ಆಕೆಯನಂಗಜವಿಜಯಪ
ತಾಕೆಯನಸಮಾಸ್ತ್ರಶರಶಲಾಕೆಯನೆರೆದು
ರ್ವೀಕಾಂತನಲ್ಲಿಗಟ್ಟಿದ
ನೇಕಾಗ್ರಮನಂ ಮಹೇಂದ್ರನೆಂಬ ನರೇಂದ್ರಂ || ೧೦೧

ಅಟ್ಟಲೊಡಂ ಜಯವರ್ಮಂ
ಕೊಟ್ಟಪೆನೆಂದಿರ್ದೊಡಾತನಚಿರಾಯುಷ್ಯಂ
ಮುಟ್ಟಿಲ್ಲನೆಂದು ಮಾಣಿಸಿ
ಕಟ್ಟಿದನಾದೇಶಮಂ ನಿಮಿತ್ತದಿನೊರ್ವಂ || ೧೦೨

ಉ || ಬೇಡಿದೊಡಾರುಮಾರ್ಗೆ ಗಡ ಕೊಟ್ಟಪರಾವುದನಂತದಿರ್ಕಣಂ
ಬೇಡದೆ ಕೊಳ್ವೆನಿಂ ನಿಜತನೂಜೆಗೆ ಸಂಗಡಮಾಗೆ ನಾಡುಮಂ
ಬೀಡುಮನೆಂದು ಬಂದು ಪುರಮಂ ನೆರೆ ಮುತ್ತಿ ಮಹೇಂದ್ರನಿರ್ದೊಡಂ
ತೋಡಲೊಡರ್ಚೆ ಕಿೞ್ತಲೆಕಿೞಂದಲೆಯಾದಪುದೀ ಜಗಜ್ಜನಂ || ೧೦೩

ವ || ಎಂದು ಪೇೞ್ದಾತಂ ಬೀೞ್ಕೊಂಡು ಪೋಗೆ –

ಕಂ || ಆಯಾಸಮನೀಮರ್ತ್ಯನಿ
ಕಾಯಕ್ಕಪಹರಿಸಿ ದುರ್ಬಲಸ್ಯ ಬಲೋ ರಾ
ಜಾಯೆಂಬುದನಾಂ ಮಾಡದೊ
ಡೀಯೆಡೆಯೊಳ್ ವ್ಯರ್ಥಮಲ್ತೆ ಪಾರ್ಥಿವಜನ್ಮಂ || ೧೦೪

ವ || ಅದುಕಾರಣದಿಂ ವಿಪುಳನಗರಕ್ಕೆ ನಡೆವೆನೆಂದು ತತ್ಪುರಾಭಿಮುಖಮಾಗಿ ನಡೆದೆಯ್ದೆವರ್ಪಾಗಳ್ –

ಚಂ || ಬಿಡುವುರಿಯೆಣ್ಣೆ ಸೂಸುವ ಕನಲ್ಗಿಡಿ ಬೀಸುವ ಪಾಸಮೋರೆಯಿಂ
ದಿಡುವರೆ ಪೊಯ್ವ ಕತ್ತಳಿಕ್ಕೆ ಕುತ್ತುವ ಕೊಂತಮುರುಳ್ಚುವೊಡ್ಡುಗಲ್
ಕಡೆಸಿರಗೆಯ್ದ ನೂಂಕುದಳಿಯಿಕ್ಕುವ ಬಲ್ದಸಿ ಭೀತಿಯಂ ಮನ
ಕ್ಕೊಡರಿಸೆ ಲಗ್ಗೆಯೊಟ್ಟಳದೊಳಿಟ್ಟಳವಾದುದು ಕೋಂಟೆಗಾಳೆಗಂ || ೧೦೫

ಇಡಿಸುವ ಡೆಂಕಣಕ್ಕೆ ನೆಲವಾಳಿಗೆ ಕೊತ್ತಳದಂಬುಗಂಡಿಯಿಂ
ದುಡುಗದೆ ಪಾಯ್ವ ಕೂರ್ಗಣೆಗೆ ಬದ್ದರಮೊಡ್ಡಿಪ ಕೋಂಟೆಗಾವಗಂ
ಕೆಡಪುವ ಗಗ್ಗೆ ವಂಕದರದಿಂ ಪೊಱಮಟ್ಟಱಿವಾಳ್ಗಮಾನ್ಕೆಯಾಳ್
ಗಡಣಿಸೆ ಕಾದುತಿರ್ದುದು ಮಹೇಂದ್ರಪದಾತಿನಿ ಮುತ್ತಿ ಸುತ್ತಲುಂ || ೧೦೬

