ಕಂ || ಶ್ರೀಜಾಯಾಪತಿ ಧರೆಯಂ
ರಾಜನ್ವತಿಮಾಡಿ ತನ್ನ ಸೌರಾಜ್ಯಗುಣಂ
ರಾಜಿಸೆ ನೆಗೞ್ದಂ ನೂತ್ನಮ
ನೋಜಾಕೃತಿ ಜೈನಜನಮನೋಹರಚರಿತಂ || ೧

ಜನಮನಿತುಮುದ್ಘಸಿಂಹಾ
ಸನಮಂ ತಚ್ಚಕ್ರಿಯೇಱೆನೀರೇಱಿದುದಿಂ
ದಿನಿತಿರದುದಯಗಿರೀಂದ್ರಮ
ನಿನನೇಱೆ ಸರೋಜಸಮಿತಿ ನಯವೇಱುವವೊಲ್‌ || ೨

ಸುತನೊಳಜಿತಂಜಯಂ ವಿ
ಸ್ತೃತಮಂ ಭೂಭರಮನೆಯ್ದೆ ಯೋಜಿಸಿ ನಿಶ್ಚಿಂ
ತತೆಯನೊಳಕೆಯ್ದನುಂತುಂ
ಪಿತೃಗೆ ಸುಪುತ್ರಂ ಸುಖೈಕಕಾರಣಮಲ್ತೇ || ೩

ಚಕ್ರಮುಮಂ ಸಕಳೋರ್ವೀ
ಚಕ್ರಮುಮಂ ತೋಳೊಳಾಂತು ಸೊಗಯಿಸುತಿರ್ದಂ
ಚಕ್ರಮುಮಂ ಕಳಹಂಸೀ
ಚಕ್ರಮುಮಂ ತೆರೆಯೊಳಾಂತು ಕೊಳನೊಪ್ಪುವವೊಲ್‌ || ೪

ವ || ಅಂತಪೂರ್ವಸಾರ್ವಭೌಮಶ್ರೀಯೊಳಜಿತಸೇನಂ ನೆರೆದ ಪರಮೋತ್ಸವಮುತ್ಸವಾಂತರ  ಮನಾಕರ್ಷಿಸೆ-

ಮ || ವಿ || ಪ್ರಭವಂ ನೀಳಘನಾಘನಂ ಸಮವಸೃತ್ಯುರ್ವೀತಳಂ ಮಿಂಚೆ ಸ
ಪ್ರಭರೈತೋರಣಮಾಲಿಕಲ್‌ ಸುರಿವ ಮಂದಾರಪ್ರಸೂನಂಗಳಾ
ಗಭಿರಾಜನ್ನವಮೇಘಕಾಲಮೆನೆ ಬಂದಂ ದೇವದೇವಂ ಸ್ವಯಂ
ಪ್ರಭನುದ್ಯನ್ಮುನಿಜಾತಕಂ ಕಱೆಯುತುಂ ಧರ್ಮಾಮೃತಾಸಾರಮಂ || ೫

ವ || ಆಗಳದಂ ಕೇಳ್ದು ಅಜಿತಂಜಯಂ ಚಕ್ರಧರಪುರಸ್ಸರಂ ಪರಮನ ಪದಪಯೋಜವಂದ ನಾನಂದದಿಂ ಬಂದು ಸಮವಸರಣಮನೈದಿ ಪಾದಲೇಪೌಷಧಿ ಪ್ರಭಾವದಿಂ ವಿಂಶತಿ ಸಹಸ್ರಸೋಪಾನಂಗಳನಸಂಗದಿಂದಮೇಱಿ ಗಂಧಕುಟಿಯಂ ಪೊಕ್ಕು ಪೀಠತ್ರಯಾಗ್ರನಿಷ್ಠಿ ತನಂ ಪರಮೇಷ್ಠಿಯಂ ಪ್ರದಕ್ಷಿಣಂಗೆಯ್ದು ಪುರೋಹಿತರತ್ನಾನೀಕನಿಧಿನಿಕರದತ್ತಮರ್ಚನಾ ಪರಿಕರಂಗಳಿಂದಮರ್ಚಿಸಿ-

ಕಂ || ಅತ್ಯಂತಭಕ್ತಿಯಿಂ ಪದ
ನತ್ಯಂತದೊಳೆಯ್ದೆ ತಾಳ್ದಿದಂ ತೀರ್ಥಕರ
ಸ್ತುತ್ಯೋದ್ಯಮಮಂ ದಿಟದಿಂ
ಸ್ತುತ್ಯರೊಳಾರ್‌ ಸ್ತೋತ್ರಭಾವಮಂ ತಾಳ್ದದವರ್‌ || ೬

