ಸಾಂಸ್ಕೃತಿಕ ಬದುಕು

ಒಂದು ಜನಾಂಗೀಯ ಅಧ್ಯಯನದಲ್ಲಿ ತಮ್ಮ ಜೀವಿತದ ಮಧ್ಯ ಅವರು ಕಟ್ಟಿಕೊಂಡ ಸಾಂಸ್ಕೃತಿಕ ಬದುಕು ಬಹಳ ಮುಖ್ಯವೆನಿಸುತ್ತದೆ. ಪ್ರತಿಯೊಂದು ಜಾತಿ ಜನಾಂಗಕ್ಕೆ ತನ್ನದೇ ಆದ ಸಂಪ್ರದಾಯ ಆಚರಣೆಗಳು ಇವೆ. ಅದು ಕೇವಲ ಒಂದು ದಿನದ ನಿರ್ಮಾಣವಲ್ಲ. ಅವರ ದೈನಂದಿನ ಬದುಕಿನ ಹೋರಾಟ, ಆರ್ಥಿಕ ಸ್ಥಿತಿಯ ಮಧ್ಯೆ ಕಂಡುಕೊಂಡ ಜೀವನದ ದಾರಿ ನಿರ್ಮಿಸಿದ ಪ್ರಭಾವಲಯವಿದು. ಹುಟ್ಟು ಸಾವಿನ ನಿಗೂಢತೆ, ತನ್ನ ಕೈ ಮೀರಿದ ಶಕ್ತಿಗೆ ಕಾರಣವೆಂದುಕೊಳ್ಳುವ ದೇವರ ಕಲ್ಪನೆ, ಪಾಪ-ಪುಣ್ಯ, ಸ್ವರ್ಗ-ನರಕಗಳ ಕಲ್ಪನೆಯಿಂದಾಗಿ ಅವರದೇ ಆದ ರೀತಿ ರಿವಾಜುಗಳನ್ನು ಸೃಷ್ಟಿಗೊಳ್ಳುತ್ತವೆ. ಅದಕ್ಕನುಗುಣವಾಗಿ ನಡೆಯುವ ಜನನ-ಮರಣ, ಮದುವೆ-ಮುಂಜಿ, ಹಬ್ಬ-ಹರಿದಿನ, ಜಾತ್ರೆ-ಕಾರ್ಯಗಳಲ್ಲಿ ಆಗೇರ ಮಹಿಳೆ ತನ್ನದೇ ಆದ ಪಾತ್ರ, ಸ್ಥಾನಮಾನ, ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದಾಳೆ.

ಜನನ ನಾಮಕರಣ:

ಎಂತಹ ಬಡತನದ ನಡುವೆಯೂ ಜನನ, ನಾಮಕರಣದ ಸಂತೋಷವನ್ನು ಅನುಭವಿಸುವರು. ಅವರು ಸಾಂಪ್ರದಾಯಿಕವಾಗಿ ಅದನ್ನು ಅವರು ಆಚರಿಸುತ್ತಾರೆ.

ಆಗೇರರಲ್ಲಿ ಹೆರಿಗೆಯ ಕೆಲಸವನ್ನು ’ಬಿಜ್ಜುಗಿತ್ತಿ’ಯರು (ಅವರದೇ ಜಾತಿಯ ಅನುಭವಸ್ಥ ಮುದುಕಿಯರು) ಮಾಡಿಸುತ್ತಾರೆ. ಸ್ವಲ್ಪ ಕತ್ತಲೆ ಕೋಣೆಯಲ್ಲಿ ಹುಲ್ಲು ಅಥವಾ ತೆಂಗಿನ ಗರಿ ಹಾಸಿ, ಅದರ ಮೇಲೆ ಚಾಪೆ ಹಾಸಿ ಹೆರಿಗೆಯನ್ನು ಪೂರೈಸುತ್ತಾರೆ. ತೀರ ತೊಂದರೆಯಾದಲ್ಲಿ ಮಾತ್ರ ವೈದ್ಯರನ್ನು ಮನೆಗೆ ಕರೆತರುತ್ತಾರೆ.

ಹೆರಿಗೆಯಾದ ಹನ್ನೊಂದು ದಿನ ’ಮೈಲಿಗೆ’ ಆಚರಣೆ ಇದ್ದು, ಆಗ ಮನೆಯಲ್ಲಾಗಲಿ ಸಂಬಂಧಿಕರಲ್ಲಾಗಲಿ ಯಾವುದೇ ಶುಭಕಾರ್ಯ ನಡೆಯುವುದಿಲ್ಲ. ಹನ್ನೆರಡನಯ ದಿನ ’ಶಾಂತಿನೀರು’ ಪಡೆದು ಬಾವಿ ಮುಟ್ಟುವ ಶಾಸ್ತ್ರದೊಂದಿಗೆ ಎಂದಿನಂತೆ ಜೀವನ ಪ್ರಾರಂಭವಾಗುತ್ತದೆ.

ಮುಂಜಾನೆಯ ಹೊತ್ತು ಮನೆಯನ್ನೆಲ್ಲಾ ಸಾರಿಸಿ ರಂಗೋಲಿ ಹಾಕಿ, ಭಟ್ಟರ ಮನೆಯಿಂದ ಕವಳಿಗೆ ’ಶಾಂತಿನೀರು’ (ಪಾಂಚಗವ್ಯ) ತಂದು ಮನೆಯ ಮೂಲೆ ಮೂಲೆ ವಸ್ತುಗಳ ಮೇಲೆಲ್ಲ ಚಿಮುಕಿಸಿ ಶುದ್ಧ ಮಾಡುತ್ತಾರೆ. ಆಗೇರರು ತಮ್ಮ ಸಂಸ್ಕಾರ ಸಂಪ್ರದಾಯಗಳಲ್ಲಿ ಬ್ರಾಹ್ಮಣ ಪೌರೋಹಿತ್ಯವನ್ನು ಒಪ್ಪಿದವರಲ್ಲ. ಇದನ್ನು ಬಿಟ್ಟರೆ ಬೇರೆಲ್ಲೂ ಪ್ರವೇಶ ಇಲ್ಲ. ಆದ್ದರಿಂದಲೇ ಇಲ್ಲಿ ಪುರೋಹಿತಶಾಹಿ ಆಗಮನ ನಂತರದ್ದು ಎಂದು ತಿಳಿಯಬಹುದಾಗಿದೆ. ಕಾಯಿಕತ್ತ (ತೆಂಗಿನ ಕಾಯಿ ಸಿಪ್ಪೆ) ದಲ್ಲಿ ಕೆಂಡವನಿಟ್ಟುಕೊಂಡು ಬಾವಿ ಹತ್ತಿರ ಬಂದು ಕಾಯಿ ಒಡೆದು ಆರತಿ. ಬೆಳಗುವುದಕ್ಕೆ ’ಬಾವಿ ಮುಟ್ಟುವ ಶಾಸ್ತ್ರ’ ಎನ್ನುತ್ತಾರೆ. ಅಲ್ಲಿಂದ ಅವಳಿಗೆ ಎಲ್ಲರೊಂದಿಗೆ ಸಂಪರ್ಕ ಬೆಳೆಸುವ ಅರ್ಹತೆ ಪ್ರಾಪ್ತವಾಗುತ್ತದೆ.

ಹೆರಿಗೆಯ ಸಂದರ್ಭದಲ್ಲಿ ಬಾಣಂತಿಯ ಮೈಯಿಂದ ಬಂದ ’ಮಲಾತ’ (ಹೊಕ್ಕಳ ಬಳ್ಳಿ)ವನ್ನು ಮನೆಯ ಎಡಮುಂಭಾಗದಲ್ಲಿ ಹೊಂಡ ತೆಗೆದು ಹೂಳುತ್ತಾರೆ. ಅದು ’ಆಮೆಹೊಂಡ’ವಾಗಿದ್ದು, ಮತ್ತೆ ಅದೇ ಸ್ಥಳದಲ್ಲಿ ಕೂಸಿಗೂ ಮೈಲಿಗೆ ಕಳೆಯುವತನಕ ಎಣ್ಣೆ ನೀರು ಅಥವಾ ಕಡ್ಲೆಹಿಟ್ಟಿನಿಂದ ಅಲ್ಲಿ ಸ್ನಾನವನ್ನು ಮಾಡಿಸುತ್ತಾರೆ.

ನಾಮಕರಣ ರಾತ್ರಿ ಕಾಲದಲ್ಲಿ ನಡೆಯುತ್ತದೆ. ಬಹುಶಃ ಹಗಲಲ್ಲಿ ದುಡಿಮೆಗೆ ಹೋಗುವ ಹೆಂಗಸರಿಗೆ ರಾತ್ರಿಯ ಬಿಡುವು. ವಿಶೇಷವೆಂದರೆ ನಾಮಕರಣ ಕಾರ್ಯಕ್ಕೆ ಕೇವಲ ಹೆಂಗಸರು ಮಕ್ಕಳಿಗೆ ಮಾತ್ರ ಆಹ್ವಾನ. ಅವರದೇ ಎಲ್ಲ ಆಚರಣೆ.

