ಕಂ || ಶ್ರೀಪತಿಪುರಸಮಮಂ ಚೂ
ಡಾಪೀಡಮೆನಿಪ್ಪ ಮಾಡಮಂ ಪೊಕ್ಕು ಸುಸೌ
ಖ್ಯೋಪಚಯನಿರ್ದನುಚಿತ
ವ್ಯಾಪೃತಿಯಿಂ ಜೈನಜನಮನೋಹರಚರಿತಂ || ೧

ಅಂತು ಸುಖದಿನಿರ್ದನನ್ನೆಗಂ-

ಮ || ವಿ || ಎನಗಂ ಭೂಪತಿಗಂ ಸಮಾನಮೆ ಕರವ್ಯಾಪ್ತಾಖಲಾಶತ್ವಮ
ತ್ಯನುರಕ್ತಪ್ರಕೃತಿತ್ವಮಭ್ಯುದಯವತ್ವಂ ಚಕ್ರಭೃತ್ತ್ವಂ ದಲೆಂ
ದಿನನುದ್ಯಾನಪಯೋವಿನೋದಸದೃಶತ್ವಕ್ಕಂ ಮನಂದಂದವೋಲ್
ವನಮಾಲಾಕುಲತೀರಮಪ್ಪಪರಪಾರಾವಾರಮಂ ಪೊರ್ದಿದಂ || ೨

ವ || ಆಗಳ್-

ಕಂ || ಪ್ರತ್ಯಗ್ಭೂಧರವಾತ್ಮಾ
ಧಿತ್ಯಕದೊಳ್ ತಳೆದುದಸ್ತಗತಿಯಿಂ ಬೀೞ್ವಾ
ದಿತ್ಯನನೆಂದುಮದಾರ್ಗಂ
ನಿತ್ಯಪರಾರ್ಥೈಕವೃತ್ತನಕ್ಕುಂ ಗ್ರಾಹ್ಯಂ || ೩

ಚಂ || ಬಳಸಿದುದರ್ಕವಾಜಿಖುರಘಟ್ಟಿತಮಾದಪರಾದ್ರಿಯಿಂದಮು
ಚ್ಚಳಿಸಿದ ಧಾತುರೇಣುವೆನೆ ಚಕ್ರಯುಗಂಗಳಗಲ್ಕೆಗಿಚ್ಚು ಪಾಂ
ಸುಳೆಯರ ರಾಗದೇೞ್ಗೆ ದೆಸೆವೆಣ್ಗಳ ರತ್ನವಿಭೂಷಣಾಂಶು ವು
ತ್ಪಳಿನಿಯ ಕುಂಕುಮೋದಕದ ಸಿಂಪಿಣಿ ಸಂಜೆಯ ಕೆಂಪು ಲೋಕಮಂ || ೪

ವ || ಆ ಸಮಯದೊಳ್ ದೂಳಿಸೆಜ್ಜರಕ್ಕುಜ್ಜುಗಿಸಿ ಕಾಡಾನೆಗಳ ಕೋಡ ಮೊನೆಯಿನೀಡಿಱಿವ ಗಿರಿಯ ದರಿಯ ಗೈರಿಕಪರಾಗಮಂ ಸಂಧ್ಯಾರಾಗಮಿಷದಿನಾಗಸಕ್ಕೆ ಪಸರಿಸಿಯುಂ ಪೊಗಸಿನೊಳ್ ಮೊಗಸಿ ಬೈಗುವರೆಗಂ ಬೇಟೆವೆಸದಿನಸುವರೆಯಾಗಿ ತಮ್ಮಿರ್ಕೆವೆಟ್ಟುಗಳ ಗುಹೌಶಯ್ಯೆಯಿಂದುಱೆಸನ್ನೆಗೆಯ್ದು ಪೊಱಗಣಪಾಸಱೆಗಳೊಳ್ ಪಾಸುವಸುಕೆದಳಿರಂ ಸೂಸಿ ಬೇಸಱಿಸಿದ ಪುಳಿಂದಿನಿಯರ ಮನದೊಳೊಂದಿನಿಸು ಸಂದಿಸಿಯುಂ ತೊಱೆಯ ಪೊಱದಡಿಯ ಕರಂಜಕುಂಜದೊಳ್ ಸಂದಣಿಸಿ ನಿಂದು ರೋಮಂಥಲೀಲಾತತ್ವರತೆಯಿಂ ದರನಿಮೀಲಿತಾಕ್ಷಂಗಳಾದ ಕಾಡೆರ್ಮೆಯ ಮೊಗದಿನುಗುವ ನೊರೆಯನುರುಳಿಗೊಂಡು ತಂದಡವಿಯ ಗಿಡುಗಳೊಳ್ ಗುಡಿಗಟ್ಟಿದಂತೆ ತೊಡರ್ಚಿಯುಂ ಮೇಪುಗಾಡಿಂ ಹಕ್ಕಿದಲೆಗೆ ಹರಿಯಿಡುವ ಹರಿಣೀಗಣದ ಕಡೆವಾಯೊಳರೆ ಮೆಲ್ದುೞಿದೆಳೆಗಱುಂಕೆಯೆಸಳ್ಗಳಂ ಸೆಳೆದು ತಂದಾ ಬಯಲೊಳ್ ಬಳ್ಳಿವಸಲೆಯಂ ಪೊಸಯಿಸಿಯುಂ ಪೆರ್ಮರದ ನಟ್ಟೆಗೊಂಬಿನ ಕವಲ್ದಲೆಯೊಳಿಟ್ಟ ಗೂಡುಗಳೊಳ್ ಗೂಡುಗೊಂಡಿರ್ದ ಕುಱುಳೆವಱೆಗಳ್ಗೆ ಕುಟುಂಕನಿಕ್ಕಿ ಕಡುಗಂದಿತನದಿಂ ಕೋಡಗಱಿಯ ತುಱುಗಲೊಳ್ ಪೊದೆಯಿಸೆ ಪದೆದಿರ್ದ ವನವಿಹಂಗಂಗಳಂ ಕೊಂಬುವೆರಸಿ ತೂಗಿ ತೂಂಕಡನೊಡರ್ಚಿಯುಂ ನಿದ್ರಾಭಾರಮು ದ್ರಿತಂಗಳುಂ ಕಿಂಚಿದಾಕುಂಚಿತಪರ್ಣಂಗಳುಮಾದುಪವನದ ತರುಲತಾಗುಲ್ಮಜಾಲಮಂ ಸೋಂಕಿ ಬಂದು ತಿಳಿಗೊಳಂಗಳೊಳ್ ತೆರೆಯ ನೆರವಿಯಂ ತೆರಳ್ಚಿ ಸಂಜೆಯ ಕಡುವೆಳಗಿನಿಂ ತಡಿಯೊಳ್ ಪೊಳೆವ ತಮ್ಮ ನೆೞಲನೞಲ್ವೋದ ನಲ್ಲಳೆಂದು ಲಲ್ಲೈಸಿ ನೋೞ್ಪ ಜಕ್ಕವಕ್ಕಿಗಳಾಸೆಯಂ ಬೀಸರಂಮಾಡಿಯುಂ ಸೇಡುಗೂಡಿದಂತೆ ಪುರಮಂ ಪೊಕ್ಕು ವಿಪಣಿವೀಧಿಯೊಳ್ ಮಾಲೆಗಾರ್ತಿಯರೆತ್ತಿದ ಬೆಲೆವೂವಿನ ಸರಂಗಳನಲರಂಬಂಗೆ ಪೊದೆಗೆದಱುವಂತೆ ಕೆದಱಿ ಪರಿಮಳಭಂಗಭಯಮನವಳ್ದಿರೊಳ್ ತಗುಳ್ಚಿ ಪಡಲಗೆಯಂ ಮಗುಳೆ ಪುಗಿಯಿಸಿಯುಂ ಲೀಲೆಯಿಂ ಸುೞಿವ ಬೊಜಂಗರ ತುಱುಂಬು ದಿಂಬಿದ ಕದಂಬದೂವಿನಿಡುಕುಱೊಳ್ ಮಡಂಗಿದ ಧೂಪವರ್ತಿಯ ಕರಂಡಕಂಗಳಿಂ ಸೌರಭದ ಸಸಿಯಂತಸಿದನೆ ನೆಗೆವಗುರುವಿನ ಪೊಗೆಯನಗೆಯೊತ್ತುಗೊಂಡು ವೇಶ್ಯಾ ಸೌಧವೇಶ್ಮಂಗಳನರ್ಧಶ್ಯಾಮಳಂ ಮಾಡಿಯುಂ ಮೆಲ್ಲಮೆಲ್ಲಗೆ ಸೂಱೆಗೇರಿಯಂ ಪೊಕ್ಕು ಪೊಱಗಣಮತ್ತವಾರಣಮಂ ಮಲಂಗಿ ನಿಂದು ಯೌವನೋನ್ಮತ್ತೆಯರುಟ್ಟ ಪಟ್ಟಣಿಗೆಯ ನಿಱಿಯ ತುಱುಂಗಲಂ ನೆಗಪಿ ನುಣ್ದೊಡೆಯ ಚೆಲ್ವಂ ನೋಡಲೆಂದು ಸಿಡಿಮಿಡಿವರ್ಪ ಕಾತರವಿಟರ ಕಣ್ಗೆ ಪಾರಣೆಯಂ ಮಾಡಿಸಿಯುಂ ನಿಮ್ನನಾಭಿಮಂಡಳಮನೊಳಪೊಕ್ಕು ಒಳಗೆ ತೀವಿದ ಪುಡಿಗತ್ತುರಿಯ ಸುಟ್ಟುೞಿಯನಸಿದನೆ ಬೇಱೊಂದು ಬಾಸೆಯೆಂಬಂತೆ ನೆಗಪಿ ಮೇಗೊಗೆದು ಬಟ್ಟಮೊಲೆಯಿಟ್ಟೆಡೆಯೊಳ್ ಬಟ್ಟೆಗಾಣದೆ ಬಳಸಿ ಸುೞಿದಾಡಿ ಯುಂ ಸಾಯಂತನಸಮಯಸಮೀರಣಂ ಸೌಖ್ಯಸಾರಸರ್ವಸ್ವಮೆನಿಸಿದಾಗಳ್-

