ಕಂ || ಶ್ರೀಯಂ ತಳೆದಂ ತ್ರಿಜಗ
ಜ್ಜ್ಯಾಯಂ ವಿಮಳಾಂತರಂಗಬಹಿರಂಗಪದ
ಸ್ಥಾಹಿನಿಯಂ ಭವ್ಯೋತ್ಸವ
ದಾಯಿನಿಯಂ ಜೈನಜನಮನೋಹರಚರಿತಂ || ೧

ಒಳಗಣ ರತ್ನಪ್ರಕರಂ
ಗಳಿನಮೃತಪಯೋಧಿ ಸೊಗಯಿಪೊಂದಂದದೆ ತ
ನ್ನೊಳಗಣ ರತ್ನತ್ರಿತಯಂ
ಗಳಿನಮೃತಶ್ರೀವಧೂಪ್ರಿಯಂ ಸೊಗಯಿಸಿದಂ || ೨

ತಾಂ ಭುವನಭೂಷಣಂ ತನ
ಗಿಂ ಭೂಷಣಮೇವುದೆಂಬ ತೆಱದಿಂ ಜಿನದೇ
ಹಂ ಭೂಷಣಗಣರಹಿತಮ
ದೇಂ ಭೂರಿತರೋಪಶೋಭೆಯಂ ತಾಳ್ದಿದುದೋ || ೩

ವ || ಅಂತನಂತಚತುಷ್ಟಯಲಕ್ಷ್ಮೀಸಮಾಶ್ಲಿಷ್ಟನುಮಷ್ಟಮಹಾಪ್ರಾತಿಹಾರ್ಯಪ್ರಕೃಷ್ಟನುಂ ಕಾಯಾ ಕಾರಪರಿಣತತ್ರಿಲೋಕಾಗಣ್ಯಪುಣ್ಯಪುದ್ಗಳಪುಂಜಾಯಮಾನಪರಮೌದಾರಿಕಶರೀರನುಂ ಅಷ್ಟಾದಶದೋಷದೂರನುಂ ಸಪ್ತರ್ಧಿಸಮುದಯಸಂತತೋಪಾಸ್ಯನುಂ ಅಹಮಿಂದ್ರ ನಮಸ್ಯನುಂ ಸಿದ್ಧಾಶೇಷಸಾಧ್ಯನುಂ ಬುದ್ಧಸಮಸ್ತಬೋಧ್ಯನುಮಾಗಿರ್ಪಿನಂ ಸೌಧರ್ಮೇಂ ದ್ರಪ್ರೇರಿತನುಂ ಭವ್ಯಸಾರ್ಥಪ್ರಾರ್ಥಿತನುಮಾಗಿ-

ಕಂ || ವರಬುದ್ಧಿಚತುಷ್ಟಯಪರಿ
ಕರಿತಂ ಜ್ಞಾನರ್ಧಿಭಾಸುರಂ ಬೆಸಗೊಂಡಂ
ಭರದೆ ಕೃತಾಂಜಲಿ ತತ್ತ್ವ
ಸ್ವರೂಪಮಂ ದತ್ತಗಣಧರಾಗ್ರಣಿ ಜಿನನಂ || ೪

ವ || ಅಂತು ಬೆಸಗೊಳಲೊಡಂ-

ಕಂ || ದೂರಾಸನ್ನಸಮಂ ಗಂ
ಭೀರತರಂ ವ್ಯಾಪ್ತನಿಖಿಳತತ್ತ್ವಂ ಪರಮೋ
ದಾರಂ ವ್ಯಪಗತವದನವಿ
ಕಾರಂ ಪೊಣ್ಮಿದುದು ಜಿನನ ದಿವ್ಯನಿನಾದಂ || ೫

ವ || ಮತ್ತಂ-

ಕಂ || ಭೂರಿತರಭವ್ಯಪುಳಕವಿ
ಡೂರಾಂಕುರಜನನಕಾರಿ ಮುನಿಹಂಸಮನೋ
ಹಾರಿಯೆಸೆದುದು ಶಶಿಪ್ರಭ
ಶಾರದನೀರಧರಗರ್ಜಿತಂ ದಿವ್ಯರವಂ || ೬

ವ || ಆ ದಿವ್ಯಭಾಷೆಯಿಂ ಜಗತ್ಸೇವ್ಯನಿಂತೆಂದು ಬೆಸಸಿದಂ- ತತ್ತ್ವಮೆಂಬುದು ಜೀವಾಜೀವಾಸ್ರವ ಬದ್ಧಸಂವರನಿರ್ಜರಾಮೊಕ್ಷಭೇದದಿಂ ಸಪ್ತಪ್ರಕಾರಮಕ್ಕುಂ ಅಲ್ಲಿ-

ಕಂ || ಪರಿಕಿಪೊಡೆ ಪುಣ್ಯಪಾಪಮ
ವೆರಡುಂ ಬಂಧಾನುಬಂಧಿಗಳ್‌ ಬೇಱವನಿಂ
ನಿರವಿಪೊಡೆ ನವಪದಾರ್ಥತೆ
ದೊರೆಕೊಳ್ಗುಮಿವರ್ಕನುಕ್ತಮಾದ್ವಯಮದಱಿಂ || ೭

ಆರಯ್ವೊಡಮೂರ್ತಂ ಸ್ವಶ
ರೀರಮಿತಂ ನಿಜದಿನೂರ್ಧ್ವಗತಿ ಸಂಭವಸಂ
ಹಾರದ್ರವ್ಯಾತ್ಮಂ ಸಂ
ಸಾರಸ್ಥಂ ಕರ್ತೃಭೋಕ್ತೃವೆನಿಕುಂ ಜೀವಂ || ೮

ವ || ಆ ಜೀವಮುಂ ಭವ್ಯಾಭವ್ಯಭೇದದಿಂ ದ್ವಿಪ್ರಕಾರಂ ಅವರ್ಕೆ ನರಕತಿರ್ಯಙ್ಮನುಷ್ಯದೇವ ಗತಿವಿಕಲ್ಪದಿಂ ಚತುರ್ಭೇದಮಕ್ಕುಂ ಆ ನರಕ ಭೂಮಿಗಳುಂ ಅಧೋಲೋಕದೊಳ್ ರತ್ನಪ್ರಭೆ ಶರ್ಕರಪ್ರಭೆ ವಾಳುಕಪ್ರಭೆ ಪಂಕಪ್ರಭೆ ಧೂಮಪ್ರಭೆ ತಮಪ್ರಭೆ ಮಹಾತಮಪ್ರಭೆಯೆಂಬೇೞುಂ ಅಲ್ಲಿ-

ಕಂ || ಕರಗುಗುಮಾಗಳೆ ವಜ್ರಮು
ಮಿರದೆನಿಪುಷ್ಣಮಯಮಾಗಿ ನಾಲ್ಕರೆನೆಲನ
ತ್ತೆರಡರೆಯಗ್ನಿಗಮೈಕಿ
ಲ್ದೊರೆಕೊಳ್ಗುಮೆನಿಪ್ಪ ಶೀತಮಯಮಾಗಿರ್ಕುಂ || ೯

