ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗದಲ್ಲಿ

ಅಸ್ಪೃಶ್ಯತೆಯ ಕೀಳರಿಮೆ, ದಾಸ್ಯತನದ ಅತಿವಿನಯ, ಅನಕ್ಷರತೆಯ ಭಯದಿಂದ ಸದ್ದಿಲ್ಲದೆ ಬದುಕುವ ಆಗೇರ ಮಹಿಳೆಯರು ಅವಕಾಶ ಸಿಕ್ಕರೆ ನಾವೂ ದೇಶವನ್ನೇ ಆಳಬಲ್ಲೆವು ಎಂಬುದನ್ನು ಕಾರ್ಯತಃ ಸಾಧಿಸಿ ತೋರಿಸಿರುವುದು ವಾಸ್ತವಿಕ ಸತ್ಯವಾಗಿದೆ. ಪಂಚಾಯ್ತ ವ್ಯವಸ್ಥೆಗಳಲ್ಲಿ ಸಿಕ್ಕಿರುವ ಮೀಸಲಾತಿ ಇವರಿಗೆ ಉಸಿರನ್ನು ನೀಡಿದೆ. ರಾಜಕೀಯ ಸ್ಥಾನದಿಂದಾಗಿ ಸಾಮಾಜಿಕ ಮನ್ನಣೆಯನ್ನು ತಂದುಕೊಟ್ಟಿದೆ. ಹೊರ ಪ್ರಪಂಚಕ್ಕೆ ಕಾಲಿಟ್ಟ ಮಹಿಳೆಯರು ಅಲ್ಲೇ ಮುಂದುವರೆಯುವ ಛಲವನ್ನು ವಿಶೇಷವಾದುದನ್ನು ಸಾಧಿಸುವ ಆತ್ಮವಿಶ್ವಾಸವನ್ನು ಹೊಂದಿದವರಾಗಿದ್ದಾರೆ.

“ಮೀಸಲಾತಿ ಇದ್ದುದರಿಂದ ಪಟ್ಟಣ ಪಂಚಾಯ್ತದ ಅಧ್ಯಕ್ಷಳಾದೆ. ಯಾವುದೇ ತರಬೇತಿ ಇಲ್ಲದ ನನಗೆ ಹಿಂಜರಿಕೆ ಇತ್ತು. ಆದರೆ ಸಮಾಜದ ಹಿತಾಸಕ್ತರು ನನಗೆ ಸಂಪೂರ್ಣ ಪ್ರೋತ್ಸಾಹ, ಸಹಾಯ ಸಹಕಾರಗಳನ್ನು ನೀಡಿದರು. ಎಲ್ಲವನ್ನು ಕೇಳಿ ತಿಳಿದು ನಿಭಾಯಿಸಿದೆ. ಮತ್ತು ಅವಕಾಶ ಸಿಕ್ಕರೆ ಚುನಾವಣೆಯಲ್ಲಿ ಸ್ಪರ್ಧೆಗಿಳಿಯುವ” ಎಂದು ಹೇಳುತ್ತಾರೆ. ಅಂಕೋಲಾ ಪಟ್ಟಣ ಪಂಚಾಯ್ತದ ಮಾಜಿ ಅಧ್ಯಕ್ಷೆ ಶ್ರೀಮತಿ ದಾಕ್ಷಾಯಿಣಿ ಆಗೇರರು.

ಹನ್ನೊಂದು ವರ್ಷಗಳ ಹಿಂದೆಯೇ ಜಿ.ಸಿ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ಈಗ ಮೂವರು ಮಕ್ಕಳ ತಾಯಿಯಾಗಿ ಸಂಸಾರದ ನೊಗ ಹೊತ್ತ ಇವರಿಗೆ ಅದು ಸಾಧ್ಯವಾದ್ದು ಶಿಕ್ಷಣದ ಬಲದಿಂದ ಹಾಗೂ ಸರಕಾರದ ಒತ್ತಾಸೆಯಿಂದ.

“ಅಧ್ಯಕ್ಷಳಾದ ಮೇಲೆ ನನ್ನ ನೋಡುವ ಜನರ ದೃಷ್ಟಿ ಸ್ವಲ್ಪ ಬದಲಾಯ್ತು. ಅನೇಕರ ಹೊಕ್ಕು ಬಳಕೆ ಆಯ್ತು. ನಮ್ಮ ಮೇಲೆ ಸವಾರಿ ಮಾಡಬಯಸುವ ಮೇಲ್ವರ್ಗದ ಅಧಿಕಾರ ಶಾಹಿ ಮನೋಭಾವವೂ ವ್ಯಕ್ತವಾಯ್ತು. ಆದರೆ ನಾನು ವಿನಯದಿಂದ, ಸೌಮ್ಯದಿಂದ ಅದನ್ನು ಸರಿಯಾಗಿ ನಿಭಾಯಿಸಿದೆನೆನ್ನುವ ದಾಕ್ಷಾಯಿಣಿಯವರಿಗೆ ತಾನು ಹೊಸದೇನನ್ನೋ ಸಾಧಿಸಿದ ಹರ್ಷವಿದೆ. ಸಾಧನೆಯ ಹಾದಿಯಲ್ಲಿ ಆಸಕ್ತಿ ಕುದುರಿದೆ.

