ಕಂ || ಪರಮೌದಾರಿಕದಿವ್ಯಾಂ
ಗರೋಚಿ ಮೇಗೊಗೆದು ಬಳಸಿದತ್ತೆನೆ ನಿಮಿರ್ದ
ಚ್ಚರಿಯಾಯ್ತಾಕೋಟೆಯ ಕೊನೆ
ವರೆಗಂ ಶ್ರೀಮಂಡಪಂ ನಭಸ್ಸ್ಫಟಿಕಮಯಂ || ೭೬

ಅಗಲಂ ತನಗೊರ್ಗಾವುದ
ಮಿಗಿಲಿಲ್ಲೆನೆ ಶಾಳಮೂಳದಿಂದೆ ತಗುಳ್ದೊ
ಪ್ಪುಗುಮಾಶ್ರೀಮಂಡಪದೊಳ
ಗೆ ಗಣಾವನಿದೇಶಮಸಮಸುಕೃತಿನಿವೇಶಂ || ೭೭

ನೆಗೞ್ದಿರ್ದಾನಾಲ್ಕುಂ ಬೀ
ದಿಗಳೆರಡುಂ ಕೆಲದವೆರಡು ಮತ್ತೆಡೆಯೆಡೆಯೊಳ್
ಸೊಗಯಿಪುವೆರಡೆರಡೆನೆ ಭಿ
ತ್ತಿಗಳೀರೆಂಟಲ್ಲಿ ಕೋಷ್ಠವೀರಾಱಕ್ಕುಂ || ೭೮

ಮ || ವಿ || ಮುನಿಪರ್ ಕಲ್ಪಜೆಯರ್ ಮನುಷ್ಯವನಿತಾ…ರ್ಯೆಯರ್ ಜ್ಯೋತಿರಂ
ಗನೆಯರ್ ವ್ಯಂತರಕಾಂತೆಯರ್ ಭವನವಾಸಸ್ತ್ರೀಯರಾಭಾವನರ್
ವನಜರ್ ಜ್ಯೋತಿಷಿಕರ್ ಸುರರ್ ನರವರರ್ ತಿರ್ಯಕ್ಸಮೂಹಂಗಳೆಂ
ಬಿನಿತುಂ ಪನ್ನೆರಡುಂ ಗಣಂಗಳವಱೊಳ್ ಪರ್ಯಾಯದಿಂದೊಪ್ಪುಗುಂ || ೭೯

ವ || ಅದೆಂತೆಂದೊಡೆ ದತ್ತಾದ್ಯರಪ್ಪ ತೊಂಬತ್ತುಮೂವರ್ ಗಣಧರರುಂ ನಾಲ್ಸಾಸಿರ್ವರ್ ದಶ ಪೂರ್ವಧರರುಂ ಎರಡುಲಕ್ಕೆಯ ಪತ್ತುಸಾಸಿರದ ನಾಲ್ನೂರ್ವರ್ ಶಿಕ್ಷಕರುಂ ಇಚ್ಛಾಸಿರ್ವ ರವಧಿಜ್ಞಾನಿಗಳುಂ ಪದಿನೆಂಟುಸಾಸಿರ್ವರ್ ಕೇವಲಜ್ಞಾನಿಗಳುಂ ಅಱುನೂರ್ವರ್ ವೈಕ್ರಿಯಿಕರುಂ ಎಂಟುಸಾಸಿರ್ವರ್ ಮನಃಪರ್ಯಯಜ್ಞಾನಿಗಳುಂ ಏೞುಂ ಸಾಸಿರ್ವರ್ ವಾದಿಗಳುಂ ಮೂಱುಲಕ್ಕೆಯುಮೆಣ್ಬತ್ತು ಸಾಸಿರ್ವರಾರ್ಯಕೆಯರುಂ ಐದುಲಕ್ಕ ಶ್ರಾವಕಿಯರುಂ ಮೂಱುಲಕ್ಕ ಶ್ರಾವಕರುಂ ಅಸಂಖ್ಯಾತದೇವದೇವಿಯರುಂ ಅಸಂಖ್ಯಾತತಿರ್ಯಕ್ಸಮಾಜಮುಂ ಪೂರ್ವೋಕ್ತಪರ್ಯಾಯದಿಂ ಪರಿಮಿತಪ್ರವೇಶಕೋಷ್ಠಂ ಗಳೊಳ್ ಪರಮೇಷ್ಠಿಪ್ರಭಾವದಿನಸಂಶ್ಲಿಷ್ಟರೂಪಮಾಗಿರ್ಕುಂ ಅದಲ್ಲದೆಯುಂ-

