ಮದುವೆ ಹೂ ಮುಡಿಸುವ ಶಾಸ್ತ್ರದೊಂದಿಗೆ ಪ್ರಾರಂಭವಾಗುತ್ತದೆ. ಹೂ ಮುಡಿದ ಹೆಣ್ಣು ದೃಷ್ಟಿ ತಾಗದಂತೆ ದಿಬ್ಬಣ ಬರುವವರೆಗೂ ಹೊರಗೆ ಬೀಳಬಾರದು.

ಅತ್ತೆಮ್ಮ ಮಗಳೀಗೇ ಮಲ್ಲಿಗೆಯಾ ಮುಡಿಸ್ಯಾಳೇ
ಬಾಲಮ್ಮಗೆ ಕಲ್ಯಾಣದಾ ನೆದುರಾವೊ
ಬಾಲಮ್ಮಗೆ ಕಲ್ಯಾಣದಾ ನೆದರಾ ಬಿದ್ದಾಗೇರೋ
ಬಾಲಯ್ನದೆಬಣಾ ಬರುತನಾ
ಅಕ್ಕ-ತಂಗಿಯರು ಹೆಣ್ಣಿನ ಕಳಸ (ತಳಿಗೆ) ಸಿದ್ಧ ಮಾಡುವ ಸಡಗರ.
ಬಾಗಿಲ ಮೊಂದಿನ ಎಳೆಯ ಮಾವಿನ ತೀಳಿ
ಅದರ‍್ಹೋಗಿ ಯಾರೋ ಮುರದಾರೇ
ಅದರ‍್ಹೋಗಿ ಯಾರೇ ಮುರದಾರೆ ಬಾಲನ್ನು
ಅಕ್ಕದಿರ‍್ಹೋರ‍್ತು ಪರರಲ್ಲ ಸೋ ಸೋ
ಅಕ್ಕದಿರೋರ‍್ತು ಪರರಲ್ಲ ಬಾಲಮ್ನ
ಕಳಸಕೊಂತೀಳಾ ಮುರ‍್ದಾರೇ ಸೋ…… ಸೋ…..

ಹೆಂಗಳೆಯರೆಲ್ಲ ಸೇರಿ ಹಾಡುತ್ತಾ ಹೆಣ್ಣಿಗೆ ಸ್ನಾನ ಮಾಡುವ ಮಂಗಲ ಸ್ನಾನ ಅಂಗಳದಲ್ಲೇಳುವ ಕೆಲಸದಲ್ಲೂ ಸಂಭ್ರಮ.

 

ಕೆಸರಿಲ್ಲದಂಗಳಕೇ ಕೆಸರ‍್ಯಾಂಗೇ ಎದ್ದಾವೇ
ಹೆಸರಿಗ್ದೊಡ್ಡವನ ಮಗಳ ಮಿಂಚೇ
ಹೆಸರಿಗ್ದೊಡ್ಡವನ ಮಗಳ ಮಿಂದೇ ಉದಕಾವೇ
ಇಳಿಯೋರ ಬನ್ನೇ ಹರದಾವೆ ಸೋ…. ಸೋ…..

ವರನ ಮನೆಯಿಂದ ಮುತ್ತೈದೆಯರು ತಂದ ಧಾರೆಸೀರೆ, ಮೂಗುತಿ, ಕಾಲುಂಗುರ, ಹೂವು, ಕನ್ನಡಿ, ಬಾಚಣಿಗೆ, ಅರಿಶಿಣ ಕುಂಕುಮವನ್ನು ಒಳತಂದು ಹೆಣ್ಣಿಗೆ ಅಲಂಕಾರ ಮಾಡುತ್ತಾರೆ.

ಗುಂಡಿನ ಮನೆಯ ದಿಬ್ಬಣ ಹೆಣ್ಣಿನ ಮನೆಗೆ ಬಂದು ಚಪ್ಪರದಲ್ಲಿ ನಿಂತಿದೆ. ಸ್ವಾಗತಿಸಬೇಕಾದ ಅತ್ತೆ ಇನ್ನೂ ಕಾಣುತ್ತಿಲ್ಲ.

ಮಿಂದೇ ಒಗದೇ ಬಂದಾ ಅಂಗಳದಲಿ ನಿಂತಾನೋ
ಒಳಗಿದ್ದ ತಾಯಮ್ಮ ಒಳಗೇನ ಮಾಡುತೀ
ಮುತ್ತೀನಾರುತಿಯ ಕರತಾರೇ
ಮುತ್ತೀನಾರುತಿಯ ಕರತಾರೇ ತಾಯಮ್ಮ
ಅಗಲ ಬಾಗಲಕೇ ಅಡಿಮಾಡೆ… ಸೋ….. ಸೋ……

ಆಗ ಅತ್ತೆ ಹೊರಬಂದು ಪಾದಕೆ ನೀರು ಹಾಕಿ ಮುತ್ತಿನಾರತಿ ಮಾಡಿ ಅಳಿಯನನ್ನು ಸ್ವಾಗತಿಸುತ್ತಾಲೆ.

ಬಾಲಯ್ಯ ಬಂದೂ ಬಾಗಿಲ ತಡದೇನೊ
ಅತ್ತೆಮ್ಮಂಬೋಳು ಹೊರಬಂದು
ಅತ್ತೆಮ್ಮಂಬೋಳು ಹೊರಬಂದು ಬಾಲಯ್ಯಗೇ
ಮುತ್ತಿನಾರತಿಯ ಬೆಳುಗೀನೇ….. ಸೋ…. ಸೋ…..

ಸಾರಿಸಿ ಹಲಿ ಬಿಡಿಸಿ ಪವಿತ್ರ ವಸ್ತುಗಳನ್ನು ಜೋಡಿಸಿದ ಒಳಕೋಣೆಯಲ್ಲಿ ಮದುವೆ ನಡೆಯುತ್ತದೆ.

ಬಾಲಯ್ಯ ಕುಳಿತೇನೆ ಬಾಲಯ್ನ ಮಡದಿ ಕುಳತೀದೇ
ಕಾರೇಯ ಒಳಗೇ ಮಾಡೀರೆ
ಕಾರೇಯ ಒಳಗೇ ಮಾಡೀರೆ ಬಾಲಮ್ನ
ಧಾರೆಯ ಎರೆದೆ ಕೊಟ್ಟಾರೇ… ಸೋ…. ಸೋ….
ಬಾಲಯ್ಯಗೆ ಧಾರೇಯ ಎರದೇನ ಮಾಡೇರೇ
ಒಳಗೆ ಒಚ್ಚಾಯ ಮಾಡೇರೇ
ಒಳಗೆ ಒಚ್ಚಾಯ ಮಾಡೇರೇ ಬಂದೇ ಹತ್ತು ಮಂದಿ
ಸ್ಯಾಸಕ್ಕಿ ಹಾಕಿ ಹರಸೇರೇ….. ಸೋ……. ಸೋ…..

