ಕಂ || ಶ್ರೀಗೆರ್ದೆವತ್ತುಗೆ ವರವಾ
ಕ್ಛ್ರೀಗೆ ನಿಜಂ ಸುಮುಖವೃತ್ತಿ ತೋಳ್ವೆರಗು ಜಯ
ಶ್ರೀಗೊಲವನೀಯೆ ನೆಗೞ್ದಂ
ಭೂಗಧಿಪತಿ ಜೈನಜನಮನೋಹರಚರಿತಂ || ೧

ಒಳಕೆಯ್ದು ತೋರ್ಪುದನಿಮಿಷ
ಕುಳಮಂ ಕುವಳಯಮನುಚಿತಮೆನೆ ಪುಷ್ಕರಮಂ
ಡಳಮಂ ತದ್ಧರಣೀಮಂ
ಡಳನಾಥನಪಾರಕೀರ್ತಿಗಂಗಾಪೂರಂ || ೨

ಧೃತಶೈತ್ಯಂ ಧಾರಾಜಲ
ಯುತಮನುಕಂಪಾನ್ವಿತಂ ದಲೆನಿಸಿಯುಮಂತಾ
ಕ್ಷಿತಿಪತಿಯ ವಿಜಯಭುಜದಸಿ
ಲತೆ ರಿಪುನೃಪರ್ಗೀವುದಧಿಕತಾಪೋದಯಮಂ || ೩

ಅತುಳಪ್ರಭನಾಗಿಯುಮಾ
ಕ್ಷಿತಿಪತಿ ಕನಕಪ್ರಭಾಭಿಧಾನಮನಾಂತಂ
ವಿತತಾನೂನಕರಂ ದಶ
ಶತಕರನಾಮಮನಶೀತರುಚಿ ತಾಳ್ದುವವೋಲ್ || ೪

ಆ ರಾಜಶಿರೋರತ್ನನ
ವೀರದ ವಿತರಣದ ಪೆರ್ಮೆಯಂ ರಿಪುಭೂಭೃ
ದ್ದಾರಿದ್ರ್ಯಮುಮುಪಚಿತಪರಿ
ವಾರಜನಾನೂನಲಕ್ಷ್ಮಿಯುಂ ಪ್ರಕಟಿಸುಗುಂ || ೫

ಚಂ || ಉಪಕೃತಿಯೆಂಬಿನಂ ನೆನೆವುದೂರ್ಜಿತಮಂಗಳದಂದದಿಂದೆ ಮ
ನ್ನಿಪುದುಪದೇಶದಂತಿರೊಳಕೆಯ್ವುದು ಮನ್ತ್ರಪದಂಬೊಲೊರ್ಮೆಯುಂ
ಜಪಿಯಿಪುದೆಯ್ದೆ ಪುಣ್ಯಕಥೆಯಂದದೆ ಭಾವಿಸಿ ಕೇಳ್ದುದಾ ಧರಾ
ಧಿಪನ ಶರನ್ನಿಶಾಕರಕಳೋಜ್ಜ್ವಳಮಂ ಜಸಮಂ ಜಗಜ್ಜನಂ || ೬

ಮನದೊಲವಿಂದೆ ಕಿನ್ನರಚಯಂ ನರನಾಥನ ಗೀತಮಂ ಮುದಂ
ಜನಿಯಿಸೆ ಪಾಡುವಲ್ಲಿ ನಿಜರತ್ನವಿಮಾನದೊಳೈದೆ ಪೊಣ್ಮಿ ಮಾ
ರ್ದನಿ ಕಿವಿಯಂ ಪಳಂಚಲೆಯೆ ಕಾಯ್ದದನೊಲ್ಲದೆ ಬಂದು ತತ್ಪುರಾ
ವನಿತಳದೊಳ್ ಸಭಾವಿಭವಮಂ ಸತತಂ ಶತಮನ್ಯು ಮಾಡುವಂ || ೭

ವ || ಮತ್ತಮಾ ಮೂರ್ಧಾಭಿಷಿಕ್ತಮುಖ್ಯಂ ವಿಖ್ಯಾತದಾನನಾಗಿಯುಮಮದ ವೃತ್ತಿವರ್ತನನುಂ ಅಹೀನತಾನ್ವಿತನಾಗಿಯುಂ ಅನುಕ್ರಮಸಮೇತನುಂ ಅತಿಮೃದುಕರವಿರಾಜಿತನಾಗಿಯುಂ ಉಗ್ರತೇಜೋವಿರಾಜನುಂ ಅನೂನವಾಹಿನೀಪತಿಯಾಗಿಯುಂ ಅಭಂಗಾನುಷಂಗನುಂ ವಿನೀತವಿನತಾನಂದನನಾಗಿಯುಂ ಅಪಕ್ಷಪಾತಪ್ರಚಾರನುಂ ವಿದೇಹಜಾನುಬಂಧಲೀಲಾ ಶ್ರಯನಾಗಿಯುಂ ಅಖರದೂಷಣಾನ್ವೇಷಣನುಮೆನಿಪಂ ಅಂತುಮಲ್ಲದೆಯುಂ –

ಮ || ವಿ || ಸಮಮಂ ಮಾಡೆ ಸಮಂತ್ರಿವರ್ಗಮರಿಷಡ್ವರ್ಗಕ್ಕೆ ಪಂಚಾಂಗಮಂ
ತ್ರಮೆ ಸಪ್ತಾಂಗಸಮೃದ್ಧಿಯಂ ಕುಡೆ ನಿಜೈಕಂ ದೋರ್ಬಳಂ ಶತ್ರುದು
ರ್ದಮಚಾತುರ್ಬಳನಾಶಮಂ ಪಡೆಯೆ ಚಾರಿತ್ರಂ ನಯಂ ಶೌರ್ಯಮಾ
ದಮೆ ತನ್ನೊಳ್ ದಳವೇಱಿದತ್ತೆನಿಸಿದಂ ಶಕ್ತಿತ್ರಯಾಧೀಶ್ವರಂ || ೮

