ತರದಿಂದೆ ಮೂಱು ಸೂೞ್ವರ
ಮರಲಂಬಂ ತದಧಿಪತಿಯ ಕಣ್ಗಂ ಮನಕಂ
ಗೆರೆಯಾಣೆಯಿಟ್ಟ ರೇಖೆಗ
ಳಿರವಂ ವಳಿರೇಖೆ ತಳೆದುವಳಿಕುಂತಳೆಯಾ || ೧೦೧

ಅಂಗಭವಂ ರೂಢಿಯ ರೂ
ಪಿಂಗಂ ಸೊಬಗಿಂಗಮಿಟ್ಟನಮಳ್ಗಳಸಮನು
ತ್ತುಂಗಮನೆನಿಪುದು ಲಲಿತಲ
ತಾಂಗಿಯ ನೀರಂಧ್ರಬಂಧುರಸ್ತನಯುಗಳಂ || ೧೦೨

ಕೋಮಳೆಯ ಕನಕಕಾಂಚೀ
ದಾಮದ ಕೆಂಬರಲ ನುಣ್ಗದಿರ್ ತಿಂಬಿರೆ ನಾ
ಭೀಮಂಡಳಮಿೞಿಸಿದುದಭಿ
ರಾಮತೆಯಿಂದುಳ್ಳರಲ್ದ ಬಂದುಗೆಯರಲಂ || ೧೦೩

ಒದೆದಸುಕೆಗಮಿನಿಯಂಗಂ
ಮೃದುಪಲ್ಲವಮಂ ಸರಾಗಭಾವಮನೀವೀ
ಸುದತಿಯ ಚಳನತಳಕ್ಕತಿ
ಮೃದುತ್ವರಕ್ತತ್ವಮುಚಿತಮೆನೆ ಸೊಗಯಿಸುಗುಂ || ೧೦೪

ಭ್ರೂಚಾಪಕೇಶಪಾಶವಿ
ಳೋಚನಶರದಶನಕುಳಿಶಕುಚಚಕ್ರವಿಳಾ
ಸೋಚಿತೆ ಮಾದೇವಿ ಮನೋ
ಭೂಚಕ್ರಿಯ ಜಯನಶಾಲೆಯಂದದಿನಿರ್ಪಳ್ || ೧೦೫

ವ || ಅದಲ್ಲದೆಯುಂ-

ಉ || ಕಂಪನೆ ಪೂಗಳೊಳ್ ತೆಗೆದಗುರ್ವಿಸೆ ಸೂಡುವಲಕ್ತಕಂಗಳೊಳ್
ಕೆಂಪನೆ ಕೊಂಡು ಕೇಸಡಿಯನೂಡುವ ರತ್ನವಿಭೂಷಣಂಗಳೊಳ್
ಸೊಂಪನೆ ತಾನಗಲ್ಚಿ ತೊಡವಾಗಿರೆ ಮಾಡುವಲಂಪು ಚಿತ್ತದೊಳ್‌
ಪೊಂಪುೞಿಯೆಂದೊಡೇವೊಗೞ್ವೆನಾ ಲಲಿತಾಂಗಿಯ ಸೌಕುಮಾರ್ಯಮಂ || ೧೦೬

ಶಾ || ಲೋಕಾಲೋಕನಪುಣ್ಯಪುಂಜಮಿದು ವೇಧೋರೂಪನಿರ್ಮಾಣವಿ
ದ್ಯಾಕೀರ್ತಿಪ್ರಭವನ್ನಿಧಾನಮಿದು ಕೌಮೋದ್ದಾಮಸಾಮ್ರಾಜ್ಯಲ
ಕ್ಷ್ಮೀಕಾಂತಾ ನವನಾಟ್ಯರಂಗಮಿದು ಸತ್ಸೌಭಾಗ್ಯಮಾಣಿಕ್ಯಮಾ
ಳಾಕೋಶಂ ದಲಿದೆಂಬ ಪೆಂಪುವಡೆದತ್ತಾಕಾರಮಾಕಾಂತೆಯಾ || ೧೦೭

ಚಂ || ವಚನದೊಳಿಲ್ಲ ಪೆರ್ಮೊಲೆಯೊಳಲ್ಲದೆ ಕರ್ಕಶವೃತ್ತಿ ವಕ್ರಿಮಂ
ಸುಚರಿತದೊಳ್ ವಿಚಾರಿಸುವೊಡಿಲ್ಲಳಕಾಳಿಯೊಳಲ್ಲದೆಲ್ಲಿಯುಂ
ವಿಚಳತೆಯಿಲ್ಲ ಚಿತ್ತದೊಳಪಾಂಗದೊಳಲ್ಲದೆ ಸಾರಸದ್ಗುಣೋ
ಪಚಯದೊಳಿಲ್ಲ ಮಾಂದ್ಯಮದು ಯಾನದೊಳಲ್ಲದೆ ತಲ್ಲತಾಂಗಿಯಾ || ೧೦೮

ಕಂ || ಅಱಿವಿಂಗೆ ಜವ್ವನಂ ಕ
ಣ್ದೆಱೆದುದು ಜವ್ವನಕೆ ಪೊಚ್ಚಪೊಸಸಿರಿಯೆಸಕಂ
ನೆಱೆದುದು ಸಿರಿಗಂ ಪಿರಿದುಂ
ಮಱುಕಂ ದೊರೆಕೊಂಡುದಾಕೆಯಂ ಪೊರ್ದಲೊಡಂ || ೧೦೯

