ವ || ಮತ್ತಂ-

ಶಾ || ಗೀತಪ್ರೀತಿ ಜಿನಶ್ರುತಿಶ್ರವಣದಿಂ ಶ್ವೇತಾತಪತ್ರಾರ್ಥಿ ಭೂ
ಜಾತಚ್ಛಾಯೆಯಿನಂಗನಾರುಚಿ ವಿರಕ್ತಾಸಕ್ತಿಯಿಂ ಹರ್ಮ್ಯಚೂ
ಡಾತರ್ಷಂ ಗಿರಿಕೂಟಸಂವಸನದಿಂ ಗೆಂಟಾಗೆ ಸಾಮ್ರಾಜ್ಯಲೀ
ಲಾತಾತ್ಪರ್ಯಮನಾತಪಸ್ವಿ ತಳೆದಿರ್ದಂ ತತ್ತಪೋರಾಜ್ಯದೊಳ್ || ೪೬

ವ || ಅಂತುಪಶಾಂತಮೋಹಸಂತಮಸಂ ಪರಮತಪಃಪ್ರದೀಪಸ್ನೇಹಭೂತಜೀವಿತಂ ನಭಸ್ತಿ ಲಕಾಚಲದೊಳುಪಜೀವಿತಪ್ರಾಯೋಪಗಮನವಿಧಾನನಾತ್ಮೀಯಜೀವಿತಾತ್ಯಯದೊಳ್-

ಸುರ… ಶಮೂಲದಿಂದಾ
ಱುರಜ್ಜು ಮೇಗೊಗೆದ ತಾಣದೊಳ್ ದಿವ್ಯಸುಖಾ
ಕರಮೆನೆ ಪದಿನಾಱನೆಯದು
ವರಶೋಭಾನಲ್ಪಮಿರ್ಪುದಚ್ಯುತಕಲ್ಪಂ || ೪೭

ಆ ಕಲ್ಪದೊಳುಜ್ಜ್ವಲಸಹ
ಜಾಕಲ್ಪಂ ಷಡ್ವಿತಸ್ತಿಮಾತ್ರಸುಗಾತ್ರಂ
ಸ್ವೀಕೃತತದಧೀಂದ್ರತ್ವನ
ನಾಕುಳನಣಿಮಾದಿಗುಣಗಣಾನ್ವಿತನೊಗೆದಂ || ೪೮

ವ || ಅಂತು ಪುಟ್ಟಿ ತನ್ನ ಸಮಕಟ್ಟಿದಾಯುಷ್ಯದ-

ಕಂ || ಸಾಗರವಿರ್ಪತ್ತೆರಡಱ
ಭಾಗದನಿತೆ ಮಾಸಮಾಗೆ ಸುಯ್ವಂ ನೆನೆವೊಂ
ಭೋಗೇಚ್ಛೆ ಪುಟ್ಟಿದೊಡೆ ತ
ತ್ಸಾಗರಸಮ್ಮಿತಸಹಸ್ರಮಾಸಕ್ಕುಣಿಸಂ || ೪೯

ಮೂನೂಱೈವತ್ತೆಸೆವ ವಿ
ಮಾನಂಗಳ್ಗಮಲಮಣಿಮಯಂಗಳ್ಗೆ ಸಮೀ
ಚೀನನವಚೀನರಚಿತವಿ
ತಾನಂಗಳ್ಗೊಡೆಯನಾದನಾದಿವಿಜೇಂದ್ರಂ || ೫೦

ಮೂವತ್ತಿರ್ವರ್ ಸ್ವೀಕೃತ
ದೇವಿಯರಱುವತ್ತುಮೂವರಾವಲ್ಲಭಿಕಾ
ದೇವಿಯರೆಸೆವೆಣ್ಬರ್ ಮಾ
ದೇವಿಯರಾತನ ಮನಕ್ಕೆ ಸಲೆ ನೆಲೆಯಾದರ್ || ೫೧

ಎಣಿಕೆಗಳುಂಬಂ ಪರಿಜನ
ಗಣನೆಗೆ ಬಂದಚ್ಚರಿಯರುಮಂ ತದ್ದೇವೀ
ಗಣದೊಳಗಾರೊರ್ವರ ವಿಕ
ರಣಸಂಭವದೇವಿಯರ್ಕಳಂ ಫಣಿಪತಿಗಂ || ೫೨

ಮ || ಸ್ರ || ಪ್ರಕಟಂ ಮೂವತ್ತುಮೂವರ್ ಸುಮನರಯುತಸಂಖ್ಯಾನ್ವಿತರ್ ಸಂದ ಸಾ
ಮಾನಿಕಲೋಕರ್ ದೇವಪಾಲಾಹ್ವಯಯುತದಿವಿಜರ್ ನಾಲ್ವರಿತ್ತಂಗರಕ್ಷಾ
ಧಿಕೃತರ್ ನಾಲ್ವತ್ತುಸಾಸಿರ್ವರಮರರಿವರಾತ್ಮೀಯಪಾದದ್ವಯಾರಾ
ಧಕರಾದರ್ ತತ್ಸುರೇಂದ್ರಂಗಮಲತರತಪಸ್ಸಾರ್ಥಸಾಮರ್ಥ್ಯದಿಂದಂ || ೫೩

ಕಂ || ಒಳಗಣ ಪೊಱಗಣ ನಡುವಣ
ವಿಳಾಸಮಂ ತಳೆದ ಮೂಱು ಸಭೆಯುಂ ದೇವಂ
ಗಳವಟ್ಟುವಾತನೊಳ್ ಸಂ
ಗಳಿಸಿದ ಪುಣ್ಯಪ್ರಭಾವಮಂ ತ್ರಿಗುಣಿಪವೋಲ್ || ೫೪

ವರ ಕರಿ ತುರಗಂ ರಥಕಿಂ
ಕರ ವೃಷ ಗಂಧರ್ವನರ್ತಕೀಪ್ರಮುಖಂ ಬಂ
ಧುರಸಪ್ತಾನೀಕಂ ನಿಜ
ಪರಿಕರಮೆನೆ ಸುರನ ಸೈಪದೇನಚ್ಚರಿಯೋ || ೫೫