ಕಂ || ದ್ವಾದಶಕೋಷ್ಠಗಣಂಗಳು
ಮಾದರದಿಂ ಬಳಸೆ ಮೊದಲಪೀಠಮದೇಂ ಚೆ
ಲ್ವಾದುದೊ ರವಿಮಂಡಳಮಂ
ದ್ವಾದಶರಾಶಿಗಳ ಬಳಸಿದಂದದಿನಾದಂ || ೮೦

ವ || ಆಗಳಾಕ್ಷೋಣಿಯಿಂದೊಳಗೆ-

ಕಂ || ಇದು ದೇವನ ಸಂಸ್ಥಾಗಾ
ರದೊಳಮರ್ದ ದುಕೂಲನವಖಳೂರಿಕೆಯೆಂಬಂ
ದದಿನೆಸೆವಾಕಾಶಸ್ಫಟಿ
ಕದ ವೇದಿಕೆಯೆಯ್ದೆ ಬಳಸಿ ತೊಳಗುತ್ತಿರ್ಕುಂ || ೮೧

ವ || ಮತ್ತಂ-

ಕಂ || ಮರಕತರಜತಚತುರ್ಗೋ
ಪುರದಿಂ ಮಂಗಳನಿಧಿಪ್ರತಾನಂಗಳ ಬಿ
ತ್ತರದಿಂ ಕಾಪಿನ ಕಲ್ಪಾ
ಮರರಿಂ ತ್ರಿಗುಣಿಸುವುದೆಯ್ದೆ ವೇದಿವಿಳಾಸಂ || ೮೨

ವ || ಅದಱಿಂದೊಳಗೆ ಲೋಕತ್ರಯಲಲಾಮಮೆನಿಪ ಪೀಠತ್ರಯಮಿರ್ದುದು ಅಲ್ಲಿ-

ಕಂ || ಸುರುಚಿರವೈಡೂರ್ಯಮಯಂ
ಸ್ಫುರತ್ಪ್ರಭಾನಿಕರಭರಿತಕನಕಮಯಂ ಭಾ
ಸುರಸಕಲಮಣಿಮಯಂ ಮೊದ
ಲೆರಡನೆಯಾದಲೆಂದು ಪೀಠಮೊಪ್ಪುಗುಮೆಂದುಂ || ೮೩

ಮತ್ತದುಮೆಸೆವೇೞ್ನೂಱ
ಯ್ವತ್ತು ಶರಾಸನಮದಗಲಮಷ್ಟಾಷ್ಟಾರ್ಧಂ
ಪ್ರೋತ್ತುಂಗತೆಯೆನೆ ಸೊಗಯಿಪು
ವೆತ್ತಂ ಪ್ರಥಮದ್ವಿತೀಯನುತಪೀಠಂಗಳ್ || ೮೪

ಪಂಚಧನುಶ್ಶತವಿಸ್ತಾ
ರಾಂಚಿತಸಮಭಾಗಮಾಚತುಶ್ಚಾಪೋತ್ಸೇ
ಧಂ ಚಂಚನ್ಮಣಿರೋಚಿ
ಸ್ಸಂಚಯಮೊಪ್ಪುವುದುದಗ್ರಮಗ್ರಿಮಪೀಠಂ || ೮೫

ವ || ಅದಲ್ಲದೆಯುಂ-

ಕಂ || ರುಚಿರಮಕುಟಾಗ್ರದೊಳ್ ಧ
ರ್ಮಚಕ್ರಮಂ ಯಕ್ಷರೇಕಚಾಪಮಿತಮನಾಂ
ತು ಚತುರ್ದಶೆಯೊಳಮಿರ್ಪ
ಖಚರನರೇಂದ್ರಾರ್ಚಿತಾದಿಪೀಠದೊಳನಿಶಂ || ೮೬

