ಗಂಗೆ ಶಿವನನ್ನು ವರಿಸಿ ಬರುವಾಗ ದೋಣಿ ತುಂಬ ಬಂಗಡೆ ಮೀನು ಹಾಗೂ ತಾರಲಿ ಮೀನನ್ನು ಬಳುವಳಿಯಾಗಿ ತರುತ್ತಾಳೆ. ಅಂಬಿಗರ ಕನ್ಯೆಯಾ ಅವಳು ಮೀನನ್ನು ಬಳುವಳಿಯಾಗಿ ತರುವುದು ಸಹಜವಲ್ಲವೇ? ಎಂದು ಪ್ರಶ್ನಿಸುತ್ತಾರವರು.

ಬಂಗಡೆನ ದೋಣಿ ಬಂತ ತೊರೇನ ದೋಣಿ ಬಂತ
ತಾಂಗೂ ಮನೆ ದೋಣಿ ತಡದೋಯ್ತೆ
ತಾಂಗ ಮನೆ ದೋಣಿ ತಡದೋಯ್ತೆ ಗಣಪ್ಯ್ಯ
ಅದನೋಡೋ ಗಣಪ ಬಳ್ಳುಳ್ಳಿ
ಅದನೋಡೋ ಗಣಪ ಬಳ್ಳುಳ್ಳಿ ಚಿಕ್ಕವ್ವಿ
ಹಾಯಿ ತುಂಬ ಹಡಗ ಬರುತೀದ ||
ಒಂದೇ ಎಲಿಮೇಲಿ ಸೇರಾ ಡೆಲ್ ಉಂಬುತಂಗಿ
ನೀ ಬಾರೆ ತಂಗಿ ಮನೇಗೊಗಿಸುವೆ
ಒಂದೇ ಒಲಿಮ್ಯಾಲೆ ಅಡಿಗಿ ಮಾಡುತಂಗಿ
ನೀ ಬಾರೆ ತಂಗಿ ಮನೆಗೊಗಿಸುವೆ

ಪಾರ್ವತಿ ದೂರದಿಮದ ನೋಡಿ ಒಳಗೊಳಗೇ ದುಃಖಿತಳಾದರೂ ಸವತಿ ಮಾತ್ಸರ್ಯವಿಲ್ಲದೆ ತಂಗಿಯನ್ನು ಮನೆ ತುಂಬಿಸಿಕೊಳ್ಳುತ್ತಾಳೆ.

ಪುರುಷನ ಬಹುಪತ್ನಿತ್ವವನ್ನು ಯಾವ ಪ್ರತಿಭಟನೆಯೂ ಇಲ್ಲದೆ ಹೆಣ್ಣು ಸ್ವೀಕರಿಸುತ್ತಾಳೆ. ಗಂಡನನ್ನು ಇನ್ನೊಂದು ಹೆಣ್ಣಿನೊಂದಿಗೆ ಹಂಚಿಕೊಳ್ಳುವುದು ಹೆಣ್ಣಿಗೆ ಕಷ್ಟಸಾಧ್ಯವಾದರೂ ಅಂತಹ ಸಾಮಾಜಿಕ ಸ್ಥಿತಿ ನಿರ್ಮಾಣವಾಗಿರುವುದರಿಂದ ಅದನ್ನು ಅನಿವಾರ್ಯವಾಗಿ ಸ್ವೀಕರಿಸುವುದು ಹೆಣ್ಣಿನ ಸ್ಥಿತಿ.

ಹೀಗೆ ಜನಪದ ಹಾಡಿನಲ್ಲಿ ಮದುವೆಯ ಸೊಗಸು, ತಾಯ್ತನದ ಸುಖಾನುಭವ, ತಾಯ ಪ್ರೀತಿ, ಗಂಡ ಮಕ್ಕಳ ಪ್ರೀತಿ, ಧಾನಧರ್ಮ, ನೀತಿ-ಅನೀತ ಎಲ್ಲವೂ ಅವರ ಜೀವನಾನುಭವದ ಹಿನ್ನೆಲೆಯಲ್ಲಿ ಅಭಿವ್ಯಕ್ತವಾಗಿವೆ. ಒಂದು ಜನಾಂಗದ ಸಾಂಸ್ಕೃತಿಕ ಬದುಕನ್ನು ಎಳೆ ಎಳೆಯಾಗಿ ಕಣ್ಣಿಗೆ ಕಟ್ಟುವ ಈ ಮಹಿಳಾ ದನಿಗಳು ಬಹಳಷ್ಟು ಮರೆಯಾಗಿವೆ. ಪೂರ್ತಿ ಮರೆಯಾಗುವ ಸನ್ನಿವೇಶ ಹತ್ತಿರದಲ್ಲೇ ಇದೆ.

ಕಥೆ:

ಕಥೆಗಳು ವಾಸ್ತವ ಬದುಕಿನ ಪ್ರಾತಿನಿಧಿಕ ರೂಪಗಳೇ ಆಗಿರುತ್ತವೆ. ಯಾವುದೇ ಜನಾಂಗ ಆಸ್ತಿಯಾಗುವ ಕಥೆಗಳು ಅವರ ಸಾಮಾಜಿಕ ಬದುಕು, ನಂಬಿಕೆ ಹಾಗೂ ಮೌಲ್ಯಗಳ ಪ್ರತಿರೂಪಗಳಾಗಿರುತ್ತವೆ. ಮಹಿಳೆಯೊಬ್ಬಳ ಸಾಮಾಜಿಕ ಸ್ಥಿತಿಗತಿ ಹಾಗೂ ಸ್ಥಾನಮಾನದ ಅಧ್ಯಯನಕ್ಕೆ ಈ ಕಥೆಗಳೇ ಅದ್ಭುತ ಸಾಕ್ಷಿಗಳಾಗಿರುತ್ತವೆ. ಆಗೇರರಲ್ಲಿಯೂ ಅನೇಕ ಕಥೆಗಳಿದ್ದರೂ ಆ ಸಮಾಜದ ನಂಬಿಕೆ, ಮಹಿಳೆಯರ ಬದುಕಿನ ಮೇಲೆ ಬೆಳಕು ಚೆಲ್ಲುವ ಕೆಲವು ಕಥೆಗಳನ್ನು ಮಾತ್ರ ನಾನಿಲ್ಲಿ ದಾಖಲಿಸುತ್ತಿದ್ದೇನೆ. ಇದು ಅವರ ವ್ಯಥೆಯೂ ಹೌದು; ಕಥೆಯೂ ಹೌದು.

ಕ್ಷೇತ್ರಕಾರ್ಯದಲ್ಲಿ ನಾನು ಸಂಧಿಸಿದ ಸುಮಾನಾ ಆಗೇರರು ಹೇಳಿದ ಕಥೆಯೊಂದು ಹೀಗಿದೆ.

ಹೆಂಡ್ತ ಹೆಚ್ಚೊ ತಾಯ್ ಹೆಚ್ಚೊ:

