ವ || ಅಂತು ಸಮರಸನ್ನದ್ಧಮಾದ ನಿಜಬಲಂಬೆರಸು ಸುವರ್ಣಮಾಲಂ ವನಕೇಳೀಸಮಾರೂಢಂ ಯುವರಾಜಪುರಸ್ಸರಂ ನಡೆಯೆ ಪೃಥ್ವೀಪಾಲಪಾಲನುಮಾತ್ಮಸಕಲಸಾಮಗ್ರಿವೆರಸದಿರದಿ ದಿರೆತ್ತಿ ಬರ್ಪಾಗಳ್-

ಮ || ಸ್ರ || ಸುರಶೈಲಂ ಪೂೞ್ದ ಪೊಂಗಟ್ಟೆವೊಲಿರೆ ಸಕಲೋದನ್ವದಂತಸ್ಥಕೂರ್ಮೋ
ತ್ಕರಮುರ್ವೀಚಕ್ರಮಂ ತಾಳ್ದಿದ ಕಮಠನವೋಲೊಪ್ಪೆ ಸೌರಂ ರಥಂ ಮೃ
ದ್ಭರಯುಗ್ಯುಚ್ಛಾಕಟಾಕಾರದಿನೆಸೆಯೆ ಜಗದ್ವ್ಯಾಪಿಯಾದತ್ತು ಯುದ್ಧೋ
ದ್ಧುರತತ್ಸೇನಾದ್ವಯಾಭ್ಯುಚ್ಚಲನದಳದಿಳೋತ್ಖಾತಪಾಂಸುಪ್ರತಾನಂ || ೬೬

ವ || ಅದಲ್ಲದೆಯುಂ-

ಮ || ಸ್ರ || ದ್ವಿಪಶುಂಡಾದಂಡಸೀತ್ಕಾರದಿನರದಚಲಚ್ಚಕ್ರಚೀತ್ಕಾರದಿಂ ಧ
ನ್ವಿಪದಾತಿವ್ರಾತಟಂಕಾರದಿನುರುಕಹಳಾಜಾಲಫೂತ್ಕಾರದಿಂ ವಾ
ಜಿಪದಪ್ರೋದ್ಯಚ್ಛಟತ್ಕಾರದಿನನುಗತನಿಸ್ಸಾಣಭಾಂಕಾರದಿಂ ವಿ
ಷ್ಟಪಮಂ ಶಬ್ದಾತ್ಮಕಂಮಾಡಿದುದುಭಯಮಹೀಭೃಚ್ಚಮೂಚಕ್ರವಾಳಂ || ೬೭

ವ || ಅಂತುಭಯಸೇನೆಯುಂ ಪೃಷತ್ಕಪಾತಮಾತ್ರತೃಯಾಂತರಧರಿತ್ರೀಭಾಗದೊಳ್ ವಿಚಿತ್ರವ್ಯೂ
ಹಮಾಗಲೊಡಮೆರಡುಂ ಪಡೆಯ ಸೇನಾನಾಯಕರ್ ಕೈವೀಸಿದಾಗಳ್-

ಚಂ || ಇದು ನೆಲನಾಗಸಂ ದೆಸೆಯಿರುಳ್ಪಗಲೆಂಬ ವಿಕಲ್ಪಮಾರ ಚಿ
ತ್ತದೊಳಮಳಂಕೆಗೊಳ್ಳವಿಷುಜಾಲಮಯಂ ಬಗೆವಂದು ವಿಶ್ವಮೆಂ
ಬಿದೆ ದೊರೆಕೊಳ್ಗುಮೆಂಬಿನೆಗಮಚ್ಚರಿವೆತ್ತಿರೆ ಬಿದ್ದಮೆಚ್ಚು ಕಾ
ದಿದುದು ತಗುಳ್ದು ಬಿಲ್ವಡೆ ಪಡಲ್ವಡೆ ಮಾಣದೆ ನಿಂದು ಪೂಣಿಗರ್ || ೬೮

ಕಂ || ಆಲೋಹನಿಮಗ್ನೇಷುಕ
ಜಾಲಂ ಪುದಿದಿರೆ ಶರೀರಮಂ ಬೀೞಲ್ತ
ಳ್ತಾಲದ ಪಣೆಯವೊಲೆಂತುಂ
ಚಾಲಿಸಲರಿದೆನಿಸಿ ನಿಂದರರೆಬರ್ ವೀರರ್ || ೬೯

ತಿರು ಪಱೆದೊಡೆ ದಂಡಾದಂ
ಡಿರಣಂ ಬಿಲ್ಲಿಂದಮಾಯ್ತು ಬಿಲ್ಮುಱೆದೊಡೆ ಗೋ
ಣ್ಮುರಿಗೆ ತಲೆಯೊತ್ತುತಿರ್ಪೊಂ
ದುರವಣೆಯಿಂದಾದುದಾ ಕಚಾಕಚಿಯುದ್ಧಂ || ೭೦

ಪಱೆಯೆ ತಿರು ಮುಱೆಯೆ ಬಿಲ್ ತವೆ
ನೆಱೆಯೆ ಸರಲ್ ಬಿಲ್ಲ ಬಿತ್ತೆಗರ್ ಕಡುಪೊತ್ತುಂ
ಬಱೆಯದೆ ತಮ್ಮೊಳ್ ಸಲೆ ಸುರಿ
ಗಿಱೆದೞಿದರವಂಧ್ಯಮಲ್ತೆ ವೀರೋದ್ರೇಕಂ || ೭೧

ಚಂ || ಇವು ಸಮರಾಬ್ಧಿಯೊಳ್ ನೆಗದಗುರ್ವಿಸೆ ಘೂರ್ಮಿಪ ಕೂರ್ಮ ಕೋಟಿಯೆಂ
ಬವೊಲದಟಿಂದಮೆಯ್ದೆ ಪರಿತಂದು ಪಳಂಚಿದ ಬಾಳ್ಗಳಿಂದೆ ಸೂ
ಸುವ ಕಿಡಿಗಳ್‌ ರಣಾಂಧಕೃತಿಯಂ ಕ್ರಮದಿಂದೆ ಕಳಲ್ಚೆ ಕಾದೆ ನೋ
ಡುವ ದಿವಿಜರ್ಗೆ ಕೌತುಕಮನಡ್ಡಣದೊಡ್ಡಣಮಿತ್ತುದೆತ್ತಲುಂ || ೭೨

ವ || ಆಗಳ್-

ಕಂ || ಕರವಾಳಘಾತದಿಂ ಪರಿ
ದುರುಳ್ವ ತಲೆಗಳನವುಂಕಿ ಪಿಡಿದರೆಬರ್ ಟೆ
ಬ್ಬರಿಸಿ ಮಗುೞ್ದಟ್ಟೆಯೊಳ್ ಬಿ
ತ್ತರದಿಂ ಬೀರಕ್ಕೆ ಕಳಶಮಿಡುವಂತಿಟ್ಟರ್ || ೭೩

