ಕಂ || ಶ್ರೀಮುಖದೊಳ್ ನಸುನಗೆ ಬೆ
ಳ್ದಾವರೆಯೊಳಲರ್ಕೆಯೆಂಬವೊಲ್ ಪಸರಿಸೆ ಲ
ಕ್ಷ್ಮೀಮಯನೆಸೆದಂ ಶಿಶು ಬಿಸ
ಕೋಮಳತನು ಜೈನಜನಮನೋಹರಚರಿತಂ || ೧

ಅಮೃತದ್ಯುತಿಮಂಡಳದೊಳ
ಗಮರ್ದಿನ ಪನಿ ತರದಿನೊಗೆದುವೆನೆ ಪನೆಗಳ್‌ ಚೆ
ಲ್ವಮರ್ದ ಮುಖಬಿಂಬದೊಳ್‌ ರುಚಿ
ನಿಮಿರ್ವಿನೆಗಂ ಪುಟ್ಟಿ ದಿಟ್ಟಿಗಿತ್ತುವಲಂಪಂ || ೨

ಎಳವಸಲೆಯ ಮೇಲೊಯ್ಯನೆ
ತಳರ್ದಾಡುವ ರಾಜಹಂಸಬಾಳಕನೆಂಬೊಂ
ದಳತೆಗೆ ವಂದಂ ಮರಕತ
ತಳದೊಳ್‌ ತಳರಡಿಯನಿಡುವ ತನ್ನೃಪತನಯಂ || ೩

ರಂಜಿಸಿದುದು ಕಾಂಚನಮಣಿ
ಮಂಜೀರಕವಿರುತಿ ಚರಣದೊಳ್ ಸರಸಿಜದೊಳ್‌
ಕಿಂಜಳ್ಕಪಿಂಗಭೃಂಗೀ
ಶಿಂಜಿತಮೆನೆ ಬಾಳಕಂ ತಳರ್ನಡೆವೆಡೆಯೊಳ್ || ೪

ಪಿರಿದುಂ ರಜಸ್ತಮೋಗುಣ
ವೆರಡುಮನಿರದಿಕ್ಕಿ ಮೆಟ್ಟಿದಂ ಶಿಶುತೆಯೊಳಂ
ಪರಮನೆನಿಸಿದುದು ಪುದಿದಿರೆ
ಚರಣದ್ಯುತಿ ನೀಲಕುಟ್ಟಿಮದೆ ದಟ್ಟಡಿಯೊಳ್ || ೫

ಸುರದಾರಕತತಿ ತಾರಕ
ಪರಿಕರಮೆನೆ ಪಂಚರತ್ನಪಾಂಶುಪರೀತಂ
ಕರಮೆಸೆದಂ ಜಿನಚಂದ್ರಂ
ಪರಿವೇಷದ ಚಂದ್ರನೆನೆ ಶಿಶುಕ್ರೀಡಿತದೊಳ್ || ೬

ಎಲೆಯರಳೆಲೆ ಮಾಂಗಾಯ್ ಕಾಯ್
ತೊಳಗುವ ಕಣ್ಮಲರಲರ್ ಮುಗುಳ್ನಗೆ ಚೆಲ್ವಂ
ತಳೆದ ಮುಗುಳ್ನಗೆಯೆನೆ ಕ
ಣ್ಗೊಳಿಪಂ ಶಿಶು ಕಲ್ಪಕುಜದ ಸಸಿಯೆಂಬಿನೆಗಂ || ೭

ಮ || ವಿ || ಅನಿಮಿತ್ತಂ ಪನೆಗಳ್ ಪಳಚ್ಚನೆಸೆವನ್ನಂ ಮಂದಹಾಸಪ್ರಕಾ
ಶನಮಂ ಮುದ್ದುಮೊಗಕ್ಕೆ ತಂದು ಪರಿತಂದಪ್ಪಪ್ಪೆನುತ್ತಪ್ಪಿ ಪಿಂ
ದನೆ ಪೊಕ್ಕೊಯ್ಯನಡಂಗಿ ದಾಯೆನುತೆ ಮತ್ತೆಯ್ತಂದು ಮುಂಡಾಡಿ ಭೂ
ಪನುಮಂ ದೇವಿಯುಮಂ ಪ್ರಮೋದರಸದೊಳ್ ತೇಂಕಾಡಿಪಂ ನಂದನಂ || ೮

ಕಂ || ನಲಿವ ನಿಜಬಂಧುಗಳ ಕರ
ತಲದಿಂ ಕರತಳಕೆ ಬಾಳಕಂ ಬರುತಿರ್ದಂ
ಬೆಲೆಯಿಡಲಣಮಱಿಯದ ಮಂ
ಡಲಿಗಳ್ ಪರಿಕಿಪ ಪರಾರ್ಧ್ಯಮಣಿಯೆಂಬಿನೆಗಂ || ೯

ವ || ಅದಲ್ಲದೆಯುಮಮರ್ತ್ಯಧಾತ್ರೀಸಾರ್ಥಮುಜ್ಜುಗಿಪ ಸಜ್ಜೆಯ ಮಜ್ಜನದ ಸಜ್ಜೀಕರಣದೊಳ ಮಸ್ವಪ್ನಯಾಮಿಕಾಸಮೂಹಮನುಸರಿಸುವಿರುಳ ಪಗಲ ಸುವಿಧಾನದೊಳಮಮೃತಾಶನ ಮಹಾನಸಪ್ರತತಿ ಪದವಡಿಸುವನ್ನಪಾನದ ವ್ಯವಹರಣದೊಳಮಭಿನವೇಂದುಸಂಕಾಶತೆ ಯಿನನುದಿನಂ ಬಳೆಯೆ ಬಳೆಯೆ-

ಶಾ || ಏನಂ ಪೇೞ್ವುದೊ ಮೇಷಮಲ್ಲಮಹಿಷಾದ್ಯಾಕಾರಮಂ ತಾಳ್ದಿ ಬಂ
ದಾನಾಕಾಧಿಪಬಾಳಕರ್ ಬಿನದದಿಂ ಪೋರ್ದಾಡೆಯುಂ ಮುಂದದೆ
ತ್ತಾನುಂ ದೇವನ ಚಿತ್ತದೊಳ್‌ ನಲವು ಪುಟ್ಟಿತ್ತಿಲ್ಲ ನೋೞ್ಪಂದು ಹಿಂ
ಸಾನಂದಕ್ಕೊಳಗಾಗಲೇನಱಿಗುಮೇ ಶಾಂತಾತ್ಮನೆಂತಿರ್ದೊಡಂ || ೧೦

