ಅದನೆ ಪರಿವೇಷಮೆಂಬಂ
ದದಿನೆತ್ತಂ ಬಳಸಿ ವಿವಿಧವರ್ಣವಿಶೇಷ
ಚ್ಛದಕುಸುಮಫಳಕುಳಂ ತೋ
ರ್ಪುದು ಶಬಳಮರೀಚಿಹೃದ್ಯಮುದ್ಯಾನವನಂ || ೫೧

ಉ || ಇಂದು ದಿಟಂ ವಟಚ್ಛಲದಿನಾತ್ಮಕಳಾಮೃತಸೇಕದಿಂದಮೊಂ
ದೊಂದನೆ ಮಂಡಳೈಕತಳದೊಳ್ ಸಸಿ ಪೆರ್ಚಿಸಿ ತಂದು ತಿಂಬಿದಂ
ನಂದನದೊಳ್ ಕುಜಂಗಳನದಲ್ಲದೊಡೀನಯಮೀಪೊದೞ್ಕೆಯೀ
ಯಂದದ ಶೋಭೆಯೀರಸಸಮೃದ್ಧಿಯದೇಂ ಪೆಱವರ್ಕೆ ತೋರ್ಕುಮೇ || ೫೨

ವ || ಎನಿಸಿ ನೆಗೞ್ತೆಗಂ ಪೊಗೞ್ತೆಗಂ ನೆಲೆಯಾದುದು ಅಲ್ಲಿ-

ಶಾ || ಸ್ತ್ರೀಪುಂಸೋಚಿತವೃತ್ತಿಯಿಂದಿರದೊಡೆಮ್ಮೊಳ್ ದರ್ಪಕಂ ತೋರ್ಪನಿಂ
ಚಾಪಾಟೋಪಮನೆಂದೆ ತಳ್ತಗಲವೆಂದುಂ ರಾಗದಿಂ ನಾಗವ
ಲ್ಲೀಪೂಗದ್ವಿತಯಂ ಲತಾಕುರವಕದ್ವಂದ್ವಂ ಸಮುತ್ಫುಲ್ಲಮ
ಲ್ಲೀಪುನ್ನಾಗಯುಗಂ ವಿಲೋಲಲವಲೀಲೀಲಾಲವಂಗದ್ವಯಂ || ೫೩

ವ || ಅದಲ್ಲದೆಯುಂ-

ಮ || ಸ್ರ || ಪದವೆತ್ತಿಂಬಣ್ಣ ಬಿಣ್ಗೊಂಚಲನಲಸದೆಪೊತ್ತಿರ್ದಪೊಂಬಾೞೆಸಕೀೞ್ಕೋ
ೞ್ಮೊದಲಿಂ ತೂಱಲ್ವರಂ ಪಣ್ಣೊಳೆ ಪೊದಿಸಿದವೋಲುಬ್ಬರಂ ಪಣ್ತ ಕಿತ್ತೀ
ೞೆ ದಳಂಬೆತ್ತೊತ್ತೆ ಬಿೞ್ತುಬ್ಬರಿಸಿ ಬಿರಿದು ಕಣ್ಬಚ್ಚವಾದಚ್ಚವಣ್ಬೀ
ಱಿದ ದಾಳಿಂಬಂ ತದುದ್ಯಾನದೊಳೊದವಿಸುಗುಂ ಬಾಯ್ಗೆ ತೇರಯ್ಕೆಯುರ್ವಂ || ೫೪

ಕಂ || ಪರಿಪಕ್ವಸರಸಫಳಮಂ
ಜರಿಗಳ್ ನಿಜಭಾರದಿಂದಧೋಯಾನತೆಯಂ
ದೊರೆಕೊಳಿಸೆಯುಮುದ್ಯಾನಕೆ
ದೊರೆವೆತ್ತುದು ನಗರನಂದನಕ್ಕಿದು ಚಿತ್ರಂ || ೫೫

ಚಂ || ಕಳಶುಕನಾದದಿಂ ಪದೆಪನಾಡಿ ಕರಂ ಸುಮನೋನುವೃತ್ತಿಯಂ
ಬಳೆಯಿಸಿ ಸಾಲ್ವಿನಂ ಸಲೆ ಸುವರ್ಣಸಮೇತಲಸಚ್ಛದೋತ್ಕರಂ
ಗಳನಿರದಿತ್ತು ಮತ್ತೆ ಬಿಡೆ ಕಾಲ್ವಿಡಿದಾ ಸಕಳರ್ತುಕದ್ರುಮಂ
ಗಳ ನೆವದಿರ್ಪನೆಯ್ದೆ ವನಲಕ್ಷ್ಮಿಯೊಳಿಂತು ವಸಂತವಲ್ಲಭಂ || ೫೬