ಜಯ ವಿಮಳಕೇವಳಾರ್ಕೋ
ದಯಗಿರಿವರ ಜಯ ದಯಾರಸಾರ್ಣವ ಜಯ ನಿ
ರ್ವ್ಯಯ ಲಕ್ಷ್ಮೀನಿಳಯಾಂಬುಜ
ಜಯ ದಿವಿಜಕಿರೀಟದೀಪವರ್ತಿನಿಧಾನಾ || ೭

ಕದಡಿದ ನೀರ್‌ ಕತಕದಿನ
ಲ್ಲದೆ ತಿಳಿಗುಮೆ ಪುದಿದನಾದಿಮಿಥ್ಯಾತ್ವದೆ ಮ
ೞ್ಗಿದ ಮತಿಯದು ನಿನ್ನಿಂದ
ಲ್ಲದೆ ಪಜ್ವಳಿಸುಗುಮೆ ಬೇಗಮಪಗತರಾಗಾ || ೮

ಮನಮುಳ್ಳೊಡೆ ಜನಿಯಿಸುವಂ
ಮನಸಿಜನಾಯುಷ್ಯಮುಳ್ಳೊಡಂತಕನೆಯ್ತ
ರ್ಪನೆನುತ್ತವನುೞಿದಂತವ
ರ್ಗಿನಿತೆಡೆಗುಡದಿರ್ದೆ ನೀನೆ ದಲ್‌ ನಿರಪೇಕ್ಷಾ || ೯

ಪೆಱರ್ಗೆಱಗೆಯಾರುಮಂ ನೀ
ನೆಱಗಿಪೆ ನೀಂ ಬಯಸೆಯೇನುಮಂ ಬಯಸಿದುದಂ
ಪೆಱರ್ಗೀವೆ ಸಕಳಮಂ ನೀ
ನಱಿವೆಯದರ್ಕಱಿಯಲಱಿಯೆ ವಿಸ್ಮಯವೃತ್ತಾ || ೧೦

ನಿನ್ನಂ ಪೊಗೞ್ದೀಕ್ಷಿಸುವೞಿ
ಪಿಂ ನಾಗೇಂದ್ರತೆಗಮಿಂದ್ರತೆಗಮಾಟಿಪುದಿ
ನ್ನೆನ್ನ ಮನಮುಂತುಮಂತವು
ನಿನ್ನರ್ಹಂತತ್ವದಿಂದವಗ್ಗಳಮೆ ಜಿನಾ || ೧೧

ಇದು ಚಿತ್ರಂ ವಜ್ರಾಂಗಂ
ಗೆ ದೃಢೀಕೃತಮಾದ್ರವಪ್ರಭಾವಂ ನಿಸ್ನೇ
ಹದವಂಗೆ ಭುವನಭವನ
ಪ್ರದೀಪಕತೆ ನಿನಗೆ ಜಿನ ಜಗತ್ತ್ರಯಮಿತ್ರಾ || ೧೨

ಪೆಱಪೆಱರನಾಪ್ತರೆಂದೆಂ
ದೆಱಗಿಯುಮಡಿಗಡಿಗೆ ಕೆಂಡಮಂ ಮಾಣಿಕಮೆಂ
ದಱಿಯದೆ ಪಿಡಿದುಂ ಮಮ್ಮಲ
ಮಱುಗುವುದಚ್ಚರಿಯೆ ಪರಮಪದವೀನಾಥಾ || ೧೩

ಭವ್ಯತೆ ಮಾೞ್ಕುಂ ನಿಜಸೇ
ವಾವ್ಯಸನಮನದಱಿನಱಿವು ಸಮನಿಕುಮಱಿವಿಂ
ದವ್ಯಾಮೋಹತೆ ಸಾರ್ಗುಮ
ದವ್ಯಾಹತಸುಖಮನೀಗುಮನವಧಿಬೋಧಾ || ೧೪

ಸುವಿಧೃತರತ್ನತ್ರಯರ
ಪ್ಪ ವಿನೇಯರ್‌ ಭವಪಯೋಧಿಯಂ ದಾಂಟಲ್ಕೇ
ಱುವ ಧರ್ಮಯಾನಪಾತ್ರ
ಕ್ಕವೆ ನೀನೇ ನೋಡೆ ಕರ್ಣಧಾರನೆ ಅರ್ಹಾ || ೧೫

ಕಿವಿಗುಡಿತೆಗಳಿಂ ನಿಜವಿಮ
ಳವಚಃಪೀಯೂಷರಸಮನೀಂಟಿದನಂ ಪೊ
ರ್ದುವುದಲ್ಲವು ತೃಷ್ಣೆಯಿನಾ
ದವಿಭೇದಂ ಬೞಿಕೆ ಮೋಹತಿಮಿರೋಗ್ರಕರಾ || ೧೬