ವ || ಮತ್ತಮಾಜಗತ್ತ್ರಯಸವಿತ್ರ ಸವಿತೃಕಾಂತೆಯಂತೆ ಕಮಳೋತ್ಸವಕಾರಿಣಿಯುಂ ವಸಂತಲಕ್ಷ್ಮಿ ಯಂತೆವಿಶಿಷಟ್ಟಪಾರ್ಥಿವಕುಳೋದ್ಭವೆಯುಂ ಸಿದ್ಧಮಾತೃಕೆಯಂತೆ ಸಂತತೋಪಚಿತಕಳಾ ಕಳಾಪೆಯುಂ ನಕ್ಷತ್ರಪಙ್ಕ್ತಿಯಂತೆ ವಿವಿಧಪ್ರದೇಶೋದ್ಭವವ್ಯಂಜನೋಪರಂಜಿತೆಯುಂ ಸಮುದ್ರಲಹರಿಯಂತೆ ಅಗಣ್ಯಲಾವಣ್ಯಲಲಿತೆಯುಂ ಪ್ರತಿಪಚ್ಚಂದ್ರಲೇಖೆಯಂತೆ ಸನ್ಮಾರ್ಗ ಪ್ರವರ್ತನೆಯುಂ ದಿಗ್ಗಜಕಪೋಳಪಾಳಿಯಂತನೂನದಾನಾಧೀನೆಯುಂ ಚಾಪಲತೆಯಂತೆ ದೃಢ ಗುಣಸಂಧಾನೆಯುಂ ಮಹೇಂದ್ರಲೀಲೆಯಂತೆ ಸುಧರ್ಮಾನುವರ್ತಿನಿಯುಮೆ ನಿಪಳ್ ಅಂತುಮಲ್ಲದೆಯುಂ-

ಮ || ವಿ || ಅಕಳಂಕಾಖಿಳಶೀಳಪಾಳಿಕೆ ಜಗದ್ದೃಗ್ಭೃಂಗಮಂದಾರಮಾ
ಳಿಕೆ ಶೃಂಗಾರಸರೋಮರಾಳಿಕೆ ಕಳಾವಿದ್ಯಾನಟೀನೃತ್ಯಶಾ
ಳಿಕೆ ಚಿತ್ತೋದ್ಭವವಶ್ಯಮೂಳಿಕೆ ಜಿನೇಶೇಂದೂದಯಾದ್ರೀಂದ್ರಚೂ
ಳಿಕೆಯೆಂಬೆಂ ಪೊಗೞಲ್ಕೆ ಮತ್ತಱಿಯೆನಾನಾಲಕ್ಷ್ಮಣಾದೇವಿಯಂ || ೧೧೦

ಕಂ || ಆ ಕಾಂತೆ ಮಹಾಸೇನಮ
ಹೀಕಾಂತನೊಳೊಂದಿ ಕಲ್ಪತರುವಂ ತಳ್ತಿ
ರ್ಪಾಕಲ್ಪಲತೆಯ ತೆಱದಿನ
ನಾಕುಳಸುಖಸಂಕಥಾವಿನೋದದಿನಿರ್ಪಳ್ || ೧೧೧

ಉ || ಚುಂಬನದಿಂಪು ಸುಯ್ಯ ನಱುಗಂಪು ಮರುಳ್ಚುವ ಸೋಂಕು ಮಾತಿನೊಳ್‌
ತಿಂಬಿದ ಕೊಂಕು ವಿಭ್ರಮದಗುರ್ವು ನಿಜೇಂದ್ರಿಯವರ್ಗದುರ್ವು ತಾ
ನೆಂಬಿನಮಾಕೆಯೊಳ್ ನೆರೆದು ಸೌಖ್ಯಪರಂಪರೆಗಾತ್ಮಚಿತ್ತಮಾ
ಳಂಬನಮಾಗೆ ನಾಡೆ ತಣಿವೆಯ್ದುವನಾ ವಸುಧಾಧಿನಾಯಕಂ || ೧೧೨

ಕಂ || ನಳಿನಾಕರಮುಂ ರಮೆಯುಂ
ಜಳನಿಧಿಯುಂ ನಿರ್ಮಳೋರ್ಮಿಯುಂ ಚಂದ್ರಮನುಂ
ಕಳೆಯುಮೆಸೆವಂತೆ ಸಮಸಂ
ದಿಳೇಶನುಂ ಕಾಂತೆಯುಂ ಕರಂ ಸೊಗಯಿಸುವರ್ || ೧೧೩

ಪಾಪರಹಿತಂಗಳುರುಸುಖ
ರೂಪಂಗಳೆನಿಪ್ಪನೇಕವಿಧಕೇಳಿಗಳಿಂ
ದಾ ಪುಣ್ಯದಂಪತಿಗೆ ನಿಮಿ
ಷೋಪಮಮೆನೆ ಪೋಯ್ತನೇಕವತ್ಸರನಿಕರಂ || ೧೧೪

ವ || ಅನ್ನೆಗಮಿತ್ತಂ-

ಉ || ದೇವರ ದೇವನುರ್ವರೆಗನುತ್ತರೆಯಿಂದಿೞಿದಾ ಮಹಾದಿಸೇ
ನಾವನಿಪಾಳನಗ್ರಮಹಿಷೀಪದಸಂಸ್ಥಿತೆಯಪ್ಪ ಲಕ್ಷ್ಮಣಾ
ದೇವಿಯ ಗರ್ಭದೊಳ್ ನೆಲಸುತಿರ್ದಪನೆಂದು ಪುರಂದರಂ ಸ್ವಕೀ
ಯಾವಧಿಬೋಧದಿಂ ತಿಳಿದು ತನ್ನೊಳೆ ಸಂತಸದಂತನೆಯ್ದಿದಂ || ೧೧೫

ವ || ಅಂತು ತಿಳಿದಱುದಿಂಗಳುಂಟೆನೆ ಮುನ್ನಮೆ-
|| ಮಾಲಿನಿ ||
ಸುರಪತಿ ಜಿನಗರ್ಭಾದಾನಕಲ್ಯಾಣಲೀಲಾ
ಪರಿಕರಮನೊಡರ್ಚಲ್ವೇೞ್ವುದುಂ ಭಕ್ತಿಭಾವಂ
ಬೆರಸು ತಲೆಯೊಳಾಂತಂ ಪಾಲೆ ಮರ್ದಾದುದೆಂಬಂ
ತಿರೆ ನಲಿದು ತದೀಯಾದೇಶಮಂ ಕಿನ್ನರೇಶಂ || ೧೧೬

