ಕಂ || ಶ್ರೀಮಜ್ಜಿನಚಂದ್ರಂ ಮ
ದ್ಭಾಮಾಗರ್ಭಕ್ಕೆ ವಂದಪಂ ದಿವದಿಂದೆಂ
ಬೀಮುದದೊದವಂ ತಳೆದಂ
ಭೂಮೀಶಂ ಜೈನಜನಮನೋಹರಚರಿತಂ || ೧

ವ || ಅಂತು ಮಹಾಸೇನಮಂಡಳೇಶ್ವರನುತ್ಸವೋತ್ಸವಮನಪ್ಪುಕೆಯ್ದಿರ್ಪಿನಮೊಂದುದಿವಸಂ

ಕಂ || ನವಚೂತಲತೆಗೆ ಸುಫಳೋ
ದ್ಭವಕಾರಣಮಪ್ಪ ಋತುವಸಂತಂ ಸಾರ್ವಂ
ತೆವೊಲರಸಿಗೆ ಸಮನಿಸಿದುದು
ದಿವಿಜಪ್ರಮದಾಪ್ರಮೋದಮಯಋತುಸಮಯಂ || ೨

ವ || ಅನಂತರಂ ಚತುರ್ಥದಿನದೊಳ್ ಅನುದಿನಸವನಸಮಯಸಂಸಕ್ತದಿವ್ಯಾನುಲೇಪಸುರಭಿ ಪರಿಮಳೋದ್ಗಾರಿದ್ವಾರದೇಶಮುಮೇಕೈಕಸವ್ಯಾಪಸವ್ಯಪಾಣಿಪಲ್ಲವಗೃಹೀತವದನಮಳಯ ಜಜಳಗರ್ಘರೀಸಮಾನಯನಸಂಭ್ರಮಸುರಪುರಂಧ್ರಿಕಾದ್ವಂದ್ವಬಂಧುರಮುಮೂಷ್ಮಾಯ ಮಾಣನಿರ್ಮಳಾರ್ಣಃಪೂರ್ಣತಪನೀಯಮಯಕಟಾಹನಿಹಿತಮುಂ ಉತ್ಕಟಾಮೋದ ಲಂಪಟಾಳಿಪಟಳಾಂಧಕಾರಿತಮುಖಕುಹರಗಂಧೋದಕಘಟಪ್ರಕರಸಂಕಟಮುಮತಿಮ ನೋಹರಾಂಗರಾಗಕಾಶ್ಮೀರಯಕ್ಷಕರ್ದಮೋದ್ವರ್ತನಾಮತ್ರಚಿತ್ರಿತೈಕದೇಶಮುಮನೇಕ ವರ್ಣಪೂರಪರಿಕಲಿತನೀರಾಜನದೀಪಲಾಲಿತಸ್ಥಾಳಾವಳೀವಿಳಸಿತಮುಂ ವಿಶಾಳವಾಳ ಜಪ್ರಣಾಳಕೀಳಿತಚತುಃಕೋಣಮರಕತಭಿತ್ತಿವಿಸ್ತೃತಸ್ನಾನಪ್ರದೇಶಪೇಶಲಮುಮಪ್ಪ ಮಜ್ಜನ ಮಂದಿರಮಂ ಸುರಪರಿಚಾರಿಕಾ ಸಮೇತಮೊಳಗಂ ಪೊಕ್ಕು ಸುಗಂಧತೈಲಾಭ್ಯಂಗಾತಿಮಸೃ ಣಿತಾಂಗಲಾವಣ್ಯಲಕ್ಷ್ಮೀಲಕ್ಷ್ಮಣಾಮಹಾದೇವಿ ಮಣಿಮಯಮಜ್ಜನಪೀಠಿಕಾಗ್ರಮನಳಂಕ ರಿಸಿದಾಗಳ್-

ಚಂ || ಬಿಗಿದುಡೆನೂಲಿನೊಳ್ನಿಱಿಯನೊಯ್ಯನವುಂಕಿ ಕುರುಳ್ಗಳಂ ಕೊಡಂ
ಕೆಗೆ ತೆಗೆದೇಱೆ ನೂಂಕಿ ಮಣಿಕಂಕಣಮಂ ನವರತ್ನಹಾರಮಂ
ನೆಗಪಿ ಪೆಗಲ್ಗೆ ತಂದು ಪೆಱದೊಂದುವಿಳಾಸಮನಾಂತು ಮಜ್ಜನಂ
ಬುಗಿಸಿದರಂದಮರ್ತ್ಯೆಯರೆ ಮಜ್ಜನವಳ್ತಿಯರಾಗಿ ರಾಗದಿಂ || ೩

ಕಂ || ಪೆಱದೇನೊ ಪಲವು ರೂಪಿಂ
ನೆಱೆದೞ್ತಿಯೆ ರತಿಯೆ ಕಾಮಕಲ್ಪಲತೆಗೆ ನೀ
ರೆಱೆವಂದದೆ ಸುರವನಿತೆಯ
ರೆಱೆದರ್ ಕೋಮಳೆಯ ಮಜ್ಜನಕ್ಕುಜ್ಜುಗದಿಂ || ೪

ಕರಿಗಳ್ ಮಿಸಿಸುವ ತೆಱದಿಂ
ಸಿರಿಯಂ ಸ್ಮರಕರಿಗಳೆನಿಸಿದಮರಿಯರಾ ಸುಂ
ದರಿಯಂ ಮಿಸಿಸಿದರುಜ್ಜ್ವಳ
ತರಕಾಂಚನಕಳಶಕಳಿತಕರಪಲ್ಲವೆಯರ್ || ೫

