ವ || ಎಂಬುದುಮನುಕೂಲನೆಂದಂ ದೇವರ್ ಬೆಸಸಿದಂದವಪ್ಪುದಾದೊಡಂ-

ಚಂ || ನುಡಿ ಸವಿ ನೋಟಮೊಂದು ಸವಿ ಸೋಂಕು ದಿಟಂ ಸವಿ ತೋಟಿಯಾವಗಂ
ಕಡುಸವಿ ಪೊಯ್ಯೆ ಮುನ್ನ ಸವಿ ಬಯ್ಯೆ ಕರಂ ಸವಿಯಪ್ಪು ಚುಂಬನಂ
ಗಡಣಮುಮೆಂತುಮೆಯ್ದೆ ಸವಿಯಪ್ಪುವು ತನ್ನ ಪಸಾದದಿಂದಮೆಂ
ದೊಡೆ ಸವಿ ಬೇಟದಿಂದೆ ಪೆಱತಾವುದೊ ಭಾವಿಸಿ ನೋಡೆ ನಾಡೆಯುಂ || ೫೬

ವ || ಎನೆ ಸಾರ್ವಭೌಮಸರ್ವಜ್ಞಂ ಧುತ್ತೂರಮತ್ತರೊಳ್‌ ಸ್ತಂಭಕುಂಭಾದಿಗಳೆಲ್ಲಂ ಶಾತಕುಂಭಾ ಭಾಸಂಗಳಾಗಿ ತೋರ್ಪಂತೆ ಕಾಮಕಾತರೆಯೊಳಂ ಬಸನದೊಳ್‌ ಬೆರಸಿದಾಯಾಸಂಗಳುಂ ಪ್ರಿಯಾಪ್ರಿಯಂಗಳೆ ಅಕ್ಕುಮೆನೆ ತತ್ಸಮೀಪದ ಸೌಧದೊಳ್ ಸನ್ನಿದಮಾದ ಕನ್ನೆವೇಟಕ್ಕೆ ತನ್ನಂ ಮಾಱುಗೊಟ್ಟ ಪಾಱುಗೆಯ್ತದ ಜವ್ವನೆಗಿನಿಯನಿತ್ತ ನಖ ರದಕ್ಷತಂಗಳನೆ ತೊಡವು ಮಾಡಿ ಮೆಱೆವುದನವಳೊಡನಾಡಿ ನೋಡಿ ಕಂಡು-

ಕಂ || ಉರದಿಂ ಬರಿಯಿಂದಗ್ರಂ
ಬರೆಗಂ ಕೆಂಪೆಸೆಯೆ ನೀಳ್ದ ನಖರೇಖೆಯೆಸ
ಳ್ಗೊರೆಯೆನಿಸೆ ಪದ್ಮಕುಟ್ಮಲ
ದಿರವಂ ಪರಿಭವಿಸಿತೀಕೆಯುತ್ಕುಚಯುಗಳಂ || ೫೭

ವ || ಎಂಬುದುಮದರ್ಕೆ ಸೈರಿಸದವರಕ್ಕನಿಂತೆಂದಳ್-

ಚಂ || ಮಿಱುಗುವ ವಿದ್ರುಮಾಧರದ ಮಧ್ಯದೊಳಾಯತವೃತ್ತಮಾದ ನು
ಣ್ಗಱೆಯಿದು ಮನ್ಮನಕ್ಕೆ ಪಡೆದಪ್ಪುದು ಮನ್ಮಥವಹ್ನಿತಾಪದಿಂ
ಮಱುಕಮನಪ್ಪುಕೆಯ್ದೆರ್ದೆಯೊಳಿರ್ಪುದನೊಲ್ಲದೆ ಬಾಯ ಬಾಗಿಲಿಂ
ನೆಱೆ ಪೊಱಮಟ್ಟು ಪೋದಿವಳ ಲಜ್ಜೆಯ ಪಜ್ಜೆಯಿದೆಂಬ ಪೋಲ್ವೆಯಂ || ೫೮

ವ || ಎನೆ ಧೃಷ್ಟನವಳ ಚುಂಬನಂ ಚೆನ್ನನೊಳಕೈದುದೆನಲೊಡಂ ಅಲ್ಲಿಂ ತಳರ್ವುದುಮೊರ್ವಂ
ಕಣ್ಣಿಟ್ಟು ಪಲದೆವಸವಟ್ಟಟ್ಟಿಯುಮಟ್ಟುತ್ತುಮಿರ್ದವಳ ಬೇಂಟದ ಬೊಜಂಗನುೞಿವುದು
ಮೆಡೆವಡೆದೊತ್ತೆಯಿಟ್ಟು ಪುಗಲೊಡಮವನಂ ಕಂಡು-

ಚಂ || ಮನದಿನಿತೊಂದನವ್ವಳಿಪ ದಿಟ್ಟಿಯನೊಯ್ಯನೆ ಸುತ್ತುವಾಸೆಯಂ
ಘನತರಭೋಗಮಂ ಗತಿಯ ವಕ್ರತೆಯಂ ತೆಱಪಾಗೆ ಸಾರ್ದು ಮೆ
ಲ್ಲನೆ ಪುಗುವಂದಮಂ ನೆಱೆಯೆ ಭಾವಿಸಿ ಬಂದ ಭುಜಂಗನಂ ಭುಜಂ
ಗನೆ ದಿಟಮೆಂದು ದಾರಿಕೆ ಮಯೂರಿಕೆಯಂದದಿನೇಂ ಕನಲ್ದಳೋ || ೫೯

ವ || ಅದಂ ವಿವೇಕವಿದ್ಯಾಧರಂ ಕಂಡು-

ಕಂ || ಮನಮದು ಮನದನ್ನನ ಬೆ
ನ್ನನೆ ಪೋಗಿರೆ ತನ್ನ ಬಸನದಿಂದವಳೊಳ್ಪಂ
ಮನಮಂ ಬಿಡೆ ಬಳೆಯಿಪ ಬೆ
ಳ್ತನಮಿದು ಪಾೞ್ಮನೆಗೆ ಬಾಯಿನಂ ಗುಡುವಂದಂ || ೬೦

ವ || ಎಂದು ನುಡಿಯೆ ಮತ್ತೊರ್ವಂ ತನ್ನೊಳಾದೊಲವಿನೆಸಕಂ ಮಸಮಸನಾಗೆ ಮತ್ತೊರ್ವ ನೊಳ್ ಮನಕ್ಕೆಡೆಮಾಡುವಳ್ಗೆ ತನ್ನ ಮೋಹದವನ ನಣ್ಪಂ ಬಿಟ್ಟೆನೆಂದು ಸೂರುಳ್ತೊಡಲ್ಲ ದೊಲ್ಲೆನೆಂದು ರೋಸದಿಂ ಪುಸಿಮಾೞ್ಪುದುಂ ಬಜ್ಜೆಗುಂಟಣಿ ಸೆಜ್ಜೆವನೆಯ ಬಾಗಿಲಂ ಪತ್ತಿ ಮಱೆಗೇಳುತ್ತಿರ್ದೊಳಗಂ ಪೊಕ್ಕು-