ಕಂ || ರತಿಯಿಲ್ಲದೆ ಪುಗಲಣ್ಮಂ
ರತಿಪತಿಯುಂ ಬನಮನೆಂದು ಖೇಚರಸುರದಂ
ಪತಿಗಳೆ ಬಂದದಱೊಪ್ಪುವ
ಲತೆವನೆಯೊಳ್ ಕೃತಕಶೈಳದೊಳ್ ಕ್ರೀಡಿಸುಗುಂ || ೫೭

ಚಂ || ಬಿಸರಸಪಾನದಿಂದಮೆರ್ದೆಯಾಱಿ ಮದಾಲಸಯಾನಲೀಲೆಯಂ
ಪೊಸೆಯಿಸುವಂಚೆ ಪದ್ಮಮಧುಸೇವನೆಯಿಂ ನಸುಸೊರ್ಕಿ ಗೇಯಮಂ
ಪಸರಿಪ ತುಂಬಿ ತಾವರೆಯ ತಣ್ಣೆೞಲೋವರಿಯಲ್ಲಿ ತಳ್ತು ಮೇ
ಳಿಸುವ ರಥಾಂಗಮಿಲ್ಲದೆಡೆಯಿಲ್ಲ ದಲಲ್ಲಿಯ ಪೂಗೊಳಂಗಳೊಳ್ || ೫೮

ಮ || ವಿ || ಧನಕೋಶಂ ನವಹೇಮತಾಮರಸಕೋಶಂ ದೇಶಮಾಸೈಕತಾ
ವನಿದೇಶಂ ಸಹಕಾರಿ ಸಾರಸಹಕಾರಂ ಮಂತ್ರಿ ಮಂದಾನಿಳಂ
ಘನದುರ್ಗಂ ಕೃತಕಾದ್ರಿ ಸೇನೆ ಪಿಕಸಂತಾನಾದಿ ತಾನಾಗೆ ತ
ದ್ವನದೊಳ್ ದರ್ಪಕಚಕ್ರವರ್ತಿ ಮೆಱೆವಂ ಸಪ್ತಾಂಗಸಾಮ್ರಾಜ್ಯಮಂ || ೫೯

ಎಳನೀರಿಂ ಕದಳಾಳಿ ಚೂತಫಳಸಾರಾಸಾರದಿಂ ದಾಡಿಮೀ
ಕುಳಮುದ್ಯದ್ಧವಳೇಕ್ಷುಜಾಳರಸದಿಂ ನಾರಂಗಸಂಘಾತಮು
ಚ್ಚಳಿತೇಂದೂಪಳವಾರಿಯಿಂ ಕಳಮಕೇದಾರಂ ನಿರಾಯಾಸದಿಂ
ಬೆಳೆದೊಪ್ಪಂಬಡೆದಿರ್ಪುವಾ ಪುರವನಪ್ರಾಂತಪ್ರದೇಶಂಗಳೊಳ್ || ೬೦

ಚಂ || ಅದೆ ವಿಸರತ್ಸಭಾಕಳಕಳಂ ಪ್ರತಿಹಾರಕತರ್ಜನೋಕ್ತಿ ತಾ
ನದೆ ಕಳಗೀತನಾದಮದೆ ಮನ್ಮಥನಾಥನ ಬೀಡುದಾಣಮಿಂ
ತಿದು ದಿಟಮೆಂದು ತದ್ವನಮನಧ್ವಗರಾಲಿಸಿ ಪೊರ್ದಲಣ್ಮರು
ಣ್ಮಿದ ಮದಕೀರಕೋಕಿಳಮಧುವ್ರತಮಂಜುಳಶಿಂಜಿತಂಗಳಂ || ೬೧

ವ || ಅಂತುಮಲ್ಲದೆಯುಂ-

ತೀವಿದ ಕೊಳದೊಳ್‌ ಲತೆವನೆ
ಯೋವರಿಯೊಳ್ ತಳ್ತ ತಳಿರ ಕಾವಣದೊಳ್ ಬಂ
ದಾ ವಿರಹಿಗೆ ಭಾವಭವಂ
ತಾವಡಿವೇೞ್ವಂತೆ ಸುೞಿವುದುಪವನಪವನಂ || ೬೨

