ಒಂದಂದದಿನಡಕಿಲ್ಗೊಂ
ಡೊಂದೊಂದಂ ಪೊತ್ತಿರಲ್ಕೆ ಬೇಸತ್ತಿದಱೊಳ್
ಬಂದು ನೆಲಸಿದುವೊ ಪದಿನಾ
ಱುಂದಿವಮೆನೆ ನಾೞ್ಕಳಲ್ಲಿ ಪದಿನಾಱೆಸೆಗುಂ || ೭೬

ಇಂತಿದೆ ನೆಲೆಯೆನಗೆಂದು ಪ
ದಾಂತರದಿಂದತನು ತನ್ನ ಪೆಸರನದರ್ಕಂ
ಸಂತಸದಿನಿಟ್ಟನೆನೆ ಚೆ
ಲ್ವಂ ತಳೆದ ವಿದೇಹನಾಮಮಾಮಹಿಗೆಸೆಗುಂ || ೭೭

ಕುರುಧರೆಗಳ್ ಪಿರಿದುಂ ಮಂ
ದರಾಗಮಂ ಪೊರ್ದಿ ಮತ್ತೆ ಗಜದಂತಯುಗಾಂ
ತರಿತಂಗಳಾದುವೆನೆ ಪೇೞ್
ದೊರೆಯೆ ವಿದೇಹಕ್ಕೆ ಸೌಖ್ಯಸೌಸ್ಥ್ಯೋನ್ನತಿಯಿಂ || ೭೮

ವ || ಎಂಬಿನಮಪೂರ್ವಸಂಪತ್ಸಾರಸರ್ವಸ್ವಗೇಹಮಾದ ಪೂರ್ವವಿದೇಹಮಹೀಮಧ್ಯದೊಳ್ –

ಉ || ರೋಧಮನೈದೆ ನೀಳ್ದೆರಡುಮಂ ಪುದಿದೊಪ್ಪುವ ನಂದನಾಳಿಯ
ಗ್ರಾಧರಪಕ್ಷ್ಮಪಾಳಿ ಪೊಳೆವಾಲಿ ವಿನಿರ್ಮಲಪೂರವಾರಿಯಾ
ಗಾಧರನೀವಿಳಾಸಿನಿಯ ಬಳ್ವಳ ನೀಳ್ದಲರ್ಗಣ್ಬೊಲೈದೆ ಸೀ
ತಾಧುನಿ ರಂಜಿಕುಂ ನಿಭೃತನೀರಜಕೈರವಮೀನಜಾ ರವಂ (?) || ೭೯

ಮ || ಸ್ರ || ಇದಪೂರ್ವಂ ವಾರ್ಧಿಯಡ್ಡಂಪರಿದುದಿಳೆಯೊಳೆಂಬಂತೆ ತಾಂ ಗುಣ್ಪುಪೆಂಪಂ
ಪುದಿದತ್ಯಾಶ್ಚರ್ಯಮೆಂಬಂತುಭಯತಟಹಟದ್ವಜ್ರವೇದೀವೀಳಾಸಾ
ಸ್ಪದಮಚ್ಛಸ್ಫಾಟಿಕಾದ್ರಿಪ್ರತಿಮಲಹರಿಜಾಲಸಂಕೀರ್ಣಮಂತಾ
ನದಿ ಚೆಲ್ವಾದತ್ತು ನೀಳಾಚಳತಟಶಶಿಕಾಂತೋಪಳಾರ್ಣಃಪ್ರಪೂರ್ಣಂ || ೮೦

ಕಂ || ಬೇರಿಂ ಪೀರ್ದುಂ ತಣಿಯದೆ
ನೀರಜಗಂಧಾನುಬಂಧಿಜಳಮಂ ಕೊಂಬಿಂ
ಪೀರಲ್ಕೊಡರಿಸಿದಪುದೆನೆ
ತೀರದ್ರುಮವಿತತಿಯೆಱಗಿ ತುಱುಗಿದುದದಱೊಳ್ || ೮೧

ವ || ಮತ್ತಮಾ ವಾಹಿನೀಪ್ರವಾಹಮೊಂದೆಡೆಯೊಳಂದಂದಿಂಗೆ ಬಂದುಬಂದು ನೀರೂಡುವ ದೇವರಮಣೀವನಚರಕರೀಂದ್ರಕಟನಿಕಟನಿರ್ಯತ್ತಮಾಲಪಲ್ಲವರಸಾನುಕಾರಿ ದಾನಧಾರಾಪೂರದಿಂ ಕಾಳಿಂದಿಯ ಕೂಡಲಾದಂತೆಯುಂ ಒಂದೊಂದೆಡೆಯೊಳೆಡೆವಿಡದೆ ಜಳಕ್ರೀಡೆಯಾಡುವ ವಿದೇಹವಿಜಯಾರ್ಧವಿದ್ಯಾಧರವಿಳಾಸಿನೀಸ್ತನಭರಕಾಶ್ಮೀರಪರಾಗ ರಾಗದಿಂ ರಕ್ತೋದಾನದೀಸಂಭೇದಮಾದಂತೆಯುಂ ಒಂದೊಂದೆಡೆಯೊಳುನ್ನಿದ್ರಭದ್ರಶಾ ಳನಂದನಪ್ರಚುರಕುಸುಮಾಪಚಯವಿಹರಣಪರಿಶ್ರಾಂತಿವಿಪ್ಲವಪ್ಲವನಕೇಳೀದೋಹಳಸು ರಕುಮಾರಪ್ರಕರಾನುಲಿಪ್ಯಮಾನಸರ್ವಾಂಗೀಣಚಂದನದ್ರವನಿವೇಶಗದಿಂ ಗಂಗಾಸಂಗಮ ಮಾದಂತೆಯುಂ ಎಸೆವುದು ಅಂತುಮಲ್ಲದೆಯುಂ –

ಕಂ || ಸತತಂ ಮಾರ್ಗೋಲ್ಲಂಘನ
ಗತಿ ಹಯದೊಳವಗ್ರಹಂ ಮದೇಭಸಮೂಹಾ
ಕೃತಿಯೊಳ್ ಸಮರಾಗಮನ
ಸ್ಸ್ಥಿತಿ ನಲ್ಲರೊಳಲ್ಲದಿಲ್ಲ ಪೆಱತೊಂದೆಡೆಯೊಳ್ || ೮೨

ಮ || ಸ್ರ || ನವಪುತ್ರಪ್ರೀತಿಯಿಂದಂ ರತಿಯೆ ಸಲಪಿದಿಮ್ಮಾವು ಮೀನಾಂಕಿತಂಕೇ
ತುವಡರ್ಪಾಗಂಗಜಂ ಪರ್ವಿಸಿದ ಲತೆ ಸುಧಾಸೂತಿ ಪೀಯೂಷಧಾರಾಂ
ಬುವೆ ಪೊಯ್ನೀರಾಗೆ ಮುದ್ದಿಂ ಬಳೆಯಿಸಿದೆಳದೆಂಗೆಯ್ದೆ ಮಂದಾನಿಲಂತೋಂ
ಟವೆಸಂಗೆಯ್ದೆೞ್ಕಱಿಂ ಪೆರ್ಚಿಸಿದ ವಿಚಕಿಳಂ ರಯ್ಯಮಲ್ಲಲ್ಲಿಗೆಲ್ಲಂ || ೮೩

