ಕಂ || ಶ್ರೀಜನ್ಮನಿಳಯನಖಿಲಮ
ಹೀಜೀವನಮೂರ್ತಿ ವಾಹಿನೀಪ್ರಿಯನೇಂ ರಾ
ರಾಜಿಸಿದನೊ ಶರನಿಧಿಯೆನೆ
ರಾಜಸುತಂ ಜೈನಜನಮನೋಹರಚರಿತಂ || ೧

ತನ್ನಯ ತನಯನನಮಳಕ
ಳೋನ್ನತನಂ ನೋಡಿ ವಾರ್ಧಿ ಪೆರ್ಚುವ ತೆಱದಿಂ
ತನ್ನಯ ತನಯನನಮಳಕ
ಳೋನ್ನತನಂ ನೋಡಿ ಪೆರ್ಚುವಂ ನೃಪತಿಲಕಂ || ೨

ವ || ಅಂತನೂನಪ್ರಮೋದಾಲಿಂಗಿತಾಂತರಂಗನಾಗಿರ್ದೊಂದು ದಿವಸಮಜಿತಂಜಯಮಹಾರಾಜಂ ಯುವರಾಜಂಬೆರಸು ನಿಜಭುಜಾಕ್ರಾಂತಪ್ರತ್ಯಂತ ರಾಜಸಮಾಜಂಬೆರಸು ಪ್ರೇಷಿತಾ ಶೇಷಪ್ರಕೃತಿಸಮೇತಸಚಿವಸಂದೋಹ ಸಂದರ್ಶನಾರ್ಥಂ ಸರ್ವಾವಸರಸಭಾಮಂಟಪ ದೊಳಂತಃಪುರಾಂಗನಾಜನಸಂಗತಖಿಳಪ್ರಧಾನಪರಿವಾರಪರಿಕೃತನುಮಾಗಿರೆ –

ಮ || ಸ್ರ || ಸಿರಿಯಂ ಮಂದಾರಮಂ ಚಂದ್ರನನಮಲಮಣಿಶ್ರೇಣಿಯಂ ಮಾಣದಂತಃ
ಕರಿಸಿರ್ದಾಪೂರ್ಣದುಗ್ಧಾರ್ಣವದೊರೆಗೆಣೆವಂದತ್ತು ಮಾದೇವಿಯಂ ಭೂ
ವರನಂ ತತ್ಪುತ್ರನಂ ಸೇವಕಸಕಲನೃಪಾನೀಕಮಂ ಕೂಡೆ ಗರ್ಭೀ
ಕರಸಿರ್ದುದ್ದಾಮಸೌಧದ್ಯುತಿಭರಿತಹರಿದ್ವ್ಯೂಹಮಾಸ್ಥಾನಗೇಹಂ || ೩

ವ || ಅಂತೊಡ್ಡೋಲಗಂಗೊಟ್ಟಿರ್ಪಿನೆಗಂ –

ಮ || ವಿ || ಭರದಿಂದಂಬರವೀಧಿಯೊಳ್ ನಿಜವಿನೋದಾಪಾದನೋದ್ಯೋಗದಿಂ
ಬರುತುಂ ಕಣ್ಬೊಲನಾಗೆ ಚಂಡರುಚಿಯೆಂಬೊಂ ದೈತ್ಯನತ್ಯಂತದು
ರ್ಧರಜನ್ಮಾಂತರವೈರದಾರುಣವನಂ ಭೂಪಾಂತಿಕಾಸೀನನಾ
ಗಿರೆ ಕಂಡಂ ಶನಿ ಕಾಣ್ಬವೊಲ್ ಕುವರನಂ ವಿಸ್ಫಾರತಾರೇಕ್ಷಣಂ || ೪

ವ || ಕಾಣಲೊಡಮಕ್ಷಿಶ್ರುತಿಯಂ ಕಂಡ ತಾರ್ಕ್ಷ್ಯನಂತೆ ರೂಕ್ಷಭಾವಮನಪ್ಪುಕೆಯ್ದನಿತಱೊಳಂನಿಲ್ಲದೆ –

ಚಂ || ಕುದುಕುಳಿ ದಾನವಂ ನಿಜವಿಮೋಹನವಿದ್ಯದಭೇದ್ಯಶಕ್ತಿಯಿಂ
ದೊದವಿಸೆ ಮೋಹಮಂ ಹೃದಯದೊಳ್ ಸಭೆಗಾಸಭೆ ತಾಂ ಬೞಿಕ್ಕ ಚಿ
ತ್ರದ ಸಭೆಯಂತೆ ನೋಡುತಿರೆ ಬಂದು ಕುಮಾರನನೆತ್ತಿಕೊಂಡು ಮಾ
ಣದೆ ಗಗನಕ್ಕೆ ಮತ್ತೊಗೆದನುರ್ವಿಗೆ ಬಿೞ್ದ ಸಿಡಿಲ್ ಸಿಡಿಲ್ವವೊಲ್ || ೫

