ವ || ಆಗಳ್ ಮತ್ತೊರ್ವಳ್-

ಕಂ || ತೆಗೆದು ನನೆಗೊಯ್ದು ಬಿಡೆ ಮೇ
ಲೊಗೆವೆಳದಳಿರ್ಗೊಂಬು ಪೋಲ್ತುದಾ ಪೂವಿನ ಸೂ
ಱೆಗೆ ತೊವಲಂ ಪಿಡಿದು ಮದಾ
ಳಿಗಳುಲಿಯಿಂ ಪುಯ್ಯಲಿಡುವಶೋಕೆಯ ಕೈಯಂ || ೧೦೧

ವ || ತತ್ಸಮೀಪದೊಳ್-

ಉ || ನಿಳ್ಕುವರಲ್ಗೊಳಲ್ಕಿವಱೊಳಪ್ಪುದೆನಿಪ್ಪ ಮರಲ್ದ ಪೂಮರಂ
ಗಳ್ಕೆಲವಿರ್ದೊಡಂ ಕೆಲದೊಳೊಲ್ಲದೆ ನಲ್ಲಳನುಚ್ಚಶಾಖೆಗಾ
ಗಳ್ಕರದುಯ್ದನೊರ್ವನಲರ್ವಿಲ್ಲನ ಬಾಳ್ಮೊದಲಾದ ತೋಳ್ಮೊದಲ್
ತುಳ್ಕುವ ನುಣ್ಪನೀಕ್ಷಿಪಳಿಪಂ ಬಗೆಯೊಳ್ ಮಿಗೆ ಕಾದು ಕಾದಲಂ || ೧೦೨

ವ || ಅದಲ್ಲದೆಯುಮೊಂದೊಂದೆಡೆಯೊಳ್ ಮಧುಕರೀಗೀತಶಾಲೆಯಂತಿರ್ದ ಮಾವಿನ ಮಾಲಿಕೆಯೊಳಲರ್ಗೊಯ್ವಲ್ಲಿ-

ಕಂ || ನಿನ್ನಯ ಸುೞಿಗುರುಳೆಲ್ಲವಿ
ವೆನ್ನಯ ಮಱಿಯೆಂದು ಬಂದು ತಲೆವಿಡಿದವೊಲಾ
ಚೆನ್ನೆಯ ತಲೆವಿಡಿದಿರ್ದುದು
ತಾಂ ನಱುಗಂಪಿಂಗೆ ತುಂಬಿ ದುಱುದುಂಬಿ ಕರಂ || ೧೦೩

ದಾಳಿಂಬದ ಬಿೞ್ತಂ ಕೊ
ಳ್ವಾಳೋಚದೆ ನೋೞ್ಪ ಧವಳಲೋಚನೆಯ ಕಟಾ
ಕ್ಷಾಳೋಕಂ ಮುತ್ತಿನ ಝಂ
ಪಾಳಂ ಕವಿದಂತೆ ಬಳಸಿದುದು ತತ್ಕುಜಮಂ || ೧೦೪

ಪೊಳೆವೆಲೆಮಱೆಯೊಳ್ ತಲೆಯಂ
ಗಿಳಿ ತೋಱುತ್ತಿರ್ದೊಡದಱ ಚಂಚೂಪುಟಮಂ
ಕಳಿಕೆಯೆಗೆತ್ತು ಕೊಳಲ್ಕೊ
ರ್ವಳಬಲೆ ಕೈನೀಡಿ ನಗಿಸಿದಳ್ ಕೆಳದಿಯರಂ || ೧೦೫

ನುಣ್ಬುೞಿಲೊಳಗದಿರ್ಮುತ್ತೆ ಪ
ವಣ್ಬಡೆ ಕೞ್ತಲಿಸಿ ಬೆಳೆದು ಬಳಸಿರ್ದೊಡದಂ
ತಣ್ಬೆಳಗನೀಯೆ ಬೆಳತಿಗೆ
ಗಣ್ಬೆಳಗೊಳಪೊಕ್ಕು ಚಪಳೆ ಕಳಿಕೆಯನಾಯ್ದಳ್ || ೧೦೬

ವ || ಮತ್ತೊಂದೆಡೆಯೊಳ್-

ಚಂ || ಮಿಳಿರ್ವೆಳಮಾವಿನೊಳ್ದಳಿರ್ಗಳೊಳ್ ನಿಮಿರ್ದಲ್ಲಿ ಬೃಹತ್ಪಯೋಧರಂ
ಗಳ ಕಡುಬಿಣ್ಪು ಬಳ್ಕಿಸೆ ಲತಾಂಗಮನಾಪದದಲ್ಲಿ ತೂಳ್ದಿ ಕೈ
ಯಳವಿಗೆಗೊಂಬು ತೆಂಬೆಲರ ತೀಟದಿನೊಯ್ಯನೆ ಸಾರೆ ನಾರಿಯೇಂ
ತಳೆದಳೊ ತನ್ನ ಪೆರ್ಮೊಲೆಗಮಾ ಅಲರ್ಗಂ ಮುಳಿಸಂ ಪ್ರಸಾದಮಂ || ೧೦೭

