ನನ್ನ ಭೂಪಟವೆಲ್ಲವನು ಬಿಚ್ಚಿ ಹರಡಿದೆ ನೀನು ;
ಅದರ ಗಡಿ ಠಾಣೆ ಆಯಕಟ್ಟಿನ ಜಾಗವೆಲ್ಲವನು
ಅರಿತೆ. ಹಳೆಯ ಅಧಿಕಾರಿಗಳನೆಲ್ಲ ಮೆಲ್ಲಗೆ
ಒಲಿಸಿಕೊಂಡೆ. ಅನಂತರ ನುಗ್ಗಿಸಿದೆ ಸೈನ್ಯ. ನನ್ನ
ಹೆಸರಿದ್ದ ನಗರಗಳ ಹಣೆಯಬರೆಹವನೊರಸಿ
ನಿನ್ನ ಹೆಸರನೆ ಬರೆದೆ. ಹಳೆಯ ಶಾಸನಗಳೆಲ್ಲವನು
ಕೀಳಿಸಿದೆ. ಹೊಳೆಗಳ ಹಿಡಿದು ಪಳಗಿಸಿದೆ. ಎಲ್ಲ
ಕಡೆಗೂ ನಿನ್ನ ಕಾವಲು ದಳವ ನಿಲ್ಲಿಸಿದೆ. ಇನ್ನು
ಮುಂದೆ ಮಕ್ಕಳಿಗೆ ಹೊಸಪಾಠ, ಹೊಸ ಪರೀಕ್ಷೆ.
ಹೊಸ ಆಸೆ, ಹೊಸ ಭರವಸೆ, ಹೊಸ ನಿರೀಕ್ಷೆ.