ಮ || ಸ್ರ || ಪರಮೇಶಂ ಜೀವಿತೇಶಂ ತಮಗೆ ದಿಟದಿನೆಂದುರ್ವೆ ಕಾಂತಾಜನಂ ಮ
ತ್ತರುಹಂ ರಾಜ್ಯಾರ್ಹನೆಂದೊಲ್ದೆಱಗೆ ಧರೆ ಜಗದ್ಬಂಧು ಮದ್ಬಂಧುವೆಂದೊಂ
ದಿರೆ ಹರ್ಷೋತ್ಕರ್ಷದೊಳ್‌ ಬಾಂಧವಸಮಿತಿ ಮನೋವೃತ್ತಿಗತ್ಯಂತಶೋಭಾ
ಕರಮಾಯ್ತಾಶ್ಚರ್ಯಲೀಲಾವಿಭವಮಭವಸಂಭಾವಿತಂ ರಾಜ್ಯಕಾಲಂ || ೫೬

ವ || ಅಂತಾಱುಲಕ್ಕೆಯುಮಯ್ವತ್ತು ಸಾಸಿರ ಪೂರ್ವಮುಮಿರ್ಪತ್ತು ನಾಲ್ಕು ಪೂರ್ವಾಂಗಮುಂ ರಾಜ್ಯಕಾಲಂ ಸಂದುದೆಂಬಂದಿಂಗದೊಂದುದೆವಸಮತಿ ಚಿತ್ರಕೂಟಕೋಟಾಕೋಟಿವಿಷ ಮಿತಪಯೋದಪಥಮಪ್ಪ ಪರಿಷನ್ಮಂಟಪದ ಮಧ್ಯದಲ್ಲಿ-

ಕಂ || ಹರಿಪೀಠಮನೀಶನಳಂ
ಕರಿಸಿದನುದಯಾದ್ರಿಯಂ ಸುಧಾಕರನೆಂತಂ
ತಿರೆ ನಿರ್ಮಳಾಂಬರಾಳಂ
ಕರಣಂ ಕಾಶ್ಮೀರಸಾರಸಂಧ್ಯಾರಾಗಂ || ೫೭

ತ್ರಿಭುವನಚೂಡಾಮಣಿಯ
ಪ್ಪಭವಂಗಾನಾದೆನಲ್ತೆ ಚೂಡಾಮಣಿಯೆಂ
ಬಭಿನವರಾಗೋದಯಮೆಂ
ಬ ಭಂಗಿಯಿಂ ಮಕುಟಮಾಲ್ಯಮಣಿರುಚಿಯೆಸೆಗುಂ || ೫೮

ಆಕಳಂಕನ ಸಹಜಚ್ಛಿ
ದ್ರಕರ್ಣಪಾಳಿಕೆಗಳಲ್ಲಿ ತೊಳಗುವ ಮಾಣಿ
ಕ್ಯಕನತ್ಕುಂಡಳಿರುಚಿ ಮುಖ
ಸಕಳೇಂದುಗೆ ಪಡೆದುದುದಯರಾಗಶ್ರೀಯಂ || ೫೯

ಐರಾವತಘನಕುಂಭಾ
ಕಾರಾಂಸಸ್ಥಳಿಗೆ ನಿಮಿರ್ದು ಪಸರಿಸೆ ಮಣಿಕೇ
ಯೂರಪ್ರಭೆಯಭಿನವಸಿಂ
ದೂರಾರುಣಕಾಂತಿಯೆನಿಸಿ ಸೊಗಯಿಸಿತಾಗಳ್‌ || ೬೦

ಜಗದಧಿಪತಿಯಗಲ್ದುರದೊಳ್
ಸೊಗಯಿಸುವ ಸಹಸ್ರಗುಚ್ಛಮಧ್ಯದ ಹರಿನೀ
ಳಗಭಸ್ತಿ ತಿಂಬೆ ನಾಭಿಗೆ
ಜಗುನೆಯ ಸುೞಿಯೊಪ್ಪಮಾದುದೊಚ್ಚತಮಾಗಳ್ || ೬೧

ಎರಡುಂ ಕೆಲದೊಳಮಿರ್ದಮ
ರರಮಣಿಯರ್ ಬೀಸುವಮಳಚಮರರುಹಂಗಳ್
ಪರಿಕಲಿಸೆ ಮೇಗೆ ಪೋಲ್ತಂ
ಶರದದ ಮುಗಿಲೆಱಪುದಾರತಾರಾಚಳಮಂ || ೬೨

ಕಮಳಪ್ರಭೆವೆರಸಾತ್ಮ
ಪ್ರಮದೆಯರಾಕಮಳೆವೆರಸು ಜಳದೇವಿಯರಾ
ದಮೆ ಬಳಸಿದಂದದಿರೆ ಸಿತ
ಕಮಳಾಕರಮಂ ಗುಣಾಕರಂ ನೆನೆಯಿಸಿದಂ || ೬೩

ಚರಮಾಂಗನಂಗಕಾಂತಿ
ಸ್ಫುರಿತಜ್ಯೋತ್ಸ್ನಾಪ್ರವಾಹದೊಳ್ ಮನದೊಲವಿಂ
ಪರಿವರಿಯಾಡಿದುದಂತಃ
ಪುರಾಂಗನಾನಯನಚಳಚಕೋರೀನಿಚಯಂ || ೬೪

ಆ ಪರಿಷಲ್ಲಕ್ಷ್ಮಿಯ ಹಾ
ರೋಪಮಮಾಗೆರಡು ಕೆಲದೊಳಂ ತರದಿಂದಂ
ಭೂಪಾಳಕರಿರೆ ಸಕಳಗು
ಣೋಪೇತಂ ನಡುವೆ ತರಳಮಣಿಗೆಣೆಯಾದಂ || ೬೫