ಎಂದು ನುತಿಗೆಯ್ದು ಬೞಿಯಂ
ಮುಂದಣ್ಗಿನಿಸಂ ಮುಹುರ್ಮುಹುರ್ನುತಿಯಿಂ ಸಾ
ರ್ತಂದು ಕಿರೀಟಮನೆಡಗೆ
ಯ್ಯಿಂದೋಸರಿಸುತ್ತುಮುಚಿತಕೋಷ್ಠದೊಳವರ್ಗಳ್‌ || ೧೭

ವ || ಕುಳ್ಳಿರ್ದು-

ಕಂ || ಎಂತು ದುರಿತಂಗಳಿಂ ದುರಿ
ತಾಂತಕ ಸಂಸಾರಿ ಬದ್ಧನೆನಿಸುಗುಮದಱಿಂ
ದೆಂತು ಗಡ ಮುಕ್ತನಕ್ಕುಮಿ
ದಂ ತಿಳಿಪುವುದೆಂದು ಪರಮನಂ ಬೆಸಗೊಂಡರ್‌ || ೧೮

ವ || ಬೆಸಗೊಳಲೊಡಂ-
ಹಸ್ತ ವಿಕಾಸವಿಹೀನಮ
ಪಾಸ್ತೋಷ್ಠಸ್ಪಂದನಂ ಪ್ರಸನ್ನಂ ಮಧುರಂ
ವಾಸ್ತವಯುತಮೊಗೆದುದು ಭ
ವ್ಯಸ್ತೋಮಪ್ರಮದಕಾರಿ ದಿವ್ಯನಿನಾದಂ || ೧೯

ವ || ಅದೆಂತೆಂದೊಡೆ-

ಕಂ || ಧೃತಮಿಥ್ಯಾದರ್ಶನನವಿ
ರತಿಯುಕ್ತಂ ಸತ್ಪ್ರಮಾದನಾತ್ತಕಷಾಯಂ
ಯುತಯೋಗನೆನಿಪ ಜೀವಂ
ಸತತಂ ದೃಢಕರ್ಮಬಂಧದೊಳ್‌ ತಾಂ ತೊಡರ್ಗುಂ || ೨೦

ಅಂತು ತೊಡರ್ದದಱ ವಶದಿಂ
ಸಂತತಮಿರಲೆಡೆಯೊಳತಿಕುಯೋನಿಗಳೊಳ್‌ ಜೀ
ವಂ ತಿಱ್ಱನೆ ತಿಱಿವುದಯ
ಸ್ಕಾಂತದ ಬೞಿವಿಡಿದ ಕೃಷ್ಣಲೋಹದ ತೆಱದಿಂ || ೨೧

ಅದು ಬೞಿಕೆ ಕಾಕತಾಳೀ
ಯದೆ ದೊರೆಕೊಂಡ ಪ್ರಮಾದದಿಂ ಮನುಜತೆವೆ
ತ್ತದಱೊಳಮುಪಶಾಂತಿಯ ಬ
ಟ್ಟೆದಪ್ಪಿ ಕಡೆಯೊಳ್‌ ಕುಯೋನಿಯೊಳ್‌ ಮತ್ತಾೞ್ಗುಂ || ೨೨

ಇದನಱೆದು ಜನ್ಮಭೀರುಗ
ಳುದಾತ್ತಮನರಖಿಳಕರ್ಮವೈರಿವಿನಾಶ
ಪ್ರದಮೆಂದುೞಿಯರ್‌ ಸಜ್ಜ್ಞಾ
ನದ ಸದ್ದರ್ಶನದ ಸಚ್ಚರಿತ್ರದ ಬೞಿಯಂ || ೨೩

ಜ್ಞಾನಂ ಯಥಾರ್ಥಬೋಧಾ
ಧಾನಂ ದರ್ಶನಮುಪಾತ್ತಜಿನತತ್ವಶ್ರ
ದ್ಧಾನಂ ಚರಿತಂ ಸುಕೃತನಿ
ಧಾನಂ ತಾನೆಂದು ಪೇೞ್ವರಲ್ತೆ ಮಹಾತ್ಮರ್‌ || ೨೪

ಇವು ಸಕಲಕರ್ಮಮಂ ತವಿ
ಪುವು ಸಮುದಿತಮಾದೊಡುಂತುಮೊಂದೊಂದೆ ದಲಾ
ದುವದಂತುಟೆ ಪಲರಿಂ ತೀ
ರ್ಚುವ ಕಾರ್ಯಮದೊರ್ವರೊರ್ವರಿಂ ತೀರ್ದಪುದೇ || ೨೫

