ಕಂ || ಶ್ರೀಮಚ್ಚಂದ್ರಪ್ರಭವಿಭು
ಭೂಮೀಶಸಹಸ್ರಸಂಯುತಂ ವಿಮಳತಪ
ಶ್ಶ್ರೀಮಂಡಿತನಾದಂ ನಿ
ಸ್ಸೀಮಗುಣಂ ಜೈನಜನಮನೋಹರಚರಿತಂ || ೧

ಕೈಯಿಕ್ಕಿ ಪರಮಪದವಿಗೆ
ಕೈಯಿಕ್ಕಿದೆನೆಂಬ ತೆಱದಿನಿರ್ದು ಬೞಿಕ್ಕಂ
ಕೈಯೆತ್ತಿದನಖಿಳಜನಂ
ಕೈಯೆತ್ತಿ ನಿರೀಹವೃತ್ತಿಯಂ ಪೊಗೞ್ವೆನೆಗಂ || ೨

ವ || ಅಂತನುಷ್ಠಿತಷಷ್ಟೋಪವಾಸಂ ಚತುರ್ಥದಿನದೊಳ್ ಕೈಯೆತ್ತಿಕೊಂಡು ದುರ್ಧರತಪೋ ನಿಧಾನಸಾಧಕತಮಶರೀರರಕ್ಷಣನಿಮಿತ್ತಮುಂ ಷಟ್ಚತ್ವಾರಿಂಶದ್ದೋಷದೂರಮುಂ ನವ ಕೋಟಿಗುಣಪರಿಶುದ್ಧಮುಂ ದಾನಮಾರ್ಗದೀಪಪ್ರಭಾವನಾರ್ಥಮುಮಾಗಿ-

ಮ || ವಿ || ಕ್ರಮಿವಿಕ್ಷೇಪಮಹಾಕೃತದ್ರುತವಿಳಂಬಂ ದೋರ್ಯುಗಂ ದೋಳನೋ
ದ್ಯಮದೂರಂ ನಯನಂ ಯುಗಪ್ರಮಿತಮಾರ್ಗಾಳೋಕನಾಸಕ್ತಮೊ
ಪ್ಪೆ ಮಹೀಚಕ್ರಮನಂಘ್ರಿಪಂಕಜರಜಂಗಳ್ ನೀರಜಂಮಾಡೆ ನಿ
ರ್ಮಮನೀರ್ಯಾಪರಿಶುದ್ಧಿವೆತ್ತು ತಳರ್ದಂ ಸಾಶ್ಚರ್ಯಚರ್ಯಾರ್ಥದಿಂ || ೩

ವ || ಅಂತು ತಳರ್ದು ನಳಿನಪುರಮಂ ಪೊಕ್ಕು ತೂರ್ಯತ್ರಯಪ್ರವರ್ತನಾನಾಥಪ್ರಸೂತಿಕಾ ತಿಥಿದೀನದಾನಶಾಳಾಕುಕರ್ಮಕಾಮುಕೋದ್ವಾಹಾದಿಗೇಹಂಗಳಂ ಪರಿಹರಿಸುತ್ತುಮುತ್ತ ಮಮಧ್ಯಮಜಘನ್ಯಯೋಗ್ಯಾವಾಸಂಗಳಂ ಲಾಭಾಲಾಭಮಾನಾವಮಾನಸಮೀಕೃತಚಿತ್ತ ವರ್ತನಂ ಚಂದ್ರಗತಿಯಿಂ ಸಲುತ್ತುಮಕ್ಷಮಕ್ವಾದಿಪಂಚವಿಧಾಹಾರಪರಿಕಲ್ಪಿತವೀರಚರ್ಯಾ ಮಾರ್ಗದಿಂಬರ್ಪಾಗಳ್-

ಕಂ || ಅನಗಾರವೇಳೆಯೊಳ್ ತ
ಜ್ಜನಾಧಿಪತಿಯತಿಥಿಸಂವಿಭಾಗಾರ್ಪಣನಿ
ತ್ಯನಿಯಾಮದಿನಿರಿಸಿದ ಮುನಿ
ವಿನಿವೇದಕನಮಳನೆಂಬವಂ ಪ್ರತಿಹಾರಂ || ೪

ವ || ಅನತಿದೂರದೊಳೆ ಕಂಡು ಮುನ್ನಮೆ ಸತ್ಪಾತ್ರಗಮನಸಮಯಮಂ ಪಾರುತ್ತುಮಿರ್ದ ಭವ್ಯೋತ್ತಮಂಗೆ ಬಿನ್ನವಿಸಲೊಡಂ-

ಚಂ || ಅನತಿಶಯಾರ್ಚನಾಪರಿಕರಂ ಬೆರಸಂತವುರಂ ಸಮಂತು ಬೆ
ನ್ನನೆ ಬರೆ ಭವ್ಯಪಾರ್ಥಿವಚಯಂ ಕೆಲದೊಳ್ ಬರೆ ತನ್ನ ಕಣ್ಗಳುಂ
ಮನಮುಮಲಂಪಿನಿಂ ಪರಿಯೆ ಮುಂದೆ ಮಹೀಪತಿ ಸೋಮದತ್ತನಾ
ಮುನಿಪತಿಗಂದು ಬಂದನಿದಿರಂ ಪರಿಶುದ್ಧಕೃತಾರ್ಥಬುದ್ಧಿಯಿಂ || ೫

