ಕಂ || ಶ್ರೀಜಿನಮಂದಿರದಿಂದಂ
ಪೂಜೋತ್ಸವಪುಲಕಕಲಿತತನು ಪೊಱಮಟ್ಟಂ
ರಾಜಶಿರೋಮಣಿ ಸುಕೃತಸ
ಮಾಜಾಕೃತಿ ಜೈನಜನಮನೋಹರಚರಿತಂ || ೧
ವ || ಅನಂತರಂ-
ಕಂ || ಶೃಂಗಾರಸದನಮಂ ಮಕು
ಟಾಂಗದಮಣಿಹಾರಕಟಕಕುಂಡಲನವದೇ
ವಾಂಗವಸನಾತ್ತಪಟಲಕ
ಸಂಗತಮಂ ಬಂದು ಲೀಲೆಯಿಂದೊಳಪೊಕ್ಕಂ || ೨
ವ || ಅಂತು ಪೊಕ್ಕು-
ಕಂ || ಇದೆ ಸೀಮೆಯೆನಗೆ ಸಾಮ್ರಾ
ಜ್ಯದ ವಿಭವಕ್ಕೆಂದು ತೋರ್ಪ ತೆಱದಿಂ ಶೃಂಗಾ
ರದ ಚೆಲ್ವೆಸೆದಿರೆ ಕೈಗೈ
ದುದಾತ್ತನಾಸ್ಥಾನಮಂಟಪಕ್ಕೇೞ್ತಂದಂ || ೩
ವ || ಅಂತು ಚತುರ್ಮುಖದ್ವಾರೋದಾರಮಪ್ಪುತ್ತುಂಗಸರ್ವಾವಸರತವಂಗಮನೇಱಿ ಸಕಲ ಪ್ರಧಾನಮಂತ್ರಿಪುರೋಹಿತಾಂತರ್ವಶಿಕಾಧಿಕೃತರಾಜಪುತ್ರಸಮಾಜಪರಿವೇಷ್ಟಿತನಿಷ್ಟಪ್ತಾ ಷ್ಟಾಪದವಿಷ್ಟರೋಪವಿಷ್ಟನಜಿತಸೇನಚಕ್ರಧರನಿರೆ-
ಮ || ವಿ || ವರಪಟ್ಟಾಂಶುಕರಾಶಿಯಂ ಸಮದಹಸ್ತಿವ್ರಾತಮಂ ಘೋಟಕೋ
ತ್ಕರಮಂ ರತ್ನಸಮೂಹಮಂ ಪತಿಗೆ ದೂತರ್ ತೋಱಿದರ್ ದೇವ ಗು
ರ್ಜರರಾಜಂ ಪದೆದಿತ್ತನಿತ್ತನೊಲವಿಂ ಕಾಳಿಂಗಭೂಪಾಲನಾ
ದರದಿಂ ಸಿಂಧುಮಹೀಶನಿತ್ತನೊಸೆದಿತ್ತಂ ಸಿಂಹಳಾಧೀಶ್ವರಂ || ೪
ಕಂ || ಎಂದು ತಂದ ಕಪ್ಪಂಗಳಂ ಪೆಸರ್ವೆಸರೊಳೆ ಪೇೞ್ದು ಕುಡೆ ತದಧೀಕೃತರಪ್ಪರನೊಪ್ಪು
ಗೊಳಲ್ವೇೞ್ದು ಉಚಿತಸನ್ಮಾನಂಗಳಿನವರಂ ಬೀಡಿಂಗೆ ಕಳುಪಿ ಬೞಿಯಂ ವಸಂತ
ಸಮಯಸಂಗತಿಯಿನಪಗತಜೀಮೂತನಾಗಿ ಜಿನಮತದಂತತಿಸ್ವಚ್ಛಮುಂ ನಿಶ್ಚಲಮುಂ
ಮಹಾಂತಮುಮವಗಾಹಿತಸಮಸ್ತಪದಾರ್ಥಮುಮಾದ ಗಗನಮಂಡಲಮಂ ಚಕ್ರವರ್ತಿ
