ಆಗೇರ ಭೌಗೋಳಿಕ ಪರಿಸರ

ಗುದ್ದು ಹೊಡೆಯಬೇಡಿ ಸಿಟ್ಟು ಮಾಡಬೇಡಿ
ಕೊಟ್ಟೇನಿ ನಾನೊಂದು ಪರಕ್ಷಿಣ|
ಕೊಟ್ಟೇನ್ ನಾನೊಂದು ಪರಕ್ಷಿಣ| ಸ್ವಾಮ್ಯೋರೆ
ಹೊಡೆಯಲ್ಬೀಡಿಂದು ಗುದ್ದಾನಾ|
ತಪ್ಪೀರು ಸಮಿಸಿ ಸಿಟ್ಟನೊಂದಾಗಬೇಡಿ
ಶಿವನೊಂದ ಒಂದ ಬೈಬ್ಯಾಡಿ||

ಕಣ್ಣೀರು ತುಂಬಿಕೊಂಡು ಯಾಚಿಸುವ ಈಹಾಡು ಕೇವಲ ಒಬ್ಬ ಹೆಣ್ಣಿನ ಹಾಡಾಗಿರದೆ ಅನೇಕ ಹೆಣ್ಣಿನ ವಾಸ್ತವಪಾಡು ಆಗಿದೆ. ಮಗಳನ್ನು ಹೊಡೆಯುವ ಅಳಿಯನನ್ನು ತಡೆಯುವ ಅತ್ತೆಯ ಹಾಡು ಆಗೇರ ಮಹಿಳೆಯೊಬ್ಬಳ ಹಾಡಾಗಿರದೆ ಇಡೀ ಸ್ತ್ರೀ ಸಮುದಾಯದ ಹಾಡಾಗಿದೆ. ನೀರಾರು ಕಷ್ಟಗಳಿಗೆ ಮೈಯೊಡ್ಡುವ ಮಹಿಳೆಯ ದಿನನಿತ್ಯದ ಅನುಭವದ ಒಂದು ಪ್ರತಿಮೆಯಾಗಿದೆ.

ಹೆಣ್ಣಿನ ಗೋಳು ಒಂದಲ್ಲ, ಎರೆಡಲ್ಲ. ಹಗಲಿಲ್ಲಾ ಗಂಡಿನೊಂದಿಗೆ ಸರಿಸಮಾನವಾದ ದುಡಿಮೆ. ಸಂಜೆ ಮನೆ ಸೇರಿದಾಕ್ಷಣ ಎಲ್ಲರಿಗೂ ಊಟ ನೀಡುವ ಗಡಿಬಿಡಿ. ಬಹುಶಃ ಇಷ್ಟೇ ಆಗಿದ್ದರೆ ಅವಳು ತನ್ನ ಬದುಕು ಸ್ವರ್ಗವೆಂದೇ ಅಂದುಕೊಳ್ಳುತ್ತಿದ್ದರು. ಮತ್ತೆ ಗಂಡನ ಕುಡಿತ, ಹೊಡೆತ ಬಡಿತಗಳಿಗೂ ಮೂಕ ಸಾಕ್ಷಿಯಾಗುವ ಅವಳು ರಟ್ಟೆಯಲ್ಲಿ ಕಸುವಿದ್ದರೂ ಗಂಡನ ಕೈ ಹಿಡಿದು ತಡೆಯಲಾರದ ಸಾಮಾಜಿಕ ಕಟ್ಟುಪಾಡು. ದುಡಿಮೆ ತನ್ನದಾದರೂ ತಾನು ಸ್ವತಂತ್ರವಾಗಿ ಬದುಕಲಾರದ ಕೌಟುಂಬಿಕ ಜವಾಬ್ದಾರಿ. ಹೀಗೆ ಎಕಕಾಲದಲ್ಲಿ ಹೊರಗಿನ ದುಡಿಮೆ ಆಂತರಿಕ ಜಂಜಡಗಳಿಂದ ತತ್ತರಿಸುವ ಹೆಣ್ಣು ಸಹಜವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದುಳಿಯಬೇಕಾಗುತ್ತದೆ.

ಹೆಣ್ಣು ಕುಲದ ಕುಡಿ, ಹೆಣ್ಣು ಸಂಸ್ಕೃತಿಯ ವಿಕಾಸ. ಹೀಗಾಗಿ ಯಾವುದೇ ಜನಾಂಗದಲ್ಲಿಯಾಗಲಿ ಹೆಣ್ಣಿನ ಚರಿತ್ರೆ ಮುಖ್ಯವಾಗುತ್ತದೆ. ಜನಾಂಗೀಯ ಅಭ್ಯಾಸ ಅದರ ಒಳ ಪ್ರವೇಶದಿಂದ ಮಾತ್ರ ಸಾಧ್ಯವಾಗುತ್ತದೆ. ಆಗ ಮಹಿಳೆಯರ ಸಾಂಸ್ಕೃತಿಕ ಬದುಕು ಏನೆಲ್ಲವನ್ನು ಬಿಚ್ಚಿ ತೋರಿಸುತ್ತದೆ.

ಮೇಲಿನ ಹಾಡಿನಂತೆ ಹಾಡಾಗಿ ಹರಿಯುವ ಆಗೇರ ಮಹಿಳೆ ತನ್ನ ಒಂದೊಂದೇ ಬಂಧನಗಳನ್ನು ಬಿಚ್ಚಿಕೊಳ್ಳುತ್ತ ಇಂದಿನ ರಾಜಕೀಯದಲ್ಲಿ ಉನ್ನತ ಅಧಿಕಾರವನ್ನು ಪಡೆದು ಸಮಾಜ ಮುನ್ನಡೆಸುವವರೆಗಿನ ಅವಳ ಹೋರಾಟದ ಬದುಕಿನ ಚಿತ್ರಣ ಈ ಅಧ್ಯಯನದಲ್ಲಿ ಸ್ಫುಟಗೊಂಡಿದೆ.

ಉಪ್ಪಿನ ಆಗರಗಳಲ್ಲಿ ಉಪ್ಪು ತೆಗೆಯುವ ಕೆಲಸ ಮಾಡುವುದರಿಂದ ’ಆಗೇರರು’ ಎನ್ನುವ ಹೆಸರು ಬಂದಿರಬಹುದೆಂದು ೧೮೮೩ರಲ್ಲಿ ಕೆನರಾ ಗೆಜೆಟೆಯರನಲ್ಲಿ ಪ್ರಕಟವಾದ “Agres are SALT MAKERS from agar; a salt pan” ಎನ್ನುವುದರಿಂದ ತಿಳಿದ ಕಂತ್ರಿ, ಮೊಗಟಾ, ಗುಂಡಬಾಳಾ, ಹಿಲ್ಲೂರು, ಸಗಡಗೇರಿ, ಅಗ್ಗರಗೋಣ, ಹೆಗ್ರೆ, ವಾಸರಕುದ್ರಿಗೆ, ತೆಂಕಣಕೇರಿ, ಹೊನ್ನಕೇರಿ, ಬೋಳ ಶೆಟಗೇರಿ.

ಕುಮಟಾ ತಾಲೂಕ: ಮಾಸ್ಕೇರಿ, ಬಂಕಿಕೊಡ್ಲ, ಗೋಕರ್ಣ,ತಲಗೇರಿ,ಪೊಗೇರಿ, ಬರ್ಗಿ, ಎಲ್ಲವಳ್ಳಿ, ಯಲ್ಲಾಪುರ ತಾಲೂಕ: ಇಡಗುಂದಿ, ವಜ್ರಳ್ಳಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ ಹಾಗೂ ಯಲ್ಲಾಪುರ (ಮಲಿನಾಡು ಪ್ರದೇಶ)ಳಲ್ಲಿ ವ್ಯಾಪಿಸಿಕೊಂಡಿರುವ ಆಗೇರರ ಜನಸಂಖ್ಯೆ ಒಟ್ಟೂ ಇಪ್ಪತ್ತು ಸಾವಿರದಷ್ಟು ಇದೆ. ಈ ಜಿಲ್ಲೆಯ ಕೆಲವು ಮುಂದುವರಿದ ಜಾತಿಗಳಲ್ಲಿ ಕಾಣಿಸಿಕೊಂಡಂತೆ ಇಲ್ಲಿ ಇನ್ನೂ ಹೆಣ್ಣಿನ ಬರ ಕಾಣಿಸಿಕೊಂಡಿಲ್ಲ. ಹೆಣ್ಣಿರಲಿ ಗಂಡಿರಲಿ ಮನೆತುಂಬ ಮಕ್ಕಳಿರಲಿ ಎಂಬ ಅಜ್ಜಿಯರ ಮನೋಬಾವವೇ ಕಾರಣವಿರಬಹುದೋ ಏನೋ. ಒಟ್ಟಿನಲ್ಲಿ ಆಗೇರರಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ ಅಂತಹ ಏರು ಪೇರೇನೂ ಇಲ್ಲ.

ಆಗೇರ ಮಹಿಳೆ: ಸಾಮಾಜಿಕ ಬದುಕು

’ಶಿವಕೊಟ್ಟಿದ್ದು ನಮಗೆ’ ಎಂದು ಬದುಕನ್ನು ಇದ್ದಂತೆ ಸ್ವೀಕರಿಸುವ ಮಹಿಳೆಯರು ದಾಸ್ಯ ಬುದ್ಧಿ, ಹಿಂಜರಿಕೆಯಿಂದ ಹೊರಬಂದಿಲ್ಲ. ಶೋಷಣೆಗೆ ಒಳಗಾಗಿದ್ದುದರ ಪರಿವೆಯಿಲ್ಲ. ಅನಕ್ಷರತೆ ನಮ್ಮ ಈ ಸ್ಥಿತಿಗೆ ಕಾರಣ ಎಂದುಕೊಳ್ಳದೆ ಆಕಾಶಕ್ಕೆ ಕೈ ತೋರಿಸುತ್ತ ಹಣಿ ಮುಟ್ಟಿಕೊಳ್ಳುವ ಹೆಂಗಸರು ತಮ್ಮ ಹಣೆಬರಹವೇ ಈ ಬಡತನಕ್ಕೆ ಕಾರಣವೆಂದುಕೊಂಡಿದ್ದಾರೆ. ಎಲ್ಲದಕ್ಕೂ ದೇವರನ್ನೇ ಕರೆಯುವ ಇವರು ದೇವರೇಕೆ ಮನುಷ್ಯರೂ ತಮ್ಮನ್ನು ಮುಟ್ಟಿಸಿಕೊಳ್ಳುತ್ತಿಲ್ಲವೆಂಬುದರ ಕುರಿತು ಪ್ರಶ್ನಿಸದಿರುವುದಕ್ಕೆ ಅವರಲ್ಲಿ ನೆಲೆಸಿದ ಅಜ್ಞಾನವೇ ಕಾರಣವಾಗಿದೆ. ’ಬೇಡಿಕೆ’ ನೀಡುವ ಮೇಲ್ವರ್ಗದ ಜನರ ಅನುಕಂಪೆಯಲ್ಲಿ ತೃಪ್ತರಾಗಿ, ಅವರಿಗೆ ನಿಷ್ಠರಾಗಿ ಬದುಕು ಸಾಗಿಸುತ್ತಿದ್ದಾರೆ.