ಇಲ್ಲಿ ’ಆಮೆ ಹೊಂಡದ ಪೂಜೆ’ ಮುಖ್ಯವಾದದ್ದು. ಹೊಂಡದ ನಡುವೆ ಮುಳ್ಳುಗಳ್ಳಿ ಗೊನೆ ನಿಲ್ಲಿಸಿ, ಸುತ್ತಲೂ ಚಿಕ್ಕ ಹಿಲಾಲು (ದೊಂದಿ)ಗಳನ್ನು ಹಚ್ಚುತ್ತಾರೆ. ನಡುವೆ ಕೆಲವು ಕಡ್ಡಿಗಳನ್ನು ನಿಲ್ಲಿಸಿ ಅದಕ್ಕೆ ಸಪ್ಪೆ ರೊಟ್ಟಿಯ ಚೂರುಗಳನ್ನು ಚುಚ್ಚಿಡುತ್ತಾರೆ. ಬಾಣಂತಿ ಕಳ್ಳಿ ಗಿಡದ ಗೊನೆಗೆ ಅರಿಶಿಣ, ಕುಂಕುಮ ಹಚ್ಚಿ, ಹೂವು ಏರಿಸಿ ಕಾಯಿಕತ್ತದಲ್ಲಿಟ್ಟು ಕೆಂಡದಲ್ಲಿ ಪೂಜೆ ಮಾಡುತ್ತಾರೆ. ಪೂಜೆಯ ನಂತರ ಮಕ್ಕಳು ಆ ರೊಟ್ಟಿ ಚೂರುಗಳನ್ನು ಕಿತ್ತು ತಿನ್ನುತ್ತಾರೆ.

’ಇಂದ್ ನಮ್ ತಂಗೀ ಕೋಸ್ನ ಆಂವೆ’ ಎಂದು ಆಹ್ವಾನಿಸುವ ಆಗೇರರು ಬಹುಶಃ ಆಮೆ ಹೊಂಡದ ಶಾಸ್ತ್ರವೇ ಅವರಲ್ಲಿ ಪ್ರಧಾನವಾದುದರಿಂದ ನಾಮಕರಣಕ್ಕೂ ’ಆಂವೆ’ ಎಂದೇ ಎನ್ನುತ್ತಾರೆ.

ಅವರ ಸೆರೆಯ ಜಾತಿಗಳಲ್ಲಿ (ಮುಖ್ಯವಾಗಿ ನಾಡವರು) ತುಳಸಿ, ಕಡವಣಿಕೆ ಗಿಡ ನೆಡುತ್ತಾರಾದರೂ ಆಗೇರರು ಕಳ್ಳಿ ಗಿಡ ನೆಡುವದು ವೈಶಿಷ್ಟ್ಯಪೂರ್ಣವಾಗಿದೆ. ಹಾಲು ಸುರಿಯುವ ಕಳ್ಳಿಗಿಡ ತಾಯ್ತನ ಮತ್ತು ಫಲವಂತಿಕೆಯ ಪ್ರತೀಕವಾಗಿರಬಹುದು. ಆ ಪ್ರಸವದ ವೇದನೆ ಹಾಗೂ ನಂತರ ಹಾಲೂಡಿಸುವ ಸುಖದ ಸಂಕೇತ ಈ ಗಿಡವಿರಬಹುದು. ಸಪ್ಪೆ ರೊಟ್ಟಿಯ ಅರ್ಪಣೆ ಕಾಮ ಮತ್ತು ಸಂತಾನ ಸಮೃದ್ದಿಯ ಪ್ರತೀಕವಾದ ನಾಗಾರಾಧನೆಯ ಪ್ರತೀಕವಾಗಿರಬಹುದು. ಇದು ಆಗೇರರು ದಕ್ಷಿಣ ಕನ್ನಡದಿಂದ ವಲಸೆ ಬಂದ ಜನಾಂಗ ಎನ್ನುವ ಊಹೆಗೆ ಪುಷ್ಟಿಯನ್ನು ಕೊಡುತ್ತದೆ.

ಮುಂದಿನದು ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ. ಮಗುವಿನ ಸೋದರತ್ತೆ ಮಗುವಿಗೆ ಹೊಸಬಟ್ಟೆ ತೊಡಿಸಬೇಕು. ಮೂರು ಬಾರಿ ತೊಟ್ಟಿಲ ಮೇಲಿಂದ ಹಾಯಿಸಿ ತೊಟ್ಟಿಲಿಗೆ ಹಾಕುತ್ತಾರೆ. ಕೆಲವು ಕಡೆ ಬುಧವಂತಿ ಹಾಗೂ ಕೋಲಕಾರ್ತಿಯರು ಈ ಶಾಸ್ತ್ರದಲ್ಲಿ ಉಪಸ್ಥಿತರಿರುವುದೂ ಉಂಟು. ಹೆಸರು ಇಡುವಾಗಲೂ ಬ್ರಾಹ್ಮಣರನ್ನು ಕೇಳುವ, ತಿಥಿ ಮಿತಿ ಅನುಸರಣೆ ಇಲ್ಲ.

ಸಾಮಾನ್ಯವಾಗಿ ತಂದೆ-ತಾಯಿ, ಅಜ್ಜ-ಅಜ್ಜಿಯರ ಹೆಸರಿಡುತ್ತಾರೆ. ಇಷ್ಟದೇವರು, ಗ್ರಾಮದೇವತೆ, ಕುಲದೇವತೆಗಳ ಹೆಸರನ್ನಿಡುತ್ತಾರೆ. ವೆಂಕಟ್ರಮಣ, ಹನುಮಂತ, ಮಾಸ್ತಿಜಟ್ಟು, ಬೀರಾ, ಮುರ್ಕುಂಡಿ, ನಾಗು, ನಾಗಮ್ಮ, ಪಾರ್ವತಿ, ಹೊನ್ನು, ತಿಮ್ಮು ಇತ್ಯಾದಿಗಳು.

ಬಹಳ ಮುಖ್ಯವಾಗಿ ಹುಟ್ಟಿದ ವಾರದ ಹೆಸರೇ ಇಟ್ಟುಬಿಡುತ್ತಾರೆ.

ಸೋಮವಾರ- ಸೋಮು, ಸೋಮಿ

ಮಂಗಳವಾರ- ಮಂಗು, ಮಂಗಲಾ

ಬುಧವಾರ – ಬುದ್ಧು, ಬುದ್ಧಮ್ಮ

ಶುಕ್ರವಾರ- ಸುಕ್ರ, ಸುಕ್ರಿ

ಶನಿವಾರ – ಸಣಿಯಾ, ಸಣ್ಣಮ್ಮ

ಆದಿತ್ಯವಾರ – ಆಯು, ಆಯಮ್ಮ

ಅಮವಾಸ್ಯೆ – ಅಮಾಸ

ಹುಣ್ಣಿಮೆ-ಹುಣಿಮಣ್ಣ

ತುಳಸಿಹಬ್ಬ-ತುಳಸಿ, ತೊಳಸ ಇತ್ಯಾದಿಗಳು.

ಬಾಳಂತನ:

“ಈಗಿನ ವಾತಾವರಣ ಹಾಂಗೆಲ್ಲ (ಹಾಗೆ ಇಲ್ಲ) ಈಗೆಲ್ಲ ದಾಕ್ದರ‍್ಗೆ ತೋರಿಸ್ತಿರ. ನಾವೆಲ್ಲ ದಾಕ್ದ್ರ ಮನಿ ಕಂಡವ್ರಲ್ಲ(ಕಂಡವರಲ್ಲ). ಎರ‍್ಡ ಮಕ್ಳ ಕಳ್ಕಂಡೆ. ನಮ್ಮ ಬಾಳಂತನ ಏನಂತ್ರಿ? ಮೈಲ್ಗಿ ಮುಗಿಯೋ ತಂಕ ಅಟ್ಟಿ, ಸುತ್ತು ಹಾಯ್ಕಂಡೆ ಕೆಲಸಕ್ಕೆ ಹೋಗುದು. ಆ ತ್ರಾಸ ಈಗ ಅನುಭವಿಸ್ತಿರ. ಕೆಲಸಕ್ಕೆ ಸೊಂಟಾನೇ ಬರೋದೆಲ್ಲ” ಎಂದು ಹೇಳುವ ಹೊನ್ನಜ್ಜಿಯವರ ಮಾತಿನಲ್ಲಿ ಅವರ ತೀವ್ರ ಬಡತನದ ದಾರುಣ ಚಿತ್ರ ಕಣ್ಣಿಗೆ ಕಟ್ಟುತ್ತದೆ.

ಒಂದು ಜೀವವನ್ನೇ ಹಂಚಿಕೊಂಡ ಆ ದಿನಗಳಲ್ಲೂ ಒಂದಿಷ್ಟು ವಿಶ್ರಾಂತಿ, ಹಾಲು, ತುಪ್ಪ, ಮೊಸರು ಏನನ್ನೂ ಕಾಣದ ಜೀವ ಅದು. ಇದು ಹೆಚ್ಚಿನವರ ಪಾಡಾದರೆ ಇವರಲ್ಲಿ ವಿಶೇಷ ಬಾಳಂತನವೂ ಇದೆ.

