ವಿವಾಹ ವಿಚ್ಛೇದನ: ಎಂತಹ ಸಂದರ್ಭದಲ್ಲೂ ಗಂಡನನ್ನು ಸಂಭಾಳಿಸಿ, ಮನೆಯನ್ನು ಸರಿದೂಗಿಸಿಕೊಂಡು ಹೋಗುವುದು ಹೆಣ್ಣಿನ ಕರ್ತವ್ಯ. ಗಂಡ-ಹೆಂಡಿರ ಮೈಮನಸ್ಸನ್ನು ದೂರಮಾಡಿ ಒಂದಾಗುವಂತೆ ಮಾಡುವುದೇ ಎಲ್ಲರ ಉದ್ದೇಶವಾಗಿದ್ದು, ವಿವಾಹ ವಿಚ್ಛೇದನಕ್ಕೆ ಅವಕಾಶವಿಲ್ಲ. ಅಂತಹ ಅಪರೂಪದ ಅನಿವಾರ್ಯ ಪರಿಸ್ಥಿತಿ ಬಂದರೆ ಐಗಳ ಗುರು ಕೇಂದ್ರದಲ್ಲಿ ದೂರು ಸಲ್ಲಿಸಿ ತೀರ್ಮಾನ ಪಡೆಯಬಹುದಾಗಿತ್ತು.

ವಿಧವಾ ವಿವಾಹ: ವಿಧವಾ ವಿವಾಹಕ್ಕೂ ಆಗೇರರಲ್ಲಿ ಹೆಚ್ಚಿನ ಪ್ರೋತ್ಸಾಹ ಅನುಮತಿ ಇರಲಿಲ್ಲ. ಅವರಿಗೆ ಸಮಾಜ ಬಹಿಷ್ಕರಿಸಿ ’ಕೈದು’ ಕೊಡುತ್ತಿತ್ತು.

ಆದರೆ ಹೆಂಡತಿಯಿಲ್ಲದ ಗಂಡು ಹಾಗೂ ಗಂಡನಿಲ್ಲದ ಹೆಂಡತಿಬಾಳೆದಿಂಡನ್ನು ಕಡಿದು ಪರಸ್ಪರ ಮರುಮದುವೆಯಾಗಿ ಬದುಕಲು ಅವಕಾಶವಿತ್ತು. ಒಬ್ಬರಿಗೊಬ್ಬರು ಅನಾಥರು ಆಧಾರವಾಗುವ ಈ ಕಾರ್ಯಕ್ಕೆ ಸಮಾಜದ ಬಹಿಷ್ಕಾರವಿರದೆ ಹೊಕ್ಕುಬಳಕೆ ಇರುತ್ತಿತ್ತೆಂದು ಸಂದರ್ಶಿಸಿದ ಹಿರಿಯವ್ಯಕ್ತಿಯೊಬ್ಬರು ತಿಳಿಸಿದರು.

ಬಯಕೆ ಬಿಡಿಸುವುದು: ಸುಧಾರಿಸಿದ ನಾವು ಈಗ ಹೇಳುವ ’ಸೀಮಂತ’ ಕಾರ್ಯವೇ ಈ ಬಯಕೆ ಬಿಡಿಸುವುದು. ಹೆಣ್ಣು ಗರ್ಭಿಣಿಯಾದಾಗ ಅವಳಬಯಕೆ ಪೂರೈಸದಿದ್ದರೆನ್ಯೂನತೆಯಿರುವ ಮಕ್ಕಳು ಹುಟ್ಟುತ್ತಾರೆಂಬ ನಂಬಿಕೆಯಿದೆ. ಅತೃಪ್ತಮನಸ್ಸಿನಿಂದ ಆರೋಗ್ಯಕರ ಮಗು ಜನಿಸಲಾರದೆಂದು ಅವಳ ಬಯಕೆಯನ್ನು ತೃಪ್ತಿಗೊಳಿಸುವುದೇ ಇದರ ಉದ್ದೇಶ.

ಬಸುರಿ ಹೆಣ್ಣನ್ನು ತೌರಿಗೆ ಕಳುಹಿಸುವ ಮೊದಲು (೫ನೇ ಅಥವಾ ೭ನೇ ತಿಂಗಳು ತುಂಬಿದಾಗ) ಗಂಡನ ಮನೆಯವರು ಇದನ್ನು ನೆರವೇರಿಸುತ್ತಾರೆ. ತೌರು ಮನೆಯವರು ’ಬೆಲ್ಲದ ರೊಟ್ಟಿ’ ಹಾಗೂ ವಸ್ತ್ರಾಭರಣಗಳನ್ನು ತರುತ್ತಾರೆ.

ಈ ಬೆಲ್ಲದ ರೊಟ್ಟಿಯನ್ನು ’ಬಂಗ್ಲೆ ರೊಟ್ಟಿ’ ಎಂದು ಹೇಳುತ್ತಾರೆ.ಅಕ್ಕಿ ಹಿಟ್ಟು ಹಾಗೂ ಬೆಲ್ಲಕಾಯಿಯ ಮಿಶ್ರಣವನ್ನು ಮಡಕೆಯಲ್ಲಿಟ್ಟು ಮೇಲೂ ಕೆಳಗೂ ಕೆಂಡವನ್ನಿಟ್ಟು ಶಾಖದಲ್ಲಿಯೇ ಬೇಯಿಸುವ ಇದು ಬಯಕೆ ಬಡಿಸಲೆಂದೇ ಮಾಡುವ ವಿಶೇಷ ಖಾದ್ಯವಾಗಿದೆ.

ಬಸುರಿಗೆ ಸ್ನಾನ ಮಾಡಿಸಿ, ಹಸಿರು ಸೀರೆ,ಹಸಿರು ಬಳಿ ತೊಡಿಸಿ, ಹೂವು ಮುಡಿಸುತ್ತಾರೆ.ತುಳಸಿಯ ಮುಂದೆ ಕುಳ್ಳಿರಿಸಿ ಮಡಿಲು ತುಂಬಿ ವಿವಿಧ ಖಾದ್ಯಗಳನ್ನು ನೀಡಿ ಉಣಬಡಿಸುತ್ತಾರೆ.

ಇನ್ನೊಂದು ಜೀವ ಹೊತ್ತು ಹೆಚ್ಚಿನ ಪೌಷ್ಠಿಕಾಂಶದ ಅಗತ್ಯವಿರುವ ಹೆಣ್ಣಿನ ಆರೋಗ್ಯ ಸುಧಾರಣೆಗೆ ಇದು ಸಹಜ ಪೂರಕವಾದ ಒಂದು ಸಂಪ್ರದಾಯವಾಗಿದೆ.

ಸೋಳಂಗಿ: ಮಗು ಹೆಣ್ಣಿರಲಿ, ಗಂಡಿರಲಿ ಮಗುವಿಗೆ ಆರೇಳು ವರ್ಷ ತುಂಬಿದಾಗಕಿವಿ ಚುಚ್ಚುವ ಶಾಸ್ತ್ರಕ್ಕೆ ’ಸೋಳಂಗಿ’ ಎನ್ನುತ್ತಾರೆ. ಹೆಣ್ಣಾದರೆ ಕಿವಿಗೆ ’ಲೋಲಾಕು’ ಗಂಡಾದರೆ ’ಕಿವಿಮುರು’ವನ್ನು ತೊಡಿಸುತ್ತಾರೆ. ಕಿವಿ ಚುಚ್ಚುವ ಈ ಕ್ರಿಯೆ ಮಾವನ (ತಾಯಿಯ ತಮ್ಮ) ತೊಡೆಯ ಮೇಲೆ ನಡೆಯುತ್ತದೆ.

ಅಂತ್ಯಸಂಸ್ಕಾರ: ಆಗೇರರಲ್ಲಿ ಹೆಣವನ್ನು ಸುಡುತ್ತಾರೆ. ಆದರೆತೀರ ಚಿಕ್ಕಮಕ್ಕಳು ಬಾಣಂತಿಯರು, ಕನ್ನೆ ಮಕ್ಕಳು (ಮದುವೆ ಆಗದ ಹೆಣ್ಣು ಮಕ್ಕಳು) ಸತ್ತಾಗ ಹುಗಿಯುವ ರೂಢಿ ಇದೆ. ಈ ಸಂಸ್ಕಾರದಲ್ಲಿ ಸ್ತ್ರೀ ಯ ವಿಶೇಷ ಭಾಗಿತ್ವವೇನೂ ಕಾಣುವುದಿಲ್ಲ.

