ಕಂ || ಶ್ರೀಗಂ ವಿದ್ವಿಡ್ವಿಜಯ
ಶ್ರೀಗಮಿದಾಕೃಷ್ಟಿಮಂತ್ರಮೆನಿಸಿದ ಮಂತ್ರೋ
ದ್ಯೋಗದಿನಿರ್ದಂ ನೃಪನುಪ
ಯೋಗಪರಂ ಜೈನಜನಮನೋಹರಚರಿತಂ || ೧

ವ || ಅನಂತರಂ ತಂತ್ರಾಧ್ಯಕ್ಷನಂ ಬರಿಸಿ ಬೆಸಸುವುದುಮಾತಂ ವಿಜಯಪ್ರಯಾಣಭೇರಿಯಂ ಪೊಯ್ಸಿದಾಗಳ್-

ಉ || ದಿಕ್ಕರಿಕರ್ಣಕೋಟರದೊಳುಳ್ಕಿ ಕುಲಾಚಲಸುಪ್ತಸಿಂಹಸಂ
ಘಕ್ಕಿರದೆೞ್ಚಱಂ ಪಡೆದು ಸೂರ್ಯಹಯಂ ಭಯಮುತ್ತು ಕುಂಬಿ ಧೀಂ
ಕಿಕ್ಕುವಿನಂ ನಭಕ್ಕಡರ್ದು ಮಾಣ್ದುದೆ ಮಿಕ್ಕ ಜಗತ್ಪ್ರದೇಶಮಂ
ಮುಕ್ಕಳಿಸಿತ್ತು ಮತ್ತೆ ಜಯಭೇರಿಯ ಭೂರಿಗಭೀರನಿಸ್ವನಂ || ೨

ವ || ಆಗಳ್ ಬೇರೀರವಸಮಾಕರ್ಣನಸಸಂಭ್ರಮಪ್ರಾಪ್ತಕತಿಪಯಾಪ್ತಪರಿವಾರಪರಿಕ್ಷಿಪ್ತನುಂ ಪ್ರರೂಢಪಟ್ಟವರ್ಧನಗಂಧಸಿಂಧುರಾರೂಢನುಂ ಪ್ರಸಾದಿತವಿಲಾಸಿನೀಜನಸಮೇತನುಂ ನವೀನನೇಪಥ್ಯರಚನಾದ್ವಿಗುಣಿತಾತ್ಮೀಯ ಮನೋಹರಾಕಾರಸೌಂದರ್ಯನುಂ ಆತ್ಮೀಯ ಪುರೋಹಿತೋಪದಿಷ್ಟಮುಹೂರ್ತದೊಳ್ ಪದ್ಮನಾಭಮಹಾರಾಜಂ ಯುವರಾಜಂ ಬೆರಸು ರಾಜಮಾರ್ಗದಿಂ ಪ್ರಸ್ಥಾನಶಿಬಿರಕ್ಕೆ ನಡೆವಾಗಳಾಲೋಕನಕುತೂಹಲಿತಮಾಗಿ-

ಶಾ || ನಾರೀಲೋಕಮಿದೆಂಬಿನಂ ನೆರೆದು ಬಂದತ್ತತ್ತಮುತ್ತಂ ಸಮಾ
ನೋರೋಜದ್ವಯನುನ್ನತಾರಮಣಿಹಾರಂ ಸ್ಮೇರಸಾರೋದ್ಗಮೋ
ದ್ಗಾರಿಸ್ರಸ್ತಕಚಂ ಕನನ್ಮಣಿವತಂಸಾಸ್ಫಾಲಿತಾಂಸಂ ಲಸ
ದ್ದೋರಾಂದೋಳನಜಾತಕಂಕಣಝಣತ್ಕಾರಂ ಪುರಸ್ತ್ರೀಜನಂ || ೩

ವ || ಅಂತು ಬಂದು-

ಕಂ || ಲೋಲತೆಯಿಂದೀಕ್ಷಿಪ ಗಣಿ
ಕಾಲಿಯಪಾಂಗತ್ರಿವರ್ಣರುಚಿಗಳ್ ನೀಳ್ದೇಂ
ಲೀಲೆಯನಾಂತುವೊ ಮುತ್ತಿನ
ನೀಲದ ಮಾಣಿಕದ ತೋರಣಂಗಳ ತೆಱದಿಂ || ೪

ವ || ಆಗಳೊರ್ವಳಪೂರ್ವವಿಲಾಸವತಿ-

ಉ || ಏಳಿಸೆ ಪುರ್ವು ದೂರ್ವೆಯನುರೋರುಹಮುಜ್ಜ್ವಲಕುಂಭಶೋಭೆಯಂ
ಪಾಳಿಸೆ ಲೋಚನಾಂಶು ಮಿಗೆ ಲಾಜೆಯನಾಜಯಕೇತುಲೀಲೆಯಂ
ಏಳಿಸೆ ಮೇಲುದಂದುಗೆಯ ನುಣ್ದನಿ ದುಂದುಭಿರಾವದಂದಮಂ
ಚಾಳಿಸೆ ಬಂದು ತದ್ಗಮನಮಂಗಳಲಕ್ಷ್ಮಿವೊಲಂದು ನೋಡಿದಳ್ || ೫

ವ || ಮತ್ತೊರ್ವಳ್-

ಚಂ || ಪದನಖಕಾಂತಿ ಪುಷ್ಪರಥದಂತಿರೆ ನೂಪುರದಿಂಚರಕ್ಕೆ ಸೋ
ಲದಿನೊಡವರ್ಪ ಹಂಸೆಗಳೆ ಪೂಡಿದ ಹಂಸೆಗಳಂತೆ ತೋಱೆ ಮೇ
ಲುದು ಝಷಕೇತುವಂ ಮಿಗೆ ಮನೋಜಮನೋಹರಿಯೇಱಿಬರ್ಪವೊಲ್
ಸುದತಿ ವಿಲಾಸದಿಂದೆ ನಡೆತಂದು ನಿರೀಕ್ಷಿಸಿದಳ್ ನೃಪಾಲನಂ || ೬

ಉ || ನೋಡುವಲಂಪಿನಿಂ ನೆಱೆಯೆ ಕೈಗೆಯಲುಂ ಮಱೆದೊಂದೆ ಕಣ್ಣ ನು
ಣ್ಗಾಡಿಗೆಯೊಂದೆ ಕರ್ಣದ ಕನನ್ಮಣಿಕುಂಡಲಮೊಂದೆ ಕೆಯ್ಯ ಪೊಂ
ಜೂಡಗಮೊಂದೆ ಕಾಲ ಮಿಸುಪಂದುಗೆಯೊಪ್ಪಿರೆ ಬಂದೊಡಂದು ಱೋ
ಡಾಡಿದುದರ್ಧನಾರಿಯಿವಳೆಂದು ಸಖೀಜನಮೆಯ್ದೆ ನಾರಿಯಂ || ೭