ಅಂಬರಹರಿತಾರ್ಕ್ಷ್ಯೋಕ್ಷಗ
ಜಾಂಬುಜಮಾಳಾಮೃಗೇಂದ್ರಚಿಹ್ನಪತಾಕಾ
ಡಂಬರಮೆಸೆವುದು ಸುರನಿಕು
ರುಂಬಸುಪೂಜ್ಯದ್ವಿತೀಯಪೀಠದೊಳೆತ್ತಂ || ೮೭

ನವನಿಧಿಯುಮಷ್ಟಮಂಗಲ
ನಿವಹಮುಮುಪನಿಧಿಗಳಂದದಿಂದೊಪ್ಪುವುವಿ
ರ್ಪುವುಪಾಸಕಸಂದೋಹದ
ತವನಿಧಿಯೆನಿಸಿದ ತೃತೀಯಪೀಠದ ಕೆಲದೊಳ್ || ೮೮

ವಿದಿತಂ ತತ್ಪೀಠದ ಮ
ಧ್ಯದೊಳಿರ್ಪುದು ಷಡ್ಧನುಶ್ಶತಾಯಾಮವ್ಯಾ
ಸದಿನಾತ್ತನವಶತೋತ್ಸೇ
ಧದಿನೊಪ್ಪುವ ಗಂಧಕುಟಿ ಹಟನ್ಮಣಿಫಟಿತಂ || ೮೯

ಸುರಗಿರಿಯಂತೆವೊಲದು ವಿ
ಸ್ತರಕಲ್ಯಾಣಪ್ರದೇಶವಿಬುಧಾವಾಸಂ
ಶರನಿಧಿಯಂತದು ರತ್ನಾ
ಕರಮದು ನಂದನವೆನಲ್ಕೆ ಕಮಲಾನಂದಂ || ೯೦

ಮ || ವಿ || ನಯಮಂ ಬೀಱುವ ಚಿತ್ರಪತ್ರನಿಧಿಕೂಟಸ್ತಂಭಭಿತ್ತಿಚ್ಛದಾ
ಶ್ರಯದಾಲಕ್ಷಣಮಾನಮೇಯಗುಣರೇಖಾಶುದ್ಧಿಸರ್ವಾರ್ಥಸಿ
ದ್ಧಿಯತದ್ರತ್ನವಿಮಾನದಲ್ಲಿಯುಮಿವಿಲ್ಲೆಂಬೀಜಸಕ್ಕಾದುದಾ
ಶ್ರಯಮೇನಪ್ರತಿಬಂಧಿ ಗಂಧಕುಟಿ ಶಶ್ವದ್ಗಂಧಸಂತಾನಿತಂ || ೯೧

ಕಂ || ಪರಮಾತ್ಮನ ದಿವ್ಯವಪುಃ
ಪರಿಮಳದಿಂ ತೀವಿ ನಿಂದ ಗಂಧಕುಟಿಯ ಬಂ
ಧುರಗಂಧದ ಕೆಲದೊಳ್ ಗಂ
ಧರಾಜಿಲೇಶಾರ್ಥದಿಂದೆ ವರ್ತಿಸುತಿರ್ಕುಂ || ೯೨

ಮರವಟ್ಟುದು ಮಳಯರುಹಂ
ಕರಗಿದುದಾಸವದ ನೆವದೆ ಕುಸುಮಂ ಕಾಳಾ
ಗರು ಪೊಗೆಯುತಿರ್ದುದೊಡರಿಸೆ
ಪರಿಭವಮಂ ಗಂಧಕುಟಿಯ ನಿರ್ಭರಗಂಧಂ || ೯೩