ವ || ಆಗಳ್-

ಚಂ || ಇರೆ ವದನಾಬ್ಜದೊಳ್ ಸುರಭಿಶೋಭೆಯವೋಲ್ ಶ್ರುತಲಕ್ಷ್ಮಿ ಕೂಡೆ ಸ
ಯ್ತಿರೆ ದಯೆ ನೇತ್ರಪುತ್ರಿಕೆಯವೋಲ್ ನಿಜನೇತ್ರದೊಳಾವಗಂ ತಪೋ
ಭರಕೃತಶಕ್ತಿ ಮೂರ್ತಿಯೊಳಳಂಕೃತಿಯಂದದಿನೆಯ್ದೆ ಚೆಲ್ವುವೆ
ತ್ತಿರೆ ಮುನಿಯಿರ್ದನಂದೊಸೆದು ಪುಂಜಿಸಿದಂದದೆ ಕಣ್ಣ ಪುಣ್ಯಮಂ || ೬

ವ || ಅಂತಿರ್ದನಂ-

ಕಂ || ಇದಿರ್ಗೊಂಡು ಭಕ್ತಿಪೂರ್ವಕ
ಮುದಾತ್ತಮತಿ ನಿಲ್ಲಿಮೆಂದು ವಂದಿಸೆ ನಿಂದಂ
ಸದಯಂ ಪರಸಿ ತದೀಯಾ
ಸ್ಪದದೊಳ್ ಘನಪುಣ್ಯಪುಂಜಮೊಡನಿಲ್ವಿನೆಗಂ || ೭

ಚಂ || ಎನಗೆ ಪುರಾಕೃತಂ ಸುಕೃತಮಿಂದಿದಿರ್ವಂದವೋಲಾಯ್ತು ತೀರ್ಥನಾ
ಥನ ಪದಪಾಂಶುವಿಂ ನಗರಿಯಿಂದತಿಪಾವನಮಾಯ್ತು ಮತ್ಕುಲಂ
ಜನನುತಮಿಂದದಾಯ್ತು ಚರಿತಾರ್ಥನೆನೆಂದು ಮಹೋತ್ಸವಾನಕ
ಧ್ವನಿಭರಿತಾಂಬರಂ ಪುಗಿಸಿದಂ ನಿಜಮಂದಿರಮಂ ಮುನೀಂದ್ರನಂ || ೮

ವ || ಅನಂತರಮತ್ಯಂತಪವಿತ್ರವೇತ್ರವಿಷ್ಟರಾಸೀನಂಮಾಡಿ-

ಚಂ || ಚಳನತಳಂಗಳಂ ತೊಳೆದು ಮುಂ ಬೞಿಕೞ್ತಿಯೆ ತೀರ್ಥವಾರಿಯಿಂ
ಮಳಯಜಗಂಧದಿಂ ಕಳಮತಂಡುಳದಿಂ ಸಿತಪುಷ್ಪದಿಂ ಸಮು
ಜ್ಜ್ವಳತರಪಾತ್ರಪೂರ್ಣಚರುವಿಂ ಮಣಿದೀಪದಿನುದ್ಘಧೂಪದಿಂ
ಫಳಕುಳದಿಂ ಧರಾಧಿಪತಿ ಪೂಜಿಸಿದಂ ನಿರವದ್ಯವೃತ್ತನಂ || ೯

ವ || ಆಗಳ್ ಪ್ರತಿಗ್ರಹಾದಿನವವಿಧಪುಣ್ಯಪಣ್ಯನುಂ ಶ್ರದ್ಧಾದಿಸಪ್ತಗುಣಮಣಿವಿಭೂಷಣನುಮಾಗಿ ಸಪ್ರಕಾಶಶುಚಿಪ್ರದೇಶದೊಳ್ ನಿಱಿಸಿ ಸಿದ್ಧಭಕ್ತಿಕರಣಾನಂತರಂ-

ಕಂ || ಪರಮಮುನೀಶೋತ್ತಾನಿತ
ಕರಪುಟದೊಳ್ ಪರಮಭಕ್ತಿಯಿಂದಕ್ಕೆ ನೃಪಂ
ಪರಮಾನ್ನಮಂ ತ್ರಿವಾರಂ
ನಿರಂತರಂ ನೆಱಪಿದಂ ಸ್ವಕಾಯಸ್ಥಿತಿಯಂ || ೧೦

ಅಮಳಗುಣನಕ್ಷಯಂ ದಾ
ನಮಸ್ತುವೆಂದಂದು ಪರಸಿ ನೃಪನಂ ಗಮನೋ
ದ್ಯಮನಪ್ಪುದುಮಂತಾಗಳ್
ಸಮಂತು ತದ್ರಾಜಮಂದಿರಪ್ರಾಂಗಣದೊಳ್ || ೧೨

ಅಲರ್ವೞೆ ಪೊಮ್ಮೞೆ ಮಂದಾ
ನಿಳನನಿಮಿಷದುಂದುಭಿಸ್ವನಂ ದಿವಿಜಮುಖೋ
ಚ್ಚಳಿತಾಹೋದಾನಸ್ವನ
ಮಿಳಾತಳಾಶ್ಚರ್ಯಮಾಯ್ತು ಪಂಚಾಶ್ಚರ್ಯಂ || ೧೨

ಬೞಿಕಂ ತನ್ಮುನಿನಾಥಂ
ತಳರೆ ತಪೋವನಕೆ ನೃಪನುಮನುಗಮನಪರಂ
ತಳರ್ದು ನಿಜವಿನಯದಿಂದೇಂ
ತಳೆದನೊ ಕರಿಪತಿಯ ಬೞಿಯ ಕಳಭಾಕೃತಿಯಂ || ೧೩