ವ || ಅಂತು ಮುತ್ತಿ ಕಾದುತಿರ್ದ ಸೇನಾಮಹೋದಧಿಯಂ ಮಂದರಾಚಲದಂತೆ ಪೊಕ್ಕು ನಿರ್ಗಹನವೃತ್ತಿಯಿಂ ಪುರಮಂ ಪುಗಲ್ ಪೋಪಾಗಳ್ –

ಮ || ಸ್ರ || ನೆರೆದೊಡ್ಡಿರ್ದೊಡ್ಡನೇನುಂ ಬಗೆಯದೆ ಮದಧೀಶಾಜ್ಞೆಯಿಂ ಬಂದವೊಲ್ ನೀಂ
ಪುರಮಂ ಬೇಗಂ ಪುಗಲ್ ಪೋದೊಡೆ ತಲೆ ಪೊಱೆಯೇ ನಿನ್ನಮೆಯ್ಗಕ್ಕಟಾ ಸೈ
ತಿರು ನೀನಾರ್ಗೆಂದು ತನ್ನಂ ನುಡಿದ ಭಟಕಟಾಹಕ್ಕೆ ಕಣ್ಣಿಂದೆ ಸೂಸು
ತ್ತುರಿಯಂ ಕಲ್ಪಾಂತದುಗ್ರಾಂತಕನ ಮಸಕಮಂ ತಾಳ್ದಿದಂ ರಾಜಪುತ್ರಂ || ೧೦೭

ವ || ಅಂತು ಕಡುಮುಳಿದಾಬಲದೊಳೊರ್ವನ ಕೈಯ ಕೋದಂಡಕಾಂಡಂಗಳನೆಱೆದು ಕಳೆದುಕೊಂಡು –

ಕಂ || ಪೆಱಗಿಕ್ಕಿ ಪುರಮನೊಡ್ಡಿದ
ಮಱುವಕ್ಕದ ಮೇಲೆ ಪೋಗದಂಬಿನ ಮೞೆಯಂ
ಕಱೆದಮ ನಂಜಿನ ಮೞೆಯಂ
ಕೞೆವಂದದೆ ವಿಳಯಸಮಯದೊಳ್ ಕೀನಾಶಂ || ೧೦೮

ವ || ಆಗಳ್ –

ಮ || ಸ್ರ || ನೆರೆದಟ್ಟಾಳಂಗಳೊಳ್ ನೋಡುವ ನಗರಜನಕ್ಕಾವಗಂ ಕೋಲನಾಂತಂ
ತಿರುವಾಯೊಳ್ ತೊಟ್ಟಪಂ ತೊಟ್ಟಿರದೆ ತೆಗೆದಪಂ ಬಿಟ್ಟಪಂ ತಾನೆನಿಪ್ಪಂ
ತರಮೇನುಂ ವೇಗಸಂಧಾನದಿನಱಿಯಲಣಂ ಬಂದುದಿಲ್ಲೆತ್ತಲುಂ ದಿಂ
ಡುರುಳುತ್ತಿರ್ಪನ್ಯಸೈನ್ಯಂಗಳ ತಲೆಗಳೆ ಕಾಣಲ್ಕೆ ಬಂದತ್ತದೆತ್ತಂ || ೧೦೯

ಕಂ || ದ್ವಿರದಂಗಳ ಹರಿಗಳ ಮ
ತ್ತೆ ರಥಂಗಳ ಮೇಗಣುಗ್ರಭಟಪಟಳಮನಾ
ರ್ದುರುಳೆಚ್ಚಂ ಪೊರಳೆಚ್ಚಂ
ಮರಳೆಚ್ಚಂ ಚಾಪಚಾಪಳಂ ಯುವರಾಜಂ || ೧೧೦