ವ || ಅದಲ್ಲದೆಯುಮೊಂದುರಾಜವೀಧೀಸವಿಧಸೌಧದೂರ್ಧ್ವದೊಳಿರ್ದು-

ಮ || ವಿ || ಸಕಲೋರ್ವೀಪತಿಗೊರ್ವಳಂದು ಮೆಱೆದಳ್ ಯಾನಶ್ರಮಶ್ವಾಸಮಂ
ಶುಕಮಂ ತೂಳ್ದೆ ಘನಸ್ತನದ್ವಿತಯಮಂ ದೋರ್ಯುಗ್ಮದಿಂ ಮುಚ್ಚುವು
ತ್ಸುಕತಾವ್ಯಾಜದಿನಪ್ಪಿನೊಂದು ಚದುರಂ ಬೇೞೊರ್ಮೆ ತಾಂಬೂಲವೀ
ಟಿಕೆಯಂ ಮೆಲ್ಲನೆ ಖಂಡಿಪೊಂದು ನೆವದಿಂದಂ ಚುಂಬನಪ್ರೌಢಿಯಂ || ೮

ವ || ಆ ಮನೋಜವಿಜಯಲಕ್ಷ್ಮಿಯಲ್ಲದೆಯುಂ ಗರ್ಭೇಶ್ವರಿ ಮತ್ತೊರ್ವಳೆಯ್ದೆವರ್ಪಾಗಳ್

ಚ || ಶ್ವಸಿತಕೃತೋಪಕಾರಭರದಿಂದಳಿಮಾಳಿಕೆ ಕಾಂತೆ ಕಂದುಗುಂ
ಬಿಸಿಲೊಳೆನುತ್ತುಮೆಯ್ದೆ ಮಱೆಯಾಯ್ತೆನೆ ಕುಂತಳಸೌರಭಕ್ಕೆ ವೇ
ಷ್ಟಿಸಿದುದು ಯಾನಸೌಮ್ಯದೊಲವಿಂ ನೆಲನುಘ್ಘಡಿಪಂತೆ ಮುಂದೆ ಸಂ
ಧಿಸಿದುದು ನೂಪುರಸ್ವನಸಮಾಹೃತಗೇಹಮರಾಳಮಂಡಲಂ || ೯

ವ || ಮತ್ತೊಂದೆಡೆಯೊಳೊರ್ವಳ್-

ಚಂ || ನಡೆ ಮದನೇಭದೊಂದು ನಡೆಯಂ ನಗೆ ಚಿತ್ತಜವಾಜಿವಾಲಮಂ
ಮುಡಿ ಬಿಡುತಂದು ಪೋಲೆ ಮೊಲೆ ಮನ್ಮಥಕೇಳಿರಥಾಂಗಲೀಲೆಯಂ
ಗೆಡೆಗೊಳೆ ಕಂತುಷಟ್ಪದಪದಾತಿಯನಾ ಕುರುಳೋಳಿ ಪೋಲ್ತು ನೇ
ರ್ಪಡೆ ಪಡೆದಳ್ ನಿಜಾಂಗದೊಳೆ ಚೆಲ್ವನನಂಗನ ಚಾತುರಂಗದಾ || ೧೦

ವ || ಅದಲ್ಲದೆಯುಂ-

ಚಂ || ಇವಳವಲೋಕನಾಕುಳತೆಯಿಂದಱಿಯಳ್ ಪರಿವಾಗಳಿಂತು ಬ
ಳ್ಕುವ ನಡು ಮಧ್ಯದಿಂದುಡಿಗುಮೆಂದು ಘನಸ್ತನಯುಗ್ಮಮಂಜಿದಂ
ತೆವೊಲೆನಸುಂ ಕದಕ್ಕದಿಸೆ ಸೋರ್ಮುಡಿಯುಂ ಭರಭೀತಿಯಿಂದೆ ಸೂ
ಸುವ ತೆಱದಿಂದೆ ಮಾಲೆಯನುಗುೞ್ತರೆ ಬಂದಳದೊಂದು ಲೀಲೆಯಿಂ || ೧೧

ವ || ಮುಂದೊಂದೆಡೆಯೊಳೊರ್ವಳವನಿಪಾಲರೂಪವಿಲಾಸದರ್ಶನೈಕಲಾಲಸೆ-

ಚಂ || ಪಗಲನಿರುಳ್ಗೆ ಮಾಱೆ ನಯನಾಂಚಲಚಂದ್ರಿಕೆಯಾನಲೀಲೆ ಹಂ
ಸೆಗೆ ಗುರುವಾಗೆ ಸುಯ್ಯ ನಱುಗಂಪಳಿಯಂ ಸೆಱೆಗೆಯ್ಯೆ ಕೊರ್ಬಿ ಮೇ
ಗೊಗೆದ ಕುಚಂ ನಿಜಾಂಶುಕಮನೀಡಿಱಿದಾಡೆ ವಿಭೂಷಣಾಂಶು ದಿ
ಟ್ಟಿಗೆ ಸುರಚಾಪಮಂ ಕೆದಱೆ ಬಂದಳನಂಗನ ಲಕ್ಷ್ಮಿಯಂದದಿಂ || ೧೨

ವ || ಆ ಸಮಯದೊಳ್‌

ಕಂ || ಒಂದೆ ಶಶಿಬಿಂಬಮೀಜಗ
ದಿಂದೀವರಚಯಮನೈದೆ ತಣಿಪುವ ತೆಱದಿಂ
ದೊಂದೆ ನೃಪಾಸ್ಯಂ ತಣಿಪಿದು
ದಂದಖಿಳಪುರಾಂಗನಾವಿಲೋಚನಚಯಮಂ || ೧೩

ವ || ಅಂತು ಸಕಲನಗರನಾರೀಜನಮನಃಕಟಾಕ್ಷೈಕಲಕ್ಷ್ಯನಾಗಿ ನಡೆವಲ್ಲಿ-

ಉ || ಏಱಿದ ಸಂತವಿಟ್ಟ ಗಜಮಭ್ರಗಜಕ್ಕೆಣೆಯಾಗೆ ವಜ್ರಮಂ
ಮೀಱೆ ಕರಾಗ್ರದೊಳ್ ಪಳಿಕಿನಂಕುಶವಿಟ್ಟು ನಿಜಪ್ರದೇಶದೊಳ್
ತೋಱುವ ಪೌರನಾರಿಯರ ಕಣ್ಬೊಳೆಪಕ್ಷಿಸಹಸ್ರಶೋಭೆಯಂ
ಬೀಱೆ ಸುರೇಂದ್ರನಂ ವಿಭವದಿಂ ಗೆಲೆವಂದು ನರೇಂದ್ರನೊಪ್ಪಿದಂ || ೧೪