ಚಂ || ಕುಡಿದೊಡೆ ಪೊಟ್ಟೆಯಿಂದೆ ಬೞಿನೀರ್ ಪೊಱಪಾಯ್ವುವೆ ಸುತ್ತಿಕಾಲನೇಂ
ತೊಡರ್ವುವೆ ದಾಂಟುವಲ್ಲಿ ನಿಱಿ ಪುತ್ತುರಿಯೂದಿದೊಡಂತೆ ಬಾಯನೇಂ
ಸುಡುವುದೆ ಮುಟ್ಟೆ ದೇವರೊಳೆ ಕೀಲಿಪುದೇ ಕರಮೇಕೆ ಸೂರುಳೆಂ
ದೊಡರಿಸಲಣ್ಣ ಪೆಣ್ಣ ಪುಸಿಮನ್ನಣೆಯುಳ್ಳೊಡಮಂತದೆಯ್ದದೇ || ೬೧

ವ || ಎನೆ ಶಠಂ ಹಠವೃತ್ತಿಯಿನವಳಿರ್ವರಾಗ್ರಹಕ್ಕಂ ನಿಗ್ರಹಮಂ ಪಡೆದಳೆಂಬುದುಂ ಅನತಿ ದೂರದೊಳೊರ್ವಳ್ ಕೂರಿಸಿದ ಬರವಿಗನ ಬರವಿಂಗೆ ಶಯ್ಯಾಸನಮಂ ರಯ್ಯಂ ಮಾಡಿರಿಸೆ ಪೀಠಮರ್ದಕಂ ಸಾರ್ದು ನೋಡಿ-

ಚಂ || ಪಗಲನುದಂಶುವಿಂದುಗುೞ್ವ ದೀವಿಗೆ ತೆಳ್ವಳಿಕಿಂದಮಾದ ನು
ಣ್ವಗಲಿಯೊಳಾಯ್ತು ಮೆಲ್ವೆನಿಪ ಪಾಸಲರ್ವೞ್ಕೆಯ ತಾಣಮೆಂಬ ಚೆ
ಲ್ವಗಲದ ಪೀಲಿವಿಜ್ಜಣಿಗೆ ತಣ್ಪಿನ ನೀರ್ ಸೆಱೆಯಾದ ಪೊಂಗಳಂ
ತಿಗೆಯಿರೆ ಸಜ್ಜೆಯೋವರಿಯಿದೋವರಿಮಾಡಿತು ಕಂತುಗೆಮ್ಮುಮಂ || ೬೨

ವ || ಎಂಬನ್ನೆಗಂ ತತ್ಪಾರ್ಶ್ವಕ್ರೀಡಾವೇಶ್ಮದಿಂದಸವಸದಿನಾವ ಕಿಸುರ ಮಸಕದಿನೊರ್ವಂ
ಪೊಱಮಟ್ಟು ಪೋಗೆ-

ಚಂ || ಇನಿಯನ ಕಾಲ್ಗೆ ಕಾಮಿನಿಯ ಕಾಲ್ ನಿಲವೇೞ್ವವೊಲುಣ್ಮೆ ನೂಪುರ
ಧ್ವನಿ ನೆಱೆ ಕಣ್ಗೆ ಕಣ್ನಿಮಿರೆ ಕಣ್ಬನಿಯಂ ಬಿಡಲಾಗೆನುತ್ತೆ ಬೆ
ನ್ನನೆ ಪರಿವಂದದಿಂ ಪರಿಯೆ ಬಂದು ಪದಾನತೆಯಾಗೆ ಪೋದುದಾ
ತನ ಮುನಿಸಂತೆ ಕಾದಲನ ಕಾಲ್ವಿಡಿಪಿಂ ಕಳೆದಳ್ ಕನಲ್ಕೆಯಂ || ೬೩

ವ || ಅದಲ್ಲದೆ ಮತ್ತೋರ್ವಳ್ ತಾನೊಲ್ದುಮೊಲ್ಲದಂತವನೊಳ್‌ ನೆಗೞ್ಚುವ ಮಗಳಣಕಕ್ಕೆ ತಲೆ ಕಣಕಣಿಸೆ-

ಮ || ಸ್ರ || ಸಲೆ ಮುಂಗೈಯಿಂದಮೀ ಕುಂದದ ಬಳೆ ಮುಡಿಪಿಂ ಪೋಗದೀ ಕಂಚುಕಂ ಮುಂ
ದಲೆಯಿಂದಂ ಪಿಂಗದಿರ್ಪೀತಲೆದೊಡವಿದು ನೀನೊಲ್ಲದಿರ್ಪಂದಮಂ ಕಾ
ದಲನೊಲ್ದೊಂದಂದಮಂ ಪೇೞವೆ ದಿಟದಿನವಂ ಮುನ್ನತಾನೊಲ್ಲದಿರ್ದಂ
ದೆಲೆಗೇ ನೀನೆಲ್ಲರೊಂದಂದದಿನಿರೆ ಬಱೆಮೆಯ್ಯಿಂದಮಿರ್ಪಂತುಟಕ್ಕುಂ || ೬೪

ವ || ಎನೆ ನಾಗರಿಕನೀ ಕುಂಟಣಿಯ ವಕ್ರಭಣಿತೆಯಾಕೆಗೆ ಶಿರಃಪ್ರಣಯಿಯಂ ಮಾಡಿತ್ತೆನುತ್ತುಂ ಬರೆ ಮುಂದೊಂದು ಕೆಂದಳಿರ ಪಂದರೊಳಗಣ ಬಾಳವೇರ ಕೇರ್ಗಟ್ಟಿನೋವರಿಯೊಳಗೆ-

ಉ || ದೂರಿಸಿ ಸುಯ್ದು ಕೈಯ ತಳಮಂ ಕದಪಿಂಗಿರದುಯ್ದುದಾತ್ತನಂ
ಪಾರದೆ ಬಯ್ದು ಕಣ್ಬನಿಯಿನಂಶುಕಮಂ ನೆರೆ ತೊಯ್ದು ತಾಯ್ಗಿದಂ
ಸೈರಿಪಳೆಂದೆ ಕಾಯ್ದು ನೆಱಗೊಂಡಿರೆ ಪೂಗಣೆಯೈದುಮೊರ್ವಳಿ
ನ್ನಾರಿದನಿಂಬುಕೆಯ್ದು ಕುಡುವನ್ನರೆನುತ್ತೆನಸುಂ ಪಲುಂಬಿದಳ್ || ೬೫

ವ || ಆಗಳಾಕೆಯರ ಕೆಳದಿಯರೈದೆವಂದು ಶಿಶಿರೋಪಚಾರಂಗಳಿಂದಂ ಸಂತೈಸಲೊಡರ್ಚು
ವಚ್ಚಿಗಮಂ ಕಂಡು-

ಚಂ || ಇನಿಯನ ತೋಳ ತಳ್ಪವನ ಕೂಟದೊಳುಣ್ಮುವ ಘರ್ಮಬಿಂದುವಾ
ತನ ನಱುಸುಯ್ಯ ಪೊಯ್ಲವನ ಸಾರ್ದ್ರವಿಲೋಕನಮಾತನೊಂದುಸೋಂ
ಕಿನಿತಿರದಾಱಿಪಂತೆನಗೆ ತಾಪಮನಾಱಿಸಲಾರವೀಮೃಣಾ
ಳನಿಕರವೀ ಹಿಮಾಂಬುಲವಮೀಯೆಲರೀ ಶಶಿಯೀ ವಿಲೇಪನಂ || ೬೬