ವ || ಅಂತು ಪುರಪರಿಸರಂಬರಂ ಕಳಿಪಿ ಬೞಿಯಮೆಂತಾನುಂ ಮಗುಳ್ದು ಬಂದು-

ಕಂ || ಆವಗಮಾತ್ಮಾಂಗಣದೊಳ್‌
ತೀವಿರ್ದಾಶ್ಚರ್ಯರತ್ನಸಂಚಯಮಂ ತ
ದ್ಭೂವರನಾನಗರದ ಭ
ವ್ಯಾವಳಿಯಂ ಕರೆದು ಪಚ್ಚುಗೊಟ್ಟಂ ಪದೆಪಿಂ || ೧೪

ವ || ಅನ್ನೆಗಮಿತ್ತ ತನ್ಮುನೀಂದ್ರನುಂ ಪುಣ್ಯಾರಣ್ಯಮಂ ಪೊಕ್ಕು ಶುಚಿತಮಶಿಳಾತಳಾಗ್ರದೊಳ್ ಪ್ರತಿಮಾಯೋಗದಿನಿರೆ-

ಚಂ || ಸಮನಖದಿಂದೆ ನಿಂದ ಪದಯುಗ್ಮಮವುಂಕದೆ ಜಾನುಪಾರ್ಶ್ವದೊಳ್‌
ಕ್ರಮದೆ ಮರಲ್ದ ಹಸ್ತಯುಗಳಂ ಪರಿಭಾವಿಸೆ ನಿರ್ವಿಕಾರಮ
ಪ್ಪ ಮುಖಮುಮೊಪ್ಪೆ ತಳ್ತಡರ್ದು ಪೂತ ಸಿತಸ್ಥಳಪದ್ಮವಲ್ಲರೀ
ಭ್ರಮಮನೊಡರ್ಚಿದತ್ತು ತನು ಯೋಗನಿಯೋಗದೊಳಿರ್ದಯೋಗಿಯಾ || ೧೫

ವ || ಆಗಳ್-

ಉ || ಪಾಸಱೆ ತಪ್ತಮಾತಪದಿನೆಂದು ಕುಳಿರ್ಕೊಳುತಿರ್ಪ ಪಾಂಡುಪ
ದ್ಮಾಸನಮಂ ಪದಕ್ಕೆ ಧವಳಾತಪವಾರಣಮಂ ಶಿರಕ್ಕರ
ಣ್ಯಾಸಿತದೇವತಾಪ್ರತತಿ ತಾಂ ಸಮಕಟ್ಟಿದುದಾರ ಚಿತ್ತದೊಳ್
ಭಾಸುರಭಕ್ತಿಯಂ ಪಡೆಯದಾನಿರಪೇಕ್ಷನ ಯೋಗಲಕ್ಷಣಂ || ೧೬

ವ || ಅದಲ್ಲದೆಯುಂ-

ಮ || ಸ್ರ || ಪರಮೇಶಂ ಸಂಗತಾಂತರ್ಜಪನಿಯಮನವಿಸ್ಪಷ್ಟನಿಷ್ಕ್ರಾಂತಮಂತ್ರ
ಸ್ವರದಿಂ ಸಂಜಾತಗಂಗಾಪ್ಲವರವನಿನದದ್ಗಹ್ವರಂ ಹೈಮ್ಯಧಾತ್ರೀ
ಧರಮೋ ಮೇಣೀಷದಂತಸ್ತನಿತಪರಿಚಿತಂ ಶಾರದೋತ್ತುಂಗಧಾರಾ
ಧರಮೋ ಮೇಣೆಂಬ ಚೆಲ್ವಂ ತಳೆದನಚಳಿತಂ ಪೂರ್ಣಚಂದ್ರಾಂಶುವರ್ಣಂ || ೧೭

ವ || ಮತ್ತಂ-

ಕಂ || ಜಪಿಯಿಸುತೊಳಗೊಳಗವ್ಯ
ಕ್ತಪದಾಕ್ಷರಮಂ ಮುಮುಕ್ಷುಕುಂಜರನಿರ್ದಂ
ರಿಪುಘಾತಿಸೇನೆಯಂ ಘಾ
ತಿಪ ತಕ್ಕಿಂದಿಂತು ಮೊೞಗುತಿರ್ಪವೊಲಾಗಳ್ || ೧೮

ಅಭ್ರೂವಿಕಾರಮಪದೃ
ಷ್ಟಿಭ್ರಮಮವಿಕಾಸಘೋಣಮನತಿಶ್ಲಿಷ್ಟೋ
ಷ್ಠಭ್ರಾಜಿತಮಾಯ್ತಾನನ
ಶುಭ್ರಾಂಬುಜಮಾತ್ಮಭಾವನಾತತ್ಪರನಾ || ೧೯

ಧ್ಯಾನಪ್ರದೀಪಶಿಖಿಯಿಂ
ತಾನೊಗೆದುದು ಮೇಗೆ ನಿಮಿರ್ದ ಕಜ್ಜಳಲತೆಯೆಂ
ಬೀ ನುಡಿಗೆಡೆಯಾದುದು ಮಂ
ದಾನಿಳನಿಂ ಮಿಳಿರ್ವ ಕುಂತಳಂ ಮುನಿಪತಿಯಾ || ೨೦