ಕಂ || ಅಯ್ಸರಲನ ಚೆಲ್ವಿಂದಂ
ಮೆಯ್ಸಿರಿ ಪಿರಿದಾದುದೆಂದು ನೋೞ್ಪರ ಕಣ್ಣಂ
ಕೆಯ್ಸೆಱೆವಿಡಿದುಂ ಮತ್ತವ
ಟಯ್ಸುವುದು ಮನಕ್ಕಮೊಲವನಾ ನೃಪರೂಪಂ || ೯

ವ || ಅಂತುಮಲ್ಲದೆಯುಂ –

ಕಂ || ಕುಪಿತಪ್ರಮದಾಜನದಾ
ಮಪದಾಲಕ್ತಕದೆ ಪಲ್ಲವಿಪ್ಪುದಶೋಕಂ
ನೃಪತಿಲಕಂ ಮುಗ್ಧಾಪಾಂ
ಗಪಾತದಿಂದಲರ್ವನಂಗಜಕ್ರೀಡೆಗಳೊಳ್ || ೧೦

ವ || ಅದಲ್ಲದೆಯುಂ ಸಿದ್ಧಪದವೀಪ್ರಾಪ್ತನಂತಪಗತವಿಗ್ರಹನುಂ ಅವ್ಯಾಬಾಧಪ್ರಕೃತಿಯುಮಶೇ ಷಗುಣಾವಗಾಹನಸಮರ್ಥನುಮಖಂಡಿಸುಖೋನ್ಮುಖನುಮೆನಿಸಿದಾ ಮಹೀಕಾಂತ ನಂತಃಪುರಪ್ರಧಾನಭೂತೆ –

ಕಂ || ಸುಲಲಿತಶೃಂಗಾರಾಮೃತ
ಸಲಿಲಾಕರವೇಲೆ ಮದನವಿಜಯಮಹಾಮಂ
ಗಲಲೀಲೆಯಷ್ಟಮೀಂದೂ
ಜ್ವಲಭಾಲೆ ಸುವರ್ಣಮಾಲೆಯೆಂಬಳ್ ಪೆಸರಿಂ || ೧೧

ಆ ರಮಣಿಯ ದೇಹದ್ಯುತಿ
ವಾರಿಯಿನವಿರಳವಿಸಾರಿಯಿಂ ತೊಳೆದಂತಾ
ಚಾರಮೆನಿತ್ತನಿಂತು ವಿ
ಸ್ತಾರಿಸಿದುದು ವಿಮಲವೃತ್ತಿಯಿಂದನವರತಂ || ೧೨

ಚಂ || ಪ್ರಿಯೆಯಧರಸ್ಥಳೀಮಧುರಿಮಂ ತನಗೊತ್ತೆನೆ ವರ್ತಿಸಿತ್ತು ಧಾ
ತ್ರಿಯೊಳಮೃತಂ ವಿಳೋಚನಮರೀಚಿಗಳಂ ಮಱೆವೆತ್ತು ಚಂದ್ರಿಕಾ
ಚಯಮೆಳಸಿತ್ತು ವಾಸರಮುಮಂ ದರಹಾಸವಿಭಾಸಿತವಕ್ತ್ರಶೋ
ಭೆಯ ನೆವದಿಂದೆ ಚಂದ್ರವಳಯಂ ತಳೆದತ್ತನಿಶಂ ದ್ವಿರೂಪಮಂ || ೧೩

ಸುೞಿ ಸುೞಿದಿರ್ದ ನಾಭಿ ವಳಿಗಳ್ ತೆರೆಗಳ್ ಜಘನಂ ಪೊದೞ್ದನು
ಣ್ಬುೞಿಲೆಸೆದಿರ್ದ ಬಾಸೆ ಜಳನೀಳಿಕೆ ಕಣ್ಗಳೆ ಮೀಂಗಳಾಗೆ ಪೊಂ
ಪುೞಿಯೆನೆ ರಾಜಹಂಸನ ಮನಕ್ಕನುಕೂಲತೆಯಿಂ ಲತಾಂಗಿ ಮೆ
ಯ್ವೞಿಯೊಲವಂ ನಿಮಿರ್ಚಿದಳನಂಗವಿನೋದನದೀವಿಳಾಸದಿಂ || ೧೪