ವ || ಅದಲ್ಲದೆಯುಂ

ಚಂ || ಗಡಣಿಸಿದತ್ತಿದೊಂದು ಶಶಿಬಿಂಬಮದೊಂದು ಸುಧಾಂಶುಲೇಖೆ ಚೆ
ಲ್ವಡರೆ ನವೇಂದುಕಾಂತಮಣಿದಂಡಯುಗಾಗ್ರದೊಳೆಂದು ವಿಸ್ಮಯಂ
ಬಡೆ ನಡೆ ನೋಡಿ ಪೌರನಿಕರಂ ಕರಮೊಪ್ಪಿದುದೆತ್ತಿ ನಿಂದ ಬೆ
ಳ್ಗೊಡೆ ಪಿಡಿದಿರ್ದು ಪಜ್ಜಳಿಸುವಂಕುಶವಂದು ಧರಾಧಿನಾಥನಾ || ೧೫

ಕಂ || ತೋರಣದರ್ಪಣದೊಳ್ ಚಮ
ರೀರುಹಮಂ ನೃಪತಿಗಿಕ್ಕುವಬಲೆಯರ ನೆೞಲ್
ರಾರಾಜಿಸಿದುವು ರಿಪುರಾ
ಜೀರಾಜ್ಯಶ್ರೀಸಮೂಹಮಿದಿರ್ವಂದಿರವಂ || ೧೬

ವ || ಮತ್ತಂ-

ಚಂ || ಮಿಳಿರೆ ಸೆಱಂಗು ವಾಯುವಶದಿಂ ಪಟದಂತೆ ಮುಖಪ್ರದೇಶದೊಳ್‌
ಪೊಳೆಯೆ ವಿಲೋಚನಂ ಝಷನಿಕಾಶತೆಯಿಂ ತನು ಹೇಮದಂಡದಂ
ತಳವಡೆ ಶಂಭುಕಂಬೊಲಿರೆ ರಾಜ್ಞಿ ವಿರಾಜಿಸಿದಳ್ ನೃಪಾಂತದೊಳ್‌
ಲಳನೆ ಬರುತ್ತೆ ಚಿತ್ತಜನ ಪಕ್ಕದೊಳೆತ್ತಿದ ವೈಜಯಂತಿವೊಲ್ || ೧೭

ವ || ಅಂತು ಸಕಲಮಂಗಳಸಂಚಯಮಪ್ಪ ರತ್ನಸಂಚಯಪುರಮಂ ಪೊಱಮಟ್ಟು ನಡೆದು ಬೞಿಯಂ ಕ್ರೋಶದ್ವಿತಯಮಾತ್ರದೊಳ್ ಪ್ರಸಿದ್ಧದೂಷ್ಯಮಾಗಿಯುಮದೂಷ್ಯಮುಂ ನಿಶಾಂತಸ್ಫಾರಚಾರುತ್ವಮಾಗಿಯುಂ ಅನಿಶಾಂತಸ್ಫಾರಚಾರುತ್ವಮುಂ ಬಲವೀರಜನೋಪೇ ತಮಾಗಿಯುಂ ಅಬಲವೀರಜನೋಪೇತಮುಂ ವಿಶಾಲಪರಿಧಿಯಾಗಿಯುಂ ಅವಿಶಾಲ ಪರಿಧಿಯೆನಿಸಿ ಗೃಹಮಹತ್ತರಂ ಮುನ್ನಮೆ ಸಮೆದುದಂ ಪ್ರಸ್ಥಾನಶಿಬಿರಮಂ ಪೊಕ್ಕು ಯಥೋಚಿತಪ್ರಸಂಗದಿನಂದಿನ ದಿವಸಮಂ ಕಳಿಪಿ ಮಱುದೆವಸಂ ಮಿಳಿತಮೌಳಿಭೃತ ಕಶ್ರೇಣಿಮಿತ್ರಾಮಿತ್ರಾಟವಿಕಬಹಳಬಲಸಮೇತಂ ನಡೆವಾಗಳ್-

ಮ || ವಿ || ಸುವಿವೇಕಾಕೃತಿ ಮಂಗಳಾವಸರಯೋಗ್ಯತ್ವಂ ಲಸದ್ರಾಜಚಿ
ಹ್ನವಿಶೇಷೋನ್ನತಿ ನಿಮ್ಮೊಳಂ ಸಮನಿಕುಂ ಬನ್ನಿಂ ಜಡವ್ಯಾಪ್ತಿ ಪಿಂ
ಗುವುದರ್ಕೆಂದು ಸಮುದ್ರಶಂಖನಿಕರಂಗಳ್ಗಂದು ಪೇೞ್ವಂದದಿಂ
ಶಿವಿರಾಭ್ಯುತ್ಥಿತಕಾಹಳಾಘನರವಂ ಮುಟ್ಟಿತ್ತು ದಿಕ್ಪಾರಮಂ || ೧೮

ಕಂ || ಎನ್ನಂದದೆ ತನಗರಸ
ತ್ವನ್ನಿತ್ಯಮೆನುತ್ತೆ ಬೆಸೆವ ಪೃಥ್ವೀಪಾಲಂ
ಗಿನ್ನರಿದಾಯ್ತೆಂದಾಕಾ
ಶನ್ನಗುವಂತಾಯ್ತನೂನಭೇರೀಧ್ವಾನಂ || ೧೯

ಮ || ಸ್ರ || ನೆರೆದೇೞ್ತಂದತ್ತು ಕಲ್ಪೋಪರಮಯಮಸಮೂಹೋದ್ಭಟಂ ಭರ್ಮವರ್ಮೋ
ತ್ಕರದೀಪ್ತಿವ್ಯಾಪ್ತಮುದ್ಯದ್ಬಿರುದನಿಗಡಝಂಕಾರಘೋರಂ ಮಹಾಸಂ
ಗರಕೇಳೀಲಾಲಸಂ ಭಾಸುರಬಹುವಿಧಮುಕ್ತಾವಮುಕ್ತಾವಿಮುಕ್ತೋ
ದ್ಧುರದೋರ್ಯಂತ್ರಪ್ರಮುಕ್ತಾಯುಧನಿಧಿಗಣನಾಶೂನ್ಯಪಾದಾತಸೈನ್ಯಂ || ೨೦

ಮ || ವಿ || ರಥಕಲ್ಪಾನ್ವಿತಶೂರಸಾರಥಿಸನಾಥಂ ವಿಭ್ರಮನ್ನೇಮಿನಿ
ರ್ಮಥಿತಾನೇಕಶಿಲಾತಳಂ ಚಪಲಯುಗ್ಯಾಶ್ವಪ್ಲುತಾವೇಗವೇ
ಪಥುಮತ್ಕೇತುಪಟಂ ತನುತ್ರಶಿತಶಸ್ತ್ರಾಸ್ತ್ರಾದಿತಂತ್ರೋತ್ಕರ
ಗ್ರಥಿತಂ ಬಂದುದು ರಥ್ಯಮಾತ್ಮರಥಿನೀನೈಪಥ್ಯಶೋಭಾವಹಂ || ೨೧