ಸತ್ತವನ ಪತ್ನಿ ಬದುಕಿದ್ದರೆ ಅವಳಿಗೆ ವೈಧವ್ಯ ಪ್ರಾಪ್ತವಾಗುತ್ತದೆ. ಹೊಸ ಸೀರೆ ಉಡಿಸಿ,ಹೂಮುಡಿಸಿ, ಅರಶಿಣ ಕುಂಕುಮ ಹಚ್ಚಿ ಮುತ್ತೈದೆತನ ಸಕಲ ಸೌಭಾಗ್ಯ ಲಕ್ಷಣಗಳೊಂದಿಗೆ ಅಲಂಕರಿಸಿ ಹೆಣಕ್ಕೆ ಪ್ರದಕ್ಷಿಣೆ ಹಾಕಲಾಗುತ್ತದೆ. ಮುಂದೆ ತನ್ನ ಜೀವನ ಪರ್ಯಂತ ಈ ಅಲಂಕಾರ ಕಳೆದುಕೊಳ್ಳುವ ಸ್ತ್ರೀ ತಾತ್ಕಾಲಿಕ ತೃಪ್ತಿಯಾದರೂ ಸಿಗಲೆಂಬ ಉದ್ದೇಶವಿರಬಹುದು.ನಂತರ ಅವಳ ಬಳೆಗಳನ್ನು ಒಡೆದು ಹೆಣದ ಮೇಲೆ ಎಸೆದು ಕುಂಕುಮವನ್ನು ಅಳಿಸಿ ಹಾಕುತ್ತಾರೆ. ಗಂಡ ಕಟ್ಟಿದಗಂಟಕಿಮಣಿಯನ್ನು ಬಿಚ್ಚಿಡಲಾಗುತ್ತದೆ.

ಇಲ್ಲಿಯೂ ಒಂದು ಗಮನಾರ್ಹ ಅಂಶವೆಂದರೆಉಳಿದ ಕೆಲಸ ಮೇಲ್ಜಾತಿಗಳಲ್ಲಿರುವಂತೆ ಹೆಣ್ಣಿಗೆ ಕೇಶ ಮುಂಡನ ಇಲ್ಲದಿರುವುದು ಎಲ್ಲ ಸ್ತ್ರೀಯರೂ ಸಮಾಧಾನದ ಉಸಿರು ಬಿಡುವಂತಾಗುತ್ತದೆ.

ಹನ್ನೊಂದು ದಿನ ಸೂತಕ, ಬೊಜ್ಜ(ತಿಥಿ) “ಮೀಸಲು” ಇಡುವುದು (ಬಾಳೆ ಎಲೆಯಲ್ಲಿ ಅಡಿಗೆ ಇಟ್ಟು ಕಾಗೆ ಕರೆಯುವುದು) ಎಲ್ಲವೂ ಪುರೋಹಿತರ ಆಗಮನವಿಲ್ಲದೆ ನಡೆಯುತದೆ.

ಕಂಬಳ: ಇದೊಂದು ರೀತಿಯ ಹೆಂಗಸರ ಬೆಳದಿಂಗಳೂಟವಿದ್ದಂತೆ. ಹಗಲಲ್ಲಿ ದುಡಿಯುವ ಹೆಂಗಸರು ಸಾಯಂಕಾಲ ಯಾರದಾರೂ ಒಬ್ಬರ ಮನೆಯಲ್ಲಿ ಸೇರಿ ಅಡಿಗೆ ಮಾಡಿ ರಾತ್ರಿ ಎಲ್ಲರೂ ಒಟ್ಟಾಗಿಉಣ್ಣುವುದೇ ಕಂಬಳ. ಪಾಯಸ ಅಥವಾ ಮೀನುಮಾಂಸದ ಅಡುಗೆ ಮಾಡಿ ಹೆಂಗಸರೆಲ್ಲ ಹರಟುತ್ತ ಒಂದು ಸಂಜೆ ಮಜವಾಗಿ ಕಳೆಯುತ್ತಾರೆ. ಮಳೆಗಾಲವನ್ನು ಹೊರತುಪಡಿಸಿ ಅನುಕೂಲವಾದ ದಿನವನ್ನು ಆಯ್ದುಕೊಳ್ಳುತ್ತಾರೆ.

ಗಂಡಸರು ಭಾಗವಹಿಸುವ ಕಂಬಳವೇ ಬೇರೆ ಇದ್ದು, ಸ್ತ್ರೀಯರ ಕಂಬಳದಲ್ಲಿ ಅವರಿಗೆ ಪ್ರವೇಶವಿಲ್ಲ. ದಿನನಿತ್ಯದ ಏಕತಾನತೆಯಿಂದ ಹೊರಬಂದು,ಒಟ್ಟಾಗಿ ದುಡಿದು, ಪ್ರೀತಿಯಿಂದ ಹಂಚಿ ತಿನ್ನುತ್ತ ಸ್ವಾತಂತ್ರ‍್ಯದ ಪರಮ ಸುಖವನ್ನು ಅನುಭವಿಸುತ್‌ಆರೆ.

ನಂಬಿಕೆಗಳು: ಉತ್ತರ ಕನ್ನಡದ ಎಲ್ಲ ಜಾತಿ ಜನಾಂಗಗಳಲ್ಲಿಯೂ ಕಂಡು ಬರುವ ನಂಬಿಕೆಗಳು (ಒಳ್ಳೆಯ  ಹಾಗೂ ಮೂಢ ನಂಬಿಕೆ) ಆಗೇರರಲ್ಲೂ ಇವೆ. ಸಾಮಾನ್ಯವಾಗಿ ಸ್ತ್ರೀಯರಿಗೆ ಅನ್ವಯವಾಗುವ ಹಾಗೂ ಕೆಲ ವಿಶೇಷ ನಂಬಿಕೆಗಳು:

೧) ಹೆಂಗಸರಿಗೆ ಶರೀರದ ಎಡಭಾಗಗಳಲ್ಲಿ ಮಚ್ಚೆ ಇರಬೇಕು.

೨) ಹೆಣ್ಣು ಮಕ್ಕಳ ಎಡಗೈ ನೋಡಿ ಶಾಸ್ತ್ರ ಹೇಳಬೇಕು.

೩) ತೊಟ್ಟಿಲು, ದೀಪ, ಒಲೆ, ಬೀಸುಕಲ್ಲುಕಾಲಿಂದ ಒದೆಯಬಾರದು.

೪) ಹೆಣ್ಣು ಮುಟ್ಟಾದಾಗ ಕುಂಕುಮ,ಹೂ ಮುಡಿಯಬಾರದು.

೫) ಒಡೆದ ಕನ್ನಡಿಯಲ್ಲಿ ಮುಖ ನೋಡಬಾರದು.

೬) ಒಂದೇ ಮಡಕೆ ಮನೆಗೆ ತರಬಾರದು.

೭) ಹೆಣ್ಣು ಮಗು ಅಮವಾಸ್ಯೆಯ ದಿನ ಹುಟ್ಟುಬಾರದು.

೮) ಗ್ರಹಣದ ದಿನ ಹುಟ್ಟು ಸಾವು ಇಲ್ಲ.

೯) ಮೂಲಾನಕ್ಷತ್ರದಲ್ಲಿ ಹುಟ್ಟಿದರೆ ತಂದೆ ತಾಯಿಗೆ ಕೇಡು.

೧೦) ಬಸುರಿ ಹೆಂಗಸು ಪ್ರಾಣ ಹತ್ಯೆ ಮಾಡಬಾರದು.

೧೧) ಮುಟ್ಟು, ಹುಟ್ಟು, ಸಾವು ಮೈಲಿಗೆ.

೧೨) ಅಳಿಯನ ಎಂಜಲನ್ನು ಅತ್ತೆ ತಿನ್ನಬಾರದು.

೧೩) ಮನೆಯಿಂದ ಯಾರಾದರೂ ದೂ ಹೋದರೆ ಮನೆಯಲ್ಲಿದ್ದವರು(ವಿಶೇಷವಾಗಿ ಸ್ತ್ರೀಯರು) ತಲೆ ಸ್ನಾನ ಮಾಡಬಾರದು

೧೪) ಮೈಮೇಲೆ ಬಟ್ಟೆ ಹೊಲಿಯಬಾರದು.

೧೫) ಆಲ, ಅರಳಿ, ಬನ್ನಿ ಮರಗಳಲ್ಲಿ ದೇವರು ವಾಸಿಸುತ್ತಾನೆ.