ವ || ಎನಿಸಿ ತತ್ಕಲ್ಪವಲ್ಲರಿಗೆ ನಿಜಶರೀರಪಾರಿಜಾತಮನಡರ್ಪುಮಾಡಿ-

ಉ || ಒಯ್ಯದೆ ಪೊಯ್ಯದೊಂದು ಪುರುಡಪ್ಪದ ಚುಂಬಿಸದಿಂಪು ದೇವಿಯರ್
ಮೆಯ್ಯಳವಾಱೆ ಕೂಡಿಸದ ಕೂಟದ ಸಂತಸಮೆಂಬಿವೆಲ್ಲಮಾ
ರಯ್ಯೆ ಮನಃಪ್ರವೀಚರಣದಿಂ ಸಮಸಂದುಚಿತಾರ್ಥವೃತ್ತಿ ತ
ಳ್ಪೊಯ್ಯೆ ಮನೋಜಕೇಳಿಗಮರಂ ತಣಿದಂ ಸುರತೋಪಭೋಗದೊಳ್‌ || ೫೬

ವ || ಅದಲ್ಲದೆಯುಮಾತನೋರೊರ್ಮೆ ತನಗೆ ಸಹಜಮಾದಣಿಮಾಣುಸಾಮಗ್ರಿಯಿಂ ನೆಲನ ನವ್ಯಗ್ರತೆಯಿನುರ್ಚಿ ಪೋಗಿ ನಾಗಭವನದ ಕೃತ್ರಿಮಚೈತ್ಯಯಾತ್ರೆಯಂ ನಿರ್ವರ್ತಿಸಿಯುಂ ಓರೊರ್ಮೆ ಮಹಿಮಾಮಹಾತ್ಮ್ಯದಿಂ ಮೇರುಗಿರಿಯ ನಾಲ್ಕುಂ ಬನದ ಜಿನಭವನಂಗಳಂ ತಚ್ಛೈಲಮೂಲದಿಂ ಚೂಳಿಕೆವರಂ ಬಳೆದು ಬಲವಂದು ಬಂದಿಸಿಯುಂ ಓರೊರ್ಮೆ ಗರಿಮೋರುತಾಶ್ಚರ್ಯದಿಂ ವರ್ಯಜಿನಬಿಂಬಸವನಪಾವನೀಭೂತಸ್ರೋತಮಪ್ಪಗಾಧ ಗಂಗಾನದೀಹ್ರದಂಗಳೊಳ್ ಪಾತಾಳಮೂಲಂಬರಂ ಮುೞುಗಿ ನಿಜಗಾತ್ರಮಂ ಪವಿತ್ರೀ ಕರಿಸಿಯುಂ ಓರೊರ್ಮೆ ಲಘಿಮಾಲಘುಬಲದಿಂ ನಿತ್ಯ ಚೈತ್ಯಸವನನಿಮಿತ್ತಂ ಸ್ವಯಂಭೂ ರಮಣಸಾಗರೋದಕಾದಾನಕ್ಕಸಂಖ್ಯಾತದ್ವೀಪಸಮುದ್ರಂಗಳಂ ನಿಮಿಷಮಾತ್ರದಿನತಿಕ್ರಮಿಸಿ ಯುಂ ಓರೊರ್ಮೆ ನಿಜಪ್ರಾಪ್ತಿಸಾಮರ್ಥ್ಯದಿಂದಿರ್ದೆಡೆಯೊಳಿರ್ದು ನಿಜಭುಜಲತಾಪ್ರತಾ ನಮಂ ನಿಮಿರ್ಚಿ ನಂದೀಶ್ವರದ್ವೀಪದ ಜಿನೇಂದ್ರಾಗಾರಸಾಂಧ್ಯಬಂಧುರತೂರ್ಯಂಗಳಂ ಬಾಜಿಸಿಯುಂ ಓರೊರ್ಮೆ ನಿಜಪ್ರಾಕಾಮ್ಯಪ್ರಭಾವದಿಂ ವಿದೇಹ ತೀರ್ಥಕೃತ್ಕಲ್ಯಾಣ ಮಂಗಳಂಗಳೊಳ್ ಸೌಧರ್ಮೇಂದ್ರನೊಡನೆ ಲಾಸ್ಯತಾಂಡವಚ್ಛುರಿತನೃತ್ಯಂಗಳಂ ತತ್ತದ್ರೂಪಂಗಳಿಂ ಸಂಪಾದಿಸಿಯುಂ ಓರೊರ್ಮೆ ತನ್ನೀಶತ್ವಶಕ್ತಿಯಿಂ ಪಂಚಗುರುಚರಣ ಪೂಜೋಪಚಾರಸಜ್ಜೀಕರಣದೊಳ್ ಸಕಲಸುರಸಮಾಜಮಂ ಪರಿಚಾರಕತ್ವದೊಳ್ ಯೋಜಿಸಿಯುಂ ಓರೊರ್ಮೆ ವಶಿತ್ವಾತಿಶಯದಿಂ ವೀತರಾಗರೂಪಗುಣವಸ್ತುವರ್ಣ ನಾನುಬದ್ಧತ್ರಿಮಾರ್ಗಗೀತಂಗಳಂ ತ್ರಿವಿಧಮಾರ್ಗಂಗಳೊಳ್ ಪಾಡಿ ಗಂಧರ್ವಗೀರ್ವಾಣ ರಂ ವಶೀಕೃತರಂ ಮಾಡಿಯುಂ ಇಂತಷ್ಟಗುಣಂಗಳನಿಷ್ಟದೇವತೋಪವಿಷ್ಟಿಯಿಂ ಸಫಲಂ ಮಾಡುತ್ತುಮಿಂತು-

ಕಂ || ಅನತಿಶಯಪುಣ್ಯಪುಣ್ಯಾ
ರ್ಚನತತ್ಪರನಾ ಮರುದ್ವರಂ ವಿವಿಧವಿನೋ
ದನಸೇತುಯಾನದಿಂ ಜೀ
ವನಸಾಗರನಿಕರದಂತನಿಂತೈತಂದಂ || ೫೭