ವ || ಮತ್ತಮಾ ನರಕಬಿಲಂಗಳ್ ಇಂದ್ರಕಶ್ರೇಢೀಬದ್ಧಪ್ರಕೀರ್ಣಕರೂಪಂಗಳನನುಕ್ರಮದಿಂ-

ಕಂ || ತೋರ್ಪುವು ಮೂವತ್ತಯ್ದಮ
ರ್ದಿರ್ಪತ್ತರೆವೆರಸು ಪತ್ತು ಮತ್ತೀರಯ್ದ
ತ್ತಿರ್ಪುದು ಮೂಱಯ್ದೂನಂ
ನೇರ್ಪಡೆ ಲಕ್ಕೆಯಿವು ಕಡೆಯೊಳೆಯ್ದೆ ದಲಕ್ಕುಂ || ೧೦

ವ || ಆ ಬಿಲಂಗಳೊಳಗಣ ಕರಭ ಖರ ಕುರ್ಕುರ ಸೃಗಾಲ ಕಾಕ ಘೂಕಮುಖಾನುಕಾರಿಗಳಪ್ಪ ದುರ್ಗಂಧವೇಶ್ಮಕಶ್ಮಲೋಪಪಾದಸ್ಧಳಂಗಳೊಳ್ ಮಿಥ್ಯಾದರ್ಶನಾವಿರತಿ ಪ್ರಮಾದಕಷಾಯಬಹ್ವಾರಂಭ ಕೃಷ್ಣ ನೀಳ ಕಪೋತಲೇಶ್ಯಾದ್ಯ ಶುಭಪರಿಣಾಮಂ ಕಾರಣಮಾಗೆ ಜೀವಂ ನೆಲಸಿದಂತರ್ಮುಹೂರ್ತಕಾಲದೊಳ್ ಆಹಾರ ಶರೀರೇಂದ್ರಿಯೋಚ್ಛ್ವಾಸನಿಶ್ವಾಸ ಭಾಷಾಮನಂಗಳೆಂಬ ಷಟ್ಟರ್ಯಾಪ್ತಿಗಳೊಳ್ ನೆಱಿದು ಹುಂಡಸಂಸ್ಥಾನಂಗಳುಂ ತೃತೀಯವೇದರುಂ ಮಷೀಮಳಿನಸವರ್ಣರುಂ ಪೂತಿಗಂಧರುಂ ಸಪ್ತಚಾಪತ್ರಿಹಸ್ತಷಡಂಗುಳಾದಿಪಂಚಧನುಶ್ಶತಪರ್ಯಂತದ್ವಿಗುಣದ್ವಿಗುಣೋತ್ಸೇಧರುಂ ಪೂರ್ವಾನುಪೂರ್ವೋತ್ತರಮಾದುತ್ಕೃಷ್ಟ ಮಧ್ಯಮ ಜಘನ್ಯಭೇದಪ್ರಯುಕ್ತೈಕ ತ್ರಿತಯಸಪ್ತಕದಶಸಪ್ತದಶದ್ವಾವಿಂಶತಿತ್ರಯಸ್ತ್ರಿಂಶತ್ಸಾಗರೋಪಮಾನಪ್ರವೃತ್ಯಾಯುಷ್ಯರು ಮಾಗಿ ಪುಟ್ಟಿ ತೃತೀಯನರಕಂಬರಂ ಶಾರೀರಮಾನಸಕ್ಷೇತ್ರಜಪರಸ್ಪರೋದೀರಿತ ಧನಜ್ಯೋದೀರಿತಂಗಳೆಂಬ-

ಕಂ || ಪಂಚಪ್ರಕಾರದುಃಖಮೆ
ಪಂಚಮಹಾಭೂತಮಾಗೆ ಪುಟ್ಟಿದರೆಂಬಂ
ತಂಚಿಮರಲ್ಲದ ಕೋಟಲೆ
ಯಂ ಚಿತ್ತದೊಳಾಂತು ನಾರಕರ್ ಸಲೆ ನಮೆವರ್ || ೧೧

ವ || ಅದಲ್ಲದೆಯುಂ-

ಕಂ || ನಿಸದಂ ತಿರ್ಯಗ್ಜೀವಂ
ತ್ರಸಮುಂ ಸ್ಥಾವರಮುಮೆಂದೆರೞ್ತೆಱನದಱೊಳ್
ತ್ರಸಮೆನಿಕುಂ ದ್ವೀಂದ್ರಿಯದಿಂ
ಪೆಸರ್ಗೊಳೆ ಪಂಚೇಂದ್ರಿಯಂಬರಂ ಕ್ರಮದಿಂದಂ || ೧೨

ಸ್ಥಾವರದೊಳ್ ಪೃಥ್ವ್ಯಪ್ತೇ
ಜೋವಾಯುವನಸ್ಪತೀದ್ಧಕಾಯಿಕಭೇದಂ
ಜೀವಂ ಪಂಚವಿಧಂ ಪರಿ
ಭಾವಿಪೊಡೇಕೇಂದ್ರಿಯಪ್ರಪಂಚಿತಮನಿತುಂ || ೧೩

ವ || ಅವಱೊಳುತ್ಕೃಷ್ಟದಿಂ ವನಸ್ಪತಿಕಾಯಿಕಕ್ಕೆ ಸಾಧಿಕಂ ಯೋಜನಸಹಸ್ರಮಾನಮಕ್ಕುಂ ಅನಿತೆ ತಿರ್ಯಕ್ಪಂಚೇಂದ್ರಿಯಶರೀರಕ್ಕಮಕ್ಕುಂ ಮತ್ತಂ-

ಕಂ || ಪನ್ನೆರಡು ಯೋಜನಂ ದೇ
ಹನ್ನೀಳ್ಪಿಂ ದ್ವೀಂದ್ರಿಯಕ್ಕೆ ಮೂಗಾವುದ ದಲ್
ಕೆನ್ನಂತ್ರೀಂದ್ರಿಯಕಂ ಮ
ತ್ತೆನ್ನದೆ ಚುತುರಿಂದ್ರಿಯಕ್ಕೆ ಯೋಜನಮಕ್ಕುಂ || ೧೪

ವ || ಮತ್ತಂ ಸ್ಪರ್ಶನ ರಸನ ಘ್ರಾಣ ಚಕ್ಷುಶ್ಶ್ರೋತ್ರಮೆಂಬಿಂದ್ರಿಯಪಂಚಕದೊಳ್ ಯಥಾಕ್ರಮಮೇಕೈಕವೃದ್ಧಿಯಿನೇಕ ದ್ವಿತ್ರಿ ಚತುಃಪಂಚೇಂದ್ರಿಯಮೆನಿಕ್ಕುಂ ಏಕೇಂದ್ರಿಯದೊಳ್ ಪೃಥಿವೀಕಾಯಿಕಕ್ಕೆ ವರ್ಷಂ ಪನ್ನಿರ್ಚ್ಛಾಸಿರಮಕ್ಕುಂ ವಾಷ್ಕಾಯಿಕ ಕ್ಕೇೞುಂ ಸಾಸಿರಮಕ್ಕುಂ ವಾಯುಕಾಯಿಕಕ್ಕೆ ಮೂಱುಸಾಸಿರಮಕ್ಕುಂ ವನಸ್ಪತಿಕಾಯಿಕಕ್ಕೆ ಪತ್ತುಸಾಸಿರಮಕ್ಕುಂ ತೇಜಃಕಾಯಿಕಕ್ಕೆ ದಿನತ್ರಯಮಕ್ಕುಂ ಉತ್ಕರ್ಷದಿನಾಯುಸ್ಸ ಮುದಯಮಕ್ಕುಂ ಅದಲ್ಲದೆಯುಂ-