ಒಂದು ಊರಲ್ಲಿ ಒಂದ್ ಅಜ್ಜಿ ಇತ್ತ. ಆ ಅಜ್ಜಿಗ ಒಂದ್ ಮಗ. ಮಗನಿಗೆ ಅಜ್ಜಿ ಮದ್ವೆ ಮಾಡ್ತ. ಅಜ್ಜಿಗೆ ಕಣ್ ಕಂಬೂದೆಲ್ಲ. ಸೊಸೆ ಊಟ ಸರಿ ಹಾಕುದೆಲ್ಲ. “ಅವ್ವಿಗೆ ಬಡ್ಸಿ” ಅಂದ್ ಮಗ ಕೇಳದ್ರಿ “ಅವಾಗೇ ಹಾಕಿ. ಇಟ್ಟಿಟ್ಟು ಊಟ ಮಾಡ್ತಿದ. ಮತ್ ನಂಗೆ ಸಿಕ್ಕಾಪಟ್ಟೆ ಬಯ್ತಿದ” ಅಂದೇಳಿ ಗಂಡಗೆ ಚಾಡಿ ಹೇಳೂದ. ಆಗ ಮಗ ಅವ್ವಿಗೇ ಬಯ್ಯಾನ ಹೆಂಡ್ತಿಗೆ ಬಯ್ಯೂದಿಲ್ಲ. ಒಂದಿನ ಸೊಸೆ ಅವ್ವಿಗ್ ತಕೊಂಡ್ ಹೋಗಿ ಸುಟ್ಟ ಹಾಕ್ ಬನ್ನಿ ಅಂತಿದ. ಅಂವ ಹಾಂಗೆ ಮಾಡ್ತಿ. “ಅವ್ವಿ ಅತ್ ಒಬ್ರ ದುಡ್ ಕೊಡ್ತಿರ. ಹೋಗ್ವ” ಅಂತ ಹೇಳಿ ಕಾಡಿಗೆ ಹೋತಿ. ಕಾಡಿಗ್ ಹೋಗಿ ಅವ್ವಿನ ಗೋಣಿ ಕೊತ್ಲದಾಗ ತುಂಬ್ತಿ. ಕಡ್ಡಿಪೆಟ್ಗೆ ಎಲ್ಲಿ ತಕೊಂಡ ಹೋಗ್ಯಾ ಇಂವ? ಕಡ್ಡೆಪೆಟ್ಗಿ ತರೋಕೆ ಕೊತ್ಲ ಚೀಲ ಅಲ್ಲೆ ಬಿಟ್ಟು ಮನೆಗೆ ಬತ್ತಿ ಇತ್ಲಾಗ್ ಅವ್ವಿ ಕೊತ್ಲದಿಂದ ಹೊರ‍್ಗಬಿದ್ದು ಕೊತ್ಲದಲ್ಲಿ ತರ‍್ಕು ಬಿಯ್ದಿ ಎಲ್ಲ ತುಂಬಿ ಕಟ್ಟಿ ದೂರ ಹೋಗಿ ಕೊತ್ಕಂತಿದ. ಮಗ ಬಂದ್ ಸುಟ್ಟ ಹೋತಿ. ಅವ್ವ ಹಾಂಗೆ ನಡೇತ ಹೋತಿದ. ಅಲ್ಲಿ ಕಳ್ಳದ ದುಡ್ಡ ಹಂಚ್ಕಂತಿರ‍್ತಿರ, ಮದರಾತ್ರೀಲಿ ಹೆಣ್ ಹೆಂಗ್ಸ್ ಬಂದಿದ್ ನೋಡಿ ದೆವ್ವ ಅಂದ್ಕಂಡ್ ಓಡಿ ಹೋದ್ರ ಕಂಡಾ. ಅವ್ವಿ ಎಲ್ಲ ದುಡ್ ತಕಂಡ ಮಗನ ಮನಿಕ್ ಬತ್ತಿ. ಮಗ ಸೊಸೆಗೆ ಸುಟ್ಟ ಅವ್ವಿ ಹ್ಯಾಂಗ್ ಬಂತ್ ಅಂದ ಆಶ್ಚರ್ಯ ಆತಿದ. ಆಗ ಅವ್ವಾ “ನೀ ಸುಟ್ಟ ಮ್ಯಾಲೆ ನಾ ಯಮಧರ್ಮರಾಯನ ಹತ್ರ ಹೋದಿ. ನನ್ನ ಕಷ್ಟ ಹೇಳ್ಕಂಡೆ. ಅದ್ ಕೇಳಿ ರಾಸಿ ರಾಸಿ ರೊಕ್ಕ ಕೊಟ್ಟ. ನನ್ನ ಹತ್ರ ತರೂಕ್ ಆಗ್ಲೆಲ್ಲ. ಆದಟ್ ತಂದಿ. ನಾನ್ ಹಣ್ ಹಣ್ ಮುದ್ಕಿ. ತೋಡಿ ತಂದಿ. ನಿನ್ ಹೆಂಡ್ತಿ ಹೋದ್ರೆ ಇನ್ನೂ ಹೆಚ್ ತರೂ” ಅಂತ ಹೇಳ್ತಿದ. ಕಡಿಕ್ ಹಾಂಗೆ ಮಾಡ್ತಿ ಹೇಳಿ ಹೆಂಡ್ತಿಗೂ ಸುಟ್ ಬತ್ತಿ ಹೇಳಿ ಗೋಣಿ ಕೊತ್ಲದಲ್ಲಿ ತುಂಬಿ ಪೂರಾ ಸುಟ್ಟುಬಿಟ್ಟು. ಮಾರನೆ ದಿವ್ಸ ಕೇಳ್ತ “ಹೆಂಡ್ತಿ ಇನ್ನೂ ಬರ‍್ಲೆ ಇಲ್ಲಿಲ್ಲ” ಅವ್ವಿ ಹಾಂಗ್ ಹೇಳೂಕ್ “ನಿನ್ನ ಹೆಂಡ್ತಿ ಎಲ್ಲಿ ಬರೂದ. ಸುಟ್ಟು ಹೋಗಿದ. ಆ ಹೆಣ್ತೆ ಮಾತ್ ಕೇಳಿ ಹೆತ್ತ ಅವ್ವಿಗೆ ಬಯ್ದು ಅವ್ವಿಗೆ ಸುಡೂಕ ಮಾಡ್ದಿ. ಅವ್ವಿ ಇಲ್ಲರೆ ಮತ್ತೊಂದ್ ಅವ್ವಿ ಸಕ್ತದ? ಈ ದುಡ್ ತಕ್ಕಂಡ ತಾ ಮುಂದೆ ತಾ ಮುಂದೆ ಅಂದ ನಿಂಗ್ ಹೆಂಡ್ತಿನಾ ಕೊಡೂರ. ಹೆತ್ತ ತಾಯಿ ಸಿಗೂ ದಕೇಳನೋಡು” ಅಂಬೂದ. ಮಗ ಊರೆಲ್ಲ ತಾಯಿ ಕೇಳ್ತ ಹುಡ್ಯಲಿಡ್ಕತಿ. ಎಲ್ಲ ಬಯ್ತಿರ. “ತಾಯಿ ಹ್ಯಾಂಗ್ ಕೊಡೂದ ಹೆಂಡ್ತಿ ಬೇಕರೆ ಕೊಡ್ತಿ” ಅಂಬೂರ. ಆಗ ತನ್ನ ತಪ್ಪ ತಿಳ್ದ ಕಡಿಕ್ ಮನೆಗೇ ಬತ್ತಿ. ಅವ್ವಿ ಹತ್ರ ಚೆಂದಾಗ್ ಇರ‍್ತಿ.

ಕುಟುಂಬದಲ್ಲಿ ಅತ್ತೆ ಸೊಸೆಯರ ನಡುವೆ ಅಧಿಕಾರ ಸ್ಥಾಪನೆಯಾಗಿ ನಡೆಯುವ ಸಂಘರ್ಷವನ್ನು ಈ ಕತೆಯಲ್ಲಿ ಗುರುತಿಸಬಹುದು. ಅತ್ತೆ ಮಾವ ಕುಟುಂಬದ ಯಜಮಾನರು ಮತ್ತು ಗೌರವಸ್ಥಾನದಲ್ಲಿದ್ದರೂ ಕೂಡ. ಆದರೆ ಕಾಲಕ್ರಮೇಣ ಕುಟುಂಬದಲ್ಲಿ ಇವರ ಸ್ಥಾನಕ್ಕೆ ಚ್ಯುತಿ ಬಂದಾಗ ತಾಯಿ ಮಗನಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತಾಳೆ. ಹಾಗೆಯೇ ತನ್ನ ಸ್ಥಾನವನ್ನು ಪ್ರಶ್ನಿಸಿದ ಸೊಸೆಗೆ ತನ್ನ ಬುದ್ಧಿಶಕ್ತಿಯಿಂದ ಪಾಠ ಕಲಿಸುತ್ತಾಳೆ. ಆದರೆ ಹೊತ್ತು ಹೆತ್ತು ಬೆಳೆಸಿದ ತಾಯಿಯೇ ಮಗನಿಗೆ ತನ್ನ ಶ್ರೇಷ್ಠತೆಯನ್ನು ಹೇಳಬೇಕಾದ ಪರಿಸ್ಥಿತಿ ಬಂದುದು ವಿಷಾದನೀಯ ಸಂಗತಿಯಾಗಿದೆ.

ಕಥೆ ಹುಟ್ಟಿದುದು ಬಹುಶಃ ಗಂಡು ಹೆಣ್ಣಿಗೆ ತೆರಕೊಟ್ಟು ಮದುವೆಯಾಗುವ ಸಂದರ್ಭದ್ದಿರಬಹುದು. ಯಾಕೆಂದರೆ ’ಈ ಹಣಕೊಟ್ಟು ಕೇಳಿದರೆ ಯಾರೂ ನಿನಗೆ ಹೆಂಡತಿಯನ್ನು ಕೊಡುತ್ತಾರೆ.’ ಎನ್ನುವ ತಾಯಿಯ ಮಾತು ಇದನ್ನು ಧ್ವನಿಸುತ್ತದೆ.

ದೊಡ್ಡೋರಂಬೋರ ಯಾರು?

ಒಂದ್ ಊರ‍್ನಲ್ಲ ಒಂದು ಪೈಲ್ವಾನ ಇದೇದ್ನ ಕಂಡಾ. ಪೈಲ್ವಾನ ಕುಸ್ತಿ ಮತು ಪೈಲ್ವಾನ ಅಲ್ಲ. ದಿನ ಬೆಳಗಾಗೊ ಎದ್ದಕೂಡ್ಲೆ ತನ್ನ ಹೆಂಡ್ತಿಗೆ ಡುಂ ಡುಂ ನೆಮೂರ‍್ ಗುದ್ ಹಾಕ್ವಾ “ಏನೇ ಹೆಂಡ್ತಿ ನನಂಥೋ ಯಾರೀವ್ರೆ ಈ ಲೋಕ್ದಲ್ಲ? ಅಂದ ಕೇಳ್ವಾ. ಮತ್ತೇನರೂ ತಿರ‍್ಗ ಹೇಳ್ದ್ರ ಮತ್ ನಾಕ ಬೀಳೂದ ಅಂದ್ಕಂಡ್ ಅವ್ನ ಹೆಂಡ್ತಿ ಪಾಂಪಾ ಉಳಕುಂತೇತ. “ಹೌದು ನೀವೇ ದೊಡ್ಡೋರ” ಅಂದಿಟ್ಟ ಬೇಕಾರ ಹೇಳತೀದ. ಹಾಂಗಾಗೇ ಅಂವ ಸೊಕ್ಕ ಹ್ವಾದಾ.