ವ || ಅಂತು ದೂರಾಯುಸ್ಸಾಗರಪಾರಗನಾಗಲೊಡಂ-

ನಿಜಕುಸುಮಸ್ರಜಂ ಕೊರಗಿದತ್ತು ಮೊಗಂ ಕೊರಗಿತ್ತೆ ಭೂಷಣ
ವ್ರಜರುಚಿಸಂಚಯಂ ತೊಲಗಿದತ್ತಱಿತಂ ತೊಲಗಿತ್ತೆ ನೋಡೆ ಭೂ
ಮಿಜನಿಕರಂ ಕರಂ ನಡುಗಿದತ್ತು ಮನಂ ನಡುಗಿತ್ತೆ ಪೇೞೆ ಕ
ಲ್ಪಜಪತಿಗೆಂದು ತಮ್ಮೊಳುಲಿದರ್ ಸುರರೇಂ ವಿಭು ಭಾವಿತಾತ್ಮನೋ || ೫೮

ಕಂ || ಅಮರಾಹ್ವಯಮೊಂದುಂ ವ್ಯ
ರ್ಥಮಾದೊಡೇನಚ್ಯುತೇಂದ್ರನಾಯುಶ್ಚ್ಯುತಿಯೊಳ್
ಸುಮನೋಲೋಕಸ್ವವಿಬುಧ
ಸಮಾಖ್ಯೆಗಂ ನಾಡೆ ಮಾಡಿದಂ ಸಾರ್ಥತೆಯಂ || ೫೯

ವ || ಅಂತು ಸಮಾಹಿತಚಿತ್ತನಾಗಿ-

ಚಂ || ಸ್ಮೃತಿನುತತತ್ವದೊಳ್ ನುತಿ ಜಿನೇಂದ್ರಪದಾಬ್ಜದೊಳುಕ್ತಿ ತದ್ಗುಣ
ಸ್ತುತಿಶತದೊಳ್ ಮನೋವಿರತಿ ಭೋಗಕದಂಬದೊಳಿಂಬುವೆತ್ತ ಸಂ
ಗತಿ ಸತತಂ ಸಮಾಧಿವಿಧಿಯೊಳ್ ಸಮಸಂದಿರೆ ಸಾರ್ದ ಬಾಳಪಂ
ಡಿತಮೃತಿಯಿಂ ಸುರಂ ಸುಮನರಂ ತಲೆದೂಗಿಸಿದಂ ನಿರಂತರಂ || ೬೦

ಕಂ || ಅಮೃತಮುಣಿಸಾತ್ಮರಕ್ಷಕ
ರಮರ್ತ್ಯರಾರಯ್ಯೆ ಸಗ್ಗಮದು ದುರ್ಗಮೆನಿ
ಪ್ಪಮರರ್ಗಂ ಮೃತಿಯುಮನಿಂ
ಸಮನಿಸಿತೆನೆ ಮತ್ತಿನವರ್ಗೆ ನಿತ್ತರಮುಂಟೇ || ೬೧

ವ || ಅನಂತರಂ-

ಕಂ || ಸುಮನಸ್ಸ್ಥಿತ್ಯನುಗಮದೊಳ್
ದ್ರುಮದಿಂದೆ ನೆಲಕ್ಕೆ ಬೀೞ್ವವೋಲಾಯುರ್ಪ್ಯು
ತ್ಕ್ರಮದೊಳ್ ನಾಕಾನೋಕಹ
ದೆ ಮಹೀಭಾಗಕ್ಕೆ ವಂದನಂದಾಸುಮನಂ || ೬೨

ಬಂದು ಕನಕಪ್ರಭಂಗಮ
ನಿಂದಿತೆ ತತ್ಸತಿ ಸುವರ್ಣಮಾಲೆಗಮಖಿಲಾ
ನಂದಕರಚರಿತನಂತಾ
ವೃಂದಾಕರನಂದು ಪುಟ್ಟಿದ …..ನಾದ್ಯಂ || ೬೩

ಮ || ಸ್ರ || ಕ್ರಮದಿಂದಿಂತೆಲ್ಲಮಂ ಶ್ರೀಧರಯತಿಪತಿ ಸರ್ವಾವಧಿಶ್ರೀಧರಂ ಪೇ
ೞೆ ಮಹೀಶಂ ಪದ್ಮನಾಭಂ ಭವಸಮುದಯವೃತ್ತಾಂತಮಂ ತಾನೆ ಕೇಳು
ತ್ತೆ ಮನಂಗೊಂಡೀಶಲೋಕಕ್ಕೆ ದಿಟಮೆನಿಪಂತಿಂದೆ ಮುಂದಪ್ಪುದೇನಾ
ನುಮನೊಂದಂ ಪೇೞಿಮೆಂದಂ ಬೞಿಕಮುಕುಳಿತಾತ್ಮೀಯಹಸ್ತಾರವಿಂದಂ || ೬೪

ವ || ಎನಲೊಡಂ ತತ್ಸಭಾಜನಮನಸ್ಸಂಶಯತಮಸ್ಸಮುದಯಮಂ ತೂಳ್ದುವಂತೆ ದಂತಕಾಂತಿ
ಚಂದ್ರಾತಪಮಂ ಪಸರಿಸೆ ತನ್ಮುನೀಂದ್ರಚಂದ್ರನವರ್ಗಿಂತೆಂದಂ-

ಕಂ || ಯುಷ್ಮತ್ಪುರಕ್ಕೆ ಕರಿಪತಿ
ಭೀಷ್ಮಮಹಾವರ್ಷಮೊಂದು ಬರ್ಕುಂ ಬರ್ಪೀ
ಗ್ರೀಷ್ಮರ್ತುವಿನೊಳಧಿಕಮ
ದೋಷ್ಮಮದಂ ಕಂಡು ನಂಬಿಮಿನ್ನುೞಿದುದುಮಂ || ೬೫

ವ || ಎಂದು ಬೆಸಸುವುದುಮನಂತರಂ ತದೀಯಪಾದಪದ್ಮಂಗಳಂ ಪದ್ಮನಾಭಂ ಸನಾಭಿಜನ
ಸಮೇತಂ ಬೀೞ್ಕೊಂಡು ಬಂದು ನಿಜರಾಜಧಾನಿಯಂ ರತ್ನಸಂಚಯಮಂ ಪೊಕ್ಕು
ರತ್ನತ್ರಯಾಲಂಕೃತಂ ಸುಖದಿನಿರ್ಪನ್ನೆಗಂ-

