ಕಂ || ಶ್ರೀಧರಮುನಿಸನ್ನಿಧಿಗೆ ವಿ
ಶೋಧಿಯುತಂ ಪದ್ಮನಾಭವಿಭು ಪೋಗಿ ತಪ
ಶ್ಶ್ರೀಧರನಾದಂ ಧೈರ್ಯಧ
ರಾಧರಪತಿ ಜೈನಜನಮನೋಹರಚರಿತಂ || ೧

ಧೃತಪಂಚರತ್ನಮಂ ರಾ
ಗಿತೆಯೊಳ್ ಭೂಷಣಮನಾಂಪ ತೆಱದಿಂದೆ ವಿರಾ
ಗಿತೆಯೊಳ್‌ ಪಂಚಮಹಾವ್ರತ
ಯುತಮಂ ನಿರುಪಮಮನಾಂತನಾವಿಭು ತಪಮಂ || ೨

ವ || ಅಂತು ವಿಶ್ರುತಶ್ರವಣಶ್ರೀಸಮಾಶ್ರಯಣನಾಗಿ ಸಮನಂತರಂ-

ಕಂ || ಪೀನತರಾಂಗತರಂಗವಿ
ತಾನಮನಖಿಳಾಂಗಬಾಹ್ಯಖಳವಿಭ್ರಮಮಂ
ಜ್ಞಾನಾಭ್ಯಾಸಭುಜಂಗಳಿ
ನೇನೀಸಿದನೋ ಶ್ರುತಾಬ್ಧಿಯಂ ತನ್ಮುನಿಪಂ || ೩

ಅಯ್ದುಂ ಸಮಿತಿಗಳೊಳ್ ಕಡೆ
ಯೆಯ್ದುವಿನಂ ತತ್ತದುದ್ಯಮಂ ಬಗೆಯೊಳ್ ತ
ಳ್ಪೊಯ್ದಪ್ರಮತ್ತತೆಯಿನೇ
ನುಯ್ದನೊ ಸುಚರಿತದೊಳೆನಿಸಿದಂ ಮುನಿಮುಖ್ಯಂ || ೪

ಅಪಗತಬಹ್ವಾರಂಭ
ಪ್ರಪಂಚನಾಗಿರ್ದುಮುಪಚಿತೋರುವೃಷಂ ಗು
ಪ್ತ್ಯುಪಯುಕ್ತನಾಗಿಯುಂ ಪ್ರಕ
ಟಪವಿತ್ರಚರಿತ್ರನಾದನಾಮುನಿ ಚಿತ್ರಂ || ೫

ವ || ಮತ್ತಮುೞಿದ ಮೂಲಗುಣಂಗಳಿರ್ಪತ್ತೆಂಟಱೊಳಂ ನೆಱೆದು-

ವ್ರತಿಪತಿ ವಿಶುದ್ಧಚರಿತಂ
ವಿತತಾಷ್ಟಾದಶಸಹಸ್ರಶೀಲಸಮೇತಂ
ನುತಚತುರಶೀತಿಲಕ್ಷ
ಪ್ರತೀತಗುಣಮಣಿವಿಭೂಷಣಂ ತಾನಾದಂ || ೬

ಮ || ವಿ || ವ್ರತಿನಾಥಂ ಕ್ಷಮೆ ಮಾರ್ದವಂ ಋಜುತೆ ಸತ್ಯಂ ಶೌಚಮಾ ಸಂಯಮಂ
ಸುತಪಂ ತ್ಯಾಗಮಕಿಂಚನತ್ವಮಪಜಿಹ್ಮಂ ಬ್ರಹ್ಮಚರ್ಯಂ ದಲೆಂ
ಬತುಳಂಗಳ್ ಕುಶಲಂಗಳಿಂತು ದಶಧರ್ಮಂಗಳ್ ನಿಜಾಚಾರದೊಳ್‌
ಸತತಂ ಸಂದಿರೆ ನಾಡೆ ರೂಢಿವಡೆದಂ ಯೋಗೀಂದ್ರಸಂದೋಹದೊಳ್‌ || ೭

ವ || ಅಂತು ಬಾಹ್ಯಾಭ್ಯಂತರಭೇದಭಿನ್ನಮಪ್ಪ ಪನ್ನೆರಡು ತಪಂಗಳೊಳಾಚರಣಪರಿಣತೆಯನೆತ್ತಿ ಕೊಂಡು-

ಕಂ || ಆರಯೆ ಸಾಕಾರನಿರಾ
ಕಾರಮೆನಿಪ್ಪೆರಡು ಭೇದದನಶನಮಂ ಸಾ
ಕಾರನಿರಾಕಾರಸ್ವೀ
ಕಾರಾತ್ಮಂ ಮೊದಲ ತಪಮನಾಂತಂ ಮುನಿಪಂ || ೮

