪ್ರತೀ ಬಾರಿ ಸ್ಟೆರಲೈಸ್ ಮಾಡಿ ಬಳಸಲಾಗುತ್ತದೆ, ಅಥವಾ ಹೊಸ ಸೂಜಿಗಳನ್ನು ಬಳಸಲಾಗುತ್ತದೆ.

ಆ‍ಯ್‌ಕ್ಯುಪಂಕ್ಚರ್ ಅನ್ನು ಬೇರೆ ಬೇರೆ ರೀತಿಯ ದೈಹಿಕ ನೋವುಗಳ ಪರಿಹಾರಕ್ಕಾಗಿ, ನರಗಳ ಸಮಸ್ಯೆಗಳಿಗೆ ಮತ್ತು ಪಾರ್ಶ್ವವಾಯುವಿಗೆ, ಶ್ವಾಸಕೋಶದ ಸಮಸ್ಯೆಗಳಿಗೆ, ರಕ್ತಪರಿಚಲನೆ, ಜೀರ್ಣಾಂಗವ್ಯೂಹಗಳ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

ಈ ಚಿಕಿತ್ಸೆಯ ಕುರಿತು ಚೀನಾ, ಜಪಾನ್‌ನಂತಹ ಪೌರಾತ್ಯ ರಾಷ್ಟ್ರಗಳಲ್ಲಿ ಅಲ್ಲದೇ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಬ್ರೆಝಿಲ್‌ನಂತಹ ದೇಶಗಳಲ್ಲಿ ಕೂಡಾ ಪ್ರಯೋಗಗಳು ಮತ್ತು ಅಧ್ಯಯನಗಳು ನಡೆಯುತ್ತ ಬಂದಿವೆ. ಆದರೆ ಆಲೊಪಥಿ ಹೆಚ್ಚು ಸುಲಭ ಮತ್ತು ವೈಜ್ಞಾನಿಕವಾದುದರಿಂದಾಗಿ, ಜನರಲ್ಲಿ ಪರ್ಯಾಯ ಚಿಕಿತ್ಸೆಗಳ ಕುರಿತು ಹೆಚ್ಚಿನ ಆಸ್ತೆ ಇಲ್ಲ.