ವ || ಮತ್ತಮಲ್ಲಿ-

ಚಂ || ಋತುಗಳನೊಂದನೊಂದು ಲತೆ ಪಾರ್ದಲರ್ವೇಱುವುವಿಂತಧೀಶನ
ಪ್ರತಿಹತಶಕ್ತಿಯಿಂದಲರ್ದುವೊರ್ಮೊದಲೆಲ್ಲಮನೇಕಗಂಧಸಂ
ತತಿಗಳನಾಂತು ಗಂಧವಹಸಂಜ್ಞೆಗೆ ಸಾರ್ಥತೆಯಾದುದೆಂದು ಮಾ
ರುತನೊಳಕೆಯ್ದುದುಣ್ಮುವ ಪರಾಗಪರಂಪರೆಯಿಂದೆ ರಾಗಮಂ || ೪೧

ಕಂ || ಮಳಿನತೆ ಚಂದ್ರಜಿನೇಂದ್ರನ
ಬಳವತ್ಸಾಮರ್ಥ್ಯದಿಂದಮೋಸರಿಸೆ ತಳ
ತ್ತಳಿಸುವ ಪೊಂಬಣ್ಣದಿನೆಸೆ
ವೆಳದುಂಬಿಗಳೀವುವದೞೊಳತಿಕೌತುಕಮಂ || ೪೨

ಪಿರಿದುಂ ರೇಫದ್ವಯಭಾ
ಸುರಮಂ ಚಂದ್ರಪ್ರಭಾಂಕಮಂ ನಲವಿಂದು
ಚ್ಚರಿಸಿ ಮೊರೆವಳಿಗಳದಱೊಳ್‌
ದ್ವಿರೇಫನಾಮಂಗಳಾದುವಂದಿಂಬೞಿಯಂ || ೪೩

ಅಮನನನರ್ಚಿಸಲಿಚ್ಛೈ
ಪ ಮನಮೆ ತಮಗಾಗೆ ಬಳ್ಳಿವಳ್ಳಿಯೊಳೆಲ್ಲಂ
ಸಮನಃಪ್ರತತಿಯನಾಯ್ವರ್
ಸುಮನಃಪ್ರಮದೆಯರನೂನರಾಗದಿನದಱೊಳ್‌ || ೪೪

ವ || ಮತ್ತಂ-

ಚಂ || ನಿಜಗಮನತ್ರಿಭಂಗದೆ ಲತಾಳಿಯ ಭಂಗುರಭಂಗಶುದ್ಧಿಯಂ
ನಿಜಕರಪಲ್ಲವೋಲ್ಲಸನದಿಂ ನವಪಲ್ಲವಜಾಲಲೀಲೆಯಂ
ನಿಜದರಹಾಸದಿಂ ಮುಕುಳಬೃಂದಮಿಳಿದ್ದರಹಾಸಶೋಭೆಯಂ
ನಿಜಭುಜಶಾಖೆಯಿಂ ಲಲಿತಶಾಖೆಯನಗ್ಗಲಿಪರ್ ಲತಾಂಗಿಯರ್ || ೪೫

ವ || ಅಂತು ದಿವಿಜವಲ್ಲಭಿಕಾಪ್ರತಾನಮಾನಸೋಲ್ಲಸನಜನಕಮಾದ ವಲ್ಲೀವನದಿನೊಳಗೆ-

ಶಾ || ರಾರಾಜನ್ನಿಧಿಮಂಗಳೋಪಚಿತಪಕ್ಷಂ ಯಕ್ಷದೌವಾರಿಕೋ
ದಾರಂ ಚಂಚುರತಾರಗೋಪುರಚತುಷ್ಕಂ ತನ್ನೊಳೋರಂತೆ ವಿ
ಸ್ತಾರಂಬೆತ್ತಿರೆ ಭೂರಿಸಾರರಚಿತಂ ಪ್ರಾಕಾರಮುದ್ಯತ್ಪ್ರಭಾ
ಭಾರಂ ಸುತ್ತಿದುದೆಯ್ದೆ ಲೋಚನಚಕೋರೀವಾಗುರಾಕಾರದಿಂ || ೪೬

ವ || ಅಲ್ಲಿಂದೊಳಗೆ ಮತ್ತಂ ಚತುಃಕ್ರೋಶವಿಶಾಳಪ್ರದೇಶಂಗಳೊಳೆ ನಾಲ್ಕುಂ ಮಹಾವೀಧಿ ಗಳೆಡೆಯೊಳ್‌

ಚಂ || ನಿಱಿದಳಿರ್ದೊಂಗಲಿಂದೆಸೆವಶೋಕವನಂ ತನಿವಣ್ಣಗೊಂಚಲಿಂ
ದೊಱಗಿದ ಸಪ್ತಪರ್ಣವನಮುಳ್ಳಲರ್ದೊಳ್ಳಲರಿಂದಮೆತ್ತಲುಂ
ಮಿಱುಗುವ ಚಾರುಚಂಪಕವನಂ ತಳಿರಿಂದಲರಿಂ ಫಳಂಗಳಿಂ
ತುಱುಗಿದ ಬಾಳಚೂತವನಮೀಕ್ರಮದಿಂದಮೆ ತಪ್ಪದೊಪ್ಪುಗುಂ || ೪೭

