|| ಮಾಳಿನೀ ||
ಜನನಜಳಧಿಪಾರಂ ಗಂತುಮಿಚ್ಛೋರ್ಜನಸ್ಯ
ತ್ವಯಿ ಕೃತಪರಿಚರ್ಯಾ ಸ್ವಸ್ಯ ಸೌಖ್ಯಸ್ಯ ಹೇತುಃ
ಪರಮಜಿನ ಯಥಾ ಸಾಂಯಾತ್ರಿಕಸ್ಯ ಪ್ರಯತ್ನಃ
ಪ್ರವಹಣದೃಢಕರ್ಮಣ್ಯಂಬುರಾಶಿಂ ವಿವಕ್ಷೋಃ || ೧೫೬

|| ವಸಂತತಿಳಕಂ ||
ತ್ವಂ ಸೇವ್ಯಭವ್ಯಜನವತ್ಸಲ ಮಾಮಕೀನ
ಮಾಯುಸ್ತ್ವದೀಯಪದಪಲ್ಲವಸಕ್ತಭಕ್ತ್ಯಾ
ಸ್ಮೃತ್ಯಾಪ್ರಸನ್ನ ಮಧುರೋಕ್ತಿನಿಯುಕ್ತನುತ್ಯಾ
ನತ್ಯಾ ಯಥಾ ವ್ರಜತಿ ದೇವ ತಥಾ ಕುರುಷ್ವ || ೧೫೭

|| ಸ್ಕಂದಕಂ ||

ತ್ರಿಭುವನಚೂಡಾಮಣಯಃ
ಕಾಳೋರಗವಿಷಮಗರಳವಿಷಹರಮಣಯಃ
ನತಜನಚಿಂತಾಮಣಯೋ
ಮಮ ಹೃದಿ ನಿವಸಂತು ಜೈನಪದನಖಮಣಯಃ || ೧೫೮

ವ || ಎಂದಭಿವಂದಿಪುದುಮಾಗಳರ್ಹದಂಗಸಂಗತಜಳಲವಂಗಳಂ ಶಚಿ ಶುಚಿವಸ್ತ್ರಪಲ್ಲವ ದಿನೊತ್ತಿ ಕಳೆದು ನಿರ್ಲೇಪಂಗೆ ಸುಗಂಧಾನುಲೇಪಮಂ ಸಮೆದು ಇಕ್ಷ್ವಾಕುವಂಶಲಕ್ಷ್ಮೀ ಲಲಾಮಂಗೆ ಲಲಾಮಮನಿಟ್ಟು ಕಾಶ್ಯಪಗೋತ್ರಪವಿತ್ರಂಗೆ ಕಟಿಸೂತ್ರಮಂ ಕಟ್ಟಿ ನಿರಂಜನಪದೇಚ್ಛುಗಂಜನಮನೆಚ್ಚು ಭುವನಭೂಷಣಂಗೆ ಬಾಳೋಚಿತಭೂಷಣಂಗಳಂ ತುಡಿಸಲೊಡಂ-

ಚಂ || ಮಣಿಮಯಕುಂಡಳಂ ಸಹಜವಿದ್ಧವಿರಾಜಿತಕರ್ಣದೊಳ್ ಶಿಖಾ
ಮಣಿ ಶಿಖೆಯೊಳ್ ಸುರತ್ನಕೃತಮಾಣವಕಂ ಗಳದೊಳ್ ಹಿರಣ್ಯಕಿಂ
ಕಿಣಿ ಕಟಿಯೊಳ್‌ ರಣದ್ರುಚಿರಕಂಕಣಮಾ ಮಣಿಬಂಧದೊಳ್ ಸ್ಫುರತ್
ಘೃಣಿಗಣನೂಪುರಂ ಚರಣದೊಳ್ ದೊರೆವೆತ್ತುವು ದೇವದೇವನಾ || ೧೫೯

ವ || ಆಗಳ್-

ಕಂ || ತೂಕರಿಸಿ ಪರಸಲೆಂದು ಶ
ಚೀಕಾಂತೆಯೊಡರ್ಚಿ ನಾಣ್ಚಿ ತಲೆವಾಗಿ ಬೞಿ
ಕ್ಕಾಕೆ ಜಿನವ್ಯಪಗತಬೋ
ಧಾಕೃತಿಯೆಂದದನೆ ನುಡಿಗೆ ನತಿಗೇಱಿಸಿದಳ್‌ || ೧೬೦

ಅತಿಶಯಮಂ ಜಿನಪತಿಯಾ
ಕೃತಿಯನಭೀಕ್ಷಿಸುವ ಪೊಗೞ್ವಪೇಕ್ಷೆಯೊಳೆ ದಿವ
ಸ್ಪತಿಯುಂ ಫಣಿಪತಿಯುಂ ಪರಿ
ವೃತನಯನಸಹಸ್ರಮುಖಸಹಸ್ರರುಮಾದರ್ || ೧೬೧

ವ || ಅಂತು ನಿಷ್ಠಾಪಿತಪರಮೇಷ್ಠಿಜನ್ಮಾಭಿಷೇಕನಾಗಿ-

ಚಂ || ಕನಕನಗಾಗ್ರದಿಂದೆ ಹಿಮವದ್ಗಿರಿಚೂಳಿಕೆಗುಯ್ವ ಲೀಲೆಯಿಂ
ಜಿನಪತಿಯಂ ಮರುತ್ಪತಿ ನಿಜದ್ವಿಪಮಸ್ತಕದಲ್ಲಿಗುಯ್ದು ಮೆ
ಲ್ಲನೆ ನವದಿವ್ಯವಸ್ತ್ರಪಿಹಿತಾಂಕದೊಳಿಟ್ಟು ತಳರ್ಚಿದಂ ಬೞಿ
ಕ್ಕನಿತುಮನಭ್ರವೀಧಿಯೊಳೆ ಚಂದ್ರಪುರಕ್ಕೆ ಚತುರ್ನಿಕಾಯಮಂ || ೧೬೨