ಕಂ || ಪನ್ನೆರೆಡು ವತ್ಸರಂ ದಿವ
ಸಂ ನಾಲ್ವತ್ತೊಂಬತಾಱೆ ದಲ್ ತಿಂಗಳ್ ಪೂ
ರ್ವಂ ನೆಱೆಯೆ ಕೋಟಿಯಧಿಕತೆ
ಯಿಂ ನಿರುತಂ ದ್ವೀಂದ್ರಿಯಾದಿಗಳ್ಗಾಯುಷ್ಯಂ || ೧೫

ವ || ಅದಲ್ಲದೆಯುಂ ಭೋಗಕರ್ಮಭೂಮಿಭೇದದಿಂ ಮನುಷ್ಯಜೀವಂ ದ್ವಿಪ್ರಕಾರಮಕ್ಕುಂ ಆ ಭೋಗಭೂಮಿಗಳುಂ ದೇವಕುರ್ವಾದಿಭೇದದಿಂ ಮೂವತ್ತಕ್ಕುಂ ಅವು ಉತ್ತಮ ಮಧ್ಯಮ ಜಘನ್ಯಭೇದದಿಂ ಮೂದೆಱಂ ತದ್ಭೂಮಿಜರ್ಗನುಕ್ರಮದಿಂ ಷಟ್ಜತ್ವಾರಿದ್ವಿಸಹಸ್ರ ಚಾಪೋತ್ಸೇಧಮಕ್ಕುಂ ತ್ರಿದ್ವೈಕಪಲ್ಯೋಪಮಂ ಜೀವನುಮಕ್ಕುಂ ಅಲ್ಲಿ-

ಕಂ || ಸಲೆ ದಶವಿಧಕಲ್ಪದ್ರುಮ
ಫಲಮಂ ಸತ್ಪಾತ್ರದಾನಸಾಮರ್ಥ್ಯದಿನಾ
ಕುಲರಹಿತರ್ ದಂಪತಿಗಳ್
ನಲವಿಂದನುಭವಿಪರಾಗಮನುಜರ್ ಮನುಜರ್ || ೧೬

ವ || ಮತ್ತಂ ಕರ್ಮಭೂಮಿಗಳ್ ಭರತಾದಿಭೇದದಿಂ ಪದಿನೈದು ಆರ್ಯಾಮ್ಲೇಚ್ಛಪ್ರಭೇದದಿಂ ತದ್ಭೂಮಿಜರ್ ಇರ್ತೆಱನಕ್ಕುಂ ಅವರ್ಗುತ್ಕೃಷ್ಟದಯ್ನೂರೆೞ್ಪತ್ತಯ್ದು ಚಾಪಮುತ್ಸೇಧಂ ಪೂರ್ವಕೋಟಿಪ್ರಮಾಣಮಾಯುಷ್ಯಮಿವು ವಿದೇಹಂಗಳೊಳ್ ನಿಯತಂ ಭರತೈರಾವತಂ ಗಳೊಳ್ ಕಾಲವಶದಿಂ ವೃದ್ಧಿಹ್ರಾಸಂಗಳನೆಯ್ದುಗುಂ ಆಕಾಲಮುತ್ಸರ್ಪಿಣಿಯುಮನ ಸರ್ಪಿಣಿಯುಮೆಂದವೆರಡು ಅವೊಂದೊಂದರ್ಕೆ ಪತ್ತುಕೋಟಿಕೋಟಿಸಾಗರೋಪಮ ಕಾಲಂ ಪ್ರಮಾಣಮಕ್ಕುಂ ಮತ್ತಮುತ್ಸರ್ಪಿಣಿ ಸುಷಮಸುಷಮೆಯುಂ ಸುಷಮೆಯುಂ ಸುಷಮದುಷ್ಷಮೆಯುಂ ದುಷ್ಷಮಸುಷಮೆಯುಂ ದುಷ್ಷಮೆಯುಂ ಅತುದುಷ್ಷಮೆಯುಮೆಂದು ಷಟ್ ಪ್ರಕಾರಮನುಳ್ಳುದಕ್ಕುಂ ವ್ಯತಿಕ್ರಮದಿನವಸರ್ಪಿಣಿಯುಮಂತೆಯಕ್ಕುಂ ಅಲ್ಲಿ ಮೊದಲ ಕಾಲಕ್ಕೆ ನಾಲ್ಕು ಕೋಟಿಕೋಟಿಸಾಗರೋಪಮಂ ಎರಡನೆಯದರ್ಕೆ ಮೂಱು ಕೋಟಿ ಕೋಟಿಸಾಗರೋಪಮಂ ಮೂಱನೆಯದರ್ಕೆರಡು ಕೋಟಿಕೋಟಿಸಾಗರೋಪಮಂ ನಾಲ್ಕನೆಯದರ್ಕೆ ನಾಲ್ವತ್ತೆರಡು ಸಾಸಿರವರ್ಷಂ ಕೂಡಿದೊಂದು ಕೋಟಿಕೋಟಿ ಅಯ್ದನೆ ಯದರ್ಕೆ ಇರ್ಪತ್ತೊಂದುಸಾಹಸ್ರವತ್ಸರಮಾಱನೆಯದರ್ಕಮನಿತೆ ಪ್ರಮಾಣಂ ವ್ಯತಿರೇಕ ದಿನವಸರ್ಪಿಣಿಯ ಕಾಲಂಗಳ್ಗವನಿತೆಯಕ್ಕುಂ ಅದಲ್ಲದೆಯುಂ-

ಕಂ || ಎನಿತೊಳವು ಕರ್ಮಭೂಮಿಗ
ಳನಿತಱೊಳಂ ಮ್ಲೇಚ್ಛಖಂಡಮಯ್ದೆ ದಲವೞೊಳ್‌
ಜನಿಯಿಸಿದಾ ಮ್ಲೇಚ್ಛರ್ ತದ
ವನಿಖಂಡವಿಭೇದದಿಂದಮಯ್ದೆಱನಪ್ಪರ್ || ೧೭

ವ || ಮತ್ತಮಾರ್ಯರುಂ ಷಟ್ಕರ್ಮಭೇದದಿಂ ಷಟ್ಪ್ರಕಾರಮಪ್ಪರ್ ಅವರ್ಗಂ ಮಿಥ್ಯಾದೃಷ್ಟಿ ಸಾಧನಸಮ್ಯಕ್ ದೃಷ್ಟಿ ಸಮ್ಯಗ್ಮಿಥ್ಯಾದೃಷ್ಟಿ ಅಸಂಯುತಸಮ್ಯಗ್ದೃಷ್ಟಿ ದೇಶವ್ರತಿ ಪ್ರಮತ್ತಸಂ ಯುತಂ ಅಪ್ರಮತ್ತಸಂಯುತಂ ಅಪೂರ್ವಕರಣ ಕ್ಷಪಕೋಪಶಮಕಸಂಯುತಂ ಸೂಕ್ಷ್ಮ ಪರಾಯ ಕ್ಷಪಕೋಪಶಮಕಸಂಯುತಂ ಅನಿವೃತ್ತಿಕರಣ ಕ್ಷಪಕೋಪಶಮಕಸಂಯುತ ಸೂಕ್ಷ್ಮ ಸಾಂಪರಾಯ ಕ್ಷಪಕೋಪಶಮಕಸಂಯುತನುಪಶಾಂತಿಕಷಾಯವೀತ ರಾಗಚ್ಛದ್ಮಸ್ಥ ಸಂಯುತ ಕ್ಷೀಣಕಷಾಯವೀತರಾಗಚ್ಛದ್ಮಸಂಯುತಂ ಸಂಯೋಗ ಕೇವಲಿಭಟ್ಟಾರಕನ ಯೋಗಿಕೇವಲಿಜಿನ ಭಟ್ಟಾರಕನುಮೆಂದು-