ವ || ಅದಲ್ಲದೆಯುಂ-

ಕಂ || ಗುರು ಪೆಱನಾವಂ ತ್ರಿಜಗ
ದ್ಗುರುಗೆನೆ ಸಂಸ್ಕಾರವಶದೆ ಕಮನೀಯಕಳೋ
ತ್ಕರಮುಮನುತ್ತಮಶಾಸ್ತ್ರೋ
ತ್ಕರಮುಮನಭ್ಯಸಿಸದಾಗಳಱಿದನನಿಂದ್ಯಂ || ೧೧

ಕ್ಷಿತಿಪತಿಸುತನೊಳ್ ಜ್ಞಾನ
ತ್ರಿತಯಂ ಸಹಜಂ ಮತಿ ಶ್ರುತಾವಧಿಯೆನೆ ತ
ನ್ಮತಿಯಂ ಶ್ರುತಮಂ ಬೋಧೋ
ದ್ಗತಿಯಂ ಬಣ್ಣಿಸುವೆನೆಂಬ ನುಡಿ ಪುನರುಕ್ತಂ || ೧೨

ವ || ಮತ್ತಂ ನಿತ್ಯನಿಸ್ವೇದವೃತ್ತಿಯುಂ ಸಕಳಶಾರೀರಮಳವಿಹೀನತ್ವಮುಂ ಶುದ್ಧಧವಳರುಚಿರತೆ ಯುಂ ಸಮಚತುರಶ್ರಸಂಸ್ಥಾನಪ್ರಕೃತಿಯುಂ ವಜ್ರವೃಷಭನಾರಾಚಖಚಿತಶರೀರಸಂಧಿ ಸಂಧಾನಸಂಪತ್ತಿಯುಂ ತ್ರಿಲೋಕಲೋಚನಮನಃಪ್ರಾಹ್ಲಾದಸಂಪಾದನ ಸಮರ್ಥಸೌಂ ದರ್ಯಮುಂ ಸಂಮಿಳಿತಸಕಳಸೌರಭಪ್ರಭಾವಾಭಿನವಬಂಧುರಸೌಗಂಧ್ಯಮುಂ ಸ್ವಸ್ತಿಕಾಂಕು ಶತಿಳಮಸೂರಿಕಾದ್ಯಷ್ಟೋತ್ತರಶತಲಕ್ಷಣನವಶತವ್ಯಂಜನೋಪರಂಜಿತಾಗಣ್ಯ ಸೌಲಕ್ಷಣ್ಯ ಮುಂ ಮೃದುಮಧುರಗಂಭೀರೋದಾರಪ್ರಿಯಹಿತವಚನವೈಚಿತ್ರ್ಯಮುಂ ಪ್ರತಿಹತಾನಂತ ವೀರ್ಯಗುಣಮುಮೆಂಬ ದಶವಿಧಸಹಜಾತಿಶಯಸಂಪನ್ನಮುಂ ಪವನಪಿತ್ತಪೀನಸಾಸತ್ವಮ ಸಂಭಾವನಾಮಯವಿಜಯನೋಕರ್ಮಾಪಚಯಾದ್ಯುಪಘಾತವ್ಯಪೇತಮುಂ ಅಶೇಷ ವಿಷಪಾಷಾಣಕಾಷ್ಟಾಕಂಟಕಕಾಯುಧಾಗ್ನಿವಾತವರ್ಷಶೀತಾತಪಾದಿಬಾಧಾನಿರ್ಭೇದ್ಯಮುಂ ನಿರತಿಶಯೇಂದ್ರಿಯಾತೀಂದ್ರಿಯಾರ್ಥಸಮುಪಗತಾಭ್ಯುದಯನಿಶ್ಯ್ರೇಯಸ ಸುಖಸಾಧನ ಮುಂ ಪಂಚಾಶದುತ್ತರಚಾಪಪರಿಮಿತೋತ್ಸೇಧಮುಂ ನಿರಾಕೃತತುಷಾರಗೋಕ್ಷೀರಹಾರ ಕಾಂತಿಸಂತಾನಧವಳರುಚಿನಿಚಿತಮುಂ ದಶಲಕ್ಷಪೂರ್ಪಪರಿಮಿತಾಯುಷ್ಯಮುಮಪ್ಪ ಚರಮಪರಮ ದಾರಿಕಶರೀರಮಂ ತಳೆದು ಎರಡು ಲಕ್ಕೆಯುಮಯ್ವತ್ತು ಸಾಸಿರ ಪೂರ್ವಂ ಕುಮಾರಕಾಲಂ ನೆಱೆದುದೆಂಬಂದದಿನಿರೆ-

ಮ || ಸ್ರ || ನಗೆಗಣ್ಗಳ್‌ ಸೋಲಮಂ ಕೈರವದೊಳೊಡರಿಸಲ್ ಸ್ಮೇರನೀರೇಜದೊಳ್ಪಂ
ಮೊಗಮಿತ್ತೊಪ್ಪಲ್ ಮೊಗಂ ಪೇರುರಮುರದೆಗೊಳಲ್ ಶ್ರೀಯನಿಂದುಪ್ರಭಾಶೋ
ಭೆಗೆ ಮೆಯ್ ಮೆಯ್ಸಾರ್ಚಲೈರಾವತಕರಪರಿಘಾಕಾರಮಂ ಕೈಕೊಳಲ್ ಮುಂ
ಬಗೆವನ್ನಂ ಯೌವನಶ್ರೀ ಪಡೆದುದು ಪರಮೇಶಾಂಗಮಂ ಪೊರ್ದಿ ಚೆಲ್ವಂ || ೧೩

ಚಂ || ಉದಯದಿನಂ ಸಮಗ್ರಕರವೃತ್ತಿಯನೆಯ್ದಿದ ಶಕ್ತಿಗೆ ಪಾರಿಜಾ
ತದ ಸಸಿ ಚಾರುವೃತ್ತತೆಯನಾಂತೆಸಕಂ ಶಿಶುಭಾವದಿಂದು ಮಾ
ಣದೆ ಸಕಳತ್ವಮಂ ತಳೆದ ಚೆಲ್ವಿನಿತುಂ ತನಗಾದುದಾವಗಂ
ಪುದುವೆನೆ ದೇವನೇಂ ನೆಱೆದ ಜವ್ವನದೊಪ್ಪಮನಪ್ಪುಕೆಯ್ದನೋ || ೧೪

ಕಂ || ಒಡವಂದುವು ಮಱುಭವಮಂ
ಬಿಡದಹಮಿಂದ್ರತೆಯ ಶೈಲಿಯುಂ ಮೆಯ್ವೆಳಗುಂ
ಗಡಣದಿನೆನೆ ವಿಮಳತೆಯಂ
ಪಡೆದುದು ತದ್ರಾಜಸುತನ ಮನಮುಂ ತನುವುಂ || ೧೫