ಮ || ಸ್ರ || ಗಿಳಿಗಳ್ ಸ್ಯಾದ್ವಾದಮೀಮಾಂಸೆಯೊಳೆ ಬಿಡದುಪನ್ಯಾಸಮಂ ಮಾೞ್ಪುದಾದಂ
ಕಳಕಂಠಂಗಳ್ ಚತುರ್ಮಂಗಳಮನೆ ನುಡಿಯುತ್ತಿರ್ಪುವಾಕಲ್ಪವಾಸಂ
ಗಳವುದ್ಯತ್ಪದ್ಮರಾಗದ್ಯುತಿಗಳಮಳಚಂದ್ರೋಪಳಜ್ಯೋತಿಗಳ್ ಗೊಂ
ದಳದಿಂ ಸುತ್ತಿರ್ದ ನಾಲ್ಕುಂ ಬನದೊಳೆನೆ ಕರಂ ಚೋದ್ಯಮುದ್ಯಾನದೇಶಂ || ೪೮

ವ || ಮತ್ತಮಲ್ಲಿ-

ಚಂ || ಮಣಿಮಯಶೃಂಗತುಂಗಕೃತಕಾಚಳಮಾ ಕೃತಕಾಚಳಾಗ್ರದೊಳ್‌
ಕುಣಿವ ನವಿಲ್ ನವಿಲ್ಗೆ ಜತಿಯಂ ತಳತಾಳದಿನೊಂದಿಪಪ್ಸರೋ
ಗಣಮಿರದಪ್ಸರೋಗಣಮನಾಱಿಪ ತೆಂಕಣ ಗಾಳಿ ಗಾಳಿಯೊಳ್‌
ಪೆಣೆದಲರ್ಗಂಪಿನಿಂ ತಣಿದು ಪಾಡುವ ತುಂಬಿಯದೇನಳುಂಬಮೋ || ೪೯

ವ || ಅದಲ್ಲದೆಯುಂ ಕನಕಕೋಷ್ಟಚಕ್ರತ್ರಯಪರಿಕೃತೋತ್ತುಂಗಮಣಿಪೀಠತ್ರಯಾಧಿಷ್ಠಿತತೀರ್ಥ ಕರಪರಮದೇವಾಭಿಮುಖಪರ್ಯಂಕಾಸನಾಂಕಿತಾಷ್ಟಮಹಾಪ್ರಾತಿಹಾರ್ಯವರ್ಯಾರ್ಹದ್ಬಿಂಬ ಸಂಭೃತವಿಶಾಳಮೂಳಪ್ರದೇಶಮುಂ ಅನವರತ ಸವನ ಪೂಜೋನ್ಮುಖಾನೇಕವೈಮಾನಿ ಕಾವಾಸಭವನಾಮರಪರೀತಮುಮಾಗಿ-

ಮ || ವಿ || ಅಮೃತಶ್ರೀಯುಮನೀಯಲಾರ್ಪಭಿನವಂ ಕಲ್ಪಾವನೀಜಾತಮೆಂ
ಬಮಹೋದಾತ್ತತೆವೆತ್ತ ವಿಶ್ವಭುವನಪ್ರಸ್ತುತ್ಯಮಂ ಚೈತ್ಯವೃ
ಕ್ಷಮನೋರೊಂದನೆ ತಾಳ್ದಿ ಮಧ್ಯಮಹಿಯೊಳ್ ನಾಲ್ಕುಂ ಬನಂ ಪಾವನ
ತ್ವಮನಾಳ್ದಿರ್ದುದಶೋಕಸಪ್ತದಳಚಾಂಪೇಯಪ್ರಭೇದಾನ್ವಿತಂ || ೫೦

ವ || ಅಂತನೂನಶೋಭಾವಳಂಬನಂಗಳೆರಡುಂ ಕೆಲಕೆಲದ ಪೆರ್ವೀಧಿಗಳೆರಡುಂದೆಸೆಯೊಳೆ ಸೆವೆಂಟುಂ ಕ್ಷುಲ್ಲಕದ್ವಾರದಿರ್ಕೆಲಂಗಳೊಳಮೆರಡೆರಡೆನಿಸಿ-

ಕಂ || ಸೊಗಯಿಸುವುವು ನಾಟಕಶಾ
ಲೆಗಳುತ್ತುಂಗತ್ರಿಭೂಮಿಕೋಪೇತಂಗಳ್
ದ್ವಿಗುಣೀಕೃತಾಷ್ಟಸಂಖ್ಯಾ
ನುಗತಂಗಳ್ ಶುಭ್ರಕಾಂತಿಭರಿತಾಭ್ರಂಗಳ್ || ೫೧

ವ || ಮತ್ತಮವಱೊಂದೊಂದು ಭೂಮಿಕೆಗಳೊಳ್ ಏಕತಾಳ ಧ್ರುವ ತ್ರಿಪುಡೆ ಮಟ್ಠೆಯ ಝಂಪೆ ಅಟತಾಳ ರೂಪಕಂ ಮೊದಲಾದ ಸೂತ್ರತಾಳಂಗಳೊಳಂ ನೂಱೆಂಟು ನ್ಯಾಸತಾಳಂಗಳೊಳಂ ಕೂಡಿ-

ಕಂ || ಪಸರಿಸಿದುದು ಭಾವಂ ರಸ
ಮೊಸರ್ದುವು ಲಯದೊಡನೆ ಗೀತವಾದ್ಯಂ ಸಮಸಂ
ದೆಸೆದುದೆನೆ ದೇವಿಯರ್ ನಟಿ
ಯಿಸುವರ್ ನಾಟಕಮನೊಡನೆ ಮೂವತ್ತಿರ್ಬರ್ || ೫೨