ಮೊಕ್ಕಳಮೆನೆ ಬಸಿಱೇಱಿಂ
ದೊಕ್ಕ ಕರುಳ್ ತೊಡೆಯೊಳಾವಗಂ ತೊಡರ್ದೆನಸುಂ
ಮಿಕ್ಕುವು ಬಿರುದರ ಬಿರುದಿಂ
ಗಿಕ್ಕಿದ ನುಣ್ಬೆಸದ ಮಿಸುಪ ತೊಡೆಸಂಕಲೆಯಂ || ೭೪

ವ || ಅಂತು ಪಾಯದೞಮೆಲ್ಲಮೆಚ್ಚು ಮುಱಿದುಂ ಕುಱಿದಱಿಯಾಗೆ ತೆಱಪುವಡೆದಿದಿರೊಡ್ಡಿನ ತೇರೊಡ್ಡುಗಳ್ ಶೂರಸಾರಥಿಪ್ರೇರಣದಿನೋರೊಂದಂ ಪತ್ತೆ ಸಾರ್ಚಿದಾಗಳ್-

ಉ || ಶಾತಶರಪ್ರಹಾರದೆ ರಥಾಂಗವಿದಾರಣಮಕ್ಷಖಂಡನಂ
ಸೂತನಿಷೂದನಂ ಯುಗಸಮುದ್ದಳನಂ ಧ್ವಜಭಂಜನಂ ಹಯ
ವ್ರಾತನಿಶುಂಭನಂ ಸಮನಿಸುತ್ತಿರೆ ತಮ್ಮಯ ಚಾಪಚಾಪಲಂ
ಕೌತುಕಮಪ್ಪಿನಂ ಸಮರಥಾರ್ಧರಥಾತಿರಥರ್ ಪಳಂಚಿದರ್ || ೭೫

ಕಂ || ಎಚ್ಚಂಬಂ ಬೇಗದೆ ಪೆಱ
ರ್ಗೆಚ್ಚ ಸರಲ್ ತಾಗಿ ಪಿಳ್ಕಿನಿಂ ಮೊನೆವರೆಗಂ
ಪಚ್ಚಂತೆ ಸೀೞ್ದು ನಟ್ಟುವು
ಬಿಚ್ಚತಮಿರ್ಮಡಿಸಿ ತೊಡರ್ದು ರಥಿಗಳನಾಗಳ್ || ೭೬

ಬಿಡದೆಚ್ಚು ಸರಲ್ ತವೆ ಮನ
ದಡರ್ಪು ತವದುರ್ವಿ ಮೈಯೊಳಿರ್ದಂಬಂ ಕೈ
ಯುಡಗದೆ ಕಿೞ್ತಿಚ್ಚರ್ ಪಡ
ಲಿಡೆ ತೊಡರ್ದರ್ ಕದನಲಂಪಟರ್ ವೀರಭಟರ್ || ೭೭

ವ || ಅಂತು ರಥಾರೂಢರೆಲ್ಲಂ ಪರಿಪೂರ್ಣಕದನಮನೋರಥರಾಗಲೊಡಂ-

ಕಂ || ಪರಿದುವು ಬಡಬಾಗ್ನಿಯ ಕೇ
ಸುರಿ ಬಳಸಿದ ತೆರೆಗಳೆಂಬಿನಂ ಘೋೞಾಯ್ಲರ್
ಪರಿಯಿಸೆ ತರದಿಂ ಪೊಂಬ
ಕ್ಕರಗೆಯ ತುರಗಂಗಳಾಹವಾಂಭೋನಿಧಿಯೊಳ್ || ೭೮

ಎಚ್ಚಡ್ಡಾಯುಧಮಂ ಕಿ
ೞ್ತರಿಯೆನೆ ನೂಂಕಲ್ ತುರಗಮುಮಂ ತುಕ್ಕಿಡಿಗಳ್
ಪಚ್ಚವಳದೆಡೆಗಳಂ ಮು
ನ್ನೆಚ್ಚ ಸರಲ್ ತಾಗೆ ಪಱಿದುವುರೆ ಚೆಚ್ಚಱದಿಂ || ೭೯

ವ || ಅದಲ್ಲದೆಯುಂ-

ಮ।ವಿ || ಪವಣಿಲ್ಲುರ್ಚುವ ಕೋಲ್ಗೆ ತಾಗುವ ಚಲಚ್ಛತ್ರಕ್ಕಸುಂಗೊಳ್ವಭಿಂ
ಡಿವಳಕ್ಕಿರ್ಮೊನೆಗಾಣ್ಬ ಕಕ್ಕಡೆಗೆ ಬಿದ್ದಂ ಬೀೞ್ವ ಕೊಂತಕ್ಕೆ ಸು
ತ್ತುವ ಪಾಶಕ್ಕೆ ತಗುಳ್ದು ಪೊಯ್ವ ಗದೆಗಾದಂ ನೇರ್ವ ಕೂರ್ವಾಳ್ಗೆ ನಾಂ
ಟುವ ಗೇಣ್ಗೆಂಬಿನಮಾದುದದ್ಭುತಮದಶ್ವವ್ಯೂಹದುಗ್ರಾಹವಂ || ೮೦

ಕಂ || ಪಸುವೆಂಬೇವದೆ ಕುದುರೆಯ
ಮಸೆಯಂ ಕಾದೊರ್ವರೊರ್ವರಂ ಪೊಯ್ದರ್ ಮಾ
ಮಸಕದೆ ಪಣಿದಂಬೊಯ್ವಂ
ತಸಿಯಿಂ ಪಿಂಗದೆ ತುರಂಗಿಗಳ್ ಸಂಗರದೊಳ್ || ೮೧

ವ || ಆ ತುರಂಗಸಂಗ್ರಾಮಾನಂತರದೊಳಾ ಧೋರಣರ್ ವಾರಣಮಂ ನೂಂಕೆ-

ಕಂ || ಗುೞವಂ ಪಕ್ಕಂ ನಿಜಕರ
ಮೆೞಲ್ವ ಪೆರ್ವಾವು ಕೋಡೆ ಕೋಡಂಗಲ್ ಮ
ತ್ತಿೞಿವ ಮದಮರ್ಬಿಯೆನೆ ಕ
ಣ್ದೊೞಲಿಗೆ ನೆಲೆಯಾದುವೆಱಕೆವೆಟ್ಟೆನೆ ಕರಿಗಳ್ || ೮೨