ಒಂದೊಂದು ತುತ್ತನುಣಿಸಿನೊ
ಳೊಂದವುೞಪ್ಪಿನೆಗಮಿೞಿಪಿ ಮತ್ತೇಱಿಪುದೆಂ
ಬಂದದೆರಡನೆಯ ತಪಮೇಂ
ಸಂದುದೊ ಮುನಿಪತಿಗೆ ವರ್ಯಮವಮೋದರ್ಯಂ || ೯

ಶಾಂತಾತ್ಮಂಗೆಸೆದುದು ತಪ
ಮಿಂತಪ್ಪವರಿಂತು ನಿಱಿಸಿದಲ್ಲದೆ ನಿಲವಿ
ಲ್ಲುಂತೆಮಗೆಂಬೀಪೂಣ್ಕೆಯ
ನಾಂತುದು ಮೂಱನೆಯ ವೃತ್ತಿಪರಿಸಂಖ್ಯಾನಂ || ೧೦

ಕರಮೆ ಮುನಿ ದುಗ್ಧದಧ್ಯಾ
ದಿರಸಂಗಳನೆಯ್ದೆ ತೊಱೆದು ವೃಷ್ಯಂಗಳನ
ಚ್ಚರಿ ಚರಿತಮೆನಿಸಿ ನಾಲ್ಕನೆ
ಯ ರಸಪರಿತ್ಯಾಗಮೆಂಬ ತಪಮಂ ತಳೆದಂ || ೧೧

ವಿಗತನಪುಂಸಕಯೋಷಿ
ನ್ಮೃಗಪಶುವೆನಿಪೆಡೆಯೊಳಲ್ಲದಿರಲಾಗೆಂಬು
ಜ್ಜುಗದಯ್ದನೆಯ ತಪಂ ಸಾ
ಧುಗುಣಾಗ್ರಣಿಗೆಸೆದುದಾವಿವಕ್ತಾವಾಸಂ || ೧೨

ವ || ಅಂತನಂತರಂ ಕಾಯಕ್ಲೇಶಮೆಂಬಾಱನೆಯ ಬಾಹ್ಯತಪೋನುಷ್ಠಾನದೊಳ್‌ ನಿಷ್ಠಿತನಾಗಿ ಕಾಲತ್ರಯದೊಳಂ ಯಥಾಕ್ರಮದಿಂ-

ಕಂ || ಬಿಸಿಲೆಸೆವ ಜೊನ್ನಮರ್ಕನೆ
ಸಸಿ ದಿವಸಮೆ ರಾತ್ರಿಯಾದುದೆನೆ ಕಲ್ನೆಲೆಯೊಳ್
ಮಿಸುಕದೆ ಶಾಂತರಸಂ ಮಾ
ನಸದೊಳ್ ತಣ್ಮಲೆಯೆ ನೆಲಸಿದಂ ಯೋಗೀಂದ್ರಂ || ೧೩

ಧಾರಾಭಿಷೇಕಮಿದುವೆ ತ
ಪೋರಾಜ್ಯಕ್ಕೆನಿಸೆ ಸುರಿವ ಮೞೆ ಘನರುತಿ ತೂ
ರ್ಯಾರವಮಾಗೆ ಮುನೀಂದ್ರಂ
ಬೇರೂಱಿದ ಬೀೞಲಂತೆ ಮರಮೊದಲಿರ್ದಂ || ೧೪

ಅಮಿತಹಿಮಕಣಗಣಂ ದೇ
ಹಮನಾದಂ ಪುದಿಯೆ ಧೀರನಂಗಜಸಮರೋ
ದ್ಯಮದಿಂ ತೊಟ್ಟಂ ಪವಿಕವ
ಚಮನಾವಗಮೆನಿಸಿ ಬೆಳ್ಳವಾಸದೊಳಿರ್ದಂ || ೧೫

ವ || ಮತ್ತಂ ಪ್ರಾಯಶ್ಚಿತ್ತವಿನಯವಯ್ಯಾಪೃತ್ಯಸ್ವಾಧ್ಯಾಯಧ್ಯಾನವ್ಯುತ್ಸರ್ಗಮೆಂಬಾಱುಮಾಭ್ಯಂ ತರತಪದೊಳಂ ನೆಱೆದು-

ಕಂ || ಆ ದ್ವಾದಶತಪಮಂ ತಳೆ
ದಾ ದ್ವಾವಿಂಶತಿಪರೀಷಹಂಗಳುಮಂ ಗೆ
ಲ್ದದ್ವೈತಂ ಮುನಿಮುಖ್ಯಂ
ಸ್ಯಾದ್ವಾದಮತಾದ್ವಿತೀಯನೆನೆ ಪೆಸರ್ವೆತ್ತಂ || ೧೬

