ಕಂ || ಅಲರ ಪೊಸಗಂಪಿನಿಂದೆಮ
ಗಲಂಪನಗ್ಗಲಿಸಿ ನೀನೆ ರಕ್ಷಿಪುದೆನುತುಂ
ಬಲವಂದೆಱಗುವ ತೆಱದಿಂ
ಬಲವಂದೆಱಗಿದುವು ತುಂಬಿಗಳ್ ಪಾದರಿಯೊಳ್ || ೫೬

ಪಲತೆಱದ ಕನಕಭಾಜನ
ಕುಲದಿಂ ಜಲಜಲಿಪ ಭಾಜನಾಂಗಮಹೀಜ
ಕ್ಕಲಗಣಸೆನೆ ಕೊಸಗೆಸೆದುದು
ಮಲರ್ದಲರ್ದುಳ್ಳಲರ್ದ ಮಿಸುಪ ಪೊಸತಲರ್ದಲರಿಂ || ೫೭

ಬಳಸಿದ ಲತೆಗಳ್ ಶಾಖಾ
ವಳಿಯೊಂದಱೊಳೊಂದು ತಾಗೆ ಸುರಿವರಲಿಂ ಕ
ಣ್ಗೊಳಿಸಿದುವು ಚೈತ್ರದೊಳ್ ಗೊಂ
ದಳದಿಂ ಕೋಲ್ವೊಯ್ದು ನರ್ತಿಪಬಳಾವಳಿವೊಲ್ || ೫೮

ವ || ಮತ್ತಮಾ ಮಹಾವನಪ್ರದೇಶದೊಳ್-

ಕಂ || ವಿರಹಿಜನತರುಣಹರಿಣೋ
ತ್ಕರನಿರ್ದಾರಣಸಮುತ್ಥರಕ್ತಾತ್ತಪರಿ
ಸ್ಫುರದತನುಚಮೂರುನಖಾಂ
ಕುರಂಗಳೆನಿಸಿದುವು ಮಿಸುಪ ಮುತ್ತದ ಮುಗುಳ್ಗಳ್ || ೫೯

ಬಂದ ಬಸಂತಂಗಂದರ
ವಿಂದಿನಿ ಸೇಸಿಕ್ಕಲೆಂದು ನೆಗಪಿದ ಹಸ್ತ
ಕ್ಕೇಂ ದೊರೆವಂದುವೊ ಜಲಲವ
ದಿಂದೆಸೆವುನ್ನಾಳವಿಕಚಕೋಕನದಂಗಳ್ || ೬೦

ಚಂ || ಕಿಱುಮಡುಗೊಂಡ ಬಂಡಿನೊಳಗೀಸಿ ಪೊದೞ್ದಡಸಿರ್ದ ಕುತ್ತೆಸ
ಳ್ಗುಱುವದೊಳೆಯ್ದೆ ಮೆಯ್ಗರೆದು ಕೇಸರದೊಳ್ ನಲವಿಂ ಪೊರಳ್ದು ನೀ
ಳ್ದೆಱಗಿದ ಕೀೞೆಸಳ್ವೞಿಯನೊಯ್ಯನೆ ಜಾಱಿ ಪರಾಗಪುಂಜದೊಳ್
ಪಱಿವಡಿಸಿತ್ತು ಭೃಂಗಶಿಶು ನೀರಜದೊಳ್ ನಿಜಪಾಂಸುಕೇಳಿಯಂ || ೬೧

ಕಂ || ಮೃದುಕನಕಪದ್ಮ ಕೋಶಾ
ಗ್ರದೊಳೆಱಗಿದ ತುಂಬಿಯೆಸೆದುದಂಗಜರಾಜಾ
ಸ್ಪದಕನಕಪದ್ಮಕೋಶಾ
ಗ್ರದ ಲಾಕ್ಷಾಮುದ್ರೆಯೆನೆ ಸರೋಜಾಕರದೊಳ್ || ೬೨

ವ || ಮತ್ತಂ ಮದನನ ವದನದೊಡನೆ ಸಕಳತರುಮುಕುಳಮಲರೆಯುಂ ರತಿಯ ಸೊಬಗಿ ನೊಡನೆ ಪುನ್ನಾಗಮುಜ್ಜೃಂಭಿಸೆಯುಂ ಕಾಮುಕಜನದ ಜೀವಿತಾಶೆಯೊಡನೆ ಜಾತಿ ವಿತತಮಾಗೆಯುಂ ಪಥಿಕನಿಕರಹೃದಯದೊಡನೆ ತಳಿರ್ತ ತಮಾಲಲತೆ ಕೞ್ತಲಿಸೆಯುಂ ವಿಯೋಗಿಗಳ ಮೊಗಂಗಳೊಡನೆ ಬೆಳ್ದಿಂಗಳಳವಿಗಳಿದಬೆಳ್ಪನವಳಂಬಿಸೆಯುಂ ಕರಣಗಣದ ತೇಜಃಪ್ರಸರದೊಡನೆ ಬಿಸಿಲ ಬಿಸುಪಸದಳಮಾಗೆಯುಂ ಮೃದುಳಹಿಂದೋಳರಾಗರವ ದೊಡನೆ ಲೀಲಾಂದೋಳಚೀತ್ಕಾರರವಮೊಗೆಯೆಯುಂ ಜಿತೇಂದ್ರಿಯತೆಗೆ ಬಱಿದೆ ಜಱಚುವೆಗ್ಗರ ಜಡಾಶಯಂಗಳೊಡನೆ ಜಡಾಶಯಂಗಳೊಳಗೆಱೆಯಾಗೆಯುಂ ಕಾದಲರ ಪುರುಡಿನೆಸಕದೊಡನೆ ಇರುಳ ಬಳಗಂ ಬಡಬಡಾಗೆಯುಂ ಇಂತತಿಮನೋಹರ ಮಾದ ವಸಂತಸಮಯದೊಳ್-