“ಎಸ್‌.ಎಸ್.ಎಲ್.ಸಿ.ಯ ನಂತರ ಆರ್ಥಿಕ ಬಡತನದಿಂದಾಗಿ ’ಓದಲಾಗಲಿಲ್ಲ. ಆದರೆ ಸೋಶಿಯಲ್ ವರ್ಕರ‍್ ಆಗಿ ನನ್ನನ್ನು ನಾನು ಗುರುತಿಸಿಕೊಂಡಿದ್ದೆ. ಅದರ ಜೊತೆ ಮೀಸಲಾತಿಯೂ ಸೇರಿ ಇಂದು ನಾನು ಜಿಲ್ಲಾ ಪಂಚಾಯ್ತದ ಸದಸ್ಯೆಯಾಗಲು ಸಾಧ್ಯವಾಯ್ತು. ಈ ಸಮಾಜ ಸೇವಾ ಕಾರ್ಯದ ಅನುಭವದಿಂದಾಗಿ ಯಾವುದೇ ಭಯ ಹಿಂಜರಿಕೆ ಆಗಲಿಲ್ಲ. ನಾವು ಎಲ್ಲರಂತೆ ಬದುಕುವಂತಾದೆವೆಂದು ಹೆಮ್ಮೆ ಎನಿಸುತ್ತದೆ. ಚಿಕ್ಕವರಿರುವಾಗ ಅಸ್ಪೃಶ್ಯತೆಯಿಂದ ಅನುಭವಿಸಿದ ನೋವು, ಸಿಟ್ಟು ಇವೇ ಇಂದಿನ ಈ ಸ್ಥಿತಿಗೆ ಮುಖ್ಯ ಪ್ರೇರಣೆ” ಎನ್ನುತ್ತಾರೆ. ಉತ್ತರ ಕನ್ನಡ ಜಿಲ್ಲಾ ಪಂಚಾಯ್ತದ ಸದಸ್ಯರೆಯೂ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರೂ ಆಗಿರುವ ನೊರ್ವೆಯ ಶ್ರೀಮತಿ ಶಾಂತಿ ಆಗೇರರು.

ತಾಲೂಕಾ ಪಂಚಾಯ್ತದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಹಾಲಿ ಸದಸ್ಯೆಯಾಗಿರುವ ಬಾಳೆಗುಳಿಯ ದೀಪಾ ಆಗೇರರು “ಯಾರಿಗೂ ಏನೂ ಕಡಿಮೆ ಇಲ್ಲದಂತೆ ನಾನು ನನ್ನ ಅವಧಿಯಲ್ಲಿ ಕೆಲಸ ಮಾಡಿದ್ದೇನೆ. ಸೂಕ್ತ ತರಬೇತಿಯಿಂದಾಗಿ ಪೂರಕ ಜ್ಞಾನ ಸಿಕ್ಕಿತು. ಅಧಿಕಾರ ವ್ಯಾಪ್ತಿಯ ಅರಿವಾಯ್ತು. ಇಂತಹ ಅಧಿಕಾರ ನಮಗೆ ಬೇಕು. ಇದರಿಂದ ನಮ್ಮ ಸಮಾಜಕ್ಕೆ ಹೆಚ್ಚಿನ ಸಹಾಯ ಮಾಡಲಿಕ್ಕೆ ಸರ್ಕಾರಿ ಸೌಲಭ್ಯಗಳನ್ನು ಅವರಿಗೆ ಪರಿಚಯಿಸಲಿಕ್ಕೆ ಶೈಕ್ಷಣಿಕ ಜಾಗೃತಿ, ಮಿತ ಕುಟುಂಬದ ಅರಿವನ್ನು ನೀಡಲಿಕ್ಕೆ ಸಾಧ್ಯವಾಯ್ತು” ಎನ್ನುತ್ತಾರೆ ಅವರು.

ಈ ಮೇಲಿನ ಮೂವರೂ ಮಹಿಳೆಯರಲ್ಲಿ ಮಾತನಾಡುತ್ತಿರುವಾಗ ಅವರಲ್ಲಿ ಯಾವುದೇ ಹಿಂಜರಿಕೆಯಾಗಲಿ, ಭಯವಾಗಲಿ ಇಲ್ಲದೆ ಎಷ್ಟು ಸಹಜವಾಗಿ ತಮ್ಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಖುಷಿಯೆನಿಸಿತು. ಎಲ್ಲರಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಒಳ್ಳೆಯದನ್ನು ಸಾಧಿಸಿದ ತೃಪ್ತಿಯಿತ್ತು. ಮತ್ತೆ ಅಧಿಕಾರಕ್ಕೆ ಬಂದು ಸಮಾಜಕ್ಕೆ ನಮ್ಮ ಕೈಲಾದ ಸೇವೆ ಸಲ್ಲಿಸಬೇಕೆಂಬ ಲವಲವಿಕೆ ಕೂಡ ಇತ್ತು.

ಆಧುನಿಕತೆಯೊಂದಿಗೆ ಮುಖಾಮುಖಿ

“ಹಾಡೆಲ್ಲ ಮರ‍್ತ ಹೋಗಿದ. ಈಗ ಹಾಡೆಲ್ಲ. ಹಾಡ್ ಕೇಳ್ದ್ರ ಎಲ್ಲ ನಗ್ತಿರ. ಈಗೆಲ್ಲ ಪಾಸನ್ (fashion) ಕಾಲ. ಆಗಿನ ಕಾಲ ಈಗೆಲ್ಲ” (ಈಗಿನ ಇಲ್ಲ) ಎಂದು ಹಳೆ ಮತ್ತು ಹೊಸ ತಲೆಮಾರಿನ ಕೊಂಡಿಯಾದ ಎಂಭತ್ತು ವರ್ಷ ವಯಸ್ಸಿನ ದೇವಿ ಮಂಕಾಳು ಆಗೇರ ಇವರು ಹೇಳುತ್ತಾರೆ. ಹೀಗೆ ಹಳಬರು ಹಳೆಯ ಕಾಲವೇ ಚೆನ್ನಾಗಿತ್ತೆಂದು ಪರಿತಪಿಸಿದರೆ, ಎಲ್ಲರಂತೆ ತಾವೂ ಆಧುನಿಕತೆಯೊಂದಿಗೆ ಮುಖಾಮುಖಿಯಾಗಿ ಬದುಕಲು ಸಾಧ್ಯವಾದ ಈ ಕಾಲವೇ ಒಳ್ಳೆಯದೆಂದು ಹೊಸಬರು ಸಂತೋಷಿಸುತ್ತಾರೆ. ಕಾಲದ ಪ್ರಭಾವದಿಂದ ಯಾರೂ ತಪ್ಪಿಸಿಕೊಳ್ಳಲಾಗದು. ಗತಿಸುವ ಕಾಲ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನ ಗತಿಯನ್ನು ಬದಲಾಯಿಸುತ್ತದೆ. ಒಂದು ಜಾತಿ, ಜನಾಂಗದ ವೇಷ, ಭೂಷಣ, ಭಾಷೆ, ಸಾಹಿತ್ಯ, ಸಂಪ್ರದಾಯ, ಆಚರಣೆ, ನಂಬಿಕೆಗಳು ವೈಶಿಷ್ಟ್ಯಪೂರ್ಣವಾಗಿದ್ದರೂ ಎಲ್ಲ ಕಾಲದಲ್ಲೂ ಅದು ಮುಂದುವರಿಯಬೇಕೆಂದು ಬಯಸದೆ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಬದುಕುವುದೇ ಸರಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಧುನಿಕತೆಯ ಸೋಂಕಿನೊಂದಿಗೆ ಹಳೆಯ ಕಲೆ ಸಾಹಿತ್ಯವನ್ನೂ ಕಳೆದುಕೊಳ್ಳುತ್ತಿರುವುದು ವಿಷಾದನೀಯವಾದರೂ ಸಮಾಜ ತೊಡಿಸಿದ ಕಟ್ಟಳೆ, ಸಂಕಲೆಯಿಂದ ಒಂದು ಜನಾಂಗದ ಸ್ತ್ರೀ ಮುಕ್ತವಾಗಿ ಸಮಾಜದ ಅನಿವಾರ್ಯ ಅಂಗವಾಗಿ ಸತ್ರೀಯರ ಬದುಕು ರೂಪುಗೊಳ್ಳುತ್ತಿರುವುದು ನಿಚ್ಚಳವಾಗಿದೆ.