ಕಂ || ವಿದಿತಗುಣಸ್ಥಾನಂಗಳ್
ಪದಿನಾಲ್ಕವಱಿಂದಮಾರ್ಯಜನಕಂ ಭೇದಂ
ಪದಿನಾಲ್ಕಕ್ಕುಂ ಭಾವಿಪೊ
ಡಿದು ದಲನೇಕಾಂತಸಮಯಸತ್ಸಿದ್ಧಾಂತಂ || ೧೮

ವ || ಮತ್ತಂ ದೇವಗತಚತುರ್ನಿಕಾಯಭೇದದಿಂ ನಾಲ್ಕುಮಕ್ಕುಂ ಅಲ್ಲಿ ಭವನಾವಾಸಿಗರ್ ಅಸು ರಕುಮಾರಾದಿಭೇದದಿಂ ದಶವಿಧಂ ವ್ಯಂತರರ್ ಕಿನ್ನರಾದಿಭೇದದಿನಷ್ಟವಿಧಂ ಜ್ಯೋತಿ ಷ್ಕರ್ ಚಂದ್ರಾದಿತ್ಯಭೇದದಿಂ ಪಂಚವಿಧಂ ವೈಮಾನಿಕರ್ ಕಲ್ಪಜಕಲ್ಪಾತೀತಬೇದದಿಂ ದ್ವಿವಿಧಂ ಅಲ್ಲಿ ಭವನಾಮರರೊಳಸುರಕುಮಾರರ್ಗುತ್ಸೇಧಂ ಪಂಚವಿಂಶತಿಧನು ಉೞಿದರ್ಗೆ ದಶಧನು ವ್ಯಂತರಜ್ಯೋತಿಷ್ಕರ್ಗೆ ದಶಸಪ್ತಧನು ಸೌಧರ್ಮೇಶಾನಕಲ್ಪಜರ್ಗೆ ಶರೀರಮಾನಂ ಸಪ್ತಾರತ್ನಿ ಸನತ್ಕುಮಾರಮಾಹೇಂದ್ರಕಲ್ಪಜರ್ಗೆ ಷಡರತ್ನಿ ಬ್ರಹ್ಮ ಬ್ರಹ್ಮೋತ್ತರಾದಿಚತುಃಕಲ್ಪಜರ್ಗೆ ಪಂಚಾರತ್ನಿ ಶುಕ್ರಾದಿಚತುಕಲ್ಪಜರ್ಗೆ ಚತುಃರತ್ನಿ ಆನತಪ್ರಾಣತಕಲ್ಪಜರ್ಗೆ ಸಾರ್ಧತ್ರಯಾರತ್ನಿ ಆರಣಾಚ್ಯುತಕಲ್ಪಜರ್ಗೆ ಅರತ್ನಿತ್ರಯಂ ಕಲ್ಪಾತೀತಂಗಳಪ್ಪಧೋಗ್ರೈವೇಯಕತ್ರಯದವರ್ಗೆ ಸಾರ್ಧಹಸ್ತತ್ರಯಂ ಮಧ್ಯಮಗ್ರೈವೇ ಯಕದವರ್ಗೆ ಹಸ್ತದ್ವಯಂ ಊರ್ಧ್ವಗ್ರೈವೇಯಕತ್ರಯದವರ್ಗೆ ಸಾರ್ಧಹಸ್ತಂ ಅಲ್ಲಿಂ ಮೇಗಣವರ್ಗೆಲ್ಲಂ ಹಸ್ತಪ್ರಮಾಣಮಕ್ಕುಂ ಮತ್ತಮುತ್ಕೃಷ್ಟದಿಂ ಭವನವ್ಯಂತರರ್ಗೆ ಸಾಗರೋಪಮಸಾಧಿಕಪಲ್ಯೋಪಮಂ ಜೀವನಂ ಜಘನ್ಯದಿಂ ದಶಸಹಸ್ರವರ್ಷಂ ಜ್ಯೋತಿಷ್ಕದೇವರ್ಗೆ ಸಾಧಿಕಪಲ್ಯಂ ಜಘನ್ಯದಿಂ ಪಲ್ಯಾಷ್ಟಮಭಾಗಂ ಸೌಧರ್ಮೇಶಾನ ಕಲ್ಪಂಗಳೊಳಾಯುಷ್ಯಂ ಸಾರರೋಪಮಮೆರಡು ಸನತ್ಕುಮಾರಮಾಹೇಂದ್ರಕಲ್ಪಂಗ ಳೋಳೇೞು ಬ್ರಹ್ಮಬ್ರಹ್ಮೋತ್ತರಕಲ್ಪಂಗಳೊಳ್ ಪತ್ತು ಲಾಂಕವಕಾಪಿತ್ಥಕಲ್ಪಂಗಳೊಳ್ ಪದಿನಾಲ್ಕು ಅಲ್ಲಿಂಮೇಗಣೆರಡೆರಡು ಕಲ್ಪಂಗಳೊಳೊರೆಡೆರಡು ಸಾಗರೋಪಮಂ ಪೆರ್ಚಲ್ ಕಡೆಯೊಳಾರಣಾಚ್ಯುತಕಲ್ಪಂಗಳೊಳಿರ್ಪತ್ತೆರಡು ಮತ್ತಂ ಕಲ್ಪಾತೀತವಿಮಾನಂ ಗಳೊಳೇಕೈಕವೃದ್ಧಿಯಿಂ ಕಡೆಯ ಸರ್ವಾರ್ಥಸಿದ್ಧಿಯೊಳ್ ಮೂವತ್ತುಮೂಱಕ್ಕುಮೆಂದಿಂತು-

ಕಂ || ನರಕಾದಿಗತಿಚತುಷ್ಟಯ
ಪರಿಗತಜೀವಪ್ರಕಾರಮಂ ಪೇೞ್ದು ಸುರಾ
ಸುರಸಭೆಗೆ ಜೀವತತ್ವ
ಸ್ವರೂಪಮಂ ಬೞಿಕೆ ತಿಳಿಪಿದಂ ಸಕಳಜ್ಞಂ || ೧೯

ವ || ಅದೆಂತೆಂದೊಡೆ ಧರ್ಮಾಧರ್ಮ ಕಾಲಕಾಲ ಪುದ್ಗಲಭೇದದಿಂ ಜೀವಂ ಪಂಚಪ್ರಕಾರ ಮಕ್ಕುಂ ಅಲ್ಲಿ-

ಕಂ || ಸಮನಿಸಿ ಜೀವಂ ತಾಮವು
ಸಮಂತು ಷಡ್ಡ್ರವ್ಯಮೆನಿಕುಮವೆ ಮತ್ತಂ ಕಾ
ಲಮದಿಲ್ಲದಂದು ಪರಮಾ
ಗಮದೊಳ್ ಪಂಚಾಸ್ತಿಕಾಯಮೆನಿಕುಮಮೋಘಂ || ೨೦

