ಕಂ || ಅದು ಬೀರಸಿರಿಯ ಕರುಮಾ
ಡದ ತೆಱದಿಂ ಭದ್ರಲಕ್ಷಣೋಪೇತಂ ಮ
ತ್ತದು ಮಂದರಭೂಧರದಂ
ದದಿನುಪಗತನಿತ್ಯದೇವಸತ್ವಸಮಗ್ರಂ || ೧೦೧

ಒದವಿದ ಮದದಿಂ ತೀನ್ ಮಸ
ಗಿದ ಗಂಡಮನುರುತರುಪ್ರಕಾಂಡದೊಳೊರಸಲ್
ಪದೆದೆಂದುಂ ಬನಮನೆ ಪುಗು
ವುದಱಿಂ ವನಕೇಳಿಯೆಂದು ಪೆಸರಾಗಿರ್ಕುಂ || ೧೦೨

ವ || ಆ ಮಹಾಮದೇಭಂ ಪೃಥ್ವೀಪಾಲದೇವನ ಪಟ್ಟವರ್ಧನಮಾಗಿರ್ಪುದುಂ ಮತ್ತೊಂದು ಮದಗಜದ ಸೊವಡು ತೀಡದಂತು ಬೀಡಿಂಗೊರ್ಗಾವುದದಱಬಾಳ್ಗಂಬದೊಳ್‌ ಸೆಱೆಗೆಯ್ದುಮಿರ್ದೊಂದುದಿವಸಂ ಕ್ರೋಧಿನಿಯೆಂಬ ಸಪ್ತಮದಾವಸ್ಥೆಯಿಂದಾದ ಮನದ ಮಸಕದಿನಸವಸದೆ ನೆಲದ ನಾಲಗೆಯಂ ಕೀೞ್ವಂತೆ ಬಾಳ್ಗಂಬಮಂ ಕಿೞ್ತು ಅಗ್ಗರಣೆಯಂ ನುರ್ಗುಮಾಡಿ ಮಂಕಡದಂದದಿಂ ಕಟ್ಟಿದ ಲೋಹಚರ್ಮಜಮಪ್ಪ ಮುಟ್ಟುಗಳನಿತುಮಂ ತಕ್ಕೈಸಿ ಬೆಲಂಗಯಿಸಿ ಬಿಸತಂತುವಂ ಪಱಿವಂತೆ ಪಱಿದು ಬೆಳ್ಳಾಳನಾಗೆ ಪೋಗಲೀಯದೆ ತೆಗೆದಾಱೆಕಾಱರ ಗಳೆಯ ಪುದುವಿನೊಳಿದಿರ ಪೊದಱೊಳಗಣ ಬೆನಕನ ಚೋಹದಂತೆ ಕಿಱಿದು ಬೇಗಮಿರ್ದುಮ್ಮಳಿಸಿ ಮುಳಿದು ಸುತ್ತಿದಾನೆವಾಂಗಿನ ವೀರರೆಲ್ಲರುಮಂ ಪನ್ನೆರಡುಂ ಹಸ್ತಪ್ರಹಾರದೊಳಂ ಪದಿನೆಂಟುಂ ಕೋಡೇಱಿನೊಳಂ ಏೞುಂತೆಱದ ತಾಳವಟ್ಟದ ಪೊಯ್ಲೊಳಂ ನಾಲ್ವತ್ತುನಾಲ್ಕು ಗಾತ್ರಾಪರಪಾತದೊಳಂ ದೆಸೆವಲಿಗೆಯ್ದು ಪೂರ್ವಾಸನದೊಳಿರ್ದಮಹಾಮಾತ್ಯನನಡ್ಡಂಬರಿದ ಪೆರ್ಮರದ ತೋಱಗೊಂಬಿನೊಳ್ ಪೊಂಗಿ ಪರಿದರೆದು ಕೊಂದು ಮಹಾವನಮಂ ವನಕೇಳಿಗಜಂ ಪೊಕ್ಕುದಂ ಕೇಳ್ದು-