ಶಕುನಗಳು : ಶಕುನ ಆಗೇರರ ಬಾಐಲ್ಲಿ ’ಸಕ್ಣ’ಆಗಿದ್ದು ಇದು ಅಶುಭ ಸೂಚಕವಾಗಿರುತ್ತದೆ.

೧) ಹೆಣ್ಣು ಮಕ್ಕಳು ಮಂಡೆ ಬಿಟ್ಟು ಬಾಗಿಲಲ್ಲಿ ನಿಂತರೆ ಅಶುಭ.

೨) ವಿಧವೆ ಎದುರಾದರೆ ಅಶುಭ, ಗರತಿ ಎದುರಾದರೆ ಶುಭ.

೩) ಬಲಗಣ್ಣು ಹಾರಿದರೆ ಹೆಂಗಸರಿಗೆ ಕೇಡು.

೪) ಅಡಿಗೆ ಪಾತ್ರೆ ಕೈ ತಪ್ಪಿ ಬಿದ್ದರೆ ಕೇಡು.

೫) ತೊಟ್ಟಿಲು ಹರಿದು ಬಿದ್ದರೆ ಕೇಡು.

೬) ಕಾಗೆಯ ನಿರಂತರ ಕೂಗು ಅಪಶಕುನ.

೭) ಆಕಳು ಇದಿರಾದರೆ ಶುಭ.

ಮಂತ್ರಮಾಟ: ಈ ಮಾಟ ಮಂತ್ರಗಳಲ್ಲಿ ಆಗೇರರಿಗೆ ವಿಶೇಷ ಆಸಕ್ತಿ ನಂಬಿಕೆ. ಅನಾರೋಗ್ಯವಾದರೆ ಮೊದಲು ಓಡುವುದು ಮಾಟಗಾರರಲ್ಲಿಗೆ. ’ತಾಯಿತ’ ತಂದು ಕೊರಳಿಗೋ ಸೊಂಟಕ್ಕೋ ಕಟ್ಟಿದರೆ ಅವರಿಗೆ ಸಮಾಧಾನ ಮತ್ತೆ ಎಷ್ಟೋ ಅನಾಹುತಗಳಿಗೆ ’ಮೋಡಿ ಮಾಡಿಸುವುದೇ’ ಕಾರಣ ಎಂದು ತಿಳಿಯುತ್ತಾರೆ. ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದ ಆಗೇರರು ಮಾತ್ರ ದೆವ್ವದಲ್ಲಿ ನಂಬಿಕೆ ಇಟ್ಟವರು. ಮಾಟ ಮಂತ್ರ ಮಾಡುವವನಿಗೆ, ದೆವ್ವ ಬಿಡಿಸುವವನಿಗೆ ’ಗಾಡಗ’ ಅಂತ ಹೇಳುತ್ತಾರೆ. ಹೀಗಾಗಿ ನೋಟ ನೋಡೋಡು ಮೈಮೇಲ ಭಾರ ಬರೋದು, ಕೋಳಿ ಕುರಿ ಬಲಿ ಕೊಡುವುದು ಎಲ್ಲ ನಡೆದು ಬಂದಿದೆ.

ಎಷ್ಟೋ ಹೆಣ್ಣು ಮಕ್ಕಳಿಗೆ ಮೈ ಮೇಲೆ ಭಾರ ಬಂದು ಸಂಸಾರ ತಾಪತ್ರಯ ದೂರವಾಗುತ್ತಾ ಇತ್ತು ಎಂಬ ಅಭಿಪ್ರಾಯ ಆಗೇರರ ಹೆಂಗಸರದು, ಇದಲ್ಲದೆ ’ಮಂಡ’ಗಳು ಇರುತ್ತಿದ್ದವು. ಹೆಣ್ಣು ಮಕ್ಕಳ ಮಂಡಗಳೂ ಇವೆ. ಬೊಗರಿ ವೈಲ್ ದೇವಿ ಮಂಡ, ಬೊಗಳ್ಸೆ ಮಂಡ, ಲಕ್ಷ್ಮೇಶ್ವರದ ಮಂಕಾಳಿ ಮಂಡಗಳಲ್ಲಿ ಇರುವ ಮಾಹಿತಿಯನ್ನು ಸಂಘದ ಸದಸ್ಯರಾದ ಪ್ರೇಮಾನಂದ ಬಿ. ಲಕ್ಷ್ಮೇಶ್ವರರು ಭೇಟಿಯಾದಾಗ ತಿಳಿಸಿದರು.

ವೈಜ್ಞಾನಿಕ ಪ್ರಗತಿಯ ಅರಿವಿಲ್ಲದೆ ಹುಟ್ಟಿಕೊಂಡ ಈ ನಂಬಿಕೆ ಶಕುನಗಳು ಈಗ ಕೆಲವೊಂದು ದೂರುವಾಗಿವೆಯಾದರೂ ಕೆಲವೊಂದು ಜನರ ಮನಸ್ಸಿನಲ್ಲಿ ಅಳಿಯದೇ ಉಳಿದುಕೊಂಡಿವೆ.

ಹಬ್ಬಗಳು: ತನ್ನ ಅವಿರ್ಭಾವಕ್ಕೆಕಾರಣವಾದ ಈಪ್ರಕೃತಿಯ ವೈಚಿತ್ರ‍್ಯಗಳಿಗೆ ಬೆರಗುಗೊಂಡ ಮಾನವ ಸದಾ ‌ಪ್ರಕೃತಿಯನ್ನು ಆರಾಧಿಸುತ್ತ ಬಂದಿದ್ದಾನೆ. ಸುಡುವ ಸೂರ್ಯ ಇಳಿ ಹೊತ್ತಿನಲ್ಲಿ ಬೆಂಕಿಯ ಉಂಡೆಯಾಗುವುದ, ಶಾಂವಾಗಿ ಹರಿವ ನದಿ ಉಕ್ಕುಕ್ಕಿ ಶಾಪಗ್ರಸ್ತವಾಗುವುದನ್ನೆಲ್ಲ ಕಂಡ ಮಾನವ ಭಯದಿಂದ ತತ್ತರಿಸಿದ್ದಾನೆ. ಪ್ರಕೃತಿಯ ಅದ್ಭುತ ಶಕ್ತಿಯನ್ನು ದೇವರೆಂದು ಕಲ್ಪಿಸಿ ಪ್ರಕೃತಿಯ ಎಲ್ಲ ವಸ್ತುವನ್ನು ಪೂಜಿಸುತ್ತ ತನ್ನ ಕೃತಜ್ಞತೆಯನ್ನು ಸಲ್ಲಿಸಿದ್ದಾನೆ. ಈ ದೇವರಪರಿಕಲ್ಪನೆಯಿಂದಲೇ ಅನೇಕ ಹಬ್ಬ ಹರಿದಿನ, ಜಾತ್ರೆ ಉತ್ಸವವಗಳು ಹುಟ್ಟಿಕೊಂಡಿವೆ. ಮಾನವ ಹಾಗೂ ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧಗಳು ಕಟ್ಟಿಕೊಡುವ ಕೆಲ ಹಬ್ಬಗಳ ಆಚರಣೆ ಅವರ ಸಾಂಸ್ಕೃತಿಕ ಬದುಕಿನ ಸದಭಿರುಚಿಯನ್ನು ತಿಳಿಸುತ್ತವೆ.

ತುಳಸಿ ಹಬ್ಬ: ತಮ್ಮ ಪಾತಿವ್ರತ್ಯ ರಕ್ಷಣೆ ಹಾಗೂ ಅರಿಶಿನ ಕುಂಕುಮ ಸೌಭಾಗ್ಯಕ್ಕಾಗಿ ಎನ್ನುವ ಆಗೇರರ ಹೆಂಗಸರು ತುಲಸಿ ಹಬ್ಬವನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ.

ಆರೋಗ್ಯವರ್ಧಕವಾದತುಳಸಿ ಗಿಡಕ್ಕೆ ಆಗೇರರಲ್ಲಿ ಮೊದಲ ಪ್ರಾಶಸ್ತ್ಯ. ಮನೆ ಅಂಗಳದಲ್ಲೂ ಒಂದೊಂದು ತುಳಸಿಕಟ್ಟೆ ಅದಕ್ಕೇ ಮೊದಲ ಪೂಜೆ.