ವ || ಅನಂತರಂ ಚಂದ್ರಪುರಿಗೆ ವಂದು ರಾಜಮಂದಿರದೊಳ್-

ಕಂ || ಪಿರಿದುಂ ಪಂಚಾಶ್ಚರ್ಯಂ
ಬೆರಸು ಸಹಾರ್ಧತ್ರಿಕೋಟಿರತ್ನದ ಮೞೆಯಂ
ಸುರಿಯಲ್ ತೊಡಗಿದನನುದಿನ
ಮುರುಮುದದಿಂ ಮೂಱುಪೊೞ್ತಱೊಳಮೈಳಬಿಳಂ || ೧೧೭

ಒಗೆವುದು ಗಗನದೊಳೆನಲ
ಲ್ಲುಗುವುದೆ ನಿಮಿರ್ದೆಳೆಗೆ ಶಕ್ರಚಾಪೋತ್ಕರಮಾ
ವಗಮೆನೆ ಕುಬೇರಮೇಘದಿ
ನುಗುತಂದುದು ಪಂಚರತ್ನಧಾರಾಸಾರಂ || ೧೧೮

ರನ್ನದ ಮೞೆಯಿಂದಿಳೆಯ ವಿ
ಪನ್ನತೆ ಗರ್ಭಾವತಾರದಿಂದಱುದಿಂಗಳ್
ಮುನ್ನಮೆನೆ ಪೋಯ್ತು ಜಿನರಾ
ಜಂ ನೆರಪಿದ ಪುಣ್ಯದಳವದಿನ್ನೇವಿರಿದೋ || ೧೧೯

ಧರೆಗಂದಿಂ ಕೊಟ್ಟ ವಸುಂ
ಧರೆ ಮತ್ತಂ ರತ್ನಗರ್ಭೆಯೆಂಬೀಪೆಸರ್ಗಳ್
ದೊರೆವೆತ್ತುವೆಂದೊಡೇನ
ಚ್ಚರಿಯಾದುದೊ ಧನದಜನಿತಮಣಿಗಣವರ್ಷಂ || ೧೨೦

ಓರಂತೆ ಸುರಿದೊಡಂ ಮನ
ವಾರದು ರತ್ನತತಿತೀರದೆಂದೊಡೆ ತವಿಲಂ
ಸಾರದು ತಾನೆನಿಸಿದ ಭಂ
ಡಾರಕ್ಕಂ ಭಕ್ತಿಗಂ ಕುಬೇರನೆ ನೋಂತಂ || ೧೨೧