ತದ್ಗಂಧಕುಟಿಯ ಮಧ್ಯದೊ
ಳುದ್ಗತರತ್ನಾಂಶುಜಾಳಜಟಿಳಂ ರಾರಾ

ಜದ್ಗಜರಿಪುಧೃತಮಖಿಳಮ
ರುದ್ಗಣಸಂಸೇವ್ಯಮೊಪ್ಪುಗುಂ ಹರಿಪೀಠಂ ||

[1] ೯೪

ವ || ಅಲ್ಲಿ-

ಉ || ಇಂತಿದೆ ಕರ್ಮನಿರ್ಜರೆಯನಾಗಿಪ ನಿರ್ಮಳಯೋಗಮುದ್ರೆಯೆಂ
ಬಂತಿರೆ ಸೌಷ್ಟವಂ ನೆಲಸಿ ಮೂರ್ತಿಯೊಳಾದಮನಂತಬೋಧಮ
ಭ್ಯಂತರದೊಳ್ ಪೊದೞ್ದು ಬೆಳಗುತ್ತಿರೆ ಚಂದ್ರಜಿನೇಂದ್ರನೇಕಮು
ಷ್ಟ್ಯಂತರದಲ್ಲಿ ಮುಟ್ಟದೆಸೆದಿರ್ದನಣಂ ಹರಿವಿಷ್ಟರಾಗ್ರಮಂ || ೯೫

ಕಂ || ಸದಯಂ ತ್ರಿವಿಷ್ಟರಪ್ರಾ
ಗ್ರದೊಳೆಸೆವ ಗಜಾರಿಪೀಠದೊಳ್‌ ತ್ರೈಲೋಕ್ಯಾ
ಗ್ರದೊಳೆಸೆವೀಷತ್ಪ್ರಾಗ್ಭಾ
ರದೊಳಿರ್ಪುದನಂದೆ ಸೂಚಿಪಂದದಿನಿರ್ದಂ || ೯೬

ಅಂಚೆಯನಸಕಳಿದಮರ್ದಂ
ಬಂಚಿಸಿ ಮಂಜಂ ಮರಳ್ಚಿ ಬಂದವಿಚಳಿತಂ
ಚಂಚಚ್ಚಳಲಕ್ಷ್ಮಿಯ
ದೇಂ ಚಂದ್ರಪ್ರಭನ ತನುವಿನೊಳ್ ನೆಲಸಿದುದೋ || ೯೭

ಪರಮನ ಮೆಯ್ಗದಿರೊಳ್ ಮೆ
ಯ್ಗರೆದಿರ್ಪುದು ನಿಚ್ಚಮಚ್ಚಬೆಳ್ದಿಂಗಳದ
ರ್ಕಿರುಳುಂ ಪಗಲುಂ ಮರಲ್ವುವು
ಹರಿಸಂ ಕೈಗಣ್ಮೆ ನೋೞ್ಪ ಕಣ್ನೆಯ್ದಿಲ್ಗಳ್ || ೯೮

ವ || ಅದಲ್ಲದೆಯುಂ-

ಚಂ || ಇದು ಶರದಭ್ರದಿಂದುಗುವ ನಿರ್ಮಲವೃಷ್ಟಿಯಿದಿಂದು ಬಿಂಬದಿಂ
ದುದಯಿಪ ಸಾಂದ್ರಚಂದ್ರಿಕೆಯಿದಿಂಗಡಲಿಂದೊಗೆವುದ್ಘವೀಚಿಯಿಂ
ತಿದು ಹಿಮಶೈಳದಿಂ ಪಸರಿಪಚ್ಛಮರುನ್ನದಿಯೆಂಬ ಲೀಲೆಗಾ
ದುದು ನೆಲೆ ಚಂದ್ರನಾಥಚರಮಾಂಗದಿನುಣ್ಮುವ ಕಾಂತಿ ಸಂತತಂ || ೯೯

ವ || ಮತ್ತಂ-

ಕಂ || ಕೆಲದೊಳ್ ವರ್ತಿಪ ರೂಪನೆ
ಸಲೆ ತಾನಱಿಪುವುದು ಚಂದ್ರರವಿರೋಚಿಸ್ಸಂ
ಕುಳಮೇೞು ಭವದ ರೂಪಂ
ಜಲಕ್ಕನಱಿಪುವುದು ಜಿನನ ಘನಭಾವಳಯಂ || ೧೦೦