ವ || ಅಂತು ಜನಮನೋನಯನವಿಶ್ರಮಣಭೂಮಿಯಾದುದ್ಯಾನಮಾಳಾವಳಯದಿಂದ ಮೊಳಗೆ-

ಕಂ || ಬಳಸಿರೆ ಜಳಖಾತಿಕೆ ತಳ
ತಳಿಸುವ ಪೊಸವಳಿಕಿನೆಸವ ಕೋಂಟೆ ಕರಂ ಕ
ಣ್ಗೊಳಿಪುದು ನೋಟಕರಂ ತಿಳಿ
ಗೊಳದೊಳಗುಳ್ಳಲರ್ದಧವಳಕಮಾಳಾಕೃತಿಯಿಂ || ೬೩

|| ಶಿಖಿರಿಣಿ ||
ಪರೀತೋದ್ಯಾನೋದ್ಯದ್ದ್ರುಮಕೃತಕರತ್ನಾದ್ರಿನಿಚಯ
ಸ್ವರೂಪಂಗಳ್ ತನ್ನೊಳ್ ಪೊಳೆಯೆ ವಿಮಳಸ್ಫಾಟಿಕಮಯಂ
ಪುರಸ್ತ್ರೀನೈಪಥ್ಯಸ್ಥಳಪರಿವೃತಂ ಚಿತ್ರರುಚಿರಂ
ತಿರೋಧಾನೋತ್ತಾನಾಂಬರಮದೆನೆ ತದ್ವಪ್ರಮೆಸೆಗುಂ || ೬೪

ವ || ಮತ್ತಂ-

ಅಂತಃಕೃತದೃಢಗುಣಮಾ
ಕ್ರಾಂತಪಯೋಧರಮುದಗ್ರಕಾಂತಿ ಪುರಶ್ರೀ
ಕಾಂತೆಯುಪಕಂಠದೊಳ್ ಹಾ
ರಂ ತಾನೆನೆ ಸೊಗಯಿಕುಂ ಕರಂ ಪ್ರಾಕಾರಂ || ೬೫

ಆಕಾಶಸ್ಫಟಿಕಮಯ
ಪ್ರಾಕಾರಾಗ್ರದ ಸುವರ್ಣರಚಿತಾಟ್ಟಾಳಾ
ನೀಕಂ ಬಯಲೊಳ್ ನೆಲಸಿದ
ನೇಕವಿಯಚ್ಚರವಿಮಾನಮೆಂಬಂತಿರ್ಕುಂ ।. ೬೬

ವ || ಅಂತುಮಲ್ಲದೆಯುಂ

ಕಂ || ವಿಮಳತರಗಗನಮಂಡಳ
ದ ಮಧ್ಯದೊಳ್ ನೆಗೆದ ಶಬಳಮೇಘೋತ್ಕರದೊ
ಪ್ಪಮನಪ್ಪುಕೆಯ್ದುದಾಸ್ಫಟಿ
ಕಮಯಪ್ರಾಕಾರದೊಳಗೆ ಮಣಿಗೃಹನಿವಹಂ || ೬೭

ಗಣಿಕಾವಾಟಿಯನೆಸೆವಾ
ಪಣಕೋಟಿಯನೞ್ತಿಯಿಂದೆ ಪುರದೊಳ್ ಕಡೆಮು
ಟ್ಟೆಣಿಸುವೊಡಂ ನೋಡುವೊಡಂ
ಫಣಿಪತಿಯುಂ ದಿವಿಜಪತಿಯುಮಾಗಲೆವೇೞ್ಕುಂ || ೬೮

ಗಲದಿರೆ ವಿಬುಧರುಂ ಭೋ
ಗಳುಂ ಮನುಜಾಗ್ರಗಣ್ಯರುಂ ತನ್ನೊಳ್ ತ
ನ್ನಗರಂ ಸೊಗಯಿಸಿದುದು ಮೂ
ಜಗಮುಂ ಬಂದಿರ್ದುದಿಲ್ಲಿ ನೆರೆದೆಂಬಿನೆಗಂ || ೬೯

ವ || ಮತ್ತಮದು ಸಂಯತಹಸ್ತದಂತೆ ವಿಸ್ತೃತಸ್ವಸ್ತಿಕೋಪೇತಮುಂ ಶುದ್ಧಪ್ರಸಿದ್ಧಬಂಧದಂತೆ ವರ್ಧಮಾನಮಾನಿತಮುಂ ಪ್ರಮದವನದಂತಾತ್ತನಂದ್ಯಾವರ್ತಮುಂ ಅನಶನತಪದಂತೆ ಸರ್ವತೋಭದ್ರಭಾಸುರಮುಮೆನಿಪುದು ಅಂತುಮಲ್ಲದೆಯುಂ-