ವ || ಆಗಳ್-

ಕಂ || ಸುರನಿಕರಕಳಕಳಂ ಮಸು
ಳ್ದಿರೆ ಗರ್ಜನೆ ಮಾಣ್ದ ಶಾರದೋತ್ತುಂಗಪಯೋ
ಧರಕೂಟಮೆನಿಸಿದುದು ಮಂ
ದರಶೈಳಂ ಸವನದುಗ್ಧಲಹರೀದಿಗ್ಧಂ || ೧೬೩

ಓಸರಿಸೆ ಕಳಕಳಂ ಸುರ
ರಾಸಮಯದೊಳೋದಿ ಪೋದ ಶಾಸ್ತ್ರಾಭ್ಯಾಸ
ಪ್ರಾಸಾದಮೆಂಬ ವಾಗ್ವಿ
ನ್ಯಾಸಕ್ಕೆಡೆಯಾಗಿ ಬಿನ್ನನಿರ್ದುದಗೇಂದ್ರಂ || ೧೬೪

ಸುರವೃಂದಾರಕಕೌಸುಮ
ಪರಾಗಸಂದೋಹವಾತ್ಯೆ ನೆಗಪಿತ್ತತ್ತಂ
ಬರದೊಳ್‌ ಪಿಂದನೆ ಮಂದರ
ಗಿರಿ ಬಂದಪುದೆಂಬ ಸಂದೆಗದ ದಂದುಗಮಂ || ೧೬೫

ವ || ಅಂತು ಬಂದು ಬಹಿಃಪುರದೊಳವತರಿಸಿ ಬೞಿಯಮಷ್ಟಮತೀರ್ಥಕರನ ಬರವಿನೊಸಗೆ ಯೊಳಷ್ಟಶೋಭಾಪರಿಪುಷ್ಟಮಪ್ಪ ಪುರಮಂ ಪುರಂದರಂ ಪುಗುವಾಗಳಮರಸೈನ್ಯಕಳಕಳಾ ವಿಳಭೂರಿಭೇರೀಪ್ರಣಾದಸಂಪಾದಿತಪ್ರಮೋದಪರವಶಂ ನೆಱೆದು ಬಂದು ಶೃಂಗಾಟಕಸ ವಿಧಸೌಧಸೌಧೋತ್ಸಂಗದೊಳ್‌ ನಿಂದು ವಿವಿಧಾರ್ಘ್ಯಾಂಜಳಿಗಳಂ ಕೊಟ್ಟು-

ಕಂ || ತನತನಗೆಱಗಿದುದು ಪುರೀ
ಜನಮೀಕ್ಷಿಸಿ ದೇವರಾಜನಂಕಸ್ಥಿತನಂ
ಜಿನರಾಜನನಲರ್ದೊಪ್ಪುವ
ಮನಂಗಳುಂ ಮುಗಿದ ಕೈಗಳುಂ ಬೆರಸಾಗಳ್‌ || ೧೬೬

ದಿವಿಜಗಜಾಗ್ರದೊಳಿರ್ದುಂ
ಭುವನಾಗ್ರದೊಳಿರ್ದನೆನಿಸಿದಂ ಹರಿಯಂ ತಾ
ನವಳಂಬಿಸಿರ್ದುಮಖಿಳ
ಕ್ಕವಳಂಬನಮೆನಿಸಿದಂ ಜಿನಾರ್ಭಕನೀಗಳ್ || ೧೬೭

ದೊರೆವೆತ್ತುದು ಪೃಥುಕತ್ವಂ
ಪರಮನೊಳಾತ್ಮೀಯಜನನಿಯುದರದೊಳಿರ್ದುಂ
ಪರಿಕಿಪೊಡಾಕ್ರಾಂತಚರಾ
ಚರಗೋಚರಸಕಳಭುವನನಾದುದಱಿಂದಂ || ೧೬೮

ವ || ಎಂದಭಿವರ್ಣಿಸುತಿರ್ಪನ್ನೆಗಂ ಪ್ರವೃದ್ಧೋತ್ಸಾಹಬುದ್ಧಿವೃದ್ಧಂ ವೃದ್ಧಶ್ರವಂ ನಿರ್ಧಾರಿತಮಹ ರ್ಧಿಕಾಮರಸಮಾಜಂ ರಾಜಮಂದಿರಮಂ ಮಂದರೋಪಮಮಂ ಪೊಕ್ಕು ಮುನ್ನಮೆ ಕಲ್ಪಜಶಿಲ್ಪಿಜನಪರಿಕಲ್ಪಿತಮಾಗಿರ್ದನಲ್ಪಮಣಿಮಂಟಪದೊಳಘದ್ವಿಪಗಜಾರಿಯಂ ಗಜಾರಿ ಪೀಠಾಧಿರೂಢಂ ಮಾಡಲೊಡಂ-

ಕಂ || ಸುತಮುಖನಿರೀಕ್ಷಣೋತ್ಸುಕ
ಮತಿಗಳ್ ಭೂಭುಜನುಮರಸಿಯುಂ ಪರಿತಂದ
ಪ್ರತಿಮನನೀಕ್ಷಿಸಿ ನಯನ
ದ್ವಿತಯಕ್ಕೊಡರಿಸಿದರಂತವರ್ ಸಫಲತೆಯಂ || ೧೬೯