ವ || ಆಗಳ್ ಕಾಡಿಯುಂ ನೋಡಿಯುಂ ಪೋಪ ನಿಜಧ್ವಜಿನಿಯನತಿದೂರದ ನೆಲೆಯೊಳ್ ನೆರೆದ ರಾಜಲೋಕದ ನಡುವಿರ್ದ ಮಹೇಂದ್ರಮನುಜೇಂದ್ರಂ ಕಂಡಿದೇನೆಂದು ಬೆಸಗೊಳ್ವುದುಮೊರ್ವನಿಂತೆಂದಂ-

ಉ || ಎತ್ತಣನಕ್ಕೆ ಬಂದು ಕಡುಪಂ ಪಡೆದೊರ್ವನ ಬಿಲ್ಲನೀೞ್ದುಕೊಂ
ಡೆತ್ತುತೆ ಮೊಗ್ಗರಂ ಕೆಡೆವಿನಂ ಬಿಡದೆಚ್ಚು ಭವನ್ಮಹೀಶನಂ
ಮಿತ್ತುಗೆ ಬೋನವೆತ್ತಿದಪನಿತ್ತಲೆ ಪೋ ಬರವೇ ೞೆನುತ್ತುಮು
ದ್ವೃತ್ತನದೊರ್ವನಿರ್ದಪನಿದಿರ್ಚುವರಾರೆನಗೆಂಬ ಪೆರ್ಚಿನಿಂ || ೧೧೧

ವ || ಎನಲೊಡಂ ರೋಷಲೋಹಿತಲೋಚನನುಮುದ್ಭೂತತ್ರಿಪತಾಕಾಕರಾಳಭಾಳನುಂ ಘರ್ಮಬಿಂದುಸಂತಾನದಂತುರಿಗಂಡಮಂಡಳನುಂ ಪ್ರಸ್ಫುರಿತದಶನವಸನನುಮಾಗಿ –

ಸ್ರ || ಒರ್ವಂಗೀ ರಾಜಲೋಕಂಬೆರಸು ನಡೆಯೆ ಬಂಟಿಂಗದೆಗ್ಗೆಂದು ಮೊಗ್ಗಿಂ
ದಾರ್ವೆನ್ನೊಳ್ ಬಂದೊಡಿಲ್ಲಿದಂವರ್ಗೆಬೞಿಕಮೆನ್ನಾಣೆಯೆಂದಾಮಹೇಂದ್ರಂ
ಗರ್ವಾಂಧಂ ಸಿಂಧುರಸ್ಕಂಧದಿನಿೞಿದು ಸಕೌಕ್ಷೇಯಕಂ ಬರ್ಪುದಂ ಕಂ
ಡುರ್ವೀಭಾಗಕ್ಕೆ ಕೋಲುಂ ತಲೆಯುಮೊಡನೆ ಬೀೞ್ವನ್ನಮೆಚ್ಚಂಕುಮಾರಂ || ೧೧೨

ವ || ಆ ಸಮಯದೊಳ್ ಸಮಸ್ತಸಾಮಗ್ರಿವೆರಸು ಜಯವರ್ಮಮಂಡಲೇಶ್ವರನಿದಿರ್ವಂದ ಕಾರಣಬಾಂಧವನುಮನಿಮಿತ್ತಮಿತ್ರನುಮಾಗಿರ್ದ ಜಿನಸೇನನಂ ಮಹಾವಿಭೂತಿಯಿಂ ಮುಂದಿರ್ದೊಡಗೊಂಡು ಪುರಮಂ ಪುಗುವಾಗಳ್ –

ಶಾ || ಈತಂ ಕಾದಿ ಮಹೇಂದ್ರನಂ ಬಲಸಮೇತಂ ಬಾಣದಿಂ ಕೂಡೆ ಪೂ
ೞ್ದಾತಂ ನಮ್ಮ ಪುರೀಪುರಂಧ್ರಿಯರ ಕರ್ಣೋತ್ತಂಸಮಂ ನಾಡೆ ಕಾ
ದಾತಂ ರಾಜ್ಯಪದಕ್ಕೆ ಮತ್ತೆ ಜಯವರ್ಮೋರ್ವೀಶನಂ ತಾನೆ ತಂ
ದಾತಂ ನೂತನನೆಂದು ನೋಡಿದುದತಿಪ್ರೀತಂ ಪುರಾಂತರ್ಜನಂ || ೧೧೩