ಹೆಣ್ಣು ಬಾಳಂತನದ ಒಂದು ತಿಂಗಳ ಅವಧಿಯನ್ನಾದರೂ ತಾಯಿಯ ಮನೆಯಲ್ಲಿ ಕಳೆಯುವ ರೂಢಿ ಇದೆ. ಆದರೆ ತೌರು ಮನೆಯಲ್ಲಿ ಆರ್ಥಿಕ ಬಡತನವಿರುವುದರಿಂದ ಭಾರ ಆಗಬಾರದೆಂದು ಹೆಣ್ಣು ಮಕ್ಕಳು ಬಹುಬೇಗ ಗಂಡನ ಮನೆಯನ್ನು ಸೇರುತ್ತಾರೆ.

ಬಾಳಂತಿಯರಿಗೆ ಅರಿಶಿಣ ಎಣ್ಣೆ ಜೊತೆ ಸ್ವಲ್ಪ ಮಲ್ಲಿಗೆ ಎಲಿ ರಸ ಬೆರೆಸಿ, ಬೆಚ್ಚಗೆ ಮಾಡಿ ಮೈತಿಕ್ಕಿ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಾರೆ. ಕಂಬಳಿ ಹೊದ್ದು ಮಲಗಿಸಿ ಮೈಬೆವರಿಳಿಸುತ್ತಾರೆ. ಪ್ರಸವದಲ್ಲಿ ಕಳಕೊಂಡ ಶಕ್ತಿಯನ್ನು ಪಡೆಯಲು ಸೊಂಟಕ್ಕೆ ಸೀರೆಯೊಂದನ್ನು ಸುತ್ತುತ್ತಾರೆ. ಹೆಣ್ಣು ಮಗುವನ್ನು ಹೆತ್ತರೆ ಮೂರು ತಿಂಗಳು ಹಾಗೂ ಗಂಡು ಮಗುವನ್ನು ಹೆತ್ತರೆ ನಾಲ್ಕು ತಿಂಗಳವರೆಗೆ ಸುತ್ತು ಹಾಕಬೇಕೆಂಬ ಭಾವನೆ ಇದೆ. ಹೆಣ್ಣೋ, ಗಂಡೋ ಪ್ರಶ್ನೆ ಇಲ್ಲ. ನಮ್ಮ ಕುಟುಂಬ ಬೆಳೆದದ್ದಷ್ಟೇ ಗೊತ್ತು ಎನ್ನುವ ಹೆಂಗಸರ ಅಭಿಪ್ರಾಯದ ಮಧ್ಯೆ ಗಂಡು ಹೆತ್ತಾಗ ಹೆಚ್ಚಿನ ಅವಧಿಯ ಸುತ್ತು ಹೇಗೆ ರೂಢಿಯಲ್ಲಿದೆ ಎನ್ನುವ ಪ್ರಶ್ನೆ ಕಾಡುತ್ತದೆ.

ಕಾಳು ಮೆಣಸು, ಓಮದ ಕಾಳು, ಅರಿಶಿಣ, ತೆಂಗಿನ ಕಾಯಿ, ಶುಂಠಿ ಸೇರಿಸಿ ಅರೆದ ಚಟ್ನಿಯೊಂದಿಗೆ ಬಿಸಿ ಅನ್ನವನ್ನು ಹನ್ನೊಂದು ದಿನ ನೀಡುತ್ತಾರೆ. ನಂಜು ಆಗದಂತೆ ಹೆಚ್ಚಿನ ನಿಗಾವಹಿಸುತ್ತಾರೆ. ಗುರ್ಕು, ಪಚ್ಚಿ ಬಿಟ್ಟರೆ ಉಳಿದ ನಂಜಿನ ಮೀನನ್ನು ಕೊಡುವುದಿಲ್ಲ. ಹೆಚ್ಚು ಮೀನಿನ ಸೇವನೆಯಿಂದ ಮೊಲೆ ಹಾಲು ಗೌಲಾಗುತ್ತದೆಂಬ ನಂಬಿಕೆಯಿಂದ ಆ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ಮೀನುಮಾಂಸ ನೀಡುತ್ತಾರೆ. ತಂಪು ವಾತಾವರಣದಲ್ಲಿ ಓಡಾಡಲು ಬಿಡದೆ, ಬಸಳೆ ಮುಂತಾದ ತಂಪು ಸೊಪ್ಪು ಆಹಾರಗಲನ್ನು ನೀಡದೆ ಬಾಳಂತಿಯರನ್ನು ಉಷ್ಣವಾಗಿಯೇ ಇಡುತ್ತಾರೆ. ಐದಾರು ತಿಂಗಳು ಬಾಣಂತಿತನದ ವಿಶೇಷ ಆರೈಕೆ ಕಾಳಜಿ ಪಡೆದುಕೊಳ್ಳುವ ಮೇಲ್ಜಾತಿಯ ಸ್ತ್ರೀ ಎಲ್ಲಿ? ಮೈಲಿಗೆಯನ್ನಷ್ಟು ಕಳೆದು ಬಿಸಿಲು ಮಳೆಯೆನ್ನದೆ ದುಡಿತಕ್ಕೆ ಕಾಲಿಡುವ ಆಗೇರ ಸ್ತ್ರೀ ಎಲ್ಲಿ? ಆದರೆ ನೌಕರಸ್ಥರಲ್ಲಿ, ಆರ್ಥಿಕ ಸ್ಥಿತಿ ಸುಧಾರಿಸಿದ ಮನೆಗಳಲ್ಲಿ ಈಗೀಗ ಎಲ್ಲರಂತೆ ಆರೋಗ್ಯ ಉಪಚಾರಗಳು ಸಿಗುತ್ತವೆ. ನಾನು ಕ್ಷೇತ್ರ ಕಾರ್ಯಕ್ಕೆ ಹೋದಾಗ ಎರಡು ತಿಂಗಳ ಕೂಸು ಹೊತ್ತ ಮಹಿಳೆಯೊಬ್ಬಳು ಇನ್ನೂ ಮೆತ್ತನೆಯ ಹಾಸಿಗೆಯ ಮೇಲೆ ಇದ್ದು ವಿಶ್ರಾಂತಿ ಪಡೆಯುತ್ತಿದ್ದರು.

ಋತುಮತಿ :

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಋತುಮತಿಯಾಗುವುದನ್ನು ’ಮುಟ್ಟು’ ಎನ್ನುತ್ತಾರೆ. ಆಗೇರರೂ ಕೂಡ ’ಮುಟ್ಟಾಗುವುದು’ ’ಮೈನೆರೆಯುವುದ’ ’ದೊಡ್ಡೋಳಾಗುವುದ’ ಎನ್ನುತ್ತಾರೆ. ಈ ಮುಟ್ಟಿನ ಮೈಲಿಗೆ ಕೂಡಾ ಕಡ್ಡಾಯವಾಗಿ ಪರಿಪಾಲಿಸಲಾಗುತ್ತದೆ.

ಮಾತಿಗೆ ಸಿಕ್ಕ ಒಂದು ಜೋಡಿಯನ್ನು (ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು) ಈ ಕುರಿತಾಗಿ ವಿಚಾರಿಸಿದಾಗ “ಈಗಲೂ ಮನೆಗೆ ಬಂದಾಗ ಹೊರಗೆ ಕುಳಿತುಕೊಳ್ಳೋದೆ. ಆದರೆ ಇಬ್ಬರೂ ನೌಕರಸ್ಥರಾಗಿ ಪರ ಊರಲ್ಲಿ ಇದ್ದಾಗ ಹೇಗೆ ಸಾಧ್ಯ? ಹೀಗಾಗಿ ಅನಿವಾರ್ಯವಾಗಿ ಮಡಿ ಮೈಲಿಗೆ ಎಲ್ಲ ಬಿಡಬೇಕಾಗಿದೆ” ಎಂದು ಹೇಳುವಾಗ ಆ ವ್ಯಕ್ತಿಯ ಮಾತಿನಲ್ಲಿ ಪದ್ಧತಿಯನ್ನು ಅನುಸರಿಸಲಾಗದ್ದಕ್ಕೆ ಬೇಸರ ವ್ಯಕ್ತವಾಯಿತು.

ಅಂತಹ ಅನಿವಾರ್ಯ ಸ್ಥಿತಿಯಲ್ಲಿ ಇದನ್ನು ಈಗೀಗ ಬಿಡಲಾಗುತ್ತದೆಯೇ ವಿನಾಃ ಈ ಸಂಪ್ರದಾಯವನ್ನು ಹಿಂದಿನದೇ ಶ್ರದ್ಧೆಯಿಂದ ಮನೆಗಳಲ್ಲಿ ಆಚರಿಸಲಾಗುತ್ತದೆ.

