ಕರಟನಿಘರ್ಷಣದೆ ಮದಂ
ಬೊರೆದಾನೆಯ ಕೈಯನಳಿಗಳಾವರಿಸಿದವೊಲ್
ಮರಕತಕಂಕಣಮೆಸೆದುವು
ತಿರುವೊಯ್ಲಿಂ ಕರ್ಪುವೆತ್ತ ತತ್ಕರಯುಗದೊಳ್ || ೬೧

ಅರುಣತಲದ್ಯುತಿತತಿಯೆಡೆ
ದೆರಪುಗಳಿಂದುಣ್ಮುವಂದದಿಂ ಕೆಂಬೆರಲುಂ
ಗುರದಿನೊಗೆವರುಣರುಚಿಮಂ
ಜರಿ ತಳಿರ್ವೇಱಿಸಿದುದೈದೆ ಕರಶಾಖೆಗಳಂ || ೬೨

ಕರೆ ಕತ್ತರಿಸಿದ ಚೀನಾಂ
ಬರದೊಪ್ಪುವ ಸುತ್ತಿನಿಂದೆ ಡಿಂಡೀರಪರಂ
ಪರೆ ಬಳಸಿದಮಳಕಮಳಾ
ಕರಮೆನೆ ನೇತ್ರಾಳಿಗಿತ್ತನಾಕರ್ಷಣಮಂ || ೬೩

ಉ || ಪೂಗಣೆ ಕರ್ವುವಿಲ್ ಮಿಳಿರ್ವ ಮೀಂಗುಡಿ ಮಲ್ಲಿಗೆ ಮಾವು ತೆಂಬೆರಲ್
ಕೋಗಿಲೆ ಜೊನ್ನಮಿಂದೊಳದ ನುಣ್ದನಿ ಸುಗ್ಗಿಯೆನಿಪ್ಪವೆಲ್ಲಮೊಂ
ದಾಗಿಯೆ ದರ್ಪಕಂಗೆ ಸಮನಿಪ್ಪ ಜಗಜ್ಜಯದರ್ಪಮಂ ಸಮಂ
ತಾಗಿಸಲೊಂದೆ ಸಾಲ್ಗುಮೆನಿಸಿತ್ತು ಕುಮಾರಕೃತಪ್ರಸಾಧನಂ || ೬೪

ವ || ಆ ಪ್ರಸ್ತಾವದೊಳನೇಕಾಂತಃಪುರಕಾಂತೆಯರುಂ ಶಶಿಪ್ರಭಾಪ್ರಸಾಧನಕರಣನಿರತೆಯರಾಗಿ ಶರದದ ನಿಱಿಮುಗಿಲ ತುಱುಗಲನೆಡೆಗಲಸಿದ ವಿದ್ಯಾಧರಿಯ ಪರಿಯನನುಕರಿಸೆ ಪೊಸದುಗುಲಮಂ ನಿಱಿವಿಡಿದುಡಿಸಿಯುಂ ಘುಸೃಣರಸದಿನಸುಗೆದಳಿರಂ ತೊಯ್ವಂತೆಯಾವಕದ್ರವದಿಂ ಪದತಳಮಂ ಲೇಸೆನಿಸಿಯುಂ ಚರಣನಖಚಂದ್ರಮಂಡಳಕ್ಕೆ ಪರಿವೇಷಮಂ ಪಡೆವಂತೆ ಬೆರಕೆವೆಳಗು ಬಳಸೆ ನವರತ್ನನೂಪುರಂಗಳಂ ತುಡಿಸಿಯುಂ ಮನೋಜಗಜಕುಂಭದೊಳ್ ನಕ್ಷತ್ರಮಾಲೆಯಂ ಸುತ್ತುವಂತೆ ರತ್ನರಶನಾಸೂತ್ರಮಂ ವೃತ್ತಕಟಿಯೊಳ್ ವೇಷ್ಟಿಸಿಯುಂ ಮದನಮಂಗಳಭೃಂಗಾರಂಗಳಂ ಬರ್ಚಿಸುವಂತೆ ಮೊಲೆಗೆಲದೊಳ್ ಕಸ್ತೂರಿಕಾಪತ್ರಭಂಗಮಂ ಚಿತ್ರಿಸಿಯುಂ ದರಹಾಸಭಾಸುರಮುಖ ಸರೋರುಹಮೃಣಾಳನಾಳಂಗಳೆನಿಸಿ ಪೊಳೆವ ಮುತ್ತಿನ ಸರಂಗಳಂ ಕೊರಲೊಳಿಕ್ಕಿಯುಂ ಕೋಮಲಬಾಹಾಲತೆಗಾಲವಾಳವಳಯಮಂ ಸಮೆವಂತೆ ಕನಕವಳಯಮಂ ಮುಂಗೈಯೊಳ್ ಸಂಗಳಿಸಿಯುಂ ಮದನಮೋಹನಶರಂಗಳಂ ಪಲತೆಱದಲರ್ಗಳಿಂದರ್ಚಿಸುವಂತೆ ಪೊಸಪರಿಯ ಕೇವಣದುಂಗುರಂಗಳಂ ಬೆರಲ್ಗಳೊಳ್ ನಿರವಿಸಿಯುಂ ಮನ್ಮಥಮನೋ ರಥಕ್ಕೆ ರಥಾಂಗಯುಗಳಮಂ ಸಂಗಳಿಸುವಂತೆ ಮೊಗಕ್ಕೆ ಸೊಗಯಿಸುವ ರತ್ನ ರಚನೆಯೋಲೆಯಂ ಪಾಲೆಯೊಳ್ ತೊಡರ್ಚಿಯುಂ ಕರ್ಣಾವತಂಸದೊಳ್ ಕೀಲಿಸಿದ ನೀಲದುನ್ಮುಖಮಯೂಖಸಂಕುಳಂ ಕೊಡಂಕೆಯೊಳ್ ತಿಂಬಿತೆಂಬಂತೆ ಕೊಗ್ಗಿಯ ಕತ್ತುರಿಯಂ ಪತ್ತಿಸಿಯುಂ ಬೆಳತಿಗೆಗಣ್ಣ ಬಳವಿಗಿದುವೆ ಗುಱಿಯೆಂದು ಕುಱುಪನಿಕ್ಕುವಂತೆ ಕೊನೆಗೊಡಂಕೆಯೊಳ್ ತೋರಮುತ್ತಿನ ಮುಗುಳಂ ತೆಗಳ್ಚಿಯುಂ ನೇತ್ರಪುತ್ರಿಕೆಗೆ ನಿರ್ವಾಣ ರೇಖೆವಡೆವಂತೆ ನಗೆಗಣ್ಗಳೊಳ್ ಕಜ್ಜಳರೇಖೆಯನಳಂಕರಿಸಿಯುಂ ಕರ್ವುವಿಲ್ಲಂ ಗೊಲೆಗೊತ್ತುವಂತೆ ನಿಡುವುರ್ವಂ ಕುಡುವುರ್ವಾಗೆ ಸಮಱಿಯುಂ ವದನನಳಿನಮಂ ಬಳಸಿದಳಿಮಾಲೆಯೆನಿಸಿ ಸುೞಿಗುರುಳನಳವಡಿಸಿಯುಮನಂತರಂ –