ಧಾರೆ ಎರೆದು, ಉಡುಗೊರೆ (ಒಚ್ಚಾಯ) ನೀಡಿ, ಅಕ್ಷತೆ ಕಾಳು ಹಾಕಿ, ಊಟೋಪಚಾರ ಮಾಡುವ ಮದುವೆಯ ವಿವಿಧ ಕಾರ್ಯಗಳನ್ನು ತಮ್ಮ ಹಾಡುಗಳಲ್ಲಿ ಮುಗಿಸುತ್ತಾರೆ.

ಕನ್ನೆಯ ಕೈ ಹಿಡಿಯಲು ಹೊರಟ ಮದುಮಗ ಕೂಡ ತನ್ನ ಮೋಹದ ಮಡದಿಯ ತೌರುಮನೆಯನ್ನು ‘ಅತ್ತೆಯ ಮನೆ’ಯೆಂದೇ ಹೆಮ್ಮೆಯಿಂದ ಎಲ್ಲರಿಗೂ ಪರಿಚಯಿಸುತ್ತಾನೆ. ಜೊತೆಗೆ ಹೊರಟವರೂ ಕೂಡ ‘ಅತ್ತೆಯನ್ನೇ (ವಧುವಿನ ತಾಯಿ) ಸಂಬೋಧಿಸಿ’ ಅತ್ತೆಯ ಮನೆಗೆ ಅಳಿಯ ಬರುವ ರೀತಿಯನ್ನು ಬಣ್ಣಿಸುತ್ತಾರೆ.

ಅತ್ತಿ ನಿನ ಮನಿಗೇತಿ ಬಾಲಯ್ಯ ಬರುವಾನೆ
ಸುಂಕದ ಹೊಳೆಯಲ್ಲೀ ಬಿಂಕದ ದೋಣೀ ಹತ್ತಿ
ತಂಪಿಗೆ ನಿನ್ನಳಿಯ ಬರುವಾನೇ… ಸೋ….. ಸೋ…
ಅಚ್ಚೀಗೆ ಹಳ್ಳವೋ ಇಚ್ಚೀಗೆ ಕೊಳ್ಳವೊ
ಅದನಮ್ಮತ್ತೇರ ಮನೆಯೇ
ಅದನಮ್ಮತ್ತೇರ ಮನೆಯೆಂದೇ ಬಾಲಯ್ಯ
ಬಾಲಮ್ನ ಬೇಡಿ ಬಂದಾನೋ…. ಸೋ…. ಸೋ

ಮದುವೆಯ ಅತ್ಯಂತ ಪ್ರಮುಖ ಹಾಗೂ ತುಂಬಾ ಭಾವನಾತ್ಮಕ ಸನ್ನಿವೇಶ ಎಂದರೆ ಹೆಣ್ಣೊಪ್ಪಿಸುವುದು. ಇಷ್ಟು ದಿನ ಹೂವಿನಂತೆ ಪ್ರೀತಿಯಿಂದ ಸಲುಹಿದ ಮನೆಯ ಹೆಣ್ಣನ್ನು ಅಪರಿಚಿತ ಮನೆಗೆ ಕಳುಹಿಸುವಾಗಿನ ಹೆತ್ತವರ ಕರುಳ ಸಂಕಟ ಒಂದೆಡೆ ವ್ಯಕ್ತವಾದರೆ ಹೆತ್ತವರ ಕಣ್ಣೀರ ನೋಡಲಾರದ ಗಂಡಿನ ಕಡೆಯವರು ‘ಚೆಂದಾಗಿ ನೋಡುವ’ ಭರವಸೆಯನ್ನು ನೀಡುವುದು ಆಗೇರರ ಹೃದಯ ಸಂಸ್ಕಾರದ ಪ್ರತೀಕವಾಗಿದೆ.

ಪ್ರೀತಿಲಾಡಿದ ಮಗಳು
ಇಟ್ಟಿಟ್ಟು ಬುದ್ದಿ ಅರಿತೆಲ್ಲೋ
ಇಟ್ಟಿಟ್ಟು ಬುದ್ಧಿ ಅರಿತಲ್ವೋ ಸಣೋಳು
ತಪ್ಪಂದೇಲಿವಳಾ ಸಲಿಕೊಳೋ…. ಸೋssss ಸೋsss
ಸಣ್ಣಾದರಾಗಲಿಲಾ ದೊಡ್ಡದಲಾಗಲೋ
ತಪ್ಪೊಪ್ಪು ಎಲ್ಲಾ ಹೊಟ್ಟೇಲಿ
ತಪ್ಪೊಪ್ಪು ಎಲ್ಲಾ ಹೊಟ್ಟೇಲಿ ಹಾಕುಂಡನಾವ
ಹಾಲ್ತುಪ್ಪ ಹಾಕಿ ಸಲಿಕಂಬೂ… ಸೋssss ಸೋssss

ಕನ್ಯಾಧಾನ ಮಾಡಿ ಹೆತ್ತವರು ತಮ್ಮ ಜವಾಬ್ದಾರಿಯಿಂದ ಪಾರಾಗಲು ಬಯಸಿದರೂ ಕಿರಿಪ್ರಾಯದ ಮುಗ್ಧ ಮಗಳನ್ನು ಪರಿರಿಗೊಪ್ಪಿಸುವಾಗ ಹೆತ್ತವರಿಗೆ ತುಂಬಾ ವೇದನೆಯಾಗುತ್ತದೆ. ಪ್ರೀತಿಯಿಂದ ವಿನಯಪೂವ್ಕವಾಗಿ ಅಷ್ಟೇ ಚಾಣಾಕ್ಷತನದಿಂದ ಮಗಳ ಭವಿಷ್ಯಕ್ಕಾಗಿ ಅವರು ಬೇಡುತ್ತಾರೆ. ಹೆಣ್ಣು ದೊಡ್ಡವಳೋ ಸಣ್ಣವಳೋ ಅದು ಪ್ರಶ್ನೆ ಅಲ್ಲ. ತಮ್ಮ ಮನೆಗೆ ಬರುವ ಹೆಣ್ಣನ್ನು ಹಾಲ್ತುಪ್ಪ ಹಾಕಿ ಸಲುಹುತ್ತೇನೆನ್ನುವ ಭರವಸೆಯೊಂದಿಗೆ ಸಮಾಧಾನ ಪಡಿಸುತ್ತಾರೆ. ಆಗೇರದಲ್ಲಿ ಎಲ್ಲ ಕಡೆ ಹೆಣ್ಣಿಗೆ ಪ್ರೀತಿಯ ಸ್ವಾಗತ, ಆತ್ಮೀಯ ಗೌರವವನ್ನು ಕಾಣುತ್ತೇವೆ.