ಬಹುಮುಖ್ಯವಾಗಿ ಇಲ್ಲಿ ಗಮನಕ್ಕೆ ಬರುವ ಸಂಗತಿಯೆಂದರೆ ಉತ್ತರ ಕನ್ನಡದ ಮುಂದುವರಿದ ಒಂದು ಜಾತಿಯಾದ ನಾಡವರ ಪ್ರಭಾವ ಇವರ ವೇಷ-ಭಾಷೆ, ಅಡುಗೆ-ಆಹಾರ, ಸಂಪ್ರದಾಯ – ಆಚರಣೆಗಳ ಮೇಲಾಗಿದೆ. ದಿನ ನಿತ್ಯ ತಾವು ದುಡಿಯುವುದರಿಂದ ಹೊಕ್ಕು ಬಳಕೆ ಸಾಧ್ಯವಾದ ನಾಡವರ ಪರಿಸರದಲ್ಲಿ ವಾಸಿಸುತ್ತಿರುವ ಆಗೇರರು ಹಾಗೂ ಪಟ್ಟಣದ ಸುತ್ತ ಮುತ್ತ ನೆಲೆಸಿದ ಆಗೇರರು ಬಹುಬೇಗ ಸುಧಾರಿಸಿದ್ದು ಎಲ್ಲ ಆಧುನಿಕ ಬದುಕಿಗೂ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ.

ಢಾಳಾಗಿ ಎದ್ದು ಕಾಣುವ ಪ್ರಭಾವವೆಂದರೆ ಸ್ತ್ರೀಯರ ವೇಷ. ಗೇಟಿಗೆ ಕಟ್ಟುವ ತಮ್ಮ ಸೀರೆ ಉಡಿಗೆಯನ್ನು ಕಳಚಿಕೊಂಡು ಸ್ತ್ರೀ ಸಾಮಾನ್ಯರ ಉಡುಗೆಯನ್ನು ಸ್ವೀಕರಿಸಿದ್ದಾರೆ. ಕಾಲಕ್ರಮೇಣ ಈ ಕುಪ್ಪುಸವಿಲ್ಲದ ಸೀರೆ ಹೆಂಗಳೆಯರಿಗೆ ನಾಚಿಕೆ ಎನಿಸಿರಬೇಕು. ಸ್ನಾನಕ್ಕೂ ಅಡ್ಡಿಯಾಗುವ ಈ ಸರಗಳೂ ಬೇಸರವೆನಿಸಿರಬೇಕು. ಬಹುಶಃ ಕೆಲಸಕ್ಕೆ ಹೋಗುವ ಒಡೆಯರ ಮನೆಯ ಪ್ರಭಾವದಿಂದಾಗಿ ಬಹುಬೇಗ ಉಡುಪಿನಲ್ಲಿ ಬದಲಾವನೆಯಾಯಿತು. ಈಗ ಹಳೆಯ ಉಡುಗೆ ತೊಟ್ಟ ಮಹಿಳೆಯರನ್ನು ನೋಡಬೇಕೆಂದರೂ ಅಪರೂಪವೇ. ಎಂಭತ್ತು ವರ್ಷದ ಮಹಿಳೆಯರೂ ತಾವು ಆ ರೀತಿಯ ಸೀರೆ ಉಟ್ಟಿಲ್ಲವೆಂದೇ ಹೇಳುತ್ತಾರೆ. ಮತ್ತೆ ಅರೆಬರೆ ಮೈ ಪ್ರದರ್ಶಿಸುವ ಆ ಉಡುಗೆಗಿಂತ ಮೈಮುಚ್ಚುವ ಈ ಉಡುಗೆಯೇ ಸರಿ ಎನ್ನುತ್ತಾರೆ. ಈಗಿನ ಹುಡುಗಿಯರು, ಹೆಂಗಸರು ಎಲ್ಲರಂತೆ ಆಧುನಿಕ ಉಡುಪುಗಳನ್ನು ಧರಿಸುತ್ತಾರೆ. ಮಹಿಳೆಯರು ತಮ್ಮ ಕೀಳರಿಮೆಯಿಂದ ಹೊರಬಂದು ಎಲ್ಲರ ಜೊತೆ ತಲೆ ಎತ್ತಿ ಸಾಗಲು ಈ ಹೊಸ ಉಡುಗೆ ಬಹಳ ಪೂರಕವಾಗಿದೆ.

