ಕಂ || ಮನದಿಂದಾರಯದನ್ಯರ
ಮನೋಗತಾರ್ಥಂಗಳಂ ಸಮಂತಱಿವುದು ಸ
ನ್ಮುನಿಗಳ್ಗಲ್ಲದೆ ಪುಟ್ಟದು
ವಿನುತಮನಃಪರ್ಯಯಾಭಿಧಾನಂ ಜ್ಞಾನಂ || ೫೬

ಕ್ರಮದಿಂ ಋಜುಮತಿಯುಂ ವಿಪು
ಲಮತಿಯುಮೆಂದದಱ ಭೇದಮಿರ್ತೆಱನಕ್ಕುಂ
ಸಮಸಂದದ್ಯರ್ಧದ್ವೀ
ಪಮೆನಿಸಿ ಮೊದಲೆನಿಸುಗುಂ ನಿಜವ್ಯವಹೃತಿಯೊಳ್‌ || ೫೭

ವ || ಅಂತು ವಿಶಿಷ್ಟಬೋಧಚತುಷ್ಟಯಾಳಂಕೃತಚರಮಶರೀರಂ ಚಂದ್ರಪ್ರಭಮುನಿಪ್ರಭು ಪರಮ
ಪಂಚಮಜ್ಞಾನಸಂಜನನಕರಣಾತ್ಯಂತಶುದ್ಧಧ್ಯಾನೋದ್ಯೋಗಸಂಸಕ್ತಚಿತ್ತಂ ಛದ್ಮಸ್ಥಕಾಲಂ
ಮಾಸತ್ರಯಪ್ರಮಿತಮಾದುದೆಂಬಂದಿಂಗೆ-

ಕಂ || ಬಿತ್ತಿದೆನಗತುಳಫಳಸಂ
ಪತ್ತಿಯನಱಸಲ್ಕೆ ಬರ್ಪವೋಲಲ್ಲಿ ತಪೋ
ವೃತ್ತಿ ಸಮನಿಸಿದುದಲ್ಲಿಗೆ
ಮತ್ತೆೞ್ತಂದಂ ಸುಬೋಧಲಬ್ದಿನಿಮಿತ್ತಂ || ೫೮

ವ || ಅಂತು ಮುನ್ನೆ ದೀಕ್ಷಾಗ್ರಹಣಮಾದ ಶುಭಂಕರೋದ್ಯಾನಕ್ಕೆ ವಂದೊಂದು ನಾಗವೃಕ್ಷದ ಕ್ಷೂಣಚ್ಛಾಯಾಚ್ಛನ್ನಮಪ್ಪ ನಿರ್ಮಳಶಿಳಾತಳದೊಳ್‌ ಈರ್ಯಾಪರಿಶುದ್ಧೀಕರಣಾನಂತರಂ ಪೂರ್ವಾಭಿಮುಖನಾಗಿ-

ಮ || ಸ್ರ || ಕೃತಪರ್ಯಂಕಾಸನಂ ಸೂಸದೆ ನಿಲೆ ಕರಮುತ್ತಾನಕಸ್ವಸ್ತಿಕಂ ನಾ
ಭಿತಟನ್ಯಸ್ತಂ ಬೆಡಂಗಾಗಿರೆ ನಯನಯುಗಂ ನಿಶ್ಚಳಧ್ಯಾನಮುದ್ರಾಂ
ಕಿತಮಾದಂ ಚೆಲ್ವನಾಲಿಂಗಿಸೆ ವಿಶದಶಶಿಗ್ರಾವಸಂಶುದ್ಧಸಿದ್ಧ
ಪ್ರತಿಮಾನಿಷ್ಕಂಪನಿರ್ದಂ ಯತಿಪತಿ ಪರಮಧ್ಯಾನಯೋಗಪ್ರಯೋಗಂ || ೫೯

ವ || ಆಗಳ್-

ಚಂ || ಪರಿಹೃತವಾತಪಾತರುತಮುಜ್ಝಿತಪಲ್ಲವಕಂಪನಸ್ವನಂ
ವಿರಹಿತಕೀರತಾರರಣಿತಂ ಗತಕೋಕಿಳಕಾಕಳೀಕಮಂ
ತರಿತಮದಾಳಿಝಂಕೃತಮಪಾಕೃತಶಾರಿಚಟೂಕ್ತಿ ಚಿತ್ರದೊಳ್‌
ಬರೆದ ಬನಂಬೊಲಾದುದು ಬನಂ ಮುನಿಯೋಗವಿಘಾತಭೀತಿಯಿಂ || ೬೦

ವ || ಅಂತವ್ಯಗ್ರನುಂ ಬಾಹ್ಯಸಮಗ್ರಸಾಮಗ್ರನುಮಾಗಿ ಲೋಕಾಗ್ರಮನೆಯ್ದುವಾಗ್ರಹದಿಂ ತತ್ ಸ್ಥಾನನಿಷ್ಠಿತರಪ್ಪ ಸಿದ್ಧಪರಮೇಷ್ಠಿಗಳಷ್ಟಗುಣಂಗಳಂ ಕ್ಷಾಯಿಕಸಮ್ಯಕ್ತ್ವಮನಂತರ್ಜ್ಞಾ ನಮನಂತದರ್ಶನಮನಂತವೀರ್ಯಮಮೂರ್ತತ್ವಮವಗಾಹಿತ್ವಮಗುರುಲಘುತ್ವಮ ವ್ಯಾಬಾಧಿತ್ವಮೆಂಬಿವಂ ಪರಿಭಾವಿಸುತ್ತುಂ ಧ್ಯಾನೋನ್ಮುಖನಾಗಿ-