ವ || ಅದಲ್ಲದೆಯುಮಾ ಮಹೀವಲ್ಲಭಂ ಸುವರ್ಣಮಾಲಾಮಹಾದೇವೀರೂಪಸ್ತವಸ್ತು ತಾನೇಕಹೃದ್ಯಗದ್ಯಪದ್ಯಕಥನದಿಂದಾತ್ಮೀಯವಸ್ತುಕವಿತಾಪ್ರೌಢಿಯಂ ರೂಢಂಮಾಡಿಯುಂ ಆ ಸೌಭಾಗ್ಯನಿಧಿಯ ಸೌಭಾಗ್ಯವರ್ಣನೋಪರಚಿತ ಬಹುವಿಧಪ್ರಬಂಧಗೀತಂಗಳಿಂದಾತ್ಮೀ ಯಕವಿತಾಪ್ರಗಲ್ಭ್ಯಮಂ ಪ್ರಕಟಿಸಿಯುಂ ಆ ಶೃಂಗಾರರಸತರಂಗಿಣಿಯ ತುಂಗಸ್ತನಕ ಪೋಲಕ ವಿಲಿಖಿತ ಮೃಗಮದಪತ್ರಭಂಗಂಗಳಿಂ ಚಿತ್ರಕಳಾಕೌಶಲಮಂ ಪ್ರಕಾಶಿಸಿಯುಂ ಆ ಭರತವಿದ್ಯಾಭಾರತಿಯ ಲೀಲಾಲಾಸ್ಯಸಮಯಸಂಪಾದಿತಸ್ವಹಸ್ತವಾದ್ಯ ಮಾನಮಧುರ ತರಮೃದಂಗಪಾಟಪ್ರಹರಣಂಗಳಿಂ ವಾದ್ಯವಿದ್ಯಾವಿಶಾರದತ್ವಮಂ ವಿಶದೀಕರಿಸಿಯುಂ ಆ ಕಂದರ್ಪಕಲ್ಪಲತೆಯ ಸಮಸಮಾಯೋಗಸಮುಪಕ್ರಮಿತಕಾಲಧಾತುವಯೋನುರೂಪ ಕರಣಪರಿರಂಭಚುಂಬನಕಳಾಸಾಮಗ್ರಿಯಿಂ ಕಾಮತಂತ್ರವಿಜ್ಞಾನಮಂ ಸುಜ್ಞಾನಂ ಮಾಡಿಯುಂ ಇಂತು ತಾದಾತ್ಮ್ಯಮನೋಹರಂಗಳುಮಾಯತ್ಯವಿರುದ್ಧಂಗಳುಮಪ್ಪ ವಿನೋದಪರಂಪರೆಗಳಿಂ ಕಾಲಮಂ ಸಲಿಸುತ್ತುಮಿರೆಯಿರೆ –

ಮ || ವಿ || ಒಗೆತರ್ಪಂತಮೃತಂ ಹಿಮಾಂಶುಕಲೆಯಿಂದಂತಾ ಮಹೀಕಾಂತಕಾಂ
ತೆಗೆ ಸಂದಾರ್ಪೊಡವುಟ್ಟೆ ಪುಟ್ಟಿದನತರ್ಕ್ಯಂ ನಂದನಂ ತಾನೆ ಲ
ಕ್ಷ್ಮಿಗಧೀಶಂ ಸಸುದರ್ಶನಂ ಬಳಯುತಂ ಕಂಜಾಕ್ಷನೆಂಬಿಂತಿದಂ
ಜಗದೊಳ್ ಗೋಸಣೆಮಾಡೆ ತನ್ನ ವಿಹಿತಾರ್ಥಂ ಪದ್ಮನಾಭಾಹ್ವಯಂ || ೧೫

ಕಂ || ಶಶಿಯೊಳ್ ಪ್ರಕಾಶಗುಣಮತಿ
ವಿಶದಂ ಸೊಗಯಿಸುವವೊಲ್ ನವೋದಯದೊಳವಾ
ಪ್ರಶಮಿತತಮನೊಳ್ ನೆಱೆದುದು
ಶಿಶುತೆಯೊಳಂ ನಾಡೆ ರೂಢಿವೆತ್ತ ವಿವೇಕಂ || ೧೬

ತರುಣತ್ವದುರ್ಲಭಂಗಳ್
ಪರಿಣತಿಸುಖದಂಗಳೆನಿಪ ಸತ್ಕ್ರಿಯೆಗಳನಾ
ಧರಣೀಶಸುತಂ ಪಲಿತಾಂ
ಕುರಮಿಲ್ಲದ ವೃದ್ಧನಂದದಿಂದಾಚರಿಪಂ || ೧೭

ಓಜಸ್ಸಂಯುತನುನ್ನತ
ಭಾಜನನಾಕಳಿತವಿನಯನಾಯತಕರನಾ
ರಾಜಸುತಕುಂಜರಂ ರಾ
ರಾಜಿಸಿದಂ ಗುರುವಚೋಂಕುಶೈಕಾನುವಶಂ || ೧೮

ವ || ಎನಿಸಿ ನಿಜಸುಹೃಜ್ಜನವೈರಿಜನಮನೋನುರಾಗಹೃದ್ರೋಗಂಗಳೊಡನೆ ಬಳೆಯೆವಳೆಯೆಯೆ –

ಸ್ರ || ಪಡೆವನ್ನಂ ಪಕ್ವಬಿಂಬಕ್ಕಧರಮಧರತಾವಾಪ್ತಿಯಂ ನೇತ್ರಯುಗ್ಮಂ
ಪಡೆವನ್ನಂ ವೈರಮಂ ಕೈರವದೊಳುರುಭುಜಂಗಳ್ ಭುಜಂಗಾಧಿಪಂಗಂ
ಪಡೆವನ್ನಂ ಸೋಲಮಂ ಭಾಸುರದಶನಚಯಂ ಕುಂದದೊಳ್ ಕುಂದನೆಂದುಂ
ಪಡೆವನ್ನಂ ಯೌವನಶ್ರೀ ಪಡೆದುದು ನೃಪಪುತ್ರಾಂಗದೊಳ್ ನಾಡೆ ಚೆಲ್ವಂ || ೧೯

ವ || ಮತ್ತಮಾ ಕುಮಾರನಂ –

ಉ || ನೋಡಿ ಮರುಳ್ದು ಕೂಡಿ ಬಿಡದಿರ್ದರನಾನಱಿಯೆಂ ವಿಯೋಗಮಂ
ಮಾಡಿದ ವಾಮಲೋಚನೆಯರಂಗದೊಳಾಲಿಯ ಸೂಸುನೀರ್ಗಳ
ೞ್ಕಾಡದೆ ತಂದು ಪೆರ್ಮೊಲೆಯೊಳೊತ್ತಿದ ಪಂಕಜಪತ್ರಜಾಳಮಿ
ರ್ಪೋಡದೆ ಪಾಸಿದೊಳ್ದಳಿರ್ಗಳುಂ ನೆಱೆ ಬಾಡದೆ ಸೈತು ಪೋಕುಮೇ || ೨೦