ವ || ಅಂತು ಭಾನುವಂ ಸ್ವರ್ಭಾನು ಪಿಡಿದುಯ್ವಂತೆ ಗಗನಮಾರ್ಗದಿನುಯ್ವನ್ನೆಗಮಿತ್ತಲ್ –

ಚಂ || ದನುಜನ ಮಾಯೆಯೊಂದಿನಿಸು ಬೇಗದಿನೊರ್ಮೆಯೆ ಮಾಯಮಾಗೆ ಚೇ
ತನವಡೆದಿಂದ್ರಜಾಲದ ವಿಮೋಹಮೊ ಮೇಣಿದು ಮೂರ್ಚ್ಛೆಯೊಂದು ಸಂ
ಜನನಮೊ ನಿದ್ರೆಯೞ್ತರಮೊ ಮುನ್ನಱಿವಂತುಟುಮಲ್ಲದೆಂದು ತ
ಜ್ಜನಮನಿತುಂ ಮನಂಬಸುತುಮಿರ್ದುದು ನಿಟ್ಟಿಸಲಾರದೇನುಮಂ || ೬

ವ || ಆಗಳರಸಂ ವಿಸ್ಮಯರಸಾಕುಳಮನಸ್ತಾಮರಸನಾಗಿ ನೋೞ್ಪನ್ನೆಗಂ –

ಕಂ || ಇನನುದಯಿಸಿ ಪೋದುದಯಾ
ವನಿಧರಚೂಳಿಕೆವೊಲಿರ್ದುದಂ ಕಂಡೆರ್ದೆ ಪ
ವ್ವನೆ ಪಾಱಿದತ್ತು ನಿಜನಂ
ದನನಿಲ್ಲದ ಬಲದ ಕೆಲದ ಹೇಮಾಸನಮಂ || ೭

ವ || ಅನಂತರಂ –

ಕಂ || ದನುಜಾಮರಖಚರರೊಳಾ
ವನಾನುಮೊರ್ವಂ ವಿಮೋಹಮಂ ಪುಟ್ಟಿಸಿ ಸಂ
ಜನಿತಭವಬದ್ಧರೋಷಂ
ತನಯನನೆೞೆದುಯ್ದನೆಂದು ವಿಹ್ವಳನಾದಂ || ೮

ವ || ಆಗಲೊಡಂ –

ಕಂ || ಕ್ಷಿತಿಪತಿಯ ಧೈರ್ಯಗುಣಪ
ರ್ವತಮಂ ತಱಗೆಲೆಗಳೊಟ್ಟಿಲಂ ತೂಳ್ದುವವೋಲ್
ಅತಿವೇಗದೆ ಪಾಱಿಸಿದುದು
ಸುತವಿರಹಪ್ರಳಯಪರುಷಪವನಾಪಾತಂ || ೯

ವ || ಅಂತು ವಿಗತಪುರಷಾಕಾರಂ ಭಾಗ್ಯಾನರ್ಥವಜ್ರಪಾತಸಂತಪ್ಯಮಾನ ಮಾನಸನುಂ ಅವಿರಳಗಳದಶ್ರುಬಿಂದುಸಂದೋಹಮಿಶ್ರಿತಶ್ಮಶ್ರುಲೇಖನುಂ ಅನ್ಯೂನಮನ್ಯೂದ್ಗತೋಚ್ಛೂನಕಂಠನಾಳ ಸಂಕಟಪ್ರಕಟಿತನಿರ್ಯನ್ನಿಶ್ವಾಸನುಮಾಗಿ –

ಉ || ಮಾಯ್ದ ವಿಧಾತ್ರನೆನ್ನಣುಗಿನಗ್ರತನೂಜನನಿಂತಗಲ್ಚಿ ಕೊಂ
ಡುಯ್ದನಪಾರಶೋಕರಸಪೂರದೊಳೀಸಭೆಯಂ ನಿರಾಕುಳಂ
ತೊಯ್ದನಡುರ್ತುಗುರ್ವಿದನದಲ್ತೆರ್ದೆ ನಿಚ್ಚನರಲ್ಚೆ ತನ್ನೊಳಂ
ಪೊಯ್ದನಿದರ್ಕೆಕೃತ್ಯವೆನಗೇನೆನುತುಂ ತಳೆದಂ ಪ್ರಳಾಪಮಂ || ೧೦

ಚಂ || ಬಳೆಯಿಸೆ ಬಾಸುಳಂ ಬಸಿಱೊಳೈದೆ ಕರಾಂಗುಲಿಗಳ್ ಕಪೋಲದೊಳ್
ಬಳೆಯಿಸೆ ಬಾನಲಂ ಸುರಿವ ಬಾಷ್ಪಜಳಂ ಕರುಣಾರ್ದ್ರಹಾರವಂ
ಬಳೆಯಿಸೆ ಬಾಯ ಬತ್ತುಗೆಯನಿಂತೆರ್ದೆಗೆಟ್ಟೞುತುಂ ಮೃಣಾಳಕೋ
ಮಳತನು ಬಿೞ್ದಳಂದಜಿತಸೇನೆ ನೃಪಾಲಪದಾಬ್ಜಮೂಲದೊಳ್ || ೧೧