ವ || ಅ ವಿಳಾಸವತಿಯಲ್ಲದೆಯುಂ ಮತ್ತೊರ್ವಳ್-

ಚಂ || ಮೃದುತಳಕಾಂತಿಯಿಂ ಮಿಳಿರ್ವ ಪೂಗುಡಿ ಕೆಂದಳಿರ್ದೊಂಗಲಂತೆ ತೋ
ಱಿದೊಡದನೊಲ್ಲದೊಳ್ದಳಿರ್ಗೆ ನಿಳ್ಕಿದೊಡಂತಲರ್ಗೊಂಚಲಂತೆ ತೋ
ಱಿದೊಡೆ ನಖಾಂಶುವಿಂದದುಮನೊಲ್ಲದೆ ಮಾಮರನಲ್ಲಿದೊಂದು ಮಾ
ಯದ ಮರನೆಂದು ಸಾರ್ದಳತಿಮುಗ್ಧೆ ಕುಜಾಂತರಮಂ ವನಾಂತದೊಳ್ || ೧೦೮

ಕಂ || ತಳಿರ್ದೊಂಗಲನುಡಿದೆಳಮಿಡಿ
ಗಳನಱಸುವ ಪದದೊಳಲ್ಲಿ ಮೆಯ್ಗರೆದಿರ್ದ
ವ್ವಳಿಸೆ ಕಪಿ ಬೆದರಿ ಕೆಳೆಯನ
ನೆಳೆಯಳ್ ಬಂದಪ್ಪಿ ಬಿಡದೆ ನಡುಗುತ್ತಿರ್ದಳ್ || ೧೦೯

ಎತ್ತಣವಳಿಮಾಳಿಕೆ ನೆಲ
ಸಿತ್ತಿದಱೊಳೆನಿಪ್ಪ ತೆಱದೆ ಪೂಗೊಯ್ವೆಡೆಯೊಳ್
ಮುತ್ತಿದುದು ಕುವಲಯಾಕ್ಷಿಯ
ಬಿತ್ತರದ ಕಟಾಕ್ಷಮಾಳೆ ಮಿಗೆ ಸಂಪಗೆಯಂ || ೧೧೦

ವ || ಮತ್ತೊರ್ವಳಲರ್ಗೊಳಲ್ ನಡೆವಲ್ಲಿ-

ಮುಡಿಗಿಕ್ಕಿದೆನಾಂ ನಿನ್ನಯ
ಬೆಡಂಗುವಡೆದೆಸೆವ ಕರ್ಪನೆಂದು ತಮಾಳಂ
ಮುಡಿಗಿಕ್ಕಿದವೋಲೆಲರಿಂ
ದುಡಿದಲರ್ಗುಡಿ ಬಿೞ್ದುದೊಂದವಳ ಮುನ್ನಡಿಯೊಳ್ || ೧೧೧

ವ || ಆಗಳ್-

ಚಂ || ಒದೆದೊಡೆ ದುಷ್ಟನಂತಸುಗೆ ಪಲ್ಲವಿಸಿತ್ತು ಮುಗುಳ್ತುದಾಸ್ಯಪ
ದ್ಮದ ಮಧುವಿಂದೆ ಸುಯ್ಯೆಲರ್ಗೆ ತಾಂ ಬಕುಳಂ ಶಠನಂತರಲ್ದುದ
ಪ್ಪಿದೊಡೆ ಲತಾಂಗಿಯರ್ ಕುರವಕಂ ನೆರೆ ದಕ್ಷಿಣನಂತೆ ನೋಡೆ ಮಾ
ಡಿದುದನುಕೂಲನಂತೆ ತಿಳಕಂ ಬಹಳೋತ್ಕಳಿಕಾವಿಳಾಸಮಂ || ೧೧೨

ವ || ಅಂತು ಕಾಂತಾಪ್ರಚಯಂ ಲತಾಂತಾಪಚಯಮಂ ತೀರ್ಚಿ-

ಚಂ || ಗಿಳಿಗೆ ಕುರ್ದುಂಕಲಲ್ಲಿ ಮಱೆದುಂ ಫಲಮೊಂದು ಪಿಕಕ್ಕೆ ಚುಂಬಿಸಲ್
ಕಳಿಕೆಯದೊಂದು ತುಂಬಿಗೆ ಮುಸುಂಬಿೞಿಪಲ್ಕರಲೊಂದು ತಳ್ತುಗೊಂ
ಡಳಿಸದಿನಿತ್ತು ವೃಕ್ಷಲತಿಕಾಕ್ಷುಪಜಾಳದೊಳೆಂದು ನೋೞ್ಪೊಡೇ
ನಳವಿಗಳುಂಬಮಾಯ್ತೊ ಪೊಸದೇಸೆಯನಾಂತ ವಿಳಾಸಿನೀಜನಂ || ೧೧೩

ವ || ತದನಂತರಂ-

ಕಂ || ಕನಕಮಣಿಭೂಷಣಂ ಕ
ಣ್ಗಿನಿದಕ್ಕುಮಲರ್ವ್ವಚ್ಚದಂದದಿಂ ಲೋಚನಕಂ
ಮನಕಂ ಮೆಯ್ಗಂ ಸುಯ್ಗಂ
ಜಿನುಂಗುವಳಿಯಿಂದೆ ಕಿವಿಗಮೀಗುಮೆ ಸವಿಯಂ || ೧೧೪