ಮುಖಮಂಡನಕ್ರೀಡೆಯಿಂ ನೋಡುತ್ತಿರ್ಪನ್ನೆಗಂ ತದೇಕದೇಶದೊಳ್-
ಚಂ || ಇದು ಸುೞಿಗಾಳಿಯಿಂ ನೆಗೆದು ತೋಱುವ ಕಿಂಶುಕಶುಷ್ಕಪತ್ರಮಿಂ
ತಿದು ಗಗನಕ್ಕೆ ನಾಡೆ ನಲಿವಾಱಿದದೊಂದು ಕಪೋತಮಂತುಮ
ಲ್ತಿದು ಪರಿದಿರ್ದ ಪಾವಸೆ ಮುಗಿಲ್ಮುಱಿಯೆಂಬಿನಮಿಂಬುಗೆಟ್ಟು ಕಂ
ದಿದ ಪೞಗಂಚುಗನ್ನಡಿವೊಲೇನಿೞಿದಾದುದೊ ಚಂದ್ರಮಂಡಲಂ || ೫
ವ || ಆಗಳ್-
ಉ || ಆ ಪರಿಪಾಂಡುರಪ್ರತತಿಯಾ ದ್ಯುತಿಯಾ ತತಿಯಾ ಮನೋಭವೋ
ದ್ದೀಪನವೃತ್ತಿಯಾ ಗ್ರಹಪರಿಗ್ರಹಸಂಗತಿಯಾ ಸುಧಾಮಯ
ವ್ಯಾಪೃತಿಯಾ ಪ್ರಪೂರ್ಣವಲಯಾಕೃತಿಯೀಗಳದೆತ್ತವೋದುದೆಂ
ದಾ ಪೃಥಿವೀಶ್ವರಂ ಪಗಲತಿಂಗಳನಚ್ಚರಿವಟ್ಟು ನೋಡಿದಂ || ೬
ಕಂ || ತಿಂಗಳಸಿರಿಯಿದು ಮುನ್ನಮೆ
ತಿಂಗಳಸಿರಿಯಲ್ತು ಪಕ್ಷಮೆಂಬಾಪಕ್ಷಂ
ಸಂಗತಿವಡೆಯದು ಪಗಲೀ
ಭಂಗಿ ದಲದಱಿಂದವಾರೊ ನೆರೆ ಸಿರಿಯೆಱೆಯರ್ || ೭
ಐದೇವಗತಿಯಲ್ಲಿ ಪೆಸರ್ವೆ
ತ್ತೀವಿಧುಗಂ ಕಾಲವಶದೊಳಿಂತಾಯ್ತಾಮಿ
ನ್ನೀವಿಷಮಭವದೊಳಾಗದ
ದೇವಿಧಿವಟ್ಟಪೆವೊ ಮುಂದೆ ಶಲಭೋಪಾಯರ್ || ೮
ಇರುಳಾದ ಚೆಲ್ವು ಪಗಲೋ
ಸರಿಪುದು ಚಂದ್ರಂಗೆ ರವಿಗೆ ಪಗಲಾದೊಪ್ಪಂ
ಪರಿಹರಿಪುದಿರುಳ್ ತಾನೆನೆ
ನರಂಗೆ ಲೇಸೆಂದುಮೆಂತುಮೇಂ ನಿಂದಪುದೇ || ೯
ಇಂದೆಮಗೆ ಚಂದ್ರಬಲಮುಂ
ಟೆಂದು ಕೆಲರ್ ನಲಿದು ನಚ್ಚುವರ್ ಚಂದ್ರಂಗಂ
ಕಂದುಂ ಕುಂದುಂ ದಿವಸದೊ
ಳೊಂದಿದುದೆನೆ ಕಳಿವರಾರೊ ಕಾಲದ ಗುಣಮಂ || ೧೦