ಕಂ || ನಾಡುಗಳರಸನಿದೆಂಬೊಂ
ದಾಡಂಬರದಿಂದೆ ಸತ್ತಿಗೆತ್ತಿದುವೆನೆ ಕ
ಣ್ಗಾಡುಂಬೊಲನಾದುವು ಬೆ
ಳ್ಗಾಡಿನೊಳಲರ್ದೆಸೆವ ಬಯಲ ಬೆಳ್ದಾವರೆಗಳ್ || ೮೪

ಪರಿಣಮಿಸಿದುದಲ್ಲಿ ಜಳ
ಸ್ವರೂಪದಿಂ ತಿಂಗಳದಱ ನುಣ್ಗಱೆ ನೀಳಾಂ
ಬುರುಹತೆಯನಾಂತುವೆನಿಪುವು
ಪಿರಿದುಂ ನೆಯ್ದಿರಲ್ಗೊಳಂಗಳಾ ಜನಪದದೊಳ್ || ೮೫

ಉ || ಭೂತಲವರ್ತಿಯಪ್ಪ ವಿಷಯಾಳಿ ವಿಚಾರಿಪೊಡಾವಗಂ ನದೀ
ಮಾತೃಕ ದೇವಮಾತೃಕಮೆ ತದ್ವಿಷಯಂ ನವನಾಳಿಕೇರವಾ
ರ್ಮಾತೃಕಮಿಂದುಕಾಂತಜಳಮಾತೃಕಮಿಕ್ಷುಲಸದ್ರಸಾವಳೀ
ಮಾತೃಕಮಾಮ್ರಕಮ್ರಪರಿಪಕ್ವಪಲೋತ್ಕರಸಾರಮಾತೃಕಂ || ೮೬

ಕಂ || ಲೀಲೆಯಿನದಱ ನೆಲಂ ಪರಿ
ಪಾಲಿಸಿದುವು ಕಣ್ಗೆ ನಾಡೆ ಮೌದ್ಗಂ ಮಾಷ್ಯಂ
ಶಾಲೇಯಂ ವ್ರೈಹೇಯಂ
ತೈಲೀನಂ ಕೌದ್ರವೀಣಮೌಮ್ಯಂ ಯವ್ಯಂ || ೮೭

ತಿಳಿದ ತಡಿದಡಿಯ ಮಡಿಗಳ
ಜಳದೊಳ್ ರಂಜಿಸುವ ಧಾನ್ಯಮಂಜರಿಯ ನೆೞಲ್
ಪೊಳೆಯೆ ತೆನೆವೋದುವಿವು ಬೇ
ರ್ಗಳಿನೆನಿಪುವು ಬೆಳೆದ ಕೞವೆ ಭೂಸಾರತೆಯಿಂ || ೮೮

ಆ ಕಳಮಧಾತ್ರಿ ಕಣಿಶಕು
ಚಾಕಲಿತಪಯಃಪ್ರತಾನದಿಂ ಬಳೆಯಿಸೆ ನಿ
ರ್ವ್ಯಾಕುಳಮೆನೆ ರಾಜಶುಕಾ
ನೀಕಶಿಶುಪ್ರತತಿ ಬಳೆವುದುಚಿತಸ್ಥಿತಿಯಿಂ || ೮೯

ಚಂ || ತೊಲಗದೆ ಗಂಧಶಾಲಿವನಮಂ ತಟಜೋತ್ಪಳಗಂಧದೊಳ್ ತಡಂ
ಗಲಸಿದ ಕಂಪಿನಾಸೆಗೆ ಮುಸುಂಕಿದ ಭೃಂಗಕದಂಬಕಂ ಕೃಷೀ
ವಲತತಿ ಕೀರಪೋತಪರಿಶಂಕೆಯಿನಾವನನೀಲಚೇಲಸಂ
ಕುಲದೊಳೆ ಕೂಡೆ ಬಾಸಣಿಸಿತೆಂಬಭಿಶಂಕೆಯನುಂಟುಮಾಡುಗುಂ || ೯೦

ಗಗನದೊಳೆಯ್ದೆ ಮಂಡಳಿಸಿ ನಿಂದ ಶುಕಾಳಿಯನಂದು ಬೆರ್ಚಿಪು
ಜ್ಜುಗದೊಳೆ ನೋೞ್ಪ ಪಾಮರಿಯ ಚಾರುಕಟಾಕ್ಷಮರೀಚಿ ನೀಳ್ದು ಶೋ
ಭೆಗೆ ನೆಲೆಯಾಯ್ತು ತತ್ಕಳಮಭೂರಮೆಗೆತ್ತಿದ ಪಚ್ಚನಪ್ಪ ಸ
ತ್ತಿಗೆಗಳವಟ್ಟು ತೋರ್ಪ ಶಶಿಕಾಂತದ ಕಾಂತದ ಕಾವಿದೆಂಬಿನಂ || ೯೧

ವ || ಅದಲ್ಲದೆಯುಂ –

ಕಂ || ಕೂರಿದುವೆನಿಪೆಲೆಗಳ ಬಾ
ಯ್ದಾರೆಗಳೆಲರಲೆಯೆ ತಾಗಿ ಪಱಿದುಗುವ ರಸಾ
ಸಾರಮೆ ಕೊಳಗೊಂಡೆಂದುಂ
ನೀರೂಟಕ್ಕೆಳಸವಲ್ಲಿ ಕರ್ವಿನ ಕೆಯ್ಗಳ್ || ೯೨

ವ || ಎನಿಸೆ ಸೊಗಯಿಸುವನೇಕಸಸ್ಯಸಂಪತ್ಸಾರಕೇದಾರಲಕ್ಷ್ಮೀಸೀಮಂತಿನಿಯ ಸೀಮಂತರೇಖಾ ವಿಲಾಸಮನುಂಟುಮಾಡುವ ಘಂಟಾಪಥಂಗಳ ಕೆಲದೊಳಧ್ವನ್ಯಜನಮನೋಲತೆ ಗಡರ್ಪಾದ ಪಾನೀಯಮಂಡಪಂಗಳೊಳ್ ||

ಚಂ || ಕಲಶಮನೆತ್ತಿ ನೀರೆಱೆವ ಕಾಂತೆಯ ತೋಳ ತೆರಳ್ಕೆ ಮೇಲುದಂ
ತೊಲಗಿಸೆ ನೋಡಿ ನುಣ್ಬೊಗರನೀಂಬ ಕುಚದ್ವಯಮೂಲಮಂ ಸಮು
ಜ್ಜ್ವಲಭುಜಮೂಲಮಂ ನೆಱೆಯೆ ಕಂಡೆರ್ದೆಯಾಱಿದೊಡಂ ನಿರೀಕ್ಷಣಾ
ಕುಲತೆಯಿನೀಂಟುವರ್ ಪಥಿಕರಾಕಲಶಾಂಬುವೆ ಸೀಮೆಯೆಂಬಿನಂ || ೯೩