ಕಂ || ಪರಮಪ್ರವಚನರತ್ನಾ
ಕರಸಮುದಿತನವಪದಾರ್ಥದಿಂ ಮತಿಯನಳಂ
ಕರಿಸಿ ಮುನಿನಾಯಕಂ ಬಿ
ತ್ತರದಾಜ್ಞಾವಿಚಯವಿಳಸನೋಚಿತನಾದಂ || ೬೧

ಬಿಡದೆ ಚತುರ್ಗತಿಯೊಳ್ ಬೞಿ
ವಿಡಿದೞಲೆ ತೊೞಲ್ಚುತಿರ್ಪಘಪ್ರತತಿಯ ಬ
ಲ್ದೊಡರನೆ ಬಿಡಿಸುವ ಬಗೆಯೊಳ್
ತೊಡರ್ದಚಳನಪಾಯವಿಜಯಚಿಂತೆಯನಾಂತಂ || ೬೨

ಇರದೆ ಶುಭಾಶುಭಕರ್ಮ
ಸ್ವರೂಪಮಂ ತತ್ಫಲಂಗಳಂ ಪರಿವಿಡಿಯಿಂ
ಪರಿಭಾವಿಸೆ ಪರಮಯತೀ
ಶ್ವರನಂದು ವಿಪಾಕವಿಜಯಪರಿಚಿತನಾದಂ || ೬೩

ಕ್ರಮದಿನನುಪ್ರೇಕ್ಷೆಗಳೊಳ್
ಸಮಸಂದಾದ್ರವ್ಯಭೇದಸಂಸ್ಥಾನಮನಾ
ದಮೆ ಚಿಂತಿಸಿ ಮುನಿಮುಖ್ಯಂ
ಸಮಸ್ತಸಂಸ್ಥಾನವಿಜಯಸುಸ್ಥಿತನಾದಂ || ೬೪

ವ || ಅಂತು ಚತುರ್ವಿಧಧರ್ಮಧ್ಯಾನಮಂ ಧ್ಯಾನಿಸುತ್ತುಂ ನಿರತಿಶಯಲೇಶ್ಯಾವಿಶುದ್ಧನಧಃ ಪ್ರವೃತ್ತಮಪೂರ್ವನಿವೃತ್ತಮೆಂಬ ಕರಣತ್ರಯಶೋಷಣದಿನನಂತಾನುಬಂಧಿಸಂಜ್ಞೆಯಿಂ-

ಕಂ || ತಳೆದಿರ್ದಾದಿಕಷಾಯಂ
ಗಳನಾದಂ ಕ್ರೋಧಮಾನಮಾಯಾಲೋಭಂ
ಗಳನುೞಿದೀರಾಱಱೊಳಾ
ಗಳೆ ಯೋಗಿಜನಸ್ತುತಂ ವಿಸಂಯೋಜಿಸಿದಂ || ೬೫

ವ || ಅನಂತರಮಿನಿತುಬೇಗಂ ವಿಶ್ರಮಿಸಿ ಪೂರ್ವೋಕ್ತಕ್ರಮಮದಿಂ ಮಿಥ್ಯಾತ್ವಸಮ್ಯಗ್ಮಿಥ್ಯಾತ್ವ ಸಮ್ಯಕ್ತ್ವಪ್ರಕೃತಿಗಳೆಂಬ ದರ್ಶನಮೋಹನೀಯತ್ರಿತಯಮಂ ಲಯಕ್ಕೆ ಸಲಿಸಿ-

ಕಂ || ತ್ರಿಕರಣಪರಿಣತನೇೞುಂ
ಪ್ರಕೃತಿಗಳುಮನಿಂತು ಕಿಡಿಸಿ ತತ್‌ಕ್ಷಯದಿಂ ಕ್ಷಾ
ಯಿಕಸಮ್ಯಗ್ದೃಷ್ಟಿತ್ವಮ
ನಕಳಂಕಂ ತಳೆದು ಶುದ್ಧದರ್ಶನನಾದಂ || ೬೬

ವ || ಆಗಿ ಬೞಿಯಂ ಕರ್ಮವಿಕಾರಮಂ ಜೀವಸ್ವಭಾಮಂ ಪರಸ್ಪರಾತಿಕ್ರಮಮಂ ಮಾಡಿ ಸಂಕ್ಲೇಶವಿರೋಧಂಗಳ್ ನಿಯಮದಿಂ ಪರಾವರ್ತಿಸುವುದಱಿಂದಮುಂ ಶುದ್ಧೋಪ ಯೋಗಂ ಸಮೃದ್ಧಮಪ್ಪನ್ನೆಗಂ ಚಾರಿತ್ರಮೋಹೋದಯಮುಂ ಜ್ಞಾನವೈರಾಗ್ಯ ಸಂಪತ್ತಿಯು ಮೊಂದನೊಂದೊಟ್ಟಯಿಸುತಿರ್ಪುದಱಿಂ ಮುಂ ಅಂತರ್ಮುಹೂರ್ತಂಬರಂ ಪ್ರಮತ್ತಾ ಪ್ರಮತ್ತಾಪರಾವರ್ತನಸಹಸ್ರಂಗಳಂ ಕೞಿಪಿ ನಿಶ್ಶ್ರೇಯಸಾನಂತಬೋಧಸುಖಪ್ರಾಸಾ ದಾರೋಹಣನಿಶ್ರೇಣೀಭೂತಕ್ಷಪಕಶ್ರೇಣಿಯೋಗ್ಯಾಧಃಪ್ರಮತ್ತಕರಣಪರಿಣತಾತಿಶಯಾಪ್ರ ಮತ್ತಗುಣಸ್ಥಾನದೊಳ್‌ ಸ್ಥಿತಿಬಂಧಾಪಸರಣಸಹಸ್ರಂಗೆಯ್ದಿನಿತಾನುಂ ಬೇಗದಿಂ-