ಸಮಾಜದಲ್ಲಿ ದೂರವಿರಿಸಲ್ಪಟ್ಟ ಆಗೇರರ ಸಮಾಜವನ್ನು ಪ್ರವೇಶಿಸಿದಾಗ ಅಲ್ಲಿ ಮಹಿಳೆಯರನ್ನು ಒಂದಿಷ್ಟು ದೂರವಿರಿಸಿದಂತೆ ಭಾಸವಾಗುತ್ತದೆ. ವಿದ್ಯೆಯಿಂದಲೂ  ವಂಚಿಸಲ್ಪಟ್ಟ ಇವಳು ನ್ಯಾಯ ತೀರ್ಮಾನದ ವಿಷಯದಲ್ಲಿ ಕೂಡ ವಂಚಿತಳು. ಪುರುಷ ನೀಡುವ ತೀರ್ಮಾನಕ್ಕೇ ಬದ್ಧಳಾಗಿ, ಅವರು ವಿಧಿಸಿದ ನಿಯಮದ ಚೌಕಟ್ಟೀಗೆ ತಲೆ ಬಾಗಿ ಪಾತಿವ್ರತ್ಯವೇ ಪರಮ ಧರ್ಮವೆಂದು, ಸಂಸಾರ ನಿರ್ವಹಣೆಯೇ ಪರಮ ಕರ್ತವ್ಯ ಎಂದು ತಿಳಿದು ಪುರುಷ ಸಮಾಜ ತೊಡಿಸಿದ ಸಂಕೋಲೆಯಲ್ಲೇ ಬದುಕನ್ನು ಕಂಡುಕೊಂಡಿದ್ದಾಳೆ.

’ಗಂಡನ ಮನೆಗೆ ಬಂದರೆ ಕಂಡ ಕೆಲಸ ಮಾಡಬೇಕು; ಗುಂಗುಕಲ್ಲಿನಂತೆಇರಬೇಕು’ ಎಂದು ಹೇಳುವ ಇವರು ಗಂಡನ ಕುಡಿತವಿರಲಿ, ಜಗಳವಿರಲಿ ತಕರಾರಿಲ್ಲದೆ ಗಂಡನಿಗೆ ಬದ್ಧರಾಗಿ ಬದುಕಿದವರು. ಇತ್ತೀಚೆಗೆ ಗಂಡನೊಂದಿಗೆ ಸಮಾನತೆಯನ್ನು ಬಯಸುವ ಸ್ತ್ರೀ ಸಂಕುಲಕ್ಕಾಗಿ ಬೆರಗುಗೊಂಡು ತಮ್ಮ ಕಾಲದ ಕುಟುಂಬ ಪದ್ಧತಿಯನ್ನೇ ನೆನಸಿಕೊಳ್ಳುತ್ತ ಪರಿತಪಿಸುತ್ತಾರೆ.

ಕೌಟುಂಬಿಕ ಜೀವನ:

ಸಾಮಾನ್ಯವಾಗಿ ಅವಿಭಕ್ತ ಕುಟುಂಬ ಪದ್ಧತಿಯಿದ್ದು, ಒಟ್ಟಾಗಿ ಬುದುಕುವುದು, ಒಟ್ಟಾಗಿ ಉಣ್ಣುವುದು ಆಗೇರರಿಗೆ ಪ್ರಿಯವಾದ ವಿಷಯ. ಇತ್ತೀಚೆಗೆ ಮದುವೆಯಾದ ಮೇಲೆ ಗಂಡು ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವಿಭಕ್ತ ಕುಟುಂಬ ಪದ್ಧತಿ ಬಂದಿದೆ. ಆಗೇರರದು ಪಿತೃಪ್ರಧಾನ ವ್ಯವಸ್ಥೆಯಾಗಿದ್ದು, ಅಪ್ಪನಿಂದ ಯಜಮಾನಿಕೆ ನೇರವಾಗಿ ಮಗನಿಗೆ ಬರುತ್ತದೆ. ಆಸ್ತಿಯ ಹಕ್ಕು ಕೂಡ ಮಗನದೇ, ಅಂತಹ ಭೂಮಾಲಿಕತ್ವ ಇಲ್ಲದಿದ್ದರೂ ಇತ್ತೀಚೆಗೆ ಸರಕಾರಿ ಕಾನೂನಿನ ಬಲದಿಂದ ಹೆಣ್ಣು ಮಕ್ಕಳು ಪಾಲು ಕೇಳುವ ಧೈರ್ಯ ಮಾಡುತ್ತಿದ್ದಾರೆ. ಅತ್ತೆ-ಸೊಸೆಯರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ತಾಯಿಗೆ ಹಿರಿತನದ ಜವಾಬ್ದಾರೀ ಗೌರವ ಇದ್ದೇ ಇದೆ.

ಆಗೇರರ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಲಿಕಾರರೇ, ಕುಟುಂಬ ನಿರ್ವಹಣೆಗೆ ಗಂಡ ಹೆಂಡಿರಿಬ್ಬರ ದುಡಿಮೆಯೂ ಅವಶ್ಯವಾದುದರಿಂದ ಇಲ್ಲಿ ಹೆಣ್ಣಿನ ಮೇಲಿನದಬ್ಬಾಳಿಕೆ ಕಡಿಮೆ. ಹೀಗಾಗಿ ಗಂಡ ಹೆಂಡಿರ ನಡುವೆ ಏಕವಚನದ ಸಂಬೋಧನೆ ಸಾಮಾನ್ಯವಾಗಿದ್ದು, ಬರಬರುತ್ತ ಹೊರಗಿನ ಸಂಪರ್ಕ ಹೆಚ್ಚಿದಂತೆ , ನಾಗರಿಕತೆಯ ಸೋಂಕು ಆದ ಹಾಗೆ ಸಂಬೋಧನೆ ಬಹುವಚನಕ್ಕೆ ತಿರುಗಿದೆ.

ಮನೆಯ ಯಜಮಾನನಿಗೆ ತುಂಬಾ ಗೌರವ ಕೊಡುವುದು ಪದ್ಧತಿ. “ಗಂಡನ ಹೆಸರ ಹೇಳಬಹುದು. ಆದರೆ ಭಾವನ (ಗಂಡನ ಅಣ್ಣ) ಹೆಸರು ಹೇಳಲಿಕ್ಕಿಲ್ಲ. ಯಾಕೆಂದರೆಮಾವನ ನಂತರ ಆತನೇ ಯಜಮಾನ” ಎಂದು ಪಾರ್ವತಿ ಸೋಮು ಆಗೇರರು ಹೇಳುತ್ತಾರೆ.

“ಅತ್ತೆ, ಮಾವ, ಗಂಡ ಅಂದ್ರ ನಮ್ಗ ದೇವ್ರ ಸಮಾನ. ಈ ಜಗಳ-ಪಗಳ ಎಲ್ಲ ಮೊದ್ಲಲ್ಲ. (ಮೊದಲು ಇರಲಿಲ್ಲ) ಈಗ್ ಬಂದಿದೆ. ಎಲ್ಲ ದ್ಯಾವರೆ ಬಲ್ಲ” ಎಂದು ಬದಲಾವಣೆಯ ಗಾಳಿ ಬೀಸುತ್ತಿರುವ ಕೌಟುಂಬಿಕ ಪರಿಸರಕ್ಕಾಗಿ ವ್ಯಥಿತರಾಗುತ್ತಾರೆ. ಎಪ್ಪತ್ತೆರಡು ವರ್ಷ ವಯಸ್ಸಿನ ಹೊನ್ನು ರಾಮು ಆಗೇರ.

ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಕುಟುಂಬ ನಿರ್ವಹಣೆಮಾಡಬೇಕು. ಎನ್ನುವುದು ಹೆಂಗಸರ ಆಶಯ. ಹೀಗಾಗಿ ಗಂಡಸರು ಕುಡಿತಕ್ಕೆ ಮೊರೆ ಹೋದರು ಹೆಂಗಸರೂ ಮಾತ್ರ ಕುಡಿಯುತ್ತಿರಲಿಲ್ಲ. ಆಕಸ್ಮಿಕವಾಗಿ ಈ ಚಟಕ್ಕೆ ಬಲಿಯಾದ ಒಂದಿಬ್ಬರು ಹೆಂಗಸರಿದ್ದರೂ ಅವರಿಗೆ ಸಮಾಜ ಗೌರ ಕೊಡುತ್ತಿರಲಿಲ್ಲ. ಇಂದು ಅಂತಹ ಸ್ಥಿತಿಯೇ ಇಲ್ಲ ಎಂದು ಕ್ಷೇತ್ರ ಕಾರ್ಯದಲ್ಲಿ ಭೇಟಿಯಾದ ಅಜ್ಜಿಯ ಹೇಳಿಕೆ.