ವ || ಎಂದು ತಮ್ಮ ತನುಲತೆಗಳಂ ಕಿಸಲಯಾಭರಣಂಗಳಿನಲಂಕರಿಪಲಂಪನಾಂತು-

ಚಂ || ನನೆಯಲರೆಂಬಿವಂ ಬನದ ದೇವಿಯದಾವಗಮಾಯ್ದು ಕೊಯ್ದು ನ
ಚ್ಚಿನ ಪದವಿಲ್ಗಮಗ್ಗದ ಸರಲ್ಗಮವಂ ಪಡೆದೀವೆನೆಂದು ಚಂ
ದನಗೃಹಮಂ ಲತಾನಿಳಯಮಂ ಕದಳೀಕುಳಮಂ ತೊಳಲ್ದು ಕಾ
ಮನನಱಸಲ್ಕೆ ಪೊಕ್ಕಪುದೊ ಪೇೞೆನೆ ಪೊಕ್ಕುದು ಕಾಮಿನೀಜನಂ || ೧೧೫

ವ || ಅಂತು ಪೊಕ್ಕು ಶತಪತ್ರಸೂತ್ರಂಗಳೊಳಂ ರಂಭಾವಲ್ಕಲಶಲ್ಕಂಗಳೊಳಂ ಶೀರ್ಣನಾಳಿ ಕೇರಪರ್ಣಂಗಳೊಳಂ ಅಮರ್ಕೆಯುಂ ಪೋಲ್ಕೆಯುಂ ಒಲ್ವುಂ ಚೆಲ್ವುಮಾಗೆ ಗೊಜ್ಜಗೆಯ ಮುಗುಳ ಗೆಜ್ಜೆಯುಮಂ ಬಂದುಗೆಯಂದುಗೆಯುಮಂ ನಂದಿವಟ್ಟದ ಪಾಯವಟ್ಟಮುಮಂ ಕಾಂಚವಾರದ ಕಾಂಚಿಯುಮಂ ಪಸುರ್ಮಿಡಿಯ ಪಚ್ಚೆಸಾರಮುಮಂ ಚಂಪಕದ ಚಂಪಕಮಾಲೆಯುಮಂ ಸುರಯಿಯ ಶುದ್ಧಸರಮುಮಂ ವನಮಾಳಿಕೆಯ ಲಂಬಮಾಳಿಕೆಯುಮಂ ಕಂಕೆಲ್ಲಿಯ ಕಂಕಣಮುಮಂ ವಿಚಕಿಳದ ಚಳಕಿಗೆಯುಮಂ ಕುವಳಯದ ಕರವಳಯಮುಮಂ ದಾಡಿಮೀದಳದಷ್ಟದಳಮುಮಂ ಕೇಸರದ ಕೇಯೂರ ಮುಮಂ ಕರ್ಣಿಕಾರದ ಕರ್ಣಪೂರಮುಮಂ ಅದಿರ್ಮುತ್ತೆಯ ಮುಗುಳ ಮುಗುಳುಮುಂ ತಮಾಳಪತ್ರದ ತಮಾಳಪತ್ರಮುಮಂ ಹೊನ್ನೆಯ ಚಿನ್ನಪೂವುಮಂ ತಿಳಕದ ಹಂಸತಿಳ ಕಮುಮಂ ಕುರವಕದ ಕುತ್ತುಂಗಱಿಯುಮಂ ಮಾಂದಳಿರಪೊಂದಳಿರುಮಂ ವಿವಿಧಕಿ ಸಲಯದ ಕಿಸಲಯಮುಮಂ ಮನೋಹರಮೆನೆ ಸಮೆದು ತಮತಮಗೆ ಪಸದನಂ ಗೊಂಡು-

ಕಂ || ವಿವಿಧಪ್ರವಾಳಫಳಕುಸು
ಮವಿಭೂಷಣಗಣಮನಾಂತು ಕಾಂತಾವಳಿ ಕಂ
ತುವ ಜಂಗಮಕಲ್ಪಲತಾ
ನಿವಹದವೊಲ್ ಬಂದುದೋಲಗಕ್ಕವನಿಪನಾ || ೧೧೬

ವ || ತತ್ಸಮಯದೊಳ್-

ಚಂ || ಕುಸುಮವಿಭೂಷಣಂಗಳ ಭರಕ್ಕಿನಿತಳ್ಕಿ ಬಳಲ್ದುದೀಗಳೀ
ಬಿಸಸುಕುಮಾರವಾರವನಿತಾಜನಮೆಂದು ಧರಾಧಿಪಂಗೆ ಸೂ
ಚಿಸುವವೊಲೊಂದೆರೞ್ಬೆಮರ ಬಿಂದುಗಳಾಂತುವು ಪೊಣ್ಮಿ ಕಾಂತಿಯಂ
ಮಿಸುಪ ಕದಂಪಿನೊಳ್ ತಿವಳಿಯೊಳ್ ಕುಚಮೂಲದೊಳಗ್ರಭಾಗದೊಳ್‌ || ೧೧೭

ವ || ಅನಂತರಮರಸನಾಕೆಯರ ವನವಿಹರಣಶ್ರಮಮಂ ವನಜವನವಿಹರಣಶ್ರಮದಿಂ ಕಳೆಯ
ಲೆಂದುಮಲ್ಲಿಂ ಪೊಱಮಟ್ಟು ನಡೆವಲ್ಲಿ-