ವ || ಅಂತು ಕವಿದು-

ಮ || ವಿ || ದಿಗಿಭಂಗಳ್ ದಿಗಿಭಂಗಳೊಳ್ ಮಿಗೆ ಮೊಗಂಬೊಕ್ಕಂತಿರಾರ್ದೊಡ್ಡಿನಾ
ನೆಗಳೋರೊಂದಱೊಳೊಂದು ತಾಗಿ ತಲೆಮಟ್ಟಿರ್ಪಲ್ಲಿ ಬಿಲ್ಲಂ ನಿಷಾ
ದಿಗಳಂದೊಲ್ಲದೆ ಕಿೞ್ತ ಗೇಣೊಳೆ ತಡಂಬಾಯ್ದಯ್ದೆ ತದ್ವೈರಿಯೋ
ಧಿಗಳಂ ತಾನನೆ ತಕ್ಕಿನೆಕ್ಕತುಳದಿಂ ಕೈಯಾರ್ವಿನಂ ಕಾದಿದರ್ || ೮೩

ವ || ಅದಲ್ಲದೆಯುಂ-

ಉ || ಒತ್ತುವ ಕಾಯ್ಪು ಪೊಯ್ವದಟು ಬಂಚಿಪ ಬಿನ್ನಣಮೊಂದನೊಂದು ಬೆಂ
ಬತ್ತುವ ಬೇಗಮೆಯ್ದಿ ತೆಗೆವುರ್ಕು ತೆಱಂದಿರಿದಾಂತ ಮೆಯ್ವೆಸಂ
ಸುತ್ತುವ ಬಲ್ಪು ಪುಣ್ಗಳವುಗುಂದದ ಸೊರ್ಕಿವು ತಮ್ಮೊಳೆಯ್ದೆ ಮೆ
ಯ್ವೆತ್ತಿರೆ ಬಿಚ್ಚತಂ ಪೊಣರ್ದುವಂದೆರಡುಂ ಬಲದಂಕದಾನೆಗಳ್ || ೮೪

ಕಂ || ರದಸಂಘಟ್ಟದಿನೆತ್ತಂ
ಕೆದಱುತ್ತುಂ ತೋರಗಿಡಿಗಳಂ ಕಾದುವ ತ
ನ್ಮದಗಜಘಟೆ ಪೋಲ್ತುದು ಕೆಂ
ಡದ ಮಱೆಯಂ ಕಱೆವ ವಿಲಯಜಲಧರಘಟೆಯಂ || ೮೫

ವ || ಆಗಳ್ ಕಾಲ್ಗಾಪಿನ ಕಟ್ಟಾಳ್ಗಳ್ ಕಡುಕೆಯ್ದು-

ಉ || ಮೋದೆ ಸಿತಾಸಿಯಿಂ ಪಱೆಯೆ ಕೈ ಕೆಲವಂದು ಮಹಾವರಾಹನಂ
ತಾದುವು ಕೂಡೆ ಕುಕ್ಕುಱಿಸೆ ಪಿಂದೊಡೆಗಳ್ ಕೇಲವೇಕದಂತನಂ
ತಾದುವು ಬೀೞೆ ದಂತಯುಗಳಂ ಕೆಲವಾ ಕರಿಣೀಕದಂಬದಂ
ತಾದುವಗುರ್ವಿನಾನೆಗಳದೇನತಿಕೌತುಕಮಾಯ್ತೊ ಕಾಳೆಗಂ || ೮೬

ವ || ಅಂತಡುರ್ತು ಕಾದಿ ತಮ್ಮ ಪಡೆಯ ಪದಾತಂಗಳುರಿಯೊಳೆಱಗಿದ ಪತಂಗಂಗಳಂತೆ ವಿನಾಶಮನೆಯ್ದೆಯುಂ ಅರದಂಗಳ್‌ ವಯೋಧಿಕನರದಂಗಳಂತೆ ಕಳಲ್ಗಳಲೆಯುಂ ವಾಹಂಗಳ್ ಮರುಮರೀಚಿಕಾವಾಹಂಗಳಂತೆ ಮಾಯಮಾಗಿಯುಂ ಗಜಂಗಳ್ ನಿಧಾಘ ಸಮಯದ ಗಜಂಗಳಂತೆ ಪಡಲಿಡೆಯುಂ ಅದಂ ಕಂಡು ಪೃಥ್ವೀಪಾಲತಂತ್ರಪಾಲಂ ಚಂದ್ರಶೇಖರಂ ಮೊದಲಾಗೆ ಕೇತುಮಹಾಕೇತು ವಿರೋಚನಂ ಮಹಾರಥಂ ಸೂರ್ಯ ರಥಂ ತಟಿದ್ವಕ್ತ್ರಂ ಸಿಂಹವಿಕ್ರಮಂ ವರುಣಂ ಚಂಡಕೀರ್ತಿಯೆಂಬ ಸಾಮಂತಕರಾತ್ಮ ಪಕ್ಷಕ್ಷಯದಿನಾದಾಕ್ಷೇಪದಿಂ ರೂಕ್ಷಭಾವಮನೊಳಕೆಯ್ದು ಪದ್ಮನಾಭಸೇನಾನಿಭೀಮಂ ಮೊದಲಾಗೆ ಒಡ್ಡಿ ನಿಂದ ಸುಭೀಮಂ ಮಹಾಸೇನಂ ಚಿತ್ರಾಂಗಂ ಪರಂತಪಂ ಕಂಬಂ ಸುಕುಂಡಲಂ ಭೀಮರಥ ಮಹೀರಥರೆಂಬ ಸಾಮಂತರೊಳಿದಿರ್ಚಿ ರಥಿಗಳ್ ರಥಿ ಗಳೊಳ್ ತುರಂಗಿಗಳ್ ತುರಂಗಿಗಳೊಳ್ ನಿಷಾದಿಗಳ್ ನಿಷಾದಿಗಳೊಳ್ ಮೂದಲಿಸಿ ತಾಗಿದಾಗಳ್-

ಮ || ವಿ || ಬಗೆವಂದೀದೊರೆತಾದುದದ್ಭುತತರಂ ಯುದ್ಧಂ ಮರುದ್ದಾನವೋ
ರಗವಿದ್ಯಾಧರರಲ್ಲಿ ಮುಂ ಸಮನಿಸಿತ್ತಿಲ್ಲೆಂದುಮೆಂಬಂತುಟಾ
ಯ್ತು ಗಳಚ್ಛೋಣಿತಮುತ್ಪತತ್ಪಲಲಪಿಂಡಂ ಸಂಚರಚಂಡಗೃ
ಧ್ರಗಣಂ ಸ್ವೈರನಟತ್ಕಬಂಧತತಿ ಕೇಶಾಕೇಶಿ ರೌದ್ರಾವಹಂ || ೮೭

