ಕಂ || ಅಹಮಹಮಿಕೆಯಿಂದಂತಾ
ಮಹೋತ್ಸವಕ್ಕೊರ್ವರಿರದೆ ಕಲ್ಪಜರೆಲ್ಲಂ
ಗೃಹಸಮಿತಿಯ ಮೇಲ್ನೋಟ
ಕ್ಕಹಮಿಂದ್ರರೆ ನಿಂದರೆನಿಸಿ ಬಂದರ್ ಮುದದಿಂ || ೪೬

ಕಂ || ಆಗಳ್‌

ಕಂ || ಅನುರಾಗಭರಮನಾ ದೇ
ವನಿಕಾಯಂ ತಲೆಯೊಳೆಯ್ದೆ ತಳೆದೆೞ್ತಂದ
ತ್ತೆನಿಸಿದುವು ಮಣಿಮಯೋತ್ತಂ
ಸನಿರಂತರನಿರ್ಯದರುಣರುಚಿಮಂಜರಿಗಳ್ || ೪೭

ಕಟ್ಟಿದ ಸೂಯಾಣದ ಮೇ
ಲ್ಗಟ್ಟೋ ನವಪದದ ಮಣಿವಿತಾನಮೊ ಪೆಱದ
ಲ್ಲಿಟ್ಟವರೋಪಮೊ ದಿಟಕೆನೆ
ದಿಟ್ಟಿಗೆ ಚೆಲ್ವಾಯ್ತು ನಭದೊಳಮರಾಗಮನಂ || ೪೮

ಶಾ || ಆ ವ್ಯೋಮಂ ವಿಚಳದ್ವಿಮಾನಮಯಮಾಶಾಮಂಡಳಂ ಜೀವನಂ
ದವ್ಯಾಹಾರಮಯಂ ದಿನಂ ಮಣಿವಿಭೂಷಾರುಗ್ಮಯಂ ಮಾರುತಂ
ದಿವ್ಯಾಮೋದಮಯಂ ಧರಾವಿಳಯಮುದ್ಯದ್ದರ್ಶವಿತ್ತೇಶವ
ರ್ಷವ್ಯಾಭಾಸುರರತ್ನರಾಶಿಮಯಮೇಂ ಚೆಲ್ವಾಯ್ತೊ ದೇವಾಗಮಂ || ೪೯

ವ || ಅಂತು ಮಂಗಳೋಪಕರಣವ್ಯತಿಕರಿತಕರಚತುರ್ವಿಧಾಮರಪ್ರಕರಪುರಸ್ಸರಮಹಾವಿಭೂ ತಿಯಿಂ ಚಂದ್ರಪುರಕ್ಕೆ ವಂದು ತದ್ವಿಶಾಳಶಾಲಾಗ್ರದೇಶದೊಳ್‌ ನಿಲ್ವುದುಂ ನಗರನಾರೀಜನಂ ಗಳುತ್ತುಂಗಪ್ರಾಸಾದಸೌಧಶಿಖರಂಗಳನೇಱಿ-

ಮ || ವಿ || ಇದು ದಲ್ ಮುಕ್ತನಿಮೇಷನೇತ್ರಮನಿಮೇಷಪ್ರೇಯಸೀಸ್ತೋಮಮಿಂ
ತಿದು ದಲ್ ಸ್ಫಾರಫಣಾತ್ತಮೌಳಿಫಣಭೃದ್ಭಾಮಾಸಮೂಹಂ ಬೞಿ
ಕ್ಕಿದು ದಲ್ ಜ್ಯೋತಿರುದಾತ್ತಮೂರ್ತಿರುಚಿರಂ ಜ್ಯೋತಿಷ್ಕಕಾಂತಾಳಿ ಮ
ತ್ತಿದು ದಲ್ ವನ್ಯಲತಾಂತಭೂಷಣಗಣಂ ವಾರಾಂಗನಾಸಂಕುಳಂ || ೫೦

ವ || ಎಂದು ನೋೞ್ಪನ್ನೆಗಂ ಸೌಧರ್ಮೇಂದ್ರಂ ಪ್ರಥಮದ್ವಿತೀಯಕಲ್ಪಾಧಿಪರ್ವೆರಸು ಗಗನ ಮಾರ್ಗದಿಂ ಬಂದವತರಿಸುವಾಗಳ್-

ಮ || ಸ್ರ || ಪುಗೆ ಪಶ್ಚಾರ್ಧಂ ಪುರೋಭಾಗಮನೊಗೆದಿನಿತಂ ಬಿರ್ಚೆ ಪೂರ್ವಾಂಘ್ರಿಹಸ್ತಂ
ತೆಗೆದಂ ಸಂಸ್ಥಾನದೊಳ್ ಮಂಡಳಿಸಿರೆ ಬಿಗಿಪಂ ತಾಳ್ದೆ ಕರ್ಣಂ ಮನಂ ದಿ
ಟ್ಟಿಗಳೊಳ್ ತಳ್ಪೊಯ್ಯೆ ಭಾಳಸ್ಥಳವಿನಿಹಿತಸಂಧಾರ್ಯಮಾಣಾಂಕುಶಾಗ್ರಂ
ಬಗೆಗತ್ಯಾಶ್ಚರ್ಯಮಾಯ್ತಾಗಸದಿನಿೞಿಯುತುಂ ಭೂಮಿಗಿಂದ್ರದ್ವಿಪೇಂದ್ರಂ || ೫೧

