ಕಂ || ಶ್ರೀದಂ ನಿಜಾಜ್ಞೆಯಿಂ ಸಂ
ಪಾದಿಸಿದಾ ಸಮವಸೃತಿಯನೀಕ್ಷಿಸಿ ಪರಮಾ
ಹ್ಲಾದಮನಾಂತಂ ಪೌಳೋ
ಮೀದಯಿತಂ ಜೈನಜನಮನೋಹರಚರಿತಂ || ೧

ಪರಮನನೆ ಕಾಣ್ಬ ಪೂಜಿಪ
ಭರದಿಂ ಮುಂ ಪೊಕ್ಕನಂತರಂ ತತ್ಸಭೆಯಂ
ಹರಿ ನೋಡಿ ತನ್ನಕಣ್ಸಾ
ಸಿರಮುಮನಾನಂದರಸದೊಳೋಲಾಡಿಸಿದಂ || ೨

ಪರಮೇಶಂ ಮಧ್ಯದ ಮಂ
ದರದಂತಿರೆ ಸಮವಸರಣವಳಯಂ ವಿಳಸ
ದ್ಗಿರಿಸಿಂಧುನದೀಪುರಭಾ
ಸುರಜಂಬೂದ್ವೀಪಮೆಂಬಿನಂ ಸೊಗಯಿಸುಗುಂ || ೩

ಅದು ಗಗನಲಕ್ಷ್ಮಿಗಾದ
ತ್ತುದಾತ್ತಮಂಡನಮದರ್ಕೆ ನಾಯಕಮಣಿಯಂ
ದದೆ ಮಧ್ಯದೊಳಿರ್ದಂ ದೇ
ವದೇವನತ್ರಾಸನುತ್ಪ್ರಭಂ ನುತಗಾತ್ರಂ || ೪

ವ || ಮತ್ತಂ-

ಕಂ || ಅದು ಪರಮಾರ್ಹಂತ್ಯಶ್ರೀ
ಸುದತೀವಿವಹನವಿಶಾಳವೇದಿಕೆಯನಘಂ
ಗದು ಮುಕ್ತಿಗೆ ನಡೆಯಲೊಡ
ರ್ಚಿದ ಪೊಱವೀಡೆನಿಸಿದತ್ತು ತತ್ಸಭೆ ಶುಭದಂ || ೫

ವ || ಅದೆಂತೆಂದೊಡೆ-

ಮ || ವಿ || ಧರೆಯಿಂ ಪಂಚಸಹಸ್ರಚಾಪನಿಯತೋತ್ಸೇಧಂಬರಂ ವ್ಯೋಮಭೂ
ಮಿರುಹಸ್ಕಂಧಮಿದೆಂಬಿನಂ ನಿಮಿರ್ದು ನಿಂದತ್ತಾದಮಾದರ್ಶಭಾ
ಸುರಮಾದ್ವಾದಶಯೋಜನಾತ್ತಸಮವೃತ್ತಂ ಕಣ್ಗೆ ಗೊತ್ತಪ್ಪಿನಂ
ಹರಿನೀಲೈಕಶಿಳಾಮಯಂ ಮಹಿತಳಂ ತೀರ್ಥೇಶನಾಸ್ಥಾನದಾ ||

[1] ೬

ವ || ಅಂತುಮಲ್ಲದೆಯುಂ-

ಕಂ || ಆ ಸಮವಸರಣಲಕ್ಷ್ಮಿಯ
ಭಾಸುರತರಪಂಚರತ್ನಮಯಕಾಂಚನಮಾ
ಳಾಸಾದೃಶ್ಯಕ್ಕಾಯ್ತವ
ಕಾಶಂ ಕಿಂಮೀರಕಿರಣಜಾಳಂ ಶಾಳಂ || ೭

ತ್ರಿದಶೇಂದ್ರಧನುಶ್ಶ್ರೀಗಾ[2]ಸ್ಪದಮೆನಿಸಿರ್ದುಂ ಬೞಿಕ್ಕಮಚಿರದ್ಯುತಿಸಂ
ಪದಮೆನಿಸಿ ತೋರ್ಪುದಂತೋ
ವದೆಯಿದು ಚಿತ್ತಕ್ಕೆ ಚಿತ್ರತರಮೆಂಬಿನೆಗಂ || ೮

ವ || ಮತ್ತಂ-

ಕಂ || ತೊಳಪ ಸರಿಗೆಗಳ ಮುಗಿಲ
ಟ್ಟಳೆಗಳ ಮಿಳ್ಳಿಸುವ ಪಲವು ಪೞಯಿಗೆಗಳ ಗೊಂ
ದಳಮೆಯ್ದೆ ಬಳಸಿ ಚೆಲ್ವಿನ
ಬೆಳಸೆನೆ ಸೊಗಯಿಪುದು ತನ್ಮಹಾಪ್ರಾಕಾರಂ || ೯