ಎಲ್ಲ ಸೇರಿ ಹೆಣ್ಣನ್ನು ಗಂಡನ ಮನೆಗೆ ಕಳುಹಿಸುವಾಗ ತಮ್ಮ ಮಗಳು ಹುಟ್ಟಿದ ಮನೆ – ಕೊಟ್ಟ ಮನೆ ಎರಡನ್ನೂ ಬೆಳಗಬೇಕೆನ್ನುವ ಆಸೆ ಎಲ್ಲ ಹೆತ್ತವರದು. ಹೀಗಾಗಿ ಅವಳಿಗೆ ಸಹಜವಾದ ಬುದ್ಧಿ ಮಾತುಗಳನ್ನಾಡಿ ಕಳಹಿಸಿ ಕೊಡುತ್ತಾರೆ.

ಗಂಡನ ಮನಿಯಾ ಕೆಲಸಾ ಕಂಡಂಗೇ ಗೇಯ್ಬೇಕೇ
ಉತ್ತಮರಾ ಹೆಸರಾ ತರಬೇಕೇ || ಬಾಲಯ್ಯ
ಹೊತ್ತಾದ್ರು ಒಂಟಾ ಉಣಬೇಕೆ
ನೆರಮನಂಬೂದ ಅರ್ದಾ ತಾಯಿತಂದೆ
ಅರ್ದಟ್ರೆ ನನ್ನ ಕರ‍್ಟರ|| ಕರಕುಂಡೆ
ಮೊರ ತುಂಬಕ್ಕೀ ಕೊಡ್ಬರ ||

ತೌರು ಮನೆಯಲ್ಲಿ ಹೊತ್ತಿಗೊತ್ತಿಗೆ ಉಂಡು ಬೆಳೆದ ಮಗಳು ಗಂಡನ ಮನೆಯಲ್ಲಿ ಹೊತ್ತಾದ ಊಟಕ್ಕೆ ಅಂಜಬಾರದು. ಅಂತಹ ಮಾನಸಿಕ ಭೂಮಿಕೆಯನ್ನು ಮಗಳಲ್ಲಿ ಸಿದ್ಧಮಾಡುವ ಹೆತ್ತವರ ಪ್ರಯತ್ನವಿದು.

“ಗಂಡ ನಮ್ಗೆ ದೇವ್ರಿದಂಗ, ಎಟ್ಟೇ ಹೊತ್ತಾದ್ರೂ ನಾವ್ ಅಂವ್ಗ ಕಾಯ್ಬೇಕ್ ತಾನೊತ್ತಾದ್ರೂ ಬಡ್ಸಿ ಅದೇ ತಾಟ್ನಲ್ಲಿ ಉಂಬೂದ, ಗಂಡ್ನ ತಾಟ್ಲದಲ್ಲಿ ಊಟ ಮಾಡದಿದ್ರ ಸಂತಾನ ಇಲ್ಲ ಅಂತಿದ್ರ” ಎಂದು ಬಹಳ ವರ್ಷಗಳ ಕಾಲ ಮಕ್ಕಳನ್ನು ಕಾಣದೆ (ತಾಯಾಗಿದ್ದಾರೆ) ಬಂಜಿತನದ ಬೇಗೆಯಲ್ಲಿ ಬೆಂದು ಹೇಳುವ ಮೋಹಿನಿ ಆಗೇರರ ಅನುಭವಕ್ಕೂ ಹೆತ್ತವರ ಈ ಬುದ್ಧಮಾತಿಗೂ ಎಷ್ಟೊಂದು ಸಂಬಂಧವಿದೆ ಅನಿಸುತ್ತದೆ.

ಒಡಹುಟ್ಟಿದ ಅಣ್ಣ ಕೂಡ ಅಂತಹ ಪ್ರಯತ್ನವನ್ನು ಮಾಡಿ ತಂಗಿಯ ಒಳಿತನ್ನು ಬಯಸುತ್ತಾನೆ. ಕೃಷಿಭೂಮಿಯಿಲ್ಲದಿದ್ದರೂ, ಕೃಷಿ ಪ್ರಿಯರಾದ ಅವರು ಹೆಣ್ಣಿಗೆ ತೆಂಗು, ಅಡಿಕೆ, ಬಾಳೆ ಸಸಿಗಳನ್ನು ನೀಡುತ್ತಾರೆ.

ತಂಗೇ ಹೋಗುವಾಗೇ ತೆಂಗಿನ ಸಸಿಮಡಗೇ
ತೆಂಗು ಕೊನೆಬಿಡ್ಸೇ ಫಲಬಂದೂ| ಬಾಲಯ್ಯ
ತಂಗೀ ಕರೆತರುವಾ ದಿನವಾದ ||

ಕೊಟ್ಟ ಸಸಿಯನ್ನು ಸಿರಯಾಗಿ ಪೋಷಿಸಿ, ಅದರ ಜೊತೆಗೆ ಅವಳು ಫಲವತಿಯಾಗಿ ವಂಶದ ಕುಡಿ ಹಬ್ಬಿಸುವ ತಾಯಾಗಬೆಕೆಂಬ ಹಂಬಲ ಧ್ವನಿತವಾಗಿದೆ.

ಅತ್ತೆಯ ಮನೆಯಲ್ಲೂ ಸಂಭ್ರಮ ಸಡಗರದಿಂದ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾರೆ.

ಅತ್ತೆಯ ಮನೆಗೆ ಸೊಸೆ ಬಂತೆ ಮಾಣಿಕ ಬಂತೆ
ಸೊಲಿದೇವರಂತ ಸೊಸೆ ಬಂತೆ
ಸೂಲಿ ದೇವರಂತ ಸೊಸೆ ಬಂದ ಮೂರತದಲ್ಲಿ
ಸಣ್ಣಕ್ಕಿ ಮೂಡೆ ತರಾದ…. ಸೋssss ಸೋsssss
ಅತ್ತೆಮ್ಮನಾಗ್ಲೆ ಬಾಗಿಲನೆ ತೊಳೆದ ನಿಂತೆ
ಒಳಗೆ ಕಾಲಾಕಿ ಬಾರೆಲಂದು
ಒಳಗೆ ಕಾಲಾಕಿ ಬಾರೆಂದಲೀನೆಂದಳೇಳು
ಬಲಗಾಲ ಮುಂದಕಿ ನೀಡಿ ಮಗುವೆ…. ಸೋssss ಸೋssss
(ದೇವಿ ಮಂಕಾಳು ಆಗೇರ)

ಮನೆಗೆ ಬಂದ ಭಾಗ್ಯಲಕ್ಷ್ಮಿಯನ್ನು ಒಳತುಂಬಿಸಿಕೊಳ್ಳುವಾಗ ಮಾಣಿಕ್ಯದಂಥ ಅಮೂಲ್ಯವಾದವಳೆಂದೂ ಸೂರ್ಯದೇವನಷ್ಟು ಪ್ರಭೆಯುಳ್ಳವಳೆಂದೂ ಮನತುಂಬಿ ಹೇಳಿರುವುದು ಆಗೇರರಲ್ಲಿ ಸ್ತ್ರೀಗೆ ಇರುವ ಕೌಟುಂಬಿಕ ಸ್ಥಾನಮಾನವನ್ನು ತಿಳಿಸುತ್ತದೆ.