ಚಂ || ಲಳನೆಯ ಕೇಶದಲ್ಲಿಯಲರುಂ ತಳಿರುಂ ಪೊಳೆವಂದದಿಂದೆ ಕೋ
ಮಳನಖಕಾಂತಿಯುಂ ಮೃದುತಳದ್ಯುತಿಯುಂ ನಿಮಿರ್ವನ್ನಮೊಯ್ಯನಾ
ಗಳೆ ತಲೆವಿಕ್ಕಿ ಕಱ್ತಲೆಗಮಿಂದುಮರೀಚಿಗಮಾಯ್ತು ನಾಡೆ ಕ
ಣ್ಗಳವಡೆ ಮಲ್ಲಯುದ್ಧಮೆನೆ ದೇಸೆಯ ಪೂಮುಡಿಯಂ ತೊಡರ್ಚಿದರ್ || ೬೫

ಕಂ || ಮಳಯಜಮೃಗಮದಪಂಕಂ
ಗಳಿನಡಕಿಲ್ಬೊಟ್ಟನೊರ್ವಳಾಕೆಯ ಭಾಳ
ಸ್ಥಳಿಯೊಳಳವಡಿಸಿದಳ್ ಸ್ಮರ
ಕುಳದೇವತೆ ಮಿಸುಪ ನೊಸಲ ಕಣ್ದೋೞಿದವೋಲ್ || ೬೬

ವ || ಅಂತಲಂಕರಿಸಿ –

ಚಂ || ಮಸೆದಸಮಾಸ್ತ್ರನುನ್ಮದನಬಾಣಶಲಾಕೆ ವಿಳಾಸದಿಂದಮೇ
ಱಿಸಿದಲರ್ವಿಲ್ಲನೈಕ್ಷವಧನುರ್ಲತೆ ಬರ್ಚಿಸಿ ಮೀನಕೇತುವೆ
ತ್ತಿಸಿದ ಸಮುಲ್ಲಸಜ್ಝಷಪತಾಕೆಯೆನಿಪ್ಪವೊಲಾಂತಳಾಕೆಯಾ
ಪಸದನದೊಳ್ ಜಗತ್ತ್ರಿತಯಚಿತ್ತವಿಮೋಹನಶಕ್ತಿಯೇೞ್ಗೆಯಂ || ೬೭

ಕಂ || ಆಗಳ್-

ಚಂ || ಕಟಿ ಕಳಕಾಂಚಿಯಿಂದೆ ಕಳಕಾಂಚಿಯುಮೀಕಟಿಯಿಂ ಕರಂ ಕನ
ತ್ಕಟಕದಿನೀ ಕನತ್ಕಟಕಮುಂ ಕರದಿಂ ನಿಟಿಲಂ ಲಲಾಮದಿಂ
ನಿಟಿಲದಿನಾ ಲಲಾಮಮುಮಲಂಕರಿಸಿರ್ದುವೆನುತ್ತೆ ನೋಡಿದ
ಘಟಕುಚೆಯರ್ ಸಮಂದರುತುಮಾಕೆಯ ಭೂಷ್ಯವಿಭೂಷಣಂಗಳಂ || ೬೮

ವ || ಅದಲ್ಲದೆಯುಂ –

ಕಂ || ಬಡತನಮನಾಂತ ನಡು ಕೊ
ರ್ವಡರ್ದ ಕುಚಂ ಬಿಣ್ಪನಾಳ್ದ ಜಘನಂ ಬೆಳರ್ಗೆಂ
ಪಿಡಿದಧರಮಿಂಪನಪ್ಪಿದ
ನುಡಿ ತಡೆಪಂಬೆತ್ತ ನಡೆ ನಿಜಂ ಕೋಮಳೆಯಾ || ೬೯

ಕಂ || ಎಂದು ಚತುರಯುವತಿಯರ್ ಪೊಗೞುತ್ತಿರ್ಪಿನಂ ವಿವಾಹಲಗ್ನಂ ಸಾರ್ತಂದುದೆಂದು ಬರವೇೞಲೊಡಂ –

ಮ || ವಿ || ನಭಮಂ ಸಂಜೆಮುಗಿಲ್ ಪಗಿಲ್ತ ತೆಱದಿಂ ತಳ್ಪೊಯ್ಯೆ ಭೂಷಾಮಣಿ
ಪ್ರಭೆ ದಿಕ್ಚಕ್ರಮನಚ್ಚಜೊನ್ನಮೆಳಸಿತ್ತೆಂಬನ್ನೆಗಂ ತುಂಬೆ ದೃ
ಕ್ಪ್ರಭೆ ಭೂಭಾಗಮನೆಯ್ದೆಬೆಳ್ಪಮರ್ದ ಪಾಂಗಿಂ ಪೆರ್ಚೆ ಪಾದೋಲ್ಲಸ
ತ್ಪ್ರಭೆ ಬಂದಳ್ ಕುಡುತುಂ ಶಶಿಪ್ರಭೆ ಜನಾಕ್ಷೀಂದೀವರಾನಂದಮಂ || ೭೦

ಮ || ಸ್ರ || ಉರದೊಳ್ ಹಾರಾಂಶು ಗಂಡಸ್ಥಳಿಯೊಳಮಳಕರ್ಣಾವತಂಸಾಂಶು ಮತ್ತಂ
ಶಿರದೊಳ್ ರತ್ನಾವಳೀಶೇಖರಶಿಖರಸಮುತ್ತಾಂಶುಗಳ್ ಮೊತ್ತಮಂ ಬಿ
ತ್ತರಿಪನ್ನಂ ಸಿದ್ಧವಿದ್ಯಾಧರದಿವಿಜಕುಮಾರರ್ಕಳಂ ಚೆಲ್ವಿನಿಂ ಮಾಂ
ಕರಿಸುತ್ತುಂ ಬಂದನಾಸಾದಿತನಿರುಪಮಶೃಂಗಾರಸಾರಂ ಕುಮಾರಂ || ೭೧

ವ || ಅಂತು ಬಂದ ವಧೂಕಾಂತರಿರ್ವರುಮಂ ವಿವಾಹವೇದಿಕಾಮಧ್ಯದೊಳ್ ದಳಿಂಬದಿಂ ಪಚ್ಚವಡಿಸಿದ ಪಳಿಕಿನ ಪಟ್ಟವಣೆಯೊಳಿರಿಸಿ ಮುನ್ನಮೆ ಹುತಾಗ್ನಿಯಾಗಿರ್ದ ಪುರೋಹಿತಂ ಪ್ರಣವಪೂರ್ವಕಮುಚ್ಚರಿಸಿದ ಪುಣ್ಯಾಹರವದೊಡನೆ –

ಮ || ವಿ || ಮುಗುಳಂ ಪೇಱಿದ ಕುಂದವಲ್ಲಿಗಮರಲ್ತಂದಾ ಕದಂಬೋದ್ಘಶಾ
ಖೆಗಮಚ್ಛಾಂಬುವನಂಬುದಂ ಕಱೆವ ಪಾಂಗಿಂ ಸಾತ್ವಿಕಸ್ವೇದಬಿಂ
ದುಗೆ ರೋಮೋದ್ಗತಿಗಿದರ್ಕೆಯಾದ ಸುತೆಗಂ ಜಾಮಾತೃಗಂ ಪ್ರೀತಿ ಕೈ
ಮಿಗೆ ಕೈನೀರೆಱೆದಂ ಕನತ್ಕಳಶಹಸ್ತಂ ತಜ್ಜಯಶ್ರೀಪ್ರಿಯಂ || ೭೨

ವ || ಆ ಪ್ರಸ್ತಾವದೊಳ್ –

ಕಂ || ಮುಸುಕಿದುದು ದುಂದುಭಿದ್ವನಿ
ದೆಸೆಯಂ ಮಾಂಗಲ್ಯಗೀತರುತಿ ತಿಂಬಿದುದಾ
ಗಸಮಂ ಶಂಖಧ್ವನಿ ಪೂ
ರಿಸಿದುದು ತಳ್ಪೊಯ್ದು ರೋದಸೀಮಂಡಳಮಂ || ೭೩