ವ || ಅಂತು ಕಾದಿ ಕಡೆಗಾಲದ ಬಱಸಿಡಿಲ ಬಳಗದೊಳ್ ತೊಡರ್ದ ಪಕ್ಕವೆಟ್ಟುಗಳ ತಳ್ಕೆಯಂತೆಯುಂ ಸಿಂಗದ ಜಂಗುಳಿಯೊಳಾಂತ ಮಾತಂಗಸಂಘಾತದಂತೆಯುಂ ಭೇರುಂಡನ ಪಿಂಡಿನೊಳ್ ತಾಗಿದ ಶರಭದ ನೆರವಿಯಂತೆಯುಂ ಪ್ರಳಯಪ್ರಭಂಜನ ಪ್ರತಾನದೊಳಿದಿರ್ಚಿದ ಮುಗಿಲ ಮೊಗ್ಗರದಂತೆಯುಂ ಓಡಿಯುಮ ೞ್ಕಾಡಿಯುಂ ಪೋದ ನಿಜಸಾಮಂತಸಂದೋಹಮಂ ಪೃಥ್ವೀಪಾಲತನೂಭವಂ ಧರ್ಮಪಾಲಂ ಕಂಡು ತಂದೆಯ ಮುಂದಣ್ಗೆ ವಂದು-

ಕಂ || ಇನ್ನೆನ್ನ ಪದಂ ಬೞಿಕಂ
ನಿನ್ನ ಪದಂ ದೇವ ಬೆಸಸು ತೊಡರ್ದರಿಸೈನ್ಯಂ
ಬೆನ್ನಿತ್ತೊಡಱಿಯೆನಾಂತೊಡ
ದನ್ನೆಱೆ ಪರ್ದಿಂಗೆ ಬಿರ್ದನಿಕ್ಕುವೆನೀಗಳ್ || ೮೮

ಬೆಸಸೆನ್ನಂ ನೃಪ ನಿನ್ನಯ
ನೊಸಲೊಳ್ ತ್ರಿಪತಾಕೆಯೆತ್ತಿ ತೋಱದ ಮುನ್ನೆ
ತ್ತಿಸಿ ತೋರ್ಪೆಂ ರಿಪುಬಳಮಂ
ದೆಸೆಬಿದ್ದಂ ತೂೞ್ದಿ ಜಯಪತಾಕಮನೀಗಳ್ || ೮೯

ವ || ಎಂದು ಧಾತ್ರನೊಳ್ ಬೆಸಂಬೆತ್ತ ಧರ್ಮನಂತೆ ಧರ್ಮಪಾಲಂ ಬರ್ಪುದುಂ ಪದ್ಮನಾಭಭೂಭುಜನ ಮುಂತಿರ್ದ ಸುವರ್ಣನಾಭಂ ಕಂಡು ಪಾಳಿಕೇತನಂಗಳಿನಿವಂ ಪೃಥ್ವೀಪಾಲಯುವರಾಜನೆಂದಱಿದು ಸುಟ್ಟು ತೋಱಿ-

ಕಂ || ಪೇೞ್ದೇವೆನ್ನಂ ನಿಂದೊಡೆ
ತೋಳ್ದೀನಂ ಕಳೆದು ತಂದಪೆಂ ಪಂದಲೆಯಂ
ತೂೞ್ದಿ ಪೆಱಮೆಟ್ಟೆ ಕೊಲ್ಲದೆ
ಬಾೞ್ದಲೆದಂದಪ್ಪೆನವನನವಧರಿಪುದಿದಂ || ೯೦

ವ || ಅಂತತಿಪ್ರತಿಜ್ಞಾರೂಢನುಂ ರಥಾರೂಢನುಮಾಗಿ-

ಕಂ || ರವಿಯ ರಥಕ್ಕಡ್ಡಂ ರಾ
ಹುವೆ ಬರ್ಪಂತೆಯ್ದೆ ವಂದನತ್ತತ್ತೆನುತಾ
ಕುವರನ ರಥಕ್ಕೆ ತೂರ್ಣಂ
ಸುವರ್ಣನಾಭಂ ವಿರೋಧಿಜನಶಮನಾಭಂ || ೯೧

ವ || ಅಂದುಭಯಸ್ಯಂದನಾಶ್ವಂಗಳುಂ ಮಿಳಿತಾಸ್ಯಂಗಳಾಗೆ-

ಕಂ || ಇಸಲೆಡೆವಡೆಯದೆ ಶಕ್ತಿಯಿ
ನಸಮಭುಜಾಬಲನಳುರ್ಕೆಯಿಂದಿಡೆ ಬಿೞ್ದಂ
ವಸುಧೆಗೆ ರಥದಿಂ ಮೂರ್ಛಾ
ವಸಕ್ತಮತಿ ಧರ್ಮಪಾಲನಭಿಹತಮರ್ಮಂ || ೯೨

ವಂ || ಆಗಳವನನೆಯ್ದೆವಂದು-

ಕಂ || ಅಭಯವಚೋಮಂತ್ರದಿನೆ
ತ್ತಿ ಭಯಂಕರಶಕ್ತಿ ಸರ್ಪದಷ್ಟನನುಯ್ದಂ
ಪ್ರಭುಪಾರ್ಶ್ವಕ್ಕಾಸೋಮ
ಪ್ರಭಾಸುತಂ ಕೃತವಿರೋಧಿಜೀವಗ್ರಾಹಂ || ೯೩

ವ || ಅದಂ ಕಂಡತಿಪ್ರವೃದ್ಧ ಕೋಪಾವಲೇಪಂ ಪೃಥ್ವೀಪಾಲಭೂಪಾಲನಾತ್ಮ ಗತದೊಳಿಂತೆಂದಂ-

ಕಂ || ಈ ರಣದೊಳೆ ಧಾರಿಣಿಯಂ
ವಾರಣಮುಮಮೆನ್ನ ಸುತನುಮಂ ಪಿಡಿದ ದುರಾ
ಚಾರಮನಿದಂ ಸ್ವಹಸ್ತಾಂ
ಗಾರಾಕರ್ಷಣಸಮಾನಮಾದುದೆನಿಪ್ಪೆಂ || ೯೪

ವ || ಅನಂತರಂ ನಿಜಾರೂಢವ್ಯಾಳಶುಂಡಾಲಮಂ ಬಳಸಿ ನಿಂದ ಮೌಳಿಬಲಮನರನೆಲೆಗೆ ನೂಂಕಲ್ ವೇೞ್ದು ತದ್ಬಲದಿನರಾತಿಯಳವಱಿದು ಬಱಿಯಮೆನ್ನ ಕೂರ್ಪಂ ತೋರ್ಪೆ ನೆಂದಿರ್ಪಿನಂ ಪದ್ಮನಾಭನರನಾಥನಾತನ ಮನಮುಮಂ ಪತ್ತೆಸಾರ್ವ ತಳವರ್ಗದ ನಿಗ್ರಹವೃತ್ತಿಯುಮಂ ಕಂಡಿದು ಮದೀಯವಿಕ್ರಾಂತದರ್ಶನಾರ್ಥಮೆಂದು ಮುಂದಣ ತನ್ನ ತಳತಂತ್ರಮಂ ಕೆಲಕ್ಕೆ ತೊಲಗವೇೞ್ದು ಸಿಂಗದಣ್ಮುಮನೈರಾವತದಳವುಮಂ ಪವನಜ ವಮುಮನೊಳಕೆಯ್ದು ಗುಳುಗಳಿಸುತಿರ್ದ ವನಕೇಳೀವಾರಣಮನಣೆದು ನೂಂಕಿ-