ಮ || ಸ್ರ || ಘನಘೋಷಾತ್ಯಂತಭೀಷ್ಮಂ ವಿಧೃತವಿಲಸದಾವರ್ತಜಾಲಂ ಸ್ಫುರತ್ಫೇ
ನನಿಕಾಯೋದಾರಮುದ್ಯತ್ಕಿರಣಮಣಿಗಣಾಯೋಗರಮ್ಯಂ ಬೃಹತ್ಸ
ತ್ವನಿಯುಕ್ತಂ ವ್ಯಕ್ತಮತ್ಸ್ಯಪ್ಲುತಗತಿ ವಿಚರದ್ಬಾಡವಂ ಚಾರುವಾರಾ
ಶಿನಿಕಾಶಂ ತನ್ಮಯಾಶಂ ನಡೆದುದು ವಿತತಾಶ್ವೀಯಮುರ್ವೀಶ್ವರೀಯಂ || ೨೨

ಮ || ವಿ || ಬಲವಚ್ಚಾಪಧರಂ ಸಭದ್ರಮೃಗಸಂದೋಹಂ ಗಳದ್ಗಂಡಮಂ
ಡಲವಿಭ್ರಾಜಿ ಸಮುಚ್ಚಲತ್ಕದಳಿಕಂ ಪ್ರೋದ್ವಂಶಮುಕ್ತಾಸಮು
ಜ್ಜ್ವಲದಂತಂ ದೆಸೆಯಂ ಮುಸುಂಕಿ ನಡೆದತ್ತಂತಂದು ತದ್ಭೂರಿಭೂ
ತಲಪಾಲೋದ್ಧುರಸಿಂಧುರೋತ್ಕರಚರದ್ವ್ಯಾನೀಲಭೂಭೃತ್ಕುಲಂ || ೨೩

ಕಂ || ಧರೆ ಕರಿಕುಳಮಶ್ವೋತ್ಕರ
ಮರದಚಯಂ ಖಳ್ಗಿಸಮುದಯಂ ನಡೆವೆಡೆಯೊಳ್‌
ಕರಿಮಯಮಶ್ವಮಯಂ ಮ
ತ್ತರದಮಯಂ ಖಳ್ಗಿಮಯಮದೆನಿಸಿದುದನಿಶಂ || ೨೪

ಜವದಿಂದಾಗಸದೊಳ್ ಪಾ
ಱುವ ಪಕ್ಕಿಯುಮಂತುಗಾಣಲಣಮಾಱದೆ ತೇಂ
ಗುವುದು ಪತಾಕಾಗ್ರದೊಳೆನೆ
ಪವಣಿಸಲಾನಱಿಯೆನತುಳಮಂ ತದ್ಬಲಮಂ || ೨೫

ವ || ಅದಲ್ಲದೆಯುಂ-

ಚಂ || ಪೞಯಿಗೆ ಮಿಂಚನೇಳಿಸೆ ವಿಭೂಷಣಕಾಂತಿ ಸುರೇಂದ್ರಚಾಪಮಂ
ಪೞಿಯೆ ಗಭೀರದುಂದುಭಿರವಂ ಮೊಳಗಂ ಮಿಗೆ ಮೇಘಡಂಬರಂ
ಘೞಿಯಿಸೆ ಮೇಘಡಂಬರಮನೇಂ ಕಱೆದತ್ತೊ ವಿಭೀತಿಯೆಂಬ ಪೆ
ರ್ಮೞೆಯನರಾತಿಗಾಗಮನಮಂಬುಧರಾಗಮದಂದವೆಂಬಿನಂ || ೨೬

ಕಂ || ಅಮಿತಚತುರಂಗಸೇನಾ
ಗಮನದೊಳುತ್ತುಂಗಜಂಗಮಪ್ರಾಕಾರ
ಭ್ರಮಮಂ ಪಡೆದುದು ತತ್ಪದ
ಸಮುತ್ಥಿತಂ ಬಳಸಿ ಬಹಳಧೂಳೀಪಟಲಂ || ೨೭

ವ || ಮತ್ತಂ-

ಮ || ಸ್ರ || ಇದಘರ್ಮರ್ತೂರ್ಜಿತಂ ಭೂಗೃಹಮಿದನನುರಾಗಾಂಧಪಾತಾಳಮಂತ
ಲ್ತಿದನಗ್ನಿಪ್ರೋತ್ಥಧೂಮಾವಳಿಯಿದಜಲನಿಷ್ಯಂದಿಮೇಘಾಗಮಂ ತಾ
ನಿದನುದ್ಯತ್ತಾರಕೌಘಂ ಬಹಳನಿಶೆಯೆನಿಪ್ಪಂತು ಪರ್ವಿತ್ತು ಸೇನಾ
ಪದಪಾತೋದ್ಧೂತಮುತ್ಪಾದಿತದಿನಕೃದಪೂರ್ವೋಪರಾಗಂ ಪರಾಗಂ || ೨೮

ಕಂ || ಆತತಸೈನ್ಯರಜಸ್ಸಂ
ಜಾತತಮೋವಿಕೃತಿ ತೂಳ್ದಿದುದು ಸತ್ವಮುಮಂ
ಖ್ಯಾತರಿಪುಭೂಮಿಪಾಲ
ವ್ರಾತಕ್ಕಾಶ್ರಯವಿಶೇಷಮೇಂ ಕೇವಲಮೇ || ೧೯

ವ || ಆಗಳ್-

ಮ || ಸ್ರ || ಬಿಸಿಲಂ ನಾನಾತಪತ್ರಂ ಮಸುಳಿಸೆ ಸಿತಖಡ್ಗಪ್ರಭಾಮಂಡಲಂ ಕೊ
ರ್ವಿಸೆ ರೋದೋವಾತಮಂ ಕೇತುತತಿ ತೆಗೆಯೆ ತಚ್ಚಾಮರೋತ್ಥಾನಿಲಂ ಪ
ರ್ವಿಸೆ ಮಾರ್ಗಾನೇಕತೋಯಾಶಯಮನುರುರಜಂ ಪೀಱೆ ದಾನಪ್ಲವಂ ಪೂ
ರಿಸೆ ತೋಱೆತ್ತೆತ್ತಮಾದಂ ಹರಣಭರಣಚಾತುರ್ಯಮಂ ಚಾತುರಂಗಂ || ೩೦