ವ || ಅನಂತರಂ –

ಕಂ || ಪ್ರಿಯತರಲವಂಗಲವಲೀ
ದ್ವಯಕ್ಕಮೇಕೈಕಲಲಿತಶಾಖಾಯೋಗಂ
ನಯದಿಂಸಮನಿಪವೋಲಾ
ಪ್ರಿಯಂಗಮಾ ಪ್ರಿಯೆಗಮಾಯ್ತು ಪಾಣಿಗ್ರಹಣಂ || ೭೪

ನಳಿನಿಯ ನಳಿನಮನಿನನಾ
ಕಳಿಪಂತಿರೆ ಕರದೆ ವಧುವ ಕರಮಂ ಕರದಿಂ
ತಳೆದಂ ಕುಮಾರನಾರ್ದ್ರಾಂ
ಗುಳಿದಳಕಂಟಕಿತಬಾಹುನಾಳಾನ್ವಿತಮಂ || ೭೫

|| ಮಾಲಿನಿ ||

ಮನವನೊಲಿಸೆ ತಿರ್ಯಗ್ವರ್ತಿತಸ್ಮೇರತಾರಂ
ಜನಪತಿಸುತನಾಗಳ್ ಕಾಂತೆಯಂ ನೋಡಿದಂ ಮೆ
ಲ್ಲನೆ ಸಮದಸಲೀಲಾಪಾಂಗದಿಂ ನೋೞ್ಪವೋಲ್ ಹ
ಸ್ತಿನಿಯನಿನಿಯನಾರ್ದ್ರಪ್ರೇಮದಿಂ ಸಾಮಜೇಂದ್ರಂ || ೭೬

ಚಂ || ಮಸಪಳಿಪಿಂ ಪ್ರಿಯಾನನಮನೀಕ್ಷಿಸಲುದ್ಯತೆಯಾಗಿ ತಾನೆ ಲ
ಜ್ಜಿಸಿ ತಲೆವಾಗಿ ಕಂಡು ಮಣಿಕುಟ್ಟಿಮದೊಳ್ ನೆಱೆ ನೋಡಿ ಮತ್ತೆ ಮಾ
ನಸದೊಳಗಿಟ್ಟೊಡಂ ನವಸುಖಾನುಭವಕ್ಕರೆಮುಚ್ಚಿ ಕಣ್ಗಳಂ
ಪಸರಿಪ ಹೋಮಧೂಮತತಿಗಂದು ಶಶಿಪ್ರಭೆ ದೂಱನೇ ಱಿಪಳ್ || ೭೭

ವ || ಅಂತು ಪರಸ್ಪರಲೀಲಾವಲೋಕನಸುಖಮನನುಭವಿಸಿ ಬೞಿಯಂ ಪುರೋಹಿತಾದೇಶದಿಂ ಹೋಮಾಗ್ನಿಯಂ ಪ್ರದಕ್ಷಿಣಂಗೈದು ಲಾಜಾಂಜಲಿಯನಿಕ್ಕಿ ಬಂದೊಂದೆಪಸೆಯೊಳ್ ಕುಳ್ಳಿರ್ದನೇಕಾಶೀರ್ವಾದಪುರಸ್ಸರಮಾರ್ದ್ರಾಕ್ಷತಾರೋಪಣಮಂಗಳಮನಂಗೀಕರಸೆ –

ಕಂ || ಆ ರಮಣೀರಮಣರ ಶೃಂ
ಗಾರರಸಾಪೂರ್ವತರತರಂಗಿಣಿಯೊಳದೇಂ
ಪಾರೈಸಿ ತೊಳಲ್ದುವೊ ರಸ
ಪೂರದ ಮೀಂಗಳನೆ ಪೋಲ್ತು ನೋೞ್ಪರ ಕಣ್ಗಳ್ || ೭೮

ಚಂ || ರತಿಯೊಡನಿಂದ್ರನೆಂತು ನೆರೆದಂ ಶಚಿಯೊಳ್ ಸ್ಮರನೆಂತು ನಾಡೆ ಸಂ
ಗತಿವಡೆದಂ ದಲೆಂದವಳ ರೂಪುಮನಾತನ ಲೀಲೆಯಂ ಮನ
ಕ್ಕತಿಶಯಮಾಗೆ ಮತ್ತವಳ ಲೀಲೆಯನಾತನ ರೂಪುಮಂ ಜನ
ಪ್ರತತಿ ಮರಲ್ದು ನೋಡಿದುದು ನಿಂದು ವಿವಾಹಗೃಹೈಕದೇಶದೊಳ್ || ೭೯

ವ || ಅಲ್ಲಿ ಕೆಲಂಬರ್ –

ಉ || ಇಂದು ಪಯೋಜಜಂಗೆ ಕೃತಕೃತ್ಯತೆ ಸಾರ್ದುದು ಪುಷ್ಪಸಾಯಕಂ
ಗಿಂದೊಳಸೋರ್ದುದೇಸುವೆಸನಿಂದು ಸನಾಭಿಜಕ್ಕೊಡರ್ಚಿತಾ
ನಂದಪರಂಪರಾಜನನಮಿಂದು ಫಲಂ ಪೊಸಜವ್ವನಕ್ಕಮಾ
ಯ್ತಿಂದು ಸುರೂಪವೃತ್ತಿ ದೊರೆವೆತ್ತುದು ನಾಡೆಯುಮೆಂದು ನೋಡಿದರ್ || ೮೦

ವ || ಅನ್ನೆಗಂ ಜಯಶ್ರೀಮಹಾದೇವಿಯಂತಃಪುರಕಾಂತಾಜನಕ್ಕಂ ಪ್ರಧಾನ ವಧೂಜನಕ್ಕಂ ಸಾಮಂತಸೀಮಂತಿನೀನಿವಹಕ್ಕಂ ಪುರಪುರಂಧ್ರೀಸಮೂಹಕ್ಕಂ ವಾರನಾರೀಪ್ರತಾನಕ್ಕಂ ತಾನುಂ ಪರಿಚಾರಿಕಾಜನಮುಂ ಕೈಗೈಯೊಳ್ –

ಚಂ || ವಿದಳಿತಪುಷ್ಪಮಾಲಿಕೆಗಳಿಂ ಮಳಯೋದ್ಭವದಿಂ ತೊಳಪ್ಪ ರ
ನ್ನದ ತೊಡವಿಂದಳಂಕರಿಸಿ ಕಾಂಚನಭಾಜನದಿಂದೆ ಪಂಚರ
ತ್ನದ ಘನಸಾರವಾರಿಯ ಮೃಗೋತ್ಥಕುಳುತ್ಥದ ಬಾಯಿನಂಗಳಂ
ಮುದದೊದವಿಂದಮಿತ್ತು ಮೆಱೆದರ್ ನೆಲೆವೆರ್ಚಿದುದಾತ್ತವೃತ್ತಿಯಂ || ೮೧

ಹೃದಯದೊಳೆನ್ನವರ್ ಪೆಱರಿವರ್ ಧನಿಕರ್ ಬಡವರ್ ಸಮಂತು ಬೇ
ಡದವರಡುರ್ತು ಬೇಡಿದವರೆನ್ನದೆ ರನ್ನದ ಪೊನ್ನ ಚಿತ್ರವ
ಸ್ತ್ರದ ಪೊಸಪಚ್ಚದೊಟ್ಟಿಲನೆ ಕೋಶಗೃಹಂ ಬಱಿದಾಗೆ ಕೊಟ್ಟು ಮಾ
ಣದೆ ಮಗುೞಾನೆಯಂ ಕುದುರೆಯಂ ಧರಣೀಪತಿ ಸಾಱಿ ಬೀಱಿದಂ || ೮೨