|| ಮಾಳಿನೀವೃತ್ತ ||
ಅರಮೆ ಮಱೆ ಪತಂಗಂಗಾಗೆ ತಚ್ಛೈಲಶೃಂಗಂ
ವಿರಹಪರವಶಾಂಗಂ ತ್ಯಕ್ತಜಾಯಾನುಷಂಗಂ
ಸ್ಮರವಿಶಿಖನಿಷಂಗಂ ಸಾಶ್ರುಪಾತಾನ್ತರಂಗಂ
ದರವಿಚಳದಪಾಂಗಂ ಮ್ಲಾನಮಾಯ್ತಾರಥಾಂಗಂ || ೫

ಕಂ || ಒಱೆದುಗುವ ಬಾಷ್ಪವಾರಿಯಿ
ನೆಱಂಕೆಗಳ್ ನಾಂದು ಮಗುಳೆ ವಿರಹಾನಳನಿಂ
ನೆಱೆ ಬಱವಾಗಿರೆ ಪಡುನೇ
ಸಱೊಳಿರ್ದುವಗಲ್ದು ಚಕ್ರವಾಕದ್ವಂದ್ವಂ || ೬

ಉ || ನಲ್ಲರಗಲ್ಕೆಯಿಲ್ಲದೆಡೆಯಸ್ತಮಯಕ್ಕೆ ದಿನಾಧಿನಾಯಕಂ
ಸಲ್ಲದ ತಾಣಮಂಗಜಶರಾಹತಿ ಪೊರ್ದದ ದೇಶಮುಳ್ಳೊಡಂ
ತಲ್ಲಿಯೆ ಮಾೞ್ಕೆ ಮಜ್ಜನನಮಂ ಬಿದಿಯೆಂದು ರಥಾಂಗಕಾಂತೆ ಹೃ
ದ್ವಲ್ಲಭವಿಪ್ರಯುಕ್ತೆ ಬಗೆಗೆಟ್ಟು ನೆಱಲ್ದುದು ಪದ್ಮಪತ್ರದೊಳ್ || ೭

ಕಂ || ತೆರೆಯ ಸೆಳೆಮಂಚದೊಳ್ ಬಿ
ತ್ತರಿಸಿದ ಗಳಿತಾಬ್ಜದಳದ ನುಣ್ಬಸೆಯೊಳ್ ಬೆ
ಳ್ನೊರೆಯ ತೆರೆಸುತ್ತಿನೊಳ್ ಪ್ರಿಯೆ
ಗಿರದೊಳ್ಪನೆ ಬಯಸಿ ಕೋಕನಾಯ್ತು ಸಶೋಕಂ || ೮

ಜಳಜದಳಪೀಠದೊಳ್ ನ
ಲ್ಲಳ ನುಣ್ಗಱಿ ಸೋಂಕೆ ಸೋಂಕಿ ಕುಳ್ಳಿರ್ದಳಿನೀ
ಕಳಗೀತರವಮನಾಲಿಪ
ವಿಳಾಸಮಂ ನೆನೆದೊನಲ್ದುದೊಂದು ರಥಾಂಗಂ || ೯

ಮ || ಸ್ರ || ಇದು ಮತ್ಪ್ರಾಣೇಶನೆನ್ನೊಳ್ ನೆರೆದ ಪುಳಿನಮೀಯಿರ್ದುದಾಕಾಂತೆಮೆಲ್ದೊ
ಲ್ಲದ ಮಾರ್ಣಾಳಾರ್ಧಮೀತೋರ್ಪುದು ನಸೆಮುಳಿಸಿಂ ಕಾಡಲೆಂದಾಕೆ ಪೊಕ್ಕಿ
ರ್ದುದಿದಾನೀರೇಜಪರ್ಣೋತ್ಕರಮೆನುತೆ ಮೊದಲ್ಗೊಂಡುದಂಭೋಜಸದ್ಮಾಂ
ತದೊಳುದ್ಯತ್ಕಂತುಚೇತಂ ತೊೞಲಲವಿರತಂ ಚಕ್ರವಾಕಂ ವರಾಕಂ || ೧೦

ವ || ಆಗಳ್-

ಮ || ವಿ || ಇನನಸ್ಮತ್ಪ್ರಿಯನಾತನೊಳ್ ತವದ ಪೆರ್ಚಂ ನಿಚ್ಚಮಿಚ್ಚೈವ ಕೋ
ಕನಿಕಾಯಕ್ಕಿನಿತಾಯ್ತು ಶೋಕಮವನಸ್ತಪ್ರಾಪ್ತಿಯಂ ಸಾರ್ವುದುಂ
ಇನಿತಾಯ್ತುತ್ಸವಮುತ್ಪಲಕ್ಕೆನುತವಂ ನೋಡಲ್ಕೆ ತಾನಾ ಱದ
ಬ್ಜಿನಿ ಕಣ್ಮುಚ್ಚುವ ಮಾೞ್ಕೆಯಿಂ ಮುಗಿದುದೆತ್ತಂ ಪದ್ಮಪತ್ರೋತ್ಕರಂ || ೧೧