ವ || ಮತ್ತಮಲ್ಲಿ –

ಮ || ವಿ || ಜಳಪಾನಚ್ಛಳದಿಂ ಪ್ರಪಾಪ್ರಣಯಿನೀಶೃಂಗಾರಲೀಲಾಸುಧಾ
ಜಳಮಂ ಕಣ್ಗಳಿನೀಂಟಿ ಮಂದಪರಿಹಾಸಾಳಾಪಮಾಳಾಮೃತಾ
ವಳಿಯಂ ಕರ್ಣದಿನೀಂಟ ಭಾವರತಕೇಳೀಸೌಖ್ಯಪೀಯೂಷಸಂ
ಕುಳಮಂ ಚಿತ್ತದಿನೀಂಟಿ ತದ್ವಿಷಯದಧ್ವನ್ಯರ್ ಮನಂಬೆರ್ಚುವರ್ || ೯೪

ಕಂ || ಒಂದೊಂದಱ ಸಿರಿಯಂ ಪಡೆ
ದಂದೀಕ್ಷಿಸಲೆಂದು ಬಂದುದೆನೆ ಚಂದ್ರಿಕೆ ಪಾ
ತಂದಲೆನಿಪ್ಪಂತರದೊಳ್
ನಿಂದೂರ್ಗಳದೇಂ ಬೆಡಂಗನವಟಯಿಸಿದುವೋ || ೯೫

ವ || ಅಂತನೂನಶೋಭಾವಿಭವಾನುಷಂಗಿಯಾದ ಮಂಗಳಾವತೀಮಧ್ಯದೇಶದೊಳ್ –

ಚಂ || ಸುರುಚಿರಮಪ್ಪ ತದ್ವಿಷಯನೂತ್ನ ಕುಶೇಶಯಪತ್ರಮಾಳೆಯಂ
ತಿರೆ ಬಳಸಿರ್ದನೇಕಪುರಮಾಲೆಯ ಮಧ್ಯದೊಳೈದೆ ಲೀಲೆಯಿಂ
ಸಿರಿಗೆಡೆಯಾಗಿ ತಾಂ ತಳೆದ ಕರ್ಣಿಕೆಯಂದದೆ ರತ್ನಸಂಚಯಂ
ಪುರಮೆಸೆದಿರ್ದುದಾತ್ತಮಣಿವಜ್ರಸುಪುಂಜಿತರತ್ನಸಂಚಯಂ || ೯೬

ಕಂ || ನೆಲೆವೀಡು ರತಿಗೆ ತಿಱುವಾ
ಯ್ದಲೆವೀಡಂಗಜಶರಕ್ಕೆ ಕಾಮನ ಕಿಸುಗ
ಣ್ಮಲರ್ವೀಡು ವಿಯೋಗಿಗೆ ಸಂ
ಕಲೆವೀಡು ವಸಂತದಂತಿಗುಪನಗರವನಂ ||

ಮ || ವಿ || ಮದನಂ ಕೊಂಬುಗೊಳಲ್ಕೆ ನಚ್ಚುವ ನವಾಮ್ರಂ ಕಂತು ಚಾಪಕ್ಕೆಚಿ
ತ್ತದೊಳಾಳ್ದಿರ್ಪ ಸಿತೇಕ್ಷುಮಾಲೆ ವಿಷಮಾಸ್ತಂ ಪಂಚಬಾಣಕ್ಕೆ ಮಾ
ಣದೆ ಕಣ್ಗಾದಿರಿಸಿ‌ಟ್ಟ ಮಲ್ಲಿಗೆ ಮನೋಜಂ ಸ್ವಚ್ಛವಾಃಕೇಳಿಸ
ಮ್ಮದಕೆಂದೋವಿದ ಪದ್ಮಷಂಡಮೆಸೆಗುಂ ತನ್ನಂದನೋಪಾಂತದೊಳ್ || ೯೮

ಕಂ || ಅಗಜಾನವರತಶೋಭಾ
ಧಿಗತಂ ಭೃತಕಾಲಕಂಠಮುರುಶಿಖಿನಯನಂ
ನಗರೋಪವನಂ ಭವನಂ
ನಗುವುದು ರಕ್ಷೀಕೃತಸ್ಮರಂ ಸವಿಶಾಖಂ || ೯೯