ವ || ಅನಂತರಂ ರಾಜಭವನಮಂ ಪೊಕ್ಕು ಪಳಿಕಿನೋಲಗಸಾಲೆಯೊಳಗಣಿ ಮಣಿಮಯಾ ಸನಂಗಳನಳಂಕರಿಸಿ ಕುಮಾರಂ ಬಂದ ವೃತ್ತಾಂತಮಂ ಬೆಸಗೊಳುತ್ತಿರ್ಪನ್ನೆಗಂ ಶಶಿಪ್ರಭೆಯುಮಾತನಂ ನೋಡುವೞ್ತಿಯಿಂ ತಾನಲ್ಲಿಗೆ ಸೌವಿದಲ್ಲನನಟ್ಟಿ ಲಬ್ಧಾಗಮನಾಭ್ಯನುಜ್ಞನಾಗಿ-

ಮ || ವಿ || ನೃಪಲೀಲಾಪರಿಷನ್ನಿಕೇತನಪುರೋಭಾಗಕ್ಕೆ ಸಾರ್ತಂದಳಂ
ದುಪದೇಶಂಗುಡುವಂದದಿಂದಲಸಯಾನಪ್ರೌಢಿಯಿಂ ಹಂಸೆಗಾ
ತಪಮಂ ಕೊರ್ವಿಸುವಂದದಿಂ ಮಣಿವಿಭೂಷಾರಶ್ಮಿಯಿಂ ನೂಪುರೋ
ಲ್ಲಪನವ್ಯಾಜದಿನಾಗಳೇಸುವೆಸನಂ ಕಾಮಂಗೆ ಪೇೞ್ವಂದದಿಂ || ೧೧೪

ಕಂ || ನಯನಪ್ರಭೋಜ್ಜ್ವಲಜ್ಯೋ
ತ್ಸ್ನೆಯಿನಾದಂ ಕನ್ನೆ ಮುನ್ನ ಧವಳಿಸಿ ಭೂಷಾ
ಚಯಮಣಿಗಣನಿಚಯದೆ ತಾಮ
ಬಯಲಂ ಚಿತ್ರಿಸಿದಳೆಯ್ದೆ ಗಮನೋತ್ಸುವದೊಳ್ || ೧೧೫

ನಡೆವಂತೆ ನುಡಿವ ಪುತ್ರಿಕೆ
ಮಿಡುಕುವ ರಸಚಿತ್ರದೆಸೆವ ಪೆಣ್ಣೆಂಬೊಳ್ಪಂ
ಪಡೆದಳ್ ಕಣ್ಗಂ ಮನಕಂ
ಪಡೆದಳ್ ಪೊಸವೇಟದೆಸಕಮಂ ನೃಪಸುತನೊಳ್ || ೧೧೬

ಅಂತು ಬಂದು-

ಚಂ || ಪದನಖಚಂದ್ರಬಿಂಬಚಯದೊಳ್ ಪ್ರತಿಬಿಂಬಕದಂಬಶೋಭೆಯಿಂ
ದೊದವಿಸುವನ್ನೆಗಂ ಕುಟಿಳಕುಂತಳಮಾಳಿಕ ಲಕ್ಷ್ಮಲಕ್ಷ್ಮಿಯಂ
ಪದಪಿನೊಳಂದು ಕಾಲ್ಗೆಱಗಿದಾತ್ಮಜೆಯಂ ಪರಸುತ್ತುಮೆತ್ತಿ ಪೀ
ಠದ ಕೆಲದಲ್ಲಿ ಕುಳ್ಳಿರಿಸಿದಂ ನೆಲವಿಂ ವಿಪುಳಾಧಿನಾಯಕಂ || ೧೧೭

ವ || ಆಗಳ್ –

ಕಂ || ಬಿದಿ ಮುಟ್ಟಿ ಮಾಡಿದಂದಿನಿ
ತೊದವದು ಲಾವಣ್ಯಮಂತದಲ್ತೊಲವಿಂದೀ
ಸುದತಿಯನತನುವೆ ತಾಂ ಮು
ಟ್ಟದೆ ಮಾಡಿದನೆಂದು ನೋಡಿದಂ ನೃಪತನಯಂ || ೧೧೮