ಅಱಿಯಿಪುದು ಕರ್ಮಮುದಯಿಪ
ತೆಱನಂ ಜ್ಞಾನಂ ಚರಿತ್ರಮದನುೞಿಪುದಿವಂ
ನೆಱೆಪುವುದಾದರ್ಶನಮಂ
ತಱಿವಿಂದುಪಯೋಗಶುದ್ಧಿಕಾರಣಮೆನಿಕುಂ || ೨೬

ಜ್ಞಾನಮೆ ಕಿಡಿಸುಗುಮಘಸಂ
ತಾನಮನೆಂದೆಂದು ನುಡಿವ ನುಡಿ ಭಾವಿಪೊಡ
ಜ್ಞಾನೋಕ್ತಂ ಭೈಷಜ್ಯ
ಜ್ಞಾನಮೆ ಮಾಡುಗುಮೆ ವೇದನಾನಿಗ್ರಹಮಂ || ೨೭

ಉ || ಎಂದು ಜಿನೇಶ್ವರಂ ಬೆಸಸೆ ಕೇಳ್ದಜಿತಂಜಯಭೂಮಿಪಾಲಕಂ
ಸಂದು ವಿರಕ್ತಿಗಾಗಳೆ ತದೀಯಸಮಕ್ಷದೆ ದೀಕ್ಷೆಗಂ ಮನಂ
ದಂದನದಂತೆ ಭವ್ಯತೆ ನಿರಾಮಯಲಕ್ಷ್ಮಿಯ ದೂತಿಯಾಕೆಯೊಳ್‌
ತಂದೊಡಗೂಡುವನ್ನಮೆಡೆಯೊಳ್‌ ನಿಲಲೀಗುಮೆ ಶುದ್ಧವೃತ್ತರಂ || ೨೮

ವ || ಅಂತು ಬಗೆದನಂತರಂ ಸಮಾಶ್ರಿತದಿಗಂಬರಶ್ರೀಕನಾದಂ ಇತ್ತ ಚಕ್ರವರ್ತಿ ಗೃಹೀತ ಸದ್ದರ್ಶನನನಂತದರ್ಶನನಂ ತ್ರಿಶುದ್ಧಿಯಿಂ ತ್ರಿಃಪ್ರದಕ್ಷಿಣಂಗೆಯ್ದು ವಿನಯದಿಂ ಬೀೞ್ಕೊಂಡು ವಿನತಾಪುರಮಂ ಪೊಕ್ಕು ಬೞಿಯಂ ಸಹಜವಿಜಿಗೀಷುವೃತ್ತನಪ್ಪುದಱಿಂ ದಿಗ್ವಿಜಯೋ ದ್ಯೋಗಮನೆತ್ತಿಕೊಂಡುಮನೂನಪುಣ್ಯಂಗಸಾಧ್ಯಮಿಲ್ಲೆಂಬುದಂ ನನ್ನಿಮಾಡುವಂತೆ ಕೆಲ ವಾನುಂ ದಿವಸದೊಳ್‌

ಉ || ಮೇದಿನಿಯಂ ಹಿಮಾದ್ರಿಯಿಷುಕಾರನಗಂ ಲವಣಾಂಬುರಾಶಿ ಕಾ
ಳೋದಕವಾರ್ಥಿ ಸೀಮೆಯೆನೆ ಸಾಧಿಸಿ ಬಾಹುಪರಾಕ್ರಮಂ ಸಮಾ
ಸಾದಿತಚಕ್ರಭೃತ್ಕ್ರಮಮನಾದಮೆ ಪೆರ್ಚಿಸೆ ಪೆರ್ಮೆವೆತ್ತನಿಂ
ತಾದಿಯ ಸಾರ್ವಭೌಮರಿನಖರ್ವಯಶೋನಿಧಿ ಕೌಶಳೇಶ್ವರಂ || ೨೯

ಕಂ || ಅ ರಾಜೇಂದ್ರನ ಜಯಯಾ
ತ್ರಾರಭಸದೊಳೊಗೆದ ಸೈನ್ಯರಜವರಿಭೂಭೃ
ನ್ನಾರಿಯರ ಕಣ್ಗಳೊಳ್ ಕ
ಣ್ನೀರಂ ದೂರದೊಳೆ ಮಾೞ್ಪುದೇಂ ಕೌತುಕಮೋ || ೩೦

ಉೞಿದು ಘನಮಾನಗರ್ವಮ
ನೞಿಪಿ ನಿಜೈಶ್ವರ್ಯಪದವಿಗೆಱಗಿದರಂದೊ
ಳ್ಪೞಿಯದವಂಗೆ ನೃಪಾಲರ್‌
ಘೞಿಲನೆ ಜಿನಪತಿಗೆ ಭವ್ಯರೆಱಗುವ ತೆಱದಿಂ || ೩೧