ಚಂ || ಜಲಜವನಂಗಳೊಳ್ದೊರೆಯಿನುಣ್ಮುವ ಶೀಕರವಾರಿಯಂ ಪೊದ
ೞ್ದಲರ್ಗಿಡುವಿಂದಮಲ್ಲುಗುವರಲ್ಗಳನೊಯ್ಯನೆ ತಂದು ತಂದು ನಿ
ಚ್ಚಲುಮಭವಾಂಘ್ರಿಪಂಕಜಮನರ್ಚಿಸುಗುಂ ಪವಮಾನನಂತೆ ದಲ್
ಮಲೆಯೊಳಗಿರ್ದೊಡಂ ಪರಮಪೂಜ್ಯರೆ ಪೂಜೆಯನೆಂತುಮೆಯ್ದುಗುಂ || ೨೧

ವ || ಮತ್ತಂ-

ಕಂ || ಅಲುಗದೆ ತಳಿರ್ತ ಮರಗಳೊ
ಳೆಲೆಯಂ ಕೞಲಿಸದೆ ಪೂತ ಗಿಡುಗಳೊಳರಲಂ
ಸಲೆ ಬಿರ್ಚದೆ ತಳ್ತ ಲತಾ
ವಲಿಗಳೊಳೊಳ್ಗುಡಿಯನೂದುಗುಂ ಗಂಧವಹಂ || ೨೨

ವನದೇವತೆಯರ್ ನಿಚ್ಚಂ
ಮುನಿಪತಿಯಂ ಸ್ತುತಿಯಿಪುಕ್ತಿಗಳನಾಲಿಸಿ ಕ
ಲ್ತಿನಿಸಂ ಕಳಕೀರಕುಳಂ
ಮನದೊಲವಿಂದೋದುತಿರ್ಪುವಾ ಮುನಿವನದೊಳ್ || ೨೩

ಪುಗಲೆಂದುವು ಕೋಗಿಲೆಗಳ್
ಮೃಗಪಶುಗಣಮುಂ ಮನೋಜ ಪೊಕ್ಕಿಸುವಾಮೊ
ಗ್ಗುಗಳಲ್ಲಿ……ರ್ದಪ
ನಗಾಧಬೋಧಂ ದಲೆಂದು ಬಾಱಿಪ ತೆಱದಿಂ || ೨೪

ಕೇಸರಮಂ ಕರ್ದುಕದೆ ಮ
ತ್ತಾಸವಮಂ ಪೀಱದೆಸಳೊಳೆಱಗದೆ ರಜಮಂ
ಸೂಸದೆ ಪೊಸಪೂವಿಂ ಪೊಱ
ಸೂಸುವ ಸೌರಭದೆ ತಣಿವುವಾ ವನದಳಿಗಳ್ || ೨೫

ಆ ಪರಮಯೋಗಿಯೆಂಬ ಮ
ಹಾಪರ್ವತದಿಂದಮುಣ್ಮಿ ಶಾಂತರಸನವೀ
ನಾಪಗೆ ತನ್ಮಯಮೆನಿಸಿ
ತ್ತಾಪುಣ್ಯಾರಣ್ಯದೊಳ್‌ ಚರಾಚರಚಯಮಂ || ೨೬

ಉ || ಪಿಂಗದೆ ನಾಗಬಂಧದೊಳೆ ನಾಗಚಯಂ ಪೆಣೆದಿರ್ದುದೆಯ್ದೆ ಸಾ
ರಂಗದ ಕೋೞ್ಕಳೊಳ್ ಶಬರರಿಂ ನಲವಿಂದೆ ಕುರಂಗಸಂಕುಳಂ
ಸಂಗತಿವೆತ್ತು ದೀವದ ಮೃಗಂಗಳ ಭಂಗಿಯಿನಿರ್ದುದೊಯ್ಯನ
ಗ್ರಾಂಗುಳಿಯಿಂದೆ ಪಿಕ್ಕಿದುದು ಸಿಂಗದ ಕೇಸರಮಂ ಮತಂಗಜಂ || ೨೭

ಕಂ || ಕರಿಣಿಗಳುಂ ಪದೆಪಿಂ ಕೇ
ಸರಿಣಿಗಳುಂ ಸಿಂಹಶಿಶುಗಮಿಭಕಳಭಕ್ಕಂ
ತೊರೆದ ಮೊಲೆಯೂಡುತಿರ್ದುವು
ಪರಸ್ಪರದ್ವೇಷಭಾವಮಂ ಬಿಟ್ಟದಱೊಳ್‌ || ೨೮

ಪೆಣ್ಬುಲಿಯ ಮುಂದೆ ನಲಿದುದು
ಕಣ್ಬರಿವೆತ್ತೆರಲೆ ಗೊಣಸು ನರ್ತಿಸುವ ನವಿ
ಲ್ಗಣ್ಬೀಲಿಯೊಳಗೆ ಸುೞಿದುದು
ತಣ್ಬಸಲೆಯೊಳಾಡುವಂತೆ ನಾಗರಮಱಿಗಳ್ || ೨೯

ವ || ಅಂತವಿಶ್ರಾಂತಶಾಂತರಸವಿಸರಪೀಯೂಷಸಂಚಯಪಂಚಮವಾರಾಶಿ ಏಕಮಾಸಪ್ರಕಲ್ಪಿತ ಪ್ರತಿಮಾಯೋಗಮಂ ನಿರ್ವರ್ತಿಸಲೊಡಂ-

ಇನ್ನಪ್ಪಷ್ಟಗುಣಕ್ಕಿವು
ಮುನ್ನಮೆ ಸಂಚಕಱಮಾಗಿ ಬಂದುವು ತಾಮೆಂ
ಬನ್ನೆಗಮೇಂ ಸಮನಿಸಿದುದೊ
ಸನ್ನುತಮತಿಗಷ್ಟಋದ್ಧಿಗಳ್‌ ಕ್ರಮದಿಂದಂ || ೩೦