ಆಗೇರರಲ್ಲಿ ಮೊದಲ ಬಾರಿ ಮೈನೆರೆದಾಗ ಯಾವುದೇ ಸಮಾರಂಭ ಇಲ್ಲ. ಮತ್ತು ಹುಡುಗಿಯನ್ನು ಹೊರಗೆ ಕೂಡಿಸದೆ ಸ್ನಾನ ಮಾಡಿಸಿ ಒಳಗೆ ಕರೆದುಕೊಳ್ಳುತ್ತಾರೆ. ಎರಡನೇ ಸಾರಿ ಋತುಮತಿಯಾದಾಗ ಮೈಲಿಗೆಯೆಂದು ತಿಳಿಯಲಾಗುತ್ತದೆ. ಹಿಂದೆಲ್ಲ ಐದು ದಿನದ ಮೈಲಿಗೆ ಆಚರಣೆ (ಐನೀರ ಸ್ನಾನ ಎನ್ನುವ ಪದವೂ ಬಳಕೆಯಲ್ಲಿದೆ) ಇದ್ದು ಈಗ ನಾಲ್ಕು ದಿನ ಆಚರಣೆ ಇದೆ. ಯಾರನ್ನು ಮುಟ್ಟಿಸಿಕೊಳ್ಳದೆ ಮನೆಯ ಹೊರಗೆ ಅಥವಾ ಪಕ್ಕದ ಮಾಡಿನಲ್ಲಿ ಇರಬೇಕು. ಮನೆ ಒಳಗೇ ಮಲಗಬೇಕಾಗಿ ಬಂದರೆ ಒನಕೆ ಅಡ್ಡ ಇಟ್ಟು ಪ್ರತ್ಯೇಕತೆಯನು ತೋರಿಸಲಾಗುತ್ತಿತ್ತು. ಅವರದೇ ಚಾಪೆ, ತಂಬಿಗೆ, ಲೋಟ ಎಲ್ಲ ಪ್ರತ್ಯೇಕ ಬಾಳೆ ಎಲೆ ಅಥವಾ ಅಡಿಕೆ ಮರದ ಹಾಳೆಗಳಲ್ಲಿ ಊಟ ತಿಂಡಿ. ನಾಲ್ಕನೆ ದಿನ ಮುಂಜಾನೆ ತನ್ನೆಲ್ಲ ವಸ್ತ್ರ ಹಾಸು ಬಟ್ಟೆಗಳನ್ನೆಲ್ಲಾ ತೊಳೆದು ಸ್ನಾನ ಮಾಡಿ ಸೆಗಣಿ ನೀರು, ತುಳಸಿ ನೀರನ್ನು ಕುಡಿದು ಶುದ್ಧಳಾಗಿ, ಮನೆಯ ತುಳಸಿಗೆ ಪೂಜೆ ಮಾಡಿ, ಸೂರ್ಯನಿಗೆ ಕೈ ಮುಗಿದು ಒಳ ಪ್ರವೇಶಿಸಿದರೆ ಅವರ ಋತುಮತಿಯ ಅವಧಿ ಪೂರ್ಣವಾದಂತೆ.

ಹಿಂದೆಲ್ಲ ಹೆಣ್ಣು ಕನ್ಯೆಯಾಗಿರುವಾಗಲೇ (ಮೈನೆರೆಯುವ ಮೊದಲೇ) ಮದುವೆ ಮಾಡಿ ತಮ್ಮ ಜವಾಬ್ದಾರಿ ತೀರಿಸಿಕೊಳ್ಳಬೇಕೆಂದು ತಂದೆ-ತಾಯಿಗಳು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಿ ಬಿಡುತ್ತಿದ್ದರು. ಅವಳು ಮೈನೆರೆಯುವ ತನಕ ತಾಯಿಯ ಮನೆಯಲ್ಲೇ ಇರುತ್ತಿದ್ದಳು. ಮೈನೆರೆದಾಗ ಗಂಡನ ಮನೆಗೆ ವಿಷಯ ತಿಳಿಸುತ್ತಿದ್ದರು. ಆಗಲೂ ಅದನ್ನು ಸಾಂಕೇತಿಕ ಭಾಷೆಯಲ್ಲೇ ತಿಳಿಸಲಾಗುತ್ತಿತ್ತು. ಹೆಣ್ಣಿನ ತೌರುಮನೆಯಿಂದ ಯಾರಾದರೂ ಬಂದು ತೆಂಗಿನ ಕಾಯಿಗೆ ಕಾಡಿಗೆ ಬಡಿದು ಗಂಡಿನ ಮನೆಗೆ ಬರುತ್ತಿದ್ದರು. ಇದರಿಂದಲೇ ವಿಷಯ ಅರ್ಥೈಸಿಕೊಂಡ ಗಂಡಿನ ಕಡೆಯವರು ಹೆಣ್ಣಿನ ಮನೆಗೆ ಬಂದು ಸ್ನಾನ ಮಾಡಿಸಿ ತಾವು ತಂದ ಹೊಸ ಸೀರೆ ಕುಪ್ಪಸ ತೊಡಿಸಿ, ಹೂವು ಮುಡಿಸಿ ಗಂಡಿನ ಮನೆಗೆ ಕರೆದೊಯ್ಯುತ್ತಿದ್ದರು. ನೆಂಟರಿಗೆ ಸಿಹಿಯೂಟ ನೀಡಿ ಗಂಡ ಹೆಂಡತಿಗೆ ಒಂದಾಗಲು ಅವಕಾಶ ಮಾಡಿಕೊಡಲಾಗುತ್ತಿತ್ತು.

ಮದುವೆ :

ಯಾವ ಬ್ರಾಹ್ಮಣ ಪುರೋಹಿತರ ಪ್ರವೇಶವಿಲ್ಲದೆ, ಜಾತಕ ಮೂಹೂರ್ತಗಳ ಗೋಜಿಲ್ಲದೆ, ಕೇವಲ ಬುಧವಂತ ಹಾಗೂ ಕೋಲಕಾರರ ಹಾಗೂ ನೆಂಟರಿಷ್ಟರ ಸಮಕ್ಷದಲ್ಲಿ ಆಗೇರರ ಮದುವೆ ಕಾರ್ಯ ನೆರವೇರುತ್ತದೆ. ಮೊದಲಲ್ಲಿ ಐದು ದಿನಗಳ ಕಾಲ ನಡೆಯುವ ಮದುವೆಯಲ್ಲಿ ಪುರುಷನದೇ ಪ್ರಧಾನ ಪಾತ್ರವಾದರೂ ಕೂಡ ಹೂ ಮುಡಿಸುವುದು, ಹಲಿ ಬಿಡಿಸುವುದು, ಬಳಿದು ಮೀಯುವುದು, ತಳಗೆ ಹಿಡಿಯುವುದು, ಓಕುಳಿ ಆಡುವುದು, ಮಡ್ಲ ತುಂಬೋದು ಮುಂತಾದ ಎಲ್ಲ ಮದುವೆ ಚಡಂಗಗಳಲ್ಲಿ ಹೆಣ್ಣಿನ ಪಾತ್ರ ಎದ್ದು ಕಾಣುತ್ತದೆ. ಪುರೋಹಿತರ ಮಂತ್ರೋಪದೇಶವಿಲ್ಲದ ಇವರ ಮದುವೆ ಹೆಂಗಳೆಯರ ಹಾಡು ಹಸೆಯೊಂದಿಗೆ ಸಾಂಗವಾಗಿ ಸಾಗುತ್ತದೆ.

ಇವರಲ್ಲಿ ಒಂದೇ ಬಳ್ಳಿಯಲ್ಲಿ ಮದುವೆ ನಿಷಿದ್ಧ. ತಂದೆಯ ವಂಶವಾಹಿನಿಯಿಂದ ಬಳಿ ಗುರುತಿಸುವುದರಿಂದ ತಂದೆಯ ಅಕ್ಕ ತಂಗಿಯರ ಮಕ್ಕಳೊಡನೆ ವಿವಾಹ ಸಂಬಂಧಕ್ಕಿಂತ ತಾಯಿಯ ಸಹೋದರರ ಮಕ್ಕಳೊಂದಿಗೆ ವಿವಾಹ ಸಂಬಂಧವೇರ್ಪಡುತ್ತದೆ.

ತೆರ ಕೊಡುವುದು : ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆಗೇರರಲ್ಲಿ ಉಳಿದ ಮೇಲ್ಜಾತಿ ಮೇಲ್ವರ್ಗಗಳಲ್ಲಿರುವಂತೆ ಸುಲಿಗೆ, ಶೋಷಣೆ ಕಾರಣವಾದ ವರದಕ್ಷಿಣೆ ಪದ್ಧತಿ ಇಲ್ಲ. ’ತೆರ’ (ಕನ್ಯಾಶುಲಕ್) ಕೊಟ್ಟೇ ಮದುವೆ ಆಗುವ ಸಂಪ್ರದಾಯವಿದೆ.