ವ || ಅಂತುಭಯಪಾರ್ಶ್ವದೊಳಂ ಮಹಾಸೇನಮಹಾರಾಜನುಂ ವರಚಂದ್ರಕುಮಾರನುಂ ಮೊದಲಾಗೆ ಮೂರ್ಧಾಭಿಷಿಕ್ತಮಕುಟಬದ್ಧಮಹಾಸಾಮಂತಮಂತ್ರಿಮಹತ್ತರಾದಿಗಳ್ ಯಥೋಚಿತಾಸನಂಗಳೊಳಿರೆ-

ಕಂ || ಪರಮನ ದಯಾವಳೋಕನ
ವರಚಂದ್ರಿಕೆಯಲ್ಲಿ ಸಿರಿಯ ಪಿಡಿವಂದದೆ ಭೂ
ಪರ ಕರಕಮಳಂ ಮುಗಿದುವು
ಪರಿಗತಕಂಕಣರವಾಳಿಝಂಕರಣಂಗಳ್ || ೬೬

ವ || ಮತ್ತಂ-

ಕಂ || ಕವಿತಾಕೌಶಲಮಂ ಗಮ
ಕಿ………ಯಂ ವಾದಪಟುತೆಯಂ ವಾಗ್ಬಳಮಂ
ಕವಿಗಳ ವಾಗ್ಮಿಗಳ ಗಮಕಿ
……ಗಳ ನೆರವಿ ಮೆಱೆಯಲಿರ್ದತ್ತದಱೊಳ್‌ || ೬೭

ತೂರ್ಯತ್ರಿತಯದ ನಿಜಚಾ
ತುರ್ಯಮನಂತಲ್ಲಿ ಮೆಱೆದು ಮೆಚ್ಚಿಸುವೀತಾ
ತ್ಪರ್ಯದಿನಮರ್ತ್ಯಕುತಪಂ
ಪರ್ಯಾಯದಿನಿರ್ದುದಭವನಾಸ್ಥಾಯಿಕೆಯೊಳ್ || ೬೮

ಇರದೆ ನುಡಿಗೊರ್ಮೆ ಝಂಕರಿ
ಪರಸುಗಳ ನಿಯೋಗಮಂ ನಿವೇದಿಸುವ ಮಹ
ತ್ತರರ ಪೊಗೞ್ವರ್ಥಿಗಳ ಚ
ಪ್ಪರಿಸುವ ಪಡಿಯಱರ ನಿನದಮೊದವಿದುದಾಗಳ್ || ೬೯

ಮೃಗಮದದ ಹಿಮದ ಕುಂಕುಮ
ದಗುರುವ ಚಂದನದ ಸಾರಸೌರಭಮಂ ಬಾ
ರ್ತೆಗೆಯದೆ ದೇವನ ದಿವ್ಯಾಂ
ಗಗಂಧಮಂ ಬಳಸಿ ಸುೞಿದುದಳಿನಿಕುರುಂಬಂ || ೭೦

ಮ || ವಿ || ಜಗದೀಶಾಂಗಮಯೂಖಚಂದ್ರಿಕೆಯನಂದೊರ್ಮೊರ್ಮೆ ಮಿಶ್ರೀಭವ
ನ್ಮೃಗಭೂಚಂದನಪುಷ್ಪಸೌರಭಮನಂದೊರ್ಮೊರ್ಮೆ ಗೀರ್ವಾಣವಂ
ದಿಗಣಸ್ತೋತ್ರವಿಚಿತ್ರನಿಸ್ಸ್ವನಮನಂದೊರ್ಮೊರ್ಮೆ ಸಾಶ್ಚರ್ಯಮೇ
ನುಗುೞುತ್ತಿರ್ದುದೊ ತತ್ಸಭಾಸದನಮಾತ್ಮದ್ವಾರವಕ್ತ್ರಂಗಳಿಂ || ೭೧

ವ || ಅಂತು ಸಕಳಸಾಮ್ರಾಜ್ಯಲೀಲಾವಿಭವಕ್ಕಿದುವೆ ಸೀಮೆಯೆಂಬಂತೆಡ್ಡಮಾದ ಒಡ್ಡೋಲಗ ದೊಳಿರ್ಪನ್ನೆಗಂ-

|| ಉತ್ಸಾಹವೃತ್ತ ||
ಉಡುಗಿದುರದ ತೂಪ ಸಿರದ ಸೆರೆ ಪೊದೞ್ದ ಮೆಯ್ಯ ಕೋ
ಲ್ವಿಡಿದ ಕೆಯ್ಯ ತಲೆಯ ನರೆಯ ಮೊಗದ ತೆರೆಯ ಭಂಗಿ ಮು
ಪ್ಪಡಸಿದಂದಮಂ ಜಲಕ್ಕನಱಿಪೆ ಬಿಡದೆ ಪುಯ್ಯಲಂ
ಕುಡುತುಮೊರ್ವನೋಲಗಲಕ್ಕೆ ಬಂದನಂದನಿಂದ್ಯನಾ || ೭೨

ಕಂ || ಬಂದು ಪೊಡೆವಟ್ಟು ಬೞಿಕಿಂ
ತೆಂದಂ ನಿನಗಿಂದಿನಿರುಳೊಳಂತಕನಿಂದೆ
ಯ್ತಂದಪುದು ಬಾಧೆ ತಪ್ಪದಿ
ದೆಂದು ನಿಮಿತ್ತಜ್ಞನುಸಿರ್ದನಧಿಕಪ್ರಜ್ಞಂ || ೭೩