ಕಂ || ವಿಸಟಂಬರಿಯಿಸಿದೊಡದೆ
ಣ್ದೆಸೆಗಂ ತನ್ಮಯದೆ ಪರಿದು ಕಲ್ಪಕ್ಷಯದೊಳ್‌
ಮಸಗಿದ ದೆಸೆಯಾನೆಯಿದೆಂ
ಬೆಸಕದ ತೋಱಿತ್ತು ಚಿತ್ರವಿಧಮಂ ವಧಮಂ || ೯೫

ಚಂ || ಚರಣತಳಪ್ರಘಾತದೆ ಪದಾತಿಗಳಂ ನಖರಪ್ರಹಾರದಿಂ
ತುರಗದೞಂಗಳಂ ಕರಸಮಾಹತಿಯಿಂ ರಥಸಂಕುಳಂಗಳಂ
ಕರರದದಘಾತದಿಂ ದ್ವಿರದಸೇನೆಗಳಂ ತವೆ ನುರ್ಗುಮಾಡಿ ಭೀ
ಕರತರಮಾಯ್ತಿಭಂ ವಿಲಯಕಾಲಕರಾಳಲುಲಾಯಸನ್ನಿಭಂ || ೯೬

ತುೞಿದು ಕೆಲಂಬರಂ ಕೆಲಬರಂ ನಖದಿಂದಿಱಿದೆಯ್ದೆ ಹಸ್ತದಿಂ
ಪಿೞಿದು ಕೆಲಂಬರಂ ಕೆಲಬರಂ ತೆಱವಿಂದಣೆದೆತ್ತಿ ಕೋಡೊಳ
ಪ್ಪೞಿಸಿ ಕೆಲಂಬರಂ ಕೆಲಬರಂ ಕಡೆವಾಯೊಳವುಂಕಿ ಕೊಂದುದು
ಳ್ಕೞಿಯದೆ ನಿಂದರಂ ತುೞಿಲಸಂದರನಾವನಕೇಳಿವಾರಣಂ || ೯೭

ವ || ಆಗಳ್-

ಮ || ವಿ || ಪುದಿದಿರ್ದಾಚತುರಂಗಸೇನೆ ಕಿಱಿದಾಂತೞ್ಕಾಡೆಯುಂ ಬಲ್ಪಡಂ
ಗಿದುದಿಲ್ಲೊಲ್ಲದೆ ಭೀತಿಯಿಂ ಕಿಱಿದು ಬೆನ್ನಿತ್ತೋಡೆಯುಂ ಕಾಯ್ಪುಗುಂ
ದಿದುದಿಲ್ಲಿ ತನೆ ಗಂಡನೆಂದೆನಿಸಿದಂ ಮಾರ್ಪಾಡಿಯಿಂ ಬೂದಿ ಪಾ
ಱಿದ ಕೆಂಡಕ್ಕೆಣೆಯಾಗಿ ನಿಂದು ಪೃಥಿವೀಪಾಲಾವನೀಪಾಲಕಂ || ೯೮

ವ || ಅಂತವಲಂಬಿತಧೈರ್ಯನುಂ ದ್ವಿಗುಣಿತಶೌರ್ಯನುಮಾಗಿ ತನ್ನೊಳಿಂತೆಂದಂ-

ಕಂ || ಎನಿತಂ ಬೆಳ್ಮಿಗಮಂ ಗೆ
ಲ್ದನಿತಱೊಳಾಂತಪುದೆ ಶರಭಮಂ ಕೇಸರಿ ಮ
ತ್ತೆನಿತಂ ಬೆಳ್ಳಾಳಂ ಗೆ
ಲ್ದನಿತಱೊಳಂ ಪದ್ಮನಾಭನೆನಗಾಂತಪನೇ || ೯೯

ವ || ಎಂದು ಮಾಣದೊಂದೆ ಮೆಯ್ಯೊಳ್ ಸಾವಂಗೆ ಸಂಗಡವೇಕೆಂಬಂತೆ ದಂತಿಯಂ ಕೀಱಿ ಬಿಟ್ಟು ಸೈತೆಯ್ತರ್ಪುದುಂ ಸೋಮಪ್ರಭಾಪ್ರಿಯನ ಪಕ್ಕದ ಪಿಡಿಗಳೊಳಿರ್ದ ಮಂತ್ರಿ ಮಂಡಳಿ ಕಂಡು ಪತ್ತೆಸಾರ್ದು-

ಕಂ || ಸಾಹಸಮಂ ಪೂಣ್ದಂ ರಿಪು
ಸಾಹಸಮುಂ ನಾಹಮಸ್ಮಿಯೆಂಬಿನಿತದಱಿಂ
ಸಾಹಸಿಕನೆ ಕಡುಗಲಿ ವಿಷ
ಮಾಹವಮೀ ನಿಮಗಮಪ್ರಮತ್ತತೆಕೃತ್ಯಂ || ೧೦೦

ವ || ಎಂದಂತು ಬಿನ್ನವಿಸಿದ ಮಂತ್ರಿಗಳ ವಚನಕ್ಕನುಮತಿವಚನದಿಮುಮನಾಹವಕ್ಕವಗಾಹನ ವೃತ್ತಿಯುಮಂ ದರಸ್ಮಿತದಿನಱಿಪುತ್ತುಮವರನಿರಿಮೆಂದು ತಾನುಮೇಕಾಂಗದಿಂ ಮತ್ತಮ ತಂಗಜಮನಣೆದು ನೂಂಕಿ ನಿಶ್ಯಂಕವೃತ್ತಿಯಿಂ ನಡೆವಾಗಳ್-

ಕಂ || ದೂತಂಗೋಲಗದೊಳ್ ಪೆ
ರ್ಮಾತಂ ಮಗನಿಂದೆ ನುಡಿಯಿಪೆಡೆಯಲ್ತಿದು ಸಂ
ಜಾತಸಮರಾವಸರಮಿ
ನ್ನೀತೆಱದೊಳಮಱಿಯಲಕ್ಕುಮೆನಗಂ ನಿನಗಂ || ೧೦೧