ಬಹುಶಃ ಇದು ಹೆಣ್ಣಿನ ಮನೆಯ ಬಡತನದ ಹಿನ್ನೆಲೆಯಲ್ಲಿ ಬಂದ ಸಂಪ್ರದಾಯವಿರಬೇಕು. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳು ದುಡಿದು ಸಂಪಾದಿಸಲಾದ್ದರಿಂದ ತಂದೆ ತಾಯಿಗಳಿಗೆ ಮದುವೆ ಖರ್ಚನ್ನು ನಿಭಾಯಿಸುವುದು ಕಷ್ಟವೆಂದೇ ಭಾವಿಸಿದ ಗಂಡಿನ ಕಡೆಯವರು ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿ ಹೆಣ್ಣನ್ನು ತರುವುದು ಗೌರವ ಸಂಪ್ರದಾಯ. ಸಾಮಾನ್ಯವಾಗಿ ೪ ರಿಂದ ಹತ್ತು ವರ (ಒಂದು ವರವೆಂದರೆ ನಾಲ್ಕು ರೂಪಾಯಿ) ಕೊಡುತ್ತಿದ್ದರು. ಕಾಲಮಾನಕ್ಕೆ ತಕ್ಕಂತೆ ಅದರ ದರ ಹೆಚ್ಚಿದೆ.

ಕೈಯೇಳಕ್ಕಿ (ಕೈ ವೀಳ್ಯದ ಅಕ್ಕಿ): ಇದೂ ಕೂಡ ಹೆಣ್ಣಿನ ಮನೆಯಲ್ಲಿಯ ಬಡತನದ ದಾರುಣ ಸ್ಥಿತಿಗೆ ಗಂಡಿನವರು ಸ್ಪಂದಿಸುವ ಸತ್ ಸಂಪ್ರದಾಯವಾಗಿದೆ. ನಿಶ್ಚಿತಾರ್ಥದ ದಿನ ಗಂಡಿನವರು ಹೆಣ್ಣಿನ ಮನೆಗೆ ಕೊಡಬೇಕಾದ ಅಕ್ಕಿಯ ಪ್ರಮಾಣವನ್ನು (ಐದರಿಂದ ಹತ್ತು ಕೊಳಗ ಆಗ ಕಾಲಮಾನಕ್ಕನುಗುಣವಾಗಿ ಪರಿಮಾಣ ಹೆಚ್ಚಿದೆ) ನಿರ್ಧರಿಸಲಾಗುತ್ತದೆ. ದಿಬ್ಬಣ ಪ್ರವೇಶಿಸುವ ಮುನ್ನ ಈ ಕೈಯೇಳಕ್ಕಿ ಹೆಣ್ಣಿನ ಮನೆ ತಲುಪಬೇಕು. ಹೊತ್ತು ತರುವವರೆಗೆ ವಿಶೇಷ ಊಟೋಪಚಾರ ಮಾಡಲಾಗುತ್ತದೆ.

ಮದುವೆಯ ಈ ಎರಡೂ ಸತ್ ಸಂಪ್ರದಾಯಗಳು ಇತ್ತೀಚಿನ ಮದುವೆಗಳಲ್ಲಿ ಮಾಯವಾಗುತ್ತಿವೆ.

ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಂದ ಪ್ರಸ್ತಾಪ ಬಂದಾಗ ಬುಧವಂತ ಕೋಲಕಾರ ಹಾಗೂ ಹಿರಿಯರೊಂದಿಗೆ ಸಮಾಲೋಚಿಸಿ, ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಗುತ್ತದೆ. ಪರಸ್ಪರ ಹೆಣ್ಣು ಗಂಡು ನೋಡುವ ಸಂಪ್ರದಾಯ  ಇಲ್ಲಿ ಇರಲಿಲ್ಲ. ಜಾತಕ ಹೊಂದಾಣಿಕೆಯೂ ಇಲ್ಲ.

ಏಳಿಶಾಸ್ತ್ರ : ಇದು ಹೆಣ್ಣಿನ ಮನೆಯಲ್ಲಿ ನಡೆಯುವ ಶಾಸ್ತ್ರ. ಮದುವೆ ನಿಶ್ಚಯ ಮಾಡಿ ವೀಳ್ಯ ಹಿಡಿಯುವುದನ್ನು ’ಏಳಿ ಹಿಡಿಯುವುದು’ ಎನ್ನುತ್ತಾರೆ. ಹೆಣ್ಣಿನ ಕಡೆಯವರು ತಾವು ತಮ್ಮ ದೇವರುಗಳ ಹೆಸರಿನಲ್ಲಿ ತೆಗೆದಿಡಬೇಕಾದ ವೀಳ್ಯದ ಅಂದಾಜನ್ನು ಮಾಡಿ ಮೊದಲೇ ಗಂಡಿನವರಿಗೆ ನೀಡಬೇಕು. ಹೆಣ್ಣಿನವರಿಗೆ ಕೊರತೆಯಾಗದಂತೆ ಗಂಡಿನ ಕಡೆಯವರು ಎಲೆ ಅಡಿಕೆ ಸಾಮಗ್ರಿಯನ್ನು ತರುತ್ತಾರೆ. ಹೆಣ್ಣು ಗಂಡಿನ ಕಡೆಯ ಬುಧವಂತ ಕೋಲಕಾರರ ಸಾಕ್ಷಿಯಲ್ಲಿ ಹೆಣ್ಣಿನ ತಂದೆ “ಗಂಡು ನಮದು” ಎಂದೂ ಗಂಡಿನ ತಂದೆ “ಹೆಣ್ಣು ನಮದು” ಎಂದು ಹೇಳಿ ವೀಳ್ಯ ತೆಗೆದಿಟ್ಟು (ಕುಡಿ ಬಾಳಿಯಲ್ಲಿ ತೆಂಗಿನ ಕಾಯಿ, ವೀಳ್ಯ, ಅಡಿಕೆ ಇಡುವುದು) ನಮಸ್ಕರಿಸುತ್ತಾರೆ. ಈ ಹೆಣ್ಣು ನಿಶ್ಚಯ ಕಾರ್ಯದ ನಂತರ ಮದುವೆಯ ಸಿದ್ಧತೆ ಪ್ರಾರಂಭವಾಗುತ್ತದೆ.

ಮದುವೆಯ ಮೊದಲು ದಿನದ ಕಾರ್ಯಗಳು:

ಹಲಿ ಹೊಯ್ಯುವುದು : ಹೆಂಗಸರೇ ಬಿಡಿಸುವ ಈ ಚಿತ್ರ ಅವರ ಕಲ್ಪನಾ ಲೋಕ ಹಾಗೂ ಕಲಾಭಿವ್ಯಕ್ತಿಯನ್ನು ಮಾಡಿದರೆ ಪ್ರಕೃತಿ ಲಭ್ಯ ಎಲ್ಲ ವಸ್ತು ಶಕ್ತಿಗಳನ್ನು ಗೌರವಿಸುವ ಅವರ ಸಾಂಸ್ಕೃತಿ ಆಶಯವನ್ನು ವ್ಯಕ್ತಪಡಿಸುತ್ತದೆ.

ಹಿಂದೆಲ್ಲಾ ಮದುವೆ ನಡೆಯುವುದು ಮನೆಯಲ್ಲಿ. ಆಗೇರರ ಚಿಕ್ಕ ಮನೆಯಲ್ಲಿ ಮಂಟಪ ಕಟ್ಟುವ ಅನುಕೂಲತೆ ಇರಲಿಲ್ಲವಾದುದರಿಂದ ಬಹುಶಃ ಹಲಿ ಹೊಯ್ಯುವ ಪರಂಪರೆ ರೂಢಿಯಲ್ಲಿತ್ತು. ಮದುವೆಯ ಮೊದಲ ದಿನ ಮದುಮಕ್ಕಳನ್ನು ಕೂಡಿಸುವ ಕೋಣೆಯಲ್ಲಿ ನೆಲ ಮತ್ತು ಗೋಡೆಯ ಮೇಲೆ ಶೇಡಿಯಲ್ಲಿ ಅಥವಾ ಕೆಂಪು ಮಣ್ಣಿನಿಂದ ಚಿತ್ರ ಬರೆಯುವುದಕ್ಕೆ ’ಹಲಿ ಹುಯ್ಯುವುದು’ ಎನ್ನುತ್ತಾರೆ. ಮಂಟಪದ ಚಿತ್ರಣ, ಸೂರ್ಯ, ಚಂದ್ರ, ಗಿಡ ಮರಬಳ್ಳಿಗಳು, ಪ್ರಾಣಿಪಕ್ಷಿ, ಅವರು ಪವಿತ್ರವೆಂದು ಭಾವಿಸಲಾದ ತುಳಸಿ ಕಟ್ಟೆ ಮುಂತಾದ ಎಲ್ಲ ಚಿತ್ರಗಳನ್ನು ಹುಲಿಯಲ್ಲಿ ಚಿತ್ರಿಸಲಾಗುತ್ತದೆ.