ಮ || ಸ್ರ || ಅತಿತಪ್ತೋದ್ದೃಪ್ತಧೂಳೀಪಿಹಿತಮಹಿತಳಂ ತುಂಗವಾತೂಳಿಕಾಲಿಂ
ಗಿತರೋದೋಮಂಡಲಂ ಪ್ರೋಚ್ಚಲಿತಮರುಮರೀಚಿವ್ರಜವ್ಯಾಪ್ತದಿಕ್ಸಂ
ತತಿ ಬಂದತ್ತಂದಗುರ್ವಿಂ ಬಗೆಗೆ ಪಡೆದಮೋಘಂ ಸಮುದ್ಧೂತಮಾಘಂ
ಹೃತನದ್ಯೌಘಂ ವಿಮೇಘಂ ಜನಿತಜನಮನೋಗ್ಲಾನಿದಾಘಂ ನಿದಾಘಂ || ೬೬

ನದನದ್ಯೌಘಾಂಬುವಂ ಪೀರ್ದೆಳೆ ನೆಱೆಯದೆ ಬಾಯ್ವಿಟ್ಟವೊಲ್ ಬೀಡೆಗಳ್ ಪ
ರ್ವಿದುವುಷ್ಣಾಂಶುಪ್ರಭಾಮಂಡಲದ ಪುದುವಿನಿಂ ಬೆಂದವೋಲಾಗಸಂ ಕಂ
ದಿದುದಾದಂ ದಿಗ್ವಧೂಸಂತತಿಯೊದವಿದ ತಾಪಕ್ಕೆ ಮೆಯ್ಯಾನದಳ್ಪಂ
ದದೆ ಭೇರೀರಾವಮುರ್ವಿದುದು ದೆಸೆಗಳೊಳೇಂ ಗ್ರೀಷ್ಮಮಾದತ್ತೊ ಭೀಷ್ಮಂ || ೬೭

ಮ || ವಿ || ನಯನೌಘಚ್ಛಲದಿಂದೆ ನೈದಿಲೆಸಳಂ ಶಕ್ರಂ ಮುಸುಂಕಿಟ್ಟನೈ
ದೆ ಯಮಂ ಛಾಯೆಯನೊಂದಿನಿತ್ತಗಲದಿರ್ಪಂ ಪಾಶಹಸ್ತಂ ಪಯೋ
ಧಿಯನಾಶ್ರೈಸಿದನಾವಗಂ ತುಹಿನಭೂಮೀಧ್ರಕ್ಕೆ ಸಾರ್ದಂ ಹರ
ಪ್ರಿಯನಾವರ್ತಿಸೆ ತಳ್ತು ನಾಲ್ದೆಸೆಯುಮಂ ಗ್ರೀಷ್ಮಪ್ರತಾಪೋದಯಂ || ೬೮

ಮ || ಸ್ರ || ಜ್ವಲನೋಷ್ಮಗ್ರೀಷ್ಮತಾಪಕ್ಕಗಿದಡವಿಗಳೊಳ್ ಬೈಗುವೊೞ್ತಪ್ಪಿನಂಪ
ಲ್ವಲಶಯ್ಯೋದ್ದೇಶಮಂ ಪೊರ್ದಿದುದಿರದೆ ಮುಹುಶ್ಶೃಂಗನಿಸ್ತಾಡನಪ್ರೋ
ಚ್ಛಲಿತಾಂಭಶ್ಶೀಕರಂ ಸೈರಿಭವಿಸರಮಗಾಧಸ್ರವಂತೀಹ್ರದಾಂತ
ರ್ಜಲದೊಳ್ ನಿಷ್ಕಂಪಿತಾಂಗಂ ಮುೞುಗಿದುದು ಬಹಿಃಪುಷ್ಕರಂ ಹಸ್ತಿಯೂಧಂ || ೬೯

ಬಿಡದಿನ್ನುಂ ತನ್ನನೆಮ್ಮನ್ವಯದ ಗಜಮವೆಂಟುಂ ಕೊರಲ್ಗೊಂಡು ಪೊತ್ತಿ
ರ್ದೊಡಮೆಮ್ಮೊಳ್ ಕಾಯ್ಪನಿಂತೀಯವನಿ ಮೆಱೆದಪಳ್ ಮಾಣದೆಂದೆಂದು ಪುಯ್ಯ
ಲ್ಗುಡುವಂತಾತ್ಮಾಗ್ರಹಸ್ತಂಗಳೊಳಿನಕಿರಣೋದ್ಭೀತಿಯಿಂ ಪಲ್ಲವಂಗ
ಳ್ವಿಡಿದುಗ್ರಗ್ರೀಷ್ಮದೊಳ್ ಸಾಮಜವಿತತಿ ತೊೞಲ್ದತ್ತು ವಾರ್ವಾಂಛೆಯಿಂದಂ || ೭೦

ಚಂ || ಉರಿವ ನಿದಾಘತಾಪದೊಳೆ ಮೇರುನಗಂ ಪೊೞೆವೋಗೆ ಸುತ್ತಲುಂ
ಕರಗಿ ಬೞಿಕ್ಕಿಳಾವಳಯದೆಣ್ದೆಸೆಗಂ ನೆಱೆ ಸೂಸಿ ಕಾೞ್ಪುರಂ
ಬರಿದು ಬಿಲಸ್ಥಲಂಗಳೊಳಪೊಕ್ಕುೞಿದಿರ್ದುದದಲ್ಲದಂದು ಪೇೞ್
ಜರಗಿನ ಪೊಂಗಮೀ ನೆಲಕಮಾವುದೊ ಸಂಗತಿವೆತ್ತಕಾರಣಂ || ೭೧

ಕಂ || ಬೇಸಗೆಯ ಬಿಸಲೊಳಾಕೈ
ಲಾಸನಗಂ ನೆಱೆಯೆ ಕರಗಿ ಕಣ್ಗೆಟ್ಟು ಕರಂ
ಸೂಸಿ ಪರಿದಪುದು ದೆಸೆಗೆನೆ
ಮಾಸರಮಾಗಿರ್ದುವೊಗೆದ ಮೃಗತೃಷ್ಣಿಕೆಗಳ್ || ೭೨