ಕಂ || ಉಪಗತಮಪೂರ್ಣಕರಣ
ಕ್ಷಪಕಗುಣಸ್ಥಾನಮಾಗೆ ತನಗೆ ಬೞಿಕ್ಕಾ
ತ್ಮಪರಂ ನಾಲ್ವತ್ತೆರಡೆಂ
ಬ ಪವಣ್ ನೆಲಸಿದ ವಿಕಲ್ಪದಿಂದೊಪ್ಪುವುದಂ || ೬೭

ವ || ಪೃಥಕ್ತ್ವವಿತರ್ಕವಿಚಾರಾಭಿಧಾನಮಂ ಪ್ರಥಮಶುಕ್ಲಧ್ಯಾನಮಂ ಧ್ಯಾನಿಸುತ್ತುಮಾಯುಷ್ಕರ್ಮ ಮುೞಿಯೆ ಉೞಿದಖಿಳಕರ್ಮಂಗಳಂ ಸ್ಥಿತ್ಯನುಭಾಗಕಾಂಡಕಾಘಗುಣಸಂಕ್ರಮಣಪ್ರದೇಶ ಗುಣಶ್ರೇಣಿನಿರ್ಜರೆಗಳಿನನುಕ್ರಮದಿಂ ಕಿಡಿಸುತ್ತುಂ ಪ್ರತಿಕ್ಷಣಮನಂತಗುಣಪ್ರಭಾವದೊ ಳೊಂದಿದೊಂದೊಂದೆ ಪರಿಣತಿಯ ನಿವೃತ್ತಿಕರಣಕ್ಷಪಕಗುಣಸ್ಥಾನಮಂ ಪೊರ್ದಿ ಪೂರ್ವೋಕ್ತ ಸ್ಥಿತಿಕಾಂಡಕಾದಿಕರಣದಿನಂತರ್ಮುಹೂರ್ತದೊಳ್ ಶುದ್ಧಪರಿಣಾಮದೊಳ್ ನಿದ್ರಾನಿದ್ರಾ ಪ್ರಚಲಾಪ್ರಚಲಸ್ಥಾನವೃದ್ಧಿ ನರಕತಿರ್ಯಗ್ಗತಿತತ್ಪ್ರಾಯೋಗ್ಯಾನುಪೂರ್ವೈ ಕೇಂದ್ರಿಯಜಾತ್ಯಾ ತಪೋದ್ಯೋತಸ್ಥಾವರ ಸಾಧಾರಣಸೂಕ್ಷ್ಮಂಗಳೆಂಬ ಷೋಡಶಪ್ರಕೃತಿಗಳಂ ನಿಶ್ಶೇಷಂ ಕಿಡಿಸಿ ಮತ್ತಮಂತರ್ಮುಹೂರ್ತದಿನತಿವಿಶುದ್ಧ ಪರಿಣಾಮಪರತಂತ್ರರಾಗಿ-

ಕಂ || ಅಪ್ರಭುಮುನಿಕುಲತಿಲಕನ
ಪಪ್ರತ್ಯಾಖ್ಯಾನಕರ್ಮಸತ್ವಂಗಳ ರೂ
ಪಪ್ರಳಯಮನೆಯ್ದಿಸಿದಂ
ಕ್ಷಿಪ್ರಮನುಕ್ರಮದೆ ತತ್ಕಷಾಯಾಷ್ಟಕಮಂ || ೬೮

ಬೞಿಕಂ ತತ್ಪರಿಣಾಮದೆ
ಬಳೆದಂತಃಕರಣಮಂ ತಗುಳ್ಚಿ ಚತುಸ್ಸಂ
ಜ್ವಳನನವಲೋಕಷಾಯಂ
ಗಳೆಂಬಘಪ್ರಕೃತಿಗಿಂತು ಪದಿಮೂಱಕ್ಕುಂ || ೬೯

ವ || ಮತ್ತಂ ಕತಿಪಯಸಮಯದೊಳನುಕ್ರಮದಿಂ ನಪುಂಸಕವೇದಂ ಸ್ತ್ರೀವೇದಮೆಂಬ

ಕಂ || ಎರಡುಮನದಿರ್ಪಿ ಸಮನಂ
ತರದೊಳ್‌ ಪುಂವೇದಪೂರ್ವಸತ್ಕರ್ಮಪರಂ
ಪರಮೊಱಸಿ ಕಿಡಿಸಿದಂ ಹಾ
ಸ್ಯರತ್ಯರತಿಶೋಕಭಯಜುಗುಪ್ಸೆಗಳಾಱಂ || ೭೦

ಸಮಯೋನದ್ಯಾವಳಿಕಾ
ಳಮಾತ್ರದಿಂ ಪುರುಷವೇದದಭಿನವಬಂಧ
ಕ್ರಮಮುಮನೞಱಿಸಿ ನಿರ್ವೇ
ದಮಯಂ ತಾನಾದನತಿಬಳಂಗರಿದುಂಟೇ || ೭೧