ಕಂ || ಅಸಮಸಮವೃತ್ತಿಯಂ ಭಾ
ವಿಸುವಂದಲ್ಪತೆಯೆ ನಾಡೆ ಲೇಸೆಂಬವೊಲು
ಲ್ಲಸಿತೋತ್ಪಲಂಗಳೊಳ್ ಮುಗಿ
ದು ಸರೋಜಂ ನೆನೆಯಿಸಿತ್ತು ಚತುರಕ್ರಮಮಂ || ೧೨

ಪೊರೆಯದು ಜಾಡ್ಯದೊಳೆನಸುಂ
ಪಿರಿದು ಗುಣಂ ಸಿರಿಯುಮುಂಟು ತನಗೆನಿಪಾತಾ
ವರೆಗಮರೆಯಾಯ್ತು ನಲವೆನೆ
ಧರೆಯೊಳ್ ಕಾಲಮನದಾರೊ ಕಳೆಯಲ್ ಬಲ್ಲರ್ || ೧೩

ಪಿರಿದುಂ ಬಿದಿ ನಿಜಜನ್ಮಾ
ಕರಮೆನಿಸಿದ ಪದ್ಮಜಾತಿಗಂ ಮ್ಲಾನತೆಯಂ
ದೊರೆಕೊಳಿಸಿದನೆನೆ ಮತ್ತಿತ
ರರೊಳಾದಂ ಮಾೞ್ಪ ಕೃಪೆ ಖಪುಷ್ಪಮದಲ್ತೇ || ೧೪

ಮ || ವಿ || ಇನನಸ್ತಂಗತನಾಗೆಯುತ್ಪಲಿನಿ ಪೇೞ್ಗುಂ ಲಕ್ಷ್ಮಿಯುಂಟೆಂಬುದ
ರ್ಕೆನಗಂ ತಪ್ಪದು ರಾಜಬಾಧೆ ಬೞಿಯಂ ಲೇಸಲ್ತು ತಾನೆನ್ನ ಜೀ
ವನಮೆಂಬುಬ್ಬೆಗದಿಂದೆ ನಂಜುರುಳಿಯಂ ಪೋ ನುಂಗಿದಳ್ ಪೇೞದ
ಬ್ಜಿನಿಯೆಂಬಂತೆವೊಲಾಯ್ತು ಕುಟ್ಮಳಿತಕಂಜಾತೋದರೇಂದಿಂದಿರಂ || ೧೫

ಕಂ || ಮಳಿನಾತ್ಮನಾಶೆಯಿಂದಿಂ
ತೆಳಸಿದಪಂ ಜಾರನಂಧಕಾರಮೆನುತ್ತಾ
ಗಳೆ ಸಂಧ್ಯೆಯಿನನ ಬೞಿಯನೆ
ತಳರ್ದನುರಕ್ತತೆಗೆ ಮಾಡಿದಳ್ ಸಫಲತೆಯಂ || ೧೬

ವ || ಆ ಸಮಯದೊಳ್-

ಕಂ || ಭೋರೆಂದಸ್ತಾಚಲದಿಂ
ವಾರಿಧಿಗಿೞಿದಾೞ್ವ ರವಿರಥಪ್ರಧ್ವಾನ
ಕ್ಕೋರನ್ನಮಾಗಿ ಫಟಿಕಾ
ಭೇರೀಭೂರಿಪ್ರಣಾದಮೊಗೆದತ್ತಾದಂ || ೧೭

ಮ || ಸ್ರ || ಅನಿತುಗ್ರಂ ತನ್ನತೇಜಂ ಮಸುೞ್ದಧಮತಮಂ ತತ್ತಮಂ ಪತ್ತೆಬೆನ್ನಂ
ದಿನನಾಥಂ ಚಿಃ ಪ್ರತೀಚೀಶರಧಿಗಿೞಿದನಾವೊಂ ವಿಘಾತವ್ಯಪೇತಂ
ಜಿನನಾಥಂ ತಪ್ಪೆ ದೇವಂ ಸಲೆ ಪೆಱನೆನುತುಂ ಡಂಗುರಂಬೊಯ್ಸುತಿರ್ದಂ
ತೆನಸುಂ ಚೆಲ್ವಾಯ್ತು ಸಂಧ್ಯಾಪ್ರಭವದಭವಗೇಹಾನಕಥ್ವಾನಮೆತ್ತಂ || ೧೮

ವ || ಆಗಳ್

ಚಂ || ಇದು ತಿಮಿರಾಪಹಾಂಜನಮುಲೂಕಕುಲಕ್ಕಿದು ಪುಂಶ್ಚಲೀರತ
ಕ್ಕುದಿತತಮಾಲಮಂಡಪಮಿದುತ್ಪಲಲಕ್ಷ್ಮಿಯ ಮಂಡನಕ್ಕೆ ಸು
ತ್ತಿದ ನವನೀಲಕಾಂಡಪಟಮಿಂತಿದು ಚಕ್ರಯುಗಕ್ಕಗಲ್ಚಲಿ
ಕ್ಕಿದ ಕಿಸುರ್ವಕ್ಕೆಕರ್ವೊಗೆಯೆನಿಪ್ಪಿನಮಾಯ್ತು ಮಹತ್ತಮಂ ತಮಂ || ೧೯

ಕಂ || ಇದು ಚೋರರದೃಶ್ಯಾಂಜನ
ಮಿದು ವೃದ್ಧಾಂಗನೆಯರೆಸೆವ ಪಲಿತೌಷಧಮಿಂ
ತಿದು ಕಾಮನ ಕಾರಲಗೆನಿ
ಸಿದುದಪದೃಕ್ಸಾರಮಂಧಕಾರಮಪಾರಂ || ೨೦

ಸರಳಂ ವಕ್ರಂ ತರಳಂ
ಸ್ಥಿರಮುಚ್ಚಂ ನೀಚಮೀಕ್ಷಣಕ್ಕೊದವೆ ತಮಂ
ಸರಿಯಾದುವಂತೆ ವಿಗತಾಂ
ತರವೆನಿಪನ ಮೆಚ್ಚು ಬಲ್ಲರಂ ಮೆಚ್ಚಿಕುಮೇ || ೨೧

ವ || ಅನಂತರಂ-

ಕಂ || ಇರದುದಯಗಿರಿಯ ದರಿಯೊಳ್
ಸುರಕರಿ ಸೆಜ್ಜರಕೆ ಸಾರ್ದು ಸುಯ್ಯಲೊಡಂ ಪು
ಷ್ಕರದಿನೊಗೆದತಿವಿಶದಶೀ
ಕರಮೆನಿಸಿದುದಯಿಪಮಳತಾರಕನಿಕರಂ || ೨೨

ಗಗನಂ ಮಿತ್ರವಿಯೋಗದಿ
ನೊಗೆವಂಶಶ್ಯೂನ್ಯಭಾವದಿಂದೞಿ ಮೆಯ್ಯೊಳ್
ಮಿಗೆ ಪನಿತ ಕಣ್ಬನಿಯಿದೆನೆ
ಸೊಗಯಿಸಿದುವು ತರದಿನೊಗೆದು ತಾರಗೆ ಪಲವುಂ || ೨೩