ವ || ಅವಾವುವೆಂದೊಡೆ ಕೇವಲಜ್ಞಾನಾವಧಿಮನಃಪರ್ಯಯಜ್ಞಾನಂ ಬೀಜಬುದ್ಧಿಕೋಷ್ಠ ಬುದ್ಧಿಪದಾನುಸಾರಿತ್ವಂ ಸಂಭಿನ್ನಶ್ರೋತೃತ್ವಂ ದೂರಾಸ್ವಾದನ ದೂರಸ್ಪರ್ಶನ ದೂರದರ್ಶನ ದೂರಾಘ್ರಾಣ ದೂರಶ್ರವಣ ಸಮರ್ಥತೆಯುಂ ದಶಪೂರ್ವತ್ವಂ ಚತುರ್ದಶಪೂರ್ವತ್ವಂ ಅಷ್ಟಾಂಗನಿಮಿತ್ತವೇದಿತ್ವಂ ಪ್ರಜ್ಞಾಶ್ರವಣತ್ವಂ ಪ್ರತ್ಯೇಕಬುದ್ಧಿತ್ವಂ ಪ್ರವಾದಿತ್ವಮೆಂದಷ್ಟಾ ದಶಪ್ರಕಾರಮಪ್ಪ ಬುದ್ದಿಋದ್ಧಿಯೊಳಂ ಪರ್ಯಂಕಾಸನಾದಿಯೋಗಾಸ್ತಿತಸ್ವರೂಪಚಾರಣ ತ್ವಮುಂ ಜಳಜಂಘಾತಂತುಪುಷ್ಪಪತ್ರಬೀಜಶ್ರೇಣ್ಯಾಗ್ನಿಶಿಖಾಗಮನಾದ್ಯನೇಕವಿಕಲ್ಪಸಂಯು ತಾಕಾಶಗಾಮಿತ್ವಮೆಂದಿರ್ತೆಱನಪ್ಪ ಕ್ರಿಯಾಋದ್ಧಿಯೊಳಂ ಅಣಿಮ ಮಹಿಮ ಲಘಿಮ ಗರಿಮ ಪ್ರಾಪ್ತಿ ಪ್ರಾಕಾಮ್ಯಮೀಶಿತ್ವಂ ವಶಿತ್ವಂ ಅಪ್ರತಿಘಾತಮಂತರ್ಧಾನಂ ಕಾಮರೂಪಿ ತ್ವಮುಮೆಂಬ ಬಹುಭಂಗೀಸಂಗತಮಪ್ಪ ವಿಕ್ರಿಯಾಋದ್ಧಿಯೊಳಂ ಉಗ್ರತಪಂ ದೀಪ್ತ ತಪಂ ತಪ್ತತಪಂ ಮಹಾತಪಂ ಘೋರತಪಂ ಘೋರಪರಾಕ್ರಮಂ ಘೋರಗುಣಬ್ರಹ್ಮ ಚರ್ಯಮೆಂದು ಸಪ್ತವಿಧಮಪ್ಪ ತಪೋಋದ್ಧಿಯೊಳಂ ಮನೋಬಳಂ ವಾಗ್ಬಳಂ ಕಾಯಬಳಮೆಂದು ಮೂಱುಂ ತೆಱನಾದ ಬಳಋದ್ಧಿಯೊಳಂ ಆಪುರ್ಷಂ ಕ್ಷ್ವೇಳಂ ಜಿಲ್ಲಮಲಂ ವಿಷೌಷಧಿ ಸರ್ವೌಷಧಿ ಆಶ್ಯಾವಿಷದೃಷ್ಟಿವಿಷಮೆಂದಷ್ಟವಿಧಮದೌಷಧಋದ್ಧಿ ಯೊಳಂ ಆಲಸ್ಯವಿಷತ್ವಂ ದೃಷ್ಟಿವಿಷತ್ವಂ ಕ್ಷೀರಾಸ್ರವತ್ವಂ ಮಧ್ವಾಸ್ರವತ್ವಂ ಸರ್ಪಿರಾಸ್ರವ ತ್ವಮಮೃತಾಸ್ರವತ್ವಮೆಂದನೇಕಪ್ರಕಾರಷಟ್ಪ್ರಕಾರಮಾದ ರಸಋದ್ದಿಯೊಳಂ ಅಕ್ಷೀಣ ಮಹಾಶನಂ ಅಕ್ಷೀಣಬಾಹಾಬಳಮೆಂದಿತೆರ್ಱನಾದಕ್ಷೀಣಋದ್ಧಿಯೊಳಂ ನೆಱೆದು ಸಕಳ ಸತ್ವಗುಣಾಧಿಕಕ್ಲಿಷ್ಯಮಾಣಾವಿನೀತಜನಂಗಳೊಳ್ ಮೈತ್ರಪ್ರಮೋದಕಾರುಣ್ಯಮಧ್ಯಮಸ್ಥ ವಿವೃತ್ತಿಗಳನವಳಂಬಿಸುತ್ತುಂ ಗ್ರಾಮನಗರಖೇಡಖರ್ವಡಮಡಂಬದ್ರೋಣಾಮಖ ಘೋಷಪತ್ತನಾಕರಂಗಳನಸಂಗದಿಂ ವಿಹಾರಿಸುತ್ತುಂ ಬರ್ಪಲ್ಲಿ-