ವ || ಮತ್ತಂ ಧರ್ಮಾಧರ್ಮಂಗಳೆಂಬೆರಡು ಲೋಕಾಕಾಶವ್ಯಾಪಕಂಗಳುಂ ಜೀವಪುದ್ಗಲಂಗಳ್ಗೆ ಮತ್ಸ್ಯಂಗಳ್ಗೆ ಜಳದಂತೆಯುಂ ಪಥಿಕರ್ಗೆ ತರುಚ್ಛಾಯೆಯಂತೆಯುಂ ಗತಿಸ್ಥಿತಿಕಾರಣಂಗಳ ಕ್ಕುಂ ಆಕಾಶಮೆಂಬುದು ನಿತ್ಯಮುಂ ವ್ಯಾಪಕಮುಮವಗಾಹಲಕ್ಷಣಮುಮಕ್ಕುಂ ಜೀವಾದಿ ದ್ರವ್ಯಂಗಳನುಳ್ಳುದು ಲೋಕಾಕಾಶಮುೞಿದುದಲೋಕಾಕಾಶಮಕ್ಕುಂ ಮತ್ತಂ ಧರ್ಮಾ ಧರ್ಮಂಗಳುಮೇಕಜೀವಮುಮಸಂಖ್ಯಾತಪ್ರದೇಶಂಗಳ್ ಆಕಾಶಮನಂತಪ್ರದೇಶಮಕ್ಕುಂ ಮತ್ತಂ ಜೀವಾಜೀವಾದಿದ್ರವ್ಯಪರಿವರ್ತನಾ ರೂಪಮಪ್ಪುದು ಕಾಲಂ ಅದುವುಂ ವ್ಯವಹಾರಮುಖ್ಯಭೇದದಿಂ ದ್ವಿವಿಧಂ ತತ್ಪರ್ಯಾಯಸ್ಥಿತಂಗಳಪ್ಪ ಸಮಯಘಟಿಕಾಭೇ ದಲಕ್ಷಣವ್ಯವಧಾನಕಾಲಂ ತಮ್ಮಿಂ ತಾಮೆ ನಾನಾರೂಪದಿಂ ಪರಿಣಾಮಿಸುವ ಪದಾರ್ಥಂ ಗಳ ವರ್ತನೆಗೆ ಸಹಕಾರಿಣಿಯಾಗಿರ್ಪ ದ್ರವ್ಯಮುಖ್ಯಕಾಲಮಕ್ಕುಂ ಪುದ್ಗಲಮೆಂಬುದು ರೂಪ ರಸ ಗಂಧ ಸ್ಪರ್ಶ ಶಬ್ದಂಗಳನುಳ್ಳುದು ಅದುವೆ ಮೇಣ್ ಸ್ಕಂದಭೇದದಿಂದಿರ್ತೆಱನ ಕ್ಕುಂ ಅವರ್ಕಂ ಸ್ಥೂಳ ಸೂಕ್ಷ್ಮ ಛಾಯಾತಪಾದಿ ರೂಪವಿಕಲ್ಪದಿನನೇಕಭೇದಮಕ್ಕುಂ ಅದಲ್ಲದೆಯುಂ-

ಕಂ || ಆರಯೆ ಕರ್ಮಾಗಮನ
ದ್ವಾರಂ ವಾಕ್ತನುಮನಃಕ್ರಿಯಾಯೋಗವ್ಯಾ
ಪಾರಯುತಮಾಸ್ರವಂ ಸಮು
ದೀರಿತಮದು ಸದಭಿಹಿತದೊಳರ್ಹನ್ಮತದೊಳ್ || ೨೧

ವ || ಅದುವುಂ ಪುಣ್ಯಪಾಪಾಪೇಕ್ಷೆಯಿಂ ಶುಭಾಶುಭರೂಪಮಕ್ಕುಂ ಮತ್ತಂ ತದಾಶ್ರವಕ್ಕೆ ಸಕಷಾಯನುಮಕಷಾಯನುಂ ಕರ್ತೃಗಳಕ್ಕುಂ ಅಲ್ಲಿ ಪ್ರದೋಷಾಸಾಧನಮಾತ್ಸರ್ಯೋ ಪಘಾತಾಂತರಾಯನಿಹ್ನವಂಗಳ್ ಜ್ಞಾನದರ್ಶನಾವರಣಕರ್ಮಾಶ್ರವಂ ಸಂತಾಪಶೋಕ ಪರಿದೇವನಾಕ್ರಂದವಧಾದಿಗಳ್ ಅಸಾತವೇದನೀಯಾಶ್ರವಂ ಸರಾಗಸಂಯಮದಾನಾನು ಕಂಪನಕ್ಷಾಂತ್ಯಾದಿಗಳ್ ಸಾತವೇದನೀಯಾಶ್ರವಂ ಆಕೇವಲಶ್ರುತಧರ್ಮಸಂಘದೇವಾ ವರ್ನವಾದಂಗಳ್ ದರ್ಶನಮೋಹನೀಯಾಶ್ರವಂ ಕಷಾಯೋದಯಪ್ರಭೂತತೀವ್ರ ಪರಿಣಾಮಂಗಳ್ ಚಾರಿತ್ರಮೋಹನೀಯಾಶ್ರವಂ ಬಹ್ವಾರಂಭಪರಿಗ್ರಹಂಗಳ್‌ ಬಹುಪ್ರ ಕಾರಮಾಯೆಗಳ್ ತಿರ್ಯಗಾಯುಷ್ಯಾಶ್ರವಂ ಸ್ವಲ್ಪಾರಂಭಪರಿಗ್ರಹಂಗಳ್ ಮಾನುಷಾಯುಷ್ಯಾ ಶ್ರವಂ ವಿಸಂವಾದನಯೋಗವಕ್ರತೆಗಳ್‌ ಅಶೋಭನಾಮಾತ್ರವಂ ತದ್ವಿಪರೀತಂಗಳ್ ಶುಭನಾಮಾಶ್ರವಂ ದಾನಾದಿವಿಘ್ನಕರಣಮನ್ತರಾಯಾಶ್ರವಂ ಅದಲ್ಲದೆಯುಂ

[1]-

ಕಂ || ಪರಿಭಾವಿಸೆ ಮಿಥ್ಯಾತ್ವಾ
ವಿರತಿಕಷಾಯಪ್ರಮಾದಯೋಗಾಖ್ಯಂಗಳ್
ನಿರುತಮಿವಯ್ದುಂ ತತ್ತ್ವ
ಜ್ಞರುಕ್ತಿಯಿಂ ಬಂಧಕಾರಣಂಗಳೆನಿಕ್ಕುಂ || ೨೨

ಸತತಂ ಜೀವಂ ಸಕಷಾ
ಯತೆಯಿಂದಂ ಕರ್ಮಯೋಗ್ಯಮಂ ಪುದ್ಗಲಸಂ
ತತಿಯಂ ಕೈಕೊಳ್ವುದು ನಿ
ಶ್ಚಿತಮಂತದೆ ಬಂಧಮೆಂಬ ಪೆಸರಂ ಪಡೆಗುಂ || ೨೩

ಕ್ರಮದಿಂ ಪ್ರಕೃತಿಸ್ಥಿತಿಯುಗ
ಳಮುಮನುಭಾಗಪ್ರದೇಶಯುಗಳಮುಮೆನೆ ಭೇ
ದಮಿನಿತು ನಾಲ್ಕುಂ ತೆಱದಿಂ
ಸಮನಿಸುಗುಂ ಬಂಧಕತ್ವಸಂಬಂಧಂಗಳ್ || ೨೪