ಜವದಿಂ ಪೋದಿನನ ವರೂ
ಥವಾಜಿಗಳ ಮೊಗದೊಳೊಗೆದ ಫೇನಂಗಳ್ ವಾ
ಯುವಶದೆ ಪಱಿವಱಿಯಾಗಿ
ರ್ದುವು ಗಗನಾಂಗಣದೊಳೆನಿಸಿದುವು ಭಗಣಂಗಳ್ || ೩೪

ವ || ತತ್ಸಮಯದೊಳ್ ನಿರ್ವರ್ತಿತಾಪರಾಹ್ಣಿಕಕ್ರಿಯನಾಗಿ ಬಂದು ಕರುಮಾಡದ ಮುಂದಣ ಮಣಿಮಯಪ್ರಘಣದೊಳ್‌ ಕತಿಪಯಪ್ರಸಾದಿತಪರಿವಾರಪರಿವೃತಪಾದಪೀಠನುಂ ಲಲನಾನಿಕಾಯನಿವಳಿತ ನೀರಾಜನದೀಪಕಳಿಕಾ ಪ್ರತಿಫಳಿತಮೌಳಿಮಾಣಿಕ್ಯನುಂ ಅಪರ ಸಂಧ್ಯಾವಸರಪಠನತತ್ಪರಪುಣ್ಯಪಾಠಕನಿಕರಜಯಜೀಯನಂದವರ್ಧನವರ್ಧಸ್ವ ನಿನದನಿ ವೇಶಿತಕರ್ಣವಿವರನುಮಾಗಿ-

ಮ || ವಿ || ಹರಿನೀಲೋಜ್ಜ್ವಲಕುಟ್ಟಿಮಸ್ಥಳಿ ನಭೋಭಾಗಂಬೊಲಿಂಬಾಗೆ ಸು
ತ್ತಿರೆ ಚಂಚತ್ಕರದಿ ಪಿಕಾವಳಿ ಲಸತ್ತಾರಾಳಿಯಂತುತ್ಪಲಾ
ಭರಣಂ ರಾಗದೆ ಲೀಲೆಯೋಲಗದೊಳಿರ್ದಂ ರಾಜರಾಜಂ ಕಳಾ
ಧರನಾನಂದಿತಲೋಚನೋತ್ಪಲನಪೂರ್ವಂ ಚಂದ್ರನಿರ್ಪಂದದಿಂ || ೨೫

ವ || ಆ ಪ್ರಸ್ತಾವದೊಳ್-

ಚಂ || ಇದು ಘುಸೃಣಾರುಣಂ ಸುರಹರಿದ್ವನಿತಾನಿಟಿಲಂ ದಿಟಕ್ಕೆ ತಾ
ನಿದು ಬರೆದಿರ್ದ ಸಿಂಧುರದ ಕೆಂಪಡರ್ದಿಂದ್ರಕರೀಂದ್ರಕುಂಭಮ
ಲ್ತಿದು ಜನಿತೇರ್ಷ್ಯೆಯಿಂ ಮುಳಿಯೆ ತಾರಗೆ ಪಾಟಲಮಾದ ಯಾಮಿನೀ
ವದನಮೆನಿಪ್ಪಿನಂ ಕ್ರಮದಿನುಣ್ಮಿದುದಿಂದುವ ರಕ್ತಮಂಡಲಂ || ೨೬

ಕಂ || ಬಿರಯಿಯ ಮನಮೆಂಬಂಕದೊ
ಳರಲಂಬನಡುರ್ತು ಕಾದೆ ಸೂಸಿದ ನೆತ್ತರ್
ಪೊರೆದೆಳವಳಿಕಿನ ವಿದ್ಯಾ
ಧರಗಳವೆನಿಸಿತ್ತು ರಕ್ತಬಿಂಬಂ ಶಶಿಯಾ || ೨೭

ಪುದಿದಿರೆ ಪಣ್ತಿಂದುವ ಬಿಂ
ಬದಾಲದಿಂ ಪಣ್ಗಳುದಿರ್ದುವೆನೆ ಸೊಗಯಿಸಿದ
ತ್ತುದಯದೊಳೊದವಿದ ಕೆಂಪಿಂ
ಪುದಿದೊಪ್ಪುವ ತಾರಕೋತ್ಕರಂ ಕೆಲಗೆಲದೊಳ್ || ೨೮

ನೆರೆದ ತಿಮಿರಂ ನಿಶಾಕರ
ಕರಕುಂತಾಹತಿಗೆ ಬೆರ್ಚಿ ಮೂರ್ಚ್ಛೆಯ ನೆವದಿಂ
ಪರೆದೋಡಿ ಪೊಕ್ಕು ಸಲೆ ಮೈ
ಗರೆದುದು ಬಿರಯಿಸುವ ಜಕ್ಕವಕ್ಕಿಗಳೆರ್ದೆಯೊಳ್ || ೨೯

ಮ || ಸ್ರ || ನಿನದತ್ಸಂಧ್ಯಾನಕಂ ನಿಗ್ಗವಣೆಯ ಪಱೆ ಪೂರ್ವಾಚಲಂ ತುಂಗರಂಗಂ
ತನಗಾದತ್ತೆಂಬಿನಂ ನೀಲಿಯ ಜವನಿಕೆವೋಲ್ ಪಿಂಗೆ ಸಂಧ್ಯಾತಮಂ ಮೆ
ಲ್ಲನೆ ತಾರಾನೀಕಪುಷ್ಪಾಂಜಳಿಯನೆಸೆವಿನಂ ಸೂಸಿ ತತ್ಪೂರ್ವರಂಗ
ಕ್ಕನುಗೈವುದ್ಯನ್ನಿಶಾನರ್ತಕಿಯ ವದನದಂತಿಂದು ಕಣ್ಗೆಡ್ಡಮಾದಂ || ೩೦

ಕಂ || ತಿಮಿರಾಧಮವರ್ಣಸ್ಪ
ರ್ಶಮಾಪ್ರದೋಷದೊಳೊಡರ್ಚೆ ರಜನೀಸತಿ ಚಂ
ದ್ರಮಯೂಖಮಹಾಹ್ರದದೊಳ
ಗೆ ಮುೞುಂಕಿದಳಾದವಂಬರಂ ಬೆರಸಾಗಳ್ || ೩೧

ಪರೆದಿರೆ ತಿಮಿರಕಚಂ ನೆರೆ
ದಿರೆ ಭಗಣಸ್ವೇದಜಲಕಣೌಘಂ ರಾಗಂ
ಬೊರೆದಿರೆ ಚಕೋರನಯನಂ
ಕರಮೆಸೆದಳ್ ನೆರೆದು ರಜನಿ ರಜನೀಪತಿಯೊಳ್ || ೩೨

ಮ || ವಿ || ನೆರೆದೆತ್ತಂ ಭಗಣಂ ನಿರೀಕ್ಷಿಸೆ ಬೆಸಂಬೆತ್ತೇಱೆ ಚಿತ್ತೋದ್ಬವಂ
ಬರೆ ಲಕ್ಷ್ಮಚ್ಛಲದಿಂದಮಬ್ದಪಥವೀಧೀಭಾಗದೊಳ್ ಬೇಗಮೊ
ತ್ತರಿಸುತ್ತುಂ ಪರಿಕಾಱನಂ ತಿಮಿರಮಂ ಬೆನ್ನಟ್ಟಿ ಪಾದಂಗಳಿಂ
ದೊರಸಿತ್ತೇನತಿಚೋದ್ಯಮೋ ವಿಧುಮದೋನ್ಮತ್ತೇಭವಿಕ್ರೀಡಿತಂ || ೩೩