ವ || ಅದಱ ಪೂರ್ವಾದಿದಿಕ್ಚತುಷ್ಟಯದೊಳಂ ವಿಂಶತಿಸಹಸ್ರಸಂಖ್ಯಾಸಮನ್ವಿತಂಗಳುಂ ದ್ಯುಚರ ಖಚರಭೂಚರವ್ಯಂತರೋರಗತಿರ್ಯಗ್ಭವ್ಯಗಣತ್ವರಿತಾರೋಹಣಾವರೋಹಣಕಾರಣ ಪ್ರಭಾವಪಾದಲೇಪಾದಿವಿಲಿಪ್ತಪ್ರಥಮಾಗ್ರಸೋಪಾನಸಮೀಚೀನಂಗಳುಮಾಗಿ-

ಕಂ || ಧರೆಗಿೞಿವ ಬಾಂದೊಱೆಯ ಬ
ಲ್ದೆರೆಗಳೆ ಕರಮೆನಿಸಿ ಮಿಸುಪ ಪೊಸಪಳಿಕಿಂ ಬಿ

ತ್ತರಿಸಿದ ಸೋಪಾನಂಗಳ್
ಕರಮೆಸೆದುವು ನೋಡಿದವರ ಕಣ್ ನುಣ್ಚುವಿನಂ || ೧೦

ವ || ಆ ಸೋಪಾನಂಗಳಗ್ರದೇಶದೊಳ್‌

ಮ || ವಿ || ದೆಸೆಯಂ ಕೆಂಬಿಸಿಲೆಂಬಿನಂ ಬಳಸೆ ಪೀತೋದ್ದ್ಯೋತಸಂಘಾತಮಾ
ಗಸಮಂ ಚಿತ್ರಿಸೆ ಪಂಚರತ್ನಕಳಶೋದ್ಯತ್ಕಾಂತಿ ಮುಂದೊಂದಿ ಕ
ಣ್ಬಸರಂಬೆತ್ತಿರೆ ತುಂಗತೋರಣಶತಂ ಕೆಂಬೊನ್ನಮಾಡಂಗಳೇ
ನೆಸೆದೊಪ್ಪಿರ್ದುವೊ ಬಿತ್ತರಂಬಡೆದು ತತ್ತದ್ಗೋಪುರದ್ವಾರದಿಂ || ೧೧

ಕಂ || ಹರಿನೀಳಮಹೀಪ್ರಾಂತ
ಸ್ಫುರದಂಶುಕೃತಾಂಧಕಾರಮಂ ಮೆಯ್ವೆಳಗಿಂ
ಪರಿಹರಿಸಿರ್ಪರ್ ಜ್ಯೋತಿ
ಷ್ಕರಮರದೌವಾರಿಕರ್ ನಿರಂತರಮದಱೊಳ್ || ೧೨

ವ || ಮತ್ತಮವಱೊಳ್ ಬಹಿರಂತರುಭಯಪಾರ್ಶ್ವವೇದಿಕಾದ್ವಯಂಗಳೊಳ್ ಕಳಶಭೃಂಗಾರು ಚಾಮರವ್ಯಜನದರ್ಪಣಾತಪತ್ರಧ್ವಜಸುಪ್ರತಿಷ್ಠಕಂಗಳೆಂಬಷ್ಟಮಂಗಳಂಗಳುಮಂ ಸ್ವಸ್ತಿಕಾದಿ ಪ್ರಾಸಾದಂಗಳುಮಂ ಶಾಲ್ಯಾದಿಧಾನ್ಯಂಗಳುಮಂ ದೇವಾಂಗಾದಿವಸ್ತ್ರಂಗಳುಮಂ ಮಕು ಟಾದಿವಿಭೂಷಣಂಗಳುಮಂ ಮಾಕಂದಾದಿಸಕಳರ್ತುಕಫಲಂಗಳುಮಂ ಸುವರ್ಣಸ್ಥಾ ಲ್ಯಾದಿಭಾಜನಂಗಳುಮಂ ಚಕ್ರಾದ್ಯಾಯುಧಂಗಳುಮಂ ತತಾದಿವಾದ್ಯಂಗಳುಮಂ ಪದ್ಮ ರಾಗಾದಿವಸ್ತುಗಳುಮಂ ಬೇಡಿದಾಗಳೆ ತಡೆಯದೆ ಕುಡುವ ನೈಸರ್ಪ ಪಾಂಡುಕ ಪದ್ಮ ಪಿಂಗಳ ಕಾಳ ಮಹಾಕಾಳ ಮಾಣದ ಶಂಖ ಸರ್ವರತ್ನಂಗಳೆಂಬ ನವನಿಧಿಗಳುಮಂ ನಿರಂತರಮೆನಿಸಿ-

ಕಂ || ಪ್ರತ್ಯೇಕಾಷ್ಟೋತ್ತರಶತ
ಮಿತ್ಯುಪಯುಕ್ತಂಗಳಿರ್ಪುವೊಪ್ಪದಿನೆನೆ ಮ
ತ್ತತ್ಯತಿಶಯಮಂ ತ್ರಿಭುವನ
ಪತ್ಯಾಸ್ಥಾಯಿಕೆಯನಾರೊ ಬಣ್ಣಿಸಲಱಿವರ್ || ೧೩