ಚಂ || ಪುದಿಯೆ ಕವಿಲ್ತ ಕೇಸರದ ದೂಸಮಶೋಕೆಯ ವೀಣೆಯಂ ಪ್ರಿಯಾ
ಳದ ಗುಡಿ ನಾಗಚಂಪಕದ ಚಂಪೆಯಮಾಮ್ರದ ಕೊಂಚೆಯಂ ತಮಾ
ಳದ ಪರಿವೆತ್ತ ಜೋಳಪರಿ ತಳ್ತದಿರ್ಮುತ್ತೆಯ ಕುಪ್ಪಮೊಪ್ಪಿ ತೋ
ಱಿದುವು ಮನೋಜರಾಜಶಿಬಿರಂಗಳಿವೆಂಬಿನೆಗಂ ವನಾಳಿಗಳ್ || ೬೩

ಪೊಸಮಕರಂದಮೆಂಬ ಬೆಮರುಣ್ಮಿರೆ ತೆಂಬೆಲರೆಂಬ ಸುಯ್ಯೆಲರ್
ಪಸರಿಸೆ ಗುಚ್ಛಮೆಂಬ ಮೊಲೆ ಚಪ್ಪಲರ್ದೊಪ್ಪೆ ಸಿತಾಬ್ಜಮೆಂಬ ಕಣ್
ಮಿಸುಪ ಪರಾಗಮೆಂಬ ನಸುಗೆಂಪಿನೊಳೊಂದಿರೆ ನಾಡೆ ಕಣ್ಗೆಶೋ
ಭಿಸಿದಳಲಂಪಿನಿಂ ನೆರೆದು ನಂದನಲಕ್ಷ್ಮಿ ವಸಂತಕಾಂತನೊಳ್ || ೬೪

ವ || ಪರಿಕಿಸೆ ಕಂದರದ್ವಯಸಮಾಯ್ತು ವಿಭಾಸುರಕೇಸರಾಳಿಯೊಳ್
ಕರತರಣೀಯಮಾಯ್ತು ಪೊಸಮಲ್ಲಿಗೆಯೊಳ್ ಸಲೆ ನಾವ್ಯಮಾಯ್ತು ಚಂ
ಚುರಮುಚುಕುಂದಸಂಚಯದೊಳಂತವಕಾರ್ಯಮದಾಯ್ತು ಮುಕ್ತಪಂ
ಕರುಹದೊಳಾವಗಂ ಮಧುಪಮಾಳೆಗೆ ಮಾಧವದೊಳ್ ಮಧೂತ್ಕರಂ || ೬೫

ವ || ಅದಲ್ಲದೆಯುಂ-

ಕಂ || ಓರೆವರಿದಪುದು ಗಗನಾಂ
ಭೋರಾಶಿಯ ನಾವೆ ತೆಂಕಣೆಲರೂದಿದುದೆಂ
ಬೀರಾವಮೊದವೆ ನಡೆದುದು
ಸೌರಂ ರಥಮುತ್ತರಾಯಣಕ್ರಮದಿಂದಂ || ೬೬

ಉ || ಪೋದೊಲವೆಯ್ದೆ ಮತ್ತೆ ಪೊಸತಾದುವು ನೀರಸವಾಗಿ ಗಡ್ಡೆಯಂ
ಬೋದ ಮನಂ ಕೊನರ್ತುವಳಿವಾತುಗಳಿಂ ಮುಳಿದಿರ್ದ ನಲ್ಲರೊಂ
ದಾದರನಂಗಕೇಳಿಗನುರೂಪಮೆನಿಪ್ಪ ವಿಳಾಸದೊಳ್ ಜನ
ಕ್ಕಾದರವಾದುದಾದಮೆ ಪಸಾದದೆ ಬಂದ ಬಸಂತಮಾಸದೊಳ್ || ೬೭

ವ || ತತ್ಸಮಯದೊಳ್-

ಮ || ಸ್ರ || ಕೃತವೃಕ್ಷಾರೋಹಣಪ್ರಸ್ತುತನನವಿರಳಾನಂಗವಾರಿಪ್ಲವಾಂತ
ರ್ಗತನಂ ಸಂಭೋಗಲೀಲಾಕುಳಕರುಣನಿನಾದಾಸ್ಯನಂ ವಲ್ಲಭಾನು
ಷ್ಠಿತವಿಸ್ಪಷ್ಟೌಪರಿಷ್ಕವ್ಯತಿಕರವಿಧೃತಸ್ತ್ರೀತ್ವನಂ ಬಿಟ್ಟು ಗರ್ವೋ
ದ್ಧತನಂ ಕೈವೋಗದೆಚ್ಚಂ ಪಡಲಿಡೆ ಬಹಳಾಕ್ಷೇಪದಿಂದಿಕ್ಷುಚಾಪಂ || ೬೮

ಮ || ವಿ || ಪಗೆಯಂ ಸಂಪಗೆಯೀಶನೊಳ್ ನೆರಪಲಾದತ್ತೊಳ್ಪನೋರಂತೆ ಮ
ಲ್ಲಿಗೆ ನಮ್ಮಲ್ಲಿಗೆ ಸಾರ್ಚಲೆಯ್ದಿದುದು ಮತ್ತಂ ಮತ್ಪ್ರಿಯಾಚಿತ್ತವೃ
ತ್ತಿಗೆ ಕಂಪಾದರಿಪಂತು ಪಾದರಿಯೊಳಾದತ್ತಣ್ಣ ನಿನ್ನೊಂದು ಪೊ
ರ್ದುಗೆಯಿಂದೆಂದುವಸಂತನೊಳ್ ನುಡಿದು ತಾನೇಂ ಕಂತುಮುಯ್ಯಾಂತನೋ || ೬೯