ಉ || ಆರಯೆ ಮತ್ತವೇಂ ಭರಸಹಂಗಳೊ ಜಂಘೆಗಳಾಂತುವೀ ಕಟೀ
ಭಾರಮನೇನುರಂ ಪಿರಿದೊ ತಾಂ ನೆರೆದತ್ತು ಪಯೋಧರದ್ವಯೀ
ಭೂರಿವಿಜೃಂಭಣಕ್ಕೆ ಮುಖಮೇನವಗಾಹನಶಕ್ತಮೋ ನಿಜಾ
ಕಾರದೊಳಿಟ್ಟುದೀಜಗದ ಚೆಲ್ವನಶೇಷಮುಮಂ ಕುಮಾರಿಯಾ || ೧೧೯

ವ || ಎಂದಾಕೆಯ ಭುವನತ್ರಯಲೋಚನೀಯಾಕಾರಮಂ ಸೌಂದರ್ಯಮಂ ನೋಡಿ ಮನದೊಳ್ ವಿಸ್ಮಯಂಬಡುತ್ತುಮಿರ್ಪನ್ನೆಗಂ –

ಮ || ವಿ || ಅಮರ್ದಂ ಸಿಂಪಿಸುವಂತೆ ಸಾಂದ್ರಮಳಯಕ್ಷಾಮೋದಮಂ ಸೂಸುವಂ
ತೆ ಮೃಣಾಳಾಭರಣಂಗಳಂ ತುಡಿಸುವಂತುತ್ಪುಲ್ಲಶುಭ್ರಾಬ್ಜಪ
ತ್ರಮಯಸ್ರಗ್ವಿಸರಂಗಳಂ ಮುದಿಸುವಂತಾಕೇಕರಜ್ಯೋತಿಗಳ್
ನಿಮಿರ್ವನ್ನಂ ಯುವರಾಜನಂ ಯುವತಿ ತಾನುಂ ನೋಡಿದಳ್ ನಾಡೆಯುಂ || ೧೨೦

ವ || ಅಂತು ನೋಡಿಯುಂ –

ಕಂ || ನೋಟಂ ನೃಪಸುತನೊಳ್ ಕ
ಣ್ಬೇಟಂ ಮನದೊಳ್ ವಿಕಾರಚೇಷ್ಟೆಗಳೊಡಲೊಳ್
ನಾಟೆ ಬೆದಱಿದಳನಂಗನ
ಬೇಟೆಯೊಳೊಳಗಾದ ಹರಿಣಿಯೆನೆ ತರುಣಿ ಕರಂ || ೧೨೧

ಉ || ಆತನಿನಾದ ಬೇಟಮಭಿಜಾತತೆಯಿಂ ನೆಗೞ್ದೊಂದು ಧೈರ್ಯವಂ
ತಾತನಿನಾದ ಭೀತಿ ನಿಜಬಾಲ್ಯದೊಳುಣ್ಮಿರ ಲಜ್ಜೆ ಹೃತ್ಸಮು
ದ್ಭೂತನಿನಾದ ಸೊರ್ಕು ಸುಚರಿತ್ರತೆಯಿಂ ಸಮಸಂದ ಸೌಷ್ಠವಂ
ಚೇತದೊಳುಣ್ಮೆ ಕನ್ನೆ ತಳೆದಳ್ ಕಿಲಿಕಿಂಚಿತಭಾವಚೇಷ್ಟೆಯಂ || ೧೨೨