ಕಂ || ತನಯರ್ ಪಲರುಳ್ಳೊಡಮಾ
ಜನಪತಿ ರಂಜಿಸುವನಾಕುಮಾರನಕನಿಂ ಮ
ತ್ತೆನಿತು ಜಳವಿಹಗಮಿರೆಯುಂ
ವನಜವನಂ ರಾಜಹಂಸನಿಂ ರಾಜಿಪವೋಲ್ || ೨೧

ವ || ಅಂತು ಸಂತತೋಪಚೀಯಮಾನಪದ್ಮನಾಭಪ್ರಭಾವಭಾವನಾನಂದಿತಮಾನಸಂ ಕನಕಪ್ರಭಮಹಾರಾಜಂ ಸುಖದಿನಿರ್ದೊಂದು ದಿವಸಂ ಯಾಮತ್ರಯವಿರಾಮಸಮಯದೊಳ್ ತಾಂಬೂಲಕರಂಕವಾಹಿಕಾದ್ವಿತೀಯನುತ್ತುಂಗ ಸೌಧಶಿಖರನಿರ್ಯೂಹಪರ್ಯಂಕದೊಳ್ ಕುಳ್ಳಿರ್ದು ಬಹಿಃಪುರಶ್ರೀಯಂ ಹೇಳಾವಳೋಕನದಿನಳಂಕರಿಸುತ್ತುಮಿರ್ಪನ್ನೆಗಂ ಉಪವನೋಪಾಂತದ ವಿಪುಳತರತಟಾಕತಟದೊಳ್ –

ಕಂ || ಏರಿಯನೀಡಿಱಿವೋಳಿಯೆ
ನೀರುಣ್ಬ ಕನಲ್ವ ಪೋರ್ವ ಮೆಲ್ಕೊತ್ತುವ ತ
ತ್ತೀರದ ಕಱುಂಕೆಗೆಳಸುವ
ಗೋರಾಜಿಯ ಲೀಲೆ ಕಣ್ಗೆ ಪಡೆದುದು ಚೆಲ್ವಂ || ೨೨

ವ || ಅದಂ ವಿನೋದವಿಕಸಿತವಿಳೋಚನಂ ನೋಡುತ್ತುಮಿರೆ –

ಚಂ || ಚಳಗಳಕಂಬಳಂ ಚಳನಕಂಪಿತತುಂಗಕಕುದ್ಭರಂ ಧರಾ
ತಳಪರಿಳಂಬಿವಾಳಧಿ ನವಕ್ಷತಲಕ್ಷಿತಕಂಧರಂ ಖುರೋ
ಚ್ಚಳದುರುರೇಣುಧೂಸರಿತನಗ್ರವಿಶೀರ್ಣವಿಷಾಣನಾತ್ತಮಾಂ
ಸಳತನು ಬಂದುದಂದು ಮುಹುರುತ್ಥಬೃಹದ್ರವನೊಂದು ಪುಂಗವಂ || ೨೩

ವ || ಅಂತು ಬಂದು –

ಕಂ || ನಸೆವಣಕದೆ ಬೆನ್ನಂ ಸಂ
ಧಿಸುವುದುಮಸವಸದಿನೆಡೆಗೆ ಪುಗಲೊಡನಂತಾ
ಬಸವಂ ಪಾಯ್ದೊಡೆ ಕೆಸಱೊಳ್
ಬಸವೞಿದಿರ್ದೊಂದು ಗೊಂದೆ ಪೊಂದಿತ್ತಾಗಳ್ || ೨೪

ವ || ಅದಂ ಕಂಡು ವೃಷಭನ ಅನಿಮಿತ್ತರೋಷಾವೇಶವಿಷಮತೆಗಮಾಜರಾ ದುರ್ಬಲ ಬಲೀವರ್ಧದುರ್ದರ್ಶಮರಣಾಯಾಸಪರಿಣತಿಗಂ ವಿಸ್ಮಯಂಬಟ್ಟು ಸಂಸೃತಿಕೃತಾನು ಶಯನುಂ ಜಾತನಿರ್ವೇದಾಶಯನುಮಾಗಿ ತನ್ನೊಳಿಂತೆಂದಂ –

ಕಂ || ಕ್ಷಣಭಂಗವೃತ್ತಿ ತನುಭೃ
ದ್ಗಣಜೀವನಮಲ್ಲಿ ಸಂಶಯಂ ನೋೞ್ಪೊಡಿನಿ
ತ್ತಣಮಿಲ್ಲದನಱಿದುಮಿದೇ
ನಣಕಮೊ ಮತಿವಂತರುಂ ವಿಮೋಹಿಸುತಿರ್ಪರ್ || ೨೫

ಉಸಿರೆ ಗಡ ಸೀಮೆ ಬಾೞ್ಕೆಯ
ದೆಸೆಯೊಳ್ ಗಾಳಿಯೆ ಗಡದುವುಮದಱೆಸಕಂ ಭಾ
ವಿಸುವೊಡೆ ಚಲತೆ ಗಡಿನ್ನೇ
ವೆಸರ್ಗೊಂಡಪುದಣ್ಣ ನರರ ಚಿರಜೀವಿತೆಯಂ || ೨೬

ಮ || ವಿ || ಅನಿಮಿತ್ತಂ ಕೊಲುತಿರ್ಪ ಮಿೞ್ತು ನರರಂ ಶೀತಾತಪಾನ್ನಾಂಬುವಾ
ಯ್ವನಲಕ್ಷ್ವೇಡನಿಯುದ್ಧವನಭೂತಕ್ರೂರಸತ್ವಾಮಯಾ
ಶನಿದಾರಿದ್ರ್ಯವಿಯೋಗಶೋಕರತಚಿಂತಾಯಾಸಚೌರ್ಯಪ್ರವ
ರ್ತನದೋಷಾದಿಗಳಂ ನೆರಂಬಡೆದವಂ ಮತ್ತೇಕೆ ಕೈವಾರ್ದಪಂ || ೨೭