|| ಹರಿಣೀವೃತ್ತಂ ||
ತಿವಳಿವಿಡಿದುಗ್ರೇಭಂ ಪೋದತ್ತು ಮಾಣದೆ ಪೋಗಿಮೆ
ಲ್ಲಿವರದುದು ಪೋಯ್ತೆಲ್ಲಿರ್ದತ್ತೆಂಬ ವಾರ್ತೆಯನೊಂದೆರ
ೞ್ದೆವಸದೊಳೆ ತನ್ನಿಂ ನೀಮೆಂದಟ್ಟಿದಂ ಸಮಕಟ್ಟಿ ಕ
ಟ್ಟವಧಿಗವನೀನಾಥಂ ಜಂಘಾಳಮಂ ಚರಜಾಳಮಂ || ೧೦೩

ವ || ಅನಂತರಂ ತದ್ವಿಜ್ಞಾಪನದಿನನೇಕಪಂ ಭವದೀಯನಗರಿಯಂ ಪುಗುತಂದುದುಮಂ
ದೇವರಾರೂಢವಿದ್ಯಾಪ್ರಭಾವದಿಂ ಕಂಭಕ್ಕೆ ತಂದುದುಮನದೆನಱಿದುಕಾರಣದಿಂ-

ಇಭಪತಿಯದು ಮದವನಿವ
ಲ್ಲಭಂಗೆ ವಲ್ಲಭಗಜೇಂದ್ರನದನಟ್ಟಿ ಭವ
ತ್ಪ್ರಭುತೆಯುಮಂ ಬಂಧುಪ್ರೀ
ತಿಭಾವಮುಮನೆಯ್ದೆ ನೆಱಪಿ ಮೆಱೆವುದು ಜಸಮಂ || ೧೦೪

ವ || ಮತ್ತಂ-

ಚಂ || ಪರಿಕಿಸೆ ಕಲ್ವ ಬಲ್ಲ ಸಮಯುಕ್ತಿಯಿನೆಱ್ತರೆ ಬೇಗಮಂತದಂ
ಕರೆದಿರದೀವುದುತ್ತಮತೆ ಬೇಡಿದೊಡೀವುದು ಮಧ್ಯಮತ್ವಮೆ
ಯ್ತರೆ ತದಧೀಶ್ವರಂ ಬೞಿಕಮಂತದನೀವುದು ನೀಚವೃತ್ತಿ ದೇ
ವರ ಬಗೆಯೊಳ್ ವಿಚಾರಿಸುವುದೆನ್ನಯ ಬಿನ್ನಪದೊಂದುಯುಕ್ತಿಯಂ || ೧೦೫

ಕಂ || ಪೊಕ್ಕೆಡೆಯನಾರಯಲ್ಕೆಂ
ದುಕ್ಕೆವಿಸಿದನಲ್ಲದಿನಿತುದಿನಮಿಭಪತಿ ಕೈ
ಮಿಕ್ಕಿರೆ ತಡೆವನೆ ಕಡಲಂ
ಪೊಕ್ಕು ಕಲಂಕದೆ ಕುಳಾದ್ರಿಯಂ ಕಿೞದೆ ನೃಪಂ || ೧೦೬

ಪೋರಿಪ ಬಿನದದಿನದಱೊಡ
ನೈರಾವತಮುಂ ಕೊಳಕ್ಕೆ ಪರಿಯಿಡಲಾಶಾ
ತೀರಕ್ಕೊಡರಿಪನೆನೆ ಕೈ
ಸಾರೆಯೊಳಿರೆ ಕರಿ ಬೞಿಕ್ಕೆ ಕೈದೆಗೆದಪನೇ || ೧೦೭

ಆನೆಂದೆನೆನ್ನಿಮಿಂ ನೀ
ಮಾನೆಯನೀಯದೊಡೆ ಕದಡುಗುಂ ಕೊಳನಂ ಕಾ
ಡಾನೆ ಪುಗುತಂದುದೆನೆ ನಿ
ಮ್ಮೀನಗರಿಯನೆಯ್ದೆ ಕನಸಿನಾನೆಯ ತೆಱದಿಂ || ೧೦೮