ವೃತ್ತಿ:

ಉಪ್ಪು ತೆಗೆಯುವುದೇ ಗಂಡಸರ ಉದ್ಯೋಗವಾದುದರಿಂದ ಗಂಡಂದಿರೊಂದಿಗೆ ಹೆಂಗಸರೂ ಉಪ್ಪಿನಾಗರಗಳಿಗೆ ಹೋಗುತ್ತಾರೆ. ಉಪ್ಪಿನ ತಾಟು (ಕಣ) ಸಮ ಮಾಡುವುದು, ಉಪ್ಪಿನ ಮಡಿಗೆ ನೀರು ಬಿಡುವುದು, ಗಂಡಸರು ತೆಗೆದ ಉಪ್ಪನ್ನು ಬಾಚಿ ಇನ್ನೊಂದು ರಾಶಿ ಮಾಡುವುದು. ರಾಶಿ ಮಾಡಿದ ಉಪ್ಪನ್ನು ಬುಟ್ಟಿಯಲ್ಲಿ ಹೊತ್ತು ಸಾಗಿಸುವುದು ಹೆಂಗಸರ ಕೆಲಸ. ಬೆಳಿಗ್ಗೆ ೯-೩೦ರಿಂದ ಸಂಜೆ ೪-೩೦ರ ತನಕ ದುಡಿದು (ಸಂಬಳ ಮಾತ್ರತಿಂಗಳಿಗೆ ೬೦೦ ರೂ. ೧೮ ಕೆ.ಜಿ. ಅಕ್ಕಿ) ಬರುವಾಗ ಪಳದಿಗಾಗಿ ಮೀನು, ದಿನಸಿಗಳನ್ನು ಹೊಂದಾಣಿಸಿ ತರುತ್ತಾರೆ.

 

ಇಂದು ಉಪ್ಪಿನ ಆಗರಗಳೆಲ್ಲ ಕಡಿಮೆಯಾಗುತ್ತಿರುವುದರಿಂದ ಗಂಡಸರು ಗಾವುಂಡಿ, ಪೇಂಟಿಗ್, ಸುಣ್ಣ-ಬಣ್ಣ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಅಂತೆಯೇ ಹೆಂಗಸರೂಕೂಡಾ. ಅಲ್ಲದೇ ಮೊಸದಲಿನಿಂದಲೂ ಮೇಲ್ಜಾತಿಯವರ ಮನೆಗಳಲ್ಲಿ ಮನೆಕೆಲಸಮಾಡುವುದನ್ನು ರೂಢಿಸಿಕೊಂಡಿದ್ದಾರೆ. ದಿನಕ್ಕೆ ಒಂದು ಅಥವಾ ಎರಡು ಮನೆಯ ಕೆಲಸ,ತಿಂಗಳಿಗೆ ೧೦೦ರಿಂದ ೧೫೦ರೂ. ಕೊಟ್ಟರೆ ಅವರು ಕೊಡುವ ಬಟ್ಟೆ ಆಹಾರಗಳಲ್ಲಿ ತೃಪ್ತರು. ಬಡತನದ ಬೇಗೆ ಎಷ್ಟೆಂದರೆ ಎಂತಹ ಅನಾರೋಗ್ಯದ ಸ್ಥಿತಿಯಲ್ಲೂ ಒಡೆಯರ ಮನೆ ಕೆಲಸಕ್ಕೆ ಹಾಜರಾಗಬೇಕು. ಬಾಣಂತಿಯಾದರೂ ’ಆಮೆ’ (ಹೆತ್ತಾಗ ಆಚರಿಸುವ ಮೈಲಿಗೆ) ತೀರುವ ತನಕ ಮನೆಯಲ್ಲಿದ್ದು, ಸೊಂಟಕ್ಕೆ ಸುತ್ತು ಹಾಕಿಕೊಂಡೇ ಕೆಲಸ ಮಾಡಬೇಕು. ಹೀಗೆ ಇಲ್ಲದಲ್ಲಿ ಹೊಟ್ಟೆಯ ಹಸಿವು ನೀಗುವುದೆಂತು?

ಹಗಲಲ್ಲಿ ಬಿಸಿಲಲ್ಲಿ ದುಡಿಯುವ ಇರುವ ರಾತ್ರಿ ಸ್ನಾನ ಮಾಡಿ ಶುದ್ಧವಾಗುತ್ತಾರೆ. ರಾತ್ರಿಯ ಬಿಸಿ ಬಿಸಿ ಸ್ನಾನ ಮೈಕೈ ನೋವಿಗೆ ಹಾಯೆನಿಸುವುದು ಒಂದು ಕಾರಣವಾದರೆ, ಆಗೇರರಲಲಿ ಪ್ರತ್ಯೇಕ ಬಚ್ಚಲು ಮನೆ ಮೊದಲಿರಲಿಲ್ಲ. ಮನೆಯ ಹಿಂದೋ ಮುಂದೋ ಒಲಿ ಹೂಡಿ ’ಅಡಕಲ’ (ಮಣ್ಣಿನ ದೊಡ್ಡ ಗಡಿಗೆ) ದಲ್ಲಿ ನೀರುಕಾಯಿಸುತ್ತಿದ್ದರು. ಹೀಗಾಗಿ ಕತ್ತಲಲ್ಲಿ ಯಾರೂ ಕಾಣದಾದಾಗ ಸ್ನಾನ ಮಡಬಹುದಾದದ್ದು ಇನ್ನೊಂದು ಕಾರಣವಾಗಿದೆ. ಇದೂ ಕೂಡಾ ಅವರ ಆರ್ಥಿಕ ಬಡತನದ ಅನಿವಾರ್ಯ ರೂಢಿಯೇ ಆಗಿದೆ.

ವೇಷ:

ಆಗೇರ ಸ್ತ್ರೀಯರ ಸೀರೆಯಡುಗೆ ವಿಶೇಷವಾಗಿದೆ. ವಿವಾಹ ಪೂರ್ವದಲ್ಲಿ ಕುಪ್ಪಸ ’ಕಿರಗಾಣಿ’ ಹಾಕಿಕೊಳ್ಳುತ್ತಿದ್ದರು ಅಥವಾ ಕುಪ್ಪಸ ತೊಟ್ಟು ಸೀರೆಯನ್ನೇ ಅಡ್ಡವಾಗಿ ಸುತ್ತಿಕೊಳ್ಳುತ್ತಿದ್ದರು. ಆದರೆ ಮದುವೆ ಆದ ಮೇಲೆ ಮಾತ್ರ ’ಗೇಟಿಗೆ ಕಟ್ಟಿ’ ಸೀರೆ ಉಟ್ಟುಕೊಳ್ಳುವುದು ಕಡ್ಡಾಯ. ಹೆಂಗಸರು ಕುಪ್ಪುಸ ತೊಡುವುದಿಲ್ಲ. ಸೀರೆಯನ್ನು ಸೊಂಟಕ್ಕೆ ಸುತ್ತಿ ಸೀರೆಯ ಸೆರಗನ್ನು ಎದೆ ಮುಚ್ಚುವಂತೆ ಕಂಕುಳ ಬುಡದಿಂದ ಬಳಸಿ ಕುತ್ತಿಗೆಯ ಕಡೆ ಕೊಂಡೊಯ್ದು ಗಂಟು ಹಾಕಿ ಉಟ್ಟುಕೊಳ್ಳುತ್ತಾರೆ. ಇದನ್ನು ಗೇಟಿಗೆ ಕಟ್ಟುವುದು ಎನ್ನುತ್ತಾರೆ.

ಬಹುಶಃ ಕುಪ್ಪಸವಿಲ್ಲದ ಕೊರತೆಯನ್ನು ನೀಗಲೋ ಎನ್ನುವಂತೆ ಕೊರಳಲ್ಲಿ ರಾಶಿ ರಾಶಿಯಾಗಿ ಮಣಿಸರವನ್ನು ಹಾಕಿಕೊಳ್ಳುತ್ತಾರೆ. ಜಾತ್ರೆಯಿಂದ ತಂದ ಸರವಾದರೂ ಸರಿ, ಇಲ್ಲವೆ ತಾವೇ ಮಣಿ ಸುರಿದು ಮಾಡಿದ ಸರವನ್ನು ಧರಿಸುತ್ತಾರೆ. ಕೈ ತುಂಬ ಗಾಜಿನ ಬಳ ಬಡತನದ ಕಾರಣದಿಂದ ಬಂಗಾರದ ಮಾತು ದೂರವೇ ಆದುದರಿಂದ ಜಾತ್ರೆಯಲ್ಲಿಯ ಬಂಗಾರದ ಗಿಲೀಟಿನ ಆಭರಣಗಳನ್ನು ಧರಿಸುತ್ತಾರೆ. ಅನುಕೂಲಸ್ಥ ಹೆಂಗಸರು ಬೆಳ್ಳಿಯ ಇಲ್ಲವೆ ಕಂಚಿನ ಬಳೆಗಳನ್ನು ಧರಿಸುತ್ತಿದ್ದರು. ಮೂಗುಬಟ್ಟು (ಮೂಗುಗು) , ಕಿವಿ ಕುಡು(ಓಲಿ) ಅಥವಾ ತಾರ ಬಟ್ಟು ಇವರ ಮುಖ್ಯ ಆಭರಣ.

ತಾಳಿಯ ಬದಲಾಗಿ ’ಗುಂಟಕಿ ಮಣಿ’ಯನ್ನು ಧರಿಸುತ್ತಾರೆ. ಬಂಗಾರದ ಗಿಲೀಟಿನ ಗುಂಡಿನ ಮಣಿಗೆ ಆಚೀಚೆ ಕರಿಮಣಿ ಪೋಣಿಸಿ ಮಾಡಿದ ಸರವೇ ಗುಂಟಕಿಮಣಿ. ಇದು ಆಗೇರರ ಮಹಿಳೆಯರಿಗೆ ತುಂಬಾ ಇಷ್ಟವಾದದ್ದು.