ಕಂ || ಬೆಸನಂಗಳ್ ಮನಮಂ ಮೋ
ಹಿಸಿ ಕಣ್ಗಂಧತೆಯನಿತ್ತು ಸತ್ಕ್ರಿಯೆಯೊಳ್ ಚೇ
ಷ್ಟಿಸಲೀಯವು ನಿದ್ರೆಯವೋಲ್
ನಿಸದಂ ನರರಂ ಪ್ರಬೋಧಮಪ್ಪನ್ನೆವರಂ || ೨೮

ಹಿತಮನಯದೆ ಕೆಲರ್ ಕೆಲ
ರತಿಸಂಶಯದಿಂದಮಲ್ಲಿ ಕೆಲಬರ್ ವಿಪರೀ
ತತೆಯಿಂದಿಂತಜ್ಞಾನ
ತ್ರಿತಯತಮೋವಿಕೃತಿಯಿಂದ ವಿಹ್ವಲರಪ್ಪರ್ || ೨೯

ಭಾವಿಯೆನಿಸಿರ್ದ ಭೋಗದೊ
ಳಾವುದು ನಿಶ್ಚಯಮತೀತಮದತೀತಮೆ ದಲ್
ಜೀವಂ ತದಾತ್ವಸುಖಲವ
ಸೇವೆಗೆ ಕಳವಳಿಪುದದಱೊಳೇಂ ಪುರುಳುಂಟೇ || ೩೦

ಸಿರಿಗೆ ದರಿದ್ರತೆ ಬಾೞ್ಕೆಗೆ
ಮರಣಂ ಜರೆ ಯೌವನಕ್ಕಮಭಿಘಾತಮೆನು
ತ್ತಿರೆ ಕಂಡುಂ ಕೇಳ್ದುಂ ಗಡ
ಪರಿವರ್ತಿಸರಾತ್ಮಹಿತದೊಳತಿದುರ್ಮತಿಗಳ್ || ೩೧

ಎನಿತಿಷ್ಟಯೋಗದೊಳ್ ಸುಖ
ಮನಿತೆ ಮನೋದುಃಖಮದಱಗಲ್ಕೆಯೊಳೆಂದ
ಲ್ತೆ ನಿವೃತ್ತಿಯೊಳೆಸೆವರ್ ಸ
ಜ್ಜನರಾತ್ಮಜ್ಞತೆಗೆ ನೋೞ್ಪೊಡದು ಫಲಮೆ ವಲಂ || ೩೨

ಪರಿಣತಿಸುಖಮಂ ಭಾವಿಸೆ
ಶರೀರಿಗರ್ಹತ್ಪ್ರವಚನಮಲ್ಲದೆ ಪೆಱತಿ
ಲ್ಲ ರುಚಿಯದಱಲ್ಲಿ ಸಮನಿಸೆ
ಸರುಜಂಗೌಷಧವಿರಕ್ತಿಯಾದಂತಕ್ಕುಂ || ೩೩

ವ || ಎಂದು ಬಗೆದು ಮತ್ತಮಿಂತೆಂದಂ –

|| ಹರಿಣೀವೃತ್ತಂ ||

ಶ್ರುತದೊಳತಿತಾತ್ಪರ್ಯ ಸದ್ಬೋಧಸಾಧುಜನಂಗಳೊಳ್
ಕೃತಸಮುಚಿತಾಭ್ಯಾಸಂ ಜನ್ಮಸ್ವರೂಪದೊಳಂ ವಿವೇ
ಕತೆಯಿವಿನಿತುಂ ಮೆಯ್ವೆತ್ತಿರ್ದುಂ ವಿಚಾರಿಪೊಡೆನ್ನವೋ
ಲಿತರನೃಪನಿಂತಾವೊಂ ಪ್ರೋನ್ಮತ್ತವೃತ್ತಿಯಿನಿರ್ದವಂ || ೩೪

ಉ || ಕಣ್ಬರಿ ಪುತ್ರಮಿತ್ರವನಿತಾಜನದೊಳ್ ಸಮಸಂದು ರಾಜ್ಯಮಂ
ಜಾಣ್ಬಿಡೆ ದುಃಖಹೇತುವನಿದಂ ನೆಱೆ ತಾಳ್ದಿ ಪರತ್ರಸೌಖ್ಯಮಂ
ಪೂಣ್ಬ ತಪೋನಿಯೋಗಮನದಂ ಮಱೆದಿಂತಳಿಪಿಂದೆ ಬಿೞ್ತನ
ಟ್ಟುಣ್ಬ ನರಂಗೆ ಸಂಗಡಿಗನಪ್ಪೆನೆ ತಪ್ಪೆನೆ ಹಾಸ್ಯಭಾರಮಂ || ೩೫

ಕಂ || ನೆಯ್ದಿಲೆಸಳೆಂಬ ಬಗೆ ತ
ಳ್ಪೊಯ್ದಿರೆ ಕೂರ್ವಾಳ ಮೊನೆಗೆ ಪಾಯ್ವಳಿಯಳಿಪಂ
ಮಾಯ್ದೆನ್ನ ಮನಂ ತಳೆದೇ
ನೆಯ್ದಿದುದೋ ಸುಖದಮೆಂದು ದುಃಖಪ್ರದಮಂ || ೩೬

ಸ್ಫುರದಾಶಾಜ್ವಳನಂ ದು
ರ್ಧರಸುತಪಸ್ತೀರ್ಥವಾರಿಪರಿಷೇಕದಿನೆಂ
ತಿರೆ ಕಿಡುಗುಂ ಭೋಗಾಜ್ಯೋ
ತ್ಕರಪಾತದಿನೆಂತುಮಂತದೇಂ ಮೞ್ಗುಗುಮೇ || ೩೭