ವ || ಮತ್ತಮಯ್ದುಂ ತೆಱದ ಜ್ಞಾನಾವರಣಮುಮೊಂಭತ್ತುಂ ತೆಱದ ದರ್ಶನಾವರಣಮುಮೆರ ಡುಂ ತೆಱದ ವೇದನೀಯಮುಮಿರ್ಪತ್ತೆಂಟುಂ ತೆಱದ ಮೋಹನೀಯಮುಂ ನಾಲ್ಕುಂ ತೆಱದಾಯುಷ್ಯಮುಂ ತೊಂಬತ್ತುಮೂಱಂ ತೆಱದ ನಾಮಮುಮೆರಡುಂ ತೆಱದ ಗೋತ್ರ ಮುಮಯ್ದುಂತೆಱದಂತರಾಯಮುಮೆಂಬಿವೆಂಟುಂ ಪ್ರಕೃತಿಗಳ ಬಂಧಭೇದಮಕ್ಕುಂ ಮತ್ತಂ ಜ್ಞಾನದರ್ಶನಾವರಣವೇದನೀಯಾಂತರಾಯಂಗಳುತ್ಕೃಷ್ಟದಿಂ ಪ್ರತ್ಯೇಕಂ ಮೂವತ್ತು ಕೋಟಿಕೋಟಿ ಮೋಹನೀಯಕ್ಕೆೞ್ಪತ್ತುಕೋಟಿಕೋಟಿ ನಾಮಗೋಗ್ರಂಗಳ್ಗೆ ಪ್ರತ್ಯೇಕ ಮಿರ್ಪತ್ತು ಕೋಟಿ ಆಯುಷ್ಯಕ್ಕೆ ಮೂವತ್ತಮೂಱುಸಾಗರೋಪಮಂ ಜಘನ್ಯದಿಂ ವೇದನೀಯಕ್ಕೆ ಪನ್ನೆರಡು ಮುಹೂರ್ತಂ ನಾಮಗೋತ್ರಂಗಳ್ಗೆಂಟು ಮುಹೂರ್ತಂ ಉೞಿದವರ್ಕಂತರ್ಮುಹೂರ್ತಂ ಸ್ಥಿತಿಬಂದಮಕ್ಕುಂ-

ಕಂ || ಒದವಿದ ಕರ್ಮದ ಶಕ್ತಿಯೆ
ವಿದಿತಮದನುಭಾಗಬಂಧಮಕ್ಕುಂ ಬಹುಭೇ
ದದಿನಾದ ಜೀವಕರ್ಮ
ಪ್ರದೇಶಯೋಗಂ ಪ್ರದೇಶಬಂಧಮೆನಿಕ್ಕುಂ || ೨೫

ಅದಲ್ಲದೆಯುಂ-

ನಿರವಿಸುವೊಡೆ ಕರ್ಮಾಶ್ರವ
ನಿರೋಧಮದೆ ಸಂವರಾಖ್ಯಮಕ್ಕುಂ ತತ್ಸಂ
ವರತತ್ವಕ್ಕಂ ತೋರ್ಕುಂ
ದೊರೆವೆತ್ತು ಸಮಗ್ರಕಾರಣಂಗಳ್ ಪಲವುಂ || ೨೬

ವ || ಆವಾವುವೆಂದೊಡೆ ಮನೋಗುಪ್ತ್ಯಾದಿತ್ರಿಗುಪ್ತಿಯುಂ ಈರ್ಯಾದಿ ಪಂಚಸಮಿತಿಯುಂ ಉತ್ತಮಕ್ಷಮಾದಿದಶಧರ್ಮಮುಂ ಅಧ್ರುವಾದಿದ್ವಾದಶಾನುಪ್ರೇಕ್ಷೆಯುಂ ಕ್ಷುಧಾದಿದ್ವಾ ವಿಂಶತಿಪರೀಷಹಜಯಮುಂ ಸಾಮಾಯಿಕಾದಿಪಂಚಚಾರಿತ್ರಮುಮಕ್ಕುಂ ಅದಲ್ಲ ದೆಯುಂ-

ಕಂ || ಸಾಕ್ಷಾತ್ಕರ್ಮಕ್ಷಪಣಾ
ಲಕ್ಷಣಮದು ನಿರ್ಜರಾಹ್ವಯಂ ತತ್ವಮದ
ರ್ಕೀಕ್ಷಿಸೆ ಕಾಲೋಪಕ್ರಮ
ಲಕ್ಷಿತಭೇದದ್ವಯಂ ವಿವಿಕ್ಷಿತಮಕ್ಕುಂ || ೨೭

ವ || ಅದೆಂತೆದೊಡೆ ನರಕಾದಿಗತಿಗಳೊಳ್ ಕರ್ಮಂಗಳನುಂಡು ತವಿಸುವುದು ಯಥಾಕಾಲ ನಿರ್ಜರೆಯೆಂಬುದು ತಪಶ್ಚರಣದಿಂ ತವಿಸುವುದು ಉಪಕ್ರಮನಿರ್ಜರೆಯೆಂಬುದು ತಪಮುಂ ಬಾಹ್ಯಾಭ್ಯಂತರವಿಕಲ್ಪದಿಂ ದ್ವಿಪ್ರಕಾರಮಕ್ಕುಂ ಅಲ್ಲಿಯುಮನಶನಾವಮೋದ ರ್ಯವೃತ್ತಪರಿಸಂಖ್ಯಾನ ರಸಪರಿತ್ಯಾಗವಿವಿಕ್ತಾವಾಸಕಾಯಕ್ಲೇಶಮೆಂಬಾಱುಂ ಬಾಹ್ಯ ತಪಂಗಳುಂ ಪ್ರಾಯಶ್ಚಿತ್ತ ವಿನಯ ವೈಯ್ಯಾಪೃತ್ಯ ಸ್ವಾಧ್ಯಾಯ ಉತ್ಸರ್ಗ ಧ್ಯಾನಮೆಂಬಾಱು ಮಾಭ್ಯಂತರಾನಶನಾವಮೋದರ್ಯವೃತ್ತಿತಪಂಗಳ್ ಇವು ಕರ್ಮನಿರ್ಜರೇಚ್ಛುಗಳ್ಗೆ ನಿರ್ವಿ ಕಲ್ಪದಿಂದಾಚರಣೀಯಂಗಳ್ ಆಂತರತಪಂಗಳೊಳ್ ಧ್ಯಾನಮೆಂಬುದಾರ್ತ ರೌದ್ರ ಧರ್ಮ ಶುಕ್ಲಭೇದದಿಂ ನಾಲ್ಕು ತೆಱಂ ಅವಱೊಳಾರ್ತಧ್ಯಾನಮುಮನೋಜ್ಞಾದ್ರವ್ಯ ವಿಪ್ರ ಯೋಗಾಕಾಂಕ್ಷೆಯುಂ ಮನೋಜ್ಞದ್ರವ್ಯಸಂಯೋಗಾಕಾಂಕ್ಷೆಯುಂ ದುಸ್ಸಹವೇದನೋಪ ಸಮಚಿಂತಾಪ್ರಬಂಧಮುಂ ಹರ್ಷೋನ್ಮತ್ತಾರ್ತಲಾಭಜಮುಮೆಂದು ನಾಲ್ಕು ತೆಱಂ ರೌದ್ರಧ್ಯಾನಂ ಹಿಂಸಾನೃತಸ್ತೇಯವಿಷಯಪರಿಪಾಲನಪ್ರಬಂಧದಿಂ ನಾಲ್ಕುಂ ತೆಱಂ ಧರ್ಮ ಧ್ಯಾನಮಾಜ್ಞಾಪಾಯವಿಪಾಕಸಂಸ್ಥಾನನಿಚಯವಿವರಣೆಯಿಂ ನಾಲ್ಕುಂ ತೆಱಂ ಶುಕ್ಲಧ್ಯಾನಂ ಪೃಥಕ್ತ್ವವಿತರ್ಕವಿಚಾರಣೈಕತ್ವವಿತರ್ಕವಿಚಾರಣಸೂಕ್ಷ್ಮಕ್ರಿಯಾಪ್ರತಿಪಾತಿವ್ಯುಪರಕ್ರಿಯಾನಿವೃತ್ತಿ ಭೇದದಿಂ ನಾಲ್ಕು ತೆಱಂ ಮತ್ತಂ ಮೊದಲವೆರಡು ಧ್ಯಾನಂಗಳ್ ನಿಷೇಧಮುಖದಿಂ ನಿರ್ಜರಾಕರಣಂಗಳ್ ಉೞಿದುವೆರಡುಂ ವಿಧಿಮುಖದಿನಖಿಳಕರ್ಮ ನಿರ್ಜರಾಕರಣಂ ಗಳ್ ಅದಲ್ಲದೆಯುಂ-

