ಕಂ || ಶ್ರೀಗೆ ಜಯಶ್ರೀಗೆ ಯಶ
ಶ್ಶ್ರೀಗೆ ಶಶಿಪ್ರಭೆಯ ಸವತಿಯಾದಪಳೆಂಬು
ದ್ಯೋಗದೊಳಿರ್ದಂ ಸಕಲನೃ
ಪಾಗಮಗುರು ಜೈನಜನಮನೋಹರಚರಿತಂ || ೧

ಚಂ || ಎರಡನೆಯದ್ಧಿಯುಂ ಮೊದಲ ವಾರಿಧಿಯುಂ ಗಡಿಯಾಗೆ ನೀಳ್ದು ಬಂ
ಧುರಭರತತ್ರಿಖಂಡಧರೆಗಿಕ್ಕಿದ ಸೀಮೆಯ ಕೋಂಟೆಯೆಂಬಿನಂ
ಕರಮೆಸೆದಿರ್ಪುದಾತತಗುಹಾದ್ವಯವಜ್ರಮಯೀದರೀಪ್ರಭಾ
ಪರಿಚಿತಪಾರ್ಶ್ವಮಗ್ರನಿಭೃತಾಂಬುಧರಂ ವಿಜಯಾರ್ಧಭೂಧರಂ || ೨

ಕಂ || ಆ ಕುತ್ಕೀಲಂ ಸೊಗಯಿಪು
ದಾಕಾಶೋರಗವಿಮುಕ್ತನಿರ್ಮಳತರನಿ
ರ್ಮೋಕಂ ತಾನೆನೆ ರಜತಾ
ಳೋಕಸಹಸ್ರಾಂಶುಧವಳಿತಾಶಾವಳಯಂ || ೩

ಪ್ರತಿಬಿಂಬಿಸಿದುದು ರಜತಾ
ಚ್ಛತೆಯಿಂ ಸುರಲೋಕಮೆಂಬಗುರ್ವಿಂದಾಪ
ರ್ವತದುತ್ತರದಕ್ಷಿಣದಿ
ಕ್ಷ್ರತಿಬದ್ಧಶ್ರೇಣಿಯೊಳ್ ಪುರೋತ್ಕರಮೆಸೆಗುಂ || ೪

ವ || ಅಲ್ಲಿ ದಕ್ಷಿಣಶ್ರೇಣಿಗಲಂಕಾರಮಾಗಿ –

ಉ || ಪ್ರತ್ಯಹಮೊಪ್ಪುಗುಂ ವಿವಿಧರತ್ನವಿನಿರ್ಮಿತಕೂಟಕೋಟಿಮ
ಚ್ಚೈತ್ಯಗೃಹಾವಹಂ ಶುಕಪಿಕಾಕುಳಸೌಂದರನಂದನಾವಳೀ
ವೃತ್ಯುಪಶೋಭಿತಂ ಚತುರಖೇಚರವಾರವಧೂನಿಧಾನಮಾ
ದಿತ್ಯಪುರಂ ಪುರಂದರಪುರಪ್ರತಿಮಂ ಪುರುರತ್ನಗೋಪುರಂ || ೫

ಕಂ || ನಿಜರೂಪವಿಜಿತಮಕರ
ಧ್ವಜನಖಿಳದಿಶಾಂತರಪ್ರತಿಷ್ಠಿತಕೀರ್ತಿ
ಧ್ವ ಜನದನಾಳ್ವಂ ಧರಣೀ
ಧ್ವಜನೆಂಬಂ ಖೇಚರೇಂದ್ರನಪಗತತಂದ್ರಂ || ೬

ಅಪರಿಮಿತಖಚರಭೂಭೃ
ದ್ವಿಪಕ್ಷಕೃಂತನಮನೀಯೆ ದಕ್ಷಿಣಬಾಹಾ
ಚಪಳಾಸಿಕುಳಿಶಮಾವಗ
ಮುಪಮೆಗೆ ವಂದಂ ಸುರೇಂದ್ರನೊಳ್ ಖಚರೇಂದ್ರಂ || ೭

ವ || ಆತನೊಂದುದಿವಸಂ ಸಭಾಭವನದೊಳ್ –

ಉ || ಮಂಡಳಿಸಿರ್ದ ಖೇಚರಸಮೂಹದ ಮಧ್ಯದೊಳಿರ್ದು ದೂರದಿಂ
ಗುಂಡಿಗೆ ಕೈಯೊಳೊರ್ಚೆಱಗಿನಿಂ ಪೊದೆದಂಬರಮುಟ್ಟ ಕಚ್ಚುಟಂ
ಮುಂಡಿತಮೂರ್ಧಮೊಪ್ಪೆ ಬರುತಿರ್ಪದೆಯೊಳ್ ವ್ರತಚಿಹ್ನಧಾರಿಯಂ
ಕಂಡನಣುವ್ರತಪ್ರಕರಪಾಲಕನಂ ಪ್ರಿಯಧರ್ಮನಾಮನಂ || ೮

ಇದಿರೆೞ್ದು ಕೈಗಳಂ ಮುಗಿ
ದುದಾತ್ತವಿಷ್ಟರದೊಳಿರಿಸಿ ಪಾದ್ಯಮನಿತ್ತಂ
ಪದಪಿಂದಾ ಖಚರೇಶ್ವರ
ನದಾರ್ಗೆ ಜಿನಮುದ್ರೆ ಮೂಡಿಸದೊ ಮುದದೊದವಂ || ೯

ವ || ಅನಂತರಂ ಸಕಲವಿದ್ಯಾಧರಲೋಕಮಂ ವಿಸರ್ಜಿಸಿ

ಕಂ || ಇಂದು ನಿಜಾಗಮನದೆ ಮ
ನ್ಮಂದಿರಮಂ ಪೂತವೃತ್ತಿಗೆಯ್ದಿಸಿದುದದೇ
ನೆಂದಱಿಪಿಮೆಂದೊಡಂದಿಂ
ತೆಂದಂ ತದ್ದೇಶಯತಿಕೃತಾಶೀರ್ವಾದಂ || ೧೦