ವ || ಅಂತು ವಾಸರೇಂದುದರ್ಶನಂ ವೈರಾಗ್ಯಸಾಗರವೃದ್ಧಿಯಂ ಪಡೆಯಲೊಡಂ ಶರೀರ ಸಂಪದಾಯುರ್ಯೌವನಂಗಳಧ್ರುವಭಾವನೆಯೆ ಮನದೊಳ್ನಟ್ಟು ನಿಂದು-
ಘನಮೆನಿಪುದು ಮತ್ತಂತಪ
ಘನಮೆನಿಪುದು ಭಾವಿಪೊಡೆ ಘನಾಘನಮುಂ ತಾ
ನೆನಿಪುದು ಪೆಸರ್ಗೇಕಸ್ಥಿತಿ
ಯಿನಿತಿಲ್ಲವಯವದೊಳಕ್ಕುಮೇ ಅೞಿಯೊಡಲುಂ || ೧೧
ಪಿಡಿವಿಡಿಯೆ ಕರಗುವುದು ಬ
ಯ್ತೊಡೆ ಮಸಿಯಾಗಿರ್ಪುದಲ್ಲದಿರ್ದೊಡೆ ಪೆಱರ್ಗಾ
ಗಡೆ ಬಂದಪೆನೆಂಬುದು ಗಡ
ಸುಡು ಧನಮೆ ಜಗಕ್ಕೆ ದುಃಖಸಾಧನಮಲ್ತೇ || ೧೨
ಕುತ್ತಂ ಬಿಟ್ಟೊಡೆ ಪಗೆ ಬೆಂ
ಬತ್ತುವನವನುೞಿಯೆ ಕೊಲ್ದುದಹಿಯದು ಮುಂ ತ
ಪ್ಪಿತ್ತೆನೆ ಪೊಡೆವುದು ಬಱಸಿಡಿ
ಲೆತ್ತಿದು ಮಾನವರ್ಗೆ ಜವನ ಜತ್ತಕುಱಲ್ತೇ || ೧೩
ಬಿಡದೆ ಜರೆಯೆಂಬ ಕಾೞ್ಕಿ
ಚ್ಚಡರ್ದೆತ್ತಲುಮೞುರೆ ಮೋಹದಿಂದೋವುವ ಕೆ
ಟ್ಟೊಡಲಿನಿತು ಮೋಹದಿರವಂ
ಪಡೆದಪುದೊ ಬೞಿಕ್ಕೆ ಮಿಕ್ಕು ಯೌವನವನದೊಳ್ || ೧೪
ಮಂದಗತಿ ಪಿಂಗೆ ಬುಧವೃ
ತ್ತಂ ದೊರೆಕೊಳೆ ವಕ್ರತರತಮೋರಿವಿಜಯಧಿ
ಷ್ಣ್ಯಂ ದಲೆನಿಸಿತ್ತು ಮನ್ಮನ
ಮಿಂದೆನಗೀ ದಿವಸದಿಂದು ಗುರುವಾದುದಱಿಂ || ೧೫
ವ || ಎಂದು ಮಾಣದೆ-
ಉ || ಆ ವಧುವಂ ಶಶಿಪ್ರಭೆಯನಾದ್ಯಶಶಿಪ್ರಭೆಯೆಂದು ಚಕ್ರಮಂ
ಕೋವರ ಚಕ್ರಮೆಂದು ನಿಧಿಯಂ ಲಯಸನ್ನಿಧಿಯೆಂದು ತನ್ನ ಕೇ
ಳೀವನಮಂ ಪರೇತವನಮೆಂದವನೀಶನವಂ ಸಮಂತು ಸಂ
ಭಾವಿಸಿದಂದು ಭಾವಿಸದನೊಂದನೆ ದಂದುಗದಿಂದಗಲ್ದುದಂ || ೧೬
ವ || ಆ ಪ್ರಸ್ತಾನದೊಳ್-
ಉ || ಆ ನೃಪನೋಲಗಕ್ಕೆ ಋಷಿಯಾನನಿವೇದಕನೊರ್ವನೆಯ್ದಿ ಬಂ