ವ || ಮತ್ತಂ ಪರಿಮೃಷ್ಟಾವಶಿಷ್ಟಸಂಜ್ವಳನಚತುಷ್ಟಯಮಂ ಪ್ರತಿಕ್ಷಣಂ ಪ್ರವರ್ತಮಾನಾನು ಭಾಗಾಶ್ವಕರ್ಣಕರಣಪೂರ್ವಸ್ಪರ್ಧಕಮರ್ದನದಿನಂತರ್ಮುಹೂರ್ತಮಂ ಕೞಿಪಿ ಬೞಿಯ ಮುಚಿತಕೃಷ್ಟಿಕ್ರಿಯೆಯಿಂ ಪೂರ್ವಾಪೂರ್ವಸ್ಪರ್ಧಕಾನುಭಾಗಮನನಂತಗುಣಹಾನಿರೂಪ ದಿಂ ದ್ವಾದಶಸಂಗ್ರಹಕೃಷ್ಟಿಗಳಂ ಮಾಡುತ್ತುಮಂತರ್ಮುಹೂರ್ತದಿಂ ಕೃಷ್ಟಿರೂಪಪ್ರವಿಷ್ಟ ಚತುಃಕಷಾಯಸಮಸ್ತಾನುಭಾಗನಾಗಿ ಮತ್ತಮಿನಿತು ಬೇಗದಿಂ ಪ್ರತ್ಯೇಕಂ ತ್ರಿವಿಧಮಪ್ಪ ಕ್ರೋಧಮಾನಮಾಯಾಸಂಜ್ವಳನಕೃಷ್ಟಿಗಳನನುಕ್ರಮದಿಂ ಬೇಱೆವೇಱೆ ಕಿಡಿಸಿ ಮೂಳೋಚ್ಛಿ ತ್ತಿಯಂ ತತ್ಕಷಾಯತ್ರಯಕ್ಕೆ ಪಡೆದು ಮತ್ತಂ ಕಿಱಿದುಬೇಗದಿಂ ಲೋಭಸಂಜ್ವಳನಪ್ರಥಮ ಕೃಷ್ಟಿಗತಾನುಭಾಗಮಂ ಭಂಜಿಸಿ ಬೞಿಯಮೆರಡನೆಯ ಕೃಷ್ಟಿಗತಾನುಭಾಗಮಂ ಭಾವಿಸು ತ್ತುಂ ಬಾದರಸಾಂಪರಾಯಕೃಷ್ಟ್ಯಾನುಭಾಗಮನನಂತಗುಣಹಾನಿರೂಪದಿಂ ತುಂದಿಸಿ ಸೂಕ್ಷ್ಮಸಾಂಪರಾಯಕೃಷ್ಟಿಗಳಂ ಮಾಡುತ್ತುಮಂತರ್ಮುಹೂರ್ತಕಾಲದಿಂ ಬಾದರಲೋಭ ಸಂಜ್ವಳನಮಂ ಕಿಡಿಸಿ ಸಾಮಾಯಿಕಚ್ಛೇದೋಪಸ್ಥಾಪನಾಶುದ್ಧಿಸಂಯಮಸಮೇತಾನಿವೃತ್ತಿ ಕರಣಕ್ಷಪಕಗುಣಸ್ಥಾನಮಂ ದಾಂಟಿ ಸಮನಂತರದಿಂ ಸೂಕ್ಷ್ಮಸಾಂಪರಾಯಸಂಯಮೋಪ ಯುಕ್ತ ಸೂಕ್ಷ್ಮಸಾಂಪರಾಯಕ್ಷಪಕನಾಗಿ-

ಕಂ || ಪ್ರಕಟಂ ಯಥೋಕ್ತಪರಿಣಾ
ಮಕಾಲದಿಂ ಕೞಿಪಿ ಸೂಕ್ಷ್ಮಲೋಭಕಷಾಯ
ಪ್ರಕೃತಿಯುಮನಷ್ಟವಿಂಶತಿ
ವಿಕಲ್ಪರಿಪುಮೋಹನೀಯಬಲಮಂ ಗೆಲ್ದಂ || ೭೨

ವ || ಅನಂತರಂ ವಿಗತರಾಗದ್ವೇಷಭಾವಿಸಂಭಾವಿತಯಥಾಖ್ಯಾತಚಾರಿತ್ರಪವಿತ್ರಕ್ಷೀಣಕಷಾಯ ವೀತರಾಗಚ್ಛದ್ಮಸ್ಥಸಂಯತಗುಣಸ್ಥಾನಮಂ ಕರಣಲಬ್ಧಿಯ ಪರಮಪ್ರಕರ್ಷದಿಂ ಪಡೆದು ಶುದ್ಧನಿಶ್ಚಯನಯದಿಂ ಸ್ಪರ್ಶರಸಗಂಧವರ್ಣದೂರಮುಂ ಕಾರಣಸಮಯಸಾರಮುಮನಾ ದ್ಯನಿಧನಚೈತನ್ಯಮಯಮುಮಪ್ಪ ನಿಜನಿರಂಜನಪರಮಾತ್ಮಜ್ಯೋತಿಯೊಂದನೆ ನಿರ್ವಿಕಲ್ಪ ಕನಿಶ್ಚಯಭಾವಂ ಶ್ರುತಜ್ಞಾನದಿನವಳಂಬಿಸಿ ನಿಶ್ಚಳಮಾಗಿರ್ಪ-