ನೀರಾಗರೆನಿಸಿದೆಮಗಮ
ಕಾರಣದಿಂದೊಲವು ನಿನ್ನೊಳಾದತ್ತೆನೆ ಮ
ತ್ತಾರಯೆ ಸರ್ವಗತಂ ಸಂ
ಸಾರದೊಳೀಮೋಹಮೊಂದೆ ದಲ್ ಖಚರೇಂದ್ರಾ || ೧೧

ವ || ಅದುಕಾರಣದಿನಿಂದು ಭವದೀಯ ವಾರ್ತೆಯೊಂದನೀ ಶಿಖರಿಶಿಖರಸಿದ್ಧಕೂಟಚೈತ್ಯಾಯತನಕ್ಕೆ ವಂದಿರ್ದ ಸುಧರ್ಮರೆಂಬ ಸರ್ವಾವಧಿಬೋಧಸಂಪನ್ನಮುನಿಮುಖ್ಯರಿನಱಿದು ಬಂದೆಂ ಅದಾವುದೆಂದೊಡರಿಂಜಯಜನಾಂತದ ವಿಪುಳನಗರಾಧಿಪತಿ ಜಯವರ್ಮನೆಂಬೊಂ ಜನನಾಥಂ ಆತನರಸಿ ಜಯಶ್ರೀಯೆಂಬಳ್ ಅವರಿರ್ವರ್ಗಂ –

ಕಂ || ತ್ರಿಭುವನಮೋಹನದೀಪ
ಪ್ರಭೆ ನಿಜಕರ್ಣೋತ್ಪಳಾಯತಾಕೇಕರದೃ
ಕ್ಪ್ರಭೆ ಪುಟ್ಟಿದಳೆಸೆವ ಶಶಿ
ಪ್ರಭೆಯೆಂಬುಚಿತಾಭಿಧಾನಕನ್ಯಾರತ್ನಂ || ೧೨

ನಿನ್ನಂ ಧುರದೊಳ್ ಸಾಧಿಸು
ವನ್ನನದೊರ್ವಂ ಗಡಾದಪಂ ಮದುವೆಯನಾ
ಕನ್ನೆಯನೆನೆ ಕಿವಿಯಂ ಕ
ರ್ಬೊನ್ನಸರಲ್ ತಾಗಿದಂತಿರಾದಂ ಖಚರಂ || ೧೩

ವ || ಎಂದು ಮನದೊಳ್ ಮಚ್ಚರಮುಮನುದ್ರೇಕಮುಮನೊಳಕೆಯ್ದುಂ ಸ್ವಭಾವಗಂಭೀರ ವೃತ್ತಿಯಪ್ಪುದಱಿನವಹಿತಭಾವಮನವಳಂಬಿಸಿ ಬೞಿಯಮಿಲ್ಲಿಗೆ ತಕ್ಕುದಂ ಪ್ರತೀಕಾರ ಮನಪ್ರಮತ್ತವೃತ್ತಿಯಿಂ ನೆಗೞ್ದಪ್ಪೆನೆಂದು ವಿನಯದಿನಾಕ್ಷುಲ್ಲಕಮುನಿಯುಮನಂದಿನ ದಿವಸಮುಮಂ ಕಳಿಪಿ ಮಱುದೆವಸಂ –

ಮ || ವಿ || ಕಿವಿ ಶಬ್ದಂಗಿಡೆ ಘಂಟಿಕಾಘನಠಣತ್ಕಾರಂಗಳಿಂದೆಯ್ದೆ ದಿ
ಙ್ನಿವಹಂ ಮೇಘಕುಳಂ ಚಳಧ್ವಜಪಟೀವಾತಂಗಳಿಂ ಕೂಡೆ ತೂ
ಳ್ದೆ ವಿಯನ್ಮಂಡಲಮಧ್ಯದೊಳ್ ಬಹುತರಂ ನಕ್ಷತ್ರಸಂಛನ್ನವಾ
ಗೆ ವಿಮಾನಾವಳಿ ಕೋಪದಿಂದೆ ತಳರ್ದಂ ವಿದ್ಯಾಧರಾಧೀಶ್ವರಂ || ೧೪

ಕಂ || ಗಗನದೊಳೆೞ್ದೊಪ್ಪಿರೆ ಮಿಗೆ
ನೆಗಪಿದ ಧೂಳೀಸಮುಚ್ಚಯಂಗಳಿವೆಂತೆಂ
ತೊಗೆದುವೆನೆ ನಾಶಹೇತುಗ
ಳೊಗೆದುವು ಸುತ್ತಿಱಿದು ಧೂಮಕೇತುಗಳಾಗಳ್ || ೧೫

ಅಳ್ಕೆ ಮನಂ ನೋೞ್ಪರ ಕ
ಣ್ಣುಳ್ಕೆ ವಿಯಚ್ಚರಕಿರೀಟರತ್ನಾಂಶುಚಯಂ
ಗಳ್ಕೊರ್ವೆ ಮಿಱುಗಿದುವು ಪಗ
ಲುಳ್ಕಂಗಳ್ ದೆಸೆಯೊಳವಿರಳಪ್ರಸರಂಗಳ್ || ೧೬

ವ || ಇವು ಮೊದಲಾಗಿ ಮತ್ತಮನೇಕವೈಹಾಯಸೋತ್ಪಾತಂಗಳಾಗೆ ಕಂಡು –

ಕಂ || ಜಯಮನೆಮಗರಿಗೆ ಪಿರಿದುಂ
ಭಯಮಂ ಪೇೞ್ದಪುವಿವೆಂದು ನಡೆದಂ ಖಚರಾ
ನ್ವಯಪತಿಯುಪನತಮೃತ್ಕೂ
ದಯಂಗೆ ದುರ್ಣಯಮೆ ಸುನಯಮೆನಿಸುಗುಮೆ ವಲಂ || ೧೭