ಹೀಂಗೇ ದಿನಾ ಪೆಟ್ಟ ತಿಂದ ತಿಂದ ಆ ಬಡಾ ಹೆಣ್ಣ ಹೆಂಗ್ಸ ಒಳಗೆ ಕಡ್ಡೆ ಅತೇ ಬಂತ. ಒಂದೇನ ಅದ ಬಿಂಕೇ ತರೂ ಕಂತೇಯ ಆಚೆ ಮನಿ ಅಜ್ಜೀ ಗುಡಸ್ಲಿಗ ಬಂತ. ಇದ್ರ ನೋಡದ್ದೀಯ ಅಜ್ಜಿಗೇ ಗುರ‍್ತೇ ಸಿಕ್ಲಲಾ. ಕಡಿಕ ಗುರ‍್ತ ಹಿಡಿದ ಅಜ್ಜಿ “ಅಲ್ಲಾ ಮಗು ಹೆಂಗಿದ್ದೋಳ ಹೆಂಗಾಗೋಗೀಯೇ ಇದ್ಯಾಕ ಹಿಂಗಾಗಿ ಮಗಾ ಆ ನಿನ್ ಗಂಡಂಬೂ ದುಸ್ಮಾನನ ಕಣ್ಣೀಗೇನ್ ಮಣ್ಣ ಬಿದ್ದೀದಾ” ಅಂದ್ ಉಪಚಾರಾ ಮಾಡ್ತ. ಆಗ ಇದ್ ಏನಂತ? “ಉಂಬೂಕೆ ತಿಂಬೂಕೆ ಕಡಿಮ್ಯಾಗ್ಲೇಲ್ಲಾ ಅಜ್ಜಿ ಆದ್ರ ಪಂಚತ್ಲೇ ಬ್ಯಾರೇ” ಅಂತೇಯಾ ಹೀಂಗನ ಸಂಗ್ತಿ ಹಿಂಗ್ ಅಂದ ಎಲ್ಲಾ ಬಿಚ್ಚಿ ಹೇಳೇಬಿಟ್ತ. ಅದ್ಕ ಅಜ್ಜಿಯೇನಂತ? “ಹೀಂಗ್ಮಾಡ್ತ್ಯಾ ಹ್ವಾಲೀರಿಗ್ ಹುಟ್ಟಿದ ಆ ನನ್ ಮಗಾ….. ಇರ‍್ಲಿ ನೀ ನಾಳೇಕೇ ಒಂದ್ ಕೆಲ್ಸ ಮಾಡ ಮಗಾ, ಬೆಳಗಾಗ ಎದ್ದ ಗುದ್ದ ಹಾಕ್ದ ನನ್ನಂಥೋ ಯಾರೀವ್ರ ಅಂತೇನಲಾ –  ನಿಮ್ಮಂತೋರ ಭಾಳ ಜನಾ ಈವ್ರ ಕಂಡ್ರಿ ಹೋಗಿ – ಅಂತೇಳ ನೋಡ್ವಾನಿ” ಅಂತ. ಇದ ಹೂಂ ಅಂತೇಳ ನೋಡ್ವಾನಿ” ಅಂತ. ಇದ ಹೂಂ ಅಂತೇ ಬಿಂಕೇ ತಕುಂಡ ಬಂತ.

ಮಾರ್ನೆ ದಿವ್ಸ ಎದ್ದ ಕೂಡ್ಲೆ ಪೈಲ್ವಾನ ಹಾಂಗೇ ಮಾಡ್ದ. ಗುದ್ದಾಕ್ದವನೇ “ನನ್ನಂಥೋರ ಯಾರೀಂವಾ” ಅಂದ. ಆದ ಪಾಪಾ ಹೆದರ್ತೇ ಅಜ್ಜಿ ಹೇಳ ಕೊಟ್ಟಿದಂದ “ನಿಮ್ಮಂಥೋರ ಭಾಳ ಜನಾ ಈವ್ರ” ಅಂತ. ಹಾಂಗಂದುಗೇ ಸಿಟ್ನಲ್ಲ ಮತ ಎರ್ಡು ಗುದ್ದ ಹಾಕ್ದ. “ಈಗಿಂದೇಗೇ ನಾ ಹೋರಗ ತಿರಗಾಡ ಬತ್ತಿ ಯಾರೀವ್ರ ನೋಡ್ತಿ. ಯಾರೂ ಕಾಣಲಿಲ್ಲಾ ತಿರಗ ಬಂದವ್ನೆ ನಿಂಗ ಇಂಥಾ ಎರ‍್ಡು ಗುದ್ದ ಕೊಡ್ತಿ. ನೀ ಸತ್ತೇ ಹ್ವಾಗಬೇಕ” ಅಂದವ್ನೇ ಹೊರಗೆ ಓಡದಾ.

ಅವ ಹೋತೆ ಹೋತ್ ಸಮುದ್ರ ಬ್ಯಾಲಿಗ ಬಂದಾ. ಅಲ್ಲೊಬ್ಬ ಗಾಳ ಹಾಕ್ತೆ ಕೊತ್ತೇದಾ. ಬದೀಗ ಬಂದ ಕೈಚೀಲದಲ್ಲ ಎಯ್ಡು ಅನಿ ಇಕ್ಕುಂಡೇದಾ. ಇದ ನೋಡದ್ದೇ ಪೈಲ್ವಾನಗ ಚೋಜಗ ಆಯ್ತು” ಇದ ಎಂಥಾಕ? ಅಂದ ಕೇಳ್ದಾ. “ಇದ ಗಾಳ ಹಾಕೂಕ ಎರೆ” ಅಂದಾ ಅಂವ. ಅಬ್ಬಾ ಅನೀನೇ ಗಾಳಕ ಚುಚ್ಚಿ ಹಾಕ್ದುರ ಅದರ ಮೀನ ಎಂಥಾದ ಹಿಡೂದ? ಅಂದ್ಕುಂಡ “ಇಂವ ನನ್ನ ಕಿಂತಾ ಬಲಾ ಇಂವ” ಅಂತೇ ನಿಂತ.

ಅಟ್ಟೊತ್ತಿಗ ಅಂವಗ ಒಂದ್ ಮೀನ ಹಿಡ್ದೇ ಬಿಟ್ಟಿತ. ಅದ್ರ ಎಳ್ದ ಹಾಕ್ದ. ಮತ್ತೊಂದು ಅನಿ ಕೈಚೀಲದಲ್ಲಿಂದ ತೆಗೆದ. ಗಾಲಕ  ಚುಚ್ಚಿ ನೀರಿಗ ಬೀಸಾಕ್ದಾ ಕಾಯ್ತಿ ಕಾಳ್ತಾ. ಇದರ ನೋಡದ್ದೇ ಪೈಲ್ವಾನಗ ಮತ್ತೂ ಚೋಜಿಗಾಯ್ತು. “ಒಂದ್ ಅನೀನೇ ನುಂಗದ ಮೀನ ಎಟ್ಟ ದೊಡ್ಡೀತಲಾ… ಇವಂಗಿಂತಾ ಈ ಮೀನೇ ಭಲಾ ಈತ” ಅಂತೇ ನಿಂತಾ. ಅಟ್ಟರಲ್ಲೀ ಒಂದ್ ಹದ್ದ ಅಕಾಸ್ದಲ್ ಹಾರ‍್ ಬಂದದ್ದೇಯ ಆ ಮೀನ ಕಚ್ಕಂಡ ಹಾರೇ ಹೋಯ್ತು. “ಮೀನನ ಹೊಟ್ಟಿಲ್ಲ ಒಂದ್ ಅನೀತ. ಅಂತಾ ಮಿನ್ನೇ ಕಚ್ಕುಂಡ ಹಾರ‍್ತಿದಂದಮೆನ ಈ ಹದ್ದಿಗೆ ಇಟ್ಟೊಂದ ಸಕ್ತಿರಬ್ಯಾಡಾ” ಅಂತೇಯ ಪೈಲ್ವಾನ್ ಹದ್ದ ಹಾರ ಹ್ವಾದಾಂಗೇಯ ಓಡ್ದಾ. ಹಾರ‍್ತೇ ಹಾರ‍್ತೇ ಹ್ವಾದ ಹದ್ದು ಸಾಕಾಗಿ ಒಂದ್ ಹುಳಚೀ ಮರದ ಮ್ಯಾನ ಕೂತತ. ಮೀನು, ಅದರ ಹೊಟ್ಟಿಲ್ಲ ಅನಿ. ಮತ್ತು ಹದ್ದು ಎಲ್ಲಾ ಭಾರ ತಡಕಂಬೂಕ ಆಗ್ದೆ ಹುಳ್ಚಿ ಮರ ಲಟ್…. ಲಟ್… ಅಂದ್ ಮುರದ ಬೀಳೂ ಕಾಯ್ತು. ಅದ್ರ “ಅವಾಜಿ ಕೇಳದ್ದೇಯ ಅಲ್ಲೀ ಇದ್ದ ಗುಡಸ್ಲಿಂದ ಅಜ್ಜಿ ಒಬ್ಳು ಹೆರಗ ಬಂದು ನೋಡ್ತ. ಇನ್ನೇನು ಹುಳ್ಚಿ ಮರ ತನ್ನ ಗುಡ್ಲ ಮನೇ ಬೀಳ್ತಿದ ಅಂಬೂದ ಕಂಡ ಕೂಡ್ಲೆ ಮುದ್ಕೇನ್ ಮಾಡ್ತ? ಪರಪರಾ ಅಂದ ತನ್ನ ಮುಕ್ ಕೂದ್ಲಾ ಕಿತ್ತದ ಪಟಪಟಾ ಅಂದ ಒಂದ್ ಕೊಂದ ಗಂಟ ಹಾಕ್ತ. ಒಂದು ತುದಿ ಹುಳಚೀ ಮರ‍್ದ ಗೆಗ್ಗೀಗ ಕಟ್ತಿ ಮತ್ತೊಂದ್ ತುದಿ ಎಳ್ದ ಅಚಿಬದಿಗಿದ್ದ ಮರಕ್ಕ ಕಟ್ಟಾಕ್ತ. ಹುಳಚಿ ಮರ ಬೀಳ್ದೇಯ ನಿಂತ ಬಿಟ್ತ.