ವ || ಅದಲ್ಲದೆಯುಮಾವಾಹಿನೀವ್ಯೂಹಂ ವಾಹಿನೀಪ್ರವಾಹದಂತಸ್ಥಿತರಾಜ ಹಂಸಸನಾಥ ಮುಂ ವಜ್ರಾಕರದಂತನೇಕಪವಿತತಿವಿಳಸಿತಮುಂ ಲಂಕಾಧಿಪತಿಯಂತತಿ ಪ್ರಬಲಬಾಹಾ ವಳೀವಳಯಿತಮುಂ ಶಿಶುಮುಖದಂತರದಪಙ್ತಿಪರಿಕಲಿತಮುಂ ವರ್ಷಾಗಮ ಸಮಯದಂತೆ ಬಹಳತರವಾರಿಧರಪರೀತಮುಂ ಶರತ್ಕಾಲದಂತುಗ್ರಚಂಡ ಕರಭೋತ್ಕರ ಮುಂ ಪುಂಡರೀಕಷಂಡದಂತೆ ಮುಕ್ತಾವದಾತಪತ್ರವಿಸ್ತೃತಮುಂ ವಿದ್ಯಾಧರಾನ್ವಯದಂತೆ ಪರಿಪ್ರಾಪ್ತಜೀಮೂತಕೇತುಸಮುದಯಮುಂ ವಸುದೇವನಂತೆ ಸುಪ್ರಸಿದ್ಧಾನಕದುಂದುಭಿ ಧ್ವನಿಯುಂ ನಿಶಾಸರೋವರದಂತುಜ್ಜೃಂಭಿತಕುವಲಯ ರಜಃಪಿಹಿತಪುಷ್ಕರಮುಂ ದಿನಕರೋದಯದಂತೆ ಮಂಡಲಾಗ್ರರುಚಿನಿಚಿತದಙ್ಮುಖಮುಂ ಕಾಳಿಯಸರ್ಪನಂತೆ ದಾನವಾರಿವಿಹಿತಪದ್ಧತಿಯುಮೆನಿಸಿ ಚತುರಂಗಬಲಮನೆಳೆಬಳೆದಂತೆಯುಂ ಆಗಸಂ ಕಱೆದಂತೆಯುಂ ದೆಸೆ ಬೆಸಲಾದಂತೆಯುಂ ಕತಿಪಯಪ್ರಯಾಣಂಗಳಂ ನಡೆಯೆನಡೆಯೆ-

ಕಂ || ಮಣಿಕೂಟಕೋಟಿಯೊಳ್ ದಿನ
ಮಣಿ ಕೂಟಂಬೆತ್ತನೆನಿಸಿ ಬಳೆದುನ್ನತಿಯಿಂ
ಮಣಿಕೂಟಮೆಂಬ ಶೈಲಾ
ಗ್ರಣಿ ಕಣ್ಬೊಲನಾಯ್ತು ಚತುರಚೂಡಾಮಣಿಯಾ || ೩೧

ಉ || ಆ ನಗಚೂಳದೊಳ್ ಶಬರಬಾಲಕಿಯರ್ ವಿಧುಬಿಂಬದಲ್ಲಿ ತ
ಮ್ಮಾನನಮಂ ನಿರೀಕ್ಷಿಸಿ ಮದಾಂಬುಲಲಾಮಮನುಯ್ದು ಬಿಂಬಮ
ಧ್ಯಾನನದಲ್ಲಿ ಬಿತ್ತರಿಸೆ ಮೌಗ್ಧ್ಯದೊಳಾಯ್ತು ತದಂಕಮೆಂಬೆನಿ
ನ್ನಾನಱಿಯೆಂ ವಲಂ ನೆರೆಯೆ ಬಿಚ್ಚಳಿಸಲ್ಕದಱುಚ್ಚವೃತ್ತಿಯಂ || ೩೨

ಕಂ || ಸುರದಂಪತಿತತಿ ಸಗ್ಗದೊ
ಳಿರಲೊಲ್ಲದೆ ಬಂದು ತನ್ನ ಬಹುರತ್ನಗೃಹೋ
ದರದೊಳ್ ಕ್ರೀಡಿಪುದು ನಿರಂ
ತರಮೆನೆ ಗಿರಿ ತವದ ಸುಖದ ತಾಯ್ವನೆಯಾಯ್ತೋ || ೩೩

|| ಮಾಲಿನಿ ||
ಪುದಿದ ಮಣಿಗಣಾಂಶುಶ್ರೇಣಿ ಸಂವ್ಯಾನಮೆಂಬಂ
ದದಿನೆಸೆಯೆ ನಿಜಾಗ್ರೋದ್ದೇಶದಿಂ ನಿರ್ಝರಂ ಹಾ
ರದವೊಲಿೞಿದು ಚೆಲ್ವಂ ಬೀಱೆ ತೋಱಿತ್ತು ಪೃಥ್ವೀ
ಸುದತಿಯ ಪೃಥುವಕ್ಷೋಜಾತಮೆಂಬಂತಗೇಂದ್ರಂ || ೩೪

ಕಂ || ಸಾನುವಿನೊಳೆಱಗಿ ಘನಸಂ
ತಾನಂ ಕಾರ್ಗಾಲದಲ್ಲಿ ಕಱೆವುದು ಮೇಗಿ
ರ್ದಾನಗದ ಸಿದ್ಧಕಿನ್ನರ
ಮಾನಿನಿಯರ್ ಮೞೆಯ ಮಾತನಱಿಯರ್ ಮಱೆದುಂ || ೩೫

ಮುಡಿದವರ ಕುಸುಮವಿಸರದ
ಕಡುಗಂಪಿಂಗೆಳಸುವಳಿಗಳಾಣತಿಯಂ ಮಾ
ೞ್ಪೆಡೆಯೊಳ್ ಕಿನ್ನರ ಕನ್ನೆಯ
ರೊಡನೆಯೆ ತಾರೈಸಿ ಜಿಹಣತನಮಂ ಸಲಿಕುಂ || ೩೬

ತರಣಿಕಿರಣಕ್ಕೆ ಭುಗಿಲೆಂ
ದುರಿವಿನಮಣಿಸಾನುವಿಂದಮೋಸಱಿಪೆಡೆಯೊಳ್
ಗುರುಕುಚಭರಕ್ಕೆ ಮನದೊಳ್
ಕರಮೆ ಕನಲ್ವರ್ ತುರಂಗವದನೆಯರದಱೊಳ್‌ || ೩೭

ಪ್ರಭವಮಹೌಷಧಿಗಂಧ
ಪ್ರಭಾವಪರಿಹೃತವಿಷಾಸ್ಯವಿಷಧರಮಾಲಾ
ನಿಭೃತಮಲಯರುಹವೀಧಿಯೊ
ಳಭೀತಮನಮಲ್ಲಿ ವಿಹರಿಕುಂ ಖಚರಯುಗಂ || ೩೮

ವ || ಅಂತುಮಲ್ಲದೆಯುಂ-

ಕಂ || ಕೃತಮರುದಮಂದರಾಗಂ
ವಿತತವಿಭವವಿಜಿತಮಂದರಾಗಂ ಕೇಳೀ
ಕೃತಕಾಪ್ಸರೋಗಣಂ ವಿ
ಶ್ರುತವಿಮಲತರಾಪ್ಸರೋಗಣಂ ಮಣಿಕೂಟಂ || ೩೯