ವ || ಆ ವಿವಾಹಕಲ್ಯಾಣಾನಂತರಂ –

ಚಂ || ಎಡೆಗುಡೆ ಸಾರ್ದು ಕೇಳಲೆಳಸುತ್ತಿರೆ ಮಾತಱಿದಾಡಿ ಕೇಳಿಯೊಳ್
ತೊಡರ್ದಿರೆ ಸೋಂಕಿ ಮೆಯ್ಯನಿನಿತೊಪ್ಪಿಸೆ ಪಾಂಗೞಿದಪ್ಪಿ ತಾಂ ಮೊಗಂ
ಗುಡೆ ಪದವೆತ್ತು ಚುಂಬಿಸಿ ಭಯಂಗೆಯ ಬಲ್ವೆಣಸಂ ಪೊದೞ್ಚಿ ನಾ
ಣ್ಗಿಡೆ ನೆರೆದೂಢೆಯಂ ಪ್ರಥಮಸಂಗಮದೊಳ್ ಕುವರಂ ಮರುಳ್ಚಿದಂ || ೮೩

ಕಂ || ಮಸಪ ನಸುಲಜ್ಜೆಯಂ ಮಾ
ಣಸಿದುದು ಬಾಯ್ಗೂಟದಿಂಪು ಮಣಿತಮುಮಂ ಮ
ೞ್ಗಿಸಿದುದು ಮೆಯ್ಸೋಂಕಿನ ಹರ
ವಸವಱಿವುಮನರರೆ ತೂಳ್ದಿದುದು ಪೊಸಸುಸಿಲೊಳ್ || ೮೪

ಉ || ಚುಂಬನಮೊರ್ಮೆಗೊರ್ಮೆ ತನಿವೆರ್ಚುವುದಪ್ಪಿರದೊರ್ಮೆಗೊರ್ಮೆಮ
ತ್ತಂ ಬಿಗುಪೇಱುತಿರ್ಪುದು ವಿಳಾಸದ ಗೆಯ್ತಮದೊರ್ಮೆಗೊರ್ಮೆಗಿಂ
ಪಿಂ ಬಗೆಯಂ ಮರುಳ್ಚುವುದು ನುಣ್ನುಡಿಯುಂ ಕಿವಿಗೊರ್ಮೆಗೊರ್ಮೆ ಸೋ
ಲಂಬಡೆಯುತ್ತುಮಿರ್ಪುದವರ್ಗಳ್ಗವಕಾಶಮದುಂಟೆ ಬೇಟದೊಳ್ || ೮೫

ಚಂ || ಅನವರತಂ ರತೋತ್ಸವದೊಳುಣ್ಮುವ ಘರ್ಮಜಲಂಗಳಿಂದೆ ಮ
ಜ್ಜನಮನತಿಪ್ರಿಯಾಧರಸುಧಾರಸಸೇವನೆಯಿಂದಮೂಟಮಂ
ಮನದಱಿವಂ ಕೞಲ್ಚುವ ರತಾಂತಸುಖೋದಯದಿಂದೆ ನಿದ್ರೆಯಂ
ನೆನೆಯದೆ ಪೋದುವಂತವರ್ಗೆ ಚಿತ್ತಜಕೇಳಿಗಳಿಂದೆ ಪೊೞ್ತುಗಳ್ || ೮೬

ವ || ಅಂತು ಕತಿಪಯದಿನಂಗಳಂ ಪ್ರತಿದಿನಪ್ರವರ್ಧಮಾನನವಪ್ರಣಯಪ್ರಸ್ತುತವಿನೋದಂಗಳಿಂ ಕಳಿಪಿ ಬೞಿಯಂ ಜನನೀಜನಕದರ್ಶನೋತ್ಕಂಠತೆಯಿಂ ನಿಜಪುರಗಮನಾಭಿಮುಖನಾದ ಕುಮಾರನಭಿಪ್ರಾಯಮನಱಿದು ಜಯವರ್ಮಮಂಡಲೇಶ್ವರನಂ ನಿಜತನೂಜೆಯೊಡವೋ ಪಂತು ಚಾಮರದ ಕುಂಚದಡಪದ ಡವಕೆಯ ಕನ್ನಡಿಯ ಪಡಿಗದ ಪಾವುಗೆಯ ಸೆಜ್ಜೆಯ ಮಜ್ಜನದ ಖಜ್ಜಯದ ಹೀಲಿಕರಗದ ಬೋನದ ಪರಿಯಣದ ಮುಡಿಯಿಕ್ಕುವಡಿಯೂಡು ಪಡಿಗುಟ್ಟುವಾರತಿಯೆತ್ತುವ ತಿಳಕವಿಡುವ ನಿಱಿವಿಡಿದ ಮಾಲೆಸಮೆವ ಘಟ್ಟಿಮಗುಳ್ಚುವ ನೆಲನನುಗ್ಘುಡಿಪ ಪಲವುಂ ನಿಯೋಗದನ್ವಯಾಗತೆಯರುಮಪ್ಪ ಆಕಾರವತಿಯರಂ ವಿಳಾಸಿನೀಜನಂಗಳುಮನನುಜತನುಜ ಪ್ರೀತಿಯಿಂ ನಡೆಪಿದ ಕೇಳೀಕೀರಶಾರಿಕಾಪಾರಾವ ಪಾತ್ರಂಗಳುಮಪ್ಪ ಬರ್ಬರಶಾಕಬಧಿರವರ್ಷಧರಮೂಕಕಿರಾತಜಡುಲಗಡುಲ ಖಂಜರಂ ಜಕಸಮಾಜಮುಮಂ ವೈಣಿಕಪಾಣಿವಿಕವಾಂಶಿಕಮಾರ್ದಂಗಿ ಕಗಾಯಕನರ್ತಕಾದಿ ಕುತಪ ಪ್ರತತಿಯುಮಂ ಶಿಬಿಕಾಂದೋಳವಾಜಿವಾರಣವರೂಥವಿ ಸರಾದಿನಾನಾಯಾನಂಗಳುಮಂ ಅನುಕುಪ್ಯರೂಪ್ಯಕನಕಾಂಬರರತ್ನಾಭರಣಭಾರಧಾರಣ ಧೌರೇಯಮಹಾಕಾಯ ವೈವಧಿಕನಿಕರಮುಮಂ ಸಮಕಟ್ಟಿ ವಿಶಿಷ್ಟವಾರವಾಸರ ತಾರಾಕರಣಯೋಗಸಂಯೋಗದೊಳ್ ಮಗಳುಮನಳಿಯನುಮಂ ಬರಿಸಿ ಕುಳ್ಳಿರಿಸಿ –

ಉ || ನಿನ್ನಯ ಕೂಟಮಂ ಬಯಸಿ ಪೆತ್ತವಳೆಂತುಮೊಡಂಬಡಂ ದಿಟಂ
ನಿನ್ನ ಮನಕ್ಕೆ ಮಾಡಳದು ದೈವಕೃತಂ ದೊರೆಕೊಂಡುದಪ್ಪೊಡಂ
ಮನ್ನಿಪುದೆಮ್ಮ ಕಾರಣದಿನಿತ್ತಣ ಪಂಬಲನೀಕೆ ಮಾಡದಂ
ತಿನ್ನಡೆಯಿಪ್ಪುದೊಂದೆ ತೆಱನಪ್ಪುದಿದಂ ಸೆಱಗೊಡ್ಡಿ ಬೇಡಿದೆಂ || ೮೭

