ಬಂಧುರತರಜಿನಸವನಸು
ಗಂಧೋದಕದಿಂದೆ ನಾಂದು ತದ್ಗುಣದೊಳ್ ಸಂ
ಬಂಧಿಸಿ ಪೆಸರ್ವಡೆದುವು ಸೌ
ಗಂಧಿಕಮೆಂದದಱ ತಾಱಲೊಳ್ ಕಿಸುಗಲ್ಗಳ್ || ೧೦೧

ಚಂ || ಒಗೆದ ಮರಕ್ಕೆ ಬಳ್ಳಿಗೆ ಗುಹಾನಿಳಯಕ್ಕೆ ಪುಳಿಂದಮಾಳೆಗ
ದ್ರಿಗಳೆಡೆಯಪ್ಪುವಲ್ಲದೆ ನೆಗೞ್ತೆಯ ಕಲ್ಪಕುಜಕ್ಕೆ ಚೆಲ್ವುವೆ
ತ್ತಗಲದ ಕಲ್ಪವಲ್ಲರಿಯಕೃತ್ರಿಮಚೈತ್ಯಗೃಹಕ್ಕೆ ದೇವಕೋ
ಟಿಗೆ ನೆಲೆ ಸಂದ ಮಂದರಮಹೀಧರದಂದದಿನಾಗಲಾರ್ಪುವೇ || ೧೦೨

ವ || ಎಂದು ಸುರಗಿರೀಂದ್ರದ ಸಿರಿಯನಮರಸಂದೋಹಕ್ಕೆ ಪುರಂದರಂ ಪೊಗೞುತ್ತುಮದಂ ಬಲವಂದು ಚತುರ್ನಿಕಾಯಮಂ ಶಿಖರಿಶಿಖರಕ್ಕೆ ನಡೆವುದೆನಲೊಡಂ-

ಕಂ || ಮೇರುನಗಾಧೀಶಂ ರೂ
ವಾರದ ಹಾರಮನೆ ತೊಟ್ಟನೆಂಬಿನಮೆಸೆದ
ತ್ತಾರ ಮನಕ್ಕಂ ಸುರಜನ
ಧಾರಿ ನಿರಂತರವಿಸಾರಿ ಬಿಡದಡರ್ವೆಡೆಯೊಳ್‌ || ೧೦೩

ಇರದೆ ಸುರಸತಿಯ ರಭಸ
ಕ್ಕರಲ್ಗಳಂ ಬಿಟ್ಟು ನೆಗೆದುವಳಿಗಳ್ ಸುರಸುಂ
ದರಿಯರ ನಯನಾದಿಗಳಾ
ದರದಿಂದೆಱಗಿದುವು ತತ್ಪ್ರಸೂನಾಳಿಗಳೊಳ್ || ೧೦೪

ಆರೆವು ನಾಂ ಜಿನಪದಪ
ದ್ಮಾರಾಧನೆಗೆಂದು ಪಾರಿಜಾತದ ನವಮಂ
ದಾರದ ಹರಿಚಂದನದ ನ
ಮೇರುವ ಸಂತಾನದರಲನಮರಿಯರಾಯ್ದರ್ || ೧೦೫

ವ || ಆಗಳ್-

ಚಂ || ಘನತರಭದ್ರಶಾಳದಿನಿನಿತ್ತೆಡೆಮಾಡದೆ ನಂದನಕ್ಕೆ ನಂ
ದನದಿನದೊಂದು ಬೇಗದೊಳೆ ಸೌಮನಸಕ್ಕೆ ತಗುಳ್ದು ಮತ್ತೆ ಸೌ
ಮನಸದಿನೆಯ್ದೆ ಪಾಂಡುಕವನಕ್ಕಡರ್ದತ್ತು ಸುರೇಂದ್ರವಾರಣಂ
ಕನಕನಗೇಂದ್ರಮಂ ಪವನನುನ್ನಶರದ್ಘನಕೂಟಮೆಂಬಿನಂ || ೧೦೬

ವ || ಅಂತು ಬಂದು ತದ್ವನದ ಪೂರ್ವೋತ್ತರವೀಧೀದಿಗ್ಭಾಗದೊಳ್‌

ಕಂ || ಉನ್ನತಿಯಿಂ ಯೋಜನಮೆಂ
ಟುನ್ನೀಳದಿನಾಳ್ದು ನೂಱನಗಲದಿನಯ್ವ
ತ್ತನ್ನಿರ್ಮಳಹಿಮಕರದಳ
ಸನ್ನಿಭಮೆನೆ ಪಾಂಡುಕಂಶಿಳಾತಳಮೆಸೆಗುಂ || ೧೦೭