ವ || ಅಂತು ಮನದೊಳಿರ್ದವನೆ ಮರ್ದಾದವಳ ವಿರಹಜ್ಜರಾವಸ್ಥೆಯಂ ಕಂಡು ಅನುಕೂಲ ನಿಂತೆಂದಂ-

ಉ || ನೆಟ್ಟನೆ ಕೂರ್ತ ನಲ್ಲರನಗಲ್ದೞಲಂ ತಳೆದಿರ್ಪ ಮಾೞ್ಕೆಯಿಂ
ಪುಟ್ಟದೆ ಪೋಪುದೊಳ್ಳಿತು ಮನುಷ್ಯಭವಾಂತರದಲ್ಲಿ ದೈವದಿಂ
ಪುಟ್ಟಿದೊಡೇನೊ ಕೂರದಿರವೊಳ್ಳಿತು ಕೂರ್ತೊಡಮೇನಗಲ್ವುದುಂ
ತೊಟ್ಟನೆ ಸಾವುದೊಳ್ಳಿತು ತೊಡಂಕದೆ ಕಾಮನ ಡಾಮರಂಗಳೊಳ್ || ೬೭

ವ || ಎನೆ ವಿದೂಷಕನಿದು ಸತ್ತೊಡಲ್ಲದೆ ಪರಿವ ಕುತ್ತಮಲ್ಲಮೆಂದು ನಗಿಸುತ್ತುಂ ಪೋಗೆ ಮತ್ತೊಂದು ಸುರತಕರಣಚಿತ್ರಸಂದರ್ಭವಪ್ಪ ಗರ್ಭಗೃಹದೊಳಗ ನಿರ್ಭರಪ್ರಣಯಪರ ವಶತೆಯಿಂ ನೆರೆವ ಕಾದಲರ ಕಾಮಕೇಳೀಕೂಜಿತದೊಳ್ ಕೂಡಿ ಕಿವಿಯಂ ಪಳಂಚಲೆವ ಮಂಚದ ಶಕುನಿಯಂಚೆಯ ಗಿಳಿಯ ಪುರುಳಿಯ ಪಾರಿವದ ಕೊರಲುಲಿಯ ದಳವುಳವ ನಾಲಿಸಿ ಪೆಣ್ಬುಯ್ಯಲನಾರಯ್ಯದೋಸರಿಪುದೆನ್ನ ಗಂಡುಗೂಸುತನಕ್ಕೆ ಪಸುಗೆಯಲ್ತೆಂದು ಪೀಠಮರ್ದಕಂಬೆರಸು ಪರಿದು ಗವಾಕ್ಷನಿಕ್ಷಿಪ್ತಾಕ್ಷನಾಗಿ ನೋೞ್ಪನ್ನೆಗಂ-

ಉ || ಕೆಂದೊಡೆ ಸಾಯಲುಜ್ಜುಗಿಸುವಾಸನಪಲ್ಲಟದೞ್ತಿ ಬಾಯ್ಗೆ ವಂ
ದಂದದೊಳೆಂದೊಡೆಂದುದನೊಡಂಬಡಿಪಿಚ್ಚೆಯ ಬಿಚ್ಚತಿಕ್ಕೆ ನಾ
ಣಿಂದಮಗಲ್ದು ಗಂಡುವೆಸದೊಳ್ ಬಸದಪ್ಪ ಪೊಡರ್ಪು ರೂಪು ಮೈ
ಗುಂದದ ಚೆಂದವಿಂಗೊರಲ ಮೆಲ್ಲುಲಿಯೊಪ್ಪಿದುದೊಲ್ವ ಕೂಟದೊಳ್ || ೬೮

ಮ || ವಿ || ಮೊಱೆಯಂ ಮೀಱುವ ಮಾತು ತೀನ್ ಮಸೆಪನಾಣ್ದಾಣಂ ತನಿತ್ತಿಂಬುಮೈ
ಮಱೆಪಂ ಪುಟ್ಟುವ ಸೊರ್ಕು ಸೂೞ್ವಡೆದ ಕೂಟಂ ಪಲ್ಲಟಂಬಾಯ್ವಬಾ
ಯ್ಮಱುಕಂ ತಾಂಗಿಕೞಲ್ವ ನಾಣಿಲಿತನಂ ಬೆಂಡೇೞ್ವ ಕಣ್ ಬೀಯದ
ಳ್ಕಱೊಳಂ ಪಾಸಿಗೆ ನಾಂಬ ಮುಂಬದಮಳುಂಬಂ ಕೂಟದೊಳ್ ನಲ್ಲರಾ || ೬೯

ಕಂ || ನಾಣ್ನುಣ್ಚೆ ಸೋಲದೊದವಿಂ
ಕಣ್ನಸು ಮುಗುಳ್ದೆಸೆಯೆ ನಸೆಯನೆಸಗುವ ಪಲವುಂ
ನುಣ್ನುಡಿ ಪಸರಿಸೆ ಮನದಿಂ
ಜಾಣ್ನಡೆಗೊಳೆ ತೊಡರ್ದರಿನಿಯಕೂಟದೊಳಿನಿಯರ್ || ೭೦

ವ || ಅನಂತರಮೊಡರ್ಚಿದ ವಸಂತಸಖಸುಖಪರಮಕೋಟಿಯೆನಿಸಿದ ರತಾಂತಸುಖದೊಳಿ
ನಿತಾನುಂ ಬೇಗಮಿರೆ-

ಚಂ || ಹರವಸಮೊಯ್ಯನಾಱೆ ಮುಗುಳ್ದಕ್ಷಿಗಳೆೞ್ಬಱೆ ಕೂಡೆ ಮೆಯ್ಯೊಳು
ಬ್ಬರಿಸಿದ ರೋಮರಾಜಿ ನಸುವಕ್ಕೆಗೆ ಸಾರೆ ಬೞಲ್ದ ಮೆಯ್ಗೆ ಚೇ
ತರಣೆಯಲರ್ಚೆ ಬಾಯ್ಗೆ ಬಱಪಂ ಬರಿಸುತ್ತಿರೆ ಪೋದ ಕೂಟಮಂ
ಪರಿವಿಡಿಗೆಯ್ಯೆ ಚಿತ್ತಮೆಳಸಿತ್ತು ರತಾಂತಸುಖಾಂತಮೋಪರಾ || ೭೧

ವ || ಆಗಳಲ್ಲಿಂ ತಳರ್ದು ಬರೆ ವಿಟನಿದೇಕೆ ತಡೆದಿರೆನೆ ಪೀಠಮರ್ದಕನುಜ್ಜುಗಿಸಿದ ಕಜ್ಜಮಂ
ಕಡೆಯೆಯ್ದಿಸಲೆಂಬುದುಂ ವಿದೂಷಕನಿವಂದಿರ ಕೂಟಕ್ಕೆ ಬೇಟಮೆ ಕಡೆಯೆನೆ ರಾಜ
ಮನೋಜಂ ಮುಗುಳ್ನಗೆವೆರಸು-

ಉ || ಎಂತೆಳಸಿರ್ದರಿರ್ದ ಪರಿಯಿಂದಮೆ ಕೂಟಮದಿಂಬುಕೆಯ್ದುದೋ
ರಂತಿರೆ ಮೆಯ್ಯೊಳೆಲ್ಲಿ ದೊರೆಕೊಂಡೊಡಮಲ್ಲಿಯೆ ಚುಂಬನಂ ಕರಂ
ಸಂತಸಮೀವುದಾವೆಡೆಯುಗುರ್ ತೊಡರ್ದಾಯೆಡೆ ರೇಖೆ ಪತ್ತಿ ಚೆ
ಲ್ವಂ ತಳೆದಿರ್ಪುದೆಂದೊಡದನೇವೆಸಗೊಂಡಪೆ ಬೇಟದಾಟಮಂ || ೭೨