ಕಡಲ ತಡಿದಡಿಯೊಳಾತಂ
ನಡಿಸಿದ ಕಾಂಚನಜಗಜ್ಜಯಸ್ತಂಭಂಗಳ್
ಕುಡಿನಿಮಿರ್ದು ನಾಕಿನಿಳಯಮ
ನಡರ್ವ ಯಶೋಲತೆಗಡರ್ಪನಿಟ್ಟವೊಲೆಸೆಗುಂ || ೩೨

ಅವನೊಳ್ ತೊಡರ್ದರಿಭೂಪರ
ಭವನಂಗಳ ಚಿತ್ರಪುತ್ರಿಕಾನಿವಹಕ್ಕೊ
ಪ್ಪುವ ನವಚೀನಾಂಶುಕಮಾ
ದುವು ತರುಣೋರಗನಿಕಾಯನಿರ್ಮೋಕಂಗಳ್ || ೩೩

ಪರನೃಪರಟ್ಟಿದ ಕಪ್ಪದ
ಕರಿಗಳ ಮದಜಳಮನುಂಡು ಕಂಪೇಱಿದ ತ
ದ್ಧರಣೀಶಗೃಹಾಂಗಣದೊಳ್
ಪರಿವರಿಯಾಡುವುವು ಪಱಮೆವಱಿಗಳ ಬಳಗಂ || ೩೪

ಚಂ || ಜನಿಯಿಸುವರ್ಕನಂ ನೃಪನ ಚಕ್ರಮೆಗೆತ್ತಿೞಿವಂ ಪ್ರಭಾಸನಾ
ಸನದಿನುದನ್ವದುಗ್ರತಿಮಿಯಂ ಸಲೆ ತದ್ರುಚಿಯೆಂದು ಬೆರ್ಚುವಂ
ಮನದೊಳೆ ಮಾಗಧಂ ಘನನಿನಾದಮನಾತನ ದಂಡರತ್ನಚಂ
ಡನಿನದಮೆಂದೆ ಕಟ್ಟುಕೆಡೆವಂ ವಿಜಯಾರ್ಧಕುಮಾರನೀಗಳುಂ || ೩೫

ವ || ಅದಲ್ಲದೆಯುಂ-

ಕಂ || ಚತುರಂಗಸ್ತನವಿನುತಂ
ಪ್ರತೀತನಯವತ್ಸವತ್ಸಲಂ ವಸ್ತುಪಯ
ಸ್ಸ್ಥಿತಿಯಂ ಗೋಮಂಡಲಮಾ
ಕ್ಷಿತಿಪತಿಗೋರಂತೆ ಕಱೆವುದಿರುಳುಂ ಪಗಲುಂ || ೩೬

ವ || ಅಂತೇಕಚ್ಛತ್ರೀಕೃತಭಾರತವರ್ಷನುಂ ದ್ವಿಗುಣೀಕೃತಪ್ರಕೃತಿಪ್ರಮೋದನುಂ ತ್ರಿವಿಧಶಕ್ತಿ ಪ್ರಯುಕ್ತನುಂ ಚತುರ್ನೃಪವಿದ್ಯಾವಿಶಾರದನುಂ ಪಂಚಗುರುಪರಿಚರ್ಯಾತತ್ಪರನುಂ ಷಡಂಗಸೇನಾವಿರಾಜಮಾನನುಂ ಸಪ್ತಾಂಗಸಂಪತ್ಸಮೇತನುಂ ಅಷ್ಟದಿಗ್ಚಯೋಪಾರ್ಜಿ ತಯಶನುಂ ನವನಿಧಿಸನಾಥಶ್ರೀನಿವಾಸನುಂ ದಶಾಂಗಭೋಗಸಂಗತನುಮಾಗಿ-

ಚಂ || ತನಗೆ ಕರಂ ಶಶಿಪ್ರಭೆಯೊಳಾದನುಕೂಲತೆಯೊಪ್ಪಿ ವಿಗ್ರಹೋ
ಜ್ಝನದೊಳಳಂಕೆಗೊಂಡು ಸಲೆ ಸದ್ರತಿಯೊಳ್ ನೆರೆದಿಂತು ನೂತನಂ
ಮನಸಿಜನೆಂಬವೋಲಜಿತಸೇನರಥಾಂಗಧರಂ ಸಮಸ್ತಭೂ
ಜನದ ಮನಕ್ಕೆ ತನ್ನೊಳನುರಾಗಮನಾವಗಮುಂಟುಮಾಡುವಂ || ೩೭