ವ || ಅಂತು ಕಾಮಕಾಮದುಘೆಯಪ್ಪ ಸುರಭಿಯಂದದೆ ಬಂದ ಸುರಭಿಸಮಯದ ಶ್ರೀಯ ಬರವಂ ವನಮಹತ್ತರನ ಬಿನ್ನಪದಿನಜಿತಸೇನಚಕ್ರವರ್ತಿಯಱಿದು ಕೌತುಕಾಯಮಾನಮಾನ ಸಂ ಮನೋವಲ್ಲಭೆಗೆ ಶಶಿಪ್ರಭಾಮಹಾದೇವಿಗಱಿಪಲೆಂದು ಕರುಮಾಡದಿಂದಿೞಿದು ರಾಣಿವಾಸಕ್ಕೆ ಬಂದು ಪಜ್ಜಳಿಪ ಪಳುಕಿನ ಸಜ್ಜೆವನೆಯ ಮುಂದಣೆತ್ತಿದ ಮುತ್ತಿನ  ಮಂಡವಿಗೆಯ ನಡುವೆ ಸುತ್ತಿದ ಚಿತ್ರಾವಳಿಯ ತೆರೆಯ ಸೀರೆಯಂ ಪ್ರತೀಹಾರನೆತ್ತಲೊ ಡನೊಳಪುಗುವಾಗಳತ್ಯಂತಸಾಧ್ವಸಾಕುಳಿತಚಿತ್ತೆಯಿತ್ತ ಬಿಜಯಂಗೆಯ್ಯಿಮೆನುತ್ತುಂ-

ಚಂ || ತೆರೆಗಳಡಂಗಿದಿಂಗಡಲಿನಂದೊಗೆತಂದು ಮರಲ್ದರಲ್ದ ತಾ
ವರೆಯರಲಲ್ಲಿ ನಿಂದ ಸಿರಿಯೊಳ್ ದೊರೆಯಾಗಿ ದುಕೂಲಚೇಲದಿಂ
ತೆರಳದೆ ಕೂಡಿ ಹಚ್ಚವಡಿಸಿರ್ದ ಸಮುಜ್ಜ್ವಳಶಯ್ಯೆಯಿಂದಮೆ
ೞ್ದರಸಿ ಬೞಿಕ್ಕಳಂಕರಿಸಿದಳ್ ನವಹಾಟಕಪೀಠಿಕಾಗ್ರಮಂ || ೭೦

ವ || ಆಗಳರಸನುಂ ತಳ್ಪತಳವನೊಲ್ಲದೆ ವಲ್ಲಭೋಪವಿಷ್ಟವಿಷ್ಟರಾರ್ಧಮನೌಂಕಿ ಸೋಂಕಿ
ಕುಳ್ಳಿರ್ದು-

ಕಂ || ಸುಳಿಗುರುಳಂ ನೊಸಲೊಳ್ ಮೆ
ಯ್ವಳಿಯಿಂ ತಿರ್ದುತ್ತು ಮೋಲೆಯಂ ಪೆಗಲೊಳ್ ತಂ
ದಿಳಿಪುತ್ತುಮಾರಮಂ ಕು
ಪ್ಪಳಿಸುತ್ತುಂ ತನ್ನ ತಳದೊಳಂದಿಂತೆಂದಂ || ೭೧

ಚಂ || ಲಲಿತತಮಾಳಿಕಾಳಕೆ ಕನ್ವದ್ದ್ವಿಜಪಙ್ಕ್ತಿನಿಕಾಮಕೋಮಳಾಂ
ಗಲತೆಯಶೋಕಕಾಂತಕಳಿಕಾಧರೆ ಮಂಡಿತಕಾದಳೋರುಮಂ
ಡಲೆ ಸುಪುನರ್ನವೋದಯವಿಳಾಸೆ ಬರಲ್ ವನಲಕ್ಷ್ಮಿ ಪೇೞ್ದಪಳ್
ಕಲಪಿಕನಾದದಿಂದೆ ನಿಜಲೀಲೆಯನೀಕ್ಷಿಸಲೆಂದು ದೇವಿಯಂ || ೭೨

ವ || ಅದುಕಾರಣದಿಂ-

ಕಂ || ಮರಗಳೆಡೆಯೆಡೆಯ ನೆಲನಂ
ಚರಣಾಂಶುವಿನಿಂ ತಳಿರ್ಚು ಬಯಲಂ ನಿಜಕೇ
ಕರರುಚಿಯಿನಲರ್ಚೇೞ್ತಂ
ದರಸಿ ಬನಕ್ಕಂ ಬೞಿಕ್ಕೆ ಸಿರಿ ಪರಿಪೂರ್ಣಂ || ೭೩

ದೇವಿ ನಿಜಪದನಖೇಂದುಕ
ರಾವಳಿಯಿಂ ತೀವಿ ವನಸರೋವರಮಂ ರಾ
ಜೀವಕ್ಕಿತ್ತು ವಿಕಾಸಮ
ನಾವಗಮಿಂ ನೆರೆಪು ಪಗೆಯನೀನಗೆಮೊಗದಿಂ || ೭೪

ವ || ಮತ್ತಂ-

ಕಂ || ದಯೆಗೆಯ್‌ ಪದಪಾತಮನಸು
ಗೆಯೊಳಂತದು ತಳಿರ್ಗುಮತ್ತೆನಿಪ್ಪನಿತಲ್ತಾ
ರಯೆ ಮತ್ತಮಲರ್ಗುಮಿತ್ತೆ
ನ್ನಯ ಚಿತ್ತಂ ಸಫಲಮಕ್ಕುಮುತ್ತ ಬಸಂತಂ || ೭೫

ಭಂಗಮನುಂತುಂ ತಳೆದ ಲ
ತಾಂಗಮನಿಂ ನಿನ್ನ ಕೋಮಳಾಂಗದ ಚೆ
ಲ್ವಿಂ ಗೆಲ್ದೆಯ್ದಿಸು ಪೊಸತಂ
ಭಂಗಮನೇೞ್ತಂದನಂಗಜಂಗಮಲತೆಗೇ || ೭೬