ಮ || ವಿ || ಅಲರ್ಗೊಂಚಲ್ಗಳಿನುಣ್ಮುತಿರ್ಪ ಮಕರಂದಾಸಾರಮಂ ಸಾರಪು
ಷ್ಪಲತಾಮಾಳೆ ವಸಂತಲಕ್ಷ್ಮಿಗಭಿಷೇಕಂಗೆಯ್ವವೋಳ್ ಸ್ಫಾಟಿಕೋ
ಜ್ಜ್ವಳಕುಂಭೋದ್ಗತಗಂಧತೋಯದಿನಮರ್ತ್ಯಸ್ತ್ರೀಚಯಂ ಸ್ನಾನಮಂ
ಗಳಮಂ ದೇವಿಗೆ ಕೂಡೆ ಮಾಡಿದುದುದಂಚದ್ಬಾಹುಶಾಖಾನ್ವಿತಂ || ೬

ವ || ಆಗಳ್ ತತ್ಕಾಲಯೋಗ್ಯಾಂಬರಪರಿಧಾನೆಯಾಗಿ-

ಚಂ || ಮುರಿದೆಡಗೆಯ್ಯೊಳಾರ್ದ್ರಕಚಭಾರಮನೆತ್ತುತುಮಂಶುಕಾಂತದಿಂ
ಗುರುಕುಚಭಾರಮಂ ಮುಸುಕುತುಂ ಬಲಗೆಯ್ಯೊಳನಂಗಟಂಕೃತಿ
ಸ್ವರಮೆನೆ ಪೊಣ್ಮೆ ಪಾವುಗೆಯ ಗೆಜ್ಜೆಯ ಮೆಲ್ಲುಲಿ ಬಂದಳಂದಳಂ
ಕರಣಗೃಹಕ್ಕೆ ಸುತ್ತಿ ದಿವಿಜಾಂಗನೆಯರ್ ಬರೆ ದೇವಿ ಲೀಲೆಯಿಂ || ೭

ವ || ಆಗಳಮರಮಹತ್ತರಿಕೆಯರ್ ಕಳ್ಪಪಾದಪಪ್ರತಿಪಾದಿತಾನರ್ಘ್ಯಮೌಕ್ತಿಕಾಭರಣ ಧವಳದು ಕೂಲವಸನಸುರಭಿಕುಸುಮಚಂದನಾನುಲೇಪನಂಗಳಂ ತಂದವಟಯಿಸುವುದುಮವಂ ನಿಜಾಂಗಸಂಗದಿಂದಳಂಕರಿಸಿದಾಗಳ್‌

ಮ || ವಿ || ಅಲರ್ವನ್ನಂ ಸುರಹೃತ್ಕುಮುದ್ವತಿ ಸುರಸ್ತ್ರೀದೃಕ್ಚಕೋರೀಚಯಂ
ನಲಿವನ್ನಂ ನಿಜಕೋಮಳಾಂಗಲಲಿತಾಲಾವಣ್ಯವಾರಾಶಿಯ
ಗ್ಗಲಿಪನ್ನಂ ಸಮಯೋಚಿತೋಪಚಿತಸೌಂದರ್ಯಂ ಬೆಡಂಗಾದುದಾ
ಲಲನಾರತ್ನದ ಕೊಂಡ ಬೆಳ್ಪಸದನಂ ಬೆಳ್ದಿಂಗಳೆಂಬಂದದಿಂ || ೮

ಕಂ || ಬರೆದರೊ ಚಂದನರಸದಿಂ
ಕರುವಿಟ್ಟರೊ ಕಣ್ಗಳೆಳಸೆ ಕಪ್ಪುರದಿಂ ಕಂ
ಡರಿಸಿದರೊ ಪಳುಕಿನಿಂದೆನೆ
ಪರಿಜೆಸೆದುದು ಸುದತಿ ತಳೆದ ಬೆಳ್ಪಸದನದೊಳ್ || ೯

ಚಂ || ಪದನಖದುನ್ಮುಖಾಂಶುತತಿ ತಿಂಬಿ ಮಡಲ್ತುದು ನಾಡೆಯುಂ ದುಕೂ
ಲದ ನಿಱಿ ತಳ್ತು ಪೊಣ್ಮೆ ಸುಲಿಪಲ್ಗಳ ತಣ್ಗದಿರಾವಗಂ ಕವ
ಲ್ತುದು ಪೊಸಮುತ್ತಿನೆಕ್ಕಸರಮುಣ್ಮುವಪಾಂಗದ ಕಾಂತಿ ಪರ್ವೆ ಕೊ
ರ್ವಿದುದವತಂಸಮಾದ ನವಕಲ್ಪಲತಾಸ್ತಬಕಂ ಲತಾಂಗಿಯಾ || ೧೦

ವ || ಅಂತು ಕೈಗೆಯ್ದು-

ಕಂ || ಸೊಗಯಿಸುವಮರ್ದಿನ ಕಡಲಿಂ
ದೊಗೆದ ಲಸಲ್ಲಕ್ಷ್ಮಿ ಪದ್ಮಸದ್ಮಮನೊಲವಿಂ
ಪುಗುತಂದಪಳೆನಿಪೆಸಕಂ
ಮಿಗೆ ಮೆಲ್ಲನೆ ಸಜ್ಜೆವನೆಗೆ ಬಿಜಯಂಗೆಯ್ದಳ್ || ೧೧