ಮ || ಸ್ರ || ರಜನೀಕಾಂತಾಯೋಭೃತ್ತಟಮಲಯಜಪತ್ರಂ ಮನೋಜಾಂಗನಾಶು
ಕ್ತಿಜ ಚಂಚತ್ಕರ್ಣಪತ್ರಂ ಸ್ಮರನೃಪವರಶುಭ್ರಾತಪತ್ರಂ ವಿಯನ್ನೀ
ರಜನಿ ಮಧ್ಯೋಲ್ಲಸತ್ಪಾಂಡುರತರಶತಪತ್ರಂ ಬೆಡಂಗಾಯ್ತಯುಕ್ತ
ವ್ರಜಗರ್ವೋರ್ವೀಧ್ರಶಂಬಂ ನಯನಸುಖಲತಾಸ್ತಂಬಮಾತ್ರೇಯಬಿಂಬಂ || ೩೪

ಚಂ || ಕುಮುದವಿಲಾಸಹಾಸಪರಿಹಾಸಕನಬ್ದಿಜಲಪ್ರವರ್ಧನೋ
ದ್ಯಮಿ ನಳಿನೀಪ್ರಮೋದಪರಿಹಾರವಿಶಾರದನುತ್ಕಕೋಕದು
ರ್ದಮವಿರಹಕ್ರಿಯಾವ್ಯಸನಿ ಚಾರುಚಕೋರವಿದೂರಪಾರಣ
ಕ್ಷಮನವವಲ್ಲಭಂ ಬೆಳಗಿದಂ ಪುರಮೊಂದೆನೆ ಲೋಕಮೆಲ್ಲಮಂ || ೩೫

ಕಂ || ಅತನುಗ್ರಹಚಂದ್ರಶಿಲಾ
ಪ್ರತಿನಿಧಿಯೆನಿಸಿರ್ದಚಂದ್ರಮಂಡಲದೊಳ್ ಶೋ
ಭಿತಮಾಯ್ತು ತೋರ್ಪ ತಾರಾ
ಪಥದೊಪ್ಪಮನಪ್ಪುಕೆಯ್ದು ತೊಳಪ ಕಳಂಕಂ || ೩೬

ವಾಸಿಸಲೆಂದು ಚಕೋರವಿ
ಲಾಸಿನಿ ಶಶಿಚಷಕದೊಳೆ ನವೋತ್ಪಳದಳಮಂ
ಸೂಸಿದಳೊ ವಿನಿಹಿತಜ್ಯೋ
ತ್ಸ್ನಾಸವದೊಳೆನಿಪ್ಪ ಲಕ್ಷ್ಮಿವೆತ್ತುದು ಲಕ್ಷ್ಮಂ || ೩೭

ಜನನಯನಹಂಸವಿಸರ
ಕ್ಕೆ ನಿಶಾವಧು ಸಾಂದ್ರಚಂದ್ರಿಕಾದುಗ್ಧಮನಿಂ
ಬಿನೊಳೆಱೆವ ಗಗನಘಟದಾ
ನನವಿವರದ ದೊರೆಗೆ ವಂದುದಿಂದುವ ಬಿಂಬಂ || ೩೮

ಉ || ಪಾರದದಿಂದೆ ಲೇಪಿಸಿದುದೋ ದೆಸೆ ನೀರದಮಾರ್ಗಮೆಯ್ದೆ ಕ
ರ್ಪೂರಪರಾಗದಿಂದಿಡಿಯೆ ತುಂಬಿದುದೋ ಸ್ಫಟಿಕೋಪಲಂಗಳಿಂ
ಧಾರಿಣಿ ಕೂಡೆ ಹಪ್ಪಳಿಗೆಯೊತ್ತಿದುದೋ ಸಲಿಲಾಶಯಂ ಪಯಃ
ಪೂರಮನಾಂತುದೋ ದಿಟಕೆ ತಾನೆನಿಸಿತ್ತಮೃತಾಂಶುರಶ್ಮಿಯಿಂ || ೩೯

ಕಂ || ಇದು ವಿರಹಕ್ಕಲ್ಲದೆ ಕಾ
ಯದ ಬಿಸಿಲಿದು ದಿಟ್ಟಿಗಲ್ಲದೀಂಟಲ್ಕ ಬಾ
ರದ ಸೊದೆಯಿದು ತಾಂ ಮನಕ
ಲ್ಲದುಡಲ್ ಸಮನಿಸದ ದುಗುಲಮೆಳವೆಳ್ದಿಂಗಳ್ || ೪೦

ವ || ಸ್ರ || ದ್ಯುನದೀಸಮ್ಮೋಹದಿಂದಂ ಜಡೆಗೆದಱಲುಮಾವಲ್ಲಭಂ ನಾಡೆಯುಂ ಸಾ
ರ್ವಿನೆಗಂ ಪೀಯೂಷವಾರ್ಧಿಪ್ಲವಪರಿಣತೆಯಿಂ ಸೆಜ್ಜೆಗಬ್ಜೋದರಂ ಪಾ
ರ್ವಿನೆಗಂ ಹಂಸಂ ಮೆಲಲ್ಕೆಂದೆಳಸಿ ಬಿಸಲತಾಶಂಕೆಯಿಂ ಚಂಚುವಿಂ ನೇ
ರ್ವಿನೆಗಂ ಪ್ರೋನ್ಮುದ್ರಿತಂ ಮುದ್ರಿಸಿದುದು ಜಗಮಂ ಚಾರುಚಂದ್ರಾಂಶುಜಾಲಂ || ೪೧

ಕಂ || ಆಂ ಬೇಱೆ ಪೊಗೞ್ವುದೇಂ ಬೆ
ಳ್ಪಂ ಬೆಳಗುಮನಾಗಸಕ್ಕೆ ನಿಜಮಲಿನತೆಯಂ
ಮುಂ ಬಿಡಿಸಿ ಮತ್ತನಂಗನು
ಮಂ ಬೇಱೆ ಜನಕ್ಕೆ ತೋಱಿದುದು ಬೆಳ್ದಿಂಗಳ್ || ೪೨

ಮ || ಸ್ರ || ಇದು ದಲ್ ಸ್ವಚ್ಛಂದಮಂದಾಕಿನಿ ಮಹಿತಳಮಂ ಕೂಡೆಪರ್ವಿತ್ತು ನೋಡೆಂ
ಬುದನಂದಲ್ಲಲ್ಲಿಗೆಲ್ಲಂ ಜನಮನಿತುವಲಂಪಿಂ ತುಳುಂಕಾಡಲುಂ ರಾ
ಗದಿನೆತ್ತಂ ನೀಡುಮೋಲಾಡಲುಮೆರ್ದೆಯೊಲವಿಂ ಪೊಕ್ಕುಮಿಕ್ಷೀಸಲುಂ ಚಿ
ತ್ತದ ಮೆಚ್ಚಿಂ ದ್ರೋಣಿಯಿಟ್ಟೇಱಲುಮೆಳಸುವಿನಂ ಪೆರ್ಚಿದತ್ತಚ್ಚಜೊನ್ನಂ || ೪೩