ಭಾಷೆ ಕೂಡ ತಾಜಾತನವನ್ನು ಕಳೆದುಕೊಳ್ಳುತ್ತಿದೆ. ಆಗೇರರು ತಮ್ಮ ತಮ್ಮಲ್ಲಿ ಮಾತನಾಡುವಾಗ ಉಪಭಾಷೆಯನ್ನು ಬಳಸುತ್ತಾರೆಯೇ ಹೊರತು ಇತರರೊಡನೆ ವ್ಯವಹಾರಿಸುವಾಗ ಪರಿಸರದ ಭಾಷೆಯನ್ನೇ ಆಡುತ್ತಾರೆ. ಹಳೆಯ ಹೆಂಗಸರನ್ನು ಮಾತನಾಡಿಸಿದಾಗ ಮಾತ್ರ ಅವರ ಭಾಷಾ ಸೊಗಡಿನ ಅರಿವಾಗಬೇಕೇ ಹೊರತು ಈಗಿತ್ತಲಾಗಿನ ಮಕ್ಕಳ ಭಾಷೆಯಿಂದ ಊಹಿಸಲಾಗುವುದಿಲ್ಲ.

ಜಗಳದ ಪ್ರಸ್ತಾಪ ಬಂದಾಗ “ನಾವೇನೂ ಬರಿಸು‌ಮ್ನೆ ಜಗಳ ಮಾಡೋದಿಲ್ಲ. ಮೈಮ್ಯಾಲೆ ಬಂದ ರೀಗ ಬಿಡೋದೆಲ್ಲ. ನಮ್ಗೇನೂ ಕೆಟ್ಟ ಕೇಳೂಕೆಲ್ಲ. ತಲೆಗೆ ತೆನ್‌ಸನ್ (ಟೆನ್‌ಶನ್) ಮಾಡಿದರೆ ನಮ್ಗೂ ಸಿಟ್ ಬತ್ತಿದ” ಎಂದು ಹೇಳುವ ಅಜ್ಜಿಯ ಮಾತಿನಲ್ಲಿ ಅರಿವಿಲ್ಲದೆ ಇಂಗ್ಲೀಷ್ ಪದ ನುಸುಳಿತು. ಸ್ಟೋರಿ, ಟೆನ್‌ಶನ್, ಡ್ರೆಸ್ ಪ್ಯಾಶನ್ ಮುಂತಾದ ಇಂಗ್ಲೀಷ ಪದಗಳು ಅಜ್ಜಿಯರನ್ನೇ ಮೋಡಿ ಮಾಡಿರುವಾಗ ತರುಣಿಯರನ್ನು ಆಕರ್ಷಿಸದೆ ಇರುತ್ತವೆಯೇ? ನೌಕರಸ್ತರಲ್ಲಿ ಈಗ ಇಂಗ್ಲೀಷ ಮಾಧ್ಯಮದ ವ್ಯಾಮೋಹ ಮೂಡಿದೆ.

ಬಹಳ ಮುಖ್ಯವಾಗಿ ಮದುವೆ ಆಧುನಿಕ ವೇಷ-ಭೂಷಣವನ್ನು ಉಟ್ಟು-ತೊಟ್ಟು ನಿಂತಿದೆ. ಯಾವ ಪೌರೋಹಿತ್ಯದ ಪ್ರವೇಶವಿಲ್ಲದೆ ಮನೆಯ ಹಂದರದಲ್ಲಿ ನಡೆಯುವ ಮದುವೆ ಈಗ ಸಭಾಭವನಕ್ಕೆ ಕಾಲಿಟ್ಟಿದೆ. ಆಗ ನಮ್ಮ ಜಾತಿಯವರು ಮಾತ್ರ ಮದುವೆಗೆ ಬರುತ್ತಿದ್ದರು. ಈಗ ಎಲ್ಲ ಜಾತಿಯ ಜನರೂ ಬರುವುದರಿಂದ ಇದು ಅನಿವಾರ್ಯ. ಬ್ರಾಹ್ಮಣರೇ ಅಡುಗೆ ಮಾಡಿದರೆ ಎಲ್ಲರೂ ಉಂಡು ಹೋಗುತ್ತಾರೆ. ಎನ್ನುತ್ತಾರಿವರು. ಗೋಧೂಳಿ ಲಗ್ನದಲ್ಲಿ ನಡೆಯುವ ಇವರ ಮದುವೆಗೆ ಸಮುಹೂರ್ತದಲ್ಲಿ ಪುರೋಹಿತರೇ ಬಂದು ಮದುವೆ ನಡೆಸುವ ಆಧುನಿಕ ಸೋಂಕು ತಗಲಿದೆ. ಹೀಗಾಗಿ ಅವರದೇ ಆದ ಕೆಲವೊಂದು ಆಚರಣೆಗಳು ಮಾಯವಾಗುತ್ತಿವೆ.