ವ || ಎಂದು ಕುಮಾರಂಗೆ ಪೇೞ್ದು ತಾನುಂ ಜಯಶ್ರೀಮಹಾದೇವಿಯುಂ ಶಶಿಪ್ರಭೆಯ ಮೊಗಮಂ ಪ್ರೇಮರಸವಿಸರವಿಲುಳಿತ ಲೋಚನಂಗಳಿಂ ನೋಡಿ –

ಉ || ಅಕ್ಕ ನಿಜಪ್ರಿಯಂಗೆ ಮನದನ್ನದೆ ನೀಂ ಬೆಸಕೆಯ್ವುದಾಗಳುಂ
ಮಕ್ಕಳ ಮಾೞ್ಕೆಯಿಂದಿರದೆ ನೀನೊಡವಂದ ಜನಕ್ಕೆ ಸಂತಸಂ
ಮೊಕ್ಕಳಮಾಗೆ ಮನ್ನಿಪುದು ಮಾವನ ಪೆರ್ಮೆಗಮತ್ತೆಯೊಲ್ಮೆಗಂ
ತಕ್ಕ ನೆಗೞ್ತೆಯಂ ನೆಗೞ್ವುದೀವುದು ಪೆತ್ತೆಮಗಂ ಪ್ರಮೋದಮಂ || ೮೮

ವ || ಎಂದು ಬುದ್ಧಿವೇೞ್ದು ಶೇಷಾಕ್ಷತಮನಿಕ್ಕಿ ಮಂಗಳಮೃದಂಗರವಮೆಸೆಯೆ ಪುರಮಂ ಪೊಱಮಟ್ಟು ಕಿಱಿದಂತರಮಂ ಕಳುಪಿ ಮಗುಳ್ದು ವಿಪುಳಪುರಮಂ ಪೊಕ್ಕರ್ ಇತ್ತ ಯುವರಾಜನಂ ನದ್ಯುಭಯತಟೋದ್ಯಾನಂಗಳೊಳಂ ಮಹಾಸರೋವರತೀರನಂದನಂಗಳೊಳಂ ಪರ್ವತನಿತಂಬಪಾವನವನಂಗಳೊಳಂ ಬಳ್ಳಮಾವುಗಳೆ ಬಳ್ಳಿಮಾಡಂಗಳಾಗೆಯುಂ ಶ್ರೀಖಂಡಷಂಡಂಗಳೆ ಪರಿಷನ್ಮಂಡಪಂಗಳಾಗೆಯುಂ ತಮಾಲಮಾಲೆಗಳೆ ಸಂಗೀತಶಾಲೆಗಳಾಗೆಯುಂ ಲತಾವಿತಾನಂಗಳೆ ವಿತಾನಂಗಳಾಗೆಯುಂ ಅದಿರ್ಮುತ್ತೆಯ ಸುತ್ತುಗಳೆ ತೆರೆಸುತ್ತುಗಳಾಗೆಯುಂ ಎಸಳಪಸರಂಗಳೆ ಮಸುರಿಗೆಗಳಾಗೆಯುಂ ಕೆಂದಳಿರ ಗೊಂದಳಂಗಳೆ ಬೊಂದರಿಗೆಗಳಾಗೆಯುಂ ಚಂಪಕವೀಧಿಗಳೆ ವಿನೋದವಿಹರಣವೀಧಿಗಳಾಗೆಯುಂ ಬೀಡುಬಿಡುತ್ತುಂ ಕೆಲವಾನುಂದಿವಸದಿಂದನ್ವಯಾಗತರಾಜಧಾನಿಯಂ ಕೌಶಲೆಯನೆಯ್ದಿ ಕ್ರೋಶದ್ವಯಮಾತ್ರದೊಳ್ ನಿಂದು ನಿಜಾಗಮನವಾರ್ತೆಯಂ ಜನಕನಲ್ಲಿಗೆ ವಾರ್ತಾಚರರ ಕೈಯೊಳಟ್ಟುವುದುಮವರ್ ಬಂದು ಓಲಗದೊಳಿರ್ದ ನರನಾಥಂಗಱಿಪಲೊಡಂ-

ಚಂ || ಕಡವಲರ್ದಂತೆ ಕಂಟಕಿತಮಾಗಿರೆ ಮೆಯ್ ಸರುಜಂ ರಸಾಯನಂ
ಬಡೆದವೊಲಾಗೆ ತಾಂ ಪೊದೆದ ಮೇಲುದಱಿಂ ಗುಡಿಯಂ ತೊಡರ್ಚಿ ದಾಮ
ಗುಡಿವಿಡೆ ಹರ್ಷಮೊಂದು ಪೊಱೆಯೇಱಿದನಿತ್ತಜಿತಂಜಯಂ ಮನ
ಕ್ಕೊಡರಿಸದಾರ್ಗೆ ರಾಗದೊದವಂ ಪಿರಿದುಂ ಪ್ರಿಯಬಂಧುಸಂಗಮಂ || ೮೯

ವ || ಆಗಳಾವಾರ್ತೆಯನಜಿತಸೇನಮಹಾದೇವಿ ಕೇಳ್ದು ಘನನಿನದಮಂ ಕೇಳ್ದ ಮಯೂರ ವನಿತೆಯಂತೆ ಮನಃಪ್ರಮೋದಮನೊಳಕೆಯ್ದು ಅರಸನಲ್ಲಿಗೆವಂದು ಚರರ್ಗಂಗಚಿತ್ತಮನಿತ್ತು ಪುರದೊಳೊಸಗೆಯಂ ಮಾಡಲ್ವೇೞ್ದು-

ಮ || ವಿ || ದೆಸೆಯಂ ವಾರ್ಧಿತರಂಗಮಾಲೆ ನೆಲನಂ ನೀಲಾಚಲಾನೀಕಮಾ
ಗಸಮಂ ಶಾರದನೀರದಪ್ರತತಿ ತಿಂಬಿತ್ತೆಂಬಿನಂ ಜಾತಿವಾ
ಜಿಸಮಾಜಂ ಮದವದ್ಗಜೇಂದ್ರಘಟೆ ಪಾಂಡುಚ್ಛತ್ರಷಂಡಂ ನಿಗುಂ
ಬಿಸೆ ಪುತ್ರಂಗಿದಿರ್ವಂದರಂದರಸಿಯುಂ ಭೂಪಾಲನುಂ ಲೀಲೆಯಿಂ || ೯೦

ವ || ಅಂತು ಬಂದು ವಾಹನದಿೞಿದು –

ಚಂ || ಚರಣಸರೋರುಹಕ್ಕೆ ಮಕುಟದ್ಯುತಿವಾರಿಗಳಿಂದೆ ಪಾದ್ಯಮಂ
ವಿರಚಿಸಿದಾತ್ಮಜಂಗೆ ಬಿಡುಮುತ್ತಿನ ಸೇಸೆಯನಿಕ್ಕುವಂದದಿಂ
ಸುರಿದು ಮುದಶ್ರುಬಿಂದುಚಯಮಂ ಬೞಿಯಂ ಪರಸುತ್ತೆ ಮತ್ತೆ ಮ
ತ್ತಿರದೊಲವಿಂದಮಪ್ಪಿ ಬಿಡದಿರ್ದನದೊಂದರೆಜಾವಮಂ ನೃಪಂ || ೯೧