ಚಂ || ಸುೞಿವ ಮರಾಳಯಾನೆಯರಪಾಂಗಮರೀಚಿಚಯಂ ತ್ರಿವರ್ಣಮಂ
ಗೞಿಯಿಸೆ ಪೆರ್ಮೆ ಮುಂ ನೆರೆಯೆ ಬೀತವೊಲಿರ್ದ ಲತಾಳಿ ಮತ್ತೆ ಬೆಂ
ಬೞಿಯೊಳೆ ಪಲ್ಲವಪ್ರಸವಭೃಂಗಕುಳಂಗಳನಾಂತು ಸೊಂಪು ಪೊಂ
ಪುೞಿಯೆನಿಪಂತೆ ತೋಱಿದುದು ಪುಟ್ಟೆ ಮಹೀಶನ ಕಣ್ಗೆ ಕೌತುಕಂ || ೧೧೮

ವ || ಅದಲ್ಲದೆಯುಂ-

ಚ || ಸೊಗಯಿಪ ರಾಜಹಂಸಮಿಥುನಂ ಬೆರಸಬ್ಜಲತಾವಿತಾನದೊ
ಳ್ಪಗಲದೆ ಪಾಳಿವಂದಪುದೊ ತದ್ವನಪದ್ಮಿನಿಗೆಂಬ ರೇಖೆ ಕೈ
ಮಿಗೆ ಮೃದುಯಾನದಿಂ ಪತಿಯುಮಾಸತಿಯುಂ ಬರೆ ಬಂದುದಾವೃತಾ
ಳಿಗಣಮಲಂಕೃತಪ್ರಗುಣಕೌಸುಮಲಕ್ಷ್ಮಿ ವಿಳಾಸಿನೀಜನಂ || ೧೧೯

ವ || ಅಂತ್ಯೆದೆ ವರ್ಪಾಗಳ್-

ಕಂ || ಉರರೀಕೃತಪುಳಿನನಿತಂ
ಬರಮ್ಯಮಾಪರಿಗತಾಳಿಕುಳಗಂಭೀರ
ಸ್ಫುರದಾವರ್ತಂ ಮೆಱೆದುದು
ಸರಸಿ ವನಶ್ರೀಗೆ ಮಧ್ಯದೊಳ್ ನಾಭಿಯವೊಲ್ || ೧೨೦

ವ || ಮತ್ತಂ ನಿಜಪರಿಸರದೊಳುಪಸರೋವರಂಗಳಂತಿರ್ದ ರಜತರತ್ನಕನಕ ಘಟಿತಮಹಾ ಕಟಾಹಪಟಳದೊಳಮಲ್ಲಲ್ಲಿ ಬೇಱೆವೇಱೆ ತೀವಿದ ಕಾಶ್ಮೀರಕರ್ಪೂರಕಸ್ತೂರಿಕಾಮಳ ಯಜಜಳಂಗಳೊಳಂ ಬಹುಪ್ರಕಾರಭಂಗುರ ಶೃಂಗಜಳಯಂತ್ರಾದಿಜಳಕೇಳೀವಿಳಾಸೋಪ ಯೋಗ್ಯಾತ್ಯುಚ್ಚಪರಿಚ್ಛದಂಗಳೊಳಂ ಅಬಳಾಜನಸುಖಾವರೋಹಣಾರೋಹಣಸಮರ್ಥ ಮಣಿಮಯ ಸೋಪಾನಪಙ್ಕ್ತಿಗಳೊಳಂ ಕಮಳಕುಮುದಕುವಳಯಕಲ್ಹಾರಶೋಭಿತ ನಾಭಿದ್ವಯಸಪಯಸದೊಳಂ ಆೞವಟ್ಟು ದಿಟ್ಟಿಗೊಲವನೋಲಗಿಪ ಲೀಲಾಸರೋವರ ಮಂ ರಾಜಹಂಸಂ ಲೀಲಾವತೀಜನಸಮೇತಂ ಪುಗೆ-

ಕಂ || ಆ ಸರಸಿಯರಸನಂ ಹಂ
ಸೀಸಾರಸರಸಿತದಿಂದೆ ಪರಸಿ ತರಂಗಂ
ಸೂಸುವ ಶೀಕರವಿಸರದೆ
ಸೇಸಿಕ್ಕುವ ತೆಱದಿನೆಸೆದುದಸದಳಮದಱೊಳ್ || ೧೨೧

ದೊರೆಕೊಳ್ಗುಂ ಕುಶಲವದಿಂ
ಪಿರಿದುಂ ಕುಶಲವದಿನೆಂದು ತದ್ವನಜವನ
ಸ್ಥಿರಕುರವಕಾಕುರವದಿಂ
ಸಿರಿ ಪೇೞ್ವಂತಾಯ್ತು ಯೌವತಕ್ಕವತರಿಪಂ || ೧೨೨

ಭ್ರಮರಚಿತಮನವರತವಿ
ಭ್ರಮರಚಿತಪ್ಲವನನಾರಸಂ ಮದಲೀಲಾ
ಕ್ರಮಸಕಳಹಂಸಮುರುಚ
ಕ್ರಮಸಕಳಹಂಸ ಸರೋವರಂ ಸೊಗಯಿಸುಗುಂ || ೧೨೩

ಈಕೆಯರ ಪಾದಪಾತದಿ
ನೇಕೇಂದ್ರಿಯಮಸುಕೆ ತಳಿರ್ವುದಱಿದೆ ತಳಿರ್ದತ್ತ
ಲ್ಲೀಕಲ್ಲೆರ್ದೆಯನೆ ಸೊಗಯಿಸಿ
ತಾಕಳಿತಪದಾಂಶು ಹರಿತಮಣಿಸೋಪಾನಂ || ೧೨೪