ಚಂ || ಗಿಡಿಗಿಡಿಜಂತ್ರಮಾಯ್ತೊಡಲೊಡಲ್ವಿಡಿದಿರ್ದಖಿಳೇಂದ್ರಿಯಂಗಳುಂ
ಮಿಡುಕದೆ ಪೋದುವಂತದಱ ಪೋಗಿನೊಳಾಯ್ತು ಮನಕ್ಕೆ ಸೌಸ್ಥ್ಯಮಾ
ಗಡಣಿಪ ಸೌಸ್ಥ್ಯದಿಂದೆ ನೆಲಸಿತ್ತು ಶುಭಾನ್ವಿತಮಪ್ಪ ಬೋಧಮಂ
ತೊಡರಿಪ ಭೋಧದೊಂದೆಸಕದಿಂ ಪಱಿಪಟ್ಟುವು ಪಾಪಪಾಂಶುಗಳ್ || ೧೭

ವ || ಅನಂತರಮೇಕವಿಹಾರಿಯಾಗಿ ಮತ್ತೆ ಮೂಳೋತ್ತರಗುಣಂಗಳೊಳುತ್ತರೋತ್ತರಂ ನೆಗೞೆ-

ಕಂ || ಆ ಮುನಿಪನೆಂಬ ರೋಹಣ
ಭೂಮೀಧ್ರದೊಳೆಯ್ದೆ ಸಪ್ತವಿಧಸಾಮರ್ಥ್ಯೋ
ದ್ದಾಮಪ್ರಸಿದ್ಧಋದ್ಧಿ
ಸ್ತೋಮಂ ಪುಟ್ಟಿದುದನರ್ಘ್ಯಮಣಿನಿಕರದವೋಲ್ || ೧೮

ಬಿಟ್ಟು ಕಳೆದೆಳೆಯನಿನ್ನಾಂ
ಮುಟ್ಟುವುದನುಚಿತಮಿದೆಂಬ ತೆಱದಿಂದೆ ಮುಗಿ
ಲ್ವಟ್ಟೆಯೊಳೆ ಚೈತ್ಯಯಾತ್ರೆಗೆ
ಪುಟ್ಟಿದ ಚಾರಣಗುಣಪ್ರಭಾವದೆ ನಡೆದಂ || ೧೯

ವ || ಅದಲ್ಲದೆಯುಂ-

ಚಂ || ಒಱಲೆ ತಗುಳ್ದು ಪುತ್ತಿಡುವುದೆಯ್ದೆ ಮೃಗಾವಳಿ ಕೋಡ ತೀಂತೆಗೀ
ಡಿಱಿವುದು ಪಕ್ಕಿ ಗೂಡಿಡುವುದಾವರಿಸಿರ್ದ ಲತೋತ್ಕರಂ ಪಗಂ
ಡಿಱಿವುದು ನಿಂದು ಪಾವನತಪೋವನದೊಳ್ ಪ್ರತಿಮಾನಿಯೋಗದೊಳ್‌
ನೆಱಿದುಮಳಾಂತರಂಗನೆನಿಸಿರ್ದ ಮುನೀಶನ ನಿಶ್ಚಳಾಂಗದೊಳ್‌ || ೨೦

ಕಂ || ಸುತ್ತುವರಿವಹಿಯನಳಿವುದು
ಸುತ್ತೀಡಿಱಿವೆರಲೆಗೋಡಿನಿಂ ಬಿಡುವುದು ಮೆ
ಯ್ವತ್ತಿದ ಲತಾಳಿ ಮುನಿಪನ
ಚಿತ್ತದೊಳಿಲ್ಲದ ತೊಡರ್ಪ ಮೆಯ್ಗಾದಪುದೇ || ೨೧

ವ || ಅನಂತರಂ ಕೇವಳಜ್ಞಾನೋಪಲಕ್ಷಿತಜೀವದ್ರವ್ಯಸಹಕಾರಿಕಾರಣಬನ್ಧಪ್ರಾರಂಭಮುಂ ಪಾಕ
ಶಾಸನಾಸನಕಂಪಸಂಪಾದಕಮುಂ ತ್ರಿಭುವನಕ್ಷೋಭಕರಣಸಮರ್ಥಮುಂ ತೀರ್ಥಕರನಾಮ
ಕರ್ಮಕರಣಕಾರಣಮುಮಪ್ಪ-

ಕಂ || ಪದಿನಾಱುಂ ಭಾವನೆಯಂ
ಸದಮಳಭಾವಂ ಸಮಂತು ಭಾವಿಸಲಾದಂ
ಪದೆದಂ ಪುಣ್ಯಮಗಣ್ಯಮ
ದಿದಿರ್ವರಲಿರ್ದುದು ಮನಕ್ಕೆ ಮಾಡದೆ ಪದೆಪಂ || ೨೨