ಒಂದೊಂದು ನಾಟ್ಯಶಾಲೆಯ
ಮುಂದೊಂದೊಂದೆನಿಸಿ ಧೂಪಘಟಮುಂ ಪದಿನಾ
ಱಂದೆಸೆದಿರ್ದುವು ಪದಿನಾ
ಱುಂ ದಿವಮುಮನಡರೆ ಸುರಭಿಧೂಮಸ್ತೋಮಂ || ೫೩

ವ || ಅಂತನೇಕಶೋಭಾಪರಿಕಲಿತಮಾದುಪವನದಿನೊಳಗೆ-

ಕಂ || ಪೊಸ ಪೊನ್ನವೇದಿ ನಾಲ್ಕುಂ
ದೆಸೆಗಳೊಳಂ ಬೆಳ್ಳಿವೆಸದ ಬಾಗಿಲ್ವಾಡಂ
ಪಸರಿಸಿದ ಸಕಳಮಂಗಳ
ವಿಸರಂ ನಿಧಿಸಮಿತಿ ಯಕ್ಷರಕ್ಷಕರೆಸೆಗುಂ || ೫೪

ಮತ್ತಾ ವಿಶಾಳವೇದಿಯ
ಸುತ್ತಿಂದೊಳಗೇಕಯೋಜನವ್ಯಾಸಾಢ್ಯಂ
ಪ್ರೋತ್ತುಂಗಕಾಂಚನಸ್ತಂ
ಭಾತ್ತಧ್ವಜಭೂಮಿಯಿರ್ಕುಮತ್ಯಭಿರಾಮಂ || ೫೫

ವ || ಅಲ್ಲಿ-

ಕಂ || ಗರುಡಂ ಗಜಂ ಮಯೂರಂ
ಮರಾಳಮಂಬುರುಹಮಂಬರಂ ಚಂದ್ರಂ ಭಾ
ಸುರಚಕ್ರಂ ದಾಮಂ ದಂ
ತಿರಿಪುವೆನಿಪ್ಪಂಕದಿಂ ದಶಧ್ವಜಮೆಸೆಗುಂ || ೫೬

ಪರಿಕಿಪೊಡೊಂದೊಂದಷ್ಟೋ
ತ್ತರಶತಮೊಂದೆಸೆಯೊಳೆಯ್ದೆ ನಾಲ್ದೆಸೆಗಳಮಂ
ಬೆರಸಿದೊಡನಿಂತು ನಾಲ್ಸಾ
ಸಿರಮೆಣ್ಬತ್ತುೞಿಯೆ ಮತ್ತೆ ನಾಲ್ನೂಱಕ್ಕುಂ || ೫೭

ಮತ್ತಮದೊಂದೊಂದರ್ಕ
ಷ್ಟೋತ್ತರಶತಮಾದುಪಧ್ವಜಂಗಳ್ ಲಕ್ಕಂ
ಮೊತ್ತದೆ ನಾಲ್ಕುಸಹಸ್ರಂ
ಮತ್ತಱುವತ್ತಾಱು ಷಷ್ಟಿಯುತಪಂಚಶತಂ || ೫೮

ಬಗೆವಂದೆಣ್ಬೆತ್ತೆಣ್ಬೆರ
ಲಗಲಂ ದೈರ್ಘ್ಯಂ ದ್ವಿಗುಣಿತನವಶತಚಾಪಂ
ಸೊಗಯಿಪ ಕಂಭಕ್ಕೆಡೆದೆಱೆ
ಪುಗಳಿರ್ಪತ್ತಯ್ದು ಬಿಲ್ ಧ್ವಜಂಗಳ್ಗೆಲ್ಲಂ || ೫೯

ಶರದದ ಬಿಳಿಯ ಮುಗಿಲ್ದೆಱೆ
ಪರಿಕಲಿಸುತ್ತಿರ್ದುವಂತರಿಕ್ಷದೊಳೆನಿಕುಂ
ಪಿರಿದುಂ ಧ್ವಜನಿಕರಶಿರಃ
ಪರಿಲಗ್ನದುಕೂಲಲೋಲಘಟಿಕಾಜಾಲಂ || ೬೦

ಕೆಲದ ಬನಂಗಳ ಕೃತಕಾ
ಚಲದ ಲತಾಂತಂಗಳನಿಳವಶದಿಂ ತದ್ಭೂ
ತಳದೊಳ್‌ ಧ್ವಜಾಗ್ರಹತಿಯಿಂ
ಗಳಿಯಿಪ ತಾರಗೆಗಳೆನಿಸಿ ಬಂದುಗುತಿರ್ಕುಂ || ೬೧

ವ || ಮತ್ತಂ-

ಕಂ || ಓರಂದಮಾಗಿ ತರದಿಂ
ತಾರಾಧ್ವಕ್ಕೊಗೆದ ತದ್ಧ್ವಜಾಳಿ ಕುಬೇರಂ
ಕಾರೋಪಕನೆನೆ ಬಳೆದ ಶ
ಚೀರಮಣನ ಪುಣ್ಯಫಲದ ಬೆಳಗೈಯೆನಿಕುಂ || ೬೨

ವ || ಆ ಧ್ವಜಭೂಮಿಯಿಂದೊಳಗೆ-

|| ಅನವದ್ಯವೃತ್ತಂ ||
ಬಳಸಿದತ್ತು ಮಹಾಹಿಮವದ್ಧಾತ್ರೀಧರಮೆತ್ತಲುಮೆಂಬಿನಂ
ತೊಳಗುವರ್ಜುನವರ್ಣದ ಶಾಳಂ ರಾಜತಗೋಪುರಜಾಳದಿಂ
ಮಿಳಿರ್ವ ಸರ್ವಮಹಾನಿಧಿರಾಜನ್ಮಂಗಳವಸ್ತುಸಮಾಜದಿಂ
ಜಳಜಪಾಳನನಾಗಕುಮಾರಾನೀಕದಿನೊಪ್ಪುವುದೊರ್ಮೆಯುಂ || ೬೩