ವ || ಅದಂ ಕಾಣಲೊಡಂ ದ್ವಿಗುಣೀಭೂತಶೋಕೋದ್ರೇಕನಾಗಿ –

ಕಂ || ತ್ವಜ್ಜನನಿಯ ಹಾರಮನಾಂ
ತುಜ್ಜಳಿಪ ಶಿರೋಧಿ ಹಾರವಮನನವರತಂ
ಕಜ್ಜಳಮಂ ತಳೆವಕ್ಷಿ ಗ
ಳಜ್ಜಳಮಂ ತಾಳ್ದೆ ತನಯ ನೀಂ ಸೈರಿಪುದೇ || ೧೨

ಸುತ ನಿನ್ನ ಚಂದ್ರವದನ
ವ್ಯತಿರಿಕ್ತತೆಯಿಂ ಸಭಾನಭೋವಳಯಂ ಸಂ
ವೃತವಾಯ್ತು ತಮದಿನದು ಸ
ಮ್ಮತಮೊಸರ್ದುಪುದೇಕೆ ನಯನಶಶಿಕಾಂತಂಗಳ್ || ೧೩

ಘನಶೋಕಘನಾಗಮಜಳ
ಜನಿತೋತ್ಕರ್ಷಮನನೂನಬಾಂಧವ ಜನಿತಾ
ಶ್ರುನದೀಪೂರಮನುಡುಗಿಪು
ದಿನತೇಜ ಪಸಂತದಂತೆ ಬಂದೀಕ್ಷಣದೊಳ್ || ೧೪

ಇರದಧಿಕಭ್ರಾಂತತೆಯಂ
ಧರಿಯಿಸಿ ಕಡುಗಂದಿ ಜಿನುಗುವಾಱಡಿಯಾದಂ
ತಿರೆ ತೋರ್ಪೀಪರಿಜನಮಂ
ಹರಿಸದೊಳೊಡಗೂಡಿ ತೋಱು ಚರಣಾಂಬುಜಮಂ || ೧೫

ಎನಗೆ ಸುತ ಸುಜನವತ್ಸಲ
ನೆನವಿಗೆ ಗೋಚರನೆಯಾಗಿ ಪೋಗದೆ ಮತ್ತಂ
ದಿನ ತೆಱದೆ ನಯನಗೋಚರ
ನೆನಿಪ್ಪುದಂ ಪೇೞ ಪುಣ್ಯತರವಾಸರಮಂ || ೧೬

ವ || ಎಂದು ಕಾಣದೆ –

ಉ || ಆರ ಮೃದೂಕ್ತಿಯಂ ಬಯಸಿ ಕೇಳ್ದು ತನೂಜ ಮದೀಯಕರ್ಣದೊಳ್
ಪೂರಿಪೆನಿಂ ರಸಾಯನಮನಾರ ಮುಖೇಂದುವನೊಲ್ದು ನೋಡಿ ವಿ
ಸ್ತಾರಿಪೆನೀ ಮದಕ್ಷಿಗೆ ಸುಧಾರಸಪೂರಮನೆಂದು ತಾರಹಾ
ರಾರವದಿಂದವಳ್ ತಳವಗಲ್ದಳೊಱಲ್ದನಿಳಾತಳಾಧಿಪಂ || ೧೭

ವ || ಅನ್ನೆಗಂ –

ಕಂ || ಶೋಕಾಗ್ನಿಭರದಿನರಸಂ
ವ್ಯಾಕುಳನಾದಪ್ಪನಿನಿತಗಲ್ಚುವೆನಾನೆಂ
ಬೀಕರುಣದಿಂದೆ ಬಂದವೊ
ಲಾಕಳಿಸಿತ್ತಂದತುಚ್ಛಮೂರ್ಚ್ಛಾವೇಗಂ || ೧೮

ಚಂ || ಉಸಿರೆಲರೊಯ್ಯನೊಯ್ಯನೊಳಸಾರ್ದುಡುಗುತ್ತಿರೆ ಲೋಚನದ್ವಯಂ
ನಸುಮುಗುಳ್ದಶ್ರು ಪೊಣ್ಮದಿರೆ ಹಸ್ತಪದಂಗವಿರ್ದುವಿರ್ದವೋಲ್
ಮಿಸುಕದೆ ಪೊಂಗುಗೆಟ್ಟಿರೆ ತದಂತರದೊಳ್ ಬಿಡದನ್ನೆಗಂ ವಿಡಂ
ಬಿಸಿದುದು ಮೂರ್ಚ್ಛೆಯಾರುಮನದಿರ್ಪದೆ ಪುತ್ರವಿಯೋಗವಿಕ್ಲಬಂ || ೧೯

ವ || ಅನಂತರಮಂತವುರದ ಬಾಲೆಯರ್ ಬೀಸುವ ಬಾೞೆಯೆಲೆಯ ತಾಳವೃಂತದ ತಣ್ಣೆಲರ ತಾರ್ಮುಟ್ಟಿನೊಳಳವಿದಪ್ಪಿದಾಕುಳತೆಯಿಂ ಬಂಧುಜನಂಗಳ್ ಕೆದಱೆ ಮಂಜಿನಂತೆ ಪಸರಿಸುವಭಿಷೇಕದ ಪುಡಿಯ ಪೊರೆಹದೊಳಂ ಕಳವಳಿಸಿ ಪರಿಜನಂಗಳ್ ತಳಿವ ಪೀಲಿಗರದಾಲಿಗುಡುವ ನೀರ ತೋರವನಿಯ ತಂದಲೊಂದುಗೆಯೊಳಮೆಂತಾನುಂ ಹಮ್ಮದದಿನಗಲ್ದು ತನ್ನವಸ್ಥಾಂತರಕ್ಕೆ ತಾನೆ ಬೆಕ್ಕಸಂಬಡುತ್ತಿರ್ಪನ್ನೆಗಂ –

ಮ || ಸ್ರ || ದೆಸೆಯಂ ಬಾಲಾತಪಂ ಬಾಸಣಿಸಿದುದೆನೆ ತಳ್ಪೊಯ್ಯೆ ದೇಹಾಂಶುವಂದಾ
ಗಸದಿಂದುಗ್ರತ್ವಮಂ ಬಿಟ್ಟವನಿಪತಿಯನಾಶ್ವಾಸಿಸಲ್ ಬಂದಪಂ ತಾ
ನೆ ಸಹಸ್ರೋಸ್ರಂ ದಲೆಂಬಂದದಿನಿೞಿದು ತಪೋಭೂಷಣಾಭಿಖ್ಯನೊರ್ವಂ
ರಿಸಿ ಬಂದಂ ಚಾರಣಂ ಕಾರಣವಱಿದಿನನೆಂದೆಂಬಿನಂ ರಾಜಲೋಕಂ || ೨೦

ವ || ಅಂತಾಸ್ಥಾನವೆಲ್ಲಂ ಕೌತುಕಂಬಡುವನ್ನಮೆಯ್ದೆ ಬರ್ಪುದುಂ –

ಕಂ || ವಾಸರಮುಖದರ್ಶನದಿಂ
ದೋಸರಿಸುವ ಚಕ್ರವಾಕದೆರ್ದೆಯದವೞಲಂ
ತಾಸಮಯದೊಳವನಿಪನೞ
ಲೋಸರಿಸಿದುದಾ ಮುನೀಂದ್ರಮುಖದರ್ಶನದಿಂ || ೨೧

ಮಱೆಯೆ ಸುತಶೋಕಮಂ ಮನ
ದೆಱಕದಿನಿದಿರ್ವೋಗಿ ಯೋಗಿಪದತಳಮಿಳೆಯಂ
ನೆಱೆ ಮುಟ್ಟದ ಮುಂದುಗುಲದ
ಸೆಱಗಂ ಪಡಿಪಾಸಿ ಮೊೞ್ಗಿದಂ ಮುನ್ನಡಿಯೊಳ್ || ೨೨

ವ || ಅಂತು ಭಕ್ತಿಭರದಿನೆಱಗುವಂತೆಱಗಿ ಕೈಗೊಟ್ಟೊಡಗೊಂಡು ಬಂದು ತಾನೆತಂದಿಕ್ಕಿದ ಪವಿತ್ರವೇತ್ರಾಸನದೊಳಿರಿಸಿ ವೈಹಾಯಸಮಾರ್ಗದಿನಸ್ಪೃಷ್ಟಪಾಂಶುವಾದೊಡಂ ಶಾಂತಿ ಧಾರಾರ್ಥಮಾಗಿ –

ಕಂ || ಶ್ರೀಪದಮಂ ಹರ್ಷಾಶ್ರು
ವ್ಯಾಪಿತಜಳದಿಂದೆ ತೊಳೆದು ತಲೆಯೊಳ್ ತಳಿದಾ
ಭೂಪತಿ ನಲಿದಂ ಗತಸಂ
ತಾಪಂ ಮುನಿಜನದ ಮೈಮೆ ಮಱೆಯಿಸದೇನಂ || ೨೩

ವ || ಅನಂತರಂ ಸಸಂಭ್ರಮಂ ಪುರೋಹಿತೋಪನೀತಬಹುವಿದ್ಯಾರ್ಘ್ಯಪೂಜಾಸಮಾಜಂಗಳಿಂದಮರ್ಚಿಸಿ –

ಕಂ || ಜೀವಸಮಸುತವಿಯೋಗದೊ
ಳಾವರಿಸಿದ ಖೇದವಿನಿತು ಪಿರಿದಲ್ತೆನೆ ಮ
ತ್ತಾವರಿಸಿದುದವನಿಪನಂ
ಭೂವಿಶ್ರುತಯೋಗಿನಾಥಯೋಗಾಹ್ಲಾದಂ || ೨೪

ವ || ಆಗಳ್ ಮಹಾಪ್ರತೀಹಾರಂ ಪಾಸಿದುತ್ತರೀಯವಸನದೊಳ್ ಕುಳ್ಳಿರ್ದು –

ಕಂ || ಅಮರ್ದಿಂದರ್ಘ್ಯಮನಿತ್ತಪು
ದು ಮುಖೇಂದು ಮುನೀಂದ್ರಪದನಖೇಂದುಗೆನಿಪ್ಪಂ
ತಮರೆ ದಶನಾಂಶು ನುಡಿದಂ
ಕ್ರಮದಿಂ ಪ್ರಶ್ರಯನಿಯುಕ್ತಮಧುರೋಕ್ತಿಗಳಂ || ೨೫