ವ || ಅಂತು ನಡೆದು ವಿಪುಳಾಪುರಮನೆಯ್ದಿದಾಗಳ್ –

ಶಾ || ಕೇಳೀಭೂಧರಮೂರ್ಧದೊಳ್ ಬಹುವಿಧೋದ್ಯಾನಾವಳೀಚೂಳದೊಳ್
ಶಾಳೋದ್ಯತ್ಪರಿಕೂಟಜಾಳಶಿರದೊಳ್ ಹರ್ಮ್ಯೋರ್ಧ್ವದೊಳ್ ಸಂವೃತೋ
ತ್ತಾಳಟ್ಟಾಳಕಕೋಟಿಯೊಳ್ ಪುರಮಹಾದ್ವಾರಾಗ್ರಿಮಸ್ಥಾನದೊಳ್
ಲೋಳತ್ಕೇತುಚಯಂ ವಿಮಾನನಿಚಯಂ ನಿಂದತ್ತದೆತ್ತೆತ್ತಲುಂ || ೧೮

ವ || ಅಂತುವಿಸ್ಮಿತಾಶೇಷಪೌರಜನವಿಲೋಕ್ಯಮಾನಾನೂನನಯನನಾಗಿರ್ದು ವಿಯಚ್ಚರೇಶ್ವರಂ ಜಯವರ್ಮಜನೇಶ್ವರನಲ್ಲಿಗನ್ವಯಾಗತನುಂ ನಿಸೃಷ್ಟಾರ್ಥನುಂ ನೀತಿನಿರತನುಮಾಕಾರವಂತನುಂ ವಚನಚತುರನುಮಪ್ಪುದ್ದವನೆಂಬ ದೂತಮುಖ್ಯನನಟ್ಟಿದೊಡಾತಂ ಬಂದು ದೌವಾರಿಕನಿವೇದಿತಂ ಸಭಾಭವನಮಂ ಪೊಕ್ಕು ಸಮುಚಿತಾಸನದೊಳ್ ಕುಳ್ಳಿರ್ದು –

ಉ || ಖೇಚರಚಕ್ರವರ್ತಿ ಧರಣೀಧ್ವಜನಸ್ಮದಧೀಶನುದ್ಘತಾ
ರಾಚಳಚೂಳಶೇಖರನರಾತಿಮದದ್ವಿಪಕೂಟಪಾಕಳಂ
ಯಾಚಕಯಾಚಿತಾರ್ಥಸುಸಮರ್ಥನಗೋಚರಚಿತ್ತನರ್ಥಶಾ
ಸ್ತ್ರೋಚಿತಚಾರಚಕ್ಷು ವಿಮಳಾಚರಣಂ ಸಚರಾಚರಸ್ತುತಂ || ೧೯

ಬಂದು ಭವತ್ಪುರಾಗ್ರಿಮನಭೋವಳಯಾಂತರದಲ್ಲಿ ನಿಂದು ಪೋ
ಗೆಂದೊಡೆ ಬಂದೆನಾಂ ನಿಜಪದಾಂಬುರುಹದ್ವಿತಯಾಂತಿಕಕ್ಕದೇ
ಕೆಂದೊಡೆ ನಿನ್ನ ನಂದನೆ ಶಶಿಪ್ರಭೆಯೆಂಬ ಕುಮಾರಿಯೊರ್ವಳಾ
ನಂದಿತಲೋಕಲೋಚನವಿಳಾಸನಿವಾಸಮೊಳಳ್ ಗಡಾಕೆಯಂ || ೨೦

ಮ || ವಿ || ಅನಭಿಜ್ಞಾತಕುಲಕ್ರಮಂಗೆ ಪಥಿಕಂಗೇಕಾಕಿಗೊಲ್ದೀವ ಠ
ಕ್ಕಿನೊಳಿರ್ದಪ್ಪೆ ವಿವಾಹಲಗ್ನಮನೆ ನೀಂ ಪಾರುತ್ತುಮೆಂಬಿಂತಿದಂ
ಜನದಿಂ ಕೇಳ್ದದು ಸಜ್ಜನಾಚರಿತಮಲ್ತಾರಯ್ಯೆ ಸದ್ವಸ್ತುಭಾ
ಜನನಪ್ಪೆನ್ನೊಳೆ ಮಾೞ್ಪುದಾಕೆಗೆ ವಿವಾಹೋದ್ಯೋಗಮಂ ರಾಗದಿಂ || ೨೧

ಕಂ || ಎಂದಪನಲ್ತೆ ನಭಶ್ಚರ
ವೃಂದಾರಕನೀವುದದಱಿನಾಕೆಯನೊಲವಿಂ
ದಿಂದೆ ಬೞಿಕ್ಕೀಯದೊಡೀ
ಬಂದಾತಂ ಬಱಿದೆ ಪೋಗಲೇನರಿದಪನೇ || ೨೨

ವ || ಎಂದು ಸಾಮಾಭಾಸದಿಂ ದಂಡೋಕ್ತಿಯನೆ ನುಡಿಯಲೊಡಂ –

ಚಂ || ಒದವಿದ ನಿದ್ರೆ ದೂತಜನಗರ್ಜನದಿಂ ಕಿಡೆ ಹೃದ್ಗುಹಾಂತರಾ
ಳದಿನುರುಕೋಪಸಿಂಹಮಿರದೆೞ್ದುದು ಮೀಸೆಯ ಕೆತ್ತು ಕೇಸರಂ
ಕೆದಱುವ ಭಂಗಿ ಪುರ್ವಿನ ಪೊಡರ್ಕೆಯೆ ಮೆಯ್ಮುಱಿವೋಜೆ ಕಣ್ಗಳಿಂ
ದುದಯಿಪ ಕೆಂಪದಾಗುೞಿಪ ವಕ್ತ್ರದ ಕೆಂಪೆನೆ ರಾಜಮೇರುವಾ || ೨೩