ವ || ಮತ್ತಮಾಮನುಷ್ಯಧರ್ಮನ ಬೞಿಯನೆ ಸೌಧರ್ಮೇಂದ್ರಂ ಧರ್ಮಾನುರಾಗದಿನರ್ಹ ದಂಬಿಕೆಯನನುದಿನಂ ಕೈಗೈಸಿಮೆಂದು ಹಿಮವದಾದಿವರ್ಷಧರ ಮಹೀಧರಾಧಿತ್ಯಕಾಳಂ ಕಾರಂಗಳಪ್ಪ ಪದ್ಮಾದಿಸರಂಗಳೊಳಿರ್ಪರಂ ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿಗಳೆಂ ಬಱುವರಂ ದೇವಿಯರುಮಂ ಮತ್ತಂ ಜಿನೇಂದ್ರಜನ್ಮಕಲ್ಯಾಣದೊಳ್‌ ಭೃಂಗಾರುಧಾರಿಣಿ ಯರಾಗಿಮೆಂದು ಮಣಿಮಯಾಕೃತ್ರಿಮಚೈತ್ರಗೃಹರುಚಿರಮೆನಿಪ ರುಚಕಾಚಳದ ಮೂಡಣ ದೆಸೆಯ ಕೂಟಂಗಳೊಳಿರ್ಪ ವೈಡೂರ್ಯದ ವಿಜಯೆಯುಂ ಕಾಂಚನದ ವೈಜಯಂತಿಯುಂ ಕನಕದ ಜಯಂತಿಯುಮರಿಷ್ಟದಪರಾಜಿತೆಯುಂ ದಿಕ್ವ್ಸಸ್ತಿಕದ ನಂದೆಯುಂ ನಂದನದ ನಂದೋತ್ತರೆಯುಮಂಜನ ಮೂಳಕದ ನಂದಿವರ್ಧನೆಯುಮೆಂಬ ದಿಗ್ದೇವಿಯರೆಣ್ಬರುಮಂ ಮತ್ತಂ ಮಹಾಸೇನಮಹೀವರನರಸಿಗಾದರ್ಶನಮಂ ಪಿಡಿಯಿಮೆಂದು ತನ್ಮಹೀಧರದ ತೆಂಕಣ ದೆಸೆಯ ಕೂಟಂಗಳಪ್ಪ ಮೇಘದ ಸುಪ್ರತಿಷ್ಠೆಯುಂ ಸುಪ್ರಬುದ್ಧದ ಸುಪ್ರಣಿಧಿಯುಂ ಐಂದ್ರದ ಸುಪ್ರಬುದ್ಧೆಯುಂ ವಿಮಳದ ಯಶೋಧರೆಯುಂ ರುಚಕದ ಲಕ್ಷ್ಮೀಮತಿಯುಂ ರುಚಕೋತ್ತರದ ಕೀರ್ತಿಮತಿಯುಂ ಚಂದ್ರದ ವಸುಂಧರೆಯುಂ ಸುಪ್ರತಿಷ್ಠದ ಚಿತ್ರೆಯು ಮೆಂಬೀದೆಸೆವೆಣ್ಗಳೆಣ್ಬರುಮಂ ಮತ್ತಂ ಲಕ್ಷ್ಮಣಮಹಾದೇವಿಗೆ ಗಾಯಕಿಯರಾಗಿಮೆಂದು ತತ್ಪರ್ವತದ ಪಡುವಣದೆಸೆಯ ಕೂಟಂಗಳಪ್ಪ ಲೋಹಿತಾಕ್ಷದಿಳಾದೇವಿಯುಂ ಜಗತ್ಕು ಸುಮದ ಸುರಾದೇವಿಯುಂ ಪದ್ಮದ ಪೃಥ್ವಿಯುಂ ನಳಿನದ ಪದ್ಮಾವತಿಯುಂ ಕುಮುದದ ಕಾಂಚನೆಯುಂ ಸೌಮನಸದ ನವಮಿಕೆಯುಂ ಯಶೋಭದ್ರದ ಸೀತೆಯುಂ ಸರ್ವತೋಭದ್ರ ಭದ್ರೆಯುಮೆಂಬ ಹರಿತ್ಕುಮಾರಿಕೆಯರೆಣ್ಬರುಮಂ ಮತ್ತಮಾ ವಿನಯಕಾಮಧೇನುಗೆ ಚಾಮರಮನಿಕ್ಕಿಮೆಂದು ತದವನೀಧರದ ಬಡಗಣ ದೆಸೆಯ ಕೂಟಂಗಳಪ್ಪ ಸ್ಫಟಿಕದಂಬುದೆ ಯುಂ ಅರ್ಕದ ಮಿತ್ರಕೇಶಿಯುಂ ಅಂಜನದ ಪುಂಡರೀಕಿಣಿಯುಂ ಕಾಂಚನದ ವಾರುಣಿ  ಯುಂ ರಜತದಾಸ್ಯೆಯುಂ ಕುಂಡದ ಧಾತ್ರಿಯುಂ ರುಚಿರದ ಹ್ರೀಯುಂ ಸುದರ್ಶನ ದಾಕೃತಿಯುಮೆಂಬ ಕಕುತ್ಕಾಂತೆಯರೆಣ್ಬರುಮಂ ಮತ್ತಂ ಜಗತ್ತ್ರಿತಯದೀಪಿಕೆಗೆ ನೀರಾ ಜನದೀಪಧಾರಿಣಿಯರಾಗಿಮೆಂದು ತದ್ಗಿರೀಂದ್ರದ ಐಂದ್ರೀದೆಸೆಯ ವಿಶೇಷಕೂಟಂಗಳಪ್ಪ ವಿಮಳದ ಚಿತ್ರೆಯುಂ ನಿತ್ಯಾಲೋಕದ ಕನಕಚಿತ್ರೆಯುಂ ಸ್ವಯಂಪ್ರಭದ ತ್ರಿಸರೆಯುಂ ನಿತ್ಯೋದ್ಯೋತಕದ ಸುತ್ರಾಮಣಿಯುಮೆಂಬ ವಿದ್ಯುತ್ಕುಮಾರಿಯರ್ ನಾಲ್ವರುಮಂ ಮತ್ತಮುತ್ತಮಶೀಲವತಿಗೆ ಮಹತ್ತರೆಯರಾಗಿಮೆಂದು ತನ್ನ ಗವಿದಿಕ್ಕೂಟಂಗಳಪ್ಪ ವೈಡೂರ್ಯದ ರುಚಕೆಯುಂ ರುಚಕದ ರುಚಕಕಾಂತಿಯುಂ ಮಣಿಪ್ರಭದ ರುಚಕಪ್ರಭೆಯುಂ ರುಚಕೋತ್ತರದ ಚಕ್ರಪ್ರಭೆಯುಮೆಂಬ ವಿದಿಕ್ಕನ್ಯೆಯರ್ ನಾಲ್ವರುಮಂ ಮತ್ತಮಖಿಳ ವಿದ್ಯಾಪ್ರಗಲ್ಭೆಗೆ ಗರ್ಭಶೋಧನಾದಿರಮಣೀರಹಸ್ಯವ್ಯಾಪಾರದೊಳ್‌ ನೆಗೞಿಮೆಂದು ತಚ್ಛೈಳೋಚ್ಛ್ರಯಕೃತಕಕೂಟಂಗಳಪ್ಪ ರತ್ನಕೂಟದ ವಿಜಯೆಯುಂ ರತ್ನಪ್ರಭದ ವೈಜಯಂ ತಿಯುಂ ಸರ್ವರತ್ನದ ಜಯಂತಿಯುಂ ರತ್ನೋಚ್ಛ್ರಯದಪರಾಜಿತೆಯುಮೆಂಬೀ ವಿದ್ಯು ದ್ದ್ಯುತಿಯರ್ ನಾಲ್ವರುಮಂ ಮತ್ತಮನೇಕಾಂತವಿದ್ಯಾವಿನೋದಿಗನೇಕವಿನೋದಂಗಳಂ ಸಲಿಸಿಮೆಂದು ವಕ್ಷಾರೇಷ್ಟಾಕಾರಕುಂಡಳಾದ್ಯನ್ಯನಗನಿವಾಸಿನಿಯರಪ್ಪ ಮಾಳಿಕೆ ಮಾಳಿನಿ ಕನಕದೇವಿ ಕನಕವೃದ್ಧಿ ಪುಷ್ಪಮಾಳೆ ಮಾಳಾವತಿ ಸುರಾದೇವಿ ತ್ರಿಸರೆ ಮೊದಲಾಗೆ ಪಲರುಮಮರಕಾಂತೆಯರಂ ಕಳಿಪುವುದುಮಾಕೆಯರ್ ನೂತನ ರತ್ನವೃಷ್ಟಿಯೊಡನೆ ಕಾಂತಾರತ್ನವೃಷ್ಟಿಯುಮಾದಂದದಿಂ ಸಂದಣಿಸಿ ಗಗನಮಾರ್ಗದಿನವನಿಗವತರಿಸಿ-

ಚಂ || ಪದನಖಕಾಂತಿಯಿಂ ತಳಿದ ಪೂವಲಿಯಂ ನಯನಾಂಶುವಿಂದೆ ಕ
ಟ್ಟಿದ ಪೊಸಮುತ್ತಿನಚ್ಚಮಣಿತೋರಣಮಂ ಕಚಶೋಭೆಯಿಂದೆ ದೀ
ಹದ ನವಿಲಂ ಕಳಕ್ವಣಿತದಿಂ ಗೃಹಕೋಕಿಳನಾದಮಂ ಮರು
ತ್ಸುದತಿಯರೆಯ್ದೆ ನೂರ್ಮಡಿಸುತುಂ ಪುಗುತಂದರಿಳೇಶಗೇಹಮಂ || ೧೨೨