ತ್ರಿಭುವನದೊಳಗಣ ಭವ್ಯರ
ನಭವಪದಾರ್ಚನೆಗೆ ಬನ್ನಿಮೆಂಬಂದದೆ ದುಂ
ದುಭಿನಾದಮಾದಮೆಸೆವುದು
ನಭೋದಿಶಾವಳಯವಸುಮತೀತಳಭರಿತಂ || ೧೦೧

ತಮಮುಂ ಚಂದ್ರಿಕೆಯುಂ ವೈ
ರಮನುೞಿದೊಂದಾಗಿ ದಿವದಿನಿೞಿತಂದಪುವೋ
ಸಮವಸೃತಿಗೆನಿಸಿ ಸುರಿದುವು
ಸುಮವರ್ಷಮುಮಳಸುವೆಳಸುವಳಿಸಮುದಯಮುಂ || ೧೦೨

ಸುರಪತಿಯನುರಾಗಪರಂ
ಪರೆ ಪರಮನ ಕೆಲದೊಳಗಲದಿರ್ದಪುವೆಂಬ
ಚ್ಚರಿಯಂ ಪೆರ್ಚಿಸಿದುದು ಸುರು
ಚಿರಕಿಸಲಯಕುಸುಮಯುಕ್ತರಕ್ತಾಶೋಕಂ || ೧೦೩

ಯುತಹಸ್ತವಿಕೃತಿವಾಯು
ಪ್ರತಿರೋಧಜಮೇಕಕಾಲಪರ್ತನವರ್ತ
ವ್ಯತಿರಿಕ್ತಮೇವುದೆಂಬುದ
ರುತಮೆಂಬವೊಲೆಸೆವುದಸದಳಂ ದಿವ್ಯರವಂ || ೧೦೪

ಇದು ಚಿತ್ರಂ ಛತ್ರತ್ರಯ
ಮುದಾತ್ತಮುಕ್ತಾಫಳಾಂಶುಪಾಂಡುರಮಾಗಿ
ರ್ಪುದು ಮತ್ತನೂನರಾಗಮ
ನೊದವಿಸುವುದು ಭವ್ಯಜನದ ಕಣ್ಗಂ ಮನಕಂ || ೧೦೫

ಪಿರಿದುಂ ಬಯಲೊಳೆ ಬಂಬ
ಲ್ದೆರೆ ಮಸಗಿದುದಭವನಂಗಚಂದ್ರಿಕೆಯೆಂಬಂ
ತಿರೆ ಸುರನಿಕರಕರಪ್ರ
ಸ್ಫುರಿತಚತುಷ್ಪಷ್ಟಿಚಾಮರಂ ಕರಮೆಸೆಗುಂ || ೧೦೬

ವನದಂತೆ ಭದ್ರಪಂಚಾ
ನನರಮ್ಯಂ ವನಧಿಯಂತೆ ಮಣಿಗಣಲಕ್ಷ್ಮೀ
ವಿನಿಯುಕ್ತಂ ಕೌತುಕಮಂ
ಜನಿಯಿಸುವುದು ವಿಷ್ಟರಂ ತ್ರಿವಿಷ್ಟಪಪತಿಯಾ ||[2] ೧೦೭

ಸ್ರ || ಆರಾತ್ನಂನೂತ್ನಸಿಂಹಾಸನಮೆಳವೞಿಕಂ ಪೋಲ್ವಿನಂ ಭಾಮರೇಂದ್ರಾ
ಕಾರಂ ಕರ್ಪೂರದಿಂದಂ ಸಮೆದುದೆನಿಪಿನಂ ಶಾರದಾಂಭೋದಶೋಭಾ
ಧಾರಚ್ಛ್ರತತ್ರಯಕ್ಕತ್ಯಧಿಕಧವಳಿಮಂ ಸಾರ್ವಿನಂ ತೀರ್ಥನಾಥೋ
ದಾರಾಂಗಜ್ಯೋತ್ಸ್ನಯೆತ್ತಂ ಪಸರಿಸಿದುದು ಚಕ್ಷುಶ್ಚಕೋರಾತಿಸೇವ್ಯಂ || ೧೦೮