ವ || ಅಂತು ಕಡುಮುಳಿದು –

ಚಂ || ಹೃದಯದೊಳೊಂದು ನಾಲಗೆಯೊಳೊಂದೆನಿಪಾನುಡಿ ಬೇಡ ಕನ್ನೆಯ
ಲ್ಲದ ಗಡ ಪೋಗೆನೆಂದು ಕಡೆಯೊಳ್ ನುಡಿದಾ ನುಡಿಯಂ ಪ್ರತಿಷ್ಠಿಸಲ್
ಪದೆವೊಡೆ ಪೋಗು ನಿನ್ನ ಪತಿಯಂ ಬರವೇೞೆಡೆಮಾತನಟ್ಟಲೇಂ
ಕದನದೊಳಾನೆ ಪೇೞ್ದಪೆನವಂಗಿರದಿತ್ತಪೆನೀಯೆನೆಂಬುದಂ || ೨೪

ವ || ಅದಲ್ಲದೆಯುಂ –

ಕಂ || ಸಿಂಗದ ಮುಂದಣ ಕನ್ನೆಯ
ದೇಂ ಗಡ ಮೇಷಕ್ಕೆ ಸಾಟಿಯೆನಿಕುಮೆ ರೋದೋ
ರಂಗದೊಳಿನಿತು ತೊೞಲ್ದುಂ
ಪಿಂಗಿದುದಿಲ್ಲಿನಿತು ಸಂಶಯಂ ಚರ ನಿನ್ನೊಳ್ || ೨೫

ವ || ಎಂದು ನಿಜಭುಜವಿಕ್ರಮಮಂ ವಕ್ರೋಕ್ತಿಯಿಂ ನುಡಿದು ದೂತನಂ ಕಳಿಪಿ ಸನ್ನಾಹ ಭೇರಿಯಂ ಪೊಯ್ಯಲ್ವೇೞ್ದು ಅಜಿತಸೇನನಂ ಬರಿಸಿ ತದ್ವೃತ್ತಾಂತಮಂ ನಿವೇದಿಪುದುಮಾತ ನೀಷದ್ರೋಷಹಸಿತಭಾಸುರಮುಖಸರೋಜನಾಗಿ –

ಮ || ಸ್ರ || ತನಗೇಕೀಯುದ್ಧ ಸನ್ನದ್ಧತೆಯ ಗಸಣಿ ಮುಂ ಕಾದಲೆಂದುರ್ಬಿ ಬಂದಾ
ತನದೊಂದಾಯಾಸಮಂ ಕೇಳನೆ ರಣಮುಖದೊಳ್ ಭೀಕರಂಕೊಲ್ಲೆನಾನೆಂ
ಬಿನಿತಂ ತಾಂ ನಚ್ಚಿಮೆಯ್ವೆರ್ಚಿದನೊ ಕಲಿತನತಕ್ಕೞ್ತಿ ಮೇಣೀಗಳಾಯ್ತೋ
ಮನದೊಳ್ ಪೋಬರ್ಕದಂತುಂಹರಿಬವನಿನಿತುಂ ಟಕ್ಕನಾಂತಲ್ಲಿನೋೞ್ಕುಂ || ೨೬

ಕಂ || ಬಗೆಗೆನಿತು ಸಮರಸಂಭ್ರಮ
ಮೊಗೆವಂತಿರೆ ನಿಮಗೆ ಗಹನಮಾವುದೊ ಬಂದೀ
ಖಗಸೇನೆಯನಾನೊರ್ವನೆ
ಖಗತತಿಯಂ ಶ್ಯೇನನಂದದಿಂ ಪಡೆಪಾಯ್ವೆಂ || ೨೭

ಚಂ || ಎನುತೆನುತುಂ ನಿಯುದ್ಧಜಯದೊಂದೊಲವಿಂದೆ ಹಿರಣ್ಯನೆಂದುದಂ
ಮನದೊಳಿನಿತ್ತು ಭಾವಿಪುದುಮಾಭವನಾಮರನಾಯಕಂ ಪುರಾ
ವನಿತಲದೊಳ್ ಸಭಾಸದರ್ಗೆ ಕೌತುಕಮಾಗಿರೆ ನಿಂದನಾವಗಂ
ನೆನೆಯದ ಮುನ್ನ ಬಂದು ಸಮುದಂ ಸಶರಂ ಸರಥಂ ಸಕಾರ್ಮುಕಂ || ೨೮

ವ || ಆಗಳರಸನಂ ಬಲಸಮೇತಮಲ್ಲಿಯೆ ನಿಲಿಸಿ ಬೞಿಯಂ ಸಕಲಾಯುಧಸನಾಥಮಪ್ಪ ತದ್ದಿವ್ಯರಥಮನಾ ಫಣಾಧರನೆ ಸಾರಥಿಯಾಗೇಱಿ ಗಗನಕ್ಕೆ ನೆಗೆದಂಬರದ ತೆಱಂಬೆ ಕಳನಾಗಳುಂಬಮಾಗೊಡ್ಡಿನಿಂದನಿಂದ ವಿದ್ಯಾಧರವರೂಥಿನಿಯಂ ನೋಡಿ ತೋಳ ತೀನೆಯನಡಂಗಿಸಲಿನಿತೆಡೆವಡೆದೆನೆಂದು ಮನದೊಳುತ್ಸಾಹಮನಪ್ಪುಕೆಯ್ದು –