ಮ || ಸ್ರ || ಸುರತಪ್ರೌಢಂ ವರಸ್ತ್ರೀತತಿ ಬಹುಪಯಸಂ ಧೇನುಸಂತಾನಮಾಶಾಂ
ತರನಾನಾವಸ್ತು ಪೂರ್ಣಂ ವಿಪಣಿವಿತತಿ ಕೇಳೀವನಪ್ರಾವೃತಂ ಮಂ
ದಿರಸಂದೋಹಂ ದಲೆಂದಂದಕೃತಸುಕೃತನಪ್ಪಂಗೆ ಕೈಸಾರ್ಗುಮೇ ತ
ತ್ಪುರಸಂವಾಸಂ ಸಮಾಸಾಧಿತಸಕಳವಿಳಾಸಂ ಸುಚೇತೋವಿಕಾಸಂ || ೭೦

ವ || ಮತ್ತಂ-

ಚ || ನಗರವಿಳಾಸಿನೀಜನದ ರೂಪವಿಳಾಸಮನಿಂತುಟೆಂದು ನಾ
ಲಗೆಗೆ ತರಲ್ಕೆ ಬಲ್ಲ ಚದುರೆಲ್ಲಿಯದಲ್ಲಿಯ ಮಾಲೆಗಾರ್ತಿಯರ್
ಮಿಗುವರಹೀಂದ್ರಲೋಕದೆಳವೆಂಡಿರನಲ್ಲಿಯ ಘಟ್ಟಿವಳ್ತಿಯರ್
ಮಿಗುವರಮರ್ತ್ಯಲೋಕದಬಳಾಳಿಯನೆನ್ನರುಮೊಲ್ವ ಚೆಲ್ವಿನಿಂ || ೭೧

ಬಳಸಿ ತೊಳಪ್ಪ ಕೋಂಟೆಯೆ ಕರಂ ಗಜದಂತಮಹೀಧ್ರದಂತೆ ಕಂ
ಗೊಳಿಸೆ ಗೃಹೋಪಕಂಠವನಭೂಜಮೆ ಕಲ್ಪಮಹೀಜದೊಪ್ಪಮಂ
ತಳೆಯೆ ಧನಾಢ್ಯದಂಪತಿಯೆ ತದ್ಭವದಂತಿಯಂದಮಂ ಪುದುಂ
ಗೊಳಿಸೆ ಪುರಂ ವಿರಾಜಿಪುದು ದೇವಕುರುಪ್ರತಿಮಾನಮೆಂಬಿನಂ || ೭೨

ಮ || ವಿ || ಜಿನಬಿಂಬಸ್ನಪನಾರ್ಚನೋತ್ಸವಸಮುದ್ಭೂತಾನಕಧ್ವಾನದಿಂ
ಮುನಿಬೃಂದಾಧ್ಯಯನೋಚಿತಪ್ರವಚನೋಪನ್ಯಾಸನಿರ್ಘೋಷದಿಂ
ವಿನಮದ್ಭವ್ಯಜನಾಪ್ತರೂಪಗುಣವಸ್ತುಸ್ತೋತ್ರಯುಕ್ತೋಕ್ತಿಯಿಂ
ದನಿಶಂ ಪೊಂಪುೞಿವೋಪುದಾಪುರದ ಚಂಚಚ್ಚೈತ್ಯಗೇಹೋತ್ಕರಂ || ೭೩

ವ || ಅದಲ್ಲದೆಯುಂ-

ಮ || ವಿ || ಅಯಸಂಯುಕ್ತಮಿದೆಂದು ತನ್ನ ಸುಖಮಂ ಕೈಕೊಳ್ಳದೇೞ್ತಂದಪಂ
ಪ್ರಿಯದಿಂದಷ್ಟಮತೀರ್ಥನಾಥನಿರದಿಂದೆನ್ನಲ್ಲಿಗೇಮಾತೊ ನಿ
ರ್ವ್ರಯಸೌಖ್ಯೋನ್ಮುಖನೆಂದು ತನ್ನಗರಿ ತಾಂ ಮೆಯ್ವೆರ್ಚಿಸರ್ವಾರ್ಥ
ದ್ಧಿಯುಮಂ ಮೂದಲಿಪಂತುಟಾಯ್ತನುದಿನಂ ಸಂಗೀತಕಧ್ವಾನದಿಂ || ೭೪

ವ || ಅಂತಪರ್ಯಂತಸಂಪದಪ್ರಹಸಿತಪುರುಹೂತಪುರಮಪ್ಪ ಚಂದ್ರಪುರದ ಮಧ್ಯದೊಳ್ ತತ್ಪುರಶ್ರೀಯ ನಾಭೀವಳಯದಂತೆ ವಿಳಸಿತಮಾದ ರಾಜನಿಳಯದೊಳಗೆ-