ಬಿಸಿಲೞುರೆ ಕರಗಿ ಹರಿದ
ಶ್ಮಸಾರಮಂ ಗಿರಿಯ ನಿರ್ಝರಂಗೆತ್ತೇಂ ಚುಂ
ಬಿಸಿ ಚಂಚು ಬೇಯೆ ತಲೆಬಿದಿ
ರ್ದಸುವರೆಯಾದುದೊ ತೃಷಾರ್ತನೊಂದು ಮಯೂರಂ || ೭೩

ಕಡುವಿಸಿಲ ಕಾಯ್ಪಿನಿಂ ಬಿದು
ವೊಡೆದುಗೆ ಬಿಸುಮುತ್ತು ಸೋರ್ವ ಸೀರ್ಪನಿಗೆತ್ತೊಂ
ದೆಡೆಮಡಗದೆ ನೊಣೆದು ನವಿಲ್
ಮಿಡುಕಿದುದತಿತೃಷ್ಣೆಯೀಗುಮೆರ್ದೆಗದವೞಲಂ || ೭೪

ಪೞು ಬೇಗೆವೋಗೆ ತನ್ನಯ
ನೆೞಲನೆ ಬೇಱೊಂದುಗೆತ್ತು ಸಾರ್ವಳಿಪಿಂದಂ
ಸುೞಿದೆಡಕಂ ಬಲಕಂ ಬಸ
ವೞಿದುದು ಬೇಸಗೆಯ ಬಿಸಿಲೊಳೊಂದಿಭಕಳಭಂ || ೭೫

ಚಂ || ಬಿಸಿಲೊಳೆ ಬಿಬ್ಬರಂ ಬಿಱಿದ ಮಸ್ತಕಶುಕ್ತಿಕೆಯಿಂದೆ ಮುತ್ತು ಮುಂ
ದೆಸೆ ಕವಿತಂದೊಡಾಂತಿರುತೆ ನೋವುಮನಿಂತಿದಪೂರ್ವತೋಯಭೃ
ದ್ವಿಸರದೆ ವಾಃಕಣಂಗಳುಗುತಂದಪುವೆಂದೆ ಪೊಡರ್ಪುಗೆಯ್ದು ಪೂ
ರಿಸುವಳಿಪಿಂದೆ ಪುಷ್ಕರಮನೆತ್ತಿದುದಂದು ನಭಕ್ಕದೊಂದಿಭಂ || ೭೬

ಕಂ || ಪರಿಪೂರ್ಣಗರ್ಭಭರದಿಂ
ಬರಲಾಱದೆ ನಿಂದೊಡೈದಿ ನದಿಯಂ ಜಲಮಂ
ಪಿರಿದೂಡಿ ಬಂದು ತೆಗೆತೆಗೆ
ದಿರದೆಱೆದುದು ಕರಣಿಯಿಂದೆ ಕರಿಣಿಗಿಭೇಂದ್ರಂ || ೭೭

ಚಂ || ಒದವಿದ ಬೆಟ್ಟ ಬೇಸಗೆಯ ಕೂರ್ವಿಸಿಲರ್ವಿಸೆ ಬೆರ್ಚಿ ವಾಯುವೇ
ಱಿದ ಹರಿಣಂ ಸಮುತ್ಪ್ಲುತದಿನಿಂದುವ ಬಿಂಬವ ನೋಡಿ ಪೊಕ್ಕು ಮ
ಧ್ಯದೊಳೊಸಱುತ್ತುಮಿರ್ಪ ಸುಧೆಗಂ ಕುಳಿರ್ವಾಲ ನೆೞಲ್ಗಮಲ್ಲಿ ಪೋ
ಗದೆ ನೆಲಸಿರ್ದುದಲ್ಲದೊಡದೆಲ್ಲಿಯದೇಣಶಶಾಂಕಸಂಗಮಂ || ೭೮

ಉ || ಭಾವಿಸಿ ನೋಡಿ ದೂರದೊಳೆ ಕಂಡು ವನಾಂತರದೊಳ್ ನಿಪಾನಪಂ
ಕಾವಿಳವಾರಿಯಂ ಹರಿಣಿಯೊಂದತಿತುಚ್ಛಮನಲ್ಲಿಗುಷ್ಣತೃ
ಷ್ಣಾವಶಮಂದಮಂದಗತಿ ಬರ್ಪನಿತರ್ಕಿನತಾಪದಿಂದೆ ತ
ಜ್ಜೀವನಮುಂ ಮೃಗಾಂಗನೆಯ ಜೀವನಮುಂ ತವುತಂದುವೊರ್ಮೊದಲ್ || ೭೯

ಚಂ || ಒದವಿದ ಧೂಳಿಯಾಗವಗೆಯ ಧೂಳಿವೊಲಿರ್ದುದು ಬೆಟ್ಟು ಸುಟ್ಟ ಸು
ಣ್ಣದ ಕಱಿಗಲ್ಗಳೊಟ್ಟಿಲೆನಿಸಿರ್ದುದು ನೀರಱಲಿಂ ಸರಸ್ತಟಾ
ಕದ ಶಫರಾಳಿ ಕುತ್ತೆಸಱ ಮೀನವೊಲಿರ್ದುದು ತಾಱಿ ತಳ್ತು ಪ
ರ್ವಿದ ಪೞುವಗ್ನಿಯುಂಡುೞಿದ ಕಾಂಡವದಂತೆವೊಲಿರ್ದುದಾವಗಂ || ೮೦

ಪೆಡೆಯ ಮೊದಲ್ಗೆ ತಂದಡರೆ ಮಂಡಳಿಸಿತ್ತಹಿ ಶೇಷಕಾಯಮಂ
ಕೊಡೆವಿಡಿದಂತಲರ್ಚಿದುದು ಸೋಗೆಯನೋವದೆ ಸೋಗೆ ಪೀರ್ದುದೋ
ಗಡಿಸದೆ ಪೀರ್ವ ನಾಲಗೆಯ ಬಿಂದುವಿನಂದೆರ್ದೆಯಾಱಿ ಸಿಂಗಮಿಂ
ತುಡುಗದದೇನಲಭ್ಯತರಮೋ ನೆೞಲುಂ ಜಳಮುಂ ನಿದಾಘದೊಳ್‌ || ೮೧