ಕಂ || ಕೆಂಪಿಲ್ಲದ ಬಿಸಿಲುಣ್ಮುವ
ಕಂಪಿಲ್ಲದ ಸಾಂದ್ರಚಂದನಕ್ಷೋದಂ ಮ
ತ್ತಿಂಪಿಲ್ಲದ ಪಾಲ್ಗಡಲೆಂ
ಬೆಂ ಪೊಸಬೆಳ್ದಿಂಗಳಂ ಬೞಿಕ್ಕೇನೆಂಬೆಂ || ೪೪

ವ || ಅದಲ್ಲದೆಯುಮಾಕಾಶಗಂಗಾಪ್ರವಾಹಮನಾಧಾರತೆಯಿಂದವನಿಗಲ್ಲೊಕ್ಕಿತೆಂಬಂತೆ ಓರೊಂ ದೆಡೆಯ ಬಯಲೊಳ್ ಬೆಳ್ಳಂಗೆಡೆದು ಬಳ್ಳಿವೆರ್ಚಿಯುಂ ಉಪವನದ ತರುಲತಾನಿಕರ  ದೆಲೆದುಱುಂಗೆಲೆಡೆಗಳಿಂ ಬಿಳಿಯ ಬಿೞಲಿಂತಿೞಿದಾಳವಾಳಯಂಗಳ ನಾವಗಂ ತೀವಿ ತೇಂಕಾಡಿಯುಂ ಚಂದ್ರಕಾಂತದ ನೆಗೆದ ಮುಗಿಲಟ್ಟಣೆಗಳಂ ಮೆಟ್ಟಿ ಬಡಹಮನೊಡರ್ಚಿ ಬಳಸಿದಗೞನೊಗುಮಿಗೆ ತಿಂಬಿ ತುಂಬುವರಿಯಿಸಿಯುಂ ಸಸಿಯ ಬೆಸದಿನಸಿಯೇಱಿಂಗೆ ಬಂದ ಸುಟ್ಟುಂಬೆಸಕಾಱನಂತಸಿದನೆ ಸುಸಿರದಿಂ ಪೊಕ್ಕು ದೇವಕುಲಂಗಳಾದಲೆಯೊಳೊತ್ತುಂ ಗೊಂಡಿರ್ದ ಕೞ್ತಲೆಗೆ ಮಿೞ್ತುವಾಗಿಯುಂ ಸಂಕೇತಕ್ಕೆ ಪೊಱಮಡಲ್ ಪಡೆಯದೆ ಪೊಱಗಣ ಬೆಳಗಿಂಗೆ ಕಾಯ್ದು ಕಿಸುಗಣ್ಣಿಂ ನೋಡುವ ಜೋಡೆಯರ ಕಡೆಗಣ್ಣ ಕೆಂಬೆಳಗಿಂ ಪುದಿದುದಯದೊಳೊಳಕಯರಾಗಮಂ ಮಗುಳುಗುೞ ಪರಿಯನಿನಿತನುಕರಿಸಿಯುಂ ಸೂಱೆಗೇರಿಯೋವರಿಯ ಬಾದಣದಿನೊಗೆವ ಅಗುರುವಿನ ಕರ್ಬೊಗೆಯ ಸುರ್ಬಿನೊಳ್‌ ತಳ್ಪೊಯ್ದು ವಿಧುವ ಪಗೆಯಪ್ಪರಾಹುವಿನೊಳ್ ಕಡುಪಿನಿಂ ತೊಡರ್ದುಮೆಯ್ವೊಣರ್ದಪ್ಪು ದೆಂಬ ನುಡಿಗಡರ್ಪಾಗಿಯುಂ ಆನಂದದಿಂ ಮಂದಿರಾಂಗಣದೊಳ್ ಸುೞಿವ ಪುರ ಪುರಂಧ್ರಿಯರ ಸಂದಣಿಸಿ ಬಳೆದ ಮೊಲೆಯೆಡೆಯಿನಿ ೞಿದೆಂದುಮಿಲ್ಲದ ಮುತ್ತಿನಾರಮಿಂದೆ ಸಂದುದೆಂಬ ಸಂದೆಗದ ದಂದುಗಮನವರೊಡನಾಡಿಗಳ ಚಿತ್ತದೊಳ್ ಬಿತ್ತಿಯುಂ ರಾಜಾಂ ಗಣದ ಬಯಲ ಬಾಳ್ಗಂಬಂಗಳೊಳ್ ಸೆಱೆಗೆಯ್ದಿರ್ದ ಜಾವದಾನೆಗಳ ಮೇಲೆಡೆಗೆಡೆದು ಮಳವಳಸಾಗಿ ಮುಸುಂಕಿ ತದ್ಗಜಂಗಳ್ಗೆ ಪಾಲ್ಗಡಲ ನಡುವಣೈರಾವತದ ಲೀಲೆಯನೋಲ ಗಿಸಿಯುಂ ಶಕುಂತಪಾಲಿಕೆಯರ್ ಪೊಱಗೆ ವಾಸಯಷ್ಟಿಗಳೊಳ್ ನಿಱಿದ ಪೊನ್ನ ಪಂಜರದ ಪುಗಿಲ್ಗಳಿಂ ಜಾಳಿಸಿ ಪೊಕ್ಕು ದೀಹದ ಚಕೋರಿಕೆಗಳೞ್ಕಱಿಂ ಮುಕ್ಕುೞಿಪ ಮುಂಡಾಡುವ ಕರ್ದುಂಕುವೊದೆವ ಚೆಲ್ಲಕೆ ಮೈಸಾರ್ಚಿಯುಂ ಇಂತನೂನಮುಮತಿಸಾಂದ್ರಮು ಮತ್ಯುಜ್ಜ್ವಲಮುಮಾದ ಚಂದ್ರಾತಪದೊಳ್ ನರೇಂದ್ರಚಂದ್ರಂ ಚಕೋರನಂತೆ ಚಂದ್ರಿಕಾ ವಿಹರಣವಿನೋದಕ್ಕೆ ಬಗೆದಂದು ದಕ್ಷಿಣಾನುಕೂಲಶಠಧೃಷ್ಟರೆಂಬ ನಾಯಕರುಂ ನಾಗರಿಕ ವಿಟವಿದೂಷಕಪೀಠಮರ್ದಕರೆಂಬ ನಾಯಕರುಂ ಬೆರಸು-

ಚಂ || ಮಳಯಜದಣ್ಪು ಮಲ್ಲಿಗೆಯ ಚೆನ್ನತುಱುಂಬು ನವೀನಚೀನದು
ಜ್ಜ್ವಳಿಪ ದಳಿಂಬವಾದರಿಸಿದಂಚಲಗಪ್ಪುರದೊಪ್ಪುಪಾರಮಾ
ರಳವಿಯ ಮುತ್ತಿನೆಕ್ಕಸರದೋಲೆವಿಲಾಸಮನೀಯೆ ಲೀಲೆಯಿಂ
ತಳರ್ದನಿಳಾಧಿಪಂ ಸಫಲಮಾಗೆ ವಸಂತದ ಚಂದ್ರಿಕೋತ್ಸವಂ || ೪೫

ವ || ಅಂತು ರಾಜವೀಧೀಲತಿಕೆಯಂ ಪದನಖ ಮಯೂಖಮಂಜರಿಯಿಂ ಮಂಜರಿತಂ
ಮಾಡುತುಂ ಸೂಱೆಗೇರಿಯನೆಯ್ದೆವರ್ಪಾಗಳ್