ವ || ಅಂತು ಪೊಕ್ಕು ಮಣಿಮಯವಿಳಾಸಭವನಕ್ಕೆ ವಂದು-

ಕಂ || ಹಿಮಕರಸಂಗದೆ ಮುಗಿವುದು
ಕಮಳಕ್ಕುಚಿತಮೆನೆ ಮುಗಿದ ಕೈ ನೊಸಲೊಳ್‌ ಚೆ
ಲ್ವಮರ್ದಿರೆ ತಮತಮಗೆಱಗಿದ
ರಮರಿಯರೆಲ್ಲಂ ಜಿನಾಂಬಿಕಾಪದಯುಗದೊಳ್‌ || ೧೨೩

ವ || ಅಂತು ನಿಜಮುಖಪ್ರತಿಬಿಂಬಕದಂಬದಿಂ ಮರಕತಪ್ರಘಣದೊಳ್‌ ಪದ್ಮಪುಷ್ಟೋಪ
ಹಾರಮಂ ವಿರಚಿಸಿ ಬೞಿಯಂ ತಂತಮ್ಮ ನಿಯೋಗದಿಸುವೆಸಕ್ಕೆ ಪೊಕ್ಕೋಲಗಿಸುವಲ್ಲಿ-

ಕಂ || ಸಿರಿಯ ಕರತಳದ ಸಿತಸರ
ಸಿರುಹದ ಮೈಯ್ಸಿರಿಯಿದರ್ಕಿದೇಕಚ್ಛತ್ರಂ
ಪಿರಿದುಮೆನಿಸಿದುದು ಸುರಸುಂ
ದರಿದೇವಿಗೆ ಪಿಡಿದು ಮತ್ತಿನೇಕಚ್ಛತ್ರಂ || ೧೨೪

ಬೀಸುವ ಚಾಮರದೆಲರಿಂ
ಸೂಸುವ ಕುರುಳೋಳಿ ತೆರೆಯ ನೊರೆಗಂಬುಜದಿಂ
ದೋಸರಿಪ ತುಂಬಿವಿಂಡಿನ
ದೇಸೆಯನೊಳಕೆಯ್ದುದಾಸ್ಯದೊಳ್‌ ನೃಪಸತಿಯಾ || ೧೨೫

ಸೊಗಯಿಪ ಪೂರ್ವದಿಗಂಗನೆ
ಗಗನಶ್ರೀಗಿಂದುಕಳೆಯನೀವಂದದೆ ದೇ
ವಿಗೆ ಪೊಳೆವ ಬಿಳಿಯೆಲೆಯ ವೀ
ಳಿಗೆಯಂ ಸುರಕನ್ನೆ ನೀಡಿದಳ್‌ ಪೆಱಳೊರ್ವಳ್‌ || ೧೨೬

ರಮಣಿಯ ಮುಖಕ್ಕೆ ವೇಳೆತ
ನಮನಾಂತ ಸರೋಜದಂತೆ ತತ್ತಾಂಬೂಳ
ಕ್ಕಮರವಧುವಾಂಪ ಕಾಂಚನ
ಕಮಳಾಕೃತಿಯೆನಿಪ ಡವಕೆ ಪಡೆದುದು ಚೆಲ್ವಂ || ೧೨೭

ಒರ್ವಳ್‌ ಜಿನಜನನಿಯ ನಿಡು
ವುರ್ವಂ ಸಮಱಲ್ಕೆ ನೀಡಿದಳ್‌ ಕುಡಿವೆರಲಂ
ಗೀರ್ವಾಣಕಾಂತೆ ಕಾಮನ
ಕರ್ವಿನ ಬಿಲ್ಗರಲಸರಲನೋಲಗಿಸುವವೊಲ್‌ || ೧೨೮

ಕಾಡಿಗೆಯನೆಚ್ಚು ಮೆಲ್ಲನೆ
ಗಾಡಿಗೆ ಸುರವನಿತೆ ತೆಗೆದ ಸೋಗೆ ಬೆಡಂಗಂ
ಮಾಡಿದುದಾಕಾಂತೆಯ ಚೆ
ಲ್ವೋಡದೆಸೆವ ನೇತ್ರಪುತ್ರಿಕೆಯ ಸೋರ್ಮುಡಿವೊಲ್‌ || ೧೨೯

ಸ್ಮರಮಂಗಳದರ್ಪಣದೊಳ್‌
ವಿರಚಿಪವೊಲ್‌ ಸ್ವಸ್ತಿಕಾಂಕಮಂ ಚಂದನದಿಂ
ಬರೆದಳ್‌ ಕಪೋಲದೊಳ್‌ ಬಿ
ತ್ತರದಿಂದಂ ಪತ್ರಭಂಗಮಂ ಮತ್ತೊರ್ವಳ್‌ || ೧೩೦

ಸಸಿಯೀಕೆಯ ವದನಕ್ಕೆಂ
ತು ಸಮಂ ಪೇೞೆಂದು ತಂದು ಪಡಿದೋಱುವವೊಲ್‌
ಪೊಸಮುತ್ತಿನ ಪುಂಜದೆ ರಂ
ಜಿಸುವೋಲೆಯನಮರಿ ಪಾಲೆಯೊಳ್‌ ನಿಯಮಿಸಿದಳ್‌ || ೧೩೧

ಸರಸಬಿಸವಲ್ಲಿಯಂ ಸ್ಮರ
ಕುರಿಕುಂಭದೊಳೊಟ್ಟುತಿರ್ಪ ಕರಿಣಿಯ ತೆಱನಂ
ಸುರತರುಣಿ ಪೋಲ್ತಳರಸಿಯ
ಗುರುಕುಚದೊಳ್‌ ಹಾರಲತೆಯನಳವಡಿಸುತ್ತುಂ || ೧೩೨

[1]