ತಲೆಬಾಚಿ ದೊಡ್ಡ ಮುಡಿ ಕಟ್ಟುತ್ತಾರೆ. ಕೂದಲಿಲ್ಲದಿದ್ದರೆ ’ಜಾರಿ’ಯನ್ನಾದರೂ  ಬಳಸಿ ಮುಡಿ ಕಟ್ಟುವುದು ಇವರಿಗೆ ಪ್ರೀತಿ. ಮುಡಿಗೆ ಹೂವಿಲ್ಲದಿದ್ದರೆ ಶೋಭೆಯೇ? ಕೆಂಪು ಅಬ್ಬಲಿ (ಕನಕಾಂಬರ), ಕೆಂಪು -ಹಳದಿಗೊಂಡೆ ಹೂವು, ಬಿಳಿಯ ಕಾಡು ಮಲ್ಲಿಗೆ (ಮೊತ್ತೆ ಮಲ್ಲಿಗೆ ಹೂವು) ದಂಡೆ ಮುಡಿದು ಬಣ್ಣ ಬಣ್ಣದ ಸೀರೆ ಉಡುವುದೆಂದರೆ ಎಲ್ಲಿಲ್ಲದ ಸಂಭ್ರಮ, ಬಣ್ಣದ ಆಯ್ಕೆಯಲ್ಲೂ ಅಷ್ಟೆ. ಎದ್ದು ತೋರು ಹಳದಿ-ಕೆಂಪು ಬಣ್ಣದ ಸೀರೆಯೆಂದರೆ ತುಂಬಾ ಇಷ್ಟ. ದೊಡ್ಡ ಕುಂಕುಮ, ಕಣ್ಣಿಗೆ ಕಾಡಿಗೆ ಹಚ್ಚಿ ತಮ್ಮ ಅಂದ ಚೆಂದವನ್ನು  ಹೆಚ್ಚಿಸಿಕೊಳ್ಳುತ್ತಾರೆ.

ಆಹಾರ:

ದಿನನಿತ್ಯದ ಆಹಾರ ತಯಾರಿಕೆ ಹೆಂಗಸರದೇ, ಹೊರಗಿನ ಕೆಲಸದಿಂದ ಎಷ್ಟೇ ಬಳಲಿಕೆ ಆಗಿದ್ದರೂ ಇದರಿಂದ ಮಾತ್ರ ಮುಕ್ತಿ ಇಲ್ಲ. ಆದರೆ ಮದುವೆ ಕಾರ್ಯದಲ್ಲಿ ಮಾತ್ರ ಅಡುಗೆ ಕಾರ್ಯವನ್ನು ಬಡಿಸುವ ಕೆಲಸವನ್ನು ಗಂಡಸರೇ ಮಾಡುತ್ತಾರೆ. ಕೇವಲ ಸಣ್ಣಪುಟ್ಟ ಕೆಲಸ ಮಾಡುತ್ತ ಹೆಂಗಸರು ಸಹಾಯ ಮಾಡಿದರೆ ಆಯಿತು. ಅದು ಹೆಂಗಸರಿಗೆ ನೆಮ್ಮದಿಯ ನಿಟ್ಟುಸಿರು. ಬಹುಶಃ ಮದುವೆಯ ಚಡಂಗಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗುವುದಕ್ಕೆ ಇದು ಅನುಕೂಲಕರವಾಗಿದೆ.

ಕರಾವಳಿಯ ನಿತ್ಯ ಊಟದಲ್ಲಿ ಒಂದಾದ ಮೀನು ಆಗೇರರ ಆಹಾರ ಕೂಡಾ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ರಾಗಿ ಅಂಬಲಿ ಜೊತೆ ಒಣಮೀನು. ಮತ್ತೆ ತಿರುಗಿ ಅನ್ನ ಕಾಣುವುದು ರಾತ್ರಿಯೇ. ಆಗ ಮಾತ್ರ ಮೀನು ಪಳದಿ (ಸಾರು) ಇಲ್ಲದೆ ಅನ್ನ ಗಂಟಲಲ್ಲಿ ಇಳಿಯದು. ಮಳೆಗಾಲದಲ್ಲಿ ಮೀನಿಗೆ ತೊಂದರೆಯಾದೀತು ಎಂಬ ಕಾರಣಕ್ಕಾಗಿ ಒಣಮೀನುಗಳನ್ನು ಮನೆಯೊಳಗೆ ದಾಸ್ತಾನು ಮಾಡಿ ಇಟ್ಟುಕೊಳ್ಳುತ್ತಾರೆ.

ಮೀನು ನಿತ್ಯ ಬಳಕೆಯ ಆಹಾರವಾದರೂ ಆಗೇರರಿಗೆ ಅದರ ಬಗ್ಗೆ ಮಡಿವಂತಿಕೆ ಬಹಳ. ’ಹೊಲಸಿನ ಮಡಕೆ’ ’ಹೊಲಸಿನ ಚಿಪ್ಪು’ (ಸಾಟು) ’ಹೊಲಸಿನ ಒಲಿ’ ಎಂದು ಮಿನಿನ ಅಡುಗೆಗೆ ಸಂಬಂಧಿಸಿದ ವಸ್ತುವನ್ನು ಹೊಲಸೆಂದೇ ಭಾವಿಸಿ ಅದನ್ನು ದೂರ ಇಡುತ್ತಾರೆ. ಅಡುಗೆ ಕೋಣಿಯಿಂದ ಹೊರಗೆ ಹಿತ್ತಿಲ ಮೂಲೆಯಲ್ಲಿ ಅಥವಾ ಅಂಗಳದ ಮೂಲೆಯಲ್ಲಿ ಮೀನಿನ ಒಲಿ ಹೂಡಿ ಸಾರು ಕುದಿಸುತ್ತಾರೆ. ನಾನು ಕ್ಷೇತ್ರ ಕಾರ್ಯಕ್ಕೆ ಹೋದಾಗ ಕೂಡ ಮನೆಯ ಹಿಂದುಗಡೆಯ ಮಾಡಿನಲ್ಲಿ ಮೀನಿನ ಅಡುಗೆ ಸಿದ್ಧವಾಗುತ್ತಿತ್ತ. ಮೀನು ಇವರಲ್ಲಿ ದಿನನಿತ್ಯದ ಆಹಾರವಾದರೂ ಈ ಮಡಿವಂತಿಕೆಯನ್ನು ಈಗಲೂ ಪಾಲಿಸಲಾಗುತ್ತಿದೆ.

ತರಕಾರಿ ಊಟ ಅಪರೂಪ. ಹಬ್ಬಹರಿದಿನಗಳಲ್ಲಿ ಮಾತ್ರ. ವಾರ-ಸಂಕಷ್ಟಿಗಳಲ್ಲಿ ಮೀನು ಮಾಂಸ ನಿಷಿದ್ಧ. ವಾರ ಸಂಕಷ್ಟಿಗಳ ಆಚರಣೆ ಮೂಲತಃ ಆಗೇರರಲ್ಲಿ ಇದ್ದಿರಲಿಲ್ಲ. ಈಗಿತ್ತಲಾಗಿ ಆಚರಣೆಗೆ ಬಂದ ’ಸುಧಾರಿತ’ ನಡತೆ ಇದು. ಹಬ್ಬ ಹರಿದಿನಗಳಲ್ಲಿ ಆಗೇರರ ಹೆಂಗಸರೂ ಉಳಿದವರಂತೆ ವಿಶೇಷವಾದ ಖಾದ್ಯವನ್ನು ಮಾಡುತ್ತಾರೆ.

ಕೊಟ್ಟೆರೊಟ್ಟಿ : ಹಲಸಿನ ಎಲೆ ಕೊಟ್ಟೆ ಮಾಡಿ (ನಾಲ್ಕು ಹಲಸಿನ ಎಲಿಗೆ ಕಡ್ಡಿ ಶೆಟ್ಟಿ ಮೂಲೆ ಮುರಿದು ಮಾಡುವ ಕೊಟ್ಟೆ) ಅದರಲ್ಲಿ ಅಕ್ಕಿ ಹಾಗೂ ಉದ್ದಿನ ಹಿಟ್ಟನ್ನು ತುಂಬಿ ಅಟ್ಟಿನಲ್ಲಿ (ಇಡ್ಲಿ ಬೇಯಿಸುವ ಪಾತ್ರೆ) ಇಟ್ಟು ಉಗಿಯಲ್ಲಿ ಬೇಯಿಸುತ್ತಾರೆ. ಅಟ್ಟಿನಿಂದ ತೆಗೆದು ಸುಲಿದಾಗ ಸಮೋಸದ ಆಕಾರ ಪಡೆಯುವ ಇದು ಇಡ್ಲಿಯೇ ಆದರೂ ಆಕಾರ ಹಾಗೂ ಎಲಿಯ ವಾಸನೆಯಿಂದ ತಿನ್ನಲು ವಿಶೇಷ ಖುಷಿ ಕೊಡುತ್ತದೆ. ಇದಕ್ಕೆ ’ಕಾಯಿ ಹಾಲು’ (ತೆಂಗಿನ ಕಾಯಿ ರಸ ತೆಗೆದು ಬಿಲ್ಲ ಸೇರಿಸಿ ಕುದಿಸಿ ಮಾಡುವ ಒಂದು ರೀತಿ ಪಾಯಸ) ಸೇರಿಸಿ ತಿನ್ನುತ್ತಾರೆ.

ಕಡುಬು : ಇದು ದೀಪಾವಳಿಯ ವಿಶೇಷ ಖಾದ್ಯ. ಅಕ್ಕಿ ಹಿಟ್ಟಿಗೆ ಮೊಗೆಕಾಯಿಹೋಳು ಸೇರಿಸಿ ಅರಿಶಿಣ ಎಲಿ ಅಥವಾ ಕೋಲು ಸಂಪಿಗೆ ಎಲೆಯಲ್ಲಿ ಸುತ್ತಿ ಅಟ್ಟಿನಲ್ಲಿ ಬೇಯಿಸುವುದು. ಇದಕ್ಕೂ ಕಾಯಿ ಹಾಲಿನ ಜೊತೆ.

ಸುಳಿರೊಟ್ಟಿ : ನಾಗರ ಪಂಚಮಿಯಂದು ತಯಾರಿಸುವ ಸಿಹಿಗಡುಬೇ ಸುಳಿರೊಟ್ಟಿ. ಇದೂ ಕೂಡಾ ಅರಿಶಿಣ ಅಥವಾ ಕೋಲು ಸಂಪಿಗೆ (ಕರಾವಳಿಯಲ್ಲಿ ಕೆಲವರು ಕಾಡು ಲವಂಗದ ಎಲೆಯ ಮೇಲೆ ಹಚ್ಚುತ್ತಾರೆ) ಒಳಕಲ್ಲಿನಲ್ಲಿ ರುಬ್ಬಿದ ನುಣ್ಣನೆಯ ಅಕ್ಕಿ ಹಿಟ್ಟನ್ನು ಹಚ್ಚಿ ಅದರ ಮೇಲೆ ತೆಂಗಿನ ಕಾಯಿ ಮತ್ತು ಬೆಲ್ಲ ಕಾಯಿಸಿ ಮಾಡಿದ ಹೂರಣವನ್ನು ತುಂಬಿ, ಅದನ್ನು ಮಡಚಿ ಅಟ್ಟಿನಲ್ಲಿಟ್ಟು ಬೇಯಿಸುತ್ತಾರೆ. ಬೆಂದು ಘಮ ಘಮಿಸುವ ಇದರ ಜೊತೆ ಅನುಕೂಲವಿದ್ದವರು ತುಪ್ಪ ಹಚ್ಚಿ ತಿನ್ನುತ್ತಾರೆ.