ಮ || ವಿ || ಪೊಸಮುತ್ತಿಂ ಸಮೆದಂತೆ ನುಣ್ಪಳಿಕಿನಿಂ ಗೆಯ್ದಂತೆ ಕರ್ಪೂರದಿಂ
ದೆಸೆಯಾಚ್ಛಾದಿಸಿದಂತೆ ಕೋಮಳಮೃಣಾಳೀಕಾಂಡದಿಂ ಮಾಡಿದಂ
ತೆ ಸುಧಾಂಭೋನಿಧಿಫೇನದಿಂ ನೆಱೆಪಿದಂತಾಶ್ಚರ್ಯಮಂ ಕಣ್ಗೆ ಪು
ಟ್ಟಿಸಿ ಚಂದ್ರಪ್ರಭಮೂರ್ತಿಯೇಂ ತಳೆದುದೋ ಧಾವಲ್ಯಸಾಕಲ್ಯಮಂ || ೧೬

ಮ || ಸ್ರ || ಘನಭಂಗಂ ಗಾಂಗತೋಯಂ ಜಡವಿಕೃತಿಮಯಂ ಮೌಕ್ತಿಕಂ ದಕ್ಷಿಣಾವ
ರ್ತನಯುಕ್ತಂ ಪಾಂಚಜನ್ಯಂ ಪ್ರಕೃತಿತರಳಮೂರ್ಜಾಂಬುದಂಕಂಟಕವ್ರಾ
ತನಿರುದ್ಧಂ ಪುಂಡರೀಕಂ ಬಗೆವೊಡೆ ದಿಟಮೆಂದೊಲ್ಲದನ್ಯೂನಶೋಭಾ
ಭಿನವಂ ತಾನೆಂದು ಚಂದ್ರಪ್ರಭನನೆ ಪರಿಪಾಂಡುಪ್ರಭಾಲಕ್ಷ್ಮಿಸಾರ್ದಳ್ || ೧೭

ಕಂ || ಒಳಗಮರ್ದುೞಿದಿರೆ ಶಶಿಮಂ
ಡಳಮಂ ಕಂಡರಿಸಿ ಪಡೆದ ಪೊಸಪರಿಜೆನೆ ಕ
ಣ್ಗೊಳಿಸಿದುದಮಳಯಾರಸ
ಕಳಿತಮನೋವೃತ್ತಿಮೂರ್ತಿ ಚಂದ್ರಪ್ರಭನಾ || ೧೮

ವ || ಮತ್ತಂ-

ಮ || ವಿ || ಭುವನೋದ್ಧಾರಕಮಪ್ಪ ತೋಳ್ಗಿನಿತು ನೀಳ್ಪಕ್ಷೂಣಲಕ್ಷ್ಮೀವಿಹಾ
ರವಿಳಾಸೋಚಿತಮಪ್ಪುರಕ್ಕಿನಿತು ಪೆಂಪಾಶ್ಚರ್ಯಸೌಂದರ್ಯವ
ರ್ಯವಚಶ್ಶ್ರೀಕುಳಸದ್ಮಮಪ್ಪ ವದನಾಂಭೋಜಕ್ಕಿನಿತೊಪ್ಪಮೊ
ಪ್ಪುವುದೆಂಬಂತಿರೆ ರೂಪುಜೌವನದೊಳೇನೊಳ್ಪಿಂಗಡರ್ಪಾದುದೋ || ೧೯

ಕಂ || ಇಲ್ಲಿಂದಿತ್ತಲ್ ಪೊರ್ದುಗೆ
ಯೆಲ್ಲಿಯದಭವಂಗಮೆನಗಮೆಂದಾಕೃತಿಯೊ
ಳ್ಪೆಲ್ಲಂ ನೆಲಸಿದುದೆನೆ ತವಿ
ಲಿಲ್ಲದ ಚೆಲ್ವಿಂಗೆ ಚರಮತನು ತೊಡವಾಯ್ತೊ || ೨೦

ವ || ಅದಲ್ಲದೆಯುಂ-

ಮ || ಸ್ರ || ಪರಿಪೂರ್ಣಂ ಜೌವನಂ ಸಂಗಡಿಸಿರೆ ಪರಮೌದಾರಿಕಂ ಮೂರ್ತಿ ದಿವ್ಯಾಂ
ಬರಭೂಷಾಲೇಪಮಾಲ್ಯೋತ್ಕರವಿರಚಿತನೈಪಥ್ಯಸಂಭೂತಶೋಭಾ
ಪರಿತಂ ಬೇಱೊಂದಿದಾಪೂರಿತವಿಮಳಕಳಾಚಂದ್ರಬಿಂಬಂ ಸಮುದ್ಯ
ತ್ಕರಜಾತಶ್ರೀಯುತಂ ತಾನೆನೆ ನಯನಚಕೋರಕ್ಕೆ ಮಾಡಿತ್ತಲಂಪಂ || ೨೧

ಚಂ || ಕರತಳಕಾಂತಿಪಲ್ಲವಿತಪಾಂಡುಕಪೋಳೆಯರಶ್ರುಬಿಂದುವಿ
ಸ್ತರತರಸೂಕ್ಷ್ಮಪಕ್ಷ್ಮಪುಟಿಕಾಂಚಳೆಯರ್ ಘನಸಾರರೇಣುಪಾಂ
ಡುರಿತನತಾಂಸೆಯ ಶ್ವಸಿತಸಂಕಟಗದ್ಗದಿಕಾಪ್ರಪಂಚವಿ
ಸ್ಫುರಿತಕುಚಾಗ್ರೆಯರ್ ಬಯಸಿ ಬಾಯ್ವಿಡುವರ್ ಕುರುವಂಶಮೇರುವಂ || ೨೨

ಕಂ || ಎನಿತು ಸಿರಿಯೆನಿತು ಜವ್ವನ
ಮೆನಿತ್ತು ಸೌಭಾಗ್ಯಮೀಶನೊಳ್ ಸಮನಿಸಿದ
ತ್ತನಿತೆ ಗುಣಮನಿತೆ ಸುಚರಿತ
ಮನಿತ್ತೆ ಶೌಚಂ ಪೊದೞ್ದುದೇಂ ವಿಸ್ಮಯಮೋ || ೨೩

ವ || ಅದಲ್ಲದೆಯುಂ-

ಉ || ಕೇವಲಬೋಧಸಂಜನನದಿಂ ಸಮನಿಪ್ಪಮನಸ್ಕವೃತ್ತಿ ಮೇಣ್
ದೇವನನಿಂದೆ ಪೊರ್ದಲನುಗೆಯ್ದಪುದಕ್ಕುಮದೆಂಬ ಸಂದೆಗಂ
ತೀವೆ ಸುಹೃಜ್ಜನಂಗಳ ಮನಂಗಳೊಳಾವಗಮಾಜವಂಜವ
ಶ್ರೀವಿಭವಂಗಳೊಳ್ ತೊಡರ್ದುವಿಲ್ಲ ಮನಂ ಪಿರಿದಾಮಹಾತ್ಮನಾ || ೨೪