ವ || ಅದೆಂತೆದೊಡೆ ಶಂಕಾದಿಮಳವಿಹೀನಮಪ್ಪ ಸಮ್ಯಗ್ದರ್ಶನಸಂಶುದ್ಧಿಯುಂ ಗುರುಸದ್ಧರ್ಮ ವೃದ್ಧಸಾಧುಶ್ರುತಪ್ರೀತಿಸ್ವಭಾವಮಪ್ಪ ವಿನಯಮುಂ ಅಹಿಂಸಾದಿಬ್ರತಂಗಳೊಳಂ ತದಂಗ ಶೀಲಂಗಳೊಳಂ ಕ್ರೋಧಸಂಜ್ಜಲನಾದ್ಯತಿಚಾರವಿರಹಿತಮಪ್ಪ ಶೀಲಬ್ರತಾನತಿಚಾರಮುಂ ನಯಪ್ರಮಾಣನಿಕ್ಷೇಪಲಕ್ಷಿತಶಾಸ್ತ್ರಾಧ್ಯಯನಲಕ್ಷಣಮಪ್ಪ ಜ್ಞಾನೋಪಯೋಗಮುಂ ಘೋರಸಂಸಾರದುಃಖಭೀರುತ್ವಪ್ರಕೃತಿಯಪ್ಪ ಸಂವೇಗಮುಂ ಅಭಯದಾನಾದಿಗಳೊಳ್ ಶಕ್ತ್ಯನುರೂಪತ್ಯಾಗಮುಮಗೂಢಸಾಮರ್ಥ್ಯಶರೀರಕ್ಲೇಶಲಕ್ಷಣಮುಮಪ್ಪ ಶಕ್ತ್ಯನುರೂಪ ತಪಮುಂ ಸಮುಪಾತ್ತಸತ್ತಪೋವಿಘ್ನ ಸಂರೋಧಿಯಪ್ಪ ಸಮಾಧಿಯುಂ ಭವ್ಯಜೀವ ದುಃಖಸಂಯೋಗ ಸಂಬೋಧನಾವ್ಯಾಪೃತಿಯಪ್ಪ ವಯ್ಯಾಪೃತ್ಯಮುಂ ಅರ್ಹದ್ಭಕ್ತ್ಯಾಚಾರ್ಯ ಭಕ್ತಿಬಹುಶ್ರುತಭಕ್ತಿಶ್ರುತಭಕ್ತಿಯೆಂಬ ಚತುರ್ಭಕ್ತಿಯುಂ ಷಡ್ವಿಧಾವಶ್ಯಕಕ್ರಿಯಾಪರಿಪಾಳ ಮಪ್ಪಾವಶ್ಯಮುಂ ತಪೋಧನಗೃಹಸ್ಥರತ್ನತ್ರಯಂಗಳಂ ಪ್ರಕಾಶಂಮಾೞ್ಪ ರತ್ನತ್ರಯಂಗಳುಂ ಸದ್ಧರ್ಮ ಪ್ರಸಿದ್ಧಪ್ರಭಾವಕಮಪ್ಪ ಮಾರ್ಗಪ್ರಭಾವನೆಯುಂ ಸದ್ಧರ್ಮಸ್ನೇಹಲಕ್ಷಣಣೋ ಪೇತಮುಮಪ್ಪ ದರ್ಶನವತ್ಸಳತ್ವಮುಮೆಂಬೀಷೋಡಶಭಾವನೆಗಳಂ ಸಮುತ್ತುಂಗ ತೀರ್ಥ ಕೃತ್ಸುಕೃತಪ್ರಾಸಾದರೋಹಣಸೋಪಾನಸಮಾನಂಗಳನುಕ್ರಮದಿಂ ಭಾವಿಸುತ್ತುಮಿರ್ದು-

ಕಂ || ಉಗ್ರತಪಸ್ಸಂಶೋಷಿತ
ವಿಗ್ರಹನುಜ್ಝಿತಮದಗ್ರಹಂ ನಿಜಸತ್ವೈ
ಕಾಗ್ರಮನಂ ಮಣಿಕೂಟನ
ಗಾಗ್ರಮನವ್ಯಗ್ರಜೀವಿತಾಂತಂ ಸಾರ್ದಂ || ೨೩

ವ || ಅಂತು ಸಾರ್ದು ತದತಿವಿಸ್ತೀರ್ಣಪ್ರಾಂಶುಕಪ್ರಸ್ತರೈಕದೇಶದೊಳ್ ಚತುರ್ವಿಧಾರಾಧನಾ ಪೂರ್ವಕಂ ವಿಹಿತಪ್ರಾಯೋಪಗಮನವಿಧಾನನಾಗಿ-