ವ || ಅದಲ್ಲದೆಯುಂ ಉಭಯತಟಘಟಿತಸ್ಫಟಿಕಭಿತ್ತಿಭಾಸುರಂಗಳುಂ ತತ್ತದ್ಭೂಪ್ರದೇಶಪ್ರವೇ ಶೋಚಿತಪಕ್ಷದ್ವಯೋಪಲಕ್ಷಿತಕ್ಷುಲ್ಲಕದ್ವಾರಮನೋಹರಂಗಳುಮೇಕಕ್ರೋಶವಿಶಾಲಂಗ ಳುಮಾಗಿ-

ಕಂ || ಕರಮೆಸೆವುವಾಚತುರ್ಮುಖ
ಪರಿಷದ್ಗೋಮಿನಿಯ ನಾಲ್ಕು ಸೀಮಂತದವೋಲ್
ಪುರವೀಧಿಗಳೋಳಿಯ ಗೋ
ಪುರಂಗಳಿಂ ನೀಳ್ದು ಮೊದಲ ಪೀಠಂಬರೆಗಂ || ೧೪

ವ || ಎನಿಸಿ ಪರ್ವಿದ ಪೆರ್ವೀಧಿಗಳ ನಡುವೆ ಗೋಪುರದ್ವಾರಂಗಳಿಂ ತೊಟ್ಟು ಮಣಿತೋರಣ ಶತಾಲಂಕೃತಮಪ್ಪೇಕಗವ್ಯೂತಿಮಾತ್ರಾಂತರದೊಳ್‌

ಕಂ || ಏನೆಸೆದುವೊ ನಾಲ್ದೆಸೆಗಳ
ಮಾನಸ್ತಂಭಂಗಳಮಳಪೀಠತ್ರಯಜಾಂ
ಬೂನದಶಾಳತ್ರಯಮಣಿ
ಮಾನಿತಗೋಪುರಚತುಷ್ಟಯಂಗಳಿನನಿತುಂ || ೧೫

ವ || ಮತ್ತಂ ಪ್ರಥಮಪ್ರಾಕಾರದೊಳಗೆ ಸುರಪತಿಪಿತೃಪತಿಸರಿತ್ಪತಿಧನಪತಿಸತತಕೇಳೀವಿಲಾಸೋ ಚಿತಂಗಳಪ್ಪ ನಾಲ್ಕುಂ ದೆಸೆಯ ರತ್ನಹರ್ಮ್ಯಂಗಳೊಳಂ ಎರಡನೆಯ ಶಾಳದೊಳಗೆ ಪಾವಕಪುಣ್ಯಜನಪವಮಾನಪಶುಪತಿವಿನೋದವಿಹಾರಯೋಗ್ಯಂಗಳಪ್ಪ ನಾಲ್ಕುಂ ಕೋಣೆ ಗಳ ಸೌವರ್ಣಸೌಧಂಗಳೊಳಂ ಅವನವಂ ಬಳಸಿದ ಹೃದ್ಯೋದ್ಯಾನಂಗಳೊಳಂ ತೃತೀಯವಪ್ರದೊಳಗಪ್ರತಿಮವಾಳವಾಯುಜಸುವರ್ಣಕಳಶಮಣಿಮಯಂಗಳುಮಷ್ಟಾ ಷ್ಟಾರ್ಧಚತುಶ್ಚಾಪೋನ್ನತಂಗಳುಮಪ್ಪ ಮೂಱುಂ ಪೀಠಂಗಳ ಮೂರ್ಧದೊಳ್‌ ಪರಾರ್ಥ್ಯ ರತ್ನ ರಚಿತಜಿನಪ್ರತಿಕೃತಿಚತುಷ್ಟಯೋಪಶೋಭಿತಕನಕಮಯ ಚತುರಶ್ರಮೂಲಪ್ರದೇಶಂ ಗಳೊಳಮಳವಟ್ಟುಮಂತುಮಲ್ಲದೆಯುಂ-

ಚಂ || ಅಕುಟಿಳರೇಖೆಗಳ್ ಸುವಿದಿತಾಂತರವೀಧಿಗಳುದ್ಘಕಾಂತಿಗಳ್
ಸಕುಲಿಶಪಙ್ಕ್ತಿಗಳ್ ಸಲೆ ಕುದೃಗ್ಜನದರ್ಶನಮೋಹನೀಯದಾ
ರುಕುಳವಿದಾರಣೋಚಿತಸಿತಕ್ರಕಚಂಗಳಿವೆಂಬ ಲೀಲೆಯಂ
ಪ್ರಕಟಿಸುತಿರ್ಪುವಂತವಱ ಜಂಘೆಗಳೊಳ್ ದ್ವಿಸಹಸ್ರಧಾರೆಗಳ್ || ೧೬

ವ || ಮತ್ತಮವನಿತರ್ಕಂ ಬೇಱೆವೇ ಱೆ-

ಕಂ || ಸಮವೃತ್ತಂ ವಿಮಳಸ್ಫಟಿ
ಕಮಯಂ ಮಧ್ಯಪ್ರಕಾಂಡಮಲ್ಲಿಂದತ್ತಂ
ಕ್ರಮದೆ ಮಣಿಘಟಿತಕಟಕಂ
ಕುಮುದಂ ಕಟಕಂ ಮರಳ್ದು ಹೈಮಂ ಫಳಕಂ || ೧೭