ದಾನತನಾಗಿ ದೇವ ನಿಜಪುಣ್ಯವೆ ತಂದವೊಲಿಂದು ಬಂದು ಸಂ
ಜ್ಞಾನಮಯಂ ದಯಾರ್ದ್ರಹೃದಯಂ ಸುತಪೋವಿಭವಂ ಶಿವಂಕರೋ
ದ್ಯಾನದೊಳಿರ್ದಪಂ ಪರಿವೃತವ್ರತಿವೃಂದಸಭಂ ಗುಣಪ್ರಭಂ || ೧೭
ವ || ಎಂದು ಬಿನ್ನವಿಪುದುಂ ರಥಾಂಗಧರನಾತ್ಮಮನೋರಥಕ್ಕೆ ಸಾರಥಿಯಂ ಪಡೆದೆನೆಂದು ಸಂತಸದಂತನೆಯ್ದಿ-
ಕಂ || ಪುದಿದ ತೊಡರೆಲ್ಲಮಂ ಪಱಿ
ಯೊದೆದು ಬನಕ್ಕಾಗಿ ನೆಗೆದು ಕದುಪಂ ಕೂಡಲ್
ಮದಗಜರಾಜಂ ನಡೆವಂ
ದದೆ ನಡೆದಂ ಮುದದೆ ಮುನಿಜನಕ್ಕವನೀಶಂ || ೧೮
ವ || ಅಂತು ಸಕಲಪುರಜನಪರಿಜನಂ ಬೆನ್ನನೆ ಬರೆ ಬಂದತ್ಯಂತಶುಚಿಯುಂ ವಿವಿಕ್ತಮುಂ ಮನೋಹರಮುಮಪ್ಪ ಋಷ್ಯಾಶ್ರಮಮನಾಶ್ರಿತಶ್ರೇಯನೆಯ್ದೆವರ್ಪಾಗಳ್-
ಕಂ || ಸುತಪಃಕೃಶೀಕೃತಂ ಸಂ
ಶ್ರಿತಧೈರ್ಯಂ ಸೂರ್ಯಧಾಮಸಮುದಯಲಕ್ಷ್ಮೀ
ಕೃತತನು ತಪಸ್ವಿಯಿರ್ದಂ
ಪ್ರತಿಮಾಯೋಗದೊಳಖರ್ವಗುಣಗಣನೊರ್ವಂ || ೧೯
ವ || ಮತ್ತಂ-
ಕಂ || ಸರ್ವಾಂಗಮಲಧರಂ ಪರಿ
ನಿರ್ವೃತಿಸೌಖ್ಯೋನ್ಮುಖಂ ವ್ಯಪಾಕೃತಮೋಹಂ
ಸರ್ವಜ್ಞಸೂಕ್ತಿಪಠನದಿ
ನೊರ್ವಂ ಋಷಿಯಿರ್ದನಾತ್ತಗುರುಸೌಹಾರ್ದಂ || ೨೦
ರಾದ್ಧಾಂತಪಾರಗಂ ಗುಣ
ವೃದ್ಧಂ ಮಾರ್ಗಪ್ರಭಾವನಾರ್ಥದಿನಿರ್ದಂ
ಸದ್ಧರ್ಮಕಥಾಕಥನದಿ
ನಿರ್ದನದೊರ್ವಂ ತಪೋಧನಂ ಜ್ಞಾನಧನಂ || ೨೧
ತನ್ನಿಂದೆ ತಿಳಿದು ತನ್ನಂ
ತನ್ನೊಳೆ ತಾಂ ನಿಂದು ತನ್ನೊಳುದಯಿಸಿದ ಸುಖಂ
ತನ್ನನೆ ತಣಿಪುತ್ತಿರೆ ಮುನಿ
ಪನ್ನಿಹಿತಧ್ಯಾನನೊಪ್ಪಿದಂ ಪೆಱನೊರ್ವಂ || ೨೨
ಉದ್ಯನ್ನಯಪ್ರಮಾಣಮ