ವ || ಅಂತು ರಾಜಭವನಪ್ರಾಂಗಣದೊಳವತರಿಪುದುಂ ಶಚೀಮಹಾದೇವಿ ನಿಜಪತಿವಚನದಿಂ ಶಾಂತಪದಸಂಹಿತೆಯಂತೆ ತಿರೋಹಿತಾಕಾರೆಯಾಗಿ ಲಕ್ಷ್ಮಣಾಮಹಾದೇವಿಯ ಸೂತಿಕಾ ನಿವಾಸಮಂ ಪೊಕ್ಕು-

ಕಂ || ಉದಯಾದ್ರಿಚೂಳಿಕಾಪಾ
ರ್ಶ್ವದ ಬಾಳಸುಧಾಂಶುವೆನಿಸಿ ನಿಜಜನನಿಯ ಪ
ಕ್ಕದೊಳಿರ್ದ ಬಾಲನಂ ಕಾ
ಣ್ಬುದುಮಲರ್ದುವು ಶಚಿಯ ನಯನಹೃತ್ಕುಮುದಂಗಲ್ || ೫೨

ಹರಿಸತಿ ಜಿನತನುವಂ ಜಾ
ತರೂಪವಿಳಸಿತನಿಧಾನಮಂ ಕಂಡೊಸೆದಳ್
ಹರಿಸದೊಳೊಂದುವವೊಲ್ ಜಾ
ತರೂಪವಿಳಸಿತನಿಧಾನಮಂ ಕಂಡಧನಂ || ೫೩

ವ || ಅನಂತರಂ-

ಕಂ || ಅಱಸಿ ತೊೞಲ್ತಂದಾನಿಧಿ
ಗೆಱಗುವವೊಲ್ ದೀಪವರ್ತಿ ಪೌಳೋಮಿಯುಮ
ೞ್ಕಱೊಳಂದು ಮೂಮೆ ಬಲವಂ
ದೆಱಗಿದಳಾ ಬೋಧನಿಧಿಯ ಪದಸನ್ನಿಧಿಯೊಳ್ || ೫೪

ವ || ಆಗಳ್-

ಕಂ || ಮಾಯಾಶಿಶುವುಮನೊರ್ಮೆಯೆ
ಮಾಯಾನಿದ್ರೆಯುಮನಿತ್ತಳಂಬಿಕೆಗೆ ಜಗ
ಜ್ಯಾಯನನುಯ್ವ ನಿಜಾಭಿ
ಪ್ರಾಯದೆ ಶಚಿ ಶುಚಿಗಳಾರೊ ಕಾರ್ಯೋತ್ಕಂಠರ್ || ೫೫

ಶಿಶುಗೆ ನಯನಾಂಶುದುಗ್ಧ
ಪ್ರಸರದೆ ಜನ್ಮಾಭಿಷೇಕಮಂ ಮುನ್ನೊಂದಂ
ಪೊಸೆಯಿಸಿ ಸರೋಜದಿಂದ
ರ್ಚಿಸುವಂತಿಂದ್ರಾಣಿ ನೆಗಪಿದಳ್ ಕೆಂದಳದಿಂ || ೫೬

ವ || ಅಂತನರ್ಘ್ಯರತ್ನಮಂ ತಡಿಗೆ ತರ್ಪ ರತ್ನಾಕರೋರ್ಮಿಯಂತೆ ತರ್ಪಲ್ಲಿ-

ಕಂ || ಜಂಗಮಲತೆಗಳವೊಲ್ ದಿವಿ
ಜಾಂಗನೆಯರ್ ಮುಂದೆ ನಡೆದರೆಸೆವಲರ್ಗುಡಿಗಳ್‌
ಭೃಂಗಾರಂಗಳ್ ಭೃಂಗರ
ವಂಗಳ್ ಗೀತಾರವಂಗಳೆಂಬಿನಮಾಗಳ್ || ೫೭

ವ || ಅನಂತರಂ ನಿಜಪತಿಪ್ರಸಾರಿತದಿಕ್ಕರಿಕರಾನುಕಾರಿಕರಯುಗಳಕ್ಕೆ ನೀಡಲೊಡಂ-

ಕಂ || ಇಂತೆ ನೆಗಪುವುದು ನೀನೆ
ನ್ನಂ ತಡೆಯದೆ ತೀರ್ಥನಾಥ ನಿಶ್ರೇಯಸಪ
ರ್ಯಂತಮೆನುತ್ತುಂ ಮೃದುತಳ
ದಿಂ ತಳೆದಮರಪತಿ ನೆಗಪಿದಂ ಸಂತಸದಿಂ || ೫೮