ಮ || ಸ್ರ || ಯತಿಪಂ ಪರ್ಯಾಯದಿಂದಧ್ರುವಮಶರಣಮೇಕತ್ವವನ್ಯತ್ಪಮಾಸಂ
ಸೃತಿಲೋಕಂ ಮತ್ತಮಾ ಅಂದದಿನಶುಚಿತೆ ಸಂದಾಸ್ರವಂ ಸಂವರಾಖ್ಯಾ
ನ್ವಿತಮಂತಾ ನಿರ್ಜರಾಂಕಂ ಪ್ರವಿಮಳತರಧರ್ಮಂ ಲಸದ್ಬೋಧೆಯೆಂಬೀ
ನುತಿವೆತ್ತೀರಾಱುಮಂ ಭಾವಿಸಿದನೆಸೆವನುಪ್ರೇಕ್ಷೆಯಂ ಶಿಕ್ಷಿತಾಕ್ಷಂ || ೨೪

ವ || ಅಂತು ಭಾವಿಸಿ-

ಕಂ || ಸರ್ವಾರ್ಥಸಿದ್ಧಿಗಿದು ದಲ
ಗುರ್ವಿನ ನಿಶ್ರೇಣಿಯೆಂಬ ತೆಱದೇಱಿದನಂ
ದುರ್ವುಗಿಡೆ ಮೋಹನೀಯಂ
ನಿರ್ವಂದದೆ ಬೞಿಯಮುಪಶಮಶ್ರೇಣಿಯುಮಂ || ೨೫

ಕಂ || ಮತ್ತಂ-

ಕಂ || ತಾನೆಯ್ದೆ ಮೊದಲ ಶುಕ್ಲ
ಧ್ಯಾನಮನೊಳಕೆಯ್ದು ಬಱಿಯಮುಪಶಾಂತಗುಣ
ಸ್ಥಾನದೊಳೆ ನಿಂದು ಸುಕೃತನಿ
ಧಾನಮನಾಯೋಗಿನಾಯಕಂ ಸಾಧಿಸಿದಂ || ೨೬

ವ || ಅಂತು ಪದ್ಮನಾಭಯತಿ ಅವತೀರ್ಣಶರೀರಭಾರನಾಗಿ-

ಕಂ || ಅಱುವತ್ತುಮೂಱುಪಟಳಂ
ನೆಱೆದೆಡೆಯಿಂದತ್ತಲೋಕಚೂಳಿಕೆಯಿಂದಂ
ಪೆಱದೇಂ ಯೋಜನಮೀರಾ
ಱ ಱಿನತ್ತಿರ್ಪುದು ನಿರಾಕುಳಂ ವಿಗತಮಳಂ || ೨೭

ಪೆಸರಿಂದಂತದು ಸರ್ವಾ
ರ್ಥಸಿದ್ಧಿ ಪರಿಣಾಹದಿಂದೆ ಜಂಬೂದ್ವೀಪ
ಕ್ಕೆ ಸಮಂ ಸುಖದಧಿಕಂ ಭಾ
ವಿಸಿ ತಳೆದುದು ಮತ್ತನುತ್ತರಾಭ್ಯಂತರಮಂ || ೨೮

ಅದು ಮುಕ್ತಿಪುರಕೆ ಗೋಪುರ
ಮದು ನಾಕಾನೋಕಹಕ್ಕೆ ಫಳಮಂಜರಿ ಮ
ತ್ತದು ಲೋಕಾಕೃತಿಲಕ್ಷ್ಮಿಗೆ
ವದನಮದಹಮಿಂದ್ರರತ್ನನಿಕರಕರಂಡಂ || ೨೯

ವ || ಮತ್ತಮದಱ ನಾಲ್ಕುಂ ದೆಸೆಯೊಳಂ ಪೂರ್ವಾದಿಪರ್ಯಾಯದಿಂದಂ-

ಕಂ || ಅವಿರತಮೆನೆ ವಿಜಯಂ ಮ
ತ್ತೆ ವೈಜಯಂತಂ ಜಯಂತಮಪರಾಜಿತಮೆಂ
ಬಿವು ನಾಲ್ಕು ವಿಮಾನಂಗಳ್‌
ಪ್ರವಿರಾಜಿಪುವಿಂದ್ರನೀಳಧರಣಿತಳಂಗಳ್ || ೩೦

ಅವು ಮಣಿತೋರಣಘೃಣಿಪ
ಲ್ಲವಿತಂಗಳವಿಂದ್ರರತ್ನಕೂಟವಿಟಂಕೋ
ದ್ಭವರುಚಿರೇಂದ್ರಧನುಸಂಗ
ವವಿರಳಕುಸುಮೋಪಹಾರತಾರಕಿತಂಗಳ್ || ೩೧

ನಸುಗಿಱಿದಯ್ದುಮನುತ್ತರೆ
ಯ ಸುಖಂ ಮೋಕ್ಷದ ಸುಖಕ್ಕೆ ಪರಿಕಿಪೊಡಮಠೇಂ
ದ್ರಸುಖಾದಿಗಳಿಂ ಲೋಕದೊ
ಳಸದಳಮಧಿಕಂ ಗಡಿನ್ನದೇವಣ್ಣಿಪುದೋ || ೩೨