ತೊಂಡ್ಲ: ಗಂಡಿನ ಬಾಸಿಂಗಕ್ಕಿಂತ ಸ್ವಲ್ಪ ಚಿಕ್ಕದಾದ ಹೆಣ್ಣಿನ ಬಾಸಿಂಗವೇ ತೊಂಡ್ಲ. ಸಿಂಗಾರ (ಅಡಿಕೆ ಹೂವು), ಸಂಪಿಗೆ ಇತ್ಯಾದಿ ಹೂವುಗಳಿಂದ ಅಲಂಕೃತವಾದ ಇದನ್ನು ಹೆಂಗಳೆಯರೇ ಕಟ್ಟುತ್ತಿದ್ದರು. ಆದರೆ ಈಗ ಬೆಂಡಿನ ಬಾಸಿಂಗವನ್ನು ಬಳಸುತ್ತಿದ್ದು, ಬಾಸಿಂಗವನ್ನು ತರುವ ಜವಾಬ್ದಾರಿ ಮದುಮಗನ ಹಿರಯಕ್ಕ ಭಾವನದಾಗಿರುತ್ತದೆ. ದಿಬ್ಬಣ ಹೆಣ್ಣಿನ ಮನೆಯ ತೋರಣ ಸೇರಿದಾಗ ಅದನ್ನು ಗಂಡಿನ ಕಡೆಯ ಹೆಂಗಸರು ಮದುಮಗಳಿಗೆ ತಲುಪಿಸುತ್ತಾರೆ. ಹೆಂಗಸರೇ ಮದುಮಗಳಿಗೆ ಕಟ್ಟುತ್ತಾರೆ.

ಹೂವು ಮುಡಿಸುವುದು : ಮದುವೆಯ ಮೊದಲ ದಿನ ರಾತ್ರಿ ಬುಧವಂತನ ಸಮಕ್ಷದಲ್ಲಿ ಹೆಣ್ಣಿನ ಮನೆಯಲ್ಲಿ ಹೂವು ಮುಡಿಸುವ ಶಾಸ್ತ್ರ ಮಾಡಲಾಗುತ್ತದೆ. ಗಂಡಿನ ಕಡೆಯವರು ಹಿಂಗಾರ, ಕೇದಗೆ, ಗೊಂಡೆ, ಮಲ್ಲಿಗೆ ಇತ್ಯಾದಿ ಹೂವು ತಂದು, ಹೂವು, ಹಣ್ಣು, ಕಾಯಿ, ಎಲಿ, ಅಡಿಕೆ ಹಾಕಿ ಹೆಂಗಸರು ವಧುವಿಗೆ ಮಡಿಲು ತುಂಬುತ್ತಾರೆ. ಮತ್ತು ತಂದ ಹೂವನ್ನು ವಧುವಿನ ತಲೆಗೇರಿಸುತ್ತಾರೆ. ನಂತರ ಹೆಣ್ಣು ಮದುವೆಯಾಗುವವರೆಗೂ ಮನೆಯ ಹೊರಗೆ ಹೋಗಕೂಡದು. ಹೆಣ್ಣಿನ ಮಡಿಲು ತುಂಬಿ ಅವಳ ವಂಶವಾಹಿನಿಯ ಸಮೃದ್ಧಿಯನ್ನು ಹಾರೈಸುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ.

ಧಾರೆಯ ದಿನದ ಕಾರ್ಯಗಳು:

ಅತ್ತಿತೋರಣ : ಹೆಣ್ಣಿನ ಮನೆಯಲ್ಲಿ (ಗಂಡಿನ ಮನೆಯಲ್ಲೂ) ಬುಧವಂತ ಅತ್ತಿಮರದ ಟೊಂಗೆ ತಂದು ತೋರಣ ಕಟ್ಟುತ್ತಾನೆ. ಆಚೆ ಈಚೆ ಹೊಸ ಕುಂಭಗಳಲ್ಲಿ ನೀರನ್ನು ತುಂಬಿಡುತ್ತಾರೆ.

ಬಳಿದು ಮೀಯುವುದು : ಅತ್ತಿ ತೋರಣದ ಅಡಿಯಲ್ಲಿ ಮದುಮಗಳನ್ನು ಕುಳ್ಳಿರಿಸಿ ’ತೆಗರ’ (ಅರಿಶಿಣ, ಬೇವಿನಸೊಪ್ಪು, ತುಳಸಿ ಎಲೆ ಅರೆದು ಸಿದ್ಧಪಡಿಸಿದ ಲೇಹ) ಹಚ್ಚಿ ಹೊಸ ಕುಂಭದಲ್ಲಿ ತುಂಬಿಟ್ಟ ನೀರಿನಿಂದ ಸ್ನಾನ ಮಾಡಿಸುತ್ತಾರೆ. ತೆಗರ ಮತ್ತು ಎಣ್ಣೆಯನ್ನು ಮದು ಮಕ್ಕಳ ದೇಹಕ್ಕೆ ಬಳಿದು ಮೀಯಿಸುವುದರಿಂದ ಇದನ್ನು ’ಬಳಿದು ಮೀಯುವುದು’ ಎನ್ನುತ್ತಾರೆ. ಅಕ್ಕ ತಂಗಿಯರು ಮುತ್ತೈದೆಯರು ತೋರಣಕ್ಕೆ ಐದು ಸುತ್ತು ಸುತ್ತುತ್ತಾ ಆರತಿ ಅಕ್ಷತೆಯೊಂದಿಗೆ ಈ ಕಾರ್ಯವನ್ನು ನೆರವೇರಿಸುತ್ತಾರೆ. ಮದುಮಗಳ ಮೈಕಾಂತಿ ಹೆಚ್ಚಿಸುವ ಉದ್ದೇಶದಿಂದ ಇದು ನಡೆಯುತ್ತದೆ.

ತಳಿಗೆ : ಮದುವೆಯ ಚಡಂಗದಲ್ಲಿ ಪ್ರಾರಂಭದಿಂದ ಮದುವೆ ಮುಗಿಯುವವರೆಗೆ ’ತಳಿಗೆಕ್ಕ’ನ ಪಾತ್ರ ಪ್ರಧಾನವಾದದ್ದು. ತಳಿಗೆ ಹಿಡಿದು ಶಾಲನ್ನು ಹೆಗಲ ಮೇಲೆ ಇಳಿಬಿಟ್ಟು ಮದುವೆ ಕಾರ್ಯಕ್ಕೆ ನೆರವಾಗುವ ಇವಳು ವಿಶೇಷ ಗೌರವಕ್ಕೆ ಪಾತ್ರಳಾಗುತ್ತಾಳೆ.

ಹರಿವಾಣದಲ್ಲಿ ಅಕ್ಕಿ ತುಂಬಿ, ನೀರಿನ ತಂಬಿಗೆಯ ಮೇಲೆ ತೆಂಗಿನಕಾಯಿ ಮಾವಿನ ತಳಿರನ್ನಿಟ್ಟು, ಅದಕ್ಕೆ ತಾಗಿ ಒಂದು ಪುಟ್ಟ ಕನ್ನಡಿಯನ್ನಿಡುತ್ತಾರೆ. ಇದೇ ’ತಳಿಗೆ’. ಇದರಲ್ಲಿ ಹಚ್ಚಿದ ಹಣತೆ ದೀಪ ಮದುವೆಯ ಎಲ್ಲ ಕಾರ್ಯ ಮುಗಿಯುವವರೆಗೂ ನಂದಬಾರದು. ಈ ತಳಿಗೆ ಹಿಡಿಯುವ ಹಕ್ಕು ಮದುಮಗಳ ಹಿರಿಯಕ್ಕನದಾಗಿರುತ್ತದೆ.

ಈ ತಳಿಗೆಯೊಂದಿಗೆ ಬಾವಿಗೆ ಹೋಗಿ ಹೊಸ ಕುಂಭಗಳಲ್ಲಿ ನೀರನ್ನು ತರುತ್ತಾರೆ. ಆಗ ನಾಲ್ವರು ಯುವಕರು ನೆರಳಾಗುವಂತೆ ಹಾಗೂ ನೀರು ಕೊಳೆಯಾಗದಂತೆ ಬಿಳಿಬಟ್ಟೆಯನ್ನು ಚಪ್ಪರದಂತೆ ಎತ್ತಿ ಹಿಡಿಯುತ್ತಾರೆ.

ಮಾಂಗಲ್ಯಧಾರಣೆ : (ಗುಂಟಕಿ ಮಣಿ ಕಟ್ಟುವುದು) ಸ್ನಾನದ ನಂತರ ಗಂಡಿನ ಕಡೆಯವರು ತಂದ ಧಾರೆ ಸೀರೆ, ಮೂಗುತಿ, ಕಾಲುಂಗುರ, ಕೈಬಳೆ, ಹಣಿಗೆ, ಕನ್ನಡಿ, ತೊಂಡ್ಲ, ಹೂವು ಎಲ್ಲವನ್ನು ನೀಡಿ ಮಹಿಳೆಯರೆಲ್ಲ ಸೇರಿ ಮದುಮಗಳನ್ನು ಶೃಂಗರಿಸುತ್ತಾರೆ. ಸ್ವಲ್ಪ ದೂರ ತೋರಣದಲ್ಲಿ ನಿಂತ ಮದುಮಗನನ್ನು ಧಾರೆ ಎರೆಯುವ ತಂದೆ ತಾಯಿ (ಅಥವಾ ಅಣ್ಣ-ತಮ್ಮ) ಎದುರ‍್ಗೊಳ್ಳುತ್ತಾರೆ. ವಧುವಿನ ತಾಯಿ ಅಳಿಯನ ಪಾದವನ್ನು ತೊಳೆದು ಮುಟಗಾಯಿ ನೀಡಿ ತಳಿಗೆಯನ್ನು ಮುಟಗಾಯನ್ನೂ ಪರಸ್ಪರರು ಬದಲಾಯಿಸಿಕೊಳ್ಳುತ್ತಾರೆ. ತೋರಣದಲ್ಲಿ ನಿಂತ ಮದುಮಗನಿಗೆ ಅತ್ತೆ ಆರತಿ ಬೆಳಗಿ ಚಪ್ಪರಕ್ಕೆ ಕರೆತರುತ್ತಾರೆ.