ಕಂ || ಎಸೆವ ನಿಜಕೋಷ್ಠ ಋದ್ಧಿ
ಪ್ರಸರತೆಯಿಂದಾವನಾವ ತತ್ವದೊಳೇನಂ
ಬೆಸಗೊಂಡೊಡಮಾಗಳೆ ನಿರ
ವಿಸುವ ಸಮರ್ಥತೆಯನಾಂತನಾ ಮುನಿಮುಖ್ಯಂ || ೩೧

ಗಗನದೊಳಾಪರಮಾಣುವಿ
ನಗಲದ ವೀಧಿಯೊಳೆ ಸಯ್ತು ತೊಲಗದೆ ನಡೆವಂ
ಬಗೆದೀರ್ಯಾಶುದ್ಧ್ಯರ್ಥಮ
ನಗರ್ಹಿತಂ ಶ್ರೇಣಿಚಾರಣತ್ವದ ಗುಣದಿಂ || ೩೨

ಪ್ರತಿರೋಧಿಸಿ ವಜ್ರದ ಪ
ರ್ವತಂಗಳೆನಿತಾನುಮಿರ್ದೊಡವನವಯವದಿಂ
ಸ್ವತನುವೆ ಭೇದಿಸಲಾರ್ಪ
ಪ್ರತಿಘಾತದಿನಾದಮೆಸೆದನಿಂದ್ರಪ್ರತಿಮಂ || ೩೩

ತಪದ ಪರೀಷಹದಾಯಾ
ಸಪರಂಪರೆಯಿಂದಮಿನಿತು ಕಂದದೆ ತಪ್ತಂ
ತಪನೀಯಮೆಂಬವೋಲ್ ನಿಜ
ವಪು ತೊಳತೊಳತೊಳಗೆ ತಪ್ತತಪದಿಂದೆಸೆದಂ || ೩೪

ಪರಮಾಗಮಮೆಲ್ಲಮನು
ಚ್ಚರಿಸುವನಂತರ್ಮುಹೂರ್ತಕಾಲದೊಳೆಂಬ
ಚ್ಚರಿವೆತ್ತ ವಾಗ್ಬಳಂ ಬಂ
ಧುರಮಾದುದು ದುರಿತಬಳತಮೋದಿನಕರನೊಳ್ || ೩೫

ಉಲ್ಲಾಘತೆಯಿಂ ರೋಗಿಗ
ಳೆಲ್ಲಂ ತಳೆವಲ್ಲಿಗೌಷಧಂ ಸ್ವತನುಭೃತಂ
ಜಲ್ಲಮಲಮಾದುದೆನೆ ಮುನಿ
ವಲ್ಲಭನಾಸಕಳಸತ್ವಹಿತಕರನಾದಂ || ೩೬

ಅಮರ್ದಂ ಪೀರ್ದಂದದೆ ತಣಿ
ದು ಮನಂ ಪೆರ್ಚುವರತಿಕ್ಷುಧಾರ್ತರ್ ನಿಜವ
ಕ್ತ್ರಮನೀಕ್ಷಿಸಲೊಡಮೆಂಬೊಂ
ದಮೃತಾಸ್ರವಗುಣಮನಮಿತಗುಣನೊಳಕೆಯ್ದಂ || ೩೭

ತಮಗಿತ್ತು ಚರ್ಯೆಗುೞಿದಶ
ನಮದಂ ದಿನದಿನದೊಳನಿಬರುಂಡೊಡಮಿರ್ದಂ
ದಮೆ ತವದಿನಿತೆಂಬಕ್ಷೀ
ಣಮಹಾಶನವೃತ್ತಿ ಕೀರ್ತಿವೆತ್ತುದು ಪಿರಿದುಂ || ೩೮

ವ || ಎಂದಿವು ಮೊದಲಾಗೆ ಸಕಳಋಧ್ಯಂಗಪ್ರಭಾವಾಸ್ಪದನಶೇಷಸಾವದ್ಯಾತ್ಯಂತದೂರಮಪ್ಪ ಜಿನಕಲ್ಪಿತಮೆಂಬಾಚರಣಮಂ ಪೂಣ್ದನೇಕದಿನಂಗಳಂ ಯೋಗಯೋಗ್ಯಸ್ಥಳಂಗಳೊಳನುಷ್ಠಿಸಿ ತದ್ಧ್ಯಾನಮಾನಸನಾಗಿರ್ಪಲ್ಲಿ-

ಕಂ || ತಾರಾನಕ್ಷತ್ರಗ್ರಹ
ತಾರೇಶಚತುಷ್ಕರೊಗೆದು ಸೊಗಯಿಸುವ ವಿಹಾ
ಯೋರಂಗಮೆನಿಸಿದಂ ಮುನಿ
ಸಾರಚತುರ್ಜ್ಞಾನವಿಳಸಿತಂ ನಿಶ್ಚಳಿತಂ || ೩೯

ವ || ಅದೆಂತೆಂದೊಡೆ

ಕಂ || ಎಯ್ದಿದ ತತ್ತದ್ವಿಷಯಮ
ನಯ್ದು ತೆಱದಿಂದ್ರಿಯಂಗಳಿಂ ಮನದಿಂದಾ
ರಯ್ದಱಿಯುತ್ತಿರ್ಪುದು ತಾ
ನೆಯ್ದೆ ಮತಿಜ್ಞಾನಮೆಂಬ ಪೆಸರಿಂದೆಸೆಗುಂ || ೪೦