ವ || ಅದಲ್ಲದೆಯುಂ-

ಉ || ಅಂಚೆಗೆ ಮಂದಯಾನಮದವಿಂದೊಳಸೋರ್ಗೆ ಮದೋತ್ಕಕೋಕಿಳ
ಕ್ಕಂ ಚಿರಮಕ್ಕೆ ಕಾಕಳಿಯ ಹೂಂಕೃತಿ ಭೃಂಗಚಯಕ್ಕೆ ಮೇಚಕೋ
ದಂಚಿತದರ್ಪಮುಬ್ಬರಿಸದಿರ್ಕಿನಿಸಂ ಮೆಱೆ ಬಂದು ನೀಂ ಬನ
ಕ್ಕಂ ಚಪಳಾಕ್ಷಿ ನಿನ್ನ ನಡೆಯಂ ನುಡಿಯಂ ಮುಡಿಯಂ ವಿನೋದದಿಂ || ೭೭

ವ || ಎಂದು ಕರ್ಣಾಮೃತಸ್ಯಂದಿಗಳಪ್ಪ ನುಡಿಗಳಂ ನರೇಂದ್ರಂ ನುಡಿಯಲೊಡಮಾಕೆಯು ಮುಚಿತಪರಿಹಾಸವಚನ ಕೇಕರಾಳೋಕನಾಂಕಪಾಳೀಲೀಲಾದ್ಯನುಭಾವಂಗಳಿನೊಡಂ ಬಡಂ ಪ್ರಕಟಂಮಾಡೆ-

ಚಂ || ಪಡೆದವತಂಸಮಂ ಕಿವಿಗೆ ನುಣ್ನುಡಿಯಿಂ ದರಹಾಸರಶ್ಮಿಯಿಂ
ಪಡೆದೆನಸುಂ ನಿಜಾಕೃತಿಗೆ ಚಂದನದಣ್ಪನಪಾಂಗರೋಚಿಯಿಂ
ಪಡೆದಳಿಕುಂತಳಕ್ಕಲರ ಬಾಸಿಗಮಂ ತನಗಂದು ಸೋಂಕಿನಿಂ
ಪಡೆದನುಡಲ್ ನೃಪಂ ಸತಿಯ ಮೆಯ್ವೆಳಗೆಂಬ ನವೀನಚೀನಮಂ || ೭೮

ವ || ಅನಂತರಂ ವಸಂತವನಕೇಳೀಪ್ರಸ್ಥಾನತೂರ್ಯಂಗಳಂ ಪೊಯ್ಸಿದಾಗಳ್-

ಉ || ಶ್ಯಾಮತೆಯಿಂ ವಿರೂಪತೆಯಿನಾರಯೆ ನಿನ್ನ ಸಖಂ ಮನೋಜನಂ
ತಾ ಮದನಂಗಮಾದುದು ವಸಂತನ ಪೊರ್ದುಗೆಯಿಂದಮುತ್ಸವೋ
ದ್ದಾಮತೆಯಂತದಂ ನಿನಗೆ ಸೂಚಿಸಲಾಂ ಪರಿತಂದೆನೆಂಬವೊಲ್
ವ್ಯೋಮಮನೆಯ್ದಿದತ್ತು ಪಟಹಸ್ಫುಟಪಾಟರವಂ ಸಮುತ್ಕಟಂ || ೭೯

ವ || ಅನಂತರಮರಮನೆಯ ಬಾಗಿಲೊಳ್ ಪಣ್ಣಿ ಬಂದಿರ್ದ ವಿಜಯಪರ್ವತ ಗಜಮಂ ನರೇಂದ್ರಚೂಡಾಮಣಿಯಿಂದ್ರಾಣಿವೆರಸು ಐರಾವತಮನೇಱುವಮರೇಂದ್ರನಂತೆ ಮಾದೇವಿವೆರಸೇಱಿ-

ಉ || ಆನೆಯ ಮೇಲೆ ಮೇಳವಿಪ ಮುತ್ತಿನ ಸತ್ತಿಗೆಯಿತ್ತ ತಣ್ಣೆೞಲ್
ಪೀನಕುಚಾಗ್ರದಿಂದಡರೆ ಸೋಂಕುವ ನಲ್ಲಳ ಸೋಂಕಲಂಪಿನು
ದ್ದಾನಿಯನೀಯೆ ಸಂತಸದದೊಂದದಗುಂತಿಯೆ ರೂಪುಗೊಂಡುದೆಂ
ಬೀ ನುಡಿಗಿರ್ಕೆಯಾಗೆ ನಡೆದಂ ವನಕೇಳಿಗೆ ರಾಜಕುಂಜರಂ || ೮೦

ವ || ಅಂತು ಪುರಮಂ ಪೊಱಮಟ್ಟು-

ಕಂ || ಬನದ ಬಿನದಕ್ಕೆ ತಕ್ಕನಿ
ತನೆ ಪರಿಜನಮಂ ಬರಲ್ಕೆವೇೞೆನೆಯುಂ ತ
ಜ್ಜನಮಾದುದನೂನಮದೇ
ನನನ್ಯಸಾಮಾನ್ಯಮೋ ನರೇಂದ್ರನ ವಿಭವಂ || ೮೧