ಕಂ || ಅಂತೆಸೆವ ಶಾಳವಳಯಾ
ಭ್ಯಂತರದೊಳ್ ಕಲ್ಪವೃಕ್ಷವನಮಹಿಯಿರ್ಕುಂ
ಸ್ವಾಂತೋತ್ಸವಕರಮೆನಿಸಿ ಸ
ಮಂತಷ್ಟಸಹಸ್ರಚಾಪಕೃತವಿಸ್ತಾರಂ || ೬೪

ಉ || ಜ್ಯೋತಿಯನೀವ ಮಂದಿರಮನೀವ ಸುಧಾನ್ನಮನೀವ ವಸ್ತ್ರಸಂ
ಘಾತಮನೀವ ವಾದಿತಮನೀವ ಸುಮಾಲ್ಯಮನೀವ ಭಾಜನ
ವ್ರಾತಮನೀವ ದೀಪಮುಮನೀವ ವಿಭೂಷೆಯನೀವ ಸೋಮಸಂ
ಘಾತಮನೀವ ಕಲ್ಪಕುಜಮೊಪ್ಪುವುವಲ್ಲಿ ದಶಾಂಗಸಂಗತಂ || ೬೫

ವ || ಮತ್ತಂ-

ಉ || ದೇವನಗಾಗ್ರದಿಂದಭಿಷವೋತ್ಸವದಿಂದಿೞಿತಂದು ಬೇಗದಿಂ
ತೀವಿ ನಿಜಾಳವಾಳಕುಳಮಂ ತಣಿವಿತ್ತ ಸುಧಾಬ್ಧಿಜೀವನಂ
ಜೀವನಮೆಂದೆ ಬಂದುದು ಜಿನೇಂದ್ರನನೋಲಗಿಪೞ್ತಿಯಿಂದೆ ಕ
ಲ್ಪಾವನಿಜೋತ್ಕರಂ ಕುರುಧರಿತ್ರಿಗಳಿಂದೆನಿಸಿತ್ತು ತದ್ವನಂ || ೬೬

ವ || ಅದಲ್ಲದೆಯುಮಲ್ಲಿಸೊಗಯಿಸುವ-

ಮ || ವಿ || ಕೃತಕೋರ್ವೀಧರಜಾಳದೊಳ್‌ ಕೃತಕಸಿಂಧುವ್ರಾತದೊಳ್ ಕಾಂಚನೋ
ನ್ನತದೊಳ್ ವಾರ್ನಿಕುರುಂಬದೊಳ್‌ ವಿತತಧಾರಾಗೇಹಸಂದೋಹದೊಳ್‌
ಕೃತಪುಷ್ಪಚ್ಛದತಲ್ಪಕಲ್ಪಲತಿಕಾಗಾರಾಳಿಯೊಳ್‌ ದೇವದಂ
ಪತಿಗಳ್ ಕ್ರೀಡಿಪರೆಂದೊಡೇಂ ಬನಮದೆಂತುಂ ದಿವ್ಯಸಂಸೇವ್ಯಮೋ || ೬೭

ವ || ಮತ್ತಂ ಪೂರ್ವೋಕ್ತಕ್ರಮದಿಂ ನಾಲ್ದೆಸೆಯ ನಾಲ್ಕುಂ ಬನಂಗಳ ಮಧ್ಯದೊಳ್ ತ್ರಿಶಾಳ ಪರಿವೃತತ್ರಿವಿಷ್ಟರಾಗ್ರಕಾಯೋತ್ಸರ್ಗಸ್ಥಿತವಿಶುದ್ಧಸ್ಫಟಿಕಮಯಸಿದ್ಧಪ್ರತಿಮಾಪ್ರತಿಬದ್ಧ ಮೂಳಪ್ರದೇಶಪೇಶಲಂಗಳುಂ ಪ್ರತಿವಿಟಪಫಟಿತಘಂಟಾಜಾಳಮುಕ್ತಾದಾಮಚಾಮ ರೋದ್ದಾಮಂಗಳುಮಪ್ಪ ನಮೇರುಮಂದಾರಪಾರಿಜಾತಹರಿಚಂದನಸಂತಾನಮೆಂಬ ಸಿದ್ಧಾರ್ಥಕವೃಕ್ಷಂಗಳಿಂದಮೆಂಟುಂ ಪಕ್ಷಕದ್ವಾರಂಗಳಿರ್ಕೆಲದ ಪದಿನಾಱುಂ ನಾಟಕಶಾಲೆಗೆ ಳಿಂದಮನಿತೆ ಧೂಪಘಟಂಗಳಿಂದಮೆಸೆದು ಸಕಳಮಂಗಳಜನ್ಮಭೂಮಿಯಾದ ಕಲ್ಪವೃಕ್ಷ ವನಭೂಮಿಯಿಂ ಬೞಿಕ್ಕೆ-

ಕಂ || ಮಂಗಳನಿಧಿನಿಕರಸನಾ
ಥಂಗಳಿನತಿರುಚಿತರಜತರಚಿತಮಹಾದ್ವಾ
ರಂಗಳಿನುರಗಪ್ರತಿಹಾ
ರಂಗಳಿನೊಪ್ಪುವುದು ಕನಕವೇದೀವಳಯಂ || ೬೮