ಚಂ || ಇದು ದಲಪೂರ್ವಪೂರ್ವಕುಧರಂ ದಿವದಿಂ ಜಿನಚಂದ್ರನಿಲ್ಲಿ ಬಂ
ದುದಯಿಕುಮೆಂದು ಮುನ್ನಮೆ ಬಿಡೌಜನೆ ನಿರ್ಮಿಸುವೋಜೆಗೋಜನಾ
ದುದನಱಿಪುತ್ತುಮಿರ್ಪುದನಿಶಂ ಕರುಮಾಡಮಮಾನುಷಕ್ರಿಯಾ
ಸ್ಪದನವರತ್ನಕೂಟವಿಘಟದ್ರಸಚಿತ್ರವಿಚಿತ್ರಲೇಖೆಯಿಂ || ೭೫

ವ || ಅದಂ ಬಳಸಿ-

ಕಂ || ತೀರ್ಥಕರಜನ್ಮಕಲ್ಯಾ
ಣಾರ್ಥಂ ಬಂದಿಂತೆ ನೆಲಸಿದಪುವಿಲ್ಲಿ ಮರು
ತ್ಸಾರ್ಥವಿಮಾನೋತ್ಕರಮೆಂ
ಬರ್ಥಮನನುಕರಿಪುವರಸಿಯರ ಮಾಡಂಗಳ್ || ೭೬

ಲಲಿತಹರಿನೀಲಹರ್ಮ್ಯಾ
ವಲಿಶಿಖರೋಚ್ಚಳಿತರುಚಿಗಳಿರುಳೊದವಿ ನಭ
ಸ್ಸ್ಥಲದೊಳೊಡರ್ಚುವುದಿಂದುವ
ಮೊಲಕ್ಕೆ ಕೞ್ತಲೆಯಿದೆನಿಪ ಮೊಲಗೞ್ತಲೆಯಂ || ೭೭

ವ || ಮತ್ತಮಲ್ಲಿ-

ಚಂ || ಮರಕತವೇಶ್ಮರಶ್ಮಿಯರುಣಾಶ್ಮಗೃಹದ್ಯುತಿಯಿಂದ್ರನೀಳಮಂ
ದಿರರುಚಿ ಹೇಮದಾಮಘೃಣಿ ಮೌಕ್ತಿಕಮಂಡಪಕಾನ್ತಿಯೆತ್ತಲುಂ
ಪರಿಕಲಿಪನ್ನೆಗಂ ದೆಸೆಯುಮಂಬರಮುಂ ನವಚಿತ್ರಚಿತ್ರಿತಾಂ
ಬರಪಿಹಿತಂಗಳಾದ ತೆಱದಿಂ ಸೆಱೆಯಿಟ್ಟುವು ನೋೞ್ಪ ದಿಟ್ಟಿಯಂ || ೭೮

ವ || ಮತ್ತಮಾರಾಜಭವನಂ ಪದ್ಮರಾಗಮಾಣಿಕ್ಯಕಳಶಪಙ್ತ್ಕಿಗಳಿಂ ರಾಜಹಂಸ ವನದಂತೆ ಯುಂ ನವರತ್ನರಚಿತತೋರಣಂಗಳಿಂ ಸಶಕ್ರಚಾಪಶತದಂತೆಯುಂ ಚಂಚಳಧವಳಕೇತನ ಪ್ರತಾನದಿಂ ಸಸುರಾಪಗಾಫೇನಸಂತಾನದಂತೆಯುಂ ಸಂತತೋಚ್ಚಳಿತಕಾಳಾಗರುಧೂಪ ಧೂಮದಿಂ ಸಜಳಕಾದಂಬಿನೀ ಕದಂಬದಂತೆಯುಂ ಸಮುತ್ತಂಭಿತಶಾತಕುಂಭಮಯೂರ ವಾಸಯಷ್ಟಿಗಳಿಂ ಸತಟಿಲ್ಲತಾವಿತಾನದಂತೆಯುಂ ನಿರಂತರಚಂದ್ರಕಾಂತವಳಭೀವಳ ಯದಿಂ ಸಶಾರದಾಭ್ರಸಮುದಯದಂತೆಯುಂ ಪ್ರಾಸಾದಂತರೋಡ್ಡೀನಪಾರಾವತ ಪಙ್ಕ್ತಿಯಿಂ ಸನೀಳೇಂದೀವರವಂದನಮಾಲಾವಳಿಯಂತೆಯುಂ ಅನಿಯಂತ್ರಯಂತ್ರ ಧಾರಾಗೃಹಂಗಳಿಂ ಸವರ್ಷಾಸಮಯದಂತೆಯುಂ ಲಂಬಮಾನಮುಕ್ತಾದಾಮನಿಕರದಿಂ ಸತಾರಕಪ್ರಕರದಂತೆಯುಂ ಅನವರತಸಂಗೀತನಿನದ ಪರವಶಾಸ್ಪಂದಯಾಮಸಿಂಧುರಂ ಗಳಿಂ ಸನೀಳಾಚಳಕುಳದಂತೆಯುಂ ಪ್ರಮದವನಬಾಳಕದಳೀದಳಪ್ರಭಾಪ್ರಸರದಿಂ ಸಶಾದ್ವಲವಿರಸರದಂತೆಯುಮೆಸೆವುದು ಅಂತುಮಲ್ಲದೆಯುಂ-