ವ || ಮತ್ತಮದು ವಿಚಿತ್ರರತ್ನ ಶೃಂಗಶಬಲಪ್ರಭಾಸುರಚಾಪಕೋಟಿಚುಂಬಿತಾಂಬರಮುಂ ಭಾಸುರಚಾಪಕೋಟಿಚುಂಬಿತಾಂಬರಮುಂ ವಿಗಳದವಿರಳನಿರ್ಝರತುಷಾರಕದಂಬಧವ ಳಿತಾಭಿರಾಮಮುಂ ಕದಂಬಧವಳಿತಾಭಿರಾಮಮುಂ ಮಧುರಗೀತಲೀಲಾನುಬದ್ಧಗಂ ಧರ್ವರಕ್ತ ಕಂಠೀರವಾಹತಿಪ್ರಭವಮೂರ್ಛಾವೇಗಮೃಗನಿಕಾಯಮುಂ ಕಂಠೀರವಾಹತಿ ಪ್ರಭವಮೂರ್ಛಾವೇಗಮೃಗನಿಕಾಯಮುಂ ಕುಸುಮಾಪಚಯವಿಚರದ್ವನೇಚರಪ್ರಮ ದೋತ್ಕಟಕುಂಜರಾರಾಜಿತಮುಂ ಮದೋತ್ಕಟಕುಂಜರಾರಾಜಿತಮುಮೆನಿಸಿದುದು ಅದಲ್ಲದೆಯುಂ-

ಮ || ಸ್ರ || ಬಿಸಿಲುಂ ಬೆಳ್ದಿಂಗಳುಂ ಕೞ್ತಲೆಯುಮಿವು ಮಿಥಸ್ಪರ್ಧೆಯಂ ಮಾಣ್ದುಪೂಣ್ದೊಂ
ದು ಸಖಿತ್ವಂ ಪೆರ್ಚೆ ನಿಚ್ಚಂ ನೆಲಸಿದುವು ಘನೀಭಾವಮಂ ತಾಳ್ದಿ ತಾಮಿ
ಲ್ಲಿ ಸುಮಂತೆಂಬನ್ನೆಗಂ ತದ್ಗಿರಿಪರಿಸರದೊಳ್ ರಾಗಮಂ ಚಿತ್ತದೊಳ್ ಪೆ
ರ್ಚಿಸುತಿರ್ಕುಂ ಪದ್ಮರಾಗಂ ಶಶಿಮಣಿ ಹರಿನೀಲಂ ವಿಲೋಲಾಂಶುಜಾಲಂ || ೪೦

ಕಂ || ಮಣಿಯಲ್ಲದ ಕಲ್ ಜ್ಯೋತಿ
ಸ್ತೃಣಮಲ್ಲದ ಪುಲ್ ರಸಾಯಮಲ್ಲದ ಮಡು ಕಾ
ರಣಮಲ್ಲದ ಲತೆ ಮುತ್ತಿನ
ಮಣಲಲ್ಲದ ಪುಣಿಲುಮಿಲ್ಲ ತತ್ಪರಿಸರದೊಳ್ || ೪೧

ರತಖಿನ್ನಕಿನ್ನರೀಸ
ನ್ನತೆಯಂ ತಣ್ಮಲೆದು ಕಳೆದು ಸುಯ್ಯಿಂ ಸುರಭೀ
ಕೃತಮಾಗುತ್ತುಂ ಪ್ರತ್ಯುಪ
ಕೃತಿವಡೆವುದು ತದುಪವನದ ಪಾವನಪವನಂ || ೪೨

ಮ || ಸ್ರ || ಕರಿಣೀಶೃಂಗಾರಮುಗ್ರೋರಗಭಯಮಗದೈರ್ಘ್ಯಾದ್ಭುತಂ ದಸ್ಯುವೀರಂ
ಶರಭಾಕಾರೋರುರೌದ್ರಂ ಪ್ಲವಗವಿಕೃತಿಹಾಸ್ಯಂ ಚಮೂರುಪ್ರಣಶ್ಯ
ದ್ರುರುಬೀಭತ್ಸಂ ದವವ್ಯಾಕುಲಖಗಕರುಣಂ ಯೋಗಿರಾಟ್ಛಾಂತಶಾಂತಂ
ದೊರೆವೆತ್ತಾಶ್ಚರ್ಯಭೂತಂ ನವರಸಮಯಮಾಯ್ತಾ ನಗೇಂದ್ರೋಪಕಂಠಂ || ೪೩

ವ || ಅಲ್ಲಿ-

ಕಂ || ಅಮಳಶಶಿಕಾಂತಶಶಿಬಿಂ
ಬಮಧ್ಯದೊಳ್ ಪೊಳೆವ ತಮ್ಮ ನೆೞಲಿಂ ಮಾಡು
ತ್ತುಮೆ ಲಕ್ಷ್ಮಲಕ್ಷ್ಮಿಯಂ ವಿ
ಭ್ರಮದಿಂ ಭ್ರಮಿಯಿಪುದು ವನಚರೀನಿಕುರಂಬಂ || ೪೪

ಚಂ || ತುಱುಗಿರೆ ತಮ್ಮ ನುಣ್ದೊಡೆಯ ಕಾಂತಿ ಕವಲ್ತುದೆನಿಪ್ಪ ಸೀರೆಯೊ
ಳ್ನಿಱಿ ನವವಿದ್ರುಮಾಧರದ ಸೂಸಿದ ಕಾಂತಿಕಣಂಗಳೆಂಬಿನಂ
ಮಿಱುಗುವ ಗುಂಜಿಯಾಭರಣಮುಣ್ಮು ವಪಾಂಗಮರೀಚಿಮಾಲೆ ಸು
ತ್ತಿಱಿದುದೆನಿಪ್ಪ ಕೇದಗೆಯ ಬೆಳ್ಸುೞಿಯೋಲೆ ಬೆಡಂಗವಳ್ದಿರಾ || ೪೫

ವ || ಅದಲ್ಲದೆಯುಂ-

ಕಂ || ಪ್ರಚುರತರಖಡ್ಗಿನಿಚಯಂ
ವಿಚಳಚ್ಚಾಮರಮನೂನಪತ್ರರಥಂ ದಂ
ತಿಚಮೂರುಚಿರಸ್ಥಿತಿಸಮು
ಪಚಿತಂ ಕಟಕಂಬೊಲಿರ್ದುದಾ ನಗಕಟಕಂ || ೪೬

ವ || ಆಗಳದಱ ಸಿರಿಯನರಸಂ ಭೀಮರಥನೊಳ್ ನುಡಿಯುತ್ತುಂ ಹಾಸ್ತಿಕಪ್ರಾಯಬಲಂ ಬರುತುಮಿರೆ ತತ್ಪಾರ್ಶ್ವದೊಳ್‌

ಕಂ || ಅನಿಯತವಾರಿಸ್ಥಿತಿ ಫೇ
ನನಿಕರಸಿತದಂತಮುದಿತಬಿಂದುಚಯಂ ವಾ
ಹಿನಿಯೆಂಬುದು ನದಿ ಗಜವಾ
ಹಿನಿಯಂದದಿನೆಸೆದುದೀಕ್ಷಣಕ್ಕವನಿಪನಾ || ೪೭