ಆತನ ಮುಂದೆ ಒಂದು ತೆರೆ ಹಿಡಿದು ವಧುವನ್ನು ಕರೆತರುತ್ತಾರೆ. “ಮದುಮಗ” ಮದುವಳ್ತಿ ಮಾಲಿ ಹಾಕೋಕೇ” ಎಂದು ಬುಧವಂತ ಕೂಗಿ ಹೇಳಿದಾಗ ತುಳಸಿ ಮಾಲೆಯನ್ನು ಪರಸ್ಪರರು ಬದಲಾಯಿಸಿಕೊಳ್ಳುತ್ತಾರೆ. ಈಗ ಹೂವಿನ ಹಾರ ಬಂದರೂ ತುಳಸಿ ಆಗೇರರಿಗೆ ಶ್ರೇಷ್ಠ. ತುಳಸಿ ಮಾಲೆಯನ್ನು ಹೆಣ್ಣು ಮಕ್ಕಳೇ ತಯಾರಿಸುತ್ತಾರೆ.

ಬುಧವಂತ ಹಾಗೂ ಕೋಲಕಾರನ ಸಮಕ್ಷಮದಲ್ಲಿ ವರ ವಧುವಿನ ಕೊರಳಿಗೆ ’ಗುಂಟಕಿ ಮಣಿ’ (ಮಾಂಗಲ್ಯ)ಯನ್ನು ಕಟ್ಟುತ್ತಾನೆ. ಈ ಗುಂಟಕಿಮಣಿ ಸರವನ್ನು ವರನ ಮನೆಯಲ್ಲಿ ತಯಾರಿಸಲಾಗುತ್ತದೆ. ವರ ಐದುಮಣಿಯನ್ನು ಪೋಣಿಸಿದರೆ ಮುತ್ತೈದೆಯರು ಉಳಿದ ಮಣಿಗಳನ್ನು ಪೋಣಿಸುತ್ತಾರೆ. ಅಕ್ಷತೆ ವಧುವರರ ತಲೆಯ ಮೇಲೆ ಬೀಳುತ್ತಿದ್ದಂತೆ ತೆರೆ ಸರಿಯುತ್ತದೆ. ವಧುವಿನ ತಂದೆ ವಧುವರರ ಕೈ ಜೋಡಿಸಿ ಹಾಲು ಇಲ್ಲವೆ ತುಳಿಸಿ ನೀರನ್ನು ಹಸ್ತಗಳ ಮೇಲೆ ಎರೆದು ಧಾರೆ ಎರೆದುಕೊಡುತ್ತಾನೆ. ಆಗ ತಾಯಿ ತಂದೆಯ ಹಸ್ತವನ್ನುಮುಟ್ಟಿ ಸಹಭಾಗಿತ್ವವನ್ನು ಪಡೆಯುತ್ತಾಳೆ. ಆಗಲೇ ಹೆಣ್ಣು ಗಂಡಿನ ಪ್ರಥಮ ಮುಖದರ್ಶನ.

ಧಾರೆಯೆರೆಯುವಾಗ ಉಪಸ್ಥಿತರಿದ್ದವರಿಗೆ ವೀಳ್ಯ ತಾಂಬೂಲ ನೀಡಿ (ಗೋಧೂಳಿ ಶಾಸ್ತ್ರ) ವಧುವರರಿಗೆ ಉಡುಗೊರೆಯನ್ನು ನೀಡಲಾಗುತ್ತದೆ. ಪಾಯಸದ ಊಟ ಸಮಾರಂಭ ನಡೆಯುತ್ತದೆ.

ಆಗೇರರ ಮದುವೆಗಳಲ್ಲಿ ಹೆಚ್ಚಾಗಿ ’ಗೋಧೂಳಿ’ ಲಗ್ನದಲ್ಲಿಯೇ ನಡೆಯುತ್ತಿದ್ದವು. ಪುರೋಹಿತರಿಂದ ಮುಹೂರ್ತ ಕೇಳಿದ ಇವರು ಗೋವು ಧೂಳೆಬ್ಬಿಸುತ್ತ ಕೊಟ್ಟಿಗೆಗೆ ಬರುವ ಸಂದರ್ಭವನ್ನೇ (ಹೊತ್ತು ಕಂತುವ ಸಮಯ) ಶುಭ ಮುಹೂರ್ತವಾಗಿಸಿಕೊಂಡರು. ಬಹುಶಃ ಮೊದಲು ಗೋವಳರೆಂದೇ ಗುರುತಿಸಲ್ಪಡುವ ಇವರ ಗೋಭಕ್ತಿಯನ್ನುಇಲ್ಲಿ ಕಾಣಬಹುದು.

ಧಾರೆಯ ಮರುದಿನದ ಕಾರ್ಯಗಳು:

ಬಳುವಳಿ: ಧಾರೆಯ ಮರುದಿನ ದಿಬ್ಬಣ ಗಂಡಿನ ಮನೆಗೆ ಹೊರಡುವಾಗ ತಂದೆತಾಯಿ ಹೆಣ್ಣೋಪ್ಪಿಸಿ ನೀಡುವ ಬಳುವಳಿಯೇ ಜನಸಾಮಾನ್ಯರ ಮಾತಿನಲ್ಲಿ ’ಬಳ್ಳುಳ್ಳಿ’; ಆಗಿದೆ. ಇಲ್ಲಿ ತಾಟು, ತಂಬಿಗೆ, ಕೊಡ ಕೊಡುತ್ತಾರಾದರೂ ಸಸ್ಯಗಳನ್ನು ಕೊಡುವುದೇ ಇಲ್ಲಿಯವಿಶೇಷ. ತೆಂಗು, ಅಡಿಕೆ, ಬಾಳೆಯ ಸಸ್ಯಗಳನ್ನು ಮಗಳಿಗೆ ಉಡುಗೊರೆಯಾಗಿ ಕೊಡುವುದೇ ಇಲ್ಲಿಯ ವಿಶೇಷ. ಗಂಡಿನ ಮನೆಯಲ್ಲಿ ಇದು ’ಬಳುವಳಿ ಸಸಿ’ ಎಂದೇ ಕರೆಯಲ್ಪಡುತ್ತದೆ.

ಅದರ ಹಕ್ಕು ಅವಳದೇ ಆದುದರಿಂದ ಕೃಷಿ ಸ್ತ್ರೀ ಮೂಲವಾದದ್ದು ಎನ್ನುವುದನ್ನು ಇಂದಿಗೂ ಉಳಿಸಿಕೊಂಡು ಬಂದಿರಬಹುದು.

ಹೆಣ್ಣು ತುಂಬಿಸಿಕೊಳ್ಳುವುದು: ವರನ ಮನೆಗೆ ಬಂದಾಗ ಹೆಣ್ಣಿನ ಕಡೆಯವರು ಗಂಡಿನ ಕಡೆಯವರೊಂದಿಗೆ ಬರದೆ ಪ್ರತ್ಯೇಕ ದಿಬ್ಬಣವೇ ಬರುವುದು ಆಗೇರರ ವಿಶೇಷ. ಗಂಡಿನವರು ಬೆಲ್ಲ ನೀರು ನೀಡಿ ಸ್ವಾಗತಿಸಿದ ನಂತರ ತಳಿಗೆ ಬದಲಾಯಿಸಿಕೊಂಡ ಮೇಲೆ ಹೆಣ್ಣು ಗಂಡಿನವರ ಸಮಕ್ಷಮದಲ್ಲಿ ಹೆಣ್ಣನ್ನು ಮನೆ ತುಂಬಿಸಿಕೊಳ್ಳುತ್ತಾರೆ.

ಹೊಸ್ತಿಲಾಚೆ-ಬಾಳೆ  ಎಲೆಯಲ್ಲಿಟ್ಟು ಅಕ್ಕಿಯನ್ನು ತುಳಿದು, ಬಲಗಾಲು ಮುಂದಿಟ್ಟು, ತಐಇಯ ಮನೆಯಲ್ಲಿ ಮಡಿಲು ತುಂಬಿದ ಅಕ್ಕಿಯನ್ನು ಮುಂದೆ ಚೆಲ್ಲುತ್ತ, ಅಕ್ಕಿಯ ಮೇಲೆ ವಧು ನಡೆದು ವಧುಗೃಹಪ್ರವೇಶ ಮಾಡುವುದು ಆಗೇರರ ವಿಶೇಷ ಆಚರಣೆಯೇ ಆಗಿದೆ. ಅತ್ತೆ ಹಾಗೂ ಹೆಂಗಳೇಯರೇ ಎದುರಾಗಿ ಸೊಸೆಯನ್ನು ಮನೆ ತುಂಬಿಸಿಕೊಳ್ಳುತ್ತಾರೆ.