ವ || ಎಂಬಿನಮಳುಂಬಮಾಗಿ ಶಿಬಿಕೆಗಳ ತಿಂತಿಣಿಯೊಳ್ ಬರ್ಪಂತಃಪುರಕಾಂತಾಸಂತಾನ ಮುಂ ಅಂದಣದ ಗೊಂದಣದೊಳ್ ಬರ್ಪ ವಾರನಾರೀನಿಕರಮುಂ ಪೇರಾನೆಯ ಪಿಂಡುಗಳೊಳ್ ಬರ್ಪ ಚತುರಪ್ರಧಾನಪ್ರತಾನಮುಂ ಪಿಡಿಯ ಗಡಣಂಗಳೊಳ್ ಬರ್ಪ ಸೇವಕಮಹಿಳಾಮಂಡಳಮುಂ ಕುದುರೆಯ ಕದಂಬದೊಳ್ ಬರ್ಪ ಪಾರ್ಥಿವ ಪುತ್ರಸಾರ್ಥಮುಂ ವೇಸರಿಯ ನೆರವಿಗಳೊಳ್ ಬರ್ಪ ದೇಶಿಕುತಪವಿತತಿಯುಂ ಪಾದಮಾರ್ಗದಿಂ ಮೊಗ್ಗರಮಾಗಿ ಬರ್ಪ ಖಡ್ಗವ್ಯಗ್ರಹಸ್ತೋಗ್ರಭಟಪೇಟಕಮುಂ ಮತ್ತವರ್ಗವರ್ಗೆ ಪಿಡಿದ ಮೇಘಡಂಬರದ ಝಲ್ಲರಿಯ ಪಲ್ಲತೊಂಗಲ ಚೌಕಸತ್ತಿಗೆಯ ಕೊಡೆಯ ಗಡಣಂಗಳುಂ ಮಂದೆ ಪರಿವ ಪಡೆವಳಗಟ್ಟಿಯ ಪೀಲಿಯ ಕರಗದುಪ್ಪರಗುಡಿ ಯೊಜ್ಜರದ ರಾಜಸಿಂಧದ ಸಂದಣಿಯುಮೆಸೆಯೆ ಕುಸುಮಾಕರೋದ್ಯಾನಕ್ಕೆ ನಡೆಯೆ ನಡೆಯೆ-

ಕಂ || ದೆಸೆಯಂ ಛತ್ರಪ್ರಸರದೆ
ಮುಸುಂಕಿ ಕೞ್ತಲೆಯನೊರ್ಮೆ ಮಣಿಭೂಷಣರು
ಗ್ವಿಸರದೆ ಮುಸುಂಕಿ ಸಂಜೆಯ
ಬಿಸಿಲಂ ಮತ್ತೊರ್ಮೆ ಮಾಡಿದುದು ತದ್ಯಾನಂ || ೮೨

ವ || ಅಂತುದ್ಯಾನಪರಿಸರಕ್ಕೆ ಬರ್ಪಾಗಳ್-

ಕಂ || ಅಮರ್ದನೆಳಮಾವಿನೊಳ್ ದಾ
ಡಿಮದೊಳ್ ಮಲ್ಲಿಗೆಯೊಳಿರ್ದ ಕೋಗಿಲೆ ಗಿಳಿ ತುಂ
ಬಿ ಮಹೀಶನ ಕಿವಿಗಾಗಳ್
ಕ್ರಮದಿತ್ತುವು ತಾರಮಧ್ಯಮಂದ್ರಸ್ವರದಿಂ || ೮೩

ವ || ಅದಲ್ಲದೆಯುಂ-

ಚ || ಇನಿತಿದಿರ್ವಂದು ತಂದಲರ್ಗಳೋಳಿಯನೊಯ್ಯನೆ ಕಾಣ್ಕೆಗೊಟ್ಟು ತ
ದ್ವನದ ಕೊಳಂಗಳೊಳ್ದೆರೆಯಿನುಣ್ಮುವ ತಣ್ಬನಿಯಿಂದೆ ಪಾದ್ಯಮಿ
ತ್ತನುಗತಮತ್ತಭೃಂಗರುತದಿಂ ಪ್ರಿಯಮಂ ನುಡಿದಿಂತು ಬಂದ ಬಿ
ರ್ದಿನನೆನೆ ಮನ್ನಿಸಿತ್ತು ನೃಪನಂ ತ್ರಿಗುಣೋದ್ಧರಣಂ ಸಮೀರಣಂ || ೮೪

ವ || ಅನಂತರಂ ಬಂಧುರಸಿಂಧುರಸ್ಕಂಧದಿನಿೞಿದು ವನಪ್ರತೋಳಿಕಾದ್ವಾರಮಂ ಪೊಕ್ಕು ವನಜಳ ಕ್ರೀಡೋಪಯೋಗ್ಯ ಕತಿಪಯಪರಿವಾರಸಮೇತನುಂ ವಾರನಾರೀಪರಿಜನಪರೀತನುಂ ವಾಮಪಾರ್ಶ್ವಗತಮಹಾದೇವೀಕಟಾಕ್ಷ್ಯೈಕಲಕ್ಷ್ಯನುಂ ನರ್ಮಸಚಿವಪ್ರಕೋಷ್ಠನಿವೇಶಿ ತಸವ್ಯಪಾಣಿಪಲ್ಲವನುಂ ವಿಲಿಪ್ತಯಕ್ಷಕರ್ದಮಾಮೋದಾಕೃಷ್ಟವನಕುಸುಮಾಲೋಲ ಲೋಲಂಬಕದಂಬನುಂ ವೀಜ್ಯಮಾನಧವಳಚಮರರುಹಪವನವಿನಿವಾರಿತಾನೇಕತರು ಪ್ರಸೂನವಿಸರತ್ಪರಾಗನುಂ ಮಹಾಪ್ರತೀಹಾರಕೋದ್ಘುಷ್ಯಮಾಣಸರಣಿಧರಣೀಕನುಂ ಹೇಳಾವಲೋಕನಾಮೃತನಿಷಿಚ್ಯಮಾನತರುಲತಾಪ್ರತಾನನುಂ ವನಮಹತ್ತರಪುರಸ್ಸರನು ಮಾಗಿ ಬರ್ಪಾಗಳ್-

ಕಂ || ನೃಪನ ಮನಕ್ಕೆಸೆದುದು ಪನ
ಸಪಙ್ತ್ಕಿಸಾಲಕುಜರಾಜಿಯಾಮ್ರಾವಳಿ ಮ
ತ್ತಪರಿಮಿತಂ ವಿಚಕಿಳವೀ
ಧಿ ಪಾಟಳೀಪಾಳಿ ಮಾಧವೀಮಾಳೆ ಕರಂ || ೮೫