ಹಾದ್ಯುತಿಯಿಂ ಮಸುಳೆ ಕುನಯಖದ್ಯೋತಂ ತ
ತ್ವೋದ್ಯೋತಿಕನೆಸೆದಿರ್ದಂ
ಹೃದ್ಯಾಕೃತಿಸಾಧುಭಾಸ್ಕರಂ ಮತ್ತೊರ್ವಂ || ೨೩
ವ || ಅಂತನೇಕಯೋಗನಿಯೋಗಯುಕ್ತರಪ್ಪ ಪಲಂಬರ್ ಮುನೀಂದ್ರಚಂದ್ರರಂ ಪ್ರತಿವಿಕಸಿತ ವಿಲೋಚನಾಲೋಕಸಮುದಯಕುಮುದಸ್ರಜಂಗಳಿಂ ಸಾರ್ವಭೌಮನರ್ಚಿಸುತುಂ ತದಾಶ್ರ ಮಮಂ ಪುಗುವಾಗಳ್-
ಚಂ || ತೊಳಪ ಗುಣೋತ್ಕರಂ ಬಳಸಿದೂರ್ಜಿತಧರ್ಮದೆ ಸನ್ನಯೋತ್ಕರಂ
ಬಳಸಿದ ತತ್ವನಿಶ್ಚಯದೆ ಕೂಡೆ ನಿಜಾಂಚಿತಲಕ್ಷಣೋತ್ಕರಂ
ಬಳಸಿದಗಾಧಬೋಧದ ವಿಲಾಸಮನೇೞಿಸಿ ತಾಪಸೋತ್ಕರಂ
ಬಳಸಿದ ತದ್ಗುಣಪ್ರಭಮುನಿಪ್ರಭುವೊಪ್ಪಿದನಂದು ನಾಡೆಯುಂ || ೨೪
ಕಂ || ಅಗ್ರದೊಳೊಪ್ಪುವ ವಿಮಳಶಿ
ಲಾಗ್ರದೊಳಿರೆ ಮುನಿಯ ಮೂರ್ತಿ ನೆನೆಯಿಸಿದುದು ಲೋ
ಕಾಗ್ರದೊಳೊಪ್ಪುವ ವಿಮಲಶಿ
ಲಾಗ್ರದೊಳೆಸೆದಿರ್ದ ಸಿದ್ಧಶುದ್ಧಾಕೃತಿಯಂ || ೨೫
ವ || ಅದಲ್ಲದೆಯುಂ-
ಕಂ || ಕಾವೆಸೆವ ಕಱಿಯ ನೆಯ್ದಿಲ
ಪೂವಂ ಪೂಜಿಸಿದ ತೆಱದೆ ತನುಮುನಿಪದರಾ
ಜೀವದ ಕೆಲದೊಳ್ ವೇತ್ರಲ
ತಾವೃತವೆಸೆದತ್ತು ಮಸೃಣಪಿಂಛಗುಳುಚ್ಛಂ || ೨೬
ಸ್ಥಳಕಮಳಶಂಕೆಯಿಂ ಯತಿ
ಚಳನಂಗಳನಳಿಪಿ ಸಾರ್ದ ಹಂಸನ ಚೆಲ್ವಂ
ತಳೆದೇನೆಸೆದುದೊ ತೊಳತೊಳ
ತೊಳಗುವ ಶಶಿಕಾಂತಮಣಿಕಮಂಡುಲು ಕೆಲದೊಳ್ || ೨೭
ವ || ಅಂತು ಸಮೀಚೀನಸಂಯಮೋಪಕರಣಾಲಂಕೃತನಾಗಿರ್ದ ಮುಮುಕ್ಷುಮುಖ್ಯನಂ ತ್ರಿಪ್ರದಕ್ಷಿಣಂಗೆಯ್ದು ಗುರುಭಕ್ತಿಪೂರ್ವಕಮಭಿವಂದಿಸಲೊಡಂ-
ಕಂ || ಯತಿ ಪರಸೆ ಧರ್ಮವೃದ್ಧಿ