ವ || ಎಂಬಿನಂ ನಯನಶೋಭಾವಳಂಬನಂಗಳಾದ ಬನಂಗಳೊಳ್ ವಿರಹಿಜನ ಮನೋದಾರು ವಿದಾರಣದಕ್ಷಕಾಮತಕ್ಷಕಕ್ರಚನಿಚಯದಂತಗುರ್ವುವೆತ್ತಲೆಯ ಪರ್ವಿನಿಂ ಸುರ್ವುಗೊಂಡು ಬಾೞ್ವೇಲಿಯಾಗಿಬಳಸಿದ ಕೇತಕೀಪಙ್ತಿಗಳುಂ ಪಥಿಕಮೃಗಮೃಗಯಾಪರಿಶ್ರಾನ್ತಕಂತು ರಾಜತೃಷಾಪಕರ್ಷಣಾರ್ಥಂ ವನದೇವತೆಯರಮೃತಸಾರವಾರಿಯಂ ಪಚ್ಚೆವರಲ ಕರಗಂಗಳೊಳ್ ತೀವಿ ತೆಂಬೆಲರ ಪೊಯ್ಲಿನಿಂ ತಣ್ಪುವಡೆಯಲೆಂದು ನೆಱೆಪಿದಂತಿರ್ದ ನೀರ್ಗಾಯ ತುಱುಗಲಿಂದೆಱಗಿದ ನಾಳಿಕೇರಭೂರುಹಂಗಳುಂ ವಿವಿಧನಿಜಕುಜವ್ರಜದ ಬೆಳಸಿಂಗೆಡೆಯಾದ ಗಗನಲಕ್ಷ್ಮಿಗೆತ್ತಿದುದ್ದಂಡಚಂದ್ರಕಚ್ಛತ್ರಷಂಡದಂತೆ ಸಂದಣಿಸಿ ಬಳ್ವಳ ಬೆಳೆದೆಳಗೌಂಗಿನ ಸಸಿಯ ಸಾಲ್ಗಳುಂ ತಳಿರ ಕಳಿಕೆಯ ಮಿಡಿಯ ಪೂಗುಡಿಯ ಪಣ್ಣ ದೋರೆವಣ್ಣ ಬೆರಕೆವಣ್ಣದೊಳ್ದಳಿರ ಪುದುವಿನಿಂ ಬೆಡಂಗುವಡೆದು ಕಾಮುಕಮಿಥುನತತಿಗ ಪೂರ್ವಶ್ರೇಷ್ಠಿಯಾಗಿ ಮದನಂ ಸಮೆದ ನಂದನಭೋಗಭೂಮಿಯ ರತ್ನಮಯಭೂಷ ಣಾಂಗತರುಗಳಂತಿರ್ದ ಮಾಕಂದಾನೋಕಹಂಗಳುಂ ಮಂಜೀರಿಕಾಪುಂಜ ಮಂಜುಶಿಂ ಜಾನಮೊದವುವಿನಮೊದೆವ ಪದದೊಳೊಳಕೆಯ್ದ ಸುದತಿಯರ ಮೃದುಪದಾಲಕ್ತಕರಸ ವಿಸರಮಂ ತಳಿರ ಬೆಳಗೆಂಬನೆಪದಿಂ ಮಗುಳುಗುೞ್ವಂತೆ ಕೆಂಕಮಾದ ಕಂಕೆಲ್ಲೀವಲ್ಲರಿಗಳುಂ ಮದನಮಂಗಳಶಾತಕುಂಭ ಕುಂಭಂಗಳಂತಳವಿಗಗ್ಗಳಮಾಗಿ ಬೆಳೆದೊಳಗೆ ತೀವಿದ ಸರಸಕೇಸರಪ್ರಸರ ಭಾರದಿಂ ತೂಗಿ ನೆಲನಂ ತಾಗುವ ತೋರಗಾಯ್ಗಳಿಂ ಜನನಿಯಪ್ಪವ ನಿಯಂ ಮುದ್ದಿಂ ಮುಂಡಾಡುವಂತಿರಿರ್ದ ಮಾತುಲುಂಗಸಂಘಾತಂಗಳುಂ ಪರಿಮಳಾ ತಿಲಂಪಟಷಟ್ಚರಣಪಟಲಪಾಟಿತಕುಟ್ಮಲಾವಳೀಸ್ಯಂದಮಾನಮಕರಂದಬಿಂದುಸಂದೋ ಹಜನಿತದುರ್ದಿನಂಗಳಿಂ ವಿರಹವಿಧುರಪೌರಸೌಂದರೀಬೃಂದ ವದನಾರವಿಂದಂಗಳಂ ಕಂದಿಸುವ ವಿಕಟಪಾಟಲೀವಿಟಪಿಗಳುಂ ಚಾತಕ ಪೋತಕಪ್ರತಾನಚೇತೋವೃತ್ತಿಯೊಳ ಪೂರ್ವಜಲಧರಕರ್ಬುರಾಭ್ರವಿಭ್ರಮಮನೊಳಪೊಯ್ದು ಕೞ್ತಲೆಯ ಕಾರಾಗಾರದಂತೆ ಬಿತ್ತರಂಬೆತ್ತು ಬಿಚ್ಚತಂ ಪರ್ವಿದ ತಮಾಳಮಾಳಾಪರಂಪರೆಗಳುಂ ನಿಷ್ಪ್ರತ್ಯೂಹಮೋಹ ರಸಪರವಶತೆಯಿಂ ನೆರೆವ ನಗರದಂಪತೀಶತೋತ್ತಾರರಣಿತಕುಹರಣಸೂತ್ರಮಂ ಕಲ್ತು ಪರಿವಿಡಿಗೆಯ್ವ ಪಾರಾವತಪ್ರಕರಕ್ಕೆ ಮಕರಕೇತುಶಾಸ್ತ್ರಾಭ್ಯಾಸಪ್ರಾಸಾದಂಗಳಾದ ಮಣಿ ಮಯಕೃತಪುಂಜದಿರ್ತಡಿಯೊಳಂ ಮಡಲ್ತ ಮರುಗದ ಮಡಿಯ ಮಡಿಯ ಗಾಡಿಯನೊಳಕೆಯ್ದ ಮುತ್ತಿನ ಮಣಲಪುಳಿನದೊಳ್ ನಿರವಿಸಿದ ದೀವದಂಚೆವಯಿಂದಂ ಚಿರಮಲ್ಲದೆಸೆದು ವಾಸಿಸಲ್ಕೆ ಪಸರಿಸಿದ ಪಲವುಮಲರ ನೆರವಿಯ ನೀರ್ವೂಗಳೊಳಗೆ ಪರಿವ ಚಂದನರ ಸಪ್ರವಾಹಕೃತಕವಾಹಿನಿಗಳುಂ ರತಿಯ ಮದನನ ಮದುವೆಯೊಳ್ ಪೊಸಯಿಸಿದ ಪಸುರ್ವಂದರಂತೆ ಮಿಸುಪು ಮೃದ್ವೀಕಾಲತೆಯ ನಾಗಲತೆಯ ನವಮಾಲಿಕಾಲತೆಯ ಜಾತೀಲತೆಯ ಯೂಧಿಕಾಲತೆಯ ವಿಚಕಿಲತೆಯ ಮಂಡಪಂಗಳುಂ ಮನೋಹ ರಂಗಳೆನಿಸಿರ್ದುವು ಅಲ್ಲದೆಯುಂ-

ಕಂ || ಪಣ್ಗಾಯ್ ತೀವಿದ ಬಾೞೆಯ
ಬಿಣ್ಗೊನೆ ನಿಜಭರದಿನಿರದೆ ಬಾೞ್ವೇಲಿಯ ಪಿಂ
ದಣ್ಗಾಗಿ ಜೋಲ್ದು ಪಥಿಕರ
ಕಣ್ಗೊಳ್ಪಂ ಮನಕೆ ಬಯಕೆಯಂ ಪುಟ್ಟಿಸುಉಂ || ೧೦೦

ವಿಧಿ ಬೀಜಪೂರಸಾರ್ಥಾ
ಭಿಧಾನಮಂ ಮಾತುಲುಂಗದೊಳ್ ನಿರವಿಸಿದಂ
ಮುಧೆಯಾಗಾವಿರ್ದಂತೆಂ
ದಧರಿಸಿ ನಗುವಂತೆ ಬಿರಿದ ದಾಡಿಮಮೆಸೆಗುಂ || ೧೦೧

ಇಲ್ಲಿಯದೆ ಚೈತ್ರರಥದೊ
ಳ್ಪೆಲ್ಲಮುಮೆಂದಜನೆ ಹಂಸಪದನಂ ತಪ್ಪೆಂ
ದಲ್ಲಿಟ್ಟನೆನಿವಾ ಬನ
ದಲ್ಲೊಕ್ಕ ಪರಾಗದಲ್ಲಿ ಹಂಸಪದಂಗಳ್ || ೧೦೨

ಚಂ || ಅಭಿಸರದುನ್ಮ ದಭ್ರಮರಸಂಕುಳಝಂಕೃತಿವಾವದೂಕನಾ
ತ್ತಭಯವಿಯೋಗಿನೀಜನಸಖೀಜನವೀಜನಪದ್ಮಪತ್ರಿಕಾ
ಪ್ರಭವಸಮೀರಮಾಂಸಳನನಂತಲತಾಳಿಲತಾಂತವಾಂತಸೌ
ರಭಭರಮಂಧರಂ ಸೊಗಯಿಕುಂ ಪುರನಂದನಮಂದಮಾರುತಂ || ೧೦೩