ವ || ಮತ್ತಂ ಘಾತಿಚತುಷ್ಟಯಕ್ಷಯಾನಂತರ ಜನಿತಂಗಳಪ್ಪ-

ಮ || ವಿ || ಚತುರಾಸ್ಯತ್ವಮಭುಕ್ತಿಭಾವಮನಿಮೇಷತ್ವಂ ನಭೋಯಾನಸಂ
ಗತಿ ಗವ್ಯೂತಿಚತುಶ್ಶತಾಂತರಸುಭಿಕ್ಷತ್ವಂ ವಿಮುಕ್ತೋಪಸ
ರ್ಗತೆಯಪ್ರಾಣಿವಧಂ ಸಮಾನನಖಕೇಶತ್ವಂ ಸಮಸ್ತಾಗಮ
ಜ್ಞತೆಯಚ್ಛಾಯತೆಯೆಂಬ ಪತ್ತತಿಶಯಂ ತೀರ್ಥೇಶನೊಳ್ ಶೋಭಿಕುಂ || ೧೦೯

ಕಂ || ಆ ಪರಮನ ತನುವಿಂ ಕೇ
ಳೀಪರ್ವತಸಿದ್ಧಚೈತ್ಯತರುಹರ್ಮ್ಯಮಹಾ
ಗೋಪುರಮಂಡಪವಸತಿ
ಸ್ತೂಪಾಶೋಕೋಚ್ಛ್ರಯಂ ದ್ವಿಷಡ್ಗುಣಮಕ್ಕುಂ || ೧೧೦

ಉತ್ತುಂಗತೆ ನಾಲ್ವಡಿಯ
ರ್ಹತ್ತನುವಿಂ ಶಾಳವೇದಿಕಾಸಮಿತಿಗೆ ಭಾ
ಸ್ವತ್ತೋರಣಗಣಮವಱಿನಿ
ನಿತ್ತಧಿಕಮೆನಿಕ್ಕುಮಾಗಮಜ್ಞರ ಮತದಿಂ || ೧೧೧

ವ || ಅದಲ್ಲದೆಯುಮಷ್ಟೋತ್ತರಚತ್ವಾರಿಂಶದ್ಗವ್ಯೂತಿಪ್ರಮಿತಪರಿಷನ್ಮಹೀಮಂಡಳಮಂ-

ಕಂ || ಅಂತರ್ಮುಹೂರ್ತದಿಂ ಪುಗ
ಲುಂ ತಡೆಯದೆ ಪೊಱಮಡಲ್ಕಮಾರ್ಪ ಪೊಡರ್ಪಂ
ಕಾಂತಾಶಿಶುವೃದ್ಧಸಮೂ
ಹಂ ತಳೆವುದು ತೀರ್ಥನಾಥಸಾಮರ್ಥ್ಯಕೃತಂ || ೧೧೨

ಮೃತಿಜನನಶೋಕನಿದ್ರಾ
ರತದೋಷತ್ರಿತಯದೋಷಬಾಧೆಗಳೊಳ್‌ ತತ್

ಸ್ಥಿತದೇಹಿಸಮೂಹಂ ಸಂ
ಗತಿವಡೆಯದನಿತ್ತುಮಿಂತಿದೇಂ ವಿಸ್ಮಯಮೋ || ೧೧೩

ಪುಗೆ ಪಸಿವುಂ ನೀರೞ್ಕೆಯು
ಮಗಲ್ದುವಿದನೆಂದು ರಮ್ಯಭೂಮಿಯನರೆಬರ್
ಪೊಗೞ್ವ ನುಡಿ ಸಮವಸೃತಿಯೊಳ್‌
ಪುಗೆ ದಿಟಮಾಕ್ಷುತ್ಪಿಪಾಸೆಗಳ್ ಕಿಡುವುದಱಿಂ || ೧೧೪