ವ || ಮತ್ತಂ-

ಕಂ || ಚೆಕ್ಕನೆ ಬಲ್ಲಿದರಂ ಮಱೆ
ವೊಕ್ಕೊಡದೋಸರಿಸಿ ಪೋಕುಮಲ್ಲದೆ ನೀನಿಂ
ತಕ್ಕಟ ಱಿಕ್ಕಟಮಿರ್ದೊಡೆ
ಪಕ್ಕಕ್ಕೊಳಗಪ್ಪೆ ಪಸಿದು ಮಸಗಿದ ಜವನಾ || ೭೪

ವ || ಎಂದಿದುವುಮಂ ಪೇೞ್ದೊಡದುಕಾರಣದಿನೇೞ್ತಂದೆಂ-

|| ಉತ್ಸಾಹವೃತ್ತ ||
ಅಂತಕಾಂತಕಂ ದಿಟಕ್ಕೆ ದೇವ ನೀನೆ ಭಾವಿಪಂ
ದಂತಱಿಂದೆ ಕಾವುದೆನ್ನನಾವ ತೆಱದೊಳಂ ಭಯ
ಭ್ರಾಂತನಂ ಬೞಿಕ್ಕಮೆಂತುಮಾಪದರ್ಥಯುಕ್ತರೊಳ್
ಶಾಂತಿಯಂ ಸಮಂತು ಮಾಡುವುದು ಗುಣಂ ಮಹತ್ತರಂ || ೭೫

ವ || ಎಂದು ನುಡಿದದೃಶ್ಯಮಪ್ಪುದುಂ ವಿಸ್ಮಯರಸೈಕಭಾಜನಂ ಸಭಾಜನಂ ದೇವಿದೇನೆಂಬುದಂ ಬೆಸಸಿಮೆನೆ ದರಸ್ಮಿತಾನನಂ ಜ್ಞಾನತ್ರಯನಿಧಾನನಿಂತೆಂದಂ-

ಕಂ || ಧರ್ಮರುಚಿಯೆಂಬನಾ ಸೌ
ಧರ್ಮೇಂದ್ರನ ಬೆಸದಿನೀ ಜರಾಜರ್ಜರಮಂ
ನಿರ್ಮಿಸಿ ಶರೀರಮಂ ತಳೆ
ದೊರ್ಮೊದಲೊಳೆ ಮೃತ್ಯುಭೀತನಾದನಮರ್ತ್ಯಂ || ೭೬

ಬಂದಂ ವಿಷಯವಿರಕ್ತತೆ
ಯಂ ದಿಟದಿಂದೆವಗೆ ಮಾೞ್ಪ ಬಗೆ ಕೆಯ್ಮಿಗೆ ತಾ
ನೆಂದವಧಿಬೋಧದಿಂದಱಿ
ದಂದು ಸಭಾಸದರ್ಗೆ ಪೇೞ್ದು ಕಳಿಪಿದನವರಂ || ೭೭

ವ || ಅಂತು ವಿಸರ್ಜಿತಸಭಾಸದನನುಂ ಪರಮವೈರಾಗ್ಯಾಸ್ಪದನುಮಾಗಿ ತನ್ನೊಳಿಂತೆಂದಂ-

ಕಂ || ಭೋಗಾನುಭವಕ್ಷಮತೆಯ
ದಾಗದು ಜರಯಿಂದೆ ತನಗೆ ಮಱುಕಂ ಮನದಿಂ
ಪೋಗದು ನೆನೆಯದು ಜವನು
ದ್ವೇಗಮುಮಂ ರಾಗಿ ಜನದ ಗತಿವಿಪರೀತಂ || ೭೮

ವಳಿ ತೆರೆ ಪಳಿತಂ ನೊರೆಯು
ಚ್ಚಳಿಪ ಘನಶ್ವಾಸಮದುವೆ ಘೋಷಂ ಜರೆ ತಾಂ
ಜಳನಿಧಿಯೆನೆ ಯಮಬಡವಾ
ನಳಂಗೆ ಜೀವನಮೆ ಪೀರ್ವ ಜೀವನಮಲ್ತೇ || ೭೯

ತನಗಂ ಗೌರವಕಂ ಸಂ
ಹನನಕ್ಕಂ ಸಾಧುವೃತ್ತಿಗಂ ವಿಗ್ರಹಕಂ
ನೆನೆವೊಡನುಗ್ರಹಕಂ ಮೇ
ಳನಮೆತ್ತಣದೊಡಲೊಳೊಳ್ಪನಱಸುವರಜ್ಞರ್ || ೮೦

ಪಂಚೇಂದ್ರಿಯ ವಶದಿಂದಂ
ಪಂಚಜನಂ ಜನ್ಮಜಳಧಿಯೊಳ್ ಜನನಮುಮಂ
ಪಂಚತೆಯುಮನೆಯ್ದುತ್ತುಂ
ಪಂಚ ಮಗತಿಪಥಮನೆಂತುಮೆಯ್ದದೆ ಪೋಕುಂ || ೮೧

ಪರಿಜನಫಳವತ್ ಕ್ಷೇತ್ರೋ
ತ್ಕರಬಂಧುಸಮೂಹಭವನಮಹಿಳಾವಳಿಯೆಂ
ಬುರುತರ ಪವರ್ಗಚಿಂತಾ
ಪರಿಗತನಪವರ್ಗಚಿಂತೆಯಂ ಮಾಡುಗುಮೇ || ೮೨