ಚಂ || ಕುಳಿಕನ ದಾಡೆಯಂ ಮುಱಿವ ದಿಗ್ಗಜಮಂ ಪಡೆ ಪಾಯ್ವ ವಾರ್ಧಿಯಂ
ಚುಳುಕದೊಳಾಂಪ ಮೇರುಗಿರಿಯಂ ಮರಳೊತ್ತುವ ವಜ್ರವಹ್ನಿಯಂ
ತಳದೊಳಗಿರ್ದಿಲಾಗೆ ಪೊಸೆದಿಕ್ಕುವ ಸಿಂಗದ ಕೇಸರಂಗಳಂ
ಸೆಳೆವಳವಂ ಸಮಂತು ತಳೆದಂ ರಣದೋಹಳನಾ ಕುಮಾರಕಂ || ೨೯

|| ಪೃಥ್ವಿ ||

ಅನಂತರಮದೆತ್ತಲುಂ ತರದೆ ಸುತ್ತಿದತ್ತಾ ಕುಮಾ
ರನೇಱಿದ ವರೂಥಮಂ ಖಚರಯಾನಸಂದೋಹಕಂ
ದಿನಾಧಿಪತಿಯೇಱಿ ನಿಂದ ರಥಮಂ ನಭೋವೀಧಿಯೊಳ್
ಘನಾಘನಕದಂಬಕಂ ಬಳಸುವಂದದಿಂದಾವಗಂ || ೩೦

ಕಂ || ಅನ್ತುಪಢೌಕಿತವಾಗೆ ಕೃ
ತಾನ್ತಭ್ರೂಭ್ರುಕುಟಿಕುಟಿಲಮಂ ಜಯಲಕ್ಷ್ಮೀ
ಕಾನ್ತಂ ಕಾರ್ಮುಕಮಂ ತಳ
ದಿನ್ತಳೆದೇಱಿಸಿ ಬೞಿಕ್ಕೆ ಜೇವೊಡೆಯಲೊಡಂ || ೩೧

ಚಂ || ಒಡೆದುದೊ ಪದ್ಮಜಾಂಡಮವನೀಳವಳಯಂ ಪಿಳಗಿತ್ತೊ ಮೇರು ಮೇಣ್
ಕೆಡೆದುದೊ ವಾರ್ಧಿಯುರ್ಕಿದುದೊ ಪೇೞೆನೆ ತನ್ನ ನಿಮಿರ್ಕೆಗಾದುದಿ
ಟ್ಟೆಡೆ ಜಗಮೆಂಬಿನಂ ಪೊಡರ್ದು ಪೊಣ್ಮಿದುದಾತನ ಕೆಯ್ಯ ಬಿಲ್ಲು ಜೇ
ವೊಡೆಯೆ ರವಂ ಲಯಪ್ರಭವದಂತಕಸೈರಿಭಘೋಷಭೀಷಣಂ || ೩೨

ವ || ಆ ಸಮಯದೊಳ್ –

ಕಂ || ಕತ್ತರಿವಾಣಿಯೊಳೆಱಗುವ
ಚಿತ್ತದೆ ಕವಿತರ್ಪ ಜಳವಿಹಂಗಂಗಳವೋಲ್
ಎತ್ತಂ ಕವಿತಂದುವು ಭೂ
ಭೃತ್ತನಯಂಗಾಗಿ ಖಚರರೆಚ್ಚ ಶರಂಗಳ್ || ೩೩

ವ || ಅದಂ ಕಂಡು –

ಕಂ || ಮರಸುತ್ತನಿಸಲೊಡಂ ಭೋ
ರ್ಗರೆದೈತರ್ಪಾ ಸರಲ್ಗಳಂ ಖಂಡಿಸುತುಂ
ಬರುತಿರ್ದುವು ಬಳಸಿದ ಪಂ
ಜರದಂತಿರೆ ಸುತ್ತಿ ನಿಶಿತವಿಶಿಖಾವಳಿಗಳ್ || ೩೪

ಅಣಿಯರಮೀಸೆ ಕುವರನ ಕೂ
ರ್ಗಣೆಯೇಱಿಂ ಪಱಿದು ಬಿರ್ದ ಖಚರರ ತಲೆ ಸಂ
ದಣಿಸೆ ವಿಮಾನಂಗಳ ಪೇ
ರಣಿ ಪೋಲ್ತುದು ತೆಱೆದ ಮೊಗದ ಪೇಳಿಗಳಿರವಂ || ೩೫

ಪೊಸಮಸೆಯ ಸರಲ್ಗಳಂ ತೊ
ಟ್ಟಿಸೆ ಕೊಂಡೋಡಿದುವಿನೇಂದುಬಿಂಬಂಗಳನಾ
ಗಸದೊಳ್ ಕೊಂಡೋಡುವ ರಾ
ಹುಸಮೂಹಂಗಳವೊಲಾ ವಿಮಾನಾವಳಿಯಂ || ೩೬

ವ || ಅದಲ್ಲದೆಯುಂ –

ಚಂ || ಪೊದೆಯೊಳಗಿಂದಮುರ್ಚುವೆಡೆಯಲ್ಲಿ ಸರಲ್ ದಿಟಮೊಂದು ಮತ್ತೆ ಮಾ
ಣದೆ ತುಡುವಲ್ಲಿ ಪತ್ತು ಪೊಱಮುಯ್ವುವರಂ ತೆಗೆವಲ್ಲಿ ನೂಱು ಬೇ
ಗದೆ ಬಿಡುವಲ್ಲಿ ಸಾಸಿರಮಿದಿರ್ಚಿದರಂ ನಡುವಲ್ಲಿ ಲಕ್ಕಮೆಂ
ಬುದನೆನೆ ಬಿಲ್ಲ ಬಿನ್ನಣಮ ನಾರಣದೊಳ್ ಮೆಱೆದಂ ಯುವಾಧಿಪಂ || ೩೭

ಉ || ಪೂತೆಲವಕ್ಕೆ ಪೌರವನಭೂರುಹಮೊಪ್ಪುವ ಮುಳ್ಪಿಗುಚ್ಚಳ
ಕ್ಕೇತನಚೀನಚೇಳವರುಣೋಪಲಭಿತ್ತಿಗೆ ಪೊನ್ನಕೋಂಟೆ ಸಂ
ಧ್ಯಾತಪನಂಗೆ ತೋರಣಕನನ್ಮುಕುರಂ ದೊರೆಯಾಗಿ ತೋಱಿದ
ತ್ತಾತನೊಳಾಂತು ಪುಣ್ಬಡೆದ ಖೇಚರಸೇನೆಯ ರಕ್ತಸೇಕದಿಂ || ೩೮