ಶ್ರುತಿಯೊಗೆದುದು ತನ್ಮುಖೇಂದುವಿಂದಂ ಕರ್ಣಾ
ಮೃತಮುತ್ಥಿತಪುಳಕಾಂಕುರ
ತತಿಯುಪಹೃತಮೋಹತಾಪಮತಿಮೃದುಮಧುರಂ || ೨೮
ವ || ಅನಂತರಮಾ ಪರಕೆಯೊಡನೊಗೆದ ಶೇಷರ್ಷಿವೃಷಭದತ್ತಾಶೀರ್ವಾದಮಂ ನೃಪಚಿಂತಾ ಮಣಿ ಕರ್ಣಪೂರಂಮಾಡಿ ಸಂತಸದಿಂ ಕುಳ್ಳಿರ್ದು-
ಕಂ || ಚಿತ್ತ ಶುಭದುದಯವಶದಿಂ
ದೆತ್ತಾನುಂ ನೆನೆಯೆ ನಿಮ್ಮನಂತವನೆ ಮುನೀಂ
ದ್ರೋತ್ತಮ ಕೃತಾರ್ಥನೆನೆ ಕಾ
ಣುತ್ತೆಱಗುತ್ತಿರ್ದನೊಳ್ಪನದನೇವೇೞ್ವೆಂ || ೨೯
ಜನಿತಕುದೃಷ್ಟಿಭ್ರಮಮತಿ
ಘನಮೋಹತಮಃಪಟಾವೃತಂ ಜಗಮದಱೊಳ್
ಮುನಿಭಾನು ಭವದ್ವಾಕ್ಪ್ರಭೆ
ಯನಿಶಂ ಬೆಳಗದೊಡೆ ಸತ್ಪ್ರವರ್ತನಮುಂಟೇ || ೩೦
ನೀನಾಲಂಬನಮಾದೆಯ
ಧೋನಿಪ ತಜ್ಜನಕೆ ನಿನ್ನ ನುಡಿ ಸೋಪಾನಂ
ತಾನಾದುದು ಕೈವಲ್ಯಸು
ಧಾನಿಳಯಾಗ್ರಾರುರುಕ್ಷುಗಕ್ಷಯಬೋಧಾ || ೩೧
ಮುನಿಪವಚೋರುಚಿಯಿಂದಂ
ದಿನಪನವೋಲ್ ಬೆಳಗೆ ಲೋಕಮಂ ಸತ್ಪಥವ
ರ್ತನಮಿಲ್ಲ ತಮಗೆನಿಪ ದು
ರ್ಜನಮನಿತುಮುಲೂಕಜನ್ಮಮಾಗಲೆ ವೇೞ್ಕುಂ || ೩೨
ವ || ಎಂದತ್ಯಂತಪ್ರಶ್ರಯಸಮಾಶ್ರಿತೋಕ್ತಿಮುಕ್ತಾಕ್ಷತಂಗಳಂ ದಂತಕಾಂತಿಚಂದನಚರ್ಚೆವೆರಸ ರ್ಚಿಸಿದ ಭೂಕಾಂತನಂತರಂಗವಿಶುದ್ಧಿಯಂ ತಪೋನಿಧಿ ಮನದೊಳವಧಾರಿಸಿ ಗುಣಾನು ರಾಗಿತ್ವದಿಂದಮಿಂತೆಂದರ್-
ಕಂ || ಇದು ದಲ್ ನಿಮಿತ್ತಭಾವಂ
ಮದಕ್ಕೆ ಸಾಜದಿನೆನಿಪ್ಪ ಸಾಮ್ರಾಜ್ಯಂ ತಾ
ನದೆ ನಿನ್ನೊಳ್ ಮತ್ತೊಂದಾ
ದುದರ್ಕೆ ನೃಪ ಸಮನಿಸಿತ್ತು ವಿಸ್ಮಯಮೆಮಗಂ || ೩೩
ನಯದಿಂ ಜನಕ್ಕೆ ಪಣ್ಯೋ