ರಮಣಿಯ ಮುಖಕ್ಕೆ ಮಣಿಮುಕು
ರಮನೊಪ್ಪಿರೆ ತೋರ್ಪ ದಿವಿಜವಧು ಸಮ್ಮುಖಮಂ
ಹಿಮಕಿರಣಂಗಂ ರವಿಗಂ
ಸಮನಿಪ ಪುಣ್ಣವೆಯ ಸಂಜೆವೆಣ್ಣಂ ಪೋಲ್ತಳ್‌ || ೧೩೩

ಅಳಿಮಾಲೆ ನೆಲಸಿದೆಳಲತೆ
ಬಳಸಿದ ವನಲಕ್ಷ್ಮಿಯಂದದಿಂ ಕೂರ್ವಾಳಂ
ತಳೆದಂಗರಕ್ಕೆಗಮರೀ
ಕುಳಮಿರೆ ಕೆಲಗೆಲದೊಳೆಸೆದಳಂಬಿಕೆ ಜಿನನಾ || ೧೩೪

ಅಡಿಯೂಡುವ ಮುಡಿವಿಕ್ಕುವ
ಪಡಿಯಱವೆಸಗೆಯ್ವ ಪಡಿಗಮಂ ಸಾರ್ಚುವ ಮ
ತ್ತಡಿಗುಟ್ಟುವ ಪಾವುಗೆಯಂ
ಪಿಡಿದರ್ಪಿಪ ಬೆಸನೆ ದಿವಿಜಕಾಂತೆಯರ್ಗೆ ಬೆಸಂ || ೧೩೫

ನಡೆಯಿಪರನುಲೇಪನಮಂ
ಮಡಿಯಂ ಮಾಲೆಯನಮರ್ತ್ಯಲೋಕದವಂ ತಂ
ದೆಡೆವಿಡದೆ ಘಟ್ಟಿವಳ್ತಿಯ
ಮಡಿವಳ್ತಿಯ ಮಾಲೆಗಾರ್ತಿಯಂದದಿನರೆಬರ್‌ || ೧೩೬

ವ || ಮತ್ತಂ-

ಉ || ದೇಸೆಯನಾಂತರೆಯ್ದೆ ಭುವನತ್ರಿತಯಾಂಬಿಕೆಗಂಗರಾಗಮಂ
ಪೂಸುವ ಮಜ್ಜನಂಬುಗಿಸುವಾರತಿಯೆತ್ತುವ ಪೀಲಿಗುಂಚಮಂ
ಬೀಸುವ ಬೋನಮಂ ಸಮೆವ ಶಂಕಮನೊತ್ತುವ ಹಂಸತಳ್ಪಮಂ
ಪಾಸುವ ಬಾಸಿಗಂಗುಡುವ ಗದ್ದುಗೆಯಿಕ್ಕುವ ದೇವಕಾಂತೆಯರ್‌ || ೧೩೭

ವ || ಮತ್ತಂ ಸಗೀತಕಪ್ರಸಂಗಮಂ ಪದವಡಿಸುವೆಡೆಯಳ್‌

ಕಂ || ಸಾರಣೆಯ ಸಕಳನಿಃಕಳ
ಚಾರಣೆಯ ಬೆಡಂಗು ಸರದ ರಾಗದ ಸವಿಯಂ
ಪೂರಿಸೆ ಕಿವಿಯೊಳ್‌ ದಿವಿಜ
ಸ್ತ್ರೀ ರಮಣಿಯ ಮುಂದೆ ವೀಣೆಯಂ ಬಾಜಿಸಿದಳ್‌ || ೧೩೮

ವ || ಮತ್ತಂ ಶಾರೀರವೀಣೆಯೊಳ್‌ ಪಾಡುವಲ್ಲಿ-

ಕಂ || ಸ್ವರದೊಳ್‌ ಪದದೊಳ್‌ ತಾಳದೊ
ಳಿರದವಧಾನದೊಳಳಂಕೆಗೊಂಡಿರೆ ರಾಗೋ
ಚ್ಚರಣಲಯಗೀತಮಾಯ್ತ
ಚ್ಚರಿ ತದ್ಗಂಧರ್ವವಿಧ್ಯೆ ಸುರಸುಂದರಿಯಾ || ೧೩೯

ವ || ಮತ್ತಮೊರ್ವಳ್‌

ಕಂ || ಅಮರ್ದಿನ ಕೊಳಲಳಿನಿಯದೆನೆ
ಸಮಂತು ಸಪ್ತಸ್ವರಂಗಳುಂ ರಂಜಿಪ ರಾ
ಗಮನುಗುೞೆ ಕೊಳಲ ನುಡಿಸಿದ
ಳಮರಾಂಗನೆ ಬಿಲ್ಲನತನುಗೊಲೆಗೊತ್ತುವಿನಂ || ೧೪೦

ಕುಡುವಿನ ಸಂಚದ ಕೂಟಂ
ತೊಡರದೆ ಪಾಟಪ್ರಹಾರದೊಳ್‌ ನಾಡೆ ನಯಂ
ಬಡೆದಿರೆ ಬಾಜಿಸಿದಳ್‌ ಮುಱೆ
ದೆಡದೊಡೆಯೊಳ್‌ ತಳೆದು ಡಕ್ಕೆಯಂ ಪೆಱತೊರ್ವಳ್‌ || ೧೪೧

ಎಡಗೆಯ್‌ ಬಲಗೆಯ್‌ ತೋರಂ
ಕಡುಸಣ್ಣಂ ಕದಳಿ ಕನ್ನವಟ್ಟಂ ತಾನೆಂ
ಬೆಡೆಯೊಳ್‌ ಪ್ರಹರಣಮಿಂಪಂ
ಪಡೆದಿರೆ ಸುರವಧು ಮೃದಂಗಮಂ ಬಾಜಿಸಿದಳ್‌ || ೧೪೨

ತಾಳದ ಗೀತದ ವಾದ್ಯದ
ಮೇಳನದಿಂದಭಿನಯಂಗಳಭಿನವಭಾವ
ಕ್ಕಾಳಂಬಮಾಗೆ ರಸದೊಳ
ಗೋಲಾಡುವ ತೆಱದಿನಾಡಿದಳ್‌ ಮತ್ತೊರ್ವಳ್‌ || ೧೪೩