ವ || ಮತ್ತಮದಱೊಳ್

ಕಂ || ಮಹಿಮೆ ಕಿಱಿದಕ್ಕೆ ಪಿರಿದ
ಕ್ಕಹಮಿಂದ್ರರ್ ಸಲೆ ಜಿನೇಂದ್ರಕಲ್ಯಾಣಮಹಾ
ಮಹಯಾತ್ರೆಗೆ ಪೋಗರ್ ವಿನ
ತಹಟನ್ಮಣಿಮಕುಟರಪ್ಪರಿರ್ದಿರ್ದೆಡೆಯೊಳ್ || ೩೩

ವ || ಎನಿಪನುತ್ತರೆಗಳೊಳ್ ವೈಜಯಂತವಿಮಾನದುಪಪಾತನಿಕೇತನದಮಳ್ವಾಸಿನೆಡೆಯಿನಿಂಗ ಡಲ ತೆರೆವೊರೆಯಿನೊಗೆವೆಳದಿಂಗಳಂತೆ ತಳತಳಿಸಿ ಪುಟ್ಟಿ ಸಮಚತುರಪ್ರಸ್ಥಾನನುಂ ಪರಿಪೂರ್ಣಯೌವನವಿಳಾಸನುಂ ಶುಕ್ಲಲೇಶ್ಯಾಪರಿಣಾಮನುಂ ಅಣಿಮಾದ್ಯಷ್ಟಗುಣ ಮಣಿನಿಧಾನನುಂ ಲೋಕನಾಡಿಕಾಭ್ಯಂತರಗತಾವಧಿಜ್ಞಾನಭಾನೂದಯಾಚಳನುಮಾ ತ್ಮಾವಧಿಜ್ಞಾನವರ್ತನಾಕ್ಷೇತ್ರಪೂರಣಸಮರ್ಥಮೂಳಶರೀರವಿಕ್ರಿಯಾಸಮಗ್ರನುಮಾಗಿ-

ಚಂ || ಕಡೆದು ಕಳಂಕಮಿಲ್ಲದ ಸುಧಾಕರಮಂಡಳದಿಂದೆ ಮಾಡಿದಂ
ತೊಡಲತಿನಿರ್ಮಳಂ ಪವಣೊಳೊರ್ಮೊೞನೊರ್ಮೆಯುಮಂತೆ ಸಾಜದೊ
ಳ್ದೊಡವಿನ ಮಾಸದಂಬರದ ಕಂದದ ಮಾಲೆಯ ಲೀಲೆ ಚೆಲ್ವನಿ
ರ್ಮಡಿಸೆ ಬೆಡಂಗನಾಳ್ದುದಪರೋ ಮನಭಾಮೆಯ ಧಾತುವಾತನಾ || ೩೪

ಕಂ || ಮೂವತ್ತುಮೂಱು ಶರನಿಧಿ
ಜೀವನ ಪರಿಸಂಖ್ಯೆ ತತ್ಪ್ರಮಾಣ ಸಹಸ್ರಾ
ಬ್ದಾವಧಿ ಸುಧಾಶನಸ್ಮರ
ಣಾವಸರಮನಿತ್ತೆ ಪಕ್ಷಮಾಗುಸಿರ್ವ ಪದಂ || ೩೫

ಮಱುಮೆಯ್ಯೊಳತೀಂದ್ರಿಯಸುಖ
ದೆಱೆವಟ್ಟಾದಪ್ಪನೆಂಬುದರ್ಕಿದುವೆ ವಲಂ
ಕುಱುಪೆಂಬ ತೆಱದಿನೆಸೆದುದು
ನೆಱೆದಹಮಿಂದ್ರಂಗೆ ನಿಷ್ಪ್ರವೀಭಾಗಸುಖಂ || ೩೬

ರೂಪಾದಿಪಂಚವಿಷಯ
ಪ್ರಾಪಣದಿಂದಲ್ಲದಾಗದಖಿಳೇಂದ್ರಿಯಸೌ
ಖ್ಯೋಪಚಯಮೆನೆ ಮನುಷ್ಯರೊ
ಳಾ ಪಂಚೇಂದ್ರಿಯಸುಖಂ ಪರಾಧೀನಮೆ ದಲ್ || ೩೭

ಕುದಿದು ತನುಕ್ಲೇಶದಿನ
ಲ್ಲದೆ ಮನುಜರ್ಗಾಗದತನುಸೌಖ್ಯಂ ಮತ್ತಂ
ತುದಿಯೊಳಗದಱಿಂ ರಸಸೌ
ಜದಿನಾಗದುದೆಲ್ಲಮಸುಖಮಲ್ಲದೆ ಪೆಱದೇಂ || ೩೮