ಉ || ನೆತ್ತಿಯೊಳಾವಗಂ ತಳೆದ ಬಾಂದೊಱೆ ಮಾಣದೆ ಭಾಳಚೂಳದೊಳ್‌
ಪತ್ತಿಸಿದಾಹಿಮಾಂಶುಕಲೆಯಪ್ಪಿದ ಹೈಮವತೀಲತಾಂಗಮೊ
ಪ್ಪುತ್ತಿರೆಯುಂ ಪೊದೞ್ದುರಿವ ಬೇಸಗೆಯುಮ್ಮೆಗೆ ಬೆರ್ಚಿ ರೌಪ್ಯಭೂ
ಭೃತ್ತಟನಂದನಾವಳಿಯ ತಣ್ಬುೞಿಲಂ ಬಿಡನೊರ್ಮೆಯುಂ ಮೃಡಂ || ೮೨

ಮ || ವಿ || ತನುಪಂಕಾಗ್ರಮುಹುರ್ಲುಠಚ್ಛಫರಮಾಬದ್ಧಾಶ್ಮಸಂಧ್ಯಂತರಾ
ಳನಿವಿಷ್ಟೋರುಕುಳೀರಕಂ ತಳತಟೀನಿರ್ಮಗ್ನಕೂರ್ಮಂ ಚಿರಾ
ಭ್ಯನುಸಂಧಾನವಿನಾಶದೀನಮುಖಹಂಸಂ ಮ್ಲಾನಕಲ್ಹಾರಕೋ
ಕನದಂ ಕಣ್ಗಿೞಿದಾಯ್ತು ತತ್ಸಮಯದೊಳ್‌ ಶುಷ್ಯತ್ಸರಸ್ಸಂಚಯಂ || ೮೩

ಮ || ಸ್ರ || ಹಿಮತಾಂಬೂಲೋರುರಾಗಾಧರಮದೃಢನಿತಂಬಾಂಬರಂ ತಾಲವೃಂತೋ
ತ್ಥಮರುದ್ವ್ಯಸ್ತಾಲಕಂ ನಿಸ್ಸೃತಮಧುಲವಸಾರ್ದ್ರೋದ್ಗಮಾಲಂಬಿಕೇಶಂ
ವಿಮಲೋದ್ಯದ್ಯಂತ್ರಧಾರಾಜಲಕಲುಪಿತನೇತ್ರಾಂಜನಂ ಚಂದನಾಪಾಂ
ಡಿಮಗಾತ್ರಂ ಗ್ರೀಷ್ಮಸಾಯಂಸಮಯದೊಳೆಸೆದತ್ತಂದು ಬಾಲಾಕಲಾಪಂ || ೮೪

ವ || ಅಂತು ಬಂದ ಘರ್ಮಸಮಯದೊಳ್ ಸಮಯೋಚಿತಹಿಮಕರಾಯಮಾನಕಾಯ ಮಾನದೊಳಗೆ ಕತಿಪಯಪರಿಜನಪರಿವೃತನೊಂದು ದಿವಸಂ ಪ್ರಥಮಯಾಮದೊಳ್ ಮಹೀಪಾಲಂ ಲೀಲೆಯಿಂದಿರ್ಪನ್ನೆಗಂ-

ಚಂ || ಮುರಿದ ಕೊರಲ್ಗಳಿಂ ದೆಸೆಯನಾಲಿಸೆ ದೀವದ ಹುಲ್ಲೆವಿಂಡು ಕ
ತ್ತರಿಸಿರೆ ಮೇಪುವಿಟ್ಟು ಕಿವಿಯಂ ಹಯಸಂತತಿ ಕರ್ಣತಾಳವಿ
ಸ್ಫುರಿತಮನೊಕ್ಕು ಕೇಳೆ ಗಜರಾಜಿ ಲಯಾಂತಕಘೋಷಭೀಷಣಂ
ಪುರದೊಳಗುಣ್ಮಿದತ್ತು ಭಯವಿಹ್ವಲಪೌರಕೃತಂ ಮಹಾರುತಂ || ೮೫

ಪುಗು ಪುಗು ಪೋಗು ಪೋಗಡರೆಡರ್ ಗೃಹಕೂಟಮನಕ್ಕಟಕ್ಕಟಾ
ತೆಗೆ ತೆಗೆ ಮಕ್ಕಳಂ ಬಿಡದೆ ಕೂಗಿಡು ಕೂಗಿಡಡಂಗಡಂಗು ಮಂ
ದಿಗೆ ಮುನಿದೆತ್ತಿತೆತ್ತಿತದೆ ಕೊಂದುದು ಕೊಂದುದು ಬಂದುದೆತ್ತಣ
ಚ್ಚಿಗಮೆಮಗೆಂದು ಬಾಯೞಿವ ಭೀರುಗಳಬ್ಬರಮಾದುದುಬ್ಬರಂ || ೮೬

ವ || ಆಗಳರಸನಿದೇನೆಂಬುದುಂ ಪ್ರತೀಹಾರನೊರ್ವನತಿತ್ವರಿತಗತಿಯಿಂ ಪೋಗಿ ಬಂದು-

ಉ || ದೇವ ಮದೇಭದಾಕೃತಿಯನಾಂತು ಕೃತಾಂತನೆ ಬಂದನೆಂಬ ರೌ
ದ್ರಾವಹಮಪ್ಪುದೊಂದು ಗಜಮೆತ್ತಣಿನಕ್ಕೆ ಪುರಕ್ಕೆ ಬಂದು ಪೊ
ಕ್ಕೋವದೆ ಮರ್ತ್ಯಸಪ್ತಿಕರಭದ್ವಿಪಸೈರಿಭರಾಸಭಾದಿಜೀ
ವಾವಳಿಯಂ ಕೊಲುತ್ತೆ ಬರುತಿರ್ದಪುದಂತಱಿನಾಯ್ತು ಸಂಭ್ರಮಂ || ೮೭

ವ || ಎನಲೊಡಂ ಮುನಿವಚನದಮೋಘತೆಗೆ ಮನದೊಳ್ ಮುದಮನಪ್ಪುಕೆಯ್ದು ಅದಂ
ನೋೞ್ಪಿನೆಂದರಮನೆಯಂ ಪೊಱಮಟ್ಟು ಪಟ್ಟಮಾರ್ಗದಿಂ ಬರ್ಪನ್ನೆಗಂ ತೊಟ್ಟನೆ
ಕಟ್ಟಿದಿರೊಳ್ ಕಂಡು-