ವ || ಅನಂತರಂ ನಿಜಪದಸರೋಜಕ್ಕಾನಂದಾಶ್ರುಬಿಂದುಗಳಿಂ ಮಕರಂದಬಿಂದುಗಳನೋಲಗಿಸಿದ ಕುಮಾರನನಜಿತಸೇನಮಹಾದೇವಿ ನಲ್ವರಕೆಯಿಂ ಪರಸಿ ಮೋಹರಸಪರವಶತೆಯಿಂ ತೊಱೆದ ಮೊಲೆಗೆಲಕ್ಕೆ ತೆಗೆದು ಪುಳಕಕಳಿಕಾಕುಳತೆಯಿಂ ಕದಂಬಕುಸುಮಸ್ರಜಂಗಳಂತಿರ್ದ ಭುಜವಲ್ಲರಿಗಳಿಂದಪ್ಪಿ –

ಉ || ಎನ್ನಯ ತಂದೆ ಬಂದನೆನಗಿಂದು ಮನೋರಥಸಿದ್ಧಿಯಾದುದಿಂ
ದುನ್ನತಿವೆತ್ತುದಗ್ರಮಹಿಷೀಪದಮಿಂದಧಿದೇವತಾಚಯಂ
ಸನ್ನಿದಮಾದುದೆಂದು ಸಿರಿಗಂಪಿನ ಪಂಕದೊಳಣ್ಪನಿಕ್ಕಿ ತಾಂ
ಜೊನ್ನದ ಜೊಂಪದೊಳ್ ನೆಲಸಿದಂತೆರ್ದೆಯಾಱಿದಳೊಪ್ಪಿ ತೋಱಿದಳ್ || ೯೨

ವ || ಆಗಳೆ ಪೊಡೆಮಟ್ಟ ಶಶಿಪ್ರಭೆಯನಖಂಡಿತಕರ್ಣಪತ್ರಶೋಭಾಪಾತ್ರೆಯಾಗೆಂದು ಪರಸಿಪುರಾಭಿಮುಖನಾಗಿ –

ಕಂ || ಬಡತನದೊಳ್ ಸಿರಿ ಮೆಯ್ ಬೆಮ
ರ್ವೆಡೆಯೊಳ್ ತಂಗಾಳಿ ಮರ್ವು ಪರ್ವಿದ ಸಮಯ
ಕ್ಕುಡುಪೋದಯಮೆಂಬಂದದೆ
ಗಡಣಿಸಿದುದು ಸುತನ ಬರವು ಬಯಸುವ ಪದದೊಳ್ || ೯೩

ಅಂದೆ ವಿಗತಾಶರಪ್ಪೆಮ
ಗಂ ದೇವಿಗಮಾಮುನೀಶ್ವರಂ ನಿಮ್ಮ ಸುತಂ
ಬಂದಪನೆಂಬಾದೇಶದಿ
ನಿಂದುವರಂ ಪಿಡಿದುದೊಡಲನಾಶಾಪಾಶಂ || ೯೪

ಅವಧರಿಪೊಡೆ ನೆಲನಂ ಪೊ
ಯ್ದವನ ಕರಂ ಬೆಟ್ಟಮೆಚ್ಚ ಧನ್ವಿಯ ಸರಲೆಂ
ಬಿವು ತಪ್ಪುವೊಡಂ ಪೋಲ್ವುವು
ಸವಣರ ನುಡಿಯೆಂದುಮೆಂತುಮೇಂ ತಪ್ಪುಗುಮೇ || ೯೫

ವ || ಎಂದು ಪಕ್ಕದಾನೆಗಳೊಳ್ ಬರ್ಪ ಸಾರ್ಥಿವರೊಳರಸಂ ನುಡಿಯುತುಂ ಬಂದನೇಕ ವಸನಕಿಸಲಯಕುಸುಮಮಣಿವಿಸರರಚಿತೋರಣಮಾಲಾಮನೋಹರಮುಂ ಅವಿರಳ ಕಾಶ್ಮೀರರಸವಿಸರಸಂಸ್ತಿಕರಾಜವೀಧೀಸನಾಥಮುಂ ಉಚ್ಛ್ರಿತಸಮೀಚೀನಚೀನಧ್ವಜ ವಿತಾನವಿರಾಜಿತಮುಂ ಉತ್ಸಾಹಪಟಹರಟನಪ್ರತಿನಾದಿತ ನಾನಾಪ್ರಾಸಾದಕುಂಜರಂಜಿತಮುಂ ಅಟ್ಟಾಳಸಾಳಗೋಪುರಸೌಧಸಂಕುಳಸಮಾರೂಢದರ್ಶನೋತ್ಸುಕಜನಜನಿತ ಸಂಕಟಮುಮಪ್ಪನಗರಿಯಂ ಪುಗುವಾಗಳ್ –

ಚಂ || ಪಸರಿಪ ಪಾದರಾಗಮಿಳೆಯಂ ತಳಿರೇಱಿಸೆ ಲೋಚನಾಂಶುಗಳ್
ದೆಸೆಯನಲರ್ಚೆ ದೇಹರುಚಿ ಪೊಂದೊಡವಂ ಗಗನಾಂಗದೊಳ್ ನಿಯೋ
ಜಿಸೆ ಕಳಕಾಂಚಿಕಾವಿರುತಿ ಕರ್ಣದೊಳಂಚೆಯ ತುಪ್ಪುೞಂಚೆಯಂ
ಪೊಸೆಯೆ ನಿರೀಕ್ಷಣವ್ಯಸನದಿಂ ನಡೆತಂದುದು ಸೌಂದರೀಜನಂ || ೯೬

ವ || ಅಂತು ಬಂದು –

ಮ || ಸ್ರ || ಜನಸಮ್ಮರ್ದೋತ್ಥಕೋಳಾಹಳಕುಪಿತಹಯಸ್ಕಂಧಮೂಲಸ್ಥಳಾಸ್ಫಾ
ಳನಲೀಲಂ ತಾಂ ಕುಮಾರಂ ಗಮನಚತುರಚಂಚದ್ವಶಾರೂಢೆ ತತ್ಕಾ
ಮಿನಿ ಮಾದ್ಯತ್ಕುಂಭಿಕುಂಭಸ್ಥಳನಿಹಿತನಿಶಾತಾಂಕುಶಂ ಭೂಭುಜಂ ಖ
ೞ್ಗಿನಿಕಾಯಪ್ರಾವೃತತೋದ್ಯನ್ಮಣಿಮಯಶಿಬಿಕಾರೂಢೆ ಮಾದೇವಿಯಲ್ತೇ || ೯೭

ವ || ಎಂದು ನುಡಿದ ಯುವತಿಯರ ನುಡಿಯೊಳ್ ತಡಂಗಲಸಿದ ಪುಣ್ಯಪಾಠಕಜನಂಗಳಾಶೀರ್ವಾದನಾದಮುಮಂ ಅಗಣ್ಯಪುಣ್ಯಾಂಗನಾಜನಂಗಳ್ ತಳಿವ ಶೇಷಾಕ್ಷತಂಗಳುಮಾ ಕರ್ಷಿಸುತ್ತುಮಾಂತುಕೊಳುತ್ತುಂ ಬಂದು ರಾಜಮಂದಿರಮಂ ಪೊಕ್ಕು ಕರುಮಾಡದ ಮೊದಲ ಭೂಮಿಕೆಯೊಳಿಕ್ಕಿದ ವಿಶಾಲಹಂಸತೂಲದೊಳರಸಿಯುಂ ತಾನುಂ ಕುಳ್ಳಿರ್ದು ಯುವರಾಜನುಮನೊಲ್ಲೆ ನೆನೆಯೆನೆ ತಮ್ಮ ಸಮೀಪದೊಳ್ ಕುಳ್ಳಿರಿಸಿ ಶಶಿಪ್ರಭೆಗೌಚಿತ್ಯಾ ಸನಮನಿತ್ತು ಅಶೇಷಪರಿವಾರಮಂ ವಿಸರ್ಜಿಸಿ –