ವ || ಎಂದು ಸಂಸಾರಶರೀರಭೋಗವೈರಾಗ್ಯರಸವಿಸರಪ್ಲಾ ವಿತಾಶಯಕುಶೇಶಯನಾಗಿರ್ಪನ್ನೆಗಂ –

ಮ || ಸ್ರ || ಸತತಂ ರಾಗಾವಿಳಂ ಪೀಡಿತಕುವಲಯನುನ್ಮಾರ್ಗಸಂಸಕ್ತನುನ್ಮೂ
ಲಿತಸಾರ್ದ್ರತ್ವಂ ಸದುರ್ದರ್ಶನರುಚಿ ಖರದಂಡಪ್ರಿಯಂ ತಾನೆನಿಪ್ಪಾ
ಕ್ಷಿತಿಪಂಗೆನ್ನಂದದಿಂದಂ ಸಮನಿಸುಗುಮಧಃಪಾತಮಸ್ತಾಬ್ಧಿಯೊಳ್ ನಿ
ಶ್ಚಿತೆಮೆಂಬಂತಾ ಪ್ರತೀಚೀಜಲಧಿಗಿೞಿದನಂಭೋಜಿನೀಜೀವಿತೇಶಂ || ೩೮

ವ || ಆಗಳ್ –

ಕಂ || ಭೂವರನ ಹೃದಯಮಂ ಮು
ನ್ನಾವರಿಸಿರ್ದಖಿಳಭೋಗರಾಗಂ ಪೊಱಮ
ಟ್ಟಾವಗಮಾಶಾಂತರಮಂ
ತೀವಿದುದೆನಿಸಿತ್ತು ಸಾಂದ್ರಸಂಧ್ಯಾರಾಗಂ || ೩೯

ವ || ಅನಂತರಮಾ ಮಹಾತ್ಮನ ಆತ್ಮೀಯಸಾಂಸಾರಿಕಮನೋರಥಂಗಳೊಡನೆ ರಥಾಂಗಂಗಳ್ ವಿಘಟಿಸೆಯುಂ ವೈರಾಗ್ಯಮತಿಯೊಡನೆ ಕುಮುದ್ವತಿಗಳ್ ವಿಕಾಸನಮನೆಯ್ದೆಯುಂಮನಃಪ್ರಿಯೆಯಾದ ರಾಜ್ಯಶ್ರೀಯ ಮುಖಕಮಲದೊಡನೆ ಕಮಲಂಗಳ್ ಸಂಕೋಚಿಸೆಯುಂ ಇಂತನುರೂಪಮಾದ ರಜನೀಮುಖದೊಳಲ್ಲಿಂ ತಳರ್ದು ನಿರ್ವರ್ತಿತಸಂಧ್ಯೋ ಚಿತಜಿನೇಂದ್ರವಂದನಂ ಶಯ್ಯಾಗೃಹಕ್ಕೆ ವಂದನಲ್ಪತಲ್ಪತಲಗತನಾಗಿರೆ –

ಕಂ || ನೆರೆಯಲ್ಕೆಂದು ತಪಶ್ಶ್ರೀ
ವಿರಾಗಮತಿದೂತಿಯಂ ಸಮಂತಟ್ಟಿದಳಾ
ದರಿಸಿದಪನವಳನೆಂದೀ
ಪುರುಡಿಂ ನಿದ್ರಾವಧೂಟಿ ಪೊರ್ದಳೆ ನೃಪನಂ || ೪೦

ಅಂತು ಅಂದಿನಿರುಳಂ ಕಳೆದು ಮಱುದೆವಸಮಾಸ್ಥಾನಮಂಟಪಮಧ್ಯ ಸ್ಥಿತನುಮಶೇಷ ಮಂತ್ರಿಪ್ರಧಾನಪರಿವಾರಪರಿವೃತನುಮಾಗಿ ಕುಮಾರನಂ ಬರಿಸಿ ನಿಜಮಣಿಮಯಪೀಠಿ ಕಾಪಾರ್ಶ್ಚಸ್ಥಿತಚಂಚತ್ಕಾಂಚನಾಸಂಧಿಯೊಳ್ ಕುಳ್ಳಿರಿಸಿ –

ಮ || ಸ್ರ || ಮೊದಲೊಳ್ ತಾಂ ಯೌವರಾಜ್ಯಂ ಬೞಿಕೆ ನಡುವೆಸಂದಾಧಿರಾಜ್ಯಂ ಬೞಿಕ್ಕಂ
ತುದಿಯೊಳ್ ಕೈವಲ್ಯಸೌಖ್ಯಪ್ರದಮೆನಿಪ ತಪೋರಾಜ್ಯಮೆಂದೆಂತುಮೀಯಂ
ದದೆ ಸೇವ್ಯಂಗಳ್ ಮದೀಯಾನ್ವಯನೃಪರ್ಗದನಾಂತಪ್ಪಿರಾಜ್ಯೈಕಸೇವಾ
ಮದದಿಂದಿರ್ದಂದು ಕೀರ್ತೀಂದುಗೆ ಸಮನಿಸದೇ ದುರ್ಯಶೋರಾಹುರೋಧಮ || ೪೧

ವ || ಮತ್ತಂ –

ಚಂ || ಬಳಮೞಿದಿರ್ದ ತೋಳನಿೞಿಕೆಯ್ವಳಿಪಿಂದೆ ಪುರುಳ್ ಧುರಕ್ಕೆ ಕಂ (?)
ಟಳಿಸೆ ಕನಲ್ದು ಪೋಗೆ ಸಿರಿ ಬಂಧುವಧೂತತಿ ವೃದ್ಧರಾಜ್ಯಮೆಂ
ದೆಳಸದೆ ಕೂಡೆ ಬೇರ್ಪಡೆ ಬೞಿಕ್ಕಿವನಾನುೞಿವೊಂದು ಮಾತು ಭೂ
ತಳಭರಧಾರಣಕ್ಷಮಭುಜಾಬಳ ಪೇೞ್ ಪುನರುಕ್ತಮಲ್ಲವೇ || ೪೨