ವ || ಎಂದು ನುಡಿಯುತ್ತುಂ ಬರ್ಪನ್ನೆಗಂ ಮನೋಹರಕ್ರೀಡಾಗಾರದ್ವಾರದೇಶದೊಳ್‌
ತಾರುಣ್ಯವತಿ ಅತಿಮಧುರಪುರುಷಾಯತನಿಧುವನಪರಂಪರಾಪರಿಮಳಿತಮಾದ ಶರೀರದ
ಸಹಜಸುರಭಿಗಂಧಮಂ ಗಂಧವಹಂಗೊಚ್ಚತಂಗುಡುವಂತಿರೆ ಲಜ್ಜೆಯಿಂದಿರೆ ಕಂಡು-

ಉ || ಚುಂಬಿಸಿ ಬೀಗಿ ಬೆಳ್ಪಡರ್ದ ಬಾಯ್ದೆಱೆಯಾಳಿಸಿದಪ್ಪಿನೊತ್ತಿನಿಂ
ದಂ ಬಿಡೆ ಗುಜ್ಜುಗೊಂಡ ಮೊಲೆ ಪೊರ್ಕುೞಿಯಂದಮೆ ಹಂತಿದಪ್ಪಿ ತಾ
ಱುಂಬೞಿಯುಂ ತೆರಳ್ದ ಕುರುಳುಣ್ಮೆ ಬೆಮರ್ ನಸುಬಾಲನಾದ ಬೊ
ಟ್ಟೆಂಬಿವು ಕೂಟದೊಂದು ಸವಿಯಂ ಪಿಸುಣಾಡುವುವೀ ಲತಾಂಗಿಯಾ || ೭೩

ವ || ಎಂಬ ನಾಗರಿಕನುಕ್ತಿಗೆ ಚತುರೋಕ್ತಿಚತುರ್ಮುಖಂ ಮೆಚ್ಚುತ್ತುಂ ಪೋಗೆ ಮುಂದೊಂದು
ವಿಶಾಲಶಾಲಾಂಗಣದ ಬಳ್ಳಿಮಾವಿನ ಕಾವಣದೊಳಗಣ ಅಗಲ್ದ ಸಿಂದುರದ ಜಗಲಿ
ಯೊಳ್ಗೊಟ್ಟಿಯಿಂದಿರ್ದ ವಿವಿಧನಾಯಿಕಾನಾಯಕಭೇದದ ಮಿಂಡರೆಳವೆಂಡಿರ ತಂಡಮಂ
ಮೈಗರೆದು ನೋೞ್ಪನ್ನೆಗಮೊರ್ವಳ್ ಕುಚಕಲಶಕ್ಕೆ ತನ್ನ ತಳಮಂ ಕೆಂದಳಿರ್ಮಾಡಿ-

ಕಂ || ಉನ್ನತಿಯಿಂದುತ್ಕಂಠತೆ
ಯನ್ನೆರೆ ನಿನಗೀವುದಿವರ್ಗೆ ಮಾಡವೆ ಕೊರ್ವಿಂ
ನಿನ್ನನೆರ್ದೆಗಿಡಿಪುವುೞಿದರ
ನಿನ್ನೆರ್ದೆಗಿಡಿಸವೆ ಲತಾಂಗಿ ಕಠಿನಕುಚಂಗಳ್ || ೭೪

ವ || ಎಂದು ರೂಪಸೌಭಾಗ್ಯಂಗಳಂ ಪೊಗೞೆ ಮತ್ತೊರ್ವಳ್ ಪಲವುಂದೆವಸಮಗಲ್ದಿರ್ದು ಬಂದು ತನ್ನ ಕೆಳದಿಯಂ ತಿಳಿಪಿದೆಳೆಯನಂ ನೋಡಿ-

ಕಂ || ಕಂದಿದಳುೞಿದೊಡೆ ಬೆಳ್ಪಿನೊ
ಳೊಂದಿದಳೊಂದದೊಡೆ ಬಂದೊಡತಿರಾಗಕ್ಕಂ
ಸಂದಳಿವಳ್ ಮೂವಣ್ಣಂ
ಬಂದಳ್ ನಿಷ್ಕರುಣ ತರುಣಿ ನಿಷ್ಕಾರಣದಿಂ || ೭೫

ವ || ಎನೆ ಮತ್ತೊರ್ವಂ ಪೂರ್ವಾನುಭವಮಂ ನೆನೆದು-

ಕಂ || ಒಸೆದಪ್ಪುವ ಪದದೊಳ್ ಮೆಯ್
ನಸುಸೋಂಕದ ಮುನ್ನಮೆಡೆಯೊಳೆಡೆಗುಡದವೊಲು
ರ್ವಿಸುವ ಪುಳಕಕ್ಕೆ ಕಂಟಕ
ವೆಸರಂ ಕೊಟ್ಟಜನ ಸುಜನತೆಗೆ ಬೆಱಗಪ್ಪೆಂ || ೭೬

ವ || ಎಂದು ಕೆಳದಿಯೊಳ್ ನುಡಿದಂ ಪೆಱತೊರ್ವಳ್-

ಚಂ || ಮಳಯಜರೇಣುಜಾಲಪರಿಪಾಂಡುರಮಾಯ್ತು ಕುಚದ್ವಯಂ ವಿಕ
ಜ್ಜಳಕೃತರೇಖಿಕಾರಚನಮಾದುದು ಲೋಚನಯುಗ್ಮಮೈದೆ ನಿ
ರ್ಗಳಿತಸರಾಗಭಾವಮೆನಿಸಿತ್ತು ರದಚ್ಛದಮೀಗಳಿಂದುಮಂ
ಡಳಲಲಿತಾಸ್ಯೆ ಪೇೞ್ ನಿಜಮನಃಪ್ರಿಯನಪ್ಪಿದನೋ ಅಗಲ್ದನೋ || ೭೭

ವ || ಎಂದು ಮೇಳದಾಳಿಯೊಳ್ ಆಳಿಯೊರ್ವಳ್ ನುಡಿದಳನ್ನೆಗಮೊರ್ವಂ ನಿಜಮನೋ ಹರಿಯ ಸುರತಭಾವಂಗಳಂ ಭಾವಿಸಿ-

ಚಂ || ಸುಸಿಲ ಸೊಕಕ್ಕೆ ಸೊರ್ಕಡರೆ ಮೆಯ್ಯಳವಾರಿದ ತೋಳ ತಳ್ಪನಾ
ಳಿಸುವಿರದೊಟ್ಟಮಂ ಸವಿವ ಬಾಯ್ಬಿಡುತಂದೊಡೆ ಮೆಚ್ಚಿದಂತೆ ಚುಂ
ಬಿಸುವಲರ್ದಿರ್ದ ಕಣ್ಮುಗುಳ್ದೊಡೆಚ್ಚಱಿಸುತ್ತುಮಲಂಪಿನಿಂ ನಿರೀ
ಕ್ಷಿಸುವವಳೊಂದು ಗೆಯ್ತಮದು ಬೈತವೊಲಿರ್ದಪುದೆನ್ನ ಚಿತ್ತದೊಳ್ || ೭೮