ವ || ಅಂತು ಸೊಗಯಿಸುವ ಚಕ್ರಧರಕುಸುಮಾಯುಧಂಗೆ ವಿಳಾಸಕೇಳೀಸಹಾಯಂ ಬರ್ಪಂತೆ-

ಮ || ವಿ || ನವಪುಷ್ಪೋತ್ಕರಪಾಂಡುಚೂತನಿವಹಂ ಶ್ವೇತಾತಪತ್ರಾಳಿ ಭೃಂ
ಗವಧೂಝಂಕೃತಿ ಶಂಖಫೂತ್ಕೃತಿರುತಂ ಸನ್ಮಾಧವೀಕುಟ್ಮಲ
ಸ್ತವಕಂ ಚಾಮರಮುದ್ಘಕೋಕಿಳರವಂ ಭೇರೀಘನಧ್ವಾನಮಾ
ಗೆ ವಸಂತಂ ಋತುಸಾರ್ವಭೌಮವಿಭವಂ ಮೆಯ್ವೆತ್ತದೇಂ ಬಂದುದೋ || ೩೮

ವ || ಆ ಸಮಯದೊಳ್-

ಮ || ವಿ || ಸರಸೀವಾರಿಯೊಳಾದಮೞ್ದಿಕೊಳುತುಂ ಮಾಣಿಕ್ಯಸಂದೋಹಪು
ಷ್ಪರಜೋವ್ರಾತಮನೋವದೊಟ್ಟಿಕೊಳುತುಂ ವಲ್ಲೀನಿವಾಸಂಗಳಂ
ಪರಪುತ್ತುಂ ಮಳಯಾವನೀಧರಚರಂ ತಾ ಬಂದುದಾದಾನಬಂ
ಧುರಗಂಧಾಕುಳಭೃಂಗಮಂಗಜಗಜಂ ಬರ್ಪಂತೆ ಚೈತ್ರಾನಿಳಂ || ೩೯

ಚಂ || ಇನನುೞಿದಂ ವಸಂತನುಮಮರ್ಚಿದನಿತ್ತಲುಮಗ್ನಿಯಿತ್ತಸ
ಮ್ಮನಿಸಿದ ರಕ್ಕಸಂ ಬೞಿಕಮಾಂ ನಡುವೆಂಬವೊಲಾದುದಾನೆ ಭಾ
ಜನವೆನಿಸಿರ್ದೆನಂತಕನಡುರ್ಕೆಗೆ ಪೋ ಪೆಱತಾವುದೆಂಬ ದು
ರ್ಮನದೊಳೆ ದಕ್ಷಿಣಾಶೆ ನಿಡುಸುಯ್ದವೊಲಾದುದು ದಕ್ಷಿಣಾನಿಲಂ || ೪೦

ವ || ಮತ್ತಂ-

ಮ || ವಿ || ಮಲಯಕ್ಷ್ಮಾಧರಮೇಖಳಾಪರಿಗತಶ್ರೀಖಂಡಷಂಡಂಗಳೊಳ್‌
ನಲವಿಂದೊಂದಿ ಬೞಲ್ದ ಭೋಗಿಮಿಥುನಂಗಳ್ ಪೀರ್ದುಪೀರ್ದಾದಮ
ಗ್ಗಲಿಸಿರ್ದಾತ್ಮಕೃಶತ್ವಮಂ ಸುರಭಿವಾತಂ ತೂಳ್ದಿದತ್ತುದ್ಯದು
ತ್ಕಲಿಕವ್ಯಾಕುಳಚೋಳಕೇರಳವಧೂನಿಶ್ವಾಸಸಂಪರ್ಕದಿಂ || ೪೧

ಚಂ || ನಿನಗೆ ವಸಂತದೂತಿವೆಸರೊಪ್ಪುವುದೆಂತೆನೆ ಮುಂತೆ ಬಂದು ನೀ
ನೆನಗೆ ವಸಂತನಾಗಮನಮಂ ನೆಱೆ ಸೂಚಿಸಿ ಕೊಟ್ಟೆಯೆಂದು ನಂ
ದನವನಲಕ್ಷ್ಮಿ ಕೀರರವದಿಂ ಪೊಗೞ್ದಿತ್ತ ಪಸಾಯದಚ್ಚಮು
ತ್ತಿನ ಪೊಸಪಚ್ಚಮಂತಳೆದವೋಲದಿರ್ಮುತ್ತೆ ಮುಗುಳ್ತುದೆತ್ತಲುಂ || ೪೨