ಆವುದಱೊಳತಿಪ್ರಿಯಮಂ
ಜೀವಂ ಮಾಡಿದಪುದೊಳ್ಳಿತೆಂದಱಿಯದೆ ಮ
ತ್ತಾವಸ್ತುವೆ ತನ್ನಯ ದುಃ
ಖಾವನಿಜದ ಬೀಜಮಕ್ಕುಮಿದು ನಿರ್ವ್ಶಾಜಂ || ೮೩

|| ತ್ರಿವದಿ ||
ಕರ್ಮರಾಜನವಿಡಿದು ಧಾರ್ಮಿಕಂಗೊಳಗಹರು
ಧರ್ಮರಾಜನನಗಲ್ದು ಧರೆಯಲ್ಲಿ ಯುಕ್ತಮದ
ಧರ್ಮಕ್ಕೆ ಕುದಿವರಿದು ಚಿತ್ರಂ || ೮೪

ನರರ್ಗೆ ಭಾವಿಸೆ ಪೋತಪರಿಕರಮೆನಿತು ತಾಂ
ಪಿರಿದಾದುದನಿತೆ ಮುೞುಗುಗುಂ ಜನ್ಮಸಾ
ಗರದೊಳಗಿಂತಿದು ಚಿತ್ರಂ || ೮೫

ಕಂ || ಓವೋವೊ ಜನ್ಮಜಾಳಂ
ಭಾವಿಪೊಡೇಜನರಿದೊ ಸಿಲ್ಕಿ ಸಿಡಿಮಿಡಿಗೊಳ್ವರ್
ಧೀವರರುಮೆಂದೊಡೀಜಡ
ಜೀವಂಗಳ್ ತೊಡರ್ದು ಮಿಡುಕುತಿರ್ಪುದು ಪಿರಿದೇ || ೮೬

ನೆರಪಿದ ಪುಣ್ಯದ ಪಾಪದ
ಪಿರಪಾಕಮೆ ತಮಗೆ ತವದ ಪಾಥೇಯಮದಾ
ಗಿರೆ ತಿರಿವುವು ಜೀವಂ ಸಂ
ಸರಣಾಟವಿಯೊಳಗೆ ತಪ್ಪಿ ನಿರ್ವೃತಿಪಥಮಂ || ೮೭

ಶಾ || ವ್ಯಾಧಿವ್ಯಾಧಭಯಂಕರಂ ಯಮದವಜ್ಜಾಳಪ್ರತಾಪಾದ್ಭುತಂ
ಕ್ರೋಧಾಶೀವಿಷಭೀಷಣಂ ಸ್ಮರಮೃಗಾರಿಕ್ರೂರಮನ್ಯೂನದು
ರ್ಬೋಧಾಗಾಧಪುರಾಣಕೂಪವಿಷಮಂ ತಾನೆಂದೊಡೇನುಂಟೆ ನಿ
ರ್ಬಾಧಾವಸ್ಥಿತಿ ದೇಹಿಗಳ್ಗೆ ದಿಟದಿಂ ಸಂಸಾರಕಾಂತಾರದೊಳ್ || ೮೮

ಕಂ || ಕೞಿದ ಭವನಿಗಳದೊಳ್‌ ತೊಡ
ರ್ದೞಿಮಾನಸನಿರ್ಕುಮಧಿಕನಿರ್ಕುಮೆ ಪಿರಿದುಂ
ಪುೞು ನೆಯ್ದ ನೆಯ್ಗೆಯೊಳ್ ಬಲ
ವೞಿದು ನೊೞಂ ಸಿಲ್ಕುಗುಂ ಗಜಂ ಸಿಲ್ಕುಗುಮೇ || ೮೯

ಉ || ಪೊಂದುವ ಪುಟ್ಟುವಾರ್ತ ಪರಿಣಾಮದೆ ವರ್ತಿಸುತಿರ್ಪ ದಂದುಗಂ
ಮಾಂದುದಣಂ ಚತುರ್ಗತಿಗಳೊಳ್‌ ಸುೞಿಗಾಳಿಯ ತೂಲದಂತೆ ಜ
ಕ್ಕಂದೊಳದಂತೆ ಱೂಟಣದ ಗುಂಡಿಗೆಯಂತೆ ಕುಳಾಳಚಕ್ರದಂ
ತಿಂದುವರಂ ತೊೞಲ್ತರುತುಮಿರ್ದುಗೆ ಸಾಲದೆ ಕರ್ಮಯೋಗದಿಂ || ೯೦

ವ || ಎಂದು ನಿಶ್ರೇಯಸಶ್ರೀಸಮಾಶ್ಲೇಷಾಭಿಲಾಷನಾಗಿರ್ಪುದುಂ ಪ್ರಾಕ್ತನಜನ್ಮಪರಿಚಿತಾಗಮ ಸಾರಸರ್ವಸ್ವನಿರ್ವಿಕಲ್ಪರುಂ ತೀರ್ಥಕರಪರಿನಿಷ್ಕ್ರಮಣಸಮಯಮಧುಸಮಯಪ್ರತಿಬೋ ಧನವಚನಚತುರಕಳಕಂಠಕಲ್ಪರುಂ ಪ್ರಭೂತಶುಭಭಾವನಾನಲ್ಪಾಕಲ್ಪರುಂ ನಿರಂತರ ನಿವಾಸೀಕೃತಬ್ರಹ್ಮಕಲ್ಪರುಮಪ್ಪ ಸಾರಸ್ವತಾದಿತ್ಯವಹ್ನ್ಯರುಣಗರ್ದತೋಯತುಷಿತಾಭ್ಯಾ ಬೋಧಾರಿಷ್ಠರೆಂಬ ಲೋಕಾಂತಿಕದೇವರಣ್ಬರುಂ ಬಂದು-