ಕಳಸ ಸ್ನಾನದ ಸಿದ್ಧತೆಯಿಂದ ಹಿಡಿದು, ವರನ ಸ್ವಾಗತ, ಧಾರೆ ಎರೆಯುವ, ಸೊಸೆಯನ್ನು ಮನೆತುಂಬಿಸಿಕೊಳ್ಳುವ ಎಲ್ಲ ಸನ್ನಿವೇಶಗಳನ್ನು ಅವಲೋಕಿಸಿದಾಗ ಮದುವೆ ಕಾರ್ಯದಲ್ಲಿ ಮಹಿಳೆಯ ಅನಿವಾರ್ಯ ಉಪಸ್ಥಿತಿಯ ಅವಶ್ಯಕತೆ ಕಂಡು ಬರುತ್ತದೆ. ಅಲ್ಲದೆ ಅಳಿಯ ಹಾಗೂ ಜೊತೆಯವರೂ ಕೂಡಾ ’ಅತ್ತೆಯ ಮನೆ’ಯೆಂದೇ ಕರೆದಿರುವುದು ಆಗೇರರ ಸಮಾಜದಲ್ಲಿ ಮಹಿಳೆ ದಕ್ಕಿಸಿಕೊಂಡ ಗೌರವ ಸ್ಥಾನದ ಸೂಚಕವಾಗಿದೆ.

ಮದುವೆಯಾದ ಹೊಸತರಲ್ಲಿ ’ಒಡೆಯನ ಕಾಂಬೂಕ’ ದಿಬ್ಬಣದ ಸಮೆತ ಹೋಗುವುದೊಂದು ವಿಶಿಷ್ಟ ಪದ್ಧತಿ ಆಗೇರರಲ್ಲಿ ಇತ್ತು. ಬಡವರಾದ ಅವರು ಮದುವೆ ಖರ್ಚಿಗಾಗಿ ’ವರ’ ನೀಡಿದ ಒಡೆಯನ ಬಗೆಗಿರುವ ನಿಷ್ಠೆಯನ್ನು ಹೀಗೆ ಪ್ರದರ್ಶಿಸುತ್ತಿದ್ದರು. ಅಂತಹ ಗೌರವವನ್ನು ನೀಡದಿದ್ದರೆ ಸಾಲ ನೀಡಿದ ಒಡೆಯರೂ ಕುಪಿತರಾಗುತ್ತಿದ್ದರು.

ಒಡೆಯರ ಕಾಣೂಕೇಗೇ ನಾವೆಲ್ಲ ಬಂದೇವೆ
ಕಾಣಿಸ್ಕೊಂಬೊಡಿಯಾ ಒಳಗಿಲ್ಲಾ
ಕಾಣಿಸ್ಕೊಂಬೊಡಿಯಾ ಒಳಗಿಲ್ಲಾ ಹೊರಗಿಲ್ಲಾ
ಅವರೀವ್ರೆ ಜಪದಾ ಕರೆಯಲ್ಲೀ
ಅವರೀವ್ರೆ ಜಪದಾ ಕರೆರೆಯಲ್ಲೀ ಒಡತೀರೆ
ಅಲ್ಲಿ ಗೈದಾಳ ಕಳಗೀರೆ … ಸೋsss ಸೋsss
(ಮಾದೇವಿ ತಮಣಾ ಆಗೇರ)

ಒಮ್ಮೊಮ್ಮೆ ಸತಾಯಿಸಿದರೂ ಗತ್ತಿನಿಂದ ದರ್ಶನ ನೀಡಿದ ಒಡೆಯ ಮದುಮಕ್ಕಳಿಗೆ ಉಡುಗೊರೆ ನೀಡಿ ಸತಾಯಿಸುತ್ತಿದ್ದುದು ಮತ್ತೆ ಜೀತ ಪದ್ಧತಿಯ ಖೆಡ್ಡಾದಲ್ಲಿ ಕೆಡಗುವ ಒಡೆಯರ ಉಪಾಯವೇ ಇದು?

 

ಮದುವೆಯಾಗಿ ಹೋದ ಹೆಣ್ಣಿಗೆ ಉಂಡಾಡಿ ಬೆಳೆದ ತವರಾನ ಜಾಸ್ತಿ. ಅದಕ್ಕೆ ಅಲ್ಲವೆ ತಾಯಿದ್ರೆ ತವರೆಚ್ಚು ಎನ್ನುವುದು. ತಾಯ ಉಪಚಾರಕ್ಕೆ ಎಣೆ ಎಲ್ಲಿ?

ತಾಯಿದ್ರೆ ತವರೂರೆ ನೀರಿದ್ರೆ ಹೆಗ್ಗೆರೆ
ಅನಿದ್ರೆ ಅರಸೂ ಅರಮನೆ || ತಾಯವ್ವ
ನೀನಿದ್ರೆ ನಮಗೆ ತವರೂರೆ ||
ಹೆತ್ತವ್ವರಿರುವಂಕ್ರಿಗ್ ಹೊಟತುಂಬ ಬಡಸ್ವಳ
ನೆತ್ತಿ ತುಂಬೆಣ್ಣೆ ಇಡುವಳೇ || ತಾಯವ್ವ
ಅದ್ಯಾದಿ ಮುಟ್ಟು ಬರುವಾಳೇ ||

ಹೊಟ್ಟೆ ತುಂಬ ಉಣ್ಣಿಸಿ, ನೆತ್ತಿಗೆ ಎಣ್ಣೆ ಹಚ್‌ಇ. ಊರ ಗಡಿತನಕ ಕಳುಹಿಸಿ ಬರುವ ತಾಯ ನಂತರ? ಅತ್ತಿಗೆಯ ಅನಾದರ ಹೆಣ್ಣಿಗೆ ನೋವನ್ನು ನೀಡುತ್ತದೆ.

ಮಗಳು ಬಂತೇಳಿ ತಾಯಿ ಜಿಣತಕ್ಕಿ ಹರಗಿ
ಅತ್ತೂಗಿ ಮಾಲಕ್ಷ್ಮಿ ಹುಗುದಿಟ್ಟಿ
ಅತ್ತೂಗಿ ಮಾಲಕ್ಷ್ಮಿ ಎನಂದಿ ಹುಗುದಿಟ್ಟಿ
ಹೆಣ್ಣು ಮಕ್ಕಳು ತಿಂದಿ ಮನಿಹಾಳ ||
(ಸುಶೀಲಾ ಅಗೇರ)

ಗಂಡನ ಮನೆಯಲ್ಲೂ ಸಂಜೆಯವರೆಗೆ ದುಡಿಯುವ ಹೆಣ್ಣು ತೌರು ಮನೆಗೆ ಬಂದರೆ (ತಾಯಿಲ್ಲ) ಅತ್ತಿಗೆ ತಾಯ ವಿಶ್ರಾಂತಿಯನ್ನು ನೀಡುವುದಿಲ್ಲ.