ಮ || ಸ್ರ || ಕಳಕೇಳೀಕೀರಪಾರಾವತಕುಹರಣವಾಚಾಲಮುಜ್ಜೃಂಭಮಾಣೋ
ತ್ಪಳರಾಜಂ ನಿಷ್ಕುಟಾಂಭೋರುಹನಿಲಯಜಲಾರ್ದ್ರಂ ರತಿಶ್ರಾಂತಿನಿರ್ಯ
ಲ್ಲಳನಾನಿಶ್ವಾಸಪುಷ್ಪಪ್ರಸರದಗುರುಸೌರಭ್ಯಸಂದೋಹಭಾರಾ
ಕಳಿತಂ ಬಂದೊಯ್ಯನೇನೂದಿದುದೊ ಪಣವಧೂಗೇಹದಿಂ ಗಂಧವಾಹಂ || ೪೬

ವ || ಅಂತು ವಿನೋದಸುಖಸಸ್ಯಸಮುದಯಕ್ಷೇತ್ರಾಘಾಟಮೆನಿಪ ಗಣಿಕಾವಾಟಮಂ ಪುಗುವಾ ಗಳೊಂದು ಸೌಧಾಂಗಣದೊಳ್‌ ವಿಚಿತ್ರವರ್ಣವಸನವಿರಚಿತೋತ್ತುಂಗ ಶ್ರೀಖಂಡಶಾಖಾ ಸ್ತಂಭಂಗಳೊಳಂ ಯಥಾಪ್ರದೇಶೋಚಿತವರ್ಣಕ್ರಮೋಪರಚಿತರತ್ನಮಯಮಯೂರ ಮಂಡಿತಾತುಳತುಳಾದಂಡಂಗಳೊಳಂ ಅಂತರಾಂತಸ್ಥಿತಕಮನೀಯಕನಕಕಲಶಮಣಿ ದರ್ಪಣಂಗಳೊಳಂ ಆಲಂಬಿತಘಂಟಿಕಾಜಾಲ ಕುಸುಮದಾಮ ಚಾಮರೋದ್ದಾಮಚೀ ನಾಂಬರಾಚ್ಛಾದ್ಯಂಗಳೊಳಂ ನಿಷ್ಕಶೃಂಖಲಾಚತುಷ್ಕಘಟಿತನಿರ್ಯೂಹದಂತಪರ್ಯಂ ಕಿಕಾಪಟ್ಟದೊಳಮಳವಟ್ಟು ಮದನಮಂಗಳಾಗಾರದ್ವಾರಮಕರತೋರಣದಂತಿರ್ದ ನವಿಲು ಯ್ಯಲ ಕೆಲಕ್ಕೆ ವಂದು-

ಚಂ || ನಲಿದು ಸಖೀಸಖವ್ರಜಕೆ ತಳ್ಕೆಗೆ ಮೊಕ್ಕಳಮೀವ ಮಾಲೆವೂ
ಬೆಲಗಸೆಯಿಂದಮೀವ ಘನಸಾರದ ಬಾಯಿನಮೆತ್ತಿ ಪೊನ್ನಬ
ಟ್ಟಲೊಳೆಱೆದೀವ ಕುಂಕುಮರಸಂ ಹಿಡಿಹಾರದಿನೀವ ಚೊಕ್ಕದಂ
ಬುಲಮೆಸೆವನ್ನೆಗಂ ಮೆಱೆದಳಂದು ವಿಲಾಸಿನಿ ತದ್ವಿಲಾಸಮಂ || ೪೭

ವ || ಅನಂತರಮಾಂದೋಳಪಟ್ಟಮಧ್ಯದ ಮರಾಳತೊಳಮಯಮಸೂಲಿಕಾಗೃಹಮನ
ಲಂಕರಿಸಿ-

ಉ || ಸುಯ್ಯೆಲರುಯ್ಯಲಾಡಿಸೆ ಮದಾಳಿಯನುಯ್ಯಲ ನುಣ್ಚರಂ ಸ್ಮರಂ
ಗುಯ್ಯಲರ್ವಿಲ್ಗೆ ಕೈಯನಿರದೆಂಬವೊಲುಣ್ಮೆ ಮರಲ್ದು ನೋಟಕಿ
ರ್ಪುಯ್ಯಲನೊಯ್ಯನಾಕೆಯೊಡನಾಡಿಗಳೊಳ್ ಕುಡೆ ಮುತ್ತಿನೈಸರಂ
ಮೆಯ್ಯೊಲೆಪಕ್ಕೆ ರಯ್ಯಮೆನೆ ತೂಗೆ ವಿಲಾಸದಿನುಯ್ಯಲಾಡಿದಳ್ || ೪೮

ವ || ಆ ವಿಲಾಸವತಿಯ ಲೀಲಾವಿಲಾಸಮಂ ನೋಡುತ್ತುಂ ಪೋಗೆ ಮುಂದೊಂದೆಡೆ ಪಳುಕಿನ
ಸಜ್ಜೆಮಾಡದ ಮುಂದಣಸುಕೆಯತಳಿರುಲಯ್ಯಲನೊರ್ವಳಪೂರ್ವಯೌವನೋನ್ಮತ್ತೆ ಎನಗೆ
ಮನೋಭವನೆ ದೇವಂ ಬಸನಮೆ ಬವಸೆ ಒಲವೆ ಕುಲಧನಮೆಂದು ಕೆಳದಿಯರ್ಗೆ
ಪೂಣ್ದದಟನೇಱುವಂತೇಱಿ-

ಉ || ಮೂಡಿದುದಿತ್ತಲೊಂದಭಿನವಂ ಶಶಿಬಿಂಬಮೆನಿಪ್ಪ ಶಂಕೆಯಂ
ಮಾಡೆ ಮನಕ್ಕೆ ಮುದ್ದುಮೊಗಮುಜ್ಜ್ವಲಚಂದ್ರಿಕೆಯಲ್ಲಿ ನೀಡುಮೋ
ಲಾಡುವ ಲೀಲೆಯಿಂದೊಲೆಯಲೀ ಮೃಗಲಕ್ಷ್ಮ ಮೃಗಕ್ಕೆ ಗೋರಿಯಂ
ಪಾಡುವ ಮಾೞ್ಕೆಯಿಂ ಬಳೆಯೆ ಗೀತರವಂ ತಳಿರುಯ್ಯಲಾಡಿದಳ್ || ೪೯

ವ || ಆಗಳ್ ವಿದೂಷಕನಿವಳ್ದಿರ್ ನೋಟಕರನುತ್ಕಂಠಾವಸ್ಥೆಗುಯ್ಯಲಾಡುವಂದಮಲ್ಲದುಯ್ಯ ಲಾಡುವಂದಮಲ್ಲಮೆಂದು ನುಡಿದು ನಡೆಯೆ ಮತ್ತೊಂದು ನೃತ್ಯಾಭ್ಯಾಸನಿವಾಸಪುರಃ ಪ್ರದೇಶದೊಳ್ ಮನೋಜರಾಜಚ್ಛತ್ರಚಾಮರಂಗಳಂತೆ ಸೊಗಯಿಸುವ ಸೋಗೆಯುಂ ಪೊಂಬಾಳೆಯಂ ಬೆರಸು ಕಟ್ಟಿದೆಳಗೌಂಗಿನುಯ್ಯಲಂ ತೂಗಾಡುವ ಲಾವಣ್ಯಲಕ್ಷ್ಮೀಲತೆಯ ಕಳಿಕೆಗಳನ್ನೆಯರಪ್ಪ ಕನ್ನೆಯರಂ ಚೆನ್ನೆಯರಂ ವೀಕ್ಷಿಸಿ ನಾಗರಿಕನಿಂತೆಂದಂ-