ಕಂ || ಶಾಂತಾತ್ಮರ್ ತರಳೆಗೆ ಸಿರಿ
ಗೆಂತೆಱಪರೊ ವಾಣಿಯಂತೆ ಚತುರಯಶಶ್ಶ್ರೀ
ಯಂತಮಳಮುಕ್ತಿಯಂತೇ
ಕಾಂತಮನೋಹರಿಯಿವಳ್‌ ದಲೆಂದೊಣರ್ದಪರೇ || ೨೫

ವ || ಅಂತಗಣ್ಯರೂಪಲಾವಣ್ಯತಾರುಣ್ಯಸೌಭಾಗ್ಯಭಾಗ್ಯಸಂಪತ್ಸಮೇತನಾಗಿ ಪ್ರಸುಪ್ತಮಕರ ಕೇತನವಿಜಯರತ್ನಾಕರದಂತಾಗಿಯುಮಪೇತಮಾನ್ಮಥವಿಕಾರಂ ಕುಮಾರನಿರೆ ಕಂಡು ಮಹಾಸೇನಮಂಡಳೇಶ್ವರಂ ವಿಸ್ಮಯಂಬಟ್ಟು-

ಮ || ವಿ || ಸಹಜಜ್ಞಾನಮನೋಹರಂ ಚರಮದೇಹಂ ಮೋಕ್ಷಲಕ್ಷ್ಮೀಕೃತ
ಸ್ಪೃಹನೀಜನ್ಮಸಮುದ್ರಮಂ ತರಿಯಿಸಲ್ಕರ್ಹತ್ತಪಃಪೋತಸಂ
ಗ್ರಹಮಂ ಭೋಂಕನೆ ಮಾಡಿದಂ ಬೞಿಕನಾಥಂ ಮತ್ಕುಲಂ ತತ್ಸಮಂ
ಮಹಿ ತರ್ಪಂದಮದಾವುದೋ ಮದುವೆಗಂ ಪಟ್ಟಕ್ಕಮಿನ್ನೀತನಂ || ೨೬

ವ || ಎಂದು ಮನದೊಳೆ ಬಗೆದು ಸಕಲಸಾಮ್ರಾಜ್ಯಲಕ್ಷ್ಮೀದೇವತೋಪಮೆಯಪ್ಪ ಲಕ್ಷ್ಮಣಾ ಮಹಾದೇವಿಯ ಸಮೀಪಕ್ಕೆ ಬಂದು ತನ್ನ ಮನೋಗತಮನಱಿಪೆ ಬೞಿಯಮಿರ್ವರುಂ ವಿನೋದಸ್ಫಟಿಕವಳಭಿಯೊಳ್ ಸಹಜಾಭ್ಯಾಸಮಂತ್ರತಂತ್ರಸಾಧ್ಯಾನೇಕವಿಧವಿಮಳಕಳಾ ಕುಶಳನುಂ ಕುಮಾರಪರಿವೃಢನುಮುತ್ತುಂಗಸಿಂಹಾಸನಾರೂಢನುಮಾಗಿರ್ದ ತೀರ್ಥಕರ ಕುಮಾರನಲ್ಲಿಗೆ ವಂದು ತದುಪವಿಷ್ಟವಿಷ್ಟರಾಭ್ಯರ್ಣಸೌವರ್ಣಪೀಠಮನಳಂಕರಿಸಿ ನಿಜ ಮನೋಗತೋದ್ಯೋಗಸಂಸಿದ್ಧಿಸಂಶಯಾಕುಳಿತಮಾನಸಂ ಪತ್ತೆಸಾರ್ದಮರಚಮರರು ಹದೆರಲ ಪೊಯ್ಲಿನಿಂ ತೊನೆದು ಜೋಲ್ವ ಪಾರಿಜಾತದರಲ ಕರ್ಣಪೂರಮಂ ಮಗುಳೆ ತಗುಳ್ಚಿಯುಂ ಗೀರ್ವಾಣವೈಣಿಕರ್ ಬಾಜಿಸುವ ಗಾಂಧಾರಗ್ರಾಮಮೂರ್ಛನೋಚ್ಚಾರಕ್ಕೆ ಮೆಚ್ಚಿ ಮಾಡುವ ಶಿರಃಕಂಪನದಿನೋರೆವೋದ ಮಣಿಮಕುಟಮಂ ಸಯ್ತೆ ಸಾರ್ಚಿಯುಂ ವಕ್ಷಸ್ಸ್ಥಲೋಪಲಕ್ಷಿತಶ್ರೀವತ್ಸಲಕ್ಷಣಮಂ ಮುಸುಂಕಿ ಪಸರಿಸಿರ್ದ ತೋರಮುತ್ತಿ ನೈಸರ ಮನೊಯ್ಯನೋಸರಿಸಿಯುಂ ಆರೋಗಣೆಯ ಕಡೆಯೊಳಮರವಟುಗಳವಟಯ್ಸಿದ ಕೆಯ್ಗಟ್ಟಿಯೊಳುಗುರ್ಗಳೊಳಗಾಱಿನಿಂದ ಹರಿಚಂದನರಜಮಂ ನಖಮುಖದಿನುದಿರ್ಚಿಯು ಮಿಂತೆಂತಾನುಮನುವರ್ತನದಿನವಸರಂಬಡೆದು ಭೂಕಾಂತನೊಯ್ಯನಿಂತೆಂದಂ-

ಕಂ || ಒಗೆದುದು ಮುಕ್ತಾಫಳಮೆಂ
ಬಗಣನೆಯಿಂ ಶುಕ್ತಿಪುಟಕೆ ಪೆಸರಾದುದು ನಿ
ನ್ನ ಗುರುತ್ವದಿಂದೆ ನಿಜಪಿತೃ
ಯುಗಮೆಂದೆಮಗಾದುದಧಿಕಗೌರವಮೀಗಳ್‌ || ೨೭

ಮತಿಯ ಪವಣಿಂ ವಯೋವೃ
ದ್ದತೆಯೆಮ್ಮೊಳ್ ಜ್ಞಾನವೃದ್ಧತೆಯೆ ನಿನ್ನೊಳೆ ಸಂ
ಗತಿವೆತ್ತುದೆ ಪೇೞ್ಗುಮಾವಗ
ಮತರ್ಕ್ಯಗುಣ ನೀತಿವೇೞ್ವುದಿದು ಸಲ್ಗೆ ವಲಂ || ೨೮