ಅಲರ್ಗಣೆದಿಂಬಿದಂಬುಜದ ಮೊಗ್ಗೆಯ ಮೂಡಿಗೆ ನೀಳ್ದ ಕೇತಕೀ
ದಳದಲ ಗಾಮ್ರದೊಳ್ದಳಿರ ಕೈಪೊಡೆ ಕೇತಕೀ
ದಳದಲ ಗಾಮ್ರದೊಳ್ದಳಿರ ಕೈಪೊಡೆ ಕರ್ಬಿನ ಬಿಲ್ ತದಗ್ರದೊಳದ
ಮಿಳಿರ್ವ ತಮಾಳಪಲ್ಲವದ ಚಾಮರದುಪ್ಪರವಟ್ಟಮೊಪ್ಪೆ ಬಂ
ದಲೆದಿಸುವೊಂ ಬಣಂಬಿಡಿದು ಪಾಂಥರನಾ ಪರಿಪಂಥಿ ಮನ್ಮಥಂ || ೧೦೪

ಮ || ಸ್ರ || ಧೃತನಾವರ್ಣಪರ್ಣಚ್ಛವಿಸಮುದಯಸಂದರ್ಶನೀಯಂ ದ್ವಿರೇಫೋ
ದಿತನಾದಾಕರ್ಣನೀಯಂ ಸಿಕತಿಲತಲಶಯ್ಯಾಚಯಸ್ಪರ್ಶನೀಯಂ
ಸತತಂ ಪೌರರ್ಗೆ ಪಂಚೇಂದ್ರಿಯಸುಖದೊದವಂ ನಂದನಂ ಮಾೞ್ಪುದೆಂದುಂ || ೧೦೫

ವ || ಅಂತವಿಶ್ರಾಂತವಿಳಸನವಿಶ್ರಮಣಭೂಮಿಯಾದುದ್ಯಾನಮಾಳಾವಳಯದಿಂದೊಳಗೆ-

ಚಂ || ಸುರನಗಮಂ ನಿಮಿರ್ಚಿ ತೆರೆಸುತ್ತಿದನಲ್ತೆ ಸರೋಜಸಂಭವಂ
ಪುರಕೆನೆ ಚೆಲ್ವನಪ್ಪ ನವಹಾಟಕನಿಮಿರ್ತಮಪ್ಪ ಕೋಂಟೆ ಮಉ
ಟ್ಟರೆ ಮುಗಿಲಂ ರಥಕ್ಕೆ ಪಥಮಿಲ್ಲದೆ ಬಿಟ್ಟೆರಡುಂ ಕೆಲಂಗಳಿಂ
ಚರಿಯಿಪನಲ್ಲದಂದು ರವಿಗೆತ್ತಣದುತ್ತರದಕ್ಷಿಣಾಯನಂ || ೧೦೬

ಕಂ || ಎನ್ನಂತೆ ರತ್ನವಿತತಿಗೆ
ತಾನ್ನೆಲೆಯಾಯ್ತೆಂಬ ಸಮಗುಣಪ್ರಣಯದಿನಾ
ಮುನ್ನೀರ್ ಬಂದಪ್ಪಿದುದೆನೆ
ತನ್ನಗರಮನಮಲಪರಿಖೆ ಬಳಸಿದುದೆತ್ತಂ || ೧೦೭

ಕಳಹಂಸಗಳುಂ ಫೇನಂ
ಗಳುಮಬ್ಜಪರಾಗಮುಂ ನಿಮಜ್ಜನ್ನಗರೀ
ಲಳನಾಂಗರಾಗಮುಂ ಬೆರ
ಸಿ ಳೀಳೆಯಂ ತಳೆದುವದಱ ನಿರ್ಮಳಜಳದೊಳ್ || ೧೦೮

ಬಳಸಿದುದು ಮೇರುಶಂಕಾ
ಕುಳಿತಂ ಜ್ಯೋತಿರ್ವಿಮಾನತತಿಯೆನೆ ಬಳಸಿ
ತ್ತೆಳವಳಿಕಿನ ಮುಗಿಲಟ್ಟಳೆ
ವಳಗಂ ಮನಮೆಳಸಿ ಬಳಸಿ ನಿಲೆ ಘರ್ಮಜಳಂ || ೧೦೯

ಪರಿವ ರವಿರಥರಥಾಂಗದ
ಖರನೇಮಿಯೊಳೊಂದಿ ತಳೆದ ಪೊಂದೆನೆಗೊನೆಯಿಂ
ದೆ ರಜಂ ನಿಮಿರ್ದಪುವೆನಿಪುವು
ನಿರವಿಸಿದಟ್ಟಳೆಯ ನಿಮಿರ್ದ ಕೆಂಬೞಯಿಗೆಗಳ್ || ೧೧೦

ತಾರಗೆಗಳ್ ತೆನೆಗೊನೆಗಳೊ
ಳೋರಂದದೆ ಬೆಳಪ ಸೊಡರ್ಗಳಂತಿರೆ ತತ್ಪ್ರಾ
ಕಾರಂ ಭ್ರಮಮಂ ಪಡೆವುದು
ಪೌರರ್ಗಿರುಳಿರುಳಪೂರ್ವದೀಪೋತ್ಸವದಾ || ೧೧೧

ಜನವಿರಹಿತಮಿಲ್ಲೊಂದೆಡೆ
ಜನಮುಂ ಧನಹೀನಮಿಲ್ಲ ಧನಮುಪಭೋಗಾ
ರ್ಜನಶೂನ್ಯಮಿಲ್ಲ ಭೋಗಮು
ಮನಿರಂತರಮೆನಿಪುದೆಂದುಮಿಲ್ಲಾಪುರದೊಳ್ || ೧೧೨

ಇವು ಭವ್ಯಜನಸಮೂಹಾ
ರ್ಣವಗಾಮಿಗಳೆನಿಪ ಪುಣ್ಯವಾಹಿನಿಗಳ್ ಸಂ
ಭವಿಸಿದ ಕುಲಗಿರಿಗಳೆನಿಸು
ವುವು ರತ್ನೋತ್ತುಂಗಶೃಂಗಚೈತ್ಯಗೃಹಂಗಳ್ || ೧೧೩

ಪಸರಿಪ ಚಂದ್ರಿಕೆಯಿಂದಿರು
ಳೊಸರ್ತು ಸಲಿಲಾಭಿಷೇಕಮಂ ತಮ್ಮೊಳ್ ರಂ
ಜಿಸುವ ಜಿನಪ್ರತಿಮಾಳಿಗೆ
ಪೊಸಯಿಪುವವಱಿಂದುಕಾಂತಮಣಿಕೂಟಂಗಳ್ || ೧೧೪