ವ || ಅದಲ್ಲದೆಯುಂ-

ಚಂ || ಅವಿರಳಮಾದ ಮೆಯ್ವಸುರೆ ಪಚ್ಚೆದಿಮಿರ್‌ ತಳಿರುಟ್ಟ ಪಟ್ಟೆಯೊ
ಪ್ಪುವ ತಿಳಕಂ ಮಧುವ್ರತಮಲರ್ದಲರ್ಗೊಂಚಲೆ ದಂಡೆ ಕೋಕಿಲಾ
ರವಮದು ಬೀರಮದ್ದಳೆಯ ನಿಸ್ವನಮಾಗಿರೆ ಕಟ್ಟಿ ಬಂದ ಕಂ
ತುವ ಬಿರುದಂದದಿಂದೆ ಕರಮೊಪ್ಪಿದುವಂದಿನ ಬಂದ ಮಾವುಗಳ್ || ೪೩

ಕಂ || ಅರಲಂಬಿಂದೆಮ್ಮೊಳ್ ಮೆ
ಯ್ಗರೆದಿಸು ವಿರಹಿಗಳನೆಂದು ಕೈಗೊಟ್ಟುವು ಶಂ
ಬರರಿಪುಗೆನ್ನದೆ ಮಾವಿನ
ತರುಗಳೆ ಕೈವಂದುವೆಂಬವಂ ಮರುಳಲ್ತೇ || ೪೪

ನನೆಯಂಬಿನ ಪೊದೆಯಂ ಪೂ
ವಿನ ಗೊಂಚಲ್ ನೀಳ್ದ ಕರ್ವುವಿಲ್ಲಂ ಸೆಳೆಗೊಂ
ಬನುಕರಿಸೆ ಬಾಲಚೂತಂ
ನೆನೆಯಿಸಿದುದು ಚಿತ್ತಭವನ ಕೀೞಾಳವನಂ || ೪೫

ಚಂ || ರತಿಗವತಂಸಮಾದ ತಳಿರಾವಮರಕ್ಕೊಳವೆನ್ನ ಬಿಲ್ಗೆ ಸಂ
ಗತಶರಮಾದ ಪೂಗುಡಿಗಳಾವಮರಕ್ಕೊಳವನ್ಯಪುಷ್ಟಮೂ
ಕತೆಗಗದಂಗಳಾದ ಕೊನರಾವ ಮರಕ್ಕೊಳವೆಂದು ಮನ್ಮಥಂ
ಸ್ತುತಿಯಿಸಿ ಮಾಮರಕ್ಕೆ ಕುಜರಾಜಸಮಾಖ್ಯೆಯನಿತ್ತನೞ್ತಿಯಿಂ || ೪೬

ವ || ಎನಿಸಿ ಸೊಗಯಿಸುವ ನೂತನವಿಳಾಸೋಪೇತಚೂತಭೂಜಾತಂಗಳೊಳ್-

ಉ || ಉಂತೆ ಜಗಂಗಳಂ ತಿಗುರಿಗಂ ತರುತಿರ್ಪ ಮನೋಜನೀವಸಂ
ತಂ ತಲೆದೋಱಿತಿಂ ಹರನ ಕಣ್ಣುರಿಯಂ ನದಿಪಲ್ ಸಮರ್ಥನೋ
ವಂತುಟುಗಂಡು ಸಂತಮಿರಿಮೊಲ್ದವರಂ ಬಿಡದೆಂದು ಬುದ್ಧಿವೇ
ೞ್ವಂತೆವೊಲಾದುದಧ್ವಗಜನಕ್ಕೆ ಕನತ್ಕಳಕೋಕಿಳಸ್ವನಂ || ೪೭

ವ || ಮತ್ತಂ-

ಚಂ || ಅಱುತೆರ್ದೆಯಾಱೆ ಪೀರ್ದುಮಿನಿಯಳ್ಗಿನಿದೆಂದಿರದೀಂಟವೇೞ್ದುಮ
ೞ್ಕಱ ಮಱಿಗಳ್ಗೆ ಮುಕ್ಕುೞಿಸಿ ತಂದೆರೆದುಂ ಗೆಳೆವಕ್ಕಿಯೆಲ್ಲಮಂ
ನೆಱೆಬೞಿಯಟ್ಟಿ ನಲ್ಲುಣಿಸನೂಡಿಯುಮಾಮ್ರದ ತೋರವಣ್ಣೊಳೊಂ
ದಱ ರಸದಂತುಗಾಣದೆ ದಲೊಂದು ಶುಕಂ ಮಧುಸಮ್ಮದೋತ್ಸುಕಂ || ೪೮