ವ || ಅಲ್ಲಿಂದೊಳಗರ್ಧಯೋಜನವಿಶಾಳಶೋಭಾವಿಷಯಮಾಗಿ-

ಕಂ || ನಯನಾಮೃತಕ್ಕೆ ಮತ್ತಾ
ರಯೆ ಕರ್ಣರಸಾಯನಕ್ಕೆ ಸುರನರಜನತಾ
ಶಯಸೌಖ್ಯಕ್ಕುದ್ಭವಭೂ
ಮಿಯಿದೆನೆ ಸಂಗೀತಭೂತಳಂ ಸೊಗಯಿಸುಗುಂ ||

[1] ೬೯

ವ || ಮತ್ತಮಲ್ಲಿ ನೃತ್ಯಸಾಂಪ್ರದಾಯಕಸಾಮಾಜಿಕಜನನಿವೇಶೋಚಿತೋತ್ತುಂಗರಂಗಪಾರ್ಶ್ವ ವಿಶಾಳಭೂಪ್ರದೇಶಂಗಳಿಂದಂ ಅತಿಬಹಳಶಾತಕುಂಭಸ್ತಂಭಂಗಳಿಂದಂ ಅಪ್ರತಿಸುರತ್ನ ವರಾತಿಭದ್ರಂಗಳಿಂದಂ ಉದಾರಚತುರ್ದ್ವಾರಂಗಳಿಂದಂ ಆತ್ತ ಮತ್ತವಾರಣಂಗಳಿಂದಂ ಮತ್ತಂ ದೇವಮಾನವಮೃಗಖಗೋರ್ವೀಜಪರ್ವತಂಗಳಿಂ ಕ್ರಿಯಾಗುಣದ್ರವ್ಯಂಗಳಿಂ ಜಾತಿಯಾಗೆ ಬರೆದ ಚಿತ್ರಂ । ಚಿತ್ರಾರ್ಧಂ । ಚಿತ್ರಾಭಾಸಮೆಂಬ ಮೂಱುಂ ಚಿತ್ರದೊಳಂ

ಶ್ರುತವಿದ್ಧಮಾತ್ಮವಿದ್ಧಂ ಪರವಿದ್ಧಮೆಂಬ ವಿದ್ಧಪದ್ದತಿಯೊಳಂ ಋಜು । ಋಜುಪರಾವೃತ್ತಿ । ಅರ್ಧಋಜು । ಅರ್ಧಋಜುಪರಾವೃತ್ತಿ । ಸಾಚಿ । ಸಾಚಿಪರಾವೃತ್ತಿ । ದ್ವ್ಯರ್ಧಾಕ್ಷೆಂ । ತತ್ಪರಾವೃತ್ತಿ । ಪಾರ್ಶ್ವಗತಮೆಂಬ ನವಸ್ಥಾನಕಂಗಳೊಳಂ ಆಯಾಮವಿಸ್ತಾರಮೆಂಬ ಮಾನದ್ವಯದೊಳಂ ರಸಚಿತ್ರಂ । ಧೂಳೀಚಿತ್ರಮೆಂಬೆರಡೋಜೆಯೊಳಂ ಪುಲಕಂ । ಪತ್ರಕಂ । ಬಿಂದುಕಂ । ಧೂಮ್ರಾವರ್ತಂ । ಉದ್ವರ್ತನಂ । ಚಿತ್ರವರ್ತಮೆಂಬಾಱುಮಣ್ಕೆ ಗಳೊಳಂ ಉದಕಂ । ಅರ್ಧೋದಕಂ । ವರ್ಣಾಂತರಮೆಂಬೀಪಲವುಂ ಛವಿಗೆಯ್ವ ಪದದೊಳಮಳವಡೆ ಭೂತಭವದ್ಭಾವಿಶಲಾಕಾಪುರುಷ ಚರಿತಂಗಳಂ ದಿವ್ಯಜ್ಞಾನಿಗಳಿಂ ತಿಳಿದು ಜನ್ಮಪರಂಪರೆವೆರಸು ಮಯ ಮಾಂಡವ್ಯ ವಿಶ್ವಕರ್ಮರೆಂಬಮರ್ತ್ಯಚಿತ್ರಕರ್ ಬರೆದ ಚಿತ್ರಂಗಳೊಳಂ ಅವಱೆಡೆಯೆಡೆಯೊಳ್ ಚಿತ್ರಾರ್ಧಪತ್ರಮೆಂದು ತದ್ವಿದ್ಯಾವೈಶಾರದ್ಯಮಂ ಮೆಱೆವ ತೆಱದೆ ಕಳಿಕೆ । ಕಂಟಕಂ । ಬಾಳಶಿಶಿರ । ತ್ರಿಭಂಗಂ । ಮಕರಿಕೆಯೆಂಬ ಪಂಚಾಂಕುರಪ್ರಪಂಚಮುಂ ಗ್ರಂಥಿಗರ್ಭಂ । ಛಲಿತಾಳವಟ್ಟಂ । ಪುದಿವು । ಪೊದಱು । ಉತ್ಪಾಳಕವಿ । ಮರುಳು । ಪೂರ್ವಶಾಖೆ । ಪಶ್ಚಿಮಶಾಖೆ । ಶಿರಂ । ಮನುಶಿರಂ । ವರಾಹಕರ್ಣಿಕೆ । ಗಜಕರ್ಣಿಕೆಯೆಂಬವಯವಪ್ರಕಾರಮುಮೆಸೆಯೆ ಬರೆದ ಶಿಶು । ಸಕಲಂ । ಸ್ವಸ್ತಿಕಂ । ವರ್ಧಮಾನಂ । ಸರ್ವತೋಭದ್ರಂ । ಕಾಂತಂ । ಮಹಾಕಾಂತಂ । ಚಿತ್ರೋತ್ಸವಮೆಂಬೆಂಟುಂ ಪತ್ರಂಗಳೊಳಂ ಅಸಾದೃಶ್ಯಮುಂ ದೃಶ್ಯಮುಮಾದ ಶುಶ್ಲಕ್ಷ್ಣ ಸುಧಾಭಿತ್ತಿಭಾಗಂಗಳಿಂದಮಪೂರ್ವಭಿತ್ತಿಯಂ ತಳೆದು-