ವ || ಅದುಕಾರಣದಿಂ-

ಮ || ವಿ || ಕ್ಷಿತಿಗಿಕ್ಷ್ವಾಕುಕುಳಂ ಪವಿತ್ರತರಮಾದತ್ತಾದಿತೀರ್ಥೇಶಸಂ
ತತಿಯಿಂದಿಂದುವರಂ ತನೂಭವ ಭವತ್ಸಂತಾನದಿಂದಿನ್ನುಮೂ
ರ್ಜಿತಮಪ್ಪಂತಿರೆ ಧರ್ಮಸಂತತಿನಿಮಿತ್ತಂ ನೀಂ ವಿವಾಹೋತ್ಸವೋ
ಚಿತಮಂ ಮನ್ನಿಪುದೆಮ್ಮುತಿರ್ವರ ಮನಕ್ಕಂ ಮಾೞ್ಪುದಾನಂದಮಂ || ೨೯

ಕಂ || ಸುತ ತಲೆವೀಸದೆ ಮತ್ಸಂ
ತತಿಜನ್ಮಾರ್ಥಮೆ ವಧೂಪರಿಗ್ರಹಣಪ್ರ
ಸ್ತುತಮನೊಡಂಬಡುವುದು ತ
ತ್ಪ್ರತಿಷೇಧಂ ಪ್ರಾಪ್ತಿಪೂರ್ವಕಂ ತಾನಲ್ತೇ || ೩೦

ವ || ಎನಲೊಡಂ-

ಕಂ || ಮೊಗದೊಳ್‌ ದೇವಂಗೆ ಮುಗು
ಳ್ನಗೆಯೊಗೆದು ಪಿತೃದ್ವಯಾಭಿವಾಂಛಿತಲತೆಗಂ
ಬಗೆಯೆ ಮುಗುಳ್ನಗೆಯಾಯ್ತೆನೆ
ಸೊಗಯಿಸಿದುದು ತತ್ಫಲಪ್ರಸೂತಿನಿಮಿತ್ತಂ || ೩೧

ವ || ಆಗಳ್-

ಕಂ || ವದನಮಲರ್ದುಸಿರದಿನಿತಿ
ರ್ಪುದುಮಪ್ರತಿಷಿದ್ಧಮನುಮತಂ ಭವತಿಯೆನಿ
ಪ್ಪಿದನಱಿದರಸನುಮರಸಿಯು
ಮದೇಂ ಪ್ರಮೋದಪ್ರಕರ್ಷಮಂ ತಾಳ್ದಿದರೋ || ೩೨

ವ || ಅಂತು ತಮ್ಮೊಳಿಚ್ಛಾವಿಘಾತಾನುಕಂಪಿಯುಮವಶಿಷ್ಟಸಂಸೃತಿಸುಖಾನುಭವಕಾಲಪ್ರಮಾಣಾ ನುಸೃತಿಯುಂ ಕಾರಣಮಾಗೊಡಂಬಟ್ಟುದನಱಿದು ಮನದ ಕೊನೆಯೊಳ್ ಗುಡಿಗಟ್ಟಿ ಮಱುದಿವಸಂ ಸಮುಚಿತಾವಸರದೊಳ್ ಅಶೇಷಕುಲವೃದ್ಧರೊಳಂ ಬುದ್ಧಿವೃದ್ಧರೊಳ ಮಾತ್ಮೀಯಸುತಮನೋಮದಗಜಾಳಾನಸ್ತಂಭೆಯುಂ ಭವಿಷ್ಯದ್ಭಾಗ್ಯೆಯುಮಾಮುಷ್ಯಾ ಯಣೆಯುಮಪ್ಪ ಕನ್ನೆಯಾವಳಕ್ಕುಮೆಂದು ನುಡಿಯಲೊಡಮವರ್ ತಮತಮಗೆ-

ಕಂ || ನುತ ನಾಥವಂಶವಂಶೋ
ತ್ಥಿತಮುಕ್ತಾಪ್ರತಿಮೆ ವಿಜಯಕೇತುಮಹೀಭೃ
ತ್ಸುತೆ ವನ್ಯಕುಮಾರಾನುಜೆ
ವಿತತಜಗನ್ಮಾನ್ಯೆ ರಾಜಕನ್ಯಾರತ್ನಂ || ೩೩

ಅಮಳಗುಣನಿವಹನಿತ್ಯಾ
ಶ್ರಮತ್ವದಿಂ ಭುವನವಿದಿತನಿಜಜನ್ಮತೆಯಿಂ
ಕಮಳಪ್ರಭೆಯೆನೆ ನೆಗೞ್ದಳ್‌
ಕಮಳಪ್ರಭೆಯೆಂಬಳಮಳಕಮಳಾನಿಳಯಳ್ || ೩೪

ಚಂ || ಸ್ವಕುಳಪಯೋಧಿಚಂದ್ರಿಕೆ ಮನೋಜಜಗತ್ರಯಜೈತ್ರವೈಜಯಂ
ತಿಕೆ ಗುಣಮೌಕ್ತಿಕಪ್ರಸವಶುಕ್ತಿಕೆ ಮಾನನಿಧಾನದೀಪವ
ರ್ತಿಕೆ ವಿಸರದ್ವಿಳಾಸರಸಪಾತ್ರಿಕೆ ರಾಜ್ಯರಮಾಶ್ರಯಾಬ್ಜಕ
ರ್ಣಿಕೆ ನಯನಾಳಿಜಾಳನವಮಾಳಿಕೆಯೆಂಬುದು ಲೋಕಮಾಕೆಯಂ || ೩೫

ವ || ಎಂದು ಪೊಗೞ್ವುದುಮುತ್ಸವೋತ್ಸುಕಹೃದಯನಿದುವೆ ಮದುವೆಗೆ ಪದನೆಂದು ಪುರೋಹಿತ ಪುರಸ್ಸರಂ ಮಹತ್ತರರನಟ್ಟಿ ಕನ್ಯಾರತ್ನಮಂ ಬರಿಸಿ ಸಮನಂತರಂ ಲೇಖವಾಹಕರಂ ಶತಮಖನಲ್ಲಿಗೆ ಕಳಿಪುವುದುಂ ತದಾಕರ್ಣನೋದೀರ್ಣರಾಗಸಾಗರಪರಿಪ್ಲಾವಿತಾಂತ ರಂಗನಾಗಳೆ ಬಂದು ಚಂದ್ರಪುರಮುಮನರಮನೆಯುಮಂ ಪೊಕ್ಕು-

ಕಂ || ಕಲ್ಪಜಪತಿ ಬೆಸಸೆ ಮರು
ಚ್ಛಿಲ್ಪಿಗಳುದ್ವಾಹಗೇಹಮಂ ಸಮೆದರತಿ
ಸ್ವಲ್ಪಸಮಯದೊಳೆ ವಿವಿಧವಿ
ಕಲ್ಪಕನದ್ರತ್ನಕೂಟಕುಳಸುಫಟಿತಮಂ || ೩೬