ಅಮಲಜ್ಞಾನಮಯರ್ ದೇ
ಹಮಾತ್ರಪರಿಕರರತರ್ಕ್ಯಸಾಮರ್ಥ್ಯರ್ ನಿ
ರ್ಮಮರೆನಿಪಮುಮುಕ್ಷುಗಳು
ತ್ತಮರೊಪ್ಪುವರವಱ ಪಟ್ಟಶಾಳಾವಳಿಯೊಳ್ || ೧೧೫

ವ || ಅದಲ್ಲದೆಯುಂ –

ಚಂ || ಪುರವನಿತಾಜನಂ ರುಚಿರಹರ್ಮ್ಯಗೃಹಾಗ್ರತಳಂಗಳಲ್ಲಿ ಗಾ
ವರಿಸುವ ಪಂಚಮಂಬೊರೆದ ನುಣ್ಚರಮಂ ನಸುಗೇಳ್ದು ಸೋಲ್ತು ಕ
ಣ್ಮರಲರೆಮುಚ್ಚೆ ಕಂಡು ಕೊಣಕಿಟ್ಟಪುದಲ್ಲಿಗೆ ಗೋರಿಗೊಂಡದೊಂ
ದೆರಳೆಯನಲ್ಲಿರುಳ್ ಶಶಿ ತೊಡರ್ಚುವನಾತ್ಮವಟಪ್ರರೋಹದೊಳ್ || ೧೧೬

ಕಂ || ಹರಿನೀಲಚ್ಛದರುಙ್ಮಂ
ಜರಿಶಬಳಿತಹರ್ಮ್ಯದುಪರಿತಳದೊಳ್ ಕೇಕಾ
ವಿರುತಿಯಿನಲ್ಲದೆ ನಿಟ್ಟಿಸ
ಲರಿದಾಪುರವರದ ಗೃಹಕಳಾಪಿಕಳಾಪಂ || ೧೧೭

ತೊಳಗುವ ಪಳಿಕಿನ ಮಾಡಂ
ಗಳೊಳಿನಿಯರೊಳೊಂದೆ ಪೊಱಗೆ ಮೆಱೆವುದು ಕೇಳೀ
ವಿಳಸನಮೆಂದೊಲ್ಲದೆ ಬಿ
ಟ್ಟೆಳಸುವುದಬಳಾಳಿ ಧವಳಗೃಹದೋವರಿಯೊಳ್ || ೧೧೮

ಅಭ್ರಂಕಷಹರ್ಮ್ಯಾಗ್ರತ
ಳಭ್ರಾಜಿತಮತ್ತವಾರಣಸ್ಥಿತಕಾಂತಾ
ವಿಭ್ರಮನಿರೀಕ್ಷಣೋಪಗ
ತಭ್ರಮದಿಂದಮರಸಮಿತಿಗಾಯ್ತನಿಮೇಷಂ || ೧೧೯

ಬಗೆಯದೊಳಕೆಯ್ದುದೆನ್ನಯ
ಪಗೆಯಂ ಸಂಪತ್ತಿಯಂ ನಿರಂತರಮೆಂಬು
ಬ್ಬೆಗದಿಂ ವಿಪತ್ತಿ ನೋಡದು
ನಗರವಣಿಗ್ವಾಟಿಕೋಟಿಯಂ ಮಱೆದೆಂದುಂ || ೧೨೦

ವ || ಮತ್ತಮುತ್ಪಾದಿತಘ್ರಾಣೇಂದ್ರಿಯಪ್ರಾಪಣಂಗಳಪ್ಪ ಗಂಧಾಪಣಂಗಳೊಳ್-

ಚಂ || ಚಳನಯನಾಂಶುಚಂದ್ರಿಕೆಯಿನೊಯ್ಯನೊದರ್ತಱಿಪಕ್ಕೆ ತಾನೆ ನೀ
ರ್ದಳಿಯೆ ಪಳಚ್ಚನಪ್ಪ ಶಶಿಕಾಂತದ ಸಣ್ಣಿಗೆ ನೋಡಲೀಯದ
ವ್ವಳಿಸೆ ಕುಚದ್ವಯಂ ಪದನಿನುಣ್ಮುವ ಸುಯ್ಯೆಲರ್ಗಂಪುಗಳ್ ದಳಂ
ಗಳನಧಿವಾಸಿಸುತ್ತುಮಿರೆ ಘಟ್ಟಿಮಗುೞ್ಚುದಂಗನಾಜನಂ || ೧೨೧

ಮ || ಸ್ರ || ಜನವಕ್ತ್ರೋನ್ಮುಕ್ತನಿರ್ಯದ್ಧಿಮಪರಿಮಳತಾಂಬೂಲಸಂಸಂಗಿಭೃಂಗೀ
ಸ್ವನದಿಂ ಪ್ರತ್ಯಂತರಾಜಾತ್ಮಜವಿಭವಸಮಾಕರ್ಣಿತೋತ್ತಾನಗಾನ
ಧ್ವನಿಯಿಂ ವಾಃಪಾನಮುಕ್ತದ್ವಿರದನಿಗಡನಿರ್ಘೋಷದಿಂ ಸಂಚರತ್ಪೌ
ರನಿತಂಬಿನ್ಯಂದುಕಾರಾವದಿನತಿಮುಖರಂ ತತ್ಪುರೀಪಟ್ಟಮಾರ್ಗಂ || ೧೨೨

ವ || ವಿ || ತಳಿರ್ದೊಂಗಲ್ ಪುದಿದಂದದಿಂದಿರೆ ತಳೆಪ್ರದ್ಯೋತಿಯಿಂದುದ್ಗಮೋ
ಜ್ಜ್ವಳದಾಮಂ ತದುದಾರಸೌರಭಚಯಂ ಸುಯ್ಗಂಪಿನಿಂದಾವಗಂ
ದಳವೇಱುತ್ತಿರೆ ಪೂತ ಜಂಗಮಲತಾಸಂದೋಹಮೆಂಬಂತೆ ಕ
ಣ್ಗೊಳಿಸುತ್ತಿರ್ಪುದು ಮಾಲೆವೂದಳೆದ ಮಾಳಾಕಾರನಾರೀಜನಂ || ೧೨೩

ವ || ಅಂತು ರಾಜಿಸುವ ರಾಜಮಾರ್ಗದಾದಲೆಯೊಳ್ –

ಮ || ವಿ || ಮಕರಾಂಕಧ್ವಜಮಾಳಿಕಾಪ್ರಕಟಿತಪ್ರದ್ಯುಮ್ನಪಕ್ಷಕ್ರಮಂ
ಶುಕಶಾರಿಪ್ರಕರಪ್ರಕಾಶಿತರತವ್ಯಾಪಾರಚಾತುರ್ಯಮು
ತ್ಸುಕಭೂಪಾಲಭುಜಂಗತಾಡಿತಹಟದ್ಘಂಟಾರವಾವಿಷ್ಕೃತಾ
ಧಿಕಸೌಭಾಗ್ಯಮದೇಂ ಬೆಡಂಗಮರ್ದುದೋ ಗಾಣಿಕ್ಯಸೌಧೋತ್ಕರಂ || ೧೨೪