ಕಂ || ಸಮನಿಸಿರೆಕೃತ್ಸ್ನಕರ್ಮ
ಪ್ರಮುಕ್ತಿ ಪರಿಣಾಮಿಯೆನಿಪ ಭವ್ಯಂಗದೆ ಮೋ
ಕ್ಷಮೆನಿಪ್ಪ ಸಪ್ತಮಂ ತ
ತ್ತ್ವಮದರ್ಕೆ ಸಮಂತು ಹೇತುರತ್ನತ್ರಿತಯಂ || ೨೮

ವ || ಅದೆಂತೆಂದೊಡೆ ಸಮ್ಯಗ್ದರ್ಶನಜ್ಞಾನಚಾರಿತ್ರಮೆಂದಕ್ಕುಂ ಅಲ್ಲಿ ದರ್ಶನಮೆಂಬುದು ತತ್ವಾರ್ಥಶ್ರದ್ಧಾನಂ ಅದರ್ಕೆ ಯಥಾಸ್ವರೂಪಗ್ರಹಣ ಕಾರಣಂ ಸಮ್ಯಕ್ಷದಪ್ರಯೋಗಂ ಜ್ಞಾನಮೆಂಬುದುಜೀವಾದಿಪದಾರ್ಥ ನಿಶ್ಚಯಾವಬೋಧಂ ಅದರ್ಕೆ ಸಂಶಯವಿಪರ್ಯಾ ಸಾದಿನಿವಾರಣಾರ್ಥಂ ಸಮ್ಯಕ್ಷದಪ್ರಯೋಗಂ ಚಾರಿತ್ರಮೆಂಬುದು ಪಾಪಕ್ರಿಯಾನಿವೃತ್ತಿ ಅದರ್ಕಜ್ಞಾನಾಚರಣಪರಿಹಾರನಿಮಿತ್ತಂ ಸಮ್ಯಕ್ಷದಪ್ರಯೋಗಂ ಅದಲ್ಲದೆಯುಂ-

ಕಂ || ಸಂಸೃತಿಗಿವಱ ಸಮಾಯೋ
ಗಂ ಸಮನಿಸುಗುಂ ಸಮಂತು ನಿರ್ನಾಶಮನಾ
ದಂ ಸಮನಿಪಂದದಿಂ ವಿ
ಧ್ವಂಸನಮಂ ರೋಗಸಮಿತಿಗೌಷಧಯೋಗಂ || ೨೯

ಮತ್ತಂ ರತ್ನತ್ರಯಸಂ
ಪತ್ತಿಯೆ ರಾಗಾದಿಗಳ್ಗೆ ಸಮನಿಸುಗುಂ ವ್ಯಾ
ಪತ್ತಿಯನವು ಕಿಡೆ ಹೇತು ನಿ
ವೃತ್ತಿಯಿನಾಸಕಳಕರ್ಮಮಂ ಕಿಡುತರ್ಕುಂ || ೩೦

ಕರ್ಮಕ್ಷಯದೊಳ್‌ ಚರಮವ
ಪುರ್ಮಾತ್ರಾಕೃತಿಯಿನೆಯ್ದಿ ಲೋಕಾಗ್ರಮುಮಂ
ನಿರ್ಮಳಮಪ್ಪಷ್ಟಗುಣ
ಕ್ಕಾರ್ಮಂ ತಾನಾಗಿ ಮುಕ್ತನಕ್ಕುಂ ಜೀವಂ || ೩೧

ವ || ಅಂತಗ್ನಿಶಿಖಿಯಂತೂರ್ಧ್ವಗತಿಸ್ವಭಾವತೆಯಿಂ ತ್ರಿಭುವನಾಗ್ರಕ್ಕೆ ಸಂದು ಗತಿಕಾರಣಮಪ್ಪ ಧರ್ಮಾಸ್ತಿಕಾಯಾಭಾವದಿನಾಲೋಕಕ್ಕೆ ಸಲವಿಲ್ಲದಿಲ್ಲಿಯೆ ನಿಶ್ಚಳತ್ವಮನವಳಂಬಿಸಿರ್ಕುಂ-

ಚಂ || ಅಮರ್ದೊಸೆದಪ್ಪುದಾನನಸುಧಾಂಶುವಿನಿಂದೆನೆ ದಿವ್ಯಭಾಷೆ ಚೆ
ಲ್ವಮರ್ದೊಗೆತರ್ಪಿನಂ ಸಕಳತತ್ವಸಮುಚ್ಚಯಮಂ ಸಮಾಸದಿಂ
ದಮೆ ತಿಳಿವಂತು ಪೇೞ್ದನನವದ್ಯಗುಣಾಶ್ರಯಣಂ ಗಣಾಗ್ರಣಿ
ಪ್ರಮುಖಸಮಸ್ತಭವ್ಯನಿಕರಕ್ಕೆ ಜಿನಂ ವರಬೋಧಲೋಚನಂ || ೩೨

ಕಂ || ಜಿನವಚನರಸಾಯನವಾ
ಹಿನಿಯೊಳಗವಗಾಹಮಿರ್ದು ಗಣಮನಿತುಂ ತ
ಣ್ಣನೆ ತಣಿದುದು ಪರಿವರ್ಜಿತ
ಘನಮಿಥ್ಯಾತ್ವಾಭಿತಾಪಮಪಗತಲೇಪಂ || ೩೩

ವ || ಅನಂತರಂ ಮಿಥ್ಯಾತ್ವತಮಃಪರಿಹಾರಕಾಲಮನವಧಿಬೋಧದಿನಱಿದಮರರಾಜಂ ಮುಕು ಳಿತಕರಸರೋಜಂ ಜಿನರಾಜಾಭಿಮುಖನಾಗಿ-