ಹದ್ದ ಹಾರ ಹ್ವಾದಂಗೇ ಅದ್ರ ಹಿಂದೇ ಓಡ್ ಬಂದ ಪೈಲವಾನ್ಗ ಇದೆಲ್ಲಾ ನೋಡ ಮತ್ತೂ ಚೋಜಿಗ ಆಯ್ತು. ಅಜ್ಜಿ ಕೊದ್ಲಕ್ಕಿರೂ ಯೋಗ್ಗತೆ ನಮ್ಗ ಯಾರಿಗೂ ಇಲ್ಲ ಅಂದ್ಕೊಂಡಾ ಸೀದಾ ಮನೀಗ ಓಡ ಬಂದ ಹೆಂತೀ ಮುಂದ “ತಪ್ಪಾಯ್ತು” ಅಂದ ಒಪ್ಪಕುಂಡಾ.

ಅವೊತ್ನಿಂದ ಅಂವ ಹೆಂಡ್ತಿಗ್ ಹೊಡೂದೂ ಬಿಟ್ಟಾ ನನ್ನಂಥೋರ ಯಾರೀವ್ರ? ಅಂಬೂ ಸೊಕ್ಕೂ ಬಿಟ್ಟಬಿಟ್ಟಾ.

ಇದು ಮೇಲ್ನೋಟಕ್ಕೆ ಬಲಶಾಲಿ ಗಂಡನೊಬ್ಬನ ’ಅಹಂ’ನ್ನು ಮುರಿಯುವ ಜಾಣ್ಮೆಯ ಕಥೆ. ಆದರೆ ಇದರೊಳಗಡೆ ಗುದ್ದು ತಿನ್ನುವ ಹೆಂಡತಿ, ಅದನ್ನು ತಪ್ಪಿಸಿಕೊಳ್ಳಲು ಉಪಾಯ ಹೇಳುವ ಅಜ್ಜಿ, ಮರವನ್ನೇ ತನ್ನ ಕೂದಲಿನಿಂದ ಕಟ್ಟಿ ಹಿಡಿದಿಡುವ ಅಜ್ಜಿ ಈ ಮೂವರೂ ಪ್ರತ್ಯೇಕವಾದ ಪಾತ್ರವನ್ನೇ ಕಥೆಯಲ್ಲಿ ವಹಿಸುತ್ತಿದ್ದಾರೆ. ಹೆಣ್ಣು ದೈಹಿಕವಾಗಿ ಬಲಶಾಲಿಯೂ ಹೌದು. ಹಾಗೇ ಬೌದ್ಧಿಕವಾಗಿಯೂ ಕೂಡ, ಶಕ್ತಿಯಲ್ಲಾಗದ್ದನ್ನು ಯುಕ್ತಿಯಲ್ಲಿ ಸಾಧಿಸುವ ಜಾಣ್ಮೆ ಹಾಗೂ ಕೌಶಲ ಇಲ್ಲಿ ಕಥೆಯಾಗಿದೆ. ಈ ಸುಂದರವಾದ ನೀತಿ ಕಥೆಯಲ್ಲೂ ಗಂಡನಿಂದ ಪೆಟ್ಟು ತಿನ್ನುತ ನರಳುವ ಹೆಣ್ಣೊಬ್ಬಳಿದ್ದಾಳೆ.

ಸಿವಪಾರೋತಿ

ಒಂದೂರ ಕಲ ಕಣಿಲ್ಲ ನಾಕಜನಾ ಆಗೇರ ಕಲ್ಲ ಕಡೀತೇ ಇದ್ರ ಕಂಡಾ. ದಿನಾ ದೋರಿಂದ ಬಂದ ಇಡೀ ದಿವ್ಸ ಕಲ್ಲಕಣೀಲ್ಲ ಕಲ್ಲ ಕಡದ ಸಂಜೀಕ ಸಂಬ್ಲಾ ತಕ್ಕುಂಡ ಹೋತೆದ್ರ ಕಂಡಾ. ಎಟ್ಟ ಕಡದ್ರೂ ದಿವ್ಸಕ್ಕ ಇಪ್ಪತ್ತ ಎಯ್ಡಿಪ್ಪತ್ತ ರೂಪಾಯಿಗಿಂತಾ ಹೆಚ್ಗಿ ಹುಟ್ಟೂದೇ ಎಲ್ಲಾಗಿತ ಕಂಡಾ. ದ್ಯಾವ್ರ ಎಂಥಾ ಕಟ್ಟ ಕೊಟ್ಟಾ ನಮ್ಗ ದ್ಯಾವ್ರಿಗೆ ಕಣ್ಣಿಲ್ಲಾ ಮಡಿ ಎಂದ್ಕುಂಡೇ ನಾಕೂ ಜನಾ ಕಟ್ಟಾ ಪಡತೇ ಇದ್ರ ಕಂಡಾ.

ಒಂದಿನ ಮಟಮಟಾ ಮಜ್ಯಾನಕ. ಅವರ ನಾಕೂಜನಾ ಕಣೀಲಿಂದ ಮ್ಯಾಲ ಬಂದ ತಾಂವ ತಂದ ಗಂಜೀ ಬೊಡ್ಡಿ ಬಿಚ್ಚಕುಂಡ ಗಂಜೀ ಉಂಡ್ರಕಂಡಾ. ಗಂಜಿ ಉಂಡ ಆದಮ್ಯಾನ ನಾಕೂಜನಾ ಕವಳಾ ತಿಂತೇ ಅದ್ದೂ ಇದ್ದೂ ಮಾತಾಡ್ತೇ ಕೂತ್ರ ಕಂಡಾ. ಆಗ ಸಿವಾ- ಪಾರೋತಿ ಅಕಾಸ್ದಲ್ಲ ಹಿಂಗೇ ಸಂಚಾರಕ ಹೋತೇದ್ರ ಕಂಡಾ. ಪಾರೋತಿಗೆ ಈ ಬಡೋರ ಕಟ್ಟ ನೋಡೂಕಾಗ್ದೆ” ಸೋಮಿ ಭೂಲೋಕದ ಮ್ಯಾಲ ಕಟ್ಟಪಟ್ಟ ಕಲ್ ಕಡದ ಬದಕೂ ಬಡಜನರ ನೋಡಕುಂಡ ಹೋಗ್ವಾನಿ” ಅಂದ್ಳ ಕಂಡಾ. ಅದಕ್ಕ ಸಿವಾ ಬ್ಯಾಡಾ ಬ್ಯಾಡಾ ಅವರವರ ಹಣಿಲ್ಲ ಬರ‍್ದದ್ದೇ ಅವರವರ ಪಡೀಬೇಕ. ಹೋದ ಜನ್ಮದಲ್ಲಿ ಸುಖಾಪಟ್ಟ ಈ ಜನ್ಮದಲ್ಲಿ ಹೀಂಗ ಈವ್ರೆ” ಅಂದ. ಎಟ್ಟ ಹೇಳದ್ರೂ ಕೇಳದೇ ಪಾರೋತಿ ಈ ಹಾದಿಲ್ಲೀ ಹೋಗ್ವಾನಿ ಅಂದ ಸಿವನ್ನ ಕರಕೊಂಬಂತೆ ಕಂಡಾ. ಸಿವಾ ಬೇಕಂದೇ ಮುದುಕನ ಹಾಂಗ ಯಾಸಾ ಹಾಕ್ಕೊಂಡನ ಕಂಡಾ.

ಸಿವಾ – ಪಾರೋತಿ ಹಿಂಗೇ ಆಗೇರ ಕುಳತಲ್ಲಿಂದ ದಾಂಟಿ ಹೋತೇ ಇದ್ರ ಕಂಡಾ. ಆಗ ಅವರಲ್ಲೊಬ್ಬ “ಹದೋ ಸೋಮು ಆ ಮುದ್ಕನ ಸಡಂಗಾ ನೋಡ್ದೋ ಯಟ್ ಚಂದ ಕೋಳಿಮೊಟ್ಟೆ ಇದ್ದಂಗೀತ ನೋಡೊ” ಅಂದ. ಅದಕ್ಕ ಮತ್ತೊಬ್ನೂ “ಹೌದಲೋ ಇತ್ಲಾಗ್ ಬಂದ್ರ ಈ ಕಲ್ಲ ಕಣೀಲ್ಲೀ ಅಡ್ಡ ಹಾಕ ಬಿಡೂ ಕಾತೇತ” ಅಂದ ಚಪನೀರ ಬೆಟ್ನ ಕಂಡಾ.

ಇವು ಮಾತ ಸಿವಾ ಪಾರೋತಿ ಕೇಳದ್ರ ಕಂಡಾ. “ಕಟ್ಟಾ ಪಡತೇರ ಏನಾರೂ ವರಾ ಕೊಡ್ವಾನಿ ಅಂತ ನಾವ ಬಂದ್ರ ಇವರ ಸೊಕ್ಕು ನೋಡ” ಅಂದ ಬೀರೇನ್ ಸಿಟ್ ಬಂದ ಪಾರೋತಿ “ಆಗೇರ ಜಾತೇರಲ್ಲಾ ಹೀಂಗೇ ದುಡದ ಸಾಯ್ಲಿ. ಎಟ್ಟ ಗಳಸದ್ರೂ ಆದ ಅವರ ಕೈಯಲ್ಲ ನಿಲ್ಲದೇ ಹ್ವಾಗ್ಲ. ದೈಡಾಗದೇ ಹ್ವಾಗ್ಲ” ಅಂದ ಸಾಂಪಾ ಕೊಟ್ಟಾಕ ಹ್ವಾದ್ರ ಕಂಡಾ. ಹಂಗಾಗೇ ನಮ್ಮ ಆಗೇರ ಬಿದ್ದಾರಾಗೋದೇ ಎಲ್ಲ.