ಅದಱಗ್ರದೊಳೆಸೆದು ಚತು
ರ್ವದನಂ ಮಾಣಿಕ್ಯಮಯಜಿನಾಕೃತಿ ನೆಲಸಿ
ರ್ಪುದು ಮುಕ್ತಾಛತ್ರತ್ರಯ
ಸದಮಳಭಾಭಾರಭರಿತರೋದೋವಿವರಂ || ೧೮

ಫಳಕದ ನಾಲ್ಕುಂ ಗೊಂಟಿನೊ
ಳಲಘುಪತಾಕಾಚತುಷ್ಕಮಿರ್ಕುಂ ಮತ್ತಂ
ಬಳಸಿ ಕಡೆಕಡೆಯೊಳೆಸೆಗುಂ
ಚಳಚಮರಜಲಂಬಮಾನಘಂಟಾಜಾಳಂ || ೧೯

ವ || ಅಂತು ಸಕಳಾಳಂಕಾರಸಮೇತಂಗಳಪ್ಪ ನಾಲ್ಕುಂ ಮಾನಸ್ತಂಭಂಗಳ ಮೊದಲ ಮಗಿಲಿಂ ಪೊಱಗೆ ನಾಲ್ಕುಂ ಗೋಪುರದ್ವಾರಂಗಳೆಡೆಯೆಡೆಯೊಳ್ ಸಮವಸರಣಕ್ಷೇತ್ರವಿವಿಕ್ಷುಜನ ಪಾದಪ್ರಕ್ಷಾಳನೋಚಿತಕನಕಕುಂಡದ್ವಿತಯಮಂಡಿತೋಭಯಪಾರ್ಶ್ವಂಗಳಪ್ಪ ನಂದೆ ನಂದೋತ್ತರೆ ನಂದಾವತಿ ನಂದಿಘೋಷೆ ವಿಜಯೆ ವೈಜಯಂತಿ ಜಯಂತಿ ಅಪರಾಜಿತೆ ಅಶೋಕೆ ಸುಪ್ರತಿಷ್ಠೆ ಕುಮುದೆ ಪುಂಡರೀಕೆ ಹೃದಯಾನಂದೆ ಮಹಾನಂದೆ ಸುಪ್ರಬುದ್ಧೆ ಪ್ರಭಾಕರಿ ಎಂಬ ಪರಿನಾಱುಂ ರತ್ನಮಯಸೋಪಾನಪಙ್ಕ್ತಿಗಳಪ್ಪ ಸಮಚತುರಶ್ರವಾಪಿ ಗಳ್ ಪೂರ್ವಾದಿಪರ್ಯಾಯದಿನೊಂದೊಂದರ್ಕೆ ನಾಲ್ಕುಂ ನಾಲ್ಕಾಗಿ ದಿವ್ಯಯೋಷಿಜ್ಜ ನಮಜ್ಜನೋಪಯೋಗ್ಯಂಗಳೊಪ್ಪುಗುಂ ಅದಲ್ಲದೆಯುಂ-

ಕಂ || ಜಿನತನುಗೆ ಪನ್ನೆರೞ್ಮಡಿ
ಯೆನಿಪುನ್ನತಿ ನೋಡಿದೆನ್ನರೊಳಮುನ್ನತಿಯಂ
ಜನಿಯಿಪುದೆಂಬೀನುಡಿ ನಿಜ
ವೆನೆ ಮಾನಸ್ತಂಭಮಿಂತು ನಾಲ್ಕುಂ ರಮ್ಯಂ || ೨೦

ಮಾನಸ್ತಂಭನಿಚಯಮ
ಜ್ಞಾನಿಜನಸ್ವಾಂತಜನಿತಮಾನಸ್ತಂಭಂ
ತಾನೆನಿಸಿ ಮತ್ತೆ ವಾಗಭಿ
ಮಾನಸ್ತಂಭಂಗಳೆನಿಸುಗುಂ ಪೊಗೞ್ವರ್ಗಂ || ೨೧