ಮ || ವಿ || ಭರತಕ್ಷೇತ್ರದ ಧರ್ಮಭೂಮಿಗಳೆ ಭವ್ಯರ್ಗಾವಗಂ ಭಾವದೊಳ್
ಪರಿತೋಷಂ ಬಳೆವನ್ನೆಗಂ ಕಱೆಯುತುಂ ಧರ್ಮಾಮೃತಾಸಾರಮಂ
ಪಿರಿದುಂ ನಿರ್ಮಳಧರ್ಮತೀರ್ಥರೆಸಕಂ ಲೋಕಕ್ಕೆ ಕಣ್ಬಚ್ಚಮ
ಚ್ಚರಿಯಪ್ಪಂತು ವಿಹಾರಿಸಲ್ಕಿದೆ ಪದಂ ತ್ರೈಲೋಕ್ಯರಕ್ಷಾಮಣೀ || ೩೪

ವ || ಎಂದು ಬಿನ್ನಪಂಗೆಯ್ವುದುಂ ತದನಂತರಂ-

ಮ || ಸ್ರ || ತ್ರಿದಶಜ್ಯೋತಿಷ್ಕಮುಖ್ಯಾಮರಗಣಯುಗಷತ್ತಾಡಿತಸ್ಫಾರಭೇರೀ
ಗದಿತಪ್ರಕ್ಷೋಭದಿಂ ಮಾರ್ದನಿವಿಡೆ ದೆಸೆಗಳ್ ಪ್ರೋಚ್ಚಳತ್ಕೇತನವ್ರಾ
ತದ ತಳ್ತೊತ್ತೊತ್ತೆಯಂ ಪೆತ್ತೆಡೆಗಿಡೆ ಗಗನಂ ಧರ್ಮಚಕ್ರಾಧಿಪತ್ಯ
ಕ್ಕಿದೆ ದಲ್‌ದಿಗ್ಜೈತ್ರಯಾತ್ರೋತ್ಸವಮೆನೆ ತಳರ್ದಂ ಖ್ಯಾತತೀರ್ಥಾಧಿನಾಥಂ || ೩೫

ವ || ಅಂತಶೇಷಭವ್ಯಮಂಡಳಿಯ ಪುಣ್ಯಪ್ರೇರಣದಿನಾಖಂಡಳಂ ಸಮವಸರಣಮಂಡಳಮಂ ಗಗನಮಂಡಳದೊಳಂ ನಡೆಯಿಪಲ್ಲಿ-

ಕಂ || ಚರಣನ್ಯಾಸೋಚಿತಮೇ
ದುರಕಾಂಚನಕಮಳಸಪ್ತಕಂ ಕರಮೆಸೆಗುಂ
ತರದಿಂ ಹರಿಪೀಠಾಗ್ರದ
ಪರಭಾಗದೊಳಂ ಸ್ಥಳಾಬ್ಜವನಮಾಳೆಯವೊಲ್ || ೩೬

ನ್ಯಾಯಾನ್ವಿತತತ್ವಾಭಿ
ಪ್ರಾಯಂ ಪಸರಿಪುದು ಭಾಷೆ ಸಾಧುಜನಶ್ರ
ದ್ಧೇಯಂ ಪರಪ್ರಮಾಣಾ
ಜೇಯಂ ಸರ್ವಾರ್ಥಮಾಗಮೀಯಂ ಶ್ರೇಯಂ || ೩೭

ಸಕಳಜನಗೋಚರಂ ಕೌ
ತುಕಕರಮೆನಿಸಿದ ಜನಾನುರಾಗಂ ತತ್ತೀ
ರ್ಥಕರಪರಮೇಶ್ವರಾಸ್ಥಾ
ಯಿಕೆ ವಿಹರಿಸುತಲ್ಲಿ ಕೂಡೆ ಪರಿವರ್ತಿಸುಗುಂ || ೩೮

ಆಡೆ ಪತಾಕಾತತಿ ತೂ
ಗಾಡೆ ಕನದ್ರತ್ನತೋರಣಾವಳಿ ಮುದದೊಳ್‌
ಕೂಡೆ ಸಭಾಜನಮೊಯ್ಯನೆ
ತೀಡಿದುದನುಕೂಳಸುರಭಿಸಾರಸಮೀರಂ || ೩೯

ಧರೆಯಂ ವಿಗತತೃಣಪ್ರ
ಸ್ತರಕಂಟಕಧೂಳಿಕೀಟಶರ್ಕರಮಪ್ಪಂ
ತಿರೆ ಯೋಜನಪರಿಮಿತಮಂ
ಮರುತ್ಕುಮಾರರ್ ಸಮಂತು ಸಂಮಾರ್ಜಿಸುವರ್ || ೪೦

ಕುಳಿಶಧರನಾಜ್ಞೆಯಿಂದಂ
ತಳಿವರ್ ಬೞಿವೞಿಯೊಳಾವಗಂ ತನ್ಮಹಿಮಂ
ಡಳಮಂ ಸ್ತನಿತಕುಮಾರರ್
ಮಳಯಜಕಾಶ್ಮೀರಗಂಧಬಂಧುರಜಳದಿಂ || ೪೧

ಸಕಳರ್ತುಸಮಾಗಮಸೂ
ಚಕಪಲ್ಲವಪುಷ್ಪಫಳಸಮುಲ್ಲಸಿತತರು
ಪ್ರಕರಚಿತಂ ಮುಕುರತಳಾ
ನುಕಾರಿ ಭೂವಳಯಮೊಪ್ಪುಗುಂ ರತ್ನಮಯಂ || ೪೨

ತ್ರೈಳೋಕ್ಯನಾಥವಿಭವಸ
ಮಾಳೋಕನಜಾತಹರ್ಷಪುಳಕವಿಳಾಸ
ವ್ಯಾಳಂಬಮಾಯ್ತು ಪುಳುನತ
ಶಾಳಿವ್ರೀಹ್ಯಾದಿಸಕಳಸಸ್ಯಸಮೂಹಂ || ೪೩

ನರತಿರ್ಯಗ್ಜೀವಾವಳಿ
ಪರಸ್ಪರಕ್ರೋಧಬುದ್ಧಿಯಂ ಬಿಟ್ಟು ನಿರಂ
ತರಮೈತ್ರೀಭಾವಮನಂ
ತರಂಗದೊಳ್ ತಾಳ್ದಿ ತೂಳ್ದಿದುದು ಕುಟಿಲತೆಯಂ || ೪೪

ಅಪಗತಘನಪಟಳೋದಯ
ಮಪಕ್ಷಿಸಂಚಾರಮಸ್ತಲಹರೀಸಂದೋ
ಹಪಯೋಧಿವಿಮಳಮಾಕಾ
ಶಪಥಂ ಚೆಲ್ವಾಯ್ತು ಧೌತಖಡ್ಗಶ್ಯಾಮಂ || ೪೫

 


[1] ನಾರಕಾಯುಷ್ಯಾಸ್ರವಂ ದರ್ಶನವಿಶುದ್ಧ್ಯಾದಿಷೋಡಶಭಾವನೆಗಳ್ ಶುಭನಾಮ ಕರ್ಮವಿಶೇಚತೀರ್ತ್ಥ ಕೃನ್ನಾಮಾಶ್ರವಂ ಪರಾತ್ಮನಿಂದಾಪ್ರಶಂಸೆಗಳುನೀಚೈಗ್ರೋತಾಶ್ರವಂ ತದ್ವಿಪರ್ಯಾಸಂಗಳುಚ್ಚೈರ್ಗೋತ್ರಾಶ್ರವಂ ದಾನಾದಿವಿಘ್ನಕರಣವಂತರಾಯಾಶ್ರವಮದಲ್ಲದೆಯುಂ. ಎಂದು ಪಾಠಾಂತರ.