ವ || ಆಗಳವರನುಚಿತವಿಷ್ಟರೋಪವಿಷ್ಟರಂ ಮಾಡಿ-

ಮ || ವಿ || ಭುವನಜ್ಯಾಯನ ತಂದೆ ತದ್ವಿಭುವ ತಾಯೆಂಬೊಂದು ಸಯ್ಪಿಂಗೆ ನೋಂ
ತವರಾರ್ ನಿಮ್ಮವೊಲೆಂದು ಬಣ್ಣಿಸಿ ಸಹಸ್ರಾಕ್ಷಂ ಮಹಾಸೇನಭೂ
ಧವನಂ ಪೆರ್ಮೆಯ ಲಕ್ಷ್ಮಣಾರಮಣಿಯಂ ದಿವ್ಯಾಂಬರಾಲೇಪಮಾ
ಲ್ಯವಿಭೂಷಾದಿಗಳಿಂದೆ ಪೂಜಿಸಿದನಾವೊಂ ಪೂಜಿಸಂ ಪೂಜ್ಯರಂ || ೧೭೦

ಕಂ || ದೊರೆಕೊಳೆ ಪದಾರ್ಥಸಂಶಯ
ಮಿರದಾಗಳೆ ಬಂದು ಜಿನಪಿತೃದ್ವಂದ್ವಮನಾ
ದರದಿಂ ಬಲಗೊಳಲೊಡನೋ
ಸರಿಕುಮದೆನೆ ಪೊಗೞಲಱಿವರಾರವರಱಿವಂ || ೧೭೧

ವ || ಎಂದು ವಾಸುಗಿಯುಂ ಪೊಗೞ್ದು ಪೂಜಿಸಿದಂ ಆಗಳ್‌ ವಾಸವಂ ಜನ್ಮಾಭಿಷೇಕೋತ್ಸವ ಮನವರ್ಗೆ ತೀರ್ಥಕರಜನ್ಮಕ್ರಮಮಿದೆಂದಱಿಯೆ ತಿಳಿಪುವುದುಮವರತ್ಯಂತಸಂತೋಷಾ ಕ್ರಾಂತಸ್ವಾಂತರಾಗಿ-

ಮ || ವಿ || ಸುರರಾಜಂ ಮದಧೀಶ್ವರಂ ಶಿಶು ದಲೆಂದೇನಿರ್ದನೇ ತಾಂ ಮಹ
ತ್ತರನಾದಂ ಶಚಿ ದಾದಿಯಾದಳಮರರ್ ಪೇೞ್ವಂತುಟಂ ಮಾೞ್ಪ ಕಿಂ
ಕರರಾದರ್ ನವದಿವ್ಯವಸ್ತುಚಯಮಸ್ಮದ್ಗೇಹದೊಳ್ ನೋೞ್ಪೊಡು
ಬ್ಬರಮಾಯ್ತಾದೊಡಮೇನೊ ಮತ್ಸುತನ ಪುಣ್ಯಕ್ಕಿಂತಿದಾಶ್ವರ್ಯಮೇ || ೧೭೨

ವ || ಎಂದು ಜಗದ್ಗುರುಜನನೀಜನಕರ್ ತಮ್ಮೊಳತಿಸಮ್ಮದದಿಂ ನುಡಿದು ಜಾತಕರ್ಮೋತ್ಸವ ಮನೊಡರ್ಚಿದಾಗಳ್‌

ಉ || ಆತತಕೀರ್ಣಚೂರ್ಣಪಟವಾಸದಿನಾವೃತದಿಕ್ಸಮೂಹಪಿ
ಷ್ಟಾತಕದಿಂ ಬಲೀಕೃತನವಾರುಣನೀರರುಹಾಳಿಯಿಂ ಸಮು
ದ್ದ್ಯೋತಿತರತ್ನಭೂಷಣದಿನುಜ್ಜ್ವಲತೋರಣಶೋಣಪಲ್ಲವ
ವ್ರಾತದಿನೇಕರಾಗರಸಪೂರಿತಮಾಯ್ತೆನಿಸಿತ್ತು ತತ್ಪುರಂ || ೧೭೩

ಚ || ಸುರನರಗಾಯಿಕಾನಿಚಯಸಂಗತಮಂಗಳಗೀತನಾದದಿಂ
ಸುರನರವಾದಕಪ್ರಕಾರವಾದ್ಯಸಮುದ್ಗತಹೃದ್ಯಶಬ್ದದಿಂ
ಸುರನರನರ್ತಕೀಲಲಿತನರ್ತನವರ್ತನದಿಂ ನೃಪೇಂದ್ರಮಂ
ದಿರಮದು ದಿವ್ಯಮಾನುಷವಿಳಾಸರಸಾತ್ಮಕಮಾದುದಾವಗಂ || ೧೭೪

ಕಂ || ಮನೆಯಿವು ವಿಮಾನಮಿವು ಪರಿ
ಜನಮಿದು ಸುರಜನಮಿದರಸನಿವನಿಂದ್ರನಿವಂ
ಜನಪಸತಿಯೀಕೆ ಶಚಿಯೀ
ಕೆ ನೋೞ್ಪೊಡೆಂದಱಿಯಲರಿದದೇಂ ಸಿರಿ ಪಿರಿದೋ || ೧೭೫

ಸುರಜನಮುಂ ಪುರಜನಮುಂ
ಪರಿಜನಮುಂ ಪರಮಪುರುಷಜನ್ಮೋತ್ಸವನಿ
ರ್ಭರತರಹರ್ಷರಸಾಮೃತ
ಶರಧಿಯೊಳೇಂ ಕೂಡೆ ಮೂಡಿ ಮುೞ್ಕಾಡಿದುದೋ || ೧೭೬