ಕಥೆಯ ಆಶಯ ಗಮನಾರ್ಹವಾದ್‌ಅದ್ದು. ಪುರುಷನೊಬ್ಬ ಹೆಣ್ಣೊಬ್ಬಳನ್ನು ಕೇವಲ ಭೋಗದ ದೃಷ್ಟಿಯಿಂದ ನೋಡಿದಾಗ ಈ ಸಮಾಜ ವ್ಯಕ್ತಪಡಿಸಿದ ಪ್ರತಿಕ್ರಿಯೆ ಇದು. ಆಗೇರರ ಬಡತನವನ್ನು ಕಂಡು ಕರಗಿ ಸ್ತ್ರೀ ಸಹಜ ಕರುಣಿಯಿಂದ ಸಹಕರಿಸಲು ಬಂದ ಪಾರ್ವತಿಯನ್ನು ಕೇವಲ ಕಾಮ ದೃಷ್ಟಿಯಿಂದಲೇ ಕಾಣುವ ಅವರ ಅಶ್ಲೀಲ ಮಾತುಗಳಿಂದ ಕುಪಿತಳಾಗಿ ಶಾಪವನ್ನು ನೀಡುತ್ತಾಳೆ. ಒಂದು ಹೆಣ್ಣಿಗೆ ಮಾಡುವ ಅವಮಾನ, ಅವಹೇಳನದಿಂದ ಇಡೀ ಸಮುದಾಯವೇ ಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಹೆಣ್ಣನ್ನು ಅವಳ ಮನಸ್ಸನ್ನು ಅರ್ಥ ಮಾಡಿಕೊಳ್ಳಲಾರದ, ಗೌರವಿಸಲಾರದ ಸಮಾಜಕ್ಕೆ ಮಹಿಳೆಯೊಬ್ಬಳ ಪ್ರತಿಭಟನೆ ಇದಾಗಿರಬಹುದೆ?

ಎಲ್ಲಾ ದ್ರಾವ್ಯ ಸೃಷ್ಟಿ

ಒಂದ್ಸಾರಿ ಇಡೀ ಊರೇ ಭೂಕಂಪ ಆಯ್ತು. ಜೀನೆಲ್ಲ ಬಳ್ದ ಹೋದ್ರ. ಆಗ ಒಂದ್ ಹೊಲತೇರ ಹೆಂಗ್ಸ್ ಮಾತ್ರ ತೊಳಿಸಿ ಗೊಡಿಮೇನ್ ಬದ್ಕ ಉಳೀತ. ಒಬ್ಳೀ ಕೂತ್‌ಕೊಂಡ್ತ. ಆಗ ಪಡಿಕೊಡೂಕ ಬಂದ ಭಗವಂತ ನೋಡ್ತಿ ಯಾರೂ ಇಲ್ಲ. ಯಾರಿಗ್ ಪಡಿ ಕೊಡೂದ? ಈ ಹೆಂಗ್ಸ್ ಕಂಡ್ತ. ಅದರ‍್ನ ತನ್ನ ಬೊಡ್ಕ ಕರ‍್ದ. ಆ ಹೆಂಗ್ಸನೆ ಸಣ್ಣಕ ಕೊಚ್ ಕೊಚ್ಚಿ ’ಇಡೀ ಊರಿಗೇ ಮತ್ ಮನಸ್ರ ಆಗ್ಲ’ ಅಂದೇಳಿ ನೆಲಕ್ಕೆ ಬೀರ‍್ದಾ. ಆವಾಗೆ ಮತ್ತ ಎಲ್ಲ ಮನಸ್ರ ಈ ಭೂಮಿ ಮ್ಯಾಲೆ ಹುಟ್ಟಿ ಬಂದ್ರ ಕಂಡಾ. ಭಗವಂತ ಪಡಿ ಕೊಡ್ತೆ ಬಂದಾ ಚೀಡೂಕ ವಸ್ತೈ ಎಲ್ಲಿ ಈತ? ಇವ್ರ ಉಡಿಗೆಲ್ಲ ಸೊಪ್ಪಿನ ಉಡಗಿ. ಅಲ್ಲೆ ಒಮದ್ ಕೆಸೂನ ಗಿಡ ಇದ್ದೀತ. ಒಂದ್ ಕೆಸೂನಲಿ ಹರ‍್ಕಂಡ ಅದ್ನೆ ಒಡ್ತ. ಅದ್ಕೆ ಎಚ್. ಎಯ್ಡೇ ಸಿದ್ದ ಅಕ್ಕಿ ಹಿಡೀತ. ಆಗ ಎಯ್ಡೇನದ್ದ ಅಕ್ಕಿ. ಹಿಡೀತಲಾ ಅಂದ ಭಗವಂತ “ನೀ ಏಟಿ ದುಡದ್ರೂ ಏಟ್ ದೊಡ್ ಸಾಕಾರ‍್ನ ಮನೀಲಾ ದುಡ್ಡರೂ ನಿನಗ್ ಎಯ್ಡೇ ಸಿದ್ದ ಅಕ್ಕಿ ಹುಟ್ಲ” ಅಂದೇಳಿ ಆದ್ರ ಹಣೇಲಿ ಬರ‍್ದ.

ಆಗೇರರ ಪ್ರತಿಯೊಂದು ಆಚರಣೆಯಲ್ಲೂ ಮಹಿಳೆಯರಿಂದ ಬಾವಿ ಪೂಜೆ ಇದ್ದೇ ಇರುತ್ತದೆ. ನೀರಿನಿಂದಲೇ ಜೀವ ಜಗತ್ತು ಎಂದು ನಂಬುವ ಅವರ ನಂಬಿಕೆಗೆ ಈ ಕಥೆ ಇಂಬು ಕೊಡುತ್ತದೆ. ಇಲ್ಲಿ ಮಾನವ ಸೃಷ್ಟಿಗೆ ಸಾಕ್ಷಿಯಾಗುವ ತುಳಸಿ ಕೂಡ ಆಗೇರ ಮಹಿಳೆಯರಿಗೆ ಇಂದಿಗೂ ಪವಿತ್ರವಾದುದಾಗಿದೆ.

ಈ ಭೂಮಿಯ ಸೃಷ್ಟಿಗೆ ಹೆಣ್ಣೇ ಕಾರಣ. ಹೆಣ್ಣಿನ ರಕ್ತ ಮಾಂಸದಿಂದಲೇ ಸಕಲ ಜೀವ ಸೃಷ್ಟಿಯಾಗಿದೆ. ಅದರಲ್ಲೂ ದಲಿತ ಮಹಿಳೆಯೊಬ್ಬಳು ಎಲ್ಲರ ಹುಟ್ಟಿಗೆ ಕಾರಣಳಾಗಿದ್ದಾಳೆ ಎನ್ನುತ್ತದೆ ಈ ಕಥೆ. ಬಹುಶಃ ಸಮಾಜ ಅವರನ್ನು ದೂರವಿಟ್ಟ ಸಂದರ್ಭದಲ್ಲಿ ’ತಮ್ಮನ್ನು ಮುಟ್ಟಿಸಿಕೊಳ್ಳದ ನೀವು ಜನ್ಮ ತಳೆದದ್ದೇ ನಮ್ಮ ಬಲಿದಾನದಿಂದ’ ಎಂದು ತಮ್ಮನ್ನು ತಾವೇ ಸಂತೈಸಿಕೊಳ್ಳುವ ರೀತಿಯೂ ಇರಬಹುದು. ಇದರ ಸತ್ಯಾಸತ್ಯತೆ ಏನೇ ಇರಲಿ ಈ ಜೀವ ಸೃಷ್ಟಿಯಲ್ಲಿ ತಮ್ಮ ಅನನ್ಯತೆ ಬಹುಮುಖ್ಯ ಎಂಬ ಅವರ ಸ್ವಾಭಿಮಾನವನ್ನು ಈ ಕಥೆ ಸ್ಪಷ್ಟಪಡಿಸುತ್ತದೆ.

ಮೇಲಿನ ಎರಡೂ ಕಥೆಗಳನ್ನು ಅವಲೋಕಿಸಿದಾಗ ತಮ್ಮ ಈ ದಾರುಣ ಬದುಕಿಗೆ ದೇವರ ಶಾಪವೇ ಕಾರಣವೆಂದು ಅಂದುಕೊಂಡಿದ್ದಾರೆ. ಹೀಗಾಗಿ ತಮ್ಮ ಬಡತನಕ್ಕೆ ಸಾಮಾಜಿಕ ವ್ಯವಸ್ಥೆಯ ಶೋಷಣೆ ಕಾರಣವೆಂದು ಯೋಚಿಸುವ ಗೋಜಿಗೂ ಹೋಗಲಿಲ್ಲ. ಅದನ್ನು ಮೀರುವ ಪ್ರಯತ್ನವನ್ನೂ ಮಾಡಲಿಲ್ಲ.

ಗಾದೆಗಳು

ಆಗೇರರಲ್ಲಿ ಅವರ ಜೀವನಾನುಭವದ ಅಭಿವ್ಯಕ್ತಿಯ ಅನೇಕ ಗಾದೆಗಳಿದ್ದರೂ ಸ್ತ್ರೀಯರನ್ನು ಉದ್ದೇಶಿಸಿ ಪ್ರಚಲಿತವಿರುವ ಗಾದೆಗಳನ್ನಷ್ಟೇ ಆಯ್ದುಕೊಂಡಿದ್ದೇನೆ.