ಸೌಧರ್ಮೇಂದ್ರಂ ಮುಕ್ತಿ
ಶ್ರೀಧವನಂ ಬಾಹುಶಾಖೆಯೊಳ್ ತಳೆದೇನು
ದ್ಬೋಧಿಸಿದನೊ ಫಳಕಳಿತ
ಶ್ರೀಧರ್ಮನಮೇರುಭೂರುಹಾಡಂಬರಮಂ || ೫೯

ಪರಮನ ಪದಸರಸಿಜಮಂ
ಶಿರದೊಳ್‌ ರತ್ನಾವತಂಸಮಂ ನೊಸಲೊಳ್ ಭಾ
ಸುರಪಟ್ಟಮನುರದೊಳ್‌ ಬಂ
ಧುರಪದಕಮನಾಂಪ ತೆಱದಿನಾಂತಂ ಶಕ್ರಂ || ೬೦

ನೋಡಿದ ಕಣ್ಮಲರೊಳ್ ತು
ಳ್ಕಾಡಿದುದಾನಂದಬಾಷ್ಪಮಕರಂದಚಯಂ
ಕೂಡೆ ಪುಳಕಾಂಕುರಾವಳಿ
ಮೂಡಿದುದಂದೆತ್ತಿಕೊಂಡ ದೋರ್ವಲ್ಲರಿಯೊಳ್ || ೬೧

ವ || ಅಂತನೇಕಜನ್ಮದುರ್ಲಭಮಪ್ಪ ದೇವರವಲ್ಲಭನ ಪರಮೌದಾರಿಕಶರೀರದರ್ಶನಸ್ಪರ್ಶ ನಂಗಳಿನಾದ ಹರ್ಷೋತ್ಕರ್ಷಮನನುಭವಿಸಿಯುಂ ಅಭಿನಯಿಸಿಯುಂ ಬೞಿಯಮತ್ಯಂ ತಮೃದುಳಕಲ್ಪದ್ರುಮದುಕೂಲವಸನಪ್ರಚ್ಛನ್ನಮುಂ ಸಾಂದ್ರಹರಿಚಂದನದ್ರವಾಭ್ಯುಕ್ಷಿತ ಮುಮಪ್ಪ ದಕ್ಷಿಣಾಂಕದೊಳ್ ಕುಳ್ಳಿರಿಸಲೊಡಂ-

ಮ || ವಿ || ಅನುರಾಗಂ ನಿಜಮಾಗಿ ತೋರ್ಪ ಶಚಿ ಸಂಧ್ಯಾಲಕ್ಷ್ಮಿಯಂ ಪೋಲೆ ಪೂ
ರ್ವನಗಾಕಾರದಿನಭ್ರಮೂಪತಿ ಬೆಡಂಗಂ ಬೀಱೆ ದೇವೇಂದ್ರನ
ಗ್ರನಿಷಣ್ಣಂ ಸಮನಾಗೆ ರತ್ನಶಿಖರಕ್ಕಂತಾತನುತ್ಸಂಗದೊಳ್
ಜಿನನೊಪ್ಪಂಬಡೆದಂ ಸಮಭ್ಯುದಿತಚಾಂದ್ರಂ ಬಿಂಬಮೆಂಬನ್ನೆಗಂ || ೬೨

ವ || ಆ ಸಮಯದೊಳಿರ್ಕೆಲದ ಪಕ್ಕದಾನೆಗಳೊಳಿರ್ದು-

ಕಂ || ಮನದೊಲವಿಂದೀಶಾನೇಂ
ದ್ರನೆತ್ತಿದಂ ಮುತ್ತಿನೆಸೆವ ಕೊಡೆಯಂ ಚೆಲ್ವ
ಪ್ಪಿನಮೆನೆ ಚಾಮರಮಿಕ್ಕಿದ
ರನಘಂಗೆ ಸನತ್ಕುಮಾರಮಾಹೇಂದ್ರರ್ಕಳ್ || ೬೩

ವ || ತದನಂತರಂ ನಭೋವಿಭಾಗಮನಳಂಕರಿಸಲೊಡಂ-

ಕಂ || ತನತನಗನಿತುಂ ಜಯ ಜೀ
ವ ನಂದ ವರ್ಧಸ್ವಮುಖರಮಾಯ್ತು ಚತುರ್ದೇ
ವನಿಕಾಯಂ ಘೂರ್ಣಿಸಿದಂ
ತೆ ನಭೋಂಭೋನಿಧಿ ಜಿನೇಂದುದರ್ಶನದಿಂದಂ || ೬೪

ಪ್ರಕಟತರಂ ಜಿನತನುಚಂ
ದ್ರಿಕೆ ಪರ್ವೆ ನಭಸ್ಸರಸ್ಸರೋರುಹನಿಕರಂ
ಮುಕುಳಿತಮಾದವೊಲಾಯ್ತೆ
ತ್ತಿ ಕೆಯ್ಗಳಂ ಮುಗಿದ ದೇವದೇವೀನಿಕರಂ || ೬೫