ವ || ಅಂತು-

ಚಂ || ಗಜರಿಪುನಾದದಿಂ ಗಜಱಿ ಗರ್ಜಿಸಿ ತತ್ಖಳನಿಟ್ಟ ಶಕ್ತಿಯಂ
ನಿಜಕರಶಕ್ತಿಯಿಂ ಪ್ರಬಳಶಂಕುವನುದ್ಧರಶಂಕುವಿಂ ಸಮಂ
ತಜನಿಪ ಕುಂತಮಂ ನಿಶಿತಕುಂತದಿನೋವದೆ ನುರ್ಗುಮಾಡಿದಂ
ಗುಜುಗುಜುಗೊಳ್ವ ಮಂತ್ರಿಗಳ ಚಿತ್ತದ ಸಂದೆಗಮೋಡೆ ನಾಡೆಯುಂ || ೧೦೨

ವ || ಅನಂತರಮಿವಂ ವ್ಯರ್ಥಾಯಾಸನುಂ ಮುಕ್ತಮರಣತ್ರಾಸನುಮಪ್ಪುದಱಿಂ ಮೇಲ್ವಾಯ್ದು ರವರಿಸಿದನೆಂದಱಿದು ಮುನ್ನಮೆ ಕರಮುಕ್ತಶಸ್ತ್ರಪಾತಪ್ರಮಾಣಭೂಮ್ಯಂತರದೊಳ್‌

ಉ || ಪೂಣಿಸಿ ಕಂಠಮಂ ತಿರಿಪಿ ಚಕ್ರದೊಳಿಟ್ಟೊಡೆ ನೀಳಶೈಳದಿಂ
ಕ್ಷೋಣಿಗುರುಳ್ವ ಗುಂಡೆನೆ ಶಿರಂ ಕರಿಯಿಂದೆ ನೆಲಕ್ಕೆ ಬೀೞೆ ಮುಂ
ಕಾಣದ ಬೆನ್ನನಿಂ ಪಗೆಗೆ ತೋಱೆನೆನುತ್ತೆ ಮರಲ್ವವೋಲ್ ಗತ
ಪ್ರಾಣಮದೇಂ ಮಲಂಗಿದುದೊ ಸಾರಿಯನಂದು ಕಬಂಧಮಾತನಾ || ೧೦೩

ವ || ಆ ಸಮಯದೊಳ್‌

ಕಂ || ತೀವಿದುದು ನಭಮನಮರರ
ಹೋವೀರನಿನಾದದೊಡನೆ ತತ್ಕರತಳಲೀ
ಲಾವಿಗಳದಮರತರುನಿಕ
ರಾವಿರಳದಳತ್ಪ್ರಸೂನವಿಸರಾಸಾರಂ || ೧೦೪

ಮ || ಸ್ರ || ಘನಸಂಗ್ರಾಮಾಂಧಕಾರಂ ಪರೆಯೆ ರಿಪುಕಬಂಧೋಚ್ಚಲದ್ರಕ್ತಸಂಧ್ಯಾ
ಜನಿತಂ ರಾಗಂ ತೆರಳ್ದೋಸರಿಸೆ ನಿಜಚಮೂಚಕ್ರಚಕ್ರೋತ್ಸವಂ ಪೆ
ರ್ಚೆ ನಮದ್ಭೂಪಾನನಾಂಭೋರುಹಮಲರೆ ನವೀನೋದಯಾರ್ಕಂಬೊಲಾಗಳ್
ವನಕೇಳೀಪೂರ್ವಶೈಲಾಗ್ರದೊಳೆಸೆದನೂನಪ್ರಭಂಪದ್ಮನಾಭಂ || ೧೦೫

ವ || ತೃತೀಯದ್ವೀಪದಂತೆ ನಿವಿಷ್ಟೇಷ್ಟಾಕಾರಮಾನುಷೋತ್ಕರಮುಂ ಕುರುಧರೆಗಳಂತೆ ಪರಿಚ್ಛಿನ್ನ ಗಜದಂತಿನಿರತಮುಂ ಐರಾವತಕ್ಷೇತ್ರದಂತೆ ರಕ್ತಾಪಗಾಪ್ರವಾಹಪರಿಚಿತಮುಂ ನಿರಯ ನಿಳಯದಂತೆ ಪತಿತಾಸಿಪತ್ರಭೀಷಣಪ್ರದೇಶಮುಂ ಕಾಲೋದಕವಾರ್ಧಿಯಂತೆ ಪರಿನಿಷ್ಕೃ ತಪುಷ್ಕರಾರ್ಧಮುಮಪ್ಪಸಂಗ್ರಾಮಭೂಮಿಯಂ ಪೊಱಮಟ್ಟು ತನ್ನಿಕಟದೊಳೆನಿಂದು ನಿರ್ನೀತವೇತನಋಣರುಂ ಶಸ್ತ್ರಘಾತಮರಣರುಮಾದ-

ಕಂ || ಬಂಧುನೃಪಾಲರ ನಿಜಸಂ
ಬಂಧಿಗಳ ಶರೀರದಹನಲೌಕಿಕಮಂ ನಿ
ರ್ಬಂಧದೆ ಮಾಡಿಸಿದಂ ದಯೆ
ಯಿಂ ಧರಣಿಪನಿಂಧನೀಕೃತೇಷುಪ್ರಸರಂ || ೧೦೬

ವ || ಅಂತು ಮಾಡಿಸಿ ಬೞಿಯಂ ದುಸ್ಸಹರಣವ್ರಣಿತಮಾದ ಸೇನೆಯಂ ಸನ್ಮಾನವಾಹನ ಪುರಸ್ಸರಂ ಬೀಡಿಂಗೆ ಕಳಿಪುತ್ತಿರ್ಪನ್ನೆಗಂ-

ಕಂ || ಮಾಂದದೆ ಕುಂದದೆ ಬಣ್ಣಂ
ಬಂದಂ ತದ್ದ್ರಿಪುವೆನುತ್ತೆ ಭೀಭತ್ಸಲತಾ
ಕಂದಮನೆ ತರ್ಪತೆಱದಿಂ
ತಂದಿೞಿಪಿದನಿದಿರೊಳೊರ್ವನಾಪಂದಲೆಯಂ || ೧೦೭

ವ || ಅದಂ ಮದಗಜೋತ್ತುಂಗಮಸ್ತಕನ್ಯಸ್ತಸ್ವಸ್ತಿಕಂ ನೋೞ್ಪಾಗಳ್-

ಚಂ || ಅರೆಮುಗಿದಿರ್ದ ದಿಟ್ಟಿ ನಸುಗರ್ಚಿದ ನಾಲಗೆ ಬಿರ್ಚಿ ನೆತ್ತರೊಳ್
ಪೊರೆದ ಶಿರೋರುಹಂ ಪುಡಿ ಪಗಿಲ್ತತಿಧೂಸರವಾದ ಮೀಸೆ ಭೋ
ರ್ಗರೆದೆಱಗುತ್ತುಮಿರ್ಪ ನೊೞಮುಣ್ಮುವ ಪುಣ್ಬೊಲಸೆಂಬಿವೆಯ್ದೆ ಕೊ
ಕ್ಕರಿಕೆಯನೀಯೆ ಭೂಮಿಪಸುತಂ…ತನುವೆಂದು ಪೇಸಿದಂ || ೧೦೮