ಕಂ || ಒಳಗೆ ವಿಟರಂ ಸ್ಮರಂ ದೋ
ರ್ವಳದೊರ್ವನೆ ಬಂದಿವಿಡಿದು ಬಿಡದಿಸೆ ಸರಲು
ಚ್ಚಳಿಪವೊಲುಣ್ಮುವುವಲ್ಲಿ
ರ್ಪೆಳವೆಂಡಿರ ನಯನರುಚಿ ಗವಾಕ್ಷಾವಳಿಯಿಂ || ೧೨೫

ವ || ಮತ್ತಮಾಪುರಂ ಪದ್ಮರಾಗಾರುಣೀಕೃತನಿಶಾಂತಮಾಗಿಯುಂ ಆಸ್ತಮಿತರಾಜಲೀಲಾ ವಿಲಾಸಮಲ್ತು ಅಗಣ್ಯಪುಣ್ಯಜನನಿವೇಶಮಾಗಿಯುಂ ಸದೋಷಾಚರಪ್ರಚಾರಮಲ್ತು ಸದಾನಭೋಗಾನ್ವಿತಮಾಗಿಯುಂ ಅಕುಲೀನವೃತ್ತಿ ಪ್ರವರ್ತನಮಲ್ತು ಅನೇಕಭೂಮಿಕಾಶ್ರಯ ಮಾಗಿಯುಂ ಕ್ಷಣಭಂಗಿ ಶೋಭಾಸಂಗತಮಲ್ತು ವಿವಿಧವರ್ಣಶ್ರೇಣೀಸಂಚೀಯಮಾನ ನವೀನಾರ್ಥ ನಿಚಯಮಾಗಿಯುಂ ವಾಗ್ವಿಷಯವಿಳಸನಮಲ್ತು ವಿಶಿಷ್ಟಪಕ್ಷಭೂಭೃನ್ನಿಕರ ಮಾಗಿಯುಂ ಜಡಾಕರತ್ವೋಪೇತಮಲ್ತು ಆಖ್ಯಾತಸೂತ್ರವಿಧಿಸನಾಥಮಾಗಿಯುಂ ಮಧ್ಯಮಪುರುಷಕ್ರಿಯಾನಿಯುಕ್ತಮಲ್ತು ಅಲ್ಲದೆಯುಂ-

ಚಂ || ತ್ರಿದಶಜನಾನ್ವಿತಂ ಗಡ ಮಹೀರುಹಪಂಚಕಸಂಚಿತಂ ಗಡಂ
ತದು ದಿಟದಿಂದಮಾನಪರಿಮೇಯವಿದಗ್ಧಬುಧಾಶ್ರಯಂ ರಸಾ
ಸ್ಪದಬಹುವೃಕ್ಷಕೇಳಿವನಸಂಗತಮೆಂದು ನಗುತ್ತುಮಿರ್ಪುದಾ
ತ್ರಿದಿವದ ಲಕ್ಷ್ಮಿಯಂ ನಿಯತಲಕ್ಷ್ಮಿಪುರಂ ನವಸೌಧರೋಚಿಯಿಂ || ೧೨೬

ವ || ತನ್ಮಧ್ಯದೊಳ್ –

ಕಂ || ಪರಿವೃತಪುರವರನರಸಾ
ಗರದೊಳಗಣ ತಡಿಯ ವಜ್ರವೇದಿಕೆಯೆಂಬಂ
ತಿರೆ ಸೊಗಯಿಸುವುದು ಧರಣೀ
ಶ್ವರಗೇಹವಿಶಾಲವಜ್ರನಿರ್ಮಿತಶಾಳಂ || ೧೨೭

ವ || ಅದರ್ಕೆ ಗಂಗಾದ್ವಾರಮಿರ್ಪಂತಿರ್ದ ಮಣಿಮಯದಿಂದ್ರಗೋಪಪೇಶಲದ್ವಾರದಿಂದೊಳಗೆ –

ಕಂ || ವಿಗಳನ್ನಿರ್ಝರಹರಿನೀ
ಳಗಿರೀಂದ್ರಮನೊಳಗುಮಾಡಿದುಜ್ಜ್ವಳತಾರಾ
ನಗಮೆನಿಪುದು ನಿರ್ಯದ್ದಾ
ನಗಜಂಗಳ ಸೌಧಶಾಲೆ ನೃಪಮಂದಿರದೊಳ್ || ೧೨೮

ಕಾಂತಕನಕಾದ್ರಿವಿಪುಳಗು
ಹಾಂತರದೊಳ್ ನಿಂದ ತರುಣಕೇಸರಿವಿಸರ
ಭ್ರಾಂತಿಯನೊದವಿಸುವುದು ಹಯ
ಸಂತತಿ ನೆಲಸಿರ್ದು ಹೊನ್ನ ಹೊಸ ಮಂದುರೆಯೊಳ್ || ೧೨೯

ವ || ಮತ್ತಮಲ್ಲಿಂದತ್ತ ಸಪ್ತಕಕ್ಷಪರಿಕ್ಷಿಪ್ತಮಾಗಿ –

ಮ || ಸ್ರ || ಅಡಕಿಲ್ಗೊಂಡಿರ್ದುವೇೞುಂ ಕುಳನಗಮೆನೆ ತದ್ಭೂಮಿಕಾಸಪ್ತಕಂ ಮುಂ
ದಿಡೆ ಚೆಲ್ವಂ ನಾಡೆ ಚೂಡಾಮಣಿಕಳಶಶಿರೋಭಾಗದೊಳ್ ಭಾಸ್ಕರಂ ಕ
ನ್ನಡಿಯಂ ಪೋಲ್ತೊಪ್ಪೆ ಮಧ್ಯಂದಿನದೊಳತುಳಗೋಪಾನಸೀಕಂಗಳೊಳ್ ಮೈ
ದೊಡವಪ್ಪನ್ನಂ ಮುಗಿಲ್ ಕನ್ನಡಿಪುದು ಕರುಮಾಡಂ ನೃಪಶ್ರೀಯಪೆರ್ಚಂ || ೧೩೦

ಕಂ || ಅದಱ ಹರಿನೀಲಕೂಟಾ
ಗ್ರದೀಧಿತಿಪ್ರತತಿ ಬೆರಸೆ ನಿಜಕರದೊಳ್ ತ
ನ್ನುದರಕಳಂಕಮನೆತ್ತಂ
ಕೆದಱುವವೋಲಿರುಳೊಳಲ್ಲಿ ಶಶಿಯೆಸೆದಿರ್ಪಂ || ೧೩೧