ತಳಿರ್ಗಳಿನೊರ್ಮೆ ಪೂಗುಡಿಯಿನೊರ್ಮೆ ಪಸುರ್ಮಿಡಿಯಿಂದಮೊರ್ಮೆ ಕಾ
ಯ್ಗಳಿನಿರದೊರ್ಮೆ ಪಣ್ಗಳಿನದೊರ್ಮೆ ಜನಕ್ಕೆ ಮನಃಪ್ರಮೋದಮಂ
ಬಳೆಯಿಸಿ ಮಾಣ್ದುದಲ್ತು ಸವಿಯಂ ಕಿವಿಗೋಲಗಿಸಿತ್ತು ಮತ್ತೆ ಕೋ
ಕಿಳರವದೊರ್ಮೆ ಭೃಂಗರುತದೊರ್ಮೆ ಶುಕಸ್ವರದೊರ್ಮೆ ಮಾಮರಂ || ೪೯

ವ || ಆ ಮನೋಜವಿಜಯಸಹಕಾರಿ ಸಹಕಾರಸಮೂಹಮದಲ್ಲದೆಯುಂ ಕುಸುಮಿತಾನೇಕ
ಕುಸುಮವಲ್ಲರೀಪ್ರಸರವಿಸರದೊಳ್-

ಉ || ತಾನುಗುೞುತ್ತುಮಿರ್ಪ ಪೊಸಗಂಪುಮನಿತ್ತೆ ತೆಮಳ್ದಿಕೊಂಡು ಮಂ
ದಾನಿಳನುಯ್ಯುತಿರ್ಪ ತನಿಗಂಪುಮನಿತ್ತೆ ಮರಳ್ದು ಭೃಂಗಸಂ
ತಾನಮುಣುತ್ತುಮಿರ್ಪ ನಱುಗಂಪುಮನಿತ್ತೆ ಗಡಂ ಪ್ರಫುಲ್ಲಮ
ಲ್ಲೀನವಪುಷ್ಪಮೋಗರದ ಕಂಪುಗಳಾಗರಮಾಯ್ತು ಸುಗ್ಗಿಯೊಳ್ || ೫೦

ಕಂ || ಮಧುಲಕ್ಷ್ಮೀನೃತ್ಯಗೃಹಂ
ಮಧುವ್ರತಸ್ತ್ರೀನಿಕಾಯಮಾಧ್ವೀಕಗೃಹಂ
ಮಧುಮಿತ್ರಜಗಜ್ಜೈತ್ರಾ
ಯುಧಗೃಹಮೆನೆ ವಿಕಚವಿಚಕಿಳಂ ಸೊಗಯಿಸುಗುಂ || ೫೧

ಬಳಸಿರ್ದ ವಿಟಪಿವಿಟಿಸಂ
ಕುಳಮಂ ಜೆಲ್ಲದೊಳೆ ನೋೞ್ಪ ಮಲ್ಲೀಲತಿಕಾ
ಲಳನೆಯ ಕಟಾಕ್ಷರುಚಿಯೆನೆ
ಮಿಳಿರ್ವುವು ಬಂಡುಂಡು ಪಾಱುವಳಿಮಾಳಿಕೆಗಳ್ || ೫೨

ವ || ಅದಲ್ಲದೆಯುಂ-

ಬಿರಯಿಗಭಿಚಾರಮಪ್ಪಂ
ತಿರೆ ಮುಳಿಸಿಂ ಕಂತುಮಾಂತ್ರಿಕಂ ಬೇಳಲ್ಕೆಂ
ದುರಿಪಿದ ಹೋಮಾಗ್ನಿಯ ಕೇ
ಸುರಿಯೆನಿಸಿದುವಸುಗೆಯೆಸೆವ ಪೊಸಪೂಗುಡಿಗಳ್ || ೫೩

ಬನಮೆಂಬ ಮದನನೃಪನರ
ಮನೆಯೊಳ್ ಪೊತ್ತಿಸಿದ ದೀಪಮಾಲೆಯ ಮಾಡ
ಕ್ಕನುರೂಪಮಾಗಿ ಪಣೆಯಿಂ
ಕೊನೆವರೆಗಂ ಪೂತುವರರೆ ಚಂಪಕನಿಕರಂ || ೫೪

ಚಂ || ಎನಗೆ ಜಗತ್ತ್ರಯೀಜಯಶರಾವಳಿಗೀವಿಟಪೀತ್ರಯೀಪ್ರಸೂ
ನನಿಕರವಾದುವೆಂದು ಮದನಂ ಮನದೊಳ್ ಮದವೇಱೆ ಪೇಱಿದ
ತ್ತನುಪಮಸೌರಭಂ ದೆಸೆಯನಾವರಿಪಂತು ಮರಲ್ದರಲ್ದ ಪೂ
ವಿನ ಪೊಸಗೊಂಚಲಂ ಕುರವಕಂ ತಿಲಕಂ ವಕುಲಂ ನಿರಾಕುಲಂ || ೫೫