ಕಂ || ಸೂಕ್ಷ್ಮತರಚಿತ್ರನಿಧಿ ಮೇ
ರುಕ್ಷ್ಮಾಧರತುಂಗಹರ್ಮ್ಯಮೆನಿಪರಮನೆಯಂ
ಲಕ್ಷ್ಮೀನಿಳಯಮನೀಕ್ಷಿಸಿ
ಪಕ್ಷ್ಮಸ್ಪಂದನಮನಾರೊ ಮಱೆಯದರದಱೊಳ್ || ೭೯

ಆರಾಜಕುಳದೊಳಖಿಳಜಿ
ನಾರಾಧ್ಯಂ ಸುಖದಿನಿರ್ಪನುನ್ಮಥಿತಸಮ
ಸ್ತಾರಿ ಮಹಾಸೇನಂ ವೃಜಿ
ನಾರಿ ಮಹಾಸೇನನೆಂಬನವನೀನಾಥಂ || ೮೦

ಸರಳಕರಪಾತಮಂ ಬಿ
ತ್ತರಿಸಿಯುಮಾಟವಿಕಜನಿತಬಾಧೆಗಳಂ ಸಂ
ಹರಿಸಿಯುಮನುವಶೆಯಂ ಮಾ
ಡಿರಿಸಿದನಾರಾಜಕುಂಜರಂ ಕುಂಭಿನಿಯಂ || ೮೧

ಮತಿಯೊಳಕೆಯ್ದುದು ನಾಲ್ಕುಂ
ಕ್ಷಿತಿಪತಿವಿದ್ಯೆಗಳನಿಂದುನಿರ್ಮಳಕೀರ್ತಿ
ದ್ಯುತಿಯೊಳಕೆಯ್ದುದು ನಾಲ್ಕುಂ
ವಿತತದಿಶಾಸೀಮೆಗಳನಿಳಾವಲ್ಲಭನಾ || ೮೨

ಒಂದಸಿಯ ಧಾರೆಯೊಳ್ ಸಮ
ಸಂದೀಷಜ್ಜಳದಿನಳವಿಗಳಿದರಿಭೂಭೃ
ತ್ಸಂದೋಹದ ಕಾಯ್ಪಂ ಸಲೆ
ಮಾಂದಿಮವಂ ನೃಪನ ಚರಿತಮೇನಚ್ಚರಿಯೋ || ೮೩

ಕರಕಮಳಂ ಮುಖಕಮಳಂ
ಚರಣಕಮಳಮಮಳನಯನಕಮಳಂ ತನ್ನೊಳ್
ಕರಮೊಪ್ಪೆ ನೃಪಂ ಕಮಳಾ
ಕರದಂದದಿನೆಯ್ದೆ ಕಮಳೆಗಾಲಯಮಾದಂ || ೮೪

ಸುರಭಿಯ ತಾಯ್ವನೆಯಾ ಸಿ
ದ್ಧರಸದ ಬಗರಗೆ ಸುರಾವನೀಜದ ಬೀಜಂ
ಪರುಸದ ಕಣಿ ಚಿಂತಾಮಣಿ
ಯ ರೋಹಣಂ ರಾಜವರ್ಯನೆಸೆವೌದಾರ್ಯಂ || ೮೫

