ಷಿಕಾರಿಪುರಮತ್ತುಅರಸಿಕೆರೆಶಾಸನಗಳಲ್ಲಿಬರುವರೇಚಣನ ಗುಣವರ್ಣನೆ

೧. ಷಿಕಾರಿಪುರ ೧೧೯ರಲ್ಲಿ-
ವೈರಿನೃಪಾಳಪಟ್ಟಮಹಿಷೀವರಪಾಂಡುರಗಂಡಕಾಂತಿಯಂ
ಸೈರಣೆಗೆಟ್ಟ ಚಾತಕಕುಳಂ ಹಿಮದೀಧಿತಿಯೆಂದು ಷಟ್ಪದಂ
ಚಾರು ಸಿತಾಬ್ಜಮೆಂದು ಕಳಹಂಸಕುಳಂ ಬಿಸಕಾಂಡಮೆಂದು ಸಂ
ಚಾರಿಸಿ ಲೋಕಮಂ ನಗಿಸುಗುಂ ವಿಭುರೇಚಣದಂಡನಾಥನಾ ||

೨. ಷಿಕಾರಿಪುರ ೧೨೩ರಲ್ಲಿ
ಅಮಳಗುಣನಮಳಕುಳನ
ತ್ಯಮಳಚರಿತ್ರೈಕನಿಳಯನಮಳನಯ ಪ್ರ
ಕ್ರಮನಮಳಯಶೋರೋಚಿ
ಸ್ಸಮಾವೃತಾಶಾಳಿಯೆನಿಸಿದಂ ರೇಚರಸಂ ||

೩. ಷಿಕಾರಿಪುರ ೧೮೫ರಲ್ಲಿ
ಸರಸೀರುಹತತಿ ದಿನಕರ
ಕರದಿಂದಲರ್ವಂತೆ ಜನದ ಮನಮಲರ್ವಿನೆಗಂ
ಸರಸೋಕ್ತಿಯುಕ್ತಿಯಿಂ ರೇ
ಚರಸಂ ಧರ್ಮಪ್ರಸಂಗಮಂ ಪುಟ್ಟಿಸಿದಂ ||

೪. ಷಿಕಾರಿಪುರ ೧೯೭ರಲ್ಲಿ
ಕಳಚುರ್ಯಕ್ಷಿತಿಪಾಳರಾಜ್ಯಲತೆಪರ್ವಲ್ ತನ್ನದೋಃಶಾಖೆಯಂ
ವಿಳಸನ್ಮಂದರಸಾನುಗಂ ವಿಬುಧಸೇವ್ಯಂ ವಿಸ್ತೃತಚ್ಛಾಯನ
ಸ್ಖಳಿತೌದಾರ್ಯವಿಳಾಸಭಾಸಿ ಸುಮನಸ್ಸಂಪೂರ್ಣನುದ್ಯದ್ಯಶಃ
ಫಳದಿಂ ರೇಚಣದಂಡನಾಥನೆಸೆದಂ ಲೋಕೈಕಕಲ್ಪದುಮ್ರಂ ||

ಜಿನನಂ ತನ್ನ ಮನಂ ಮನಃಪ್ರಕೃತಿಯಂ ಸದ್ವಿದ್ಯೆಯಾವಿದ್ಯೆಯಂ
ತನುವಂತಾತನುವಂ ವಿಳಾಸಮದನುದ್ಯಲ್ಲಕ್ಷ್ಮಿಯಾ ಲಕ್ಷ್ಮಿಯಂ
ವಿನುತೌದಾರ್ಯಮದಂ ಜಗಂ ಜಗಮನಿಂಬಿಂ ಕೀರ್ತಿಯಾಲಿಂಗಿಸಲ್
ಜನವಂದ್ಯಂ ವಿಭುರೇಚಿರಾಜನೆಸೆದಂ ಚಾರಿತ್ರರತ್ನಾಕರಂ ||

ಕವಿತತಿ ಬಲ್ಮೆಗೋಲಗಿಸೆ ಕಾಮಿನಿಯರ್ ಸೊಬಗಿಂಗೆ ಸೋಲೆ ಬೇ
ೞ್ಪವರ್ಗಳುದಾರವೃತ್ತಿಗೊಲವಿಂ ನರಶಾಸನಮಾಗೆ ರಾಜ್ಯಮು
ದ್ಭವದಿನೊಡರ್ಚೆ ಜೈನಸಮಯಾಂಬುಧಿ ಕೀರ್ತಿಸುಧಾಂಶುವಿಂ ಪೊದ
ೞ್ಕೆವಡೆಯೆ ರೇಚಿರಾಜನೆಸೆದಂ ಜಸದಿಂ ವಸುಧೈಕಬಾಂಧವಂ ||