ಚಂ || ಪಸರಿಪ ಸಂಜೆಯೋ ಕಿವಿಯ ಕೆಂಬೆಳಗೋ ತಮಮೋ ಮದಾಂಬುವೋ
ಮಿಸುಗುವ ತಾರೆಯೋ ಪೊಳೆವ ದಿಟ್ಟಿಯೊ ರಾಹುವೊ ಕೈಯೊ ಮೇಣಿದಾ
ಗಸಮೊ ಗಜೇಂದ್ರಮೋ ಕೊಱೆಯೊ ಕೋಡೊ ವಿಚಾರಿಸೆ ವಿಸ್ಮಯಂ
ಮನಕ್ಕಸದಳಮೆಂದು ನೀಡುಮವನೀಪತಿ ನಾಡೆ ಮರಳ್ದು ನೋಡಿದಂ || ೮೮

ವ || ಅಂತು ನೋೞ್ಪಾಗಳ್-

ಕಂ || ಘನಕುಂಭಕೂಟಸಂಘ
ಟ್ಟನದಿಂದಲ್ಲೊಕ್ಕ ತಾರಕಾವಳಿ ಮೊಗದೊ
ಡ್ಡಿನೊಳಲ್ಲಲ್ಲಿಗೆ ನೆಲಸಿ
ತ್ತೆನೆ ಸುಂದರಮಾಯ್ತು ಬಿಂದುಜಾಲಕಮದಱೂ || ೮೯

ಎರಡುಂ ಕಟದಿಂದೊಗೆದನ
ವರತಂ ದಾನಾಂಬುಧಾರೆ ಮುಸಲಸ್ಥೂಲಂ
ಸುರಿತರುತಿರೆ ಕರಿ ಕಟ್ಟಾ
ಸುರಮಾದುದು ಕಣ್ಗೆ ಮೂಱುಕೈಯಾನೆಯವೋಲ್ || ೯೦

ಅತಿತರಳಕರ್ಣತಾಳಾ
ಹತಿಗಳ್ಕಿ ಕಪೋಲಯುಗಳದಿಂದೊಗೆವ ಮಧು
ವ್ರತನಿಚಯದ ನಿನದಮದೇಂ
ರುತಿಯಂ ನೆನೆಯಿಸಿತೊ ಮೇಗೆ ಮದಡಿಂಡಿಮದಾ || ೯೧

ವಸುಧೇಶನ ಕಣ್ಗೆನಸುಂ
ಮಿಸುಗುವ ಪೊಸಮಸೆಯ ಪೊನ್ನ ಕೂರಂಕುಸವಾ
ಳಿಸಿ ಬರಿಯ ಬೀರಗಚ್ಚೆಯೊ
ಳೆಸೆದುದು ಕಾರ್ಮುಗಿಲ ಕೆಲದ ಕುಡುಮಿಂಚಿನವೊಲ್ || ೯೨

ಉ || ಒಟ್ಟಿದ ಬೆನ್ನ ಮಣ್ಣೊಳೊಗೆದತ್ತೆನೆ ಪೆರ್ದೊಡೆ ಮುಟ್ಟೆ ತೀವಿ ಕ
ಣ್ಗಿಟ್ಟಳಮಾದುವಂದು ಸಿರಿಯಂತಿರೆ ತೋಲೊಳಗರ್ದುವಾವಗಂ
ಕಟ್ಟಿದ ಮುಟ್ಟು ಬಾಹಿರಿಗೆ ಕಿೞ್ತೊಡವಂದುದು ನೆಟ್ಟನೊರ್ಮೆಯುಂ
ಬಿಟ್ಟಿರದಾಗಿಯುಂ ಮದದೊಳೀಕರಿ ತಪ್ಪದು ಸಾರ್ವಕಾಲಿಕಂ || ೯೩

ವ || ಅದಲ್ಲದೆಯುಂ-

ಕಂ || ಬೀಱಳವಟ್ಟು ಬೆಳ್ಪೆಸೆವ ಕೊಂಬು ನಖಾಗ್ರದಿನತ್ತ ಮತ್ತೆ ಕೈ
ಮೀಱಿದ ಕೈ ಕನಲ್ವ ಕಿಡಿವಣ್ಣದ ಕಣ್ ಬೆಳರ್ಗೆಂಪನಾವಗಂ
ಬೀಱುವ ಕರ್ಣಮೊಡ್ಡಿ ಕಡೆದಂದದೊಳೊಂದಿದ ಕುಂಭಕೂಟದು
ತ್ತಾಱಿಲನೇಕಮುನ್ನತಿಯಿದಾನಱಿವಾನೆಯೊಳಿಲ್ಲಮೆಲ್ಲಿಯುಂ || ೯೪

ಕಂ || ಎಂದು ವಿಚಾರಿಸುವೊಡಮೀ
ಯಂದದಿಭಂ ಬನದೊಳಿಲ್ಲ ಸಾಹಣದೊಳಮಿ
ಲ್ಲೆಂದರಸನಾನೆಯಂ ತಾಂ
ನಿಂದೆನಸುಂ ನೋಡಿ ನೋಡಿ ವಿಸ್ಮಯಮುತ್ತಂ || ೯೫

ವ || ಅಂತು ಮದೋಗ್ರಮುಂ ಅಖಿಲಲಕ್ಷಣಸಮಗ್ರಮುಮಾದ ಗಜಪತಿಯೊಳುಪಲಾಲ
ನೋಕ್ತಿಗಳಂ ಪ್ರಯೋಗಿಪುದುಂ ಮಂತ್ರವಾದಿಯಂ ಕಂಡ ಮಹಾಗ್ರಹದಂತೆ ಮದಾ
ಟೋಪಮಂ ಬಿಸುಟ್ಟು ಕರ್ಣಜಾಹಮನೆೞಲೆವಿಟ್ಟಾಲಿಸುವುದುಂ ಬೆಸನಿತ್ತುಮಱಿದು
ಪತ್ತೆಸಾರ್ದು ಸೂಸಕಂಬಿಡಿದೊಂದು ಮುಟ್ಟಿಯೊಳಗೆ ಬೆಂಗೆವಾಯ್ದು-