ವ || ಅದಲ್ಲದೆಯುಂ-

ಕಂ || ಸರಸಕವಿಕಾವ್ಯಮಧುಮ
ತ್ತೆ ರಾಗದೊಳ್‌ ಪೊರೆದು ಪೊಂಗೆ ತನಿಗಂಪೊಗೆದಂ
ತಿರೆ ನುಣ್ಣನಿಯಿಂದೋದುವ
ಸುರವಾಚಿಕೆ ಸತಿಗೆ ಪುಳಕಮಂ ಪುಟ್ಟಿಸಿದಳ್‌ || ೧೪೪

ವ || ಅದಲ್ಲದೆಯುಂ ಅಚ್ಚರಸಿಯರೊಳಗಣ ಮೃಣಾಳಿಕೆಯೆಂಬಳ್‌ ನಿಜಪದತಳದ ನುಣ್ಬೆಳಗಿ ನೊಡನೆ ಕುಂಕುಮರಸದ ಚಳಯಮಂ ಪಸರಿಸಿಯುಂ ಲವಲಿಕೆಯೆಂಬಳಂಘ್ರಿನಖರುಚಿ ತಡಂಗಲಸೆ ಪೂವಲಿಗೆದಱಿಯಂ ಉತ್ಪಳಿಕೆಯೆಂಬಳವತಂಸೋತ್ಪಳಂಗಳ್‌ ಕದಪಿ ನೊಳ್‌ ತೆಱಂಬೊಳೆಯೆ ರಂಗವಲಿಯನಳವಡಿಸಿಯುಂ ಮಂದಾರಿಕೆಯೆಂಬಳಿಂದ್ರ ವನದರಲ್ಗಳಂ ತೊಡರ್ಚುವಲ್ಲಿ ಕಂಕಣದ ಮೆಲ್ಲುಲಿಯಿನೆಳಸುವಳಿಗಳಿನಿಯದನಿಯಂ ತನಿಗೊರ್ವಿಸಿಯುಂ ಲವಂಗಿಕೆಯೆಂಬಳ್ ಲವಂಗಪಲ್ಲವದ ತೋರಣಗಣಮಂ ತೊಡರ್ಚುವೆಡೆಯೊಳ್ ತೆಱೆದ ತೋಳ ಮೊದಲ ನಱುಗಂಪಿನಿಂದದರ್ಕೆ ಪೊಸಗಂಪಿ ನಣ್ಪನಿಕ್ಕಿಯುಂ ಅಮೃತಮತಿಯೆಂಬಳ್ ಅಮೃತಾಹಾರದ ಬೋನಮಂ ಬಿಸುಪಿಂಗೆ ಪೊಸದಳಿರನಿಕ್ಕಿ ನೆಗಪಿದಂತೆ ಕೆಂದಳದ ಕೆಂಪು ಬಳಸೆ ವಿಳಾಸದಿಂದನ್ನ ವಾಸಕ್ಕೆ ನಡೆಸಿಯುಂ ಚಂದ್ರಿಕೆಯೆಂಬಳ್‌ ಚಂದ್ರಕಾಂತಕಲಶಂಗಳನಾತ್ಮೀಯಮುಖಚಂದ್ರಸ್ಮೇ ರಚಂದ್ರಿಕೆಯಿನೊಸರ್ಚಿ ಪೆರ್ಚಿ ಕರಹಾರದೊಳರೆಯಾಗದಿರಿಸಿಯುಂ ಚಿತ್ರಲೇಖೆ ಯೆಂಬಳ್ ವಿಚಿತ್ರಶಾಲೆಯೊಳ್ ವಿವಿಧವಿದ್ಧಂಗಳಂ ಬರೆದು ಬೞಿಯಂ ಪ್ರದೇಶಶುದ್ಧಿಯಿಂ ಪೆಱಮೆಟ್ಟಿ ನೋಡುವಲ್ಲಿ ಪಸರಿಸುವ ಕಣ್ಬೆಳಗಿನಿಂದರ್ಧೋದಕ ದೊಳಂಕೆಗೆಯ್ದಂತೆ ಮಾಡಿಯುಂ ಪ್ರಭಾವತಿಯೆಂಬಳ್ ಮದನಮಂದಿರದೋವರಿ ಯೊಳಂಗಪ್ರಭೆಯಿಂ ತೆರಳ್ದ ಕೞ್ತಲೆಯಂ ಮತ್ತೆ ಮಣಿದೀಪಂಗಳಿಂ ನಿರವಶೇಷಂ ಮಾಡಿಯುಂ ಮಾಳತಿಕೆಯೆಂಬಳ್ ಅರಸಿಯ ಬೆನ್ನ ಚೆಲ್ವಿಂಗೆ ಸೋಲ್ತು ತನ್ನ ಬೆನ್ನಂ ಬೆನ್ನಿತ್ತುದೆನಿಸಿ ಬೆಂಗೊಟ್ಟು ಮಲಂಗಿಸಿಯುಂ ನಿಪುಣಿಕೆಯೆಂಬಳ್ ಅರ್ಹದರ್ಚ ನೋಪಕರಣಂಗಳನಳವಡಿಸುವಲ್ಲಿ ಪುಣ್ಯದೇವತೆಯೆ ಸನ್ನಿದವಾದಳೆನಿಸಿಯುಂ ಪದ್ಮಿಕೆಯೆಂಬಳುಪವನದ ಪದ್ಮಾಕರದಂಚೆವಿಂಡಂ ನಡೆಯಿಪೆಡೆಯೊಳವರ್ಕಲ ಸಗತಿವಿಳಾಸಮನುಪದೇಶಿಸಿಯುಂ ಮಯೂರಿಕೆಯೆಂಬಳ್ ಗೃಹಮಯೂರಂಗಳಂ ಕೇಶಭಾರಕ್ಕೋರನ್ನಮೆಂಬ ಭಾರದಿಂ ಕಾರಾಗೃಹಮಂ ಪುಗಿಸುವಂತೆ ಧಾರಾಗೃಹಮಂ ಪುಗಿಸಿಯುಮಿಂತು-