ಈಯೊಂದೆ ಮತಿಜ್ಞಾನ
ಕ್ಕಾಯತಿವೆತ್ತೊಂದಿ ತೋಱುಗುಂ ತತ್ವಾಭಿ
ಪ್ರಾಯದವಗ್ರಹಮೀಹೆಯ
ವಾಯುಂ ಧಾರಣಮೆನಿಪ್ಪ ನಾಲ್ಕುಂ ಭೇದಂ || ೪೧

ವ || ಮತ್ತಮದು ಬಹುಬಹುವಿಧಂ ಕ್ಷಿಪ್ರಮನಿಶೃತಮನುಕ್ತಂ ಧ್ರುವಮೆಂದಾಱು ತದಿತರಂಗಳಿಂತು ಪ್ರತ್ಯೇಕಂ ಪನ್ನೆರಡು ಭೇದಮಕ್ಕುಂ ಅಲ್ಲಿಯವಗ್ರಹಮರ್ಥಾವಗ್ರಹಂ ವ್ಯಂಜನಾವಗ್ರಹಮೆಂ ದಿರ್ತೆಱಂ ಚಕ್ಷುರಿಂದ್ರಿಯಕ್ಕಂ ಮನಕ್ಕಮರ್ಥಾವಗ್ರಹಮಲ್ಲದೆ ವ್ಯಂಜನಾವಗ್ರಹಮಲ್ಲ ಇಂತು ಸ್ವರ್ಶನವಸನಘ್ರಾಣಶ್ರೋತ್ರೇಂದ್ರಿಯಂಗಳೆಂಬ ನಾಲ್ಕುಮೊಂದೊಂದರ್ಕಱುವತ್ತು ತೆಱಂ ಚಕ್ಷುರಿಂದ್ರಿಯಂ ನಾಲ್ವತ್ತೆಂಟು ತೆಱಂ ಮನಮುಮನಿತೆ ತೆಱಂ ಇಂತು ಮತಿಜ್ಞಾನಂ ಮುನ್ನೂಱ ಮೂವತ್ತಾಱು ಭೇದಮಕ್ಕುಂ ಅದಲ್ಲದೆಯುಂ-

ಕಂ || ಮತಿಪೂರ್ವಕಮತ್ತದಿನ
ರ್ಥತತಿಯನಱಿವುದು ಸಮಂತು ತಾಂ ಪೆಸರಿಂದಂ
ಶ್ರುತಭೇದಂ ತದ್ಭೇದ
ದ್ವಿತಯಂ ಲಿಂಗಜಮುಮಾವಗಂ ಶಬ್ದಭಮುಂ || ೪೨

ವ || ಅಲ್ಲಿ-

ಕಂ || ಲಿಂಗಜಮನೇಕಭೇದಮ
ನಂಗೀಕರಿಸಿರ್ಕುಮಾವಗಂ ಶಬ್ದಭವಂ
ಸಂಗಳಿಸಿರ್ಕುಂ ಪೆನ್ನರ
ಡಂಗಂ ಪದಿನಾಲ್ಕು ಪೂರ್ವಮೆಂಬಿವನನಿಶಂ || ೪೩

ವ || ಅಂತವೞೊಳಂಗಂಗಳಾವುವೆಂದೊಡೆ-

ಕಂ || ಪ್ರಕಟತರಾಚಾರಂ ಸೂ
ತ್ರಕೃತಂ ಸ್ಥಾನಂ ಬೞಿಕ್ಕೆ ಸಮವಾಯಾಧ್ಯಾ
ಧಿಕೃತಂ ವ್ಯಾಖ್ಯಾಪ್ರಜ್ಞಾ
ಪ್ತಿಕರಂ ಜ್ಞಾತೃಕಥೆಯೆಂಬಿವೆಸೆಗುಂ ಮತ್ತಂ || ೪೪

ಕ್ರಮದಿಂದುಪಾಸಕಾಧ್ಯಯ
ನಮುಮಲ್ಲಿಂ ಬೞಿಕಮಂತಕೃದ್ಧಶಮುಂ ಮ
ತ್ತಮಳಗುಣವರ್ಣನೋಪ
ಕ್ರಮಮೆನಿಸಿದನುತ್ತರೋಪಪಾದಿಕದಶಮುಂ || ೪೫

ಪರಿವಿಡಿಯಿಂ ಪ್ರಶ್ನವ್ಯಾ
ಕರಣಮುಮಾರಯೆ ವಿಪಾಕಸೂತ್ರಮುಮಾ ಪ
ನ್ನೆರಡನೆಯದೃಷ್ಟಿವಾದಮು
ಮರುಶೋಭೆಯನಾಂತುವಾಪ್ತಪರಿಕಥಿತಂಗಳ್ || ೪೬

ವ || ಮತ್ತಂ-

ಕಂ || ಪರಿಕರ್ಮಂ ಸೂತ್ರಂ ವಿ
ಸ್ತರಿತಪ್ರಥಮಾನುಯೋಗಮಾಪೂರ್ವಗತಂ
ವರಚೂಳಿಕೆಯೆಂಬಿವು ಪ
ನ್ನೆರಡನೆಯಂಗಕ್ಕೆ ತೋರ್ಕುಮಯ್ದು ವಿಕಲ್ಪಂ || ೪೭