ಅಣ್ಣನ ಮನಿಗೋದ್ರೆ ಅಕ್ಕೇ ತಳಸಂಬಾರೇ
ನೋಡಣ್ಣಾ ನಿನ್ನ ಮಡದೀಯ || ಹೇಳಿದ ಮಾತ
ತಾಳದ್ನೋ ನಿನ್ನ ಗುಣಕಾಗೇ ||
ಅಣ್ಣಾ ನಿಮ್ಮೋನಂದೇ ಅತ್ಗೆ ನಮ್ಮೋಳಲ್ಲಾ
ಹಿತ್ಲದಾ ಹೂಂಗಾ ಕೊಯ್ಬೆಡಾ || ಅತ್ತಿಗೇ
ಅಣ್ಣ ಬರುವಂಕ್ರಿಗಿರಗೊಡಾ||
ಅಣ್ಣಾನ ಹೆಂಡೂತಿ ನಂಗೊಂದ ಅತ್ತೂಗೆ
ಸೊಣ್ಣಾದ ನೀರ ಒಲಿಮುಂದೇ || ಇಕ್ಕುಂಡೇ
ಎಮ್ಮಿ ಹಾಲಂದ ಕೊಡುವಾಳೇ ||
ರಾಗಿ ಬೀಸಂದರೇ ರೋಗ ಬಂತೆಂಬಾಳೇ
ರಾಗಿ ಅಂಬೂಲಿ ಕಟ್ರಸವ || ಸುರವಾಗೇ
ನೋಡಣ್ನ ಅವರ ಕೈ ಬಾಯಾ ||

ಇಷ್ಟೊಂದು ಅನಾದರ ತೋರುವ ಅತ್ತಿಗೆ ಹೇಗೆ ತಾನೆ ತಾಯಿಯಾದಾಳು?

ಅತ್ತಿಗೆ ತಾಯಲ್ಲ ಹಿತ್ತಾಳೆ ಚಿನ್ನಲ್ಲ
ಎತ್ರಾಣಿ ಗಿಡವೇ ಮರವಲ್ಲ || ಅಣ್ಣಯ್ಯ
ತಾಯಿಲ್ದಾ ಮನೆಯೇ ತವರಲ್ಲ

ಎನ್ನುವ ಸಂಕಟವನ್ನು ಅಣ್ಣನಲ್ಲಿ ತೋಡಿಕೊಳ್ಳುತ್ತಾಳೆ. ಅಣ್ಣನೂ ಒಮ್ಮೊಮ್ಮೆ ಸಿಡುಕುವುದು ಇದೆ. ’ಕೊಟ್ಟ ಹೆಣ್ಣು ಕುಲದ ಹೊರಗೆ’ ಎನ್ನುವ ಭಾವನೆ ಇಲ್ಲೂ ಇದೆ. ಬಡತನವೋ, ಬಿಸಿಲೋ, ಬೆಂಕಿಯೋ ಕೊಟ್ಟ ಮನೆಯೇ ಹೆಣ್ಣಿಗೆ ಗತಿ. ಹಬ್ಬ ಹುಣ್ಣಿಮೆಗೆ ಕರೆದಾಗ ಮಾತ್ರ ತೌರು ಮನೆಗೆ ಬರುವುದು ಸೂಕ್ತವೇ ಹೊರತು ಹತ್ತಿರವಿದೆಯೆಂದು ಓಡೋಡಿ ಬರಬಾರದು ಎನ್ನುವ ಭಾವ ಈ ಅಣ್ಣ ತಂಗಿಯರ ಸಂಭಾಷಣೆಯಲ್ಲಿದೆ.

ಅಪ್ಪನ ಮನೆ ಕೂಡಂದೆ ಲೋಡೋಡಿ ಬಂದರೆ
ಕೊಡಮಡಲಕಿಲಿಟ್ಟು ನೀರೆಲ್ಲಾ ಸೈ ಸೈ ಸೈ ಸೈ
ಕೊಡಮಡಕಿಲಿಟ್ಟೂ ನೀರಿಲ್ಲ ಅಣ್ಣಯ್ಯ
ಹೆಂಡರಿಲ್ಲೀನೋ ಮನೆಯಲ್ಲಿ || ಸೈ ಸೈ ಸೈ ಸೈ
ನನ್ನ ಹೆಂಡರ ಸುದ್ದಿ ನನ್ಕೊಡ ಹೇಳಬ್ಯಾಡ
ಇಂದೆ ನಮ್ಮಲ್ಲಿ ಇರಬ್ಯಾಡ ಸೈ ಸೈ ಸೈ ಸೈ

ಬಂದ ತಪ್ಪಾಯ್ತಣ್ಣ ಉಂಡದ್ಕಕ್ಕಿ ಕೊಡ್ತಿ
ನಾ ಹೋತಿ ನನ್ನ ಅರಮನಿ ಸೈ ಸೈ ಸೈ ಸೈ
ಹಾಕಿದ ಗಂಟುಂಟು ಕಟ್ಟಿದ ಮುಡಿಯುಂಟು
ಪಟ್ನಕ್ಕ ಸೇರುವಾ ಹಾದ್ಯುಂಟು ಸೈ ಸೈ ಸೈ ಸೈ

ಅಣ್ಣ ಹೇಳಿದ ಮಾತು ಸಿಟ್ಟು ಮಾಡಬ್ಯಾಡ
ಹುಟ್ಟೀದ ಮನಿಯಾ ತೊರಿಬ್ಯಾಡ ಸೈ ಸೈ ಸೈ ಸೈ
ಹುಟ್ಟೀದ ಮನಿಯಾ ತೊಬ್ಯಾಡ ತಂಗಿ
ಹಬ್ಬ ಹುಣ್ಣಿಮಿಗಿ ಬಂದೋಗ ಸೈ ಸೈ ಸೈ ಸೈ

ಅಣ್ಣ ಹೇಳಿದ ಮಾತು ಸಿಟ್ಟು ಸಿಟ್ಟಲ್ಲ
ಅತ್ತಿಗೆ ಹೇಳಿದ್ರೆ ಕತ್ತೀಲಿ ಸೈ ಸೈ ಸೈ ಸೈ
ಅತ್ತಿಗೆ ಹೇಳಿದ್ರೆ ಕತ್ತೀಲಿ ಕಡ್ದಂಗೆ
ಚೂರೀಲಿ ಕಳ್ಳ ಕಡ್ದಂಗೆ ಸೈ ಸೈ ಸೈ ಸೈ
(ಮಾದೇವಿ ತಮಾಣಿ ಆಗೇರ)