ಕಂ || ಕೇವಲಮೇಕತ್ವವಿತ
ರ್ಕಾವೀಚಾರದ್ವಿತೀಯಶುಕ್ಲಧ್ಯಾನ
ಶ್ರೀವಿಳಸನದಿಂ ಮಾಡು
ತ್ತಾವಿಭು ಬಹಳಪ್ರದೇಶನಿರ್ಜರೆಗಳುಮಂ || ೭೩

ವ || ಆ ಗುಣಸ್ಥಾನದುಪಾಂತ್ಯಸಮಯದೊಳ್ ನಿದ್ರಾಪ್ರಚಲೆಗಳಂ ಕಿಡಿಸಿ ಚರಮಸಮಯ ದೊಳೊರ್ಮೊದಲೊಳೆ-

ಕಂ || ತವಿಸಿದನೆಯ್ದೆ ಮತಿಶ್ರುತ
ಮವಧಿಮನಃಪರ್ಯಯಾಹ್ಪಯಂ ಕೇವಳಮೆಂ
ಬಿವಱೂವರಣಮನಯ್ದುಮ
ನವದಾತಚರಿತ್ರನಿರತನಾತ್ಮೈಕರತಂ || ೭೪

ನಿಧನಮನೆಯ್ದಿಸಿದಂ ಸುಗು
ಣಧನಂ ತತ್ತ್ವೈಕಸಾಧನಂ ವಿಜಿತಾರಿ
ಪ್ರಧನಂ ಚಕ್ಷುರಚಕ್ಷುರ
ವಧಿಕೇವಳದರ್ಶನಾವರಣಮಂ ನಾಲ್ಕಂ || ೭೫

ವಿಭು ದಾನಲಾಭಭೋಗೋ
ಪಭೋಗವೀರ್ಯಾಂತರಾಯಪಂಚಕಮಂ ವೀ
ತಭಯಂ ಲಯಕ್ಕೆ ಸಲಿಸಿದ
ನಭೂತಪೂರ್ವಪ್ರಭಾವನತಿಶಯವಿಭವಂ || ೭೬

ವ || ಅಂತು ಘಾತಿಚತುಷ್ಟಯಕ್ಕಂ ಕದಳೀಘಾತಂ ಮಾಡಲೊಡಂ-

ಮ || ವಿ || ಪದಪಿಂ ಸಂಯುತಚಕ್ರಮೆಯ್ದೆ ಲಯಮಂ ಘಾತ್ಯಂಧಕಾರಂ ಪ್ರತಾ
ಪದ ಪೆಂಪೊಂದಿರೆ ರಾಗಮಂ ಪಡೆಯೆ ಸದ್ಭವ್ಯಾಶಯಾದ್ಯಶೆ ಮಾಂ
ದದ ಕುಂದಂ ಕುಮುದೋತ್ಪಳಂ ತಳೆಯೆ ತಚ್ಚಂದ್ರಪ್ರಭಪ್ರಾಙ್ನಗೇಂ
ದ್ರದೊಳಂದಾದುದು ಕೇವಳಾವಗಮಭಾಸ್ವದ್ಭಾನುಬಿಂಬೋದಯಂ || ೭೭

ಕಂ || ಅನಘಂಗೆ ಕೇವಲಜ್ಞಾ
ನನೇತ್ರಮುನ್ಮೀಳಿಸಿತ್ತು ಸರ್ವಗತಂ ಫಾ
ಲ್ಗುನಮಾಸಬಹುಳಸಪ್ತ
ಮ್ಯನುರಾಧೆಯೊಳೊಂದಿ ಸಂದ ಸಾಯಂತನದೊಳ್ || ೭೮

ಸಮಸಂದ ಮತಿಶ್ರುತಮವ
ಧಿಮನಃಪರ್ಯಯಮೆನಿಪ್ಪುವುೞಿದಿರೆ ತನ್ನೊಳ್
ಕ್ರಮಕರಣವ್ಯವಧಾನ
ಪ್ರಮುಕ್ತಮೆಸೆದತ್ತು ವಿಮಳಕೇವಳಬೋಧಂ || ೭೯

ಸುರಶಿಖರಿ ಭಾಸ್ವರಜ್ಯೋ
ತಿರಂಗಮಂ ಜಳಧಿ ವಿಮಳಮಣಿಯಂ ಗಗನಂ
ಸ್ಫುರದಿಂದುವನಾಂತಂತಿರೆ
ಪರಮಂ ಕೈವಲ್ಯಬೋಧಮಂ ತಳೆದೆಸೆದಂ ||

[1] ೮೦

ವ || ಮತ್ತಂ ತತ್ಸಮಯದೊಳ್‌ ಲಬ್ಧಕ್ಷಾಯಿಕಸಮ್ಯಕ್ತ್ವಾದಿ ನವಕೇವಳಲಬ್ಧಿಯಾಗೆ-

ಕಂ || ಆಧ್ಯಾತ್ಮಿಕಮೆನಿಸಿದ ಶು
ಕ್ಲಧ್ಯಾನಮೆ ಬಳೆದು ಪೊಱಗೆ ಬಳಸಿದುದೆನೆ ವಿ
ಶ್ವಧ್ಯೇಯನ ಚರಮಾಂಗದೊ
ಳಧ್ಯಾಸಿತಮಾಯ್ತು ಮೆಯ್ಯ ದೀಪ್ತಿನಿಕಾಯಂ || ೮೧