ಪೊಱಮಡದೆ ಗಜೇಂದ್ರಂ ನೀ
ರ್ಸೆ ಱೆಗೊಂಡಿರ್ಪಂತೆ ನಿಷ್ಪ್ರವೀಚಾರತೆಯಿಂ
ನೆಱೆದ ಸುಖಾಂಬೋಧಿಯೊಳವ
ಚಱನುೞಿದವಗಾಹಮಿರ್ದನಿಂತಹಮಿಂದ್ರಂ || ೩೯

ವ || ಅಂತನುತ್ತರಮುಮುತ್ತರೋತ್ತರಮುಮಾಗನುತ್ತರೆಯೊಳಾತ್ಮಕೃತಸುಕೃತಕಲ್ಪಪಾದಪಫ ಲೋಪಮಾನಮಂ ನಿಷ್ಪ್ರವೀಚಾರಸುಖಮಂ ಪದ್ಮನಾಭಚರಾಹಮಿಂದ್ರನನುಭವಿಸು ತ್ತುಮಿರ್ಪಿನಮಿತ್ತ ಜಂಬೂದ್ವೀಪದ ಭರತಕ್ಷೇತ್ರದೊಳ್-

ಕಂ || ಅವನೀವನಿತೆಗೆ ಮೊಗಮೆಂ
ಬವೊಲುದ್ಯದನೂನರಾಗಲೀಲಾಧರಮಾ
ತ್ತವಿಳೋಚನವಿಳಸನಮೊ
ಪ್ಪುವುದಾದಂ ಪೂರ್ವವಿಷಯಮೆಂಬುದು ವಿಷಯಂ || ೪೦

ಚಂ || ಅದಱೊಳುದಾತ್ತರತ್ನತತಿಪುಟ್ಟದ ಬೆಟ್ಟು ಮದೇಭಮಾಳೆ ಪು
ಟ್ಟದ ಪೞು ಮುತ್ತು ಪುಟ್ಟದ ತರಂಗಿಣಿ ಚಂದನಭೂಜರಾಜಿ ಪು
ಟ್ಟದ ಬನಮುತ್ಪಳಪ್ರತತಿ ಪುಟ್ಟದ ದೀರ್ಘಿಕೆ ಪದ್ಮಪಾಳಿ ಪು
ಟ್ಟದ ಬಯಲೆಯ್ದೆ ನುಣ್ಬಸಲೆ ಪುಟ್ಟದ ತಣ್ಬುೞಿಲಿಲ್ಲದೆಲ್ಲಿಯುಂ || ೪೧

ವ || ಮತ್ತಂ-

ಚಂ || ಕಳಮಯವಾದಿಧಾನ್ಯಕುಳಮಂ ಹಳಿಕಾವಳಿಗಾವ ಕಾಲಮುಂ
ಬೆಳೆವುದು ಪಾಂಥಸಂತತಿಗೆ ಸಂತಸಮಂ ಪುಳಿನಪ್ರತಾನದಿಂ
ಬಳೆವುದಧೀಶ್ವರಂಗೆ ಜರಗೆಂಬ ನೆವಂಬಿಡಿದೆಯ್ದೆ ಪೊನ್ನುಮಂ
ಬಳೆವುದು ತನ್ಮಹೀತಳಮಪಾರಸುಖಾವಹಭೋಗಭೂತಳಂ || ೪೨

ಕಂ || ಅದಲ್ಲದೆಯುಂ-

ಮ || ಸ್ರ || ಬಿಸಘಾಸಾಸಕ್ತಹಂಸೀಕುಳವಳಯಿತತೀರಂ ಸರಂ ಬೀಜರಾಜೀ
ರಸಪಾನಾಧೀನಕೀರಾವಳಿಮಿಳಿತಫಲಂ ದಾಡಿಮಂ ಕೋರಕಾಗ್ರ
ಗ್ರಸನೋತ್ಕಂಠಾನ್ಯಪುಷ್ಟೋತ್ಕರವೃತವಿಟಪಂ ಚೂತಮಾಮೋದಸೇವಾ
ವ್ಯಸನಾಳ್ಯೋಘಾತ್ತಪುಷ್ಪಂ ಲತೆ ಜನಪದದುದ್ಯಾನದೊಳ್ ಕುಂದವೆಂದುಂ || ೪೩

ಕಂ || ಮತ್ತಮಲ್ಲಿ-

ಸ್ರ || ಪೆರ್ವಣ್ಣೊತ್ತಿಂದೆ ಪುತ್ತಿಂಗಿಳಿಗಿದ ನೆಲದಿಂದುಣ್ಮಿತಣ್ಗಂಪಿನುರ್ವಿಂ
ನೇರ್ವಟ್ಟೊಳ್ವಕ್ಕೆ ಪುತ್ತೆರ್ದೊಗೆದು ಮುಸುಱೆ ಮೆಯ್ನಂಟು ಕಾಯ್ಕಾಯ್ತುದೆಂದೆಂ
ದೊರ್ವನ್ನಂ ಪಾಂಥರೆತ್ತಂ ಬಳಸಿದ ರಸವನ್ಮಾತುಳಂಗಂ ಮೊದಲ್ದಲ್
ನೀರ್ವೊಚ್ಚಂ ಜೌಗುವೀೞುತ್ತಿರೆ ಸುರಿವೆಳೆದೆಂಗಲ್ಲಿ ಚೆಲ್ವಾದುವಾದಂ || ೪೪