ವ || ಎಂದು ಮನದನ್ನಳಪ್ಪ ಕೆಳದಿಗುಸಿರ್ದಂದು ಸಿಪ್ಪಡಂಬಡೆದನನ್ನೆಗಂ ಬಿನ್ನನಿರ್ದ ವಯಸ್ಯೆ ಯಾಸ್ಯಮಂ ಅವನೊಡನಾಡಿ ಕಂಡಿದೇನೆನೆ-

ಮ || ಸ್ರ || ಅವನೆತ್ತಾನೆತ್ತ ಕಣ್ಬೇಟದ ಸಮನಿಪುದೆತ್ತೇಸುವಾರ್ದಿರ್ಪ ಚಿತ್ತೋ
ದ್ಭವನೆತ್ತೀಚೈತ್ರಮೆತ್ತೊಯ್ಯನೆ ತಳರ್ವೆಲರೆತ್ತುದ್ಯದುದ್ಯಾನಮೆತ್ತು
ಣ್ಮುವ ಗೀತಾರಾವಮೆತ್ತುಜ್ಜ್ವಳಿಸುವ ಪೊಸವೆಳ್ದಿಂಗಳೆತ್ತೆನ್ನ ತಾರು
ಣ್ಯವಿಡಂಬಂ ತಾನಿದೆತ್ತೊತ್ತರಿಪ ವಿಧಿಯುಮೆತ್ತೇನನೇನೆಂಬೆನೀಗಳ್ || ೭೯

ವ || ಎಂದಾಸಱೂದ ಬೇಸಱಂ ತೋಱೆ ಮತ್ತೊರ್ವಳ್ ಪುರುಡಿನಿಂ ಪುಟ್ಟಿದ ಮುಳಿಸಂ
ತಿಳಿಪಲೊಡರಿಸಿದ ವಲ್ಲಭಂಗೆಡೆಗುಡದೆ ಬಿಡುನುಡಿಯಂ ನುಡಿದು ಕಳೆದು ಬೞಿಯಂ
ಕಳವಳಿಸಿ ಕೆಳದಿಗೇವೆನೆಂಬುದುಮವಳೆಣಿಕೆದಪ್ಪಿದಂದಕ್ಕೆ ತಕ್ಕುದನಿಂತೆಂದಳ್-

ಉ || ಪತ್ತುಗೆಗೆಟ್ಟುಮೊಂದು ನುಡಿಗೊಂಬತನೆಂದೆರಡೆಂಟನೀಗಳಾ
ನೆತ್ತಱಿವಂದಮೆಂಬ ತೆಱದಿರ್ದಪೆ ನಲ್ಲನ ತಾಯ ತಂದೆಯ
ಚ್ಚೊತ್ತಿದ ಮೂಱು ಮೋಹಮುಮನೇೞೆಲೆವೋಗದೆ ಕಲ್ತೆ ನಾಲ್ಕುಸೂೞ್
ಸತ್ತೊಡದಾರೆಯೆಂದಱಿಪಲೈದೊಲವೆಯ್ದುಗುಮಿನ್ನೆಗಂ ಪ್ರಿಯಂ || ೮೦

ವ || ಅವಳುಕ್ತಿವಕ್ರಿಮಕ್ಕೆ ಸೂಕ್ತಿರತ್ನಾಕರಂ ಮನದೊಳ್ ಮೆಚ್ಚಿ ಮತ್ತೊರ್ವನಾ ಪ್ರಸ್ತುತಕ್ಕಿಂ ತೆಂದಂ-

ಚಂ || ಒಲವೊಳಗಾಗೆ ದೈವದಿನದಂ ಬಡವಂ ನಿಧಿಗಂಡಮಾೞ್ಕೆಯಿಂ
ಸಲಪಲುಮೋವಲುಂ ಸುಖಮನಾರ್ಜಿಸಲುಂ ಬಗೆದಾರದೊಳ್ಪನೊ
ಕ್ಕಲಿಸಿಕೆಯಂ ನಿಮಿರ್ಚಿ ಪುರುಡಂ ಪೊಸೆದೆಯ್ದೆ ಪೊಲಂಬುದಪ್ಪಿ ಕೋ
ಟಲೆಗೊಳಗಪ್ಪ ಪಾೞ್ಮನದ ಮಾನಸರಂ ಸುಡು ಸಂದ ಗೊಡ್ಡರಂ || ೮೧

ವ || ಅದಲ್ಲದೆಯುಂ-

ಚಂ || ಸವಿ ತವದನ್ನೆಗಂ ಮನದ ಪತ್ತುಗೆಗಳ್ ಕಿಡದನ್ನೆಗಂ ಪೆಱಂ
ಗವಳೆಡೆಯಾಗದನ್ನೆಗಮೊಡಂಬಡುಮೇವಮುಮಿಲ್ಲದನ್ನೆಗಂ
ತವಿಪುದು ತನ್ನನೊಪ್ಪಿಸುವುದೆಂದುದನೆಂಬುದು ಕೂರೆ ಕೂರ್ಪುದೋ
ಱುವುದು ಪಲುಂಬಿ ಪೋದ ಬೞಿಕಂ ಪರೆಪುತ್ತರೆಯಾಗಯಂಗಳಂ || ೮೨

ವ || ಅದಲ್ಲದೆಯುಮೊರ್ವಳೆರಡಱಿಯಲೀಯದೆ ಕಡುಗೂರ್ತ ತನ್ನಕೆಳದಿಯ ಸಂಭೋಗಸುಖಾ ನುಭವಸಮುದಯಮಂ ಬೆಸಗೊಳ್ವುದುಮಿಂತೆಂದಳ್-

ಚಂ || ಇನಿಯನ ಚೆಲ್ವನೀಕ್ಷಿಪ ಸೊಕಂ ನುಡಿಗೇಳ್ವಳಿಪಂ ನಿಮಿರ್ಚದಾ
ತನ ನುಡಿಯೊಳ್ಪದಪ್ಪನಪವರ್ತಿಪುದಪ್ಪಿನದೊಂದು ನೇರ್ಪು ಚುಂ
ಬನಮನವಜ್ಞೆಮಾಡುವುದು ಚುಂಬನದಿಂಪು ರತಕ್ಕಿನಿತ್ತು ಸ
ಮ್ಮನಿಸದು ತದ್ರತಂ ಮಱಪುದೇನುಮನೊರ್ಮೊದಲಾಗಳೇಗುವೆಂ || ೮೩