ವ || ಮತ್ತಮಾ ಮಂದಿರಂ ಮಂದರದಂತಶೇಷವಸ್ತುವಿಸ್ತೃತಜಗತೀವಳಯ ಮಧ್ಯಾಸಿತಮಂ ದಿಶಾಪರಿಧಿಯಂತೆ ಭದ್ರಲಕ್ಷಣೋಪೇತಮತ್ತವಾರಣಾಷ್ಟಕಪರಿವೇಷ್ಟಿತಮುಂ ಪಾಂಡು ರಾಜಕುಲದಂತೆ ಪಂಚಜನಮನೋಹರ ಪ್ರಪಂಚಪಾಂಚಾಳಿಕೋದಂಚಿತಮುಂ ಸುಕರಕ ವಿವಾಕ್ಯದಂತೆ ಸುವರ್ಣ ಘಟನಾಭಿತ್ತಿವಿಸ್ತಾರಮುಂ ನಾಳಿಕೇರಫಲದಂತೆ ಖರ್ಪರು ಚಿಲಸದ್ದಾರುಬಂಧಬಂಧುರಮುಂ ಮರುತ್ತರಂಗಿಣೀಪ್ರವಾಹದಂತುತ್ತರಂಗಸಂಗತಲಕ್ಷ್ಮೀ ಸಮಾಲಕ್ಷಿತಮುಂ ಮಾನಸಸರೋವರದಂತೆ ನಿರಂತರಕಾಂತಧವಳಚ್ಛದಾವಳೀವಳಯಿತ ಮುಂ ಸಾತ್ವಿಕಭಾವಸಮುದಯದಂತೆ ವಿಚಿತ್ರಸ್ತಂಭಶೋಭಾಸಂಭೃತಮುಂ ಚರಣಾ ಭರಣದಂತೆ ರತ್ನಮಯತುಳಾಕೋಟಿಘಟಿತಮುಂ ವಾರಾಶಿತೀರದಂತನಂತರತ್ನ ಕಾಂತಿಕ ಬಳಿತೋತ್ತುಂಗವೇದೀಸಮುತ್ಪಾದಿತಕೌತುಕಮುಂ ವನೌಷಧಿವರ್ಗದಂತೆ ಕನಕಭೃಂಗಾರ ಕದಂಬವಿಭವಾಲಂಬಮುಂ ಅರಣ್ಯಾನಿಯಂತರ್ಜುನಾಕ್ಷತರುಚಿರಪಾತ್ರವಿಳಸನೋದಾತ್ತ ಮುಂ ಮದಗಜಾಸ್ಯದಂತಗ್ರಪಲ್ಲವೋದಗ್ರಪೂರ್ಣಕುಂಭಾಭಿರಾಮಮುಂ ಪ್ರಸೂತಿಕಾ ವಾಸಗರ್ಭದಂತೆ ಸದರ್ಭಕಾವಿರ್ಭಾವಮುಂ ಗಗನವಳಯಂದಂತವಳಂಬಮಾನಧಾರಾ ವಳೀವಿಳಾಸಮುಂ ಮರ್ತ್ಯಪ್ರಕೃತಿಯಂತೆ ಪರಿಚಿತಪತಾಕಾಸಮುದಯಮುಮಾಗಿ-

ಕಂ || ಜನನಯನಪುತ್ರಿಕಾನ
ರ್ತನಗೃಹಮಾನಂದಮಯಮನೋವೃತ್ತಿವಿವ
ರ್ತನಗೃಹಮಭಿವರ್ಣನವಾ
ಗ್ವಿನೋದಗೃಹಮೆನಿಸಿದತ್ತು ಪರಿಣಯನಗೃಹಂ || ೩೭

ವ || ತನ್ಮಧ್ಯದೊಳ್-

ಕಂ || ನವರತ್ನಕಾಂತಿಸಂತಾ
ನವಿರಾಜಿತಕನಕವೇದಿಯೊಳ್ ಪಳಿಕಿನ ಪ
ಟ್ಟವಣೆ ನೆನೆಯಿಸಿದುದಾಮೇ
ರುವ ಮೇಖಳೆಯಲ್ಲಿ ಪೊಳೆವ ಪಾಂಡುಕಶಿಳೆಯಂ || ೩೮

ನಳನಳಿಪ ಜಾಗದೊಪ್ಪುವ
ತಳಿರ್ಗಳಸದ ಬೆಳಪ ರತ್ನದೀಪದ ಬಂದ
ಕ್ಕಳವಟ್ಟ ವರ್ಣಪೂರದ
ತೊಳಗುವ ದರ್ಪಣದ ನೇರ್ಪು ನೆಲಸಿತ್ತದೞೊಳ್ || ೩೯

ಗುಡಿಗಟ್ಟುವ ಕಡೆಯಿಕ್ಕುವ
ಸೊಡರ್ವೆಳಗುವ ತೋರಣಂದಗುಳ್ಚುವ ಚಳೆಯಂ
ಗುಡುವಸಿರಿಗಂಪುಗಿದುವಲ
ರ್ದೊಡರ್ಚುವಮರಿಯರ ಕೆಯ್ತಮಚ್ಚರಿಯದೞೊಳ್ || ೪೦

ಸುೞಿವ ಸುರಯುವತಿಯರ್ಕಳ
ನೆೞಲೊಪ್ಪಿರೆ ರತ್ನಭಿತ್ತಿಭಾಗಂಗಳ್ ನಿ
ರ್ಮಳಲಾಕ್ಷಾಚಿತ್ರಂಗಳ
ತಳೆದಂತಿರ್ದುವು ವಿವಾಹಗೇಹಾಂತರದೊಳ್ || ೪೧

ವ || ಆಗಳವರ್ಗಳ್ ಮಜ್ಜನಾನಂತರಂ ವಧೂವರರಂ ನವ್ಯದಿವ್ಯಕುಸುಮವಸನಭೂಷಣಾನು ಲೇಪನಂಗಳಿನಳಂಕರಿಸಿ ತಂದು ತದ್ವೇದಿಕಾಗೃಹದೊಳ್‌ ಮಹಾಸೇನಮಹೀಪತಿ ಪಾಣಿ ಗ್ರಹಣಕಲ್ಯಾಣಮನೊಡರ್ಚಲೊಡಂ-

ಕಂ || ಸ್ವಪ್ರಬಳಪುಣ್ಯದಿಂ ಚಂ
ದ್ರಪ್ರಭನಿನನಾಗೆ ತತ್ಕರಸ್ಪರ್ಶದೆ ಯು
ಕ್ತಪ್ರೀತಿವಿಕಸನಂ ಕಮ
ಳಪ್ರಭೆಗಾಯ್ತಖಿಳದೃಕ್ಛಿಳೀಮುಖಸುಖದಂ || ೪೨