ಕಂ || ಸುರುಚಿರಮಣಿಮಯಜಿನಬಿಂ
ಬರಾಜಿತೋತ್ತುಂಗಮಕುಟನಿಕಟರ್ ನಲವಿಂ
ಪರಮನ ಚರಣಾಂಬುಜಮಂ
ದರದಳಿತ ನಮೇರುಕುಸುಮದಿಂ ಪೂಜಿಸಿದರ್ || ೯೧

ವ || ಅನಂತರಂ-

ಕಂ || ಈ ಮತಿಯೀ ಸಂಸಾರ
ವ್ಯಾಮೋಹವಿರಕ್ತಿಯೀ ತಪಶ್ಶ್ರೀರತಿ ಮ
ತ್ತೀ ಮುಕ್ತಿಗಮನಶಕ್ತಿ ಮ
ಹಾಮಹಿಮ ಪೆಱಂಗಿವುಂಟೆ ನಿನ್ನೊಳೆ ಸಾಜಂ || ೯೨

ಅಕ್ಷಯಸುಖಮನುಪಾರ್ಜಿಪು
ದೀ ಕ್ಷಿತಿಸುಖಮಂ ವಿಸರ್ಜಿಪುದು ನೀಮೆಂದೀ
ಪಕ್ಷದೊಳೇಂ ತತ್ತನ್ನಾ
ಮಾಕ್ಷರಮಱಿಪವೆ ಗುಣಾಗುಣಂಗಳನವಱೂ || ೯೩

ವ || ಅದುಕಾರಣದಿಂ-

ಕಂ || ಅಷ್ಟಮತೀರ್ಥಕರತ್ವಮ
ನಷ್ಟಮಹಾಪ್ರಾತಿಹಾರ್ಯವಿಭವಮನೊಳಕೆ
ಯ್ದಷ್ಟವಿಧಕರ್ಮಜಯದಿಂ
ದಷ್ಟಮಮಹಿಗೆಯ್ದಿ ತಳೆ ಗುಣಾಷ್ಟಕದೊಳ್ಪಂ || ೯೪

ವ || ಮತ್ತಂ-

ಚಂ || ಇರದೆ ಸುಪಾರ್ಶ್ವತೀರ್ಥಕರರಿಂ ಬೞಿಕಿತ್ತಲಿನಿತ್ತು ಕಾಲಮಂ
ತರಿಸಿದ ಧರ್ಮತೀರ್ಥಪರಿವರ್ತನಮಂ ಪೊಸತಾಗಿ ಮಾಡಿ ವಾ
ಕ್ಷರಿಕರದಿಂದೆ ಭವ್ಯಜನಮಂ ತಣಿವೆಯ್ದಿಸಿ ತೀರ್ಥಕೃತ್ತ್ವಮಂ
ಪರಮಮಹತ್ವಮಂ ನೆಱಪಲೀ ಪದನಲ್ತೆ ಪದಂ ಗುಣಾಸ್ಪದಂ || ೯೫

ಕಂ || ದೇವ ಭವದ್ವಿಧರಿಂ ಮು
ನ್ನಾವಗಮಱಿದುದನೆ ನಿಮಗೆ ಮಾತನಿದಂ ಪ್ರ
ಸ್ತಾವಿಸಿದೆವೀಗಳಂಬುಧಿ
ಗೀವಂತೆ ತದಂಬುವಿಂದಮರ್ಘ್ಯಾಂಜಳಿಯಂ || ೯೬

ವ || ಮತ್ತಂ-

ಸಹಜಸಮಗ್ರಬೋಧನಿಧಿಯಂ ಚರಮಾಂಗನನಾತ್ತನಿರ್ವೃತಿ
ಸ್ಪೃಹನನದೂರಸಂಸರಣವಾರಿಧಿತೀರನನೇಂ ಪ್ರಬೋಧಿಪಾ
ಗ್ರಹಮೆಮಗುಂಟೆ ನಿನ್ನ ಪರಿನಿಷ್ಕ್ರಮಣೋದ್ಯಮಮಂ ಜಗತ್ತ್ರಯೀ
ಮಹಿತಮನಾಮಭೀಕ್ಷಿಸಿ ಕೃತಾರ್ಥರೆನಿಪ್ಪುದಿದೊಂದೆ ಸಾಲದೇ || ೯೭

ವ || ಎಂದವರ್ ಪ್ರತಿಬೋಧಿಸಿ ನಿಜನಿವಾಸಕ್ಕೆ ಪೋಗಲೊಡಂ-

ಕಂ || ಕರೆದಾಗಳ್ ಜನನೀಜನ
ಕರನಾಪ್ತರನಱಿಪಿ ನಿಜಮನೋರಥಮಂ ತ
ತ್ಪರಿನಿಷ್ಕ್ರಮಣಮನಿತ್ತಂ
ವರಚಂದ್ರಸುತಂಗೆ ರಾಜ್ಯಮಂ ಸಕಳೇಜ್ಯಂ || ೯೮