ವ || ಅಂತು ಯುಗಪತ್ಸಮುದಿತಸಹಸ್ರಸಹಸ್ರಪ್ರಭಪ್ರಭಾಭಾಸುರಪರಮೌದಾರಿಕಶರೀರಂ ಪಂಚಶತಷಚಾಪೋತ್ಸೇಧಮಾ ಗಗನಕ್ಕೆ ನೆಗೆಯಲೊಡಮಮರೇಂದ್ರನಾಸನಕಂಪದೊಡನೆ-

ಕಂ || ವನಭವನಜ್ಯೋತಿರ್ಲೋ
ಕನಾಕಮೆಂಬಿವೞೊಳೆಯ್ದೆ ಭೇರೀಶಂಖ
ಸ್ವನಮುಂ ಗಜಾರಿಘಂಟಾ
ಧ್ವನಿಗಳುಮಕೃತಂಗಳೊಗೆದುವಿರದೊರ್ಮೊದಲೊಳ್‌ || ೮೨

ಲೋಕತ್ರಯವರ್ತನಮುಮ
ನಾ ಕೇವಳಬೋಧನೇಕಸಮಯದೊಳಿಂತ
ವ್ಯಾಕುಳಮಱಿವವೊಲಱಿದಂ
ಲೋಕತ್ರಯಮಂ ತದುದಯಮಂ ತತ್‌ಕ್ಷಣದೊಳ್‌ || ೮೩

ಶಾ || ಪಾತಾಳಾವಸಥಂ ಮಹಾವನಸಮೂಹಂ ಸ್ವರ್ವಿಮಾನೋತ್ಕರಂ
ಜ್ಯೋತಿರ್ಲೋಕಮಿವೆಯ್ದೆ ಪಾೞೆನಿಸಿ ಬಂದತ್ತಾವಗಂ ತತ್ಫಣಿ
ವ್ರಾತಂ ವ್ಯಂತರದೇವಸಂತತಿ ದಿವೌಕಸ್ಸಂಕುಳಂ ಚಂಕನತ್
ಜ್ಯೋತಿಷ್ಕಾವಳಿ ಕೇವಳಾವಗಮಕಲ್ಯಾಣೋತ್ಸವೋತ್ಸುಕ್ಯದಿಂ || ೮೪

ಚಂ || ಗಗನಮನಂತಮೆಂಬ ನುಡಿ ಸತ್ಯಮದಲ್ಲದೊಡೆಯ್ದೆ ಬರ್ಪ ದೇ
ವಗಣದನೂನಯಾನನಿಕರಕ್ಕೆ ವಿಭೂಷಣರತ್ನರಶ್ಮಿರಾ
ಜಿಗೆ ವಿವಿಧಧ್ವಜಪ್ರತತಿಗಿದ್ಧಚತುರ್ವಿಧವಾದ್ಯನಿಸ್ವನಾ
ನುಗಜಯಜೀವನಂದತುಮುಲಧ್ವನಿಗಿಂತೆಡೆಯಾಗಿ ತೋರ್ಕುಮೇ || ೮೫

ವ || ಅನ್ನೆಗಂ-

|| ಮಂದಾಕ್ರಾಂತೆ ||
ವ್ಯಾಧೂತೋದ್ಯಚ್ಚಮರಜಮಿಳನ್ಮೌಳಿಭೂಷಾಮಣಿಶ್ರೇ
ಣೀಧಾಮೋದ್ಯೋತಿತದಶದಿಶಂ ಜೈನಕೈವಲ್ಯಕಲ್ಯಾ
ಣಾಧೀನಾತ್ಮಂ ಸುರಪರಿವೃಢಂ ಸಿಂಧುರೇಂದ್ರಾಧಿರೂಢಂ
ಸೌಧರ್ಮೇಂದ್ರಂ ಶಚಿವೆರಸು ಬಂದಂ ಮಹಾನಂದದಿಂದಂ || ೮೬

ಮ || ವಿ || ತ್ರಿದಶಸ್ತ್ರೀಚಯಮುದ್ಘಶೋಣಮಣಿದೀಪಶ್ರೇಣಿಯಂ ಪಾರಿಜಾ
ತದಳತ್ಪುಷ್ಪಕದಂಬಮಂ ವಿವಿಧರತ್ನಾಮತ್ರಸಂದೋಹಮಂ
ಮುದದಿಂ ತಾಳ್ದಿ ಬರುತ್ತೆ ಮತ್ತೆ ತಳೆದತ್ತಿತ್ತಾವಗಂ ಜ್ಯೋತಿರಂ
ಗದ ಮಾಲ್ಯಾಂಗದ ಭಾಜನಾಂಗದ ಚಳಚ್ಛಾಖಾವಳೀಲೀಲೆಯಂ || ೮೭

ಕಂ || ಪೊಳೆವೆಳಮಿಂಚುಗಳಂಬರ
ತಳದೊಳ್‌ ಮಿಳಿರ್ವಂತೆ ದಿವಿಜನರ್ತಕಿಯರ್ ಗೊಂ
ದಳದಿಂದೆ ಗೀತವಾದ್ಯಂ
ಗಳ ಲಯದಿಂ ನರ್ತಿಸುತ್ತೆ ಬಂದರ್ ಪಲರುಂ || ೮೮