ಕಾರ್ತಿಕ ಶುದ್ಧ ದ್ವಾದಶಿಯಂದು ನಡೆಯುವ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.ಕಬ್ಬು,ಮಾವು, ನೆಲ್ಲಿ,ಹುಣಸೆ ಮುಂತಾದ ಫಲ, ಅಡಿಕೆ,ಹಿಂಗಾರ, ಗೊಂಡೆ,ದಾಸವಾಳಮುಂತಾದ ಹೂಗಳಿಂದ ಕಟ್ಟೆಯನ್ನು ಶೃಂಗರಿಸುತ್ತಾರೆ. ಸುತ್ತಲೂ ಹಣತೆ ದೀಪ ಹಚ್ಚುತ್ತಾರೆ. ಪಂಚವಾದ್ಯ (ಆಗೇರರ) ದೊಂದಿಗೆ ಪೂಜೆ ನೆರವೇರುತ್ತದೆ. ವಿಭಕ್ತ ಕುಟುಂಬದವರಾದರೆ ಎಲ್ಲರೂ ಮೂಲ ಮನೆಯಲ್ಲಿಯೇ ಸೇರಿ ಹಬ್ಬ ಆಚರಿಸುವುದು ಸಂಬಂಧಗಳ ಬೆಸುಗೆಗೆ ಪೂರಕವಾಗಿದೆ.

ಈ ಹಬ್ಬಕ್ಕೆ ಒಂದು ಪೌರಣಿಕ ಹಿನ್ನಲೆ ಇದೆ. ಇದು ಸುತ್ತಲಿನ ಎಲ್ಲ ಜಾತಿಗಳಲ್ಲೂ ಇದ್ದು ಆಗೇರರು ಇದನ್ನೇ ನಂಬಿದ್ದಾರೆ.

ಜಲಂಧರನ ಧರ್ಮಪತ್ನಿ ವೃಂದೆ ಮಹಾಪತಿವ್ರತೆ. ಜಲಂಧರ ಶಿವಭಕ್ತನಾಗಿದ್ದರೂ ಪಾರ್ವತಿಯನ್ನುಮೋಹಿಸಿದ, ಕುಪಿತಳಾದ ಪಾರ್ವತಿ ಅವನನ್ನು ವಧಿಸುವಂತೆ ವಿಷ್ಣುವಿಗೆ ಮೊರೆ ಇಟ್ಟಳು. ವೃಂದೆಯ ಪಾತಿವ್ಯತ್ಯ ಪುಣ್ಯದಿಂದ ಶಕ್ತಿ ಪಡೆದ ಆತನ ವಧೆಗೆ ಈಕೆಯ ಶೀಲ ಹರಣ ಅನಿವಾರ್ಯವಾಗುತ್ತದೆ. ವಿಷ್ಣು ಜಲಂಧರನ ಕಪಟ ರೂಪದಲ್ಲಿ ಬಂದುವೃಂದೆಯನ್ನು ಕೂಡುತ್ತಾನೆ. ಜಲಂಧರನ ವಧೆಯಾಗುತ್ತದೆ. ತನ್ನ ಪಾತಿವ್ರತ್ಯ ಭಂಗವನ್ನು ಸಹಿಸಲಾರದೆ ಅವಳುಅಗ್ನಿ ಕುಂಡದಲ್ಲಿ ಆತ್ಮಾಹುತಿ ಬಿದ್ದು ಆತ್ಮಾಹುತಿಗೈಯ್ಯುತ್ತಾಳೆ. ಆಗ ವಿಷ್ಣು ’ನೀನು ಎಂದಿಗೂ ಪತಿವ್ರತೆಯೆ. ತುಳಸಿಯಾಗಿ ಹುಟ್ಟಿ ಶಾಶ್ವತವಾಗಿ ಪೂಜೆಗೊಳ್ಳುತ್ತಿರು’ ಎಂದು ವರವನ್ನು ನೀಡಿದ. ಅದಕ್ಕಾಗಿ ಅವಳಿಗೆ ಶಾಶ್ವತ ಪೂಜೆ -ಪುರಸ್ಕಾರ!

ಇದರ ಪೌರಾಣಿಕ ಹಿನ್ನಲೆಯನ್ನು ನೋಡಿದಾಗ ಮೇಲ್ಜಾತಿಯ ಗಂಡುಗಳು ಕೆಳಜಾತಿಯ ಹೆಣ್ಣುಗಳನ್ನು ಸದಾ ಭೋಗಿಸುವು ಹಕ್ಕು ಸ್ಥಾಪನೆಯ ಹುನ್ನಾರವೇಎಂಬುದು ಸ್ಪಷ್ಟ. ಅಲ್ಲದೇ ಮೇಲ್ಜಾತಿ ಹಾಗೂ ಕೆಳಜಾತಿಗಳ ನಡುವೆ ನಡೆದ ವರ್ಣಸಂಕರದ ಕುರುಹೂ ಆಗಿರಲು ಸಾಧ್ಯ.

ಏಕೆಂದರೆ ಕೆಳಜಾತಿಯ ಪುರುಷನೊಬ್ಬ ಮೇಲ್ಜಾತಿಯ ಹೆಣ್ಣನ್ನು ಉಪಭೋಗಿಸಿದರೆ ಮಹಾಪರಾಧವಾಗಿ, ಹೆಣ್ಣೇ ಗಂಡನನ್ನು ವಧಿಸಿ ಅಲ್ಲಾಡುತ್ತಿರುವ ಜಾತಿ ವ್ಯವಸ್ಥೆಯನ್ನು ಮತ್ತೆ ಭದ್ರಪಡಿಸುವ ಮಾರಮ್ಮನ ಕಥೆ ಒಂದು ಕಡೆಯಾದರೆ ವೃಂದೆಯ ಪಾತಿವ್ರತ್ಯದ ನೆಪವೊಡ್ಡಿ ವಿಷ್ಣುಭೋಗಿಸುವುದು, ಭೋಗಿಸಿದ ಮೇಲೆ ವರ ನೀಡಿ ಉದ್ಧರಿಸುವುದು, ’ಮೆಲು ಜಾತಿಯ ಪುರುಷನನ್ನು ಸೇರಿದ ಕೆಳಜಾತಿಯ ಮಹಿಳೆಯ ಪಾತಿವ್ರತ್ಯಕ್ಕೆ ಕಳಂಕವಿಲ್ಲ ’ ಎಂದು ಸಾರುವ ಉಪಾಯ ಕುಶಲತೆ ಇಲ್ಲಿ ಢಾಳಾಗಿಎದ್ದು ಕಾಣುತ್ತದೆ.

ದೇಪಳಗಿ (ದೀಪಾವಳಿ): ದೀಪಾವಳಿ ಹಬ್ಬವನ್ನು ಆಗೇರರು “ದೇಪಳಿಗ” ಹಬ್ಬ ಎನ್ನುತ್ತಾರೆ. ಅಂದು ಎಣ್ಣೆ ಸ್ನಾನ ಮಾಡುವುದರಿಂದ ’ನೀರ ಮೀಯಾ ಹಬ್ಬ’ ಎಂದೂ ಎನ್ನುತ್ತಾರೆ.

ದೀಪಾವಳಿಯ ಹಿಂದಿನ ದಿನ ’ಅಡಕಲ’ದಲ್ಲಿ (ದೊಡ್ಡ ಮಣ್ಣಿನ ಮಡಕೆ) ನೀರು ತುಂಬುವ ಸಂಭ್ರಮ ಹೆಂಗಸರದು. ಅಡಕಲನ್ನು ತೊಳೆದು ಶೇಡಿ ಹಲಿ ಹೊಯ್ದುಅಡಕಲ ಕೊರಳಿಗೆ ಹಿಂಡಲಕಾಯಿ ಬಳ್ಳಿ-ಹೂಮಾಲಿ ಸುತ್ತಿ ಅಲಂಕರಿಸುತ್ತಾರೆ. ನೀರಿಗೆ ಬೇವಿನ ಎಲೆ, ನೇರಳಿ ಚಕ್ಕೆ ಹಾಕುತ್ತಾರೆ. ಚತುರ್ದಶಿಯ ದಿವಸ ಎಣ್ಣೆ ಹಚ್ಚಿ ಸ್ನಾನ ಮಾಡುತ್ತಾರೆ.