ಸೊಗಯಿಪ ಮನೋರಥಕ್ಕಂ
ಮಿಗಿಲೆನಿಸುವ ನಿಮ್ಮ ಬರವು ದೊರೆಕೊಂಡತ್ತಿಂ
ಜಗತೀಮಾನ್ಯಂ ಧನ್ಯಂ
ಬಗೆವೊಡೆ ಮತ್ತಾವನೆನ್ನವೋಲನ್ಯನೃಪಂ || ೨೬

ಕೃತಕೃತ್ಯತೆಯಿಂ ವಾಂಛೆಯಿ
ನತಿಶಮಭಾವನೆಯಿನೆಲ್ಲಿಯುಂ ಪ್ರೇಮಮನೂ
ರ್ಜಿತಗುಣಿ ಬಿಟ್ಟಿರ್ದುಂ ಪರ
ಹಿತದೊಳೆ ಸಲ್ವುದೆ ವಲಂ ಭವದ್ವಿಧರ್ಗೆ ನಿಜಂ || ೨೭

ವ || ಅದಲ್ಲದೆಯುಂ-

ಕಂ || ಬಂಧುವಿಯೋಗದಿನೆನಗನು
ಬಂಧಿಸಿದ ಮಹೋಪತಾಪಮದು ನೀಂ ಬರೆ ನಿ
ರ್ಬಂಧದಿನಳಱಿತ್ತದಱಿಂ
ಬಂಧುಗಳಿಂ ನೀನೆ ಬಂಧು ಜಗತೀಬಂಧೂ || ೨೮

ವಿಗತಾಳೋಕಂ ಶಿವಪಥ
ವಿಗಳಿತಮೆನಿಸಿದ ಜನಕ್ಕೆ ಕೃತಸನ್ಮಾರ್ಗಾ
ನುಗತೋಪದೇಶದಿಂದೀ
ಜಗದೊಳ್ ನೀನಾದೆ ನಾಥ ಕಣ್ಣುಂ ಗತಿಯುಂ || ೨೯

ವ || ಎಂದು ನುಡಿದು ವಿನಯವಿನಮಿತನಾಗಿರ್ದ ಜನಪತಿಯು ಮುನಿಪತಿಯಿಂತೆಂದಂ-

ಉ || ಬೋಧದಿನಿಂದು ಭೂಭುಜ ಭವಾಂತರವೈರವಶಪ್ರಕಾಶಿತ
ಕ್ರೋಧನೆನಿಪ್ಪ ದಾನವನಿನಾದ ಸುತಾಹೃತಿಯೊಳ್ ಪೊದೞ್ದ ನಿ
ನ್ನಾಧಿಯನಾನಭೀಕ್ಷಿಸಿ ಗುಣಪ್ರಣಯಿತ್ವದೆ ಬಂದೆನಲ್ತೆ ಸಂ
ಬೋಧಿಸಲೆಂತುಮೊಳ್ಗುಣಮೊಡರ್ಚುಗುಮಾರ ಮನಕ್ಕಮೞ್ಕಱಂ || ೩೦

ಕಂ || ಶ್ರುತುನಿಧಿ ತತ್ತ್ವಾಭ್ಯಾಸಾ
ನ್ವಿತಮತಿ ಚರಮಾಂಗಮೆನಿಪ ನಿನಗೀಜನ್ಮ
ಸ್ಥಿತಿಯಂ ಪೇೞ್ವೊಡೆ ಭೂಪತಿ
ಶತಮನ್ಯುಗೆ ಪೇೞ್ವ ತೆಱನೆ ನಾಕಶ್ರೀಯಂ || ೩೧

ಪ್ರಿಯಮಪ್ರಿಯಮೆಂಬೆರಡಱ
ವಿಯೋಗಸಂಯೋಗವೆಂಬಿವೆಲ್ಲ ಜನಕ್ಕಾ
ರಯೆ ಸಾಧಾರಣಮೆಂದ
ಲ್ತೆ ಯಥಾರ್ಥಜ್ಞರ್ ಬಿಸುಟ್ಟರೞಲೊಸಗೆಗಳಂ || ೩೨

|| ಮಾಳಿನಿ ||

ಅದಱಿನುೞಿವುದಿಂತೀದೇಹದಾಹಾವಗಾಹ
ಪ್ರದಮೆನಿಪ ವಿಷಾದೋನ್ಮಾದಮಂ ನೋೞ್ಪೊಡೆಂತುಂ
ಪುದಿದೆಡರ್ಗಳೊಳಾದುಮ್ಮಚ್ಚದಿಂ ಭೀರು ಬಾಯ್ವಿ
ಟ್ಟದಿರ್ಗುಮದಿರ್ವನೇ ಪೇೞ್ ಧೀರಚಿತ್ತಪ್ರವೃತ್ತಂ || ೩೩

ವ || ಅದಲ್ಲದೆಯುಂ-

ಕಂ || ನಂದನನ ದೆಸೆಗೆ ಪಿರಿದಾ
ನಂದಂದಾಳ್ದಿರ್ಪುದಲ್ಲಿ ನಿಲ್ಲಂ ಕೆಲವಾ
ನುಂ ದಿವಸದೊಳಗೆ ಬರ್ಪಂ
ಸಂದೆಯಮಿಲ್ಲವನ ಪುಣ್ಯಮಪ್ಪೊಡಗಣ್ಯಂ || ೩೪