ವ || ಅದಲ್ಲದೆಯುಂ-

ಕಂ || ಕೊಳದೊಳ್ ತಂತಮ್ಮ ನೆೞ
ಲ್ಗಳೊಳಬಳೆಯರುತ್ಕುಚಾಂತರಿತಮಂ ರೋಮಾ
ವಳಿಯಂ ವಳಿಯಂ ನಾಭೀ
ಸ್ಥಳಿಯಂ ನೆರೆ ಕಣ್ಡರಂದು ಮುಂ ಕಾಣದುದಂ || ೧೨೫

ವ || ಆಗಳ್-

ಕಂ || ಜಳಕೇಳಿಗೆ ಪುಗುತುಂ ನಿಱಿ
ಗಳನೋಸರಿಸುವ ಕಟಿಪ್ರಮಾಣಜಳಂ ಪೂ
ಗೊಳನೆಂದಱಿದುಂ ಮೆಲ್ಲನೆ
ತಳರ್ದಡಿಯಿಡುವಬಲೆಯರ್ ಕರಂ ಸೊಗಯಿಸುವರ್ || ೧೨೬

ವ || ಅಂತು ಪುಗಲೊಡಂ-

ಮ || ವಿ || ತೆರೆಗೈಯಿಂ ತುಡುಕುತ್ತುಮೊಳ್ದೊಡೆಯನಾದಂ ನೀವಿಯಂ ನೀವಿ ಬಿ
ತ್ತರಿಸುತ್ತುಂ ವಳಿಯಂ ಪಳಂಚಲೆಯುತುಂ ವಕ್ಷೋಜಮಂ ನಿೞ್ಕಿ ನೇ
ವರಿಸುತ್ತುಂ ನೆಲೆವೆರ್ಚಿ ಕಾಮುಕನವೊಲ್ ನೀರೇಱುತಿರ್ದತ್ತು ತ
ತ್ತರುಣೀಸಂಕುಳಮೆಲ್ಲಮೀಗಳೊಳಗಾಯ್ತೆಂಬಂತೆ ಪದ್ಮಾಕರಂ || ೧೨೭

ವ || ಮತ್ತಂ-

ಚಂ || ಇದು ಪಿರಿದುಂ ವಸಂತಸಖಯೌವತರತ್ನನಿಧಾನವಂತದ
ಲ್ಲಿದು ಕುಸುಮಾಸ್ತ್ರಶಸ್ತ್ರಚಯಕೋಶಮಹೀಗೃಹಮಂತದಲ್ತು ಮ
ತ್ತಿದು ರತಿನಾಥಕಲ್ಪಲತಿಕಾಪ್ರಕರೈಕಕೃತಾಳವಾಳಮೆಂ
ಬುದನೆನಿಸಿತ್ತು ಸಂದಣಿಸಿ ನಿಂದಬಳಾವಳಿಯಿಂದೆ ಪೂಗೊಳಂ || ೧೨೮

ಕಂ || ಕೀರದ ಹಂಸದ ಪಿಕದ ಚ
ಕೋರದ ಚಕ್ರಾಹ್ವದಂತೆ ಮಾಡಿದ ಗರುಡೋ
ದ್ಗಾರದ ಮುತ್ತಿನ ನೀಲದ
ಹೀರದ ಮಾಣಿಕದ ಪೊಳೆವ ಜೀರ್ಕೊೞವೆಗಳಂ || ೧೨೯

ವ || ತಮತಮಗೆ ತಳೆದುಕೊಂಡು ವಿವಿಧಗಂಧಜಲಂಗಳಿಂದೋರೊರ್ವರಂ
ಸಿಂಪಿಸುವಾಗಳ್-

ಕಂ || ಸುರದೀರ್ಘಿಕೆಯೊಳ್ ಕರಪು
ಷ್ಕರದಿಂದಭ್ರಮುವನಭ್ರಮೂಪತಿ ತಳಿವಂ
ತಿರೆ ಜಳಯಂತ್ರದೆ ತಳಿದಂ
ಸರಸಿಯೊಳರಸಂ ಶಶಿಪ್ರಭಾವಲ್ಲಭೆಯಂ || ೧೩೦

ಜಳಯಂತ್ರದಿನೊತ್ತೆ ನೃಪಂ
ಲಳನೆಯ ಕುಚಯುಗಳಮಧ್ಯದಿಂದಿೞಿಯಲ್ ತ
ಜ್ಜಳಕೆ ತೆಱಪೀಯದಿರ್ದ
ತ್ತೊಳಕೊಂಡ ಪಯೋಧರಾಖ್ಯೆಯಂ ಪ್ರಕಟಿಪವೋಲ್ || ೧೩೧

ನಾಂದಮರೆ ಪತ್ತಿದಂಬರ
ದಿಂದೆಸೆವರಸಿಯ ನಿತಂಬಬಿಂಬಮನಬಳಾ
ವೃಂದಮದೀಕ್ಷಿಸಿ ಹೃದಯದೊ
ಳಂದೇಂ ಪುಂಭಾವಮಂ ಪುದುಂಗೊಳಿಸಿದುದೋ || ೧೩೨