ದೀಪವಾಳಿಯಲ್ಲಿ ಕಹಿ ಬಳಕೆಯೇ ಒಂದು ವಿಶೇಷ. ಹಿಂಡಲಕಾಯವನ್ನು ಕಾಲಿನಿಂದ ಮೆಟ್ಟಿ ಒಡೆದು ಬೀಜವನ್ನು ಹೆಣೆಗೆ ಇಟ್ಟುಕೊಳ್ಳುವುದರ ಜೊತೆಗೆ (ವಿಷ್ಣು ಬಲಿಚಕ್ರವರ್ತಿಯನ್ನು ಮೆಟ್ಟಿದ ಸಾಂಕೇತಿಕ ಆಚರಣೆ) ಕಹಿಬೇವು, ಓಮ (ಅಜವಾನ). ಜೀರಿಗೆ ಅರೆದು ಕಹಿ ಮದ್ದನ್ನು ಮಾಡಿ ಕುಡಿಯುತ್ತಾರೆ.ಮೊಗೆಕಾಯಿಯ ಕಡುಬು ಈ ಹಬ್ಬದ ವಿಶೇಷ ಖಾದ್ಯ.

ಇವರು ಹಿಂದೂ ಧರ್ಮದ ಎಲ್ಲಾ ಹಬ್ಬವನ್ನೂ ಆಚರಿಸುತ್ತಾರೆ. ನುಗ್ಲ ಹೂಣಮಿ (ನೂಲು ಹುಣ್ಣಿಮೆ- ಕೊಟ್ಟಿ ರೊಟ್ಟಿ ಕಾಯಿ ಹಾಲು) ನಾಗರಪಂಚಮಿ (ಸುಳಿರೊಟ್ಟಿ),ಬಿಚ್ಚಿನ ಸಂಕ್ರಾಂತಿ(ಬೆಲ್ಲ ಹಾಕದ ಕಾಯಿಪಾಯಸ). ಹೊಸ್ತು (ಬೆಲ್ಲ ಹಾಕದ ಕಾಯಿ ಪಾಯಸ), ಸುಗ್ಗಿ ಹಬ್ಬ, ಸಂಕ್ರಾಂತಿ, ಉಗಾದಿ ಎಲ್ಲವನ್ನೂ ಆಚರಿಸುತ್ತಾರಾದರೂ ಎಲ್ಲ ಹಬ್ಬಗಳಲ್ಲಿ ಪುರುಷರದೇ ಪ್ರಧಾನಪಾತ್ರವಾಗಿದ್ದು, ಪೂರಕ ಸಹಾಯ ಹಾಗೂ ಕಜ್ಜಾಯದ ಊಟ ಸಿದ್ಧತೆ ಮಾತ್ರಮಹಿಳೆಯದಾಗಿರುತ್ತದೆ. ಮಹಿಳೆಯರಿಗೆ ಮೀಸಲಾದ ವಿಶೇಷ ಹಬ್ಬಗಳಾವವೂ ಇಲ್ಲ.

ಜಾತ್ರೆ: ಜಾತ್ರೆಗಳೆಂದರೆ ಆಗೇರ ಹೆಂಗಳೆಯರಿಗೆ ಬಹಳ ಆಸಕ್ತಿ. ಹೊಸ ಸೀರೆ ಉಟ್ಟು ಮುಡಿ ತುಂಬ ಹೂ ಮುಡಿದು ಈ ಗುಂಪು ಗುಂಪಾಗಿ ಹೋಗುತ್ತಾರೆ. ಗ್ರಾಮ ದೇವರಹಬ್ಬ. ಬಂಡಿ ಹಬ್ಬ, ಹನೇಹಳ್ಳಿ ತೇರು, ಗಂಗಾವಳಿಯ ಗಂಗಾಲಗ್ನ, ಅಂಕೋಲಿಯ ವೆಂಕಟರಮಣ ದೇವರಕಾರ್ತಿಕೋತ್ಸವಗಳಿಗೆ ಹೋಗುತ್ತಾರೆ. ಅಲ್ಲಿಂದ ಬರುವಾಗ ತಮ್ಮ ಅಲಂಕಾರಿಕ ಸಾಮಾನುಗಳನ್ನು ಕುಡಿಕೆ-ಮಡಿಕೆಗಳನ್ನು ತಂದುಕೊಳ್ಳುತ್ತಾರೆ.

ದೇವರು: ಹಿಂದೂ ಧರ್ಮೀಯರು ಪೂಜಿಸುವ ಎಲ್ಲ ದೇವರಲ್ಲೂ ಶ್ರದ್ಧಾಭಕ್ತಿ ಇವರಿಗೆ. ಗಣಪತಿ, ಶಿವ, ಹನುಂತ, ಧರ್ಮಸ್ಥಳದ ಮಂಜುನಾಥ, ತಿರುಪತಿ ತಿಮ್ಮಪ್ಪ, ಶಬರಿಮಲೈ ಅಯ್ಯಪ್ಪ, ರಾಘವೇಂದ್ರ ಸ್ವಾಮಿ ಹೀಗೆ ಎಲ್ಲದರಲ್ಲಿ ಮಹಾದೈವ ಭಕ್ತಿ ಇವರಿಗೆ. ನಾನು ಕ್ಷೇತ್ರ ಕಾರ್ಯಕ್ಕೆ ಹೋದಾಗ ಸಂಕಷ್ಟಿ ಆಚರಣೆಯಲ್ಲಿದ್ದ ಹುಡುಗಿಯೊಬ್ಬಳು ದೇವರ ಕೋಣೆಗೊಯ್ದು ತೋರಿಸಿದಾಗ ಭಾರತದ ಮುಕ್ಕೋಟಿ ದೇವತೆಗಳ ದರ್ಶನವೂ ಒಮ್ಮೆಲೇ ಆದಂತಾಯಿತು. ಗೋಡೆ ತುಂಬ ದೇವರ ಚಿತ್ರಪಟ ಹಚ್ಚಿದ ಚಿತ್ರವನ್ನು ಸೆರೆಹಿಡಿದು ತಂದಿದ್ದೇನೆ.

ಗ್ರಾಮ್ಯದೇವತಾ ಪೂಜೆ:

ಆದಿಪರಾಶಕ್ತಿದೇವಿ (ಜೊಗಳ್ಸೆ ಮಂಡ)

ಸಾಮಾನ್ಯವಾಗಿ ಜಾತಿ ಬುಡಕಟ್ಟು ಜನಾಂಗದವರು ಪೂಜಿಸುವ ಗ್ರಾಮ ದೇವತೆಗಳು ಸ್ತ್ರೀ ದೇವತೆಗಳಾಗಿರುತ್ತವೆ. ಇಲ್ಲಿ ಇದಕ್ಕೆ ಅಪವಾದವಾಗಿ ಪುರುಷರೇ ಪೂಜಾರಿಗಳಾಗಿರುವ ಪುರುಷ ದೇವತೆಗಳ (ಮುರ‍್ಕುಂಡಿ, ಹೊಲಿವಟ್ರು) ಆರಾಧನೆ ಇದೆ. ಆದರೆ ಆದಿಪರಾಶಕ್ತಿ ಮಂದಿರ (ಅಂಕೋಲಾ ತಾಲೂಕಿನ ಬಾಳೆಗುಳಿ-ಅಂಕೋಲಾ ಹುಬ್ಬಳ್ಳಿ ರಸ್ತೆಗೆ ಹೊಂದಿ ಎನ್.ಎಚ್.೬೩) ದಲ್ಲಿ ದೇವಿಯನ್ನು ಆಗೇರ ಜನಾಂಗದ ದೇವಿ ರಾಮಾ ಆಗೇರ ಎಂಬ ಮಹಿಳೆ ಪೂಜಾರಿಣಿಯಾಗಿದ್ದಾಳೆ.

ಅಂಕೋಲಿಯ ಜೊಗಳ್ಸೆ ಗ್ರಾಮದಲ್ಲಿ ಹುಟ್ಟಿ ಆರೆಂಟು ವರ್ಷದಳಿದ್ದಾಗಲೇ ಪೂಜೆ ಪ್ರಾರಂಭಿಸಿದ ಇವರು ಎಪ್ಪತ್ತರ ಹರೆಯದಲ್ಲೂ ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ. ಮೈಮೇಲೆ ಭಾರ ಬಂದು, ಭಕ್ತರ ಪ್ರಶ್ನೆಗಳಿಗೆ ಉತ್ತರಿಸಿ ಸಂಕಷ್ಟ ಪರಿಹರಿಸುವ ಇವರು ಇಪ್ಪತ್ತೈದು ವರ್ಷಗಳ ಹಿಂದೆ ಬಾಳೆಗುಳಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಿಕೊಂಡರು.