 • ಹೆರಿಯಕ್ಕನ ಚಾಳಿ ಮನೆ ಮಂದೀಗೆಲ್ಲ
 • ಅಕ್ಕಿ ಖರ್ಚಾಗುಕೆಲ್ಲಾ ಅಕ್ಕನ ಮಕ್ಕಳೂ ಬಡವಾಗೂಕೆಲ್ಲ
 • ಗಂಡ ಹೆಂಡಿರ ಜಗಳದಲ್ಲಿ ಕೋಸ ಬಡವಾದ್ನಕಂಡಾ
 • ಸೊಸಿಗ ಬುದ್ಧಿ ಹೇಳ್ಕುಂಡು ಅತ್ತಿದೊಳ ತಿಂತ
 • ಹೊಸ ಹೆಂಡ್ತಿ ಅಂದ್ ಹೊತ್ರವರಿಗೂ ಮುದ್ ಮಾಡದ್ನ ಕಂಡಾ
 • ಸಾವ್ರ ಕೊದ್ರಿ ಸರದಾರಾ ಮನೆ ಹೆಂಡ್ತಿಗ್ ಪಿಂಜಾರಾ
 • ಬಳ್ಳಿ ಹಾಂಗೆ ಹೂಂಗ, ತಾಯಿ ಹಾಂಗೇ ಮಗ್ಳ
 • ಗಂಡ ಘಟ್ಟಕ್ಕೆ ಹೋಗೆಂದ ಇದ್ದ ಅರಿಬಾಗಾ ಸುಟ್ಟ ಕಂಡೇಂತ ಕಂಡಾ
 • ತಾಮ್ರದ ದುಡ್ಡ ತಾಯಿ ಮಕ್ಳಾನೇ ಅಗಲಸ್ತ
 • ಹತ್ ಮಂದಿ ತಾಯಿ ಹಾದಿಲ್ ಬಿದ್ ಸಾಯೇ
 • ಕೋಣೀಲಾರ‍್ದ ಸೋಳಿಗ್ ಅಂಗ್ಳ ಡೊಂಕ ಕಂಡಾ.
 • ಇಕ್ಕೊಂಡೋಳ ಇರೋ ತಂಕಾ ಕಟ್‌ಕೊಂಡೋಳ ಕಡೇ ತಂಕಾ
 • ಸೂಳಿಗೋದಾಂವ ಸುಡಗಾಡಿಗೋದಂಗೇಯ
 • ಕೊಡೊದ ಕೊಟ್ಟು ಕುಯ್ಡೀ ಹಾದ್ರಾ ಮಾಡ್ದಾಂಗ
 • ಹಂದ ಗೋಣವರ ಹಾದ್ರಾ ಮಾಡಿದರೆ ಕುಮಟೆಯೋರು ದಂಡ ತುಂಬೂದ
 • ರಂಡೀಗ ರಂಡಿ ಕಂಡ್ರ ಉಂಡಟ್ಟೇ ಸಂತೋಷ
 • ಮುಂಡೀ ಮದೀಲ ಉಂಡವನೇ ಜಾಣ
 • ಊರಿಗೆ ಬಂದೋಳ್ ನೀರಿಗೆ ಬರ‍್ದೆ ಇರೂದ?
 • ಹರ್ಕಿಗ್ ಹಂಕಾರ ಹೆಚ್ಚು ಗುರ್ಕಿಗ್ ಮುಳ್ಳ ಹೆಚ್ಚ
 • ಮೀಸೆ ಬರುವಾಗ ದೇಸ ಕಾಂಬೂದೆಲ್ಲ; ಮೊಲಿ ಬರುವಾಗ ನೆಲ ಕಾಂಬೊದೆಲ್ಲ

ಇಲ್ಲಿಯ ಕೆಲವು ಗಾದೆ ಮಾತ್ರ ಆಗೇರರಲ್ಲಿ ಕಂಡು ಬರುವ ವಿಶೇಷ ಗಾದೆಗಳಾಗಿದ್ದು, ಉಳಿದವೆಲ್ಲ ಎಲ್ಲ ಜನಾಂಗಗಳಲ್ಲೂ ಪ್ರಚಲಿತವಿರುವ ಗಾದೆಗಳೇ ಆಗಿವೆ. ಆದರೆ ಭಿನ್ನವಾದ ಭಾಷಾ ಸೊಗಡಿನಿಂದಾಗಿ ಅವು ವಿಶೇಷ ಮೆರಗನ್ನ ಪಡೆದಿವೆ.

ಒಗಟು: ಸ್ತ್ರೀಯರು ಸುಳಿಯುವ ಒಗಟುಗಳು ಮಾತ್ರ ಇಲ್ಲಿವೆ.

 • ಕರಿ ಅಪ್ಪಗೆ ಬಿಳೀ ಮಗಳ (ದೋಸೆ)
 • ಅವ್ವಿ ಬೇಯಿಸ್ತಿದ ಮಗಳ ಬಡಸ್ತಿದ (ಮಡಕೆ-ಚಿಪ್ಪು)
 • ಅಪ್ಪನ ದುಡ್ಡು ಅಕ್ಕ ಮಾಡೂ ಕಾಗಾ, ಅವ್ವಿ ಸೀರಿ ಮಡಸೂ ಕಾಗ (ಆಕಾಶ ನಕ್ಷತ್ರ)
 • ಅಪ್ಪ ಆಕಾಶಕ, ಅವ್ವಾ ಪಾತಾಳಕ, ಮಗಳ ಮದವಿಗ, ಮಗ ಯಾವಾರಕ (ಅಡಿಕೆ ಮರ)
 • ಅವ್ವ ಒನಕೆ ಮಗ ಡುಮ್ಮ ಮಗಳ ಸುಂಗರ ಸೂಳಿ (ಅಡಿಕೆ ಮರ ಅಡಿಕೆ – ಸಿಂಗಾರ)
 • ಹಿಂಡನಲ್ಲ ಕೂತ್ಕಂಡು ಮಿಂಡನ್ನ ಕರಿತೀದ (ಕೇದಗೆ ಹೂ)
 • ಅಕ್ಕ ತಂಗೇರು ಮುಳ್ಳಿನ ಬನದಲ್ಲಿ ಚಿಗುರು ಕೊಯ್ತಾರೆ (ಆಡುಗಳು)
 • ಊರೆಲ್ಲಾ ಉಡುಗಿ ಬಂದಜ್ಜಿ ಮೂಲಿಯಲ್ಲಿ ಕೂತುಕೊಂಡಿದ (ಕಸಬರಿಗೆ)
 • ಕರೀ ಹುಡುಗಿ ಕಾಲುಂಗುರ ಹಾಕ್ಕೊಂಡು ಸರ‍್ರನೆ ಹೋಗಿ ಭರ‍್ರನೆ ಬತೀದ (ಒನಕೆ)೦
 • ಅಣ್ಣಾ ಅಣ್ಣನ ಹೆಂಡ್ತಿ, ಅತ್ತಿಗೆ ಮೈದ್ನಿ ಮುಂದೇ ಮೂರು ರೊಟ್ಟಿ ತಿಂದ್ರ (ಅಣ್ಣ – ತಂಗಿ- ಅತ್ತಿಗೆ)
 • ಅವ್ವ ಅಪ್ಪನ ಬೆಟ್ಟು ತಿಂಬೂದಿಲ್ಲ (ಒಳ್ಳು -ಒನಕೆ)

ಆಗೇರ ಮಹಿಲೆಯ ಕಲಾಭಿವ್ಯಕ್ತಿ

ಒಂದು ಜನಾಂಗದ ಮಡಿಲಲ್ಲಿ ಸದ್ದಿಲ್ಲದೆ ಮೈದಳೆವ ಕಲೆ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅವರ ಅಸಕ್ತಿ, ಅಭಿರುಚಿ, ಕಲಾ ಕೌಶಲ್ಯಗಳ ಪ್ರತೀಕವಾದ ಇದು ಒಂದು ಸಂಸ್ಕೃತಿಯ ಅಧ್ಯಯನದಲ್ಲಿ ಅಂದಿನ ಪ್ರಾದೇಶಿಕ ವೈಶಿಷ್ಟ್ಯ, ಸಾಮಾಜಿಕ ಬದಲಾವಣೆಗಳನ್ನು ಗುರುತಿಸುವಲ್ಲಿ ಪ್ರಮುಖ ಅಂಶವಾಗಿರುತ್ತದೆ. ಆಗೇರ ಮಹಿಳೆಯರಿಂದ ರೂಪುಗೊಂಡ ಪ್ರದರ್ಶನ ಕಲೆಗಳು ಇಲ್ಲಿವೆ:

ಯಕ್ಷಗಾನ : ಚಂಡೆ ಮದ್ದಳೆಯೊಂದಿಗೆ ರೋಮಾಂಚನ ಹುಟ್ಟಿಸುವ ಕಡಲಕರೆಯ ಜನಪ್ರಿಯ ಕಲೆ ಯಕ್ಷಗಾನ ಆಗೇರರಿಗೂ ಮನಃಪ್ರೀಯ. ದುಡಿಮೆಯ ನಡುವೆಯೂ ಅವಿಶ್ರಾಂತ ದುಡಿಮೆಯ ನಡುವೆಯೂ ಯಕ್ಷಗಾನ ವೀಕ್ಷಣೆಯನ್ನು ಬಿಟ್ಟವರಲ್ಲ.

“ರಾತ್ರಿ ಮ್ಯಾನೆ ಹೊರಟರೆ ಬೆಳಗಾಗೊವರೆಗೂ ನೋಡದೆಯಾ ದ್ಯಾವರ‍್ದಾದ್ರೆ ತುಂಬಾ ಖುಷಿ” ಈ ರಾಮ ಕುಟ್ನಂದೆಲ್ಲಾ ಇರ‍್ತಿದಲ” ಎಂದು ಹೇಳುವ ಸ್ತ್ರೀಯರು ಯಕ್ಷಗಾನದಲ್ಲಿ ವೇಷಧಾರಿಗಳಾಗಿ ಭಾಗವಹಿಸಿದವರಲ್ಲ. ಆದರೆ ಯಕ್ಷಗಾನ ವೀಕ್ಷಣೆಗೆ ತಂಡೋಪತಂಡವಾಗಿ ಮುಗಿಬಿದ್ದವರು.