ವ || ಎಂದು ತನ್ನಾಳ್ದನ ಬಲ್ಮೆಯನೆ ನಚ್ಚಿ ಬಿಚ್ಚತಂ ನುಡಿವ ದೂತನ ದುರಭಿಹಿತಂಗಳಂ ಭೂಪಾಲನೇೞಿಲಂಗೇಳ್ದು ಮಂದಸ್ಮಿತಮುಖಸರೋಜಂ ಯುವರಾಜನಂ ನಿರೀಕ್ಷಿಪುದು ಮಾತನಾಕ್ಷಣದೊಳೊಗೆದ ರೂಕ್ಷಭಾವಮಂ ಸಹಜಗಾಂಭೀರ್ಯದಿನಳವಡಿಸಿ ಬೞಿಯಮಿಂತೆಂದಂ-

ಕಂ || ಚಾರಣರುಂ ಚಾರರುಮಿ
ನ್ನಾರೇಗೆಯ್ದಪರೊ ನಮ್ಮನೆಂದುಸಿರ್ವರಹಂ
ಕಾರದಿನಾನುಡಿಗೆ ಮಹೋ
ದಾರಂ ಮತ್ಸ್ವಾಮಿಯಿನಿತು ಮುನಿಗುಮೆ ಮುನಿಯಂ || ೧೦೯

ಬಗೆದೊಡೆ ಕಿಚ್ಚಿನವೊಲ್ ನಾ
ಲಗೆಯತಿಪಟುವೆನಿಪ ನಿಮ್ಮ ದೊರೆಯರ್ ಸಚಿವರ್
ಮಿಗೆ ಪೊರ್ದಿರೆ ನಿಮ್ಮಯ ರಾ
ಜಗೃಹಂ ಪಿರಿದುಂ ವಿಭೂತಿಮಯಮಿನ್ನಕ್ಕುಂ || ೧೧೦

ಗಜತುರಗರತ್ನಮಿವು ಭೂ
ಭುಜನಾವೊಂ ಪ್ರಬಲಪುಣ್ಯನವನನೆ ಸಾರ್ಗುಂ
ನಿಜದಿಂದಮೆಂದು ಮಾಣ್ಬುದು
ಸುಜನತೆ ಪುಣ್ಯಕ್ಕೆ ಪುರುಡಿಪುದು ಗಾಂಪಲ್ತೇ || ೧೧೧

ವ || ಅದಲ್ಲದೆಯುಂ-

ಚಂ || ಕರಿಪತಿಯೆಮ್ಮ ಪುಣ್ಯಮೆ ನಿಷಾದಿಯವೋಲ್ ತರೆ ಬಂದುದಾದೊಡಂ
ಪರಧನಮೆಂತು ಬಂದೊಡಮಶೌರ್ಯಸಮಾರ್ಜಿತಮೇವುದೆಂಬ ಕೊ
ಕ್ಕರಿಕೆಯಿನೀವೊಡಂ ಜರಿವು ಬಂದಪೆನೆಂದೊಡೆ ಕೊಟ್ಟರೆಂಗುಮೀ
ಧರೆಯದಱಿಂದೆ ನಿಮ್ಮರಸರಿಂ ಬಿಡುಗಾನೆಯೊಳಾದ ಪಂಬಲಂ || ೧೧೨

ಕಂ || ಪಿರಿದುಂ ದಂಡೋಕ್ತಿಗಳನೆ
ಪರಿವಿಡಿಗೆಯ್ದೆ ತ್ವದೀಯಪತಿ ಕಲಿಸಿದುವಂ
ಬರವೇೞಾತನನಿಂ ಚ
ಚ್ಚರಮೀ ನಯಸಿದ್ಧಿಯಲ್ತು ಸಚಿವಾಯತ್ತಂ || ೧೧೩