ದಯದಿಂ ಪಾರ್ಥಿವಜನಕ್ಕೆ ವಿನಯವಚೋನಿ
ಶ್ಚಯದಿಂ ಯೋಗಿಜನಕ್ಕಂ
ದಯೆಮಾಡುವೆ ನೀನೆ ದಲ್ ಚಮತ್ಕೃತಿಯೊದವಂ || ೩೪
ಇನಿವಿರಿದು ರಾಜ್ಯಪದದೊಳ
ಮಿನಿವಿರಿದು ಸುಖಾನುಭವದೊಳಂ ಕಾಣಲ್ಕಾ
ಗೆನಿಪೆಱಕಮವಱೊಳಾದುದು
ನಿನಗಂತುಟೆ ಹಿತದೊಳಲ್ಲದೆಸಪನೆ ಚದುರಂ || ೩೫
ಎಂದ ಮುನೀಶಂಗಂದಿಂ
ತೆಂದಂ ಧರಣೀಶನೀಶ ನೀಮಿರ್ದೆಡೆಗೇ
ೞ್ತಂದಪೆನೆಂದಿರೆ ನಿಮ್ಮನೆ
ತಂದತ್ತಿಲ್ಲಿಗೆ ಪುರಾಕೃತಂ ಮತ್ಸುಕೃತಂ || ೩೬
ಪರಮದಯಾನಿಧಿಯೆನ್ನೊಳ್
ಕರುಣಂ ನಿಮಗುಳ್ಳೊಡೆನಗೆ ದಯೆಗೆಯ್ವುದು ನೀ
ಮಿರದೆ ಜಿನದೀಕ್ಷೆಯಂ ಬಿ
ತ್ತರಿಸುಗುಮೆನಗದುವೆ ಬೞಿಕೆ ನಿರ್ವೃತಿಸುಖಮಂ || ೩೭
ಶಾ || ಪಾಪಾರಾತಿಯನಾಂಪುದಲ್ತು ಚತುರಂಗಂ ಸೈನಿಕಂ ಕಾಲಶಂ
ಪಾಪಾತಕ್ಕೆ ಸಿತಾತಪತ್ರನಿಕರಂ ಕಾಪಲ್ತನಿತ್ತೊರ್ಮೆ ದಲ್
ಪೋಪಾಗಳ್ ನಿರಯಕ್ಕೆ ಬಂಧುಗಳೊಡಂ ಬಂದಪ್ಪರಲ್ತಿಂ ಭವ
ಚ್ಛ್ರೀಪಾದಾಂತಿಕದೀಕ್ಷೆ ತಾನೆನಗೆ ಮಾೞ್ಕುಂ ಸ್ವಸಂರಕ್ಷೆಯಂ || ೩೮
ಕಂ || ಎನೆ ಮುನಿವೃಷಭಂ ಭೂಪನ
ಮನದೊಳ್ ಮಾಣದೆ ಪೊದೞ್ದ ವೈರಾಗ್ಯದ ಪೆಂ
ಪನೆ ಪರಿಕಿಸಲೆಂದಾಗ್ರಹ
ವಿನಿವರ್ತನಸೂಚಕೋಕ್ತಿಗಳನಿಂತೆಂದಂ || ೩೯
ಕಾರುಣಿಕರ್ ಧರ್ಮಜ್ಞರ್
ಚಾರಿತ್ರಸಮೇತರೆನಿಪ ನಿಮ್ಮನ್ನರನಾ
ಗಾರತೆಯಿಂ ಪಾವನಮನ
ಗಾರತೆಯಿಂದೆಸಗುವೆಸಕಮಿಂ ಪೆಱತುಂಟೇ || ೪೦
ವ || ಅದಲ್ಲದೆಯುಂ-
ಚಂ || ತಳೆವೊಡೆ ಮದ್ವಿಧರ್ ನಿಯಮದಿಂ ಯಮಿಗಳ್ ಕಠಿನಾಂಗಸಂಗತ