ವ || ಅನ್ನೆಗಮವಧಿಬೋಧದಿಂ ಪರಿನಿಷ್ಕ್ರಮಣಕಲ್ಯಾಣಮನಱಿದು-

ಮ || ವಿ || ದಿವಿಜೇಂದ್ರಂ ಪರಿವೇಷ್ಟಿತತ್ರಿದಶಬೃಂದಂ ಕಲ್ಪವಲ್ಲೀವನೋ
ದ್ಭವಸತ್ಪುಷ್ಪಫಳಾದಿಮಾಂಗಳಿಕವಸ್ತುನ್ಯಸ್ತಹಸ್ತಾಪ್ಸರೋ
ನಿವಹಂ ದುಂದುಭಿಕಂಬುಕಾಹಳಮಿಳತ್ಕೋಳಾಹಳವ್ಯಾಪ್ತದಿ
ಗ್ವಿವರಂ ಬೇಗದೆ ಬಂದು ಚಂದ್ರಪುರಮಂ ಪೊಕ್ಕಂ ಮಹಾನಂದದಿಂ || ೯೯

ವ || ಅನಂತರಂ ಪರಿತ್ಯಕ್ತರಾಜ್ಯಂಗೆ ತಪೋರಜ್ಯಾಭಿಷೇಕಮನನೇಕತೀರ್ಥಜಲಂಗಳಿಂ ತೀರ್ಥ ನಾಥಂಗೆ ಮಾಡಿ ದೇವಾಂಗವಸ್ತ್ರ ಹರಿಚಂದನಾನುಲೇಪನ ಪಾರಿಜಾತಕುಸುಮದಾಮೇಂದ್ರ ಚ್ಛಂದಾದಿಭೂಷಣಂಗಳಿನಳಂಕರಿಸಿ ಸುರಶಿಲ್ಪಿಗಳಿಂ ಮುನ್ನಮೆ ವಿಚಿತ್ರಮಾಗಿ ನಿರ್ಮಿ ಸಿರ್ದುದಂ ತಂದವಟಯ್ಸುವುದುಂ ಪರಮಪದವೀಪ್ರಾಸಾದಪ್ರಥಮಸೋಪಾನಮನೇ ಱುವಂತೆ-

ಚಂ || ಸಿವಿಗೆಯನೇಱೆ ರತ್ನಮಯಮಂ ವಿಮಳಾಹ್ವಯಮಂ ಮಹೀಶರು
ತ್ಸವಯುತರೊಯ್ದರೇೞಡಿಯನತ್ತಲನಿತ್ತಡಿಯಂ ವಿಯಚ್ಚರರ್
ಸವಿಭವರೊಯ್ದರತ್ತಲಖಿಳಾಮರರುಂ ಮುದದೊಯ್ದರತ್ತಮ
ತ್ತವಯವದೊಯ್ದರಂದಭವನಂ ತಳೆದಿಂದ್ರರದೊಂದು ಲೀಲೆಯಿಂ || ೧೦೦

ವ || ಆ ಸಮಯದೊಳ್‌

ಉ || ನೆಟ್ಟನೆ ಪೇೞ್ದು ತನ್ನಯ ಮನೋಗತಮಂ ಜನಕಂಗೆ ಪಟ್ಟಮಂ
ಕಟ್ಟಿ ಸುತಂಗೆ ರಾಜ್ಯಭರಮಂ ವಿನಿಯೋಜಿಸಿ ಕೊಟ್ಟು ತಾಂ ತಪಂ
ಬಟ್ಟಪೆನೆಂದು ಪೋದನೆನಗಿಂ ಪೆಱರಾರ್ ಸರಣೆಂದು ನೊಂದು ಬಾ
ಯ್ವಿಟ್ಟು ಪಲುಂಬಿ ಪಂಬಲಿಸಿದಳ್ ಕಮಳಪ್ರಭೆಯಾತ್ಮನಾಥನಂ || ೧೦೧

ಮ || ಸ್ರ || ಸುಮನರ್ ಗರ್ಭಾವತಾರಂ ಮೊದಲೆನೆ ಬಿಡದಾರಾಧಿಸುತ್ತಿರ್ದಪರ್ ನ
ಮ್ಮ ಮಗಂ ಲೋಕತ್ರಯಾಧೀಶ್ವರಪದವಿಗೆ ಸಂದಪ್ಪನೆಂದಲ್ತೆ ನಮ್ಮಿಂ
ದಮಗಲ್ದಿರ್ದಪ್ಪನೆಂಬುಮ್ಮಳಮದು ನಿಮಗಿನ್ನೇಕೆ ತಚ್ಛೇಷಕಲ್ಯಾ
ಣಮಹೋತ್ಸಾಹಂಗಳಂ ನೋಡಿಯೆ ಪದೆವೆರ್ದೆಯಂ ಕೂಡೆ ಸಂತೈಸುತಿರ್ಪರ್ || ೧೦೨

ವ || ಎಂದು ಮಹಾಸೇನಮಹೀಭುಜನುಂ ಲಕ್ಷ್ಮಣಾಮಹಾದೇವಿಯುಂ ತಮ್ಮೊಳ್ ನುಡಿಯುತ್ತುಮಿರ್ದರ್ ಇತ್ತಲ್-

ಮ || ಸ್ರ || ಸುರಶೈಳಕ್ಕೊಯ್ದರಂದರ್ಭಕನನೆ ಭರದಿಂ ದೇವನಂ ದೇವರಾಜಂ
ಪಿರಿದುಂ ಕೆಯ್ಯಂಟಲಿನ್ನಿತ್ತಪನೆ ನಮಗೆ ನಾವೆಲ್ಲಮುಂ ನಿಚ್ಚಲುಂ ತ
ಚ್ಚರಣಾಂಭೋಜಾತಸೇವಾಸುಖಮನನುಭವಿಪ್ಪೊಂದು ಸೈಪಿಂಗೆ ಪೋಪಾಂ
ತರವಿಂದಿಂದಾದುದಕ್ಕುಂ ಧರೆಗಮನಿತೆಯಕ್ಕುಂ ಸ್ವರಾಜನ್ವತಿತ್ವಂ || ೧೦೩