ವ || ಅಂತು ಕಡುಕೆಯ್ದು ಕಾದುವ ಕುಮಾರನಂ ಬೆಱಗಣ್ಮೞಿಯದಂತಳ್ಕಿದರುಮೊರ್ವರುೞಿ ಯದಾದಿತ್ಯಸುತಪುರಮುಮಾದಿತ್ಯಪುರಮುಂ ಗುಱಿಯಾಗಿ ಪೋಗೆ ತನ್ನ ವಿಮಾನಮೊಂದೆನಿಂದುದಂ ಧರಣೀಧ್ವಜವಿದ್ಯಾಧರ ಚಕ್ರವರ್ತಿ ಕಂಡು –

ಕಂ || ಪೊಟ್ಟೆಲರಿಂ ಪಾಱುವವೋಲ್
ಬೆಟ್ಟಂ ಪಾಱುಗುಮೆ ರಿಪುಶರಾಹತಿಗೆ ಭಯಂ
ಬಟ್ಟಳಿಕನೋಡುವಂತಿರೆ
ಕಟ್ಟಾಯದ ಕಣಿಯೆನಿಪ್ಪನೇನೋಡುಗುಮೇ || ೩೯

ವ || ಎಂದು ಪರಿಚ್ಛೇದಿಸಿವಧ್ಯಾಭಾವದಿಂ ಹಿರಣ್ಯನೊಳ್ ಪ್ರಧಾನವ್ಯಾಪಾರಮಂ ನುಡಿಯುತಿರ್ದ ಶಶಿಪ್ರಭಾಪ್ರಿಯನ ರಥಕ್ಕಾಗಿ ಬೇಗನೆ ಬಂದಂಬುವೀಡಿನೊಳ್ ನಿಂದು ವಿದ್ಯಾಧರರ್ ಯುದ್ಧಸನ್ನದ್ಧರಾಗಿ –

ಚಂ || ಇರದೆ ವಿಯಚ್ಚರಾಧಿಪತಿಯೆಚ್ಚ ಕೃಶಾನುಪೃಷತ್ಕಮಂ ಪಯೋ
ಧರಶರದಿಂ ಪಯೋಧರಶಿಲೀಮುಖಮಂ ಮರುದುಗ್ರಬಾಣದಿಂ
ಮರುದಿಷುವಂ ಫಣಿಪ್ರಬಳಸಾಯಕದಿಂ ಫಣಿಚಂಡಕಾಂಡಮಂ
ಗರುಡಪತತ್ರಿಯಿಂದಜಿತಸೇನನಡುರ್ತಿರದೆಚ್ಚು ತೂಳ್ದಿದಂ || ೪೦

ಅಂತಫಳಾಧ್ಯವಸಾಯನಾದುದರ್ಕೇವೈಸಿ ಮಸಕದಿಂದಸಿಧೇನುವಂ ಕಿೞ್ತು ಮೇಲೆ ವಾಯ್ದಿಱಿಯಲಡಹಡಿಸಿ ಬರ್ಪಲ್ಲಿ –

ಕಂ || ಅವನ ತಲೆ ಪಱಿದು ಗಗನಾ
ಗ್ರವಿಭಾಗಕ್ಕೊಗೆದು ರಾಹುಶಿರದವೊಲಾದಂ
ರವಿಯಂ ಬೆರ್ಚಿಸೆ ಕುವರಂ
ಕವಲಂಬಿಂದೆಚ್ಚು ಬಿಚ್ಚತಂ ನಲಿದಾರ್ದಂ || ೪೧

ವ || ಆಗಳ್ –

ತೀವಿದುದು ದಿವಿಜನಿವಹಮ
ಹಾವೀರಧ್ವನಿ ದಿಗಂತಮಂ ವ್ಯೋಮಮುಮಂ
ತೀವಿದುದು ತತ್ಕರಪ್ರ
ಸ್ತಾವಿತಮಂದಾರಪಾರಿಜಾತಾಸಾರಂ || ೪೨

ವ || ಅನಂತರಂ ಜಿತಖಚರಸೇನನಜಿತಸೇನಂ ಬಂದು –

ಕಂ || ವಿರಚಿತತೋರಣಮಾಳಾ
ಕರಮುತ್ತಲಂಭಿತಜಯಧ್ವಜೋತ್ಕರಮೆನಿಪಾ
ಪುರಮಂ ತರುಣೀಕೇಕರ
ಮರೀಚಿನೀರಾಜಿತಾಕ್ಷತಾಂಗಂ ಪೊಕ್ಕಂ || ೪೩

ವ || ಅಂತುಪೊಕ್ಕು ಅರಮನೆಗೆ ಬಂದು ಸುಹೃಜ್ಜನಾಗ್ರಗಣ್ಯನಂ ಹಿರಣ್ಯನಂ ಸನ್ಮಾನ ಪೂರ್ವಕಂ ವಿಸರ್ಜಿಸಿ ಪರಮೋತ್ಸವದಿನಿರ್ದನನ್ನೆಗಂ –

ಮ || ಸ್ರ || ಮನದೊಳ್ ಮುನ್ನಾದ ರಾಗಂ ದ್ವಿಗುಣಿಸೆ ತನಗಿಂತೀಗಳೀಯಂದದಿಂ ಮ
ತ್ತನಯಾಪೂರ್ವಾನುರಾಗಂ ದ್ವಿಗುಣಿಸದಿರದುದ್ವಾಹಲಗ್ನಾಹಮುಂ ಭೋಂ
ಕೆನೆ ಸಾರ್ತಂದಿರ್ದುದೇನುಂ ತಡೆದಿರಲೆಡೆಯಿಲ್ಲುತ್ಸವಪ್ರಸ್ತುತಾಪಾ
ದನಮಂ ಮಾಡಲ್ಕೇವೇೞ್ಕುಂ ಪಿತೃವಿರಹದೆ ಜಾಮಾತೃವಿನ್ನಿರ್ಪನಲ್ಲಂ || ೪೪