ವ || ಅಲ್ಲಿ-

ಕಂ || ಎಳವಲಸು ನಿಜಸ್ಕಂಧಾ
ವಳಂಬಿಯೆನಿಸಿರ್ದ ತೋರವಣ್ಗೊನೆಯಿಂ ಕ
ಣ್ಗೊಳಸಿತ್ತು ಕಾಮಧಾತ್ರೀ
ತಳಪಾಲಕನಡಪವಳನ ದೊರೆಯೆನೆ ಪಿರಿದುಂ || ೮೬

ವ || ಎಂದು ಮದನವೀಣೆಯೆಂಬರಸಿಯ ಪರಿಚಾರಕಿ ನುಡಿದೊಡದಂ ನೋಡುತ್ತುಂ ನಡೆಯೆ
ನರ್ಮಸಚಿವಂ ನಂದನನೆಂಬನಿಂತೆಂದಂ-

ಪಿಡಿ ಪಣೆ ತೋಳ್ ತುದಿ ಮೊಳೆ ಮೊಳೆ
ಮಿಡಿಯೆನೆ ತೋಱಿತ್ತು ವಿರಹಿಕೌರವಬಲಮಂ
ಬಡಿವಲ್ಲಿ ಕಾಮಭೀಮಂ
ಪಿಡಿದ ಗದಾದಂಡಮೆನಿಸಿ ಮಾಮಾರನಿದಿರೊಳ್ || ೮೭

ವ || ಅಂತವರಿರ್ವರ ನುಡಿಗಮರ್ಥದ್ರಷ್ಟೃತ್ವಕ್ಕಮನುರೂಪಮಾದುವೆನುತ್ತುಂ ಬರ್ಪನ್ನೆಗಂ-

ಮ || ಸ್ರ || ತನಿವಣ್ಣಿಂ ಮಾರುತಾಂದೋಳದಿನೊಸರ್ವ ಪೊಸರಸಾಸಾರಮಂ ದೂರದಿಂ ಭೋಂ
ಕನೆ ಕಂಡೈತಂದು ಕಂಠಂ ನಿಮಿರ್ದಮರ್ದಿರೆ ಪಕ್ಷದ್ವಯಂ ಜೋಲೆ ಕಣ್ ಮೀ
ಲನದೊಳ್ ಸಮ್ಮೇಳನಂಬೆತ್ತಿರೆ ತಣಿವಿನೆಗಂ ಪೀರ್ದು ಮೆಯ್ವೆರ್ಚಿ ಕೀೞ್ಗೊಂ
ಬಿನೊಳಡ್ಡಂಮೆಟ್ಟಿ ತೆಟ್ಟುಂದೆಱೆಯೆ ಗಳಪಿದತ್ತಾಮ್ರದದೊಳ್ ತಾಮ್ರತುಂಡಂ || ೮೮

ವ || ಆಗಳಾ ಗಿಳಿಯ ಗಿಳಿಗೆಡಪಕ್ಕೆ ಮುಗುಳ್ನಗೆನಗುತ್ತುಮೀಷದಾನತಾನನೆಯಾದೋಪಳಂ ಭೂಪಾಳಂ ಚಾಳಿಸಿ ವಾಮಕೋಮಳಸೂಚೀಹಸ್ತದಿಂ ತೋಱಿ-

ಕಂ || ಪ್ರಣವೋತ್ಥಶ್ರುತಿಮಧುರ
ಕ್ವಣಿತಂ ದ್ವಿಜಮುಖ್ಯವೃತ್ತಿ ಕೃಷ್ಣರುಚಿತ್ವಂ
ಪೆಣೆದಿರೆ ಪುರೋಹಿತಬ್ರಾ
ಹ್ಮಣನೆನಿಸಿದುದತನುನೃಪತಿಗೀಪರಪುಷ್ಟಂ || ೮೯

ವ || ಮತ್ತಂ-

ಪ್ರಿಯೆ ನಿನಗೆ ಪುಟ್ಟಿದೀಕಳಿ
ಕೆಯೆ ತಾನೆನಗಂತಱಿಂದೆ ಮಾವಂ ನೀಂ ನಿ
ಶ್ಚಯಮೆಂಬ ತೆಱದೆ ಮಾವಂ
ನಯದಿಂ ಸಾರ್ದಳಿಯನಳಿಯನೆನ್ನದರೊಳರೇ || ೯೦

ವ || ಎನುತ್ತುಂ ನಡೆಯೆ ಮುಂದೊಂದೆಡೆಯೊಳ್-

ಕಂ || ಇಡಿದಡರೆ ಪೂತು ಮೊದಲಿಂ
ಮಡಲ್ತು ಸುತ್ತಿಱಿದ ಮಲ್ಲಿಗೆಯ ಪೊದಱಿರೆ ಪಾ
ಲ್ಗಡಲ ಸುೞಿ ಬಳಸಿದಂತಿರೆ
ನಡುವಿರ್ದುದು ಪಾರಿಜಾತದಂದದೆ ಚೂತಂ || ೯೧

ಮ || ಸ್ರ || ಇದು ಧಾತ್ರೀಪಾರಿಜಾತಂ ಸಕಲಸುಕವಿವೃಂದಪ್ರಣೂತಂ ವಸಂತಾ
ಭ್ಯುದಯಪ್ರೀತಂ ಮನೋಭೂನೃಪವಿಜಯರಥಖ್ಯಾತಸೂತಂ ವನಶ್ರೀ
ಸುದತೀಪ್ರೇಮಾತ್ಮಜಾತಂ ಫಲತರುವರವೃಂದಾರಕತ್ವಾಭ್ಯುಪೇತಂ
ಮದಭೃಂಗೀಗೀತಗೀತಂ ಕೃತವಿರಹಿವಿಘಾತಂ ದಲೀ ಬಾಲಚೂತಂ || ೯೨