ಮ || ಸ್ರ || ಎನಗಂ ದೋರ್ದಂಡಕಂಡೂಹೃತಿ ಸಮನಿಸುಗುಂ ತನ್ನಪಂನಂ ಕೞಲ್ಗುಂ
ಮನದೊಳ್ ತೊಟ್ಟಾಗ್ರಹಂ ಮದ್ವಿಭುಗಮಿಭುವರಂ ಶೌರ್ಯಸಂಲಬ್ಧಮಕ್ಕುಂ
ನಿನಗಂ ಚಿತ್ತಭ್ರಮಂ ಪಿಂಗುಗುಮಮರಗಣಕ್ಕಂ ಮಹಾಸಂಗರಾಲೋ
ಕನಸೌಖ್ಯಂ ಸಾರ್ಗುಮೀಧಾತ್ರಿಗಮೊದವಿಸುಗುಂ ವೀರಭಾರಾವತಾರಂ || ೧೧೪

ವ || ಅದುಕಾರಣದಿಂ ಪೃಥ್ವೀಪಾಳಯಾನಮನೆ ಮುಂದಿಟ್ಟು ನುಡಿದ ನಿನ್ನ ನುಡಿಯಂ ನನ್ನಿ ಮಾಡೆಂದು ಮತಿಪ್ರಗಲ್ಭಂಗಳುಂ ಪ್ರತಾಪಗರ್ಭಂಗಳುಮಪ್ಪುತ್ತರಂಗಳಿಂ ದೂತಮುಖ ಮುದ್ರೆಯಂ ಪಡೆದಾತನಂ ಕಳಿಪೆ ಪದ್ಮನಾಭ ಮಹೀಭುಜಂ ತತ್ಸಮಯೋಚಿತಕಾರ್ಯ ಪರ್ಯಾಲೋಚನಾಭಿರುಚ್ಯಮಾನಮಾನಸನಾಸ್ಥಾನಮಂ ವಿಸರ್ಜಿಸೆ ಸುವರ್ಣನಾಭ ಕುಮಾರನುಂ ಪುರಭೂತಿಮಂತ್ರಿಯುಮಲ್ಲಿಂ ತಳರ್ದು-

ಕಂ || ವಿರಹಿತಗವಾಕ್ಷಮಪ್ರತಿ
ವಿರಾಮಮಪಕೀರಕಶಾರಿಕುಲಮೆನಿಸಿದುಪ
ಹ್ವರಮಂ ಪೊಕ್ಕಂ ಕಂಚುಕಿ
ಪರಿಕ್ಷಿತಾಂತರ್ಬಹಿಃಪ್ರದೇಶೋಚಿತಮಂ || ೧೧೫

ವ || ಅನಂತರಮಾ ಬದ್ಧಮಂಡಲಾಸೀನನಾಗಿರ್ದು ಸಚಿವಮುಖಮನತಿಪ್ರಸನ್ನ ದೃಷ್ಟಿಪಾತ ದಿನಭಿಮುಖಂ ಮಾಡಿ-

ಮ || ವಿ || ಅವಿರುದ್ಧಂ ನೃಪನೀತಿಗೆಂತುಮುಚಿತಂ ತಾನೀಪದಕ್ಕಾದಮು
ದ್ಧವಜೈತ್ರಪ್ರತಿಪಾದಕಂ ನಮಗನುದ್ದ್ವಂಜ್ಯಂ ಜನಕ್ಕೆಂಬುದಂ
ಯುವರಾಜಂಗೆನಗಂ ಪ್ರಿಯಾಪ್ರಿಯಮಿದೆಂದೇವೈಸದಿಚ್ಛೈಸದಾ
ಡುವುದುಳ್ಳಂತುಟನೆಂದು ಬೋಧಿಸಿದನೀಶಂ ಕಾರ್ಯತಾತ್ಪರ್ಯಮಂ || ೧೧೬