ವ || ಎಂದು ಜಯವರ್ಮಭೂಭುಜಂ ಬಗೆದಂದು ಗೃಹಮಹತ್ತರನಂ ಬರಿಸಿ ಬೆಸಸಿದಾಗಳ್ –

ಸ್ರ || ನೀಲಾಬದ್ಧಸ್ಥಲೀಕಂ ಮರಕತಜಗತೀಮಂಡಲಂ ಸ್ಫಾಟಿಕಸ್ತಂ
ಭಾಲಂಬಂ ಚಾರುಚಾಮೀಕರಮಯರುಚಿಮದ್ಭಿತ್ತಿ ವೈಡೂರ್ಯನಿರ್ಯೂ
ಹಾಲೀಢಂ ವ್ಯಕ್ತಮುಕ್ತಾಫಟಿತಪಟಳಸಂಪರ್ಕಕರ್ಕೇತನದ್ವಾ
ರಾಲಂಕಾರಂಗಳಿಂ ಕಣ್ಗೆಸೆದುದನುಪಮಂ ತತ್ಕೃತೋದ್ವಾಹಗೇಹಂ || ೪೫

ಕಂ || ಅದಱ ನವರತ್ನ ಕೂಟಾ
ಗ್ರದಿನುಣ್ಮುವ ಬೆರಕೆವೆಳಗು ತುಂಗಧ್ವಜಚೀ
ನದ ಕಡೆಗಡೆಯೊಳ್ ಕಣ್ಗೆಸೆ
ದುದು ಸಾರಾವಳಿಯ ವಿಳಸವಿಕ್ಕಿದ ತೆಱದಿಂ || ೪೬

ದಿಟ್ಟಿಗೆವರೆ ಬಂಧವಿಧಂ
ಕಟ್ಟಿದ ಪಲತೆಱದ ಮಣಿಯೆ ಸೂಸಕದ ನೆೞಲ್
ಕುಟ್ಟಿಮತಲದೊಳ್ ಪೊಳೆದೆಡೆ
ಗಟ್ಟುತ್ತಲಲ್ಲಿ ಬಣ್ಣವುರಮಂ ತೀವಲ್ || ೪೭

ಸುೞಿವೆಳವೆಂಡಿರ ಕಡೆಗ
ಣ್ಬೞಿಯಂ ಪಸರಿಸುವ ಬೆಳಗು ಬೆಳದಿಂಗಳ ಪೊಂ
ಪುೞಿಯೆಂದು ಸುರಿವುವದಱೊಳ್
ಮೞೆಯಿಲ್ಲದೆಯುಂ ಪ್ರಣಾಳಶಶಿಕಾಂತಂಗಳ್ || ೪೮

ವ || ಮತ್ತಮಲ್ಲಿ –

ಚಂ || ಸಿರಿಸದ ಮಾಲೆಯೆಂದೆಸೆವ ದಾಡಿಮಬೀಜಸಮಾಜವೆಂದು ಸೌಂ
ದರಬಿಸಕಾಂಡವೆಂದು ನಲವಿಂದಳಿಯುಂ ಗಿಳಿಯುಂ ಮರಾಳಮುಂ
ಪರಿಮರಿಯಾಡಿ ವಾಸಿಸದೆ ಪೀರದೆ ನೀಱದೆ ಮಾಣ್ದ ಪಚ್ಚೆಯೊ
ಳ್ವರಲ ತೊಳಪ್ಪ ಮಾಣಿಕದ ಮುತ್ತಿನ ಲಂಬಣಮಿಲ್ಲದೆಲ್ಲಿಯುಂ || ೪೯

ವಿವಹನದುತ್ಸವಕ್ಕೆ ನೆಲೆಯಾದುದಿದೆಂಬಿನಿತಲ್ತು ಕಾಮನು
ತ್ಸವಕೆ ವಸಂತನುತ್ಸವಕೆ ನಾಟಕದುತ್ಸವಕಾದುದಕ್ಕೆ ನೋ
ಡುವೊಡೆನೆ ನಲ್ಲರೊಳ್ ನಲಿವ ಸಿಂಪಿಣಿಯಾಡುವ ನರ್ತಿಪೊಂದು ಚಿ
ತ್ರವಿಧದ ಚಿತ್ರಕಾಮಿನಿಯರಿಂದೆಸೆದಿರ್ದುದು ತಜ್ಜನಾಶ್ರಯಂ || ೫೦

ವ || ತನ್ಮಧ್ಯದೊಳ್ –

ಕಂ || ಮರಕತಸೋಪಾನಚತು
ಷ್ಕರಾಜಿತಂ ಕೋಣಶೋಣಮಣಿಕಲಶಮನೋ
ಹರಮುತ್ತುಂಗಂ ಭಾಸುರ
ಹಿರಣ್ಮಯಂ ವಿಪುಳವೇದಿಯೆಸೆದತ್ತಾದಂ || ೫೧

ಪಳಿಕಿನ ಭೃಂಗಾರದ ಬೆ
ಳ್ವೆಳಗುಂ ಜಾಗಂಗಳಸೆವ ಪಸುರ್ವೆಳಗುಂ ಪ್ರ
ಜ್ವಳಿಪ ಮಣಿಸ್ತಂಭದ ಕೆಂ
ಬೆಳಗುಂ ಪಸರಿಪುವು ಸುರಶರಾಸನಶತಮಂ || ೫೨

ಬಳಭಿಚ್ಚಾಪಲತಾವಳಿ
ಬಳಸಿದ ಬೆಳ್ಮುಗಿಲ ಮುೞಿಯಿದೆನೆ ಬಣ್ಣವುರಂ
ಬಳಸಿರ್ದೊಡೆ ಸೊಗಯಿಸಿದುದು
ಪಳಿಕಿನ ಪಟ್ಟವಣೆ ವೇದಿಕಾಧಿತ್ಯಕದೊಳ್ || ೫೩