ಪುದಿಯೆ ನವರತ್ನಜಾಂಬೂ
ನದರುಚಿ ಕಡೆಗಡೆಯೊಳೆಸೆದುದಾಶಿಲೆ ದೇವಾಂ
ಗದ ಗವುಸಣಿಗೆಯನರೆದೆಗೆ
ದದೊಂದು ಶಶಿಕಾಂತಕಾಂತಮುಕುರಾಕೃತಿಯಿಂ || ೧೦೮

ವ || ಆಗಳಾಶಿಳಾತಳಮೆ ಜಗತಿಮಂಡಳಮಾಗೆ ವಿಕ್ರಿಯೆಯಿನಾಖಂಡಳಂ ನಿರ್ಮಿಸಲ್ವೇ ೞ್ವುದುಂ-

ಸ್ರ || ಶಕ್ಯಂ ತಾನಲ್ತಣಂ ಬಣ್ಣಿಪ ಫಣಿಪತಿವಾಕ್ಯಕ್ಕಮೆಂಬಂತು ಶೋಭಾ
ಧಿಕ್ಯಂಬೆತ್ತತ್ತು ಮುಕ್ತಾಮಣಿಗಣರಚಿತಂ ಛಾದ್ಯಹೃದ್ಯಂ ಕನನ್ಮಾ
ಣಿಕ್ಯಸ್ತಂಭಾವಳಂಬಂ ಹರಿದುಪಳತುಳಾಜಾಳಲೀಳಾಕುಳಂ ತ್ರೈ
ಲೋಕ್ಯಾಧೀಶಾಭಿಷೇಕೋಚಿತಮಮರಕೃತಂ ಕಾಯಮಾನಂ ನವೀನಂ || ೧೦೯

ಕಂ || ಸಂಗತಕೋಣಚತುಃಕಳ
ಶಂಗಳ ದೇದೀಪ್ಯಮಾನದೀಪಂಗಳ ಜಾ
ಳಂಗಳ ಧೂಪಘಟಂಗಳ
ಭೃಂಗಾರಂಗಳ ವಿಳಾಸಮಸದಳಮದಱೊಳ್ || ೧೧೦

ಆತಪವಾರಣಚಮರೀ
ಜಾತಕಳಶಸುಪ್ರತಿಷ್ಠಿತಾದರ್ಶಪತಾ
ಕಾತಾಳವೃಂತಭೃಂಗಾ
ರಾತಿಸ್ಪಷ್ಟಾಷ್ಟಮಂಗಳಂ ಸೊಗಯಿಸುಗುಂ || ೧೧೧

ನಗಪತಿಗಿದೆ ಪೆಱೆನೊಸಲೆನೆ
ಸೊಗಯಿಪ ಪಾಂಡುಕವಿಶಾಳಶಿಳೆಯೊಳದೇಂ ದಿ
ಟ್ಟಿಗೆ ವಂದುದೊ ಮಾಣಿಕ್ಯದ
ಮೃಗಾರಿಪೀಠಂ ಲಲಾಮಮೆನೆ ಕುಂಕುಮದಾ || ೧೧೨

ಅದಱಿರ್ಕೆಲದೊಳಮತಿಸ
ಮ್ಮದದಿಂ ಜನ್ಮಾಭಿಷವಣಮಂಗಳವಿಧಿಯೊಳ್
ತ್ರಿದಶಾಧಿಪರೇಱಲ್ಕಿ
ಕ್ಕಿದ ಭದ್ರಾಸನಮವೆರಡುಮೇನೊಪ್ಪಿದುವೋ || ೧೧೩

ವ || ಆ ಸಿಂಹವಿಷ್ಟರದೊಳ್ ತ್ರಿವಿಷ್ಟಪಾಧೀಶನಂ ಪೂರ್ವಾಭಿಮುಖನಿವಿಷ್ಟಂಮಾಡೆ-

ಕಂ || ಅರುಣಮಣಿಪೀಠರುಚಿಯುಂ
ಪರಮನ ಧವಳಾಂಗರುಚಿಯುಮಾವರಿಸೆ ದಿವಾ
ಕರಚಂದ್ರನೊಡನೆ ಬೆಳಪಂ
ಬರಮಂ ನೆನೆಯಿಸಿತು ಸವನಮಂಡಪಮಾಗಳ್ || ೧೧೪

ಸುರಪತಿ ದಹನಂ ಧರ್ಮಂ
ನಿರುತಿ ವರುಣನನಿಳನೈಳಬಿಳನೀಶಮಹೀ
ಶ್ವರನಿಂದುವೆಂಬ ದಿಕ್ಪಾ
ಳರುಮಂ ದಶದಿಶೆಯೊಳಿರಿಸಿ ಪರಿಕರಸಹಿತಂ || ೧೧೫