ವ || ಅಂತು ಪೌರಜನಂಗಳೋರೊರ್ವರೊಳುಸಿರ್ದರ್ ಅನ್ನೆಗಂ ಶುಭಂಕರೋದ್ಯಾನಮನೆಯ್ದಿ ಸಿವಿಗೆಯಿಂದಮಿೞಿಪಿ ತನ್ಮಧ್ಯದೊಳ್ ವಿಶಾಳಶಶಿಕಾಂತಶಿಳಾತಳಮನೊಳಗುಮಾಡಿ ಮುನ್ನಮೆ ಸಮೆದಿರ್ದ-

ಕಂ || ದ್ವಾರಚತುಷ್ಕಾನ್ವಿತಮಂ
ಸಾರಮಣಿದ್ವಾರಬಂಧಬಂಧುರಮಂ ವಿ
ಸ್ತಾರಿತನಮೇರುಪಲ್ಲವ
ತೋರಣಮಂ ಚಳಿತಧವಳಕೇತನಪಟಮಂ || ೧೦೪

ಕಾಂತಚ್ಛದವೃತಮಂ ತ
ತ್ಪ್ರಾಂತರಚಿತಮಣಿವಿಳಾಸಮಂ ರಸಚಿತ್ರಾ
ಕ್ರಾಂತಸ್ತಂಭೋತ್ಕರಮಂ
ಸಂತಾನಕಸತ್ಫಳಾಳಿಭೃತನವಪದಮಂ || ೧೦೫

ನವರತ್ನವರ್ಣಪೂರಮ
ನವಿರಳಕರ್ಪೂರಚೂರ್ಣಸಂಪಾದಿತ ರಂ
ಗವಲಿವಿರಾಜಿತಮಂ ನಯ
ನವಿನೋದಾಗರಮೆನಿಪ್ಪ ಪಟಮಂಡಪಮಂ || ೧೦೬

ವ || ಸೌಧರ್ಮೇಂದ್ರದತ್ತಹಸ್ತಾವಳಂಬನೊಳಪೊಕ್ಕು-

ಕಂ || ಧೃತಮಕುಟಕುಂಡಳಾಂಗದ
ಶತಗುಚ್ಛಕಟಕನಿಕಾಯಮಂ ತಳೆದು ಸಿತ
ದ್ಯುತಿಸೂರ್ಯಗ್ರಹನಕ್ಷ
ತ್ರತಾರೆಗಳ್‌ ಬಳಸಿದಮರಗಿರಿಯಂ ಪೋಲ್ತಂ || ೧೦೭

ವ || ತತ್ಸಮಯದೊಳ್‌

ಕಂ || ಸುರರ ಕಳಕಳಮನುಪಸಂ
ಹರಿಸುತ್ತುಂ ಮಂಗಳೋಪಕರಣಂಗಳನೋ
ಸರಿಸುತ್ತುಂ ಪಡಿಯಱನುಂ
ಪರಿಚಾರಕನುಂ ದಲೆನಿಸಿದಂ ಸೌಧರ್ಮಂ || ೧೦೮

ವ || ಅನಂತರಂ ಬಿತ್ತರಿಸಿದ ಮುತ್ತಿನ ಚೌಕದೊಳಗಣತಿಪ್ರಶಸ್ತಸಂಸ್ತರಣದೊಳ್ ಪರಿಹೃತ ಪರಿಧಾನನುಂ ಪರ್ಯಂಕಾಸನಾಸೀನನುಮುದೀಚೇದಿಶಾಭಿಮುಖನುಮಾಗಿ-

ಕಂ || ಶುಭಪರಿಣತೆಯಂ ತಳೆದುೞಿ
ದುಭಯಪರಿಗ್ರಹಮನಖಿಳಸತ್ವಂಗಳೊಳಂ
ಪ್ರಭವಿಸೆ ಸಮಭಾವನೆ ತನ
ಗಭಿಮತದೀಕ್ಷಾಗ್ರಹಂ ತ್ರಿಸಾಕ್ಷಿಕನಾದಂ || ೧೦೯

ವ || ಆಗಿ-

ಕಂ || ಇರದೆ ನಮಸ್ಸಿದ್ಧೇಭ್ಯ
ಸ್ಸ್ವರಮಾಸ್ಯದಿನೊಗೆಯೆ ತನ್ನ ಕೇಶೋತ್ಕರಮಂ
ಪರಮಂ ಪಂಚೇಂದ್ರಿಯಮೂ
ಲರಾಜಿಯೆನೆ ಪಂಚಮುಷ್ಟಿಯಿಂದದೆ ಕಿೞ್ತಂ || ೧೧೦

ಸದಭಿಷ್ಟುತಂಗೆ ಸಮನಿಸಿ
ದುದು ವಿಶ್ರುತಪುಷ್ಯಮಾಸದೊಳ್ ನುತಸಿತಪ
ಕ್ಷದೊಳೆಸೆವೇಕಾದಶಿಯೊಳ್‌
ವಿದಿತಾನೂರಾಧೆಯೊಳ್‌ ತಪಶ್ಶ್ರೀಯೋಗಂ || ೧೧೧

ಉದಯಿಸಿತು ಕೇವಲಜ್ಞಾ
ನದ ಮುಂಬಿದು ನೋೞ್ಪೊಡೆಂಬಿನಂ ತಪಮಂ ಕೊ
ಳ್ವುದುಮೊಡನೆ ಮನಃಪರ್ಯಯ
ಮುದಾತ್ತಮನನೆನಿಪ ತನ್ಮುನೀಂದ್ರೋತ್ತಮನೊಳ್ || ೧೧೨