ವ || ಅಂತು ಬಂದು ಕನಕಪರ್ಯಂಕಕಳಿತಧವಳತಳ್ಪತಳಮುಂ ತಳ್ಪತಳಮೆಂಬ ಶಿಶಿರಕರ ಬಿಂಬಮಂ ಬಳಸಿದ ತಾರಗೆಗಳೆನಿಸಿದುಪಹಾರಕುಸುಮಂಗಳುಂ ಉಪಹಾರಕುಸು ಮಂಗಳಂ ಮುಸುಱಿ ಮೊರೆವ ಮಱಿದುಂಬಿಗಳುಂ ಮಱಿದುಂಬಿಗಳ ಗಾವರಕ್ಕೆ ಜತಿಯನುಗ್ಗಡಿಸುವಂತೆ ಕಳಲುಳಿಯಿನುಲಿವ ಪಾರಿವಂಗಳುಂ ಪಾರಿವಂಗಳುಗ್ಗಡಣೆಗಾಡು ವಂತೆ ಸುೞಿದು ಮೆಟ್ಟುವ ಕಳಹಂಸೆಗಳುಂ ಕಳಹಂಸೆಗಳಲಸಗಮನಮಂ ನೋಡಲೆಂದು ಗೃಹದೇವತೆಯೆ ಕಣ್ದೆಱೆದಳೆನಿಸಿ ರಂಜಿಪ ಶುಕ್ತಿಗಳೊಳೆಸೆವ ಪದಂಗೆಯ್ದ ಕತ್ತುರಿಯುಂ ಕತ್ತುರಿಯ ಕರ್ಪನೊತ್ತುಗೊಂಡುೞಿದ ಕೞ್ತಲೆಯನಲೆಯಲೆಂದು ಬಂದ ಚಂದ್ರ ಸೂರ್ಯ ಕಳೆಗಳಂತೆ ಬಟ್ಟಲೊಳಿರ್ದ ಕಟ್ಟಿದೆಲೆಯ ವೀಳೆಯಂಗಳುಂ ವೀಳೆಯಂಗಳ ಬೆಳ್ಪಿನೊಳ್ ಸೆಣಸಿಮೂದಲೆಗೆ ವಂದಂತೆ ಕೆಲದೊಳಿರ್ದ ಕಪ್ಪುರವಳಿಕುಗಳುಂ ಕಪ್ಪುರವಳಿಕುಗಳ ಕಂಪಿನೊಳ್ ಕೆಳೆಗೊಂಡು ಕುಸುಮಸರನೆ ಬೀಸಿದ ಕಣ್ಮಾಯದಕುಂಚದಂತೆ ಪಸರಿಸುವ ಗರುವಿನ ಪೊಗೆಯುಂ ಅಗರುವಿನ ಪೊಗೆಯ ಪುದುವಿನೊಳ್ ಮುಗಿಲ ಮಱೆಯ ಕಿಱುಮಿಂಚಿನಂತೆಸೆವ ಲಂಬೂಷಮುಕ್ತಾವಳಿಗಳುಂ ಮುಕ್ತಾವಳಿಗಳೆಂಬ ಬೆಳ್ಸರಿಯಂ ಸುರಿವ ಶರದದ ಮುಗಿಲ ತೆಗಳಿಗೆಯಿದೆನಿಪ ಮೇಲ್ಕಟ್ಟಿನ ಬೆಳ್ಳುಂಬಟ್ಟೆಯುಂ ಬೆಳ್ಳುಂಬಟ್ಟೆ ಯೆಂಬರಲಂಬನ ಜಸದೊಡನೆ ಪಸರಿಸುವ ತೇಜಮೆನಿಸಿ ಬೆಳಪ ದೀಪಕಳಿಕೆಗಳುಂ ದೀಪಕಳಿಕೆಗಳ್ ಮಾರ್ಪೊಳೆಯೆ ಸಂಪಗೆಯ ಮುಗುಳಕೇರ್ಗಟ್ಟಿನಂತಿರ್ದ ಮಣಿಭಿತ್ತಿಗಳು ಮಳವಲ್ಲದೆಸೆವ ವಾಸಭವನಮಂ ಪೊಕ್ಕು ಹಂಸಾಂಸೋಹ್ಯಮಾನಧವಳಶಯ್ಯೆಯೊಳ್‌ ಸುರತರಂಗಿಣಿಯ ದರಿಯೊಳೈರಾವತದೊಡನೆ ಸೆಜ್ಜರಂಬುಗುವಭ್ರಮೂವಿಭ್ರಮಮನಳ ವಡಿಸಿ ನಿಜಮನೋವಲ್ಲಭನೊಡನೆ ಪವಡಿಸಿರ್ದು-

ಕಂ || ಕೃಶಮಧ್ಯೆ ನಿಜಮತಿಗೆ ಷೋ
ಡಶಭೂಷಣಮಾದುವೆನಿಸಿ ಸೊಗಯಿಸುವಾ ಷೋ
ಡಶಮಂ ಸ್ವಪ್ನಮನಂತಾ
ನಿಶಾಂತದೊಳ್‌ ಬರೆ ನಿಶಾಂತಯಾಮಂ ಕಂಡಳ್ || ೧೨

ವ || ಆಗಳ್-

ಚಂ || ಅವಿರಳಪುಣ್ಯಪಾಠಕಪಟುಧ್ವನಿಯಿಂ ಸುರಗಾಯಿನೀಜನಾ
ರವದಿನಗಾರಕೀರಕಳಹಂಸನಿನಾಧದಿನಬ್ಜನೇತ್ರೆಯು
ಪ್ಪವಡಿಸಿದಳ್ ನಿಜೇಶನೊಡನೊಯ್ಯನರಲ್ವಲರ್ಗಣ್ಗಳಿಂದೆ ಪೊ
ಣ್ಮುವ ಬೆಳಗುಣ್ಮಿ ಸೆಜ್ಜೆವನೆಯಂ ನೆಱೆ ತೀವೆ ಗವಾಕ್ಷಜಾಳದಿಂ || ೧೩