ಪಾಯಸ : ಮದುವೆ ಹಾಗೂ ಹಬ್ಬಗಳಲ್ಲಿ ಮುಖ್ಯ ಖಾದ್ಯ ಪಾಯಸ. ಎಲ್ಲರಂತೆ ಕಡಲಿ ಪಾಯಸ, ಅಕ್ಕಿ ಪಾಯಸ, ಹೆಸರು ಕಾಳಿನ ಪಾಯಸ ಮುಂತಾದ ವಿವಿಧ ಪಾಯಸಗಳನ್ನು ಮಾಡುತ್ತಾರೆ. ಬಡತನ ಹಾಗೂ ದಣಿವಿನಿಂದ ಬಳಲುವ ಇವರಿಗೆ ಸುಲಭವೂ ಪ್ರಿಯವೂ ಆದ ಉಣಿಸು ಪಾಯಸವಾಗಿದೆ.

ಆಡಳಿತ ವ್ಯವಸ್ಥೆ : ಆಗೇರರ ಆಡಳಿತ ವ್ಯವಸ್ಥೆ ಬುಡಕಟ್ಟು ಮಾದರಿಯಾಗಿದ್ದು, ಇಲ್ಲಿ ’ಐಗೋಳು’ ಕೇಂದ್ರ ವ್ಯಕ್ತಿಯಾಗಿರುತ್ತಾರೆ. ಹಳ್ಳಿಯ ಆಡಳಿತ ವ್ಯವಸ್ಥೆ ’ಬುಧವಂತ’ ನಿಗೆ ಸೇರಿದ್ದು. ಇವನ ಸಹಾಯಕ್ಕೆ ಕೋಲುಕಾರನಿರುತ್ತಾನೆ. ಜನನ, ಮದುವೆ, ಸೋಳಂಗೆ, ಶವಸಂಸ್ಕಾರಗಳಲ್ಲಿ ನಿಂತು ನಡೆಸುವವರು ಈ ಬುಧವಂತ ಹಾಗೂ ಕೋಲುಕಾರರ.

ಇತ್ತೀಚಿನವರೆಗೂ ಕೋಟುð ಕಾನೂನಿನಿಂದ ದೂರವಿದ್ದ ಆಗೇರರ ವ್ಯಾಜ್ಯ ಮತ್ತು ಕಲಹಗಳ ನ್ಯಾಯ ತೀರ್ಮಾನವೆಲ್ಲ ಬುಧವಂತನದೆ. ಇಲ್ಲಿ ತೀರ್ಮಾನವಾಗದಿದ್ದರೆ ನಾಲ್ಕಾರು ಹಳ್ಳಿಗೆ ಸೇರಿ ಇರುವ ಸೀಮೆ ಬುಧವಂತನು ಎಲ್ಲ ಹಳ್ಳಿಯ ಬುಧವಂತರ ಸಮಕ್ಷಮದಲ್ಲಿ ನ್ಯಾಯ ತೀರ್ಮಾನವನ್ನು ನೀಡುತ್ತಾನೆ. ಇದು ಸೀಮೆ ಪಂಚಾಯ್ತಿ. ಇಲ್ಲಿಯೂ ತೀರ್ಮಾನವಾಗದಿದ್ದರೆ ಗುರುಮಠದಲ್ಲಿ ’ಹಾಸೀಲು’ (ಫೀ) ಕಟ್ಟಿ ವ್ಯಾಜ್ಯವನ್ನು ರಜಿಸ್ಟರ‍್ ಮಾಡಿಸಬೇಕು. ಗುರುಗಳು ಆಯಾ ಹಳ್ಳಿಗಳ ಬುಧವಂತರ ನೆರವಿನಿಂದ ಹಾಗೂ ಹತ್ತು ಹತ್ತು ಜನ ಊರ ನಾಗರಿಕರ ಸಮಕ್ಷಮದಲ್ಲಿ ನ್ಯಾಯ ತೀರ್ಮಾನವನ್ನು ಕೊಡುತ್ತಾರೆ. ಇದೇ ಅಂತಿಮವಾದ ತೀರ್ಪು. ಇದನ್ನು ಉಲ್ಲಂಘಿಸಿದವರಿಗೆ “ಕೈದು” ಕೊಟ್ಟು ಬಹಿಷ್ಕಾರ ಹಾಕಲಾಗುತ್ತಿತ್ತು. ಇಂದಿನ ಕೋರ್ಟು, ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟಿನಂತೆ ಅಂದಿನ ಪಂಚಾಯ್ತಿ ಸೀಮೆ ಕೂಟ ಹಾಗೂ ಗುರುಮಠಗಳು ಕೆಲಸ ನಿರ್ವಹಿಸುತ್ತಿದ್ದವು. ಒಟ್ಟಿನಲ್ಲಿ ಯಾರಿಗೂ ಅನ್ಯಾಯವಾಗಬಾರದೆಂಬ ನ್ಯಾಯ ಪ್ರಜ್ಞೆ ಅವರಲ್ಲಿ ಅಷ್ಟೊಂದು ಜಾಗೃತವಾಗಿತ್ತು.

ಈ ನ್ಯಾಯ ತೀರ್ಮಾನ ಸಮಿತಿಯಲ್ಲಿ ಆಗೇರ ಮಹಿಳೆಯರಿಗೆ ಯಾವುದೇ ಪ್ರವೇಶವಿರಲಿಲ್ಲ. ಜಾತಿ ಮುಖಂಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಇವರು ಬದ್ಧರಾದರಾಯಿತು.

ಇಲ್ಲಿ ಉಲ್ಲೇಖಿಸಿದ ಮೂರು ಘಟನೆಗಳು ಅಂದಿನ ಆಗೇರ ಮಹಿಳೆಯರು ಸಾಮಾಜಿಕ ಸ್ಥಿತಿಗತಿಯ ಮೇಲೆ ಬೆಳಕು ಚೆಲ್ಲುತ್ತದೆ. ಘಟನೆಗಳ ಸಂಕ್ಷಿಪ್ತ ರೂಪ ಹೀಗಿದೆ:

೧. ಮಂಕಾಳು ಆಗೇರ ಎಂಬುವವನು ಹೆಣ್ಣನ್ನು ಕೆಲಸಕ್ಕೆಂದು ಸುಳ್ಳು ಹೇಳಿ ಬೆಟ್ಟಕ್ಕೆ ಒಯ್ದು ತನಗೆ ವಶವಾಗಲು ಕೇಳಿಕೊಳ್ಳುತ್ತಾನೆ. ತಾನು ಗಂಡನ ಹೊರತು ಬೇರೊಬ್ಬರ ಮುಖವನ್ನು ನೋಡಿದವಳಲ್ಲವೆಂದೂ ತನ್ನನ್ನು ಕೆಡಿಸಬಾರದೆಂದೂ ಕೇಳಿಕೊಂಡರೂ ಆತ ಬಲಾತ್ಕಾರದಿಂದ ಅವಳನ್ನು ಉಪಭೋಗಿಸುತ್ತಾನೆ. ಅಲ್ಲದೇ ಈ ವಿಷಯವನ್ನು ಗಂಡನಲ್ಲಾಗಲಿ ಬೇರೊಬ್ಬರಲ್ಲಾಗಲಿ ಹೇಳಿದರೆ ಆ ಗಂಡ ಮಕ್ಕಳನ್ನು ಕೊಂದುಬಿಡುವುದಾಗಿ ಭಯವನ್ನು ಬಿತ್ತುತ್ತಾನೆ. ಅಲ್ಲದೆ ಗಂಡನಿಲ್ಲದೆ ವೇಳೆ ಮಧ್ಯರಾತ್ರಿ ಬಾಗಿಲು ದೂಡಿ ಬಂದು ಅವಳ ಮೈಮೇಲೆ ಕೈ ಹಾಕುತ್ತಾನೆ. ಅವಳ ಪ್ರತಿಭಟನೆಗೆ ಆತ ಬಗ್ಗುವುದಿಲ್ಲ. ಬೇಸತ್ತ ಅವಳು ಒಂದು ದಿನ ಗಂಡನಿಗೆ ಎಲ್ಲವನ್ನು ಹೇಳುತ್ತಾಳೆ. ಆತ ನ್ಯಾಯಕ್ಕಾಗಿ ದೂರು ಸಲ್ಲಿಸುತ್ತಾನೆ.

೨. ತಮ್ಮ ಊರಲ್ಲಿ ಇದ್ದ ಹೆಂಗಸು ಮಕಾಳಿ ಕೋಂ ಹೊನ್ನು ಇವಳಿಗೆ ಸುಮಾರು ಚೌತಿ ಹಬ್ಬದಿಂದ ರುತು ನಿಂತು ಬಂತುಅಂತಾ ಕೆಲವು ಜನ ಕೇಳಿದಲ್ಲಿ ಹೇಳುತ್ತಾರೆ. ಸದ್ರಿ ಆರೋಪಿಯಾದ ಮಂಕಾಳಿ ಇವಳಿಗೆ ಕೇಳುವಾಗ ಮಠದವರ ಸಮಕ್ಷಮ ನನ್ನ ಮೈದುನಾದ ಬೊಂಮು ಮಗಾ ಜಕ್ಕಾ ಇವನಿಂದಲೇ ಗರ್ಭ ರಚನೆ ಆದದ್ದು ಹೊರ್ತು ಬೇರೆಯವರಿಲ್ಲಾ ಅಂತ ಹೇಳುತ್ತಾಳೆ. ಸದ್ರಿ ಜಕ್ಕನಿಗೆ ಕೇಳಿದಲ್ಲಿ ತಾನು ಯಂತಾ ಕಬೂಲಿ ಆಗಿರುತ್ತಾನೆ.