ವ || ಅನಂತರಮರಸನುಂ ವಾಕ್ಪ್ರಸ್ತುತಕಥಾವಸಾನದೊಳ್ ಕುಮಾರನಂ ಪ್ರಮದವನದೊಳಗಣ ದಿಗವಲೋಕನಮಹಾಪ್ರಾಸಾದಮಂ ಬಿಡುದಾಣಂ ಮಾಡಿ ದಿವಸವ್ಯಾಪಾರಮಂ ತೀರ್ಚುವಂತು ತದಧಿಕೃತಜನಂಗಳುಮನಲಸಿಕೆಯಾಗದಂತು ಗೀತದ್ಯೂತಸಾಹಿತ್ಯನಿತ್ಯ ವಾದ್ಯವಾದಿತ್ರವಿಶಾರದೆಯರಪ್ಪ ವಿಳಾಸಿನೀಜನಂಗಳುಮನಪ್ಪಯಿಸಿ ಕಳಿಪಿ ತಾನುಂ ಯಥೋಚಿತ ವ್ಯಾಪಾರದಿಂದಿರ್ದೊಂದು ದೆವಸಂ ಯಾಮಿನೀಪ್ರಥಮಯಾಮವಿರಾಮಸಮಯದೊಳ್ ಸೆಜ್ಜೆವನೆಯೊಳ್ ಜಯಶ್ರೀಮಹಾದೇವಿವೆರಸಿರ್ಪವಸರದೊಳ್ ಶಶಿಪ್ರಭಾದೇವಿಯ ವಯಸ್ಯೆ ಕನಕಪ್ರಭೆಯೆಂಬಳ್ ಬಂದು ಪೊಡಮಟ್ಟು ಕುಳ್ಳಿರ್ದು-

ಉ || ಎಂದು ಮಹೇಂದ್ರಮರ್ದನನನೀಕ್ಷಿಸಿದಳ್ ಭವದಾತ್ಮಜಾತೆಯಂ
ದಿಂದಮಮಾನಮನ್ಮಥವಿಕಾರಶತಂಗಳೊಳೊಂದಿ ಪಾಡಳಾ
ನಂದದಿನಾಡಳೋದಳೊಡನಾಡಿಗಳೊಳ್ ನುಡಿಯಲ್ಕಮೊಲ್ಲಳಾ
ಸೌಂದರಿ ಠಕ್ಕುವಿೞ್ದ ತೆಱನಿರ್ದಪಳೇವುದದರ್ಕಧೀಶ್ವರಾ || ೧೨೩

ವ || ಅದಲ್ಲದೆಯುಂ –

ಚಂ || ನಡು ನಡಪಿತ್ತು ತನ್ನನೆನೆ ಮೆಯ್ ಬಡವಾದುದು ಲೋಚನಾಂಶುಗಳ್
ಬಿಡೆ ತೊಡರ್ದಂತೆ ಗಂಡಯುಗಳಂ ಬಿಳಿದಾದುದು ತೋಳ್ಗಳೊಳ್ ಬರಂ
ಬಡೆದವೊಲೆಯ್ದೆ ಸುಯ್ ಸರಳವಾದುದು ಹಾವರಸಪ್ರವಾಹದೊಳ್
ಗಡಣಿಸಿದಂತೆ ಬಾಷ್ಪಜಲಸಂತತಿ ಕಾೞ್ಪುರಮಾದುದಾಕೆಯಾ || ೧೨೪

ಕಂ || ದಿನದೊಳ್ ಸಜಳತೆಯಿಂ ಮ
ತ್ಸ್ಯನಳಿನಮಂ ಮತ್ತಮಿರುಳೊಳುನ್ನಿದ್ರತೆಯಿಂ
ದೆನಸುಂ ಚಕೋರಕುಮುದಮ
ನನುಕರಿಸಿದುದಾ ವಿಯೋಗವಿಧುರೆಯ ಕಣ್ಗಳ್ || ೧೨೫

ಕರದಿಂ ಮೆಯ್ಯೊಳ್ ಪನಿತ
ಕ್ಕರದಂತಿರೆ ಸಾಂಜನಾಂಬುಕಣತತಿ ಕಾಮಂ
ಬರೆದ ನೃಪಸುತನ ಸೊಬಗಿನ
ನರಶಾಸನದಂತೆ ವಿರಹವಿಹ್ವಲೆಯಿರ್ಪಳ್ || ೧೨೬

ಸುರಿದಬಲೆ ಕಣ್ಣನೀರ್ಗಳ
ಸರಿಯಂ ಸ್ತನಮಂಡಲಂಗಳೊಳ್ ವಿರಹಮಹಾ
ಜ್ವರಜನಿತಪುಳಕಸಸ್ಯಾಂ
ಕುರಂಗಳಂ ಬಳೆಯಿಪಳ್ ನಭೋಲಕ್ಷ್ಮಿಯವೊಲ್ || ೧೨೭