ವ || ಆಗಳಮರಪತಿಮುಖಸಮುದ್ಭೂತ ಜಯಜಯಧ್ವಾನದೊಡನೆ-

ಕಂ || ಸುರವಶ್ಯಕಂಠಿಕಾ ಗೀ
ತರವಂ ಗೀರ್ವಾಣವಾದಕಾತೋದ್ಯಭವ
ಸ್ವರಮಮರನರ್ತಕೀನೂ
ಪುರನಿನದಂ ಪೊಣ್ಮಿದತ್ತು ದೆಸೆದೆಸೆಗಳೊಳಂ || ೧೧೩

ಪರಮಂ ಪರಿಹರಿಸಿದಳಂ
ಕರಣಾಂಬರಕುಸುಮಮಾಳೆಗಳನಮರರ್ ಬಿ
ತ್ತರದಿಂದೆ ತೊಟ್ಟುಮುಟ್ಟುಂ
ಕಿರೀಟದೊಳ್ ತಳೆದುಮೇಂ ಮನಂಪೆರ್ಚಿದರೋ || ೧೧೪

ವ || ತತ್ಸಮಯದೊಳಮರಪತಿ ಜಗತ್ಪತಿಯ ಮಧುಕರನೀಳಕುಂತಳಪ್ರಪಂಚಮಂ ಪಂಚರತ್ನ ಪಟಳಕದೊಳೆ ತಳೆದೊಯ್ದು ಪಂಚಪಯೋರಾಶಿಯೊಳ್ ಪಂಚಮಹಾಶಬ್ದದೊಡನೆ ಪಸರಿಸಲೊಡಂ-

ಚಂ || ವರಜನನಾಭಿಷೇಕದೊಳೊಡರ್ಚಿತೆ ಮತ್ಪಯಸಕ್ಕೆ ಮುಂ ಜಗ
ದ್ಗುರುವ ಶಿರೋಜಸಂಗತಿಯನೀ ಪರಿನಿಷ್ಕ್ರಮಣಪ್ರಮೋದದೊಳ್
ದೊರೆಕೊಳಿಸಿತ್ತೆ ಮುತ್ತುೞಿದುದರ್ಕೆ ಭವತ್ಕೃತದಿಂ ಪವಿತ್ರತಾ
ಪರಿಗತನಾದೆನೆಂದು ಹರಿಗೆಂಬವೊಲಾದುದು ಘೂರ್ಣಿತಾರ್ಣವಂ || ೧೧೫

ವ || ಸಮನಂತರಂ ಮಗುಳ್ದು ಬಂದು-

ಮ || ವಿ || ಬಗೆದುತ್ಸಾಹದೆ ದೇವತೂರ್ಯದ ಲಯಕ್ಕೆರ್ದಾಡಿಯುಂ ಪಾಡಿಯುಂ
ಪೊಗೞ್ದುಂ ಮಾಣದೆ ಮತ್ತೆ ಮೂಮೆ ಬಲವಂದುಂ ದಿವ್ಯಸಂಸೇವ್ಯವ
ಸ್ತುಗಳಿಂದರ್ಚಿಸಿಯುಂ ಪದಕ್ಕೆಱಗಿಯುಂ ದೇವೇಂದ್ರನತ್ಯಂತಭ
ಕ್ತಿಗುಣಪ್ರೇರಿತಚಿತ್ತವೃತ್ತಿ ಮೆಱೆದಂ ಯೋಗೀಂದ್ರಕಲ್ಯಾಣಮಂ || ೧೧೬

ವ || ಅಲ್ಲಿಂ ಬೞಿಯಂ-

ಮ || ಸ್ರ || ಮುನಿಪಾದದ್ವಂದ್ವಮಂ ಪೂಜಿಸಿ ನಡೆದು ನಭಶ್ಚಕ್ರದೊಳ್ ನಿಂದು ತದ್ಭಾ
ವನರಂ ಜ್ಯೋತಿಷ್ಕರಂ ವ್ಯಂತರರನುಚಿತದಿಂ ಪೋಗವೇೞ್ದಾವಗಂ ದೇ
ವನಿಕಾಯಂ ತನ್ನನೆತ್ತಂ ಬಳಸಿ ಬರೆ ನಿಜಾವಾಸಮಂ ಪೋಗಿ ಪೊಕ್ಕಂ
ಜಿನಭಕ್ತಿಕ್ರೀಡದಾಮಂ ಚುತರಜನಮನೋವ್ಯೋಮಪೀಯೂಷದಾಮಂ || ೧೧೭

ಗದ್ಯಂ
ಇದು ಪರಮಪುರುನ್ನಾಥಕುಲಕುಭೃತ್ಸಮುದ್ಭೂತಪ್ರವಚನಸರಿತ್ಸರಿನ್ನಾಥ
ಶ್ರುತಕೀರ್ತಿತ್ರೈವಿದ್ಯಾಚಕ್ರವರ್ತಿ ಪದಪದ್ಮನಿಧಾನದೀಪವರ್ತಿ
ಶ್ರೀಮದಗ್ಗಳದೇವ
ವಿರಚಿತಮಪ್ಪ
ಚಂದ್ರಪ್ರಭಪುರಾಣದೊಳ್‌
ಪರಿನಿಷ್ಕ್ರಮಣಕಲ್ಯಾಣಂ
ತ್ರಯೋದಶಾಶ್ವಾಸಂ