೩. ನಮ್ಮ ಊರಿನ ಅನಾಚಾರದ ಕುರಿತು ಯಾವತ್ತೂ ಸಂಗ್ತಿ ಅರಿಕೆ ಮಾಡಾಗಿತ್ತು. ಆದರೆ ಆ ಸನ್ನಿಧಿಯಿಂದ ಏನೊಂದೂ ವಿಚಾರ ಆಗದೆ ಇದ್ದದ್ದು ನೋಡಿ ಆಶ್ಚರ್ಯ ಹಾಗೂ ಸೋಜಿಗವಾಗುತ್ತದೆ. ಸದ್ರಿ ಬಾಚಿನ ಸಂಬಂಧ ಆಕೆಯ ನವಪೂತಿðಯಾಗಿರುವ ಗಂಡನಾದ ದೇವು ಎಂಬವನೂ ಸಹ ಈ ಕುರಿತು ವಿಚಾರ ಮಾಡುವರ ಸನ್ನಿಧಿಯಲ್ಲಿ ಫಿರ್ಯಾದಿ ಕೊಟ್ಟಿದ್ದು ಸಹ ಇನ್ಸಾಬ್ ಆಗದೇ ಉಳಿದದ್ದು ನಮಗೆ ಕೆಟ್ಟ ದಾರಿಯನ್ನು ತೋರಿದಂತಾಯಿತು. ಅಲ್ಲದೇ ಆಕೆಯನ್ನು ಕೆಡಿಸಿ ಆಕೆಗೆ ಗರ್ಭೋತ್ಪತ್ತಿಯನ್ನು ಕೊಟ್ಟ ಭಟ್ಟರ ಗುರುಗಳ ಪರ್ತಗಾಳಿ ಮಠಕ್ಕೆ ವಿಚಾರ ತಿಳಿಸಬೇಕೋ ಹ್ಯಾಗೆ. ಆದ್ದರಿಂದ ತಮ್ಮ ಚರಣಕ್ಕೆ ವಿಜ್ಞಾಪನೆ ಮಾಡಿಕೊಳ್ಳುವುದೇನೆಂದರೆ ಇದರ ಯಾವತ್ತೂ ವಿಚಾರ ಮಾಡಿ ಗಂಡನಿಗೆ ಮದುವೆಯಾಗ ಬಗ್ಗೆ ಆಲೋಚನೆ ಮಾಡಿ ಆಕೆಗೆ ಯೋಗ್ಯ ಶಿಕ್ಷೆ ಮಾಡಿ ನಮ್ಮ ಜಾತಿಯಿಂದ ದೂರಪಡಿಸಿ ಇರಿಸಬೇಕಾಗಿ ಕೋರುತ್ತೇನೆ ಅಂತಾ ಬರಕೊಂಡ ವಿಜ್ಞಾಪನೆ.

ಈ ಮೇಲಿನ ಎಲ್ಲಾ ಘಟನೆಗಳೂ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆಗೆ ಸಾಕ್ಷಿಯಾಗಿವೆ. ಹೆಣ್ಣನ್ನು ಉಪಭೋಗಿಸಿಯೂ ಇನ್ನೊಬ್ಬರಲ್ಲಿ ಹೇಳಬಾರದೆಂಬ ಭಯ ಬಿತ್ತುವ ಗಂಡಿನ ದಬ್ಬಾಳಿಕೆ, ತನ್ನ ಕುಟುಂಬದ ಹಿತರಕ್ಷಣೆಗಾಗಿ ಈ ಲೈಂಗಿಕ ಕಿರುಕುಳವನ್ನು ಮೌನವಾಗಿ ಸಹಿಸುವ ಹೆಣ್ಣಿನ ರೋಧನೆ, ಎಂತಹ ಸ್ಥಿತಿಯಲ್ಲೂ ಮಹಿಳೆಯರು, ವಿಧವೆಯರು, ಸಮಾಜ ತೊಡಿಸಿದ ವಿಧಿ-ವಿಧಾನಗಳ ನಡುವೆ ತನ್ನೆಲ್ಲ ಪ್ರಕೃತಿ ಸಹಜ ಆಸೆ ಆಕಾಂಕ್ಷೆಗಳನ್ನು ಹತ್ತಿಕ್ಕಿ ಬದುಕಬೇಕಾದ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಈ ಘಟನೆಗಳು ಸ್ವಜಾತಿಯ ಪುರುಷರಿಂದಲೂ ಮೇಲ್ಜಾತಿಯ ಪುರುಷರಿಂದಲೂ ಹೆಣ್ಣು ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದುದನ್ನು ಇಲ್ಲಿ ಗಮನಿಸಬಹುದಾಗಿದೆ.

ಶೈಕ್ಷಣಿಕ ಸ್ಥಿತಿ :

ಮನೆಯ ಆರ್ಥಿಕ ಸ್ಥಿತಿ, ಪಾಲಕರ ನಿರಾಸಕ್ತಿ ಹಾಗೂ ಸಾಮಾಜಿಕ ಅಜಾಗೃತೆಯಿಂದಾಗಿ ಆಗೇರರು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿದ್ದಾರೆ. ಸರಕಾರದ ಸವಲತ್ತಿದ್ದರೂ ಅದರ ಸರಿಯಾದ ಅರಿವಿರದೆ, ಅದರ ಲಾಭ ಪಡೆಯದೆ ಅನಕ್ಷರಸ್ತರಾಗಿಯೇ ದಾರಿ ತುಳಿದರು. ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಕಾಣುತ್ತಿದೆ.

ಆಗೇರರಲ್ಲಿ ಮೊಟ್ಟ ಮೊದಲು ಶಿಕ್ಷಣದ ರುಚಿ ಹುಟ್ಟಿಸಿದವರು ಕ್ರಿಸ್ತ ಮಿಶನರಿಗಳು. ಮಿಶನರಿ ಸಹಾಯದಿಂದ ಪ್ರಪ್ರಥಮವಾಗಿ ಎಸ್.ಎಸ್.ಎಲ್.ಸಿ. ಪಾಸಾದ ಗೌರವ ಕ್ರೈಸ್ತ ಧರ್ಮವನ್ನು ಸ್ವೀಕರಿಸಿರುವ ಹೊನ್ನು ಆಗೇರ (ಹನ್ನಾಕೇ) ಅವರದು.

ಅಂಕೋಲೆಯ ಕ್ರಿಸ್ತಮಿತ್ರ ಆಶ್ರಮವು ಪ್ರಕಟಿಸಿದ ತನ್ನ ವಜ್ರ ಮಹೋತ್ಸವ ಸಂಚಿಕೆಯಲ್ಲಿ ಅವರು ’ಕ್ರೈಸ್ತ ಮಿತ್ರ ಆಶ್ರಯ ಹಾಗೂ ಆಗೇರ ಸಮಾಜ’ ಎಂಬ ಲೇಖನದಲ್ಲಿ “ಪ.ಟಿ. ವರ್ಗೀಸ್ ಎಂಬುವರೊಂದಿಗೆ ಗ್ರಾಮದಲ್ಲಿ ಒಂದು ಶಾಲೆಯನ್ನು ತೆರೆದು ಆಗೇರ ಸಮಾಜದವರೇ ಆದ ಸುಕ್ರು ಮಾಸ್ತರ ಅವರನ್ನು ಶಿಕ್ಷಕರನ್ನಾಗಿ ನೇಮಿಸಿದ್ದು ಆಗೇರ ಸಮಾಜಕ್ಕೆ ಕ್ರಿಶ್ಚಿಯನ್ ಧರ್ಮದ ಕೊಡುಗೆಯಾಗಿ ಕಂಡು ಬರುತ್ತದೆ” ಎಂದು ಬರೆದಿರುವುದು ಮೇಲಿನ ಮಾತನ್ನು ಪುಷ್ಟೀಕರಿಸುತ್ತದೆ.

ಆಗೇರರ ಜಿಲ್ಲೆಯಲ್ಲೇ ಮುಂದುವರಿದ ನಾಡವರ  ನೆರೆಯಲ್ಲಿ ಇದ್ದರೂ ಅಂತಹ ಶೈಕ್ಷಣಿಕ ಜಾಗೃತಿ ಇವರಲ್ಲಿ ಆಗದಿರುವುದು ಆಶ್ಚರ್ಯವೆನಿಸುತ್ತದೆ. ಅದೇ ಮಿಶನರಿ ಪ್ರಭಾವಕ್ಕೆ ಒಳಗಾದ, ನಗರದ ಸಮೀಪವಿರುವ ಪುರಲಕ್ಕಿ ಚೀಣ, ನೀಲಂ ಪುರಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿರುವುದು ಗಮನಾರ್ಹ ಸಂಗತಿಯಾಗಿದೆ. ಹೀಗಾಗಿ ಇವರ ಶೈಕ್ಷಣಿಕ ಜಾಗೃತಿ ಕಾರ್ಯದಲ್ಲಿ ಕ್ರೈಸ್ತ ಮಿಶನರಿಗಳ ಪಾತ್ರ ಪ್ರಮುಖವಾಗಿದೆ. ಹಾಗೆಯೇ ಹಿಂದು ಧರ್ಮದ ಮೇಲು ಜಾತಿಯವರೂ ಕೂಡ ಇವರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿದ ದಾಖಲೆಗಳಿವೆ.

ಅವರಲ್ಲಿ ಅಸ್ತಿತ್ವಕ್ಕೆ ಬಂದ ಜಾತಿ ಸಂಘ ಕೂಡ ಸಮಾಜದ ಶೈಕ್ಷಣಿಕ ಪ್ರಗತಿಯ ಕುರಿತು ಹೆಚ್ಚಿನ ಕಾಳಜಿಯನ್ನು ತೋರಿಸುತ್ತಿದ್ದು ಗಣನೀಯ ಪ್ರಮಾಣದಲ್ಲಿ ಶೈಕ್ಷಣಿಕ ಪ್ರಗತಿ ಆಗುತ್ತಿದೆ.