ವ || ಅಂತು ನಭೋವಿಭಾಗಮೆಲ್ಲಂ ಚಂದ್ರಮಂಡಲಮಯಮುಂ ದಿಶಾಪ್ರದೇಶಮೆಲ್ಲಂ ಸುರಶರಾಸನಮಯಮುಂ ವಸುಧಾವಳಯಮೆಲ್ಲಂ ತಾರಕಾಮಯಮುಮಾದುದೆಂಬಂತಿ ರೆತ್ತಿದ ಮುತ್ತಿನ ಸತ್ತಿಗೆಯ ಮೊತ್ತಮುಂ ಪಸರಿಸಿದ ಪಲತೆಱದ ಮಣಿದೊಡವುಗಳ ಬೆರಕೆವೆಳಗುಗಳ ಬಳಗಮುಂ ಅಲ್ಲೊಕ್ಕ ಪುಷ್ಪವೃಷ್ಟಿಯ ಪಾರಿಜಾತದರಲ ನೆರವಿಯುಂ ಅತ್ತೆತ್ತಲುಮತ್ಯಂತಶೋಭಾವಳಂಬಮಾಗೆ ಚತುರ್ನಿಕಾಯಾಮರಸಮನ್ವಿತಂ ಬಂದು ಮುನ್ನಮೆ ತನ್ನಬೆಸದಿಂ ವೈಶ್ರವಣನಶ್ರಾಂತಭಕ್ತಿಯಿಂದ ಸಮೆದ ಸಮವಸರಣಮಂಡಳ ಮದಾಖಂಡಳ ಪೊಕ್ಕು ತನ್ಮಧ್ಯಸ್ಥಿತೋತ್ತುಂಗಸಿಂಹಾಸನಮನಳಂಕರಿಸಿರ್ದ ಭುವನ ತ್ರಯಜ್ಯಾಯನಂ ತ್ರಿಪ್ರದಕ್ಷಿಣಂಗೆಯ್ದು ನಿಟಿಳನಿಹಿತಮುಕುಳಿತಕರಸರೋಜನಾಗಿ-

|| ಪೃಥ್ವೀವೃತ್ತಂ ||
ಸ್ತವಾವಳಿಗೆ ವಾಙ್ಮಯಂ ಸ್ಮೃತಿಗೆ ತಾಂ ಮನೋವೃತ್ತಿಯೆಂ
ಬಿವಾರಯೆ ಸಮನ್ತುಪಾಯಮೆನಿಸಿರ್ದುವಿರ್ದಂದುಮೇಂ
ಅವಾಙ್ಮನಸಗೋಚರಂ ದಿಟಕೆ ನೀಂ ಬೞಿಕ್ಕಾವುದೀ
ಭವಚ್ಚರಣಸೇವೆಯೊಳ್ಕ್ರಿಯೆ ಜಿನೇಂದ್ರಚಂದ್ರಪ್ರಭಾ || ೮೯

ಕಷಾಯಕಲುಷಾತ್ಮರಂ ಬಗೆದು ದೇವರೆಂದಾವಗಂ
ವಿಷಾದವಿಕಳತ್ವಮಂ ತಳೆವರನ್ಯರಜ್ಞಾನದಿಂ
ನಿಷೇವ್ಯಜಳಮೋಹದಿಂ ಮರುಮರೀಚಿಯಂ ಪೊರ್ದುವಾ
ತೃಷಾರ್ತಮೃಗಜಾಳದಂದದೆ ಜಿನೇಂದ್ರಚಂದ್ರಪ್ರಭಾ || ೯೦

ಅವಾರ್ಯಕುಮತಾವಳಿವಿಷಮನಕ್ರಚಕ್ರಾಕುಳಂ
ಭವಾಂಬುನಿಧಿ ದಾಂಟಲೆಂದರೆಬರಂತದಂ ಸಾರ್ವುದುಂ
ಭವನ್ಮತಬಹಿತ್ರಮಂ ತಳೆದು ಕರ್ಣಧಾರತ್ವಮಂ
ನಿವೇದಿಸಿ ಸುಮಾರ್ಗಮಂ ಪೊರೆ ಜಿನೇಂದ್ರಚಂದ್ರಪ್ರಭಾ || ೯೧

ಜರತ್ತೃಣಜುಗುಪ್ಸೆಯಿಂ ಬಿಸುಟಹೀಂದ್ರಮರ್ತ್ಯೇಂದ್ರನಿ
ರ್ಜರೇಂದ್ರಪದಮಂ ಪದಾನತರ್ಗೆ ಮತ್ತೆ ನೀನೀವುದೇಂ
ಕರಂ ಬಗೆಯೆ ಚೋದ್ಯಮೇ ಬಯಸಿ ತಾಳ್ದಿದಾರ್ಹಂತ್ಯಮಂ
ನಿರಾಕುಳಿತಮೀವೆಯೆಂದೊಡೆ ಜಿನೇಂದ್ರಚಂದ್ರಪ್ರಭಾ || ೯೨

ಲಸತ್ಸಿತಸರೋಜಮಂ ಹಿಮಕರೋಪಳಾದರ್ಶಮಂ
ಪ್ರಸಿದ್ಧವಿಧುಬಿಂಬಮಂ ನೆಲೆಯಿವಲ್ಲವೆಂದೆಲ್ಲಮಂ
ಬಿಸುಟ್ಟುಮವಿಕಾರದೊಳ್ ನೆಲಸಿದತ್ತು ತನ್ನಿಚ್ಛೆಯಿಂ
ಪ್ರಸನ್ನತೆ ನಿಜಾಸ್ಯದೊಳ್ ಸಲೆ ಜಿನೇಂದ್ರಚಂದ್ರಪ್ರಭಾ || ೯೩