ವ || ಆ ನಾಲ್ದೆಸೆಯ ಮಾನಸ್ತಂಭಂಗಳೆಡೆಯೆಡೆಯೊಳರ್ಧಯೋಜನವ್ಯಾಸಮನಪ್ಪುಕೆಯ್ದು ಸಮ ಚತುರಶ್ರಂ ಪಾದಾಧಿಕಚತುರಶ್ರಂ ವ್ಯತ್ತಮಾಯತವೃತ್ತಮಷ್ಟಾಶ್ರಂಗಳೆಂಬ ತಳಚ್ಛಂದಂಗಳಿಂ ಮೇಲೆ ಪುಟ್ಟುವ ವೈರಾಜಂ ಪುಷ್ಪಕಂ ಕೈಲಾಸಂ ಮಣಿಕಂ ತ್ರಿವಿಷ್ಟಪಮೆಂಬ ಸ್ವರ್ಗ ಸಂಭವಂಗಳಪ್ಪಯ್ದು ಮಹಾಪ್ರಾಸಾದಂಗಳೊಳಂ ಭೂಮಿಜಂಗಳಪ್ಪ ಸ್ವಸ್ತಿಕ ವರ್ಧಮಾನ ನಂದ್ಯಾವರ್ತ ಸರ್ವತೋಭದ್ರ ವಳಭಿಚ್ಛಂದಮೆಂಬಯ್ದು ಪ್ರಾಸಾದಂಗಳೊಳಂ ದ್ರಾವಿಡಂ ಕಾಳಿಂಗವೆಸರಂಯಾವ್ಯಂತರಮೆಂಬಂತರೀಜಾತಿಗಳೊಳಂ ದನುರಿ ಮಧುರಿ ಸಾಧಾರಿಣಿ ತ್ರಾಸ್ತಿಯೆಂಬ ನಾಲ್ಕುಂರೇಖೆಗಳೊಳಮಳವಟ್ಟ ಚೆಲ್ವಿನಿಂ ಪ್ರಸೀದಂತಿ ಜನಮನಾಂಸಿ ದೇವಪ್ರಾಸಾದಾ ಎಂಬ ನುಡಿಗೆ ನಿದರ್ಶನಮಾಗಿ ಸೊಗಯಿಸುವ-

ಶಾ || ಪ್ರಾಸಾದಾಂತರದಿಂದಮಯ್ದು ಜಿನಚೈತ್ಯಾಗಾರಮೊಂದಿಂತೆ ವಿ
ನ್ಯಾಸಂ ನಾಡೆ ಬೆಡಂಗುವೆತ್ತಿರೆ ಹಟತ್ತದ್ರತ್ನಕೂಟಾಂಶುಮಾ
ಳಾಸಂಪೀತಪರೀತನಂದನತರುಚ್ಛಾಯಾಂಧಕಾರಂ ವಿಹಾ
ರಾಸಕ್ತಾಮರಕಾಮಿನೀಸಮುದಯಂ ತದ್ಭೂಮಿ ಕಣ್ಗೊಪ್ಪುಗುಂ || ೨೨

ಕಂ || ಮಣಿಯಯ್ದು ಮತ್ತೆ ಚಿಂತಾ
ಮಣಿಯೊಂದೆನೆ ಸಮೆದ ಬಣ್ಣಸರಮಂ ತದ್ಭೂ
ಪ್ರಣಯಿನಿ ತಳೆದವೊಲೊಳ್ಪಿನ
ಕಣಿಯಾದುವು ರತ್ನಹರ್ಮ್ಯಚಯಚೈತ್ಯಂಗಳ್ || ೨೩

ವ || ಮತ್ತಂ ತತ್ಪ್ರಮದವನಂಗಳೊಳ್-

ಚಂ || ಮೃದುಪದಪಾತಮಂ ಬಯಸದುತ್ಕುಚಭಾರದ ಸೋಂಕನಾಸೆಗೆ
ಯ್ಯದ ವದನಾಸವಕ್ಕೆಳಸದಬ್ಜದಳಾಕ್ಷಿಯರೀಕ್ಷಣಕ್ಕಣಂ
ಪದೆಯದಶೋಕಮಾ ಕುವರಕಂ ವಕುಳಂ ತಿಳಕಂ ಮರಲ್ದರ
ಲ್ದುದೆ ಪೊಗೞ್ಗುಂ ಚರಾಚರಸುಖಾವಹಮಪ್ಪ ಜಿನಪ್ರಭಾವಮಂ || ೨೪

ಕಂ || ಬೇರ್ಗೊಂಡು ಪಣ್ತ ಪಲಸೆಳ
ನೀರ್ಗಾಯಂ ತಳೆದ ತೆಂಗು ತನಿರಸಮೊಸರ್ವಾ
ನೇರ್ಗೊನೆಯನಾಂತ ಮಾವಿವು
ನೇರ್ಗಿಱಿಯವು ಕಲ್ಪತರುಗೆ ಸಿರಿಯಿಂದೆನಿಕುಂ || ೨೫

ವ || ಮತ್ತಮಲ್ಲಿ-

ಕಂ || ವಿಕಚೋತ್ಪಳಾಬ್ಜಕಲ್ಹಾ
ರಕುಳಂಗಳತುಚ್ಛಮೌಕ್ತಿಕಚ್ಛೇದಾಚ್ಛೋ
ದಕಭರಿತಂಗಳ್ ವೃತ್ತ
ತ್ರಿಕೋಣಚತುರಶ್ರವಾಪಿಗಳ್ ಸೊಗಯಿಸುಗುಂ ||[3] ೨೬