ವ || ಅಂತನುಪ್ರೇಕ್ಷಾವಿಚಕ್ಷಣಮತಿಯಪ್ಪುದಱಿಂ ಶರೀರಾಶುಚಿತ್ಪಾಧುೃವತ್ವಂಗಳ್ ಮನದೊಳ್ ನೆಲಸೆ ಕೆಲದೊಳಿರ್ದ ಪುರುಭೂತಿಪ್ರಭೃತಿಮಂತ್ರಿವರ್ಗಕ್ಕಿಂತೆಂದಂ-

ಕಂ || ಸಲೆ ಶುಚಿಯೊಡಲೆಂದೆಗ್ಗರ
ತಲೆನಾಯಕನೆಂಗೆ ಬಲ್ಲವಂಗಾಮೊಲಗ
ೞ್ತಲೆಯಂತೆ ನೀಳ್ದ ತಲೆ ಮೂ
ದಲಿಸುತ್ತಿರ್ದಪುದನುಕ್ತಸಿದ್ಧಮದೀಗಳ್ || ೧೦೯

ಮಾತೇಂ ರೇತಶ್ಫೋಣಿತ
ಜಾತಕ್ಕೆತ್ತಣದೊ ಶುಚಿತೆ ಪರಿಭಾವಿಪೊಡಿಂ
ತೀತನುಗೆ ರುಗ್ಜರಾಪರಿ
ಭೂತಕ್ಕೆತ್ತಣದೊ ಚಿರತೆ ನಚ್ಚುವನೆಗ್ಗಂ || ೧೧೦

ತಾಂ ಜರಯ ಗೊತ್ತು ಕುತ್ತದ
ಪುಂಜಂ ಪಂದೊವಲ ಪಂಜರಂ ಪಾಪದ ಬೀ
ಜಂ ಜೀವದ ಸೆಱೆವನೆ ಜವ
ನೆಂಜಲಿಸಿದ ಬುತ್ತಿ ತನುವೆನಿಪ್ಪುದು ಪುಸಿಯೇ || ೧೧೧

ಅಂಬಿಗನ ವಶದೆ ಪಱುಗೋಲ್
ತುಂಬಿದ ತೊಱೆಯೊಳಗೆ ಸುೞಿವ ತೆಱದಿಂ ಸಂಸಾ
ರಾಂಬುಧಿಯೊಳ್ ಸುೞಿವುದು ಜೀ
ವಂಬಿಡಿದೊಡಲಲ್ಲದಂದು ಚೇತನಮುಂಟೇ || ೧೧೨

ವ || ಅಂತುಮಲ್ಲದೆಯುಂ-

ಅಯ್ದುಂ ವಿಷಯಸುಖಂಗಳ
ನೆಯ್ದಿಪಮೀತನುಗೆನುತ್ತೆ ಸಿಂಗದ ತಲೆಗಂ
ಪಾಯ್ದು ವಿಮೋಹದಿನಕ್ಕಟ
ಮಾಯ್ದ ಜನಂ ಬರ್ದುತಿರ್ದಪುದು ಸಂಸೃತಿಯೊಳ್ || ೧೧೩

ಎಂದುಂ ಧರಣಿಯನುಯ್ದಾ
ಟಂದಡಲೆಯುತ್ತುಮಿರ್ಪುದಾಗ್ರಹದಿಂ ತ
ಮ್ಮೊಂದೞಿಯೊಡಲಂ ರಕ್ಷಿಸ
ಲೆಂದೆನಲವಿವೇಕಮರಸುಗಳ್ಗೊಚ್ಚತಮೋ || ೧೧೪

ಕಾವರಿವರೆಂದು ಕರಮಂ
ಜೀವಿತಮೆಂಬಂದದೀಯೆ ಷಡ್ಭಾಗಮನಿಂ
ತೀವಸುಧಾಜನಮದಱಿಂ
ದಾವೆನಿಸುವರರಸರೆಂದು ಬಗೆದತಿವಿರಸಂ || ೧೧೫

ವ || ಮತ್ತಂ-

ಮ || ವಿ || ನವರಾಜ್ಯಾಭಿಷವಾರಿಶೀತಜಲದಿಂದಂ ಸನ್ನಿಪಾತಂ ತಗು
ಳ್ದವೊಲಂತಿನ್ನುಡಿಯರ್ ತದುತ್ಸವಸಮುದ್ಯದ್ದುಂದುಭಿಧ್ವಾನದಿಂ
ಕಿವಿಗೆಟ್ಟಂತಿರೆ ಕೇಳರಾ ನೊಸಲ ಪಟ್ಟಂ ಜೋಲ್ದು ಕಾಣ್ಗಾವಗಂ
ಕವಿದಿರ್ದಂದದೆ ಕಾಣರಿನ್ನುಮರಸರ್ ಸಂಪನ್ಮದೈಕಾಲಸರ್ || ೧೧೬

ಕಂ || ತೊದಳಂ ನುಡಿವರ್ ನಡೆಯರ್
ಪದುಳಂ ಕಿಸುಗಣ್ಚಿ ನೋಡುವರ್ ತಮ್ಮುಮನಿಂ
ತಿದಿರುಮನೇನೆಂದಱಿಯರ್
ಮದಿರೋನ್ಮತ್ತರವೊಲವನಿಪಾಲರ್ ಪಲರುಂ || ೧೧೭

ಭಕ್ತದ್ವೇಷಂ ಜಡಸಂ
ಸಕ್ತಿ ಸದಾಚರಿತಲಂಘನಂ ವಿಕಲವಚೋ
ಯುಕ್ತಿ ಕಟುಮುಖತೆ ಕುಂದದ
ಮುಕ್ತಜ್ಜರನಂದದಿಂದಮರಸರೊಳೆಂದುಂ || ೧೧೮

ಕುಂದದು ಬೆಳ್ಗೊಡೆಯ ನೆೞ
ಲ್ಗೊಂದಿನಿತುಂ ತೃಷ್ಣೆ ನೃಪರ ದುರ್ಗುಣದೊಳ್ ಮ
ತ್ತೊಂದಿನಿತು ಪಾಱದಿದು ಬಿಸ
ವಂದಂ ಚಮರರುಹಪವನಪಾತದಿನೆಂದುಂ || ೧೧೯

ಮಱೆದುಂ ಕಾಣರ್ ಕಂಡೊಡ
ಮಱೆಯರ್ ಮಾನ್ಯರಿವರೆಂದು ಮತ್ತಱಿದೊಡಮೇಂ
ತೊಱೆವರ್ ದಾಕ್ಷಿಣ್ಯಮುಮಂ
ತೆಱನಿಂತುಟು ನೋಡೆ ಸಿರಿಗರಂ ಪೊಡೆದವರಾ || ೧೨೦