ವ || ಅಂತು ನಾಟಕಂನಲಿವುದಂ ಕಂಡು ತಾನುಂ ಆನಂದಸೀಮಾ ಖಲು ನೃತ್ಯಸೇವಾ ಎಂಬ ನಾಟ್ಯವೇದಾರ್ಥಮಂ ಸಮರ್ಥಿಸುವಂತೆ ರಸಂ ಭಾವಂ ಅಭಿನಯಂ ಧರ್ಮಿ ಪೃವೃತ್ತಿ ಸಿದ್ಧಿ ಸ್ವರಮಾತೋದ್ಯಂ ಗಾನಂ ರಂಗಂ ಸಂಗ್ರಹಮೆಂಬ ಪನ್ನೊಂದು ನಾಟ್ಯಂಗ ದೊಳ್ ನೆರೆದು ನಾಟಕಾದಿರಸರೂಪಕಂಗಳೊಳ್ ದೇವನಾಯಕಾಯುಕ್ತಮುಂ ವೀರರಸೋ ಪೇತಮುಮಪ್ಪ ಸಮವಾಕಾರರೂಪಕಮಂ ಗರ್ಭಾವತರಣಕಲ್ಯಾಣಪ್ರಸ್ತುತಮೆ ವಸ್ತುವಾಗೆ ಯುಂ ಜ್ಞಾನತ್ರಯೀನೇತೃವೆ ನೇತೃವಾಗೆಯುಂ ದಾನದಯಾವೀರರಸಂಗಳೆ  ರಸಂಗಳಾಗೆಯುಂ ಸ್ವರ್ಗಿಗರೆ ಚತುರ್ವರ್ಗಿಗಳಾಗೆಯುಂ ತ್ರಿದಶವಾದಕರೇ ವಾದಕ ರಾಗೆಯುಂ ಗಂಧರ್ವಾಮರರೇ ಗಾಯಕರಾಗೆಯುಂ ಸುತ್ರಾಮನಘಸಂತ್ರಾಸ ಫಲಾರ್ಥಿ ತ್ವದಿಂ ಸೂತ್ರಧಾರ ವೃತ್ತಿಯಂ ತಳೆದು ನಟನಲಂಪಟಗೃಹೀತ ಸಮುಚಿತನೈಪಥ್ಯನುಮುಪ ಚರಿತನಾಂದೀಸಮಯಭಾರತಿಕಾಚಾರನುಮಾಗಿ ರಂಗಪ್ರವೇಶದೊಳ್ ದರ್ಶನಾವರಣೋಪಶಾಂತಿಯೆಂಬಂತೆ ಯವನಿಕಾಪಸರಣ ಮಾಗಲೊಡಂ-

ಕಂ || ಪದದೊಳ್ ಸಮಪಾದಂ ಹೃದ
ಯದೊಳಂಜಳಿ ಮುಖದೊಳಮಳಸಮದೃಷ್ಟಿ ಬೆಡಂ
ಗೊದವಿರೆ ಸೂತ್ರಿಸಿ ಬರೆದಂ
ದದೊಳಿರ್ದಂ ಕುಳಿಶಿ ನಿಂದು ಋಜ್ವಾಗತದೊಳ್‌ || ೧೭೭

ವ || ಅಂತು ನಿಂದು ಪುಷ್ಪಾಂಜಲಿವಿಕ್ಷೇಪಮಂ ಮಾಡಿ ನಿಟಿಳನಿಹಿತಾಂಜಳಿಯಾಗಿ-

ಕಂ || ಪರಮನ ಚರಣನಖಾಮೃತ
ಕಿರಣನನೋಲಗಿಪ ತರಳತಾರಾಗಣಮಂ
ಪರಿಹಾಸಂಗೆಯ್ದುದು ಕೇ
ಸರಿಪೀಠೋಪಾಂತದೊಳ್‌ ಲತಾಂತಪ್ರಸರಂ || ೧೭೮

ವ || ಅನಂತರಂ ಮಂಗಳಪದಪದವಾಕ್ಯದಿಂ ಪ್ರಸ್ತಾವನೆವಡೆದು ಬೞಿಯಂ ಪ್ರರೋಚನಾರ್ಥಂ ಪೂರ್ವರಂಗಪ್ರಸಂಗಮಂ ಮಾಡಿದಾಗಳ್-

ಮ || ವಿ || ಕಿವಿಗಿಂಪಂ ಮೃದುಗೇಯಮೀಯೆ ಮೃದುಗೇಯಕ್ಕಾದಮೋರನ್ನಮೆಂ
ಬವೊಲಿಂಬಾಗಿರೆ ವಾದ್ಯಶಬ್ದಮತಿಸಾಮ್ಯಂ ವಾದ್ಯಶಬ್ದಕ್ಕೆ ನೋ
ಡುವೊಡೆಂಬೊಪ್ಪದೊಳೊಂದೆ ನೃತ್ಯಮಳವಟ್ಟಾನೃತ್ಯದಿಂದುಣ್ಮಿ ಪೊ
ಣ್ಮೆ ವಿಶೇಷಂ ರಸವೃತ್ತಿಯೇನೆಸೆದುದೋ ತದ್ರಂಗಸಂಗೀತಕಂ || ೧೭೯

ವ || ತದನಂತರಂ ವಸ್ತುವಿಷಯದೊಳ್‌ ಸರ್ವರಸಾಯತ್ತಮಪ್ಪ ಭಾರತೀವೃತ್ತಿಯಂ ಪೊರ್ದಿ ಲಲಿತನೃತ್ಯದೊಳ್‌ ನಿಬದ್ಧಾನಿಬದ್ಧಭೇದಭಿನ್ನತ್ರಿಮಾರ್ಗಗೀತಂಗಳೊಳಂ ತತ್ವಾನುಗೌಘವಾ ದ್ಯಂಗಳೊಳ್ ಸಂಗತಂಬಡೆದು-