ವ || ಎಂದು ತನ್ನ ಮನದಿಚ್ಚೆಗಳಂ ನುಡಿವುದುಂ ಕೇಳ್ದರಸನಿದು ಕಾಮಮೀಮಾಂಸೋಪನ್ಯಾಸ ಪ್ರಾಸಾದಮಾದುದೆಂದಾಮಂಡಪದಿಂ ಮಗುಳ್ದು ಬರ್ಪಾಗಳೊರ್ವಂ ಸರ್ವಾಂಗೀಣ ಮಲಯರುಹಮೃಗಮದಕದಂಬಪರಿಮಳಾಧಿವಾಸಿತವಿಲಾಸಿನೀಸೌಧಮಂ ನಿರತಿಶಯದೇ ಶೀಶೃಂಗಾರಸಂಗತಿದ್ವಿಗುಣೀ ಭೂತಪಂಚವಿಂಶತಿವರ್ಷದೇಶೀಯಕಾಯಸೌಂದರ್ಯನುಂ ಕತಿಪಯಲಾಟಭಟಗಮನಖೇಟಕಫಲಕಕೀಲಿತಗರ್ಘರೀರುತಾಹೂತಯುವತೀನಿಕರ ಚಿಕುರ ಕಾಂತಿಕುವಲಯಿತವೀಧೀಭಾಗನುಂ ತಾಂಬೂಲಕರಂಕವಾಹಕಪ್ರದೀಯಮಾನ ವೀಟಿಕಾಗ್ರಹಣಲೀಲಾಸಕೃತ್ಪ್ರರಾವಿತವಾಮಪಾಣಿಪಲ್ಲವನುಂ ಏಕೈಕವಾರವಿತಸ್ತಿ ಮಾತ್ರಾ ಸಿಧೇನುಚಾಲನೋಚ್ಚಲಿತ ದಕ್ಷಿಣಕರಕಲಿತಕನಕಕಂಕಣಝಣತ್ಕಾರನುಂ ವಾಮಚರಣ ನಿಕ್ಷಿಪ್ತಚಂಪಕದಾಮಾನುಕಾರಿ ಹೇಮಮಯದಾಮನುಂ ವಿಷಮಬಿರುದನಿಗಡ ಪ್ರಕಟಿತ ಪರಾಕ್ರಮನುಮೆನಿಸಿದ ಸೇವಕರಾಜಪುತ್ರಂ ಬಂದೊಂದು ಮತ್ತವಾರಣದೊಳ್ ಕುಳ್ಳಿರ್ದೊ ಡವಂದವೈಣಿಕವೀಣಾನಿನಾದಮಂ ಕೇಳುತ್ತುಮಿರ್ಪಿನಮೊರ್ವಳವನ ಕಾದಲಳ ದೂದವಿ ಬಂದು ಪೊಡೆಮಟ್ಟು ಪೊರ್ದಿ ಕುಳ್ಳಿರ್ದು-

ಚಂ || ಘನಶಿಶಿರೋಪಚಾರಮಿಷದಿಂ ಹೃದಯಸ್ಥಿತನಪ್ಪ ದೇವ ನಿ
ನ್ನನೆ ಕನದಬ್ಜಚಂದನದಳಂಗಳಿನರ್ಚಿಸಿ ನಿನ್ನ ರೂಪಭಾ
ವನೆಯೊಳೆ ಕೂಡಿ ನಿನ್ನತುಳನಾಮಜಪಕ್ರಿಯೆಯಲ್ಲಿ ನಿಟ್ಟೆವ
ಟ್ಟನತಿಶಯಾಂಗಿ ಸಾಧಿಸಿದಪಳ್ ನಿಜದೇಹವಿದಾಹಮುಕ್ತಿಯಂ || ೮೪

ಕಂ || ಎಲೆ ನಿರ್ದಯ ನಿಜವಿರಹಾ
ನಲಮುಖದೊಳ್ ಬಾಷ್ಪಜಲಕಣಾಭ್ಯುಕ್ಷಿತಮಂ
ಲಲನಾಂಗಾಹುತಿಯಂ ಕೋ
ಕಿಲರವಮಂತ್ರಸ್ವರಂ ಸ್ಮರಂ ನಿರವಿಸಿದಂ || ೮೫

ವ || ಅದಲ್ಲದೆಯುಂ-

ಮ || ವಿ || ಘನಬಾಷ್ಪಾಂಬುಕಣಾರ್ದ್ರಯುಕ್ತನಳಿನೀಪತ್ರಾಂಶುಕಾಶ್ಲೇಷೆ ಮು
ಕ್ತನಿಜಾಳೀಸಹಭಾಷಣೋತ್ತರೆ ಕಪೋಲನ್ಯಸ್ತಹಸ್ತಪ್ರವ
ರ್ತನೆ ಚಿತ್ರಾರ್ಪಿತಕಾಂತೆಯಂತೆ ತಳೆದಳ್ ಸ್ವಾತೀವಚಿಂತಾವಿಚೇ
ತನೆಯಂ ನಿನ್ನ ವಿಯೋಗದುಃಖದಿನವಳ್ ನಿಷ್ಪಂದಕಾರಿತ್ವಮಂ || ೮೬

ಕಂ || ತೆಕ್ಕನೆ ತೀವಿರೆ ತಾಪ
ಕ್ಕಿಕ್ಕಿದ ಸಿರಿಗಂಪು ಪಣೆಯೊಳೆಸೆದುದು ಕೋಪಂ
ಮಿಕ್ಕತನು ಬೆಸಸಿದೊಡೆ ನೊಸ
ಲಕ್ಕರಮಂ ತೊಡೆಯಲೆಂದು ಬಂದಿಂದುವವೋಲ್ || ೮೭

|| ಮಾಳಿನೀವೃತ್ತ ||
ಬಳೆದ ವಿರಹತಾಪವ್ಯೂಹದೊಳ್ ನೇಹಮಾದಂ
ಮುಳುಗೆ ಕಳವಳಂಗೊಂಡಿರ್ದವಳ್ಗೊರ್ವಳೇವಂ
ದಳೆದು ಬಿಡುಗುವೆಂದಾತಂ ಪೆಱಳ್ಗೋತನೆಂದಾಂ
ತಿಳಿದೆನೆನೆ ಕನಲ್ದಿರ್ದಿಲಂತಿರ್ಮೆ ಬೆಂದಳ್ || ೮೮

ವ || ಅಂತುಮಲ್ಲದೆಯುಂ-

ಮ || ವಿ || ಎನಗಂ ತಾಂ ಪ್ರತಿಪನ್ನಮೆಂಬ ಬಗೆಯುಂ ತಾನಂತುಪಾದೇಯಮೇ
ವನಿತಾಕ್ರೀಡಿತಮೆಂತುಮೀಡಿತಮೆ ಪೇೞೀಜೀವನಂ ಮತ್ತೆ ಪಾ
ವನಮೇ ಬಂಧುಜನೋಪಜಾಪ್ಯಮದು ಕರ್ಣಪ್ರಾಪ್ಯಮೇ ನಲ್ಲನೊ
ಲ್ಲನೆ ಪೋದೀವಿರಹಪ್ರಘಟ್ಟಕದೊಳೀ ನೈಪಥ್ಯಮುಂ ಪಥ್ಯಮೇ || ೮೯

ವ || ಎಂದು ಮಾಣದೆ ಮತ್ತಮೆಮ್ಮ ಬಿತ್ತರಿಪ ಶಿಶಿರಕ್ರಿಯೆಯಂ ತನ್ನ ಮನೋರುಜೆಗವಕ್ರಿಯೆ ಯಾಗೆ ಕಂಡು-

ಕಂ || ನೀರರುಹಂ ಮಲಯರುಹಂ
ಹಾರಂ ಕಲ್ಹಾರಮಮಲವಾಃಪೂರಂ ಕ
ರ್ಪೂರಂ ತಾಪಮನುಡುಗಿಪೊ
ಡಾರಾಧಿಸುಗವನ ತೋಳ ತಳ್ಪಿನ ತಣ್ಪಂ || ೯೦