ಪರಮನ ಶಶಾಂಕಸಂಕಾ
ಶರುಚಿಪ್ರಚಯಂ ಪೊದೞ್ದು ನಾಲ್ದೆಸೆಯುಮನಾ
ವರಿಸೆ ಸುರಸೇನೆ ಬಿಸಪಂ
ಜರದೊಳಗಿರ್ದಂತಿರಿರ್ದುದಂತಾಕ್ಷಣದೊಳ್‌ || ೬೬

ವ || ಆಗಳ್-

ಮ || ಸ್ರ || ಮುದದಿಂ ಕೆಯ್ಗಗ್ಗಳಂ ಮುನ್ನಮೆ ಜಿನಪತಿಮೇಗಿರ್ದನೀಗಳ್ ಮನಸ್ಸ
ಮ್ಮದದಿಂ ಮತ್ತಗ್ಗಳಕ್ಕಗ್ಗಳಮಿದು ವಿಸಟಂಬರ್ಕುಮಸ್ಮದ್ಗಜಂ ನಿ
ಲ್ಲದೆ ಪೋಗಿಂ ಮಂದರಕ್ಕಂತದನಡರ್ದು ಬೞಿಕ್ಕಿಂತಿದಂ ನೋಡಿಮೆಂಬಂ
ದದಿನೊಪ್ಪಂಬೆತ್ತುದಿಂದ್ರಂ ಸುರತತಿ ನಡೆಗೆಂದಂದು ಕಯ್ವೀಸಿದಂದಂ || ೬೭

ಉ || ಶಾರದನೀರದಾಕೃತಿಯ ಮೆಯ್ ಮಧುಪಿಂಗಳಮಪ್ಪ ದಿಟ್ಟಿ ಶೇ
ಷೋರಗನಿರ್ವಿಶೇಷಮೆನಿಸಿರ್ದ ಕರಂ ದರಹಾಸಪುಷ್ಕರಾ
ಕಾರದ ಪುಷ್ಕರಂ ಮಿಳಿರ್ಪ ಪಲ್ಲವದಂದದ ಕರ್ಣಪಲ್ಲವಂ
ವಾರಿಧಿಘೋಷದಂತೆಸೆವ ಬೃಂಹಿತಮೊಪ್ಪಿದುದಾಗಜೇಂದ್ರದಾ || ೬೮

ವ || ಅದಲ್ಲದೆಯುಮಾಪ್ರಸ್ತಾವದೊಳ್-

ಮ || ಸ್ರ || ಸುರರಾಜಾನೇಕಪಕ್ಕಾನನಮೊಗೆದುವುಮೂವತ್ತೆರೞ್ವಕ್ತ್ರಮೊಂದ
ರ್ಕೆ ರದಂ ತಾನೆಂಟುವೋರೊಂದಱೊಳಲರ್ಗೊಳನೊಂದಬ್ಜವೊಂದರ್ಕೆಮೂವ
ತ್ತೆರಡೊಂದಬ್ಜಕ್ಕೆ ಮೂವತ್ತೆರಡೆಸಳೆಸಳೊಂದೊಂದಱೊಳ್ ಬಿತ್ತರಂ ಬೆ
ತ್ತಿರೆ ಮೂವತ್ತಿರ್ವರೇಂ ನರ್ತಿಸಿದರೊ ದಿವಿಜಸ್ತ್ರೀಯರಾನಂದದಿಂದಂ || ೬೯

ಕಂ || ಭ್ರಮರಿಗಳೆಱಗದೆ ತರದಿಂ
ಭ್ರಮಿಯಿಪವೊಲ್ ಕಮಳದೆಸಳ್ಗಳಂ ಮುಟ್ಟವಣಂ
ಕ್ರಮತಳಮೆನೆ ತೊಟ್ಟರ್ ವಿ
ಭ್ರಮದಿಂ ನರ್ತನದೊಳಮರಿಯರ್ ಭ್ರಮರಿಗಳಂ || ೭೦

ಪದತಳಮುಂ ದಳಮುಂ ನೋ
ಯದೆ ಕಂದದೆ ನಲಿದು ನರ್ತಿಸುತ್ತಿರ್ಪ ಮರು
ತ್ಸುದತಿಯರ್ಗಿಂದ್ರನ ಹೃತ್ಪ
ದ್ಮದೊಳಾಡುವ ಭಕ್ತಿಲಕ್ಷ್ಮಿ ಲಾಸಿಕೆಯಕ್ಕುಂ || ೭೧

ವ || ಅಂತು ಭಗವದ್ಭಕ್ತಿಭಾರದಿಂ ಪೆರ್ಚಿದ ತನ್ನ ಬಗೆಯನೆ ಮೊಗದೊಳಭಿನಯಿಸುವಂತು ವಿಕ್ರಿಯೋಪಕ್ರಮಿತವೈಕುರ್ವಣದಿನಗುರ್ಬುವೆತ್ತೈರಾವತಂ ಮೊದಲಾದನೇಕದೇವವಾಹ ನಂಗಳ್ಗೆ ಸುಖಪ್ರಚಾರಯೋಗ್ಯಮಪ್ಪಂತು ಚಂದ್ರಪುರದುಪರಿಮದೇಶದಿಂ ಮಂದರಕಂದ ರಂಬರಂಸೌಧರ್ಮೇಂದ್ರನಿಂದ್ರನೀಳಮಯವೀಧಿಯಂ ನಿರ್ಮಿಸಿದಾಗಳ್-