ವ || ಅದುಕಾರಣದಿಂ –

ಚಂ || ಸುರಪತಿಸೇವ್ಯಮಾನಮೆನಿಸಿರ್ದುದನೆನ್ನಯ ಸತ್ತ್ವಮಾತಪೋ
ಭರಮನಡುರ್ತು ತಾಳ್ದಲೆಳಸಿರ್ದುದಣಂ ಬಱಿಗಯ್ಯೊಳಾನಿದಂ
ಧರಿಯಿಪುದಾಯ್ತಶಕ್ಯಮದಱಿಂ ಧರಣೀಭರಮಂ ತ್ವದೀಯದೋಃ
ಪರಿಘದಿನಾಂತು ಪಿಂಗಿಪುದು ನಂದನ ದುರ್ವಹಭಾರಖೇದಮಂ || ೪೩

ವ || ಎನಲೊಡಮದಂ ಪ್ರತಿಷೇಧಿಸುವ ಬಗೆಯಿಂ ಕುಮಾರನಿಂತೆಂದಂ –

ಉ || ಜೀವದಯಾಪರಂ ಪರಮದೀಕ್ಷೆಯದಂ ತಳೆಯಲ್ಕೆ ನೀವಿದಂ
ದೇವಿಳೆಯಂ ಸಮಂತಿೞಿಯವಿಟ್ಟೊಡೆ ಶೇಷಫಣೌಘವಾತ್ಮಕಂ
ಠಾವಧಿಯಾಗೆ ತೞ್ಗಿದಪುದಾ ಕಮಠಾಧಿಪಖರ್ಪರಂ ಸ್ವವ
ಕ್ಷೋವಧಿಯಾಗೆ ಮೞ್ಗಿದಪುದೇನಿದು ಸಚ್ಚರಿತಾನುರೂಪಮೇ || ೪೪

ವ || ಎಂಬುದುಮರಸನದನೆ ಪಿಡಿದದುಕಾರಣದಿಂ ನೀಂ ಕುವಳಯಮಂ ನಿಜಕರಕ್ಕೆ ಲೀಲಾ ಕುವಳಯಂಮಾಡಿ ಶೇಷಾದಿಗಳ್ಗಸಹ್ಯಭಾರಸಂಹಾರಮುಮನೆನಗೆ ಪಾವನತಪೋವನ ಪ್ರಯಾಣಮಾಂಗಲ್ಯಾನುಕೂಲಮುಮಂ ನೀನೆ ಮಾೞ್ಪುದೆಂದು ಮತ್ತುತ್ತರಕ್ಕೆಡೆಯಿಲ್ಲದಂತು ನುಡಿಯೆ –

ಕಂ || ಈಡಿತಮೆನಗೆ ಸಮಂತಾ
ಮ್ರೇಡಿತಮುಂ ಮಹಿಪ ಬಗೆವೊಡೆಂದು ಮುಹುರ್ವಾ
ಕ್ಕ್ರೀಡೆಯನುೞಿದು ಕುಮಾರಕ
ಚೂಡಾಮಣಿ ತಂದೆಯೆಂದುದರ್ಕೆರ್ದೆಗೊಡಂ || ೪೫

ಮ || ಸ್ರ || ವಿಭು ತನ್ನಾತ್ಮೋತ್ತಮಾಂಗಸ್ಥಿತಮನತುಳರೋಮಾಂಚದೋರ್ಯುಗ್ಮದಿಂದಾ
ತ್ಮಭವಪ್ರೋತ್ತುಂಗಮೂರ್ಧಾಗ್ರದೊಳಿೞಿಪಲೊಡಂ ಪೂರ್ವಶೈಲೇಂದ್ರಚೂಡಾ
ನಿಭೃತೋದಗ್ರಾರ್ಕಬಿಂಬಪ್ರತಿನಿಧಿಯೆನಿಸಲ್ ಸಾಲ್ದುದೇದಿಪ್ಯಮಾನ
ಪ್ರಭಮೇಂಕಣ್ಗಿಂಬುವೆತ್ತಿರ್ದುದೊ ವಿಕಟಹಟದ್ರತ್ನಕೂಟಂ ಕಿರೀಟಂ || ೪೬

ವ || ಅಂತು ನಿಜಸಾಮ್ರಾಜ್ಯಭಾರಮನಿ ೞಿಪುವಂತಿ ೞಿಪಿ –

ಚಂ || ಅರಮನೆಯಂ ವಧೂವಿತತಿಯಂ ಸುತರಂ ಪರಿವಾರಮಂ ಮಹಾ
ಕರಿಕುಳಮಂ ತುರಂಗಬಳಮಂ ಪಟದೊಳ್ ದಿಟಮಾಗಿ ಚಿತ್ರಿಕಂ
ಬರೆದನೆಗೆತ್ತು ಬಾಱ್ತೆಗೆಯದಾಮಹಿಪಂ ಪೊಱಮಟ್ಟನಂತೆ ಸ
ತ್ಪುರುಷರದೇಕೆ ಬಂಜೆವಡಿಪರ್ ಗಡ ದುರ್ಲಭಕಾಲಲಬ್ಧಿಯಂ || ೪೭