“ಈಗ ಎಲ್ಲ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಯಾವುದೇ ಅನಾದರ ಇಲ್ಲ. ಸುಶಿಕ್ಷಿತರಾದ ಹೆಣ್ಣು ಮಕ್ಕಳೇ ಗಂಡು ಮಕ್ಕಳಿಗಿಂತ ಹೆಚ್ಚು ನೌಕರಿಯನ್ನು (ಪ್ರಾಥಮಿಕ ಶಾಲಾ ಶಿಕ್ಷಕಿಯರಾಗಿ) ಮಾಡುತ್ತಿದ್ದಾರೆ” ಎಂದು ಹೇಳುತ್ತಾರೆ. ಪಿ.ಯು.ಸಿ. ಓದಿ ಸಾಕ್ಷರತಾ ಉಪಪ್ರೇರಕಿಯಾಗಿರುವ ರೇಖಾ ಆಗೇರರು ನಾನು ಕ್ಷೇತ್ರ ಕಾರ್ಯದಲ್ಲಿ ಭೇಟಿಯಾದ ಸಂದರ್ಭದಲ್ಲಿ ಹೇಳಿದರು.

“ಹಿಂದೆ ಆರ್ಥಿಕ ಕಷ್ಟದಿಂದ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಕಡಿತವಾಗುತ್ತಿತ್ತು. ಈಗ ಹೇಗಾದರೂ ಮಾಡಿ ಕಲಿಸುತ್ತಾರೆ. ನಮ್ಮ ತಂದೆ ಕೋರ್ಟಿನಲ್ಲಿ ನೌಕರರಾದುದರಿಂದ ನಾವು ಇಲ್ಲಿಂದ ದೂರಾಗಿ ಶಿರಸಿ ಪಟ್ಟಣದಲ್ಲಿ ನೆಲೆಸಿದವರು. ಹೀಗಾಗಿ ಈ ಜಾತೀಯ ಭಾವನೆ ಅಷ್ಟಾಗಿ ನಮ್ಮನ್ನು ಕಾಡಲಿಲ್ಲ. ಎಲ್ಲರಂತೆ ಓದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಈಗ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದೇನೆ. ಮುಖ್ಯ ಶಿಕ್ಷಕಿಯಾಗಿ ಬಡ್ತಿಯಾಗಿತ್ತಾದರೂ ಚಿಕ್ಕ ಮಗು (ಮೂರು ತಿಂಗಳ ಕೂಸು) ಇರುವುದರಿಂದ ಬೇಡವೆಂದು ಬಿಟ್ಟುಬಿಟ್ಟೆ” ಎನ್ನುವ ವೀಣಾ ಪ್ರೇಮಾನಂದ ಲಕ್ಷ್ಮೇಶ್ವರ ಇವರು ಈಗ ನೌಕರಿ ಸಿಕ್ಕ ಮೇಲೆ ಎಲ್ಲರೊಂದಿಗೆ ಹೊಕ್ಕು ಬಳಕೆ ಸಾಧ್ಯವಾದುದರಿಂದ ತಮಗೆ ಅಸ್ಪೃಶ್ಯತಾ ಭಾವನೆ ಕಾಡುವುದಿಲ್ಲ ಎನ್ನುತ್ತಾರೆ.

ಆಗೇರರ ಸಾಕ್ಷರತಾ ಪ್ರಮಾಣ ೨೦೦೨ ರ ಪ್ರಕಾರ ಹೀಗಿದೆ.

ಪ್ರಾಥಮಿಕ ಶಿಕ್ಷಣ – ಶೇ. ೩೮.೦೪

ಮಾಧ್ಯಮಿ ಶಿಕ್ಷಣ – ಶೇ. ೧೬.೧೩

ಪಿ.ಯು.ಸಿ. ಶಿಕ್ಷಣ – ಶೇ. ೩.೮೬

ಟಿ.ಸಿ.ಎಚ್., ಬಿ.ಇಡಿ., ಸಿ.ಪಿ.ಎಡ್. – ಶೇ. ೧.೦೫

ಪದವಿ ಶಿಕ್ಷಣ – ಶೇ. ೧.೦೫

ಸ್ನಾತಕೋತ್ತರ – ಶೇ. ೦.೫೨

ಒಟ್ಟಾರೆಯಾದ ಸಾಕ್ಷರತಾ ಪ್ರಮಾಣವೇ ಹೀಗಿರುವಾಗ ಮಹಿಳೆಯ ಸಾಕ್ಷರತಾ ಪ್ರಮಾಣ ಇನ್ನೂ ಕಡಿಮೆ ಇದೆ. ಟಿ.ಸಿ.ಎಚ್‌.ನ್ನು ಪೂರೈಸಿದ ಮಹಿಳೆಯರ ಸಂಖ್ಯೆ ಸ್ವಲ್ಪ ಹೆಚ್ಚಿದ್ದರೂ ಕೂಡಾ ಸ್ನಾತಕೋತ್ತರ ಪದವಿಗೆ ಪಾದಾರ್ಪಣೆ ಮಾಡಿದವರು ಅಪರೂಪ. ಒಟ್ಟಿನಲ್ಲಿ ಪುರುಷರ ಶೈಕ್ಷಣಿಕ ಮಟ್ಟ ಈಗಲೂ ಶೇಕಡಾ ೪೦ ಇದ್ದರೆ ಮಹಿಳೆಯರದು ಕೇವಲ ಶೇ. ೨೦ ರಷ್ಟು ಮಾತ್ರ.

ಆಗೇರ ಸಮಾಜದ ೨೦೦ ಕುಟುಂಬಗಳ ಸರ್ವೆ ಮಾಡಿದ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸಂಖ್ಯಾಶಾಸ್ತ್ರ ಉಪನ್ಯಾಸಕರಾಗಿರುವ ಅಶೋಕ ಕುಮಾರ ಇವರು ನಾನು ಭೇಟಿಯಾದ ಸಂದರ್ಭದಲ್ಲಿ ನಿರೀಕ್ಷಿತ, ತೃಪ್ತಕರ ರೀತಿ ಮಾಹಿತಿಯನ್ನು ನೀಡಿದರು.

ಪಿ.ಯು.ಸಿ. – ಶೇ. ೨೦

ಟಿ.ಸಿ.ಎಚ್.- ಶೇ.೦೮

ಡಿಗ್ರಿ – ಶೇ. ೧೨

ನೌಕರಿ – ಶೇ. ೦೯

ಇದು ಕೇವಲ ೨೦೦ ಕುಟುಂಬಗಳ ಸರ್ವೆಯಾಗಿದ್ದು, ಒಟ್ಟಾರೆ ನೋಡಿದಾಗ ಆಗೇರ ಮಹಿಲೆಯರ ಶೈಕ್ಷಣಿಕ ಮಟ್ಟ ಈ ಮಟ್ಟವನ್ನು ತಲುಪಿಲ್ಲ.

ಶಿಕ್ಷಣಕ್ಕೆ ಪೂರಕ ಪರಿಸರವಿದ್ದರೂ ಯಾಕೋ ಉಚ್ಚ ಶಿಕ್ಷಣಕ್ಕೆ ಹೋಗದೆ ಮಧ್ಯದಲ್ಲಿ ಶಿಕ್ಷಣ ಕುಂಠಿತಗೊಳಿಸುವುದು ವಿಷಾದನೀಯ ಸಂಗತಿಯಾಗಿದೆ. ಹಿಂದಕ್ಕೆ ಹೋಲಿಸಿದಾಗ ಈಗಿನ ಶೈಕ್ಷಣಿಕ ಪ್ರಗತಿ ತೃಪ್ತಿಕರವೆನಿಸಿದರೂ ಸಂಪೂರ್ಣ ಸಾಕ್ಷರರಾಗಿ ಸಮಾಜದ ಮುಖ್ಯವಾಹಿನಿಗೆ ಸೇರಲು ಇನ್ನೂ ಅನೇಕ ವರ್ಷಗಳ ಕಾಲಾವಕಾಶ ಬೇಕೆಂದೆನಿಸುತ್ತದೆ.

ಆರ್ಥಿಕ ಸ್ಥಿತಿ :

ಆಗೇರ ಮಹಿಳೆಯ ಶೈಕ್ಷಣಿಕ ಸ್ಥಿತಿಯೇ ಶೋಚನೀಯವಾಗಿರುವಾಗ ಆರ್ಥಿಕ ಸ್ಥಿತಿ ಕೇಳಬೇಕೆ? ಅದು ತುಂಬಾ ದಾರುಣವಾಗಿದೆ.

’ಆಗ ತಂದು ಆಗ ಉಂಬೋರೆ ಆಗೇರರು’ ಎಂದು ಅವರ ಬಗ್ಗೆ ಹೇಳುವ ಮಾತು ಅಕ್ಷರಶಃ ಸತ್ಯವಾಗಿದೆ. ಅವರಿಗೆ ಸ್ವಂತ ಆಸ್ತಿ ಇಲ್ಲ. ಸರಕಾರ ಕೊಟ್ಟ ಮನೆ, ಒಂದರಿಂದ ನಾಲ್ಕು ಗುಂಟೆಯವರೆಗಿನ ಭೂಮಿ, ಪ್ರತ್ಯೇಕ ಕಾಲನಿಗಳಲ್ಲಿ ವಾಸ. ಹೀಗಾಗಿ ನಿತ್ಯದ ಊಟಕ್ಕೆ ನಿತ್ಯದ ದುಡಿಮೆಯೇ ಗತಿ. ಉಪ್ಪಿನಾಗರಗಳಲ್ಲಿ ಕೆಲಸ ಸಾಧ್ಯವಾಗದ ಮಳೆಗಾಲದಲ್ಲಿ ಊಟಕ್ಕೆ ಸಂಚಕಾರ ಬರುತ್ತದೆ.

ಮದುವೆಯಾದ ಹೊಸತರಲ್ಲಿ ಗಂಡಂದಿರೊಂದಿಗೆ ಸಮಾನ ದುಡಿಮೆ. ಬಸಿರು ಬಾಣಂತನವನ್ನು ಲೆಕ್ಕಿಸದೆ ಉಪ್ಪಿನ ಆಗರಗಳಲ್ಲಿ ಅಥವಾ ಯಾವುದಾದರೂ ಮೇಲ್ಜಾತಿಯವರ ಮನೆಯಲ್ಲಿ ನಿರಂತರ ಕೂಲಿ.