ವ || ಅನಂತರಂ ಕತಿಪಯಮುಹೂರ್ತಪರಿಕಲ್ಪಿತ ಸ್ನಾನದೇವತಾರ್ಚನಾದಿ ಕಲ್ಪರಚನಾವಿಧಾನೆ ಯುಂ ಕತಿಪಯೋಚಿತಾಸನೋಪವಿಷ್ಟವಿಶಿಷ್ಟಾರ್ಯಕಾನಿಕಾಯಸಹಸಂಭಾಷ್ಯಮಾಣ ಸನ್ಮಾನಸಂಭೃತಸ್ವರೂಪೆಯುಂ ಕತಿಪಯ ಪುರೋಹಿತಸಮೂಹವಿಜ್ಞಾಪಿತಾನೇಕಧರ್ಮ ಕಾರ್ಯವಚನವಸಂತವಿಳಸಿತೈಕಕರ್ಣೆಯುಂ ಕತಿಪಯಗಂಧರ್ವಗಾಯಿಕಾಗೀಯಮಾನ ಜಿನಾಂಕಮಾಲಿಕಾನುಬದ್ಧಗಾನಾನುರಕ್ತಾಂತರಂಗೆಯುಂ ಕತಿಪಯಾಸವ್ಯಪತಾಕಾಹಸ್ತ ಪಲ್ಲವ ನಿವಾರಿತೋತ್ತಾರರಣಿತಪಾರಿಹಾರ್ಯಪ್ರಕೋಷ್ಠಯಕ್ಷಕುಮಾರಿಕಾಚಯರರುಹವಿ ಕ್ಷೇಪಣೆಯುಂ ಕತಿಪಯಸ್ಫಟಿಕಭಿತ್ತಿಭಾಗಭಾಸುರಪ್ರತಿಕೃತಿಕದಂಬಸಂಪಾದಿತಾತ್ಮೀಯ ಲೀಲಾಕೇಕರಾಕಾರವಿಭ್ರಮಭ್ರಮೆಯುಮಾಗಿ ದೇವಪೂಜಾಮಂದಿರದ ಮುಂದಣ ಮೊಗ ಸಾಲೆಯೊಳಿರ್ಪನ್ನೆಗಂ-

ಕಂ || ಬಂದಂ ನೃಪತಿಳಕಂ ನಿಜ
ಸುಂದರಿಯೊಳ್ಗನಸಿನೊಸಗೆಯಂ ಪಚ್ಚಿಕೊಳಲ್
ಬಂದಪನೆನೆ ಲೀಲಾಗಮ
ನಾಂದೋಳಿತಪಾರಿಜಾತಕರ್ಣಾವತಂಸಂ || ೧೪

ವ || ಅಂತು ಬಂದಾಸನಾರ್ಧದೊಳ್ ಕುಳ್ಳಿರ್ದ ಹೃದ್ವಲ್ಲಭಂಗಾತ್ಮಾಂತರಂಗಭರಿತಾನನ್ದಾ
ಮೃತಪ್ರಸರದಾರ್ದಾಕ್ಷರಂಗಳಿಂದಿಂತೆಂದಳ್-

ಮ || ವಿ || ದಿವಿಜೇಭಂ ವೃಷಭಂ ಮೃಗಾರಿ ಸಿರಿ ಚಂಚತ್ಸ್ರಗ್ದ್ವಯಂ ಚಂದ್ರಮಂ
ರವಿ ಮೀನದ್ವಿತಯಂ ಕನತ್ಕಳಶಯುಗ್ಮಂ ಪದ್ಮಸದ್ಮಂ ಮಹಾ
ರ್ಣವಮುದ್ಯದ್ಧರಿಪೀಠಮಿಂದ್ರಸದನಂ ನಾಗಾಸ್ಪದಂ ರತ್ನರಾ
ಶಿ ವಿಧೂಮಾಗ್ನಿಯೆನಿಪ್ಪನಂ ತರದೆ ಕಂಡೆಂ ಸ್ವಪ್ನಮೀರೆಂಟುಮಂ || ೧೫

ಕಂ || ಎನಲೊಡಮೆಸೆದುವು ತನುಲ
ಕ್ಷ್ಮಿ ನಲಿದು ಗುಡಿಗಟ್ಟಿದಂದದಿಂ ಪೂಸಿದ ಚಂ
ದನದ ಪುಳಿಂಚುಗಳಂ ಪೊ
ತ್ತು ನೆಗೆದ ಪುಳಕಾಂಕುರಂಗಳರಸನ ಮೆಯ್ಯೊಳ್ || ೧೬

ವ || ಅನ್ತು ಸಂತಸದಂತನೆಯ್ದಿ ತತ್ಫಳಪ್ರಕಟನದ ನೆವದೆ ನಲವನಿರ್ಮಡಿಸುವಂತಿಂತೆಂದಂ-

ಕಂ || ದಾನಗಜದಿಂದೆ ದಾನಿಯ
ನೂನವೃಷಂ ವೃಷಭನಿಂ ಮೃಗಾರಿಯಿನಘಸಂ
ತಾನಾರಿ ಸಿರಿಯಿನುಭಯ
ಶ್ರೀನಾಥಂ ಭುವನಶೇಖರಂ ಶೇಖರದಿಂ || ೧೭

ಅಮೃತಾಂಶುವಿನಮೃತಪದೇ
ಚ್ಛು ಮಿತ್ರನಿಂ ತ್ರಿಭುವನೈಕಮಿತ್ರಂ ರುಚಿರಾ
ನಿಮಿಷದಿನನಿಮಿಷವಂದ್ಯಂ
ವಿಮಳಾಂಭಃಪೂರ್ಣಕುಂಭದಿಂ ಗುಣಪೂರ್ಣಂ || ೧೮

ಸರಸಿರುಹಾಕರದಿಂ ಸ
ಚ್ಚರಿತಾಕರನಬ್ದಿಯಿಂ ದಯಾಂಬುಧಿ ಹರಿವಿ
ಷ್ಟರದಿಂ ಹರಿವಿಷ್ಟರಪತಿ
ಸುರರಾಜವಿಮಾನದಿಂದಮಪ್ರತಿಮಾನಂ || ೧೯

ಭೋಗಿನಿವಾಸದಿನತಿಶಯ
ಭೋಗನಿವಾಸಂ ವಿಶಿಷ್ಟರತ್ನೋತ್ಕರಸಂ
ಯೋಗದಿನತರ್ಕ್ಯಲಕ್ಷಣ
ಯೋಗನುಷರ್ಬುಧನಿನಧಿಕಬೋಧನಿಧಾನಂ || ೨೦