ಅಶಿಕ್ಷಿತರಾಗಿದ್ದೂ ಬಹಳ ಪ್ರಸಿದ್ಧ ನಟರಾಗಿ ಖ್ಯಾತರಾದ ಪುರುಷರು ಆಗೇರರಲ್ಲಿ ಇದ್ದಾರೆ. ವೃತ್ತ ಮೇಳದವರೊಂದಿಗೇ ಸ್ಪರ್ಧಿಸಬಲ್ಲ ಚಾಕಚಕ್ಯತೆ ಅವರಲ್ಲಿ ಇತ್ತು. ಈ ಕಲಾಸಕ್ತಿ ಇಂದೂ ಉಳಿದು ಇಂದು ಹೆಣ್ಣು ಮಕ್ಕಳೂ ಪ್ರವೇಶವನ್ನು ಪಡೆದಿದ್ದಾರೆ.

ಹಲಿ : ಮದುವೆಯ ಹಿಂದಿನ ದಿನ ಮನೆ ಸಾರಿಸಿ, ನೆಲ ಗೋಡೆ ಮೇಲೆ ಕೆಂಪು, ಶೇಡಿ ಹಾಗೂ ಮಣ್ಣಿನಿಂದ (ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೆಂಪು ಮಣ್ಣು) ಬರೆಯುವ ಚಿತ್ರವೇ ಹಲಿ. ಈ ಹಲಿ ಬರೆಯುವವರು ಸ್ತ್ರೀಯರೇ ಆಗಿದ್ದು, ಅವರ ಕಲಾ ಕೌಶಲ್ಯಕ್ಕೆ ಇದು ನಿದರ್ಶನವಾಗಿದೆ. (ಮದುವೆ ಚಡಂಗದಲ್ಲಿ ವಿವರಿಸಲಾಗಿದೆ) ಪ್ರಕೃತಿ ರಮ್ಯತೆಯ ಪ್ರತಿಬಿಂಬದಂತಿರುವ ಈ ಕಲೆ ಆಗೇರರ ಮಹಿಳೆಯರ ಕಲಾಕುಶಾಗ್ರತೆಗೆ ಸಾಕ್ಷಿಯಾಗಿದೆ.

ರಂಗೋಲಿ : ಎಲ್ಲ ಹಬ್ಬ ಹರಿದಿನ, ಮದುವೆ ವಿಶೇಷಗಳಲ್ಲೂ ಸಾರಿಸಿದ ಅಂಗಳ, ಹೊಸ್ತಿಲು, ದೇವರ ಮುಂದೆ ರಂಗೋಲಿಯನ್ನು ಮಹಿಳೆಯರು ಆಸಕ್ತಿಯಿಂದ ಬರೆಯುತ್ತಾರೆ. ಶೇಡಿಯನ್ನು ಕಲಕಿ ದ್ರವರೂಪವಾಗಿಸಿ ಕೈ ಬೆರಳಿನಿಂದ ರಂಗೋಲಿ ಬರೆಯುತ್ತಾರೆ. ಇದು ಬಹಳ ದಿನಗಳ ಕಾಲ ಇರುತ್ತದೆ.

ಪಗುಡೆ ನೃತ್ಯ : ನಾಮಕರಣದ ದಿನ ನಡೆಯುವ ನೃತ್ಯವಿದು. ಹೆಂಗಸರಲ್ಲಿ ಸೇರಿ ಕೊಡಪಾನವನ್ನು ಬಾರಿಸುತ್ತ ವೃತ್ತಾಕಾರವಾಗಿ ಕುಣಿಯುತ್ತಾರೆ. ಕೇವಲ ಕೊಡಪಾನದ ತಾಳ ಲಯದೊಂದಿಗೆ ಹೆಜ್ಜೆ ಹಾಕುವ ಈ ನೃತ್ಯಕ್ಕೆ ಹಾಡೂ ಇತ್ತು ಎನ್ನುವ ಸುಳುಹನ್ನು ಈಗಾಗಲೆ ಸಾಹಿತ್ಯವನ್ನು ಮರೆತ ಮಹಿಳೆಯ ಹಾಡೊಂದು ನೀಡುತ್ತದೆ.

ಪಗುಡೆ ಪು ಪಗುಡೆ ಪು
ಆಚೆ ಬದಿಗೆ ಹರ‍್ಗಿ ನೆಟ್ಟನೆ
ಈಚೆ ಬದಿಗೇ ಬಸ್ಳೆ ನೆಟ್ಟನೆ
ಪಗುಡೆ ಪು ಪಗುಡೆ ಪು

ಎಂದು ತಮ್ಮ ಕೃಷಿ ಪ್ರಿಯತೆಯನ್ನೇ ಬಿತ್ತರಿಸುವ ಇದು ಯಾವ ಆಶಯದೊಂದಿಗೆ ಕೊನೆಯಾಗುತ್ತಿತ್ತು ಎನ್ನುವುದು ಸಾಹಿತ್ಯದ ಕೊರತೆಯಿಂದಾಗಿ ತಿಳಿಯುವುದಿಲ್ಲ. ಸಾಹಿತ್ಯದೊಂದಿಗೇ ಈ ಕಲೆಯೂ ಈಗ ಮಾಯವಾಗುತ್ತದೆ.

ಜನಪದ ವೈದ್ಯ ಪದ್ಧತಿ:

ಅಸ್ಪೃಶ್ಯರಾದ, ಆಧುನಿಕತೆಯ ಸೋಂಕಿಲ್ಲದ, ಆರ್ಥಿಕವಾದ ಅಬಲರಾದ ಆಗೇರರು ವೈದ್ಯರನ್ನು ಕಂಡದ್ದು ಈಗಿತ್ತಲಾಗಿ. ಹಿಂದೆಲ್ಲಾ ಮನೆಮದ್ದು, ನಾಟಿಮದ್ದು, ನಾಡಮದ್ದು, ಗಾಂವಟಿ ಮದ್ದುಗಳಿಗೇ ಮೊರೆ ಹೋದವರು. ಪ್ರಕೃತಿ ಲಭ್ಯ ಔಷಧಿ ಸಸ್ಯಗಳನ್ನು ಬಳಸಿ ವಿವಿಧ ಕಾಯಿಲೆಗಳನ್ನು ಗುಣಪಡಿಸುವ ಕೆಲಸವನ್ನು ಕುಟುಂಬದ ಅನುಭವಿ ಅಜ್ಜಿಯರು ಮಾಡುತ್ತಿದ್ದರು.

ತುಂಬೆಸೊಪ್ಪು, ನುಕ್ಕಿ ಸೊಪ್ಪು, ಬೇವಿನ ಸೊಪ್ಪು, ಕಸಬಳ್ಳಿ, ನಜಟ್ಲೆ ಗಿಡದ ಬೇರು, ಚಂದಣ ಚಕ್ಕೆ, ಗಾಳಿಚಕ್ಕೆ, ತೆಂಗಿನ ಕರಟ, ನೇಗಿಲಮುಳ್ಳು, ವಾಯುವಳಂಗ, ಜೀರಿಗೆ, ಮೆಣಸಿನ ಕಾಳು, ಶುಂಠಿ, ಕೊತ್ತಂಬರಿ, ರಾಗಿ, ಎಳ್ಳು, ಪಪ್ಪಾಯಿ, ಮುರುಗಲ, ನಿಂಬು, ಕಲ್ಲಂಗಡಿ, ಕರ್ಜೂರ ಮುಂತಾದ ವಸ್ತುಗಳು ವಿವಿಧ ಕಾಯಿಲೆಗಳಿಗೆ ಔಷಧವಾಗಿ ಬಳಸಲ್ಪಡುತ್ತಿದ್ದವು.

ನಾಡು ಮಾಸ್ಕೇರಿಯ ಸಾಕವ್ವ ಆಗೇರ ಎಂಬ ಮುದುಕಿ ಶರೀರದ ಯಾವುದೇ ಭಾಗಕ್ಕೆ ಬಾವು ಬರುವುದಕ್ಕೆ ಗಡ್ಡೆ ಕರಗಿಸಲಿಕ್ಕೆ ಔಷಧಿ ನೀಡಿ ಜನಪದ ವೈದ್ಯ ಪದ್ಧತಿಯನ್ನು ತನ್ನದಾಗಿಸಿಕೊಂಡಿದ್ದಳು ಎಂಬ ಮಾಹಿತಿಯನ್ನು ಆರ‍್. ಜಿ. ಗುಂದಿಯವರು ತಮ್ಮ ಪಿ.ಎಚ್.ಡಿ. ಅಧ್ಯಯನ ಗ್ರಂಥದಲ್ಲಿ ನಮೂದಿಸಿದ್ದಾರೆ.

ಸಾಮಾಜಿಕ, ಆರ್ಥಿಕ ಸ್ತಿತಿಗತಿಯ ಬದಲಾವಣೆಯಿಂದ ಈಗ ನಾಟಿ ಮದ್ದು ಹಿಂದೆ ಬಿದ್ದಿದ್ದು ನೇರವಾಗಿ ವೈದ್ಯರ ಸಲಹೆಯನ್ನೇ ಪಡೆಯುತ್ತಾರೆ.