ವ || ತತ್ಪುರೋಭಾಗದೊಳ್ –

ಉ || ಸ್ವಸ್ತಿಕಲಕ್ಷ್ಯಲಕ್ಷಮಣಿದರ್ಪಣಮಂಡಿತಮುಲ್ಲಸತ್ಪ್ರವಾ
ಳಸ್ತಬಕಂ ಪವಿತ್ರಬಿಸಸೂತ್ರವೃತಂ ನವಪಿಷ್ಟಚರ್ಚಿಕಾ
ಶಸ್ತಮುಪಾತ್ತದರ್ಭರಚನಂ ನಿಖಿಲೌಷಧಿಪುಂಜಿತಂ ಪರಿ
ನ್ಯಸ್ತಮದೊಂದು ಪೂರ್ಣಕಲಶಂ ತಳೆದತ್ತತುಳಂ ವಿಳಾಸಮಂ || ೫೪

ಶಾ || ಆ ವೇದೀಸ್ಥಳದೊಳ್ ಹರಿದ್ವಸುವ ಪಾತ್ರಂಗಳ್ ಲಸದ್ದೂರ್ವೆಯಿಂ
ತೀವಿರ್ದುಂ ನವಚಂದ್ರಕಾಂತಚಷಕಂಗಳ್ ಚಂದನಕ್ಷೋದದಿಂ
ತೀವಿರ್ದುಂ ಮಣಿಶುಕ್ತಿಗಳ್ ಪರಿಮಿಳಾತ್ಕಾಶ್ಮೀರಸಾರಾಂಬುವಿಂ
ತೀವಿರ್ದುಂ ಬಱಿದಿರ್ದವೋಲೆಸೆದುವಾದಂ ವರ್ಣಸಾಮಾನ್ಯದಿಂ || ೫೫

ಮ || ಮತ್ತಂ ಮಣಿಕನಕರಜತಪಾತ್ರಂಗಳೊಳ್ ಪರಿಪಕ್ಷಸಾಮಿಪಕ್ಷಶಲಾಟುಭೇದಭಿನ್ನಂಗಳಪ್ಪಮಾಕಂದ ಮಾತುಲುಂಗ ಜಂಬೀರ ನಾರಂಗ ದಾಡಿಮ ದ್ರಾಕ್ಷಾ ಚೋಚ ಮೋಚಾದಿಫಳ ಕುಳಂಗಳುಂ ಸೊಗಯಿಪುವದಲ್ಲದೆಯುಂ-

ಮ || ವಿ || ಘಸೃಣಾಭ್ಯುಕ್ಷಣವರ್ಣ ಪೂರಭರಣಸ್ಥಾಳಾವಳೀಮಾರ್ಜನ
ಪ್ರಸವಾಬಂಧನದೀಪಿಕೋಜ್ವಲನದರ್ಭಾಗರ್ಭ ಶಾಲ್ಯಕ್ಷತೆ
ಪ್ರಸರಕ್ಷಾಲನ ತೋರಣಗ್ರಥನ ಮುಕ್ತಾಮಾಳಿಕಾಳಂಬನ
ವ್ಯಸನವ್ಯಗ್ರಕರಂ ಕರಂ ಸೊಗಯಿಸಿತ್ತಂತಲ್ಲಿ ಕಾಂತಾಜನಂ || ೫೬

ವ || ಅಂತನಂತಮಂಗಳದ್ರವ್ಯಸಂಸೇವ್ಯಮುಂ ಉತ್ಸವೋನ್ಮತ್ತಪರಿವಾರಜನ ಪರಿಪೂರ್ಣಮುಮಾಗಿ ಪರಿಣಯನಮಂಡಪಂ ರಾಜಾಶ್ರಯಶ್ರೀಗೆ ಮಂಗಳಸದನಮೆನಿಸಿತ್ತು ಅನ್ನೆ ಗಮಿತ್ತಮಶೇಷೌಷಧಿಸನಾಥತೀರ್ಥಜಲಂಗಳಿನುತ್ಸಾಹಪಟಹರವಂಗಳೆಸೆಯೆ ಮಜ್ಜನಂ ಬೊಕ್ಕು ನೈಪಥ್ಯಗೃಹಕ್ಕೆ ವಂದು ಕೈಗೆಯ್ಯಲೊಡಂ –

ಕಂ || ಆ ರಾಜಶೇಖರಂಗೇಂ
ರಾರಾಜಿಸಿದುದೊ ವಿಚಿತ್ರಮಣಿಗಣರಚನೋ
ದಾರಂ ಶೇಖರಮುಜ್ವ್ವಳ
ಮೇರುಶಿಖರಿಶಿಖರರತ್ನದೊಳ್ ಸರಿವರುತುಂ || ೫೭

ಮಸುಳಿಸಿದುದಜಿತಸೇನನ
ಮಿಸುಪ ಮೊಗಂ ರತ್ನಕುಂಡಳಪ್ರಭೆ ತನ್ನೊಳ್
ಪಸರಿಸುತಿರೆ ಸೊಗಸಿನ ಕೆಂ
ಬಿಸಿಲೆಳಸಿದ ಕನಕಕಮಳಕಮನೀಯತೆಯಂ || ೫೮

ಅಲಗದೆ ನೆಲಸಿದ ಲಕ್ಷ್ಮಿಯ
ನಗೆಗಣ್ಗಳ ಬೆಳಗು ಬಳೆದು ಬೀೞಲ್ವರಿದ
ತ್ತಗಲ್ದುರದೊಳೆಂಬ ತೆಱದಿಂ
ಸೊಗಯಿಸಿದುದು ವಿಮಳತರಳತಾರಾಹಾರಂ || ೫೯

ಅರಿಬಳಜಳನಿಧಿಮಥನೋ
ದ್ಧುರಭುಜಮಂದರಮನೆಯ್ದೆ ಸುತ್ತಿದ ತಾರಾ
ಪರಿಕರಮೆನೆ ವಜ್ರಾವಳಿ
ವಿರಚಿತಕೇಯೂರವಳಯಮೇಂ ತೊಳಗಿದುದೋ || ೬೦