“ತಮ್ಮ ತಾಯಿ ತಿಮ್ಮು ನಾಗಮ್ಮಾ ಆಗೇರ ಕಷ್ಟದಲ್ಲೂ ದೈವಭಕ್ತಿ ಬಿಟ್ಟವರಲ್ಲ. ತಾಯಿ ಚಾಮುಂಡಿ ಅವರ ಕನಸಿನಲ್ಲಿ ಬಂದು ನಿಮ್ಮನ್ನು ಕೈಬಿಡುವುದಿಲ್ಲ”, ಅನ್ನವನ್ನು ಬೇಡಿ ತಿನ್ನುವ ನೀನೆ ನಾಲ್ಕು ಜನಕ್ಕೆ ಅನ್ನ ಹಾಕುವ ಯೋಗ್ಯತೆ ಸಂಪಾದಿಸುವೆ ಎಂದು ಹೇಳಿತಂತೆ. ಗಂಧದ ಮೂರ್ತಿಯನ್ನು ಮಾಡಿಸಿ ಪೂಜೆ ಪ್ರಾರಂಭಿಸಿದರು. ಆಗ ಮೈಮೇಲೆ ಬರುವ ದೇವತೆಯಿಂದ ಭಕ್ತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕ ತೊಡಗಿದಂತೆ. ‘ಜೋಗಳ್ಳಿ ಮಂಡ’ ಎಂದು ಪ್ರಸಿದ್ಧವಾಯಿತು. ತಾಯಿಯ ನಂತರ ಪೂಜೆಗೆ ನಿಂತ ನನ್ನ ಮೈಮೇಲೂ ದೇವರು ಬರುತ್ತಿತ್ತಂತೆ. ಇಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿ ದೇವಸ್ಥಾನ ಕಟ್ಟಿದೆವು. ಸಂಕ್ರಾಂತಿ, ದಸರ, ಯುಗಾದಿ ಹಬ್ಬದ ದಿನ ನೂರಾರು ಜನಕ್ಕೆ ಅನ್ನ ಸಂತರ್ಪಣೆ ಮಾಡುವ ಮಟ್ಟಕ್ಕೆ ಬಂದಿದ್ದೇವೆ. ತಾಯಿ ಆಡಿದ ಮಾತನ್ನು ನಡೆಸಿಕೊಟ್ಟಿದ್ದಾಳೆ” ಎಂದು ಹೇಳುತ್ತಾರೆ.

ರವಿವಾರ ಹೊರತುಪಡಿಸಿ ಉಳಿದೆಲ್ಲ ದಿನ ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಇವರಲ್ಲಿಗೆ ನೆರೆ ರಾಜ್ಯದಿಂದಲೂ (ಗೋವ, ಮುಂಬೈ) ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

ಆಗ್ರಗೋಣದ ಹುಲಿವಟ್ರ ದೇವರ ಗುಡಿಯ ಅವಾರದಲ್ಲಿರುವ ಬೇಡಗತಿ ಹಾಗೂ ಸೂರ್ವೆಯ ಬೇಡಗತಿಯರು ಪುರುಷ ದೇವತೆಗಳೊಂದಿಗೆ ಪೂಜೆಗೆ ಪಾತ್ರರಾಗಿದ್ದಾರೆ. ಇವರು ದಂಡಿನಲ್ಲಿದ್ದು, ಸಾಹಸ ಪ್ರದರ್ಶಿಸಿದವರೆಂಬ ಕಥೆ ಅಲ್ಲಿ ಪ್ರಚಲಿತವಿದೆ.

ಆಗೇರ ಮಹಿಳೆಯರೂ ಪುರುಷರಿಗೆ ಸಮಾನರಾಗಿ ದಂಡಿನಲ್ಲಿ ಭಾಗವಹಿಸಿದ್ದು, ತಮ್ಮ ಧೈರ್ಯ ಸಾಹಸ ಪ್ರದರ್ಶನದಿಂದಲೇ ಸಮಾಜದ ಮನ್ನಣೆಗೆ ಪಾತ್ರವಾದದ್ದು ಇಲ್ಲಿ ವಿಶಿಷ್ಟ ಸಂಗತಿಯಾಗಿದೆ.

ಆಗೇರ ಮಹಿಳೆಯ ಕಲೆ, ಸಾಹಿತ್ಯ

ಭಾಷೆ:

“ಏನ್ ಮಾಡ್ತಿ ಎಲ್ಲ ಮರ‍್ತ ಹೋಗ್ತಿದ” (ಏನು ಮಾಡಲಿ ಎಲ್ಲ ಮೆತು ಹೋಗಿದೆ) ಎನ್ನುವ ಹೆಂಗಸರ ಮಾತು ಓದುವಾಗ ನೀಡದ ಖುಷಿಯನ್ನು ಆಡುವಾಗ ನೀಡುತ್ತದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾತಿ ಜನಾಂಗಕ್ಕೊಂದು ಉಪಭಾಷೆ ಇರುವಂತೆ ಆಗೇರರದೂ ಕನ್ನಡದ ಒಂದು ಉಪಭಾಷೆ. ಬರವಣಿಗೆಗಿಳಿಸಲು ಕಷ್ಟಸಾಧ್ಯವಾದರೂ ಓದಲು ತ್ರಾಸದಾಯಕವಾದರೂ ಆ ಜನರ ಆಡುದಾಟಿಯಲ್ಲಿ ವಿಶೇಷ ಸೊಗಸನ್ನು ತೋರಿಸಿ ಮನವನ್ನು ಆಕರ್ಷಿಸುತ್ತದೆ.

ಒಂದು ಭಾಷೆ ಆಯಾ ಪ್ರಾದೇಶಿಕ ವೈಶಿಷ್ಟ್ಯವನ್ನು, ಸಾಮಾಜಿಕ ವೈಶಿಷ್ಟ್ಯವನ್ನು ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯವನ್ನು ತನ್ನೊಂದಿಗೆ ಹೊತ್ತು ಸಾಗುತ್ತದೆ. ಕಾಲದ ಸೆಳೆತದಲ್ಲಿ ಸಿಕ್ಕ ಜನಾಂಗೀಯ ಸಾಂಸ್ಕೃತಿಕ ಪಲ್ಲಟಗಳಿಗೂ ಸಾಕ್ಷಿಯಾಗುವ ಭಾಷೆ ಒಂದು ಸಂಸ್ಕೃತಿಯ ಪ್ರಮುಖ ಅಂಶವಾಗಿದೆ.

ತಮ್ಮ ತಮ್ಮಲ್ಲಿ ಮಾತನಾಡುವಾಗ ಮಾತ್ರ ಆಡುನುಡಿ ಬಳಸುವ ಸುಶಿಕ್ಷಿತ ಸುಧಾರಿಸಿದ ಜನ ನಮ್ಮೊಂದಿಗೆ ಮಾತನಾಡುವಗ ವ್ಯವಹಾರಿಕ ಭಾಷೆಯಲ್ಲಿ ಮಾತನಾಡುತ್ತಾರೆ. ಅಜ್ಜಿಯರ ಭಾಷೆಯಲ್ಲೂ ಅಲ್ಲಲ್ಲಿ ಇಂಗ್ಲೀಷ್ ತಳುಕು ಹಾಕುತ್ತದೆ. ನನ್ನೊಂದಿಗೆ ಮಾತನಾಡಿಕೊಳ್ಳುವಾಗ ಅಜ್ಜಿಯೊಬ್ಬರು “ಇದ್ ನಮ್ ಟೋರಿ” (story) ಎಂದು ಮಾತು ಮುಗಿಸಿದರು.

ಅವರ ದಿನನಿತ್ಯದ ಮಾತು, ಜಗಳ, ಬಯ್ಗಳ, ಒಡಪು ಗಾದೆಗಳಲ್ಲಿ ಅರಿವಿಲ್ಲದೆ ನುಸುಳಿದ ಲಿಂಗ ತಾರತಮ್ಯವನ್ನು ಗುರುತಿಸಬಹುದಾಗಿದೆ.

ಸ್ತ್ರೀಲಿಂಗ ಬಳಕೆ ಇಲ್ಲಿ ನಪುಂಸಕ ಲಿಂಗವಾಗಿರುತ್ತದೆ. ಇದು ಆಗೇರರಲ್ಲಿ ಮಾತ್ವಲ್ಲದೆ ಬಹುಶಃ ಎಲ್ಲ ಹಿಮದುಳಿದ ಜಾತಿ ಜನಾಂಗಗಳಲ್ಲೂ ಸ್ತ್ರೀ ಯಾವಾಗಲೂ ನಪುಂಸಕಳಾಗಿಯೇ ಗುರುತಿಸಲ್ಪಟ್ಟಿದ್ದಾಳೆ.