ವ || ಆಗಳತಿಚತುರವಚನಂ ಸಚಿವನಿಂತೆಂದಂ-

ಮ || ಸ್ರ || ವಿದಿತಂ ಪಂಚಾಂಗಮಂತ್ರಸ್ಥಿತಿ ಚತುರುಪಧಾಶುದ್ಧಿ ಸಿದ್ಧಿತ್ರಯೀಸಂ
ಪದಮಾಷಾಡ್ಗುಣ್ಯವೃತ್ತಂ ಚುತರಚತುರುಪಾಯಪ್ರಯೋಗಂ ತ್ರಿಶಕ್ತ್ಯು
ತ್ಥದೃಢತ್ವಂ ದೇವ ಮುನ್ನಂ ನಿಮಗದನನುವಾದಕ್ಕೆ ತರ್ಪೆನ್ನೊಳೊಂದ
ಲ್ತೆ ದಿಟಕ್ಕಕ್ಕುಂ ವಿಶೇಷಂ ನಿಜನಿಪುಣಮನಃಕಾರ್ಯಸಂಸ್ಮಾರಕತ್ವಂ || ೧೧೭

ವ || ಮತ್ತಂ-

ಕಂ || ಅಱಿಯದುದನಱಿದುದುಮನೀ
ತೆಱದಿಂ ಶಿಕ್ಷಿಪ ಪರೀಕ್ಷಿಪುಜ್ಜುಗದೆನ್ನೊಳ್‌
ಕಿಱಿದಂ ಬೆಸಗೊಂಡಿರ್ ನೀ
ಮಱಿಯದುದೇನಂತುಮುಸಿರ್ವೆನೆನ್ನಱಿವನಿತಂ || ೧೧೮

ವ || ಅದೆಂತೆಂದೊಡೆ ಪೃಥ್ವೀಪಾಲಭೂಪಾಲಂ ಭವದೀಯದೇಶಾಸನ್ನಸ್ಥಿತಂಗಳಪ್ಪ ಪನ್ನೆರಡುಂ ಮಂಡಲಂಗಳೊಳಂತರ್ಧಿಯುಂ ಮಿತ್ರದ್ವಿತಯದೊಳ್‌ ಕೃತ್ರಿಮಮಿತ್ರನುಂ ಮತ್ತಂ ಷಡ್ಬಲ ಬಲಿಷ್ಠನುಂ ದುರ್ಗಪಂಚಕಸಮಗ್ರನುಂ ಅನುರಕ್ತೋಭಯಪ್ರಕೃತಿಯುಂ ಯಮಪಟಿಕಾದಿ ಗೂಢಪ್ರಣಿಧಿಪ್ರತ್ಯಕ್ಷೀಕೃತಕ್ಷಯವೃದ್ಧಿವಿಧಿತ್ರಯನುಮಾಗಿರ್ಪಂ ಆತಂಗಂ ನಮಗಮೈದುಂ ತೆಱದ ವೈರದೊಳರ್ಥಸಂಭವಂ ವೈರಮಾಗಿಯುಂ ಅನ್ವರ್ಥ ಮಾತ್ರಮಲ್ತು ಅವಂಗೆ ವಲ್ಲಭಗಜೇಂದ್ರಮಿರ್ಪುದು ಆತನುಂ ತನ್ಮದೇಭಭ್ರಂಶದೊಳನುದಿನಾನ್ವೇಷಣಚಿಂತಾ ಪರತಂತ್ರತೆಯಿಂ ಮೂರ್ಖಭಾವಮನೆಮನದೊಳವಲಂಬಿಸಿರ್ಪಂ ಅದುಕಾರಣದಿಂ ಮಂತ್ರೋಪಧಾಸಿದ್ಧಿಗುಣಶಕ್ತಿಗಳ್ಗಸಂಧೇಯನುಮಸಾಧ್ಯನುಮಾದಂ ಅವನೊಳಿನ್ನು ಮುಪಾಯಂಗಳಂ ಪ್ರಯೋಗಿಸುವಿರಪ್ಪೊಡೆ-