ಗಂಡನ ಮನೆಯಲ್ಲಿ ಕಾಲಕಾಲಕ್ಕೆ ಕಾದುಕೂತು ಪತಿ ಸೇವೆ ಮಾಡುವುದು ಪತ್ನಿಧರ್ಮ. ಅದಕ್ಕೆ ಸ್ವಲ್ಪ ವ್ಯತ್ಯಯವಾದರೂ ಹೆಂಡತಿಗೆ ಹೊಡೆತ ಬಡಿತ ತಪ್ಪಿದ್ದಲ್ಲ. ತನ್ನೆದುರೇ ಮಗಳ ಅಚಾನಕ್ ದಂಡಿನ ಹೊರಟ ಅಳಿಯನನ್ನು ಹೊಡೆಯಬೇಡಿರೆಂದು ಬೇಡಿಕೊಳ್ಳುವ ತಾಯಿ ಕರುಳು ಇಲ್ಲಿದೆ. ಅದಕ್ಕಲ್ಲವೇ ತಾಯಿಗಿಂತ ಬಂಧುವಿಲ್ಲ ಎನ್ನುವುದು.

ತಡವಾಗಿ ಬಂದ ಗಂಡನು ಬಂದುದನ್ನು ಗಮನಿಸದೆ ಹೆಂಡತಿ ಕದ ತೆಗೆಯುವುದಿಲ್ಲ. ಗಂಡನು ’ಹೆಂಡತಿಲ್ಲೇನು ಮನೆಯೊಳಗ’ ಅಂದಾಗ ಅಳಿಯನ ಅಸಮಾಧಾನವನ್ನು ಅರಿತ ತಾಯಿ (ಅತ್ತೆ) ’ಮಡದಿ ಸಣ್ಣವಳೇ ಕದತೆಗಿ’ ಎನ್ನುತ್ತಾಳೆ ಕದ ತೆಗೆದ ಹೆಂಡತಿಯೂ ಕೂಡ ’ನಾ ಸಣ್ಣೋಳು ’ಸ್ವಾಮಿ ನಂಗೆ ತಿಳಿಲಿಲ್’ ಎಂದು ವಿನಂತಿಸಿಕೊಳ್ಳುತ್ತಾಳೆ. ಮಡದಿ ಸಣ್ಣವಳಿದ್ದರೂ ಮನೆ ಕಾರ್ಯ ನಿಮಿತ್ತ ತಡವಾಗಿ ಬಂದ ತನ್ನನ್ನು ಸ್ವಾಗತಿಸದಿರುವುದು ಮಹಾಪರಾಧವಾಗಿ ಕಂಡ ಗಂಡ ಸಿಟ್ಟಾಗಿ ಹೊಡೆಯಲು ಮುಂದಾಗುತ್ತಾನೆ.

ಗುದ್ದು ಹೊಡೆಯಬೇಡಿ ಸಿಟ್ಟು ಮಾಡಬೇಡಿ
ಕೊಟ್ಟೇನಿ ನಾನೊಂದ ಪರೆರೆಣ್ಣ
ಕೊಟ್ಟಿನ್ ನಾನೊಂದ ಪರರೆಣಣ ನ್ವಾಮ್ಯೋರೆ
ಹೊಡೆಯಲ್ಬೀಡಿಂದ ಗುದ್ದಾನಾ
ತಪ್ಪೀರು ಸಮಿಸಿ ಸಿಟ್ಟನೊಂದಾಗಬೇಡಿ
ಶಿವನೊಂದ ಒಂದ ಬೈಬೇಡಿ
(ಹೊನ್ನು ರಾಮಾ ಆಗೇರ)

ಕಾಲಬೇಧವಿಲ್ಲದೆ, ಪ್ರಾದೇಶಿಕ ಭಿನ್ನತೆ ಇಲ್ಲದೆ ಭಾರತೀಯ ಮಹಿಳೆಯೊಬ್ಬಳು ಅನುಭವಿಸಿದ ಮಾನಸಿಕ ಯಾತನೆ, ದಾರುಣ ವೇದನೆ, ಅಸಹಾಯಕತೆಯ ಚಿತ್ರಣ ಇಲ್ಲಿದೆ. ಹೆಂಡತಿ ಸದಾ ತನ್ನ ದಾಸಿಯಾಗಿಯೇ ಇರಬೇಕಾದ, ಇರಿಸಿಕೊಳ್ಳುವ ಪುರುಷ ಮನೋಭಾವದ ಹುನ್ನಾರ ಕಾಣುತ್ತದೆ.

ಇದೇ ರೀತಿ ಮಗಳನ್ನು ಮದುವೆ ಮಾಡಿ ಕಳುಹಿಸಿದ ತಾಯಿಗೆ ಬಹುಶಃ ಅಳಿಯ ದುಶ್ಚಟಕ್ಕೆ ಬಲಿಯಾಗಿದ್ದು ನೋವನ್ನು ತರಿಸಿರಬೇಕು.

ಗಂಡ ಗಂಡೋಳಿ ಸಂಗಡೆ ಕುಳ್ಳಲು ಬ್ಯಾಡ
ಮೋಸದ ಉರಿ ಬಗುಲಲಿ || ಇಟ್ಕಂಡಿ
ಮೋಸವ ಮಾಡ್ಯಾನೋ ಪರರೆಣ್ಣ
(ಸುಶೀಲಾ ಚಿನ್ನ ಆಗೇರ)

ಎಂದು ಮಗಳಿಗೆ ಜಾಗೃತಿಯಾಗಿರಲು ಸೂಚನೆ ನೀಡುವಮಾತೃ ಹೃದಯ ಇಲ್ಲಿದೆ

ಯಾವುದೇ ಸಂಸ್ಕೃತಿಯಲ್ಲೂ ತಾಯ್ತನಕ್ಕೆ ಹೆಚ್ಚಿನ ಪ್ರಾಶಸ್ತ್ಯ ಜಾನಪದ ಸಾಹಿತ್ಯದಲ್ಲಿ ಹೆಚ್ಚಿನ ಹಾಡುಗಳು ಬಹುಶಃ ತಾಯಿ ತನ್ನ ಕಂದನನ್ನು ಕಂಡ ಖುಷಿಯಲ್ಲಿ ಹಾಡಿದವುಗಳೇ ಆಗಿವೆ.

ಎಂತಹ ಬಡತನದಲ್ಲೂ ತಾಯ ಮಮತೆಗೆ ಕೊರತೆ ಇಲ್ಲ.