ಹೆಣ್ಣು ತಾಯಿಯ ಮನೆಯ ಭಾಗ್ಯಲಕ್ಷ್ಮಿಯನ್ನು (ಮಡಿಲ ಅಕ್ಕಿ) ಗಂಡನ ಮನೆಗೂ ತಂದು ಸುರಿದಳು ಎನ್ನುವುದರ ಸಂಕೇತವೆಂದು, ಕ್ಷೇತ್ರಕಾರ್ಯದಲ್ಲಿ ಸಿಕ್ಕ ವೃದ್ಧ ಮಹಿಳೆಯರು ಹೇಳಿದರು. ಒಟ್ಟಿನಲ್ಲಿ ಮನೆ ಬೆಳಗುವವಳು ಮನೆಗೆ ಸುಖ ಸಮೃದ್ಧಿ ತರುವವಳು ಹೆಣ್ಣು ಎಂದುಕೊಳ್ಳುವ ಆಗೇರರಲ್ಲಿ ಸ್ತ್ರೀ ಪ್ರಾಧಾನ್ಯತೆಯ ಅಂಶ ಅಭಿವ್ಯಕ್ತವಾಗುತ್ತದೆ.

ಹೋಂಕಳಿ ಆಡುವುದು(ಓಕುಳಿ): ಆಗೇರರಲ್ಲಿ ಧಾರೆಯ ಸಂದರ್ಭದಲ್ಲಿ ವಧುವರರು ಪರಸ್ಪರ ನೋಡುವುದ ಹೀಗಾಗಿ ಅವರಲ್ಲಿ ಪರಸ್ಪರ ನೋಟ, ಸ್ಪರ್ಶ ಕಲೆತು ಪರಸ್ಪರ ಪರಿಚಿತರಾಗಬೇಕು, ಅನುರಾವರ್ಧನೆ ಆಗಬೇಕು ಎನ್ನುವ ಹಿರಿಯರ ಹುನ್ನಾರವೇ ಈ ಹೋಂಕುಳಿ ಆಡುವುದುರ ಉದ್ದೇಶವಿದ್ದ ಹಾಗಿದೆ.

ಬಾಸಿಂಗ-ತೊಂಡ್ಲ ಕಳಚಿದ ಮೇಲೆ ಸ್ನಾನ ಮಾಡಿಸಿ ವಧುವರರನ್ನು ಹೋಂಕಳಿಗೆ ಕೂಡ್ರಿಸುತ್ತಾರೆ. ಅನ್ನ ಬಸಿಯುವ ’ವರಗಿ’(ಕಟ್ಟಿಗೆಯ ಬಾನಿ)ಯಲ್ಲಿ ತೆಗರದ ನೀರು ತುಂಬಿ ಮದುಮಗನ ಧಾರೆ ಉಂಗುರ (ಹೆಣ್ಣಿನ ಕಡೆಯವರು ತೊಡಿಸಿದ ಬೆಳ್ಳಿ ಉಂಗುರ) ವನ್ನು ವೀಳ್ಯದೆಲೆಯಲ್ಲಿ ಸುತ್ತಿ ಬುಧವಂತ ಹಾಕುತ್ತಾನೆ. ತಕ್ಷಣ ಕೈ ಹಾಕಿ ಆರಿಸಬೇಕು. ಮೊದಲು ಹೆಣ್ಣು ಆಯ್ದುಕೊಂಡರೆ, ಹೆಣ್ಣಿನ ಗೆಲುವು, ಗಂಡು ಆಯ್ದು ಕೊಂಡರೆ ಗಂಡಿನ ಗೆಲುವು. ಐದು ಬಾರಿ ನಡೆಯುವ ಇದು ಬಹಳ ಜಿದ್ದು ಹಾಗೂ ಸಂಭ್ರಮದಿಂದ ನಡೆಯುತ್ತದೆ. ಗಂಡಿಗೇ ಗೆಲುವಾಗಬೇಕೆಂದು ಗಂಡಿನ ಕಡೆಯುವರ ಒಳಗಿನ ಅಭಿಲಾಷೆಯಾಗಿದ್ದರೂ ಇದು ವಧುವರರ ಸಂಕೋಚ ಪರಿಹಾರದ ವಿನೋದಗಳಾಗಿವೆ.

ಮುಂದೆ ನಡೆಯುವ ಇನ್ನೊಂದು ಆಚರಣೆ ಮಾತ್ರ ಆಗೇರರಲ್ಲಿ ಇರುವ ಸ್ತ್ರೀ ಸಮಾನತೆಯ ದೃಷ್ಟಿಕೋನದ ನಿದರ್ಶನವಾಗಿದೆ.

ಓಕುಳಿಯಾಟದ ನಂತರ ಬುಧವಂತ ದಂಪತಿಗಳ ಸೆರಗಿಗೆ ಗಂಟು ಹಾಕಿ ಎತ್ತಿನ ಜೋಡಿಗಳಂತೆ ಮಾಡಿ ಲುಕ್ಕಿ ಬರ್ಲು ಹಿಡಿದುಅತ್ತಿ ತೋರಣಕ್ಕೆ ಏಳು ಸುತ್ತು ಹಾಕಿಸುತ್ತಾನೆ. ಇದು ಮುಂದುವರಿದ ಜನಾಂಗಗಳಲ್ಲಿ ಇರುವ ಸಪ್ತಪದಿಗೆ ಸಮಾನವಾಗಿದೆ. ಆದರೆ ಸಪ್ತಪದಿಯಲ್ಲಿ ಗಂಡನನ್ನು ಅನುಸರಿಸಿ ಹೆಣ್ಣು ಹೋಗುತ್ತಾಳೆ. ಇಲ್ಲಿ ಮಾತ್ರ ಸಮ ಜೋಡಿಯಾಗಿಯೇ ಸಾಗಬೇಕು.

ಇದು ಸಾಮಾನ್ಯವಾಗಿ ಕೃಷಿ ಕೂಲಿಯನ್ನು ನಂಬಿದ ಇವರ ಉಳುಮೆಯ ಪ್ರೀತಿಯನ್ನು ತೋರಿಸುವುದುರ ಜೊತೆಗೆ ಸಂಸಾರದ ಸುಖ ಇಬ್ಬರ ಸಮ ಹೆಜ್ಜೆಯಲ್ಲಿ ಮಾತ್ರ ಇದೆ,ಬದುಕಿನುದ್ದಕ್ಕೂ ಜೊತೆಯಾಗಿ ದುಡಿದು ತಿನ್ನಬೇಕು, ಸುಖ-ದುಃಖದಲ್ಲಿ ಸಮಭಾಗಿಗಳಾಗಿ ಬದುಕಬೇಕು ಎನ್ನುವ ಭಾವವಿದೆ.ವಂಶಭಿವೃದ್ಧಿಯ ಮುನ್ಸೂಚನೆಯೂ ಇದರಲ್ಲಿದೆ, ಸಂಸಾರದಲ್ಲಿ ಸ್ತ್ರೀಗೆ ಸಮಾನ ಸ್ಥಾನ ಕೊಟ್ಟ ಆಗೇರರಸಂಸ್ಕೃತಿಯ ಅರ್ಥಪೂರ್ಣ ನಿಲುವು ಸ್ಪಷ್ಟವಾಗುತ್ತದೆ.

ಮತ್ತೆ ಸ್ನಾನ ಮಾಡಿಸಿ, ಮುತ್ತೈದೆಯರು ಮಡ್ಲ ತುಂಬಿ,ಸೇಸೆ (ಅಕ್ಷತೆ) ಹಾಕುವುದರೊಂದಿಗೆ ಸಿಹಿ ಊಟೋಪಚಾರ ನಡೆಯುತ್ತದೆ.

ಮದುವೆಯಾದ ಐದನೇ ದಿನಕ್ಕೆ ತೋರಣ ತೆಗೆಯುವ ಹಾಗೂ ತಳಿಗೆ ವಿಸರ್ಜನೆ (ಬಾವಿಯಲ್ಲಿ) ಮಾಡುವ ಕಾರ್ಯ ನಡೆಯುತ್ತದೆ. ಮಾಂಸ. ಶೇಂದಿಯೊಂದಿಗೆ ’ನೆಂಟರೂ’ ನಡೆದು ಮದುವೆಯ ಚಡಂಗಗಳು ಮುಗಿಯುತ್ತವೆ.

ಇಡೀ ಮದುವೆಯಲ್ಲಿ ಹೆಣ್ಣಿನ ಸಹಭಾಗಿತ್ವವಿಲ್ಲದೆ ಏನೂ ನಡೆಯುವುದಿಲ್ಲ. ಅಲ್ಲದೆ ಮದುವೆಯುದ್ಧಕ್ಕೂ ಜೀವ ಸಂಕೇತವಾದ ಫಲವಂತಿಕೆ ಸಮೃದ್ಧಿಯ ಸಂಕೇತವಾದ ಅಕ್ಕಿ, ತೆಂಗು, ಅಡಿಕೆ, ಬಾಳೆ, ಅತ್ತಿ, ಕಳಶ, ಕುಂಭಗಳು ಬಳಸಲ್ಪಡುತ್ತವೆ.