ಚಂ || ಕಿಡುಗುಮುಪಪ್ರದಾನದೆ ಧನಂ ನಿಜಸೈನಿಕಹಾನಿ ದಂಡದಿಂ
ದೊಡರಿಕುಮೆಯ್ದೆ ಪೊರ್ದುಗುಮುಪಾಂಶತೆ ಭೇದದಿನಂತಱಿಂದಮೀ
ಗಡಿನ ಪದಕ್ಕೆ ಸಾಮಮೆ ಸುಸಾಮ್ಯಮಣಂ ಪ್ರಿಯವಾಕ್ಯಮಂತ್ರದಿಂ
ಬಿಡುಗುಮದಲ್ಲದೇಂ ಬಿಡುಗುಮೋ ಮನಮಂ ಪಿಡಿದಾಗ್ರಹಗ್ರಹಂ || ೧೧೯

ವ || ಮತ್ತಂ-

ಕಂ || ಪೆರ್ಚೆ ಮನದಭಿನಿವೇಶಮೊ
ಡರ್ಚಿದ ದಂಡಮನೆ ಪೂಣ್ದು ಬರೆ ರಿಪು ನಾಮುಂ
ಚರ್ಚಿಸೆ ದಂಡಮನದು ತನಿ
ಗಿರ್ಚಂ ಕಿರ್ಚಿಂದೆ ನದಿಪುವಂತೆವೊಲಕ್ಕುಂ || ೧೨೦

ಆರಯೆ ವಿಜಾತಿ ಮಲಿನಾ
ಕಾರಂ ಪರಪುಷ್ಟನಂತುಮದು ನಿಜಮಧುರೋ
ದೀರಣದಿಂದಾಯ್ತು ಮನೋ
ಹಾರಿ ವಿರುದ್ಧನೆ ದಿಟಂ ಪ್ರಿಯಂವದನಾರ್ಗಂ || ೧೨೧

ವ || ಅದಱಿನೀ ಸಾಹಸೋದ್ದಿಷ್ಟವಿದ್ವಿಷ್ಟನೊಳ್ ಸಾಮಜೋಪಾಯಮೆ ಪುರುಭೂತಿಕಾರಣ ಮೆಂದು ನುಡಿದ ಪುರುಭೂತಿಯ ನುಡಿಗೆ ಯುವರಾಜಂ ಸಾಜದೊಳೆ ಪೌರುಷಪ್ರಾಯ ನಪ್ಪುದಱಿನೊಡಂಬಡದೆ ಇದು ನಯಾಭಾಸಮುಮನುಚಿತೋಪನ್ಯಾಸಮುಮಾದುದೆಂ ದಿಂತೆಂದಂ-

ಕಂ || ಆನೆಯೊಳಳಿಪಂ ಬಿಸುಟ್ಟು
ಮೀನುಣ್ನುಡಿಗಳ್ಗೆ ಸಿಲ್ಕಿ ನಿಲೆ ಪುಸಿಯಕ್ಕುಂ
ಕೋನಾಮಾರ್ಥಾರ್ಥೀ ನಮ
ನೇನ ತು ಪರಿತುಷ್ಟ ಎಂಬ ಮನುಮುನಿವಚನಂ || ೧೨೨

ವ || ಅದಲ್ಲದೆಯುಂ-

ಕಂ || ಒಡಮೆ ಪಡೆ ರೂಢಿಯೆಂಬಿವು
ಕಿಡುಗುಂ ತಾಮುೞಿದುಪಾಯದಿಂ ಸಾಮಮನಿಂ
ನುಡಿವೆಯೊಡಂಬಡದಂದವ
ರೊಡವೆಯನವರ್ಗೀವುದೆಂಬ ತೆಱನಿದು ಪೆಱದೇಂ || ೧೨೩

ವ || ಎಂದು ಮಾಣದೆ ಪೂರ್ವಪಕ್ಷಾನಂತರಂ ಮುದ್ರಿಸಿದ ನೀತಿಸರ್ವಸ್ವಕೋಶದಂತೆ ಮಂತ್ರಿ ಹೃದಯಪರೀಕ್ಷಾನಿಮಿತ್ತಮುಸಿರದಿರ್ದ ಜನಕನ ವದನಮಂ ನೋಡಿ-