ವ || ಅಂತು ಪೊಱಮಟ್ಟು ಪಲಂಬರರಸುಗಳ್ವೆರಸು ಶ್ರೀಧರತಪೋನಿಧಿಯ ಸನ್ನಿಧಿಯೊಳ್ –

ಕಂ || ಪರಿಹರಿಸಿ ಜಾತರೂಪೋ
ತ್ಕರಮಂ ಮತ್ತೊಂದು ಜಾತರೂಪಮನರಸಂ
ಧರಿಯಿಸಿದಂ ನಾಡೆ ಗುಣಾಂ
ಧರಿಯಿಸಿದಂ ನಾಡೆ ಗುಣಾಂ
ತರಮಱಿವರದೆಂತು ನೆಗೞ್ಪೊಡಂ ಲೇಸಲ್ತೇ || ೪೮

ವ || ಅಂತು ದುರ್ಧರತಪೋಧರನಾದಂ ಇತ್ತ ಪದ್ಮನಾಭಮಹೀಭುಜಂ –

ಕಂ || ಗುರುವಿರಹಜನಿತಚಿಂತಾ
ತರಂಗಿಣೀರಯಮನಾತ್ಮಕುಲವೃದ್ಧವಚ
ಸ್ತರಣಿಯಿನೆಂತಾನುಮಧಃ
ಕರಿಯಿಸಿದಂ ಪಿತೃವಿಯೋಗಮೇಂ ದುಸ್ತರಮೋ || ೪೯

ವ || ಅಂತು ವಿಷಾದವಿಮುಖನುಂ ರಾಜ್ಯಾನುಷ್ಠಾನುಭಿಮುಖನುಮಾಗಿ ಕ್ಷಯಲೋಭವಿರಾಗ ಕಾರಣಂಗಳನೊಡರ್ಚಿದುಭಯಪ್ರಕೃತಿಯುಮನನುರಕ್ತಂ ಮಾಡಿಯುಂ ವಾಕ್ರಂದಪಾರ್ಷ್ಣಿಗ್ರಾಹತಾತ್ಯಂತರ್ಧಿಗಳಂ ಷಾಡ್ಗುಣ್ಯದೊಳುಚಿತಗುಣಪ್ರಯೋಗದಿಂ ವಿಧೇಯತೆಯನೈದಿಸಿಯುಂ ಸಹಜಕೃತ್ರಿಮವಿದ್ವಿಷ್ಟಾದಶತೀರ್ಥಂಗಳೊಳ್ ವಿವಿಧ ವೇಷವಿದ್ಯಾವಿಶಾರದ ಪ್ರಚ್ಛನ್ನಪ್ರಣಿಧಿಗಳಂ ಪ್ರಯೋಗಿಸಿಯುಂ ಅಭಿತಾಪಮಾನಪ್ರಭೃತಿಭೃತ್ಯರನಭಯಸನ್ಮಾನಾದಿಗಳಿಂ ಸ್ವೀಕರಿಸಿಯುಂ ಪ್ರತ್ಯಕ್ಷಾನುಮಾನಂಗಳಿಂ ಕಾರ್ಯಾಕಾರ್ಯಂಗಳನುಪಧಾ ವಿಶುದ್ಧಮಂತ್ರಿಮಂಡಳದೊಳವಿರತಂ ನಿಘರ್ಷಿಸಿಯುಂ ದಿವಸದಾಯವ್ಯಯಸಂಭಾ ಷಣಂಗಳಿಂ ಕುಲ್ಯರಂ ಸೌಶೀಲ್ಯ ವೃತ್ತಿಗೆ ಸಲಿಸಿಯುಂ ಅತಿವ್ಯಸನಕ್ಷೀಣಧನಜನಂಗಳಂ ಮೂಲಧನದಾನದಿಂ ಸಂಭಾವಿಸಿಯುಂ ಸನ್ಮಾನದಾನದರ್ಶನಾಪಾದನಂಗಳಿಂದಂತಃ ಪುರಮಂ ಸಂತೋಷಂಬಡಿಸಿಯುಂ ನಿತ್ಯಪರೀಕ್ಷಣಸ್ಥಳವಿಪರ್ಯಪ್ರತಿಪತ್ತಿದಾನಂಗಳಿಂ ನಿಯೋಗಿಗಳಂ ಕಾಮದುಘರ್ ಮಾಡಿಯುಂ ಸ್ತ್ರೀಪುತ್ರದಾಯಾದ್ಯರತ್ತಣಿಂದಾ ತ್ಮರಕ್ಷಣೆಯಂ ವಿವಕ್ಷಿಸಿಯುಂ ವರ್ಣಾಶ್ರಮವ್ಯವಸ್ಥೆಗಳಂ ಸ್ವಸ್ಥಂಮಾಡಿಯುಂ ತುಳಾ ಮಾನವಿಶುದ್ಧಿಯಂ ವಿಚಾರಿಸಿಯುಂ ಅರಿಷಡ್ವರ್ಗಮನದಿರ್ಪಿಯುಂ ತ್ರಿವರ್ಗಮಂ ಸಮೀಕರಿಸಿಯುಂ ಮೂಳರಂ ಪಾಳಿಸಿಯುಂ ಕೋಶಮಂ ಪೋಷಿಸಿಯುಂ ಇಂತು ಸಾಮ್ರಾಜ್ಯಮಂ ನಿಷ್ಕಂಟಕಮುಂ ನಿಜಾಯತ್ತಮುಮೆನಿಸಿದನಲ್ಲದೆಯುಂ –

ಕಂ || ಕೋಪಪ್ರಸಾದಮಂ ತ
ದ್ಭೂಪತಿ ದುಷ್ಟರೊಳದುಷ್ಟರೊಳ್ ತಳೆದಂ ಸಂ
ತಾಪಪ್ರಿಯಕೃತಿಯಂ ತಾ
ರಾಪತಿ ವಿರಹಿಯೊಳವಿರಹಿಯೊಳ್ ತಾಳ್ದುವವೋಲ್ || ೫೦