ವ || ಮತ್ತಮೊಳಗಣ ನಾಲ್ಕು ದೆಸೆಯೊಳ್ ಚಾರಣಾಚ್ಯುತೇಂದ್ರಪ್ರಮುಖರಪ್ಪ ಕಲ್ಪಾಮರ ರುಮಂ ಚಮರವೈರೋಚನಪ್ರಮುಖರಪ್ಪ ಭವನಾಮರರುಮಂ ಚಂದ್ರಾದಿತ್ಯಪ್ರಮುಖ ರಪ್ಪ ಜ್ಯೋತಿಷ್ಕಾಮರರುಮಂ ಸತ್ಪುರುಷಮಹಾಪುರಷಪ್ರಮುಖರಪ್ಪ ವ್ಯಂತರಾಮರ ರುಮಂ ನಿರವಿಸಿ ಸೌಧರ್ಮೇಂದ್ರನೀಶಾನೇಂದ್ರನುಂ ತಾನುಮುತ್ತರದಕ್ಷಿಣಾಭಿಮುಖರಾಗಿ ಜನ್ಮಾಭಿಷೇಕೋನ್ಮುಖರುಪಪೀಠಂಗಳನಳಂಕರಿಸಿ-

ಮ || ಸ್ರ || ಸುರಕಾಂತಾಗೀತನಾದಂ ಸುರಕರತಳಸಂತಾಡಿತಾತೋದ್ಯನಾದಂ
ಸುರವಂದಿಸ್ತೋತ್ರನಾದಂ ಸುರಜನಜಯಜೀವಪ್ರಣಾದಂ ಸುರೋರ್ವೀ
ಧರಕುಂಜಪ್ರತ್ಯುದಂಚದ್ಬಹಳತರನಿನಾದಂ ದಿಶಾಕಾಶಚಕ್ರೋ
ದರಮಂ ತೀವುತ್ತುಮಿರ್ಪನ್ನೆಗಮಮರಪಯೋವರ್ಷಣೋದ್ಯುಕ್ತರಾದರ್ || ೧೧೬

ಕಂ || ಇದು ದಲಭಿಷವಣವೃಷ್ಟಿ
ಪ್ರದನೀಳಪಯೋದಮಾಳೆ ತಾನೆಂಬಿನೆಗಂ
ಪುದಿದುದು ಕಾಳಾಗರುಧೂ
ಪದ ಕರ್ವೊಗೆಯುರ್ವಿ ಪರ್ವಿ ರೋದೋಂತರಮಂ || ೧೧೭

ಸಿತಕುಸುಮಾಕ್ಷತಚಂದನ
ಯುತಜಳಬಿಂದುಗಳಿನಿಂದ್ರರರ್ಘ್ಯೋದ್ಧರಣಂ
ಪ್ರತಿವಾದಿಸಿದುದು ತಾರೋ
ದ್ಗತಿಯಂ ನಭದಲ್ಲಿ ಸವನನಾಂದೀವಿಧಿಯೊಳ್‌ || ೧೧೮

ವ || ಅನಂತರಂ ಪಾರಿಜಾತಪಲ್ಲವೋಲ್ಲಸಿತಮುಖಂಗಳುಂ ಮಂದಾರಮಾಳಾಳಂಕೃತಕಂಠಂ ಗಳುಂ ಹರಿಚಂದನಚರ್ಚಾರ್ಚಿತಮಧ್ಯಂಗಳುಮಪ್ಪ ಕಲ್ಯಾಣಕಳಶಂಗಳಂ ಕಳಶೋದ್ಧಾರ ಮಂತ್ರಪೂರ್ವಕಮೆತ್ತಿಕೊಂಡು-

ಮ || ವಿ || ದಳಿತಾಂಭೋಜರಜಃಪಿಶಂಗಿತಲಸದ್ಗಂಧಾದಿತೀರ್ಥೋದಕಂ
ಗಳಿನಂಹೋಮಳಭೇದಕಂಗಳಿನುರುಶ್ರೇಯಃಫಳೋತ್ಪಾದಕಂ
ಗಳಿನೞ್ಕರ್ತು ಜಿನಾರ್ಭಕಂಗೆ ದಿವಿಜೇಶರ್ ಮಾಡಿದರ್ ಮುಖ್ಯಮಂ
ಗಳಮಂ ಸ್ನಾನವಿಧಾನಮಂ ಸಮುದಿತಾನೇಕಾನಕಧ್ವಾನಮಂ || ೧೧೯

ಸುರವೃಂದಾರಕರೆಯ್ದೆ ಮುಂದುವರಿದೊಂದಾನಂದದಿಂ ತಂದು ತಂ
ದಲರಂ ಗಂಧಮನಕ್ಷತಪ್ರಕರಮಂ ದರ್ಭಾಳಿಯಂ ದೂರ್ವೆಯಂ
ಚರುವಂ ನೀಡೆ ಶಚೀಯುತಾಮರಿಯರರ್ಚಾದ್ರವ್ಯಸಂಶುದ್ಧಿಯಂ
ತ್ವರಿತಂಮಾಡೆ ಸಮಗ್ರಮಾಯ್ತು ಭಗವಜ್ಜನ್ಮಾಭಿಷೇಕೋದ್ಯಮಂ || ೧೨೦