ವ || ಅದೆಂತೆಂದೊಡೆ –

ಶಾ || ಷಟ್ಖಂಡಕ್ಷಿತಿನಾಥನಪ್ಪಧಿಕಪುಣ್ಯಂ ತತ್ಪ್ರಭಾಸಾದಿವಿ
ದ್ವಿಟ್ಖೇದೋದಯಹೇತುವಪ್ಪತುಳವಿಕ್ರಾಂತಂ ಸಮುದ್ಯನ್ನಿಜ
ತ್ವಿಟ್ಖಂಜೀಕೃತಸೂರ್ಯಪಾದಚಯಮಪ್ಪುದ್ದಾಮತೇಜಂ ತುರಾ
ಷಾಟ್ಖಡ್ಗೋಪಮಮಪ್ಪ ತೀಕ್ಷ್ಣತರಚಕ್ರಂ ಸಾರ್ಗುಮಿನ್ನಾತನಂ || ೩೫

ವ || ಅದುಕಾರಣದಿಂ-

ಚಂ || ಕುಳಗಿರಿಗಾವಗಂ ಪವನಬಾಧೆಯನಾ ಪವನಂಗೆ ಬಂಧನಾ
ಕುಳತೆಯನಬ್ದಿಗಗ್ನಿಭಯಮಂ ಬಿಡದಗ್ನಿಗೆ ಶೀತಭೀತಿಯ
ಗ್ಗಳಿಕೆಯನೈದೆ ಚಿಂತಿಪ ಮರುಳ್ಗೆಣೆಯಾಗದೆ ಪೋಗನಾ ಮಹಾ
ಬಳನೊಳತಿಪ್ರತಾಪನೊಳುಪಪ್ಲವಮಂ ಬಗೆವೊಂ ಮಹೀಪತೀ || ೩೬

ವ || ಎಂದು ಪೇೞ್ದಾ ಮಹಾಋಷಿ ಪರಸಿ ಭೋಂಕನೆ ಮಿಂಚಿನಂತೆ ಗಗನಕ್ಕೊಗೆದು ನಿಜವಾಸಕ್ಕೆ ಪೋಪುದುಮರಸನುಂ ಪರಿಜನಮಂ ವಿಸರ್ಜಿಸಿ ತಾನುಮರಸಿಯುಂ ತನ್ಮುನೀಶ್ವರ ದಿವ್ಯವಚನಮೃತ್ಯುಂಜಯಮಂತ್ರಸಾಮರ್ಥ್ಯಸಂಧಾರ್ಯಮಾಣಜೀವಿತರಾಗಿರ್ದರಿತ್ತಲ್-

ಉ || ಮೇರುನಗಾಗ್ರದಿಂ ಧರೆಗುರುಳ್ಚುವೆನೋ ರಸೆಯಾಂಕೆಯಪ್ಪಿನಂ
ವಾರಿಧಿಯಲ್ಲಿ ನೂಂಕುವೆನೊ ನಟ್ಟುರಿವೀವನವಹ್ನಿವಕ್ತ್ರದೊಳ್
ಪೂರಿಪೆನೋ ಕಱುತ್ತುಗಿದು ಕತ್ತಿಗೆಯಿಂದೆರಡಾಗಿ ಪೋೞ್ವೆನೋ
ನಾರಕದುಃಖಮಂ ಸೆಱೆಯೊಳೂಡುವೆನೋ ಪಲಕಾಲಮೀತನಂ || ೩೭

ವ || ಎಂದು ನಿಶಾಚರಂ ರೋಷಾವೇಶಮಾನಸಂ ಮಾನಸದೊಳೆ ಬಗೆಯುತ್ತುಂ ಪೋಗೆ ಮುಂದೊಂದು ಮಹಾಟವೀಮಧ್ಯದೊಳ್ –

ಉ || ಮೇರುವನೊತ್ತಿ ಕಿೞ್ತೊಡೆ ಪಯೋಮಯವಾಯ್ತೊ ನಭಂ ನೆಲಕ್ಕನಾ
ಧಾರತೆಯಿಂದೆ ಬಿೞ್ದುದೊ ದಿಶಾಗಜರಾಜಿಯ ವಾರಿಕೇಳಿಕಾ
ಸಾರಮೊ ಬಾಡಬಾಗ್ನಿಭಯದಿಂ ವರುಣಂ ಮಡಗಿಟ್ಟ ನೀರ ಭಂ
ಡಾರಮೊ ಭಾವಿಪಂದದೆನೆ ಕೌತುಕಮಾಯ್ತು ಮಹಾಸರೋವರಂ || ೩೮

ಕಂ || ಪಾತಾಳವರಂ ಸ್ವಾಚ್ಛಗು
ಣಾತಿಶಯದೆ ಕಾಣಲೆಯ್ದೆ ಬಂದಪುದೆಂಬೀ
ಮಾತನೊದವಿಪುದು ತಟತರು
ಜಾತಪ್ರತಿಬಿಂಬವಿಸರವಂತಾ ಸರದೊಳ್ || ೩೯