ಈಯಲರ್ವಿಜ್ಜಣಿಗೆಯನಿನಿ
ತಾಯಾಸದೆ ಬೀಸಲೇಕೆ ಸಖಿ ಮತ್ಪ್ರಿಯನಾ
ಬಾಯೆಲರಿಂದಲ್ಲದೆ ಪೇ
ೞೀಯೆಲರಿಂ ಬರ್ದುಕಲೆಂತುಮಾನಾರ್ತಪೆನೇ || ೯೧

ವ || ಎನಲೊಡಮವಳ ಮನಮನಱಿದು-

ಕಂ || ಒಂದಿನಿತು ಧೈರ್ಯಮಂ ದಳಿ
ತೇಂದೀವರನಯನೆ ತಾಳ್ದು ಕಯ್ಯಂ ಪಿಡಿದಾಂ
ತಂದಿನಿಯನನೀಪಾಸೊಳ್
ತಂದೆಳದಳಿರಿಂದೆ ತೋರಣಂಗಟ್ಟಿಸುವೆಂ || ೯೨

ವ || ಎಂದು ಕಿವಿವುಗೆ ನುಡಿದೊಡಂಗೊಂಡು ಪೋಪುದುಂ ದಕ್ಷಿಣನವಳ ದೂತೀಜಲ್ಪಂ ವಿಸೃಷ್ಟಾರ್ಥಮಾದುದೆಂದುಮಲ್ಲಿಂ ತಳರ್ದು ರಾಜಭವನಾಭಿಮುಖನಾಗಿ-

ಕಂ || ಅಂಗಜನೆ ಸೂತ್ರಧಾರಂ
ಶೃಂಗಾರಮೆ ನಾಟಕಂ ತದಂಕಂಗಳ್ ನಾ
ಲ್ಕಂಗಂಗಳಾಗೆ ಕಾಮಿಜ
ನಂಗಳ್ ವರ್ಗಿಗರ ತೆಱದೆ ನಟಿಯಿಸುತಿರ್ದರ್ || ೯೩

ವ || ಎಂದು ಕಾಮವ್ಯಾಮೋಹದುದ್ದಾಮತೆಯನನುಕೂಲಾದಿಗಳೊಳ್ ನುಡಿಯುತ್ತುಂ ಬಂದು-

ಕಂ || ಜಗದಧಿಪತಿಯರಮನೆಯಂ
ಪುಗುವಲ್ಲಿ ಗೃಹಪ್ರವೇಶಮಂಗಳತೂರ್ಯಂ
ಮಿಗೆ ಮೊೞಗಿತ್ತೆನೆ ಪೊಣ್ಮಿದು
ದು ಗಂಭೀರಂ ತತ್ತ್ರಿಯಾಮತೂರ್ಯಾರಾವಂ || ೯೪

ವ || ಅಂತು ಪೊಕ್ಕು ಅವರಂ ವಿಸರ್ಜಿಸಿ ಸಜ್ಜೆವನೆಗೆ ವರ್ಪುದುಂ ಮುನ್ನಮೆ ಸೂೞ್ಗೆವಂದು ತನ್ನ ಬರವಂ ಪಾರುತ್ತುಂ ತಳ್ಪತಳದೊಳಿರ್ದಿದಿರೆೞ್ದೀರ್ಷ್ಯಾರೋಷದಿಂ ಶಶಿಪ್ರಭೆ ನವೋದಯಶಶಿಪ್ರಭೆಯಂತೆ ಪಾಟಳಿತಮುಖಿಯಾಗಿ-

ಚಂ || ಮುನಿದು ಕಟಾಕ್ಷದಿಂದಡರೆ ನೋಡೆ ಭಯಾದೃತನಂತೆ ತೋಱಿ ಸ
ಮ್ಮನಿಸದೆ ಮತ್ತೆ ಕಾಯ್ದೊದೆಯೆ ಕಾಲ್ವಿಡಿದೋವದೆ ಬಯ್ಯೆ ತಳ್ತು ಚುಂ
ಬನಮನೊಡರ್ಚಿ ತತ್ತದುಚಿತಕ್ರಿಯೆಯಿಂದಮೆ ನಂದೆವೊಯ್ದು ತ
ನ್ಮನಮುಮನಂತೆ ಸಂತಸಮನೆಯ್ದಿಸಿದಂ ರತಸೌಖ್ಯದಿಂ ನೃಪಂ || ೯೫

ವ || ಅನಂತರಂ-

ಚಂ || ಸುದತಿ ರತಾಂತಸೌಖ್ಯಮನಧೀಶನ ದೇಹದಿನಂದು ಪೋಗಲೀ
ಯದೆ ಪಿಡಿವಂದದಿಂ ತೊಡೆಯ ತೋಳ ತಗುಳ್ಪಮರ್ದೊಪ್ಪೆ ನಾಡೆಯುಂ
ಪದೆದಮರ್ದಪ್ಪಿದಂತಿರಮರ್ದಪ್ಪಿರೆ ಬಂದ ಸುಷುಪ್ತಿ ಚಿತ್ತಮಂ
ಪುದಿಯೆ ಮಹೀಶನಿರ್ದನಿನಿಸಂ ನಿಜಯೋಗದೆ ಯೋಗಿಯಿರ್ಪವೋಲ್ || ೯೬

ವ || ಅಂತನಲ್ಪತಲ್ಪತಳದೊಳ್ ನಿದ್ರಾಸುಖಾಭಿಮುಖಂ ತೀರೆ ಮನೋಹರೀನಾಮಯಾಮಂ ಮುಹೂರ್ತಮಾತ್ರಾವಶಿಷ್ಟಮಾಗೆ-

ಕಂ || ನೊರೆಯೊಡನೆ ತಡಿಗೆ ಬೆಳ್ದಾ
ವರೆಯ ಕೞಲ್ದೆಸಳ್ಗಳೈದೆ ಕೊಳನೊಳ್ ಸಾರ್ವಂ
ತಿರೆ ಪಡುವಣ ದೆಸೆಗಿರದೋ
ಸರಿಸಿರ್ದುವು ತಿಂಗಳೊಡನೆ ಮೀಂಗಳ್ ನಭದೊಳ್ || ೯೭

ವ || ಮತ್ತಮಿನಿಸಾನುಂ ಬೇಗದಿಂ-

ಚಂ || ಅಲಸಿಕೆ ಜಕ್ಕವಕ್ಕಿಗೆ ಜಗುಳ್ತರೆ ಪಕ್ಕದೊಳಾೞೆವೊಕ್ಕು ಜ
ಕ್ಕುಲಿಸಿ ಸಡಿಲ್ದ ತಾವರೆಯೆಸಳ್ಗುಱುಪಿಂದೊಳವಿೞ್ದು ನಿದ್ದೆಯಂ
ತೊಲಗಿಸಿದಂಚೆವೆಣ್ಣೆಸೆವ ಗಾಂದವದಿಂದನಿದೊಂಗಲೊಳ್ ತಡಂ
ಗಲಿಸಿ ಮನಕ್ಕೆ ಗೋಸಗೆಯ ಬೀಸುವೆಲರ್ ಪಡೆದತ್ತಲರ್ಕೆಯುಂ || ೯೮