ಉ || ಈಂದನಿಯಿಂದೆ ದೇವಗಣಿಕಾತತಿಯಾತನ ಗೀತಮಂ ನಿಜಾ
ನಂದದೆ ಪಾಡೆ ಕೇಳಲೆರಡುಂ ಕಿವಿಯೆಯ್ದದೆ ತನ್ನ ದೃಕ್ಸಹ
ಸ್ರಂ ದಿಟದಿಂದೆ ಕರ್ಣಚಯಮಾಗದೆ ನಿಷ್ಫಲಮಾದುದೆಂದು ಸಂ
ಕ್ರಂದನನೆಯ್ದೆ ಕಣ್ಗೆ ಕಿಸುಗಣ್ಚುವನಾತ್ಮಸಭಾಂತರಾಳದೊಳ್ || ೮೬

ವ || ಅದಲ್ಲದೆಯುಂ-

ಕಂ || ಇರದೆ ನಿಜಪಕ್ಷಪಾತದೆ
ನೆರೆದಂತಾರಾಜಹಂಸನೊಳ್ ಸುಚರಿತನೊಳ್
ಚಿರಮಿರ್ಪಳ್ ರಾಜ್ಯಶ್ರೀ
ಕರದೆಸೆವುದ್ದಂಡಪುಂಡರೀಕದ ನೆೞಲೊಳ್ || ೮೭

ಮ || ವಿ || ಸ್ಥಿರೆಯಾದಳ್ ಧರೆಯೀಗಳೆಂಬ ಘನದೋರ್ವಿಕ್ರಾಂತಮಿಕ್ಷ್ವಾಕುಬಂ
ಧುರವಂಶಂ ದೊರೆವೆತ್ತುದೆಂಬ ವಿಮಳಾಚಾರಪ್ರಭಾವಂ ಜಗ
ದ್ಗುರುಗಂ ತಾಂ ಗುರುವೆಂಬನೂನತರಪುಣ್ಯಂ ಸಾರ್ವ ಸೈಪಿಂಗೆ ಭೂ
ಪರೊಳಾರ್ ನೋಂತರೊಮುನ್ನೆ ಭಾವಿಸೆಮಹಾಸೇನಾಧಿಪಂ ನೋಂತುದಂ || ೮೮

ಕಂ || ಅಂತೆನಿಸಿ ನೆಗೞ್ದ ಜಗತೀ
ಕಾಂತನ ಮಾದೇವಿ ಲಕ್ಷ್ಮಣಾದೇವಿ ಸಮ
ಸ್ತಾಂತಃಪುರಪರಮೇಶ್ವರಿ
ಮಂತಣದೆಱೆವೆಟ್ಟು ಚದುರ ಘಟ್ಟಿಜವೆನಿಪಳ್ || ೮೯

ಮ || ವಿ || ಕನಕಾಂಭೋಜರಜಂ ವಸಂತಪವನಂ ಚಾಂದ್ರೀಕಳಾಮಾಳೆ ಮೋ
ಹನಯಂತ್ರಸ್ಥನಭಂ ಸುಧಾರಸಮಿವುರ್ವೀವಾಯುತೇಜೋಂಬರಾಂ
ಬುನಿಕಾಯಪ್ರತಿರೂಪಭೂತನಿಚಯಂ ತೌಮಾಗೆ ಕಾಮಾಂಬುಜಾ
ಸನನಾಕಾಂತೆಯ ಕಾಯದೊಳ್ ನೆರೆಪಿದಂ ರೂಪಕ್ರಿಯಾಪ್ರೌಢಿಯಂ || ೯೦

ವ || ಮತ್ತಂ-

ಚಂ || ಸ್ಮರಮದಶಕ್ತಿ ಚಿತ್ತಭವಮೋಹನವಿದ್ಯೆ ರತೀಶಕೀರ್ತಿ ಸುಂ
ದರಹೃದಯಪ್ರಭೂತಕುಲದೇವತೆ ಮನ್ಮಥರಾಜ್ಯಲಕ್ಷ್ಮಿ ಶಂ
ಬರಹರಶೌರ್ಯಸಿದ್ಧಿಯೆನಿಪೊಂದು ವಿಳಾಸದಿನಾಕೆ ತಾನಧಃ
ಕರಿಸುವಳಿದ್ಧಸಿದ್ಧಖಚರಾಮರನಾಗವಧೂಕದಂಬಮಂ || ೯೧

ಸ್ಮಿತಮಧುರಂ ಮುಖಂ ವಿಮುಖವೃತ್ತಿಯನಾರ್ಗೆ ಕೞಲ್ಚದುತ್ಕುಚ
ದ್ವಿತಯಭರಾವಳಂಬಿಯೆರ್ದೆಯಾರೆರ್ದೆಗೀಯದು ಚೋದ್ಯಮಂ ಸಿತಾ
ಯತನಯನಂಗಳಾರ ನಯನಂಗಳನಾಱಿಸವುನ್ಮರಾಳಸಂ
ಗತಿ ಗತಿಭಂಗಮಂ ಪಡೆಯದಾರ್ಗೆ ತದಂಗಜರಾಜ್ಯಲಕ್ಷ್ಮಿಯಾ || ೯೨