ವ || ಮತ್ತಂ-

ಚಂ || ತಳಿರ್ವೊಱೆವೊತ್ತುದಲ್ಲದಲರಂ ಸಲೆ ತಾಳ್ದುವ ಸೈಪುವೆತ್ತುದೇ
ಮಳಯಜವೆಯ್ದೆ ಕೆಂದಳಿರ್ಗಳಿಂದಲರಿಂ ಬಳಸಿರ್ದುದಲ್ಲದೇ
ಫಳಿಯಿಸಲಾರ್ತುದೇ ಅಸುಕೆ ಚೆಂದಳಿರಿಂದಲರಿಂ ಪೊದೞ್ದಪ
ಣ್ಗಳಿನಳವಟ್ಟ ಚೂತಮಿದು ಭೂತಳಕಲ್ಪಕುಜಾತಮಲ್ಲವೇ || ೯೩

ವ || ಎಂದು ಉದಾತ್ತವಚನಂಗಳಂ ಕಾವ್ಯನೌಕರ್ಣಧಾರಂ ನುಡಿದು ಮಾಣಲೊಡಮರಸಿ ಮದನವೀಣೆಯ ಕಿವಿಯಂ ಪಚ್ಚುವುದುಮಾಕೆ ದೇವಿಯೆಂದಪಳೆಂದಿಂತೆಂದಳ್-

ಕಂ || ತನುಸೋಂಕಿ ಸೋಂಕಿನೊಳ್ ಬಂ
ದು ನಿಂದ ಸಹಕಾರಕಾಂತನೊಳ್ ಸೊಗಯಿಸಿದ
ತ್ತೆನಸುಂ ನಿಜಸುಮನೋವಿಕ
ಸನದಿಂ ಪ್ರಿಯಮಲ್ಲಿಕಾಲತಾವೇಷ್ಟಿತಕಂ || ೯೪

ವ || ಎಂಬುದುಮರಸನದರ್ಕೆ ಮೆಚ್ಚೆ ನಂದನಂ ತಾನುಮೊಸೆಯಿಸುವ ಬಗೆಯಿಂ ಪೊಸತು ಮಾತಂ ಪೊಸೆಯಿಸೆ ಕೆಲದೊಳೆಂದು ಮಾಕಂದಾನೋಕಹಮಂ ತೋಱಿ-

ಕಂ || ನೆಱೆಯೆ ಪಣೆಮುಟ್ಟಿ ಕೈವಂ
ದೆಱಗಿದುದಿದು ದೇವ ನಿನಗೆ ಹೃದಯಂ ತಾನೆ
ತ್ತಱಿದುದೆನವೇಡ ಧಾರಿಣಿ
ಯೆಱೆಯಂಗೆಱಗುವುದು ಚೋದ್ಯಮೇ ಧರಣೀಜಂ || ೯೫

ವ || ಆಗಳರಸನದರ್ಕೆ ಪರಕೆಯೆಂದು ಮೆಚ್ಚುಗೊಟ್ಟು ನಡೆವುದುಂ ಮುಂದೊಂದು ಪಲ್ಲವಿ ತಕಂಕೆಲ್ಲಮಂ ನೋಡಿ-

ಕಂ || ಅತಿರಾಗತೆಯಿಂ ಸ್ತ್ರೀಪದ
ಹತಿಗಂ ದಳವೇಱಿಯಲರ್ದಶೋಕಂ ಫಳಹೀ
ನತೆಗೆಡೆಯಾದುದು ಕಡೆಯೊಳ್
ಮತಿಗೆಟ್ಟಂಗೀಗುಮತ್ಯಯಂ ವ್ಯತ್ಯಯಮಂ || ೯೬