ಕಾಂತಮಧುಸಮಯಮಾಧವಿ
ಯಂತುತ್ಕಳಿಕಾನ್ವತಂ ನಭೋಮಂಡಳದಂ
ತಂತಃಕೃತಭುವನಂ ನಟ
ನಂತೆ ದಿಟಂ ಪ್ರಬಳನಕ್ರಮಕರಸಮೇತಂ || ೪೦

ವ || ಮತ್ತಮದು ವಾರಯೊಳರ್ದಿಕೊಳ್ವರಣ್ಯವಾರಣಂಗಳೊಡನೆ ಭರದಿಂ ಪೋರ್ಗಂ ಮೊಗಂ ಬುಗುವ ನೀರ ಪೇರಾನೆಗಳ ತೊಳವಿಗೆಗಳೊಳಂ ನೀರ್ಗುಡಿವೆಡೆಯೊಳ್ ಪೊಳೆವ ತಮ್ಮ ನೆೞಲಂ ಮಾರ್ಪಡೆಯೆ ಗೆತ್ತು ಎಡೆಮಡಗದೆ ಕಡುಪಿನಿಂ ಪಾಯ್ದು ಬಾಯ್ದೆಱೆದೆೞ್ದ ನೆಗೞ ಮೊಗದೊಳರ್ದಡಂಗುವ ಶಾರ್ದೂಲಸಂದೋಹಂಗಳೊಳಂ ಕಾಡಾನೆಗಳ ಕೋಡೇಱಿಂದಿಡಿದು ಕಳೆದ ಖರ್ಜೂರದ ಕಡಿಗಳಂತೆ ತಡಿದಡಿಯ ತಱುಂಬಿನೊಳ್ ಬಿಸಿಲಂಕಾಯ್ವ ಮೊಸಳೆವಿಂಡಿನ ಪಸರಂಗಳೊಳಂ ನೀರ್ವಾನಸಂ ಮೆಲ್ದು ಬಿಸುಡೆ ಪಸರಿಸುವ ತೆರೆಗೊನೆಯೊಳ್ ತೇಂಕಿ ಬರ್ಪ ಜಳಮೃಣಾಳನಾಳಮಂ ಜಳವ್ಯಾಳಮೆಂದು ಕೆಲದ ಬಿಲದಿಂ ಪಿಡಿಯಲೆಂದು ಧೀಂಕಿಡುವ ವಿಷಾಪಹಾರ ಶಾಲೂರಜಾಲಂಗಳೊಳಂ ಮೇಗೆ ನೆಗೆದಿಸುವ ಪಾವಸೆಗೊಂಡ ಪೇರಾವೆಯಂ ತಾವರೆಯ ಕೊಡೆಯೆಲೆಗೆತ್ತಱಿಯದೆಱಗಿದೊಡದು ತೆಱಂಬೊಳೆಯೆ ಬೆಚ್ಚಿಬಿಚ್ಚತಂಬಾಳಱಿ ಕಳವಳಿಪ ವಿಕಳಕುರ ವಕನಿಕರಂಗಳೊಳಂ ಕಾಲ್ದೊಳೆಯಲೊಳಪೊಕ್ಕು ಪಟ್ಟ ಕಾಂತಾರಸೈರಿಭಂಗಳ ಭಂಗುರಶೃಂಗ ತಾಡನದಿನುಜ್ಜ್ವಳಿಪ ಜಳವೇಣಿಯಂ ಪೊಣ್ಮಿ ಪೊಳೆವೆಳವಾಳೆಯೆಂದು ಕರ್ದುಂಕಿ ಕನಲ್ವ ಬಾಳಬಕಕದಂಬಂಗಳೊಳಂ ಭೀಷಣರಮಣೀಯಮೆನಿಸಿತ್ತು ಅಂತುಮಲ್ಲದೆಯುಂ –

|| ಮಾಲಿನಿ ||

ಕುಸುಮರಜವ ಕೆಂಪಂ ತಾಳ್ದಿ ನೀಳ್ದೇಱಿಯಂ ಲಂ
ಘಿಸುವ ತೆರೆಯ ಜಿಹ್ವಾಡಂಬರಂ ಪೊಣ್ಮೆ ಸುತ್ತಂ
ಮಿಸುಪ ಪಿರಿಯ ಮೀಂಗಳ್ ದಾಡೆ ತಾಮಾಗಿಳಾರಾ
ಕ್ಷಸಿಯ ತೆಱೆದ ಬಾಯಂತಿರ್ದುದಾ ಪದ್ಮಸದ್ಮಂ || ೪೧

ವ || ಅಂತನೂನಮುಮತಳಸ್ಪರ್ಶಮುಮಮಾನುಷಮುಮತಿಕ್ರೂರಸತ್ವಮುಮಪ್ಪ ಮನೋರಮಣಮೆಂಬ ಸರೋವರಮಂ ಕಂಡು –

ಕಂ || ಇದು ಕಡಲಂದದೆ ಕಡುಗಡಿ
ದಿದಱೊಳಗಾನಿವನನಿಕ್ಕಿ ಕೋಪಮನಾಱಿ
ಪ್ಪುದೆ ಪಂಥಮೆಂದು ಬಂದಂ
ತದಗ್ರದೇಶಕ್ಕೆ ಕೋಣಪಂ ವಿಗತಕೃಪಂ || ೪೨