ಕಂ || ಪೞಹದ ರುತಿ ಮೊೞಗನಲ
ರ್ಮೞೆಯಾಲಿಯ ಸರಿಯನಿೞಿಸೆ ಹರಿನೀಳತಳಂ
ಕೆೞಗಣ ಮನುಜರ ದಿಟ್ಟಿಗೆ
ಗೞಿಯಿಸಿದುದು ನೀಳಜಳದಮಾಳಾಭ್ರಮಮಂ || ೭೨

ವ || ಅಂತು ನಡೆವಡೆಯೊಳ್ ಜಿನಶಿಶುವ ಶೈಶವಾತಿದುರ್ಲಭಮಪ್ಪ ಬಹಿರಂಗಾಂತರಂಗ ಸೌಷ್ಟವಮಂ ನೋಡಿ-

ಕಂ || ಸ್ತನಪಾನಕಾಂಕ್ಷೆ ಗತತೃ
ಷ್ಣನೊಳಂಬಾಸ್ಮೃತಿ ವಿಮುಕ್ತಮೋಹನೊಳೆಂತುಂ
ಜನಿಯಿಸುಗುಮೆ ತಾನೆಂದಭ
ವನ ಸಾಮರ್ಥ್ಯಮನಮರ್ತ್ಯರೊಳ್ ಹರಿ ನುಡಿದಂ || ೭೩

ಅಂದು ಜಿನೇಂದುವ ಸನ್ನಿಧಿ
ಯಿಂದೋಸರಿಪಿಂದ್ರಹೃದಯಮೋಹತಿಮಿರಮೆಂ
ಬಂದದಿನೊಗೆದತ್ತಿಂದ್ರ
ಚ್ಛಂದದಿನೆಸೆವಿಂದ್ರನೀಳಮಣಿರುಗ್ಜಾಳಂ || ೭೪

ಜಡಧಿವೊಲಿರೆ ಸುರಸೈನ್ಯಂ
ಪಡಗುವೊಲಿರೆ ದಿವಿಜವಾರಣಂ ಜಿನಶಿಶು ಕೈ
ಪಿಡಿವೊಲಿರೆ ಪುಣ್ಯಪಣ್ಯದ
ಪಡಗಿನ ಸಾಂಯಾತ್ರಿಕಂಬೊಲಿರ್ದಂ ಶಕ್ರಂ || ೭೫

ಮ || ವಿ || ಗಣನಾತೀತಮಮರ್ತ್ಯಕೋಟಿ ಬಲದೊಳ್ ಜ್ಯೋತಿಷ್ಕದೇವಾಳಿ ಪಿಂ
ತಣ ಮೆಯ್ಯೊಳ್ ಫಣಭೃತ್ಪದಾತಿಯೆಡದೊಳ್ ತದ್ವ್ಯಂತರಶ್ರೇಣಿ ಮುಂ
ತಣ ಮೆಯ್ಯೊಳ್ ಬರೆ ಬರ್ಪವರ್ ಪೊಗೞೆ ಗಂಧರ್ವಾಮರರ್ ಪಾಡೆ ಪೆ
ಕ್ಕಣಮಂ ದೇವಿಯರಾಡೆ ನಾಡೆ ಗಮನಂ ಕಣ್ಗೇಂ ಬೆಡಂಗಾದುದೋ || ೭೬

ಕಂ || ನಡೆದೊಡೆ ಭರದಿಂ ಧರೆ ಪೊಡೆ
ಗೆಡೆದವುದೆಂದಱಿದು ವಿಬುಧಪತಿಯಾಗಸದೊಳ್
ನಡೆಯಿಸಿದಪನೆನೆ ದೇವರ
ಪಡೆ ಪಡೆದುದು ನರರ ಕಣ್ಗೆ ಕೌತುಕದೊದವಂ || ೭೭

ಮ || ಸ್ರ || ಪಿರಿದುಂ ಮಾಡಿತ್ತಮರ್ತ್ಯಪ್ರಕರದ ನಯನಕ್ಕಂ ಮನಕ್ಕಂ ಸುರಸ್ತ್ರೀ
ಯರಪಾಂಗಾಕ್ಷಿಪ್ರಭಾಸಂಚಯದಿನುದಿತದೇಹಾಂಶುಸಂದೋಹದಿಂ ಮೇ
ದುರಧಮ್ಮಿಲ್ಲದ್ಯುತಿಸ್ತೋಮದಿನಧರಮಯೂಖಾಳಿಯಿಂದೆತ್ತಲುಂ ಪಾಂ
ಡುರಿತಂ ಪೈಶಂಗಿತಂ ಕರ್ಬುರಿತಮರುಣಿತಂ ವ್ಯೋಮರಂಗಂ ಬೆಡಂಗಂ || ೭೮