ವ || ಎಂದಲ್ಲಿಂ ತಳರ್ದು ವನಶ್ರೀವಿಳಾಸಮಂ ಭಾವಿಸುತ್ತುಂ ಬರೆ ಮುಂದೊಂದೆಡೆಯ ತೆಱಪಿನೊಳ್ ನಳನಳಿಪ ಕೇಸರದ ಸಸಿಯೊಳ್ ತಡಂಗಲಿಸಿ ಬೆಳೆದ ದವನದ ಕಣ್ಗೆವಂದ ವನದ ನಡುವೆ ದಿಟ್ಟಿಗೆವರೆ ಕಟ್ಟಿ ನೇರ್ವಟ್ಟ ಬಾಳೆವೇರ ಕೇರ್ಗಳೊಳಂ ಅಂದಂಬೆತ್ತ ಬಂದುಗೆಯೆಸಳಿಂ ಕತ್ತರಿಸಿ ಪತ್ತಿಸಿದ ಚಿತ್ರಪತ್ರಂಗಳಳುಂಬಮಾದ ಪೊಂಬಾಳೆಯ ಕಂಬಂಗಳೊಳಂ ಅರಲ್ದ ತಾವರೆಯ ತಣ್ಣೆಲೆಯ ಪಲಗೆಗಟ್ಟನೋವರಿಗಳೊಳಗಣ ಕಪ್ಪುರವಳಿಕಿನಳವಟ್ಟ ಜಗಲಿಗಳ ಮೇಲೆ ಪಸರಿಸಿದ ಕುಸುಮದೆಸಳ ಪಸೆಗಳೊಳಂ ಅಮರೆ ತಾವರೆಯ ನೂಲಿಂ ಕೀಲಿಸಿದೆಳವಾೞೆಯ ಸುೞಿಯೆಲೆಯ ತಳಿತಳಿಪ ಮೇಲ್ಕಟ್ಟಿನೊಳಂ ಅದಱೊಳಲ್ಲಲ್ಲಿಗೊಂದೊಂದುಕೆಂದಾವರೆಯರಲ್ಗಳಂ ಕೊಟ್ಟು ಕೊಸಗಿನೆಸಳಂ ಬಿಗಿಗಟ್ಟಿ ಪೊಸಯಿಸೆ ಮನಕ್ಕೆ ಪದೆಪನೀವ ಪದಂಗಳೊಳಂ ಎಳದೆಂಗಿನೆಳೆಯೆಲೆಯನಮರ್ಕೆವಡೆಯೆ ಪೆಣೆದು ಸಂಪಗೆಯ ಮುಗುಳನಗೆಗಳಿಂ ತೆತ್ತಿಸಿ ಬಿತ್ತರಂಬಡೆದ ಜವಳಿವಡಿಗಳೊಳಂ ಅಸುಗೆಯ ಮಿಸುಪ ಪೊಸದಳಿರಿಂದೆಸೆಯೆ ಪೊದೆಯಿಸಿ ವಾಸಂತಿಯ ಮುಗುಳ ಸೂಸಕದಿಂ ದೇಸೆವಡೆದ ವಿಳಾಸವಾಸಲಕ್ಷ್ಮಿಯ ಚುಂಚಿನಂತೆ ಚಂಚುರಮಾದ ಚಂಚುಲೋವೆಗಳೊಳಂ ಓರನ್ನಮಾದ ಚಂದನದ ತಳಿರ ವಂದನಮಾಲೆಯೊಳಂ ಇಮ್ಮಾವಿನೆಳದಳಿಸಿ ಪೊಳೆವ ಪೂಗುಡಿಯ ಗುಡಿಯೊಳಂ ಅವಿರಳಮಾಗಿ ತಳಿದ ಕುಂಕುಮಜಳದ ಚಳೆಯದೊಳಂ ಆವ ಬಗೆಗಂ ಮಾಸರವಾದ ನಾಗಕೇಸರದ ರಜದ ರಂಗವಲ್ಲಿಯೊಳಂ ಭಂಗಿವೆತ್ತು ಕಂತುರಾಜನ ಮಂತ್ರಶಾಲೆಯುಂ ಶೈತ್ಯದ ನೃತ್ಯಭವನಮುಂ ಕಂಪಿನ ಕಾರಾಗಾರಮುಂ ಚೆಲ್ವಿನ ಕುಲಗೃಹಮುಮಿರ್ಪಂತಿರ್ದ ವಸಂತಗೃಹಮಂ ಪೊಕ್ಕು ನಡುವಣೆಳಗೌಂಗಿನ ಬಾಳ್ಗಂಬದೊಳ್ ತೊಡರ್ಚಿದ ಲತೆಯ ತೊಡರ ತೂಗುಂಮಂಚದೊಳ್ ಶಶಿಪ್ರಭಾಮಹಾದೇವಿಯುಂ ತಾನುಂ ಕುಳ್ಳಿರ್ದು-

ಉ || ತಾಳಮನಿತ್ತು ಸಮ್ಮನಿಸದೊತ್ತುವ ಪಂಚಮನುಣ್ಚರಕ್ಕಣಂ
ಮೇಳತೆಯಿಲ್ಲ ಬೀಣೆಯ ಸರಂ ಬಿಡದಿಲ್ಲಿಯೆನಿಪ್ಪ ಠಾಯೆಯಿಂ
ದಾಣತಿಮಾಡಿ ಸಾಳಗದ ದೇಸಿಯ ಗೀತಮನಂದು ಪಾಡುವಿಂ
ಪಾಣನನುರ್ವರಾಧಿಪತಿ ಲೀಲೆಯಿನೆಕ್ಕಲಗಾಣನೊರ್ವನಂ || ೯೭

ವ || ಕೇಳುತ್ತುಮಿರ್ದಂ ಅನ್ನೆಗಮಿತ್ತ ಕುಸುಮಾಪಚಯದೋಹಳಹೃದಯಮಾಗಿ-

ಮ || ಸ್ರ || ಕಳಹಂಸೀಯಾನಮುತ್ಕಂಪಿತಕುಚಭರಸಂವ್ಯಾನಮಾ ಕೇಕರತ್ವಿ
ಡ್ವಳಿತೋದ್ಯಾನಂ ಗಳದ್ವಿಶ್ಲಥಕಬರಿಭರಾಂತಃಪ್ರಸೂನಂ ಚಳದ್ದೋ
ರ್ವಳಯೋದ್ಯದ್ಧ್ವಾನಮುತ್ಸಾರಿತಸರಣಿಲತಾನ್ಯೋನ್ಯಸಂಧಾನಮಂತಾ
ಗಳೆ ವಾರಸ್ತ್ರೀಪ್ರತಾನಂ ತಳರ್ದುದಳಿವಧೂಗಾನದತ್ತಾವಧಾನಂ || ೯೮

ವ || ಅಂತು-

ಕಂ || ತಳರ್ದಸುಕೆಯಿನಸುಕೆಗೆ ವಿಚ
ಕಿಳದಿಂ ವಿಚಕಿಳಕೆ ಮಾವಿನಿಂ ಮಾವಿಂಗೊ
ಳ್ದಳಿರ್ಗಲರ್ಗೆ ಫಲಕೆ ಪರಿದ
ತ್ತೆಳವೆಂಡಿರ ನೆರವಿ ನಲಿದು ತಾಱುಂ ಬೞಿಯಂ || ೯೯

ಅಳಿಗೆ ಕುರುಳ್ ತಳಿರ್ಗೆ ತಳಂ
ಕಳಿಕೆಗೆ ಬೆರಲಲರ್ಗೆ ಕಣ್ಮಲರ್ ದೊರೆಯೆನೆ ಕೋ
ಮಳಲತೆಗಳೊಳಂ ಸಲೆ ಕೋ
ಮಳೆಯರ್ ತಡವಾಯ್ದರೆಯ್ದೆ ಪೂಗೊಯ್ವೆಡೆಯೊಳ್ || ೧೦೦