ಕ್ಷೇತ್ರ ಕಾರ್ಯದಲ್ಲಿ ಭೇಟಿಯಾದ ಪಾರ್ವತಿ ಸೋಮು ಆಗೇರರು “ತಾವೆಲ್ಲ ದುಸ್ಮೆ ಸುರು ಮಾಡಿದ್ದೆ ಬಾಳ ಸಣ್ಣೋರಿರುವಾಗ್ಲೆ. ಎಷ್ಟು ದುಡ್ಡು ಕೊಡ್ತಿದ್ದರೂ ಅದು ಅಪ್ಪಂದಿರ‍್ಗೇ ಗೊತ್ತಿರ‍್ತಿತ್ತು. ಮದುವೆ ಆದ ಮೇಲೆ ಮಾವ ಯಜಮಾನ ಇರ‍್ತಿ. ಗಂಡ ಮಾವರಿಗೆ ಗೊತ್ತು. ಒಟ್ಟಿನಲ್ಲಿ ನಮಗೆ ಬೇಕಾದಾಗ ಎಲ್ಲ ಕೊಡಿಸ್ತಿರ. ನಮ್ಗೆ ಏನೂ ತೊಂದ್ರೆ ಅಂಬೂದ ಆಗ್ತಿರ‍್ಲಿಲ್ಲ” ಎಂದು ಹೇಳಿದರು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ ಚಿಕ್ಕ ವಯಸ್ಸಿನಲ್ಲಿಯೇ ದುಡಿಮೆ ಪ್ರಾರಂಭಿಸಿದ ಈ ಹೆಣ್ಣು ಜೀವಗಳು ತಮ್ಮದೇ ಆದ ಯಾವ ಪ್ರತ್ಯೇಕತೆಯನ್ನು ಬಯಸದೆ, ಪರಂಪರಾಗತವಾಗಿ ಬಂದ ಈ ಪುರುಷ ಯಜಮಾನಿಕೆಯನ್ನು ಭಾವುಕತೆಯಿಂದ ಅಪ್ಪಿಕೊಂಡು ಬದುಕುತ್ತಿರುವಂತೆ ತಿಳಿದು ಬರುತ್ತದೆ.

೧೯೮೩-೮೪ ಅಂಕೋಲಿಯ ಸೆಂಟಿನರಿ ಕಾಲೇಜಿನ ಯೋಜನಾ ವೇದಿಕೆಯ ಚೇರ್‌ಮನ್ ಡಾ. ಕೆ. ಆರ‍್. ಭಟ್ ಅವರು “ಪ್ರತಿಯೊಬ್ಬನ ಸರಾಸರಿ ವಾರ್ಷಿಕ ಆದಾಯ ೧೯೮೨-೮೩ರ ಸುಮಾರಿಗೆ ೯೦೦-೦೦ ರೂ.ಗಳೆಂದು ಲೆಕ್ಕ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಈ ಜನರ ತಲಾ ಆದಾಯ ಇದಕ್ಕಿಂತಲೂ ತೀರ ಕಡಿಮೆ. ದೇಶದ ತಲಾ ಆದಾಯದೊಡನೆ ಹೋಲಿಸಿದರೆ ಇದು ಅತ್ಯಂತ ಅಲ್ಪ. ೧೯೮೦-೮೧ ರಲ್ಲಿ ದೇಶದ ತಲಾ ಆದಾಯ ೧೫೩೬-೯೦ ರೂಪಾಯಿ ಇದ್ದು, ೧೯೮೨-೮೩ ರಲ್ಲಿ ಅದು ಇನ್ನೂ ಹೆಚ್ಚಾಗಿದೆ. ಈ ಜನರಲ್ಲಿ ಬಹುಸಂಖ್ಯಾತರು ಹಗಲಿಡೀ ಕೂಲಿ ಮಾಡುವ ಶ್ರಮಜೀವಿಗಳು. ಒಬ್ಬ ಕೂಲಿಯ ದಿನದ ಗಳಿಕೆ ೧೦ ರಿಂದ ೧೨ ರೂಪಾಯಿಗಳವರೆಗೆ. ಸ್ತ್ರೀ ಕಾರ್ಮಿಕರ ಗಳಿಕೆ ಇದಕ್ಕಿಂತ ಕಡಿಮೆ ಇದ್ದು, ದಿನದ ಸಾಮಾನ್ಯ ಆದಾರ ೬ ರಿಂದ ೮ ರೂಪಾಯಿ ಮಾತ್ರ. ಕೂಲಿಯ ಹೊರತಾಗಿ ಇನ್ನಿತರ ಯಾವುದೇ ಮೂಲದಿಂದ ಆದಾಯವಿಲ್ಲ. ವರ್ಷದ ಕೆಲವು ತಿಂಗಳಲ್ಲಿ ಕೂಲಿಯೂ ಅನಿಶ್ಚಿತ. ಆಗಸ್ಟ್, ಸೆಪ್ಟೆಂಬರ‍್ ತಿಂಗಳಲ್ಲಿ ಕೂಲಿಯೂ ದುರ್ಲಭವಿದ್ದು, ಒಪ್ಪತ್ತಿನ ಅಮಬಲಿಯೂ ಕೈಗೆಟುಕದ ದುಃಸ್ಥಿತಿ ಇವರದು” ಎಂದು ಬರೆದಿದ್ದಾರೆ.

ಈಗಲೂ ಅವರು ದಿನದಲ್ಲಿ ಹೆಚ್ಚೆಂದರೆ ಎರಡು ಮನೆಗಳ ಕೆಲಸ ಮಾಡುವುದಾಗಿಯೂ ಒಂದೊಂದು ಮನೆಗೆ ತಿಂಗಳಿಗೆ ೧೦೦-೧೫೦ ರೂಪಾಯಿಗಳನ್ನು ಕೊಡುವುದಾಗಿ ಭೇಟಿಯಾದ ಹೆಂಗಳೆಯರು ಹೇಳಿರುವುದರಿಂದ ದಿನದ ಅವರ ಉತ್ಪಾದನೆ ಇನ್ನೂ ೧೧ ರೂಪಾಯಿಗಳನ್ನು ಮೀರಿಲ್ಲ. ಕೂಲಿ ಕೆಲಸಕ್ಕೆ ಹೋದರೆ ದಿನಕ್ಕೆ ೫೦-೬೦ ರೂಪಾಯಿ ಕೊಡುತ್ತಾರೆ. ಎಲ್ಲೋ ನಾಲ್ಕೈದು ಕುಟುಂಬಗಳ ಸ್ವಂತ ಜಮೀನನ್ನು (ಹಿಲ್ಲೂರು, ನೀಲಂಪುರ, ಹಾರವಾಡಾ, ತೋಡೂರ ಮುಂತಾದ ಕಡೆಗಳಲ್ಲಿ ೩ ರಿಂದ ೪ ಎಕರೆ ಕೃಷಿ ಭೂಮಿ) ಹೊಂದಿದ್ದು, ಉಳಿದ ಎಲ್ಲರಿಗೂ ಕೂಲಿಯೇ ಗತಿ ಎಂದು ಹೇಳಿದರು.

ಸರಕಾರಿ ನೌಕರರ ಸಂಖ್ಯೆಯೂ ತೀರಾ ಕಡಿಮೆ. ಇತ್ತೀಚೆಗೆ ಮಹಿಳೆಯರು ಓದಿ ಸರಕಾರಿ, ಅರೆ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕಿಯರು – ೧೫ ರಿಂದ ೨೦

ಪ್ರೌಢಶಾಲಾ ಶಿಕ್ಷಕಿಯರು  – ೦೨

ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕಿ – ೦೧

ಡಿಪ್ಲೋಮಾ ಎಂಜಿನಿಯರ‍್ – ೦೧

ಇನ್ನುಳಿದ ಕೆಲವು ’ಸಿ’ ದಜೆðಯ ನೌಕರರನ್ನು ಖಾಸಗಿ ನೌಕರರನ್ನು ಬಿಟ್ಟರೆ ಉನ್ನತ ಹುದ್ದೆಗಳಲ್ಲಿ ಅವರು ಕಾಣುತ್ತಿಲ್ಲ. ಒಟ್ಟಿನಲ್ಲಿ ಮಹಿಳಾ ನೌಕರಸ್ತರ ಪ್ರಮಾಣ ಶೇ. ೩.೨೫ ಇರುತ್ತದೆ.

ನೌಕರಸ್ಥ ಕೆಲ ಮಹಿಳೆಯರನ್ನು ಮಾತನಾಡಿಸಿದಾಗ ’ಇಬ್ಬರ ದುಡಿಮೆಯಿಂದ ಜೀವನ ನಿರ್ವಹಣೆ ಸುಲಭವಾಗಿದೆ. ಕುಟುಂಬದಲ್ಲಿ ಸಂತೃಪ್ತಿ ಇದೆ. ಮುಂದೆ ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಉತ್ತಮ ಸ್ಥಿತಿಗೆ ತರಬೇಕು.’ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಮಹಿಳೆಯರ ಆರ್ಥಿಕ ಸ್ಥಿತಿಯ ಸುಧಾರಣೆಯಿಂದ ಕುಟುಂಬದಲ್ಲಿ ಹೆಚ್ಚಿನ ಗೌರವ ಹಾಗೂ ತನ್ನದೇ ಆದ ಹಿಡಿತ ಪ್ರಾಪ್ತವಾಗಿರುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಕೇವಲ ಕೃಷಿ ಕೂಲಿ ನಂಬಿದ ಬಹುಸಂಖ್ಯಾತ ಮಹಿಳೆಯರು ಮೊದಲಿನ ಕಡು ಬಡತನದಲ್ಲಿಯೇ ಬಳಲುತ್ತಿದ್ದಾರೆ. ಹೀಗಾಗಿ ಈ ಸ್ತ್ರೀ ಶೋಷಣೆ, ಮಹಿಳಾ ದೌರ್ಜನ್ಯ, ಪುರುಷ ಪ್ರಧಾನತೆ, ಆರ್ಥಿಕ ಸ್ವಾವಲಂಬನೆಯ ಯಾವ ಮಹಿಳಾ ದೃಷ್ಟಿಕೋನವೂ ಅವರ ಮಾತುಗಳಲ್ಲಿ ಇರಲಿಲ್ಲ.