ಪದೆದು ಸರೋಜಜಂ ಸುದತಿಯಾನನಮಂ ಸಮೆಯಲ್ಕೆ ಚಂದ್ರಬಿಂ
ಬದ ನಡುವಿರ್ದ ಕೋಮಳಕಳಾವಳಿಯಂ ನೆಱೆ ತೋಡಿ ಕೊಂಡೊಡಂ
ತದು ಬಯಲಾಗೆ ತದ್ಗಗನಕರ್ಷ್ಣ್ಯಮನಾಲಮಿದೆಂದು ಪುತ್ತಿದೆಂ
ದಿದು ಮೃಗಮೆಂದು ಕಲ್ಪಿಸುತುಮಿರ್ಪುದು ಸಂಶಯಭಾಜನಂ ಜನಂ || ೯೩

ಕಂ || ವದನಂ ಶಶಾಂಕಶಂಕೆಯ
ನೊದವಿಸುತಿರೆ ಸತತಮಾ ಲತಾಂಗಿಯ ಮೆಯ್ಯೊಳ್‌
ಸದರಸ್ಮಿತಫೇನಂ ಪೆ
ರ್ಚಿದತ್ತಗಣ್ಯಂ ಪಯೋಧಿಯೆನೆ ಲಾವಣ್ಯಂ || ೯೪

ವ || ಅದಲ್ಲದೆಯುಂ-

ಕಂ || ಪೊಳೆವ ದಶನಾಳಿ ಮುಕ್ತಾ
ವಳಿ ಮಧ್ಯದ ತರಳಮಣಿಯಿದೆಂದೆನೆ ತತ್ಕೋ
ಮಳೆಯಧರಮಣಿಯನವಯವ
ಕುಳಚೂಡಾಮಣಿಯನತನುಚಿಂತಾಮಣಿಯಂ || ೯೫

ಮೊರೆಯದಳಿ ಮುಗಿಯದಬ್ಜಂ
ಕೊರಗದ ನನೆಯಂಬು ನೀರೊಳೞ್ದದ ಮೀನಂ
ಚಿರಮೆನೆ ಮಿಸುಗದ ಮಿಂಚಂ
ಬರಚರಮಲ್ಲದ ಚಕೋರಮಲರ್ಗಣ್ ಸತಿಯಾ || ೯೬

ಮೂೞೂದುವು ಕರ್ವಿನ ಬಿಲ್
ನೀೞೆಯೆರೞ್ಪುರ್ವು ಬೆರಸು ತಾಮೆನಗಿನ್ನೀ
ಮೂಱುಂ ಜಗಮುಂ ಗೆಲಲೇ
ನಾಱವೆ ಪೇೞೆಂದು ಕಂತು ಮುಯ್ವಾಂತಿರ್ಪಂ || ೯೭

ನುಂಗಿ ಮುಗುಳ್ದುಗುಳ್ದಪುದು ನೆಱೆ
ದಿಂಗಳನಾರಾಹುವೆಂಬ ತೆಱದಿಂ ಕುರುಳೊಳ್‌
ಸಂಗಳಿಸಿ ಕಣ್ಗೆ ನಾಡೆ ಬೆ
ಡಂಗಂ ಬೀಱಿದುದು ಮಿಸುಪ ನೊಸಲಂಗನೆಯಾ || ೯೮

ಅಳವಡೆ ಪರಭಾಗಂಬಡೆ
ದೆಳೆಯಳೆ ಪರಭಾಗದಲ್ಲಿ ಸೋರ್ಮುಡಿ ಸೊಬಗಂ
ತಳೆದೆಸೆದುದು ಕನಕಶಿಳಾ
ತಳಾಗ್ರದೊಳ್ ಮುರಿದ ಪರಿದ ಜಗುನೆಯ ಪೊನಲಂ || ೯೯

ತನುಲತೆಗೆ ಶಾಖೆ ಕರತಳ
ವನಜಕ್ಕೆ ಮೃಣಾಳನಾಳಮಕ್ಷಿಭ್ರಮರ
ಕ್ಕೆ ನವೀನಶಿರೀಷಸ್ರಜ
ಮೆನೆ ವನಿತೆಯ ದೋರ್ಯುಗಕ್ಕೆ ಪರ್ಯಾಯಂಗಳ್ || ೧೦೦