ಕಂ || ಅಮಳಜ್ಞಾನಂಗಿದು ಪಂ
ಚಮಗತಿರಾಜ್ಯಾಭಿಷೇಕಮಿಂತಿಲ್ಲಿಗೆ ಪಂ
ಚಮಜಳಧಿಜಳಮೆ ಯೋಗ್ಯಂ
ಸುಮಜ್ಜನಕ್ಕೆಂದು ಬೆಸಸಿದಂ ಸೌಧರ್ಮಂ || ೧೨೧

ವ || ಆಗಳ್‌

ಚಂ || ನಗಪತಿ ತಾನೆ ಜೈನಸವನೋತ್ಸವದೊಳ್‌ ಪಿರಿದೞ್ತಿಯಿಂದೆ ನೀ
ರ್ಮೊಗೆಯಲೊಡರ್ಚಿ ಪಂಚಮಪಯೋಧಿಗೆ ನೀಡಿದನಕ್ಕುಮೆಯ್ದೆ ದೋ
ರ್ಯುಗಳಮನಿರ್ಕೆಲಕ್ಕಮೆನೆ ಕಲ್ಪಜರೋಳಿಗಳಗ್ರಸಾನುವಿಂ
ದೊಗೆದು ಕಡಲ್ವರಂ ನಿಮಿರ್ದದೇನಮರ್ದಿರ್ದುವೊ ಕಣ್ಗೆ ನಾಡೆಯುಂ || ೧೨೨

ವ || ಅನಂತರಂ-

ಕ || ಸರದದ ತಂದಲ ಸಂಜೆಯ
ನೆರೆದ ಮುಗಿಲ ಪೀಱಿದಪುವು ನೀರ್ಗಳನೆಂಬಂ
ತಿರೆ ಪಳಿಕಿನ ನೀಲದ ಕೆಂ
ಬರಲ ಕೊಡಂ ತರದೆ ಮೊಗೆದುವಂದಿಂಗಡಲೊಳ್ || ೧೨೩

ದಿಟದಿಂ ಪಯೋಧಿಯಂ ತಳ
ತಟಮಂ ಸಾರ್ವಿನೆಗಮಮರಕುಳಕರಕಳಿತಂ
ಘಟಜಾತಂ ಪೀರ್ದೊಡದಂ
ಘಟಜಾತಂ ಪೀರ್ದನೆಂದು ನುಡಿವರ್ ಗಾಂಪರ್ || ೧೨೪

ಒಡಲೆಂಟು ಯೋಜನಂ ಮೊಗೆ
ದೆಡೆ ಯೋಜನಮೊಂದು ನೋೞ್ವೊಡೆನಿಸಿದ ಪೆಂಪಂ
ಗಡಣಿಸಿ ಘಟಂಗಳಮರ್ದಿನ
ಮಡುಗಳೆ ನಡೆವಂತೆ ತಿಂಬಿ ನಡೆದುವು ಪಲವುಂ || ೧೨೫

ಬೃಂದಾರಕರೋರೊರ್ವ
ರ್ಗೊಂದು ಕನತ್ಕಳಶನಿಕರಮಂ ಕೆಯ್ಗೆಯ್ಯೊಳ್
ತಂದೀವ ಕೊಳ್ವ ಸಂಭ್ರಮ
ದಂದಂ ಪೋಲ್ತತ್ತು ಕಂದುಕಕ್ರೀಡಿತಮಂ || ೧೨೬

ಚಂ || ಅನಿಮಿಷಕೋಟಿ ರತ್ನಪುಟಪೇಟಕದಿಂದಮೃತಾಬ್ಧಿದುಗ್ಧಮಂ
ಜನಿತಮರುನ್ಮನೋಜವದೆ ತಂದೆಡೆಮಾಡದೆ ನೀಡೆ ತಾಳ್ದಿ ಪಾ
ವನತರನೀರಪೂರಿತಫಲಾವಿಳಕೋಮಳನಾಳಿಕೇರಕಾ
ನನದವೊಲಾಯ್ತು ಪೂರ್ಣಕಳಶಾಕುಳಬಾಹುಸಮೂಹಮಿಂದ್ರರಾ || ೧೨೭

ವ || ಅಂತು ವಿಕ್ರಿಯಾಶಕ್ತಿಯಿಂ ಶಕ್ರರಮರಸಮಿತಿ ನೀಡಿದನೇಕಘಟಂಗಳನನೇಕಭುಜಂಗಳಿಂ ತಾಳ್ದಿ ಧಾರಾಭಿಷೇಕಮಂ ಜಯಜಯನಿನಾದಪೂರ್ವಕಂ ಮಾಡುವಾಗಳ್-