ಕಂ || ಚರದನಿಮಿಷೋತ್ಕರಂಪು
ಷ್ಕರಪೂರ್ಣಂ ತೀರ್ಥವಿಭುವಿಳಾಸೋಪೇತಂ
ಹರಿಹರ್ಷಾಸ್ಪದಮಂತಾ
ಸುರವಾಹಿನಿ ವೋಲ್ತುದೆಯ್ದೆ ಸುರವಾಹಿನಿಯಂ || ೭೯

ವ || ಅಂತತಿಕ್ರಾಂತಜ್ಯೋತಿರ್ಲೋಕಮೆನಿಸಿ ನಡೆವಾಗಳ್-

ಮ || ವಿ || ಕನಕಾದ್ರೀಂದ್ರನೃಪಾಲಯಂ ಕುಳನಗವ್ರಾತಾಶ್ರಯಶ್ರೇಣಿ ವಿ
ಶ್ವನದೀಸಂಕುಳವೀಧಿ ವಜ್ರಮಯವೇದೀತುಂಗಶಾಳಂ ಮಹಾಂ
ಬುನಿಧಿಪ್ರಾವೃತಖಾತಿಕಾಪರಿಧಿ ಜಂಬೂದ್ವೀಪಮಂದೊಂದೆ ಪ
ತ್ತನದಂತಿರ್ದುದು ಕಣ್ಗೆ ನಾಕಜನಿಕಾಯಕ್ಕಾ ನಭೋಯಾನದೊಳ್ || ೮೦

ಕಂ || ಪರಮಜಿನಪತಿಯುಮಂತಾ
ಸುರಪತಿಯುಂ ಮಂದರಂಬರಂ ನಡೆವೆಡೆಯೊಳ್
ದೊರೆವೆತ್ತುದು ಸತ್ಪಥಮುಂ
ಸುರಸರಣಿಯುಮೆಂಬ ನಾಮಮಂದಂಬರದೊಳ್‌ || ೮೧

ಚಂ || ಸೊಗಯಿಪ ಪಾಳಿಕೇತನಕುಳಂಗಳ ರತ್ನವಿಮಾನಯಾನಪ
ಙ್ಕ್ತಿಗಳ ಸಿತಾತಪತ್ರನಿಕರಂಗಳ ವಾಹನದೇವವಿಕ್ರಿಯಾ
ಪ್ರಗುಣಿತಚಿತ್ರವಾಹನಚಯಂಗಳ ತಿಂತಿಣಿಯಿಂ ದಿಗಂತಮುಂ
ಗಗನಮುಮಾದುದಿಟ್ಟಡೆಯಿದೆಂತುಟೊ ಪೆರ್ಮೆ ಚತುರ್ನಿಕಾಯದಾ || ೮೨

ಮ || ವಿ || ಖಗಜಾತೀಯಚತುರ್ನಿಕಾಯಮಿದು ಬೇಱೊಂದಕ್ಕುಮೆಂಬೊಂದು ಸಂ
ದೆಗಮಂ ತಂದುದು ದೇವವಾರವನಿತಾಸಂದೋಹಧಮ್ಮಿಲ್ಲಬ
ರ್ಹಿಗಣಂ ಕುಂತಳಷಟ್ಪದಾವಳಿ ಚಳಚ್ಚಕ್ಷುಶ್ಚಕೋರಾಳಿ ಚಾ
ರುಗುರೂರೋರುಹಚಕ್ರವಾಕಚಯಮತ್ತೆತ್ತಂ ನಭಶ್ಚಕ್ರದೊಳ್ || ೮೩

ಕಂ || ಉದಯಿಸಿತೊ ಭಕ್ತಿ ತಮಗೆನೆ
ಮೃದುಪವನಾಪಾತದಿಂದೆ ಗಾಂಧಾರಗ್ರಾ
ಮದ ಮೂರ್ಛನೆಗಳನುಚ್ಚರಿ
ಸಿದುವಮರರ ಹೆಗಲ ಬೀಣೆಗಳ್ ಮಿಡಿಯದೆಯುಂ || ೮೪

ಸಕಳಾಮರಗಾಯಕವಾ
ದಕನರ್ತಕರೞ್ತಿಯಿಂ ಪ್ರವರ್ತಿಸಿ ಸಂಗೀ
ತಕಮಂ ತೂರ್ಯತ್ರಿತಯಾ
ತ್ಮಕಮೆನಿಸಿದುದಾಗಳೆಯ್ದೆ ಗಗನಾಭೋಗಂ || ೮೫