ತ್ವದೀಯ ತನುಚಿಂತೆಯಂ ಪಡೆಯೆ ನಿತ್ಯನೈಶ್ಚಿಂತ್ಯಮಂ
ತ್ವದೀಯಪದಪೂಜೆಯೊಳ್ ತೊಡರೆ ಲೋಕಪೂಜ್ಯತ್ವಮಂ
ತ್ವದೀಯಗುಣಕೀರ್ತನಕ್ಕೆಳಸೆ ಕೀರ್ತಿಯಂ ನೀನೆ ಮಾ
ಣದೀವೆ ವೀಪರೀತಮಿಂತಿದು ಜಿನೇಂದ್ರಚಂದ್ರಪ್ರಭಾ || ೯೪

ಸ್ಮರಂ ಸ್ಮರಣಮಾತ್ರದಿಂ ಪಡೆದನರ್ಧನಾರೀತ್ವಮಂ
ಹರಂಗೆ ದಿಟಮೆಂದೆ ನಿನ್ನೊಳಮಡುರ್ತಹಂಕಾರದಿಂ
ವಿರೋಧಿಸಿ ಹತಪ್ರಭಂ ಸೆಡೆದನಂತೆ ದಲ್ ಕಾರಣಂ
ಪರಾಭವಕೆ ಗರ್ವಮಲ್ಲದೆ ಜಿನೇಂದ್ರಚಂದ್ರಪ್ರಭಾ || ೯೫

ಪದಂ ನಿನಗೆ ಮುಕ್ತಿಯೊಂದೆ ಕುಡುತಿರ್ಪೆ ನೀನಂತದಂ
ಪದಾಶ್ರಿತರ್ಗೆ ಸಂತತಂ ಪಲರ್ಗೆ ಕೊಟ್ಟೊಡಂ ಮತ್ತೆ ತ
ತ್ಪದಚ್ಯುತಿಯದಿಲ್ಲ ನಿನ್ನೊಳಿದು ಚೋದ್ಯಮೇ ತ್ವತ್ಪ್ರಭಾ
ವದಿಂದೆ ದೊರೆಕೊಳ್ಳದಾವುದೊ ಜಿನೇಂದ್ರಚಂದ್ರಪ್ರಭಾ || ೯೬

ವ || ಎಂದು ಸಮಸ್ತಾಮರಸಮೇತಂ ಸ್ತುತಿಗೆಯ್ದು ಮಾಣದೆ ಮತ್ತಂ-

ಮ || ಸ್ರ || ಸಮನೋದಾಮಂಗಳಂ ಸಂಗಳಿಸು ಕನಕಕುಂಭಂಗಳಂ ತುಂಬು ತೀರ್ಥಾಂ
ಬುಮನುದ್ಯದ್ಗಂಧಮಂ ಗಂಧಮನಳವಡಿಸುತ್ಕೃಷ್ಟಮಂ ಕೊಳ್‌ ಫಲವ್ರಾ
ತಮನಾ ನೈವೇದ್ಯಮಂ ವರ್ಧಿಸು ಸರಭಿಲಸದ್ಧೂಪಮಂ ಕೂಡು ದೀಪೋ
ದ್ಗಮಮಂ ಮಾಡಕ್ಷತಕ್ಷಾಳನಮನೊಡರಿಸೆಂದಿಂದ್ರನಿಂದ್ರಾಣಿಗೆಂದಂ || ೯೭

ವ || ಎನಲೊಡಮೊಡನೆ ತಂದವಟಯ್ಸಿದನೇಕದಿವ್ಯಾರ್ಚನಾದ್ರವ್ಯಂಗಳನೞ್ತಿವೆರಸರ್ಚಿಸಿಯು ಮಿಂತು-

ಮ || ಸ್ರ || ವರತೀರ್ಥಾಧೀಶಸೇವೋತ್ಸವದೊಳೆ ಮನಮಂ ತದ್ಗುಣಸ್ತೋತ್ರವೃತ್ತೋ
ತ್ಕರಪಾಠಪ್ರಸ್ತುತೋದ್ಯೋಗದೊಳೆ ವಚನಮಂ ತತ್ಪದಾಂಭೋಜಪೂಜಾ
ಕರಣಪ್ರಾಚುರ್ಯಕಾರ್ಯಾಂತರದೊಳೆ ತನುವಂ ಯೋಜಿಸುತ್ತಿರ್ದನಿಂದ್ರಂ
ಪಿರಿದೊಂದಾನಂದದಿಂದಂ ಸುಕೃತಿ ಸಕಳ ಸಾಹಿತ್ಯವಿದ್ಯಾವಿನೋದಂ || ೯೮

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಕೇವಲಜ್ಞಾನೋದಯೋತ್ಸವಂ
ಚತುರ್ದಶಾಶ್ವಾಸಂ

 


[1] ಸಿರಿಸಾರದೆಯರ್ ಸಹಬಂ
ಧುರರುಚಿಸಂಪೂರ್ಣಚಂದ್ರನಮೃತಾಕರನೊಳ್‌
ಮೆಱೆವಂತನಂತಲಕ್ಷ್ಮೀ
ಪರಮಶ್ರೀಚಂದ್ರನಾಥನೇನೊಪ್ಪಿದನೋ ||

ಈ ಪದ್ಯವು ೮೦ನೆಯ ಪದ್ಯವಾದ ಮೇಲೆ ಒಂದು ಪ್ರತಿಯಲ್ಲಿ ಮಾತ್ರ ಇದೆ; ಗ್ರಂಥಕರ್ತನದಲ್ಲವೆಂದು
ತೋರುತ್ತದೆ