ಆಗೇರರಲ್ಲಿ ಹೆಣ್ಣು ಹೆತ್ತವರಿಗೆ ಆರ್ಥಿಕ ಬಳಲಿಕೆ ಆಗದಂತೆ ತೆರಕೊಡುವ, ಕೈವೀಳ್ಯದ ಅಕ್ಕಿ ಕೊಡುವ ಪದ್ಧತಿ ಇತ್ತು. ಬಹಳ ವಿಷಾದದ ಸಂಗತಿಯೆಂದರೆ ಅಶಿಕ್ಷಿತರದಲ್ಲಿ ಇದ್ದಂತಹ ಸದ್ಭಾವನೆಯ ಆಚರಣೆ ಶಿಕ್ಷಿತರು ಹೆಚ್ಚಾದಂತೆ, ಉದ್ಯೋಗಸ್ತರು ಹೆಚ್ಚಾದಂತೆ ದೂರವಾಗುತ್ತಿದೆ. ಆರ್ಥಿಕವಾಗಿ ಸುಧಾರಿಸಿದ ಗಂಡಿನ ಕಡೆಯವರು ಈಗ ಹೆಚ್ಚಿನ ಸುಲಿಗೆ ಮಾಡ ಹೊರಟಿದ್ದಾರೆ. ಇತರರಿಗೆ ಹೋಲಿಸಿದಾಗ ದುಡ್ಡಿನ ಪ್ರಮಾಣ ಕಡಿಮೆ ಇದ್ದರೂ ’ವರದಕ್ಷಿಣೆ’ ಭೂತದ ಪ್ರವೇಶವಾಗಿದೆ. ಹೆಣ್ಣು ಹೆತ್ತವರ ಕಷ್ಟಕ್ಕೆ ಸ್ಪಂದಿಸುವ ಈ ಮಾನವೀಯ ವರ್ತನೆಯಿಂದ ದೂವಾಗಿ ಹೆಣ್ಣು ಹೆತ್ತವರ ಹೊಟ್ಟೆ ಉರಿಸುವ ಅಮಾನವೀಯ ವರ್ತನೆಗೆ ಕಾಲಿಡುತ್ತಿರುವುದು ಆಧುನಿಕತೆಯ ಸೋಂಕು ಎನ್ನಬೇಕೆ? ಆರ್ಥಿಕ ಬಳಲಿಕೆ ಇರುವ ಅವರಲ್ಲಿ ಇದೇ ದೊಡ್ಡ ಸುಲಿಗೆಯಾಗಿ ಮಾರ್ಪಡುವ ಸಾಧ್ಯತೆಗಳಿವೆ.

ಮದುವೆಯ ನಂತರ ಓಂಕುಳಿ ಆಡಿಸುವ ಪದ್ಧತಿಯೂ ಮಾಯವಾಗುತ್ತಿದೆ. ಆಗೇರರಲ್ಲಿ ಗಂಡು ಹೆಣ್ಣು ಪರಸ್ಪರ ಮೊದಲು ನೋಡಿರುವುದಿಲ್ಲ. ಮದುವೆ ಚಪ್ಪರದಲ್ಲಿ ಹಾರ ಸಮರ್ಪಣೆಯ ನಂತರವೇ ಮುಖದರ್ಶನವಾಗುವುದರಿಂದ ಪರಸ್ಪರರ ಪ್ರೀತಿ ಸಲುಗೆ ಸಂವರ್ಧನೆ ಇದು ಅವಶ್ಯಕವಾಗಿತ್ತು. ಆದರೆ ಈಗ ಹೆಣ್ಣು ಗಂಡು ಮೊದಲು ನೋಡಿಯೇ ಒಪ್ಪುವುದರಿಂದ ಮತ್ತು ದೂರವಾಣಿಯ ಮೂಲಕ ಸಂಪರ್ಕ ಸಾಧ್ಯವಾದುದರಿಂದ ಈಗಿನ ಮದುಮಕ್ಕಳಲ್ಲಿ ಮೊದಲಿನ ಮೈಚಳಿ ಇರುವುದಿಲ್ಲ. ಹೀಗಾಗಿ ಈಗ ಓಂಕುಳಿಯ ಅನಿವಾರ್ಯತೆ ಇಲ್ಲವೆಂದೇ ಹೇಳುತ್ತಾರೆ.

ಅಂತರಜಾತಿಯ ವಿವಾಹಗಳು ಆಗೇರರಲ್ಲಿ ನಡೆಯುತ್ತಿವೆ. ನಾಮಧಾರಿ, ಹಾಲಕ್ಕಿಗಳ ಜೊತೆ ವಿವಾಹವೇರ್ಪಟ್ಟಿವೆ. ಮಹಿಳೆಯರೂ ಅಂತರ್ಜಾತಿಯ ವಿವಾಹವಾಗಿದ್ದಾರಾದರೂ ಪುರುಷರ ಸಂಖ್ಯೆಯೇ ಜಾಸ್ತಿ. ಅಂತರ್ಜಾತಿಯ ವಿವಾಹವೊಂದೇ ಈ ಜಾತಿಯ ಗೋಡೆಗಳನ್ನು ಕೆಡಹಲು ಸಾಧ್ಯವಾದುದರಿಂದ ಇಂದಿನ ದಿನಗಳಲ್ಲಿ ಇದರ ಅಗತ್ಯ ಹೆಚ್ಚಿದೆ.

ಆಗೇರರಲ್ಲಿ ವಿವಾಹ ವಿಚ್ಛೇದನ ಸರ್ವಸಮ್ಮತವಲ್ಲದಿದ್ದರೂ, ವೈವಾಹಿಕ ಹೊಂದಾಣಿಕೆಯೇ ಸಾಧ್ಯವಾಗದಿದ್ದ ಹಂತದಲ್ಲಿ ಕಾನೂನೂ ರೀತಿಯಲ್ಲಿ ಒಂದೆರಡು ವಿವಾಹ ವಿಚ್ಛೇದನಗಳಾಗಿವೆ.

ವಿಧವಾ ವಿವಾಹಗಳು ನಡೆದದ್ದು ಕಡಿಮೆಯಾದರೂ ಆಗಬಹುದಾದ ಸ್ಥಿತಿ ಈಗ ನಿರ್ಮಾಣವಾಗಿವೆ.

ಕೇವಲ ಯಕ್ಷಗಾನದ ಪ್ರಿಯ ವೀಕ್ಷಕರಾಗಿದ್ದ ಆಗೇರ ಮಹಿಳೆಯರು ಹೊಸ ಕಲಾ ಜಗತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದುವರೆಗೆ ಪುರುಷರಿಗೆ ಮಾತ್ರ ಸೀಮಿತಿವಾಗಿದ್ದ ಯಕ್ಷಲೋಕದಲ್ಲಿ ತಾವೂ ಗೆಜ್ಜೆ ಕಟ್ಟಿ ಹೆಜ್ಜೆ ಇಡುತ್ತಿದ್ದಾರೆ. ಶ್ಯಾಮಲಾ ಗುಂದಿ, ಸ್ವಪ್ನಾ ಗುಂದಿ, ರಜನಿ ಗುಂದಿ, ಚಂದ್ರಕಲಾ ಆಗೇರ, ಹೇಮಾವತಿ ಆಗೇರ ಇವರೆಲ್ಲರೂ ಸ್ತ್ರೀ ಪುರುಷ ವೇಷಧಾರಿಗಳಾಗಿ ರಂಗಸ್ಥಳದಲ್ಲಿ ಮಿಂಚುತ್ತಿದ್ದಾರೆ. ’ಭೀಷ್ಮ ವಿಜಯ’, ’ಕೃಷ್ಣಾರ್ಜುನ’, ’ಲವ-ಕುಶ’, ’ಮೀನಾಕ್ಷಿ ಪರಿಣಯ’ ಮುಂತಾದ ವಿರೋಚಿತ ಪ್ರಸಂಗಗಳನ್ನು ಆಡಿ ತಮ್ಮ ಕಲಾ ಪ್ರದರ್ಶನ ಮಾಡುತ್ತಿದ್ದಾರೆ.