ಕಂ || ವಿಧುಮೃದುಕಳೆಗಳ ಹರವರಿ
ಸುಧಾರಸಪ್ರಸವಭೂಮಿ ಕುಸುಮಾಸ್ತ್ರದ ಸ
ನ್ನಿಧಿಯೆನೆ ಸೊಗಯಿಸುವುದು ಸು
ತ್ತಿ ಧವಳಲಲಿತೇಕ್ಷುವಾಟಮದಱೂರೂರಂ || ೪೫

ವ || ಅಲ್ಲಿ

ಚಂ || ಗಿಳಿಗಳ ಪಿಂಡು ತುಂಬಿಳ ಗೊಂದಣಮಂಚೆಗಳೊಡ್ಡರಲ್ದರ
ಲ್ಗಳ ರಜದುರ್ವು ಬಂದೆಳಸಿ ಸಂದಣಿಸುತ್ತಿರೆ ಸುತ್ತಿ ಮುತ್ತಿ ಸಂ
ಗಳಿಸಿ ಪಸುರ್ತ ಕರ್ಗಿದ ಬೆಳರ್ತ ಕವಿಲ್ತ ಸುಗಂಧಶಾಳಿಸಂ
ಕುಳಮಲರ್ದೋಂಟಮಬ್ಜವನಮೂದುವ ತಣ್ಣೆಲರಾದಮೊಪ್ಪುಗುಂ || ೪೬

ವ || ಅಂತು ಸಕಳಸಂಪದಕ್ಕಾಸ್ಪದಮಾದಾಜನಪದದೊಳ್-

ಕಂ || ಉಡಿದಿಡೆ ಪಥಿಕರ್ ಕರ್ಬಿನ
ಬಡಿಗೊಂಡೊದವಿರ್ದ ಬಟ್ಟೆಯಿಂ ಮಾವಿನ ಪ
ಣ್ಣಿಡಿದಡರೆ ಕೊಂಡ ಗೊಂಚಲ್
ಮಡಲಿಱಿದುದು ಕೆೞಗೆ ಬೆಳೆದ ಕಳಮೆಯ ಕೆಯ್ಯಂ || ೪೭

ರಾಜಕರಪಾತಭೀತಿ ಸ
ರೋಜದೊಳತಿವರ್ಣವೃತ್ತಿ ಲಿಪಿಯೊಳ್ ಖಲಸಂ
ಯೋಜನೆ ಕೆಯ್ಯೊಳ್ ಸಮನಿಕು
ಮಾಜನಪದಜನದೊಳೆಂತುಮೇಂ ಸಮನಿಕುಮೇ || ೪೮

ಚಂ || ಮೃದುಕರಮೊಂದು ಚಂಡಕರಮೊಂದನವಗ್ರಹಮೊಂದವಗ್ರಹಾ
ಸ್ಪದಮೆ ದಲೊಂದು ನಿಶ್ಚಲಿತಸಮ್ಮದಸಂಯುತಮೊಂದು ನಿತ್ಯದು
ರ್ಮದಸಮುಪೇತಮೊಂದು ಪರಿಭಾವಿಸೆ ತಾನೆನೆ ಪೋಲಿಪಂದು ಪೇೞ್
ಸದೃಶಮೆ ಪೂರ್ವದೇಶಮುಮನಂಗಮತಂಗಜಪೂರ್ವದೇಶಮುಂ || ೪೯

ವ || ಅಂತತ್ಯಂತಶೋಭೆವೆತ್ತು ವಿವಿಧಪುರನಿಕರತಾರಕಪ್ರಕರಪರಿಕಲಿತಮಾದ ಪೂರ್ವಮಂಡಲ ಮೆಂಬ ಪೂರ್ವಗಗನಮಂಡಳಕ್ಕೆ ಮಂಡನಮಾಗಿ-

ಕಂ || ಪ್ರಚುರಸುಧಾನಿಳಯಂ ಸಮು
ಪಚಿತಮನೋಹಾರಿಗೋಕುಳಂ ವಿಮಳಕಳಾ
ಪ್ರಚಯನಿಧಾನಂ ತಾನೆನಿ
ಸಿ ಚಂದ್ರಬಿಂಬಂಬೊಲೊಪ್ಪುಗುಂ ಚಂದ್ರಪುರಂ || ೫೦