ವ || ಅದಲ್ಲದೆಯುಂ ವಿವಿಧಪ್ರದೇಶಂಗಳೊಳ್ ವಿರಚಿಸಿದ –

ಚಂ || ಕಡೆಪದ ಕಾಂತಿ ಕಂಡರಣೆಯುನ್ನತಿ ಚಿತ್ರದ ಚಿತ್ರವೃತ್ತಿ ಬೇ
ಗಡೆವೆಸದೇೞ್ಗೆಯಲ್ಲಿ ಪೊಸತಾದುದೆನುತ್ತದುಗಂಡು ವಿಸ್ಮಯಂ
ಬಡನೆ ಮಯಂ ಬೆರಲ್ಮಿಡಿಯನೇ ಸುರವರ್ಧಕಿ ರೋಮಹರ್ಷದೊಳ್
ತೊಡರನೆ ಚೀರಘಟ್ಟಿ ನಲವಿಂ ತಲೆದೂಗನೆ ಪದ್ಮಸಂಭವಂ || ೧೩೨

ವ || ತತ್ಪುರೋಭಾಗದೊಳ್ –

ಮ || ಸ್ರ || ನವಮಲ್ಲೀಜಾಲಮೋಹಾಕುಳಮಧುಕರಲೇಲಿಹ್ಯಮಾನೋದ್ಘಮುಕ್ತಾ
ನಿವಹಂ ಕೃಷ್ಣಾಹಿಶಂಕಾತುರಗೃಹಶಿಖಿಚೋಚುಂಬ್ಯಮಾನೇಂದ್ರಲೀಲಾಂ
ಶುವಿಶೇಷಂ ಚಂದ್ರಿಕಾಸಂಶಯಚಟುಳಚಕೋರೌಘಪೇಪೀಯಮಾನಾ
ಗ್ರವಿಭಾಗಸ್ಥೇಂದುಕಾಂತದ್ಯುತಿ ಸೊಗಯಿಸುಗುಂ ಕಾಯಮಾನಂ ಸಮಾನಂ || ೧೩೩

ಕಂ || ಗಿರಿಪತಿಸೇವಾರ್ಥಂ ಕುಳ
ಗಿರಿಗಳ್ ಬಂದೆಳಸಿ ಬಳಸಿ ನಿಂದವೊಲಂತಾ
ಕರುಮಾಡುಮನೆತ್ತಲುಮಾ
ವರಿಸಿದ ವರಶಿಖರರತ್ನ ಹರ್ಮ್ಯಾವಳಿಗಳ್ || ೧೩೪

ವ || ಅಲ್ಲಿ –

ಮ || ಸ್ರ || ಘನದೂರ್ವಾಸಕ್ತಿಯಂ ಗಾರುಡಮಣಿರುಚಿಯೊಳ್‌ದಾವವಿಭ್ರಾಂತಿಯಂ ಕಾಂ
ಚನಭಿತ್ತಿವ್ರಾತದೊಳ್ ನಿರ್ಮಳಜಳರುಚಿಯಂ ಸಾಟಿಕಗ್ರಾವಬದ್ಧಾ
ವನಿಯೊಳ್ ವಾನೇಚರಸ್ತ್ರೀಭ್ರಮಮನತುಳನೀಳಾಶ್ಮಪಾಂಚಾಳಿಕಾದ
ರ್ಶನದೊಳ್‌ತಾಳುತ್ತುಮೆತ್ತಂ ಸುೞಿವುದುಮಹಿಭೃದ್ಗೇಹದೇಣೀಸಮೂಹಂ || ೧೩೫

ವ || ಮತ್ತಂ ತದ್ರಾಜಭವನದೇಕದೇಶದೊಳ್-

ಕಂ || ಒಳಗೆ ತಳತಳಿಪ ರತ್ನಂ
ಗಳಿನೊಪ್ಪುವ ನಿಸ್ತರಂಗಮೀಂಗಡಲೆಂಬ
ಗ್ಗಳಿಕೆಗೆಡೆಯಾಗಿ ತೊಳಗುವ
ಪಳಿಕಿನ ಮಾಣಿಕ್ಯಕೋಶಮಂದಿರಮೆಸೆಗುಂ || ೧೩೬

ಆಶೀವಿಷವಿಷಮೋರಗ
ರಾಶಿಯನೊಳಕೆಯ್ದು ವಿಪುಳಪಾತಾಳಳನಿವಾ
ಸಾಶಂಕೆಯನೀವುದು ನಿಚಿ
ತಾಶೇಷಾಸ್ತ್ರಾಳಿ ಜಯನಶಾಲಿಕೆಯದಱೊಳ್ || ೧೩೭

|| ಮಾಲಿನೀವೃತ್ತಂ ||

ಸತತಸವನದುಗ್ಧಸ್ನಿಗ್ಧಕೇಳೀಮರಾಳಾ
ನ್ವಿತಮವಿರಳಧೂಪಾಮೋದಸಂಗಿಭೃಂಗಾ
ನ್ವಿತಮುದಿತಮೃದಂಗಧ್ವಾನನೃತ್ಯನ್ಮಯೂರಾಂ
ಚಿತಮೆಸೆವುದು ಕಾಂತಂ ದೇವಪೂಜಾನಿಶಾಂತಂ || ೧೩೮

ವ || ಅದಲ್ಲದೆಯುಂ –

ಮ || ವಿ || ವಿಕಿರತ್ಪುಷ್ಪಕದಂಬತಾರಕಿತಮಾಯಾತಪ್ರಯಾತಾಂಗನಾ
ನಿಕರೋದ್ಯಚ್ಚರಣಾಂಶುಪಲ್ಲವಿತಮನ್ಯೋರ್ವೀಶ್ವರವ್ರಾತದೂ
ತಕುಳಸ್ತೂಪಿತರತ್ನರುಕ್ಫಬಳಿತಂ ಯಾಮದ್ವಿಪೇಂದ್ರಪ್ರತಾ
ನಕಟೋನ್ಮುಕ್ತಮದೌಘಕರ್ದಮಿತಕಾಂತಂ ರಾಜಗೇಹಾಜಿರಂ || ೧೩೯

ವ || ಮತ್ತಂ –

ಮ || ಸ್ರ || ಅದಱೊಳ್‌ಸಾಮ್ರಾಜ್ಯಸೌಖ್ಯೋಲ್ಲಸಿತಹೃದಯನಿರ್ಪಂ ಧರಾಧೀಶ್ವರಂ ದು
ರ್ಮದಭೂಭೃತ್ಪಾತಿಖಡ್ಗಾಶನಿವಿಳಸನಮೇಘಾಗಮಂ ವಂದಿವಾಂಛಾ
ಪ್ರದವಾರ್ಯೌದಾರ್ಯಕಲ್ಪದ್ರುಮಕನಕನಗಂ ಕೀರ್ತಿಗಂಗಾಪ್ರವಾಹಾ
ಭ್ಯುದಯಪ್ರಾಲೇಯಶೈಲಂ ಕವಿಕುಳಕಳಭವ್ರಾತಯೂಧಾಧಿನಾಥಂ || ೧೪೦

ಗದ್ಯಂ

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್
ಕಥಾವತರಣವರ್ಣನಂ
ಪ್ರಥಮಾಶ್ವಾಸಂ