ಆಡೋ ಮಕ್ಕಳಿಗೇ
ಬೇಡಿ ಬೆಲ್ಲಾ ಕೊಡುವೇ
ನಮ್ಮ ತಮ್ಮಯ್ಯಗೆ ಬರೀಗಂಜೀ
ನಮ್ಮ ತಮ್ಮಯ್ಯಗೆ ಬರಿಗಂಜಿ ಉಪ್ಪಿನಕಾಯಿ
ಆಡೋದಿಲ್ಲಂತೇ ಮನಗೂತ

ಗಂಜಿ ಉಪ್ಪನಕಾಯಿಗಷ್ಟೇ ಸೀಮಿವದ ಬಡತನದ ಮಧ್ಯೆಯೂ ಬೇಡಿ ಬೆಲ್ಲ ತಿನಿಸುವ ಆಸೆ ಹೊತ್ತ ತಾಯಿಗೆ ಕಂದನಲ್ಲಿ ಅದೆಂತಹ ಪರೀತಿ.

ಹೆತ್ತ ತಾಯಿಗೆ ತೊಟ್ಟಿಲಲ್ಲಿ ನಗುವ ಕಂದನ ಕಂಡಾಗ ಕಣ್ಣಿಗೆ ಹಬ್ಬ. ಜೊತೆಗೆ ದೃಷ್ಟೀಯಾದಿತೆಂಬ ಆತಂಕ.

ತೊಟ್ಲದಲ್ಲೊಂದಾ ತೊಳಿದಾ ಮುತ್ತಾಕಂಡೇ
ಹೊಟ್ಟೆ ಮೇನ್ಮಾಡೇ ಮನಗೇನೇ || ಕಂದಯ್ಯನೇ
ಮುತ್ತಿನಾದಿಟ್ಟೆ ತೆಗೆದಿಡೇ ||

ಇಂತಹ ಮುದ್ದಾದ ಕಂದ ತಾಯಿಗಷ್ಟೇ ಅಲ್ಲ, ಇಡೀ ಬಳಗಕ್ಕೇ ಮುದ್ದು,

ಅಜ್ಜಾ ಅಜ್ಜಿಗೆ ಮುದ್ದೇ ಗೆಜ್ಜೇ ಕಾಲಿಗೆ ಮುದ್ದೇ
ಹಣ್ಣುಳ್ಳ ಮರಕೇ ಗಿಳಿಮುದ್ದೆ || ಬಾಲಯ್ಯ
ನೀ ಮುದ್ದೋ ನಮ್ಮ ಬಳಗಾಕೇ ||

ಮನೆತುಂಬಾ ಓಡಾಡುತ್ತ ತುಂಟಾಟ ಮಾಡುವ ಕಂದಗೆ ಯಾರು ಬಯ್ಯಬಾರದು. ಬಯ್ದವರಿಗೇ ಶಿಕ್ಷೆ ಕೊಡುವ ತಾಯಿಯ ಅತಿ ಮುದ್ದು ಇಲ್ಲಿ ಹಾಡಾಗಿದೆ.

ಬಾಲ ನನ ಕಂದಯ್ಗೆ
ಯಾರ‍್ಯಾರೂ ಹೊಡಿಬೇಡಿ
ಹೊಡೆದೋರಾ ಕೈ ಮುರಕೊಟ್ಟೆ ||

ಹಠ ಮಾಡುವ ಮಗುವನ್ನು ಬಣ್ಣದ ಬುಗುರಿ ನೀಡಿ ನಾದದೊಂದಿಗೆ ಮಲಗಿಸು ತಾಯಿ ಪರಿ ಇಲ್ಲಿದೆ.

ತಮ್ನ ತೂಗೂ ತಂಗೇ
ಬಣ್ಣದ ಕೋಲಿಡಕೊಳ್ಳೇ
ಬಣ್ಣದ ಬೂಗ್ರಿ ತಟ್ಕೊಳ್ಳೇ ||

ಸತಾಯಿಸುವಾಗೆ ತಟ್ಟಿ ಮಲಗಿಸುವ ತಾಯಿಗೆ ಬಹಳ ಹೊತ್ತು ನಿದ್ರೆ ತಿಳಿದೇಳದಿದ್ದರೂ ಭಯವೆ.

ನೆದ್ರಾ ಬಂದ ಕಣ್ಣಿಗೆ ಮದ್ಯಾರು ಮಾಡೇರೇ
ಗದ್ದಿಯಲಿದ್ದಾಗರ್ಗಾನೇ ಸೊಪ್ಪಾ ತಂದೇ
ಮದ್ದಾ ಮಾಡಿದ್ಳೇ ಅವರವ್ವಿ||

ಎದ್ದಾಗ ಮಕ್ಕಳು ಮಾಡುವ ಎಲ್ಲಾ ಕೆಲಸವೂ ತಾಯಿಗೆ ಚೆಂದವೇ ಬೇಸರಿಕೆ ಸ್ವಲ್ಪವೂ ಇಲ್ಲ.

ಸಾರಸ್ದಾ ಮನೆಯಲ್ಲಿ ನೀರಾ ಚೆಲ್ದೋರ‍್ಯಾರೇ
ಪಾರಿಗೋಳಾಡೇ ಗಿಳಿಯಾಡೇ || ನಮ್ಮನಿಯಾ
ಹಸಬಾಲರಾಡೇ ಧೂಳೆದ್ದು ||

ಮನೆತುಂಬ ಓಡಾಡುವ ಮಕ್ಕಳಿದ್ರೆ ತಾಯಿಗೆ ಬಡತನದ ಬೇಗೆ ಇಲ್ಲವೇ ಇಲ್ಲ.

ಬಡತನ ಬಂತೆಂದೇ ಬಡಿಲಿಲ್ಲ ಮಕ್ಕಳಾ
ಹುಡಿಯೂಡಿ ಬಂದೇ ತೊಡೆಯಲ್ಲೀ || ಕೂತರೇ
ಬಂದ ಬಡತನ ಬಯಲಾಗೇ ||

ಹೀಗೆ ಮಕ್ಕಳ ಸಂಪತ್ತಿನಲ್ಲಿ ತನ್ನೆಲ್ಲ ಕಷ್ಟ ಬಡತನದ ಕಹಿ ಮರೆಯುವ ಆಗೇರ ಮಹಿಳೆಯರ ಮಾತೃ ವಾತ್ಸಲ್ಯ ಎಲ್ಲ ಹಾಡುಗಳಲ್ಲಿ ಅಭಿವ್ಯಕ್ತವಾಗುತ್ತದೆ.

ಭತ್ತ ಕುಟ್ಟಿ ಅಕ್ಕಿ ಮಾಡುವುದು ಅವಳ ಇನ್ನೊಂದು ಗೈಯ್ಮೆ. ಇಬ್ಬಿಬ್ಬರು ಸೇರಿ ಮಾಡುವ ಈ ಕೆಲಸದಲ್ಲಿ ಆಯಾಸವೂ ಬೇಸರವೂ ಆಗದಂತೆ ಹಾಡು ಹೇಳುತ್ತ ಭತ್ತ ಮುರಿಯುತ್ತಾರೆ.