ಕಂ || ಅಡಿಗಡಿಗಪ್ಪಿಕೊಳುತ್ತುಂ
ನುಡಿನುಡಿಗೊರ್ಮೊರ್ಮೆ ತೆಗೆದು ಮುಂಡಾಡುತ್ತುಂ
ಪಿಡಿದು ಚುಬುಕಾಗ್ರಮಂ ನಲ
ವೊಡರಿಸೆ ಮುದ್ದಾಡಿಸುತ್ತುಮಿರ್ದ ಸುತನಂ || ೯೮

ವ || ಇರ್ದು ಕಿಱಿದಾನುಂ ಬೇಗದಿಂ –

ಶಾ || ಏನೆಂದುಯ್ದನವಂ ಬೞಿಕ್ಕವನಿನಾದಾಪತ್ತದೇನಾತನಂ
ನೀನೇಗೆಯ್ದೆಯಿನಿತ್ತುಕಾಲಮಿರವೆಂತಾದತ್ತು ಮತ್ತೀವಿದಾ
ಹಾನಂದಂ ದೊರೆಕೊಂಡುದಾರಿನಿದು ಮಚ್ಚಿತ್ತಕ್ಕೆ ಚಿತ್ರಾವಹಂ
ತಾನೆಂದಾತ್ಮಜನಿಂ ನೃಪಂ ತಿಳಿದನಾ ವೃತ್ತಾಂತದಾದ್ಯಂತಮಂ || ೯೯

ವ || ತಿಳಿದು ಬೞಿಯಂ ಯಥೋಚಿತದಿವಸವ್ಯಾಪಾರಮಂ ತೀರ್ಚಿ ಪರಮ ಪ್ರಮೋದ ಪರಂಪರೆಯನಪ್ಪುಕೆಯ್ದಿರ್ಪಿನಂ –

ಮ || ವಿ || ಸ್ಫುರದುಗ್ರೋರಗಪೂರ್ವಮಪ್ಪ ರಸೆಯೊಳ್ ತಿಗ್ಮಾಂಶುಬಿಂಬೋದಯಂ
ಪಿರಿದುಂ ಚೋದ್ಯಮಿದೆಂಬಿನಂ ನಿಶಿತಶಸ್ತ್ರಾಕೀರ್ಣಮಪ್ಪಸ್ತ್ರಮಂ
ದಿರದೊಳ್ ಯಕ್ಷಸಹಸ್ರರಕ್ಷಿತಮುದಗ್ರಾರಾಂಶುಭಾರಂ ಭಯಾ
ತುರಚೇತಃಪರಚಕ್ರಮುಣ್ಮಿದುದು ಚಕ್ರಂ ವಿಕ್ರಮೈಕಕ್ರಮಂ || ೧೦೦

ವ || ಅಂತು ಪುಟ್ಟಿದ ಚಕ್ರೋತ್ಪತ್ತಿಯುತ್ಸವಮನಾಯುಧಾಧ್ಯಕ್ಷಂ ಬಂದರಸಂಗೆ ಬಿನ್ನವಿಸೆ ಮಗನ ಗಣ್ಯಪುಣ್ಯಪ್ರಭಾವಕ್ಕೆ ಮನದೊಳಾನಂದಮುಮನಾಶ್ಚರ್ಯಮುಮನಾಂತು ಕುಮಾರನಂ ಬರಿಸಿ –

ಚಂ || ಉದಯಿಸಿತಾಯುಧಾಲಯದೊಳಿಂದು ರಥಾಂಗಮದಲ್ತೆ ನಿನ್ನ ಪು
ಣ್ಯದ ಫಲಮಾಫಲಂ ಜಿನಪದಾಂಬುಜವರ್ಯಸಪರ್ಯೆಯಿಂದಮಾ
ಯ್ತದನಱಿದಿಚ್ಛೆಯರ್ಚನೆಗಳಿಂದೆ ತದಂಘ್ರಿಯನೈದೆ ಮುಂ ಬೞಿ
ಕ್ಕದನೊಲವಿಂದಮರ್ಚಿಸು ತನೂಭವ ಪೆರ್ಚಿಸು ರಾಜ್ಯಲಕ್ಷ್ಮಿಯಂ ೧೦೧