ನಂದನನಕ್ಕುಂ ನಮಗಿ
ನ್ನೆಂದಧಿಪನಮೋಘವಚನದಿಂ ವನಿತೆ ಮಹಾ
ನಂದಮನಾಂತಂಬುದರವ
ದಿಂದಾನಂದಿಪ ಮಯೂರವನಿತೆವೊಲಾದಳ್ || ೨೧

ವ || ಅನ್ನೆಗಮಿತ್ತಂ ಮುಂ ಪೇೞ್ದ ಪದ್ಮನಾಭಚರನಹಮಿಂದ್ರಂ ತ್ರಯತ್ರಿಂಶದಾಯುರಬ್ಧಿಗಳ ನುತ್ತರಿಸಿ ಪಂಚಾಣೂತ್ತರೆಗಳೊಳಗಣ ವೈಜಯಂತವಿಮಾನದಿಂ ಜ್ಞಾನತ್ರಯಮಯಂ ಬನ್ದು ಚೈತ್ರಬಹುಳಪಂಚಮೀಶ್ರವಣನಕ್ಷತ್ರಶುಭಯೋಗದೊಳ್‌ ಚಂದ್ರಮಂಡಳಾಕಾರದಿಂ ಲಕ್ಷ್ಮಣಾಮಹಾದೇವಿಯ ಮುಖಮುಕುರಮಂ ಪೊಕ್ಕು ವಿಮಳಗರ್ಭಕುಮುದಿನಿಯೊ ಳಮರಪತಿಕೃತಪ್ರಥಮಕಲ್ಯಾಣಪೂಜಾಪುರಃಸರಮವತರಿಸಿದಾಗಳ್-

ಚಂ || ನೆಲಸಿರೆ ಮೇದುರೋದರದೊಳಂದು ಜಿನಾರ್ಭಕನಂತರಂಗದೊಳ್
ನೆಲಸಿದುದೆಯ್ದೆ ಸಂತಸದ ಸಂತತಿ ಪಿಂಗದೆ ಕೋಮಳಾಂಗದೊಳ್
ನೆಲಸಿದುದತ್ಯಪೂರ್ವಮೆನೆ ಕಾನ್ತಿಯ ತಿಂತಿಣಿ ಮತ್ತಪಾಂಗದೊಳ್
ನೆಲಸಿದುದೆಂದುಮಿಲ್ಲದ ವಿಳಾಸದಳುರ್ಕೆ ಮರಾಳಯಾನೆಯಾ || ೨೨

ಕಂ || ತರುಣಿಯ ಬಸಿಱೊಳ್ ತ್ರಿಜಗ
ದ್ಗುರುವಿರ್ದುಂ ಭಾರಪೀಡೆಯಂ ಮಾಡನೆ ಭಾ
ಸುರಮುಕುರದೊಳಿರ್ದುಂ ಭೂ
ಧರದ ನೆೞಲ್ ಭರಮನೇನದರ್ಕೊಡರಿಕುಮೇ || ೨೩

ಗುರುಜಘನಭರದ ಗುರುಕುಚ
ಭರವೆರಡಱ ನಡುವೆ ಸತಿಯ ಲಘುಮಧ್ಯಂ ಬಂ
ಧುರಮಾಯ್ತು ದುರಿತತರುಗಳ
ನುರಿಪುವ ಶಿಖಿಶಿಖೆಯ ತೆಱನನಿಂತಱಿಪುವವೋಲ್ || ೨೪

ರಾಜ್ಞೀಗರ್ಭದೊಳಿರ್ದುಂ
ತ್ರಿಜ್ಞಾನಸಮೇತನೆಂದು ಪೇಱ್ವೆಡೆಗಿವೆ ದಲ
ಭಿಜ್ಞಾರೇಖೆಗಳೆನಿಸಿ ಮ
ನೋಜ್ಞತೆಯಂ ತ್ರಿವಳಿರೇಖೆ ತಳೆದೆಸೆದಿರ್ಕುಂ || ೨೫

ಈಹಾರಹಿತಂ ವ್ಯಪಗತ
ಮೋಹಂ ನಿಜಗರ್ಭದಲ್ಲಿ ನೆಲಸಿರೆ ಬೞಿಕಂ
ದೋಹಳಮುಮಲಸಭಾವಕು
ತೂಹಳಮುಂ ಜಿನನ ಜನನಿಯಂ ಪೊರ್ದುಗುಮೇ || ೨೬

ಸತಿಯರ್ಗೆ ತೋರ್ಪ ಗರ್ಭೋ
ಚಿತಚಿಹ್ನಂ ತಳೆದುವಾಕೆಯೊಳ್‌ ಪೆಱದೊಂದಾ
ಕೃತಿಯನದಂತುಟೆ ತೋಱುಗು
ಮತಿಶಯಮದು ಸುಗುಣರತ್ನನಿಧಿಯಿರ್ದೆಡೆಯೊಳ್ || ೨೭

ವ || ಮತ್ತಂ-

ಚಂ || ತೊಳಗುವ ರತ್ನಮಂ ತಳೆದ ವಾರಿಧಿವೇಳೆ ನಮೇರುಭೂಜಮಂ
ತಳೆದ ಸುಮೇರುಮೇಖಳೆ ಸುಧಾರಸಮಂ ತಳೆದೋಷಧೀಶನಿ
ರ್ಮಳಕಳೆ ಶಾತಕುಂಭನಿಧಿಯಂ ತಳೆದಿರ್ದೆಳೆಯೆಂಬ ಲೀಲೆಯಿಂ
ತಳೆದಳಿಳಾಧಿರಾಣ್ಮಹಿಳೆಯಂದು ಜಿನಾರ್ಭಕನಂ ಸ್ವಗರ್ಭದೊಳ್ || ೨೮