ಕಂ || ಪರಮಜಿನನೆಂಬ ಗುಣಗಣ
ಸುರತ್ನನಿಧಿಗಿಂದ್ರರೆಂಬ ತರುಗಳ್ ಬೀೞ
ಲ್ವರಿದಂತಿರ್ದುವು ತತ್ತ
ತ್ಕರಶಾಖಾಕಳಿತಕಳಶಧಾರಾಕ್ಷೀರಂ || ೧೨೮

ಜಿನತನುಗೆ ಕಾಂತಿಯಿಂ ಸೋ
ಲ್ತು ನಾಣ್ಚಿ ನೀರಾಗಿ ಕರಗಿ ಪರಿಯುತ್ತಿರ್ದ
ಪ್ಪನೊ ಚಂದ್ರನೆನಿಸಿದುದು ಪಳಿ
ಕಿನ ಕೊಡದಿಂ ಸುರಿವ ದುಗ್ಧಧಾರಾಪೂರಂ || ೧೨೯

ಕ್ಷೀರನಿರಂತರಧಾರಾ
ಪೂರದ ಪುದುವಿಂ ಜಿನಾನನಂ ಶೋಭಾಸಂ
ಸ್ಮಾರಕಮಾದುದು ಶಾರದ
ನೀರದಪರಿಪಿಹಿತತುಹಿನಕರಮಂಡಳದಾ || ೧೩೦

ಜಿನಶಿಶುವ ಕೋಮಳಾಮಳ
ತನು ಸವನಪಯಃಪ್ರವಾಹದೊಳ್ ಸೊಗಯಿಸಿದ
ತ್ತನಿಮಿಷರ ಕಣ್ಗೆ ಗಂಗೆಯ
ಪೊನಲೊಳ್ ನಳನಳಿಸಿ ಮಿಸುಪ ಬಿಸವಲ್ಲರಿವೊಲ್ || ೧೩೧

ಬಳಸಿರೆ ಜಿನತನುವಂ ದು
ಗ್ಧಲಹರಿ ತದ್ದುಗ್ಧಲಹರಿಯಂ ಸುರಯೋಷಿ
ತ್ಕುಳಮುಗ್ಧಾಪಾಂಗಪ್ರಭೆ
ಬಳಸಿರೆ ಮನಮೆಳಸಿ ಬಳಸಿದತ್ತಭಿಷವದೊಳ್‌ || ೧೩೨

ಕಡಲೊಳ್‌ ಪಾಲಂ ಮೊಗೆವಂ
ದೊಡವಂದುವು ತಾಗಿ ರತ್ನಪೀಠಮನೀಗಳ್
ಸಿಡಿದಪುವೋ ಮುತ್ತುಗಳೆನೆ
ಬೆಡಂಗನೊಳಕೆಯ್ದುವೊಗೆದ ದುಗ್ಧಲವಂಗಳ್ || ೧೩೩

ವ || ಅಂತು ಸಂಧ್ಯಾಂಭೋಧಸನ್ನಿಭಂಗಳಪ್ಪ ಶಾಂತಕುಂಭಕುಂಭಂಗಳಿಂ ಜಂಭಾರಿ ಶಂಭುಗಭಿ ಷವಮಂ ತುಮುಳಕೇಳಿಯಿನೊಡರ್ಚಿದಾಗಳ್‌

ಕಂ || ಗಿರಿಯಲ್ಲಿ ಘನಘಟಾವಳಿ
ಸುರಿದುವು ಪಯಮಂ ದಿಟಕ್ಕೆ ತಾನೆನಿಸಿ ಮರು
ದ್ಗಿರಿಯಲ್ಲಿ ಘನಘಟಾವಳಿ
ಸುರಿದುದು ಪಯಮಂ ಮೃದಂಗನಿನದಸ್ತನಿತಂ || ೧೩೪

ಉ || ನೀಡಿಸಿ ಕೊಳ್ವ ಕೆಯ್ಗಳುಮನಿತ್ತೆ ಸುರಾಳಿಗೆ ಕುಂಭಕೋಟಿಯಂ
ನೀಡುತುಮಿರ್ಪ ಕೆಯ್ಗಳುಮನಿತ್ತೆ ಜಿನಂಗಭಿಷೇಕಶೋಭೆಯಂ
ಮಾಡುವ ತನ್ನ ಕೆಯ್ಗಳುಮನಿತ್ತೆ ನಮಸ್ಕೃತಿಗಗ್ರಭಾಗದೊಳ್‌
ಕೂಡುತುಮಿರ್ಪ ಕೆಯ್ಗಳುಮನಿತ್ತೆ ವಿಚಿತ್ರಮೊ ಶಕ್ತಿ ಶಕ್ರನಾ || ೧೩೫