ವ || ಅನಂತರಮೊಂದೆ ಪಸೆಯೊಳೆ ಸುವಾಸಿನೀಜನಾರೋಪಿತಾರ್ದ್ರಾಕ್ಷತಮನಾಂತು ಕುಳ್ಳಿರ್ದು-

ಕಂ || ನಿರುತಂ ಪ್ರಕೃತಿಪ್ರತ್ಯಯ
ಮೆರಡುಂ ಕೂಡಿಯೆ ಕೃತಾರ್ಥವೃತ್ತಿಯನಾಂಪಂ
ತಿರೆ ಮದುವೆ ನೆರೆದು ವನಿತಾ
ವರರಿರ್ವರುಮಾಂತರಂದು ಚರಿತಾರ್ಥತೆಯಂ || ೪೩

ಇಂದೆಮಗೆ ಪೊರೆವ ತಾಯುಂ
ತಂದೆಯುಮೊಳಗಾದರೆಂದು ನೋಡಿದುದತ್ಯಾ
ನಂದದೆ ಪರಿಜನಮುಂ ಪ್ರಜೆ
ಯುಂ ದಂಪತಿಗಳನನೂನಮಂಗಳಯುತರಂ || ೪೪

ಮ || ಸ್ರ || ಸುರಗೀತಂ ಮರ್ತ್ಯಗೀತಂ ಸುರಸಮುದಯವಾದ್ಯಂ ನೃಸಂದೋಹವಾದ್ಯಂ
ಸುರಕಾಂತಾನಂದನೃತ್ಯಂ ಮನುಜಮದವತೀಹರ್ಷನೃತ್ಯಂ ಸಮಂತಾ
ಗಿರೆ ಬೇಱೊಂದಿಂತಿದಕ್ಕುಂ ಕುತಪಜನನಿಧಾನಂ ದಲೆಂಬಂತಿರುರ್ವೀ
ಶ್ವರಗೇಹಂ ವರ್ಯತೂರ್ಯತ್ರಯಮಯಮೆಸೆದತ್ತಾಗಳಾಶ್ಚರ್ಯಭೂತಂ || ೪೫

ಕನಕಾಮತ್ರಂಗಳೊಳ್ ತೀವಿದ ಮಣಿಗಣಕರ್ಪೂರಕಸ್ತೂರಿಕೋಪಾ
ಯನಮಂ ದೇವೇಶದೇವೀಪ್ರತತಿಗೆ ಪದೆಪಿಂ ಲಕ್ಷ್ಮಣಾದೇವಿ ಭೂಭೃ
ದ್ವನಿತಾನೀಕಕ್ಕನೂನೋತ್ಸವಮೊದವೆ ಶಚೀದೇವಿಯೀವಾರ್ಪಿನೊಪ್ಪಂ
ಮನುಜರ್ಗಂ ಸಗ್ಗಿಗರ್ಗಂ ಸಮನಿಸಿತಿದಪೂರ್ವಂ ಮನಕ್ಕೆಂಬಗುರ್ವಂ || ೪೬

ಚಂ || ವಿರಚಿಸುವಳ್ ಸಮಂತುಚಿತಮಂಗಳಮಂ ಶಚಿ ನಾಕಿನಾಯಕಂ
ಪರಿವೆಸಗೆಯ್ವನುಬ್ಬರದ ನಿಬ್ಬಣಿಗರ್ ಸುರರಸ್ತುಕಾರದೊಳ್
ನೆರಪಿದ ವಸ್ತು ಕಲ್ಪಕುಜಪಲ್ಲವಪುಷ್ಪಫಳಾಳಿಯೆಂದೊಡಿಂ
ಪರಿಣಯನಪ್ರಮೋದಮದಮಾನುಷಮಲ್ಲವೆ ದೇವದೇವನಾ || ೪೭

ವ || ಆ ವಿವಾಹೋತ್ಸವಾನಂತರಂ ಮತ್ತೊಂದು ಶುಭದಿನಮುಹೂರ್ತದೊಳ್‌

ಕಂ || ಕಮಳಪ್ರಭೆಗೀಗಳೆ ಸವ
ತಿಮಾೞ್ಪೆನೆನ್ನಗ್ರತನಯನೊಳ್ ರಾಜ್ಯಶ್ರೀ
ರಮಣಿಯುಮಂ ನೆರೆಪುವೆನೆಂ
ಬ ಮಹೋದ್ಯೋಗಮನೆ ಮನಕೆ ತಂದು ನರೇಂದ್ರಂ || ೪೮

ಮ || ಸ್ರ || ಜನನಸ್ನಾನಕ್ಕಮಾಯ್ತಗ್ಗಳಮೆನೆ ಪರಮೋತ್ಸಾಹದಿಂ ಪೊಂಗಿ ಗಂಗಾ
ದಿನದೀತೋಯಂಗಳಿಂ ಮಂಗಳಪಟಹರವಂ ಪೊಣ್ಮೆದೇವಂಗೆ ತಾಂ ಮ
ಜ್ಜನಮಂ ಮುಂ ಮಾಡಿ ಸಿಂಹಾಸನದೊಳಿರಿಸಿ ಸಂಯೋಜಿತಾಶೇಷಸಾಮ್ರಾ
ಜ್ಯನಿಯೋಗಂ ಪಟ್ಟಮಂ ಕಟ್ಟಿದನಿರದೆ ಮಹಾಸೇನನಿಂದ್ರದ್ವಿತೀಯಂ || ೪೯