ಕಂ || ಕೂಡೆ ಮನೆಮನೆಯೊಳೊಯ್ಯನೆ
ಬಾಡಿದುದೊಡನೊಡನೆ ಮಿಥುನತತಿಯಿರುಳೊಲವಿಂ
ಸೂಡಿದ ಪೂಮಾಲೆಗಳುಂ
ಮಾಡಿದ ಸೊಡರ್ಗುಡಿಗಳುಂ ನಿಶಾನಿರಸನದೊಳ್‌ || ೯೯

ನೆಱೆ ಕೂಟಂಗಳ ಗೂಡೊಳ
ಗೊಱಗಿದ ಪಾರಾವತಂಗಳಂ ತರದಿಂದೆ
ೞ್ಜಱಿಸುತ್ತುಮೊಗೆದು ಗಗನದ
ತೆಱಪಂ ತೀವಿತ್ತು ಚೈತ್ಯಭವಶಂಖರವಂ || ೧೦೦

ಪರೆದುದು ಸಂಧ್ಯಾರುಚಿ ಮೆ
ಯ್ಗರೆದುದು ತಾರಾಳಿ ಮುಕುಳಭಾವದೊಳಿನಿಸಂ
ಪೊರೆದುದು ನೀಳಾಬ್ಜವನಂ
ನೆರೆದುದು ಚಕ್ರಾಹ್ವಯದ್ವಯಂ ದಿನಮುಖದೊಳ್ || ೧೦೧

ಚಂ || ಪರಿಪರಿತಂದು ಮೆಯ್ಗಳೆರಡಿಲ್ಲೆನೆ ಪಕ್ಕದಿನಪ್ಪಿ ಕಣ್ಗಳಿಂ
ಸುರಿಯೆ ಮುದಶ್ರು ಮುಂದಲೆಯತುಪ್ಪುೞನೊಯ್ಯನೆ ಕರ್ಚಿ ಚಂಚುವಿಂ
ಸರಸಿಜಪತ್ರಕೋಟಿಯ ಕುಸುಂಕು ಱಿನತ್ತೆಳೆದುಯ್ದು ಕಾಂತನೊಳ್
ನೆರೆದು ರಥಾಂಗಕಾಂತೆಯೆರ್ದೆಯಾಱಿದುದಾದಮೆ ತತ್ಪ್ರಭಾತದೊಳ್ || ೧೦೨

ಉ || ಒಂದಿನಿಸಪ್ಪೊಡಂ ಪಗಲಗಲ್ಕೆಗೆ ಸೈರಿಸಲಾರವೆಂತಿರುಳ್‌
ನಿಂದುವೊ ಜಕ್ಕವಕ್ಕಿಗಳೆಲೇ ಬಗೆಪೋಯ್ತು ವಿಯೋಗದಿಂದೆ ಸ
ತ್ತೊಂದಱ ಜೀವಮೊಂದಱೊಡಲಂ ಪುಗೆ ಮತ್ತೆ ಸಚೇತನಂಗಳಾ
ಗೊಂದಿದುವಲ್ಲದಂದು ಬೞಿಕೆತ್ತಣದಿರ್ಪುದುಮೆಯ್ದೆ ವರ್ಪುದುಂ || ೧೦೩

ವ || ಅದಲ್ಲದೆಯುಂ-

ಚಂ || ನಡು ನಸು ಪೊಂಗಿ ಸುತ್ತಿಱಿದು ಪತ್ತಿದೆಸಳ್ಮೊನೆ ಬಿರ್ಚಿ ತಣ್ಣೆರ
ಲ್ಗೆಡೆದೆಱಪಾಗೆ ಪೊಕ್ಕು ಸುೞಿಯುತ್ತಿರೆ ತಳ್ಪು ಸಡಿಲ್ದಗಲ್ದರ
ಲ್ವಿಡಿದುಡುಗಿರ್ದ ಕೇಸರದ ನುಣ್ಮೊನೆ ಸೂಸೆ ಮರಲ್ದು ಚೆಲ್ವಿನೊಳ್
ಗಡಣಿಸಿದತ್ತು ಮುಂಬಗಲೊಳಂಬುರುಹಂ ಸರಸೀಸಮೂಹದೊಳ್ || ೧೦೪

ಮ || ವಿ || ಸುರದಿಕ್ಕಾಮಿನಿ ಪೊಯ್ಯೆ ಮೇಗೊಗೆದ ಶೋಣಂ ಕಂದುಕಂ ತಾನಿದೆಂ
ಬರ ಮಾತಿರ್ಕೆಮ ಮೀಂಗಳೆಂಬಲರ್ಗಳಂ ಕೊಯ್ಯಲ್ಕೆ ತತ್ಕಾಂತೆ ಬಿ
ತ್ತರದಿಂದೆತ್ತಿದ ಕೆಂದಳಂ ದಲೆನೆ ಕಣ್ಗಾದಂ ಬೆಡಂಗಾದನಂ
ಬರಲಕ್ಷ್ಮೀವೃತ ಚಂದ್ರಿಕಾಧವಳವಾಸಸ್ತಸ್ಕರಂ ಭಾಸ್ಕರಂ || ೧೦೫

ಕಂ || ನಿದ್ರಾಂಧಕಾರಹರನು
ನ್ಮುದ್ರೀಕೃತನಯನಸರಸಿಜಂ ನೃಪಹೃತ್ಪೂ
ರ್ವಾದ್ರಿಯೊಳೊಗೆತಂದತ್ತು
ನ್ಮುದ್ರಿತತೇಜಂ ಪ್ರಬೋಧದಿನಕೃದ್ಬಿಂಬಂ || ೧೦೬

ವ || ಅಂತನಂತರಂ ದಂತಧಾವನಾಸವನಾದಿವೈಭಾತಿಕಂಗಳಂ ತೀರ್ಚಿ ಸಕಲಾರ್ಚನಾದ್ರವ್ಯ
ಸಂಸೇವ್ಯಮಪ್ಪ ದೇವಪೂಜಾನಿವಾಸಮಂ ವಾಸವನಕೃತ್ರಿಮಚೈತ್ಯಾಲಯಮಂ ಪುಗುವಂತೆ
ಪೊಕ್ಕೀರ್ಯಾಪದಶುದ್ಧಿಯಂ ಮಾಡಿ ಕ್ರಿಯಾಪೂರ್ವಕಮಭಿವಂದಿಸಿ-

ಮ || ಸ್ರ || ಪದೆದರ್ಹದ್ಬಿಂಬಮಂ ಪೂಜಿಸಿದನಮಲತೀರ್ಥಾಂಬುವಿಂ ಚಂದನಕ್ಷೋ
ದದಿನುನ್ಮುಕ್ತಾಕ್ಷತಾರ್ದ್ರಾಕ್ಷತದಿನಳಿಮಿಳತ್ಪುಷ್ಪದಿಂ ಮೈಯಸನ್ನಾ
ಯದಿನುದ್ಯದ್ದೀಪ್ತಿಮದ್ದೀಪದಿನಗುರುಲಸದ್ದೂಪದಿಂ ಸತ್ಫಲವ್ರಾ
ತದಿನಾ ಶುದ್ಧಾಂತರಂಗಂ ಸುಲಲಿತಕವಿತಾನರ್ತಕೀನೃತ್ಯರಂಗಂ || ೧೦೭

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಅಜಿತಸೇನಚಕ್ರಧರಚಂದ್ರಿಕಾವಿಹರಣವಿನೋದಂ
ಅಷ್ಟಮಾಶ್ವಾಸಂ