ತಳೆಗುಮತೀವದುರ್ಧರಮೆನಿಪ್ಪ ತಪೋಭರಮಂ ಭವದ್ವಿಧರ್
ತಳೆಯಲದೆಂತುಮಾರ್ತಪರೆ ತದ್ಭರಮಂ ಭರದಿಂ ನಿಕಾಮಕೋ
ಮಳಕಮನೀಯಕಾಯರವನೀಪತಿ ಕುಂಕುಮಲೇಪಲಾಲಿತರ್ || ೪೧
ವ || ಅದುಕಾರಣದಿಂ-
ಕಂ || ಧರೆಯಂ ಸದ್ಧರ್ಮಾಶ್ರಯ
ಧರೆಯನನಾಧೇಯನಱಿಯದಾಕಲ್ಪಂ ನೀಂ
ಧರಿಯಿಸೆ ತಪಮದೆ ಹೀನೋ
ದ್ಧರಣದಿನತ್ತೊಂದುಮಲ್ತೆ ಪೇೞ್ ತಪಮುಂಟೇ || ೪೨
ವ || ಎನಲೊಡಮಜಿತಸೇನಮಹಾರಾಜಂ ಮುನಿರಾಜ ಸಂಸಾರಭಯದಿಂ ದೀನಭಾವಮಂ ತಾಳ್ದಿದೆಮ್ಮನುದ್ಧರಿಸೆ ನಿಮಗಮಂತೆಯೆಂದು ತನ್ನ ಹೃದಯದ ಪರಿಚ್ಛೇದಮನೆ ನಿಲೆ ನುಡಿದು ಸಮಸ್ತಕ್ಷಾತ್ರಭಾರಮಂ ಜಿತಶತ್ರುವೆಂಬ ಪುತ್ರನೊಳ್ ನಿಱಿಸಿ ತಾನುಮು ಪಶಮಭಾವದೊಳ್ ನಿಂದು ಬೞಿಯಂ ಲೋಕಾಯತವಾದಿಯಂತೆ ಆಸಾಧಿತಗುರು ಮತನುಂ ವಿರಹಿಯಂತೆ ಮುಕ್ತಾಭರಣನುಂ ಸಾಯಂತನತರಣಿಯಂತೆ ಪರಿಹೃತಾಂಬರನುಂ ದಿನಮುಖಸರೋಜಾಕರದಂತೆ ವಿಕಚತಾಸಮೇತನುಂ ಶಿಶಿರಸಮಯದಂತಾರೂಢತ ಪನುಮಾಗಲೊಡಂ-
ಕಂ || ಸುತಯುವತಿಜ್ಞಾತಿ ಪ್ರಕೃ
ತಿತತಿವ್ಯಾಮೋಹಶಿಶಿರದಿಂ ಕೊರಗಿದ ಭೂ
ಪತಿಯ ಮುಖಾಬ್ಜಂ ಸಂಶೋ
ಭಿತಮಾದತ್ತಾ ತಪಃಪ್ರಭಾವಾತಪದಿಂ || ೪೩
ತಿಳಿಯೆ ಜಡಾಶಯಮೆಸಕ
ಕ್ಕಳವಡೆ ಮಾರ್ಗಂ ದಿಗಂಬರಶ್ರೀ ತನ್ನೊಳ್
ಬೆಳಗೆ ಸಮಂತಾತಪಮಂ
ತಳೆದೂರ್ಜಿತನಾದನೂರ್ಜದಂದದಿನಾದಂ || ೪೪
ಅರಿಗಳನಂಜಿಸುತುಂ ಪರಿ
ಹರಿಸುತ್ತುಂ ವಿಷಯಬಾಧೆಯಂ ಸದ್ಧನಮಂ
ಪರಿವರ್ಧಿಸುತುಂ ಕಿಡುತರೆ
ಸಿರಿ ಕಿಡದಭ್ಯಾಸಮೆನಿಪ ತೆಱದಿಂ ನಡೆದಂ || ೪೫
Leave A Comment