ವ || ಅಂತು ಜನಕನುಪರೋಧದಿಂದಾಧಿರಾಜ್ಯಸೌಖ್ಯಾಭಿಮುಖ್ಯಮಂ ತಳೆದ ನಿಜಪತಿಯ ಪದತಳಂಗಳಂ ಪ್ರಣಯಮಾನಪ್ರಸಾದನಸಮಯದೊಳ್‌ ಕಮಳಪ್ರಭಾಮಹಾದೇವಿಯು ತ್ತಂಸಕನಕಪದ್ಮಾಸನದೊಳ್ ವಿರಚಿಸಿಯುಂ ಆ ಮನೋಹರಿ ಮನೋಹರನಯನಪಾರಿ ವಂಗಳನನಂಗಕೇಳಿಯೊಳ್ ಲಾವಣ್ಯರಸಭರಿತಗಂಭೀರನಾಭೀಕೂಪದೊಳ್ ನೀಡುಮೋ ಲಾಡಿಸಿಯುಂ ಆ ವಿಳಾಸವತಿ ಜಗತ್ಪತಿಯ ಭುಜಭುಜಗಂಗಳಂ ಕೋಮಳಾಂಗಮಳಯ ರುಹಶಾಖೆಯಂ ಸುತ್ತಿ ಪತ್ತುವಿಡದಂತಾಗೆ ನಿಯಮಿಸಿಯುಂ ಆ ನವೀನಯೌವನಾಳಂ ಕಾರೆ ಸಹಜಸೌಂದರ್ಯಾಳಂಕಾರನ ವಿಶಾಳವಕ್ಷಃಪ್ರದೇಶಪದ್ಮಾವಸಥಮಂ ಸಮುತ್ತುಂಗ ಕುಚಯುಗರಥಾಂಗಮಿಥುನಕ್ಕೆ ಪೆರ್ಚಿದೞ್ಕಱಿನಿರ್ಕೆದಾಣಂಮಾಡಿಯುಂ ಆ ಮೃದುಮಧುರ ಭಾಷಿಣಿ ಗುಣಭೂಷಣನ ಕರ್ಣಯುಗ್ಮಮಂ ಸೌಹಾರ್ದ್ರವಚನಾನುವಿದ್ಧ ಸಂಭಾಷಣ ಮಣಿಮಯಾವತಂಸಗಳಿನಳಂಕರಿಸಿಯುಂ ಆ ಲಾವಣ್ಯರಸತರಂಗಿಣೀತರಂಗಭಂಗುರಭ್ರೂ ವಿಭ್ರಮೆ ವಿಗತಾಶೇಷವಸ್ತು ವಿಷಯಭ್ರಮನ ನಿರ್ಮಳಮನೋಮಹಾರ್ಣವಮನಾತ್ಮೀ ಯಗುಣಸಮಸ್ತವಸ್ತುನಿಕರಕ್ಕೆ ಸಲೆ ನೆಲೆಮಾಡಿಯುಂ ಸಮಸಮಾಯೋಗಸಂಭವಸುಖೋ ನ್ಮುಖರನೇಕದಿನಂಗಳಂ ನಿಮಿಷಮಾತ್ರಂಗಳಾಗಿ ಕಳಿಪುತ್ತುಮಿರೆಯಿರೆ-

ಚಂ || ಹಿಮಕಿರಣಂಗಮೊಂದಿದ ಲಸತ್ಕಳೆಗಂ ಪ್ರಕಟಪ್ರಭಾವಮ
ಪ್ಸಮೃತಮೆ ಪುಟ್ಟುವಂದದೆ ಜಗತ್ಪತಿಗಂ ಸತಿಗಂ ಧರಾಭರ
ಕ್ಷಮನೆನೆ ಪುಟ್ಟಿದಂ ಕ್ರಮಸಮಾಕೃತಿರೂಪವಿಳಾಸಯೌವನೋ
ದ್ಗಮನಭಿಮಾನಮೇರು ವರಚಂದ್ರಸಮಾಹ್ವಯನಂದು ನಂದನಂ || ೫೦

ವ || ಆ ಕುಮಾರಂಗೆ ಪರಮೇಶ್ವರಂ ಯುವೇಶ್ವರಪದವಿಯಂ ದಯೆಗೆಯ್ಯೆ

ಕಂ || ಜನಕಂಗೆ ವೃದ್ಧರಾಜತೆ
ತನಗಧಿರಾಜತೆ ಸುತಂಗೆ ಯುವರಾಜತೆಯಿಂ
ತನುರೂಪಮಾಗಿ ಸಮನಿಸೆ
ವಿನುತಜಗತ್ತ್ರಿತಯಮಾಯ್ತ ರಾಜ್ಯತ್ರಿತಯಂ || ೫೧

ಪ್ರಥಿತಾಮಳಚರಿತಂ ತ
ತ್ಪೃಥಿವೀಪತಿಯರಸುಗೆಯ್ಯೆ ಜನಮಾದುದು ಸ
ತ್ಪಥವರ್ತಿ ಯಥಾರಾಜಾ
ತಥಾಪ್ರಜಾ ಎಂಬ ನೀತಿಯಂ ನೆನೆಯಿಪವೋಲ್ || ೫೨

ಭೂತಾನವಕರಮಾದುದ
ಭೂತಾನವಕರಮುಮಾದುದಿಂತಿದು ಚಿತ್ರಂ
ನೀತಿಯುತಮಾದುದೆಂದುಮ
ನೀತಿಯುತಮುಮಾದುದಖಿಳಪೂಜ್ಯನ ರಾಜ್ಯಂ || ೫೩

ಪುಳಿನದೊಳೆ ವಿಯೋಗಂ ಕರಿ
ಯೊಳೆ ಪಾಂಶುಳಕೇಳಿ ಭೇರಿಯೊಳೆ ದಂಡಹತಂ
ಸಳಿಳಾಶಯದೊಳೆ ಕುರವಾ
ಕುಳತೆ ದಿಟಂ ನಿಂದುವಂದು ಪೊರ್ದದೆ ಜನಮಂ || ೫೪

ಚರರಿಲ್ಲದೆ ಪರನೃಪರಂ
ತರಂಗಳಂ ತಿಳಿದು ನೆಗೞ್ವ ಬಿನ್ನವಿಸದೊಡಂ
ಪರಿಜನದ ಮನಮನಱಿದೀ
ವರಸುತನಂ ತದ್ವಿವೇಕನಿಧಿಯೊಳೆ ಸಹಜಂ || ೫೫

ವ || ಮತ್ತಮಾ ಚಂದ್ರಪ್ರಭಾಧೀಶ್ವರನ ರಾಜ್ಯಚಂದ್ರಪ್ರಭಾಪ್ರಸರಂ ಕುರುಕುಳಗಗನತಳಮಂ ಬೆಳಗಿಯುಂ ಸದ್ಧರ್ಮವಾರ್ಧಿಯಂ ಪ್ರವರ್ಧಿಸಿಯುಂ ದುಷ್ಕೃತಾಂಧಕಾರಸಂದೋಹ ಮನದಿರ್ಪಿಯುಂ ಕುಮತಪಂಕೇಜಮಂ ಸಂಕೋಚಕ್ಕೆ ಸಲಿಸಿಯುಂ ಭವ್ಯಕುಮುದಸ ಮುದಯಮನುದ್ಬೋಧಿಸಿಯುಂ ಪರಚಕ್ರಚಕ್ರಾನೀಕಮಂ ವಿಘಟಿಸಿಯುಂ ಸೇವಕಚಕೋರ ನಿಕರಮಂ ತಣಿಪಿಯುಂ ಪ್ರಜಾನಿಕರಸಕಳೌಷಧಿಸಂಕುಳಮಂ ಸಫಳಂಮಾಡಿಯುಂ ಮಿತ್ರಪಾರ್ಥಿವಾಂತರಂಗಚಂದ್ರಕಾಂತಸಂತಾನಮಂ ಸಾರ್ದ್ರತೆಗೆ ಸಲಿಸಿಯುಂ ಇಂತ ವಿರುದ್ಧಮುಮತಿಪ್ರವೃದ್ಧಮುಮೆನಿಸಿ ಸಲಿಸುತ್ತುಮಿರೆ-