ಕಂ || ಸಂಗೀತದ ದೆಸೆಯಱೆಯದ
ವಂಗಂ ಪುಗಲೊಡನೆ ಪಾಡುವಾಡುವ ಚಿತ್ತಂ
ಸಂಗಳಿಪುದೆನಿಪ ನೃತ್ಯಗೃ
ಹಂಗಳ್ ಸುತ್ತಿಱಿದು ನೆಱೆಯೆ ಮೆಱೆಯುತ್ತಿರ್ಕುಂ || ೭೦

ವ || ಅದಲ್ಲದೆಯುಂ ಷಡ್ಜಮಧ್ಯಮಗ್ರಾಮಸಂಬಂಧಂಗಳಪ್ಪ ಅಷ್ಟಾದಶಜಾತಿಗಳೊಳ್ ಪುಟ್ಟಿದ ಪಲವುಂ ಗ್ರಾಮರಾಗಂಗಳೊಳಂ ಅಲ್ಲಿ ಪುಟ್ಟಿದ ಭಾಷೆಗಳೊಳಂ ಭಾಷೆಗಳೊಳ್ ಪುಟ್ಟಿದ ವಿಭಾಷೆಗಳೊಳಂ ವಿಭಾಷೆಗಳೊಳ್ ಪುಟ್ಟಿದಂತರಭಾಷೆಗಳೊಳಂ ತತ್ತದಂಗಂಗಳಪ್ಪ ರಾಗಾಂಗಂ । ಭಾಷಾಂಗಂ । ಉಪಾಂಗಂ । ಕ್ರಿಯಾಂಗಮೆಂಬ ದೇಶಿರಾಗಂಗಳೊಳಂ ಮತ್ತಂ ಸ್ಥಾನತ್ರಯನಿಯತಮುಂ ಸ್ಥಾಯ್ಯಾದಿವರ್ಣಯುತಮುಂ ಅಮುಕ್ತ ಸ್ಥಾನರಂಜನಮುಂ ನಾನಾಲಂಕಾರಸಾರಮುಂ ಲೀನೋಲ್ಲಸನ್ನಾದನ್ಯಾಸ ಭಾಸುರಮುಂ ತಂ । ಹ । ಯ । ಎ । ಆ । ದ । ತಿನಂ । ನಿತ । ನಿತ । ಗೀತಾಕ್ಷರೋಪ ಲಕ್ಷಿತಮುಂ ಗಮಕರಮಣೀಯಮುಂ ನಿಖಿಳಗೀತವಸ್ತ್ವಾದಿರೂಪಮುಮಪ್ಪಾಲಾಪಿಯೊಳಂ ವಿಸ್ತರ । ಸಂಕಿರ್ಣ । ಶುದ್ಧ । ಮಿಶ್ರಮೆಂಬ ಚತುರ್ವಿಧರಾಗಂಗಳಿಂ ಉದ್ಗ್ರಾಹ ।  ದ್ರುಮ । ವೇಳಾಪ । ಭೋಗಂಗಳೆಂಬ ನಾಲ್ಕುಂ ಧಾತ್ವಂಗಂಗಳಿಂ ಸ್ವರ । ಪದ । ಬಿರುದ । ಪಾಟ । ತೆನ್ನ । ತಾಳಮೆಂಬ ಷಡಂಗಂಗಳಿಂ ನಳಂ । ಕೃತಂ । ಪ್ರಸನ್ನಂ । ವ್ಯಕ್ತಂ । ಪೂರ್ಣಂ । ಸಮಂ । ಸುಕುಮಾರಂ । ಸುರಕ್ತಂ । ಶ್ಲಕ್ಷ್ಣಂ । ಮಧುರಂ । ವಿನಿಕೃಷ್ಟಮೆಂಬ ದಶಗುಣಂಗಳಿನೆಸೆವೆ ಗೀತಕಾದಿಶುದ್ಧಪ್ರಬಂಧಂಗಳೊಳಂ ಮಾತೃಕಾದಿದೇಶೀಪ್ರಬಂಧಂಗಳೊಳಂ ಧ್ರುವಾದಿದೇಶಿಗೀತಂಗಳೊಳಂ ತ್ರಿಮಾರ್ಗಸೂಳಕ್ರಮದೊಳಂ ಲಕ್ಷ್ಯ ಲಕ್ಷಣಕುಶಲರುಂ ಸಂದಷ್ಟಾದ್ಯೇಕೋನವಿಂಶತಿದೋಷ ದೂರರುಂ ಜಿನಶ್ರಮರುಂ ವಶ್ಯಕಂಠ ರುಮಪ್ಪ ಉತ್ತಮೋತ್ತಮಗಾಯಕರುಮಂ ಮತ್ತಂ ತತಘನಸುಷಿರಾವನದ್ಧಚತುರ್ವಾದ್ಯ ಭೇದವೇದಿಗಳುಮಂ ಏಕಹಸ್ತ । ದ್ವಿಹಸ್ತ । ಕೋಣ । ಹಸ್ತಕೋಣ । ಅಂಗುಳಿಕಾ । ಪೂತ್ಕಾರವಾದನ ಕ್ರಮಜ್ಞರುಂ ಯತ್ಯಾದಿಸಪ್ತತ್ರಿಂಶದ್ವಾದ್ಯ ಪ್ರಬಂಧಪ್ರಯೋಗಪಟುಗಳು ಮಂ ಶುದ್ಧಂ । ಸಮಂ । ವಿಭಕ್ತಂ । ರಕ್ತಂ । ಮಧುರಂ । ಸ್ಫುಟಂ । ಪ್ರಹರಣಂ । ಶುಭದಂ । ವಿಘುಷ್ಟಂ । ಕಳಂ । ಘನಮೆಂಬ ದಶವಾದ್ಯಪ್ರಬಂಧ ಪ್ರಯೋಗಗುಣಪ್ರವೀ ಣರುಮಂ ಗೀತಾನುಯಾಯಿ । ನೃತ್ಯಾನುಯಾಯಿ । ಉಭಯಾನು ಯಾಯಿವಾದ್ಯ ಭೇದವಿಶಾರದರುಂ ವ್ಯಕ್ತಾದ್ಯಷ್ಟಹಸ್ತಗುಣಾಶ್ರಯರುಮಪ್ಪ ವಾದಕರುಮಂ ಮತ್ತಂ ಸಂ ಯುತಾಸಂಯುತನೃತ್ಯಭೇದದಱುವತ್ತುನಾಲ್ಕು ಹಸ್ತಂಗಳುಮಂ ಸ್ಥಾಯೀಭಾವ । ವ್ಯಭಿಚಾರೀಭಾವ । ರಸಭೇದ ಮೂವತ್ತಾಱುದೃಷ್ಟಿಗಳುಮನಾಱುಂ ಪಾದಪ್ರಕಾರಂ ಗಳುಮಂ ಮತ್ತಮುೞಿದಂಗೋಪಾಂಗಪ್ರತ್ಯಂಗ ಚೇಷ್ಟೆಗಳುಮಂ ಮೂಱುಂ ಲಾಸ್ಯಸ್ಥಾನಂ ಗಳುಮನಾ ಱುಂ ನಾಟ್ಯಸ್ಥಾನಂಗಳುಮಂ ಮತ್ತಂ ಪಲವು ಮಿಶ್ರಸ್ಥಾನಂಗಳುಮಂ ಪದಿನಾಱು ಭೂಮಿ ಚಾರಿಗಳುಮನನಿತೆ ಗಗನಚಾರಿಗಳುಮಂ ಪತ್ತುಂ ಭೌಮಮಂಡಲಂ ಗಳುಮನನಿತೆ ವೈಹಾ ಯಸಮಂಡಲಂಗಳುಮಂ ಪತ್ತುಂ ಭೌಮಮಂಡಲಂಗಳುಮನನಿತೆ ವೈಹಾಯಸಮಂಡಲಂ ಗಳುಮಂ ಪದಿನಾಱುಂ ಹಾರಂಗಳುಮಂ ನೂಱೆಂಟು ಕರಣಂಗಳುಮಂ ಪದಿನೆಂಟು ದೇಶೀಕರಣಂಗಳುಮನೇೞುಂ ಭ್ರಮರಿಗಳುಮಂ ಮೂಱುಂ ತೆಱದ ಸೂಚಿಗಳುಮಂ ಕರಣಂಗಳ ಕೂಟದಿಂ ಪುಟ್ಟುವ ಮೂವತ್ತೆರಡಂಗಹಾರಂಗಳುಮಂ ನಾಲ್ಕುಂ ರೇಚಿತಂ ಗಳುಮಂ ಯಥಾಶಾಸ್ತ್ರಮುಮತಿಲಲಿತಮುಮಾಗಿ ಅಭಿನಯಿಸಲಱಿವ ರೂಪಲಾವಣ್ಯ ಪ್ರಾವೀಣ್ಯಯೌವನಾದಿಗುಣಪರಿಪೂರ್ತಿಯನುಳ್ಳ ನರ್ತಕಿಯರುಮಂ ಮೇಳವಱೆಯ ಱಿವಾಯ್ದುಕೊಂಡು-

ಶ್ಲೋ || ಮುಖ್ಯಾ ದ್ವಾದಶಗಾತಾರಃ ದ್ವಾದಶೈವ ಚ ಗಾಯಿಕಾಃ
ಅಷ್ಟಾಚಿಹಲಿಕಾಃ ಪ್ರೋಕ್ತಾಃ ಷಟ್ತಥಾ ವಾಂಶಿಕಾ ಮತಾಃ ||
ಒತ್ತಕಾರಾಶ್ಚ ಪಂಚಾಸ್ಯುಃ ತಥಾ ಪಾಟಹಿಕಾಸ್ತ್ರಯಃ
ಯತ್ರ ಮಾರ್ದಂಗಿಕಾಃ ಷಟ್ಚವೃಂದಸ್ಸ್ಯಾದುತ್ತಮೋತ್ತಮಂ ||