ಬಗೆವೊಡಬೋಧತ್ರಿತಯಾ
ನುಗಳುಮಭವ್ಯರ್ಕಳುಂ ಕುದೃಷ್ಟಿಗಳುಮಸಂ
ಜ್ಞಿಗಳುಮಣಮಿಲ್ಲೆನಿಪ್ಪಧಿ
ಕಗುಣಂ ಜಿನಸಭೆಯೊಳಲ್ಲದೆಲ್ಲಿಯುಮುಂಟೇ || ೧೧೫

ವ || ಎನಿಸಿ ನಿಖಿಳಭುವನಾಲಂಕರಣಮುಮಾಗೆ-

ಕಂ || ವೈಶ್ರವಣವಾಸ್ತುವಿದ್ಯಾ
ವಿಶ್ರಮಣಸ್ಥಾನವದು ದಲೆನಿಸಿದುದುಂ ವೃ
ದ್ಧಶ್ರವನೀಕ್ಷಿಸಿದಂ ಜಗ
ದಾಶ್ರಯಣನ ಸಮವಸರಣಭೂಮಂಡಳಮಂ || ೧೧೬

ಕಂ || ಅಂತು ಸಹಸ್ರಲೋಚನಂ ನಿಜವಿಲೋಚನಮರೀಚಿನಿಚಯಂ ಅಮರಕಾಮಿನೀನಿಕರ ಕೇಕರಮಯೂಖಮಾಳೆಯೊಳಂ ನಿಳಿಂಪಸಮುದಯನಯನಕಾಂತಿಸಂತಾನದೊಳಂ ತಳ್ಪೊಯ್ದು ನಿಮಿರ್ದನೇಕಪ್ರಾಕಾರವೇದಿಕಾನಿಕರಮನೇಕವರ್ಣಮಾಗೆ ಧವಳಿಸೆಯುಂ ಕನಕಹರಿನೀಳಗೋಪುರ ಕಳಾಪಮಂ ರೂಪ್ಯಗೋಪುರಂಗಳೊಳ್‌ ಸಾರೂಪ್ಯಮನೆಯ್ದಿ ಸಿಯುಂ ಮಾನಸ್ತಂಭಂಗಳಂ ಬಳ್ಳಿಮಿಂಚಿನ ಬಳ್ಳಿವಳ್ಳಿಗಡರ್ಪನಿಟ್ಟಂತೆ ಮಾಡೆಯುಂ ಪ್ರಾಸಾದಚೈತ್ಯಂಗಳಂ ಧವಳಕಮಳವಂದನಮಾಳಾಳಂಕೃತಂಗಳೆನಿಸೆಯುಂ ಜಳಖಾತಿಕೆ
ಯನಪೂರ್ವಫೇನಸಂತಾನನಿರಂತರಮಾಗಿಸಿಯುಂ ವಲ್ಲೀವನಮನುತ್ಫುಲ್ಲಕುಸುಮಕಾಂತಿ ಯೊಡನೆ ಬೆಳೆದುಬಳಸೆಯುಂ ಉಪವನಮುಮನಪರಿಮಿತತುಹಿನಪಟಳಪರಿವೃತಮೆಂಬ ಸಂದೆಗದೊಳೊಂದಿಸೆಯುಂ ಕೇತನಪ್ರತಾನಮಂ ನವೀನಚೀನಧವಳಪಲ್ಲವೋಲ್ಲಸಿತ ದೊಳ್ ಯೋಜಿಸೆಯುಂ ದಶಾಂಗಕಲ್ಪತರುನಂದನಮಂ ಮಾಲ್ಯಾಂಗಮಯಮೆಂಬ ವಿಸ್ಮಯಮನೊದವಿಸೆಯುಂ ವಸ್ತುವಿರಚಿತೋತ್ತುಂಗಸ್ತೂಪಂಗಳಂ ಸ್ನಿಗ್ಧದುಗ್ಧಾಬ್ಧಿಸಿಕ್ತಂ ಗಳೆಂಬಾಡಂಬರಂಗಳನೊಡರ್ಚೆಯುಂ ಸಂಗೀತಸೌಧಮಾಲೆಯಂ ನೂತನಸುಧಾಲೇಪ ಶೋಭೆಯೊಳೊಡಗೂಡೆಯುಂ ದ್ವಾದಶಗಣಮನಸಮಯಚಂಚಚ್ಚಂದ್ರಿಕಾಪ್ರವಾಹದೊಳ ವಗಾಹಮಿರಿಸೆಯುಂ  ರ್ಹದಂಗಪ್ರವಾಹಪೀಯೂಷದೊಳ್‌ ಬೆರಸಿ ಬೞಿಯಂ ಕ್ಷೀರ ನೀರನ್ಯಾಯದಿಂದೇಕೀಭಾವಮಾಗೆಯುಂ ನೀಡುಂ ನೋಡಿ ನಿಜವಿನೋದಪರಂಪರೆಯಂ ಮೆಱೆದು ಭಕ್ತಿಭಾವಶುದ್ಧಸಿದ್ಧರಸವನೆಬಲಿದು-