ಅಗ್ರಗೋಣದಲ್ಲಿ ಶ್ರೀ ಕೃಷ್ಣ ಆಗೇರರು ಭಾಗವತರಾಗಿ ಹೆಣ್ಣು ಮಕ್ಕಳಿಗೆ ಯಕ್ಷಗಾನ ಕುಣಿತದ ತರಬೇತಿ ನೀಡುತ್ತಿದ್ದಾರೆ.

ತಮ್ಮ ಓದಿನ ಜೊತೆ ಜೊತೆಗೆ ಮಹಿಳೆಯರು ಯಕ್ಷರಂಗ ಪ್ರವೇಶಿಸಿ, ಈವರೆಗೂ ಪುರುಷನಿಗೆ, ಮೀಸಲಾಗಿದ್ದ ಯಕ್ಷಗಾನ ರಂಗಕಲೆಯನ್ನು ತಮ್ಮದಾಗಿಸಿಕೊಂಡು ಕೃಷಿ ಮಾಡುತ್ತಿರುವುದು ತುಂಬಾ ಪ್ರಶಂಸನೀಯವಾಗಿದೆ.

ವಾರವನ್ನೇ ಪ್ರಧಾನವಾಗಿಸಿಕೊಂಡ ಹಳೆಯ ಹೆಸರುಗಳು ಮಾಯವಾಗಿ ಆಧುನಿಕ ಹೆಸರುಗಳು ಪ್ರವೇಶ ಪಡೆದಿವೆ. ಹೆಸರಿನಿಂದಲೇ ಜಾತಿ ಗುರುತಿಸಲು ಸಾಧ್ಯವಾಗುವ ಈ ಹೆಸರುಗಳಿಂದ ಕಳಚಿಕೊಂಡಿರುವುದು ಅವರು ಜಾತೀಯ ಕೀಳರಿಮೆಯಿಂದ ಹೊರ ಬರಲು ಕೂಡ ಕಾರಣವಾಗಿದೆ.

ಆಹಾರ, ತಿಂಡಿ ತಿನಿಸುಗಳಲ್ಲಿಯೂ ಗಮನೀಯ ಬದಲಾವಣೆಗಳಾಗುತ್ತಿವೆ. ಇತರ ಜನಾಂಗದ ಸಂಪರ್ಕ ಹೆಚ್ಚಿದಂತೆ, ಹೆಣ್ಣು ಮಕ್ಕಳು ಸುಶಿಕ್ಷಿತರಾದಂತೆ ಹಾಗೂ ದೂರದರ್ಶನದ ಹೊಸ ರುಚಿಯ ಪ್ರಭಾವವೋ ಏನೋ ಇವರು ಹಳೆಯ ಕಜ್ಜಾಯಗಳ ಜೊತೆಗೆ ಚಕ್ಕುಲಿ, ಪುರಿ, ಕೋಡುಬಳೆ, ಅಂಬೋಡೆ, ಮುಂತಾದ ಕರಿದ ಖಾದ್ಯಗಳು ಪ್ರಾರಂಭವಾಗಿವೆ. ಇದು ಇತ್ತೀಚಿನ ಆರ್ಥಿಕ ಸಬಲತೆಯಿಂದ ಆದ ಬದಲಾವಣೆ ಕೂಡ ಹೌದು.

ಈಗ ವಾರ-ವತದ ಆಚರಣೆ ಹೆಚ್ಚಿದೆ. ಸಂಕಷ್ಟಿಯಂತೂ, ಸಾಮೂಹಿಕ ಸನ್ನಿಯಾಗಿ ಇವರನ್ನು ಆವರಿಸಿದೆ. ನಾಮಕರಣ, ಮದುವೆ, ಶವಸಂಸ್ಕಾರಗಳಿಗೂ ಪುರೋಹಿತರ ಪ್ರವೇಶವಾಗುತ್ತಿದೆ. ಎಲ್ಲದಕ್ಕೂ ಶುಭ ಮುಹೂರ್ತ ಕೇಳುವ ಗೀಳು ಪ್ರಾರಂಭವಾಗಿದೆ.

ಬಡತನದಿಂದಾಗಿಯೇ ರೂಢಿಯಲ್ಲಿದ್ದ ಒಂದು ಪದ್ಧತಿ ’ಬೇಡಿಕೆ’. ಕೆಲವು ಹಬ್ಬ ಹರಿದಿನಗಳ ನಂತರ ಆಗೇರರ ಮಹಿಳೆಯರು ಮೇಲ್ಜಾತಿಯ ಮನೆಗಳಿಗೆ ಬೇಡಲು ಹೋಗುತ್ತಿದ್ದರು. ಬೇಡಿ ತಂದುದನ್ನು ಎಲ್ಲರೂ ಹಂಚಿ ತಿನ್ನುತ್ತಿದ್ದರು. ಆರ್ಥಿಕ ಬಡತನವಿದ್ದ ಅವರಿಗೆ ಇದೇ ಹಬ್ಬ. ಆದರೆ ಈಗಿನ ತಲೆಮಾರಿನವರಿಗೆ ಇದು ಅವಮಾನವೆನಿಸಿದೆ. ಗಳಿಕೆ ಹೆಚ್ಚಿರುವುದು ಇದಕ್ಕೆ ಕಾರಣವಾದರೆ, ಹೊಸ ಹೊಸ ತಿಂಡಿ ತಿನಿಸುಗಳಿಗೆ ಹೆಂಗಳೆಯರು ಚಾಲನೆ ನೀಡಿರುವುದೂ ಕಾರಣವಾಗಿದೆ. ಅಲ್ಲದೆ ಉಪವಾಸವೋ ವನವಾಸವೋ ಇದ್ದುದರಲ್ಲಿಯೇ ಬದುಕಬೇಕೆಂಬ ಅವರ ಸ್ವಾಭಿಮಾನ ಜಾಗೃತಿಯಿಂದಾಗಿ ಈ ಪದ್ಧತಿಗೀಗ ಬಹುತೇಕ ತೆರೆ ಬಿದ್ದಿದೆ.