ಮ || ಸ್ರ || ವಿಸಟಂಬರ್ಪಾನೆಯಂ ವಾಕ್ಪ್ರಣಿಧಿಯೊಳೆ ಬೆಸಂಬೆತ್ತು ಕಾಲ್ಗೋದು ಕೂರಂ
ಕುಸದಿಂದಂಗುಷ್ಠದಿಂ ಪಾರ್ಷ್ಣಿಯನಳವಡಿಸುತ್ತುಂ ನಿಷಾದಿವ್ರಜಂ ಬೆ
ಕ್ಕಸಮುತ್ತಿರ್ಪಂತು ಬಂಬಲ್ವರಿಯಿಸಿ ದೆಸೆಗೆಲ್ಲಂ ಬೞಿಕ್ಕುಯ್ದು ನೀರೂ
ಡಿಸಿದಂ ಕಂಭಕ್ಕೆ ತಂದಂ ಮಗುೞಿ ಗಜಕಳಾಖಂಡಲಂ ಪದ್ಮನಾಭಂ || ೯೬

ಉ || ಆರಯೆ ಬೇರ ಬೆಂಜನದ ಧೂಪದ ಮರ್ಮದ ಮಂತ್ರದಾಸೆಯಂ
ಪಾರದೆ ನಪಿಂದೆ ಕೊಟ್ಟು ಪಿಡಿಯಂ ಕೆಲದೊಳ್ ಬಿದಿಯಂ ಮೊಗಕ್ಕೆ ಮ
ತ್ತಾರಯಲೆಯ್ದೆ ಪೇೞದೆ ನೃಪಾಲಕನೀತೆಱದೊಂದೆ ಮೆಯ್ಯೊಳಾ
ಧೋರಣವೃತ್ತಿಯಂ ಮೆಱೆದನಾವನೊ ದೇವ ಮಹೀವಿಭಾಗದೊಳ್ || ೯೭

ವ || ಎಂದಾನೆವಾಂಗಿನವರೆಲ್ಲಮೊಲ್ಲನುಲಿದು ಕೊಂಡುಕೊನೆವಿನೆಗಮಾರೋಹಕೌಶಲಮಂ ವಿಧಾನಕೌಶಲಮಂ ಮೆಱೆದುಮಪೂರ್ವಭದ್ರಗಜಸಮಾಸಾಧನಾಹ್ಲಾದಹೃದಯನಾಗಿ ದರ್ಶನದಿನದಂದು ಪದ್ಮನಾಭಮಹಾರಾಜಂ ಸುವರ್ಣನಾಭಯುವರಾಜಂ ಬೆರಸು ಆಸ್ಥಾನಮಂಡಲಮಧ್ಯಸ್ಥಿತನಾಗಿರ್ಪುದುಮೊರ್ವಂ ದೌವಾರಿಕನಿವೇದಿತಾಗಮದರ್ಶನಾ ಗ್ರಹನುಂ ಲಬ್ಧಭೂಪಾಲಕಾನುಗ್ರಹನುಂ ಪರಿಗೃಹೀತಪ್ರಧಾನೋಚಿತವೇಷವಿಗ್ರಹನು ಮಾತ್ಮಾಯತ್ತ ಸಂಧಿವಿಗ್ರಹನುಮಪ್ಪ ದೂತಮುಖ್ಯಂ ಬಂದು ವಿನಯವಿನಮಿತ್ತೋತ್ತ ಮಾಂಗನುಚಿತಾಸನದೊಳಿರ್ಪುದುಮಿನಿತಾನುಂ ಬೇಗದಿಂ ಯುವರಾಜಭ್ರೂಪಲ್ಲವ ಪ್ರೇರಿತಂ ಪುರುಭೂತಿಯೆಂಬ ಮಂತ್ರಿವರನಾತನಂ ನೋಡಿ-

ಕಂ || ಎಲ್ಲಿಂದೇಂ ಕಾರಣದಿಂ
ದಿಲ್ಲಿಗದಾರ್ ಕಳುಪೆ ಬಂದೆಯೆಂಬುದನವನೀ
ವಲ್ಲಭನಱಿವಂದದಿನಱಿ
ಪೆಲ್ಲಮನೆನೆ ದೂತಮುಖ್ಯನಂದಿಂತೆಂದಂ || ೯೮

ಮ || ವಿ || ಪೃಥುಸತ್ವಂ ಸಫಲೀಕೃತಾಖಿಲಕಳಾವಿನ್ಮರ್ತ್ಯಮಾಲಾಮನೋ
ರಥನುನ್ಮೂಲಿತಶತ್ರುವರ್ಗನನುರಕ್ತಾಶೇಷತಂತ್ರಂ ಜಗ
ತ್ಪ್ರಥಿತಕ್ಷಾತ್ರಗುಣಂ ಭವತ್ಪದಪಯೋಜಾತಾಂತಿಕಕ್ಕಟ್ಟಿದಂ
ಪೃಥಿವೀಪಾಲನೃಪಾಲನುಜ್ಜ್ವಲಯಶಂ ಮತ್ಸ್ವಾಮಿ ಸತ್ಪ್ರೇಮದಿಂ || ೯೯

ವ || ಅದರ್ಕೆ ಕಾರಣಮಾವುದೆಂದೊಡೆ-

ಮ || ವಿ || ಹರಿನೀಲಚ್ಛವಿ ರೋಚನಾರುಚಿರನೇತ್ರಂ ವೃತ್ತಗಾತ್ರಂ ಪರಂ
ಗುರುಕುಂಭಂ ಪುರುವಂಶನಾಯತಕರಂ ಬದ್ಧೋದರಂ ದಕ್ಷಿಣೋ
ಚ್ಚರದಂ ಕ್ರೋಡನಿತಂಬನಂಬುದರವಂ ವ್ಯಾಲಂಬಿವಾಲಂ ಕ್ಷರ
ತ್ಕರಟಂ ಪ್ರಾಂಶುಮುಖಂ ದಶದ್ವಯನಖಂ ಕ್ರೋಧೋದ್ಧುರಂ ಸಿಂಧುರಂ || ೧೦೦