ವ || ಆ ಭೇದಂಗಳೊಳ್ ನಾಲ್ಕನೆಯ ಪೂರ್ವಗತದೊಳ್ ಪುಟ್ಟಿ-

ಮ || ಸ್ರ || ತರದಿಂದುತ್ಪಾತಪೂರ್ವಂ ಬೞಿಕ ಸೊಗಯಿಪ ಗ್ರಾಮಣೀಯಂ ಬೞಿಕ್ಕಂ
ವರವೀರ್ಯಾನುಪ್ರವಾದಂ ಬೞಿಕ ನಿಯತಮಪ್ಪಸ್ತಿನಾಸ್ತಿಪ್ರವಾದಂ
ಪರಮಜ್ಞಾನಪ್ರವಾದಂ ಬೞಿಕ ಬೞಿಕ ಸತ್ಯಪ್ರವಾದಂ ಬಱಿಕ್ಕಂ
ದೊರೆವೆತ್ತಾತ್ಮಪ್ರವಾದಂ ಬೞಿಕಮುಚಿತಕರ್ಮಪ್ರವಾದಂ ದಲಕ್ಕುಂ || ೪೮

ಕಂ || ಬೞಿಕಂ ಪ್ರತ್ಯಾಖ್ಯಾನಂ
ಬೞಿಕ್ಕೆ ವಿದ್ಯಾನುವಾದಕಲ್ಯಾಣಂಗಳ್
ಬೞಿಕಂ ಪ್ರಾಣಾವಾಯಂ
ಬೞಿಕ್ಕೆ ನೆಗೞ್ದಾಕ್ರಿಯಾವಿಶಾಳಸಮಾಖ್ಯಂ || ೪೯

ಬೞಿಕಂ ಕಡೆಯೊಳ್ ರೂಢಿಯ
ನೊಳಕೆಯ್ದಿರೆ ಲೋಕಬಿಂದುಸಾರಂ ಚೆಲ್ವಂ
ತಳೆದು ಚತುರ್ದಶಪೂರ್ವಂ
ಗಳಿಂತು ಸೊಗಯಿಪುವು ಭವ್ಯಸಂಸೇವ್ಯಂಗಳ್ || ೫೦

ವ || ಆ ಚತುರ್ದಶಪೂರ್ವಂಗಳೆ ವಸ್ತುಗಳ್ ಪ್ರತ್ಯೇಕಮನುಕ್ರಮದಿಂ-

ಕಂ || ಪತ್ತು ಪದಿನಾಲ್ಕು ನಿಯಮಂ
ಬೆತ್ತೆಂಟೋರೊಂಬತೆಯ್ದೆ ಪನ್ನೆರಡೀರಾ
ಱತ್ತ ಪದಿನಾಱು ಮತ್ತಿ
ರ್ಪತ್ತಾಮೂವತ್ತು ಸಂದ ಪದಿನೈದಕ್ಕುಂ || ೫೧

ಪತ್ತಕ್ಕುಂ ಪ್ರತ್ಯೇಕಂ
ಮತ್ತಂ ಪೆಱವಕ್ಕೆ ವಸ್ತುವೋರೊಂದರ್ಕಿ
ರ್ಪತ್ತಕ್ಕುಂ ಪ್ರಾಭೃತಕಂ
ಬಿತ್ತರದಿನನೇಕಭೇದಸಂಘಾತಕೃತಂ || ೫೨

ವ || ಅಂತು ವಿವಿಧವಿಕಲ್ಪಪರಿಕಲ್ಪಿತಂ ಶ್ರುತಜ್ಞಾನಮಕ್ಕುಂ ಅದಲ್ಲದೆಯುಂ-

ಕಂ || ಪ್ರಕೃತಸ್ವದ್ರವ್ಯಕ್ಷೇ
ತ್ರಕಾಲಭಾವಾಶ್ರಯಂಗಳಿಂ ಪುದ್ಗಲವೃ
ತ್ತಕಮಂ ಮರ್ಯಾದಾಪೂ
ರ್ವಕಮಱಿವುದದವಧಿಯೆಂಬ ಪೆಸರ್ವಡೆದಿರ್ಕುಂ || ೫೩

ಬಗೆಯೆ ಭವಪ್ರತ್ಯಯಮುಂ
ಸೊಗಸೆ ಗುಣಪ್ರತ್ಯಯಂ ತದುಭಯಮೆನಿಕ್ಕುಂ
ಮಗುಳೆ ಗುಣಪ್ರತ್ಯಯದೊಳ್
ನೆಗೞ್ಗು ಭೇದತ್ರಯಂಗಳನುಗತಿಯಿಂದಂ || ೫೪

ಆವಾವುವವೆಂದೊಡೆ ಸಂ
ಭಾವಿತಸಾಮರ್ಥ್ಯಸಮಧಿಕಂಗಳ್ ಸಲೆ ದೇ
ಶಾವಧಿ ಪರಮಾವಧಿ ಸ
ರ್ವಾವಧಿಗಳೆನಿಪ್ಪುವುಚಿತನಾಮಯುತಂಗಳ್ || ೫೫

ವ || ಅವಱೊಳೆ ದೇಶಾವಧಿ ಅನುಗಾಮಿ ಅನನುಗಾಮಿ ಹೀಯಮಾನಂ ವರ್ಧಮಾನಮ ವಸ್ಥಿತಮನವಸ್ಥಿತಮೆಂದು ಷಟ್‌ಪ್ರಕಾರಮನುಳ್ಳದಕ್ಕುಂ ಅವು ಗುಣಾಧಿಕರ್ಗೆ ಶಂಖಾದಿ ಚಿಹ್ನಂಗಳೊಳ್ ಪುಟ್ಟುಗುಂ ತೀರ್ಥಕರರ್ಗೆ ಸರ್ವಾಂಗದೊಳ್ ಪುಟ್ಟುಗುಂ ಇಂತವಧಿ ಬೋಧಂ ಬಹುವಿಧಮಕ್ಕುಂ ಅದಲ್ಲದೆಯುಂ-