ಮದುವೆಯ ದಿನ ದಿಬ್ಬಣ ಸಮೇತವಾಗಿ ಮದು ಮಕ್ಕಳು ಒಡೆಯರನ್ನು ಕಾಣುವುದಕ್ಕೆ ಹೋಗುವ ಪದ್ಧತಿ ಇತ್ತು. ಇತ್ತೀಚೆಗೆ ಮದುವೆಗಾಗಿ ಸಾಲ ಮಾಡುವುದನ್ನು ನಿಲ್ಲಿಸಿ, ತಮ್ಮ ಮದುವೆಗೆ ತಾವೇ ಹಣ ಜೋಡಿಸಿಕೊಳ್ಳುವ ಪ್ರವೃತ್ತಿಯನ್ನು ರೂಢಿಸಿಕೊಂಡಿರುವುದರಿಂದ ಬಹುಮುಖ್ಯವಾಗಿ ಜೀತದ ಸುಳುಹನ್ನು ಇಲ್ಲಿ ಗುರುತಿಸುವಂತಾದ ಈಗಿನ ತಲೆಮಾರಿನಲ್ಲಿ ಈ ಪದ್ಧತಿ ದೂರವಾಗುತ್ತಿದೆ.

ಆಗೇರರಲ್ಲಿ ಶೈಕ್ಷಣಿಕ ಅಭಿಲಾಷೆಯನ್ನು ಹೊತ್ತಿಸಿ ಸಾಮಾಜಿಕ ಸಮಾನತೆಗೆ ಚಾಲನೆಯನ್ನು ನೀಡಿದವರು ಕ್ರೈಸ್ತ ಮಿಶನರಿಗಳು. ಬಡತನದಲ್ಲಿ ಬೇಯುತ್ತಿರುವ ಇವರ ಮಕ್ಕಳಿಗೆ ಬಟ್ಟೆಬರೆ, ಪಟ್ಟೆ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದ್ದುದರಿಂದ ಸಹಜವಾಗಿ ಕ್ರೈಸ್ತ ಧರ್ಮದ ಮೇಲೆ ಅಭಿಮಾನ ಹುಟ್ಟಿ ಪುರ‍್ಲಕ್ಕಿ ಬೇಣ, ನೀಲಂಪುರ, ಶೆಡಗೇರಿ, ವಂದಿಗೆ ಮುಂತಾದ ಗ್ರಾಮಗಳಲ್ಲಿ ಕೆಲವು ಕುಟುಂಬಗಳು ಮತಾಂತರ ಹೊಂದಿವೆ. ಹೊನ್ನು ಅವರು ’ಹನ್ನಾ ಕೆ.’ ಆದರೆ ಸೋಮಿ ಇವರು ’ಸಾರಳು’ ಆಗಿದ್ದಾರೆ. ಲೀಲಾ ರಾಕು ಆಗೇರ ಹಾಗೂ ಆಯಮ್ಮ ದೇವು ಆಗೇರ ಕ್ರೈಸ್ತ ಧರ್ಮೀಯರನ್ನು ಮದುವೆ ಆಗಿದ್ದಾರೆ. ಆದರೆ ಈ ಮತಾಂತರಿಗಳ ಪ್ರಮಾಣ ಕೇವಲ ಶೇಕಡಾ ೦.೦೫ ಮಾತ್ರ.

ಬಸಿರು ಬಾಣಂತಿಯರಾದ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ವೈದ್ಯಕೀಯ ಪರೀಕ್ಷೆ, ಚಿಕಿತ್ಸೆಗಳನ್ನು ಹೆಣ್ಣು ಪಡೆದುಕೊಳ್ಳುತ್ತಿದ್ದಾಳೆ. ಉಳಿದ ಮುಂದುವರೆದ ಜನಾಂಗಗಳಲ್ಲಿ ಸ್ತ್ರೀ ಕುಲಕ್ಕೆ ಶಾಪವಾಗಿ ಬಂದ ಸ್ತ್ರೀ ಭ್ರೂಣ ಹತ್ಯೆ ಇಲ್ಲಿ ಇನ್ನೂ ಕಾಣಿಸಿಕೊಳ್ಳದಿರುವುದು ಸಮಾಧಾನ ಅಂಶವಾಗಿದೆ.

ಹೆಣ್ಣು ಮಕ್ಕಳಿಗೂ ಶಿಕ್ಷಣದ ಅವಶ್ಯಕತೆ ಇದೆ ಎನ್ನುವ ಅರಿವು ಆಗೇರರ ಮಹಿಳೆಯರಲ್ಲಿ ಮೂಡಿದೆ. ಈಗಾಗಲೇ ಕಲಿತು ನೌಕರಿ ಮಾಡುತ್ತಿರುವ ಹೆಣ್ಣು ಮಕ್ಕಳು ಕೂಡ ಇದಕ್ಕೆ ಪ್ರೇರಣೆಯಾಗಿದ್ದಾರೆ.