ವ || ಆಗಳ್ ವಿಚಿತ್ರವೇತ್ರದಂಡಮಂಡಿತಪಾಣಿಗಳ್ ನಿಳಿಂಪಪ್ರತೀಹಾರರಭವನನುಪಮಾಕಾ ರಸೌಂದರ್ಯಮಂ ನೋಡಲೆಂದು ಪತ್ತೆಸಾರ್ಚುವಚ್ಚರಸಿಯರ ವಿಮಾನಂಗಳನಮರ್ಚ ದಂತು ಬಿರ್ಚಿ ನಡೆಯಿಸಿಯುಂ ಇರ್ಕೆಲದ ಚಾಮರೇಂದ್ರರಂ ಚಮರರುಹಂಗಳಂ ಸೂೞಱಿದಿಕ್ಕುವಂತು ನಿಯಮಿಸಿಯುಂ ಅಲ್ಲಲ್ಲಿಗೆ ತುಱುಂಬಿದ ದಿವಿಜವಂದಿಗಳ ಪೊಗೞ್ವ ಕಳಕಳಮನಡಂಗೆವೊಯ್ದು ಸಂಗೀತಕ್ಕವಸರಮನನುಸರಿಸಿಯುಂ ಐರಾವತದ ಕಾಲಾಟಕ್ಕೆಡೆಯಪ್ಪಂತು ಕೊಲ್ಲಣಿಗೆಯೊಳ್ ಬರ್ಪನೇಕವ್ಯಂತರಾಮರವಾಹನಂಗಳಂ ತೆರಳೆತೂಳ್ದಿ ತೆಱಪಂ ಮಾಡಿಯುಂ ಕೊಡೆಯ ತೞೆಯ ಸೀಗುರಿಯ ಚೌಕಸತ್ತಿಗೆಯ ಮುತ್ತಿನ ಝಲ್ಲರಿಯ ಮೊತ್ತಮಂ ತುಱುಗಲಾಗಿ ಪಿಡಿಯಿಸಿಯುಂ ಮುಂದೆ ಪರಿವೊಜ್ಜ ರಂಗಳನೋಳಿಗೊಳಿಸಿಯುಂ ಪಾಳಿಕೇತನಂಗಳಂ ಪಂತಿಗೊಳಿಸಿಯುಂ ಭೇರೀರಥಂಗಳಂ ಸಾರಿಗೊಳಿಸಿಯುಂ ಅಡಿಗಡಿಗೆ ನೆಲನನುಗ್ಘಡಿಸಿಯುಂ ಇಂತತಿಚಿತ್ರಮಾಗೆ ಯಾತ್ರೆಯಂ ನಡೆಯಿಪಲ್ಲಿ-

ಕಂ || ಬಂಬಲ್ವರಿಯುತ್ತುಂ ನೆಗೆ
ದಂಬುದಮಂ ತೇನಮಿಱಿಯುತುಂ ಪೂತ್ಕೃತಿಯಿಂ
ದಂಬರಮಂ ತೀವುತ್ತುಮ
ದೇಂ ಬಿನದಮನಮರಪತಿಗೆ ತೋಱಿದುದೊ ಗಜಂ || ೮೬

ಐರಾವತಕ್ಕೆ ಕಂಬಂ
ಮೇರುವೆ ಪೆಱವಾನೆಗೊಳ್ಳವೆಂಬಂದದೆ ನೀ
ರ್ದಾರಿಯೊಳೆ ನೂಂಕಿ ಪೋದಂ
ಭೋರೆನೆ ತದ್ಗಿರಿತಟಕ್ಕೆ ಸೌಧರ್ಮೇಂದ್ರಂ || ೮೭

ವ || ಆಗಳ್-

ಚಂ || ಗಗನಮನೆಯ್ದೆ ತಿಂಬಿದ ಪತಾಕೆಗಳಿಟ್ಟೆಡೆಯೊಳ್‌ ತೊಡಂಕಿ ನಿಂ
ದೊಗೆವ ಜಿನಾಂಗಸೌರಭದೊಳಾದಮೆ ಸಂಗತಿವೆತ್ತು ತಳ್ತ ಸ
ತ್ತಿಗೆಗಳ ತಣ್ಣೆೞಲ್ವಿಡಿದು ಕೂಡೆ ತೊೞಲ್ದು ಚತುರ್ನಿಕಾಯದೊಳ್‌
ತ್ತಿಗುಣಿಸಿದತ್ತು ತನ್ನಯ ಗುಣತ್ರಯಮಂ ಕನಕಾಚಳಾನಿಳಂ || ೮೮

ಉ || ಪೂಗುಡಿಯಿಂದೆ ಕೂಡೆ ಗುಡಿಗಟ್ಟಿದವೊಲ್ ಕಳಕಂಠನಾದದಿಂ
ಸ್ವಾಗತಮಂ ಸಮಂತು ನುಡಿವಂತೆವೊಲಲ್ಲುಗುತಿರ್ಪರಲ್ಗಳಿಂ
ರಾಗದಿನರ್ಘ್ಯಮೀವವೊಲದೇನೆಸೆದತ್ತೊ ಜಿನೇಂದು ಬಂದನೆಂ
ದಾ ಗಿರಿ ನಾಟಕಂನಲಿದವೊಲ್ ಮರುದಾಕುಳಶಾಖಿಶಾಖೆಯಿಂ || ೮೯

ಕಂ || ಪರಿವೃತಲವಣಾಬ್ಧಿಸರೋ
ವರಮಧ್ಯಸ್ಥಿತಮೆನಿಪ್ಪ ಜಂಬೂದ್ವೀಪಾಂ
ಬುರುಹಕ್ಕೆ ತಾನೆ ಕರ್ಣಿಕೆ
ಯಿರವಂ ತಳೆದೇಂ ಸುಮೇರು ಸಿರಿಗೆಡೆಯಾಯ್ತೋ || ೯೦