ವ || ಮತ್ತಂ-

ಮ || ವಿ || ತೆರೆವೊಯ್ಲಿಂದೆ ತೆರಳ್ದೆರೞ್ತಡಿಯೊಳಂ ಚೆಲ್ವಂ ವಿಲಾಸಂಬೊಲಾಂ
ತಿರೆ ಪೌಷ್ಪಂ ರಜಮಲ್ಲಿಗಲ್ಲಿಗೆ ತರಂಗಂಗಳ್ ತರಂಗಂಗಳಂ
ತಿರೆ ನಾನಾವಿಧವರ್ಣದಿಂದೆಸೆವ ನೀರ್ವೂವೆಯ್ದೆ ಚೆಂಬೂವಿನಂ
ತಿರೆ ಚಿತ್ರಾಂವರವಾದುದಾನದಿ ತದುರ್ವೀಭೃನ್ನಿತಂಬಾವೃತಂ || ೪೮

ಕಂ || ಪ್ರವಳಕರಿಮಕರಫೂತ್ಕಾ
ರವಾತದಿಂದುದ್ದಮೊಗೆವ ಜಲಬಿಂದುಗಳಿಂ
ದಿವದೊಳೆ ತಾರಕಿತಂ ಮಾ
ಡುವುದು ನಭೋಭಾಗಮಂ ತದಂಭಃಪೂರಂ || ೪೯

ಸರದದ ಮುಗಿಲ್ಗಳೆಱಗಿದ
ತರಳಸ್ಫಟಿಕಾದ್ರಿನಿಕರಮೆನೆ ಕೊನೆಯೊಳ್ ಬೆ
ಳ್ನೊರೆವಿಂಡಂ ತಾಳ್ದಿದ ಪೆ
ರ್ದೆರೆವಿಂಡುಗಳೆಸೆವುವಾಮಹಾವಾಹಿನಿಯೊಳ್ || ೫೦

ಕಾರ ಮುಗಿಲ್ ನೀರ್ಮೊಗೆಯಲ್
ವಾರಿಧಿಯೆಂದೆಱಗಿ ಸುರಿವ ಕರಕಂಗಳವೋಲ್
ತೀರದೊಳಿಡಿದೆಱಗಿದ ಧರ
ಣೀರುಹದುಗುವಲರ್ಗಳೆಸೆವುವಸದಳಮದಱೊಳ್ || ೫೧

ಸರಸಬಿಸವಿಸರವಾಂಛೆಯಿ
ನುರಂಬರಂ ಪೊಕ್ಕ ವನಚರೀಪೀನಪಯೋ
ಧರಮೊಡನೞ್ದಿಕೊಳುತ್ತಿ
ರ್ಪರಣ್ಯಕರಿಕುಂಭದಲ್ಲಿ ಸರಿವರುತಿರ್ಕುಂ || ೫೨

ತಾನುಪಶೋಭಿತಚಲದಳ
ಕಾನನೆ ಪೃಥುತರಲಸತ್ಪಯೋಧರೆ ವಿಚಲ
ನ್ಮೀನಾಲೋಕವಿರಾಜಿತೆ
ಯಾನದಿ ವನರಾಶಿವನಿತೆಯೆನಿಸುವುದುಚಿತಂ || ೫೩

ವ || ಅದಲ್ಲದೆಯುಂ-

ಮ || ವಿ || ಎಳನೀರಂ ಗೆಲೆವಂದ ತನ್ನ ತಿಳಿನೀರೊಳ್ ಬಂದು ಪೀಯೂಷಸಂ
ಕುಳದೊಳ್ ಸಿದ್ಧರಸಪ್ಲವಂ ಬೆರಸಿದತ್ತೆಂಬನ್ನೆಗಂ ತನ್ನಗಾ
ಮಳಚಂದ್ರೋಪಳಸಾರವಾರಿಚಯಪೂರಂ ಕೂಡೆ ತಾಂ ಕೂಡೆ ಕ
ಣ್ಗೊಳಿಸಿತ್ತಾವರವಾಹಿನೀವಿಸರದೋಘಂ ಶಾಂತಸ್ಯೆನ್ಯೌಘಮಂ || ೫೪

ವ || ಅಂತತಿಮನೋಹರಮಾದ ವಾಹಿನೀನಿಕಟದೊಳ್‌ ವಿಶ್ರಾಂತಕಟಕನಾಗಿರ್ಪುದುಮತ್ತ
ದೂತಂಗಿತ್ತ ಮಱುಮಾತುಮನವಧಾರಿಸಿ-

ಕಂ || ಆಂ ಬಂದು ಕೊಳ್ವ ಗಜಮಂ
ತಾಂ ಬಂದಿತ್ತಪನೆ ಈವನಕ್ಕೆಮ ಸುತನಿಂ
ದಂ ಬೇಳಾದಂ ನೆರೆ ಪಾ
ೞುಂಬಟ್ಟಪನಟ್ಟಿ ತಿಂಬ ದೈವಕ್ಕೀಗಳ್ || ೫೫

ವ || ಎಂದು ಬರ್ಕರಕರ್ಕಸಂಗಳಂ ನುಡಿದು ಮಾಣದೆ ಅಭ್ಯಮಿತ್ರೀಣವೃತ್ತಿಯನೆ ಪೂಣ್ದು ಪೊಱಮಡುವಾಗಳ್-

ಚಂ || ಹಯನಯನಾಂಬುಗಳ್ ಸುರಿಯೆ ಹರ್ಷದಿನುಣ್ಮಿದುವೆಂದು ನಚ್ಚಿನಾ
ನೆಯ ಮದವೆತ್ತಿ ಕಟ್ಟೆ ವಿಕಳತ್ವಮನೊಕ್ಕುವಿವೆಂದಕಾರಣಂ
ಜಯರಥಮೊರ್ಮೆ ದಲ್ ಮುಱಿಯೆ ಶತ್ರುಬಲಂ ಮುಱಿದಪ್ಪುದೆಂದು ದು
ರ್ಣಯಮನೆ ದರ್ಪದಿಂ ಸುನಯಮಾಗೊಣರ್ದಂ ಧೃತವಿಗ್ರಹಾಗ್ರಹಂ || ೫೬

ಕಂ || ಆನೆಯನಿರುಳುಂ ಪಗಲುಂ
ಜಾನಿಸಿ ತನು ಮೂರ್ಖವೃತ್ತಿ ಪೊರ್ದಿದವೋಲ
ಜ್ಞಾನಿ ನಯಾನಯಚಿಂತೆಯ
ನೇನುಮನಱಿಯನೆ ಮುಮೂರ್ಷು ತೆಱನಱಿದಪನೇ || ೫೭