ಕಂ || ಸಕಳಾಮರರ್ ಪಯೋವಾ
ಹಕರಮರಿಯರಲ್ಲಿ ಪರಿವೆಸಂಗೆಯ್ವರ್ ಸ್ನಾ
ಪಕನಿಂದ್ರಂ ಸುರಗಿರಿ ಪೀ
ಠಿಕೆ ನೀರ್ದೊಣೆ ದುಗ್ಧವಾರ್ಧಿ ಜಿನಮಜ್ಜನದೊಳ್ || ೧೩೬

ವ || ಅಂತೈರಾವತಕರಸ್ಥೂಳಕ್ಷೀರಧಾರಾಸಹಸ್ರಂಗಳಿಂ ಜಿನಶಿಶುವಿನ ಶಿರದೊಳ್ ಸುರಿವ ಶತಮಖನುತ್ಸವೋನ್ಮುಖತೆಗಂ ಬಾಳಕನ ವಿಚಳಿತವೃತ್ತಿಗಂ ಅನಿಮಿಷನಿಕಾಯಂ ವಿಸ್ಮಯ ಸ್ತಿಮಿತನಯನಮಾಗಿ ನೋಡುತ್ತುಮಿನಿತಿರ್ಪನ್ನೆಗಂ-

ಕಂ || ಮಿಳಿರ್ವ ಪತಾಕೆಗಳೆತ್ತಿದ
ಶಿಳಮೆನೆ ಜಿನಶಿಶುವ ರೇಚಕಾನಿಳಹತಿಯಿಂ
ತಳರ್ದು ನಭೋಬ್ಧಿಯ ನೌಸಂ
ಕುಳದಂತೋಡಿದುದು ಸುರವಿಮಾನವಿತಾನಂ || ೧೩೭

ಜಿನಜನ್ಮೋತ್ಸವದೊಳ್ ಮೇ
ದಿನಿಗಿರಿಸಿದ ಕಾಂಚನಧ್ವಜಸ್ತಂಭಮಿದೆಂ
ಬಿನೆಗಂ ಸೊಗಯಿಸಿದುದು ಮೇ
ರುನಗಂ ಪ್ರೋಚ್ಚಳಿತದುಗ್ಧಪೂರದುಕೂಲಂ || ೧೩೮

ಉದಯಂ ಹಿಮಶೈಳದೊಳ
ಲ್ಲದೆ ಪಿರಿದುಂ ಹೇಮಶೈಳದೊಳ್ ಸಮನಿಕುಮೀ
ತ್ರಿದಶನದಿಗೆಂಬಿನಂ ಪೊ
ಣ್ಮಿದುದಭಿನವಸವನದುಗ್ಧನಿರ್ಝರಪೂರಂ || ೧೩೯

ಚಂ || ಪಸರಿಸಿ ಪೊನ್ನ ಪಾಸಱೆಗಳೊಳ್ ಮಣಿಶೃಂಗಶತಾಂತರಾಳದೊಳ್
ನುಸುಳ್ದುತುಱುಂಬಿ ಮೇಖಳೆಗಳೊಳ್ ಸರಸೀಕುಳದೊಳ್‌ ಸಮಂತು ಮೇ
ಳಿಸಿ ಘನಗಹ್ವರೋದರದೊಳಾದಮೆ ತಿಂಬಿ ಸುಮೇರುಶೈಳದೆ
ಣ್ದೆಸೆಯೊಳಮುಬ್ಬರಂಬರಿದು ಪಾಲಪೊನಲ್ ಪಡೆದತ್ತು ಲೀಲೆಯಂ || ೧೪೦

ಕಂ || ಶೈಲಪತಿಯೆನ್ನ ತಲೆಯೊಳ್‌
ಪಾಲಂ ಕಱೆದಂ ಸುರೇಂದ್ರನಿನಿತುಮಹತ್ವ
ಕ್ಕಾಳಂಬಂಮಾಡಿದನೆಂ
ಬಾಳಾಪಮಿದೆನಿಸಿತಾ ಪಯಃಪ್ಲವರಾಗಂ || ೧೪೧

ಮೊದಲಂ ಬಳಸಿರೆ ಗುಂಟಿಸಿ
ದುದಕದವೋಲಭಿಷವಾಂಬು ಮೇರುನಗಂ ಸ್ಕಂ
ಧದವೊಲಿರೆ ತೀರ್ಥಕರನ
ಗ್ರದೊಳಿಂದ್ರನ ಪುಣ್ಯಕುಜದ ಫಲದವೊಲಿರ್ದಂ || ೧೪೨