ಮತ್ತಮಾಕೆಗೆ –

ತಂದುದು ನೊಸಲ್ಗೆ ತಾಪಮೆ
ಚಂದನಮಂ ಕರ್ಣಪೂರತೆಗೆ ಕೆಂದಳಮೈ
ತಂದುದು ಹಾರಂ ಕಣ್ಬನಿ
ಯಿಂದಾದತ್ತುೞಿದ ಭೂಷೆಯಂ ದೂಷಿಪವೊಲ್ || ೧೨೮

ಪರಿಕಿಪೊಡಗ್ನಿಗಮಾಕೆಯ
ವಿರಹಾಗ್ನಿಗಮಿಲ್ಲ ಭೇದಮಲ್ಲದೊಡೇಂ ಕ
ಪ್ಪುರದ ರಜಕ್ಕಂ ವೀಜನ
ದೆರಲ್ಗಮದು ಕಿಡದೆ ಬಳ್ವಳಂ ಬಳೆದಪುದೇ || ೧೨೯

ಮಗ್ನತೆಯಿನೆಱಗಿ ಸುಯ್ಯೆಲ
ರಗ್ನಿಯಿನೞಿದಳಿಗಳುದುಱುತಿರೆ ಪೊತ್ತುದು ಸಂ
ಲಗ್ನವಿರಹಾಗ್ನಿತಾಪೋ
ದ್ವಿಗ್ನೆಯ ನಾಸಿಕಮಭೇದಮಂ ಚಂಪಕದೊಳ್ | ೧೩೦

ಅಂಬುಜದಲಮನಮರ್ಚಿ ನಿ
ತಂಬಿನಿ ಪಿಡಿದಿರ್ದ ಕುಚಮೆ ತಪ್ತಾಯಃಪಿಂ
ಡಂಬೋಲ್ತಿರೆ ನಲ್ಮೆಗೆ ದಿ
ವ್ಯಂಬಿಡಿದಳೊ ಪೇೞಿಮೆನಿಪಳಾವ್ಯತಿಕರದೊಳ್ || ೧೩೧

ಕುಳಿರ್ವೆಳಲತೆವನೆಗಂ ಕೆಂ
ದಳಿರ್ವನೆಗಂ ಸೂಸುವಾಲಿನೀರ್ವನಿಗಳ್ಗಂ
ಮಿಳಿರ್ವೆಳವಿಜ್ಜಣಿಗೆಗಳಿಂ
ತಳರ್ವೆಲರ್ಗಂ ಕಾಂತೆ ಕರಮೆ ಹಂಗಿಗೆಯಾದಳ್ || ೧೩೨

ಚಂ || ಪುಗೆ ಪೊಗೆಯೆೞ್ದ ಕಂದಳಿರ ಜೊಂಪಮಿವಂತವಳೀಸೆ ಕಾಯ್ದು ನೀ
ರ್ದೆಗೆದ ಸರೋವರಂಗಳಿವು ಜೋಲ್ದು ಮಲಂಗೆ ಕರಿಂಕುವಿೞ್ದ ಬಾ
ಳೆಗಳಿವು ಸಾರ್ದು ಸುಯ್ಯಡರೆ ಸೀದ ಲತಾಳಿಯಿವಪ್ಪೆ ಬೆಂದು ಕಂ
ದೊಗೆದೆಳಗೌಂಗಿವೆಂಬ ಕುಱುಪಂ ಪಲವಾಂತುವು ನಂದನಂಗಳೊಳ್ || ೧೩೩

ಕಂ || ಅಪಹರಿಸಿದಳೀ ಕಾಮಿನೀ
ಲಪನಶ್ರೀಯಿಂದಮೆನ್ನ ಚೆಲ್ವಂ ತಾನೆಂ
ಬಪಕಾರರೋಷದಿಂ ಶಶಿ
ಯಪಾರಕರಪಾತದಿಂದೆ ಮಥಿಯಿಸುತಿರ್ಪಂ || ೧೩೪