ಅದ್ ಬತ್ತಿದ – ಅವಳು ಬರುತ್ತಾಳೆ.
ಅದ್ ಹೇಳ್ತಿದ – ಅವಳು ಹೇಳುತ್ತಾಳೆ.
ತಾಯ್ ನೋಡೇದ – ತಾಯಿ ನೋಡಿದ್ದಾಳೆ.
ಹೆಂಡ್ತ ಬಯ್ತಿದ – ಹೆಂಡತಿ ಬಯ್ಯುತ್ತಿದ್ದಾಳೆ.
ತಂಗಿ ಬಂದೇದ – ತಂಗಿ ಬಂದಿದಾಳೆ

ಬಹುಶಃ ಎಲ್ಲರ ರೂಢಿಯಂತೆ ಇಲ್ಲಿಯೂ ಬೈಗುಳಗಳೆಲ್ಲ ಸ್ತ್ರೀಯರನ್ನೇ ಉದ್ದೇಶಿಸಿವೆ.

ಬೋಳಿ ಮಗ – ಬೇವರ್ಸಿ ನನ್ ಮಗಾ
ಸೋಳಿ ಮಗ – ಹಲ್ಕಟ್ ರಂಡಿ ಮಗ
ತಾಯನಾ ಹಡಾ – ಬೋಸಡಿ ಮಗ
ಹಾದ್ರಕ್ ಹುಟ್ಟಿದವ – ಮುಂಡೆ ಮಗ

ಮಕ್ಕಳ ದೃಷ್ಟಿ ನಿವಾಳಿಸುವಾಗಲೂ ಉಪ್ಪು ಮೆಣಸು ಸೇರಿಸಿ “ಕಾಸಿಗೆ ಕಣ್ಣು ಗೂಗೆ ಕಣ್ಣು ರಂಡಿ ಕಣ್ಣು, ಮುಂಡಿ ಕಣ್ಣು, ಹಾದಿ ಕಣ್ಣು, ಬೀದಿ ಕಣ್ಣು ಎಲ್ಲಾ ಹೊಟ್ಟು ಹ್ವಾಗ್ಲ” ಎಂದು ಹೇಳಿ ಮೂರು ಬಾರಿ ಸುಳಿದು ಒಲೆಗೆ ಹಾಕುತ್ತಾರೆ. ಇಲ್ಲಿ ತಮ್ಮದೇ ದೂಷಣೆಯಿದೆ ಎಂಬ ಅರಿವಿರದೆ ಸಂದರ್ಭ ಬಂದಾಗಲೆಲ್ಲಾ ಸ್ತ್ರೀ ಸಾಮಾನ್ಯರು ಯಾವ ಮುಜುಗರವೂ ಇಲ್ಲದೆ ಬಳಸುತ್ತಾರೆ. ಮಾತೃತ್ವವನ್ನು ದೈವತ್ವಕ್ಕೇರಿಸುವ ನಮ್ಮ ಸಮಾಜ ನಿಂದನೆಯಲ್ಲೂ ಅವಳನ್ನೇ ಅಸ್ತ್ರವಾಗಿಸಿ ಅವಮಾನಿಸುವುದು ಒಂದು ಸಾಮಾಜಿಕ ವಿಪರ್ಯಾಸವಾಗಿದೆ.

‘ಕಂಡಾ’ ಎನ್ನುವ ಪದವನ್ನು ‘ಅಂತ’ ಎನ್ನುವ ಅರ್ಥದಲ್ಲಿ ಬಳಸುತ್ತಾರೆ.
ಅಂವ್ ಬತ್ತೇನ್ ಕಂಡಾ     –           ಅವನು ಬರುತ್ತಾನಂತೆ
ಅಂವ್ ಹೋದ್ನ ಕಂಡಾ      ಅವನು ಹೋದನಂತೆ
ಇಂದ್ ಹೊಣ್ಮೆ ಕಂಡಾ       ಇಂದು ಹುಣ್ಣಿಮೆಯಂತೆ
ಸಾಲಿಗ್ ರಜೆ ಕಂಡಾ         ಶಾಲೆಗೆ ರಜೆಯಂತೆ

ಕೆಲವು ಪದಗಳನ್ನು ಆಡುಮಾತಿನಲ್ಲಿ ಸಂಕ್ಷಿಪ್ತವಾಗಿ ಬಳಸುತ್ತಾರೆ.

ನಾ ಬತ್ತಿ – ನಾನು ಬರುತ್ತೇನೆ
ನಾ ಹೋತೆ – ನಾನು ಹೋಗುತ್ತೇನೆ
ಆಂವ್ ಬತ್ತ್ಯಾ – ಅವನು ಬರುತ್ತಾನೆ
ಅಂವ್ ಹೋತ್ಯಾ – ಅವನು ಹೋಗುತ್ತಾನೆ.

ಇನ್ನು ಅವರಲ್ಲಿ ಬಳಕೆಯಾಗುವ ಕೆಲ ವಿಶಿಷ್ಟ ಪದಗಳು ಹೀಗಿವೆ.

ಮೊಗು – ಹುಡುಗ
ಸೂಂತ್ರಿಗ್ ಸಿಕ್ಕು – ನೆತ್ತಿಗೇರು
ಕೋಸಾ – ಹುಡುಗ
ಉಚ್ಚಾಟ – ಮಲಬಾಧೆ
ತಂಗೆ – ತಂಗಿ
ಪಳದಿ – ಸಾರು
ಜಾನತಿ – ಯುವತಿ
ಕೊದಿಲ – ತಂಬಳಿ
ಹೊಂತಗಾರಾ – ಯುವಕ
ಪುಡಿ – ಪಲ್ಲಿ
ಕನ್ನೆಮೊಗ್ಗು – ಅವಿವಾಹಿತ
ಹುಡುಗಿ ಹೊಳಗ  – ಬೆರಕೆ ಸಾರು
ಉಳಗಾರ್ತಿ – ಗಂಡ ಬಿಟ್ಟವಳು
ಚಿಪ್ಪು – ಸೌಟು
ಮೈನೀರು – ಮೂತ್ರ
ಕೊರ್ಕೆ – ಬಟ್ಟಲಾಕಾರದ ಮಣ್ಣಿನ ಪಾತ್ರೆ
ತೋಡೆ  – ಸ್ವಲ್ಪ
ಅಡಕಲ  – ಹಂಡೆ
ಕೂರುಬರು – ನಿದ್ದೆಬರು
ಕವಳಿಗೆ  – ಲೋಟ
ಚೊಂಬು            – ತಂಬಿಗೆ
ಉಂಬೂಕೆ – ಊಟ ಮಾಡುವುದಕ್ಕೆ

 

ಸಾಹಿತ್ಯ :

ಸಾಹಿತ್ಯವನ್ನು ನೇರವಾಗಿ ಚರಿತ್ರೆಯ ಅಂಗವಾಗಿ ಸ್ವೀಕರಿಸಲಾಗದಿದ್ದರೂ ಅದು ಒಂದು ಸಮುದಾಯದ ಜೀವನಾನುಭವಗಳ ಅಭಿವ್ಯಕ್ತಿಯಾಗಿರುವುದರಿಂದ ಒಂದು ಕಾಲದ ಸಾಮಾಜಿಕ ಸ್ಥಿತಿ, ಸಾಮಾಜಿಕ ಬದಲಾವಣೆಗಳ ಚಹರೆಗಳನ್ನು ಇಲ್ಲಿ ಗುರುತಿಸಬಹುದು. ಒಂದು ಸಂಸ್ಕೃತಿ ಅನ್ಯ ಮೌಲ್ಯಗಳೊಂದಿಗೆ ಮುಖಾಮುಖಿಯಾಗುವಾಗಿನ ತವಕ ತಲ್ಲಣಗಳನ್ನು ಸಾಹಿತ್ಯ ಪ್ರತಿನಿಧಿಸುತ್ತದೆ. ಅದರಲ್ಲೂ ಒಂದು ಶ್ರಮ ಸಂಸ್ಕೃತಿಯಂತೂ ತನ್ನ ಸಂಭ್ರಮ, ನೋವು, ಅಸಹಾಯಕತೆ, ಪ್ರತಿಭಟನೆಗಳನ್ನು ಜನಪದ ಸಾಹಿತ್ಯದಲ್ಲಿ ಹರಿಯಬಿಡುತ್ತದೆ. ಆಗೇರ ಮಹಿಳೆಯರ ಸಾಂಸ್ಕೃತಿಕ ಬದುಕನ್ನು ತೆರೆದಿಡುವ ಸತ್ವಪೂರ್ಣ ಸಾಹಿತ್ಯ ನಮ್ಮನ್ನು ಬೆರಗುಗೊಳಿಸುತ್ತದೆ; ನಮ್ಮನ್ನು ಹಿಡಿದು ನಿಲ್ಲಿಸುತ್ತದೆ.