ಉ || ಕ್ಷೀರಸಮುದ್ರಮತ್ತ ಬಱಯಿತ್ತಮರರ್ ಮೊಗೆವೊಂದುಬೇಗದಿಂ
ಮೇರುನಗೇಂದ್ರಮಿತ್ತ ಮುೞುಗಿತ್ತು ಪರೀತಯಃಪ್ರವಾಹದಿಂ
ತಾರಕಿತಂಬೊಲತ್ತ ನಭಮಾಯ್ತು ವಿಕೀರ್ಣಲವಪ್ರಪಂಚಸಂ
ಭಾರದಿನೆಂದೊಡೇವೊಗೞ್ವುದಿಂದ್ರನ ಮಾೞ್ಪ ಮಹಾಭಿಷೇಕಮಂ || ೧೪೩

ಕಂ || ಪರಿವ ತದಂಭಃಪೂರಾಂ
ತರದೊಳ್‌ ನಸು ತೇಂಕೆ ತಾರಕಾಖ್ಯೆಯುಮಾದಂ
ತರಣಿಸಮಾಖ್ಯೆಯುಮಾಗಳ್
ದೊರೆವೆತ್ತುವು ನಾಡೆ ತಾರೆಗಂ ಸೂರ್ಯಂಗಂ || ೧೪೪

ಎಱಗಿದ ತುಂಬಿಗೆ ಬಿಂಬದ
ಕೆಱೆ ಪಾಸಟಿಯಾಗೆ ತೇಂಕಿ ಬಾಂದೊಱೆವೊನಲೊಳ್‌
ಮಿಱುಪ ಧವಳಸ್ಮಿತಾಬ್ಜದ
ತೆಱನಂ ಮಱೆಯಿಸಿದನಬ್ಜನಂತಾ ಪ್ಲವದೊಳ್‌ || ೧೪೫

ವ || ಅಂತತಿಕ್ರಾಂತಜ್ಯೋತಿಃಕಳಾಪಮುಂ ಪ್ರಾಪ್ತಪ್ರಥಮದ್ವೀಪಮುಮಾಗಿ-

ಕಂ || ತದ್ದುಗ್ಧಸಂಕುಳಂ ದೆಸೆ
ಬಿದ್ದಂ ಪರಿದೆಯ್ದೆ ಬೆರಸಿ ನಿಲೆ ಲವಣೋದ
ನ್ವದ್ದುಗ್ಧಜಳಧಿಗಳ್ಗದ
ನುದ್ದೇಶಿಸಿ ಕವಿಗಳುಸಿರ್ವರೈಕ್ಯಮನಿನ್ನುಂ || ೧೪೬

ಮ || ವಿ || ಜಿನರಾಜಸ್ನಪನಾಂಬು ಪೊರ್ದಿ ಪರಿದಂದಿಂದಿತ್ತಲತ್ಯಂತಪಾ
ವನಮಾಗಿರ್ಪುವು ನಾಡೆ ರೂಡಿವಡೆದಂತೀದ್ವೀಪದೊಳ್ ಕೂಡೆ ಸ
ಜ್ಜನತಾಸಂಶ್ರಯಮಾಗೆ ಪುಣ್ಯನದಿ ಪುಣ್ಯಕ್ಷೇತ್ರಮಾರಯ್ಯೆ ಪು
ಣ್ಯನಗಂ ಪುಣ್ಯಸರೋವರಪ್ರತತಿ ಪುಣ್ಯಾರಣ್ಯಮೆಂದೀಗಳುಂ || ೧೪೭

ವ || ಅನಂತರಮನಂತಚತುಷ್ಟಯಾಧಿಪತ್ಯಕ್ಕಿದುವೆ ರಾಜ್ಯಾಭಿಷೇಕಮೆಂಬಂತೆ ಚತುಷ್ಕೋಣ ಕಳಶದಿಂ ಮಜ್ಜನಂಬುಗಿಸಿ ದರ್ಭಾನ್ನಪ್ರದೀಪಫಳಕುಳಂಗಳಿಂ ನೀರಾಜನವಿಧಾನಮ ನೊಡರ್ಚಿ ಸಂಗತಾನೇಕಮಂಗಳಗೀತಾತೋದ್ಯರವಂಗಳೆಸೆಯೆ ಕಾಶ್ಮೀರಕರ್ಪೂರಹರಿ ಚಂದನೋನ್ಮಿಶ್ರಿತಾರ್ಣಃ ಪ್ರಪೂರ್ಣಸೌವರ್ಣಘಟಂಗಳನೆತ್ತಿಕೊಂಡು-

ಉ || ಆದಿವಿಜಾಧಿಪರ್ ಮಿಸಿಸೆ ಗಂಧಜಲಂ ಜಿನನಂಗಸಂಗತಾ
ಮೋದದೊಳೊಂದಿ ಕಂಪು ತನಿಗೊರ್ವೆ ಮದಾಳಿಕುಳಕ್ಕೆ ನಿರ್ಭರಾ
ಹ್ಲಾದಮನಿತ್ತು ಸಿಂಪಿಣಿಯಲಂಪನಮರ್ತ್ಯವಧೂಜನಕ್ಕೆ ಸಂ
ಪಾದಿಸಿ ಮತ್ತೆ ಮಾಡಿದುದು ಮಂದರಕಂ ಪರಿಖಾವಿಳಾಸಮಂ || ೧೪೮