ಕಂ || ಮೀಸಲ್ವಾಯ್ದೆಱೆ ನಗೆ ಪೊಱ
ಸೂಸದ ಕಣ್ ಬಳಸಲೆಳಸದೊಳ್ದೊಡೆ ಲಜ್ಜಾ
ಭಾಸಮನೋಸರಿಸದ ಬಗೆ
ಮಾಸರಮಾಯ್ತಿವರೊಳಡರ್ದ ಕೊಡಗೂಸುತನಂ || ೫೦

ವ || ಎಂಬುದಮರಸನವಳಂ ತೂಗುವೆರಡನೆಯ ಕನ್ನೆಯಂ ನೋಡಿ-

ಕಂ || ಪೀರ್ದಪುದು ಲಜ್ಜೆಯಂ ಬಗೆ
ಸಾರ್ದಪುದುರಮುಗುೞಲುರುಕುಚಂಗಳನೀಗಳ್
ಮೀರ್ದಪುದು ಕಣ್ಣ ಸರಲತೆ
ಸಾರ್ದಪುದು ನವೀನಯೌವನೋದಯಮಿವಳಂ || ೫೧

ವ || ಎಂದವಳ್ದಿರೆಳವೆಯ ಬಳ್ವಳಿಕೆಯಂ ಮೆಚ್ಚುತುಂ ಪೋಗೆ ಮುಂದೊಂದು ಮತ್ತವಾರಣದ
ಕೆಲದೊಳೊತ್ತೆಗೆಂದು ನಿಂದಿರ್ದಳಂ ನಾಗರಿಕಂ ನೋಡಿ-

ಚಂ || ನಸುದೊಡೆದೋರ್ಪ ಪಟ್ಟಣಿಗೆಯೊಳ್ನಿಱಿ ಕತ್ತುರಿಬೊಟ್ಟು ಕಟ್ಟಿಬಿ
ಟ್ಟಿಸೆವ ಕುರುಳ್ ಮೊಗಕ್ಕೆ ಪಿರಿದೊಪ್ಪುವ ಬಿಂಕದ ಸಂಕದೋಲೆ ಕ
ರ್ಪಸದಳಮಾದ ಸಣ್ಣವಳೆ ಕತ್ತರಿಪೀಲಿಯನಾಂತ ಚೊಲ್ಲೆಯಂ
ಮಿಸುಗುವ ದೋರೆವಲ್ ಕರಮೆ ಮಾಸರಮಾದುದು ದೇಸೆಕಾರ್ತಿಯೊಳ್ || ೫೨

ವ || ಎಂದು ಮಾಣದಿವಳ ದೇಸೆವೆತ್ತ ಶೃಂಗಾರಂ ವಿಟಜನಕ್ಕೆ ಹೃದಯಾಂಗಾರಮಾಯ್ತೆಂಬಿನಂ
ವಿಟನಿವಳಂತರಂಗಶೃಂಗಾರಮಂ ವಿಚಾರಿಪೆನೆಂದು ಪೋಗಿ ನೋಡಿ ಬಂದು-

ಉ || ನೋಟದೆ ಬೇಟಮಂಕುರಿಸಿದಪ್ಪುದು ಮೇಳದೊಳಿಂಪುವೆತ್ತ ಮಾ
ತಾಟದೆ ಮತ್ತೆ ಪಲ್ಲವಿಸಿದಪ್ಪುದು ಲಲ್ಲೆಯನಪ್ಪುಕೆಯ್ವ ಕೊಂ
ಡಾಟದ ಮುದ್ದುಗೆಯ್ತದಲರ್ದಪ್ಪುದಿವಳ್ ಬಗೆ ಮೆಚ್ಚಿ ಬಿಚ್ಚತಂ
ಕೂಟಮನೊಲ್ದೊಡರ್ಚೆ ಫಲಮಪ್ಪುದು ತಪ್ಪದು ಸೂಳೆ ಕೇಳ ಗೇ || ೫೩

ವ || ಎನೆ ಪೆಱತೊಂದೆಡೆಯೊಳುಲ್ಲಸಿತಮಲ್ಲಿಕಾಮಂಡಪದ ನಡುವಣೆಸಳ ಪಸೆಯೊಳೊರ್ವ
ನಳವಿದಪ್ಪಿ ಕೂರ್ತೆಳೆಯಳಂ ಪೞಿಕೆಯ್ದೆಯೆಂದು ಪುಸಿಮುಳಿಸಂ ತಳೆವುದುಮವಳ್
ಬೆಚ್ಚಿ ಪೆರ್ಚಿದ ಭಯದ ಭಾರದಿನೆಱಗುವಂತೆ ಕಾಲ್ಗೆಱಗುವುದುಂ ಪ್ರಣಯಸಾರಸರ್ವಸ್ವ
ನಿಧಾನಮನೆತ್ತುವಂತೆತ್ತಿ-

ಮ || ವಿ || ನಲವಿಂದಂಕದೊಳಿಟ್ಟು ಕರ್ಚಿ ಕದಪಂ ಬಾಯ್ವಾಯೊಳೊಲ್ದಿಕ್ಕಿ ತಂ
ಬುಲಮಂ ಕಣ್ಬೊಣರಿರ್ಪನೊತ್ತಿ ತಳದಿಂ ಪಾದಾನತಿವ್ಯಸ್ತಕುಂ
ತಲಮಂ ತಿರ್ದಿ ವಿನೋದದಿಂ ಮುಳಿದೆನಾಂ ನೀನಂಜಲೇಕೆಂದು ಕೋ
ಮಲೆಯಂ ಕೋಟಿಚಟೂಕ್ತಿಯಿಂದೊಸೆಯಿಸುತ್ತಿರ್ದಂ ರತೋತ್ಕಂಠೆಯಂ || ೫೪

ವ || ಆಗಳರಸನಾಧೃಷ್ಟನ ಖಾತ್ವಾಸಮೀಕರಣನ್ಯಾಯಮಾದ ಮುಳಿಸುಂ ತಿಳಿಪುಮಿರ್ವರ್ಗ
ಮುಬ್ಬೆಗಮಂ ಪಡೆದುದೆಂದಿಂತೆಂದಂ-

ಚಂ || ಪ್ರಣಯದಿನಾದ ಹೋರಟೆಯೆ ಹೋರಟೆ ಮಾಣ್ದೊಡೆಕೂಟದೊಳ್ ಮನಂ
ತಣಿಯದದೊಂದುಕೋಟಲೆಯೆ ಕೋಟಲೆ ಮಾಣ್ದೊಡಗಲ್ದ ಪೊೞ್ತಿನೊಳ್
ರಣರಣಕೋತ್ಥವೇದನೆಯೆ ವೇದನೆ ಮಾಣ್ದೊಡೆ ಮತ್ತಮಿನ್ನವ
ಪ್ಪಣಕಮೆ ಪುಟ್ಟುಗೆಂದೊಡಕಟೇನಪಸೌಖ್ಯರೊ ಕೂರ್ತ ಮಾನಸರ್‌ || ೫೫