ಅವಯವದಿನಾಂತುದೀಮೇ
ರುವೆ ಪೆರ್ಮೆಯನಾಸಹಸ್ರಯೋಜನಮೆನಿಸಿ
ರ್ದವಗಾಹದಿಂದಮಾರಯೆ
ನವನವತಿಸಹಸ್ರಯೋಜನೋನ್ನತಿಯಿಂದಂ || ೯೧

ಇದು ಸರ್ವರತ್ನಜಾಂಬೂ
ನದಮಯಮಿದು ಮೇಖಳಾಚತುಷ್ಟಯುತಮಿಂ
ತಿದು ವನಚತುಷ್ಕರಾಜಿತ
ಮಿದಕೃತ್ರಿಮಚೈತ್ಯಗೇಹನಿವಹಪವಿತ್ರಂ || ೯೨

ಈ ನಗದ ಸಾನು ನಾಲ್ಕುಂ
ತಾನೆಸೆಗುಂ ಭದ್ರಶಾಳದಿಂ ನಂದನದಿಂ
ಪೀನಂ ಸೌಮನಸದಿನು
ದ್ದಾನಿಯ ಪಾಂಡುಕದಿನನಿಶಮನುಗತಿಯಿಂದಂ || ೯೩

ಎನೆ ಪೆಸರ್ವಡೆದೀ ನಾಲ್ಕುಂ
ಬನಂಗಳೊಂದೊಂದಱಲ್ಲಿ ನಾಲ್ಕೆಸೆದಿರ್ಕುಂ
ವಿನುತತರಂಗಳಕೃತ್ರಿಮ
ಜಿನಭವನಂಗಳ್ ಸಮಸ್ತರತ್ನಮಯಂಗಳ್ || ೯೪

ಚಂ || ಉದಯಿಸವಿಲ್ಲಿಯಲ್ಲದೆ ನಮೇರುಮಹಾಮಹಿಜಂಗಳಿಲ್ಲಿಯ
ಲ್ಲದೆ ಬಲವಾರರಿಂದ್ವಿನರಕೃತ್ರಿಮಚೈತ್ಯಗೃಹಂಗಳಿಲ್ಲಿಯ
ಲ್ಲದೆ ಸಲೆ ಚೆಲ್ವುವೆತ್ತಿರವು ತೀರ್ಥಕರಾಭಿಷವಕ್ಕಮಿಲ್ಲಿಯ
ಲ್ಲದೆ ಪರಿಶೋಭೆ ಪೆರ್ಚದೆನೆ ಮೆಯ್ಮೆಗೆ ಬಾೞ್ಮೊದಲಾಯ್ತು ಮಂದರಂ || ೯೫

ಕಂ || ಸುರನಿಕರವಿವಿಧವಿಹಗೋ
ತ್ಕರಪರಿವೃತಮಪ್ಪ ನಾಕಸಾರ್ವರ್ತುಕಭೂ
ಮಿರುಹಕ್ಕೆ ತೋರ್ಪುದೀಗಿರಿ
ವರಮವಿರತಮುರುತರಪ್ರಕಾಂಡಾಕೃತಿಯಿಂ || ೯೬

ಗಡಣದಿನಿಲ್ಲಿಯ ಸಗ್ಗದ
ಪಡೆಮಾತಂ ಮಱೆದು ನಾಲ್ಕುಮೇಖಳೆಗಳೊಳಂ
ಬಿಡದೆ ಸುರಸಮಿತಿ ನೆಲಸಿರೆ
ಪಡೆದುದು ಸುರಗಿರಿಯೆನಿಪ್ಪ ಪೆಸರನಗೇಂದ್ರಂ || ೯೭

ಜಿನಸವನಾಮೃತಜಳಸೇ
ಚನದಿಂ ಬಳೆದಾಮಹಾಮಹೇಂದ್ರದ ನಾಲ್ಕುಂ
ಬನದ ಲತಾಗೃಹಸಂತತಿ
ಯನಿಮಿಷರ್ಗಾದುದು ಮನೋಹರಂ ದುರಿತಹರಂ || ೯೮

ಒಡವೆಳೆದು ಸುರರೊಳಿದಱೊಳ್
ನುಡಿವುದು ಶುಕಸಮಿತಿ ದೇವಭಾಷೆಯನೆ ತೊದ
ಳ್ಗೆಡೆಗುಡದೆ ಪಾಡುವುದು ಸಲೆ
ಷಡಯನತತಿ ದೇವಗಾನಮನೆ ನುಣ್ದನಿಯಿಂ || ೯೯

ಮತ್ತೇವೇೞ್ದಪುದೀಮಹಿ
ಭೃತ್ತಟಮಂ ಪೊರ್ದಿ ವರ್ತಿಪನಿತಱಿನಾದೇ
ವೋತ್ತರಕುರುಗಳ್ಗಾದ
ತ್ತುತ್ತಮಭೋಗಾವನಿತ್ವಮೆಂಬ ಮಹತ್ತ್ವಂ || ೧೦೦