ವ || ಎಂದಾತನ ಮನೋಗತಾನುವಾದಮಂ ಮಾಡುವುದುಂ ಮಹಾವಿಭೂತಿಯಿಂ ಜಿನರಾಜಮಂದಿರಕ್ಕೆ ವಂದು

|| ರಗಳೆ ||

ಪ್ರಥಿತತೀರ್ಥಾಹ್ವಯಸರಿತ್ಸರಸ್ಸಲಿಲದಿಂ
ಪೃಥುಕಮಲಪರಿಮಲಪರಾಗಭರಕಲಿದಿಂ ||

ರಂಗಕಲಶೋನ್ಮಿಶ್ರಚಂದನಕ್ಷೋದದಿಂ
ಭೃಂಗಾಂಗನಾಕೃಷ್ಟಿಪರಿಣತಾಮೋದದಿಂ ||

ಶಶಿಶಕಲಸಮಕಳಮತಂಡುಲನಿಕಾಯದಿಂ
ವಿಶದಸದ್ಭಕ್ತಿಲತಿಕಾಂಕುರಪ್ರಾಯದಿಂ ||

ಅಪರಿಮಿತವಿಕಚಕುಸುಮಸ್ರಕ್ಸಮೂಹದಿಂ
ಸ್ವಪರಿಮಳಭರಜಡೀಕೃತಗಂಧವಾಹದಿಂ ||

ಅಕ್ಷೂಣಕನಕಪಾತ್ರೋದ್ಧೃತನಿವೇದ್ಯದಿಂ
ಭಕ್ಷೋಪದಂಶಘೃತಸಿತನಿಚಯಹೃದ್ಯದಿಂ ||

ವರ್ತಿಕಾರತ್ನಪ್ರಮಿತದೀಪ್ತದೀಪದಿಂ
ವರ್ತೀಕೃತೋದ್ಧೈಮಶಾರೀಕಳಾಪದಿಂ ||

ಲಸಿತಾಗುರುಪ್ರಬಳತರಧೂಪಧೂಮದಿಂ
ವಿಸರದಾಮೋದಾಧಿವಾಸಿತವ್ಯೋಮದಿಂ ||

ರಾಜಕದಳಾಮ್ರಜಂಬೀರಫಲಗುಚ್ಛದಿಂ
ಪೂಜನಾಮಾತ್ರಸಂಪಾದಿತಹೃದಿಚ್ಛದಿಂ ||

ಪರಮಜಿನರಾಜನಂ ದುರಿತಾಬ್ದರಾಜನಂ
ಪೂಜಿಸಿ ಸುಭಕ್ತಿಯಿಂ ರಾಜಿಸಿ ಮೃದೂಕ್ತಿಯಿಂ ||

ವಾಸ್ತವಗುಣಸ್ತವದೆ ಶಸ್ತರೂಪಸ್ತವದೆ
ಪೊಗೞ್ವೞ್ತಿವರೆ ತನಗೆ ಮಗುಳ್ದನಿಂತರಮನೆಗೆ || ೧೦೨

ವ || ಅನಂತರಂ ತನ್ನ ಪುಣ್ಯೋದಯಾಚಲದೊಳುದಯಿಸಿದ ತೇಜೋಮಾರ್ತಂಡಮಂಡಳದಂತೆ ಸೊಗಯಿಸುವ ಸುದರ್ಶನಮೆಂಬ ಚಕ್ರರತ್ನಮುಂ ತನ್ನ ಪೆಂಪಿನೊಳ್ ಸೆಣಸಿ ಕೀೞ್ವಟ್ಟು ಆಳ್ವೆಸಕ್ಕೆ ವಂದ ಗಗನತಳದಂತೆ ಪೆರ್ಮೆಯಂ ತಳೆದ ವಜ್ರಮಯವೆಂಬ ಚರ್ಮರತ್ನಮುಂ ತನ್ನ ಪುಣ್ಯಪ್ರಭಾವದಿಂ ನಿಯೋಗಿಸಿಟ್ಟನಿತೆ ಬೇಗದಿಂ ಬೆಟ್ಟಘಟ್ಟ ಹಳ್ಳಕೊಳ್ಳಮೆಂಬ ವಿಷಮಭೂತಳಮನನಿತುಮಂ ನಾಲ್ವತ್ತೆಂಟು ಯೋಜನಪ್ರಮಾಣ ವಿಸ್ತೀರ್ಣ ಕಟಕಕ್ಕೆ ಸುಖಪ್ರಯಾಣನಿಮಿತ್ತಂ ಸಮತಳಮಂ ಮಾಡೆ ಕೈಗೆ ಬಂದ ದಂಡರತ್ನಮುಂ ಕೂಟಮಂ ಬಯಸಿ ಬರಲ್ಕೆ ಸಾಮ್ರಾಜ್ಯಲಕ್ಷ್ಮಿ ಮುಂದಟ್ಟಿದ ಲೀಲಾ ಸನಾಳಧವಳಶತಪತ್ರಮೆನಿಪ ಸೂರ್ಯಪ್ರಭಮೆಂಬ ವಿಚಿತ್ರಚ್ಛತ್ರರತ್ನಮುಂ ತನ್ನ ವಿಶದಯಶಃ ಪ್ರಭಾವದೊಳ್‌ ಮುೞುಂಗಿ ಪಗಲೊಳಂ ವರ್ತಿಪಿಚ್ಛೆಯಿಂ ಬರ್ಚಿ ಬಂದ ಶಶಿಕಳೆಯ ದೆಂಬಂತೆಸೆವ ಚಿಂತಾಜನನಿಯೆಂಬ ಕಾಕಿಣೀರತ್ನಮುಂ ತನ್ನರಾತಿಗಳ ಜೀವನರಸಾ ಸ್ವಾದತೃಷ್ಣೆಯಿಂ ನಿಸ್ತ್ರಿಂಶಮಿಷದಿನೋಲಗಿಪ ಜವನ ನಾಲಗೆಯ ಪೋಲ್ವೆಯಾದ ಸೌಗಂಧಕಮೆಂಬ ಖಡ್ಗರತ್ನಮುಂ ತನ್ನ ಮಕುಟಕ್ಕೆ ಶಿಖಾಮಣಿಯಾಗಿ ಭುವನೈಕರಕ್ಷಾ ಮಣಿಯಪ್ಪ ಜಿನಚರಣನಖಕಿರಣಮಣಿಯೊಳೊಂದಿ ಪವಿತ್ರಮಪ್ಪೆನೆಂಬ ಚಿಂತೆಯಿಂ ಬಂದ ಚಿಂತಾಮಣಿಯೆಂಬಂತಿರ್ದ ಚೂಡಾಮಣಿಯೆಂಬ ಮಣಿರತ್ನಮುಂ ಇಂತೀ ಏೞುಂಜೀವರತ್ನಂಗಳುಮಂ ಮತ್ತಮಯೋಧ್ಯ ಭದ್ರಮುಖ ಕಾಮವೃಷ್ಟಿ ಬುದ್ಧಿಸಾಗರ ವಿಜಯಪರ್ವತ ಪರಂಜಯ ಶಶಿಪ್ರಭಾಪರನಾಮಂಗಳಪ್ಪ ಸೇನಾಪತಿ ಸ್ಥಪತಿ ಗೃಹಪತಿ ಪುರೋಹಿತ ಗಜವಾಜಿ ಸ್ತ್ರೀರತ್ನಂಗಳೆಂಬೇೞುಂ ಜೀವರತ್ನಂಗಳುಮಂ ಕಾಳ ಮಹಾ ಕಾಳ ಪದ್ಮ ಪಾಂಡುಕ ನೈಸರ್ಪ ಮಾಣವಕ ಪಿಂಗಳ ಶಂಖ ಸರ್ಪರತ್ನಂಗಳೆಂಬೊಂಬತ್ತು ನಿಧಿಗಳುಮನನುಕ್ರಮದೊಳರ್ಚಿಸಿ ಬಂದು ತಂದೆಯ ಪಾದಾರವಿಂದಕ್ಕೆಱಗಲೊಡಂ-

ಚಂ || ಭುವನದ ಕಣ್ಗೆ ಸಂದಣಿಸೆ ಕೌತುಕಮೊರ್ಮೆಯೆ ಸಾರ್ದತರ್ಕ್ಯವೈ
ಭವವಿಭುವಪ್ಪ ರಾಜ್ಯವಿಭವೋದಯದಿಂದೆ ವಿರಾಜಿಪಂಗೆ ದಿ
ಟ್ಟಿ ವಿಷಮುಮಪ್ಪುದೆಂದು ಪದಪಿಂ ಪ್ರಭುಸೂನುಗೆ ತಾನೆ ರಕ್ಕೆಗ
ಟ್ಟುವ ತೆಱದಿಂದೆ ಕಟ್ಟಿದನಿಳಾಪತಿ ತನ್ನಧಿರಾಜಪಟ್ಟಮಂ || ೧೦೩

ವ || ಅಂತು ಕಟ್ಟಿದ ಸಾರ್ವಭೌಮಪದವೀಪಟ್ಟಮನಾತ್ಮೀಯಲಲಾಟಪಟ್ಟದೊಳಲಂಕರಿಸಿ ತನ್ಮಹೋತ್ಸವದೊಳ್‌

ಮ || ಸ್ರ || ಇದೆ ದೇಯಂ ಮತ್ತದೇಯಂ ಬಗೆವೊಡಿದು ದಲೆಂಬೀ ವಿಚಾರಕ್ಕಣಂ ಸ
ಲ್ಲದೆ ಕೆಯ್ಗೇವಂದೊಡಂ ತನ್ನಯ ಕೆಲದೊಳದಾರಿರ್ದೊಡಂ ಕೊಟ್ಟು ದಾರಿ
ದ್ರ್ಯದಮಾತಿಲ್ಲೆಲ್ಲಿಯುಂ ಬಾೞ್ತೆಗಮಖಿಳಧರಾಚಕ್ರದೊಳ್‌ ತಾನೆನಿಪ್ಪ
ಗ್ಗದ ಮಾತಂ ಮಾಡಿದಂ ಚಕ್ರಧರನೊಸೆದು ಸಾಹಿತ್ಯವಿದ್ಯಾವಿನೋದಂ || ೧೦೪

ಗದ್ಯ

ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಚಕ್ರೋತ್ಪತ್ತಿವರ್ಣನಂ
ಷಷ್ಠಾಶ್ವಾಸಂ