ವ || ಅಂತತಿಕ್ರಮಿಸಿ-

ಮ || ಸ್ರ || ದೆಸೆಯಂ ಖಡ್ಗಾಂಶುಜಾಲಂ ಬೆಳಗೆ ಧರಣಿಯಂ ದಾನಧಾರಾಂಬು ಜೌಗೇ
ಳಿಸೆ ರೋದೋಭಾಗಮಂ ಕೇತುತತಿ ಪುದಿಯೆ ಮೇಘಾಳಿಯಂ ಧೂಳಿಮೆಯ್ವೆ
ರ್ಚಿಸೆ ದಿಗ್ವೇತಂಡಮಂ ಡಿಂಡಿಮರುತಿ ಚಕಿತಂಮಾಡೆ ದೃಪ್ಯದ್ಬಳಂ ಮಾ
ಮಸಕಂಗೊಂಡೆತ್ತಿ ಬಂದಂ ಬಗೆಯದೆ ಪೃಥಿವೀಪಾಲನುಗ್ರಾಜಿಲೋಲಂ || ೫೮

ವ || ಬಂದು ಸಾರ್ಚಿ ಬಿಟ್ಟಿರೆ-

ಚಂ || ಜಳರುಹಮಿತ್ರನಸ್ತಮಯಕಾಲಮದೊಂದು ವಸಂತಕಾಲದಂ
ತೆಳಸಿ ಕರಂ ವಿರಾಜಿಸಿದುದಂದಿನ ರಂಜಿಪ ಸಂಜೆಗೆಂಪು ತ
ಳ್ತೆಳದಳಿರ್ಗೆಂಪು ತಾರಕಮುದಂಚಿತಕೋರಕಮುದ್ಗತೇಂದುಮಂ
ಡಳಮಲರ್ಗೊಂಚಲೆಂಬಿನೆಗಮಂಬರಮಾತ್ತಮಹೀಜಡಂಬರಂ || ೫೯

ವ || ಅಂತು ನೇಸರ್ಪಡಲೊಡಮಿತ್ತ ಪದ್ಮನಾಭಮಹೀಭುಜನುಮತ್ತ ಪೃಥ್ವೀಪಾಲಭೂ ಪಾಲನುಮಾಸ್ಥಾನಮಂಡಪಿಕಾಮಧ್ಯದೊಳ್ ಭಾವಿಸಂಗ್ರಾಮಚರ್ಚಾವಚನಂಗಳನನ್ವ ಯಾಗತರುಂ ರಣದೀಕ್ಷಿತರುಮಪ್ಪ ವೀರಸಾಮಂತರೊಳ್ ಪಿರಿದು ಬೇಗಂ ನುಡಿಯುತ್ತು ಮಿರ್ದು ಬೞಿಯಂ ರಾಮಣೀಯಕಾದಿಸಕಲಗುಣನಿಳಯಮಪ್ಪ ಶಯ್ಯಾನಿಳಯದೊಳ್ ನಿದ್ರಾಂಗನಾದತ್ತಾವಸರರಾಗಿ ಬೆಳಗಪ್ಪುದುಂ ಬೆಸಸೆ ತತ್ತನ್ನಿಯಾಮದಿನುಭಯಶಿಬಿರದೊಳಂ ಸೇನಾನಾಯಕರ್ ಸನ್ನಾಹಬೇರಿಯಂ ಪೊಯ್ಸಿದಾಗಳ್-

ಮ || ಸ್ರ || ಪುದಿದೆಂಟುಂ ದಿಕ್ತಟಕ್ಕಾಧ್ವನಿ ಪಸರಿಸೆ ಕೋರೈಸಿತೈರಾವತಂ ಕುಂ
ಬಿದುದೆತ್ತಂ ಪುಂಡರೀಕಂ ಸುಗಿದುದು ಕುಮುದಂ ಕಂದಿದತ್ತಂಜನಂ ಕುಂ
ದಿದುದಾದಂ ವಾಮನಂ ಕಟ್ಟಿದುದತಿಮದಮಂ ಪುಷ್ಪದಂತಂ ಸಮಂತೊ
ಕ್ಕುದಗುರ್ವಂ ಸಾರ್ವಭೌಮಂ ನಡುಗಿದುದುಭಯೋದ್ರೇಕದಿಂ ಸುಪ್ರತೀಕಂ || ೬೦

ಕಂ || ಆರಣದುಂದುಭಿರಸಿತಂ
ವೀರರ್ಗುತ್ಸವಮನಿತ್ತುದರ್ಥಿಜನಸ್ವ
ಸ್ತ್ಯಾರವಮೀವಂತೆ ಮಹೋ
ದಾರಚರಿತ್ರರ್ಗೆ ಹೃತ್ಪ್ರಮೋದೋದಯಮಂ || ೬೧

ಪಲದೆವಸಕ್ಕೆಮಗೀಗಳ್
ಕಲಹಂ ದೊರೆಕೊಂಡುದಿಲ್ಲಿ ಮೆಱೆದಪಮಿಂ ದೋ
ರ್ವಲದಳವನೆಂದು ಪೞಪು
ಣ್ಗಲೆಯೊಡೆವಿನಮುರ್ವಿ ಕೊರ್ವಿದರ್ ಕಡುಗಲಿಗಳ್ || ೬೨

ಕದನಪ್ರಮೋದರೋಮಾಂ
ಚದೆ ಕವಚಿತಮಾದುವಿವರ ತನು ತಾಮೆಂದೊ
ಲ್ಲದ ತೆಱದೆ ನಲಿದು ತನಿಗೊ
ರ್ವಿದ ವೀರರ ಮೆಯ್ಗೆ ಪುಗವೆ ಸನ್ನಾಹಂಗಲ್ || ೬೩

ಸಂಗರಲಾಭೋತ್ಸವಪು
ಷ್ಟಾಂಗತೆಯಿಂ ಕಿಱಿಯವಾದೊಡೞ್ತಿ ಜನಕ್ಕಾ
ಪೊಂಗವಚಂಗಳನಿತ್ತರ್
ಪಾಂಗವಚಂಬಡುವಿನಂ ಮಹಾವೀರಭಟರ್ || ೬೪

ವ || ಅದಲ್ಲದೆಯುಂ-

ಮ || ಸ್ರ || ಕರಿಸೇನಾಸಾರಿಭಾರಗ್ರಥನಮುರುತುರಂಗೌಘಪಲ್ಯಾಣಸಜ್ಜೀ
ಕರಣಂ ನಾನಾವರೂಥಪ್ರಕರಸಮುಚಿತಾಯೋಗಸಂಯೋಜನಂ ಕಿಂ
ಕರಸಂದೋಹಾಂಗರಕ್ಷಾವರಣಮವನಿಪಾಲಾಹವೋತ್ಸಾಹದೀನೋ
ದ್ಧರಣಂ ತತ್ಕಾಲಜಾತಂ ಬಲಯುಗಳದೊಳಂ ಕಣ್ಗಗುರ್ವಾದುವಾದಂ || ೬೫