ಎಂಬ ಭರತಾಗಮೋಕ್ತಕ್ರಮದಿಂ ದ್ವಾಪಂಚಾಶದ್ವಿದ್ಯಾವರ್ಜನಸಜ್ಜಿತಮಪ್ಪ ಸಂಪ್ರದಾಯಂ ಗಳುಮಂ ಸಮಕಟ್ಟಿ ದೇವಮಾನವಕುತಪವಿತತಿ ನೃತ್ಯಭವನಂಗಳೊಳ್ ಪ್ರತ್ಯೇಕಂ ಸಮಸ್ತಾ ದಿಪೂರ್ವರಂಗಸಂಗತಿಯಿಂ ಶುದ್ಧಂ ಚಿತ್ರಮೆಂಬೆರಡುಂ ಪದ್ಧತಿಯೊಳ್ ಸರ್ವವಿದ್ಯೇಶ್ವರ ನುಂ ಚತುರಾಸ್ಯನುಮಪ್ಪ ತೀರ್ಥೇಶ್ವರನಂ ಕೇವಳಂ ತಾಳಲಯಾಶ್ರಯಮುಮಂ ದೇಶೀ ಯಮುಮಪ್ಪ ಸಂಗೀತಪ್ರಸಂಗದಿನೋಲಗಿಸುವಲ್ಲಿ-

ಕಂ || ವಿತರಚ್ಛಾಯಾದಿಕರಾ
ಹತಿಯೊಳ್ ಗೀತಾನುಗತಿಯೊಳವಧಾನಸಮ
ನ್ವಿತರತ್ತ ಮತ್ತೆ ತಾಳದೊ
ಳತಿದೃಢರೆನೆ ಪಾಡಿ ಗಾಯಕರ್ ಮೆಚ್ಚಿಸುವರ್ || ೭೧

ಆದಂ ಗೀತದ ಬಣ್ಣಂ
ನಾದದೊಳಕ್ಕರಮುಮೆಯ್ದೆ ಶಬ್ದದೊಳಱಿಯ
ಲ್ಕಾದಪುದೆನೆ ಬಾಜಿಸುವರ್
ವಾದಕರುಂ ಪಿಕ್ಕೆ ಗೀತಸಮಯಮದಿಂಪಂ || ೭೨

ತೊಡರದ ಪಹರಣೆಯಿಂ ಪಯ
ದೊಡನುಗ್ಘಡಿಸುವುದು ತೂಕದೆಸಕಂ ಜತಿಯಂ
ನಡೆಯಿಪುದು ಕಿತ್ತು ಚಂಡಣೆ
ಗುಡುವುದು ನಚ್ಚಣಿಯರಾಟಮೇನಚ್ಚರಿಯೋ || ೭೩

ವ || ಅಂತು ಸಾಶ್ವರ್ಯತೂರ್ಯತ್ರಯಮಯಮಾದ ಭವನಭೂಚಕ್ರದೆಸೆಯೊಳೆಡೆಯ ನಾಲ್ಕುಂ ವೀಧಿಗಳ ಮಧ್ಯದೊಳ್ ಮಣಿಮಾಳಾವಿರಚಿತೋತ್ತುಂಗತೋರಣಶತಾಂತರಿತಂಗಳುಂ ಛತ್ರಚಾಮರಕನಕಕಿಂಕಿಣೀಜಾಳ ಕುಸುಮಮಾಳಾವಿಳಾಸವಿಳಸಿತಂಗಳುಂ ಜಿನಸಿದ್ಧಬಿಂಬ ಕದಂಬಸಂಚ್ಛನ್ನಂಗಳುಂ ಅಖಂಡಶೋಣಮಾಣಿಕ್ಯಘಟಿತಂಗಳುಮಾಗಿ-

ಕಂ || ನವನಿಧಿಯೊಂದೊಂದನೆ ಕುಡು
ವುವವಿರ್ಕೆಮ ಭವ್ಯಸಮಿತಿಗಿಷ್ಟಮನಿತ್ತೊ
ಪ್ಪುವ ನವನವನಿಧಿ ನೋಡುವೊ
ಡಿವೆನಿಪ್ಪುವು ಕೂಡೆ ನವನವಸ್ಥೂಪಂಗಳ್ || ೭೪

ವ || ಆ ಸಂಗೀತಭೂತಳದಿನೊಳಗೆ-

ಚಂ || ಪಳಿಕಿನ ಕೋಟೆ ಕೋಟೆಗಳವಟ್ಟ ಹರಿನ್ಮಣಿಗೋಪುರಂಗಳು
ಜ್ಜಳಿಸುವ ಗೋಪುರಂಗಳ ಕೆಲಂಗಳೊಳಿರ್ಪ ನಿಧಿಪ್ರತಾನಮಂ
ಗಳತತಿ ಮತ್ತೆ ಕಲ್ಪಜಕುಮಾರರ ಭೂತಿಗಳಾತ್ತಹಸ್ತಮ
ಗ್ಗಳಿಸಿದ ಕಾಪು ಕಣ್ಗೆ ಸಮನಿಪ್ಪುದು ಕೌತುಕಮಂ ನಿರಂತರಂ || ೭೫

 


[1] ಸುರನರ್ತಕಿಯರವರಿಸಲ್
ಲ್ಮರೆಯಾದತ್ತವರದಿವ್ಯರೂಪುಗುಣಂಗಳ್
ವರಮೆಸನ್ನೆರಮಾದಂ
ಸುರರಾಗಂವೀತರಾಗಮಯಮಾಯ್ತಾಗಳ್‌ ||
ಈ ೭೧ನೆಯ ಪದ್ಯ ಒಂದು ಪ್ರತಿಯಲ್ಲಿಲ್ಲ; ಗ್ರಂಥಕರ್ತನದಲ್ಲವೆಂದಯ ತೋರಿಬರುತ್ತದೆ.