ವ || ತತ್ಸಮಯದೊಳ್-

ಮ || ವಿ || ತರಳಾಪಾಂಗಲಸದ್ವಿಲಾಸರಸದಿಂದೋರೊರ್ಮೆ ಲೀಲಾಪ್ರತಿ
ಸ್ಫುರಿತಭ್ರೂಯುಗವಿಭ್ರಮೈಕರಸದಿಂದೋರೊರ್ಮೆ ಸಸ್ನೇಹಭಾ
ಸುರಚಿತ್ತಪ್ರಸಭೋತ್ಥಭಾವರಸದಿಂದೋರೊರ್ಮೆ ಮಾದೇವಿ ಭೂ
ವರನಂ ಸಿಂಪಿಸಿದಳ್ ಸುಗಂಧರಸದಿಂದೋರೊರ್ಮೆ ತತ್ಕೇಳಿಯೊಳ್ || ೧೩೩

ಚಂ || ಪ್ರಮದೆಯರಂ ಮನೋಭವನೆ ಸೂೞಱಿದೆಚ್ಚಪನಗ್ನಿಬಾಣದಿಂ
ಹಿಮಕರಬಾಣದಿಂ ತಿಮಿರಬಾಣದಿನೆಂಬಿನಮಿಂಬುವೆತ್ತದೇಂ
ನಿಮಿರ್ದುವೊ ಲೀಲೆಯಿಂದೆ ಜಳಯಂತ್ರಮನಂದು ಮಹೀಶನೊತ್ತೆ ಕುಂ
ಕುಮಜಳಚಂದನೋದಕಮೃಗೋದ್ಭವವಾರಿನಿಯುಕ್ತಧಾರೆಗಳ್ || ೧೩೪

ವ || ಆಗಳ್-

ಕಂ || ಕತ್ತುರಿನೀರಿಂ ಕರ್ಪಂ
ಪೆತ್ತಂಗಂ ಕುಂಕುಮಾಂಬುವಿಂ ಕಡುಗೆಂಪಂ
ಪೊತ್ತ ನಿಱಿ ಮೆಱೆಯ ತಳಿರಂ
ಸುತ್ತಿದ ವನಚರಿಯನೊರ್ವಳನುಕರಿಸಿರ್ದಳ್ || ೧೩೫

ವ || ಮತ್ತಮೊರ್ವಳ್-

ಕಂ || ಘುಸೃಣರಸಂ ಮೊಲೆಯೆಡೆಯಿಂ
ದಸಿಯಳ ಬಾಸೆವಿಡಿದಿೞಿದು ಸೊಗಯಿಸಿದುದು ತೆ
ಳ್ವಸಿರ ಪೊಱಗಣ್ಗೆ ಮಿಸುಗುವ
ವಿಸರತ್ತಾಂಬೂಲರಾಗರಸರೇಖೆಯವೊಲ್ || ೧೩೬

ಧರಣೀಶನ ಯಂತ್ರದ ಕ
ತ್ತುರಿನೀರೆಸೆವಸಿಯ ಧಾರೆಯಗ್ರದೊಳೊರ್ವಳ್
ಸ್ಮರನಸಿಯ ಧಾರೆಯಗ್ರದೊ
ಳಿರವಿಂತುಟು ವಿಜಯಲಕ್ಷ್ಮಿಗೆಂಬವೊಲಿರ್ದಳ್ || ೧೩೭

ವ || ಆ ಮನೋಜವಿಜಯಲಕ್ಷ್ಮಿಯಲ್ಲದೆ-

ಕಂ || ಸರಸಿಜದ ಸಿರಿಯನಾನಪ
ಹರಿಸೆಂ ಮನ್ಮುಖದಿನದುವೆ ನಿಜಮೆಂದು ತನೂ
ದರಿತಂಡ ಗುಂಡಿವುಗುವವೊ
ಲರಸನ ಕೆಲದಲ್ಲಿ ಮುೞುಗಿದಳ್ ನಲಿದೊರ್ವಳ್ || ೧೩೮

ಚಂ || ತೊಳಗುವ ಪೊನ್ನ ಜೀರ್ಕೊೞವಿಯಗ್ರಮನೊಂದಿನಿತೞ್ದಿ ಭಂಗಿ ಸಂ
ಗಳಿಸಿರೆ ಮೇಲೆ ನೀರ್ದೆಗೆವ ಕೋಮಳೆ ಕಾಮನ ಕಲ್ಪಿಯಿಂದಮೇ
ನಳವಡೆ ಪತ್ರಕೂಟಮನೆ ಸುತ್ತುವಳೋ ರತಿಯೆಂಬ ಡಂಬರಂ
ಬಳೆವಿನಮೊಪ್ಪಿದಳ್ ನೃಪನ ಪಕ್ಕದೊಳಾ ಜಳಕೇಳಿ ಲೀಳೆಯೊಳ್ || ೧೩೯

ಕಂ || ತಳತಳಿಪ ಚಂದ್ರಕಾಂತದ
ಜಳಯಂತ್ರಂ ತೀವದಿರ್ದೊಡಂ ಮಗುೞ್ದುಂ ನಿ
ರ್ಮಳಜಳಮನುಗುೞ್ದುದೋರಂ
ತೆಳೆಯಳ ದರಹಸಿತವದನವಿಧುಸನ್ನಿಧಿಯಿಂ || ೧೪೦