ವ || ಅದಲ್ಲದೆಯುಂ

ಮ || ವಿ || ಸುರಕಾಂತಾಪರಿಚರ್ಯೆಯುಂ ಸುರಕುಜಾತಪ್ರೇಷಿತಾಲೇಪನಾಂ
ಬರಭೂಷಾಕುಸುಮೋತ್ಕರಾನುಭವಮುಂ ಚಿತ್ತೋತ್ಸವೋನ್ಮೇಷಮುಂ
ಪುರುಷಂ ತನ್ನೊಳೊಡರ್ಚುತಿರ್ಪ ವಿಳಸದ್ರೂಪಪ್ರವೀಚಾರಮುಂ
ಸುರಲೋಕಸ್ಥಿತಿ ಬೇಱದೊಂದೆನಿಸಿದತ್ತಾಕಾಂತೆಗಾಗರ್ಭದೊಳ್‌ || ೨೯

ನವಪುಷ್ಪಾಭರಣಂ ಪ್ರಿಯಾಭರಣಮಂಗಾಲೇಪನಂ ಚಂದನ
ದ್ರವಮಾವಾಸಮುದಗ್ರಯಂತ್ರಜಳಧಾರಾಮಂಡಪಂ ವಸ್ತ್ರಮೊ
ಪ್ಪುವ ಚೀನಂ ಪೆಱತೊಂದು ಸಮ್ಮನಿಸಿದತ್ತಾಕಾಂತೆಗೆಂಬನ್ನಮೆ
ಯ್ದೆ ವಸಂತೋತ್ಸವದೊಳ್ ಸಮಾನಮೆನಿಸಲ್ ಸಾಲ್ದತ್ತು ಗರ್ಭೋತ್ಸವಂ || ೩೦

ವ || ಅಂತು ಗರ್ಭಾರ್ಭಕನ ಲೇಶ್ಯಾನುರೂಪಂಗಳಪ್ಪ ವಿಶುದ್ಧಭೋಗಪರಂಪರೆಗಳಿಂ ಕಾಲಂ
ಸಲೆ ಪರಿಪೂರ್ಣ ಪ್ರಸವಸಮಯದೊಳ್-

ಮ || ಸ್ರ || ದೊರೆವೆತ್ತಾಪುಷ್ಯಮಾಸಂ ವಿಳಸಿತಸಿತಪಕ್ಷಂ ತದೇಕಾದಶೀವಾ
ಸರಮಂತಾರೋಹಿಣೀತಾರಕೆಯತಿಶುಭದಂ ಶುಕ್ಲಯೋಗಂ ಸಮಂತೊಂ
ದಿರೆ ಲೋಕಕ್ಕಗ್ಗಳಂ ಸಂತಸಮೊಗೆನಿನೆಗಂ ಪುಟ್ಟಿದಂ ಸರ್ವಸೌಖ್ಯಾ
ಕರರೂಪಂ ಲಕ್ಷ್ಮಣಾದೇವಿಗೆ ತನಯನನೇಕಾಂತವಿದ್ಯಾವಿನೋದಂ || ೩೧

ಕಂ || ಅಂತರ್ವತ್ನೀತ್ವದೊಳಮ
ನಂತರಮಾಪ್ರಸವಸಮಯದೊಳಮಿನಿತಾಯಾ
ಸಂ ತೋಱದೆ ಪಡೆದಳ್ ಮಗ
ನಂ ತಾಯಕ್ಲೇಶಸಾಧ್ಯನಿಧಿಯೆಂಬಿನೆಗಂ || ೩೨

ಪಡೆದಳ್ ಪುಣ್ಯದ ಬಿೞ್ತಂ
ಪಡೆವಂತಮರೇಂದ್ರಭಕ್ತಿಲತಿಕೆಗಡರ್ಪಂ
ಪಡೆವಂತೆ ಜಗಕ್ಕಂ ಕ
ಣ್ಬಡೆವಂತಂಬಿಕೆ ವಿಶುದ್ಧಬೋಧಾಂಭಕನಂ || ೩೩

ವ || ಆಗಳುದಯಿಸಿದಾಮಹಾತ್ಮನಪಗತರಜನೆಂಬುದಂ ಪೇೞ್ವಂತಿಳಾವಳಯಮಪಗತರ ಜಮಾದುದು ಅಕಲುಷಭಾವನೆಂಬುದಂ ಪೇೞ್ವಂತೆ ಸಲಿಲಾಶಯಮಕಲುಷಭಾವ ಮಾದುದು ಅವಾಮವೃತ್ತಿವರ್ತನನೆಂಬುದಂ ಪೇೞ್ವಂತೆ ಅಧ್ವರಾನಲನವಾಮವೃತ್ತಿವರ್ತನ ಮಾದುದು ಅಚಂಡಕೋಪಯುಕ್ತನೆಂಬುದಂ ಪೇೞ್ವಂತೆ ಮಾರುತನಚಂಡಕೋಪಯುಕ್ತ ಮಾದುದು ಅತ್ಯಂತ ಪ್ರಸನ್ನನೆಂಬುದಂ ಪೇೞ್ವಂತೆ ಗಗನತಳಮತ್ಯಂತಪ್ರಸನ್ನಮಾದುದು ಅದಲ್ಲದೆಯುಂ-

ಕಂ || ಕಾಲಹರನುದಯಮಿದೞೊಳ್‌
ಕಾಲಂಬಾರುತ್ತಿರಲ್ಕದೇಕೆಂಬವೊಲಾ
ಕಾಲದೊಳೆ ತರುಗಳೆಲ್ಲಂ
ಲೀಲೆಯನಾಂತುವು ತಳಿರ್ತು ಪೂತುಂ ಕಾಯ್ತುಂ || ೩೪

ಇದು ಚಿತ್ರಮಲ್ತಣಂ ಪು
ಷ್ಪದಂತನೆಂದೆನಿಸಿ ಪುಟ್ಟಿದೀ ಜಿನಪತಿಯ
ಭ್ಯುದಯದೊಳೆಂಬನ್ನೆಗಮೊ
ರ್ಮೊದಲಲರ್ದುವು ವಿಮಳಕಮಳಕುಮುದವನಂಗಳ್ || ೩೫