ಭತ್ತ ಮೆರಿಯೋ ಹೆಣ್ಣಿ ಅತ್ತಿತ್ತ ನೋಡಬ್ಯಾಡ
ಭತ್ತೇರಿ ನಿನ್ನ ಗೆಣ್ತಿಯೋರು ಸೈ ಸೈ ಸೈ ಸೈ

ಎಂದು ಕೆಲಸ ಮುಗಿಸುವ ಗಡಿಬಿಡಿಯಲ್ಲಿರುವಾಗಲೇ ಅಕ್ಕಿಯಾನಗೆ ಬರುವ ಗಿಳಿಯೊಂದಿಗೆ ಮಾತುಕತೆ ಪ್ರಾರಂಭವಾಗುತ್ತದೆ.

ಭತ್ತ ಮೆರುವಂಗಖೆ
ಯಾಕ್ ಬಂದ್ಯೊ ಗಿಳಿರಾಮ
ಕನ್ನಡ ಹೇಳೋ ಕಥೆ ಹೇಳೊ ಗಿಳಿರಾಮ
ಬಂದ ಕಾರಣವಾ ತಿಳಿಹೇಳೋ ||
(ಹೊನ್ನು ಆಗೇರ)

ದುಡಿಮೆಯೇ ದೇವರಂದುಕೊಂಡ ಅವರು ಭತ್ತ ಮುರಿಯುವಾಗಲೂ ದೇವರನ್ನು ಧ್ಯಾನಿಸುತ್ತಾರೆ.

ಭತ್ತ ಮೆರುವಂಗಳದಲ್ಲೀ ಯಕ್ಕಿ ಹೂಂಗನಾ ಪರಿಮಳ
ಎತ್ತಾಗಿಂದ ಬಂದಾ ಸಿರಿಹರೇ || ಕುಟ್ನಾಸೋಮೇ
ಎಕ್ಕಿ ಹೊಂಗಿಕ್ಕೇ ಸಣಬಂದೇ ||

ಎಡಬಿಡದ ದುಡಿಮೆಯ ನಡುವೆಯೂ ಹಣ ಉಳಿಯಲಾರದು. ಮನಸ್ಸಿನ ಆಸೆ ಪೂರೈಸಲಾಗದು.

ಅಕ್ಕ ತಂಗೇರ ಬಣ್ಣ ಒಂದಂಗಡಿಲೀ ತಣ್ಣ
ನಂಗೊಂದ ಬಣ್ಣವಾ ತಂದಕೊಡೋ
ತಂದ ಕೊಡುಕೇಲೋ ನೀನೊಬ್ಬಳಲ್ಲಾವೆ
ಮತ್ತೊಬ್ಬಳೀತೇ ಹೆರಿಯಕ್ಕ ||

ಸಹಜವಾಗಿ ಹೊಸ ಸೀರೆಗೆ ಆಸೆ ಪಡುವ ತಂಗಿಯೊಬ್ಬಳ ಆಸೆಯನ್ನು ತೀರಿಸಲಾರದ ಅಣ್ಣನ ಬಡತನದ ಅಸಹಾಯಕತೆ ಹಾಗೂ ಅಕ್ಕ ತಂಗಿಯರಲ್ಲಿ ಪಂಕ್ತಿ ಭೇದ ಮಾಡಲಾರದ ಅಣ್ಣನ ಸಹಜ ಪ್ರೀತಿಯ ಅಭಿವ್ಯಕ್ತಿಯಿದು.

ಇಂತಹ ಅವರ ಹಸೀ ಬಡತನದ ನಡುವೆಯೂ ದುಡಿದದ್ದನ್ನು ನಾಲ್ಕು ಜನರಿಗೆ ಹಂಚಿ ತಿನ್ನಬೇಕೆನ್ನುವ ದಾನಶೀಲ ಗುಣ ಅವರದಾಗಿದೆ.

ಹೊತ್ತಿಗ್ ಮಾಡಿದ ದಾನಾ ಸುತ್ತಮುತ್ತವರಿಗೆ
ಮುತ್ತು ಮಜ್ಜನದಾ ಬಿಸಿಲೀಗೆ || ಮಾಡಿದ ದಾನಾ
ಅಜ್ಜಜ್ಜಜಿಗವರ ಬಳಗಾಕೆ ||

ವೈರಿಗಳ ಮಧ್ಯೆ ಎ‌ಚ್ಚರಿಕೆಯಿಂದಿರಬೇಕೆಂಬ ಸಲಹೆ ಕಿರಿಯರಿಗೆ ಹಿರಿಯರಿಂದ ಸಿಕ್ಕಿದೆ.

ಹಗೆಯೋರ ಮುಂದೆ ಹಸನಗೆಬ್ಯಾಡಾವೊ
ಬಿಸ್ಲೊತ್ತಿಗೆ ದಾರೀ ನೆಡಿಬಾರಾ || ಬಾಲಯ್ಯ
ಹಗ್ಯೋರಾ ಕೊಟ್ಟ ಹಾಲಾ ಕುಡಿಬಾರಾ ||

ನೈತಿಕ ನೆಲಿಗಟ್ಟಿದ್ದವ ಮಾತ್ರ ಸಮಾಜದಲ್ಲಿ ಗೌರವಕ್ಕೆ ಅರ್ಹ. ನೀತಿಗೆಟ್ಟುವ ಎಲ್ಲರ ದೂಷಣೆಗೆ ಪಾತ್ರನಾಗುತ್ತಾನೆ.

ಸೂಳಿ ಮನೆಗೋಗಾವ್ನ ಸುಡವ್ನ ಜಲ್ಮಾವಾ
ನಾಳಿಕ್ ನೊಡವ್ನ ಬವಣೀಯ || ಗೋಕಾನ್ದ
ಸೂಳೇರಾ ಬೀದೀಲಿ ಉನ್ವಾಗೇ ||

ಹಬ್ಬವೂ ಮಹಿಳೆಯರ ಹಾಡಿನೊಂದಿಗೇ ಆಚರಿಸಲ್ಪಡುತ್ತಿತ್ತು. ಸುಮನಾ ಆಗೇರರು ಹೇಳುವ ಗಂಗಾಷ್ಟಮಿಯಂದು ಗಂಗೆಯ ಮದುವೆ ಕುರಿತು ಹಾಡುವ ಹಾಡು ಕುತೂಹಲಕರವಾಗಿದೆ. ಒಬ್ಬ ದೇವತಾ ಸ್ತ್ರೀಯೂ ಕೂಡ ಜನಪದರ ದೃಷ್ಟಿಯಲ್ಲಿ ಸಹಜ ಹೆಣ್ಣಾಗುತ್ತಾಳೆ. ನೋಡಿ ಅವರ ಮರವೆಯಿಂದ ಪೂರ್ಣ ಸಾಹಿತ್ಯ ದೊರೆತಿಲ್ಲ.