ವ। ಅದಲ್ಲದೆಯುಂ ಮತ್ತೊರ್ವಳ್ ಲೀಲಾವತಿ-

ಕಂ || ಅರೆಮುಗಿದ ಮುಗಿದರಲ್ದಂ
ಬುರುಹಂಗಳಿನೆಸೆವ ಬಿಸಲತೆಗೆ ದೊರೆಯಾದಳ್
ಮರಳೀಗವೆನಿಸಿ ತೊಂದಿದ
ಚರಣದಿನಾ ಮುಗಿದ ಕರದಿನಲರ್ದಾನನದಿಂ || ೧೪೧

ಕೆಳದಿಯನಡಂಗಿ ಕಾಡಲ್
ಮುಳುಂಕೆ ಮತ್ತೊರ್ವಳೇಂ ಪಿಸುಣ್ಬೇೞ್ದುವೊ ಕೋ
ಮಳೆಯಿರ್ದೆಡೆಯಂ ತತ್ಪರಿ
ಮಳಕ್ಕೆ ಮೇಗೆಳಸಿ ಸುೞಿವ ಮಧುಕರನಿಕರಂ || ೧೪೨

ವ || ಮತ್ತೊರ್ವಳ್-

ಕಂ || ನೆಗಪೆ ಮುಡಿಯಿಂದೆ ಮೇಗ
ಣ್ಗೊಗೆದ ಕನತ್ಕನಕಶೃಂಗಮದು ಪೆಡೆವೊಲ್ ದಿ
ಟ್ಟಿಗೆವರೆ ಕೊಳದೊಳ್ ರಸೆಯಿಂ
ದೊಗೆವುರಗಿಯ ದೊರೆಗೆ ತರಳಲೋಚನೆ ಬಂದಳ್ || ೧೪೩

ವ || ಅನಂತರಂ ತುಮುಲಕೇಳಿಯಿಂದೋರೊರ್ವರಂ ತುಳುಂಕಾಡುವಾಗಳ್-

ಚಂ || ಘುಸೃಣರಸಂಗಳಿಂ ಮಳಯಜಾಂಬುಗಳಿಂ ಮೃಗಭೂದಕಂಗಳಿಂ
ಮಿಸಿಸಿದೊಡೊರ್ಮೆಗೊರ್ಮೆಸೆವ ಮಾಣಿಕದಿಂ ಪೊಸ ಚಂದ್ರಕಾಂತದಿಂ
ಮಿಸುಗುವ ನೀಲದಿಂ ಸಮೆದ ಪುತ್ಥಳಿಗಳ್ಗೆಣೆಯಾಗಿ ಕಾಂತೆಯರ್
ಪೊಸಯಿಸದ ಮಹೀಶನ ಮನಕ್ಕೆ ಮನೋಜಮಹೇಂದ್ರಜಾಲಮಂ || ೧೪೪

ವ || ಆಗಳ್-

ಕಂ || ಬಿತ್ತರದಿಂ ಜಳಯಂತ್ರಮ
ನೊತ್ತುವ ಕಾಂತಾಳಿ ಪುತ್ರಿಕಾಸಂತತಿಯಂ
ತೆತ್ತಮಿರೆ ಸರಸಿ ಪೋಲ್ತುದು
ಚಿತ್ತಜನನಿಯಂತ್ರಯಂತ್ರಧಾರಾಗೃಹಮಂ || ೧೪೫

ವ || ತತ್ಸಮಯದೊಳ್-

ಕಂ || ದಂತಚ್ಛದಾತಿರಾಗತೆ
ಕುಂತಳಕೌಟಿಲ್ಯವೃತ್ತಿ ಪಿಂಗಿದುದಬಳಾ
ಸಂತತಿಗೆ ಪಯಃಕೇಳಿಯೊ
ಳೆಂತುಂ ನಿರ್ಮಲರ ಸಂಗದಿಂದಾಗದುದೇಂ || ೧೪೬

ಜಳಕೇಳಿಗೆ ಮುನಿದುವು ಕ
ಣ್ಗಳೆನಿಸೆ ನಸುಗೆಂಪನಾಳ್ದುವಾ ಕ್ರೀಡೆಯೊಳಾ
ಯೆಳವೆಂಡಿರ ರಾಗಮೆ ಸಂ
ಗಳಿಸದೆ ಪೋಪಂತೆ ಪೋದುದಧರದ ರಾಗಂ || ೧೪೭

ವ || ಆ ಸಮಯದೊಳ್ ರಾಜರತ್ನಾಪೀಡಂ ನಿರ್ವರ್ತಿತಜಳಕ್ರೀಡನಾಗಿ-

ಕಂ || ಬೞಿಯನೆ ಬರೆ ಹಂಸೀಕುಳ
ಮುೞಿದು ಸರೋವರಮನದಱ ಪುಳಿಲೊಳ್ ನಲವಿಂ
ಸುೞಿಯಲ್ಕೆ ತಳರ್ದ ಹಂಸನ
ನಿೞಿಪಿದನಾ ರಾಜಹಂಸನಬಳಾಳಿಯುತಂ || ೧೪೮

ಉೞಿದು ವಧೂಸಂಕುಳಮೋ
ಕುೞಿಯಂ ಪೊಱಮಟ್ಟು ಪೋಪುದುಂ ಪೆಱಗೆ ಕರಂ
ಗಿೞಿದಾಗಿ ನಿಧನವೆತ್ತಿದ
ಕುೞಿಯಂತಿರ್ದತ್ತು ಕಣ್ಗೆ ಪೂಗೊಳನಾಗಳ್ || ೧೪೯