ವ || ಅದಲ್ಲದೆಯುಮಲ್ಲಿ ವಿಹರಿಸುವ ಕಲ್ಪಾಮರವಿದ್ಯಾಧರಫಣಾಧರಜ್ಯೋತಿಷ್ಕನಾನವ್ಯಂತರ ದಿವ್ಯಭವ್ಯಜನಂಗಳಾ ಮಹಾವಾಪಿಗಳ ವಿಮಳಜಳದಿನಚಳನಂ ಪ್ರಮದವನಸುರಭಿಸುಮ ನದಿನಮನನರ್ಹತ್ಪರಮೇಷ್ಠಿಯಂ ತತ್ತಚ್ಚೈತ್ಯಮಂದಿರಂಗಳೊಳಪೊಕ್ಕು ಪೂಜಿಸಿ ಮತ್ತಮತ್ಯಂ ತಭಕ್ತಿಭರದಿಂ ಶಕ್ತಿಯುಂ ಪ್ಯುತ್ಪತ್ತಿಯುಮಭ್ಯಾಸಮುಮೆಂಬ ಗುಣತ್ರಯೋಪಯುಕ್ತರುಂ ರತ್ನತ್ರಯಾಳಂಕೃತರುಮಪ್ಪ ಸುಕವಿಗಳ್ ಸಮಱಿ ಸಮೆದತಿವಿಶಿಷ್ಟಶಿಷ್ಟಾದಿಪದಾಳಂಕಾರಾ ಸ್ಪದಂಗಳುಮುಪಮಾದ್ಯರ್ಥಾಳಂಕಾರ ಸಮರ್ಥಂಗಳುಂ ವೈದರ್ಭಾದಿರೀತಿಸಮೇತಂಗಳುಂ ರತ್ಯಾದಿಯೋಗ್ಯಭಾವಸಂಪಾದಿತಂಗಳುಂ ಶೃಂಗಾರಾದಿಸಮುಚಿತರಸಪ್ರಸರಾರ್ದ್ರಂಣಗಳು ಮಪ್ಪ ವೃತ್ತಗಂಧಿ ಚೂರ್ಣಮುತ್ಕಳಿಕೆ ಲಲಿತಂ ಖಂಡಂ ವಿಚಿತ್ರಮೆಂಬಾಱು ತೆಱದ ಗದ್ಯಂಗಳೊಳಂ ವೃತ್ತಂ ಜಾತಿಯೆಂಬರೆೞ್ತೆಱದ ಪದ್ಯಂಗಳೊಳಂ ಮುಕ್ತಕಂ ಕುಳಕಂ ಕೋಶಂ ಸಂಘಾತಮೆಂಬ ಸಮಕಟ್ಟಿನೊಳಮಳವಟ್ಟು ಪದವಾಕ್ಯಪ್ರಮಾಣಾದಿಸಾರ ಸಾಹಿತ್ಯಸರ್ವಸ್ವಂಗಳಪ್ಪ ಸ್ವರೂಪಸ್ತವ ಗುಣಸ್ತವ ವಸ್ತುಸ್ತವಂಗಳಂ ನಿರ್ಬಂಧದಿಂದೋ
ದುವ ಮಧುರಗಂಭೀರನಾದಂಗಳೊಡನೆ ಪೊಡರ್ವನೂನಪ್ರತಿಧ್ವಾನಂಗಳನೊಳಕೆಯ್ದು
ಜಿನಭವನರಮ್ಯಹರ್ಮ್ಯೋಪವನಕುಜಂಗಳಿಂ ರಂಜಿಪಾಪ್ರಾಸಾದಚೈತ್ಯಭೂಮಿಯಿಂ
ದೊಳಗೆ-

ಚಂ || ತಳತಳಿಪಚ್ಚಪೊಚ್ಚಪೊಸಪೊಂಬೆಸದಿಂಬಿನ ವೇದಿಯೆಯ್ದೆ ಮಂ
ಡಳಸಿದುದಾಸಭಾರಮೆಯ ನೂಪುರರೂಪದ ರೂಪ್ಯಗೋಪುರಂ
ಗಳುಮಳವಟ್ಟುವಂತದಱ ನಾಲ್ದೆಸೆಯೊಳ್ ಬೞಿಕಂತವರ್ಕೆ ಮಂ
ಗಳನಿಧಿರಕ್ಷಕಪ್ರತತಿ ಮುನ್ನುಸಿರ್ದಂತೆಸೆದಿರ್ದುದೆತ್ತಲುಂ || ೨೭

ಕಂ || ಆ ವೇದಿಕೆಯಿಂದೊಳಗೊ
ರ್ಗಾವುದ ತನಗಗಲಮಾಗೆ ಸೊಗಯಿಪುದು ವಿಧು
ಗ್ರಾವದ್ರವನಿರ್ಮಳತರ
ಜೀವನನಿಳಯಂ ಸಲೀಲಖಾತೀವಲಯಂ || ೨೮

ವ || ಅಲ್ಲಿ-

ಕಂ || ಸಾರಸ ಜೀವಂ ಜೀವಕ
ಹಾರೀತಕ ಹಂಸ ಕುರರ ಕಂಕ ಬಳಾಕಾ
ಕಾರಂಡಕಚಕ್ರಾಹ್ವ ಚ
ಕೋರ ಬಕಪ್ರಕರನಿಕರಮಸದಳಮೆಸೆಗುಂ || ೨೯