ಕಂ || ಮಱಸನಮಂ ಬಿಟ್ಟೊಳಗಣ
ಪೊಱಗಣ ಕೆಲಸಂಗಳೆಲ್ಲಮಂ ದೇವಿಯ ಕ
ಣ್ಣಱಿದುಂ ಮನಮಱಿದುಂ ಬಿಡ
ದಱುದಿಂಗಳ್‌ ದೇವಕಾಂತೆಯರ್ ನಡೆಯಿಸಿದರ್ || ೧೪೫

ವ || ಅಂತುಮಲ್ಲದೆಯುಂ-

ಚಂ || ವಿನುತಜಿನಾರ್ಭಕಾವತರಣಕ್ಕುಪಯೋಗ್ಯಮಿದಾದುದಾದಮೆಂ
ಬಿನಮಮರೀಚಯಂ ಪರಮಪಾವನವಸ್ತುಗಳಿಂದೆ ಗರ್ಭಶೋ
ಧನಮನೊಡರ್ಚಿ ನಿರ್ಮಳತೆವೆತ್ತುದು ದೇವಿಯುದಾತ್ತಮೂರ್ತಿ ಚಂ
ದನಸಲಿಲಂಗಳಿಂ ತೊಳೆದ ಮುತ್ತಿನ ಪುತ್ತಳಿಯಿಂತಿದೆಂಬಿನಂ || ೧೪೬

ಕಂ || ಅತಿಶುದ್ಧಮಾಯ್ತು ಸತಿಯಾ
ಕೃತಿ ದಿವ್ಯದ್ರವ್ಯಗರ್ಭಶೋಧನದಿಂದು
ಜ್ಝಿತಲಕ್ಷ್ಮಮೆನಿಸಿ ಲೋಕ
ಸ್ತುತಮಾದಮೃತಾಂಶುಲೇಖೆ ತಾನೆಂಬಿನೆಗಂ || ೧೪೭

ವ || ಮತ್ತಂ-

ಮ || ಸ್ರ || ಪಿರಿದುಂ ದೋಷಾನುಷಂಗಂ ಕಿಡೆ ತಮದಿನಗಲ್ತಂದ ಚಂದ್ರಾಂಶುವಂ ಮಾಂ
ಕರಿಸುತ್ತುಂ ನಾಡೆ ತನ್ನುಜ್ಜಳಿಕೆಯಿನುಚಿತೋನ್ಮೇಷಮಂ ಬಂದು ಪದ್ಮೋ
ತ್ಕರದೊಳ್ ಮಾಡುತ್ತೆ ರಾಗಾಭ್ಯುದಯಮನೊಳಕೆಯ್ದೆಯ್ದೆ ಸಾಫಲ್ಯಮಂ ಕ
ಣ್ಗಿರದಿತ್ತಳ್ ಕಾಂತೆ ಕಾಲ್ಯಪ್ರಭವದಿನಕನತ್ಕಾಂತಿಯೆಂಬಂದದಿಂದಂ || ೧೪೮

ಚಂ || ಉಡುವುದು ದೇವಲೋಕದೊಳಮಿಂತಿದೆ ಸಾರಮೆನಿಪ್ಪ ಸೀರೆ ಮೇಣ್
ತುಡುವುದು ದಿವ್ಯಮಪ್ಪ ಹರಿಚಂದನದೊಂದನುಲೇಪಮಾಗಳುಂ
ಮುಡಿವುದು ಪಾರಿಜಾತದಲರ್ವಾಸಿಗಮೆಂಬ ವಿಳಾಸದೇೞ್ಗೆಯಂ
ಪಡೆವರೆ ತೀರ್ಥಕೃಜ್ಜನನಿಯಂದದೆ ಮತ್ತಿನ ಮರ್ತ್ಯಕಾಂತೆಯರ್ || ೧೪೯

ವ || ಅಂತು ಸಂತತೋಲ್ಲಸಿತದೇವಕಾಂತಾಸಂತಾನಸಂಪಾದಿತೋತ್ಸವಪರಂಪರೆಗಳಿಂ ಪರಮನ ಚರಮಗರ್ಭಾವತರಣಮನಱಿದು-

ಮ || ಸ್ರ || ವರರತ್ನೋತ್ಪತ್ತಿ ಪೊರ್ದುತ್ತಿರೆ ಸಮನಿಸಿದತ್ತರ್ಣವಕ್ಕೆಯ್ದೆ ರತ್ನಾ
ಕರಮೆಂಬೀ ಮೈಮೆಯೆಂಬಂತಿರೆ ಜಿನಪತಿ ಲೋಕೋತ್ತಮಂ ಪುತ್ರನಾಗು
ತ್ತಿರೆ ಸಾರ್ತರ್ಕುಂ ತ್ರಿಲೋಕೀಜನಕೆ ಜನಕನಲ್ತೇಮಹಾಸೇನನೆಂಬೊ
ಳ್ಪಿರದೆನ್ನಂ ಕೆನ್ನಮೆಂದೇಂ ನಲಿದನೊ ಮನದೊಳ್ ಭಾರತೀಭಾಳನೇತ್ರಂ || ೧೫೦

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಗರ್ಭಾವತರಣಕಲ್ಯಾಣವರ್ಣನಂ
ಏಕದಶಾಶ್ವಾಸಂ

 


[1] ಅನಂತಸಿರಿನಿಧಿವಾಸದೊ
ಳನಂತಚೋದಾದಿರಾಜನೊಪ್ಪುವ ಗುಣದ
ಲ್ಲನಂಗಜಯಕಳಸವೆನ
ಲ್ಲನಮಾತೆಯ ಗಂಧವಿಬುಧಭೂಷಣವೆಸಗುಂ (?)|| ೧೩೨
(ನಾಸಿಕಾಭರಣಶ್ಲೇಷಾರ್ಥಂ)
ಎಂದು ೧೩೨ ನೆಯ ಪದ್ಯವಾಗಿ ಒಂದು ಪ್ರತಿಯಲ್ಲಿದೆ. ಇದು ಗ್ರಂಥಕರ್ತನ ಪದ್ಯದಂತೆ ತೋರಿ
ಬರುವುದಿಲ್ಲ.