ಮ || ಸ್ರ || ಸಕಳಾಂಗೋಪಾಂಗದಿಂದಾಂಗಿಕಮತಿವಿಶದಂ ಗಾನಪಠ್ಯೋಕ್ತದಿಂ ವಾ
ಚಿಕಮತ್ಯೌಚಿತ್ಯನೈಪಥ್ಯದೆ ಸುಸದೃಶಮಾಹಾರ್ಯಕಂ ಸತ್ವಭಾವಾ
ಧಿಕಚೇಷ್ಟಾಪುಷ್ಟಿಯಿಂ ಸಾತ್ವಿಕಮಮರ್ವಿನಮವ್ಯಾಜದಿಂ ಮೆಚ್ಚೆ ಸಾಮಾ
ಜಿಕರಿಂದ್ರಂ ಲೀಲೆಯಿಂದಂ ಚತುರಭಿನಯಚಾತುರ್ಯದೊಳ್ ಕೂಡೆ ಸಂದಂ || ೧೮೦

ಕಂ || ಭರತಾಗಮಲಕ್ಷ್ಮಿಗೆ ನಿಜ
ಕರಣಮಳಂಕರಣಮಂಗಹಾರಂ ಹಾರಂ
ಪಿರಿದುಂ ತಾನೆನೆ ಮೆಱೆದಂ
ಸುರಪರಿವೃಢನಾಂಗಿಕಾಭಿನಯಪರಿಚಯಮಂ || ೧೮೧

ಕುಳಿಶಿಗಭಿನಯದೊಳಾದಂ
ಗಳಕ್ಕೆ ನತಿ ದೃಷ್ಟಿಗುತ್ಸವಂ ಹಸ್ತಕ್ಕಂ
ಜಳಿಯೆ ಬರುತಿರ್ದುವೇನ
ಗ್ಗಳಮೋ ಜಿನಭಕ್ತಿಯೆಸಕಮಾತನ ಮನದೊಳ್ || ೧೮೨

ಸಭೃತಮುದಂ ಹರಿ ಮೆಱೆದಂ
ಸಭೆಗೆ ವಿಭಾವಾನುಭಾವಸಾತ್ವಿಕಭಾವ
ವ್ಯಭಿಚಾರಭಾವಮೆಂಬಿವ
ಱಭಿನಯದಿಂ ಸ್ಥಾಯಿಭಾವದೊಳ್‌ ರಸದೊದವಂ || ೧೮೩

ಇದು ಭಾವಮಿದು ರಸಂ ಮ
ತ್ತಿದು ವೃತ್ತಿಯೆನಿಪ್ಪ ಸಂದ ಸಮಕಟ್ಟುಗಳೊಳ್
ತ್ರಿದಶಪತಿ ಭರತಶಾಸ್ತ್ರದ
ಮೊದಲ ನಿಬಂಧನಮೆ ಮೂರ್ತಿಗೊಂಡಂತಿರ್ದಂ || ೧೮೪

ಅಭಿಷೇಕಾಮೃತದಿಂ ಹೇ
ಮಭೂಧ್ರಮಂ ಮುನ್ನ ಮುಱುಗಿಸಿದವೋಲಮರ
ಪ್ರಭು ಮುೞುಗಿಸಿದಂ ತದ್ರಾ
ಜಭವನಮಂ ಮತ್ತೆ ಲಲಿತನೃತ್ಯಾಮೃತದಿಂ || ೧೮೫

ಸಭೆ ವಿಬುಧಸಭೆ ಜಗತ್ಪತಿ
ಸಭಾಧಿಪತಿ ಶಕ್ರನಲ್ತೆ ನರ್ತಕನೆನೆ ತ
ದ್ವಿಭವಮನಣ್ಣ ನಭೂತೋ
ನ ಭವಿಷ್ಯತಿಯೆಂದೆ ಮಾಣದಾರ್ ನೆಱೆ ಪೊಗೞ್ವರ್ || ೧೮೬

ವ || ಎಂಬಿನಂ ಪಿರಿದು ಪೊೞ್ತು ನರ್ತಿಸಿಯುಂ ಮಾಣದುತ್ಸವೋನ್ಮತ್ತಂ ಮತ್ತಮಿತರಜನಕೌ ತುಕೋತ್ಪಾದನೋಪಾಯಮುಮುದ್ಧತಾಭಿನಯಪ್ರಾಯಮುಂ ಕೇವಳಂ ತಾಳಲಯಾ ಶ್ರಯಮುಮಪ್ಪ ತಾಂಡವಮನಾಡಲೆಂದಾರಭಟೀವೃತ್ತಿಯಂ ಕೈಕೊಂಡು-

ಕಂ || ಮನದೊಳ್‌ ಪೊದೞ್ದುಪೊಣ್ಮಿದ
ಜಿನನ ಮಹೋತ್ಸಾಹದೊಡನೆ ಬಳೆದುದು ದೇಹಂ
ತನತೆನೆ ಬಾಂಬರೆಗಂ ಬಳೆ
ದನಿಮಿಷಪತಿ ನಟನಪಟುತೆಯಂ ಪ್ರಕಟಿಸಿದಂ || ೧೮೭

ಒರ್ಮೆಯೆ ನಿಲವುಗಳನಿತುಮ
ನೊರ್ಮೆಯೆ ಪದಗತಿಗಳನಿತುಮಂ ವಿಕ್ರಿಯೆಯಿಂ
ದೊರ್ಮೆಯೆ ದೃಷ್ಟಿಗಳನಿತುಮ
ನೊರ್ಮೆಯೆ ಹಸ್ತಂಗಳನಿತುಮಂ ಹರಿ ಮೆಱೆದಂ || ೧೮೮