ಕ್ರೀಡೆ

ಹುಟ್ಟಿದ ಪ್ರತಿಯೊಂದು ಜೀವಿಯೂ ಆಟ ಆಡುವುದು ಸಹಜ. ಆಗೇರರೂ ಆಟಗಳಲ್ಲಿ ಆಸಕ್ತರೆ, ದಿನವಿಡೀ ಗೆಮ್ಮೆಯ ಮಧ್ಯೆ ಉಲ್ಲಾಸದಿಂದಿರಲು ಎಲ್ಲರೂ ಆಟಕ್ಕೆ ಮೊರೆ ಹೋಗುತ್ತಾರೆ. ಗಂಡಸರಿಗೆ ಆಡುವುದಕ್ಕೆ ಸಮಯ ಸಿಕ್ಕರೆ ದಿನದ ದುಡಿಮೆಯ ಜೊತೆಗೆ ಅಡಿಗೆ ಕೆಲಸದ ಹೆಚ್ಚಿನ ಭಾರದೊಂದಿಗೆ ಆಟವಾಡಲು ಹೆಂಗಸರಿಗೆ ಸಮಯ ಸಿಗುವುದಿಲ್ಲ. ಮಕ್ಕಳಿದ್ದಾಗ ಆಡಿದ್ದು ಬಿಟ್ಟರೆ ಗಂಡನ ಮನೆಗೆ ಬಂದ ಮೇಲೆ ತಮ್ಮ ಬದುಕು ದುಡಿಮೆಗೇ ಸೀಮಿತವಾಯಿತೆಂದು ವಿಷಾದ ವ್ಯಕ್ತಪಡಿಸುತ್ತಾರೆ.

ಮಕ್ಕಳಾಡುವ ಉಪ್ಪುಕಳ್ಳಾಟ, ಕಿಟ್ಟಾಟ, ಅಡಗಾಟ, ಕಂಬದಾಟ, ಸಾದುಗೋದು ಮುಂತಾದ ಆಟಗಳಲ್ಲಿ ಹೆಣ್ಣು ಗಂಡೆಂಬ ಭೇದವಿಲ್ಲ. ಕೆಳೆದಂತೆ ಗಂಡಸರದೇ ಬೇರೆ ಆಟಗಳಿರುವಂತೆ ಹೆಣ್ಣು ಮಕ್ಕಳಿಗೇ ಮೀಸಲಾದ ಕೆಲವು ಆಟಗಳು ಇಲ್ಲಿವೆ.

ಅಡಿಗೆಯೂಟ : ತಾಯಿಯ ಸಾಮಿಪ್ಯದಲ್ಲಿ ಆಡಿ ಬೆಳೆಯುವ ಹೆಣ್ಣು ಮಕ್ಕಳು ಅಡಿಗೆ ಮಾಡುವ ತಾಯಾಗಿ, ಸಾಮಾನು ಪೂರೈಸುವ ತಂದೆಯಾಗಿ ಅಡಿಗೆ ಆಟವನ್ನು ಆಡುತ್ತಾರೆ. ಆಟದಲ್ಲಿಯೂ ಕೂಡ ಹೊರಗಿನ ವ್ಯಾವಹಾರಿಕ ಕೆಲಸವನ್ನು ತಂದೆಗೇ ಮೀಸಲಿಟ್ಟು ತಾವು ಅರಿವಿಲ್ಲದೆ ಅಡುಗೆ ಮನೆಗೆ ಸೀಮಿತರಾಗುವ, ಪುರುಷ ಪ್ರಧಾನ ವ್ಯವಸ್ಥೆಯನ್ನು ಅರಿವಿಲ್ಲದೆ ಒಪ್ಪಿಕೊಳ್ಳುವ ಸ್ಪಷ್ಟ ಚಹರೆ ಕಾಣಿಸುತ್ತದೆ.

ಹರಳಿನಾಟ : ಕಲ್ಲ ಹರಳು, ಗದ್ನಕಾಯಿ, ಹಂಗರಕನ ಬೀಜಗಳನ್ನು ಬಳಸಿ ಆಡುವ ಆಟ ಹರಳಿನಾಟ. ಹರಳನ್ನು ಮೇಲೆ ಹಾರಿಸಿ ನೆಲದಲ್ಲಿಯ ಒಂದೊಂದೇ ಕಾಯಿಗಳನ್ನು ಆರಿಸುವುದು, ಮೇಲಿಂದ ಹಾರಿಸಿ ಮುಂಗೈ ಮೇಲೆ ನಿಲ್ಲಿಸುವುದು ಹೀಗೆ ಬೇರೆ ಬೇರೆ ಬಗೆಯಾಗಿ ಆಡುತ್ತಾರೆ. ಇವೆಲ್ಲವೂ ಹೆಣ್ಣು ಮಕ್ಕಳು ಸೂಕ್ಷ್ಮ ಮತಿಗಳಾಗಿ ಅಚ್ಚುಕಟ್ಟಾದ ಸಂಸಾರ ನಿರ್ವಹಣೆಗೇ ತರಬೇತುಗೊಳಿಸುತ್ತವೆ.

ಬಳಚಿಪ್ಪಿನ ಆಟ : ಹರಳಿನಾಟವನ್ನೇ ಇದು ಹೋಲಿದರೂ ಇಲ್ಲಿ ಬಳೆಚಿಪ್ಪು (ಕಪ್ಪೆ ಚಿಪ್ಪು)ಗಳನ್ನು ಬಳಸಿ ಅದು ಮುಖ ಮೇಲೆ ಮಾಡಿ ಬಿದ್ದರೆ ಕವುಚಿ ಬಿದ್ದರೆ ಅಂಕಗಳನ್ನು ಕೊಡುತ್ತಾ ಆಡುತ್ತಾರೆ. ಶಾಲೆಗೆ ಹೋಗದ ಹೆಣ್ಣು ಮಕ್ಕಳಿಗ ಕುಳಿತಲ್ಲೇ ಲೆಕ್ಕಾಚಾರವನ್ನು ರೂಢಿಸುವ ಜಾಣ್ಮೆಯ ಆಟವಾಗಿದೆ.

ಆಮ್ಟೆ ಆಟ (ಕುಂಟಬಿಲ್ಲೆ) : ಬಹಳ ಜನಪ್ರಿಯ ಆಟ ಆಮ್ಟೆ ಆಟ, ಸಾಮಾನ್ಯವಾಗಿ ಅಂಗಳದಲ್ಲಿ ಗೆರೆಯನ್ನೆಳೆದು ಮಾವಿನ ಗೊರಟು (ಆಮ್ಟೆ) ಅಥವಾ ಹಂಚಿನ ಚೂರನ್ನು ಒಂಟಕಾಲಿನಿಂದ ಮುಂದೆ ಸಾಗಿಸುತ್ತ ಗುರಿ ತಲುಪಿ ಮನೆ ಕಟ್ಟುವುದೇ ಆಮ್ಟೆ ಆಟ. ಆಡುವಾಗ ಗೆರೆ ಮುಟ್ಟಿದರೆ, ಗೊರಟು ಗೆರೆ ಮೇಲೆ ಬಿದ್ದರೆ, ಗೊರಟು ಬಾವಿ (ಪ್ರವೇಶವಿಲ್ಲದ ಬಿಂದು ಮನೆ) ಯಲ್ಲಿ ಬಿದ್ದರೆ ಔಟು.

ಅಂಗಳದಲ್ಲಿ ಎರಡೂ ಕಾಲೂರಿ ನಿಂತು ಒಂದನೆಯ ಮನೆಗೆ ಗೊರಟು ಎಸೆದು ಬಲಗಾಲಿತ್ತಿ ಎಡಗಾಲಿನಿಂದ ಕುಂಟುತ್ತ ಗೊರಟನ್ನು ಅಂಗಳಕ್ಕೆ ಸಾಗಿಸಿ ಬಲಗಾಲಲ್ಲಿ ಮೆಟ್ಟಬೇಕು. ಎಲ್ಲ ಮನೆ ಗೆದ್ದು ಬಂದ ಮೇಲೆ ಒಂದು ಮನೆಯನ್ನು ಕಟ್ಟಬಹುದು. ಗೆರೆಯೆಳೆದ ಚಿತ್ರಕ್ಕೆ ತಿರುಗಿ ನಿಂತು ತಲೆಯ ಮೇಲಿಂದ ಬೀಸಿ ಒಗೆದಾಗ ಗೊರಟು ಬಿದ್ದ ಮನೆ ಇವರದಾಗಿರುತ್ತದೆ. ಮತ್ತೆ ಆಡುವಾಗ ಮಧ್ಯೆ ವಿಶ್ರಾಂತಿ ಬೇಕೆಂದರೆ ಆ ಮನೆಯಲ್ಲಿ ಕಾಲೂರಿ ನಿಂತು ಸಾಗಬಹುದು. ಹೆಚ್ಚು ಮನೆ ಕಟ್ಟಿದವರಿಗೆ ಆ ದಿನದ ಗೆಲುವು.

ಹುಟ್ಟಿದ ಮನೆಯಿಂದ ಬೇರಾಗಿ ಬೇರೆಲ್ಲೊ ಒಂದೊಂದೇ ಮನೆಗೆಲ್ಲುತ್ತ ಮನೆ ಕಟ್ಟುವುದು ಹೆಣ್ಣಿಗೆ ಸಾಮಾನ್ಯ ಕೆಲಸವೇ? ಗಂಡಸರು ಹುತುತು, ಹಾಣಿಗೆಂಡೆ, ಲಗೋರಿ, ಕೋಳಿ ಅಂಕ್ ಮುಂತಾದ ಸಾಹಸಮಯ ಆಟಗಳಲ್ಲಿ ತೊಡಗಿದರೆ ಸ್ತ್ರೀಯರು ’ಗೃಹಿಣೀಂಗೃಹಮುಚ್ಯತೆ’ ಎನ್ನುವುದನ್ನು ನಿಜವಾಗಿಕಸಲು ಸನ್ನದ್ಧಳಾಗುವ ಸಾಮಾನ್ಯ ಆಟಗಳಿಗೇ ಸೀಮಿತವಾಗಿದ್ದಾಳೆ.