ಜನಪದ ಸಾಹಿತ್ಯ:

ಶಿಷ್ಯ ಸಾಹಿತ್ಯದಲ್ಲಿ ಇನ್ನೂ ಕೃತಿಗಿಳಿಯದ ಆಗೇರ ಮಹಿಳೆಯರದು ಜನಪದ ಸಾಹಿತ್ಯದಲ್ಲಿ ಸಿಂಹಪಾಲು. ಇಡೀ ಆಗೇರರ ಸಾಂಸ್ಕೃತಿಕ ಬದುಕನ್ನು ತಮ್ಮ ಹಾಡಿನ ದಾಟಿಯಲ್ಲಿ ಹಾಡಾಗಿ ಹರಿಸಬಲ್ಲರು. ಕಥೆಯಾಗಿ ಧ್ವನಿಸಬಲ್ಲರು.

ಹಾಡು : ಅಕ್ಕಿ ಬೀಸುವಾಗ, ಭತ್ತ ಮುರಿಯುವಾಗ, ಗದ್ದೆನೆಟ್ಟಿ ಮಾಡುವಾಗ, ಕಳೆ ಕೀಳುವಾಗ, ಜೋಗುಳ ಹಾಡುವಾಗ, ಮದುವೆ ಮಾಡುವಾಗ, ಹಬ್ಬ ಆಚರಿಸುವಾಗ ಅವರು ಹಾಡುವ ಹಾಡುಗಳೆಲ್ಲ ಈಗ ಮೈಕಾಸುರನ ದಾಳಿಯಲ್ಲಿ ಮರೆಯಾಗುತ್ತಿವೆ. ವಿಶೇಷ ದಿನಗಳಲ್ಲಿ ಹಾಡು ಹೇಳುವುದಕ್ಕೆಂದೇ ಹೆಂಗಸರನ್ನು ಕರೆಸುತ್ತಿದ್ದಂತೆ. ಅಂತಹ ಒಬ್ಬ ಹಾಡುಗಾರ್ತಿ ಅಂಕೋಲಾ ತಾಲೂಕಿನ ಅಗ್ರಗೋಣದ ಸೋಮಿ ತಿಮ್ಮಾ ಆಗೇರ ಅವರು ತೀರಿ ಹೋಗಿ ಹತ್ತು ಹದಿನೈದು ವರ್ಷ ಘಟಿಸಿದವೆಂದೇ ಹೇಳುವ ಆ ಹೆಂಗಸರು ಎಲ್ಲ ಹಾಡುಗಳನ್ನೂ ಮರೆತಿದ್ದಾರೆ. ಈಗಿರುವ ಹಳೆಯ ತಲೆಮಾರು ಮುಗಿದರೆ ಆಗೇರರಲ್ಲಿ ಹಾಡುವ ಹಕ್ಕಿಗಳೇ ಇಲ್ಲದಿರುವುದು ಖೇದವೆನಿಸುತ್ತದೆ.

ನಾನು ಕ್ಷೇತ್ರಕಾರ್ಯಕ್ಕೆ ಹೋದಾಗ ಸಿಕ್ಕಿದ್ದು ಖಂಡತುಂಡವಾದ ಕೆಲವು ಹಾಡುಗಳು ಕಥೆಗಳು ಕೆಲವು ಮಾತ್ರ. ಹೀಗಾಗಿ ಇತರ ಸಂಗ್ರಹಕಾರರಿಂದ ಹಾಡು ಕಥೆಗಳನ್ನು ಆಯ್ದು ಕೆಲವನ್ನು ಉದಾಹರಿಸುತ್ತಿದ್ದೇನೆ.

ಹೂವಿನಂತೆ ಅರಳಿದ ಹೆಣ್ಣೊಬ್ಬಳು ಅರಳಿದ ಕೇದಿಗೆ ಹೂವಿಗೆ ಮನಸೋತ ಸನ್ನಿವೇಶ ಇಲ್ಲಿದೆ. ಹೆಣ್ಣು ಮತ್ತು ಕೇದಗೆಯ ನಡುವೆ ನಡೆವ ಚಿಕ್ಕ ಸಂಭಾಷಣೆ ಪ್ರಕೃತಿಯ ಎಲ್ಲದರಲ್ಲೂ ಜೀವ ಚೈತನ್ಯ ಕಾಣುವ ಹೆಣ್ಣೊಬ್ಬಳ ಜೀವನ ಪ್ರೇಮ ಇಲ್ಲಿದೆ.

ಒಳ್ಳೊಳ್ಳೆ ಕ್ಯಾಂದೂಗಿ ಮುಳ್ಳನೇ ತುಂಬಿದೇ
ಎಲ್ಲೆಲ್ಲು ನಿನ್ನ ಪರಿಮಳ
ಎಲ್ಲೆಲ್ಲು ನಿನ್ನ ಪರಿಮಳ ಕ್ಯಾಂದೂಗಿ
ಹಾರಿ ಬಾ ನನ್ನ ತುರುಬೀಗೆ
ಹಾರಿ ಬರುವುದಕೆ ಹಕ್ಕಿ ನರಸನಲ್ಲ
ಹೊಕ್ಕಿ ಬಾ ನನ್ನ ಮನೆಯಲ್ಲಿ (ಸುಮನಾ ಆಗೇರ)

ಮುಳ್ಳಿನ ನಡುವೆಯೇ ಹೂವಿದೆ. ಹೂವನ್ನು ಪಡೆಯಬೇಕಾದರೆ ಮುಳ್ಳಿನ ಕಷ್ಟವನ್ನೂ ದಾಟಿ ಹೋಗಬೇಕೆಂಬ ತಿಳುವಳಿಕೆ ಇಲ್ಲಿದೆ. ಹೂವೆಂದೆ ಬಣ್ಣಿಸಲ್ಪಡುವ ಹೆಣ್ಣು ತನ್ನ ಮುಳ್ಳಿನ ದಾರಿಯನ್ನು ತುಳಿಯಬೇಕಾದರೆ ಸಾಂಕೇತಿಕ ಅರಿವನ್ನು ಹೊಳಪಿಸುವ ಕಲಾತ್ಮಕ ಹೆಣಿಗೆಯನ್ನು ಈ ಹಾಡು ಹೊತ್ತಿದೆ.

ಹೀಗೆ ಜೀವನಾನುಭವ, ಜೀವನ ಮೌಲ್ಯಗಳಿಂದ ತುಂಬಿ ತುಳುಕುವ ಸುಂದರ ಕಲಾಭಿವ್ಯಕ್ತಿ ವಿವಿಧ ಸಂದರ್ಭಗಳಲ್ಲಿ ಹಾಡು ಹೊನಲಾಗಿ ಹರಿದಿದೆ.

ಬಹುಮುಖ್ಯವಾಗಿ ಪೌರೋಹಿತ್ಯದ ಅನುಪಸ್ಥಿತಿಯಲ್ಲಿ ನಡೆಯುವ ಮದುವೆಗಳಲ್ಲಿ ಹೆಂಗಸರ ಹಾಡಿನದೇ ಹಬ್ಬ. ಮದುವೆ ಚಡಂಗಗಳಲ್ಲಿ ಬಹುಮುಖ್ಯ ಪಾತ್ರವಹಿಸುವ ಈ ಸೋಬಾನೆ ಪದಗಳು ಆಗೇರ ಸ್ತೀಯರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುತ್ತವೆ.

ಮದುವೆ ಹೂ ಮುಡಿಸುವ ಶಾಸ್ತ್ರದೊಂದಿಗೆ ಅನುಪಸ್ಥಿತಿಯಲ್ಲಿ ನಡೆಯುವ ಮದುವೆಗಳಲ್ಲಿ ಹೆಂಗಸರ ಹಾಡಿನದೇ ಹಬ್ಬ. ಮದುವೆ ಚಡಂಗಗಳಲ್ಲಿ ಬಹುಮುಖ್ಯ  ಪಾತ್ರವಹಿಸುವ ಈ ಸೋಬಾನೆ ಪದಗಳು ಆಗೇರ ಸ್ತೀಯರ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡುತ್ತವೆ.