ವ || ಮತ್ತಮಾ ಮಹಾಪರಿಖೆ ಶಬ್ದಶಾಸ್ತ್ರಪದ್ಧತಿಯಂತೆ ತುಹಿನನಿಪಾತಸಮುಪೇತೆಯುಂ ಜಯ ನಶಾಲೆಯಂತೆ ಬಹುತರವಾರಿಭರಿತೆಯುಂ ಅತಿಸಂಧಿತೆಯಂತೆ ವಿರಳೋತ್ಕಳಿಕಾತರಳೆ ಯುಂ ಕರಿಕಪೋಳಪಾಳಿಯಂತೆ ಬಿಂದುಜಾಲಿಕಚಿತ್ರಾಗ್ರಭಾಸೆಯುಂ ಪುಳಿಂದಕಾಂತೆಯಂತೆ ನಿರಂತರವನಭ್ರಮಾಯತ್ತೆಯುಂ ಜನಕನಂದನೆಯಂತೆ ಅನುಕೂಲರಾಮಾನ್ವಿತೆಯುಂ ವ್ಯಾಕೃಷ್ಟಚಾಪಾಟಿನಿಯಂತತಿಪ್ರಸನ್ನತಾತ್ಮಿಕೆಯುಂ ಸರಸ್ವತಿಯಂತೆ ಕವಿಕುಳ ಕೃತಪಕ್ಷಪಾತೆಯುಂ ರಾಶಿರಾಜಿಯಂತೆ ರಾಜಹಂಸಪ್ರಭಾರಾಜಿತೆಯುಂ ರಾತ್ರಿಯಂತಾ ಕುಳಕೋಕನದಪರಿಕಲಿತೆಯುಂ ರಾಜನೀತಿಯಂತೆ ಕುಮುದವನಶೋಭಿತೆಯುಮೆನಿಕುಂ ಅಂತುಮಲ್ಲದೆಯುಂ-

ಕಂ || ಯುತಕಮಳಂ ಗತಕಮಳಂ
ಭೃತಕುರವಂ ಮುಕ್ತಕುರವಮಾತ್ತಕುವಳಯಂ
ಪ್ರತಿಮುಕ್ತಕುವಳಯಂ ಚಿ
ತ್ರತರಂ ನೋಡುವ ನರಂಗೆ ಖಾತಮಖಾತಂ || ೩೦

ತಳದ ಹರಿನೀಳಭೂಮಿಯ
ಬೆಳಗು ಪಯಃಸ್ವಾಚ್ಛ್ಯದಿಂ ಪೊದೞ್ದಿರೆ ಪಂಕಾ
ವಿಳತೆಯಘಟಿತಮೆನುತ್ತುಂ
ಜಳಕೇಳಿಯೊಳಚ್ಚರಸಿಯರಚ್ಚರಿವಡುವರ್ || ೩೧

ಅಳಿಪರಿವೃತಪದ್ಮಂಗಳೊ
ಮೞುಂಕಿ ನೆಗೆವಮರಿಯರ ಕುರುಳ್ ಪುದಿದ ಮೊಗಂ
ಗಳೊ ಮೇಣೆಂದಾಳೋಚಿಪು
ದೊಳಗೊಳಗಲರ್ಗೊಯ್ವ ದಿವಿಜವಧುನಿಕುರುಂಬಂ || ೩೨

ಜಳಕೇಳಿಲೋಲಭಾವನ
ಲಳನಾಕುಚತಟವಿಲಿಖಿತಮೃಗಮದಪತ್ರಾ
ವಳಿ ಪರಿಕಲಿಸಿ ತರಂಗಂ
ಗಳೊಳೀವುದದರ್ಕಪೂರ್ವಜಳನೀಳಿಕೆಯಂ || ೩೩

ಇರುಳುಂ ಪಗಲುಂ ಮರಲ್ದಂ
ಬುರುಹಮುಮುತ್ಪಳಮುಮೆಸೆಗುಮೊಲವಿಂದೆ ಪರ
ಸ್ಪರಕಲುಷಮನುೞಿದಂಭ
ಶ್ಚರಂಗಳಿರ್ಕುಂ ಪ್ರಭುಪ್ರಭಾವದಿನದೞೊಳ್ || ೩೪

ವ || ಮತ್ತಮಲ್ಲಿ-

ಕಂ || ಅಗಲದೆ ಮೇಣ್ ನೆರೆಯದಿರುಳ್‌
ಪಗಲೆಂಬಿವಱೊಂದು ಪೋಗುಮಂ ಬರವುಮನಾ
ಸೆಗೆಯದೆ ರಥಾಂಗಯುಗಳಂ
ಬಗೆಯೊಳೆ ಬೇೞೊಂದು ತಣಿವನೊಳಕೊಂಡಿರ್ಕುಂ || ೩೫

ವ || ಅದಲ್ಲದೆಯುಂ-

ಕಂ || ಆ ಪರಿಖೆಯೆಂಬ ನೂತನ
ಕೂಪಾರದುದಗ್ರವಜ್ರವೇದಿಕೆಯೆಂಬಾ
ಳಾಪಮನದಱರ್ವಾಕ್ತೀ
ರೋಪಾಂತದೊಳಿರ್ದ ವೇದಿಯೊದವಿಸಿತಾದಂ || ೩೬