ಚಂ || ಸ್ಥಳನಳಿನಾವಕೀರ್ಣಮೆನಿಸಿತ್ತು ವಸುಂಧರೆ ಪಲ್ಲವೋತ್ಕರಾ
ವಿಳಮೆನಿಸಿತ್ತು ಕೂಡೆ ದೆಸೆ ಕೈರವದಾಮನಿಕಾಮವಿಭ್ರಮಾ
ಕುಳಮೆನಿಸಿತ್ತು ಮೇಘಪಥಮೆಂಬಿನೆಗಂ ಚರಣಪ್ರಚಾರದೋ
ಸ್ತಳವಳನಾವಳೋಕನವಿಳಾಸಮದೇನೆಸೆದತ್ತೊ ಶಕ್ರನಾ || ೧೮೯

ಮ || ಸ್ರ || ಕೞಿವೂವೆಂಬನ್ನೆಗಂ ರೇಚಕಪವನಪಟುಕ್ಷೇಪದಿಂ ಋಕ್ಷಮೆಲ್ಲಂ
ಕೞಲುತ್ತಿರ್ದತ್ತು ಬಾಹಾಪರಿಘನಿಕರಸಂಭ್ರಾಂತಿಯಿಂ ದಿಗ್ಗಜೌಘಂ
ಪೆೞಱುತ್ತಿರ್ದತ್ತು ಪಾದಾಹತಿಯಿನವನಿಯಳ್ಳಾಡೆ ವಾರ್ಧಿವ್ರಜಂ ಬೆಂ
ಬೞಿಯಿಂ ತುಳ್ಕಾಡುತಿರ್ದತ್ತೆನೆ ನಟಿಯಿಸಿದಂ ತಾಂಡವೋದ್ದಂಡನಿಂದ್ರಂ || ೧೯೦

ವ || ಅದಲ್ಲದೆಯುಂ-

ಉ || ಆರಯೆ ದೇವನೋಲಗದೊಳೊಪ್ಪುವ ಮೂರ್ತಿಯದೊಂದು ತತ್ಪ್ರತೀ
ಹಾರಕವೃತ್ತಿಯೊಳ್ ನೆಱೆದ ಮೂರ್ತಿಯದೊಂದು ವಿಚಿತ್ರಮಾಗೆ ನಾ
ನಾರಸನೃತ್ಯದೊಳ್‌ ನಲಿವ ಮೂರ್ತಿಯದೊಂದೆನೆ ತೋಱಿದಂ ಸಮಂ
ತಾರ ಮನಕ್ಕಮಚ್ಚರಿಯನಿಂದ್ರನದೊಂದು ಮಹೇಂದ್ರಜಾಲಮಂ || ೧೯೧

ಒರ್ಮೆ ವಸುಂಧರಾತಳದೊಳೊರ್ಮೆ ದಿಶಾವಳಯಾಂತದೊಳ್ ಪೊದ
ೞ್ದೊರ್ಮೆ ನಭೋವಿಭಾಗದೊಳನೇಕವಿಧಾಭಿನಯಂಗಳಿಂದೆ ಸೌ
ಧರ್ಮನದೇನಗುರ್ವಿಸಿ ವಿಗುರ್ವಿಸಿ ತೋಱಿದನೋ ಸ್ವರೂಪಮಂ
ಪೆರ್ಮೆಯ ನಾಟ್ಯಧರ್ಮಿಯನಳಂಕೃತಿವೆತ್ತಿರೆ ಲೋಕಧರ್ಮಿಯಂ || ೧೯೨

ಮ || ವಿ || ನರನಾರೀನಿಕರಕ್ಕೆ ಕೌತುಕಮನಿತ್ತತ್ತೆಯ್ದೆ ದಿಗ್ಭಿತ್ತಿಯೊಳ್‌
ಬರೆದಂತುರ್ವರೆಯೊಳ್ ಸಮಂತು ಬಳೆದಂತಾಕಾಶದೊಳ್‌ ಕೂಡೆ ಬಿ
ತ್ತರದಿಂ ಮಾರ್ಪೊಳೆದಂತನೇಕನಿಜನೃತ್ಯಾಕಾರಮಾನಂದಬಂ
ಧುರಭಾವಂ ಭರದಿಂದುಪಕ್ರಮಿಸೆ ಶಕ್ರಂ ವಿಕ್ರಿಯಾಶಕ್ತಿಯಿಂ || ೧೯೩

ವ || ಅದಲ್ಲದೆಯುಂ ಬಳರಿಪುವ ಬಾಹುನಿವಹಮಂ ನವರತ್ನಕೇಯೂರಕಾಂತಿಸಂತಾನಮೆಂ ಬಂತಡರ್ದು-

ಕಂ || ಬಿಂಕಂಬೆತ್ತಿರೆ ಹಸ್ತನ
ಖಾಂಕುರದೊಳ್ ಬಾಹುಶಾಖೆಯೊಳ್‌ ದಿವಿಜನಟೀ
ಸಂಕುಳಮಂದನುಗತಿಯಿಂ
ದಂಕುರಶಾಖಾಭಿನಯಮನೇಂ ತೋಱಿದುದೋ || ೧೯೪

ಅಮರಿಯರುಮಿಂದ್ರನೊಡನೊಡ
ನಮರೀಜನವೇಷದಮರರುಂ ತದುಭಯದೊಳ್‌
ಸಮುದಯದೊಳಾಡುವೆಡೆಯೊಳ್
ಸಮಸಂದುವು ಲಾಸ್ಯತಾಂಡವಚ್ಛುರಿತಂಗಳ್ || ೧೯೫

ತಳೆದೆಸೆಯೆ ವಲನವರ್ತನ
ವಿಳಾಸಮಂ ಹರಿಯ ತೋಳ್ಗಳಂತವಱೊಳ್ ಸಂ
ಚಳಿಸದೆ ನಿಂದರ್ ಚಕ್ಕಂ
ದೊಳಮಾಡುವರಂತಮರ್ತ್ಯನರ್ತಕಿಯರ್ಕಳ್ || ೧೯೬