ವಂ || ಮತ್ತಮಾವಕುವಳಯಬಾಂಧವನ ನವೋದಯದೊಳೊದವಿದ ಸಂಜೆಗೆಂಪಿನಂತೆ ಪಿಂಜರಿತ ಪಿಷ್ಟಾತಕಂ ದೆಸೆದೆಸೆಗೆ ಪಸರಿಸೆಯುಂ ಗಗನಗಂಗಾತರಂಗಿಣಿಯ ತೆಱೆದುಱುಗಲಂತೆ ತರತರದೆ ಕಟ್ಟಿದ ಮುತ್ತಿನ ತೋರಣಂಗಳ್ ತಳತಳಿಸೆಯುಂ ದ್ವಿತೀಯಕಲ್ಯಾಣಮಾಂಗಲ್ಯಮಂ ಮಾಡಲೆಂದು ಪುರಂದರನಂ ಕರೆವ ಪುರಲಕ್ಷ್ಮಿಯ ಕರಪಲ್ಲವಂಗಳಂತೆ ಕೆಂಗುಡಿಗಳಡಿಗಡಿಗೆ ಮಿಳಿರ್ದು ಮಿಳ್ಳಿಸೆಯುಂ ಸಕಳಭುವನ ಸಂಭೇದಿಯಾದ ಸಂಮದದೊಳಾಶಾಗಜಂಗಳ್ ಮೊಳಗಿದಂತೆ ಪೊಯ್ವ ಬದ್ದವಣದ ಸದ್ದದೆಣ್ದೆಸೆಯೊಳಂ ಮಾರ್ದನಿಯಿಡೆಯುಂ ಪುರದೊಳಗೆ ಪೂರಂಬರಿವ ರಾಗರಸದ ಪೊನಲ ಪುದುವಿದೆನಿಸಿ ಬೀದಿ ಬೀದಿಗಳೊಳೆಲ್ಲಂ ತಳಿವ ಕುಂಕುಮರಸದ ಚಳೆಯದಿಂ ಕೆಂಕಮಾಗೆಯುಂ ಅವನೀವನಿತೆ ಯಾನಂದಬಾಷ್ಪ ಬಿಂದುಸಂದೋಹದಂತೆ ಬಟ್ಟೆಗಣ್ಗಳೊಳ್ ಕಡೆಯಿಕ್ಕಿದ ಬಿಡುಮುತ್ತುಗಳ್ ಬೆಡಂಗುವಡೆಯೆಯುಂ ಒರ್ಮೊದಲೊಳೆ ಮೆಯ್ದೋಱಿದಾಱುಂ ಋತುವಿನೆಸಕದಿಂ ನಲಿವ ದೀವದ ಚಾದಗೆಯ ಗಿಳಿಯ ಪುರುಳಿಯ ಕೋಗಿಲೆಯ ನವಿಲ ಕೊಂಚೆಯಂಚೆಯ ಕಾಕಳಿಯೊಡನೆ ಕಯ್ವೊಯ್ವಂತೆ ಮಂಗಳಗೀತಿಕಾರವಂಗಳಂಬರಂಬರಂ ಪರಿಯೆಯುಂ ಅಳವಿಗೞಿದುತ್ಸವದೆ ಗೊಂದಣಂಗುಣಿವ ಗಣಿಕೆಯರ ಪದಪ್ರಚಾರಕ್ಕೆ ಬೆರ್ಚಿ ಪೂವಲಿಗಳಂ ಬಿಟ್ಟು ಪಾಪಹರನ ಪುಟ್ಟಿದಿಳೆಯಂ ಕಳಂಕಮೆ ಬಿಟ್ಟು ಪೋಪಂತೆ ನೆಗೆವ ತುಂಬಿಯ ಬಂಬಲ್ಗಳಳುಂಬ ಮಾಗೆಯುಂ ತನ್ಮಹೋತ್ಸವಮಭೂತಪೂರ್ವಮುಮದೃಷ್ಟಪೂರ್ವ ಮುಮಶ್ರುತಪೂರ್ವ ಮುಮೆನಿಸೆ-

ಉ || ತೋಱೆದುದೆಮ್ಮ ತೊೞ್ತುವೆಸಕಿಂದು ಕೃತಾರ್ಥತೆಯಿಂದುಸೀಮೆಯಂ
ಮೀಱೆದುದಿಂದ್ರರಾಗರಸವಾರಿಧಿ ಧರ್ಮನಮೇರುವಿಂದು ಬೇ
ರೂ ಱಿದುದೀ ಧರಾತಳದೊಳಿಂದವನೀಶನ ದೇವಿಯೊಳ್ಪು ನೀ
ರೇಱಿದುದೆಂದದೇಂ ನಲಿದು ನರ್ತಿಸುತಿರ್ದರೊ ದೇವಕಾಂತೆಯರ್ || ೩೬

ವ || ಆಗಳ್-

ಚಂ || ಎಱಗದೆ ತಾಮೆ ದೇವಮಕುಟಂ ನತಮಾದುವು ವಾದನಂಗಳಂ
ಪೆಱದೆ ಸುರಾನಕಂ ಮೊಳಗುತಿರ್ದುವು ಕಲ್ಪಲತಾವನಂಗಳಿಂ
ತಿಱಿಯದೆ ಪೂಗಳೆಯ್ದೆ ಸುರಿತಂದುವು ಸಗ್ಗದೊಳೆಂದೊಡಿಂತುಟೆಂ
ದೞಿವವನಾವನಾನತಚರಾಚರನಭ್ಯುದಯಪ್ರಭಾವಮಂ || ೩೭

ಮ || ಸ್ರ || ಧರಣೀಂದ್ರಾವಾಸದೊಳ್ ಶಂಖನಿನದಮಖಿಳವ್ಯಂತರಾವಾಸದೊಳ್ ಬಂ
ಧುರಭೇರೀನಿಸ್ವನಂ ಜ್ಯೋತಿರಮರನಿಕರಾವಾಸದೊಳ್‌ ಸಿಂಹನಾದಂ
ಸುರರಾಜಾವಾಸದೊಳ್ ಭೋಂಕೆನೆ ಪಟುತರಘಂಟಾರವಂ ಪೊಣ್ಮಿ ತೀರ್ಥೇ
ಶ್ವರಜನ್ಮೋತ್ಸಾಹಮಂ ಸೂಚಿಸಿದುದಕೃತಸಂಜಾತಮಾಶ್ಚರ್ಯಭೂತಂ || ೩೮