ಕಂ || ಸಮನಿಸಿದತ್ತಪ್ರತಿಷಿ
ದ್ಧಮನುಮತಂ ಭವತಿಯೆಂಬ ನುಡಿಯಿಂದೀಕಾ
ರ್ಯಮೆ ದೇವರ ಮನದೊಂದು
ದ್ಯಮಮೆಂಬಱಿವಾಯ್ತನುಕ್ತಸಿದ್ಧಮದೆನಗಂ || ೧೨೪

ವ || ಮತ್ತಮೆತ್ತಾನುಂ-

ಚಂ || ಪರಕರಿ ನಷ್ಟವಸ್ತುವ ಪರಾಕ್ರಮಲಬ್ಧಮಿದೇವುದೆಂಬನಾ
ದರದೆ ತದರ್ಪಣಕ್ಕೆ ಬಗೆದಂದಪಿರಪ್ಪೊಡೆ ನೀಮೆ ಬಂದು ಪಿಂ
ತಿರೆಯಿರೆ ನಾಳೆ ಕಾಳೆಗದೊಳಾಂತನನಂತಕದಂತಕೋಟಿಕೋ
ಟರದೊಳೆ ತೂಂತಿ ದಂತಿಗೆ ಭುಜಾರ್ಜಿತಮೆಂಬುದನುಂಟುಮಾಡುವೆಂ || ೧೨೫

ವ || ಎಂದು ಮತ್ತಮಾಶಂಕೋತ್ತರಮನಿಂತೆಂದೂ ಇದುವುಮಂ ಪುಷ್ಟೈರಪಿನಯೋದ್ಧವ್ಯ ಮೆಂಬ ನುಡಿವಿಡಿದತಿಕ್ರಮಿಸಿ ವನಕೇಳಿಯಂ-

ಕಂ || ಒಪ್ಪಿಸುವೆನೆಂಬೊಡಾನಿರ
ದೊಪ್ಪಿಸುವೆಂ ಪರಮದೀಕ್ಷೆಗೆನ್ನಯ ತನುವಂ
ತಪ್ಪೆತ್ತಲಾನುಮೀನುಡಿ
ಗಪ್ಪೊಡೆ ನಿಮ್ಮಾಣೆಯಿಟ್ಟನುಡಿಗೊಡನಕ್ಕುಂ || ೧೨೬

ವ || ಅಂತು ಪರಾಕ್ರಮಾದಿಯುಂ ಪ್ರತಿಜ್ಞಾಂತಮುಮಾಗೆ ಯುವರಾಜಮೃಗರಾಜಂ ಗರ್ಜಿಸಿ
ನಿಲಲೊಡಂ-

ಕಂ || ವ್ಯಕ್ತಂ ಸಾಮಮಯಮಮಾ
ತ್ಯೋಕ್ತಿ ಸಮುಚ್ಚಂಡದಂಡಮಯಮಿತ್ತಲಪ
ತ್ಯೋಕ್ತಿಯಿವೆರಡುಮನನುಸರಿ
ಪುಕ್ತಿಯೆ ವಕ್ತವ್ಯಮೆನಗೆ ಸುಘಟಿತಭಾವ್ಯಂ || ೧೨೭

ವ || ಎಂದು ಬಗೆಯೊಳ್ ಬಗೆದು ಪದ್ಮನಾಭಮಹೀಭುಜಂ ಜಿನಮತದಂತುಭಯನಯಾ ವಿರುದ್ಧಮಂ ವೃಜಿನವಿಘಟನಕ್ಷಮಮುಮಂ ಪರಿಣಾಮಪಥ್ಯಮುಮಪ್ಪ ಕೃತ್ಯಮಂ ನಿಜಮನಶ್ಚತುರಸಚಿವಸಹಸಮಾಲೋಚನದಿಂ ಕಂಡು-