ವ || ಆಗಳಾಕೆಯರ ಪಂಚವಿಧಪದತಳಸಂಚಾರದಿಂ ಗಗನವಳಯಮೆಲ್ಲಂ ಕೆಂದಳಿರ ಪಂದರಿಕ್ಕಿ ದಂತೆಯುಂ ಆಕೆಯರ ನವವಿಧಬಾಹುವಳನದಿಂದೆಳಲತೆಯ ಬಳ್ಳಿ ಚಳಿಸಿದಂತೆಯುಂ ಆಕೆಯರ ಚತುಷ್ಟಷ್ಟಿವಿಧಹಸ್ತವಿಸ್ತಾರದಿಂ ಬಯಲ್ದಾವರೆಯ ಬನಮರಲ್ದಂತೆಯುಂ ಆಕೆಯರ ಷಟತ್ರಿಂಶತ್ಸುಧಾಸ್ಮೇರಾಂಬಕಕದಂಬದಿಂ ಕರ್ನೆಯ್ದಿಲೆಸಳ ಮೞೆ ಕಱೆದಂತೆಯುಂ ಆಕೆಯರಷ್ಟವಿಧಾಳೋಕನರುಚಿಯಿಂ ಕುಡುಮಿಂಚಿನೊಳ್ ಕಟ್ಟಿ ಮೆಱೆದಂತೆಯುಂ ಆಕೆಯರ ಸಪ್ತವಿಧಭ್ರೂವಿಭ್ರಮದಿಂ ಮದನನ ಪದೆವಿಲ್ಗಳಂ ಕೆದಱಿದಂತೆಯುಂ ಆಕೆಯರ ಚತುರ್ದಶವಿಧಾಸ್ಯವಿಳಸಿತದಿಂ ಶಶಿಬಿಂಬಕದಂಬಕಮಂ ಪಸರಿಸಿದಂತೆಯುಂ ಆಕೆಯರುಭಯವಿಧಗಾನದಿಂ ಜೇನಸೋನೆ ಸುರಿದಂತೆಯುಂ ಅತಿ ಮನೋಹರಮಾಗೆ-

ಕಂ || ಎತ್ತೆತ್ತಂ ನರ್ತಿಸೆ ನಿಜ
ವೃತ್ತಕರೋತ್ಕರದೊಳಚ್ಚರಸಿಯರ್ ಕಣ್ಗಂ
ಚಿತ್ತಕ್ಕಂ ಪೊಸದಾದಂ
ನೃತ್ತಾಂಗಂ ಕಲ್ಪಭೂಜಮೆನಿಸಿ ಬಿಡೌಜಂ || ೧೯೭

ವ || ಕುಡುವರ್ ಬೇೞ್ಪರ್ಥಮಂ ಕೇಳಿಪ ನಟರ್ಗಧಿನಾಥರ್ ಮನಂಗೊಂಡು ಮುನ್ನಂ ಬಡವರ್ ಶ್ರೀಮಂತರಪ್ಪನ್ನೆಗಮೆನಿಪುದದಂತಿರ್ಕೆ ದೇವೇಂದ್ರನೀಗಳ್ ಗಡ ಕೇಳಿಪ್ಪಂ ನಟಂ ಬೇೞ್ಪನುಮೆನೆ ಪದಪಿನ್ನೆಂತುಟೆಂಬಂತದಂ ತಾಂ ಕುಡುವರ್ಹತ್ಸ್ವಾಮಿ ಬಲ್ಲಂ ಪಡೆವಮರವರಂ ಬಲ್ಲನಿಂ ಬಲ್ಲನಾವಂ || ೧೯೮

ಕಂ || ಇಂದ್ರಂ ನಿಜದಕ್ಷಿಣದಿವಿ
ಜೇಂದ್ರಂ ಶಚಿ ಲೋಕಪಾಳನಿಕರಂ ಬೆರಸು
ರ್ವೀಂದ್ರತೆಗೆವಂದು ಬೞಿಕೆ ಜಿ
ನೇಂದ್ರೋಪಾಸನದ ಫಲದೆ ಮುಕ್ತಿಗೆ ಸಲ್ವಂ || ೧೯೯

ವ || ಎನಿಸಿದಾನಂದಸಂಗೀತಸಪರ್ಯಾಪರಿಸಮಾಪ್ತಿಪ್ರಣಾಮಾನಂತರಂ ನಾಮಕರಣೋ ದ್ಯುಕ್ತನಾಗಿ-

ಉ || ಆದಿಜಿನೇಶನಿಂ ಭರತಚಕ್ರಿಗೆ ಭಾವಜಿನಾಹ್ವಯಂ ಸಮಾ
ವೇದಿತಮಾದುದಂ ಜನನಿಯಾಸ್ಯಮನುಜ್ಜ್ವಳಚಂದ್ರಬಿಂಬದಂ
ತಾ ದಿವದಿಂದೆ ಬಂದು ಪುಗುತಂದುದನೆಲ್ಲ ಜನಕ್ಕೆ ಮಾನಸಾ
ಹ್ಲಾದಮನೀವುದಂ ಬಗೆಗೆ ತಂದು ವಿಚಾರಿಸಿ ನೋಡಿ ನಾಡೆಯುಂ || ೨೦೦

ಅಪ್ರತಿಮಪ್ರಭಾವಯುತಮಂ ಸಮುದೀರಣಮಾತಪಪ್ರತಾ
ಪಪ್ರತಿರೂಪಮಂ ಶ್ರವಣಯುಗ್ಮರಸಾಯನಮಂ ಸಮಸ್ತಸಾ
ಧುಪ್ರಿಯಮಂ ಜಗತ್ಪ್ರಥಮಮಂಗಳಮಂ ಪದೆದಿಟ್ಟನಂದು ಚಂ
ದ್ರಪ್ರಭನಾಮಮಂ ಮಘವನಷ್ಟಮತೀರ್ಥಕರಂಗೆ ಸಾರ್ಥಮಂ || ೨೦೧