ಕಂ || ಆ ಜನ್ಮೋತ್ಸವಮಂ ಗಡ
ಮೂಜಗಮುಮಿನಿತ್ತು ಬೇಗದಿಂ ನೆರೆದುದನೆಂ
ಬೋಜೆಯೊಳೆ ಕೇಳ್ದುದೆನೆ ಜಿನ
ರಾಜನ ಸಾಮರ್ಥ್ಯಮೇನತಿವ್ಯಾಪಕಮೋ || ೩೯

ಜನಿಯಿಸಿದನಲ್ತೆ ಸಿಂಹಾ
ಸನಪತಿಯಿೞಿದೆಱಗಿಮೆಂದು ಸುರರ್ಗೆಂಬವೊಲಾ
ಸನಕಂಪಮಾದುದೊಡನ
ಪ್ಪಿನಮೋಲಗಿಪಮರಿಯರ ಶಿರಃಕಂಪನಮುಂ || ೪೦

ವಿಷ್ಟರಕಂಪದಿನವಧಿಸ
ದೃಷ್ಟಿಸಮಾಳೋಕನಪ್ರಯೋಗದಿನಱಿದಂ
ಸ್ಪಷ್ಟತರಂ ತಾನೆಂಬಿನ
ಮಷ್ಟಮತೀರ್ಥೇಶನುದಯಮಂ ದಿವಿಜೇಶಂ || ೪೧

ಅಱಿದಾಸನದಿಂದಿೞಿದಿರ
ದೆಱಗಿದನಾತ್ಮೋತ್ತಮಾಂಗದೊಳ್ ಕರಮುಕುಳಂ
ಪೆಱತೊಂದು ರತ್ನಮಕುಟದ
ತೆಱನಂ ರುಚಿರಾಂಗುಳೀಯಕಂ ತಳೆವಿನೆಗಂ || ೪೨

ವ || ಅನಂತರಂ ಭಗವದ್ದ್ವೀತಿಯಕಲ್ಯಾಣೋತ್ಸವೋತ್ಸುಕನಾಗಿರ್ಪಿನಂ-

ಮ || ವಿ || ಭುಜಗೇಂದ್ರರ್ ಭವನಪ್ರತಾನದಿನನೂನವ್ಯಂತರರ್ ತದ್ವನ
ವ್ರಜದಿಂ ಜ್ಯೋತಿರಮರ್ತ್ಯರಾಗಳೆ ನಿಜಜ್ಯೋತಿರ್ವಿಮಾನೌಘದಿಂ
ದಜರರ್ ಕಲ್ಪಸಮೂಹದಿಂ ತಳರ್ದು ಬಂದೆತ್ತೆತ್ತಮಾಕಾಶದೊಳ್‌
ಧ್ವಜಭೇರೀಯುತರಿರ್ದರೆಯ್ದೆ ಬರವಾರುತ್ತುಂ ಶಚೀನಾಥನಂ || ೪೩

ವ || ಆಗಳಖಿಳಮಂಗಳಸನಾಥಸಾಮಾನಿಕತ್ರಯತ್ರಿಂಶತ್ಪಾರಿಷದಾತ್ಮರಕ್ಷಕಲೋಕಪಾಳಕಾ ಭಿಯೋಗ್ಯಕಿಲ್ಬಿಷಿಕಪರಿಜನಪರೀತನುಂ ಹಸ್ತ್ಯಶ್ವರಥಪದಾತಿವೃಷಭಗಂಧರ್ವ ನರ್ತಕೀ ಪ್ರಭೇದಸಪ್ತಾನೀಕಸಮೇತನುಮಾಗಿ-

ಸ್ರ || ಧರ್ಮೋದ್ಯೋಗಾನುರಾಗೋಲ್ಲಸಿತಹೃದಯನುದ್ಯದ್ವಿಭೂಷಾವಳೀರೋ
ಚಿರ್ಮಾಳಾಚಿತ್ರಿತಾಭ್ರಂ ಪಟುಪಟಹರವಾಘೂರ್ಣಿತಾಶಂ ವಿಯದ್ಗಂ
ಗೋರ್ಮಿಪ್ರಖ್ಯಾತಪತ್ರಧ್ವಜಚಮರಜಬೃಂದಂ ಶಚೀಸಂಯುತಂ ಸೌ
ಧರ್ಮೇಂದ್ರಂ ಬಂದನೈರಾವತವಿಪುಳತರಸ್ಕಂಧಲಪೀಠೀನಿಷಣ್ಣಂ || ೪೪

ವ || ಅಂತು ಚತುರ್ನಿಕಾಯಪ್ರಾಯ ರೋದಸೀಮಂಡಳನಾಗಿ ನಡೆಯೆ-

ಮ || ಸ್ರ || ಘನರತ್ನಾಳಂಕೃತಿಪ್ರಗ್ರಹವಿಸರಲಸತ್ಪಲ್ಲವಂ ಪೀವರೋರೋ
ಜನಿಕಾಯಾತುಚ್ಛಗುಚ್ಛಾವಳಿ ವಿಚಳದಪಾಂಗಪ್ರಭಾಭಾರಪುಷ್ಪಾ
ಭಿನುತಂ ಚೂರ್ಣಾಳಕಾಳಿಪ್ರಮದಮಧುಕರೌಘಾಕರಂ ಕಲ್ಪವಲ್ಲೀ
ವನಮೆಂಬೊಂದಂದದಿಂ ಬಂದುದು ದಿವಿಜವಧೂಬೃಂದಮಾನಂದದಿಂದಂ || ೪೫