ಅವಚಱನಾಗಿಸದೆಸೆದಿ
ರ್ದುವು ವೇದೀದ್ವಾರಮಂಗಳಂ ನಿಧಿಪ್ರತಿಹಾ
ರವಿತಾನಂಗಳ್ ಮುಂ ಪೇ
ೞ್ದುವನೆ ವೊಲಂ ಪೋಲ್ತು ಯಮಕವರ್ಣಂಗಳವೋಲ್ || ೩೭

ವ || ಅಂತು ನಯನಹೃದಯಸಂಪನ್ನಿಧಿಯಾದ ವೇದಿಯಿಂದಮೊಳಗೆ ಚತುಃಕ್ರೋಶವಿಷ್ಕಂಭ ಸಂಭೃತಮಾಗಿ-

ಕಂ || ಆವಿಷ್ಕೃತನಿಜಲಕ್ಷ್ಮೀ
ಯೌವನಮಾಮೋದಸಮುದಯೋತ್ಪಾದಿತಭೃಂ
ಗಾವನಮೆಸೆದಿರ್ಪುದು ವ
ಲ್ಲೀವನಮನವರತಕುಸುಮರಸಕೃತಸವನಂ || ೩೮

ಅತಿಲಲಿತಪತ್ರಕುಳಪರಿ
ವೃತಪತ್ರಲತಾಳಿ ವಿಕಚಪುಷ್ಪಚಯೋದಂ
ಚಿತಪುಷ್ಪಲತಾಳಿ ಫಲ
ಪ್ರತತಿಚಲತ್ಫಲಲತಾಳಿಸೊಗಯಿಕುಮದಱೊಳ್ || ೩೯

ವ || ಮತ್ತಮಾ ವನಂ ಬಹುಲತಾನ್ವಿತಮಾಗಿಯುಂ ಅಶಿಶಿರಬಾಧಾವಳಂಬಮಲ್ತು ವಿನೂತ ಜಾತಿಯುತಮಾಗಿಯುಂ ಕುಲೀನವೃತ್ತಿವರ್ತನಮಲ್ತು ಸಂಗತಾನೇಕಭಂಗಭಂಗುರಮಾಗಿ ಯುಂ ಸಮುದ್ರಶೋಭಾವಹಮಲ್ತು ನಿರಂತರಸುಮನೋನಿವೇಶಮಾಗಿಯುಂ ಚೇತನ ತ್ವಾಭ್ಯುಪೇತಮಲ್ತು ಷಟ್ಪದೋತ್ಸಾಹಗೀತಕಾವರ್ತನವಿಷಯಮಾಗಿಯುಂ ಏಕದೇಶ ಶೋಭಾಪ್ರಭಾಭೂತಮಲ್ತು ಅಂತುಮಲ್ಲದೆಯುಂ-

ಚ || ಅಲರ್ದದಿರ್ಮುತ್ತೆ ಪೂತ ಪೊಸಮಲ್ಲಿಗೆ ಬಂಡುಣಿವಿಂಡು ಮುತ್ತೆ ಕ
ೞ್ತಲಿಸುವ ಮೊಲ್ಲೆ ಕಂಪಿನೊಳೆ ಪೊಂಪುೞಿವೋಪಿರುವಂತಿ ಬಲ್ಮುಗುಳ್
ನೆಲಸೆ ನೆಗೞ್ದ ಜಾಜಿ ವಿಗಳನ್ಮಕರಂದದೆ ನಾಂದ ಸಿಂದುರಂ
ಸಲೆ ಋತುವೆಲ್ಲಮಲ್ಲಿ ನೆಲಸಿರ್ದುದನೇನಱಿಪಲ್ಕೆ ಸಾಲ್ವುವೋ || ೪೦

 


[1] ಮತ್ತಂ ವಸುಧಾವಲ್ಲಭ
ನೆತ್ತಿದ ಪೀಲಿದೞೆಯೆನಿಪ ನೀಳಸ್ಥಳಿಯಂ
ಸುತ್ತಿ ಮಲರ್ದೆಸೆವ ತೊಂಗಲ
ಭಿತ್ತಿಯನೊಳಕೆಯ್ದುದತುಳಧೂಳೀಶಾಳಂ || ೭
ಈ ಪದ್ಯವು ೭ ನೆಯ ಪದ್ಯವಾಗಿ ಒಂದು ಪ್ರತಿಯಲ್ಲಿ ಮಾತ್ರ ಇದೆ, ಗ್ರಂಥಕರ್ತನದಲ್ಲವೆಂದು ತೋರುತ್ತದೆ.

[2] ಸ್ಪದಮನಿಸಿರ್ದಂ ಸಂಚರದ್ಯುತಿಸಂಪರಮೆನಿಸಿ ತೋರ್ಪುಯಂತೋವದೆಮಿದುಚಿತ್ತಕೆ ಕ ||

[3] ಈಕಡೆ-ಅಂತು ಚತುರ್ಮುಖಂಗಳೊಳ್ ಪ್ರತ್ಯೇಕವಾಪಿತ್ರಯಂಗಳಕ್ಕುಂ ಎಂದೊಂದು ಪ್ರತಿಯಲ್ಲಿದೆ.