ಕಂ || ಬಗೆವೊಡದು ವಸ್ತುಕೃತಿಲತಿ
ಕೆಗೆ ಫಳಮದು ವರ್ಣಕೃತ್ಯಳಂಕೃತಿಗಾದಂ
ಸೊಗಯಿಪ ನಾಯಕಮಣಿ ತಾ
ನೆ ಗಡಂ ಚಂದ್ರಪ್ರಭಾಭಿರಾಮಂ ನಾಮಂ || ೨೦೨

ನೆನೆದೊಡೆ ಪೇೞ್ದೊಡೆ ಕೇಳ್ದೊಡೆ
ಜನಿಯಿಸುವುದು ಸಕಳಕರ್ಮನಿರ್ಜರೆಯಂ ತಾ
ನೆನೆ ಚಂದ್ರಪ್ರಭನಾಮಮೆ
ಜನಕ್ಕೆ ಸಾಕಲ್ಯಸೌಖ್ಯಸಾಧನಮಲ್ತೇ || ೨೦೩

ವ || ಅಂತು ವಿಶ್ವವಿಘ್ನವಿಚ್ಛೇದಕಸಿದ್ಧಮಂತ್ರಮಂ ಪ್ರಸಿದ್ಧೋಪದೇಶಂಗೆಯ್ವಂತೆ ಪೆಸರಿಟ್ಟು-

ಕಂ || ಜಯ ಜಯ ಚಂದ್ರಪ್ರಭ ಕುವ
ಳಯಕ್ಕೆ ನಿನ್ನುದಯದೊಳ್ ವಿಕಾಸಶ್ರೀಯಂ
ದಯೆಗೆಯ್ದಂದುಚಿತಂ ವಿ
ಪ್ರಿಯಮಂ ರತಿಪತಿಗೆ ಪಡೆದೆಯಿದುವೆ ವಿಚಿತ್ರಂ || ೨೦೪

ವ || ಎಂದು ಪೊಡೆವಟ್ಟು-

ಮ || ವಿ || ಸದಭಿದ್ಯೋತಕನೊಳ್ ಪ್ರದೀಪಕರಣಂ ತಾನೇವುದುದ್ಭೋಧತಾ
ಸ್ಫದನೊಳ್ ಯಾಮಿಕವೃತ್ತಿಯೇವುದು ವಿಶುದ್ಧಾಕಾರನೊಳ್ ಸ್ನಾನಮೇ
ವುದು ಲೋಕತ್ರಿತಯೈಕ ರಕ್ಷಕನೊಳಾರಕ್ಷಾಸಮಾಯೋಗಮೇ
ವುದು ಮೇಣಾದೊಡಮೇನೊ ಬಾಲ್ಯವಿಹಿತಂ ಲೋಕೋಪಚಾರಕ್ರಮಂ || ೨೦೫

ವ || ಎಂದಮರ್ತ್ಯಂ ಧಾತ್ರೀಮಹತ್ತರಾಂಗರಕ್ಷಕಾಧ್ಯಕ್ಷವಾರ್ತಾಹರಸಹಚರಸುಕುಮಾರಾದಿ ಗಳನಗಲದಿರ್ಪಂತಪ್ಪಯಿಸಿ ತೀರ್ಥಕೃತ್ಪದದ್ವಂದ್ವಮುಮಂ ತತ್ಪಿತೃದ್ವಂದ್ವಮುಮಂ ಬೀ ೞ್ಕೊಂಡು ಬಲಗೊಂಡು ನಡೆಯೆ-

ಕಂ || ಅಗಲದೆ ಜಿನನತ್ತಲೆ ದಿ
ಟ್ಟಿಗಳೆೞೆಯೆ ಮರುನ್ನಿವಾಸದತ್ತಲೆ ಮಾರ್ಗಂ
ದೆಗೆಯೆ ಚರಣಂಗಳಿಂತೆೞೆ
ದೆಗೆಯಾದುದು ಪೋಗು ದಿವಿಜರಾಜಂಗಾಗಳ್ || ೨೦೬

ವ || ಅಂತೆಂತಾನುಮರಮನೆಯಂ ಪೊಱಮಟ್ಟು ಶಚೀದೇವಿವೆರಸು ನಿಜಗಜಾವಗಾಹಿತಗಗ ನಮಂಡಳನಾಖಂಡಳಂ ಚತುರ್ನಿಕಾಯಾಮರಸಮಾಜಮಂ ವಿಸರ್ಜಿಸಿ ತಾನುಂ ನಿಜಾವಾಸಮಂ ಪೊಕ್ಕು-

ಮ || ಸ್ರ || ಸಮಸಂದತ್ತರ್ಹದಾರಾಧನೆಯೊಳೆ ಕರಣವ್ಯಾಪ್ತಿಯಿಂದೇಱಿತೆನ್ನು
ದ್ಯಮಮೊಳ್ಪಿಂದಿಂದು ಪೆತ್ತೆಂ ಸುಕೃತದೊದವನಿಂದೆಯ್ದಿದೆಂ ತನ್ಮಹಾನಂ
ದಮನಿಂದಾಯ್ತೆನ್ನದೇವಾಧಿಪಪದವಿಗೆ ಸಾಫಲ್ಯಮೆಂದಂದು ಮುಯ್ವಂ
ಸುಮನಶ್ಚಕ್ರೇಶನಾಂತಂ ವರಚರಿತನನೇಕಾಂತವಿದ್ಯಾವಿನೋದಂ || ೨೦೭

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಜಗನ್ನಾಥಜನ್ಮಾಭಿಷವಣಕಲ್ಯಾಣವರ್ಣನಂ
ದ್ವಾದಶಾಶ್ವಾಸಂ