ಎನ್ನಯ ಸೊಬಗಂ ಗೆಲ್ದಳ್
ಕನ್ನೆ ದಲೆಂದೆಂದು ರತಿಯೆ ಪರ್ಚಿಸುತಿರ್ಪಳ್
ತನ್ನಯ ನಲ್ಲನನಲ್ಲದೊ
ಡೆನ್ನರೊಳಂ ಮಾಡನಿನಿಸು ಮುನಿಸಂ ಮದನಂ || ೧೩೫

ಸ್ಮರನಲರ್ಗಣೆಗಳ್ ತಮ್ಮೊಳ್
ದೊರೆಕೊಳ್ಳದ ತಾಪಮಂ ಸಮಂತಿತ್ತಪುವೀ
ತರುಣಿಗೆ ತಮಗುಳ್ಳುದನೇಮ
ನಿರವಿಪುದತಿಶಯಮೆ ಪಂಚತೋದಂಚನಮಂ || ೧೩೬

ವ || ಅದುಕಾರಣದಿನಾಕೆ ದಶಮಾವಸ್ಥೆಗೆ ಪಕ್ಕಾಗದನ್ನೆಗಮಿದರ್ಕೆ ತಕ್ಕುದಂ ದೇವರ್ ಸಮಕಟ್ಟುವುದೆಂದು ಪೇೞ್ದುಪೋಗಲ್ ಅವಳ ಬಿನ್ನಪಮನವಧಾರಿಸಿ ನಿಜವೃತ್ತಿಗೆ ಸದೃಶಮಾದ ಮಗಳ ಮನೋವೃತ್ತಿಗೆ ಅತ್ಯಂತಸಂತುಷ್ಟಹೃದಯನಾಗಿ –

ಕಂ || ಆ ಕುವರನೊಳಲ್ಲದೆ ಪೇ
ೞೀಕನ್ನೆಗೆ ನಲ್ಮೆ ಸಮನಿಕುಮೆ ನವವಿಕಚಾ
ಬ್ಜಾಕರದೊಳಲ್ಲದುದಯಿಕು
ಮೇ ಕಳಹಂಸೆಗೆ ಮನಃಪ್ರಮೋದಮದೆಂದುಂ || ೧೩೭

ವ || ಎಂದು ಪೊಗೞ್ದು ಮಱುದೆವಸಂ ಸಮಸ್ತಮೌಹೂರ್ತಿಕನಿಕುರಂಬರಂ ಬರಿಸಿ ಶಶಿ ಪ್ರಭಾವಿವಾಹವಿಭವಮುಹೂರ್ತಮಂ ಬೆಸಗೊಂಡು ತನ್ಮಂಗಳ ದಿನಾಗಮಮಂ ಪಾರುತ್ತುಮಿರ್ದಂ ಅನ್ನೆಗಂ –

ಕಂ || ಕುಮುದಂ ಶಶಿಪ್ರಭಾಸಂ
ಗಮಮಂ ಪಾರ್ವಂದದಿಂದೆ ಸಂಜನಿತ ಲಸ
ತ್ಕುಮುದಂ ಶಶಿಪ್ರಭಾಸಂ
ಗಮಮಂ ಪಾರುತ್ತುಮಿರ್ದನಾ ಯುವರಾಜಂ || ೧೩೮

ಮ || ಸ್ರ || ಮದನಪ್ರಸ್ಪರ್ಧಿಸೌಂದರ್ಯದೆ ನೃಪಸುತೆಯಂ ಸತ್ಕಳಾಜಾಳಚಾತು
ರ್ಯದೆ ತತ್ತದ್ವಿದ್ಯರಂ ದುರ್ಧರಸಮರಜಯಪ್ರೌಢತಾರೂಢದೋಶ್ಶೌ
ರ್ಯದೆ ಶೂರಾರಾತಿಸಂದೋಹಮನೆಱಗಿಸಿ ನಿತ್ಯೋದಯಾಮಾನಹೃತ್ಸ
ಮ್ಮದನಿರ್ದಂ ಸೌಖ್ಯಸೀಮಂ ಚತುರಜನಮನೋವ್ಯೋಮಪೀಯೂಷಧಾಮಂ || ೧೩೯

ಗದ್ಯಂ

ಇದು ಪರಮಪುರನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಶಶಿಪ್ರಭಾವಿರಹ ವಿಜ್ಞಾಪನಂ
ಪಂಚಮಾಶ್ವಾಸಂ