ಕಂ || ರಿಪುಗಪಜಯಮಂ ಮನ್ಮಂ
ತ್ರಿಪುತ್ರರಿರ್ವರ ಮನಕ್ಕಮನುನಯಮಂ ಭಾ
ವಿಪುದರ್ಕತಿಶಯಮಂ ಮಾ
ೞ್ಪುಪಾಯಮಿನ್ನೆನಗೆ ತಾನೆ ದಲ್ ಪ್ರತಿಯಾನಂ || ೧೨೮

ವ || ಎಂದು ನಿಶ್ಚೈಸಿ ಬೞಿಯಂ ಸಕಲಪ್ರಯೋಜನಕಂ ಕಾರ್ಯಸಮವಾಯಿಗಳೊಳೈಕಮತ್ಯಮೆ ಮೊದಲೊಳ್ ಕೃತ್ಯಮಪ್ಪುದಱಿನವರಿರ್ವರುಮನೊಡಂಬಡಿಸಲೆಂದಿಂತೆಂದಂ-

ಕಂ || ಹಿಮಜಲಲವಮಂ ಸೂಸು
ತ್ತುಮಂಬುದಂ ಸಿಡಿಲನುಗುೞ್ವವೊಲ್ ಸಾಮಮುಮಂ
ಕ್ರಮದಿಂ ದಂಡಮುಮಂ ನಾ
ಮುಮೊಡರ್ಚುವಮಱಿದು ದೇಶಕಾಲೋಚಿತಮಂ || ೧೨೯

ವ || ಎಂದು ಲಬ್ಧಾನುಮತನನಂತರಮಾತ್ಮೀಯಪ್ರತಿಭಾಪ್ರಸನ್ನದರ್ಪಣ ಪ್ರತಿಫಲಿತಕಾರ್ಯ
ಸ್ವರೂಪಮನಿಂತೆಂದಂ-

ಉ || ಆತನ ಯಾನವಿಗ್ರಹದ ಮಾತನೆ ಪೂಣ್ದೆಡೆಮಾಡದಾಡಿದಂ
ದೂತನದರ್ಕೆ ತಕ್ಕುದಭಿಷೇಣನಮೊಂದೆ ನಯಂ ಮನಕ್ಕಭಿ
ದ್ಯೋತಿಸುತಿರ್ದುದಂತದನೆ ಮುನ್ನೆಗೞ್ವಂ ನೆಗೞ್ದಿಂಬೞಿಕ್ಕಮಿ
ನ್ನೇತೆಱದಿಂದಮಾಗ್ರಹಮಡಂಗುಗುಮಂತುಟನಂದೆ ಚಿಂತಿಪಂ || ೧೩೦

ವ || ಅಂತೈಕಮತ್ಯಮಪ್ಪ ಕೃತ್ಯಮಂ ನಿಶ್ಚೈಸಿ ಕುಮಾರನಂ ಮಂತ್ರಿವರನುಮಂ ವಿಸರ್ಜಿಸಿ-

ಮ || ಸ್ರ || ಇದಮೋಘಂ ಕಾರ್ಯಸಿದ್ಧಿಪ್ರಮದೆಗೆ ಕುಲಗೇಹಂ ಮತಿಶ್ರೀಗೆ ನೃ
ತ್ಯಾಸ್ಪದಮನ್ಯಕ್ಷ್ಮಾಪಲಕ್ಷ್ಮೀಲಲನೆಗೆ ಕೃತಸಂಕೇತಸದ್ಮಂ ದಲೆಂಬಂ
ದದ ಮಂತ್ರಾಗಾರದಿಂದಂ ಕ್ಷಿತಿಪತಿ ಪೊಱಮಟ್ಟಂ ವಿಶಿಷ್ಟಾರ್ಥಶಾಸ್ತ್ರೇ
ಷ್ಟದೃಢೀಭೂತಾತ್ಮಕೃತ್ಯಂ ಕವಿಕುಲಕಲಭವ್ರಾತಯೂಧಾಧಿನಾಥಂ || ೧೩೧

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಪದ್ಮನಾಭಮಹೀಶಮಂತ್ರಾಲೋಚನಂ
ನವಮಾಶ್ವಾಸಂ