ವ || ಬಂದು ತನ್ನನೆತ್ತಿಕೊಂಡಾಗ್ರಹಮನೊಡೆಯಿಕ್ಕುಂತಿಕ್ಕಿ ಪೋಪುದುಮಾಕುಮಾರಂ –

ಕಂ || ಬಿೞ್ದ ಭರದಿಂದೆ ವಾರಿಯೆ
ರೞ್ದೆಸೆಗಂ ಪಚ್ಚು ಸೂಸೆ ಕೊಳದೊಳಗೆ ಬಯಲ್
ಬಿೞ್ದುದು ತದ್ರಭಸಕ್ಕು
ರ್ಚೆೞ್ದು ಕಡಂಗಿದುವು ಜಳಚರಪ್ರಕರಂಗಳ್ || ೪೩

ವ || ಅಂತು ಪಾತಾಳಮೂಲಂಬರಂ ಮುೞುಗಿ ದಿವಿಜದೀರ್ಘಿಕೆಯೊಳ್ ಮುೞುಗಿ ನೆಗೆವ ಅಭ್ರಮೂಪತಿಯಂತೆ ನೆಗೆಯಲೊಡಂ –

ಕಂ || ಇನನೊಗೆಯೆ ತಾರೆಗಳ್ ಭೋಂ
ಕನೆ ನಭದೊಳದೃಶ್ಯವಪ್ಪ ತೆಱದಿಂ ನೃಪನಂ
ದನನೊಗೆಯೆ ಜಳಚರಂಗಳ
ವನಿತುಂ ಕೊಳದೊಳಗೆ ಮತ್ತಡಂಗಿದುವಾಗಳ್ || ೪೪

ಏನಂ ಪೇೞ್ವೆಂ ತನ್ನೃಪ
ಸೂನುವ ಪುಣ್ಯಪ್ರವಾಹಮಂ ಗ್ರಾಹಮಹಾ
ಮೀನಕುಳೀರಾಹಿಗಳಂ
ದೇನುಂ ಪೊಸಯಿಸುದುವಿಲ್ಲ ನಿಜವಿಷಮತೆಯಂ || ೪೫

ವ || ಆಗಳ್ ಪ್ರೇಂಖೋಳನವಿಳಾಸದಿಂದಾ ಸರಮಂ ಲೀಲಾಸರಮನುತ್ತರಿಸುವಂತುತ್ತರಿಸಿ ತತ್ತೀರದೊಳಿನಿತುಬೇಗಂ ವಿಶ್ರಮಿಸಿ ಬೞಿಯಂ ಮಲಯಪವನನಂತುತ್ತರಾಭಿಮುಖನುಂ ವಿಕ್ರಮೈಕಸಹಾಯನುಮಾಗಿ ನಡೆಯೆ –

ಕಂ || ಪರುಷತರಶರಭಕೇಸರಿ
ವಿರಾವದಿಂ ಕಿವುಡುವಡಿಸುತುಂ ದೆಸೆಗಳನಾ
ಸರಸಿಯ ತಡಿವಿಡಿದಿರ್ದುದು
ಪರುಷಾಟವಿಯೆಂಬ ಪೆಸರರಣ್ಯಮಗಣ್ಯಂ || ೪೬

ಕರಿಗಳ ಕಣಿ ಶಬರರ ನಿಧಿ
ಮರಗಳ ವಡ್ಡಾಗರಂ ದವಾಗ್ನಿಯ ಸತ್ರಂ
ಹರಿಣಂಗಳ ಹರವರಿ ಕೇ
ಸರಿಗಳ ಸರಿ ಪರ್ವಿದಡವಿ ಪಡೆದುದಗುರ್ವಂ || ೪೭

ವ || ಅಲ್ಲಿ-

ಕಂ || ಮರದ ತುದಿಗೋಡುಗಳ್ ಕೊಳೆ
ಧರೆಗಲ್ಲುಗುತಿರ್ಪ ತರಳತಾರೆಗಳೆನಿಕುಂ
ಖರಸೂಕರದಂಷ್ಟ್ರಾಹತಿ
ಪರಿಸ್ಫುಟದ್ವೇಣುಮುಕ್ತಮುಕ್ತಾನಿಕರಂ || ೪೮

ನಡಪಾಡುವ ವನದೇವಿಯ
ರಡಿಯೂಡಿದಲಕ್ತಕದ್ರವಂ ಪತ್ತಿದವೋಲ್
ಕಡುಗೆಂಪನಾಳ್ದುವೊಂದೊಂ
ದೆಡೆ ವನಚರವಿದ್ಧಮೃಗಗಣಾರುಣಜಳದಿಂ || ೪೯

ಮದಗಂಧಸಾರಸಪ್ಪ
ಚ್ಛದಂಗಳಿಂ ಪುದಿದು ಬೆಳೆದ ತಾಪಿಂಛದ ಪೆ
ರ್ವೊದಱ ಕರಿಶಂಕೆಯಿಂ ಪಾ
ಯ್ದದಱೊಳ್ ಹರಿವಿತತಿ ಬಂಜೆವಡಿಪುದು ಮುಳಿಸಂ || ೫೦