“ಹಿಂದೆಲ್ಲ ಹೆಣ್ತೆ ಅಂದ್ರೆ ನನ್ ಹದ್ದಬಸ್ತನಲ್ ಇರ‍್ಬೇಕು ಅನ್ನೋದು ಗಂಡ್ಸರ‍್ಗೆ ಇತ್ತ. ಅವರ‍್ ಹೇಳ್ದಂಗ್ ನಾವ್ ಕೇಳ್ಬೇಕ್, ಹೊಡ್ತ ಬಡ್ತ ಎಲ್ಲ ಸಹಿಸ್ಕಂಬೀಕ್ ಅಂಬೂದ ಇತ್ತ. ಈಗಲ್ಲ ಹಂಗೆಲ್ಲ. ಹೆಣ್ ಮಕ್ಕಳೂ ನೌಕರಿ ಮಾಡ್ತಿರ, ಹಿಂಗಾಗಿ ಅಟ್ಟ ಮಾತ್ ಕೇಳ್ಸೂಕೆ ಆಗೂದೆಲ್ಲ. ಅವರ‍್ಗೂ ಮರ‍್ವಾದಿ ಕೊಡ್ಬೇಕ್” ಎನ್ನುವ ಮಧ್ಯವಯಸ್ಕ ಮಹಿಳೆಯರ ಮಾತಿನಂತೆ ಉದ್ಯೋಗಸ್ಥ ಮಹಿಳೆಯರಿಗೆ ಕೌಟುಂಬಿಕ ಸ್ಥಾನಮಾನ ಗೌರವಾದರಗಳು ಹೆಚ್ಚಿವೆ.

ಹೀಗೆ ಕಾಲದ ಸೆಳೆತಕ್ಕೆ ಮೈತೆರೆದ ಆಗೇರರ ಸಂಸ್ಕೃತಿಯಲ್ಲಿ ಅನೇಕ ಸ್ಥಿತ್ಯಂತರಗಳಾಗಿವೆ. ಕೆಲವು ಅನಿಷ್ಟ ಪದ್ಧತಿಗಳು ತೊಲಗಿದರೆ, ಇನ್ನು ಕೆಲವು ಧಾರ್ಮಿಕ ಸೋಗಿನೊಂದಿಗೆ ಪ್ರವೇಶವನ್ನು ಪಡೆದವೆ. ಬಹುಮುಖ್ಯವಾಗಿ ಸ್ತ್ರೀ ಶಿಕ್ಷಣಕ್ಕೆ ಸಿಕ್ಕ ಪ್ರಾಮುಖ್ಯತೆ ಮಹಿಳೆಯೊಬ್ಬಳು ನಾಲ್ಕು ಗೋಡೆಗಳಾಚೆ ಹೊರಬಂದು ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದ ಮೇಲ್ವರ್ಗಕ್ಕೆ ಹೋಲಿಸಿದರೆ ಇವರ ಶೈಕ್ಷಣಿಕ, ಆರ್ಥಿಕ ಪ್ರಗತಿ ತುಂಬಾ ನಿಧಾನಗತಿಯಂದೆನಿಸಿದರೂ ಸಾಮಾನ್ಯವಾದುದೇನಲ್ಲ. ಆಗೇರರ ಸಂಸ್ಕೃತಿಯ ಒಳ ಹೊಕ್ಕಾಗ ಅಲ್ಲಿ ನಡೆಯುವ ಎಲ್ಲಾ ಚಡಂಗಗಳಲ್ಲಿ (ವಿಧಿ-ವಿಧಾನ) ಮಹಿಳೆಯರ ಪಾತ್ರ ಪ್ರಧಾನವೆನಿಸುತ್ತದೆ.

’ತಾಯಿಮನೆ’, ’ಅಜ್ಜಿಮನೆ’, ’ಅತ್ತೆಮನೆ’ ಮುಂತಾದ ಎಲ್ಲ ಸಂಬೋಧನೆಗಳನ್ನು ಗಮನಿಸಿದಾಗ, ಕೆಲವು ಕಾರ್ಯಗಳಲ್ಲಿ ಮಾವನಿಗೆ (ತಾಯಿ ಅಣ್ಣ-ತಮ್ಮ) ಹೆಚ್ಚಿನ ಪ್ರಾಧಾನ್ಯತೆ ಇದ್ದುದನ್ನು ಗಮನಿಸಿದಾಗ ಇದು ಮಾತೃ ಪ್ರಧಾನ ವ್ಯವಸ್ಥೆಯ ಮೂಲವೇ ಎನಿಸಿದರೂ ವಾಸ್ತವದಲ್ಲಿ ಪಿತೃಪ್ರಧಾನ ವ್ಯವಸ್ಥೆಯನ್ನೇ ಅಪ್ಪಿಕೊಂಡಿರುವ ಸಹಜ. ಈ ವ್ಯವಸ್ಥೆಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡ ಮಹಿಳೆಯರು ನಿಧಾನವಾಗಿಯಾದರೂ ಕೌಟುಂಬಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯ ಸಮಾನತೆಯತ್ತ ಹೊಸ ಹೆಜ್ಜೆ ಇಡುತ್ತಿದ್ದಾರೆ. ಬಹುಬೇಗ ಭಾರತೀಯ ವರ್ಣವ್ಯವಸ್ಥೆ ತೊಡಿಸಿದ ಸಾಮಾಜಿಕ ಕಟ್ಟಳೆ, ಸಾಂಪ್ರದಾಯಿಕ ಮನೋಭಾವದ ಹಿಂಜರಿಕೆಯ ಪೊರೆ ಕಳಚಿ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಬದುಕುವಂತಾಗಲಿ ಎಂದು ಆಶಿಸೋಣವೆ? ಹಳೆಯ ಹಾಡು ಹಸೆಗಳ ಹಿಮ್ಮೇಳದೊಂದಿಗೆ ಹೊಸ ಬದುಕು ಬರಹಕ್ಕೆ ಬಹುದಿನಗಳಿಂದ ಬಚ್ಚಿಟ್ಟ ಆಗೇರರ ಮಹಿಳೆಯ ಅಂತರಂಗದ ಕದ ತೆರೆಯುವಂತಾಗಲಿ.

* * *