ಕಂ || ಸಕಳಸುರಸಮಿತಿ ತನತನ
ಗೆ ಕೊಂಡು ಜಿನಸವನಪರಮಪಾವನಗಂಧೋ
ದಕಮಂ ತಳೆದಾದಂ ಸಾ
ರ್ಥಕತೆಯನೆಯ್ದಿಸಿದುದುತ್ತಮಾಂಗಕ್ಕಾಗಳ್ || ೧೪೯

ಚಂ || ಕುಳಿರ್ವಭಿಷೇಕಗಂಧಸಲಿಲಂಗಳನಾಗಳೆ ಮಸ್ತಕಾಗ್ರದೊಳ್‌
ತಳೆದಲರ್ಗಣ್ಣೊಳೊತ್ತಿ ನಳಿತೋಳ್ಗಳೊಳೊಯ್ಯನೆ ಪೂಸಿ ಕೋಮಳಾಂ
ಗುಳಿಗಳೊಳೞ್ದಿಕೊಂಡೆರ್ದೆಯೊಳಂಟಿ ನಿರಾಕೃತಪಾಪತಾಪಮು
ತ್ಪುಳಕಕದಂಬಕಂ ನಲಿದುದಂದು ಕರಂ ದಿವಿಜಾಂಗನೋತ್ಕರಂ || ೧೫೦

ಕಂ || ಸವನನವಗಂಧಜಳಸಿಂ
ಧುವಿನೊಳ್ ನೀರಾಟದಿಂದೆ ರಮಿಯಿಸಿ ಮೆಱೆದ
ತ್ತವಯವದೆ ದಿವಿಜಕೋಟಿಗೆ
ದಿವಿಜಗಜಂ ಗಂಧಸಿಂಧುರತ್ವಮನಾಗಳ್‌ || ೧೫೧
ದುರಿತೋಪತಾಪಮನಂ ಸಂ
ಹರಿಸಲುಮಖಿಲಜನಪುಣ್ಯಲತಿಕಾಂಕುರಮಂ
ಪರಿವರ್ಧಿಸಲುಂ ನೆಱೆಯದೆ
ಪರಮಜಿನಸ್ನಾನಗಂಧಜಲಲವನಿವಹಂ || ೧೫೨

ವ || ಸಮನಂತರಂ-

|| ಮಾಳಿನೀ ||
ಸುರಭಿಸಲಿಲದಿಂದಂ ಚಂದನಕ್ಷೋದದಿಂದಂ
ಸರಳಪದಕದಿಂದಂ ಪುಷ್ಪಮಾಳಾಳಿಯಿಂದಂ
ಸರಸರುಚಕದಿಂದಂ ಪ್ರಜ್ವಲದ್ದೀಪದಿಂದಂ
ಸ್ಫುರದಗರುಸುಧೂಪೋದ್ದಾಮಧೂಮೌಘದಿಂದಂ || ೧೫೩

ವರಫಳಕುಳದಿಂದಂ ಚಾಮರಚ್ಛತ್ರಕೇತೂ
ತ್ಕರಪರಿಕರದಿಂದಂ ನೂತ್ನರತ್ನಾಂಚಿತಾಳಂ
ಕರಣನಿಚಯದಿಂದಂ ಸಾಂಗಸಂಗೀತದಿಂದಂ
ಪರಮಚರಣಪೂಜಾವ್ಯಾಪ್ತಿಯಂ ಭಕ್ತಿಯಿಂದಂ || ೧೫೪

ವ || ಮಾಡಿ ಬೞಿಯಮರ್ಹದಭಿಮುಖಂ ಶತಮಖನಖಿಳಸುರಸಮಿತಿವೆರಸು ಕುಟ್ಮಳಿತ ಕರಪುಟಫಟಿತಮಕುಟನಿಕಟನಾಗಿ

|| ಹರಿಣೀ ||
ಜಯ ಜಯ ಜಯಸ್ವೀಕಾರೇಚಾ ಗತಾಂತಕರಾಜದು
ರ್ಜಯ ಜಯ ಜಯ ಪ್ರೋದ್ಯತ್ಪಾಪಂ ಮದೀಯಮಧೀಶ ತ
ರ್ಜಯ ಜಯ ಜಯವ್ಯಾಮೋಹಾದ್ದೇವ ಮಾಂ ಸಹಸಾಪಸ
ರ್ಜಯ ಜಯ ಜಯ ತ್ರೈಲೋಕ್ಯಾಶ್ಚರ್ಯಸದ್ವಿಭವಪ್ರಭಾ || ೧೫೫