ಕಂ || ಸೌಧರ್ಮಮುಮಂ ಸೌಧ
ರ್ಮಾಧಿಪತಿತ್ವಮುಮನಧಿಪತಿತ್ವಾಹಿತನಿ
ರ್ಬಾಧವಿಳಾಸಮುಮನಣಂ
ಸೌಧರ್ಮೇಂದ್ರಂ ಮನಕ್ಕೆ ತಾರದೆ ನಿಂದಂ || ೧೧೭

ಮ || ಸ್ರ || ಪ್ರತಿಹಾರಂ ತಾನೆ ಚಂಚಚ್ಚಮರರುಹಧರಂ ತಾನೆ ಪೀಠಾರ್ಚನಾಪ್ರ
ಸ್ತುತಯುಕ್ತಂ ತಾನೆ ತೂರ್ಯತ್ರಯಸಮಧಿಕೃತಂ ತಾನೆ ನಾನಾಪ್ರಕಾರ
ಸ್ತುತಿಕಾರಂ ತಾನೆ ಮತ್ತಾವನೂ ಪೆಱನೆನೆ ದೇವಾದಿದೇವಾಂಘ್ರಿಸೇವಾ
ನತನಿರ್ದಂ ಪುಣ್ಯಶೀಲಂ ಜಿನಸಮಯಸರಸ್ಸಾರಕೇಳೀಮರಾಳಂ || ೧೧೮

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಸಮವಸರಣ ವರ್ಣನಂ
ಪಂಚದಶಾಶ್ವಾಸಂ

 


[1] ಪರಮೇಶಂ ನಿಜವೆಂದತಿ
ಸಿರಿ ಪೇೞೆ ಸಹಸ್ರದಳದ ಪೊಂದಾವರೆಯಿಂ
ದರುಹಂ ಜಗತ್ರಯಂಗಳ
ಸಿರಿಯಂ ಕೈಸೆಱೆಯ ವಿಡಿದ ತೆಱದಿಂದೆಸೆಗಂ ||

೯೫ನೆಯ ಈ ಪದ್ಯವು ಗ್ರಂಥಕರ್ತನದಲ್ಲವೆಂದು ತೋರಿಬಂದುದರಿಂದ ಕೆಳಗೆ ಕೊಟ್ಟಿದೆ. ಇದು
ಒಂದು ಪ್ರತಿಯಲ್ಲಿಲ್ಲ.

[2] ಸಿರಮೆನೆ ಚಂದ್ರಜಿನೇಂದ್ರನ
ಕಿರಣಂಗಳೊಳೊಪ್ಪಿ ತೋಱೆ ಲೋಕಕ್ಕಂ
ಸಿರಿದಾವರೆಗಳ್ ದುಗ್ಧಾ
ಕರದೊಳ್ ಜನಿಸಿರ್ದುವೆಂದು ಪೇೞ್ವರ್ ಕವಿಗಳ್ ||

೧೦೭ನೆಯ ಪದ್ಯವಾದ ಮೇಲೆ ಬರುವ ಈ ಪದ್ಯವು ಗ್ರಂಥಕರ್ತನದಲ್ಲವೆಂದು ತೋರಿಬರುವುದರಿಂದ ಕೆಳಗೆ ಕೊಟ್ಟಿದೆ, ಇದು ಒಂದು ಪ್ರತಿಯಲ್ಲಿಲ್ಲ.