ವ || ಅನಂತರಂ ತದಂತಿಕಪುಳಿನಸ್ಥಳದೊಳ್ ನಿಂದು-

ವ || ಸ್ರ || ವಿತರತ್ಸೀತ್ಕಾರವಕ್ತ್ರಂ ಜಳನಿಬಿಡಿತವಾಸಸ್ಸ್ಫುಟೀಭೂತನಿಮ್ನೋ
ನ್ನತಮುದ್ಯದ್ರೋಮಹರ್ಷಸ್ತನವಿನಿಹಿತದೋಃಸ್ವಸ್ತಿಕಂಲೋಚನೋಷ್ಠ
ದ್ವಿತಯವ್ಯತ್ಯಸ್ತವರ್ಣಸ್ಥಿತಿ ತಿಮಿತಕಪೋಳಾವಳಗ್ನಾಳಕಂ ಯೌ
ವತಮಾದಂ ಕಣ್ಗೆ ವಂದಿರ್ದುದು ಕೃತಸಲಿಲಕ್ರೀಡಮಸ್ತೋಷ್ಣಪೀಡಂ || ೧೫೦

ವ || ಆಗಳ್ ಭಂಡಾರಿಗರ್ ವಿವಿಧಪಟಳಕಂಗಳೊಳ್ ತಂದು ಮುಂದಿೞಿಪಿದ ಸುಗಂಧಾನು ಲೇಪನಕುಸುಮವಸನಭೂಷಣಂಗಳಿನರಸಿಯುಂ ತಾನುಂ ಶೃಂಗಾರಂಗೆಯ್ದು ವಿಳಾಸಿನೀ ಜನಕ್ಕಮೀಯಲೊಡಮವಳ್ದಿರುಂ ಕೈಗೈಯೊಳ್ ಕೈಗೈದು ಬಂದಿರೆ-

ಚಂ || ಸೊಗಯಿಪ ತಾರಕೋತ್ಕರದ ಮಧ್ಯದ ಶೀತಮರೀಚಿರೋಹಿಣೀ
ಯುಗಮೆನೆ ಚೆಲ್ವುವೆತ್ತ ಲತಿಕಾಳಿಯ ಮಧ್ಯದ ಚೂತಮಲ್ಲಿಕಾ
ಯುಗಮೆನೆ ಶೋಭಿಸಿರ್ದ ವನಿತಾಳಿಯ ಮಧ್ಯದೊಳಂದು ನಾಡೆಯುಂ
ಬಗೆಗೊಳಿಸಿತ್ತು ಮತ್ತಜಿತಸೇನಮಹೀಶಶಶಿಪ್ರಭಾಯುಗಂ || ೧೫೧

ವ || ತದನಂತರಂ ವನಮಹತ್ತರನಂ ಬರಿಸಿ-

ಕಂ || ಮಾವಿಂಗಿದು ಮಲ್ಲಿಗೆಗಿದು
ತಾವರೆಗೊಳಕಿದು ದಲೆಂದು ಪೆಸರ್ವೆಸರಿಂ ಭೂ
ಷಾವಸನಕನಕಚಯಮನಿ
ಳಾವಲ್ಲಭನಿತ್ತನಾತನೆಡಱೋಡುವಿನಂ || ೧೫೨

ವನಮದು ಸುರಕುಜದಾರವೆ
ವನಜಾಕರಮದುವೆ ಸಿದ್ದರಸಕೂಪಂ ತಾ
ನೆನಿಸೆ ನೃಪಂ ವನಜಳಕೇ
ಳಿನಿಮಿತ್ತದಿನರ್ಥಿಗೀಪ್ಸಿತಾರ್ಥಮನಿತ್ತಂ || ೧೫೩

ವ || ಅಂತು ಸಕಲಜನಪ್ರೀಣನಪ್ರದಮಂ ವಿಶ್ರಾಣನವಿನೋದಮಂ ತೀರ್ಚಿ ಬೞಿಯಮುದ್ಯಾ ನದಿಂ ಪೊಱಮಟ್ಟರಸಿವೆರಸು ಕರಿವರಸ್ಕಂಧಾಧಿರೂಢನುಂ ಪರಿವಾರಪರಿವೃತನುಮಾಗಿ ನಡೆದು ಪುರಮಂ ಪುಗುವಲ್ಲಿ-

ಮ || ಸ್ರ || ವಿಭವಂ ಕಾಮಂಗಿನಿತ್ತೆತ್ತಣದಿವನಮರೇಂದ್ರಂ ಸುರೇಂದ್ರಂಗಮಿಂತೀ
ಸುಭಗತ್ವಂ ಮತ್ತಿನಿತ್ತೆತ್ತಣದುಭಯಗುಣಕ್ಕಂ ದಿಟಕ್ಕೊರ್ವನಾವೊಂ
ಪ್ರಭುವಿಂ ಮತ್ಸ್ವಾಮಿತಾನಲ್ಲದೆಪೆಱರೆನುತುಂ ನೋಡೆ ತತ್ಪೌರಲೋಕಂ
ವಿಭು ಸದ್ಮಂಗಂಡು ಬಂದಂ ಜಿನಸಮಯಸರಸ್ಸಾರಕೇಳೀಮರಾಳಂ || ೧೫೪

ಗದ್ಯಂ

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಅಜಿತಸೇನಚಕ್ರಧರವಸಂತೋತ್ಸವಂ
ಸಪ್ತಮಾಶ್ವಾಸಂ