ನಡೆದ ನೆಲಂ ರಣೋರ್ವರೆಯೊಳಂತನಿತುಂ ತನಗಜ್ಜಪಜ್ಜರಿಂ
ಪಡೆದನೆಲಂ ದಲೆಂಬಿನಸಿಗನ್ಯನೃಪಾಳರನಿಕ್ಕದುಂತೆಕಿ
ೞ್ತೊಡೆ ಕಡುದೋಸಮೆಂಬನಸಹಂ ಮಿಗೆ ಬೆಂಗುಡೆ ಪತ್ತೆ ತಾನೆ ಬೆಂ
ಗುಡುವವೊಲೆಂಬನೇನದಟನೋ ಕಲಿರೇಚಣ ದಂಡನಾಯಕಂ ||

ಅನುಪಮದಾನಶೌರ್ಯರಣಶೌರ್ಯಮನೇವೊಗೞ್ದಪ್ಪೆನಾಂ ದ್ವಿಷ
ಜ್ಜನಪರೊಳೊಂದುವಚ್ಚರಸೆಯರ್ಗೆ ಸಯಂಬರಮಾಗೆ ಸಗ್ಗದೊಳ್
ಜನಿಯಿಸಿತಿಂದ್ರಭೂರುಹಕೆ ತೋರಣದಿಂ ತವಿಲ್ಗೆಂಬುದೆಯ್ದೆಮೇ
ದಿನಿ ವಸುಧೈಕಬಾಂಧವ ಚಮೂಪತಿರೇಚಣನೇಂ ಕೃತಾರ್ಥನೋ ||

ಪೆಡೆವಣಿ ಶೇಷನೊಳ್ ಸರಸಿಜೋದರನಂಬುಧಿಯೊಳ್ ಮೃಗಾಂಕಮಂ
ದುಡುಪನೊಳದ್ರಿಜಾರ್ಧಮಭವಾಂಗದೊಳಾ ಮದಲುಬ್ಧಭೃಂಗಮಿ
ರ್ಪೆಡೆ ದಿಗಿಭಂಗಳೊಳ್ ಕುಱುಪುದೋರ್ಪಿನೆಗಂ ಜಗಮಂ ಮುಸುಂಕಿತಿಂ
ಗಡಲೆನೆ ಕೀರ್ತಿ ರೇಚನೆಸೆದಂ ಜಸದಿಂ ವಸುಧೈಕಬಾಂಧವಂ ||

ಶ್ರೀವಚ್ಚಂ ಸಿರಿಯಿಂ ಸಮೃದ್ಧನೆಸೆವಾ ನಾಗಾಂಬಿಕಾಸೂನು ಭೋ
ಗಾವಾಸಂ ವಸುಧೈಕಬಾಂಧವನುದಾರಂ ಸ್ತುತ್ಯ ಗೌರೀಸುಖ
ಶ್ರೀವಿಷ್ಟಂ ವೃಷಭದ್ವಜಪ್ರಿಯತಮಂ ನಾರಾಯಣಾತ್ಮೋದ್ಭವಂ
ಭಾವಂಬೆತ್ತಿರೆ ಚೆಲ್ವನೆಂದೆನಿಸಿದಂ ಶ್ರೀ ರೇಚದಂಡಾಧಿಪಂ ||

೫. ಅರಸಿಕೆರೆ ೭೭ರಲ್ಲಿ-
ವದನಂ ವಾಗ್ವನಿತಾವಿಳಾಸಸದನಂ ಪಕ್ಷಂ ರಮಾನರ್ತಕೀ
ವಿದಿತಾನರ್ತವುದಾರವರ್ತ್ಥಿ ಜನತಾ ಸಂತರ್ಪಣಂ ಕೀರ್ತಿಕೌ
ಮುದಿ ಜೈನಾರ್ಣವವರ್ಧನಂ ಗುಣಗಣಂ ಭೂಭೂಷಣಂ ಮೂರ್ತಿ ಚಾ
ರುದಯಾನ್ವೀತಮೆನಲ್ಕೆ ರೇಚಣಚಮೂಪಂ ಪೆರ್ಮೆಯಂ ತಾಳ್ದಿದಂ ||

ಒಸೆದವರಿವರೆನ್ನದೆ ಸಂ
ತಸಮಪ್ಪಿನವಿತ್ತುಪಡೆದನೀ ವಸುಮತಿಯೊಳ್
ವಸುಧೈಕಬಂಧುವೆಂಬೀ
ಪೆಸರಂ ರೇಚರಸನುಂತು ದೇಸಿಯಿನಾಯ್ತೇ ||