ಕನಕಾಭಿಧಾನಸಾಮ್ಯದೆ
ಜನಿಯಿಪುದುನ್ಮತ್ತವೃತ್ತಿಯಂ ಧುತ್ತೂರಂ
ಕನಕಮೆ ತಾಂ ತತ್ ಕ್ಷಣದೊಳ್
ಜನಿಯಿಪುದಚ್ಚರಿಯೆ ಜನದ ಮನದೊಳ್ ಮದಮಂ || ೧೨೧

ಸಿರಿಯೆಂಬ ಪಾಣ್ಬೆಯಾಗಳೆ
ಸರಕ್ತೆಯಾಗಳೆ ವಿರಕ್ತೆಯವಳೊಲವನದಂ
ಚಿರಮೆಂದು ನಚ್ಚುವಂಗಂ
ಚಿರಮಕ್ಕುಮೆ ಬಗೆವೊಡಱಿವುಮಱವುಂ ನೆರವುಂ || ೧೨೨

ಮಿಥ್ಯಾಜ್ಞಾನತೆಯಿನಸ
ನ್ಮಿಥ್ಯಾಚರಣಕ್ಕೆ ಸಂದು ಸಲೆ ಸತ್ಪಥಮಂ
ತಥ್ಯಮನೊಲ್ಲದೆ ರೋಗಿಗ
ಪಥ್ಯಕ್ರಿಯೆಯಾದ ತೆಱದೆ ಕಿಡುವರ್ ಪಲರುಂ || ೧೨೩

ವ || ಎಂದು ನುಡಿದು ಮತ್ತಂ ತನ್ನೊಳಿಂತೆಂದಂ-

ಕಂ || ಒಡಲಧ್ರುಮಶುಚಿಯಿದಂ
ಬಿಡುವುದು ಧರ್ಮಮನೆ ಪಿಡಿವುದೆಂದಾತೆಱದಿಂ
ನಡೆಯದೆ ಮಱೆದಾನಿಂತಿ
ರ್ದೊಡೆ ಕಮ್ಮರಿಯೋಜನೆಂಬ ನುಡಿಗೆಡೆಯಪ್ಪೆಂ || ೧೨೪

ಕರಣಗ್ರಾಮಂಗಳ್ ಮಾಂ
ಕರಿಸಿದುವಿನ್ನೆವರಮರಸುತನದೊಳಮೆನ್ನಂ
ಪರಮತಪೋಗ್ನಿಯಿನಿನ್ನವ
ನುರಿಪುವೆನಲ್ಲದೊಡೆ ಬಲ್ಪು ಕಡೆಯೈದುಗುಮೇ || ೧೨೫

ವ || ಅಂತು ಸಂಸಾರಶರೀರಭೋಗನಿರ್ವೇಗಪರತಂತ್ರನಾತ್ಮತಂತ್ರಮಂ ವಿಷತಂತ್ರಮೆಂದುಂ ಮಂತ್ರಿಯನಾಭಿಚಾರಿಕಮಂತ್ರಿಯೆಂದುಂ ಕೋಶಮಂ ಮಧುಕೋಶಮೆಂದುಂ ದೇಶಮನ ಹಿತೋಪದೇಶಮೆಂದುಂ ಸಹಜಸಖನಂ ವಾಯುಸಖನೆಂದುಂ ದುರ್ಗಮಂ ವೃಜಿನ ದುರ್ಗಮೆಂದುಮಿಂತು ಸಪ್ತಾಂಗಮುಮಂ ದೀರ್ಘಸಪ್ತಾಂಗಮಾಗೆ ಬಗೆದಿೞಿಕೆಯ್ದು-

ಕಂ || ಬಳವದ್ರಿಪುವಂ ಚಕ್ರದ
ಬಳದಿಂ ಗೆಲ್ದಿರ್ದ ಕಳದೊಳಘರಿಪುವುಮನಾ
ಗಳೆ ಧರ್ಮಚಕ್ರಬಲದಿಂ
ದಿಳಾಧಿಪತಿ ಗೆಲಲೊಡರ್ಚಿದಂ ವಿಜಯಪರಂ || ೧೨೬

ವ || ಅಂತೊಡರ್ಚಿ ಬೞಿಯಂ ನಿಜತನೂಭವಂ ಸುವರ್ಣನಾಭನುಮಂ ಪೃಥ್ವೀಪಾಲ ನಂದನಂ ಧರ್ಮಪಾಲನುಮಂ ಕುಲವೃತ್ತಿಯೊಳ್ ನಿಲಿಪುದೆಂದು ಸಾಮಂತಸಂದೋಹಕ್ಕೆ ಮಂತ್ರಿಮಂಡಳಿಗಮಪ್ಪಯ್ಸಿ-

ಮ || ವಿ || ಪಱಿದಾತ್ಮಪ್ರಿಯದಾರದಾರಕಸುಹೃತ್ಸಂಬಂಧಬಂಧಂಗಳಂ
ಮುಱಿದುರ್ವೀವಲಯಾಧಿರಾಜ್ಯಸುಖಸೇವಾರಂಭಣಸ್ತಂಭಮಂ
ಮೆಱೆದುದ್ಭೂತವಿರಕ್ತವೃತ್ತಮದಲೀಲಾವೇಗಸಂಯೋಗದಿಂ
ಪೊಱಮಟ್ಟತ್ತು ತಪೋವನಕ್ಕೆ ತದಿಳಾಪಾಲೋದ್ಧುರಂ ಸಿಂಧುರಂ || ೧೨೭

ಮ || ಸ್ರ || ಸಿರಿವೆಣ್ಣಂ ದೂವೆದೊೞ್ತಿಂಗೆಣೆಯೆನೆ ಬಗೆದಂ ಮತ್ತಮಾವಿಶ್ವವಿಶ್ವಂ
ಭರೆಯಂ ಮೃತ್ಪಿಂಡಮಾತ್ರಾಕೃತಿಯೆನೆ ಬಗೆದಂ ಜೈನದೀಕ್ಷಾವ್ಯಪೇಕ್ಷಾ
ತುರನಾತ್ಮೀಯಾಂಗಮಂ ಕಲ್ಮಠನೆನೆ ಬಗೆದಂ ಲಬ್ಧಲಬ್ಧಿಪ್ರವೇಶಂ
ಧರಣೀಶಂ ವರ್ಜಿತಾಶಂ ಪರಮಸುಖವಶಂ ಕಾವ್ಯನೌಕರ್ಣಧಾರಂ || ೧೨೮

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ವಿಜಯಜನಿತವೈರಾಗ್ಯವರ್ಣನಂ
ದಶಮಾಶ್ವಾಸಂ